ದುಂಡು ಮಲ್ಲಿಗೆ (ಕವನ ಸಂಕಲನ)
೧.ಒಳಗೆ ಬಾರೆನ್ನೊಲವೆ.
ಕದವ ತಟ್ಟದೆ, ನೇರ ಒಳಗೆ ಬಾರೆನ್ನೊಲವೆ ;
ತೆರೆದ ಬಾಗಿಲು ನಾನು ನಿನ್ನ ದನಿಗೆ.
ಹೊಂಬಿಸಿಲು ಬರುವಂತೆ ತೆರೆದ ಬಾಗಿಲಿನೊಳಗೆ
ಬಂದು ಬಿಡು ಕಾದಿರುವ ನಿನ್ನ ಮನೆಗೆ.
ಬೇಲಿಯುದ್ದಕು ಹೂವು ಸಂಜೆಗೆಂಪಾಗಿಹುದು;
ಹತ್ತು ಹನಿ ಮಳೆ ಬಿತ್ತು ಸಂಜೆಯಲ್ಲಿ,-
ನೀ ಬಂದ ದಾರಿಯನು ನಾನೀಗ ನೆನೆಯುವೆನು
ಅಚಲ ನಕ್ಷತ್ರಗಳ ಬೆಳಕಿನಲ್ಲಿ.
ನಲವತ್ತು ಚೈತ್ರಗಳ ತಳಿರ ಕನಸುಗಳಿಂದ
ಹೊಸ ಬಣ್ಣ ಬಂದಿಹುದು ನಿನ್ನ ತುಟಿಗೆ.
ಹೇಗೆ ಮರೆಯಲಿ ನಾನು ನಿನಗಿಟ್ಟ ಮುತ್ತುಗಳ ?
ಜೇನಲದ್ದಿದ ಕಮಲ ನಿನ್ನ ಕೆನ್ನೆ.
ನಿನ್ನ ನುಡಿಗಳಿಂತ ನಿನ್ನ ಕಿರುನಗೆ ಚೆಂದ ;
ಅದಕೆ ಹೊನ್ನ ಕಿರೀಟ ನಿನ್ನ ಮೌನ.
ಏಕಕಾಲದಲಿ ಹತ್ತಾರು ವಾದ್ಯಗಳಿಂದ
ಕೇಳಿ ಬದುತಿದೆ ಅದರ ಮಧುರ ಗಾನ.
ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ,-
ತುಂಬ ಸಂತಸ ನನಗೆ ನಿನ್ನ ಕಂಡು.
ಏನಂದುಕೊಳುವರೋ ಎಂಬ ಸಂಶಯ ಬೇಡ ;
ಎರಡೂ ನಿನ್ನವೇ : ಬಯಲು, ಚೆಂಡು !
೨.ಪ್ರೇಮ.
ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು ;
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣ ಸನ್ನೆಯ ಹೆಸರು ಪ್ರೇಮವೆಂದು.
ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು ;
ಮಾಲುಗಣ್ಣಿನ ಹೆಣ್ಣೆ, ನಿನ್ನ ತುಟಿಯಿಕ್ಕೆಲದ
ಮಂದಹಾಸದ ಹೆಸರು ಪ್ರೇಮವೆಂದು.
ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು ;
ಬಳಿಗೆ ಬಾರೆನ್ನವಳೆ, ಬಿಗಿದಪ್ಪಿ ಮಾತಾಡು -
ನಾನದನೆ ಕರೆಯುವೆನು ಪ್ರೇಮವೆಂದು.
ಬಾರೆನ್ನ ಮನದನ್ನೆ, ಬರಲಿ ಹತ್ತಿರ ಕೆನ್ನೆ,
ಮುತ್ತಿನಲಿ ಒಂದಾಗಲೆರಡು ಜೀವ !
ಬಾಳಿನೇರಿಳಿತಗಳ ಮುಗಿವಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ !
೩.ಒಂದು ನೆನೆಪು.
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ ;
ಎದ್ದೆ, ಹೊಸಲಿನ ತನಕ ಹೋಗಿ ಬಂದೆ .
ಕಿಟಕಿಯಾಚೆಗೆ ಒಂದು ಚೆಂಗುಲಾಬಿಯ ಕಂಡೆ -
ಅದರ ಮುಳ್ಳೂ ಕೆಂಪು ! ಒಳಗೆ ನೊಂದೆ.
ಗೋಡೆ - ಕನ್ನಡಿಯೊಳಗೆ ಒಂದು ಮುಖವನು ಕಂಡೆ ;
ಅದು ಯಾರದೆನ್ನುವುದು ತಿಳಿಯಲಿಲ್ಲ.
ಅಳಿಲು ಕಚ್ಚಿದ ಕೆಂಪು ದಾಳಿಂಬೆ ಹಣ್ಣಿನಲಿ
ಬಿತ್ತವಿಲ್ಲದ ಹಳದಿ ಗೂಡ ಕಂಡೆ.
ಚೈತ್ರ ಮಾಸದ ಕನಸ ಕಂಡೆ ಆಷಾಡದಲಿ ;
ಚಿಕ್ಕ ಮಕ್ಕಳ ಕಂಡೆ ಹಸಿರ ನಡುವೆ ;
ಕೊಳದ ಕೆಂದಾವರೆಯ ಬಿರಿದ ಮೊಗ್ಗನು ಕಂಡೆ ;
ಮಂದಹಾಸವ ಕಂಡೆ. ನಿನ್ನ ನೆನೆದು.
ನೀನಿರದ ಹುಣ್ಣಿಮೆಯ ನಕ್ಷತ್ರ ಮೌನದಲಿ
ನನ್ನ ವಿರಹಾಗ್ನಿಯನು ಹಾಡಿಕೊಂಡೆ.
ನನ್ನ ಪಾಡಿಗೆ ನನ್ನ ಬಿಡಲು ಒಪ್ಪದ ಲೋಕ
ನನ್ನ ಕಣ್ಣಿಗೆ ಬಂತು ಹನಿಗಳಂತೆ.
ಬಂತು ನೆನಪಿಗೆ ಹಸೆಯ ಮಣೆಯಲ್ಲಿ ನೀನಂದು
ಕರವಸ್ತ್ರವನು ನನಗೆ ಕೊಟ್ಟ ನೆನಪು.
ಒಲವೆಂದರೇನೆಂದು ಕೇಳಲಿಲ್ಲವೆ ನೀನು ?
ಕೇಳಿದಂತೆಯೆ ನನಗೆ ಈಗ ನೆನಪು.
೪.ನಾಡಿನ ಏಕತೆ.
ಒಂದೆ ಸೂರಿನ ಕೆಳಗೆ ಇರುಳನ್ನು ಕಳೆದವರೆ,
ಒಂದೆ ಬಯಲಿಗೆ ಬಂದ ಜತೆಗಾರರೆ,
ಕಷ್ಟ ಕಾರ್ಪಣ್ಯಗಳ ದಾಟುತ್ತ ನಕ್ಕವರೆ,
ಬಾಳಿನೇರಿಳಿತಗಳಿಗಂಜದೆ,
ಏಕೆ ತಡಮಾಡುವಿರಿ? ಬನ್ನಿ ಜೀವನವೊಂದು;
ಮೈ ಬೇರೆಯಾದರೂ ಮನವು ಒಂದೆ,
ಭಾಷೆ ತಿಳಿಯದು ಎಂದು ದೂರ ಸರಿಯುವಿರೇಕೆ?
ಹೃದಯಕ್ಕೆ ತಲಪುವುದು ಎಲ್ಲ ಭಾಷೆ.
ಅಡ್ಡ ಗೋಡೆಗಳನ್ನು ಒಡೆದು ಮುಂದಕೆ ಬನ್ನಿ;
ಬೇಲಿಗಳ ಬಾಗಿಲನು ತಳ್ಳಿ ಬನ್ನಿ.
ಬನ್ನಿ ತೆರವಿಗೆ; ಬಂದು ಅಣಿಯಾದ ತಾಣದಲಿ
ಗೂಡ ಕಟ್ಟಿರಿ ನಾಡ ಸೆರಗಿನಲ್ಲಿ.
ಬರಲಿ ಯಾರೆಲ್ಲಿಂದ, ಕೂಗಿ 'ಅಣ್ಣಾ!' ಎಂದು
ಕೈಕುಲುಕಿ ಉಭಯ ಕುಶಲೋಪರಿಯಲಿ.
ಉತ್ತರವೊ ದಕ್ಷಿಣವೊ ಬರಿಯ ದಿಕ್ಕಿನ ಹೆಸರು.
ಒಲವು ಕರೆಯುತ್ತಲಿದೆ ಮನೆ ಮನೆಯಲಿ.
ಬೇರೆ ಎನ್ನುವ ಪದದ ಬೇರ ಕಿತ್ತೆಸೆದು ಬಿಡಿ;
ಎಲ್ಲರೊಂದೇ ಎನ್ನುವುದೊಂದೇ ಮಂತ್ರ.
ಆ ಮಕ್ಕಳೀಮಕ್ಕಳೊಂದಾಗಿ ನಗಲಿ ಬಿಡಿ;
ದೂರವಾಗಲಿ ಬೇರೆ ಎಂಬ ತಂತ್ರ!
ವೇಷ ಭೂಷಣ ಬೇರೆ ಬೇರೆ; ಒಳಗಿನ ಉಸಿರು
ಎಲ್ಲೆಲ್ಲು ಒಂದೆ; ಇದು ನಮ್ಮ ನಿಲುವು.
ದೂರದೂರುಗಳಿಂದ ನಮ್ಮೆಡೆಗೆ ಬಂದವರು
ನಮ್ಮ ಬಂಧುಗಳೆಂದು ತಿಳಿಯಬೇಕು.
ಉತ್ತರ ಗಡಿ ನಮಗೆ ಹಿಮಾಚಲವೆ;
ಉಳಿದ ಕಡೆಗಳಲಿಹುದು ನೀಲಿಗಡಲು.
ಕೇಳಿಬರುತಿದೆ ನಾಡ ಹಾಡು ಆಗಸದೊಳಗೆ.
ಸಸ್ಯಶಾಮಲೆ ನಮ್ಮ ತಾಯಿನಾಡು.
ಎಲ್ಲರೂ ಎಲ್ಲರೊಳಿತಿಗೆ ದುಡಿವುದೇ ಧರ್ಮ;
ಈ ನಾಡಿನೇಕತೆಗೆ ಶ್ರಮಿಸ ಬನ್ನಿ.
ಕಣ್ಣ ತುಂಬಲಿ ನಾಡಿನೇಕತೆಯ ಶುಭಚಿತ್ರ;
ತಾಯಡಿಗೆ ಹೂವಿಡಲು ಮುಂದೆ ಬನ್ನಿ!
೫.ಯಾವ ಕಾಲದಲಿ ಯಾರು ನಕ್ಕರೋ.
ಯಾವ ಕಾಲದಲಿ ಯಾರು ನಕ್ಕರೋ
ನೀನು ನಕ್ಕ ಹಾಗೆ ?
ಎಷ್ಟು ನೋವುಗಳ ನುಂಗಿಕೊಂಡರೋ
ನಕ್ಕ ಒಂದು ಗಳಿಗೆ !
ಬೇಡವೆಂದರೂ ಏಕೆ ನಗುವೆಯೋ
ತಿಳಿಯಲಿಲ್ಲ ನನಗೆ.
ಬಾಳಹಾದಿಯಲಿ ಹೇಗೆ ಚಿಗುರಿತೋ
ನೋವು ನಲಿವಿನೊಡನೆ ?
ಜ್ವಾಲೆಯಂತೆ ನಗೆ ಹೇಗೆ ಹಬ್ಬಿತೋ
ತುಟಿಯ ತಳಿರ ಬಳಿಗೆ ?
ನೋವ ನೆನಪು ಬಂದೇಕೆ ಕಾಡಿತೋ
ನಮ್ಮ ನಲಿವಿನೊಡನೆ !
ಕಣ್ಣ ನೀರಿನಲಿ ಹೊಳೆವ ನೋವಿನಲಿ
ನಗಲೆ ನಿನ್ನ ಜತೆಗೆ ?-
ಕೆಂಡದಂಥ ತಳಿರ್‍ಏಕೆ ಬಳ್ಳಿಯಲಿ
ಕಾಣಲಿಲ್ಲ ನನಗೆ ?
ನಿಜದ ಅನುಭವಕೆ ಕನಸಿನಂಗಿಯನು
ತೊಡಿಸ ಬಂದೆ ನೀನು !
ಬಳಿಗೆ ಬಂದವಳು, ದೂರ ಸರಿದವಳು
ನಗುವೆಯಲ್ಲೆ ನೀನು ?
1 ಕಾಮೆಂಟ್:
ಕನ್ನಡ ಭಾಷೇಯು ಅಂದ
ಕನ್ನಡ ನಾಡೆ ಚಂದ
ಕಾಮೆಂಟ್ ಪೋಸ್ಟ್ ಮಾಡಿ