೫. ಗೃಹಿಣಿ

ಮಾರ್ಚ್ ೮, ೨೦೧೧-- ಇದು ಅಂತರರಾಷ್ಟ್ರೀಯ ಮಹಿಳಾದಿನದ ಶತಮಾನೋತ್ಸವದ ದಿನ.
ಈ ಸಂದರ್ಭದಲ್ಲಿ ಬೇಂದ್ರೆಯವರು ಸ್ತ್ರೀಯ ಜೊತೆಗೆ ಯಾವ ರೀತಿಯ ಭಾವಸಂಬಂಧವನ್ನು ಹೊಂದಿದ್ದರು ಎನ್ನುವದನ್ನು ಅರಿಯಲು, ಈ ಮೂರು ಕವನಗಳನ್ನು ಪರಿಶೀಲಿಸಬಹುದು:
(೧) ನಾನು
(೨) ಗಂಡಸು ಹೆಂಗಸಿಗೆ
(೩) ಗೃಹಿಣಿ

‘ನಾನು’ ಕವನದಲ್ಲಿ ಬೇಂದ್ರೆಯವರು ತಾನು ಐದು ತಾಯಂದಿರ ಕೂಸು ಎಂದು ಹೇಳಿಕೊಳ್ಳುತ್ತಾರೆ. ಕವನದಲ್ಲಿಯ ಕ್ರಮದ ಮೇರೆಗೆ, ಈ ತಾಯಂದಿರು ಹೀಗಿದ್ದಾರೆ: ವಿಶ್ವಮಾತೆ, ಭೂಮಿತಾಯಿ, ಭಾರತಮಾತೆ, ಕನ್ನಡ ಮಾತೆ ಹಾಗು ತನ್ನ ಹೆತ್ತ ತಾಯಿ.
‘ಈ ಐದು ಐದೆಯರೆ ಪಂಚಪ್ರಾಣಗಳಾಗಿ, ಈ ಜೀವ ದೇಹನಿಹನು.’

ಬೇಂದ್ರೆಯವರಿಗೆ ಹೆಣ್ಣು ಅಂದರೆ ಪೋಷಣೆಯ ಮೂರ್ತಿ. ಈ ಐದೂ ಮುತ್ತೈದೆಯರು ಬೇಂದ್ರೆಯವರಿಗೆ ವಿಭಿನ್ನ ರೀತಿಯಲ್ಲಿ ಪೋಷಣೆ ಇತ್ತಿದ್ದಾರೆ. ಅವರಿಂದಲೇ ಬೇಂದ್ರೆಯವರು ‘ಕವಿ ಅಂಬಿಕಾತನಯದತ್ತ’ರಾಗಿದ್ದಾರೆ. ತಮ್ಮ ಮಾತೆಯರನ್ನು ಕೃತಜ್ಞತೆಯಿಂದ ನೆನೆದು, ಅವರ ಋಣ ತೀರಿಸುವ ಕೈಂಕರ್ಯವನ್ನು ಬೇಂದ್ರೆಯವರು ಹೊತ್ತಿದ್ದಾರೆ.

ಎರಡನೆಯದಾದ ‘ಗಂಡಸು ಹೆಂಗಸಿಗೆ ’ ಕವನದಲ್ಲಿ, ಬೇಂದ್ರೆಯವರು ಹೆಂಗಸು ಗಂಡಸಿಗೆ ಕೊಡುವ ಪ್ರೀತಿಯ ವಿವಿಧ ಮುಖಗಳನ್ನು ವರ್ಣಿಸುತ್ತಾರೆ:
ತಾಯಿ ಕನಿಮನೆಯೇ, ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
ಮಗಳೊ ನನ್ನೆದೆಯ ಮುಗುಳೊ?

ಯಾವುದೇ ಗಂಡಸಿಗೆ, ಹೆಣ್ಣಿನ ಜೊತೆಗೆ ಬರುವ ಮೊದಲ ಸಂಬಂಧವು ತಾಯಿ-ಮಗುವಿನದು;
ಕಾಲಾನುಕ್ರಮದಲ್ಲಿ ಬಳಿಕ ಬರುವದು ಅಕ್ಕ-ತಮ್ಮ;
ನಂತರ ಅಣ್ಣ-ತಂಗಿ;
ಹರೆಯದಲ್ಲಿ ಗಂಡ-ಹೆಂಡತಿ.
ಕೊನೆಗೆ ಬರುವದು ಅಪ್ಪ-ಮಗಳು.

ಈ ಎಲ್ಲ ಸಂಬಂಧಗಳಲ್ಲಿ ಪ್ರೀತಿಯ ಸ್ವರೂಪವೂ ಸಹ ಭಿನ್ನವಾಗಿರುತ್ತದೆ.
ತಾಯಿಗೆ ಮಗುವಿನ ಮೇಲಿರುವದು ಅನುಕಂಪ ತುಂಬಿದ ವಾತ್ಸಲ್ಯ. ಅವಳು ‘ಕನಿಮನೆ’ ಅಂದರೆ ಮರುಕದ ಉಗ್ರಾಣ.
ಅಕ್ಕನಿಗೆ ತಮ್ಮನ ಮೇಲಿರುವದು ಅಕ್ಕರತೆ.
ತಂಗಿಯು ಅಣ್ಣನಿಗೆ ಮುದ್ದು ಬಂಗಾರ.
ಹೆಂಡತಿಯು ಇವನ ಪುರುಷಾರ್ಥಗಳ ಸಹಧರ್ಮಿಣಿ. ಆದುದರಿಂದ ಅವಳು ಮೈಗೊಂಡ ನನ್ನಿ.
ಮಗಳಂತೂ ಇವನ ಹಂಬಲದಿಂದ ರೂಪು ತಳೆದ ಮುಗುಳು ಅಂದರೆ ಹೂಮೊಗ್ಗು!

ಇವೆಲ್ಲ ವೈಯಕ್ತಿಕ ಸಂಬಂಧಗಳು.
ಸಾಂಸ್ಕೃತಿಕ ನೆಲೆಯಲ್ಲಿ ಗಂಡು ಹಾಗು ಹೆಣ್ಣಿನ ಪಾತ್ರಗಳೇನು ಎನ್ನುವದನ್ನು ಬೇಂದ್ರೆಯವರು ತಮ್ಮ‘ಗೃಹಿಣಿ’ ಕವನದಲ್ಲಿ ಈ ರೀತಿಯಾಗಿ ಹಿಡಿದಿಟ್ಟಿದ್ದಾರೆ:


ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.

ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.

ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.
. . . . . . . . . . . . . . . . . . . . . . . . . . . . . . . . . . . . . . . . . .. . . . . . ..

ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.

ಈ ಕವನದ ಮೊದಲ ನುಡಿಯ ಮೊದಲ ಸಾಲು ಮಾನವ ಸಂಸ್ಕೃತಿಯ ಮೊದಲ ಮೆಟ್ಟಲನ್ನು ಚಿತ್ರಿಸುತ್ತದೆ. ಇದಿನ್ನೂ ಬೇಟೆಯಾಡುವ ಹಂತ. ಈ ಹಂತದಲ್ಲಿ ಗಂಡಿಗಿರುವ ಶೌರ್ಯದ, ಕ್ರೌರ್ಯದ ಹಮ್ಮನ್ನು ಬೇಂದ್ರೆಯವರು ‘ಏಳು ಮೆಟ್ಟಿನ ಹುಲಿ’ ಹಾಗು ‘ಬೀರಬೇಂಟೆ’ ಪದಗಳಿಂದ ವ್ಯಕ್ತಪಡಿಸಿದ್ದಾರೆ. ಗಂಡಸಿನಲ್ಲಿರುವ ಈ ಜೀವಿ-ವಿರೋಧಿ, ಭಾವೋನ್ಮಾದವನ್ನು ಜೀವನ್ಮುಖಿ ಭಾವವನ್ನಾಗಿ ತಿದ್ದಿದವಳೇ ಹೆಣ್ಣು. ಜೀವವಿನಾಶಕ್ಕಾಗಿ ಹೊರಟು ನಿಂತ ಗಂಡಸನ್ನು ಅಲ್ಲಿಯೇ ತಡೆದು ನಿಲ್ಲಿಸಿ, ಸೃಷ್ಟಿಸಂಕೇತವಾದ ಮಗುವನ್ನು ಮುದ್ದಿಸುವಂತೆ ಮಾಡಿದವಳೇ ಹೆಣ್ಣು. ಇದನ್ನು ಸಾಧಿಸುವ ಅವಳ ಶಾಂತ ರೀತಿಯನ್ನು ಬೇಂದ್ರೆ ಹೀಗೆ ಬಣ್ಣಿಸುತ್ತಾರೆ:
‘ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ,ತಾನೆ ತನ್ನಷ್ಟಕ್ಕೆ ಹಾಡಿದಾಕೆ.’
ಬೇಟೆಯ ಹುಮ್ಮಸ್ಸಿನಲ್ಲಿಯೇ ಏಕಲಕ್ಷ್ಯನಾದ ಗಂಡಿನ ಕಿವಿಯಲ್ಲಿ ಇವಳು ಮೃದುವಾಗಿ ಪಿಸು ನುಡಿಯುತ್ತಾಳೆ. ಗರ್ವದ ಗಂಡಸನ್ನು ಈ ರೀತಿಯಾಗಿ ಅವಳು ಬದಲಾಯಿಸುತ್ತಾಳೆ. ಹಿಂಸಾತ್ಮಕ ಸಂಸ್ಕೃತಿಯನ್ನು ಅಹಿಂಸಾತ್ಮಕ ಸಂಸ್ಕೃತಿಗೆ ಪರಿವರ್ತಿಸುವ ಮೊದಲ ಹೆಜ್ಜೆ ಇದು. ಇದನ್ನು ಸಾಧಿಸುವಲ್ಲಿ ಅವಳು ಯಾವುದೇ ಅಬ್ಬರವನ್ನು ತೋರುವದಿಲ್ಲ.
ತನ್ನಷ್ಟಕ್ಕೆ ಹಾಡುತ್ತ, ಮುಂದುವರೆಯುವ ಮಾದರಿ ಅವಳದು. ಹಾಡುವದು ನಾಗರಿಕ ಜೀವನದ ಮೊದಲ ಕಲೆ ಎನ್ನುವದನ್ನೂ ಬೇಂದ್ರೆ ಸೂಚಿಸುತ್ತಾರೆ. ಈ ಕಲೆಗೆ ಮೂಲಳಾದವಳು ತಾಯಿ ಸರಸ್ವತಿ ಅಂದರೆ ಹೆಣ್ಣು.


ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.

ಎರಡನೆಯ ನುಡಿಯು ನಾಗರಿಕತೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಅಡವಿಯಲ್ಲಿರುವ ಪ್ರಾಣಿಗಳಂತೆಯೇ ಜೀವಿಸುತ್ತಿದ್ದ ಮನುಷ್ಯನ ಸಾಂಸ್ಕೃತಿಕ ಪ್ರಜ್ಞೆ ಬದಲಾಗಿರುವದನ್ನು ಈ ನುಡಿ ವರ್ಣಿಸುತ್ತದೆ. ಸೌಂದರ್ಯದ ಸೃಷ್ಟಿಯಲ್ಲಿ ಮಾನವನಿಗೆ ಅಭಿರುಚಿ ಬೆಳೆದದ್ದನ್ನು, ‘ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ.’ ಎನ್ನುವ ವರ್ಣನೆಯ ಮೂಲಕ ಬೇಂದ್ರೆ ಸೂಚಿಸುತ್ತಾರೆ. ಏನೇ ಆದರೂ ತನ್ನ ಹಾಗು ತನ್ನವರ ಶೃಂಗಾರಕ್ಕೆ ಈ ನಾಗರಿಕತೆ ಸೀಮಿತವಾಗಿ ಉಳಿಯಲಿಲ್ಲ. ತಿಂದುಂಡು ಸಾಯುವ ಭೌತಿಕ ಲೋಕದಾಚೆಗೆ ಇರುವ ಪಾರಮಾರ್ಥಿಕ ಲೋಕದ ಅರಿವು ಹೆಣ್ಣಿನಲ್ಲಿ ಮೂಡತೊಡಗಿದೆ. ಅವಳು ತನ್ನ ಗೂಡಿನ ಪಕ್ಕದ ಗಿಡಗಳಿಗೆ ಬಾವುಟವನ್ನು ಕಟ್ಟುತ್ತಾಳೆ. ಇದು ಮಾನವನ ಸೌಂದರ್ಯಾಭಿರುಚಿಯ ಹಾಗು ಉನ್ನತಿಯ ಅಭೀಪ್ಸೆಯನ್ನು ತೋರುತ್ತದೆ. ತಾವಿರುವ ಲೋಕವು ಪ್ರಾಣಿಲೋಕವಾಗದೆ, ಅಂತರಂಗವನ್ನು ಬೆಳಗುವ ಲೋಕವಾಗಲಿ ಎಂದು ಅವಳು ಬೇಡಿಕೊಳ್ಳುತ್ತಾಳೆ. ಮಾನವಶಕ್ತಿಯನ್ನು ಮೀರಿದ ಚೈತನ್ಯವೊಂದಿದೆ ಎಂದು ಅವಳಿಗೆ ಅರಿವಾಗತೊಡಗಿದ್ದು ಈ ‘ಬೇಡಿಕೊಳ್ಳುವ ’ ಪದದಿಂದ ವ್ಯಕ್ತವಾಗುತ್ತದೆ. ಈ ಬೇಡಿಕೆಯಲ್ಲಿ ಅಬ್ಬರವಿಲ್ಲ. ಅವಳದು ಮೂಕ ಮಾತುಗಳು, ವಿನಯಪೂರ್ಣ ಸುಸಂಸ್ಕೃತಿ.

ದೇವರ ಕಲ್ಪನೆ ಮೂಡುತ್ತಿರುವ ಈ ಕಾಲಾವಧಿಯು ನಾಗರಿಕತೆಯ ಪ್ರಾಥಮಿಕ ಸಂಶೋಧನೆಗಳ ಕಾಲಾವಧಿಯೂ ಆಗಿದೆ. ಬತ್ತಲೆ ಮಾನವಿಯು ಇದೀಗ ಗಿಡಮರಗಳ ತೊಪ್ಪಲನ್ನು ಕಟ್ಟಿಕೊಳ್ಳಲು ಕಲಿತಳು. ತನ್ನ ಚೆಲುವಿಗೆ ಮೆರಗು ಕೊಡಲೆಂದು ಹಕ್ಕಿಯ ಗರಿಯನ್ನು ತಲೆಗೆ ಆಭರಣವಾಗಿ ಬಳಸತೊಡಗಿದಳು. ಇದೆಲ್ಲವೂ ನಾಗರಿಕತೆಯ ಬೆಳವಣಿಗೆಗೆ ಹೆಣ್ಣು ಕೊಟ್ಟ ಕಾಣಿಕೆ. ನಮ್ಮ ದೇವತೆಗಳ ಉಡುಗೆ, ತೊಡುಗೆಗಳಲ್ಲಿಯೂ ಈ ಕಾಲಾವಧಿಯು ಬಿಂಬಿತವಾಗಿದೆ. ಸವದತ್ತಿಯ ಎಲ್ಲಮ್ಮನು ತನ್ನ ಭಕ್ತರಿಗೆ ಬೇವಿನ ತೊಪ್ಪಲನ್ನು ತೊಡಿಸುತ್ತಾಳೆ; ಬನಶಂಕರಿ ದೇವಿಯು ‘ಶಾಕಾಂಬರಿ’, ಅಂದರೆ ಗಿಡದ ತೊಪ್ಪಲನ್ನು ಉಟ್ಟವಳು. ಶ್ರೀಕೃಷ್ಣನು ತನ್ನ ತಲೆಗೊಂದು ನವಿಲಗರಿಯನ್ನು ಸಿಕ್ಕಿಸಿಕೊಂಡವನು. ನಮ್ಮಂತೆ ನಮ್ಮ ದೇವರುಗಳೂ ಸಹ ‘ಬತ್ತಲೆ ಕಾಳಿದೇವಿ’ಯಿಂದ, ಸಕಲಾಭರಣಶೋಭಿತೆಯಾದ ಲಕ್ಷ್ಮೀದೇವಿಯವರೆಗೂ ವಿವಿಧ ನಾಗರಿಕ ಸ್ತರಗಳಲ್ಲಿ ಹಾಯ್ದು ಬಂದವರೇ.


ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.

ಬಯಲಲ್ಲಿ ಬಿದ್ದ ಪ್ರಾಣಿಯನ್ನು ಮನೆಯಲ್ಲಿ ಬೆಳೆಯುವ ಮಾನವನನ್ನಾಗಿ ಮಾಡಿದವಳೇ ಹೆಣ್ಣು. ಆದುದರಿಂದಲೇ ಅವಳು ಗೃಹಿಣಿ.ನಾಗರಿಕತೆಯ ಬೆಳವಣಿಗೆ ಹಾಗು ಸಂಸ್ಕೃತಿಯ ಉನ್ನತೀಕರಣ ಇವು ಹೆಣ್ಣಿನ ಕೊಡುಗೆ. ಇದನ್ನೆಲ್ಲ ಅವಳು ಮೌನವಾಗಿಯೇ ಸಾಧಿಸುತ್ತ ಬಂದಿದ್ದಾಳೆ. ಈ ಸಾಧನೆಯ ಹಿಂದಿನ ಅಪೇಕ್ಷೆ ಏನು? ಲೋಕಕ್ಕೆಲ್ಲ ಶುಭವಾಗಲಿ ಎನ್ನುವದೇ ಅವಳ ಹಿರಿಹಂಬಲ. ಅದನ್ನು ಅವಳು ಸಾಧಿಸುವದು ಮುಂಜಾವಿನಲ್ಲೆದ್ದು ಮನೆಯ ಹೊಸ್ತಿಲಕೆ ರಂಗೋಲಿ ಎಳೆಯುವ ಕ್ರಿಯೆಯೊಂದಿಗೆ. ಇದನ್ನು ಬೇಂದ್ರೆಯವರು ’ಶುಭವನ್ನು ಬರೆಯುವ ಕ್ರಿಯೆ’ ಎಂದು ಬಣ್ಣಿಸುತ್ತಾರೆ. ಕುಟುಂಬವೇ ಸಮಾಜದ ಪ್ರಾಥಮಿಕ ಘಟಕ. ಈ ಕುಟುಂಬಕ್ಕೆ ಅವಳು ಆಡಂಬರದ ಸಂಪತ್ತನ್ನು ಬಯಸುವದಿಲ್ಲ, ಕೇವಲ ಶುಭಮಂಗಲವನ್ನು ಬಯಸುತ್ತಾಳೆ. ತಾನು ಬೆಳೆಯುವದೇ ಸಮಾಜದ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆ ಎನ್ನುವದನ್ನು ಅರಿತ ಅವಳು ‘ಬಾಳ ಸುಳಿಯಲಿ ಬೆಳೆದು ತೋರಿಸುತ್ತಾಳೆ ’.
ರಂಗೋಲಿಯನ್ನು ಬರೆಯುವದು ಒಂದು ಚಿತ್ರಕಲೆ. ನಾಗರಿಕ ಕಲೆಗಳ ಮತ್ತೊಂದು ಸಂಶೋಧನೆಯ ಪ್ರವರ್ತಕಿ ಹೆಣ್ಣೇ ಆಗಿದ್ದಾಳೆ!

ಗಂಡಸಿನ ಜಯವು ಪ್ರಕೃತಿಯ ಮೇಲಿನ ಬಾಹ್ಯಜಯವಾಗಿದ್ದರೆ, ಹೆಣ್ಣಿನ ಜಯವು ಸಾಂಸ್ಕೃತಿಕ ಜಯ. ಇಂತಹ ಜಯವು ಮಾನವಲೋಕಕ್ಕೆ ಪ್ರತಿದಿನವೂ ಲಭಿಸಲಿ ಎಂದು ಅವಳು ತಾನು ನಂಬುತ್ತಿರುವ ಆ ದೈವೀಚೈತನ್ಯಕ್ಕೆ ಪ್ರಾರ್ಥಿಸುತ್ತಾಳೆ. ಈ ಕೊನೆಯ ಸಾಲಿನ ಮೂಲಕ, ಬೇಂದ್ರೆಯವರು ಹೆಣ್ಣಿನ ಮನೋಧರ್ಮವನ್ನು ತೋರುತ್ತಿದ್ದಾರೆ.
ಮೂರು ನುಡಿಗಳ ಈ ಪುಟ್ಟ ಕವನದಲ್ಲಿ ನಾಗರಿಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಹಾಗು ಗೃಹಿಣಿಯೇ ಮಾನವಸಂಸ್ಕೃತಿಯ ಸ್ರೋತ ಎನ್ನುವ ಸತ್ಯವನ್ನು ಬೇಂದ್ರೆಯವರು ತೆರೆದು ತೋರಿಸುತ್ತಿದ್ದಾರೆ. ತನ್ನ ಕುಟುಂಬವನ್ನು ಮುನ್ನಡೆಸುವ ಮೂಲಕ ಹೆಣ್ಣು ಸಮಾಜವನ್ನು ಮುನ್ನಡೆಸುತ್ತಾಳೆ. ಆದುದರಿಂದ ಅವಳು ವಿಶ್ವಕುಟುಂಬಿನಿಯಾದ ಗೃಹಿಣಿ. ಲೋಕಕಲ್ಯಾಣವೇ ಅವಳ ಪರಮಾರ್ಥ.
ಇದು ಸ್ತ್ರೀಯ ಬಗೆಗಿರುವ ಬೇಂದ್ರೆ ದೃಷ್ಟಿ.

ಹೆಚ್ಚಿನ ಓದಿಗೆ: http://sallaap.blogspot.com/2011/03/blog-post_07.html

ಕಾಮೆಂಟ್‌ಗಳಿಲ್ಲ: