ಕೆ.ಎಸ್.ನಿಸಾರ್ ಅಹಮದ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೆ.ಎಸ್.ನಿಸಾರ್ ಅಹಮದ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸಂಜೆ ಐದರ ಮಳೆ (ಕವನ ಸಂಕಲನದ ಆಯ್ದ ಕವನಗಳು)

ಸಂಜೆ ಐದರ ಮಳೆ (ಕವನ ಸಂಕಲನದ ಆಯ್ದ ಕವನಗಳು)
                ೧. ನಿನ್ನ ಚಿತ್ರವಾದದ್ದು ಹೇಗೆ?
ವರ್ಷಗಳ ಕೆಳಗೆ ರೋಮ ರೋಮದಲ್ಲು ಸ್ವಿಚ್ಚೊತ್ತಿದ್ದ
ಆಗುಂಬೆಯವಳ ಕೆನ್ನೆ ತುಟಿ ;
ಮೊನ್ನೆ ತಾನೇ ಸರ್ವೇಂದ್ರಿಯಗಳ ಡ್ರಿಲ್ಲುಮಾಡಿಸಿದ
ಸಿನಿಮಾನಟಿಯ ಸಾರ್ವಜನಿಕ ಕಟಿ ;
ಕೊಪ್ಪದಾಕೆಯ ಮೈಬಣ್ಣದ ಅಪ್ಪಟ
ಹೆಗ್ಗಡಿತಿತನದ ಝಳಪು ;
ಚಿಕ್ಕಂದಿನ ನೆನಪು ದೀಪಾವಳಿಸುವ ಮನೆಜವಾನಿ
ಸಕೀನಾಳ ಮೊಣಕಾಲ ಹೊಳಪು ;
ಕಣ್ಣು ವ್ಯಾಪಾರ ಬೆಳೆಸುವ
ಮನಸ್ಸು ಸದಾ ತಂಗಲೆಳೆಸುವ
ನಗೆಬಲೆಯ ಕೊಡಗಿಯ ಎಡಬೈತಲೆಯ
ತುಂಬು ತುರುಬಿನ ಹಸೆ ;
ಯಾರೋ ಮಲೆಯಾಳಿ ಮಂಗಳೆಯ
ಎರಡು ಅಮೃತದ ಬೊಗಸೆ---

ಥಟ್ಟನೆ ಕಾಡಿಸಿ,
ಅವನೆಲ್ಲ ಒಟ್ಟುಗೂಡಿಸಿ
ನಾ ಬರೆದ ಚಿತ್ರ
ಜಯನಗರದ ಹದಿನಾರನೆಯ ಬೀದಿಯನು ತಿಂಗಳ ಹಿಂದೆ
ಬೆಳುದಿಂಗಳಿಸಿದ ನೀನಾದದ್ದು ಹೇಗೆಂಬುದೇ
ನನ್ನ ತಲೆಕೆಡಿಸಿರುವ ವಿಚಿತ್ರ.

                 ೨.ಸಂಕೇತ.
ಹಗಲಲ್ಲಿ....
ಆಕಳಿಕೆಯ ನಿದ್ದೆಗಣ್ಣೆನ ಬಿಳಿಚುಮೊಗ ;
ರಜಾದಿನದ ಕಛೇರಿ ;
ಹುಡುಗರ ಸಿಳ್ಳು ಹುಸಿಕೆಮ್ಮು ಪಹರೆಗಳಿಗೆ
ಗೋಡೆ ರಸ್ತೆಗಳ ಬರಹಗಳಿಗೆ ಕೇಂದ್ರ ;
ಗಬಕ್ಕೆಂದು ಹಾರುವ ಹೆಬ್ಬುಲಿ ಮಲಗಿರುವ
ಗುಹೆಯ ನಿಶ್ಯಬ್ದದಂತೆ ಭಯಾನಕ ;

ಇರುಳಲ್ಲಿ....
ಗಾರುಡಿಗನ ಪುಂಗಿ ; ಸಿನಿಮ ಪೋಸ್ಟರಿನ ನಿತಂಬದ ಭಂಗಿ ;
ದಿನಕ್ಕೊಂದು ಹೊಸ ಚಹರೆ ಜಟಕಗಳ ಸೆಳೆತ.
ಕಾಮನಬಿಲ್ಲುಗಳ ಬೀಗಿಸಿ ಬಂದವರ ಮೈನವಿರ ನೇವರಿಸಿ
ಪೊಗರ ಹಗುರಿಸಿ ಸಿಹಿಯ ಒಗರಿಸಿ--

ನಡುವಯ್ಕರ ಮುಂಡೆಯರ ಬೇಸರ ತಮಾಷೆಗೆ
ಗಿಣಿಕುದುಕಿಗಣಿಯಾದ ಹರಯದ
ಗಿಲಕಿನಗೆಯವರ ಸಂಕೇತದ ಭಾಷೆಗೆ
ಸೌದೆಯೊದಗಿಸಿ ;
ಮಾನಿನಿಯರ ಸೆರಗ ಸರಿಪಡಿಸುವಿಕೆ, ತಲೆತುಂಬ ಹೊದೆಯುವಿಕೆ,
ಬಿಡ್ತು -- ತಪ್ಪಾಯ್ತು -- ಶಾಂತಂ ಪಾಪಂಗಳಿಗೆ
ಒಟ್ಟಾರೆ ಮುತ್ತೈದೆಯರ ಧೀರ್ಘಸುಮಂಗಲೀತನಕ್ಕೆ
ಎಚ್ಚರಿಕೆಯಾಗಿ

ಪಾಪದಂತೆ ಸುಪರಿಚಿತವಾಗಿ
ಊಹಾಪೋಹಗಳ ಸುತ್ತ
ಬಾನುಲಿಸುತ್ತ
ಇದೆ
ಸಂಸಾರಸ್ಥರ ಕೇರಿಯಲ್ಲಿನ ಒಂದು
ವೇಶ್ಯಾಗೃಹ.

              ೩.ಕಲೆ
ಕಣ್ಮಿಟುಕು, ಸಿಳ್ಳು, ಬೆಲ್ಲಿಗೆ
ಟೈಟ್ ಪ್ಯಾಂಟು, ಟೈ,
ಮೀಸೆಕೆಳಗಿನ ಲಫಂಗ ಜೊಲ್ಲೊಗೆ-
ಹಗಲು ಹೊಸ್ತಿಲಿನ ಹೊಚ್ಚ ಹೊಸ ಬಿಳಿ ಹುಲ್ಲು
ರಾತ್ರಿ ಸತಿಸಾವಿತ್ರಿತನದ ಪತಿಕಾಲೊತ್ತು,
ದೇಶಾವರಿಯ ಮಾಸಲು ಮುತ್ತು
ಅಲ್ಲ ಕಲೆ

ಸದ್ಗೃಹಸ್ಥೆಯ ಸೊಕ್ಕು ;
ಬೀದಿಬಸವಿತನಕ್ಕೆ ಬಾಗಿಲಿಕ್ಕು.

ನಟ್ಟಿರುಳ ಕಾಮುಕತೆ
ಗೆದುರಾದ ಹಳಸು ನಗೆ,
ಗುಳಿಗಣ್ಣಿನೊಂದು ಜತೆ
ದಳ್ಳಾಳಿ ಕಸುಬಲ್ಲ ಕಲೆ

ಗಗನ ಪರಿಚಾರಿಕೆ
ಪ್ರೇಮದಭಿಸಾರಿಕೆಯ ಆತ್ಮೀಯ ಕೋರಿಕೆ.

ಹತ್ತು ಕೈ ಬದಲಿದರು ಮಾಸಿದರು
ಅಷ್ಟಿಷ್ಟು ಹರಿದರೂ ಅದೇ ಬೆಲೆ
ಕರೆನ್ಸಿನೋಟು ಕಲೆ.


            ೪. ನಿಮ್ಮೊಡನಿದ್ದೂ ನಿಮ್ಮಂತಾಗದೆ
ನಿಮ್ಮೊಡನಿದ್ದೊ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.

ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು
ಕೆಣಕಿ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ಒಳಗೊಳಗೆ ಬೇರುಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.

                    ೫. ಪಯಣದ ಅನಿಸಿಕೆ.
ಸೇದುತ್ತ ಕೆಮ್ಮಿ ಏದುತ್ತ ಬಡಬಡಿಸುತ್ತ
ಹಹ್ಹಹ್ಹಾ ಹಿಹ್ಹಿಹ್ಹೀ ಮೌನವ ಗುಡಿಸುತ್ತ
ಕುರುಕುತ್ತ ಅಳ್ಳಳ್ಳಾಯಿ ಮೆಲ್ಲುತ್ತ ಕಳ್ಳೆಕಾಯಿ
ಎದ್ದು ಮೈಮುರಿಯುತ್ತ ಕದ್ದು
ಹೆಣ್ಣೆದೆಯ ಕಣ್ಣಿಂದ ಮೈಮರೆಯುತ್ತ
ತಲೆ ಕೆರೆಯುತ್ತ ನಗೆಬಲೆಯ ತೆರೆಯುತ್ತ
ಸ್ಲಮ್ಲುಗಳ ಉಸಿರುತ್ತ
ನೋಡುತ್ತ ಗದ್ದೆಗಳ ಹಸಿರತ್ತ

ಮಾಸಾಂತ್ಯದ ಸಂಸಾರಿಯ ಮುಖವ ಸಂಜೆಯ ಸೀಳುತ್ತ
ದುರಾಸೆಯಂತೆ ಬೆಳೆಬೆಳೆಬೆಳೆದಿರುವ
ಹಳಿಗಳ ಮೇಲೆ ಒದ್ದಾಡಿರುವ ರೈಲಿನ ಡಬ್ಬಿಯ -

ದೇಸಿನಾಟಕದ ಮಾಸಿದ ಸೀನರಿಯ ಜ್ನಾಪಿಸುವ
ಮಂಕು ಬೆಳಕಲ್ಲಿ ಕುಸುಮೇಲೋಗರವಾಗಿ
ಅನುಭವವ ಛಾಪಿಸುವ ನನ್ನ ಸಹಪ್ರಯಾಣಿಕರು.
 
 

                 ೬. ಹೊಳೆ.
ನಡುಹಗಲು ಸ್ವಪ್ನಿಸಿದ ಹೊಳೆ
ತಂಪಿನ ಸ್ಯಾಂಪಲ್ಲುಗಳ ತಳ್ಳಿ
ದಡದ ರಂಜದ ಗಿಡದ ನನ್ನ ಕಾಲೆಡೆಯಲ್ಲಿ
ಬಟ್ಟಗಣ್ಣವಳೆ
ಎಳೆಯುತ್ತಿದೆ, ಎದೆಯ ನಿರ್ಧಾರವನು ಅಳೆಯುತ್ತಿದೆ-
ಬಿಸಿಲ ಧಗೆ ಮೈಲಿಗೆ
ಪರಿಹರಿಸುವಾತುರದ ಬಗೆ
ತೆರೆಯ ಕರೆ ಕೂಗಾಗಿ ಚಾಪಲ್ಯ
ಮಾಗಿ ಅತ್ಯಗತ್ಯತೆ
ಉಟ್ಟಿದ್ದ ಕಳಚಿ
ಧುಮುಕಬೇಕಿನ್ನೇನು... ಆಗ
ಪ್ರತಿಮೆ ನಿಲ್ಲುವ ಮೈ ಬಿಳುಚಿ.

ಇಲ್ಲೆದ್ದು ಮುಳುಗಿ ಮತ್ತೆ ಆಲ್ಲೆದ್ದು
ಹೋಯಿತೋ ಎನುವಲ್ಲಿ ನನ್ನತ್ತಲೇ ಕದ್ದು
ಧಾವಿಸಿದೆ ತೀರಹೊಕ್ಕಳ ಸಾವು
ಹಾವು.

ನೋಡುತ್ತಲಿದ್ದಂತೆ ಆ ಜಂತು ಹೆಸರಿನ ಭೀತಿ
ನೀತಿ ಸಂಸ್ಕಾರ ಆಚಾರ ಜಾತಿ
ಕೊನೆಗೆ ನೀನೇ ಆಗಿ ದಿಟ್ಟಿಸಿರೆ ನಲ್ಲೆ
ಸ್ನಾನ ಸುಖ ಇನ್ನೆಲ್ಲೆ ?

ನಿತ್ಯೋತ್ಸವ (ಕವನ ಸಂಕಲನ) ಆಯ್ದ ಕವನಗಳು

ನಿತ್ಯೋತ್ಸವ (ಕವನ ಸಂಕಲನ) ಆಯ್ದ ಕವನಗಳು
                  ೧.ಉದಯಾನುಭವ.
ಹತ್ತು ರಂಗಿನಪೂರ್ವ ಸಭೆ ಪೂರ್ವ ದಿಕ್ಕಿನಲಿ
ಸಭಿಕರೇ ಕಣ್ಣುಗಳು : ಭಾವ ಚಪ್ಪಾಳೆ.
ನಸು ನೀಲಿ ಹಾಳೆಗಳ ಕೆಂಬರಹದಡಿಯಲ್ಲಿ
ಬಂಗಾರ ಶಾಯಿಯಲಿ ಸಹಿಯ ಮಾಲೆ.

ಎಂಟಾದರೂ ದಿನವು ನಿದ್ದೆ ನಂಟನು ಬಿಡದೆ
ನಾಟಿನಂತಲುಗದೆಯೆ ಇದ್ದೆ ಹೊದ್ದು.
ಇಂದಕಸ್ಮಾತ್ತಾಗಿ ಬೆಳಗೆದ್ದು ನೋಡಿದರೆ
ದೇವರ್‍ಏ, ಏನೆಂಥ ಕಣ್ಣ ಮುದ್ದು.

ನಾ ಹೊದ್ದು ಬಿದ್ದಿದ್ದ ಬೆಚ್ಚೆನೆಯ ಈ ರಗ್ಗು
ಕಣ್ಣ ಮುಂದೆಳೆದಿರುವ ತೆರೆಯಂತಿದೆ.
ತೆರೆಯ ಈ ಕಡೆ ಮನಸು. ತೆರೆಯ ಆ ಕಡೆ ಪುನ್ಯ--
ಭೇಟಿಯಾಗದೆ ಸೊರಗಿತೆಂದೆನಿಸಿದೆ.

ಭಾಗ್ಯವಿರಬೇಕಹಹ, ಉದಯದನುಭವ ಗಳಿಗೆ,
ಎಲ್ಲರಿಗು ದೊರೆಕೊಳ್ಳದಿಂಥ ಸ್ವತ್ತು.
ಎನೆಷ್ಟು ಉಅಪಮೆಯಗಳ ವೆಚ್ಚ ಮಾಡಿದರೆನು,
ಮೂಕನುಗೆ ತಿಳಿಯುವುದೆ ನುಡಿಯ ಗತ್ತು?


                ೨.ಎಲ್ಲ ಮರೆತಿರುವಾಗ.
ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನಿನಪೇ;
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?

ಕಪ್ಪು ಕಣ್ಣೆನ ನೆಟ್ಟ ನೋಟದರೆಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲುಬಳಿಗೆ ಸಾರದಿರು ನೆನಪೇ.
ಎಲ್ಲ ಮರೆತಿರುವಾಗ....

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ;
ಭವ್ಯ ಭವಿತವ್ಯಕ್ಕೆ ಮೊಗ ಮಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು, ಓ! ಚೆನ್ನ ನೆನಪೇ,
ಎಲ್ಲ ಮರೆತಿರುವಾಗ.....

 
           ೩.ಎಂಥೆಂಥ ಜೀವಗಳು.
ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ
ಶ್ರೀಗಂಧ ಬೆಳೆವಂಥ ನಾಡಿನಲ್ಲಿ;
ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ
ಸಿರಿವಂತ ನೆಲದೊಡಲ ಹಾಡಿನಲ್ಲಿ.

ಮಣ್ಣ ಹುಡಿ, ಹಣ್ಣು ಮಿದಿ, ಹುಲ್ಲೆಸಳೊ, ಮಳೆ ಬಿಸಿಲೊ
ಸಮನಾದ ಪ್ರೀತಿಯಲಿ ಹಾಡಿ ಹೊಗಳಿ
ಕಣ್ನು ಕುಡಿ ಎಂದೆಣಿಸಿ ನಾಡು- ನುಡಿ ಗಣಿಸಿ
ಎತ್ತಿ ಕುಣಿಸಿದರೊಲ್ಮೆ ಕೆಚ್ಚು ಕೆರಳಿ.

ಹುಟ್ಟಿದಾರಭ್ಯ ಹಿಡಿದೊಂದು ಹೆಗ್ಗುರಿಯ
ಮುಟ್ಟಲದನೆಡೆಬಿಡದೆ ತುಯ್ದು ಜನರು;
ಕ್ರೌರ್ಯಗಳ ಕುದುಗೋಲು ಕೊಚ್ಚುತಿದ್ದ್ರು ಕೊರಳ
ಸತ್ಯಕಲ್ಲದೆ ಬಾಯಿ ಬಿಡದ ಘನರು.

 
               ೪.ನಿನ್ನ ಹಿರಿಮೆ.
ನಿನ್ನ ಅನುರಾಗವೇ ಬೇಗಿರುವುದೆನ್ನೆದೆಯ
ಇರುಳು ಬಾನಿನ ತುಂಬ ಬಿಂಬವಾಗಿ;
ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳ ದಾರಿಯ ತೋರುಗಂಬವಾಗಿ.

ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೊ
ಸವಿ ನುಡಿಯ ನರುಗಂಪು ತೇಲಿರುವುದು;
ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸು ನಗೆಯ ಸವಿಯನ್ನೆ ಸೂಸಿರುವುದು.

ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು;
ಯಾವ ರುಣವೋ ಏನೊ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು.

 
 
              ೫.ಬೇಸರಾಗಿದೆ ಮಾತು.
ಬೇಸರಾಗಿದೆ ಮಾತು, ಭಾರವಾಗಿದೆ ಮೌನ;
ನೋವು ಕರಗಿದೆ ಕಣ್ಣಲ್ಲಿ;
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ.
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ;
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ.



                          ೬.ದೀಪಾರತಿ.
ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ,
ಕುಡಿ ಚಾಚಿದೆ ಇಲ್ಲಿ.

ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ;
ಗುಡಿ ಮೀರಿದೆ ಇಲ್ಲಿ.

ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ,
ಜನ ಸಮ್ಮತಿಯಲ್ಲಿ;

ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ,
ನವ ಸದ್ಗತಿಯಲ್ಲಿ.

ನಿನ್ನದೆ ನೆಲೆ, ನಿನ್ನದೆ ಮನೆ; ನಿನ್ನೆದೆಯೊ ಉದಾರ;
ನಾನೂಳಿಗಕಿರುವಲ್ಪನು- ನೀ ವಾರಸುದಾರ.
ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ;
ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ.

ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್

ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್



            ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.

          ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು.ಅವರು ಇಲ್ಲಿಯವರೆಗೆ ಸುಮಾರು ೫ ದಶಕಗಳಿಂದ ೨೫ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದಿತು ಹಾಗೂ ಕನ್ನಡ ಲಘುಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು.
         ನಿಸಾರ್‍ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.ಇವರ ಕುರಿಗಳು ಸಾರ್‍ ಕುರಿಗಳು,ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಭಾಷಾಂತರ) ಹಾಗೂ ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನಗಳು ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ. .

ಕವನ ಸಂಕಲನಗಳು