ಸಂಜೆ ಐದರ ಮಳೆ (ಕವನ ಸಂಕಲನದ ಆಯ್ದ ಕವನಗಳು)
೧. ನಿನ್ನ ಚಿತ್ರವಾದದ್ದು ಹೇಗೆ?
ವರ್ಷಗಳ ಕೆಳಗೆ ರೋಮ ರೋಮದಲ್ಲು ಸ್ವಿಚ್ಚೊತ್ತಿದ್ದ
ಆಗುಂಬೆಯವಳ ಕೆನ್ನೆ ತುಟಿ ;
ಮೊನ್ನೆ ತಾನೇ ಸರ್ವೇಂದ್ರಿಯಗಳ ಡ್ರಿಲ್ಲುಮಾಡಿಸಿದ
ಸಿನಿಮಾನಟಿಯ ಸಾರ್ವಜನಿಕ ಕಟಿ ;
ಕೊಪ್ಪದಾಕೆಯ ಮೈಬಣ್ಣದ ಅಪ್ಪಟ
ಹೆಗ್ಗಡಿತಿತನದ ಝಳಪು ;
ಚಿಕ್ಕಂದಿನ ನೆನಪು ದೀಪಾವಳಿಸುವ ಮನೆಜವಾನಿ
ಸಕೀನಾಳ ಮೊಣಕಾಲ ಹೊಳಪು ;
ಕಣ್ಣು ವ್ಯಾಪಾರ ಬೆಳೆಸುವ
ಮನಸ್ಸು ಸದಾ ತಂಗಲೆಳೆಸುವ
ನಗೆಬಲೆಯ ಕೊಡಗಿಯ ಎಡಬೈತಲೆಯ
ತುಂಬು ತುರುಬಿನ ಹಸೆ ;
ಯಾರೋ ಮಲೆಯಾಳಿ ಮಂಗಳೆಯ
ಎರಡು ಅಮೃತದ ಬೊಗಸೆ---
ಥಟ್ಟನೆ ಕಾಡಿಸಿ,
ಅವನೆಲ್ಲ ಒಟ್ಟುಗೂಡಿಸಿ
ನಾ ಬರೆದ ಚಿತ್ರ
ಜಯನಗರದ ಹದಿನಾರನೆಯ ಬೀದಿಯನು ತಿಂಗಳ ಹಿಂದೆ
ಬೆಳುದಿಂಗಳಿಸಿದ ನೀನಾದದ್ದು ಹೇಗೆಂಬುದೇ
ನನ್ನ ತಲೆಕೆಡಿಸಿರುವ ವಿಚಿತ್ರ.
೨.ಸಂಕೇತ.
ಹಗಲಲ್ಲಿ....
ಆಕಳಿಕೆಯ ನಿದ್ದೆಗಣ್ಣೆನ ಬಿಳಿಚುಮೊಗ ;
ರಜಾದಿನದ ಕಛೇರಿ ;
ಹುಡುಗರ ಸಿಳ್ಳು ಹುಸಿಕೆಮ್ಮು ಪಹರೆಗಳಿಗೆ
ಗೋಡೆ ರಸ್ತೆಗಳ ಬರಹಗಳಿಗೆ ಕೇಂದ್ರ ;
ಗಬಕ್ಕೆಂದು ಹಾರುವ ಹೆಬ್ಬುಲಿ ಮಲಗಿರುವ
ಗುಹೆಯ ನಿಶ್ಯಬ್ದದಂತೆ ಭಯಾನಕ ;
ಇರುಳಲ್ಲಿ....
ಗಾರುಡಿಗನ ಪುಂಗಿ ; ಸಿನಿಮ ಪೋಸ್ಟರಿನ ನಿತಂಬದ ಭಂಗಿ ;
ದಿನಕ್ಕೊಂದು ಹೊಸ ಚಹರೆ ಜಟಕಗಳ ಸೆಳೆತ.
ಕಾಮನಬಿಲ್ಲುಗಳ ಬೀಗಿಸಿ ಬಂದವರ ಮೈನವಿರ ನೇವರಿಸಿ
ಪೊಗರ ಹಗುರಿಸಿ ಸಿಹಿಯ ಒಗರಿಸಿ--
ನಡುವಯ್ಕರ ಮುಂಡೆಯರ ಬೇಸರ ತಮಾಷೆಗೆ
ಗಿಣಿಕುದುಕಿಗಣಿಯಾದ ಹರಯದ
ಗಿಲಕಿನಗೆಯವರ ಸಂಕೇತದ ಭಾಷೆಗೆ
ಸೌದೆಯೊದಗಿಸಿ ;
ಮಾನಿನಿಯರ ಸೆರಗ ಸರಿಪಡಿಸುವಿಕೆ, ತಲೆತುಂಬ ಹೊದೆಯುವಿಕೆ,
ಬಿಡ್ತು -- ತಪ್ಪಾಯ್ತು -- ಶಾಂತಂ ಪಾಪಂಗಳಿಗೆ
ಒಟ್ಟಾರೆ ಮುತ್ತೈದೆಯರ ಧೀರ್ಘಸುಮಂಗಲೀತನಕ್ಕೆ
ಎಚ್ಚರಿಕೆಯಾಗಿ
ಪಾಪದಂತೆ ಸುಪರಿಚಿತವಾಗಿ
ಊಹಾಪೋಹಗಳ ಸುತ್ತ
ಬಾನುಲಿಸುತ್ತ
ಇದೆ
ಸಂಸಾರಸ್ಥರ ಕೇರಿಯಲ್ಲಿನ ಒಂದು
ವೇಶ್ಯಾಗೃಹ.
೩.ಕಲೆ
ಕಣ್ಮಿಟುಕು, ಸಿಳ್ಳು, ಬೆಲ್ಲಿಗೆ
ಟೈಟ್ ಪ್ಯಾಂಟು, ಟೈ,
ಮೀಸೆಕೆಳಗಿನ ಲಫಂಗ ಜೊಲ್ಲೊಗೆ-
ಹಗಲು ಹೊಸ್ತಿಲಿನ ಹೊಚ್ಚ ಹೊಸ ಬಿಳಿ ಹುಲ್ಲು
ರಾತ್ರಿ ಸತಿಸಾವಿತ್ರಿತನದ ಪತಿಕಾಲೊತ್ತು,
ದೇಶಾವರಿಯ ಮಾಸಲು ಮುತ್ತು
ಅಲ್ಲ ಕಲೆ
ಸದ್ಗೃಹಸ್ಥೆಯ ಸೊಕ್ಕು ;
ಬೀದಿಬಸವಿತನಕ್ಕೆ ಬಾಗಿಲಿಕ್ಕು.
ನಟ್ಟಿರುಳ ಕಾಮುಕತೆ
ಗೆದುರಾದ ಹಳಸು ನಗೆ,
ಗುಳಿಗಣ್ಣಿನೊಂದು ಜತೆ
ದಳ್ಳಾಳಿ ಕಸುಬಲ್ಲ ಕಲೆ
ಗಗನ ಪರಿಚಾರಿಕೆ
ಪ್ರೇಮದಭಿಸಾರಿಕೆಯ ಆತ್ಮೀಯ ಕೋರಿಕೆ.
ಹತ್ತು ಕೈ ಬದಲಿದರು ಮಾಸಿದರು
ಅಷ್ಟಿಷ್ಟು ಹರಿದರೂ ಅದೇ ಬೆಲೆ
ಕರೆನ್ಸಿನೋಟು ಕಲೆ.
೪. ನಿಮ್ಮೊಡನಿದ್ದೂ ನಿಮ್ಮಂತಾಗದೆ
ನಿಮ್ಮೊಡನಿದ್ದೊ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು
ಕೆಣಕಿ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ಒಳಗೊಳಗೆ ಬೇರುಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.
ಸೇದುತ್ತ ಕೆಮ್ಮಿ ಏದುತ್ತ ಬಡಬಡಿಸುತ್ತ
ಹಹ್ಹಹ್ಹಾ ಹಿಹ್ಹಿಹ್ಹೀ ಮೌನವ ಗುಡಿಸುತ್ತ
ಕುರುಕುತ್ತ ಅಳ್ಳಳ್ಳಾಯಿ ಮೆಲ್ಲುತ್ತ ಕಳ್ಳೆಕಾಯಿ
ಎದ್ದು ಮೈಮುರಿಯುತ್ತ ಕದ್ದು
ಹೆಣ್ಣೆದೆಯ ಕಣ್ಣಿಂದ ಮೈಮರೆಯುತ್ತ
ತಲೆ ಕೆರೆಯುತ್ತ ನಗೆಬಲೆಯ ತೆರೆಯುತ್ತ
ಸ್ಲಮ್ಲುಗಳ ಉಸಿರುತ್ತ
ನೋಡುತ್ತ ಗದ್ದೆಗಳ ಹಸಿರತ್ತ
ಮಾಸಾಂತ್ಯದ ಸಂಸಾರಿಯ ಮುಖವ ಸಂಜೆಯ ಸೀಳುತ್ತ
ದುರಾಸೆಯಂತೆ ಬೆಳೆಬೆಳೆಬೆಳೆದಿರುವ
ಹಳಿಗಳ ಮೇಲೆ ಒದ್ದಾಡಿರುವ ರೈಲಿನ ಡಬ್ಬಿಯ -
ದೇಸಿನಾಟಕದ ಮಾಸಿದ ಸೀನರಿಯ ಜ್ನಾಪಿಸುವ
ಮಂಕು ಬೆಳಕಲ್ಲಿ ಕುಸುಮೇಲೋಗರವಾಗಿ
ಅನುಭವವ ಛಾಪಿಸುವ ನನ್ನ ಸಹಪ್ರಯಾಣಿಕರು.
೬. ಹೊಳೆ.
ನಡುಹಗಲು ಸ್ವಪ್ನಿಸಿದ ಹೊಳೆ
ತಂಪಿನ ಸ್ಯಾಂಪಲ್ಲುಗಳ ತಳ್ಳಿ
ದಡದ ರಂಜದ ಗಿಡದ ನನ್ನ ಕಾಲೆಡೆಯಲ್ಲಿ
ಬಟ್ಟಗಣ್ಣವಳೆ
ಎಳೆಯುತ್ತಿದೆ, ಎದೆಯ ನಿರ್ಧಾರವನು ಅಳೆಯುತ್ತಿದೆ-
ಬಿಸಿಲ ಧಗೆ ಮೈಲಿಗೆ
ಪರಿಹರಿಸುವಾತುರದ ಬಗೆ
ತೆರೆಯ ಕರೆ ಕೂಗಾಗಿ ಚಾಪಲ್ಯ
ಮಾಗಿ ಅತ್ಯಗತ್ಯತೆ
ಉಟ್ಟಿದ್ದ ಕಳಚಿ
ಧುಮುಕಬೇಕಿನ್ನೇನು... ಆಗ
ಪ್ರತಿಮೆ ನಿಲ್ಲುವ ಮೈ ಬಿಳುಚಿ.
ಇಲ್ಲೆದ್ದು ಮುಳುಗಿ ಮತ್ತೆ ಆಲ್ಲೆದ್ದು
ಹೋಯಿತೋ ಎನುವಲ್ಲಿ ನನ್ನತ್ತಲೇ ಕದ್ದು
ಧಾವಿಸಿದೆ ತೀರಹೊಕ್ಕಳ ಸಾವು
ಹಾವು.
ನೋಡುತ್ತಲಿದ್ದಂತೆ ಆ ಜಂತು ಹೆಸರಿನ ಭೀತಿ
ನೀತಿ ಸಂಸ್ಕಾರ ಆಚಾರ ಜಾತಿ
ಕೊನೆಗೆ ನೀನೇ ಆಗಿ ದಿಟ್ಟಿಸಿರೆ ನಲ್ಲೆ
ಸ್ನಾನ ಸುಖ ಇನ್ನೆಲ್ಲೆ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ