೧೦. ಬಣ್ಣದ ಬೆಳಗಿನ ಹೂಬಿಸಿಲಿಳಿದಿದೆ

ಬಣ್ಣದ ಬೆಳಗಿನ ಹೂಬಿಸಿಲಿಳಿದಿದೆ ಹಸಿರಿನ ಬೋಗುಣಿಗೆ
ಕತ್ತಲೆ ಮೆತ್ತಿದ ಕಪ್ಪನ್ನು ತೊಳೆದಿದೆ ಸೃಷ್ಟಿಯ ಸಿರಿಮೊಗಕೆ
ಮರಮರದಿಂದ ಥರಥರ ದನಿಗಳ ಚಿಲಿಪಿಲಿ ಮಣಿಮಾಲೆ
ಹನಿ ಹನಿ ಏರಿ ತೆರೆಸಿದೆ ದಾರಿ ಇಂದ್ರನ ನಂದನಕೆ

ಗಾಳಿಯ ಸರಸಕೆ ಚಿಮ್ಮಿದ ಹೂ ಎಲೆ ಚೆಲ್ಲಿದೆ ದಾರಿಯಲಿ
ಸಾರಣೆ ಕಾರಣೆ ಮಾಡಿದಂತೆ ಮರ ಉದ್ದಕು ಬೀದಿಯಲಿ
ಡೊಂಕು ರಸ್ತೆಗೆ ಸಾಲ್ಮರ ಹಾಸಿದೆ ಚಿಗುರಿನ ರೇಶಿಮೆಯ
ಮರೆತಳೊ ಊರ್ವಶಿ ತಾನೇ ಒಣಗಲು ಹಾಕಿದ ಪತ್ತಲವ !

ಪಗಡೆ ಚೌಕುಗಳ ಗದ್ದೆಯಂಚಿಗೆ ಅಡಕೆ ಈಟಿ ಸಾಲು
ತೂಗುವ ಗಾಳಿಗೆ ಬೀಗುವ ಫಲವತಿ ಬಾಗಿದ ತೆನೆಕಾಳು
ಹತ್ತಿರದಲ್ಲೇ ಸುತ್ತವ ತುಂಗೆ ತುಡಿವಳು ರಾಗಕ್ಕೆ
ವಾಸವದತ್ತೆಯ ಘೋಷವತಿಗೆ ಸಮ ಎನ್ನಲು ನಾದಕ್ಕೆ

ಹಕ್ಕಿಯ ಹಿಂಡು ಹಾಡುತ ಬಂದು ಹಾಲುಪಯಿರ ಕಂಡು
ಬೀಸಿದ ಕವಣಿಯ ಮೋಸದಿ ತಪ್ಪಿಸಿ ಓಡಿತು ತೆನೆಯುಂಡು
ಕವಣಿ ಬೀಸಿದ ಹೈದನ ಮೂತಿಯ ತಿವಿದಳು ಸಂಗಾತಿ
'ಹಕ್ಕಿಯ ಹೊಡೆವುದ ಏನು ಬಲ್ಲೆ ನೀ ಅದಕೂ ಬೇಕು ಛಾತಿ!'

ಏರುವ ಬಿಸಿಲಿಗೆ ಬೆನ್ನಲಿ ಬಗಲಲಿ ಕೆನ್ನೆಯಲ್ಲಿ ಬೆವರು
ಬಾನೊಳು ಜಾರುವ ಬಿಳಿಮುಗಿಲೋಳಿಗೆ ಹೋಲಿಕೆಯೇ ಅರಳು?
ಮಾವಿನ ಅಡಿಯಲಿ ಬಾವಿಯ ಬದಿಯಲಿ ತಂದ ಬುತ್ತಿ ಬಿಚ್ಚಿ
ಹರಟೆ ಕೊಚ್ಚುವುವು ಹೆಣ್ಣು ಗಂಡುಗಳು ಮಾವಿನ ಸವಿ ಹೆಚ್ಚಿ.

ಕಾಮೆಂಟ್‌ಗಳಿಲ್ಲ: