ದೀಪ ಹಚ್ಚಿ
ಹೃದಯ ಬಿಚ್ಚಿ
ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು:
ಇವಗೊದಗಲಿ ಹಿರಿತನ
ಮೇಲೇಳಲಿ ಮನೆತನ
ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು.
ನೀ ಬಂದೆ
ನಮ್ಮ ನಡುವೆ ನಿಂದೆ
ಏನೇನೋ ನಿರೀಕ್ಷೆ ತಂದೆ.
ನೀ ನಿಂತ ನೆಲ ಬೆಳೆ ಚಿಮ್ಮುವ ಹೊಲವಾಗಿ
ನೀ ಸೋಕಿದ ಮರಕ್ಕೆ ಮೈತುಂಬ ಫಲವಾಗಿ
ಬತ್ತಿದ ಜಲಗಳೆಲ್ಲ ಮತ್ತೆ ಕಾಣಿಸಿಕೊಂಡು
ಬಣ್ಣದ ಚಿತ್ತಾರವಾದೀತು ಬೋಳು ಬದುಕು ಎಂದು
ತುದಿಗಾಲಿನಲಿ ನಿಂತು ಎರಡು ಬದಿಗೆ
ಕಾದೆವು ದಿನಾ ಅಂಥ ಸಿರಿಗಳಿಗೆಗೆ.
ಹರಿದ ಕಾಗದದಂಥ ಬಿಳಿ ಮುಗಿಲು ಚೂರು
ಎಲ್ಲೊ ಐದಾರು ಬಾನಿನಲ್ಲಿ
ಯಾವಾಗ ಆದುವೋ ಕರಿಯ ಕಂಬಳಿ ಚೂರು
ನೂರು ಸಾವಿರ ಈಗ ಮಾಯದಲ್ಲಿ.
ಎಲ್ಲ ಒಂದಕ್ಕೊಂದು ಸೇರಿಕೊಂಡು
ದಟ್ಟವಾಗಿ, ನೀರ ಬೆಟ್ಟವಾಗಿ
ಸಾಗಿಬಂದವು ಮಾರಿಗಾಲಲ್ಲಿ ಜೋರಲ್ಲಿ
ಕಾಳವರ್ಷಿಣಿ ಕೂಗು ಹಾಕಿಕೊಂಡು.
ಬೆನ್ನ ಚಪ್ಪರಸಿ ಛೂ ಬಿಟ್ಟಿತೆಲ್ಲಿಂದಲೋ
ಮೇಲೆದ್ದು ಬಂದ ಮನೆಮುರುಕ ಗಾಳಿ
ಬಂತು ಬಂತೋ ಬಂತು ನಗುವ ನೆಲೆದೆದೆಗೆ
ಪ್ರಳಯ ಕಾಲದ ಮೊದಲ ಕಂತು ಎನುವಂತೆ
ಜಲದ ದಾಳಿ!
ಹಿಂದೆ ಇಷ್ಟಾದರೂ ಹರಿಸಿದ್ದ ನೆಲವೆ ಇದು?
ಕಾಲಿಟ್ಟ ಕಡೆಯೆಲ್ಲ ಕೆಸರು,
ಹರಿದ ಛಾವಣಿ ಮುರಿದುಬಿದ್ದ ಗಿಡಗಂಟಿ
ಒಡೆದ ಸೂರು.
ಬೀದಿ ಮನೆ ಅಂಗಡಿ ಚರಂಡಿ ಡ್ರೈನೇಜುಗಳ
ಒಂದುಗೂಡಿಸಿ ನಿಂತ ಹೊಲಸು ನೀರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ