ಹರಿಶ್ಚಂದ್ರ ಕಾವ್ಯ-ಒಂದು ಪರಾಮರ್ಶೆ

ಹರಿಶ್ಚಂದ್ರ ಕಾವ್ಯ : ಒಂದು ಪರಾಮರ್ಶೆ

-೧-
ಹರಿಶ್ಚಂದ್ರ ಕಾವ್ಯವನ್ನು ಬರೆದದ್ದರಿಂದ ರಾಘವಾಂಕ ತನ್ನ ಸೋದರ ಮಾವನೂ ಗುರುವೂ ಆದ ಹರಿಹರನಿಂದ ಹಲ್ಲು ಮುರಿಸಿಕೊಳ್ಳಬೇಕಾಯಿತು- ಎನ್ನುವುದು ಒಂದು ದಂತಕಥೆ. ಹರಿಶ್ಚಂದ್ರ ಕಾವ್ಯವನ್ನು ನೆನೆದಾಗೆಲ್ಲ ಈ ಕಥೆಯನ್ನು ಮರೆಯಲಾಗುತ್ತಿಲ್ಲ. ನಿಜವಾದ ಅರ್ಥದಲ್ಲಿ ಇದು ದಂತಕಥೆಯೆ! ಇಂಥ ದಂತಕಥೆಗಳು ಕನ್ನಡದ ಇನ್ನೂ ಹಲವು ಕವಿಗಳ ವಿಚಾರದಲ್ಲಿಯೂ ಪ್ರಚಲಿತವಾಗಿವೆ. ಅಷ್ಟೆ ಅಲ್ಲ, ಜಗತ್ತಿನ ಎಷ್ಟೋ ಕವಿಗಳ ವಿಚಾರದಲ್ಲಿಯೂ ಹುಟ್ಟಿಕೊಂಡು ಬಂದಿವೆ. ಇಂಥ ಕಥೆಗಳು ಸಾಹಿತ್ಯ ವಿಮರ್ಶಕರಿಗೆ, ಸಾಹಿತ್ಯ ಚರಿತ್ರೆಯನ್ನು ಬರೆಯುವವರಿಗೆ ಏನೇನೂ ಪ್ರಯೋಜನಕ್ಕೆ ಬಾರದವು ಎಂದವರೂ ಉಂಟು; ಇವುಗಳಲ್ಲಿ ಕೇವಲ ಕಲ್ಪನೆಯ ಮತ್ತು ಮನೋರಂಜನೆಯ ಅಂಶವು ವಿಶೇಷವಾಗಿದ್ದರೂ ಅಲ್ಪಸ್ವಲ್ಪ ಸತ್ಯಾಂಶಗಳೂ ಇರುವುದರಿಂದ ಇವುಗಳನ್ನು ಕಡೆಗಣಿಸುವಂತಿಲ್ಲ ಎಂದವರೂ ಉಂಟು. ಅದೇನೇ ಇರಲಿ;  ರಾಘವಾಂಕನ ವಿಚಾರದಲ್ಲಿ ಪ್ರಚಲಿತವಾಗಿರುವ ಈ ಒಂದು ದಂತಕಥೆಯನ್ನು, ಕೇವಲ ತಂದಕಥೆ ಎಂದು ನಾನು ತಳ್ಳಿಹಾಕಲಾರೆ. ಈ ಮಾತಿನ ಅರ್ಥ, ಈ ಕಥೆಯಲ್ಲಿನ ಘಟನೆ ವಾಸ್ತವವಾಗಿ ಅದರಲ್ಲಿ ನಿರೂಪಿತವಾಗಿರುವ ಹಾಗೆಯೇ ನಡೆಯಿತೆಂಬುದನ್ನು ಒಪ್ಪುತ್ತೇವೆ ಎಂದು ಅಲ್ಲ. ಅದು ಅಂದಿನ ಯುಗಧರ್ಮದಲ್ಲಿ ಇಬ್ಬರು ಭಿನ್ನ ದೃಷ್ಟಿಯ ಮಹತ್ವದ ಕವಿಗಳ ಮನೋಧರ್ಮ ಹಾಗೂ ಕಾವ್ಯ ಧೋರಣೆಗಳ ಸಂಘರ್ಷಕ್ಕೆ ಒಂದು ಸಂಕೇತವಾಗಿದೆ ಎಂದು ನಾವು ಭಾವಿಸುತ್ತೇವೆ.
ಹರಿಶ್ಚಂದ್ರ ಕಾವ್ಯವನ್ನು ಓದಿದ ಯಾರಿಗಾದರೂ, ಈ ದಂತಕಥೆಯ ಹಿನ್ನೆಲೆಯಿಂದ  ನೋಡಿದಾಗ, ಹರಿಹರನು ರಾಘವಾಂಕನ ಬಗೆಗೆ, ಹರಿಶ್ಚಂದ್ರ ಕಾವ್ಯವನ್ನು ಬರೆದದ್ದಕ್ಕಾಗಿ ಯಾವುದೇ ರೀತಿಯ ಆಕ್ಷೇಪಣೆಯನ್ನಾಗಲಿ, ಪ್ರತಿಭಟನೆಯನ್ನಾಗಲಿ ತೋರಿಸಿದ್ದು ಅನುಚಿತ ಎಂದು ಅನ್ನಿಸದೆ ಇರದು. ಆದರೂ ಅವರಿಬ್ಬರಿಗೂ ಈ ಒಂದು ಕಾವ್ಯದ ಬಗ್ಗೆ ಸಂಘರ್ಷಣೆ  ಉಂಟಾದದ್ದು ಸಾಧ್ಯ ಎಂದು ಅನ್ನಿಸುವುದು ಅವರಿಬ್ಬರೂ ಬದುಕಿದ ಕಾಲಧರ್ಮ ಹಾಗೂ ಅವರಿಬ್ಬರ ಕಾವ್ಯ ಧೋರಣೆಗಳನ್ನು ಅರ್ಥಮಾಡಿಕೊಂಡಾಗಲೇ.
ಹರಿಹರ ಭಕ್ತ ಕವಿ. ಅವನು ಕೃತಿ ರಚನೆಗೆ ತೊಡಗುವ ವೇಳೆಗೆ ಕನ್ನಡ ಸಾಹಿತ್ಯದ ದ್ವಿತೀಯ ನವೋದಯಕ್ಕೆ ಕಾರಣವಾದ ಶಿವಶರಣರ ಧಾರ್ಮಿಕ ಸಾಮಾಜಿಕ ಕ್ರಾಂತಿಯ ಹಿನ್ನೆಲೆ ಇತ್ತು. ವಚನಕಾರರ ಉಜ್ವಲವಾದ ಬದುಕು, ಅವರ ಭಕ್ತಿಯ ಉತ್ಕಟತೆ, ಅವರ ವಚನಗಳಲ್ಲಿ ಅಭಿವ್ಯಕ್ತವಾದ ದಿಟ್ಟತನದ ವ್ಯಕ್ತಿತ್ವ, ಅವರು ನಿರ್ಮಿಸಿದ ಮೌಲ್ಯಗಳು, ಅವರಿಗೆ ಪ್ರೇರಣೆ ನೀಡಿದ ಶಿವಭಕ್ತರ ಚರಿತೆಗಳು -ಇವೇ ಮೊದಲಾದುವನ್ನು ತನ್ನ ಕಾವ್ಯದ ಮೂಲ ದ್ರವ್ಯವನ್ನಾಗಿ ಮಾಡಿಕೊಳ್ಳುವ ಸದವಕಾಶ ತನ್ನ ಪಾಲಿಗೆ ಬಂದಿದೆ ಎಂದು ಹರಿಹರನು ಭಾವಿಸಿದಂತೆ ತೋರುತ್ತದೆ. ಆದುದರಿಂದ ಆತ, ಶಿವನನ್ನು ಶಿವಶರಣರನ್ನು ಕುರಿತು ಕಾವ್ಯ ಬರೆಯುತ್ತೇನೆ, ‘ಮನುಜರ ಮೇಲೆ, ಸಾವವರ ಮೇಲೆ, ಕನಿಷ್ಠರ ಮೇಲೆ’ ಕಾವ್ಯವನ್ನು ಬರೆಯುವುದಿಲ್ಲ- ಎಂದು ತನ್ನ ಕಾವ್ಯೋದ್ದೇಶವನ್ನು ಘೋಷಿಸಿಕೊಂಡನು. ಇಂಥ ಸಂದರ್ಭದಲ್ಲಿ ತನ್ನ ಸೋದರಳಿಯನೂ ಸಾಕ್ಷಾತ್ ಶಿಷ್ಯನೂ ಆದ ರಾಘವಾಂಕನೂ ಇದೇ ಕಾವ್ಯಧರ್ಮವನ್ನು ಇರಿಸಿಕೊಳ್ಳಬೇಕೆಂದು ಸಹಜವಾಗಿಯೆ ಆಶಿಸಿದ ಹರಿಹರನಿಗೆ, ರಾಘವಾಂಕನು ಬರೆದ ಹರಿಶ್ಚಂದ್ರ ಕಾವ್ಯ ಈ ಚೌಕಟ್ಟಿಗೆ ಒಳಪಡದೆ ಹೋದದ್ದು ಅಸಮಾಧಾನದ ಸಂಗತಿಯಾಗಿರಬೇಕು. ಹರಿಹರನು ಶಿವಶರಣರನ್ನು ತನ್ನ ಕಾವ್ಯದ ‘ವಸ್ತು’ವನ್ನಾಗಿ ಮಾಡಿಕೊಳ್ಳುತ್ತಿದ್ದ ಕಾವ್ಯಧರ್ಮದ ಸಂದರ್ಭದಲ್ಲಿ, ರಾಘವಾಂಕ ವೇದಪುರಾಣ ಇತಿಹಾಸಗಳ ಮೂಲಕ ಕಿರುದೊರೆಯಾಗಿ ಹರಿದುಬಂದ ಹರಿಶ್ಚಂದ್ರನ ವೃತ್ತಾಂತವನ್ನು ತನ್ನ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡನು. ಹರಿಹರನ ಶಿವಶರಣರಂತೆ, ರಾಘವಾಂಕನ ಹರಿಶ್ಚಂದ್ರನು ನೇರವಾಗಿ ಕೈಲಾಸದಿಂದ-ಅಲ್ಲಿ ಮಾಡಿದ ಯಾವುದೋ ತಪ್ಪನ್ನು ಇಲ್ಲಿ ತಿದ್ದಿಕೊಳ್ಳಲೆಂದು, ಶಾಪದಿಂದಲೋ ಅನುಗ್ರಹದಿಂದಲೊ ಮರ್ತ್ಯಕ್ಕೆ ಇಳಿದುಬಂದವನಲ್ಲ; ಹರಿಹರನ ಶಿವಶರಣರಂತೆ ಶಿವಭಕ್ತಿಯ ಪ್ರಸಾರಕ್ಕೊ, ಶಿವಸಮಯದ ಉದ್ಧಾರಕ್ಕೊ, ಪರಸಮಯದ ದಮನಕ್ಕೋ ಉದ್ಯುಕ್ತನಾದವನಲ್ಲ. ಅವನು ಮನುಷ್ಯನಾಗಿ ಇದ್ದುಕೊಂಡೇ ಸತ್ಯಸಾಧನೆಯಿಂದ ಶಿವನನ್ನು ಮೆಚ್ಚಿಸಿದವನು. ಹರಿಹರನ ಶಿವಶರಣರಂತೆ, ಶಿವನೊಲಿದ ಮೇಲೆ, ಶಿವನೊಂದಿಗೆ ಕೈಲಾಸಕ್ಕೆ ಹೋದವನಲ್ಲ, ಮತ್ತೆ ಈ ನೆಲದ ಮೇಲೆ ನಿಂತವನು. ಆದರೆ ಹರಿಶ್ಚಂದ್ರನ ಬದುಕು, ಹರಿಹರನು ಚಿತ್ರಿಸಿರುವ ಶಿವಶರಣರ ಬದುಕಿಗಿಂತ ಕಡಮೆಯದೇನೂ ಅಲ್ಲ. ಆದರೂ ಹರಿಹರನ ಪರಂಪರೆಗೆ ಈ ಸತ್ಯಾಂಶ ಗೋಚರಿಸಲಿಲ್ಲ. ಒಟ್ಟಿನಲ್ಲಿ ಸ್ವತಂತ್ರ ಮನೋಧರ್ಮದ ರಾಘವಾಂಕನ ಕವಿಪ್ರಜ್ಞೆ, ತನ್ನ ಕಾಲದ ಮತ-ಧರ್ಮದ ಸೆಳವಿಗೆ ಸಿಕ್ಕಿ ಹೇಗೆ ತನ್ನ ಕಾವ್ಯವನ್ನು ಮತ-ಧರ್ಮ ಪ್ರಸಾರದ ಮಾಧ್ಯಮವನ್ನಾಗಿ ಮಾಡಿಕೊಳ್ಳುವ ನಿರ್ಬಂಧಕ್ಕೆ ಒಳಗಾಯಿತೆಂಬುದನ್ನು, ಈ ಮೊದಲು ಪ್ರಸ್ತಾಪಿಸಿದ ‘ದಂತಕಥೆ’ ಸಂಕೇತಿಸುವುದರ ಜತೆಗೆ, ರಾಘವಾಂಕ ಹರಿಶ್ಚಂದ್ರ ಕಾವ್ಯವನ್ನು ಮೊದಲು ಬರೆದು, ಅನಂತರ ‘ಶೈವಕೃತಿಪಂಚಕ’ ಗಳನ್ನು ಬರೆದನೆಂಬುದನ್ನು ದೃಢಪಡಿಸುತ್ತದೆ.
-೨-
ರಾಘವಾಂಕನ ಪ್ರಥಮ ಕೃತಿಯಾದ ಹರಿಶ್ಚಂದ್ರಕಾವ್ಯ, ಕನ್ನಡ ಸಾಹಿತ್ಯದಲ್ಲಿಯೆ ಒಂದು ಅತ್ಯಂತ ಶ್ರೇಷ್ಠವಾದ ಕೃತಿ ಎಂದು ಅನ್ನಿಸುವುದು, ದಿವಂಗತ ಶ್ರೀಟಿ.ಎಸ್. ವೆಂಕಣ್ಣಯ್ಯ ಹಾಗೂ ಕೃಷ್ಣಶಾಸ್ತ್ರಿಗಳು ಸಂಗ್ರಹಿಸಿ ಸಂಪಾದಿಸಿ ಪ್ರಕಟಪಡಿಸಿರುವ ‘ಹರಿಶ್ಚಂದ್ರ ಕಾವ್ಯ ಸಂಗ್ರಹ’ವನ್ನು ಓದಿದಾಗ; ಮೂಲಕಾವ್ಯವನ್ನೆ ಇಡಿಯಾಗಿ ಓದಿದಾಗ ಅಲ್ಲ. ‘ಸಂಗ್ರಹ’ಗಳಲ್ಲಿ ಉಜ್ವಲವಾಗಿ ಕಂಡು, ಮೂಲದಲ್ಲಿ ಅಲ್ಲಲ್ಲಿ ಕಿಡಿ-ಬೂದಿಯಾಗಿ ಕಾಣಿಸುವ ಈ ಲಕ್ಷಣ, ಹರಿಶ್ಚಂದ್ರ ಕಾವ್ಯವೊಂದನ್ನೆ ಕುರಿತ ಮಾತಲ್ಲ, ಕನ್ನಡದ ಎಷ್ಟೋ ಕೃತಿಗಳನ್ನು ಕುರಿತ ಮಾತು ಎನ್ನುವುದನ್ನು ಮರೆಯಬಾರದು. ಮೂಲದಲ್ಲಿ ಹರಿಶ್ಚಂದ್ರ ಕಾವ್ಯ ಹದಿನಾಲ್ಕು ಸ್ಥಲಗಳಷ್ಟು ಹರಡಿಕೊಂಡಿದೆ. ಮೊದಲ ಆರು ಸ್ಥಲಗಳನ್ನು ಓದಿ ಮುಗಿಸುವುದೇ ಪ್ರಯಾಸದ ಕೆಲಸ. ಎರಡನೆಯ ಸ್ಥಲದ ವಸಿಷ್ಠ ವಿಶ್ವಾಮಿತ್ರರ  ವಾಗ್ವಾದದ ನಾಟ್ಯಮಯ ಸಂದರ್ಭ ಒಂದಷ್ಟು ಲವಲವಿಕೆಯನ್ನೂ, ರಾಘವಾಂಕನ ಕಾವ್ಯ ಸಾಮರ್ಥ್ಯದ ಬಗ್ಗೆ ಭರವಸೆಯನ್ನೂ ಹುಟ್ಟಿಸುವುದಾದರೂ, ಮತ್ತೆ ಈ ಭರವಸೆ ನಿಜವಾಗಲು ಶುರುವಾಗುವುದು ಏಳನೆಯ ಸ್ಥಲದಿಂದಲೇ. ಅಲ್ಲಿನವರೆಗೆ ಸಂಪ್ರದಾಯದ ಉಸುಬಿನ ದಾರಿ. ಈ ಕಾವ್ಯದ ಮೊದಲ ಪ್ರಾರ್ಥನಾ ಪದ್ಯ, ‘ಶ್ರೀಪತಿಗೆ ಸೊಬಗನ್ ಉಡುಪತಿಗೆ ಶಾಂತಿಯನು…..’ ಎಂದು ಆರಂಭವಾಗುವ ಗುರುಮೂರ್ತಿ ಪಂಪಾಪತಿಯ ಪ್ರಾರ್ಥನೆಯ ಪದ್ಯ,[1] ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವವಾದ ದೇವತಾಸ್ತುತಿ ಎಂದು ಅನ್ನಿಸುತ್ತದೆ. ಅದರ ಭಾಷೆಯ ಬೀಸು, ಭಾವನೆಯ ಮಹೋನ್ನತಿ, ವಿಶಿಷ್ಟವಾದ ರೀತಿಯಲ್ಲಿ ಮನಸ್ಸನ್ನು ಆಕ್ರಮಿಸುತ್ತದೆ. ಈ ಪದ್ಯದ ಸೊಗಸನ್ನು ಪರಿಭಾವಿಸುತ್ತಾ ಅದರ ಮುಂದಿನ ಪದ್ಯವನ್ನೋದಿದ ಕೂಡಲೇ ಮುಗ್ಗರಿಸಿಬಿದ್ದ ಅನುಭವವಾಗುತ್ತದೆ. ಮೊದಲ ಪ್ರಾರ್ಥನಾ ಪದ್ಯ ಮಹತ್ತಾದ ಅನುಭವದೆಡೆಗೆ ಎತ್ತಿ ನಿಲ್ಲಿಸಿದ ಮನಸ್ಸನ್ನು, ಅದರ ಮುಂದಿನ, ಮುಂದುವರಿದ ಪ್ರಾರ್ಥನಾ ಪದ್ಯ ‘ಜಡೆಯಿಡುಕುಱೆಡೆಯೊಳಡಿಯಿಡುವ ಕಡಲತಡಿವಿಡಿದುಡುಗಣದೊಡೆಯ’ ಎಂಬ ಡಕಾರ ಪ್ರಸಾದ ಕೊಳ್ಳದೊಳಕ್ಕೆ ಎತ್ತಿ ಹಾಕುತ್ತದೆ. ಎರಡನೆಯ ಪದ್ಯದಿಂದ ಮುಂದುವರಿದ ಕವಿಯ ಪ್ರಾರ್ಥನೆ, ಮುಂದಿನ ನಾಲ್ಕೆ ದು ಪದ್ಯಗಳಲ್ಲಿ ಪ್ರಾಸ ಚಮತ್ಕಾರಗಳಲ್ಲಿ ಪಂಪಾಪತಿಯನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗುತ್ತದೆ. ಅನಂತರ ರಾಘವಾಂಕನ ಕಾವ್ಯಧೋರಣೆ, ಕುಕವಿನಿಂದೆ, ಸ್ವಕಾವ್ಯದ ಅಗ್ಗಳಿಕೆ, ಅಕ್ಷರಡಂಬರದ ಸಮುದ್ರ ವರ್ಣನೆ, ಸಮುದ್ರದ ನಡುವಣ ವಸುಧೆ, ಅದರೊಳಗಣ ಲಾಳದೇಶ, ಅಯೋಧ್ಯಾನಗರದ ಹೊರವಲಯದ ದುರ್ಗ, ಸಕಲಗುಣ ಸಂಪನ್ನರಾದ ರಾಜ-ರಾಣಿ, ಹರಿಶ್ಚಂದ್ರ-ಚಂದ್ರಮತಿಯರ ವರ್ಣನೆ, ವಸಂತ ವರ್ಣನೆ, ವನವಿಹಾರ, ಪುಷ್ಪಾಚಯ, ಜಲಕ್ರೀಡೆ, ಚಂದ್ರಿಕಾವಿಹಾರ, ಸೂಳೆಗೇರಿಯಲ್ಲಿ ರಾಜ ಹರಿಶ್ಚಂದ್ರನ ಸಂಚಾರ, ಆಮೇಲೆ ಬೇಟೆ, ಕಾಡು, ಋಷ್ಯಾಶ್ರಮದ ವರ್ಣನೆ -ಇಷ್ಟನ್ನು ದಾಟಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಆದರೆ, ಕಥೆ ಬೇಟೆಯ ವರ್ಣನೆಯ ತುದಿಯಲ್ಲಿ ವಿಶ್ವಾಮಿತ್ರನ ಆಶ್ರಮದ ಸಮೀಪದಲ್ಲಿ ವಿಶ್ರಾಂತಿಗೆ ನಿಂತಾಗ, ಗಾಣಗಾತಿಯರ ಗೆಜ್ಜೆಯ ಹೆಜ್ಜೆಯ ಸದ್ದಿನಿಂದ ಒಂದು ಹೊಸ ತಿರುವು ಬರುವತನಕ ಇಡೀ ಬರವಣಿಗೆ ‘ರಾಘವಾಂಕ ಪಂಡಿತ’ನದು ಎಂದು ಅನ್ನಿಸುತ್ತದೆ. ಇಲ್ಲಿ ಸ್ವತಂತ್ರಯುಗದ ಕವಿಯಾದ ರಾಘವಾಂಕನೂ, ಸಂಪ್ರದಾಯದ ಬಕಾಸುರನ ಬಂಡಿಗೆ ಕೂಳೊಟ್ಟುವ ಪಾಂಡಿತ್ಯದ ಪಾಕಶಾಲೆಯ ಬಾಣಸಿಗನಂತೆ ತೋರುತ್ತಾನೆ. ಏಳನೆಯ ಸ್ಥಲದಲ್ಲಿ ಗಾಣಗಾತಿಯರ ಪ್ರವೇಶದಿಂದ ಹರಿಶ್ಚಂದ್ರ ಕಾವ್ಯಕ್ಕೆ ಒಂದು ಆವೇಶ ಬರುತ್ತದೆ; ರಾಘವಾಂಕನ ಪ್ರತಿಭೆಗೆ ಕಾವೇರುತ್ತದೆ. ಇಲ್ಲಿಂದ ಮುಂದಕ್ಕೆ ಕಥೆ ಬಂಡೆಯಿಂದ ಬಂಡೆಗೆ ನೆಗೆದು ಬೆಳ್ಳಂಗೆಡೆವ ಪಂಪಾತೀರದ ತುಂಗಭದ್ರೆಯ ಹೊನಲು. ಮೊದಲ ಆರು ಸ್ಥಲಗಳಲ್ಲಿ, ಎರಡನೆಯ ಸ್ಥಲದ ವಸಿಷ್ಠ ವಿಶ್ವಾಮಿತ್ರರ ಸಂವಾದ ಸಂದರ್ಭದ ಹಸುರ್ದಾಣವನ್ನು ಬಿಟ್ಟರೆ, ಉಳಿದದ್ದು ಶುಷ್ಕತೆಯ ಹರಹು. ಮೊದಲ ಆರು ಸ್ಥಲಗಳ ತೂಕವೆ ಒಂದಾದರೆ, ಮುಂದಿನ ಎಂಟು ಸ್ಥಲಗಳ ತೂಕವೇ ಬೇರೊಂದಾಗಿದೆ. ಮೊದಲ ಆರು ಸ್ಥಲಗಳಲ್ಲಿ ನೀರುನೀರಾದ ಕವಿ ಪ್ರತಿಭೆ, ಮುಂದಿನ ಎಂಟು ಸ್ಥಲಗಳಲ್ಲಿ ಹರಳುಗೊಳ್ಳುವ ಕ್ರಿಯೆಯಲ್ಲಿ ತೊಡಗುತ್ತದೆ.
ಇಡೀ ಕಾವ್ಯವನ್ನು ಓದಿ ಮುಗಿಸಿದಾಗ, ‘ಹರಿಶ್ಚಂದ್ರ ಕಾವ್ಯ’ ರಾಘವಾಂಕನ ಇತರ ಕಾವ್ಯಗಳಿಗಿಂತಲೂ ಶ್ರೇಷ್ಠವಾದದ್ದೆಂದು ಮನವರಿಕೆಯಾಗುತ್ತದೆ. “ರಾಘವಾಂಕನ ಕಾವ್ಯಸಿದ್ಧಿಯ ಹೆಗ್ಗುರುತೆಂದರೆ ಹರಿಶ್ಚಂದ್ರ ಕಾವ್ಯ. ಅವನ ಶಕ್ತಿ ವಿಶೇಷಗಳೆಲ್ಲ ಇದರಲ್ಲಿ ಮೇಳಗೊಂಡಿವೆ”[2] -ಎಂಬ ಮಾತು ನಿಜ ಎನ್ನಿಸುತ್ತದೆ.
-೩-
ಹರಿಶ್ಚಂದ್ರನ ಕಥೆ ಅತ್ಯಂತ ಪ್ರಾಚೀನವೂ ಜನಪ್ರಿಯವೂ ಆದದ್ದು. ವೇದಪುರಾಣ ಸಾಹಿತ್ಯಗಳಲ್ಲಿ ಉದ್ದಕ್ಕೂ ಹರಿದುಬಂದ ಹರಿಶ್ಚಂದ್ರನ ವೃತ್ತಾಂತ ರಾಘವಾಂಕನ ಕೈಯಲ್ಲಿ ಒಂದು ಸೊಗಸಾದ ನಾಟಕ-ಕಾವ್ಯವಾಗಿದೆ. ಹರಿಶ್ಚಂದ್ರನ ವೃತ್ತಾಂತದಲ್ಲಿ ಮುಖ್ಯವಾದ ಎರಡು ಭಾಗಗಳಿವೆ. ಒಂದು, ಹರಿಶ್ಚಂದ್ರನ ತಂದೆಯಾದ ಸತ್ಯವ್ರತನ ಕಾಲಕ್ಕೆ, ಹರಿಶ್ಚಂದ್ರನ ಮನೆತನದ ಮೇಲೆ ಇದ್ದ ವಿಶ್ವಾಮಿತ್ರನ ಪ್ರಭಾವ; ಇನ್ನೊಂದು, ಹರಿಶ್ಚಂದ್ರನ ಕಾಲಕ್ಕೆ ಅವನ ಮನೆತನದ ಮೇಲೆ ಇದ್ದ ವಸಿಷ್ಠನ ಪ್ರಭಾವ. ಮೊದಲನೆಯದರಲ್ಲಿ ಹರಿಶ್ಚಂದ್ರ ತನಗೆ ಮಗನಾದರೆ ವರುಣನಿಗೆ ಬಲಿ ಕೊಡುವುದಾಗಿ ಮಾತು ಕೊಟ್ಟು, ಅದಕ್ಕೆ ತಪ್ಪಿ ನಡೆದ ಸಂಗತಿಯೂ, ಮತ್ತು ಶುನಶ್ಯೇಫನ ವೃತ್ತಾಂತವೂ ಪ್ರಾಧಾನ್ಯವನ್ನು ಪಡೆದರೆ, ಎರಡನೆಯ ಭಾಗದಲ್ಲಿ ವಿಶ್ವಾಮಿತ್ರನ ಉಗ್ರ ಪರೀಕ್ಷೆಯ ನಡುವೆಯೂ ಹರಿಶ್ಚಂದ್ರನು ಸತ್ಯಸಂಧನಾಗಿ ನಡೆದುಕೊಂಡ ವೃತ್ತಾಂತ ಪ್ರಾಧಾನ್ಯತೆಯನ್ನು ಪಡೆದಿದೆ. ಹರಿಶ್ಚಂದ್ರ ಸತ್ಯಕ್ಕಾಗಿ ದೇಶ-ಕೋಶಗಳನ್ನು ಕಳೆದುಕೊಂಡು ಕಾಡಿಗೆ ಹೋಗಿ ಕಷ್ಟಪಟ್ಟದ್ದು ವೈದಿಕ ಗ್ರಂಥಗಳಾದ ಐತರೇಯ ಬ್ರಾಹ್ಮಣ, ಸಾಂಖ್ಯಾಯನ ಶ್ರೌತಸೂತ್ರಗಳಲ್ಲಾಗಲಿ, ಪ್ರಾಚೀನವಾದ ವಾಯು ಪುರಾಣಾದಿಗಳಲ್ಲಾಗಲಿ ಉಕ್ತವಾಗಿಲ್ಲ; ಅವುಗಳಿಂದ ಈಚಿನವುಗಳಾದ ಕೆಲವು ಪುರಾಣಗಳಲ್ಲಿ ಹಾಗೂ ಸಾಹಿತ್ಯ ಕೃತಿಗಳಲ್ಲಿ ಈ ವಿಷಯ ದೊರೆಯುತ್ತದೆ. ಈ ದೃಷ್ಟಿಯಿಂದ ಮಾರ್ಕಂಡೇಯ ಪುರಾಣ, ದೇವಿ ಭಾಗವತ ಮತ್ತು ಚಂಡಕೌಶಿಕ ನಾಟಕ-ಇವು ಮುಖ್ಯವಾದುವು. ರಾಘವಾಂಕ ಹರಿಶ್ಚಂದ್ರ ಕಾವ್ಯವನ್ನು ಬರೆಯುವಲ್ಲಿ ಈ ವೇದಪುರಾಣ ಸಾಹಿತ್ಯಗಳ ಹಿನ್ನೆಲೆ ಇದ್ದರೂ, ಅವನ ಪಾಲಿಗೆ, ಕ್ಷೇಮೇಂದ್ರನ ಚಂಡಕೌಶಿಕ ನಾಟಕ, ಮಾರ್ಕಂಡೇಯ ಪುರಾಣ ಮತ್ತು ದೇವೀಭಾಗವತ ಇವು ಮುಖ್ಯವಾದ ಆಕರಗಳಾಗಿವೆ. ಆದರೆ ಹರಿಶ್ಚಂದ್ರ ಕಾವ್ಯ ಹಿಂದಿನ ಆಕರಗಳಿಗೆ ಸಂಪೂರ್ಣ ಋಣಿಯಾಗದೆ, ರಾಘವಾಂಕನ ಸ್ವತಂತ್ರ ದೃಷ್ಟಿಯ ಗಣಿಯಾಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಈ ಸ್ವತಂತ್ರದೃಷ್ಟಿ ಹರಿಶ್ಚಂದ್ರನ ಕಥೆಗೆ ಸಂಬಂಧಿಸಿದ ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತಿಕೊಂಡು ಅವುಗಳಿಗೆ ತನ್ನದೇ ಆದ ಉತ್ತರಗಳನ್ನು ಕೊಡುವ ರಾಘವಾಂಕನ ಪ್ರಯತ್ನದಲ್ಲಿ ಕಾಣಿಸಿಕೊಂಡಿದೆ. ಶತಮಾನಗಳ ಕಾಲ ಹರಹಿಕೊಂಡು ಬಂದ ಹರಿಶ್ಚಂದ್ರನ ವೃತ್ತಾಂತಕ್ಕೆ ಸಂಬಂಧಿಸಿದ ಕೆಲವು ಮುಖ್ಯವಾದ ಪ್ರಶ್ನೆಗಳು ಇವು : ಹರಿಶ್ಚಂದ್ರನು ಹುಟ್ಟಾಸತ್ಯವಂತನೆ? ಅವನ ಸತ್ಯ ನಿಷ್ಠೆ ಒಂದು ಮೌಲ್ಯವೆಂಬಂತೆ ಅವನಿಂದ ಗೃಹೀತವಾದದ್ದು ಆಕಸ್ಮಿಕವೆ? ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಅಷ್ಟರಮಟ್ಟಿಗೆ ಕಾಡಲು ಕಾರಣವೇನು? ವಿಶ್ವಾಮಿತ್ರನಿಗೆ ಹರಿಶ್ಚಂದ್ರನು ರಾಜ್ಯ ಸಮಸ್ತವನ್ನೂ ಒಪ್ಪಿಸುವ ಸಂದರ್ಭ ಪ್ರಾಪ್ತವಾದದ್ದು ಹೇಗೆ? ವಸಿಷ್ಠ ವಿಶ್ವಾಮಿತ್ರರ ಸ್ಪರ್ಧೆ ಐತಿಹಾಸಿಕವೊ, ಆಕಸ್ಮಿಕವೊ ಅಥವಾ ಹರಿಶ್ಚಂದ್ರನ ಸತ್ಯ ಪರೀಕ್ಷೆಗಾಗಿಯೆ ಏರ್ಪಟ್ಟಿದ್ದೊ? ಈ ಎಲ್ಲ ಪ್ರಶ್ನೆಗಳನ್ನು ರಾಘವಾಂಕನು ತನ್ನ ಮನಸ್ಸಿನಲ್ಲಿರಿಸಿಕೊಂಡು, ಅವುಗಳಿಗೆ ಕಲಾತ್ಮಕ ಸಂದರ್ಭಗಳನ್ನು ನಿರ್ಮಿಸುವುದರ ಮೂಲಕ ಉತ್ತರವನ್ನು ಕೊಡಲು ಪ್ರಯತ್ನಿಸಿದ್ದಾನೆ.
ರಾಘವಾಂಕನ ಪ್ರಕಾರ ಹರಿಶ್ಚಂದ್ರ ಹುಟ್ಟುತ್ತಲೇ ಸತ್ಯವಂತನೆಂದೇನೂ ಚಿತ್ರಿತವಾಗಿಲ್ಲ. ತನಗೆ ಮಗನಿಲ್ಲವೆಂದು ಹಂಬಲಿಸಿ, ಮಗನಾದರೆ ವರುಣನಿಗೆ ಬಲಿಕೊಡುತ್ತೇನೆಂದು ಹರಸಿಕೊಂಡು, ಅನಂತರ ಮಗ ಹುಟ್ಟಿದ ಮೇಲೆ ಪುತ್ರವ್ಯಾಮೋಹದಿಂದ ಹಿಂದೆ ವರುಣನಿಗೆ  ಕೊಟ್ಟ ಮಾತನ್ನು ನಡೆಯಿಸಲೊಲ್ಲದೆ ಮಗನನ್ನು ಬಚ್ಚಿಟ್ಟು, ವರುಣನ ಶಾಪದಿಂದ ಬಂದ ಜಲೋದರದ ನಿವಾರಣೆಗೆ ಯಜ್ಞ ಮಾಡಿ, ಅಜೀಗರ್ತ ಮುನಿಯ ಮಗನಾದ ಶುನಶ್ಯೇಫನನ್ನು   ಯಾಗ ಪಶುವನ್ನಾಗಿ ಮಾಡಿದ ಸಂದರ್ಭವನ್ನು-ರಾಘವಾಂಕ ಪ್ರಸ್ತಾಪಿಸುತ್ತಾನೆ. ಈ ಸಂಗತಿಯನ್ನು ರಾಘವಾಂಕ ಐತರೇಯ ಬ್ರಾಹ್ಮಣದಿಂದ ತೆಗೆದುಕೊಂಡಿದ್ದಾನೆ. ಒಂದು ಕಾಲಕ್ಕೆ ಸಾಮಾನ್ಯನಂತೆ ತೋರುತ್ತಿದ್ದ ಕೊಟ್ಟ ಮಾತಿಗೆ ತಪ್ಪಿನಡೆದ ಹರಿಶ್ಚಂದ್ರನಲ್ಲಿ, ಸತ್ಯನಿಷ್ಠೆ ಒಂದು ಮೌಲ್ಯವೆಂದು ಯಾವಾಗ ಗೃಹೀತವಾಯಿತೆಂಬ ಬಗೆಗೆ ಎಲ್ಲೂ- ಹಿಂದಿನ ಆಕರಗಳಲ್ಲಾಗಲಿ, ರಾಘವಾಂಕನಲ್ಲಾಗಲಿ- ವಿವರಣೆ ದೊರೆಯುವುದಿಲ್ಲ. ರಾಘವಾಂಕ ಹರಿಶ್ಚಂದ್ರನಂಥ ಸತ್ಯವಂತ ಮೂರು ಲೋಕದಲ್ಲಿಯೂ ಇಲ್ಲ ಎಂಬ ಮಾತನ್ನು ವಸಿಷ್ಠರ ಬಾಯಲ್ಲಿ, ಕಾವ್ಯಾರಂಭದಲ್ಲಿಯೆ ಆಡಿಸಿದ್ದಾನೆ. ಆದರೆ ಹರಿಶ್ಚಂದ್ರ ಎಂದೂ ತಪ್ಪಿ ನಡೆದೇ ಇಲ್ಲವೆಂದೇನೂ ರಾಘವಾಂಕ ಚಿತ್ರಿಸದೆ,  ಹರಿಶ್ಚಂದ್ರನ ಪೂರ್ವ ವೃತ್ತಾಂತದಿಂದ, ಆತ ಮಾತಿಗೆ ತಪ್ಪಿ ನಡೆದ ಸಂದರ್ಭವನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿರುವುದು ಅತ್ಯಂತ ಸಹಜವಾಗಿದೆ. ಯಾಕೆಂದರೆ ಯಾರ ಮೌಲ್ಯನಿಷ್ಠೆಯೂ ಬುದ್ಧಿ ಪೂರ್ವಕವಾಗಿ ಆರಂಭವಾಗುವುದಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ, ನಿಜವಾದ ವ್ಯಕ್ತಿಗೆ ತಾನು ಯಾವುದೋ ಒಂದು ಮೌಲ್ಯಕ್ಕೆ ಬದ್ಧನಾಗಿ ಬದುಕಬೇಕೆಂಬ ಸಂಕಲ್ಪ ಮೊಳೆತು ಬಲಿತು, ಅನಂತರ ಅದನ್ನು ಆತ ಜೀವಂತವಾಗಿ ಬದುಕುವುದರ ಮೂಲಕ ಅವನ ವ್ಯಕ್ತಿತ್ವ ಆ ಒಂದು ಮೌಲ್ಯದೊಂದಿಗೆ ಬೆಸೆದುಕೊಳ್ಳುತ್ತದೆ. ಹರಿಶ್ಚಂದ್ರನ ಪಾಲಿಗೆ ‘ಸತ್ಯ’ ಎನ್ನುವುದು ಅವನಿಗೆ ಪ್ರಧಾನವಾದ ಮೌಲ್ಯವೆಂದೂ, ತಾನು ಅದಕ್ಕಾಗಿಯೇ ಬದುಕಬೇಕೆಂದೂ ಎಂದೋ ಅನ್ನಿಸಿರಬಹುದು. ಅಲ್ಲಿಂದಾಚೆಗೆ ಅವನ ಸತ್ಯನಿಷ್ಠೆ ಯಾವ ಸಂದರ್ಭದಲ್ಲೂ, ಎಂಥ ಕಷ್ಟಕ್ಕೂ ಜಗ್ಗದೆ, ಅಚಲವಾಗಿ ನಿಲ್ಲುತ್ತದೆ. ವಿಶ್ವಾಮಿತ್ರನ ಪರೀಕ್ಷೆಯ ಒರೆಗಲ್ಲಿಗೆ ಸಿಕ್ಕಷ್ಟೂ ಅವನ ಸತ್ಯನಿಷ್ಠೆಯ ಹೊನ್ನು ಹೊಳೆಯತೊಡಗುತ್ತದೆ. ಹರಿಶ್ಚಂದ್ರನಿಗೆ ಸಂಬಂಧಿಸಿದಂತೆ ‘ಸತ್ಯ’ ಎಂದರೆ, ಸುಳ್ಳಾಡದಿರುವುದು ಮತ್ತು ಕೊಟ್ಟ ಮಾತನ್ನು ಎಂಥ ಸಂದರ್ಭದಲ್ಲಿಯೂ ಮುರಿಯದೆ ನಡೆಯುವುದು-ಎಂದು ಭಾವಿಸಬಹುದು. ಹರಿಶ್ಚಂದ್ರನಿಗೆ ಮುನ್ನ, ಸತ್ಯಕ್ಕೆ ಎಂದರೆ ಆಡಿದ ಮಾತನ್ನು ಅತ್ಯಂತ ನಿಷ್ಠೆಯಿಂದ ಪಾಲಿತಕ್ಕದ್ದು ಎನ್ನುವುದಕ್ಕೆ ಯಾವ ಸ್ಥಾನವಿತ್ತೋ ಏನೋ. ಆದರೆ ಹರಿಶ್ಚಂದ್ರನು ಬಂದಮೇಲೆ ಅದು ಅವನಿಂದ ಒಂದು ‘ಬೆಲೆ’ಯನ್ನು ಪಡೆಯಿತೆನ್ನಬೇಕು. ರಾಘವಾಂಕ ಈ ಒಂದು ಅಂಶವನ್ನು ಉದ್ದಕ್ಕೂ ಗಮನದಲ್ಲಿರಿಸಿಕೊಂಡಿದ್ದಾನೆ. ರಾಘವಾಂಕನ ಪ್ರಕಾರ, ವಿಶ್ವಾಮಿತ್ರನ ಸಾಲವನ್ನು, ತಾನು ರಾಜ್ಯಭ್ರಷ್ಟನಾದರೂ, ಕೊಟ್ಟ ಅವಧಿಯಲ್ಲಿ ತನ್ನ ಸತಿ ಸುತರನ್ನೂ ತನ್ನನ್ನೂ ಮಾರಿ ತೀರಿಸಿ, ಆಡಿದ ಮಾತಿಗೆ ತಪ್ಪದಂತೆ ನಡೆಯುವಲ್ಲಿ, ಅನಂತರ ವೀರಬಾಹುಕನಿಗೆ ಆಳಾಗಿ ಅವನಿಗೆ ಮಾತುಕೊಟ್ಟಂತೆ ಎಂಥ ಸಂದರ್ಭದಲ್ಲೂ ಕರ್ತವ್ಯನಿಷ್ಠನಾಗಿ ನಡೆಯುವಲ್ಲಿ ಹರಿಶ್ಚಂದ್ರನ ಸತ್ಯನಿಷ್ಠೆ ಚಿತ್ರಿತವಾಗಿದೆ. ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ರಾಜ್ಯವನ್ನು ಒಪ್ಪಿಸಿದ್ದು ಹೇಗೆ ಎನ್ನುವುದನ್ನು ರಾಘವಾಂಕ ಗಾಣಗಾತಿಯರ ಪ್ರಸಂಗದಲ್ಲಿ ಚಿತ್ರಿಸಿ ಅನಂತರ ಅದು ಅವನ ಮುಂದಿನ ಕಷ್ಟಪರಂಪರೆಗೆ ಹೇಗೆ ನಾಂದಿಯಾಯಿತೆಂಬುದನ್ನು ಸೂಚಿಸಿದ್ದಾನೆ. ರಾಜ್ಯವನ್ನು ಕಳೆದುಕೊಂಡ ನಂತರ ಹರಿಶ್ಚಂದ್ರನಿಗೆ ತಾನು ಮುನಿಗೆ ಕೊಟ್ಟ ಮಾತನ್ನು ನಡೆಯಿಸುವುದು ಹೇಗೆ, ಕೊಟ್ಟ ಮಾತಿಗೆ ತಪ್ಪದಿರುವುದು ಹೇಗೆ ಎಂಬ ಚಿಂತೆ ಆವರಿಸಿದರೂ, ಏನೇ ಆಗಲಿ ತಾನು ಆಡಿದ ಮಾತಿಗೆ ತಪ್ಪದೆ ನಡೆಯುವುದೆ ಮುಖ್ಯ ಎಂಬ ಸಂಕಲ್ಪ ಬಲಿಯುತ್ತದೆ. “ಯಾವುದು ಯಾವ ಸಮಯದಲ್ಲಿ ಪ್ರಧಾನ ಎಂದು ವ್ಯಕ್ತಿ ಎಣಿಸುತ್ತಾನೊ ಅದಕ್ಕಾಗಿ ಅವನು ಸರ್ವಥಾ ದುಡಿಯಲು ಬಯಸುತ್ತಾನೆ. ಆ ಮೌಲ್ಯ ಅವನಿಗೆ ಆದ್ಯ, ಅತ್ಯಧಿಕ”[3] ಹರಿಶ್ಚಂದ್ರನಿಗೆ, ರಾಜ್ಯಸಮಸ್ತವನ್ನು ಕಳೆದುಕೊಂಡರೂ, ಆತನಿಗೆ ‘ಸತ್ಯ’ ಎಂಬುದು ಆದ್ಯವೂ ಅತ್ಯಧಿಕವೂ ಆದ ಮೌಲ್ಯದಂತೆ ಕಾಣುತ್ತದೆ. ತನ್ನನ್ನು ತಾನು ಅನಾಮಿಕನಾದ ವೀರಬಾಹುಕನಿಗೆ ಮಾರಿಕೊಳ್ಳುವಂಥ ಸಂದರ್ಭ ಬಂದರೂ, ‘ಕೌಶಿಕ ಮುನೀಶ್ವರಂ ಮೊದಲು, ಅನಾಮಿಕಂ ಕಡೆ, ಸಮಸ್ತರ ಮನಕೆ ಸತ್ಯವೆನಿಸುವೆನು’ (ಹ.ಚ.ಕಾ. ೧೧-೨೨) -ಎಂಬ ನಿಷ್ಠೆ ಗಟ್ಟಿಗೊಳ್ಳುತ್ತದೆ. ತಾನು, ತನ್ನ ಸತಿ ಚಂದ್ರಮತಿ ಇಬ್ಬರೂ ಒಂದಾಗಿ, ವಿಶ್ವಾಮಿತ್ರನ ವಿಚಾರದಲ್ಲಿ ಯಾವ ‘ಅಪ್ರತೀಕಾರ’ ಮನೋಧರ್ಮವನ್ನೂ ತಾಳಿಕೊಳ್ಳದೆ ಸತ್ಯಸಾಧನೆಯ ಸಂಕಟದ ದಾರಿಯನ್ನು ತುಳಿದು, ಶಿವದ ಬೆಳಕಿಗೆ ಎಚ್ಚರುವ ರೀತಿಯನ್ನು ರಾಘವಾಂಕ ತಕ್ಕಮಟ್ಟಿಗೆ ಚೆನ್ನಾಗಿಯೇ ಚಿತ್ರಿಸಿದ್ದಾನೆ. ವಸಿಷ್ಠ-ವಿಶ್ವಾಮಿತ್ರ ಇವರ ಸ್ಪರ್ಧೆಗೆ ಸಂಬಂಧಪಟ್ಟ ಸಂಗತಿಯನ್ನು ಚಿತ್ರಿಸುವ ಸಂದರ್ಭದಲ್ಲಿ ಒಂದಷ್ಟು ಗೊಂದಲವಿದೆ. ಮೊದಲು ಈ ಋಷಿಗಳನ್ನು ಪರಿಚಯ ಮಾಡಿಕೊಡುತ್ತಾ ‘ಒಡಲನಾವರಿಸಿದಂಗೋಪಾಂಗ ಸಂಕುಳದ ನಡುವೆ ನಯನ ದ್ವಯಂಗಳುಂ’ (ಹ.ಚ.ಕಾ. ೨-೫) ಎಂದು ಹೇಳಿದಾಗ, ಕಣ್ಣುಗಳೆರಡಾದರೂ ಕಾಣ್ಕೆ ಎರಡಲ್ಲ ಎಂಬ ಭ್ರಮೆಯನ್ನುಂಟು ಮಾಡಿ, ಮುಂದೆ ವಿಶ್ವಾಮಿತ್ರನ ಪಾತ್ರವನ್ನು ಹಲವರು ಭಾವಿಸುವಂತೆ ‘ಖಳನಾಯಕ’ನನ್ನಾಗಿ ಮಾಡಿದ್ದು ಯಾಕೆ ಎನ್ನುವುದಕ್ಕೆ ಉತ್ತರವಿಲ್ಲ. ವಿಶ್ವಾಮಿತ್ರನ ಪಾತ್ರ ನಿರ್ಮಿತಿಯಲ್ಲಿ ಹಲವು ವಿಸಂಗತಿಗಳಿವೆ. ಆದರೆ ಚಂದ್ರಮತಿಯ ಪಾತ್ರ ಒಂದೇ ತುಂಬ ಸೊಗಸಾದದ್ದು-ಇಡೀ ಕಾವ್ಯದಲ್ಲಿ. ಉಳಿದ ಯಾವ ಪಾತ್ರವೂ ಇಷ್ಟು ತುಂಬಿಕೊಂಡು ಬಂದಿಲ್ಲ. ಎಲ್ಲಕ್ಕೂ ಮಿಗಿಲಾಗಿ ರಾಘವಾಂಕ ಹಿಂದಿನ ಆಕರಗಳಲ್ಲಿ ಇಲ್ಲದ ಹೊಸ ಸಂದರ್ಭಗಳನ್ನು ನಿರ್ಮಿಸಿದ್ದಾನೆ ಎನ್ನುವುದು ಗಮನಿಸಬೇಕಾದ ಸಂಗತಿ. ಗಾಣಗಾತಿಯರ ಪ್ರಸಂಗ ರಾಘವಾಂಕನ ಸ್ವಂತ ಸೃಷ್ಟಿ. ಹಿಂದೆಲ್ಲೂ ಇಲ್ಲದ ನಕ್ಷತ್ರಕನ ಪಾತ್ರದ ನಿರ್ಮಾಣ, ರಾಘವಾಂಕನ ಕೊಡುಗೆಯಾಗಿದೆ. ಕಾಶೀರಾಜನ ಮಗುವಿನ ಕೊಲೆಯ ಸಂದರ್ಭ, ಚಂದ್ರಮತಿಯ ತಲೆಯನ್ನು ಕಡಿಯಲು ಹರಿಶ್ಚಂದ್ರನು ಸಿದ್ಧನಾಗಿ ‘ಹೊಡೆದ ಕಡುಗದ ಬಾಯ ಕಡೆಯ ಹೊಡೆಗಳನಾಂತು, ಮಡದಿಯೆಡೆಗೊರಳ ನಡುವೆ’ (ಹ.ಚ.ಕಾ. ೧೩-೧೯) ಮೃಡಮೂರ್ತಿ ವಿಶ್ವೇಶ್ವರನು ಪ್ರತ್ಯಕ್ಷವಾದದ್ದು ರಾಘವಾಂಕನ ಸ್ವಂತ ನಿರ್ಮಿತಿ. ಸತ್ಯಕ್ಕಾಗಿ, ಹರಿಶ್ಚಂದ್ರನು ತನ್ನ ಕಟ್ಟಕಡೆಯ ಮಮತೆಯ ನಂಟನ್ನು ಕಡಿದೊಗೆಯಲು ಸಿದ್ಧನಾದಾಗಲೇ, ಸತ್ಯ ಸಾಕ್ಷಾತ್ಕಾರವಾಯಿತೆಂಬ ತತ್ವಧ್ವನಿ ಈ ಸಂದರ್ಭದಿಂದ ಹೊರಡುತ್ತದೆ. ಈ ಹಲವು ಸಂದರ್ಭಗಳು ಮಾತ್ರವಲ್ಲ, ರಾಘವಾಂಕ ತನಗೆ ದೊರೆತ ಆಕರಗಳಿಗೆ ಸ್ವಲ್ಪ ಮಾತ್ರ ಋಣಿಯಾಗಿದ್ದರೂ, ಮೊದಲಿನಿಂದ ಕಡೆಯ ತನಕ ಸನ್ನಿವೇಶಗಳ ಮೇಲೆ ಸನ್ನಿವೇಶಗಳನ್ನು ನಿರ್ಮಿಸಿಕೊಂಡು, ಕಥೆಯನ್ನು ಬೆಳೆಯಿಸಿರುವ ರೀತಿ ಅಪೂರ್ವವಾಗಿದೆ. ಕನ್ನಡದಲ್ಲಿ ಹರಿಶ್ಚಂದ್ರನ ಕಥೆಯನ್ನು ಸಮಗ್ರವಾಗಿ ಪುನರ್ ನಿರ್ಮಿಸಿದವರಲ್ಲಿ ರಾಘವಾಂಕನೇ ಮೊದಲಿಗನಾಗಿದ್ದಾನೆ. “ರಾಘವಾಂಕನಿಗಿಂತ ಹಿಂದಿನ ಎಲ್ಲ ಆಕರಗಳೊಡನೆ ಇದರ ಸಂವಿಧಾನವನ್ನು ಹೋಲಿಸಿದರೆ, ಭಾರತೀಯ ಸಾಹಿತ್ಯದಲ್ಲಿಯೇ ಕಾಣ ದೊರೆಯದ ನೂತನ ಸನ್ನಿವೇಶ ಸೃಷ್ಟಿ, ಕೃತಿಬಂಧ ಇಲ್ಲಿದೆ ಎಂಬುದು ಹೆಮ್ಮೆಯ ಸಂಗತಿ.”[4]
-೪-
ಹರಿಹರನ ಮಾರ್ಗದಿಂದ ಬೇರೆಯಾಗಿ ನಿಂತು, ವಸ್ತು ಹಾಗೂ ರೀತಿಯಲ್ಲಿ ತನ್ನದೇ  ಅದೊಂದು ವಿನೂತನ ಮಾರ್ಗವನ್ನು ‘ಹರಿಶ್ಚಂದ್ರ ಕಾವ್ಯ’ ನಿರ್ಮಿತಿಯ ಮೂಲಕ ಕಂಡುಕೊಂಡ ರಾಘವಾಂಕನಿಗೆ, ಹರಿಶ್ಚಂದ್ರನ ಕಥೆಯ ಮೂಲಕ ತನ್ನದೇ ಆದ ಕೆಲವು ವಿಚಾರಗಳನ್ನು ಪ್ರತಿಪಾದಿಸುವ ಉದ್ದೇಶವಿದ್ದಿತೇ ಹೊರತು, ‘ಮೃಡ ಕಥಾಕಥನ’ಕ್ಕೆ ಆಸ್ಪದವಾದ ಯಾವುದೇ ವಸ್ತುವನ್ನು ತೆಗೆದುಕೊಂಡು ಶಿವಮಹಿಮೆ ಹಾಗೂ ಶಿವಭಕ್ತಿಯನ್ನು ಹರಿಹರನಂತೆ ಪ್ರಕಟಪಡಿಸುವ ಉದ್ದೇಶ ಮುಖ್ಯವಾಗಿರಲಿಲ್ಲ. ಆದರೂ ರಾಘವಾಂಕನ ಕಾವ್ಯ, ಹರಿಹರನದ್ದರಂತೆ ಅಪ್ಪಟ ಭಕ್ತಿ ಕಾವ್ಯವಲ್ಲವಾದರೂ, ಹರಿಹರನ ಪರಂಪರೆಗೆ ಸಂಪೂರ್ಣ ಹೊರತಾದುದೇನೂ ಅಲ್ಲ. ರಾಘವಾಂಕನ ಹರಿಶ್ಚಂದ್ರನೂ ಶಿವಭಕ್ತನೇ; ಆದರೆ ಅವನು ಹರಿಹರನ ರಗಳೆಗಳಲ್ಲಿ ಚಿತ್ರಿತರಾಗಿರುವ ಶಿವಶರಣರಂತೆ ಕೈಲಾಸದಿಂದ ಇಳಿದು ಬಂದು ಮತ್ತೆ ಕೈಲಾಸಕ್ಕೆ ಹೋಗುವ, ಶಿವಸಂಕಲ್ಪದ ಕೀಲುಕೊಟ್ಟ ಗೊಂಬೆ ಅಲ್ಲ. ಹರಿಶ್ಚಂದ್ರನ ಪಾಲಿಗೆ ಸತ್ಯ ಎಂದರೆ ಶಿವ, ಶಿವ ಎಂದರೆ ಸತ್ಯ. ಹರಿಹರನಲ್ಲಾದರೋ ಅವನ ಪಾತ್ರಗಳ ಕಣ್ಣಿಗೆ ‘ಶಿವ’ ಎಂದರೆ ಅವರಿಗೆ ಪ್ರಿಯವಾದ ಸಾಕಾರಮೂರ್ತಿ; ಆದರೆ ಹರಿಶ್ಚಂದ್ರನ ಪಾಲಿಗೆ ಅದು ಬದುಕಿನ ಒಂದು ಮೌಲ್ಯ; ಮೊದಮೊದಲು ಅಮೂರ್ತವಾದ ತತ್ವವಾಗಿ ಕಂಡದ್ದು, ಬರುಬರುತ್ತಾ ಹರಿಶ್ಚಂದ್ರನ ನಡವಳಿಕೆಯಲ್ಲಿ, ಬದುಕಿನ ಶುದ್ಧವಾದ ಮಾನಸಿಕ ಸ್ಥಿತಿ ಮತ್ತು ತತ್ಪರಿಣಾಮವಾದ ನಡವಳಿಕೆಯಾಗಿ ರೂಪುಗೊಂಡಿದೆ. ಕಡೆಯಲ್ಲಿ ಈ ನಡವಳಿಕೆಯಿಂದ ಶಿವನನ್ನು ಸಾಕ್ಷಾತ್ಕರಿಸಿಕೊಂಡಾಗ ‘ಹರನೆಂಬುದೇ ಸತ್ಯ, ಸತ್ಯವೆಂಬುದೆ ಹರನು’- ಎಂಬ ಮುಕ್ತಾಯದ ಘೋಷವನ್ನು ಕೇಳುತ್ತೇವೆ. ಹರಿಶ್ಚಂದ್ರ, ಹರಿಹರನ ಶಿವಶರಣರಂತೆ ಶಿವನೊಲಿದ ಮೇಲೆ ಕೈಲಾಸಕ್ಕೆ ಹೋಗದೆ, ಮತ್ತೆ ಈ ರಾಜ್ಯಕೋಶವನ್ನು ಒಪ್ಪಿಕೊಂಡದ್ದರಿಂದ, ಅವನು ಹರಿಹರನ ಶಿವಶರಣರಿಗಿಂತ ಕಿರಿಯನಾದವನು ಎಂಬ ಒಂದು ಆಕ್ಷೇಪಣೆಯನ್ನು ಹರಿಹರ ಪರಂಪರೆ ಎತ್ತಿದಂತೆ, ಹಿಂದೆ ನಾವು ಪ್ರಸ್ತಾಪಿಸಿದ ದಂತಕಥೆಯಲ್ಲಿ ಉಕ್ತವಾಗಿದೆ. ಆದರೆ ಶಿವ ಸಾಕ್ಷಾತ್ಕಾರವನ್ನು ಪಡೆದ ವ್ಯಕ್ತಿ ಎಲ್ಲಿದ್ದರೇನು, ಅವನು ಪೂಜ್ಯನೇ- ಎಂಬ ಸಂಗತಿ ಹರಿಹರ ಪರಂಪರೆಗೆ ಹೊಳೆಯದೆ ಹೋದದ್ದು ಆಶ್ಚರ್ಯದ ಸಂಗತಿ. ಇದೇನೇ ಇರಲಿ, ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ಹರಿಹರನಿಗಾಗಲಿ ಅವನಿಗೆ ಹಿನ್ನೆಲೆಯಾದ ವಚನಕಾರರಿಗಾಗಲಿ ಖಂಡಿತ ವಿರೋಧಿಯಾಗಿಲ್ಲ. ರಾಘವಾಂಕ ತಾನು ವಚನಕಾರರ ವೈಚಾರಿಕತೆಯ ಹಿನ್ನೆಲೆಯಲ್ಲಿ ಬದುಕಿದವನು ಎನ್ನುವುದನ್ನು ‘ಹರಿಶ್ಚಂದ್ರ ಕಾವ್ಯ’ದ ಮೂಲಕ ಖಚಿತಪಡಿಸಿದ್ದಾನೆ. ಅವನ ಸಿದ್ಧರಾಮ ಪುರಾಣ ಮತ್ತು ಸೋಮನಾಥ ಚರಿತ್ರೆ ಇವುಗಳನ್ನು ಹರಿಶ್ಚಂದ್ರ ಕಾವ್ಯದೊಂದಿಗೆ ಇರಿಸಿಕೊಂಡು ಒಟ್ಟಾಗಿ ನೋಡಿದರೆ ಈ ಮಾತಿನ ಅರ್ಥ ಇನ್ನೂ ಸ್ಫುಟವಾಗುತ್ತದೆ. ಹರಿಶ್ಚಂದ್ರ ಕಾವ್ಯದಲ್ಲಿ ವಚನಕಾರರು ಎತ್ತಿ ಹಿಡಿದ ಸತ್ಯನಿಷ್ಠೆಯನ್ನೂ, ಅವರು ವಿಶೇಷವಾಗಿ ಎತ್ತಿಕೊಂಡು ಚರ್ಚಿಸಿದ ‘ಹೊಲೆತನ’ದ ಪ್ರಶ್ನೆಯನ್ನೂ, ಸಿದ್ಧರಾಮ ಪುರಾಣದಲ್ಲಿ ‘ಕಾಯಕವೇ ಕೈಲಾಸ’ ಎಂಬ ತತ್ವವನ್ನೂ, ಸೋಮನಾಥ ಚರಿತ್ರೆಯಲ್ಲಿ ಮಾಹೇಶ್ವರ ಸ್ಥಲದ ನಿಷ್ಠೆಯನ್ನೂ ರಾಘವಾಂಕನು ಚಿತ್ರಿಸಿರುವುದನ್ನು ಗಮನಿಸಬೇಕು. ಈ ದೃಷ್ಟಿಯಿಂದ ನೋಡಿದರೆ ‘ಹರಿಶ್ಚಂದ್ರ ಕಾವ್ಯ’ ರಾಘವಾಂಕನ ಇತರ ಕೃತಿಗಳಂತೆ ‘ವೀರಶೈವ ಕಾವ್ಯ’ ಅಲ್ಲ ಎಂದು ಅನ್ನಿಸಿದರೂ, ವೀರಶೈವ   ಧಾರ್ಮಿಕ-ಸಾಮಾಜಿಕ ಕ್ರಾಂತಿಯ ನಂತರ ಬಂದ ಕಾವ್ಯ ಎಂದು ಅನ್ನಿಸದೆ ಇರದು. ಹೀಗಲ್ಲದೆ ಬೇರೆ ಹಿನ್ನೆಲೆಯಲ್ಲಿ ರಚಿತವಾಗಿದ್ದರೆ, ಈ ಕೃತಿಯ ಸ್ವರೂಪವೆ ಈಗಿರುವುದಕ್ಕಿಂತ ಬೇರೆಯ ರೀತಿಯದ್ದಾಗಿರುತ್ತಿತ್ತು ಎನ್ನುವಷ್ಟರ ಮಟ್ಟಿಗೆ ಇದು ತನಗೆ ಹಿನ್ನೆಲೆಯಾದ ವಚನಕಾರರ ವಿಚಾರ ಕ್ರಾಂತಿಯಿಂದ ಬದ್ಧವಾಗಿದೆ.
ವಚನಕಾರರ ವಿಚಾರಗಳಲ್ಲಿ ‘ಸತ್ಯನಿಷ್ಠೆ’ ಪ್ರಧಾನವಾದದ್ದು. ಅಂತರಂಗ ಬಹಿರಂಗಗಳ ‘ಆತ್ಮಸಂಗ’ವನ್ನು ಸಾಧಿಸಿಕೊಂಡು, ದೈವೀಶಕ್ತಿಯಲ್ಲಿ ನಂಬಿಕೆಯನ್ನು ಇರಿಸಿಕೊಂಡು ಪ್ರಾಮಾಣಿಕವಾಗಿ ಬದುಕಬೇಕೆಂಬ ಕಳಕಳಿಯನ್ನುಳ್ಳ ವಚನಕಾರರು, ಮನುಷ್ಯನ ನಡವಳಿಕೆಯಲ್ಲಿರಬೇಕಾದ ಸತ್ಯನಿಷ್ಠೆಗೆ ವಿಶೇಷವಾದ ಬೆಲೆಯನ್ನು ನೀಡಿದರು. ‘ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ಮಾತಿನಲ್ಲಿ, ‘ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು’, ‘ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಯ್ಯನೆಂತೊಲಿವನಯ್ಯ’- ಎನ್ನುವ ಬಸವಣ್ಣನವರ ಮಾತಿನಲ್ಲಿ ಸತ್ಯದ ಒಂದು ವ್ಯಾಖ್ಯಾನ ಕಾಣಿಸುತ್ತದೆ. ತಾವು ನಂಬಿದ ಧ್ಯೇಯಗಳನ್ನು ಎಂಥ ಸಂದರ್ಭಗಳಲ್ಲೂ ಬಿಟ್ಟುಕೊಡದೆ, ಕೃತಿರೂಪದಲ್ಲಿಳಿಸಬೇಕೆಂಬ ಸಂಕಲ್ಪ, ‘ಅಂಜಿದರಾಗದು, ಅಳುಕಿದರಾಗದು’ ಎಂಬ ಧೈರ್ಯ, ಇವುಗಳನ್ನು ನೋಡಿದರೆ, ರಾಘವಾಂಕನ ಹರಿಶ್ಚಂದ್ರನ ಪಾತ್ರದಲ್ಲಿ ಕಂಡುಬರುವ ಸತ್ಯ ನಿಷ್ಠೆ, ಶಿವಭಕ್ತಿ, ಮೃತ್ಯುಂಜಯ ಮನೋಧರ್ಮ ಎಲ್ಲವೂ ಬಸವಣ್ಣನವರಂತಹ ಶರಣರ ಮನೋಧರ್ಮದಿಂದಲೂ ಪ್ರೇರಿತವಾಗಿರಬಹುದೆನ್ನಲು  ಅವಕಾಶವಿದೆ. ರಾಘವಾಂಕನ ಹರಿಶ್ಚಂದ್ರ, ವಚನಕಾರರಂತೆಯೆ, ಈ ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವೆಂದು ಒಪ್ಪಿಕೊಂಡು ಕಷ್ಟ ಕಾರ್ಪಣ್ಯಗಳ ‘ಕಡಿಹಕ್ಕೆ ಬಡಿಹಕ್ಕೆ ಸಿಕ್ಕಿ’ ಇಲ್ಲಿಯೂ ಅಲ್ಲಿಯೂ ಸಲ್ಲುವ ಬೆಲೆಯನ್ನು ಸಂಪಾದಿಸಿಕೊಂಡವನು. ಹೀಗಾಗಿ ಶಿವಶರಣರ ಸತ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಸಂಕಲ್ಪಗಳು ಹರಿಶ್ಚಂದ್ರನ ಪಾತ್ರದಲ್ಲಿ ಮೂರ್ತೀಭವಿಸಿವೆ.
ವಚನಕಾರರು ಎತ್ತಿಕೊಂಡ ಇನ್ನೊಂದು ಪ್ರಶ್ನೆ ಹೊಲೆತನಕ್ಕೆ ಸಂಬಂಧಿಸಿದ್ದು. ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಹೊಲೆತನದ ಪ್ರಶ್ನೆಯನ್ನೆತ್ತಿಕೊಂಡು ವಚನಕಾರರು ವಿಶ್ಲೇಷಿಸಿದ್ದು ಗಮನಾರ್ಹವಾಗಿದೆ. ಯಾರು ಹೊಲೆಯ ಎನ್ನುವ ಪ್ರಶ್ನೆಗೆ ‘ಕೊಲ್ಲುವವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ…… ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲಸಂಗನ ಶರಣರೇ ಕುಲಜರು’ ಎನ್ನುವುದು ಉತ್ತರ. ಈ ಧರ್ಮ ಕೇವಲ ಆತ್ಮಗುಣವನ್ನೇ ಪ್ರಾಮಾಣ್ಯವನ್ನಾಗಿ ಇರಿಸಿಕೊಂಡು, ಜಾತಿ ಎನ್ನುವುದು ಕೇವಲ ಹುಟ್ಟಿನಿಂದ ಬಂದುದಲ್ಲ, ಸತ್ಯನಿಷ್ಠೆಯಿಂದ, ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ನಡವಳಿಕೆಯಿಂದ ಬಂದುದು  ಎನ್ನುವುದನ್ನು ಎತ್ತಿ ಹಿಡಿದು, ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನು ಒಂದೇ ಎಂಬೆ’ ಎನ್ನುವ ಸಮಾನತಾ ದೃಷ್ಟಿಯನ್ನು ಪ್ರಸಾರ ಮಾಡಿತು. ಈ ಒಂದು ನೈತಿಕ ಮೌಲ್ಯವನ್ನೇ ರಾಘವಾಂಕ ಹರಿಶ್ಚಂದ್ರ ಕಾವ್ಯದಲ್ಲಿ ತಂದಿದ್ದಾನೆ.
ಹೊಲೆತನದ ಪ್ರಶ್ನೆಯನ್ನು ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ ಎತ್ತಿಕೊಂಡಿದ್ದರೂ, ಅವನು ಸಮಸ್ಯೆಯನ್ನು ನೋಡಿರುವ ರೀತಿ, ವಚನಕಾರರ ರೀತಿಯಿಂದ ಬೇರೆಯಾಗಿದೆ. ವಚನಕಾರರ ದೃಷ್ಟಿ, ಈ ಒಂದು ಪ್ರಶ್ನೆಯನ್ನು ಬಿಡಿಸುವುದರಲ್ಲಿ ಮುಖ್ಯವಾಗಿ ಸಾಮಾಜಿಕವಾದದ್ದು. ಹೊಸ ಧರ್ಮವೊಂದರ ನೆಲೆಯ ಮೇಲೆ ವರ್ಗರಹಿತ ಸಮಾಜವನ್ನು ನಿರ್ಮಿಸಬೇಕೆಂಬ ಹೊರಟ ವಚನಕಾರರು, ಸಾಮಾಜಿಕವಾಗಿ ‘ಹೊಲೆಯ’ ಎಂಬ ಒಂದು ವರ್ಗವೇ ಇರಕೂಡದು, ಅಂಥದೊಂದು ವರ್ಗ ಇದೆ ಎಂದು ಭಾವಿಸುವುದು ಆಧ್ಯಾತ್ಮಿಕ- ವಾಗಿಯೂ ಅಸಂಗತವಾಗುತ್ತದೆ ಎಂದು ನಂಬಿದ್ದರು. ಆದರೆ ಹರಿಶ್ಚಂದ್ರ ಕಾವ್ಯವನ್ನು ಬರೆಯುವಲ್ಲಿ ಕವಿಯಾದ ರಾಘವಾಂಕನು ‘ಹೊಲೆಯ’ ‘ಹೊಲೆತನ’ಗಳ ವಿಚಾರವನ್ನು, ಕೇವಲ ತಾತ್ವಿಕವಾಗಿ ಮಾತ್ರ ಚರ್ಚಿಸಿದ್ದಾನೆ- ಎಂದು ನಮಗೆ ತೋರುತ್ತದೆ. ರಾಘವಾಂಕನ ದೃಷ್ಟಿಗೆ ‘ಹೊಲೆಯ’ ‘ಹೊಲೆತನ; ಇವು ಸಾಮಾಜಿಕ ಸ್ತರವನ್ನೂ, ಅದಕ್ಕೆ ಸಂಬಂಧಿಸಿದ ವೃತ್ತಿಯನ್ನೂ  ಪ್ರತಿನಿಧಿಸುತ್ತವೆ. ಆದುದರಿಂದಲೇ ಆತ ಹರಿಶ್ಚಂದ್ರ ಕಾವ್ಯದ ಕಡೆಯಲ್ಲಿ ‘ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯ ಉನ್ನತ ಯತಿವರನು’ (೧೪-೧೦) ಎಂದು ಸಾಕ್ಷಾತ್ ಶಿವನ ಬಾಯಲ್ಲಿ ಹೇಳಿಸಿದ್ದಾನೆ. ಇದು ಬಹು ಸೊಗಸಾದ ಹೇಳಿಕೆಯಾಗಿದೆ. ಒಬ್ಬ ಸನ್ಯಾಸಿಯೇ ಆಗಿರಬಹುದು, ಮಠಾಧಿಪತಿಯಾಗಿರಬಹುದು, ಅಂಥ ‘ಯತಿ’, ‘ಅತಿ ಹುಸಿ’ದರೆ -ಎಂದರೆ ಅಪ್ರಾಮಾಣಿಕವಾದ ಅಸತ್ಯವಾದ, ಬಾಳನ್ನು ಬಾಳಿದರೆ ಅವನು ಹೊಲೆಯ; ಆದರೆ ಒಬ್ಬ  ಹೊಲೆಯನ ಕುಲದಲ್ಲಿ ಹುಟ್ಟಿದರೂ, ಅಂಥವನು ಹುಸಿಯದೆ ಪ್ರಾಮಾಣಿಕವಾಗಿ ಬದುಕಿದರೆ, ಅವನು ‘ಉನ್ನತಿಯತ ವರನು’ ಎಂಬ ತತ್ವ ಈ ಕಾವ್ಯದಲ್ಲಿ ತುಂಬ ಸಮಯೋಚಿತವಾಗಿ ಘೋಷಿತವಾಗಿದೆ. ಅಂದರೆ ‘ಹುಸಿಯದಿಹ ಹೊಲೆಯ’ ಎನ್ನುವುದು ಸ್ಪಷ್ಟವಾಗಿ ಹರಿಶ್ಚಂದ್ರನನ್ನು ನಿರ್ದೇಶಿಸುತ್ತದೆ. ಹರಿಶ್ಚಂದ್ರ ಹೊಲೆಯನ ಸೇವಕನಾಗಿ ಹೊಲೆಯನೇ ಎನ್ನುವಂತಹ ಸ್ಥಿತಿಗಿಳಿದರೂ, ‘ಹುಸಿಯದೆ’ ಬದುಕಿದ. ಆದ್ದರಿಂದ ಆತ ಸತ್ಯನಿಷ್ಠೆಯಿಂದ ‘ಉನ್ನತ ಯತಿವರ’ ಎಂಬುದು ಈ ಹೇಳಿಕೆಯ ಅಭಿಪ್ರಾಯ. ಆದರೆ ವಾಸ್ತವವಾಗಿ ಹರಿಶ್ಚಂದ್ರ ಹೊಲೆಯನ ಸೇವಕನಾಗಿದ್ದನೇ ಹೊರತು, ರಾಘವಾಂಕನ ಹೇಳಿಕೆಯಂತೆ ‘ಹುಸಿಯದಿಹ ಹೊಲೆಯ’ನೇನೂ ಅಲ್ಲ.[5] ಇದರಿಂದ ಹೊರಡುವ ಅರ್ಥವೆಂದರೆ, ಹೊಲೆತನ ಜಾತಿಗೆ ಸಂಬಂಧಿಸಿದ್ದಲ್ಲ; ಮನಸ್ಸಿಗೆ ಸಂಬಂಧಿಸಿದ್ದು. ‘ಮುನಿಗೆ ಹೊಲೆ ಯಾವುದು?’ ಎಂಬ ಪ್ರಶ್ನೆಯನ್ನೆತ್ತಿಕೊಂಡು, ‘ಅತಿ ಕೋಪ, ಬದ್ಧ ದ್ವೇಷ, ಅನಿಮಿತ್ತ ವೈರ’ ಎಂದು ಹೇಳಿ, ‘ಅದರಿಂದ ಹುಟ್ಟಿದರಾಗಿ’ ವಿಶ್ವಾಮಿತ್ರಸಂಭವೆಯರಾದ ಗಾಣಗಾತಿಯರು ‘ಹೊಲತಿ’ಯರಾದರು ಎಂದು ರಾಘವಾಂಕ ವ್ಯಾಖ್ಯಾನಿಸುತ್ತಾನೆ. ಎಂದರೆ ‘ಅತಿಕೋಪ’, ಬದ್ಧದ್ವೇಷ, ಅನಿಮಿತ್ತ ವೈರ’ ಇತ್ಯಾದಿ ತಾಮಸ ಗುಣಗಳಿದ್ದ ಪಕ್ಷದಲ್ಲಿ ಅವನು ಮುನಿಯಾಗಿದ್ದರೂ, ಅದು ಅವನ ಹೊಲೆತನಕ್ಕೆ ಸಾಕ್ಷಿ ಎಂಬುದು ಇಲ್ಲಿನ ಅರ್ಥ.
ಈ ಕಾವ್ಯದಲ್ಲಿ ರಾಘವಾಂಕ ಮೂರು ರೀತಿಯ ಹೊಲೆಯರನ್ನು ಚಿತ್ರಿಸುತ್ತಾನೆ: ಒಂದು ಹುಟ್ಟಿನಿಂದಲೇ ಹೊಲೆಯನಾದ ವೀರಬಾಹುಕ; ಎರಡು, ಋಷಿಯೊಬ್ಬನ ಅಂತರಂಗದ ತಾಮಸ ಗುಣಗಳಿಂದ ಉದ್ಭವೆಯರಾದ ಗಾಣಗಾತಿಯರು; ಮೂರು, ಸತ್ಕುಲ ಪ್ರಸೂತನಾದರೂ ಅನಿವಾರ‍್ಯವಾಗಿ ‘ಹೊಲೆಯ’ನಾಗಬೇಕಾಗಿ ಬಂದ ಹರಿಶ್ಚಂದ್ರ. ಗಾಣಗಾತಿಯರು, ವಿಶ್ವಾಮಿತ್ರನಂಥ ಋಷಿಯ ಕನ್ಯೆಯರಾದರೂ ಆತನ ತಾಮಸಗುಣಗಳಿಂದ ಹುಟ್ಟಿ, ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ ಉದ್ದೇಶಕ್ಕಾಗಿ ನಿಯುಕ್ತರಾದ್ದರಿಂದ ಅವರು ‘ಹೊಲತಿ’ಯರಾಗಿ ಕಾಣುತ್ತಾರೆ. ಅವರು, ಹರಿಶ್ಚಂದ್ರನನ್ನು ತಮ್ಮ ಗಾಯನದಿಂದ ಸಂತೋಷ ಪಡಿಸಿದ ಸಂದರ್ಭದಲ್ಲಿ, ಸುಪ್ರೀತನಾದ ಹರಿಶ್ಚಂದ್ರ, ಬಹುಮಾನ ಕೊಡಲು ಹೊರಟಾಗ, ಅವರು ಹರಿಶ್ಚಂದ್ರನ ಚಕ್ರವರ್ತಿತ್ವದ ಸಂಕೇತವಾದ ಮುತ್ತಿನಸತ್ತಿಗೆಯನ್ನೇ ಕೇಳುವುದು ಧೂರ್ತತನವಲ್ಲದೆ ಬೇರೆ ಅಲ್ಲ. ಮೊದಲು ಶ್ವೇತ ಛತ್ರಿಯನ್ನು ಕೇಳಿ, ಅನಂತರ ದುಂಬಾಲು ಬಿದ್ದು ಅದರ ಕೆಳಕ್ಕೇ ನುಸುಳಿ ಬರುವ, ಗಂಡನಾಗೆಂದು ಪೀಡಿಸುವ ಈ ವರ್ತನೆ, ದುರುದ್ದೇಶಪೂರಿತವಾದದ್ದು ಅಥವಾ ಹೊಲೆತನದಿಂದ ಕೂಡಿದ್ದು ಎಂಬುದನ್ನು ನಾವು ಒಪ್ಪಬಹುದು. ಆದರೆ, ವೀರಬಾಹುಕನ ಪಾತ್ರದಲ್ಲಿ ಕವಿ ಹುಟ್ಟಿನಿಂದ ಹೊಲೆಯನಾದ ವ್ಯಕ್ತಿಯೊಬ್ಬನೆಂಬಂತೆ ಅವನನ್ನು ಚಿತ್ರಿಸಿದ್ದರೂ, ಅವನು ಕಾರೊಡಲ, ಕೆಂಗಣ್ಣ, ಕುಡಿದು ಕೊಬ್ಬಿದ ಬಸುಱಿನ, ‘ಬಿಡದೆ ಡಱ್ರನೆ ತೇಗಿ ನೆರವಿಯಂ ಬಯ್ವ, ಬಿಱುನುಡಿಯ’ (೧೧-೧೭) ವ್ಯಕ್ತಿಯಾಗಿದ್ದರೂ ಹರಿಶ್ಚಂದ್ರನನ್ನು ಕೊಂಡುಕೊಂಡು ಅವನನ್ನು ಗಂಭೀರವಾಗಿಯೆ ನಡೆಯಿಸಿಕೊಳ್ಳುವ ವ್ಯಕ್ತಿಯಾಗಿದ್ದಾನೆ. ‘ಹೊಲೆತನ’ದ ಪ್ರತೀಕವಾದ ಗಾಣಗಾತಿ ‘ಹೊಲತಿ’ಯರಿಗೂ, ಹೊಲೆಯ ಕುಲದಲ್ಲೆ ಹುಟ್ಟಿದ ವೀರಬಾಹುಕನಿಗೂ ಇರುವ ಸ್ವಭಾವದ ವ್ಯತ್ಯಾಸವನ್ನು ಗಮನಿಸಿದರೆ, ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’ ಎನ್ನಿಸುತ್ತದೆ. ‘ಹೊಲೆತನ’ ಎನ್ನುವುದು ವ್ಯಕ್ತಿಯ ಅಂತರಂಗದ ಅವಗುಣಗಳಿಗೆ ಸಂಬಂಧಿಸಿದ್ದೆ ಹೊರತು, ಅದು ಒಂದು ಜಾತಿಯನ್ನು ಕುರಿತ ಪ್ರಶ್ನೆಯಲ್ಲ ಎನ್ನುವ ತಾತ್ವಿಕ ದೃಷ್ಟಿ ರಾಘವಾಂಕನದು.[6]
ಆದರೆ ‘ಹೊಲೆಯ’ ಎಂಬ ಜಾತಿಯನ್ನು ಕುರಿತು, ರಾಘವಾಂಕನ ನಾಯಕ ಪಾತ್ರವಾದ ಹರಿಶ್ಚಂದ್ರನ ಪ್ರತಿಕ್ರಿಯೆಯಲ್ಲಿ ನಾವು ಕಾಣುವುದು, ಎಲ್ಲ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಒಂದು ಕುಲದ ಬಗ್ಗೆ ಇರುವ ಮನೋಧರ್ಮವನ್ನೆ. ಹರಿಶ್ಚಂದ್ರನಿಗೆ ತಾನು ಸಾಮಾಜಿಕವಾಗಿ- ಆರ್ಥಿಕವಾಗಿ ಉಚ್ಚವರ್ಗಕ್ಕೆ ಸೇರಿದವನೆಂಬ ಪ್ರಜ್ಞೆಯೆ ಪ್ರಧಾನವಾಗಿದೆ. ಮತ್ತು ಅದು ಸಹಜವೂ ಆಗಿದೆ. ತಾನು ಉತ್ತಮ ವಂಶದವನು, ಚಕ್ರವರ್ತಿ, ಎಂಬ ಹೆಮ್ಮೆಯಲ್ಲಿ ಬದುಕುವ ಹರಿಶ್ಚಂದ್ರನಿಗೆ  ಉದ್ದಕ್ಕೂ ಸ್ಪರ್ಧಿಯಾಗುವುದು, ಸಾಮಾಜಿಕವಾಗಿ ಅತ್ಯಂತ ಕೆಳಗಿನ ಸ್ತರವೆಂದು ಭಾವಿಸಲಾಗಿರುವ ಹೊಲೆಯರೊಂದಿಗೆ ಮಾಡಿಕೊಳ್ಳಬೇಕಾದ ಒಡಂಬಡಿಕೆಯ ಪ್ರಶ್ನೆಯೇ.[7] ಹರಿಶ್ಚಂದ್ರನಿಗೆ ಹೊಲತಿಯರಾದ ಗಾಣಗಾತಿಯರಿಂದ ಮೊದಲು ಪ್ರಾಪ್ತವಾಗುವ ಆಹ್ವಾನವೇ ಕಡೆಗೆ ಅವನು ವೀರಬಾಹುಕನ ಆಳಾಗಿ ಹೊಲೆಯರಿಗೆ ಉಚಿತವಾದ ಚಾಂಡಾಲತ್ವವನ್ನು ಕೈಗೊಳ್ಳುವವರೆಗೂ ಅಟ್ಟಿಸಿಕೊಂಡು ಹೋಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಾಮಾಜಿಕವಾಗಿ ಹಾಗೂ ವಾಂಶಿಕವಾಗಿ, ಉಚ್ಚವರ್ಗದ ಪ್ರತಿಷ್ಠಿತ ವ್ಯಕ್ತಿಯಾದ ಹರಿಶ್ಚಂದ್ರ, ತಾನು ಯಾವ ಸಾಮಾಜಿಕ ಸ್ತರವನ್ನು ಉದ್ದಕ್ಕೂ ನಿಕೃಷ್ಟವೆಂದೇ ಕಂಡನೋ, ಅದೇ ಸಾಮಾಜಿಕ ಸ್ತರಕ್ಕೆ ಹೋಗಿ ಮುಟ್ಟುವ ಅನಿವಾರ‍್ಯತೆಯಲ್ಲಿ, ಆತನ ವಂಶಪ್ರಜ್ಞೆಯ ಹಾಗೂ ಅಹಂಕಾರದ ನಿರಸನಗಳು ಈ ಕೃತಿಯಲ್ಲಿ ಕ್ರಮಬದ್ಧವಾಗಿ ಚಿತ್ರಿತವಾಗಿವೆ. ಹರಿಶ್ಚಂದ್ರನನ್ನು ಹೊಲತಿಯರು  ಬಂದು ಮದುವೆಮಾಡಿಕೋ ಎಂದು ಪೀಡಿಸಿದಾಗ, ತನ್ನಂಥ ಸೂರ್ಯವಂಶದ ರಾಜನ ಬಳಿಗೆ ‘ಹೊಲತಿಯರು ಬಂದಾವು ಸತಿಯರಾದಪ್ಪೆವು ಎಂಬುಲಿಹವಿದು, ಬಂದ ಕಾಲದ ಗುಣವೋ ನಿಂದ ನೆಲದ ಗುಣವೋ ಎಂದು ಕೋಪಿಸಿದನವನೀಶನು’, (೧೭-೧೬). ಅವನ ಪಾಲಿಗೆ ಹೊಲೆಯರು ಬಚ್ಚಲ ನೀರಿನಂತೆ, ನಾಯಿಯ ಮೊಲೆ ಹಾಲಿನಂತೆ, ಪ್ರೇತವನದೊಳಗೆ ಬೆಳೆದ ಹೂವಿನಂತೆ[8] (೭-೧೭). ವಿಶ್ವಾಮಿತ್ರನೇ ಬಂದು ಇವರನ್ನು ಮದುವೆಯಾಗು ಎಂದಾಗ ‘ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವವೆತ್ತ ಸತಿಯರ್ಗೆಳಸಿ ಘೋರ ನರಕಾಳಿಗೆ ಅನಿಮಿತ್ತ ಹೋಹವನಲ್ಲ’ (೮-೨೫) ಎನ್ನುವುದಲ್ಲದೆ, ಕಡೆಗೆ ನನ್ನ ರಾಜ್ಯ ಸರ್ವಸ್ವವನ್ನಾದರೂ ಕೊಟ್ಟೇನು, ಹೊಲತಿಯರನ್ನು ಮಾತ್ರ ಮದುವೆಯಾಗಲಾರೆ[9] (೮-೩೨) ಎಂದು ಘೋಷಿಸುತ್ತಾನೆ. ತಾನು ಉತ್ತಮ ಕುಲಜನೆಂಬ ವಂಶಪ್ರಜ್ಞೆಯ ಪ್ರತಿಷ್ಠೆ ಅಂಥದು. ಕಾಶಿಯಲ್ಲಿ ತನ್ನ ಸತಿ-ಸುತರನ್ನು ದ್ವಿಜೋತ್ತಮನೊಬ್ಬನಿಗೆ ಮಾರಿದ ಮೇಲೆ, ತನ್ನನ್ನೂ ಮಾರಿಕೊಳ್ಳುವ ಘೋಷಣೆಯಲ್ಲಿ ತೊಳಲುವಾಗ, ವೀರಬಾಹುಕ ತನ್ನ ಹಡಪಿಗನ ಮೂಲಕ ಕೇಳಿಸಿದಾಗ, ಸೂರ್ಯವಂಶದಲ್ಲಿ ಹುಟ್ಟಿದ ತನ್ನನ್ನು ‘ಕಡೆಯ ಹೊಲೆಯಂ ಮೇರೆದಪ್ಪಿ ಬಂದೆನ್ನ ತನ್ನೊಡೆಯನಿಗೆ ದಾಸನಾಗೀಗಳೆಂಬುದಿದು ಕಾಲಗುಣವೋ, ಎಡೆಗೊಂಡ ಕರ್ಮಫಲವೋ’ -ಎಂದು ಕಳವಳಿಸುತ್ತಾನೆ. ಇಲ್ಲಿಯೂ ಹರಿಶ್ಚಂದ್ರ ಬಳಸುವ ‘ಕಡೆಯ ಹೊಲೆಯಂ’ ಮತ್ತು ‘ಮೇರೆದಪ್ಪಿ ಬಂದು’- ಎಂಬ ಎರಡು ಮಾತುಗಳಲ್ಲಿನ ಪ್ರತಿಕ್ರಿಯೆಯನ್ನು ಪರಿಭಾವಿಸಬೇಕು. ಅವನು ರಾಜ್ಯಭ್ರಷ್ಠನಾಗಿ ನಿರ್ಗತಿಕನಾದರೂ, ತಾನು ಸಾಮಾಜಿಕವಾಗಿ, ಅಧಮ ವರ್ಗದ ಅನಾಮಿಕರಿಗಿಂತ ಶ್ರೇಷ್ಠ ಎಂಬ ಅಭಿಮಾನ ಸಹಜವಾಗಿದೆ. ಅವನ ಪಾಲಿಗೆ ವೀರಬಾಹುಕ ‘ಕಡೆಯ ಹೊಲೆಯ’, ಸಾಮಾಜಿಕವಾಗಿ ಕಟ್ಟಕಡೆಯ ನೆಲೆಯಲ್ಲಿರಬೇಕಾದವನು; ಅಂಥವನು ‘ಮೇರೆದಪ್ಪಿ’ ಯಾವ ಮಿತಿಯಲ್ಲಿ ಬದುಕಬೇಕೋ ಆ ಸಾಮಾಜಿಕ ಮಿತಿಯನ್ನು ಮೀರಿ-ಬರಬಹುದೇ ಎನ್ನುವ ತಿರಸ್ಕಾರವೆ ಈ ಪ್ರತಿಕ್ರಿಯೆಯಲ್ಲಿ ಪ್ರಧಾನವಾಗಿದೆ. ಇದು ‘ಹೊಲೆಯ’ರನ್ನು ಕುರಿತು ಹರಿಶ್ಚಂದ್ರನ ಪ್ರತಿಕ್ರಿಯೆ; ಅಷ್ಟೆ ಅಲ್ಲ, ರಾಘವಾಂಕನ ಕಾಲದಲ್ಲಿಯೂ ಇದ್ದಿರಬಹುದಾದ ಉಚ್ಚವರ್ಗದವರ ಪ್ರತಿಕ್ರಿಯೆ ಕೂಡ. ಯಾವಾಗ ವೀರಬಾಹುಕನೆ ಬಂದು ‘ಮೇಲಾರು ಕೀಳಾರು?’ ಎಂಬ ಮೂಲಭೂತ ಪ್ರಶ್ನೆಯನ್ನೆತ್ತಿಕೊಂಡು, ‘ಹಣವುಳ್ಳವರು ಯಾರಾದರೂ ನನ್ನನ್ನು ಕೊಂಡುಕೊಳ್ಳಬೇಕೆಂದು ನೀನು ಸಾರಿದೆಯೆ ಹೊರತು, ಉತ್ತಮ ದ್ವಿಜರು ಕೊಂಡುಕೊಳ್ಳಬೇಕೆಂದು ಸಾರಲಿಲ್ಲವಲ್ಲ. ಹೀಗಿರುವಾಗ ‘ಹುಸಿಯ ಹೊಲೆಯನ್ನು ಹೊತ್ತ ನೀನು ಚಾಂಡಾಲನೋ, ತನ್ನ ಪಾಡಿಗೆ ತಾನು ಇರುವ ನನ್ನಂಥವನು ಚಂಡಾಲನೋ’ (೧೧-೨೦-೨೧) ಎಂದು ಪ್ರಶ್ನಿಸಿದಾಗ, ಹರಿಶ್ಚಂದ್ರನಿಗೆ ತನ್ನ ತಪ್ಪಿನ ಅರಿವಾಗಿ ತೆಪ್ಪಗಾಗುತ್ತಾನೆ. ‘ರವಿಕುಲಕೆ ಕುಂದಿಂದು ಬಂದಡಂ ಬರಲಿ’ (೧೧-೨೪) -ಎಂದು ತನ್ನ ಕುಲದ ಹೆಮ್ಮೆಯನ್ನು ಕಳಚಿ ನಿಲ್ಲುತ್ತಾನೆ. ಹರಿಶ್ಚಂದ್ರ ವೀರಬಾಹುಕನ ಮಾತಿಗೆ ತೆಪ್ಪಗಾದದ್ದು, ಅವನು ಅನಿವಾರ್ಯತೆಗೆ ಶರಣಾದದ್ದರ ಸೂಚನೆಯ ಹೊರತು, ಆತನಲ್ಲಿ ಹೊಲೆಯರೆಂಬ ಸಾಮಾಜಿಕ ವರ್ಗದ ಬಗೆಗೆ ಒಂದು ಬಗೆಯ ತಾತ್ವಿಕ ಜ್ಞಾನೋದಯವಾಯಿತೆಂಬುದರ ಸೂಚನೆ ಅಲ್ಲ. ಹರಿಶ್ಚಂದ್ರನಿಗೆ ಕಡೆಗೂ ಈ ‘ಸಾಮಾಜಿಕ ಸ್ತರ’ವನ್ನು ಕುರಿತ ಒಂದು ಸಮಾನತಾ ದೃಷ್ಟಿ ಲಭಿಸಿತೆನ್ನುವ ಸೂಚನೆ ಎಲ್ಲೂ ಬರುವುದಿಲ್ಲ. ಹರಿಶ್ಚಂದ್ರ ಮೊದಲಿನಿಂದಲೂ ತನ್ನ ವಂಶಪ್ರತಿಷ್ಠೆಯನ್ನು ಕಾಯ್ದುಕೊಳ್ಳುವ ವಿಫಲವಾದ ಹೋರಾಟದಲ್ಲಿ, ತಾನು ಮಾನಸಿಕವಾಗಿ ಯಾವ ಸಾಮಾಜಿಕ ಸ್ತರದ ಬಗೆಗೆ ಕೀಳು ಎಂಬು ಭಾವನೆಯನ್ನು ತಳೆದಿದ್ದನೋ, ಅದನ್ನೇ ಕಟ್ಟಕಡೆಗೆ ಒಪ್ಪಿಕೊಳ್ಳುವ ಅನಿವಾರ‍್ಯತೆಗೆ ಬದ್ಧವಾಗಬೇಕಾಯಿತೆಂಬುದನ್ನು ರಾಘವಾಂಕನು ಚಿತ್ರಿಸಿದ್ದಾನೆಯೆ ಹೊರತು, ಅವನ ವ್ಯಕ್ತಿತ್ವದ ವಿಕಾಸದಲ್ಲಿ, ಸತ್ಯ ಸಾಧಕರಿಗೆ ಅಗತ್ಯವಾಗಿ ಇರಬೇಕಾದ ‘ಸಮಾನತಾ ದೃಷ್ಟಿ’ ಹರಿಶ್ಚಂದ್ರನಲ್ಲಿ ಅನುಭೂತವಾಯಿತು. ಎಂಬುದನ್ನು ಖಚಿತವಾಗಿ ಸೂಚಿಸಿಲ್ಲ.[10]
-೫-
ಹರಿಶ್ಚಂದ್ರ ಕಾವ್ಯದಲ್ಲಿ ವಿಶ್ವಾಮಿತ್ರನ ಪಾತ್ರವೊಂದನ್ನು ಬಿಟ್ಟರೆ ಉಳಿದೆಲ್ಲ ಪಾತ್ರಗಳೂ ಅಂಥ ಅಸಾಂಗತ್ಯಗಳಿಲ್ಲದೆ ಸ್ಫುಟವಾಗಿಯೆ ರೂಪುಗೊಂಡಿವೆ ಎಂದು ಹೇಳಬಹುದು. ನಕ್ಷತ್ರಿಕ, ವೀರಬಾಹುಕ, ಈ ಪಾತ್ರಗಳು ಸ್ವಲ್ಪದರಲ್ಲಿಯೆ ಅಚ್ಚೊತ್ತಿ ನಿಲ್ಲುತ್ತವೆ. ವಸಿಷ್ಠರ ಪಾತ್ರವೂ ಅಷ್ಟೇ. ಸಮತೂಕದ ವ್ಯಕ್ತಿತ್ವವೆಂಬಂತೆ ಗೌರವಾಸ್ಪದವಾಗಿ ಬಂದಿದೆ. ಹರಿಶ್ಚಂದ್ರನ ಪಾತ್ರದಲ್ಲಿ  ಆವೇಶ ಹೆಚ್ಚು. ಗಾಣಗಾತಿಯರ ಪ್ರಸಂಗದಲ್ಲಿ ಆತನ ಕೋಪ ಹಾಗೂ ತಾನೇ ಚಮ್ಮಟಿಗೆವಿಡಿದು ಅವರನ್ನು ಮೈಮುರಿಯುವಂತೆ ಹೊಡೆದದ್ದು. ಅವನ ಪಾತ್ರದ ಗಾಂಭೀರ್ಯತೆಗೆ ಚ್ಯುತಿ ತರುವಂತೆ ತೋರಿದರೂ, ಅಲ್ಲಿಂದ ಮುಂದೆ ಅವನ ನಡವಳಿಕೆಯಲ್ಲಿ, ಧೈರ್ಯ, ಸಹನೆ, ಸತ್ಯನಿಷ್ಠೆ, ನಿರ್ಭಯತೆ, ಭಕ್ತಿ-ಈ ಗುಣಗಳು ಮೈಗೂಡಿಕೊಂಡು, ‘ಉದಾತ್ತ ನಾಯಕ’ನಂತೆ ಮನಸ್ಸನ್ನು ತುಂಬುತ್ತಾನೆ. ಎಲ್ಲಕ್ಕೂ ಮಿಗಿಲಾಗಿ ತುಂಬಿಕೊಂಡು ಬಂದಿರುವ ಪಾತ್ರವೆಂದರೆ ಚಂದ್ರಮತಿಯದು. ಹರಿಶ್ಚಂದ್ರನ ಸತ್ಯ ಸಾಧನೆಗೆ ಚಂದ್ರಮತಿಯ ನೆರವು ಸಹಕಾರಗಳು ಎಷ್ಟು ಅತ್ಯಗತ್ಯವಾಗಿ ಒದಗಿದವು ಎಂಬ ಸಂಗತಿ ತುಂಬ ಸೊಗಸಾಗಿ ಬಂದಿದೆ.[11] ಆದರೆ ನಿಜವಾದ ತೊಡಕು ಇರುವುದು ವಿಶ್ವಾಮಿತ್ರನ ಪಾತ್ರ ನಿರ್ಮಿತಿಯಲ್ಲಿ. ವಿಶ್ವಾಮಿತ್ರ ಹರಿಶ್ಚಂದ್ರನ ಸತ್ಯನಿಷ್ಠೆಯನ್ನು ಪರೀಕ್ಷಿಸಿ ಅದನ್ನು ಲೋಕಕ್ಕೆ ಪ್ರಕಟಮಾಡುವ ಸದುದ್ದೇಶದಿಂದಲೆ ಪಣತೊಟ್ಟು, ಕಾಟಕೊಟ್ಟನೇ ಅಥವಾ ವಸಿಷ್ಠನ ಮೇಲಣ ಹಗೆತನದಿಂದ, ವಸಿಷ್ಠ ಶಿಷ್ಯನಾದ ಹರಿಶ್ಚಂದ್ರನನ್ನು ಭಂಗಿಸಲು ಪಣತೊಟ್ಟು, ಕಾಟ ಕೊಟ್ಟನೇ ಎಂಬುದು ಪ್ರಶ್ನೆ. ರಾಘವಾಂಕ ಈ ಎರಡರಲ್ಲಿ ಯಾವುದೊಂದನ್ನು ಹಿಡಿದಿದ್ದರೂ ಸರಿಯಾಗಬಹುದಾಗಿತ್ತು. ಆದರೆ ಈ ಎರಡನ್ನೂ ಬೆರಸಿ ಅನಗತ್ಯವಾದ ಗೊಂದಲವನ್ನು ತಂದಿದ್ದಾನೆ. ಈ ಗೊಂದಲ ಮುಖ್ಯವಾಗಿ ವಿಶ್ವಾಮಿತ್ರನ ಪಾತ್ರ  ಚಿತ್ರಣದಲ್ಲಿ ಕಾಣಿಸಿಕೊಂಡಿದೆ.
ಈ ಕಾವ್ಯದ ಎರಡನೆಯ ಸ್ಥಲದಲ್ಲಿ, ದೇವರಾಜನಾದ ಇಂದ್ರನ ಸಭೆಯಲ್ಲಿ ವಸಿಷ್ಠ ವಿಶ್ವಾಮಿತ್ರರನ್ನು ಪರಿಚಯ ಮಾಡಿಕೊಡುವಲ್ಲಿ. ‘ಒಡಲನಾವರಿಸಿದಂ ಗೋಪಾಂಗ ಸಂಕುಳದ ನಡುವೆ ನಯನದ್ವಯಂಗಳುಂ, ಸಲೆ ನವಗ್ರಹದ ನಡುವೆ ಚಂದ್ರಾದಿತ್ಯರು’ ಎನ್ನುವಂತೆ ‘ಮುನಿಕುಲದ ನಡುವೆ ಇರ್ದರು ಅಧಿಕ ವಿಶ್ವಾಮಿತ್ರ ವಾಸಿಷ್ಠರು’ (೨-೫) ಎನ್ನುತ್ತಾನೆ ರಾಘವಾಂಕ. ಈ ಮೊದಲ ಪರಿಚಯ, ಇಬ್ಬರು ಋಷಿಗಳ ಬಗ್ಗೆ ಪೂಜ್ಯ ಭಾವನೆಯನ್ನು ಹುಟ್ಟಿಸುವಂಥಾದ್ದು; ಅವರಿಬ್ಬರೂ ಒಂದೇ ಶರೀರದ ನಯನದ್ವಯಗಳಂತಿದ್ದರು ಎಂಬ ಮಾತು, ಕಣ್ಣುಗಳೆರಡಾದರೂ ಕಾಣ್ಕೆ ಎರಡಲ್ಲವೆಂಬ ಭಾವನೆಗೆ ಆಸ್ಪದಕೊಡುವಂಥದ್ದು. ಆದರೆ, ‘ಈ ಲೋಕದಲ್ಲಿ ಸತ್ಯವಂತರಾರು’ ಎಂಬ ಪ್ರಶ್ನೆ ಎದ್ದೊಡನೆ, ವಸಿಷ್ಠರು ಹರಿಶ್ಚಂದ್ರನ ಸತ್ಯನಿಷ್ಠೆಯನ್ನು ಹೊಗಳಿದ ಕೂಡಲೆ, ‘ಆ ವಸಿಷ್ಠಂಗೆ ಕೋಪಿಸಿದ ವಿಶ್ವಾಮಿತ್ರನು’ (೨-೭). ಹರಿಶ್ಚಂದ್ರನ ಪೂರ್ವವೃತ್ತಾಂತವನ್ನು, ಎಂದರೆ ಆತ ತನಗೆ ಮಗನಾದರೆ ವರುಣನಿಗೆ ಕೊಡುವೆನೆಂದು ಹರಸಿಕೊಂಡು, ಅನಂತರ ಪುತ್ರವ್ಯಾಮೋಹದಿಂದ ಮಾತಿಗೆ ತಪ್ಪಿ ನಡೆದ ಸಂಗತಿಯನ್ನು ಬಲ್ಲ ವಿಶ್ವಾಮಿತ್ರನು, ವಸಿಷ್ಠನ ಮಾತಿಗೆ ಕೋಪಿಸಿದ್ದು ತಪ್ಪೇನೂ ಅಲ್ಲವೆಂದು ಒಪ್ಪೋಣ. ಆದರೆ, ಮೊದಲು ಅವರಿಬ್ಬರ ವಿಷಯದಲ್ಲಿ ಗೌರವ ಹುಟ್ಟುವಂತೆ ಪರಿಚಯ ಮಾಡಿಕೊಟ್ಟ ರಾಘವಾಂಕ, ವಿಶ್ವಾಮಿತ್ರ ವಸಿಷ್ಠರಿಗೆ ಮುಳಿದಿದ್ದರ ನಿಜವಾದ ಕಾರಣವನ್ನು ಬಿಚ್ಚಿ ಹೇಳುವವನಂತೆ ‘ತೀವಿದೊಡ್ಡೋಲಗದ ನಡುವೆ ತನ್ನಂ ಮೊದಲೊಳೋವಿ ನುಡಿಸದ ಕೋಪವೊಂದು, ವಸಿಷ್ಠ ಮುನಿ ಯಾವುದಂ ಪೇಳ್ದಡೆ ಅದನಲ್ಲೆಂಬ ಭಾಷೆಯೆರಡು, ಭಾವಿಪಡೆ ಅಖಿಳಜೀವಾಳಿಯಲಿ ಕುಂದನಲ್ಲದೆ ಲೇಸಕಾಣದಿಹ ಭಾವ ಮೂರು’ (೨-೮); ಈ ಮೂರೂ ಮುಪ್ಪುರಿಗೊಂಡಿದ್ದವು ಎಂದು ವಿಶ್ವಾಮಿತ್ರನ ಸ್ವಭಾವವನ್ನು ವ್ಯಾಖ್ಯಾನಿಸುವುದು ವಿಲಕ್ಷಣವಾಗಿದೆ. ಇಲ್ಲಿಂದಲೇ ಈ ಪಾತ್ರದ ವಿಸಂಗತಿಯ ಆರಂಭ. ಅದರಲ್ಲೂ ‘ಅಖಿಳಜೀವಾಳಿಯಲಿ ಕುಂದನಲ್ಲದೆ ಲೇಸ ಕಾಣದಿಹ ಭಾವ’ ವಿಶ್ವಾಮಿತ್ರನದು ಎಂಬುದಂತೂ ತೀರ ಅನುಚಿತವಾದ ವ್ಯಾಖ್ಯಾನ. ಇಂಥವನು ಋಷಿ ಹೇಗಾದಾನು ಎಂದು ಅನ್ನಿಸುತ್ತದೆ ಯಾರಿಗಾದರೂ. ಮಾತಿಗೆ ಮಾತು ಬೆಳೆದು ‘ಬ್ರಹ್ಮರ್ಷಿಯಾದೊಡೆ ಒಳಗು ನಿರ್ಮಳವಪ್ಪುದಯ್ಯ, ನೀಂ ರಾಜರ್ಷಿ, ಕೋಪಿಸದೆ ದಟ್ಟಿಸದೆ ಕೆಡೆ ನುಡಿಯದೆ ನಿಲಲೆಂತು ಬಲ್ಲೆ’ (೨-೩೨)- ಎಂದು ವಿಶ್ವಾಮಿತ್ರನನ್ನು ಹಂಗಿಸುವ, ವಸಿಷ್ಠನ ಮಾತಿನಲ್ಲಿ, ಒಂದು ರೀತಿಯಲ್ಲಿ ವಿಶ್ವಾಮಿತ್ರನ ವರ್ತನೆಗೆ ಕಾರಣವನ್ನು ಕಲ್ಪಿಸಿದರೂ, ವಿಶ್ವಾಮಿತ್ರನ ‘ಒಳಗು’ ಅಥವಾ ಅವನ ಅಂತರಂಗ ನಿರ್ಮಲವಾದದ್ದಲ್ಲ ಎಂಬ ಅಂಶ ಮತ್ತಷ್ಟು ಖಚಿತವಾಗುತ್ತದೆ. ಮುಂದೆ ಹರಿಶ್ಚಂದ್ರನನ್ನು ಸತ್ಯಭ್ರಷ್ಠನನ್ನಾಗಿಸಲು ‘ದುರ್ಮಂತ್ರ ಬಲವಂತ’ನಾದ ವಿಶ್ವಾಮಿತ್ರನು ಮಾಯದ ಅಬಲೆಯರನ್ನು ನಿರ್ಮಿಸಿದಾಗ, ರಾಘವಾಂಕನೆ, ‘ಮುನಿಗೆ ಹೊಲೆಯಾವುದು?’ ಎಂಬ ಪ್ರಶ್ನೆಯನ್ನು ಎತ್ತಿಕೊಂಡು, ‘ಅತಿಕೋಪ, ಬದ್ಧ ದ್ವೇಷ, ಅನಿಮಿತ್ತ ವೈರ’ ಎಂದು ಉತ್ತರ ಹೇಳಿ, ‘ಅದಱಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ’ (೭-೨) ನಿಂತರೆಂದು ವ್ಯಾಖ್ಯಾನಿಸಿ, ವಿಶ್ವಾಮಿತ್ರನ ಪಾತ್ರವನ್ನು ಇನ್ನಷ್ಟು ಕಪ್ಪು ಮಾಡಿದ್ದಾನೆ. ‘ಆಸುರದ ಕೋರಡಿಗ’, ‘ಮುನಿರಕ್ಕಸ’, ‘ಅನಿಮಿತ್ತ ಮುನಿವ ಮುನಿ’ ಇತ್ಯಾದಿ ವಿಶೇಷಣಗಳನ್ನು ಅಲ್ಲಲ್ಲಿ ಸೇರಿಸುತ್ತ ರಾಘವಾಂಕ ವಿಶ್ವಾಮಿತ್ರನ ಪಾತ್ರದ ಬಗ್ಗೆ ಪೂರ್ವಗ್ರಹ ಹುಟ್ಟುವಂತೆ ಮಾಡುತ್ತಾನೆ. ವಿಶ್ವಾಮಿತ್ರನ ಪಾತ್ರದ ಉಗ್ರತೆಯನ್ನೆ ಪೋಷಿಸುವಂತೆ ಅಗ್ನಿ ಪ್ರತಿಮೆಗಳಲ್ಲಿ ಅವನ ಸ್ವಭಾವವನ್ನು ಚಿತ್ರಿಸುತ್ತಾನೆ. ಹರಿಶ್ಚಂದ್ರನನ್ನು ಸತ್ಯಭ್ರಷ್ಠನನ್ನಾಗಿಸುವ ಪಣತೊಟ್ಟು ದೇವಸಭೆಯಿಂದ ನಿರ್ಗಮಿಸಿದ ವಿಶ್ವಾಮಿತ್ರ ‘ಆಡಂಬರದ ಸಿಡಿಲುಗಜಱಿ’ ಗರ್ಜಿಸಿ ಮೇಘದಿಂದ ಪೊಱಮಡುವಂದ (೨-೩೪)ವನ್ನು ನೆನಪಿಗೆ ತರುತ್ತಾನೆ. ‘ವಡಬಾಗ್ನಿ ಜಡೆವೊತ್ತುದೋ, ಸಿಡಿಲು ಹೊಸ ಭಸಿತವಿಡಕಲಿತುದೊ’ (೮-೧)- ಎಂಬಂತೆ ತೋರುತ್ತಾನೆ. ಹರಿಶ್ಚಂದ್ರನನ್ನು ಕಾಡಿಸುವಲ್ಲಿ ‘ಬಿಸಿಲಾಗಿ, ಬಿರುಗಾಳಿಯಾಗಿ, ಕಲುನೆಲವಾಗಿ, ವಿಷಮಾಗ್ನಿಯಾಗಿ, ನಾನಾಕ್ರೂರಮೃಗವಾಗಿ, ಮಸಗಿಘೋರಾರಣ್ಯವಾಗಿ, ಗರ್ಜಿಸಿ ಕವಿವ ಭೂತಬೇತಾಳರಾಗಿ’ (೯-೧೮)ಮೈದೋರುತ್ತಾನೆ. ಈ ಕಾವ್ಯದ ಮೊದಲರ್ಧದಲ್ಲಿ ‘ದುರ್ಮಂತ್ರ ಬಲವಂತ’ನಾದ ವ್ಯಕ್ತಿಯಾಗಿ, ಉಳಿದರ್ಧದಲ್ಲಿ ಪ್ರಕೃತಿಯ ಪ್ರಚಂಡ ಶಕ್ತಿಯಾಗಿ ವಿಶ್ವಾಮಿತ್ರ ಕಾಣಿಸಿಕೊಳ್ಳುತ್ತಾನೆ. ಅಷ್ಟೊಂದು ಕಷ್ಟಗಳ ಮೋಡವಾಗಿ ಹರಿಶ್ಚಂದ್ರನ ಮೇಲೆ ದಟ್ಟೆ ಸಿ ಗುಡುಗಿದರೂ, ಹರಿಶ್ಜಂದ್ರ ದೂರದ ಕಾಶಿಯಲ್ಲಿ ತಾನು ಕೊಟ್ಟ ಅವಧಿಯೊಳಗೆ ಮುನಿಋಣವನ್ನು ತೀರಿಸಿ ಆಡಿದ ಮಾತನ್ನುಳಿಸಿಕೊಳ್ಳುವಂತೆ, ಕೊಂಡುಕೊಳ್ಳುವವರನ್ನು ನೇಮಿಸಿದವನೂ ವಿಶ್ವಾಮಿತ್ರನೇ ಎನ್ನುವ ಅಂಶವನ್ನು ರಾಘವಾಂಕನು ಚಿತ್ರಿಸಿದರೂ, ಅದು ಎದ್ದು ಕಾಣುವುದಿಲ್ಲ. ಅದು ಎದ್ದು ಕಾಣುವಂತಿರಬಾರದೆಂಬುದೆ ಕವಿಯ ಆಶಯವಾಗಿರುವುದರಿಂದ ಅಲ್ಲಿಯೂ ಕವಿ ‘ಅನಿಮಿತ್ತ ಮುನಿವ ಮುನಿ’, ‘ಕಡುಮೂರ್ಖಕೌಶಿಕಂ’ ಎನ್ನುವ ವಿಶೇಷಣಗಳನ್ನು ಮುಂದು ಮಾಡಿದ್ದಾನೆ. ಹೀಗೆ ಉದ್ದಕ್ಕೂ ‘ಖಳನಾಯಕ’ನಂತೆ ವಿಜೃಂಭಿಸುವ ವಿಶ್ವಾಮಿತ್ರ, ಹರಿಶ್ಚಂದ್ರ ಕಟ್ಟಕಡೆಯ ಪರೀಕ್ಷೆಯನ್ನು ದಿಟ್ಟತನದಿಂದ ಗೆದ್ದು ವಿಶ್ವೇಶ್ವರನ ಸಾಕ್ಷಾತ್ಕಾರವನ್ನು ಮಾಡಿಕೊಂಡ ಒಡನೆಯೆ, ರಾಘವಾಂಕನೆ ‘ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ, ತಾಳ್ದ ಒಡಲಿಂಗೆ ಸುಖಮನೀವಂತೆ, ಲೋಕದ ಕಣ್ಗೆ ಕಡುಮುಳಿದರಂತೆ  ತೋಱಿಸಿ, ಸತ್ಯ ಶುದ್ಧವಪ್ಪನ್ನೆಗಂ ಕಾಡಿ ನೋಡಿ…… ಹರಿಶ್ಚಂದ್ರ ರಾಯಂಗೆ ಕೀರ್ತಿಯಂ ಮೂಜಗದ ಕಡೆಗೆ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ’ (೧೪-೩) ಎಂದು ವಿಶ್ವಾಮಿತ್ರನ ನಡವಳಿಕೆಯನ್ನು ವ್ಯಾಖ್ಯಾನಿಸುತ್ತಾನೆ. ಅಷ್ಟೇ ಅಲ್ಲ, ಹಿಂದೆ ದೇವಸಭೆಯಲ್ಲಿ ರೋಷಾವೇಶದಿಂದ ‘ಕೋಣ’ಗಳಂತೆ ಹೋರಾಡಿದ ಋಷಿಗಳು, ಇಲ್ಲಿ ಜೊತೆ ಜೊತೆಗೆ- ‘ವಿಶ್ವಾಮಿತ್ರ ಬಂದನು ವಸಿಷ್ಠ ಸಹಿತ’ (೧೦-೩) -ಬರುತ್ತಾರೆ. ಈ ಸಂದರ್ಭವನ್ನು ನೋಡಿದರೆ, ಈ ಋಷಿಗಳಿಬ್ಬರೂ ಹರಿಶ್ಚಂದ್ರನ ಸತ್ಯವನ್ನು ಲೋಕಕ್ಕೆ ಪ್ರಕಟ ಮಾಡಲೆಂದೇ, ಕಪಟ ಕಲಹವನ್ನು ಹೂಡಿದ್ದರೆಂದೂ, ವಿಶ್ವಾಮಿತ್ರನ ನಡವಳಿಕೆಯೆಲ್ಲವೂ ಕಡುಮುಳಿದರಂತೆ ಲೋಕದ ಕಣ್ಣಿಗೆ ತೋರಿಸಿದ ‘ತೋರಿಕೆ’ ಮಾತ್ರವಾಗಿತ್ತೆ ಹೊರತು, ಅವನು ಮಾಡಿದ್ದೆಲ್ಲ ಸದುದ್ದೇಶದಿಂದಲೇ ಕೂಡಿತ್ತೆಂದೂ- ಕವಿ ಕಾವ್ಯದ ಕಟ್ಟಕಡೆಯ ನಿಲುವಿನಲ್ಲಿ ಆ ಪಾತ್ರಕ್ಕೆ ಒಂದು ನಾಟಕೀಯ ತಿರುವನ್ನು ಕೊಟ್ಟು- ಓದುಗರನ್ನು ನಂಬಿಸಲು ಪ್ರಯತ್ನ ಪಟ್ಟಿದ್ದಾನೆ. ಇದಕ್ಕೆ ಪೂರಕವಾಗಿ ಇನ್ನೂ ಒಂದು ವಾದವನ್ನು ಮಂಡಿಸಬಹುದು: ಹರಿಶ್ಚಂದ್ರನನ್ನು ಲೋಕದೆದುರು ಪರಾಭವಿಸಿ, ಆತನನ್ನು ಸತ್ಯಭ್ರಷ್ಠನನ್ನಾಗಿಸುವ ದುರುದ್ದೇಶ ವಿಶ್ವಾಮಿತ್ರನಿಗೆ ಇದ್ದ ಪಕ್ಷದಲ್ಲಿ, ವಿಶ್ವದ ಋತಧರ್ಮದ ಪ್ರತಿನಿಧಿಗಳಾದ ಅಗ್ನಿ ಯಮ ಇವರೂ ಹರಿಶ್ಚಂದ್ರನ ಸತ್ಯಪರೀಕ್ಷೆಯ ನಾಟಕದಲ್ಲಿ ವಿಶ್ವಾಮಿತ್ರನಿಗೆ ಸಹಾಯಕ ಪಾತ್ರಗಳಾಗಿ ನಿಲ್ಲುತ್ತಿರಲಿಲ್ಲ. ಅಲ್ಲದೆ ಹರಿಶ್ಚಂದ್ರ ಸಕಾಲದಲ್ಲಿ ಋಣಮುಕ್ತನಾಗುವಂತೆ, ಅಗ್ನಿ ಹಾಗೂ ಯಮ ಇಂಥ ದೇವತೆಗಳ ಸಹಾಯದಿಂದ ಏರ್ಪಾಡು ಮಾಡಿದವನೂ ವಿಶ್ವಾಮಿತ್ರನೇ. ಆದಕಾರಣ ಮೂಲತಃ ವಿಶ್ವಾಮಿತ್ರನ ಪಾತ್ರ ಕಡುಮುಳಿದರಂತೆ ತೋರಿದ್ದು ‘ಲೋಕದ ಕಣ್ಗೆ’ ಮಾತ್ರ; ಆತನ ನಡವಳಿಕೆ ಸದುದ್ದೇಶದ್ದೇ. ಈ ವಾದವೇನೋ ಚೆನ್ನಾಗಿದೆ. ಆದರೆ ಇಷ್ಟು ಮಾತ್ರ ನಿಜ; “ಹರಿಶ್ಚಂದ್ರನ ಸತ್ಯ ಸೌಜನ್ಯಗಳನ್ನು ಮೆಚ್ಚಿ ಅವನಿಗೂ ಅವನ ಮೂಲಕ ಲೋಕಕ್ಕೂ ಉಪಕಾರ ಮಾಡಬೇಕೆನ್ನುವ ಶುಭೋದ್ದೇಶವು ಕೊನೆಯವರೆಗೂ ಎಲ್ಲಿಯೂ ಸೂಚಿತವಾಗುವುದಿಲ್ಲ.”[12] ಹಾಗೆ ಸೂಚಿಸಿದ್ದರೆ, ಹರಿಶ್ಚಂದ್ರನ ಸತ್ಯಸಾಧನೆಯ ಸಂಕಷ್ಟದ ರೌದ್ರತೆಯು ಓದುಗರಲ್ಲಿ ಹುಟ್ಟಿಸುವ ಸಹಾನುಭೂತಿ ಗೌರವಗಳ ತೀವ್ರತೆಯನ್ನು ಕಡಿಮೆ ಮಾಡುತ್ತಿತ್ತೆಂದೂ, ವಸಿಷ್ಠ-ವಿಶ್ವಾಮಿತ್ರರ ಕಲಹ ಕೇವಲ ಕೃತಕವೆಂದೂ ಅನ್ನಿಸಿ, ಕಾವ್ಯದ ನಾಟ್ಯಮಯತೆಗೆ ಕೊರತೆಯಾಗುತ್ತಿತ್ತೆಂಬುದೇನೋ ನಿಜ. ಆದರೆ ಮೊದಲಿಂದ ಉಗ್ರವಾಗಿದ್ದ ವಿಶ್ವಾಮಿತ್ರನ ಪಾತ್ರದಲ್ಲಿ ಕಟ್ಟಕಡೆಗೆ ಆಗುವ ಹಠಾತ್ ಪರಿವರ್ತನೆಯೂ ಅಷ್ಟೇ ಕೃತಕವಾಗುತ್ತದೆ ಎಂಬುದೂ ನಿಜವೆ. ಆದರೆ ರಾಘವಾಂಕ ವಿಶ್ವಾಮಿತ್ರನ ಪಾತ್ರಕ್ಕೆ ಕೊಟ್ಟ ಹಠಾತ್ ನಾಟಕೀಯ ತಿರುವಿನಿಂದ, ವಿಶ್ವಾಮಿತ್ರನ ಪಾತ್ರದ ಬಗೆಗೆ ಇದುವರೆಗೂ ಇಲ್ಲದ ಗೌರವವೇನೂ ಹುಟ್ಟುವುದಿಲ್ಲ-ವಿಶ್ವಾಮಿತ್ರನನ್ನು ಈ ನೆಲೆಯಲ್ಲಿ ‘ಮುನಿ ಪಿತಾಮಹನು’ ಮುನಿ ರಾಜಾಧಿರಾಜನು, ಮುನೀಶ್ವರನು, ಮುನಿಮುಖ್ಯನು, ಮುನಿವರನು, ಮುನಿಪುಂಗವನು, ಮುನೀಂದ್ರನು, ಸರ್ವ ಮುನಿವರೇಣ್ಯನು, ಮುನಿ ಶ್ರೇಷ್ಠನು, ಮುನೀಶನು, ಉಱಿ ಮುನಿಗಳಾದಿತ್ಯನು, ಮುನಿಸ್ತುತ್ಯನೆಂದೆನಿಪ ವಿಶ್ವಾಮಿತ್ರ ಮುನಿನಾಥನು’ (೧೪-೨೭) ಎಂದು ಸ್ತುತಿಸಿದ್ದರೂ. ಈ ಸ್ತುತಿ ವಾಸ್ತವವಾಗಿ ಕಪ್ಪನ್ನು ಬಿಳಿದು ಮಾಡುವ ಪಶ್ಚಾತ್ತಾಪ ಬುದ್ಧಿಯ ಪ್ರಯತ್ನದಂತೆ ಭಾಸವಾಗುತ್ತದೆ. ‘ಅಖಿಳಜೀವಾಳಿಯಲಿ ಕುಂದನಲ್ಲದೆ ಲೇಸ ಕಾಣದಿಹ ಭಾವ’ದವನೆಂದೂ, ‘ಅತಿಕೋಪ ಬದ್ಧದ್ವೇಷ ಅನಿಮಿತ್ತವೈರ’ದವನೆಂದೂ, ‘ಆಸುರದ ಕೋರಡಿಗ’, ‘ಮುನಿರಕ್ಕಸ’, ‘ಕಪಟ ವಟು’ ಎಂದೆಲ್ಲಾ ವಿಶ್ವಾಮಿತ್ರನನ್ನು ಚಿತ್ರಿಸಿದ ರಾಘವಾಂಕನೆ, ಕಡೆಯಲ್ಲಿ ಮುನಿವರೇಣ್ಯ, ಮುನಿಪುಂಗವ….. ಇತ್ಯಾದಿಯಾಗಿ ಸ್ತುತಿಸಿದರೆ, ಈ ಎರಡನ್ನೂ ಹೊಂದಿಸಿಕೊಂಡು ನೋಡುವುದು ಕಷ್ಟವಾಗುತ್ತದೆ.
ಬಹುಶಃ ಕವಿಗಿದ್ದದ್ದು ಎರಡೇ ದಾರಿ: ಒಂದು ವಸಿಷ್ಠನ ಮೇಲಣ ಹಠದಿಂದ[13] ವಿಶ್ವಾಮಿತ್ರನು ವಸಿಷ್ಠ ಶಿಷ್ಯನಾದ ಹರಿಶ್ಚಂದ್ರನನ್ನು ಕಾಡಿ ನೋಡಿ, ಕಡೆಗೆ ಆತನ ಸತ್ಯಸಂಧತೆಯನ್ನು ಮೆಚ್ಚಿಕೊಂಡು, ತನ್ನ ಸೋಲನ್ನು ಒಪ್ಪಿಕೊಂಡನೆಂಬಂತೆ ಚಿತ್ರಿಸುವುದು. ಹೀಗೆ ಆಗಿದ್ದರೆ ವಿಶ್ವಾಮಿತ್ರನ ಪಾತ್ರಕ್ಕೆ ಧಕ್ಕೆಯೇನೂ ಆಗುತ್ತಿರಲಿಲ್ಲ. ಎರಡನೆಯದು, ಹರಿಶ್ಚಂದ್ರನನ್ನು ಪರೀಕ್ಷಿಸಿ ಅವನ ಮೂಲಕ ಲೋಕಕಲ್ಯಾಣವನ್ನು ಸಾಧಿಸುವ ಸದುದ್ದೇಶ ವಿಶ್ವಾಮಿತ್ರನಿಗೆ ಇತ್ತು ಎಂದು ಚಿತ್ರಿಸುವುದು. ಈ ಎರಡೂ ಆಗದೆ, ಎರಡನ್ನೂ ಬೆರಸಿರುವುದರಿಂದಲೆ ವಿಶ್ವಾಮಿತ್ರನ ಪಾತ್ರ ಚಿತ್ರಣದಲ್ಲಿ ಒಂದು ಬಗೆಯ ಗೊಂದಲವಾಗಿರುವುದು. ಈ ಗೊಂದಲದ ಸ್ಥಿತಿಯಲ್ಲಿ ವಿಶ್ವಾಮಿತ್ರನ ಪಾತ್ರಕ್ಕೆ ತಿರುವು ಕೊಡುವ ಯೋಚನೆ, ರಾಘವಾಂಕನಿಗೆ ಬಹುಶಃ ಕಟ್ಟಕಡೆಯಲ್ಲಿ ಹೊಳೆದಿರಬಹುದು.[14]
-೬-
ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ಭಾಷಾ ಪ್ರಯೋಗದಲ್ಲಿ ಅವನು ನಿಂದ ನೆಲದ ಗುಣವೂ ಬಂದ ಕಾಲದ ಗುಣವೂ ಒಡೆದು ಕಾಣುತ್ತವೆ. ತನ್ನ ಸುತ್ತ ಕಿವಿಗೆ ಬಿದ್ದ ಜನದ ಆಡುಮಾತಿನ ಸೊಗಡನ್ನು, ಅವನೇ ರೂಢಿಸಿಕೊಂಡ ಷಟ್ಪದಿಯ ರೀತಿಯಲ್ಲಿ ಹಿಡಿದಿರಿಸಿದ್ದಾನೆ. ಮಾತು ಮಾತಿಗೆ ನುಗ್ಗಿ ಬರುವ ನುಡಿಗಟ್ಟುಗಳೂ, ಗಾದೆ ಮಾತುಗಳೂ, ಇದಕ್ಕೆ ಸಾಕ್ಷಿಯಾಗಿವೆ. ‘ಉಭಯ ಕವಿ ಕಮಲರವಿ ರಾಘವಾಂಕ ಪಂಡಿತ’ ಎಂದು ತನ್ನನ್ನು ಕರೆದುಕೊಂಡದ್ದನ್ನು ಆತ ತನ್ನ ಪ್ರಾಸ-ಚಮತ್ಕಾರಗಳಲ್ಲಿ, ಪರಂಪರೆಯ ಸಿದ್ಧ ರೂಪಗಳನ್ನು ಪುನರಾವರ್ತಿಸುವಲ್ಲಿ ಪ್ರದರ್ಶಿಸಿದರೂ, ಆತನ ಬಹುಪಾಲು ಕಾವ್ಯೋಕ್ತಿ, ಮಾತನಾಡಿದ ಹಾಗಿದೆ. ವಚನಕಾರರನ್ನು ಬಿಟ್ಟರೆ ರಾಘವಾಂಕನೇ ಆಡುಮಾತಿನ ಸತ್ವವನ್ನು ಯಶಸ್ವಿಯಾಗಿ ಹಿಡಿದಿರಿಸಿದವನು. ಎಲ್ಲಕ್ಕೂ ಮಿಗಿಲಾಗಿ ರಾಘವಾಂಕನ ವಿಶಿಷ್ಟತೆ ಇರುವುದು ಅವನ ನಾಟ್ಯ ಪ್ರತಿಭೆಯಲ್ಲಿ. ಕನ್ನಡ ಸಾಹಿತ್ಯದಲ್ಲಿ ರನ್ನ ಮತ್ತು ರಾಘವಾಂಕ ಇವರಿಬ್ಬರೆ ನಾಟ್ಯ ಪ್ರತಿಭೆಯನ್ನುಳ್ಳ ಕವಿಗಳೆಂದು ಹೆಸರಾಗಿದ್ದಾರೆ. ರನ್ನನ ಗದಾಯುದ್ಧಕ್ಕೆ ನಾಟಕಕ್ಕಿರುವ ‘ಐಕ್ಯತೆ’ ಇರುವುದಾದರೂ, ರಾಘವಾಂಕನ ನಾಟ್ಯಮಯತೆ ರನ್ನನದಕ್ಕಿಂತ ಭಿನ್ನರೀತಿಯದಾಗಿದೆ. ನಾಟಕದ ಜೀವಾಳ ಸಂಭಾಷಣೆ ಮತ್ತು ಕ್ರಿಯೆ. ರನ್ನನಲ್ಲಿ ತೀವ್ರವಾದ ಕ್ರಿಯೆ ಇದ್ದರೂ, ಸಂವಾದದ ದೃಷ್ಟಿಯಿಂದ ರನ್ನ, ರಾಘವಾಂಕನ ಸಮಕ್ಕೆ ಬರಲಾರ. “ರನ್ನನಲ್ಲಿ ಒಂದು ಪಾತ್ರ ಆಡುವ ಮಾತು ಒಂದು ವೃತ್ತ ಅಥವಾ ಕಂದದಲ್ಲಿ ಮುಕ್ತಾಯವಾದನಂತರ, ಇನ್ನೊಂದು ಪಾತ್ರ ಮತ್ತೊಂದು ವೃತ್ತ ಅಥವಾ ಕಂದದಲ್ಲಿ ಉತ್ತರ ಕೊಡುತ್ತದೆ. ರಾಘವಾಂಕನಲ್ಲಿಯಾದರೋ ಒಂದೇ ಷಟ್ಪದಿಯ ಚೌಕಟ್ಟಿನಲ್ಲಿ ಎರಡು ಪಾತ್ರಗಳು ನಡೆಯಿಸುವ ಉತ್ತರ ಪ್ರತ್ಯುತ್ತರಗಳ ಚಕಮಕಿ ಅತ್ಯಪೂರ್ವವಾಗಿದೆ. ಈ ಅರ್ಥದಲ್ಲಿ ರನ್ನನಿಗಿಂತ, ರಾಘವಾಂಕ ಉತ್ತಮವಾದ ಸಂವಾದ ಚಾತುರ್ಯವನ್ನು ತಂದು ನಾಟ್ಯಮಯತೆಯಲ್ಲಿ ಮೇಲುಗೈಯಾದವನು.”[15] ರನ್ನ ರಾಘವಾಂಕರಿಗಿರುವ ವ್ಯತ್ಯಾಸವೆಂದರೆ, “ರನ್ನನ ನಾಟ್ಯಮಯತೆ ‘ಮಾರ್ಗ’ ಕಾವ್ಯದ್ದಾದರೆ, ರಾಘವಾಂಕನದು ‘ದೇಸಿ’ಕಾವ್ಯದ್ದು; ರನ್ನನದು ವರ್ಣನಾಮೂಲ ನಾಟ್ಯಮಯತೆಯಾದರೆ, ರಾಘವಾಂಕನದು ಸಂವಾದಮೂಲ ನಾಟ್ಯಮಯತೆ.”[16]
ರಾಘವಾಂಕನ ಶೈಲಿಯನ್ನು ಕುರಿತು ಬರೆಯುತ್ತಾ, ಶ್ರೀ ಎಸ್.ವಿ. ರಂಗಣ್ಣನವರು “ಐವತ್ತಕ್ಕೆ ಮೇಲೆ ಏಳದೆ, ಐದಕ್ಕೆ ಇಳಿಯದೆ, ತನ್ನದೇ ಆದ ಒಂದು ಸತ್ವ ಪ್ರಮುಖವಾಗಿರುವುದರಿಂದ ಆನಂದದಾಯಕ, ಸರ್ವಜನಾದರಣೀಯ ಸಾರ್ಥಕ”[17] ಎನ್ನುತ್ತಾರೆ. ರಾಘವಾಂಕನ ಶೈಲಿಯ ಬಗ್ಗೆ ಈ ಹೇಳಿಕೆಯ ಪೂರ್ವಾರ್ಧದ ಗಣಿತ, ಉತ್ತರಾರ್ಧದ ಪ್ರಶಂಸೆಗೆ ವಿರೋಧಿಯಾಗಿ  ನಿಲ್ಲುತ್ತದೆ. ರಾಘವಾಂಕ, ನಮಗೆ ತಿಳಿದ ಮಟ್ಟಿಗೆ ಮೊಟ್ಟ ಮೊದಲಿಗೆ ಷಟ್ಪದಿಯನ್ನು ಕಾವ್ಯಾಭಿವ್ಯಕ್ತಿಗೆ ರೂಢಿಸಿಕೊಂಡವನು. ಯಾವುದೇ ಒಂದು ಅಭಿವ್ಯಕ್ತಿ ಪ್ರಕಾರವನ್ನು ಮೊದಲಿಗೆ ಪಳಗಿಸಿ ಭಾವಾಭಿವ್ಯಕ್ತಿಗೆ ಒಗ್ಗಿಸುವವನಿಗೆ ಇರುವ ಕಷ್ಟ ಅನಂತರದವರಿಗೆ ಅಷ್ಟಾಗಿ ಇರುವುದಿಲ್ಲ. ರಾಘವಾಂಕ ಷಟ್ಪದಿಯ ಸಾಧ್ಯತೆಯನ್ನು ಮೊಟ್ಟಮೊದಲು ತೋರಿಸಿಕೊಟ್ಟ ಮೇಲೆ, ಮುಂದಿನವರ ಪಾಲಿಗೆ ಅದೊಂದು ಸಿದ್ಧರೂಪವೂ, ಹೆಚ್ಚು ಪರಿಷ್ಕಾರದ ಸಾಧ್ಯತೆಗಳನ್ನುಳ್ಳದ್ದೂ ಆಯಿತೆಂಬುದು ನಿಜ. ಆದರೆ ರಾಘವಾಂಕನ ಶೈಲಿಯಲ್ಲಿ ಸಮೃದ್ಧವಾದ ದೇಸೀಯತೆ, ಬಿಡಿ ಬಿಡಿಯಾದ ಚಿತ್ರಗಳನ್ನು ಕೊರೆದು ನಿಲ್ಲಿಸುವ ಸಾಮರ್ಥ್ಯ, ನಾಟ್ಯಮಯತೆ, ವೀರ ಕರುಣಗಳನ್ನು ಸಮರ್ಥವಾಗಿ ವ್ಯಂಜಿಸುವ ಗುಣ, ತಾನೇ ತಾನಾಗಿದೆ.
ರಾಘವಾಂಕನಿಗೆ ಹಂಪೆಯನ್ನು ಕುರಿತು ವಿಶೇಷವಾದ ಅಭಿಮಾನ-ಪಂಪನಿಗೆ ಬನವಾಸಿಯ ಮೇಲೆ ಹೇಗೋ ಹಾಗೆ. ರಾಘವಾಂಕನ ಕಾರ್ಯಕ್ಷೇತ್ರ ಹಂಪೆಯನ್ನು ಕೇಂದ್ರವನ್ನಾಗಿರಿಸಿಕೊಂಡು, ಅತ್ತ ಓರಂಗಲ್ಲು ಇತ್ತ ದ್ವಾರಸಮುದ್ರದವರೆಗೂ ವ್ಯಾಪಕವಾಗಿತ್ತು. ಹಂಪೆ ರಾಘವಾಂಕನ ಆಡುಂಬೊಲ. ಅಲ್ಲಿ ಹರಿಯುವ ತುಂಗಭದ್ರೆ, ಅದರ ತಡಿಯ ವಿರೂಪಾಕ್ಷನ ದೇಗುಲ ರಾಘವಾಂಕನ ಭಕ್ತಿ ಗೌರವದ ನೆಲೆಗಳು. ವಸಿಷ್ಠ ವಿಶ್ವಾಮಿತ್ರರನ್ನು ಪರಿಚಯ ಮಾಡಿಕೊಡುವಲ್ಲಿ “ಉರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ ನಡುವೆ ಸುರುಚಿರ ಗಂಗೆ ತುಂಗಭದ್ರೆಗಳೊಪ್ಪವಡೆದು ಮಹಿಮೆಯೊಳೆಸೆವ ತೆಱದಿ” (೨-೫) ಇದ್ದವೆಂದು ಹೇಳುವಲ್ಲಿ, ಹಂಪೆಯ ಬಳಿಯ ತುಂಗಭದ್ರೆಯನ್ನು, ಜಗತ್ತಿನ ಶ್ರೇಷ್ಠ ನದಿಗಳಲ್ಲಿ ಒಂದೆಂದು ಹೇಳುವುದರ ಜೊತೆಗೆ ಅದನ್ನು ಗಂಗಾ ನದಿಯೊಂದಿಗೆ ಇರಿಸಿ ಗೌರವಿಸುತ್ತಾನೆ. ವಸಿಷ್ಠನ ಆಶ್ರಮ ಪಂಪಾ ಕ್ಷೇತ್ರದಲ್ಲಿದ್ದಂತೆ ಚಿತ್ರಿಸಿದ್ದಾನೆ. ಉತ್ತರದ ಅಯೋಧ್ಯೆಯಿಂದ ಬೇಟೆಯಾಡುತ್ತಾ ಬಂದ ಹರಿಶ್ಚಂದ್ರ, ಪಂಪಾಕ್ಷೇತ್ರದ ವಸಿಷ್ಠರ ಆಶ್ರಮಕ್ಕೆ ಬಂದು ತುಂಗಾಭದ್ರಾ ನದಿಯಲ್ಲಿ ಸ್ನಾನಮಾಡಿ ವಿರೂಪಾಕ್ಷನ ದರ್ಶನ ಮಾಡಿದನೆಂದು ವರ್ಣಿಸಿದ್ದಾನೆ. ಅಲ್ಲಿನ ವಿಪ್ರರಿಗೆ ದಾನ ಕೊಡುವ ಸಂದರ್ಭದಲ್ಲಿ ‘ಅಂಗವಂಗ ಕಳಿಂಗ ದೇಶಂಗಳೊಳು ನಿಮ್ಮ ಕಂಗೆ ಸೊಗಸುವ ನಾಡಬೇಡಿ ನೀವ್ ಎನೆ’, ಆ ವಿಪ್ರರು ‘ತುಂಗಭದ್ರಾ ತೀರಮಂ ಬಿಟ್ಟು ನಾವೆಲ್ಲಿಗಂ ಬಾರೆವು’ (೫-೮೨) ಎನ್ನುತ್ತಾರೆ. ವಿಶ್ವಾಮಿತ್ರನಿಗೆ ತನ್ನ ರಾಜ್ಯ ಸರ್ವಸ್ವವನ್ನೂ ಒಪ್ಪಿಸಿದ ಮೇಲೆ ‘ಮುನಿಋಣ’ವನ್ನು ತೀರಿಸಲು ಎಲ್ಲಿಗೆ ಹೋಗಲಿ ಎಂದು ಯೋಚಿಸುವಾಗ ‘ಮಂಗಳದ ನಿಳಯ ಮುಕ್ತಿಯ ಮೂಲವೆನಿಸುವುರು ಕಾಶಿ ಹಂಪೆಗಳು’ (೮-೫೯) ಎಂದು ಹರಿಶ್ಚಂದ್ರ ಅಂದುಕೊಳ್ಳುತ್ತಾನೆ. ಅಷ್ಟೇ ಅಲ್ಲ: ‘ಅವಕೆ ವಿಶ್ವೇಶ್ವರ ವಿರೂಪಾಕ್ಷರೇ ಒಡೆಯರು’ (೮-೬೦). ತಾನು ಹುಟ್ಟಿ ಬೆಳೆದ ಹಂಪೆಯ ಬಗ್ಗೆ ರಾಘವಾಂಕನಿಗೆ ಇಷ್ಟೊಂದು ಅಭಿಮಾನ. ಹಂಪೆ ಕಾಶಿಗೆ ಸಮ, ತುಂಗಭದ್ರೆ ಗಂಗೆಗೆ ಸಮ, ವಿರೂಪಾಕ್ಷನು ವಿಶ್ವೇಶ್ವರನಿಗೆ ಸಮ. ಹರಿಶ್ಚಂದ್ರ ಕಾವ್ಯದ ಘಟನಾ ಪರಂಪರೆಗಳನ್ನು ತಂದು, ಹಂಪೆಗೂ ಗಂಟು ಹಾಕಿದ್ದು, ರಾಘವಾಂಕನಿಗೆ ಹಂಪೆಯ ಮೇಲೆ ಇದ್ದ ಪ್ರೀತಿ ಎಷ್ಟೆಂಬುದನ್ನು ತೋರಿಸುತ್ತದೆ. ಇಂಥ ಹಂಪೆಯ ಪಂಪಾಪತಿ ವಿರೂಪಾಕ್ಷನ ಸ್ತುತಿಯಲ್ಲಿನ ವಿಶ್ವವಿಶಾಲವಾದ  ದೈವತ್ವದ ಕಲ್ಪನೆಯಿಂದ ಮೊದಲಾಗುವ ಹರಿಶ್ಚಂದ್ರ ಕಾವ್ಯ ‘ಹರನೆಂಬುದೇ ಸತ್ಯ, ಸತ್ಯವೆಂಬುದೆ ಹರನು’ -ಎನ್ನುವ ಶ್ರುತಿ ವಾಕ್ಯವನ್ನು ಬದುಕಿ ತೋರಿಸಿದವನ ಚಾರಿತ್ರ್ಯದ ಕಥನವಾಗಿದೆ. “ಒಟ್ಟಿನಲ್ಲಿ ಹರಿಶ್ಚಂದ್ರ ಕಾವ್ಯ ರಾಘವಾಂಕನ ಮಹಾಕೃತಿ, ಅವನ ಧಾರ್ಮಿಕತೆಯನ್ನು ಮೀರಿ ಬಂದ ಅಲೌಕಿಕವಾದ ಲೌಕಿಕ ಕಾವ್ಯ, ಕನ್ನಡಕ್ಕೆ ಹಾಗೂ ಭಾರತೀಯ ವಾಙ್ಮಯಕ್ಕೆ ಅವನ ವಿರಳವಾದ ಕೊಡುಗೆ.”[18]
ಅನುರಣನ (೧೯೭೮)
* * *

[1] ಈ ಲೇಖನದಲ್ಲಿ ಉದ್ದಕ್ಕೂ, ಶ್ರೀ ಎನ್. ಬಸವಾರಾಧ್ಯ ಮತ್ತು ಪಂಡಿತ ಎಸ್. ಬಸಪ್ಪ ಅವರಿಂದ ಸಂಪಾದಿತವಾದ ‘ಹರಿಶ್ಚಂದ್ರ ಕಾವ್ಯ’ದಿಂದ ಪದ್ಯಗಳನ್ನು ಉದಾಹರಿಸಲಾಗಿದೆ.
[2] ಡಾ. ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ ಪು. ೧೮೩.
[3] ವಿ. ಸೀತಾರಾಮಯ್ಯ : ಸತ್ಯ ಮತ್ತು ಮೌಲ್ಯ, ಪು. ೨೨.
[4] ಡಾ. ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೧೮೩.
[5] ಈ ಹೇಳಿಕೆ ಹುಟ್ಟಿನಿಂದ ‘ಹೊಲೆಯ’ ಕುಲದಲ್ಲಿ ಹುಟ್ಟಿದವನೂ ಸತ್ಯವಂತನಾಗಿ ಬದುಕಿದರೆ ‘ಉನ್ನತ ಯತಿವರನು’ ಎಂಬ ವಿಶಾಲವಾದ ಅರ್ಥವನ್ನು ಕೊಡುವುದಾದರೂ, ರಾಘವಾಂಕನ ಅಭಿಪ್ರಾಯ ಹೀಗೂ ಇತ್ತೆಂಬುದು ನಮ್ಮ ಊಹೆ ಮಾತ್ರವಾಗುವ ಸಂಭವವಿದೆ. ಮಾದಾರಚನ್ನಯ್ಯನಂಥವರನ್ನು ಕುರಿತು ರಗಳೆಯನ್ನು ಬರೆದ ಹರಿಹರ ಮಾದಾರ ಚೆನ್ನನನ್ನು ಶಿವಭಕ್ತರ ನೆಲೆಗೆ ಏರಿಸಿರುವುದನ್ನು ಇಲ್ಲಿ ನೆನೆಯಬಹುದು.
[6] ‘ಮೇಲಾರು ಕೀಳಾರು’ -ಎಂಬ ಪ್ರಶ್ನೆಯನ್ನು ಹುಟ್ಟಿನಿಂದ ಹೊಲೆಯನಾದ ವೀರಬಾಹುಕನ ಬಾಯಲ್ಲೆ ಆಡಿಸಿ ‘ಹೊಲೆಹುಸಿಯ ಹೊರುವವಂ ಹೊಲೆಯನಲ್ಲದೆ ಬಳಿಕ್ಕಾರು?’- ಎಂಬ ಉತ್ತರವನ್ನು ಕೊಡಿಸಿರುವುದು (೧೧-೨೦,೨೧) ಗಮನಿಸಬೇಕಾದ ಸಂಗತಿ.
[7] ರಾಘವಾಂಕ ತನಗೆ ಆಕರವಾದ ದೇವಿಭಾಗವತ, ಮಾರ್ಕಂಡೇಯ ಪುರಾಣಗಳಲ್ಲಿ ಇಲ್ಲದ ಗಾಣಗಾತಿ ಹೊಲತಿಯರ ಪ್ರಸಂಗವನ್ನು ಹೊಸದಾಗಿ ಹರಿಶ್ಚಂದ್ರ ಕಾವ್ಯದಲ್ಲಿ ನಿರ್ಮಿಸಿಕೊಂಡದ್ದರ  ಉದ್ದೇಶವೇನಿರಬಹುದು ಎನ್ನುವುದು ಪ್ರಶ್ನೆ. ‘ಸತ್ಯದ ಘನತೆಯನ್ನು ಲೋಕಕ್ಕೆ ಎತ್ತಿ ತೋರಿಸುವ ಸದುದ್ದೇಶದಿಂದಾಗಲಿ, ವಸಿಷ್ಠನ ಮೇಲಣ ಹಠ ಕೋಪಗಳಿಂದಾಗಲಿ, ಹರಿಶ್ಚಂದ್ರನಿಂದ ಆಡಿದ ಮಾತನ್ನು ತಪ್ಪಿಸಬೇಕೆಂಬ ಪ್ರಯತ್ನದಲ್ಲಿ ಈ ಚಾಂಡಾಲ ವೃತ್ತಾಂತಕ್ಕೆ ಔಚಿತ್ಯವಾಗಲಿ ಅವಶ್ಯಕತೆಯಾಗಲಿ ಇಲ್ಲ’ ಎಂದು ಹರಿಶ್ಚಂದ್ರ ಕಾವ್ಯ ಸಂಗ್ರಹದ ಸಂಪಾದಕರು (ಪೀಠಿಕೆ xvii) ಅಭಿಪ್ರಾಯ ಪಡುತ್ತಾರೆ. ಆದರೆ ನಮಗೆ ತೋರುವ ಮಟ್ಟಿಗೆ ಈ ಪ್ರಸಂಗಕ್ಕೆ ತೀರಾ ಔಚಿತ್ಯವಿದೆ. ಒಂದು, ಕಥೆಯ ದೃಷ್ಟಿಯಿಂದ; ಮತ್ತೊಂದು, ಹೊಲೆತನದ ಪ್ರಶ್ನೆಯನ್ನು ಈ ಕೃತಿಯಲ್ಲಿ ರಾಘವಾಂಕ ತಾತ್ವಿಕವಾಗಿ ಚರ್ಚಿಸಿದ್ದಾನೆ ಎಂಬ ದೃಷ್ಟಿಯಿಂದ. ಮೊದಲನೆಯದಾಗಿ, ಈ ಗಾಣಗಾತಿಯರ ಪ್ರಸಂಗವಿಲ್ಲದೆ ಹೋಗಿದ್ದಲ್ಲಿ, ವಿಶ್ವಾಮಿತ್ರನ ತಂತ್ರ ಕೌಶಲ್ಯವೂ, ವಿಶ್ವಾಮಿತ್ರನಿಗೆ ಹರಿಶ್ಚಂದ್ರನು ರಾಜ್ಯ ಸಮಸ್ತವನ್ನು ಒಪ್ಪಿಸುವ ನಿರ್ಬಂಧಕ್ಕೆ ಒಳಗಾದದ್ದು ಹೇಗೆ ಎನ್ನುವುದಕ್ಕೆ ಕಲಾತ್ಮಕವಾದ ಉತ್ತರವೂ, ದೊರೆಯುತ್ತಿರಲಿಲ್ಲ. ಎರಡನೆಯದಾಗಿ ಹರಿಶ್ಚಂದ್ರನ ಕುಲದ ಹೆಮ್ಮೆಗೆ ಪ್ರಥಮ ಆಹ್ವಾನವನ್ನೊಡ್ಡುವುದು, ಅವನ ವಂಶಪ್ರಜ್ಞೆಯ ನಿರಸನಕ್ಕೆ ನಾಂದಿಯಾಗುವುದು ಈ ಪ್ರಸಂಗವೇ.
[8] ಈ ಮಾತುಗಳು ಗಾಣಗಾತಿಯರ ಸಂದರ್ಭದಲ್ಲಿ, ಮಾತಿಗೆ ಮಾತು ಕೊಡುವ ಚಮತ್ಕಾರದಲ್ಲಿ ಮತ್ತು ರಾಘವಾಂಕನ ಕಾವ್ಯ ಸಂದರ್ಭದಲ್ಲಿ ಹೇಗೋ ತಳ್ಳಿಕೊಂಡು ಹೋಗುತ್ತವಾದರೂ, ನಮ್ಮ ಸಮಕಾಲೀನ ಸಾಮಾಜಿಕ ಸಂದರ್ಭದಲ್ಲಿ ಈ ಮಾತುಗಳು ಅಸ್ಪ ಶ್ಯರನ್ನು ಕುರಿತ ಅವಮಾನಾಸ್ಪದವಾದ ಟೀಕೆಯಾಗುತ್ತವೆ ಎನ್ನುವುದನ್ನು ಗಮನಿಸಬೇಕು. ಈ ದಿನ ಈ ಮಾತುಗಳನ್ನು ನಾವು ಯಾರೂ ಒಪ್ಪಲು ಸಾಧ್ಯವಿಲ್ಲ.
[9] ವಿಶ್ವಾಮಿತ್ರ ನಿರ್ಮಿಸಿದ ಈ ಕನ್ಯೆಯರು, ಹೊಲತಿಯರಾಗಿಲ್ಲದೆ ಹೋಗಿದ್ದರೆ, ಹರಿಶ್ಚಂದ್ರ ಇವರನ್ನು ಮದುವೆಯಾಗಲು ಒಪ್ಪುತ್ತಿದ್ದನೇ- ಎಂಬ ಪ್ರಶ್ನೆ ಏಳಬಹುದು. ವಿಶ್ವಾಮಿತ್ರ ಇವರು ನನ್ನ ನಂದನೆಯರು ಎಂದಾಗ, ಅವರನ್ನು ‘ಹೊಲತಿ’ಯರು ಎಂದು ಹರಿಶ್ಚಂದ್ರ ಭಾವಿಸುವುದು ಸರಿಯೆ- ಎಂಬುದೂ ಇನ್ನೊಂದು ಪ್ರಶ್ನೆ.
[10] ನಾವು ಆಗಲೆ ಹೇಳಿರುವಂತೆ ರಾಘವಾಂಕ ಈ ಪ್ರಶ್ನೆಯನ್ನು ಚರ್ಚಿಸುವುದು ತಾತ್ವಿಕ ದೃಷ್ಟಿಯಿಂದಲೆ  ಹೊರತು, ಸಾಮಾಜಿಕ ದೃಷ್ಟಿಯಿಂದ ಅಲ್ಲ. ಹರಿಶ್ಚಂದ್ರ ತನ್ನ ಸತ್ಯ ಸಾಧನೆಯಲ್ಲಿ, ಅಧಿಕಾರ, ಐಶ್ವರ್ಯ, ಕುಲದ ಹಮ್ಮು, ಮಡದಿ-ಮಕ್ಕಳು ಎಲ್ಲರನ್ನೂ ಕಳೆದುಕೊಳ್ಳುವುದು-ವ್ಯಕ್ತಿತ್ವ ತನ್ನ ಒಂದೊಂದೇ ಆವರಣಗಳನ್ನು ಕಳಚಿಕೊಂಡು ‘ಬತ್ತಲಾಗುವ’ ಕ್ರಿಯೆಯನ್ನು ಸಮರ್ಥವಾಗಿ ಸಂಕೇತಿಸುತ್ತದೆ. ಹೀಗೆ ಕುಲದ ಹೆಮ್ಮೆಯನ್ನು ಕಳಚುವ ಕ್ರಿಯೆಗೆ, ಗಾಣಗಾತಿಯರ, ವೀರಬಾಹುಕನ ಪ್ರಸಂಗ ಸಹಾಯಕವಾಗಿದೆ. ಆದರೆ ವಚನಕಾರರ ವಿಚಾರಕ್ರಾಂತಿಯ ನಂತರ ಬಂದ ರಾಘವಾಂಕ, ತನ್ನ ಕಥಾನಾಯಕನಲ್ಲಿ ವಚನಕಾರರು ಹೊಲೆತನದ ಬಗ್ಗೆ ತಳೆದ ನಿಲುವನ್ನು ಆತನ ವ್ಯಕ್ತಿತ್ವದ Pಟ್ಟಕಡೆಯ ಘಟ್ಟದಲ್ಲಾದರೂ ಚಿತ್ರಿಸದೆ ಹೋದದ್ದು ಆಶ್ಚರ್ಯ ಹಾಗೂ ವಿಷಾದದ ಸಂಗತಿಯಾಗಿದೆ.
[11] ವಿಶೇಷ ವಿವರಗಳಿಗೆ, ಇದೇ ಲೇಖಕರ ‘ಸತ್ಯಸಾಧಕ ಹರಿಶ್ಚಂದ್ರ’ ಎಂಬ ಲೇಖನವನ್ನು ನೋಡಬಹುದು.
[12] ‘ಹರಿಶ್ಚಂದ್ರ ಕಾವ್ಯ ಸಂಗ್ರಹ’: ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಪೀಠಿಕೆ (ಪು.xivi)
[13] ವಸಿಷ್ಠ ವಿಶ್ವಾಮಿತ್ರರ ಐತಿಹಾಸಿಕ ಸ್ಪರ್ಧೆಯನ್ನೂ, ರಾಘವಾಂಕ ತನ್ನ ಕಾವ್ಯದಲ್ಲಿ ತಕ್ಕಮಟ್ಟಿಗೆ ತಂದಿದ್ದಾನೆ. ವಸಿಷ್ಠನು ಹರಿಶ್ಚಂದ್ರನ ಗುರುವೆಂದೂ, ಹರಿಶ್ಚಂದ್ರನಿಂದ ವಸಿಷ್ಠ ಸಾಕಷ್ಟು ಧನವನ್ನು ಪಡೆದವನೆಂದೂ (೨-೯:೮-೭), ಒಂದು ವೇಳೆ ಹರಿಶ್ಚಂದ್ರನ ಪರವಾಗಿ ವಸಿಷ್ಠನೇ ಸ್ಪರ್ಧಿಯಾಗಿ ನಿಂತರೂ ಅವನನ್ನು ತಾನು ಮುರಿಯುವೆನೆಂದೂ (೮-೧೫) ವಿಶ್ವಾಮಿತ್ರ ಹೇಳುವ ಮಾತಿನಲ್ಲಿ ಇದು ಕಾಣುತ್ತದೆ.
[14] ಈ ತಿರುವಿನಿಂದ ‘ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ವೆಂದು ಸಮಾಧಾನ ಮಾಡಿಕೊಳ್ಳುವ ಜಟ್ಟಿಯಂತೆ ತೋರುತ್ತಾನೆ ವಿಶ್ವಾಮಿತ್ರ.
[15] ಡಾ. ಜಿ.ಎಸ್. ಶಿವರುದ್ರಪ್ಪ : ‘ಕನ್ನಡ ಕವಿಗಳ ಭಾಷಾಪ್ರಜ್ಞೆ’ : ಸಾಧನೆ, (ತ್ರೆ ಮಾಸಿಕ : ಬೆಂಗಳೂರು ವಿಶ್ವವಿದ್ಯಾಲಯ) ೩-೧ ಪು. ೩೧.
[16] ಅಲ್ಲೇ ಪು. ೩೧.
[17] ಎಸ್.ವಿ. ರಂಗಣ್ಣ, ಶೈಲಿ ೧-೨-೩ : ಪು. ೨೦೭.
[18] ಡಾ. ರಂ.ಶ್ರೀ. ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪು. ೧೮೪.

ಕಾಮೆಂಟ್‌ಗಳಿಲ್ಲ: