೧. ತುಂಬಿ ಬಂದಿತ್ತು

ಬಸವಣ್ಣನ ಜೀವನದ ಕೊನೆಯ ದಿನಗಳಿಗೆ ಸಂಬಂಧಿಸಿದಂತೆ, ಬೇಂದ್ರೆಯವರು ’ತಲೆದಂಡ’ ಎನ್ನುವ ನಾಟಕವನ್ನು ರಚಿಸಿದ್ದರು. ಬಸವಣ್ಣನವರ ಸಮಾಧಿಯ ಕೆಲಸ ನಡೆದಿರುವಾಗ ಅಲ್ಲಿಗೆ ಬಂದ ಮುದುಕ ಜಂಗಮನೊಬ್ಬನು ಈ ಹಾಡನ್ನು ಹೇಳುವನು.
ಈ ಹಾಡನ್ನು ಸ್ವತಃ ಬೇಂದ್ರೆಯವರೇ ಏಕತಾರಿಯ ಹಿನ್ನೆಲೆಯಲ್ಲಿ ೧೯೪೭ರಲ್ಲಿ ಹಾಡಿದ್ದರು. ಅದು HMV ಕಂಪನಿಯಿಂದ ಮುದ್ರಿತವಾಯಿತು.
ಅನೇಕ ವರ್ಷಗಳ ನಂತರ, ಗಿರೀಶ ಕಾರ್ನಾಡರು ಬಸವಣ್ಣನ ಬಗೆಗೆ ತಾವೂ ಒಂದು ನಾಟಕ ರಚಿಸಿದರು ಹಾಗೂ ಬೇಂದ್ರೆಯವರ ಅನುಮತಿಯನ್ನು ಪಡೆದುಕೊಂಡು ತಮ್ಮ ನಾಟಕಕ್ಕೆ ‘ತಲೆದಂಡ’ ಎಂದು ಹೆಸರು ಕೊಟ್ಟರು.
ಕವನದ ಪೂರ್ತಿಪಾಠ ಹಿಗಿದೆ:
……………………………………………………………..
ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು ||ಪಲ್ಲವಿ||


ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……


ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……


ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳಿಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್……
…………………………………………………………………………………….
ಬೇಂದ್ರೆಯವರು ರಚಿಸಿದ ಈ ಕವನಕ್ಕೆ ಬಸವಣ್ಣನಿಂದ ಹಾಗೂ ಅಲ್ಲಮಪ್ರಭುವಿನಿಂದ ಪ್ರೇರಣೆ ದೊರೆತಿರಬಹುದು.
ಬಸವಣ್ಣನವರೇ ರಚಿಸಿದ ವಚನವೊಂದು ಹೀಗಿದೆ:

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ.

ಅಲ್ಲಮಪ್ರಭುವಿನ ವಚನ ಈ ರೀತಿಯಾಗಿದೆ:

ಗಿಡದ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ!
ಆತುಮ ತುಂಬಿ ತುಂಬಿ ನೋಡಾ!
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!!

ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ನವೋದಯ ಕಾಲದ ಸಾಹಿತಿಯಾದ ಮಧುರಚೆನ್ನರನ್ನು ಕನ್ನಡದಲ್ಲಿ ಶ್ರೇಷ್ಠ ಅನುಭಾವಸಾಹಿತ್ಯವನ್ನು ನೀಡಿದವರೆಂದು ಗುರುತಿಸಬಹುದು.

ಅಲ್ಲಮಪ್ರಭುವಿನ ವಚನವು ಗಿಡವನ್ನು ಪ್ರಪಂಚಕ್ಕೆ ಹಾಗೂ ಗಿಡದ ಮೇಲಿರುವ ತುಂಬಿಯನ್ನು ಆತ್ಮಕ್ಕೆ ಹೋಲಿಸುತ್ತದೆ. ಆತ್ಮದ ವಿಕಸನ ಹಾಗೂ ಪರಮಾತ್ಮದ ಆನಂದವನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ಬಣ್ಣಿಸಿದ್ದಾರೆ.

ಬೇಂದ್ರೆಯವರು ತಮ್ಮ ಕವನದಲ್ಲಿ ಬಸವಣ್ಣ ಹಾಗೂ ಅಲ್ಲಮಪ್ರಭುವಿನ ವಚನಗಳಲ್ಲಿಯ ತುಂಬಿಯ ಹೋಲಿಕೆಯನ್ನು ಅನುಕರಿಸಿಲ್ಲ. ಆದರೆ ಆ ಪದವನ್ನು ಬಳಸುವದಕ್ಕೆ ಈ ವಚನಗಳಿಂದ ಪ್ರೇರಣೆಯನ್ನು ಪಡೆದಿರಬಹುದು.

ವೀರಶೈವ ಆಂದೋಲನ ಜಗತ್ತಿನ ಅತ್ಯಂತ ಮಹತ್ವದ ಆಂದೋಲನಗಳಲ್ಲಿ ಒಂದು. ಇದರ ಕಾರ್ಯಕ್ಷೇತ್ರ ಕನ್ನಡ ನಾಡಾಗಿತ್ತಷ್ಟೆ. ಈ ಆಂದೋಲನದ ಕೇಂದ್ರವ್ಯಕ್ತಿಯಾದ ಬಸವೇಶ್ವರರ ಬಗೆಗೆ ಶರಣರಿಗೆ ಇದ್ದಂತಹ ಭಾವನೆಗಳನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ.
ಆಧುನಿಕ ಕಾಲದಲ್ಲಿ ಮಹಾತ್ಮಾ ಗಾಂಧಿಯವರು ‘ಅಹಿಂಸಾಮೂರ್ತಿ’ ಎಂದು ಗುರುತಿಸಲ್ಪಟ್ಟಿದ್ದರು. ಅದರಂತೆ ವೀರಶೈವ ಆಂದೋಲನದ ಕಾಲದಲ್ಲಿ ಬಸವಣ್ಣನವರು ಯಾವ ರೀತಿಯಲ್ಲಿ ಗುರುತಿಸಲ್ಪಟ್ಟಿದ್ದರು? ಬೇಂದ್ರೆಯವರು ಜಂಗಮನೋರ್ವನ ಹಾಡಿನ ಮೂಲಕ ಕಲ್ಯಾಣದ ಜನರ ಮನೋಭಾವಗಳನ್ನು ತೋರಿಸಿದ್ದಾರೆ. ಈ ಹಾಡಿನ ಮೂರು ನುಡಿಗಳಲ್ಲಿ ಆ ಜಂಗಮನು ಬಸವಣ್ಣನವರ ವ್ಯಕ್ತಿತ್ವವನ್ನು, ಸಾಧನೆಯನ್ನು ಹಾಗೂ ಅವರ ಕೊನೆಯನ್ನು ವರ್ಣಿಸುತ್ತಾನೆ.
ಮೊದಲನೆಯ ನುಡಿಯನ್ನು ನೋಡಿರಿ:

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……

ಬಸವಣ್ಣನವರು ಕನ್ನಡನಾಡು ಕಂಡ ಮಹಾಪುರುಷರು. ಅಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಇವರದು ಮಹತ್ತಮ ವ್ಯಕ್ತಿತ್ವ. ಬಸವಣ್ಣನವರ ಒಳಗೆ ಅರಳಿದ ಸೂಕ್ಷ್ಮ ದೈವೀ ಚೈತನ್ಯವನ್ನು ಬಣ್ಣಿಸಲು ನಿಸರ್ಗದ ಚೈತನ್ಯಗಳಾದ ಬೆಳಕು, ಗಾಳಿ ಹಾಗೂ ಗಂಗೆ ಇವುಗಳನ್ನೇ ಪ್ರತೀಕಗಳಾಗಿ ಬಳಸುವದು ಸಹಜ. ಆದುದರಿಂದಲೇ ಇಲ್ಲಿ ಹಾಡುತ್ತಿರುವ ಜಂಗಮನು ಈ ಸೂಕ್ಷ್ಮ ಚೈತನ್ಯವು ಬೆಳಕಿಗಿಂತಲೂ ಬೆಳ್ಳಗೆ ಇತ್ತು ಹಾಗೂ ಗಾಳಿಗಿಂತಲೂ ತೆಳ್ಳಗೆ ಇತ್ತು ಎಂದು ಬಣ್ಣಿಸುತ್ತಿದ್ದಾನೆ. ಬೆಳಕು ಜ್ಞಾನವನ್ನು ಕೊಡುತ್ತದೆ, ಗಾಳಿ ನಿಮಗೆ ತಿಳಿಯದಂತೇ ನಿಮ್ಮನ್ನು ಆವರಿಸುತ್ತದೆ ಹಾಗು ನಿಮ್ಮ ಪ್ರಾಣಕ್ಕೆ ಆಧಾರವಾಗಿದೆ. ಗಂಗೆ ಜೀವಿಗಳ ಕೊಳೆಯನ್ನು ತೊಳೆದು ಅವರನ್ನು ಪಾವನಗೊಳಿಸುವಳು. ಬಸವಣ್ಣನವರ ಲೋಕಕಲ್ಯಾಣಕರ ವ್ಯಕ್ತಿತ್ವವು ಬೆಳಕು, ಗಾಳಿ ಹಾಗೂ ಗಂಗೆಯಂತೆ ಪರಿಶುದ್ಧವಾಗಿದೆ, ಅಲ್ಲದೆ ಸಮಾಜಕ್ಕೆ ಒಳಿತನ್ನು ಮಾಡಿದೆ. ಈ ರೂಪಕವು ಬಸವಣ್ಣನವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ವರ್ಣಿಸುವಂತೆ, ಅವರ ಸಾಮಾಜಿಕ ವ್ಯಕ್ತಿತ್ವವನ್ನೂ ಸಹ ವರ್ಣಿಸುತ್ತದೆ.

ಬಸವಣ್ಣನವರ ಒಳಗಿದ್ದ ದೈವೀ ಚೈತನ್ಯವು ಶಿವನ ಜಡೆಯಲ್ಲಿದ್ದ ಗಂಗೆ ಧುಮ್ಮಿಕ್ಕುವಂತೆ ಬಸವಣ್ಣನವರ ಸೂಕ್ಷ್ಮ ನಾಡಿಗಳಲ್ಲೆಲ್ಲ ಧುಮುಕಿ, ಅವರನ್ನು ಅಡಿಯಿಂದ ಮುಡಿಯವರೆಗೆ ಶಿವಮಯವನ್ನಾಗಿಸಿತು. ಅವರ ವ್ಯಕ್ತಿತ್ವವು ಈ ದೈವೀ ಚೈತನ್ಯದಿಂದ ತುಂಬಿಕೊಂಡಿತು.

ಎರಡನೆಯ ನುಡಿಯಲ್ಲಿ ಬಸವಣ್ಣನವರ ಈ ಮಹಾಚೈತನ್ಯವು ಯಾವ ರೀತಿಯಲ್ಲಿ ಜನರನ್ನು, ಶರಣರನ್ನು ಪ್ರಭಾವಿಸುತ್ತಿತ್ತು ಎನ್ನುವದನ್ನು ಹೇಳಲಾಗಿದೆ:

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು || ತುಮ್ ತುಮ್……

ಬೆಳಕು, ಗಾಳಿ ಹಾಗೂ ಗಂಗೆ ಇವು ನಕಾರಾತ್ಮಕ ಗುಣಗಳನ್ನು ನಿವಾರಿಸುತ್ತವೆ. ಅಷ್ಟಾದರೆ ಸಾಕೆ? ಸಕಾರಾತ್ಮಕ ಗುಣಗಳೂ ಸಹ ಬೇಕಲ್ಲವೆ? ಎರಡನೆಯ ನುಡಿಯಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ರೀತಿಯನ್ನು ಹೇಳಲಾಗಿದೆ. ಹೂವಿನ ಕಂಪಿನಂತೆ, ಹಾಡಿನ ಇಂಪಿನಂತೆ ಅವರ ಆಚಾರ-ವಿಚಾರಗಳು ಜನರನ್ನು ಪ್ರಭಾವಿಸುತ್ತಿದ್ದವು.
ಅವರ ಮಾತುಗಳು ಕಾಲಹರಣದ ಮಾತುಗಳಾಗಲೀ, ಮನೋರಂಜನೆಯ ಮಾತುಗಳಾಗಲೀ ಆಗಿರಲಿಲ್ಲ. (‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ವಚನವನ್ನು ನೆನಪಿಸಿಕೊಳ್ಳಿರಿ.) ಹೃದಯದ ಒಳಗಿಂದ ಹೊರಬರುವ ನೈಜವಾದ ಮಾತುಗಳು ಅವು. ಹೀಗಾಗಿ ಅವು ಕೇಳುಗರ ಮನಕ್ಕೆ ತಟ್ಟುತ್ತಿದ್ದವು. ಹೂವಿನ ಕಂಪಿನಂತೆ ಹಾಗೂ ಹಾಡಿನ ಇಂಪಿನಂತೆ ಅವರ ಮಾತುಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದವು, ಅರಳಿಸುತ್ತಿದ್ದವು. ಬಸವಣ್ಣನವರೇ ಹೇಳಿದಂತೆ, ಅವರ ವಚನಗಳಲ್ಲಿ ನಾಮಾಮೃತ ತುಂಬಿದೆ, ಈ ಅಮೃತಪಾನ ಮಾಡುವ ತುಂಬಿ ಅವರು. ಈ ವಚನಗಳ ಕಂಪು ಹಾಗೂ ಇಂಪು ಎಲ್ಲೆಡೆ ಹರಡಿವೆ, ತುಂಬಿಕೊಂಡಿವೆ.

ಈ ನುಡಿಯಲ್ಲಿಯ ಒಂದು ಸಾಲು, “ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ” ಎನ್ನುವದು ವಿಚಿತ್ರವಾಗಿ ತೋರಬಹುದು. ವರ್ಮ ಎಂದರೆ ವಿರೋಧ ಹಾಗೂ ದ್ವೇಷ. ಬಸವಣ್ಣನವರು ಇಂತಹ ಮಾತುಗಳನ್ನು ಆಡಬಹುದೆ ಎನ್ನುವ ಸಂಶಯ ಬರಬಹುದು. ಆದರೆ ಇಂತಹ ಮಾತುಗಳು ತಪ್ಪು ನಡತೆಯವರಿಗಾಗಿ ಇರುತ್ತಿದ್ದವು.
ಉದಾಹರಣೆಗಾಗಿ:
(೧) ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಅನ್ಯರಿಗೆ ಅಸಹ್ಯಪಡಬೇಡ………………………
(೨) ಛಲ ಬೇಕು ಶರಣಂಗೆ ಪರಧನವನೊಲೆನೆಂಬ,
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ……
ಈ ವಚನಗಳು ತಪ್ಪುಗಾರರ ಎದೆಗೆ ನಟ್ಟರೆ ಆಶ್ಚರ್ಯವಿಲ್ಲ.

ಬೆಳಕಿಗೆ ಮುಖ ಮಾಡಿದ ಕಮಲವು ಅರಳಿರುವಂತೆ ಅವರದು ಜ್ಞಾನಸೂರ್ಯನಿಂದ ಅರಳಿದಂತಹ ಮನಸ್ಸು. ಆ ಕಮಲದಲ್ಲಿರುವದು ಉತ್ತಮ ವಿಚಾರ ಹಾಗೂ ಆಚಾರಗಳ ಜೇನು. ಅವರು ಸಮಾಜಕ್ಕೆ ಕೊಡುವದು ಇಂತಹ ಜೇನನ್ನು. ಈ ಪರಿಶುದ್ಧ ಆಚಾರ-ವಿಚಾರಗಳ ಇಂಪು, ಕಂಪು ಹಾಗೂ ಜೇನು ಬಸವಣ್ಣನವರ ವ್ಯಕ್ತಿತ್ವವನ್ನೆಲ್ಲ ತುಂಬಿ ಹೊರಸೂಸಿದ್ದವು ಎಂದು ಜಂಗಮನು ಹೇಳುತ್ತಿದ್ದಾನೆ.

ಮೂರನೆಯ ನುಡಿಯಲ್ಲಿ, ಬಸವಣ್ಣನವರ ಕೊನೆಯನ್ನು ವರ್ಣಿಸಲಾಗಿದೆ.

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳು ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳಿಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್……

ಬಸವಣ್ಣನವರ ಕೊನೆಯದಿನಗಳು ಸಾಮಾಜಿಕವಾಗಿ ಭಯಂಕರ ದಿನಗಳು.
ಕಾಲ ಅಂದರೆ ಎಲ್ಲವನ್ನೂ ನಾಶಗೊಳಿಸುವ ಕಾಲಪುರುಷ. ಆತನು ಎಲ್ಲ ಬಣ್ಣಗಳನ್ನೂ ನುಂಗಿಹಾಕುವ ಕಪ್ಪು ಬಣ್ಣದವನು. ಜೀವಿಗಳ ಆಪೋಶನವನ್ನು ಸಾವು ಮೌನವಾಗಿ ತೆಗೆದುಕೊಳ್ಳುತ್ತದೆ. ಆದುದರಿಂದ ’ಕಾಲಧಾಂಗ ಕಪ್ಪಗಿತ್ತ, ಸಾವಿನ್ಹಾಂಗ ತೆಪ್ಪಗಿತ್ತ’ ಎಂದು ಜಂಗಮನು ಹೇಳುತ್ತಿದ್ದಾನೆ. ಬಸವಣ್ಣನವರ ಕೊನೆಯ ದಿನಗಳಲ್ಲಿ ನಡೆದ ಸಾಮಾಜಿಕ ವಿಪ್ಲವವು ’ಹದ್ದು ಹಾವಿನ ಮೇಲೆ ಎರಗುವಂತೆ’ ಕ್ರೂರವೂ, ಕ್ಷಿಪ್ರವೂ ಆಗಿತ್ತು!
ಸಮಾಜದ ಮೇಲೆ ಮತ್ತೆ ಕತ್ತಲೆ ಆವರಿಸಿತು. ಸುಧಾರಣೆಯ ಹಗಲಿನ ಬೆಳಕು ವಿಪ್ಲವದ ಇರುಳಿನ ಮಬ್ಬಿನಲ್ಲಿ ಮತ್ತೆ ಕರಗಿತು! (ಇರುಳು ಶಾಶ್ವತವಲ್ಲ ಎನ್ನುವ ತಿಳಿವಳಿಕೆ ಇಲ್ಲಿ ಮನೋಗತವಾಗಿದೆ.)

ಸಾಮಾಜಿಕ ಹಾಗು ಆಧ್ಯಾತ್ಮಿಕ ಸುಧಾರಣೆಯಲ್ಲಿ ಬಸವಣ್ಣನವರು ಒಂದೇ ಮನಸ್ಸಿನಿಂದ ನಿರತರಾಗಿದ್ದರು. ಈ ಕ್ರಿಯೆಯನ್ನು ‘ಗುಂಗು ಹಿಡಿದು ತಂಗಿದಾಗ’ ಎಂದು ಬಣ್ಣಿಸಲಾಗಿದೆ. ಗುಂಗಿ ಹುಳವು ಅಂದರೆ ಭ್ರಮರವು ಒಂದೇ ಧ್ವನಿಯನ್ನು ಹೊರಡಿಸುತ್ತ ಹಾರುತ್ತಿರುತ್ತದೆ. ಬಸವಣ್ಣನವರದೂ ಸಹ ಅದರಂತೇ ಒಂದೇ ಧ್ವನಿ. ಅದು ಶಿವಾಚಾರದ ಧ್ವನಿ. ಶಿವಾಚಾರವನ್ನು ತುಂಬಿಕೊಂಡ ಅವರ ವ್ಯಕ್ತಿತ್ವವು ತುಂಬಿದ ಕೊಡವಾಗಿತ್ತು. ಆ ತುಂಬಿದ ಚೈತನ್ಯಜಲ ವಿಪ್ಲವ ಸಮಯದಲ್ಲಿ ತುಳುಕಿ ಹೋಯಿತು.

ಈ ಮೂರೂ ನುಡಿಗಳಲ್ಲಿ ಕೊನೆಯ ಚರಣವಾಗಿ ‘ತುಂಬಿ ಬಂದಿತ್ತು’ ಎನ್ನುವ ಪಲ್ಲವಿಯನ್ನು ಬಳಸಲಾಗಿದೆ.
ಮೊದಲನೆಯ ನುಡಿಯು ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸುವದರಿಂದ, ಅಲ್ಲಿ ‘ತುಂಬಿ ಬಂದಿತ್ತು’ ಎನ್ನುವದು ಅವರ ಪರಿಪೂರ್ಣತೆಯನ್ನು ತೋರಿಸುತ್ತದೆ.
ಎರಡನೆಯ ನುಡಿಯಲ್ಲಿ ಈ ಪರಿಪೂರ್ಣ ವ್ಯಕ್ತಿತ್ವವು ಸಾಮಾಜಿಕ ಕಾರ್ಯದಲ್ಲಿ ತುಂಬಿಕೊಂಡಿರುವದನ್ನು ತೋರಿಸುತ್ತದೆ.
ಮೂರನೆಯ ನುಡಿಯಲ್ಲಿ ತುಂಬಿ ಎನ್ನುವದು ಭ್ರಮರವನ್ನು ಹಾಗೂ ‘ತುಂಬಿ ಬಂದಿತ್ತು’ ಎನ್ನುವದು ‘ಕಾಲವು ತುಂಬಿ ಬಂದಿತ್ತು’ ಎನ್ನುವದನ್ನು ಸೂಚಿಸುತ್ತದೆ.

ಈ ಕವನದಲ್ಲಿಯ ವಿಶೇಷ ಗೂಢಾರ್ಥ:

ಬಸವಣ್ಣನು ವ್ಯಕ್ತಿಯಲ್ಲ, ಒಂದು ಅಭಿವ್ಯಕ್ತಿ ಅಲ್ಲವೇ?
"ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ" ಎನ್ನುತ್ತಾ ಬಸವಣ್ಣ ಎಂಬ ಶಕ್ತಿ ದೇಶಕಾಲಗಳನ್ನು ಮೀರಿದ ಬಗೆಗೆ (ಬೇಂದ್ರೆಯವರು) ಹೇಳುತ್ತಾರೆ..

ಅಂತೆಯೇ ಕೊನೆಯಲ್ಲಿ
"ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ" ಎಂದು ಕಾಲದ ದುರ್ನಿರೀಕ್ಷ್ಯವನ್ನೂ ಹೇಳುತ್ತಾರೆ..

ಆರಂಭ ಬೆಳಕಿನಂತೆ, ಜಟೆಯಿಂದ ಇಳಿವ ಗಂಗೆಯಂತೆ ಚುರುಕು.. ಆದರೆ ಅಂತ್ಯದಲ್ಲಿ ಬೆಳಕು ಕರಗಿದಂತೆ ಈ ಚಟುವಟಿಕೆಗಳೆಲ್ಲ ಕಳೆದು ತೆಪ್ಪಗಾಗಿ ಹೋಗುತ್ತದೆ!!!


ಹೆಚ್ಚಿನ ಓದಿಗೆ: http://sallaap.blogspot.com/2009/05/blog-post_20.html

ಕಾಮೆಂಟ್‌ಗಳಿಲ್ಲ: