೨. ವಿವೇಕಾನಂದರ ‘ಕಾಳೀಮಾತಾ’…ಬೇಂದ್ರೆಯವರ ‘ರೌದ್ರಿ’

ಸ್ವಾಮಿ ವಿವೇಕಾನಂದರು ಕಾಶ್ಮೀರದಲ್ಲಿರುವ ಕ್ಷೀರಭವಾನಿ ದೇವಿಯ ದರ್ಶನ ಪಡೆದ ಬಳಿಕ ದಾಲ್ ಸರೋವರದಲ್ಲಿಯ ದೋಣಿ-ಮನೆಗೆ ಮರಳುತ್ತಾರೆ. ಆ ಸಂದರ್ಭದಲ್ಲಿ ಅವರು ಬರೆದ ಕವನವಿದು. ದೇವಿಯು ಜಗಜ್ಜನನಿಯಾದಂತೆಯೇ ಜಗತ್ತಿನ ಸಂಹಾರಕಾರಣಿಯೂ ಹೌದು. ದೇವಿಯ ಅಂತಹ ಉಗ್ರ ಸ್ವರೂಪದ ಬಗೆಗಿನ ಚಿಂತನ ಅವರ ಈ ಕವನದಲ್ಲಿದೆ:
Kali, the Mother
The stars are blotted out,
The clouds are covering clouds.
It is darkness vibrant, sonant.
In the roaring, whirling wind
Are the souls of a million lunatics
Just loosed from the prison-house,
Wrenching trees by the roots,
Sweeping all from the path.
The sea has joined the fray,
And swirled up mountain-waves,
To reach the pitchy sky.
The flash of lurid light
Reveals on every side
A thousand, thousand shades
Of Death begrimed and black-
Scattering plagues and sorrows,
Dancing mad with joy,
Come, Mother, come!
For terror is Thy name,
Death is in thy breath,
And every shaking step
Destroys a world for e'er.
Thou Time, the All-destroyer!
Come, O Mother, come!
Who dares misery love,
And hug the form of Death,
Dance in destruction's dance
To him the Mother comes.

ವಿವೇಕಾನಂದರ ಈ ಕವನದ ಅನುವಾದವನ್ನು ಬೇಂದ್ರೆಯವರು ಮಾಡಿದ್ದಾರೆ. ಅನುವಾದಿತ ಕವನವನ್ನು ‘ಹೃದಯಸಮುದ್ರ’ ಸಂಕಲನದಲ್ಲಿ ಅಳವಡಿಸಲಾಗಿದೆ. ಅದು ಇಂತಿದೆ:


ರೌದ್ರಿ
ಭಾಗ-೧
 
ಚಿಕ್ಕೆ ಬಾನೊಳಿಂಗಿವೆ
ಮೋಡ ಮುಗಿಲನುಂಗಿವೆ
ಜಿರಗುಟ್ಟುವ ದುರಗುಟ್ಟುವ
ಕತ್ತಲೋ ಕತ್ತಲು
ಸುಟ್ಟುರೆಯೇ ಬಿರುಗಾಳಿಯೇ
ಲೋಕದತ್ತಲಿತ್ತಲೆ
ಮುರಿದು ಸೆರೆ ಬಂತು ನೆರೆ
ಮರುಳಪಡೆಯೆ ಬೆತ್ತಲೆ
ಭಾಗ-೨
ಮರ ಕಿತ್ತಿವೆ ಬುಡ ತಳ
ಹಾದಿ ಉಡುಗೆ ಝಳಝಳ
ಕಡಲು ಕುಣಿಯೆ ಗೊಂದಣ
ತೆರೆ-ಮುರಿ-ನೊರೆ ಧಂಧಣ
ಮಬ್ಬೆ ಮಳೆಯು ನಾಡಿಗೆ
ಮುಗಿಲಿನಂಚು ಕಾಡಿಗೆ
ಸಾವು ಹೊಂಚು, ಅಯ್ಯೊ ಮಿಂಚು
ಕಣ್ತೆರೆದೆಡೆ ಸುತ್ತಿಗೊಂಡ
ಲಕ್ಷಕೋಟಿ ರೂಪುಗೊಂಡ
ಸಾವಿನಿಂದ ಮುತ್ತುತ
ಕಷ್ಟ ನಷ್ಟ ಬಿತ್ತುತ
ಹಿಗ್ಗುಗೊಂಡು ಹುಚ್ಚೆದ್ದು
ಕುಣಿವ ತಾಯಿ ಬಾ!
ಭಾಗ-೩
ರೌದ್ರಿ ನಿನ್ನ ಹೆಸರು
ಮೃತ್ಯು ನಿನ್ನ ಉಸಿರು
ನಿನ್ನ ಒಂದು ನಡೆ ಅಡಿ
ಜಗವ ಮಾಡೆ ಪುಡಿ ಪುಡಿ
ಪ್ರಳಯಂಕರಿ ಓ ಕಾಳಿ
ಬಾ ತಾಯಿಯೆ ಬಾ!


ಕವನರಚನೆಯ ಸಂದರ್ಭದಲ್ಲಿ ಕವಿಯ ಮನಸ್ಸಿನಲ್ಲಿ ಒಂದು ಭಾವ ಇರುತ್ತದೆ. ಅದು ಕವನದ ಆತ್ಮ. ಈ ಭಾವಕ್ಕೆ ಅನುರೂಪವಾದ ಛಂದಸ್ಸನ್ನು, ಪದಗಳನ್ನು ಹಾಗು toneಅನ್ನು ಕವಿಯು ಸೃಷ್ಟಿಸುತ್ತಾನೆ. ಅದು ಕವನದ ದೇಹ. ಅನುವಾದಕನು ಕವನವನ್ನು ಅನುವಾದಿಸುವಾಗ ಕವನದ ಆತ್ಮವನ್ನು ಹಾಗು ದೇಹವನ್ನು ತನ್ನ ಅನುವಾದದಲ್ಲಿ ಸಮರ್ಪಕವಾಗಿ ಮೂಡಿಸಿದರೆ ಅದು ಉತ್ತಮ ಅನುವಾದ. ಬೇಂದ್ರೆಯವರ ಅನುವಾದಗಳು ಇನ್ನೂ ಮೇಲ್ಮಟ್ಟದವು. ವಿವೇಕಾನಂದರ ಈ ಕವನವದ ಉದಾಹರಣೆಯನ್ನೇ ತೆಗೆದುಕೊಳ್ಳಿ.


ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ದರ್ಶನವನ್ನು ಪಡೆದ ನಂತರ, ಪಾರಮಾನಸ ಪ್ರಜ್ಞೆಯಲ್ಲಿ, ದೇವಿಯ ಸಂಹಾರಕಾರಿ ರೂಪವನ್ನು ಅನುಭವಿಸಿ ಬರೆದಿರಬಹುದಾದ ಕವನವಿದು. ಆ ಅನುಭವಕ್ಕೆ ತಕ್ಕ ಛಂದಸ್ಸು ಹಾಗು ಪದಗಳನ್ನು ಅವರು ತಮ್ಮ ಕವನದಲ್ಲಿ ಬಳಸಿದ್ದಾರೆ. ಬೇಂದ್ರೆಯವರು ಕನ್ನಡದಲ್ಲಿ ಅಂತಹದೇ ಛಂದಸ್ಸು ಹಾಗು ಅದೇ ಜಾತಿಯ ಪದಗಳನ್ನು ಬಳಸಿದ್ದಾರೆ. ಮೂಲ ಕವನದ toneಅನ್ನು ಸಹ ಅನುವಾದದಲ್ಲಿ ಸಮರ್ಥವಾಗಿ ಇಳಿಸಿದ್ದಾರೆ. ಇಷ್ಟೇ ಆದರೆ ಇದೊಂದು ಉತ್ತಮ ಅನುವಾದವಾಗಬಹುದಾಗಿತ್ತು. ಆದರೆ ಇದೊಂದು ಶ್ರೇಷ್ಠ ಅನುವಾದವಾಗಲು ಬೇರೊಂದು ಕಾರಣವಿದೆ. ಬೇಂದ್ರೆಯವರು ತಮ್ಮ ಮನೋಲೋಕದ ಬಸಿರಲ್ಲಿ ಮೂಲಕವನವನ್ನು ಹೊತ್ತು, ಆ ಕವನಕ್ಕೆ ಮರುಹುಟ್ಟು ನೀಡಿದ್ದಾರೆ. ಇದು ಕೇವಲ ಪ್ರತಿಕೃತಿಯಲ್ಲ, ಇದು ಮೂಲಕವನದ ಮರುಜನ್ಮ.


ಮಗುವಿಗೆ ಜನ್ಮ ಕೊಡುವ ಕ್ರಿಯೆಗೆ ಕನ್ನಡದಲ್ಲಿ ‘ಹಡೆಯುವದು’ ಎನ್ನುತ್ತಾರೆ. ಇದು ‘ಪಡೆಯುವದು’ ಪದದಿಂದ ಬಂದಿದೆ. ‘ಹಡೆಯುವದಕ್ಕೆ’ ಮೊದಲು ‘ಪಡೆಯಬೇಕಾಗುತ್ತದೆ’. ಬೇಂದ್ರೆಯವರು ವಿವೇಕಾನಂದರಿಂದ ಮೂಲಕವನದ ಭಾವವನ್ನು ಹಾಗು ದೇಹವನ್ನು ‘ಪಡೆದರು’, ಬಳಿಕ ಅದನ್ನೇ ಕನ್ನಡದಲ್ಲಿ ‘ಹಡೆದರು’! ಈ ಪಡೆಯುವ ಹಾಗು ಹಡೆಯುವ ಕ್ರಿಯೆಯ ನಡುವೆ ಮಗುವಿನ ತಾಯಿಯು ತನ್ನದೇ ಆದ ಸತ್ವವನ್ನು ಮಗುವಿಗೆ ನೀಡುತ್ತಾಳೆ. Value addition ಎಂದು ಹೇಳುತ್ತಾರಲ್ಲ, ಆ ರೀತಿಯಲ್ಲಿ. ಈ ಕವನದಲ್ಲಿ ಬೇಂದ್ರೆಯವರು ಅದನ್ನೂ ಮಾಡಿದ್ದಾರೆ. ಹೀಗಾಗಿ ಮೂಲಕ್ಕೆ ವಿರೋಧವಾಗದೇ ಈ ಕವನಕ್ಕೆ ಹೆಚ್ಚಿನ ಸೊಬಗು ಬಂದಿದೆ.


ವಿವೇಕಾನಂದರ ಮೂಲಕವನದ ಪ್ರತಿಯೊಂದು ಸಾಲನ್ನು ಅರ್ಥವ್ಯತ್ಯಾಸವಿಲ್ಲದೆ ಬೇಂದ್ರೆಯವರು ಕನ್ನಡಕ್ಕೆ ಹೇಗೆ ಇಳಿಸಿದ್ದಾರೆ ಎನ್ನುವದನ್ನು ಅರಿಯಬೇಕಾದರೆ, ಪ್ರತಿ ಸಾಲಿನ ಮೂಲವನ್ನು ಹಾಗು ಅನುವಾದವನ್ನು ಜೊತೆಜೊತೆಗೇ ಇಟ್ಟು ಪರೀಕ್ಷಿಸಬೇಕು:


ಮೂಲ/ಅನುವಾದ:
The stars are blotted out,
ಚಿಕ್ಕೆ ಬಾನೊಳಿಂಗಿವೆ
The clouds are covering clouds.
ಮೋಡ ಮುಗಿಲ ನುಂಗಿವೆ.
It is darkness vibrant, sonant
ಜಿರಗುಟ್ಟುವ ದುರುಗುಟ್ಟುವ ಕತ್ತಲೋ ಕತ್ತಲು
(vibrant ಎನ್ನುವ ಪದಕ್ಕೆ ದುರುಗುಟ್ಟುವ ಎನ್ನುವ ಪದವನ್ನು ಹಾಗು sonant ಎನ್ನುವ ಪದಕ್ಕೆ ಜಿರಗುಟ್ಟುವ ಎನ್ನುವ ಪದವನ್ನು ಬೇಂದ್ರೆಯವರು ಬಳಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಥವಾ ಕಾಡಿನಲ್ಲಿ ಕತ್ತಲೆ ಕವಿದ ಇರುಳಿನಲ್ಲಿ ಏಕಾಕಿಯಾಗಿ ನಡೆಯುತ್ತಿರುವವನಿಗೆ ಈ ದುರುಗುಟ್ಟುವ ಹಾಗು ಜಿರಗುಟ್ಟುವ ಕತ್ತಲೆಯು ಅನುಭವಕ್ಕೆ ಬಂದಿರುತ್ತದೆ.)
In the roaring, whirling wind
ಸುಟ್ಟುರೆಯೆ ಬಿರುಗಾಳಿಯೆ ಲೋಕದತ್ತಲಿತ್ತಲೆ
Are the souls of a million lunatics just loosed from the prison house
ಮುರಿದು ಸೆರೆ ಬಂತು ನೆರೆ ಮರುಳ ಪಡೆಯೆ ಬೆತ್ತಲೆ.
(ಸೆರೆಯಲ್ಲಿ ಬಂಧಿಸಿಟ್ಟ ಹುಚ್ಚು ಆತ್ಮಗಳನ್ನೆಲ್ಲ ಥಟ್ಟನೆ ಬಿಡುಗಡೆ ಮಾಡಿದರೆ ಹೇಗಿರಬೇಕು? ಅಂತಹ ಒಂದು chaotic ಚಿತ್ರಣವನ್ನು ವಿವೇಕಾನಂದರು ಊಹಿಸಿಕೊಳ್ಳುತ್ತಾರೆ. ಬೇಂದ್ರೆಯವರು ಈ lunatic souls ಅನ್ನುವದನ್ನು ‘ಮರಳು ಪಡೆ’ ಎಂದು ಬಣ್ಣಿಸುತ್ತಾರೆ. ರಣರಂಗದಲ್ಲಿ ಸತ್ತವರ ಮತ್ತು ಅರೆಸತ್ತವರ ದೇಹಗಳನ್ನು ಭಕ್ಷಿಸಲು ಬರುವ spirits ಇವು. ಕುರುಕ್ಷೇತ್ರದ ರಣರಂಗದಲ್ಲಿ ಇಂತಹ ಒಂದು ಸನ್ನಿವೇಷವನ್ನು ಕಲ್ಪಿಸಿ ಕನ್ನಡದ ಒಂದು ಮಹಾಭಾರತ ಕಾವ್ಯದಲ್ಲಿ ಮರಳು ಪಡೆಯ ಭೀಭತ್ಸ ಕಾರ್ಯವನ್ನು ಚಿತ್ರಿಸಲಾಗಿದೆ.)
Wrenching trees by the roots
ಮರ ಕಿತ್ತಿವೆ ಬುಡ ತಳ
Sweeping all from the path
ಹಾದಿ ಉಡುಗೆ ಝಳ ಝಳ
The sea has joined the fray
ಕಡಲು ಕುಣಿಯೆ ಗೊಂದಣ
And swirled up mountain waves
ತೆರೆ-ಮುರಿ-ನೊರೆ ಧಂಧಣ
To reach the pitchy sky
ಮಬ್ಬೆ ಮಳೆಯು ನಾಡಿಗೆ, ಮುಗಿಲಿನಂಚು ಕಾಡಿಗೆ.
The flash of lurid light reveals on every side a thousand thousand shades of Death begrimed and black
ಸಾವು ಹೊಂಚು, ಅಯ್ಯೊ ಮಿಂಚು, ಕಣ್ತೆರೆದೆಡೆ ಸುತ್ತಿಗೊಂಡ, ಲಕ್ಷಕೋಟಿ ರೂಪುಗೊಂಡ
Scattering plagues and sorrows
ಸಾವಿನಿಂದ ಮುತ್ತುತ, ಕಷ್ಟ ನಷ್ಟ ಬಿತ್ತುತ
Dancing mad with joy, Come, mother, come!
ಹಿಗ್ಗುಗೊಂಡು ಹುಚ್ಚೆದ್ದು ಕುಣಿವ ತಾಯಿ ಬಾ!
For terror is thy name
ರೌದ್ರಿ ನಿನ್ನ ಹೆಸರು
Death is in thy breath
ಮೃತ್ಯು ನಿನ್ನ ಉಸಿರು
And every shaking step
ನಿನ್ನ ಒಂದು ನಡೆ ಅಡಿ
Destroys a world for e’er
ಜಗವ ಮಾಡೆ ಪುಡಿ ಪುಡಿ
Thou Time,
ಓ ಕಾಳಿ(=ಕಾಲ ಅಂದರೆ Time)
Who dares misery love, and hug the form of Death, dance in the destruction’s dance
ಪ್ರಳಯಂಕರಿ
Come, O Mother, come!
ಬಾ, ತಾಯಿಯೆ ಬಾ!

ಸೃಷ್ಟಿಯನ್ನಷ್ಟೇ ಬಯಸುವದು ಪ್ರತಿ ಜೀವಿಗೂ ಸಹಜ. ಆದರೆ, ಸೃಷ್ಟಿ-ಸ್ಥಿತಿ-ಸಂಹಾರ ಇವು ಭಗವಂತನ ಅನಿವಾರ್ಯ ಕರ್ತವ್ಯಗಳು. ಈ ಸೃಷ್ಟಿ ಹಾಗು ಸಂಹಾರ ಕಾರ್ಯಗಳು ಲಕ್ಷ ಲಕ್ಷ ರೂಪದಲ್ಲಿ ಪ್ರತಿದಿನವೂ ನಡದೇ ಇರುತ್ತವೆ. ವಿವೇಕಾನಂದರು ತಮ್ಮ ಪಾರಮಾನಸ ಪ್ರಜ್ಞೆಯಲ್ಲಿ ಇದನ್ನು ಅನುಭವಿಸುತ್ತಿದ್ದಾರೆ. ದೇವಿಯ ಎಲ್ಲ ರೂಪಗಳೂ ಮನುಷ್ಯನಿಗೆ ಪೂಜ್ಯವೇ. ಆದುದರಿಂದಲೇ ಈ ಸಂಹಾರರೂಪಿಣಿ ದೇವಿಯನ್ನು ಈ ಕವನದಲ್ಲಿ ಅವರು ಆಹ್ವಾನಿಸಿದ್ದಾರೆ, ಭಜಿಸಿದ್ದಾರೆ. ಈ ಆಹ್ವಾನಕ್ಕೆ ಮತ್ತೂ ಒಂದು ಕಾರಣವಿರಬಹುದು. ಭಾರತದಲ್ಲಿ ಆ ಸಮಯದಲ್ಲಿ ಹರಡಿದ ಅಜ್ಞಾನ, ಬಡತನ, ಕ್ಷೋಭೆ ಇವೆಲ್ಲವುಗಳಿಂದ ನೊಂದ ವಿವೇಕಾನಂದರು ಇವು ನಿರ್ಮೂಲವಾಗಿ ಹೊಸ ಸೃಷ್ಟಿಯೊಂದು ಮೈದಳೆಯಲಿ ಎಂದು ಆಶಿಸಿರಬಹುದು. ಪ್ರಳಯದ ನಂತರ ಹೊಸ ಸೃಷ್ಟಿ ಎನ್ನುವದು ಕಾಲಗತಿಯೇ ಆಗಿದೆ. ಈ ಕಾರಣಕ್ಕಾಗಿಯೂ ವಿವೇಕಾನಂದರು ಪ್ರಳಯಕಾಳಿಯನ್ನು ಆಹ್ವಾನಿಸುತ್ತಿರಬಹುದು!

ಕಾಮೆಂಟ್‌ಗಳಿಲ್ಲ: