೮. ನೀ ಸಿಗದೆ ನಾನೆಂತು ಅರಿವೆನೇ ನನ್ನ

ನೀ ಸಿಗದೆ ನಾನೆಂತು ಅರಿವೆನೇ ನನ್ನ
ಸಾಣೆ ಗೆರೆ ಮಿಂಚದೆ ತಿಳಿವರೇ ಹೊನ್ನ ?

ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು
ಆತ್ಮ ಸೆರೆಯಾಗಿದ್ದು ತಿಳಿಯದಾ ಭವಿಯು
ನಾನೊಂದು ಕಗ್ಗಾಡು ನನ್ನ ನಾ ಅರಿಯೆ
ಬೆಳಕಾಗಿ ಒಳಗಿಳಿದು ದಾರಿಗಳ ತೆರೆಯೆ

ನನ್ನ ಗೂಢಗಳಲ್ಲಿ ಇಳಿಯುವಾ ಹೆಣ್ಣೆ
ಸೋಕಿದಲ್ಲೆಲ್ಲ ರಸ ಮಿಡಿಯುವಂಥ ಹಣ್ಣೆ
ಸಂಗಮಿಸಿ ಎಲ್ಲ ಹೂ ಗಂಧ ಮಕರಂದ
ನಿನ್ನಲ್ಲಿ ಸಿಕ್ಕಿತೇ ನನ್ನಂತರಂಗ

ಅಂತರಂಗದ ಸ್ವರವ ಮಿಡಿದು ಶೃತಿರಾಗ
ಕೋಟಿ ಕನಸಿಗೆ ಬಾಳು ನಿನ್ನಿಂದ ಭೋಗ
ನೀ ತೆರೆವ ಪಾತ್ರದಲಿ ನಾ ನಂಬಿ ಹರಿವೆ
ದಕ್ಕಿತೋ ಗುರಿ ಭಾರಿ ಕಡಲಲ್ಲಿ ನೆರೆವೆ.

ಕಾಮೆಂಟ್‌ಗಳಿಲ್ಲ: