ಉಂಗುರ (ಕವನ ಸಂಕಲನ)

 ಉಂಗುರ (ಕವನ ಸಂಕಲನ)
           ೧.ಮನೆಗೆ ಬಂದ ಹೆಣ್ಣು.
ಮೊದಲ ದಿನ ಮೌನ ಅಳುವೇ ತುಟಿಗೆ ಬಂದತೆ,
ಚಿಂತೆ, ಬಿಡಿಹೂವ ಮುಡಿದಂತೆ ;
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ;
ಜೀವನದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ, ಇಷ್ಟು ನಗು -
ಮೂಗುತಿಯ ಮಿಂಚು ಒಳಹೊರಗೆ ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು,
ಬೇಲಿಯಲಿ ಹಾವು ಹರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ ದಂಡೆಹೂ,
ಹೂವಿಗೂ ಜೀವ ಬಂದಂತೆ ;
ಸಂಜೆಯಲಿ ರಾತ್ರಿ ಇಳಿದಂತೆ, ಬಿರುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ !


                    ೨.ಸರ್ವಜಿತು.
ಕೆರೆ ತುಂಬಿ ಹಳ್ಳಕಾಲುವೆಗಳಲಿ ನೀರೋಡಿ
ಮೇಡು ಬನ ಬಯಲು ಬಾಳೆಲ್ಲ ಹಚ್ಚಗೆ ಹಾಡಿ
ಗಿಡಬಳ್ಳಿ ಹೂಮುಡಿದು ಹೆಣ್ಣ ಹೊರೆಯಲಿ ಬಳಲಿ
ಶಾಂತಿಯಲಿ ನಾಡು ನಗಲಿ !
ಗುಡ್ಡ ಗುಡಿಗೋಪುರದ ಗಂಟೆಗಳ ಹಿರಿದನಿಗೆ
ಒಲಿದು ಕೈ ಮುಗಿದು ನಾಡೆಲ್ಲ ತಿಳಿಬಾನೆದೆಗೆ
ಹರಕೆಯನು ಹೊರಲಿ, ಸಂತೋಷ ತನ್ನೊಳಗುಡಿಗೆ
ನುಗ್ಗಿಬರಲೆಂದು ಬೆಳಕಾಗಿ !
ಸರ್ವಜಿತು ಸಕಲ ಲೋಕದ ಚರಾಚರ ಜೀವ
ವರ್ಗವರ್ಗಾಂತರಗಳೆಲ್ಲ ಸೋದರಭಾವ
ಸೌಖ್ಯಸಂತೃಪ್ತಿ ಧೀರೋತ್ಸಾಹಮಾರ್ಗದಲಿ
ಹೆಜ್ಜೆಯಿಡಲೆಂದು, ಸ್ವರ್ಗದ ಕನಸು ಭೂಮಿಯಲಿ
ತುಂಬಿಕೊಳಲೆಂದು ಹರಸಲಿ ! ತನ್ನ ಕಾಲದಲಿ
ಉನ್ನತಿಗೆ ನಾಡ ನಡಸಲಿ !

ಕಾಮೆಂಟ್‌ಗಳಿಲ್ಲ: