ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
..............................................................................................................
ಬೇಂದ್ರೆಯವರ
‘ನನ್ನ ಹಾಡು’ ಕವನವು, ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸೂಚಿಸುವ ಕವನವಾಗಿದೆ. ಈ
ಕವನವು ನಾಲ್ಕು ನುಡಿಗಳಲ್ಲಿದೆ. ಮೊದಲನೆಯ ನುಡಿಯಲ್ಲಿ ಕವಿಯು ತನ್ನ ಸಕಲಚೈತನ್ಯವು
ಭಗವಂತನಿಗೆ ಶರಣಾಗತವಾಗಿದೆ ಎಂದು ಹೇಳುತ್ತಾನೆ. ಎರಡನೆಯ ನುಡಿಯಲ್ಲಿ ಶರಣಾಗತನಾದ ಭಕ್ತನ
ಲಕ್ಷಣವನ್ನು ವರ್ಣಿಸುತ್ತಾನೆ ಮೂರನೆಯ ನುಡಿಯಲ್ಲಿ ಶರಣು ನೀಡುತ್ತಿರುವ ಭಗವಂತನ
ಲಕ್ಷಣವನ್ನು ಸೂಚಿಸುತ್ತಾನೆ. ನಾಲ್ಕನೆಯ ನುಡಿಯಲ್ಲಿ ಕವಿಯು ತನ್ನ ಜೀವನದರ್ಶನವನ್ನು
ವಿವರಿಸುತ್ತಾನೆ.
ನುಡಿ ೧:
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.
ಬಾಳಿನಲ್ಲಿ
ಬೆಂದ ವ್ಯಕ್ತಿಯು ಭಗವಂತನೆಂಬ ದಿವ್ಯ ಚೈತನ್ಯಕ್ಕೆ ಶರಣು ಹೋಗುವದು ಒಂದು ಸಹಜ ಕ್ರಿಯೆ.
‘ವಿಶ್ವದ ಎಲ್ಲ ಘಟನೆಗಳಿಗೂ ಭಗವಂತನೇ ಕಾರಣಪುರುಷ ; ಲೋಕಮುಖಿಯಾದ ತನ್ನನ್ನು
ಭಗವನ್ಮುಖಿಯಾಗಿ ಮಾಡುವ ಉದ್ದೇಶದಿಂದಲೇ ಭಗವಂತನು ತನ್ನನ್ನು ಇಷ್ಟೆಲ್ಲ ಸಂಕಷ್ಟಗಳಿಗೆ
ಒಡ್ಡುತ್ತಿದ್ದಾನೆ’ ಎನ್ನುವ ತಿಳಿವಳಿಕೆ ಭಕ್ತನಿಗೆ ಬರಬೇಕು. ಆವಾಗ ಆತನು ‘ನನ್ನ ಹರಣ,
ನಿನಗೆ ಶರಣ’ ಎನ್ನುವ ಮೂಲಕ ತನ್ನ ಪ್ರಾಣವನ್ನು ಅಂದರೆ ಜೀವಚೈತನ್ಯವನ್ನು ಭಗವಂತನಿಗೆ
ಅಂದರೆ ವಿಶ್ವಚೈತನ್ಯನಿಗೆ ಒಪ್ಪಿಸಿಕೊಳ್ಳುತ್ತಾನೆ. ಈ ಭಾವನೆಯನ್ನು ಬೇಂದ್ರೆಯವರು
‘ಸಕಲ ಕಾರ್ಯ ಕಾರಣಾ’ ಎನ್ನುವ ಸಂಬೋಧನೆಯ ಮೂಲಕ ಸ್ಪಷ್ಟ ಪಡಿಸುತ್ತಿದ್ದಾರೆ.
ವ್ಯಕ್ತಿಯ
ಜೀವಾತ್ಮವು ಪರಿಮಿತ ಚೈತನ್ಯ ; ಪರಮಾತ್ಮನು ಅಪರಿಮಿತ ಚೈತನ್ಯ. ಈ ತಿಳಿವು ಭಕ್ತನ
ಮನಸ್ಸಿನಲ್ಲಿ ಹುಟ್ಟಿ, ಅವನು ಆ ತಿಳಿವನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದಂತೆಯೆ,
ಆತನ ಮನಸ್ಸು ಪುಳಕಗೊಳ್ಳುತ್ತದೆ ಹಾಗೂ ನಿರ್ಮಲವಾಗುತ್ತದೆ. ಮನಸ್ಸಿನ ನಿರ್ಮಲತೆಯು, ಮನದ
ಆವರಣವಾದ ಶರೀರಕ್ಕೂ ಸಹ ಹಬ್ಬಲೇಬೇಕಲ್ಲವೆ? ಹೀಗಾಗಿ ಆತನ ತನುವೂ ಸಹ
ಪವಿತ್ರವಾಗುತ್ತದೆ. ‘ತನುವು ಪವಿತ್ರಗೊಳ್ಳುವದು’ ಅಂದರೇನು? ಪವಿತ್ರ ದೇಹದ ಮೂಲಕ
ನಡೆಯಿಸುವ ಕಾರ್ಯಗಳು ನೀಚ ಕಾರ್ಯಗಳಾಗದೆ, ಒಳ್ಳೆಯ ಕಾರ್ಯಗಳಾಗುವವು ಎನ್ನುವದು ‘ತನು
ಪಾವನಾ’ ಎನ್ನುವದರ ಅರ್ಥ. ಇಂತಹ ಮನಸ್ಸು ಹಾಗು ಇಂತಹ ದೇಹವು ಭಗವಚ್ಚಿಂತನೆಯಲ್ಲಿ
ಮುಳುಗಿರುವದರಿಂದ ಸದಾಕಾಲವೂ ಉಲ್ಲಸಿತ ಭಾವದಲ್ಲಿ ಇರುತ್ತದೆ.
ನುಡಿ ೨:
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.
ಭಗವಂತನ ಅರಿವನ್ನು ಪಡೆದ ಭಕ್ತನು ಲೌಕಿಕವನ್ನು ಹೇಗೆ ನೋಡುತ್ತಾನೆ?
ಆತನ
ಈವರೆಗಿನ ಜೀವನದಲ್ಲಿ ಲೌಕಿಕ ಸುಖದ ಮಿಷವು ಅಂದರೆ ಬಯಕೆಯು ಪ್ರಬಲವಾಗಿತ್ತು. ಈ ಬಯಕೆಯೇ
ದುಃಖವೆಂಬ ವಿಷದ ಮೂಲವೂ ಹೌದು. ಇದು ಅವನಿಗೆ ಅರಿವಾದಾಗ, ಆತನು ಈ ಲೌಕಿಕ ಬಯಕೆಯನ್ನು
ತ್ಯಜಿಸುತ್ತಾನೆ. ಭಗವಂತನ ಸಂಗದಿಂದ ಆತನ ಪರಿಮಿತ ವ್ಯಾಪ್ತಿಯ ಚೈತನ್ಯವು ಅಪರಿಮಿತವಾಗಿ,
ಅನಂತವಾಗಿ ಹಿಗ್ಗುತ್ತದೆ. ಇದು ಒಂದು ಅರ್ಥ.
ಹಿಗ್ಗು ಅಂದರೆ ತೃಪ್ತನಾಗು ಎನ್ನುವ ಅರ್ಥವೂ ಇದೆ. ಭಗವಂತನ ಸಂಗವನ್ನು ಪಡೆದ ಜೀವವು ಸದಾಕಾಲವೂ ಸಂತೃಪ್ತವಾಗಿರುತ್ತದೆ ಎನ್ನುವದು ಎರಡನೆಯ ಅರ್ಥ.
ಈ
ರೀತಿಯಾಗಿ ಹಿಗ್ಗಿದ ಹಾಗು ಹಿಗ್ಗುಗೊಂಡ ಭಕ್ತನ ಪ್ರಜ್ಞೆಯಲ್ಲಿ ಭಕ್ತ ಹಾಗು ಭಗವಂತ
ಲಯವಾಗುತ್ತಾರೆ. ಇದು ಸತ್-ಚಿತ್-ಆನಂದದ ಸ್ಥಿತಿ. ಇಂತಹ ಮನಸ್ಸು ದೇವಾಲಯವಿದ್ದಂತೆ. ಈ
ಮನಸ್ಸಿನ ಸಾಧನಗಳಾದ ಪಂಚಕರಣಗಳ ಸಮೂಹವು ( ಐದು ಜ್ಞಾನೇಂದ್ರಿಯಗಳು ಹಾಗು ಐದು
ಕರ್ಮೇಂದ್ರಿಯಗಳು) ಈ ದೇವಾಲಯಕ್ಕೆ ಕಟ್ಟಿದ ಬಾವುಟ ಹಾಗು ತೋರಣಗಳಾಗುತ್ತವೆ. ಈ
ಸ್ಥಿತಿಯಲ್ಲಿ ಆತನ ಕ್ರಿಯೆಗಳೆಲ್ಲ ಭಗವಂತನಿಗಾಗಿ ಇರುತ್ತವೆ.
[ ಇಂತಹ ಸ್ಥಿತಿಯನ್ನು ಶ್ರೀ ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ಹೀಗೆ ವರ್ಣಿಸಿದ್ದಾರೆ:
ಜಪೋ ಜಲ್ಪ: ಶಿಲ್ಪಂ ಸಕಲಮಪಿ ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಣ ಮಶನಾದ್ಯಾಹುತಿ ವಿಧಿ:
ಪ್ರಣಾಮಃ ಸಂವೇಶಃ ಸುಖಮಖಿಲ ಮಾತ್ಮಾರ್ಪಣ ದೃಶಾ
ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್|
ಭಾವಾನುವಾದ:
ನುಡಿದದ್ದು ಎಲ್ಲ ಜಪವು, ಕೈಯಾಟವೆಲ್ಲ ಮುದ್ರೆ,
ನಡೆದದ್ದೇ ಪ್ರದಕ್ಷಿಣೆ, ನನ್ನೂಟ ನಿನಗೆ ಬಲಿಯು,
ಒರಗಿರಲು ಅದುವೆ ನಮನ, ಆತ್ಮಾರ್ಪಣೆಯೆ ಸುಖವು
ಈ ರೀತಿ ಬೆಳೆಯಲಮ್ಮ ನನ್ನ ಪೂಜೆಯಾ ವಿಧಿಯು!]
ನುಡಿ ೩:
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.
ಭಕ್ತನ
ಮನಸ್ಸು ಎನ್ನುವ ದೇವಾಲಯದಲ್ಲಿ ಸ್ಥಿತನಾಗಿರುವ ಈ ಭಗವಂತನ ಲಕ್ಷಣವೇನು? ಶರಣಾಗತಿಯು
ಭಕ್ತನ ಲಕ್ಷಣವಾದರೆ, ಅನುಗ್ರಹವು ಭಗವಂತನ ಲಕ್ಷಣವಾಗಿದೆ. ತನ್ನ ಭಕ್ತನನ್ನು
ಸಂಸಾರಸಾಗರದ ತೆರೆನೊರೆಗಳಿಂದ ರಕ್ಷಿಸುತ್ತ, ಪಾರು ಮಾಡುವದೇ, ‘ಶರಣಾಗತವತ್ಸಲ’ ಎನ್ನುವ
ಬಿರುದುಳ್ಳ ಭಗವಂತನ ಪ್ರಮುಖ ಲಕ್ಷಣವಾಗಿದೆ. ಇದನ್ನು ಕವಿಯು ‘ನಿನ್ನ ಚರಣ, ಸುಸಂತರಣ’
ಎನ್ನುವ ಪದಪುಂಜದಿಂದ ಸೂಚಿಸುತ್ತಾನೆ. ಸುಸಂತರಣ ಎಂದರೆ ಸುಲಭವಾಗಿ ದಾಟಿಸಬಲ್ಲಂತಹದು
ಎನ್ನುವ ಅರ್ಥ. ಭಗವಂತನ ಈ ಶಕ್ತಿಯು ವಿಶ್ವವ್ಯಾಪಿಯಾಗಿದೆ ಹಾಗು ಆತನ ಭಕ್ತವತ್ಸಲತೆಯೂ
ಸಹ ಸರ್ವವ್ಯಾಪಿಯಾಗಿದೆ ಹಾಗು ಇದನ್ನು ಆತನ ಭಕ್ತರೆಲ್ಲರೂ ಪೂರ್ಣವಾಗಿ ಅರಿತಿದ್ದಾರೆ
ಎನ್ನುವ ಅರ್ಥದಲ್ಲಿ ಬೇಂದ್ರೆಯವರು ‘ಜಗದ್ಭರಿತ ಭಾವನಾ’ ಎಂದು ಹೇಳುತ್ತಾರೆ.
‘ಹಾಸ್ಯಕಿರಣ’ವು
ಭಗವಂತನ ಅನುಗ್ರಹದ ಪ್ರತೀಕವಾಗಿದೆ. ಭಗವಂತನದು ಯಾವಾಗಲೂ ಮಂದಹಾಸ. ಆ ಮಂದಹಾಸವು
ರವಿಕಿರಣದಂತೆ ಮನಸ್ಸಿಗೆ ಬೆಳಕನ್ನು ನೀಡಿದರೆ, ಚಂದ್ರಕಿರಣದಂತೆ ಮನಸ್ಸನ್ನು
ತಂಪುಗೊಳಿಸುತ್ತದೆ. ಭಕ್ತನ ಮನಸ್ಸು ಇಂತಹ ಭಗವಂತನ ಸ್ಮರಣೆಯಲ್ಲಿಯೇ ಸದಾ
ನಿರತವಾಗಿರುತ್ತದೆ. ಲೌಕಿಕವನ್ನು ದಾಟುವ ಇತರ ಮಾರ್ಗಗಳು ಇಲ್ಲ. ಇದ್ದರೂ ಸಹ ಅವು ಅವನ
ಮನಸ್ಸನ್ನು ಸೆಳೆಯಲಾರವು.
ನುಡಿ ೪:
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
ಭಗವಂತನಲ್ಲಿ
ಈ ರೀತಿಯಾಗಿ ಶರಣಾಗತನಾಗಿ, ಭಗವಂತ ತೋರಿದ ದಾರಿಯಲ್ಲಿ ಮುನ್ನಡೆಯುತ್ತಿರುವ ಭಕ್ತನಿಗೆ
ಕಂಡ ಕಾಣ್ಕೆ ಯಾವುದು? ಸೃಷ್ಟಿ ಇಲ್ಲದೆ ಭಗವಂತ ಇರಲಾರ. ಸೃಷ್ಟಿಯ ಸಕಲ ಜೀವಿಗಳಿಗೆ
ಭಗವಂತನ ಕರುಣೆ ಇದೆ. ಆ ಅನುಗ್ರಹದಲ್ಲಿ ಎಲ್ಲ ಜೀವಿಗಳು ಹರುಷದಿಂದ ಬಾಳುತ್ತವೆ
ಎನ್ನುವದೇ ಈ ಅರಿವು. ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಹಾಗು ಅನುಗ್ರಹ ಇವು ಭಗವಂತನ
ಐದು ನಿರಂತರ ಕ್ರಿಯೆಗಳು. ಇದು ಅವನ ಧರ್ಮವೂ ಹೌದು. ಬಸವಣ್ಣನವರು ಇದನ್ನೇ ‘ಸಕಲ
ಜೀವಿಗಳಿಗೆ ಲೇಸನೆ ಬಯಸುವನು ನಮ್ಮ ಕೂಡಲ ಸಂಗಮ ದೇವ’ ಎಂದಿದ್ದಾರೆ. ಈ ದರ್ಶನಕ್ಕೆ
ಬೇಂದ್ರೆಯವರು ‘ಜೀವಧರ್ಮಧಾರಣಾ’ ಎನ್ನುತ್ತಾರೆ.
ಭಗವಂತನ
ಹರುಷರಸವೇ ಅವನ ಸೃಷ್ಟಿಗೆ ಕಾರಣ, ಇದುವೇ ಜೀವನ. ಈ ಹರುಷರಸ ಇಲ್ಲದಲ್ಲಿ ಅದು ‘ವಿ-ರಸ’
ಆಗುತ್ತದೆ. ಅದುವೇ ಮರಣ. ಈ ರಸ ಹಾಗೂ ವಿರಸಗಳ ನಡುವೆ ಇರುವದೇ ಜೀವನ. ಆದುದರಿಂದಲೇ ಈ
ಜೀವನವು ಸುಖ ಹಾಗು ದುಃಖಗಳ ಸಮರಸವಾಗಿದೆ. ಇದು ಬೇಂದ್ರೆಯವರು ಕಂಡ ಕಾಣ್ಕೆ!
‘ನನ್ನ
ಹಾಡು’ ಮೇಲ್ ನೋಟದಲ್ಲಿ ಅತಿ ಸರಳವಾದ ಕವನ. ಕವನದಲ್ಲಿ ಬಳಸಲಾದ ಪದಗಳು ಸರಳವಾಗಿವೆ
ಹಾಗು ಮೃದುವಾಗಿವೆ. ಕವನದ ಛಂದಸ್ಸು ಸರಳವಾಗಿದೆ. (ಇದು ‘ಶರ ಷಟ್ಪದಿ’ ಛಂದಸ್ಸು
ಎನ್ನುವದು ನನ್ನ ಗ್ರಹಿಕೆ. ತಪ್ಪಿದ್ದರೆ, ಬಲ್ಲವರು ತಿದ್ದಬೇಕೆಂದು ಕೋರುತ್ತೇನೆ.)
ಕವನದ ಭಾವವೂ ಸಹ ಸರಳವಾಗಿಯೇ ಇದೆ. ಆದರೆ ಕವನದ ಪ್ರತಿ ಪದವೂ ಸಂಕೀರ್ಣ ಅರ್ಥವನ್ನು
ಹೊಂದಿದೆ. ಹೀಗಾಗಿ ಬೇಂದ್ರೆಯವರ ಅನೇಕ ಸರಳ ಕವನಗಳಂತೆ, ‘ನನ್ನ ಹಾಡು’ ಸಹ
ಸಂಕೀರ್ಣ-ಅರ್ಥ-ಗರ್ಭಿತ ಕವನವಾಗಿದೆ.
[ಟಿಪ್ಪಣಿ:
ವಿನಾಯಕ ಕೃಷ್ಣ ಗೋಕಾಕರು ತಮ್ಮ ಬೃಹತ್ ಕಾದಂಬರಿಯ ಶೀರ್ಷಿಕೆಯನ್ನು ( ‘ಸಮರಸವೇ ಜೀವನ’ ) ಈ ಕವನದಿಂದಲೇ ಎತ್ತಿಕೊಂಡಿದ್ದಾರೆ.]
ಹೆಚ್ಚಿನ ಓದಿಗೆ: http://sallaap.blogspot.com/2011/05/blog-post.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ