ಹಾಡು ಹಕ್ಕಿಗಳೆ ಹಾರಿ ಬಾನಿಗೆ
ಮರದ ಗೂಡಿನಿಂದ ;
ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ
ಒಳಗಿನ ಆನಂದ.
ಕಣ್ಣ ಪಡೆದಿರಿ ಬಣ್ಣ ಪಡೆದಿರಿ
ರೆಕ್ಕೆ ಪುಕ್ಕ ಮಾಟ ;
ಕಾಲು ಬಲಿಯಿತು ಕಾಲ ಸಂದಿತು
ಇನ್ನು ಹಾರುವಾಟ.
ದಾರಿ ದಾರಿಯಲಿ ರೆಂಬೆ ರೆಂಬೆಯಲಿ
ಕುತೂ ರಾಗ ಹಾಡಿ ;
ದಾರಿ ಸಾಗುವಾ ದಣಿದ ಜೀವಕೆ
ಕೊಂಚ ಮುದವ ನೀಡಿ.
ನಿಮ್ಮ ದನಿಯ ಆನಂದ ಚಿಮ್ಮಲಿ
ಕೇಳಿದವರ ಎದೆಗೆ ;
ಯಾವ ಹಕ್ಕಿ ಇವು, ಬಂದುದೆಲ್ಲಿಂದ
ಎಂಬ ಬೆರಗು ಕವಿಯೆ.
೨.ನಾನೆನುವುದು ಏನಿದೆ.
ನಾನೆನುವುದು ಏನಿದೆ
ನೀ ಎನುವುದು ಇರದೆ ?
ನನ್ನಿಂದಲೆ ನಾ ಎನ್ನುವುದು
ಸುಳ್ಳಲ್ಲದೆ ಬರಿದೆ ?
ಮರವಿದ್ದೂ ಒಳಗೆ
ಕೊಡಲಾರದು ಬೀಜ
ಜೊತೆಗೂಡದೆ ನೀರು ಮಣ್ಣು
ಗಾಳಿ ಸೂರ್ಯತೇಜ
ಕಡಲ ಹಂಡೆ ಕಾಯದೆ
ಮೈ ಪಡೆಯಿತೆ ಮುಗಿಲು ?
ನೆಲಕಿಳಿಯದೆ ಮುಗಿಲು
ತಲೆದೂಗಿತೆ ಪಯಿರು ?
ತಿರುಗುತ್ತಿವೆ ಗ್ರಹಗಳು
ಉರಿಯುತ್ತಿವೆ ತಾರೆ
ನಿಂತರೊಂದು ಗಳಿಗೆ
ಸಾವೇ ಈ ತಿರೆಗೆ
ಋಣ ತುಂಬಿದ ಗಣಿಯೊ
ನಮ್ಮದೆನ್ನುವ ಬಾಳು
ಸ್ಮರಿಸಿ ಎಲ್ಲ ಸಾಲ
ಕೃತಜ್ಞತೆಯ ಹೇಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ