ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. ||೧||
‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ. ||೨||
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||
ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||
ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ. ||೫||
‘ಒಲುಮೆಯ ಕಿಚ್ಚು’ ಕವನವು ವಿರಹದಗ್ಧ ಮುಗ್ಧೆಯ ಹಾಡಾದರೆ, ‘ಜನುಮದ ಜಾತ್ರಿ’ ಕವನವು ಪ್ರಣಯಸಂತೃಪ್ತಳಾದ ಹೊಸ ಮದುವಣಗಿತ್ತಿಯ ಹಾಡಾಗಿದೆ.
ಬೇಂದ್ರೆಯವರ
‘ಜನುಮದ ಜಾತ್ರಿ’ ಕವನದಲ್ಲಿ ತನ್ನ ನಲ್ಲನಿಗೆ ಮನಸೋತಿರುವ ಹೊಸ ಮದುವಣಗಿತ್ತಿಯ
ಮನ:ಸ್ಥಿತಿಯನ್ನು ವರ್ಣಿಸಲಾಗಿದೆ. ಈ ಹೊಸ ಮದುವಣಗಿತ್ತಿಯು ತನ್ನ ಆಪ್ತಸಖಿಯ ಜೊತೆಗೆ
ತನ್ನ ಹೊಸ ಸಂಸಾರದ ಸುಖವನ್ನು ಹಂಚಿಕೊಳ್ಳುತ್ತಿದ್ದಾಳೆ. ತನ್ನ ನಲ್ಲನ ಒಲವಿಗೆ ಮನಸೋತು
ಅವನ ಕೈಯಲ್ಲಿಯ ಸೂತ್ರದ ಗೊಂಬೆಯಂತೆ ಆಗಿರುವದಾಗಿ ಅವಳು ಹೇಳುತ್ತಿದ್ದಾಳೆ. ಆ
ನಲ್ಲನಾದರೋ ತನ್ನ ನೇತ್ರಪಲ್ಲವಿಯಿಂದಲೇ ಅಂದರೆ ಕಣ್ಸನ್ನೆಯಿಂದಲೇ ಇವಳನ್ನು
ಕುಣಿಸುತ್ತಾನೆ. ಇವನು ನಿರ್ದೇಶಿಸಿದಂತೆ ಕುಣಿಯುವ ಪಾತ್ರವಾಗಿದ್ದಾಳೆ ಅವಳು.
ಅವರಿಬ್ಬರನ್ನು ಜೋಡಿಸುತ್ತಿರುವ ಆ ‘ಸೂತ್ರ’ ಯಾವುದು?
ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು.
ಅವಳಲ್ಲಿ
ಇವನಿಗೆ ಇರುವ ಒಲುಮೆ ಹಾಗು ಇವನಲ್ಲಿ ಅವಳಿಗಿರುವ ಒಲುಮೆ ಇವೇ ಅವರ ಬದುಕಿನಾಟದ ಸೂತ್ರ.
ಇಂತಹ ಒಲುಮೆಯನ್ನು ದಿನದಿನವೂ ಈ ಪ್ರಣಯಜೋಡಿಯು ಸೂರೆ ಮಾಡುತ್ತಿರುವಾಗ, ಹೊಸ ಬಾಳು
ಹೇಗಿರುತ್ತದೆ?
‘ದಿನದಿನ ಜಾತ್ರಿಯೆನಿಸಿತ್ತ ಜನುಮವು!’
ಆಧುನಿಕ
ತಲೆಮಾರಿನ ನಮ್ಮ ಯುವಕ, ಯುವತಿಯರು ಹಳ್ಳಿಯ ಜಾತ್ರೆಗಳನ್ನು ಬಹುಶಃ ನೋಡಿರಲಿಕ್ಕಿಲ್ಲ.
ಅದೊಂದು ಸಡಗರದ ಸಮಾವೇಶ. ಜಾತ್ರೆಯಲ್ಲಿ ಚಿಕ್ಕ ಮಕ್ಕಳು ಆಟಿಗೆಗಳನ್ನು ಕೊಡಿಸಿಕೊಳ್ಳಲು
ಬಂದಿದ್ದರೆ, ಹುಡುಗ-ಹುಡುಗಿಯರಿಗೆ ತಿರುಗು-ಗಾಲಿಗಳಲ್ಲಿ ಕೂಡುವ ಉಮೇದಿ. ಬಹುಪಾಲು
ಯುವಕ-ಯುವತಿಯರು ‘ರಾಜಾ-ರಾಣಿ ದೇಖೋ’ ಅನ್ನುತ್ತ ‘ಕಣ್ಣಾಟ’ಕ್ಕಾಗಿ ಬಂದಿರುತ್ತಾರೆ.
ಒಟ್ಟಿನಲ್ಲಿ ಆಬಾಲವೃದ್ಧರಿಗೆ ಇದೊಂದು ಉತ್ಸಾಹದ, ಸಂಭ್ರಮದ ಸನ್ನಿವೇಶ.
ತನ್ನ
ನಲ್ಲನ ಒಲವಿನಲ್ಲಿ ನಮ್ಮ ಹೊಸ ಮದುವಣಗಿತ್ತಿಗೆ ಅವಳ ಬಾಳೆಂಬುದು ಪ್ರತಿದಿನವೂ ಇಂತಹ
ಜಾತ್ರೆಯ ಸಂಭ್ರಮವಾಗಿದೆ. ನಿಸಾರ ಅಹಮದರ ಭಾಷೆಯಲ್ಲಿ ಹೇಳುವದಾದರೆ, ಜೀವನವೊಂದು
‘ನಿತ್ಯೋತ್ಸವ!’
ತನ್ನ
ನಲ್ಲೆಯನ್ನು ಕಣ್ಸನ್ನೆಯಿಂದಲೇ ಆಟ ಆಡಿಸುವದು, ರಸಿಕತನದ ಪ್ರಥಮ ಸಂಕೇತವಾದರೆ,
ಅವಳನ್ನು ‘ಹುಬ್ಬು ಹಾರಿಸಿ’ ಕರೆಯುವದು ರಸಿಕ ನಲ್ಲನು ಕೊಡುತ್ತಿರುವ ಎರಡನೆಯ ಸಂಕೇತ.
ಇದು ಶೃಂಗಾರದಾಟಕ್ಕೆ ಆತ ನೀಡುತ್ತಿರುವ ನೇರ ಆಹ್ವಾನವೇ ಆಗಿದೆ. ಇದು ಯೌವನದ ಹಬ್ಬ, ಇದು
ರಸಿಕರ ಹಬ್ಬ, ಇದು ಶೃಂಗಾರದ ಹಬ್ಬ!
ನಮ್ಮ ಹೊಸ ಮದುವಣಗಿತ್ತಿಯ ಗೆಳತಿಗೆ ಈ ಸಂಕೇತಗಳಲ್ಲಿ, ಈ ಆಟದಲ್ಲಿ ಯಾವ ವಿಶೇಷತೆಯೂ ಕಾಣಿಸಲಿಲ್ಲವೇನೋ. ಅದನ್ನು ಗ್ರಹಿಸಿದ ಈ ಹುಡುಗಿ ತನ್ನ ನಲ್ಲನು ಸಾಮಾನ್ಯನಲ್ಲವೆಂದು ಆಗ್ರಹದಿಂದ ಹೇಳುತ್ತಾಳೆ:
‘ಅಬ್ಬ’ ಎನಬೇಡs ನನ ಗೆಣತಿ ಸಾವಿರಕ
ಒಬ್ಬ ನೋಡವ್ವ ನನ ನಲ್ಲ.
‘ತನ್ನ ನಲ್ಲನು ಸಾವಿರದಲ್ಲಿ ಒಬ್ಬನು; ನನ್ನ ಈ ಮಾತಿಗೆ ನೀನು ‘ಅಬ್ಬಾ!’ ಎಂದು ಹಾಸ್ಯ ಮಾಡದಿರು’ ಎಂದು ತನ್ನ ಗೆಳತಿಯ ಎದುರು ಸಮರ್ಥನೆ ಮಾಡುತ್ತಾಳೆ ಈ ಹುಡುಗಿ. ಅಂತಹ ಅಸಾಮಾನ್ಯತೆ ಏನಿದೆ ಇವಳ ನಲ್ಲನಲ್ಲಿ?
ಬಹುಶ:
ಹೊಸದಾಗಿ ಮದುವೆಯಾದ ಎಲ್ಲ ಹುಡುಗಿಯರೂ ತಮ್ಮ ನಲ್ಲನೆಂದರೆ ಅಸಾಮಾನ್ಯ ಎನ್ನುವ
ಭಾವನೆಯನ್ನೇ ಇಟ್ಟುಕೊಂಡಿರುತ್ತಾರೊ ಏನೊ? ಈ ಹುಡುಗಿಯ ನಲ್ಲನಲ್ಲಿ ಇರುವ ವಿಶೇಷತೆ ಏನು?
ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು.
ಕಣ್ಣುಗಳು
ಭಾವನೆಯನ್ನು ಪ್ರದರ್ಶಿಸುವ ಅಂಗಗಳಾಗಿವೆ. ತನ್ನ ನಲ್ಲೆಯ ಬಗೆಗೆ ಆ ನಲ್ಲನಿಗೆ ಎಷ್ಟು
ಪ್ರೀತಿ ಇದೆ ಎಂದರೆ ಆತ ತನ್ನ ಕಣ್ಣುರೆಪ್ಪೆಗಳನ್ನು ಎತ್ತಿ ಇವಳೆಡೆಗೆ ನೋಡಿದರೆ ಸಾಕು,
ಅಲ್ಲಿ ಪೂರ್ಣಿಮೆಯ ಬೆಳದಿಂಗಳು ಹರಡುತ್ತದೆ. ಆ ಬೆಳದಿಂಗಳಿನಲ್ಲಿ ಒಂದು ಗಂಧರ್ವಲೋಕದ
ಸೃಷ್ಟಿಯಾಗುತ್ತದೆ. ‘ಆ
ಲೋಕದಲ್ಲಿ ತನ್ನ ಹುಡುಗಿಯನ್ನು ನಲಿಸಬೇಕು’ ಎನ್ನುವ ಅವನ ಚಿತ್ತದೊಳಗಿನ ಬಯಕೆ
ಪಾರದರ್ಶಕವಾಗಿ ಅವನ ಕಣ್ಣಿನಲ್ಲಿ ಇವಳಿಗೆ ಕಾಣುತ್ತದೆ. ನಿಜ ಹೇಳಬೇಕೆಂದರೆ, ತನ್ನ
ಬಯಕೆಯನ್ನೇ ಇವಳು ಅವನ ಕಣ್ಣುಗಳಲ್ಲಿ ಕಾಣುತ್ತಿದ್ದಾಳೆ. ಇದನ್ನು ಬೇಂದ್ರೆಯವರು
‘ಚಿತ್ತಕ್ಕೆ ಕಣ್ಣು ಬರೆಧ್ಹಾಂಗ ಕಂಡಿತ್ತು’ ಎಂದು ವರ್ಣಿಸುತ್ತಾರೆ.
ಜೀವನವೆಲ್ಲ
ಮಾಯಾಲೋಕವಾಗಲು ಸಾಧ್ಯವೆ? ಇಲ್ಲಿ ದೈನಂದಿನ ಸಮಸ್ಯೆಗಳು ಇದ್ದೇ ಇರುತ್ತವೆ. ‘ಸಾಕಪ್ಪಾ ಈ
ಬದುಕು!’ ಎಂದೆನಿಸುವದು ಸಹಜ. ಅಂತಹ ಸಮಯದಲ್ಲಿ ಇವಳ ನಲ್ಲನೇ ಇವಳಿಗೆ ಸಮಾಧಾನ ಹೇಳಿ
ಬದುಕಿನಲ್ಲಿ ಆಸೆ ಹುಟ್ಟಿಸಬೇಕಲ್ಲವೆ?
ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ.
ಸಮಸ್ಯೆಗಳಿಗೆ ಹೆದರಿದ ತನ್ನ ನಲ್ಲೆಗೆ ಈ ನಲ್ಲ ಧೈರ್ಯವನ್ನು ಕೊಡುವ ಬಗೆ ಎಂತಹದು? ತನ್ನ ಮೀಸೆಯ ಮೇಲೆ ಕಿರಿಬೆರಳನ್ನು ಎಳೆದು, ಈ ಗಂಡಸು ಅವಳಿಗೆ ಅಭಯ ಕೊಡುತ್ತಾನೆ: ‘ನಾನಿದ್ದೇನೆ,
ಹೆದರದಿರು! ಬಾ ನನ್ನ ಜೊತೆಗೆ ಬದುಕನ್ನು ಎದುರಿಸಲು!’ ಎನ್ನುವ ಧಾಟಿಯಲ್ಲಿ ತನ್ನ
ಕೆಂಚನೆಯ ಕೈಯನ್ನು ಬೀಸಿ ಇವಳನ್ನು ಕರೆಯುತ್ತಾನೆ. ಬೇಂದ್ರೆಯವರು ನಲ್ಲನ
‘ಗಂಡಸುತನ’ವನ್ನು ಎತ್ತಿ ತೋರಿಸುವ ಉದ್ದೇಶದಿಂದ, ‘ಮೀಸಿ ಮೇಲೆಳೆದ ಬೆರಳು, ‘ಕೆಂಗಯ್ಯ
ಬೀಸಿ ಕರೆದಾನ’ ಎನ್ನುವ ಎನ್ನುವ ವಿಶೇಷಣಗಳನ್ನು ಬಳಸಿದ್ದಾರೆ.
ರಸಿಕ
ನಲ್ಲನ ಆಸರೆಯು ಇರುವಾಗ ಇವಳ ಬದುಕಿನ ಬೇಗುದಿ ಮಾಯವಾಗುತ್ತದೆ, ಆಸೆ ಮತ್ತೆ
ಚಿಗುರುತ್ತದೆ, ಪ್ರಣಯ ಮತ್ತೆ ಕೊನರುತ್ತದೆ. ತಾಂಬೂಲದಿಂದ ಕೆಂಪಾದ ತುಟಿಯ ಈ ರಸಿಕನ
ನಗೆಯು ಇವಳಿಗೆ ಬೆಚ್ಚನೆಯ, ಆಹ್ಲಾದಕರವಾದ ಹೊಂಬಿಸಲಂತೆ ಭಾಸವಾಗುತ್ತದೆ. ಅವಳ
ಅಂತರಂಗದಲ್ಲಿ ಈ ಭಾವನೆಯು ‘ಬಿಂಬಿಸುತ್ತದೆ’ ಎಂದರೆ ಅವನ ಅಂತರಂಗದಿಂದ ಇವಳ ಅಂತರಂಗಕ್ಕೆ
transfer ಆಗುತ್ತದೆ.
ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ.
ನಿರಂತರ
ಪ್ರಣಯವೊಂದೇ ಅಲ್ಲ, ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. ಇವೆರಡನ್ನೂ ಈತ
ತನ್ನ ನಲ್ಲೆಗೆ ಕೊಡುತ್ತಿದ್ದಾನೆ. ಆ ಮಾತನ್ನು ‘ನಂಬೀಸಿ, ರಂಬಿಸಿತವ್ವಾ ಜೀವವ’
ಎನ್ನುವ ಮೂಲಕ ಅಭಿವ್ಯಕ್ತಿಸಲಾಗಿದೆ.
ದೇಸಿ
ಪದಗಳನ್ನು ಬೇಂದ್ರೆಯವರು ಎಷ್ಟು ಸಮರ್ಥವಾಗಿ ಬಳಸಬಲ್ಲರು, ತಮಗೆ ಬೇಕಾದ ಅರ್ಥವನ್ನು ಈ
ಪದಗಳ ಮೂಲಕ ಹೇಗೆ ಹಿಗ್ಗಿಸಿ ಹೊರತರಬಲ್ಲರು ಎನ್ನುವದಕ್ಕೆ ಈ ಗೀತೆಯು ಶ್ರೇಷ್ಠ
ಉದಾಹರಣೆಯಾಗಿದೆ.
ಹೆಚ್ಚಿನ ಓದಿಗೆ: http://sallaap.blogspot.com/2011/07/blog-post.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ