೧೫. ನನ್ನ ಇನಿಯನ ನೆಲೆಯ ಬಲ್ಲೆಯೇನೆ ?

ನನ್ನ ಇನಿಯನ ನೆಲೆಯ ಬಲ್ಲೆಯೇನೆ ?
ಹೇಗೆ ತಿಳಿಯಲಿ ಅದನು ಹೇಳೇ ನೀನೇ

ಇರುವೆ ಹರಿಯುವ ಸದ್ದು
ಮೊಗ್ಗು ತೆರೆಯುವ ಸದ್ದು
ಮಂಜು ಸುರಿಯುವ ಸದ್ದು ಕೇಳುವವನು,
ನನ್ನ ಮೊರೆಯನ್ನೇಕೆ ಕೇಳನವನು ?

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿಯುಸಿರನೆ ಕಟ್ಟಿ ನಿಲ್ಲಿಸಬಲ್ಲ
ನನ್ನ ಸೆರೆಯಿಂದೇಕೆ ಬಿಡಿಸಲೊಲ್ಲ ?

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ಬೆಳೆ ಎದ್ದು ತೂಗುವವನು,
ನಲ್ಲೆಯಳನಲನ್ನೇಕೆ ಅರಿಯನವನು ?

ಕಾಮೆಂಟ್‌ಗಳಿಲ್ಲ: