೨. ಅನಂತ ಪ್ರಣಯ

ನಿಸರ್ಗಪ್ರೇಮವು ನವೋದಯ ಕಾವ್ಯದ ಪ್ರಧಾನ ಲಕ್ಷಣವಾಗಿದೆ. ನಿಸರ್ಗಗೀತೆಗಳನ್ನು ನೇರವಾಗಿ ಬರೆಯದಂತಹ ನವೋದಯ ಕವಿಗಳ ಕವನಗಳಲ್ಲಿ ಸಹ, ನಿಸರ್ಗವರ್ಣನೆ backdrop ಆಗಿ ಬಂದೇ ಬಂದಿದೆ. ಪ್ರಕೃತಿಯ ಚೆಲುವನ್ನು ವರ್ಣಿಸಿದ ನವೋದಯ ಕವಿಗಳಲ್ಲಿ ಬೇಂದ್ರೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಪ್ರಕೃತಿವರ್ಣನೆಯಲ್ಲಿ ಇವರಿಗೂ ಇತರ ಕವಿಗಳಿಗೂ ಇರುವ ವ್ಯತ್ಯಾಸವೆಂದರೆ, ಬೇಂದ್ರೆಯವರ ಕವನಗಳಲ್ಲಿ ಪ್ರಕೃತಿ ಕೇವಲ ಭೌತಿಕ ವಸ್ತುವಲ್ಲ, ಅದು ಚೈತನ್ಯದ ಒಂದು ರೂಪವಾಗಿದೆ.

ಬೇಂದ್ರೆಯವರ ಸುಪ್ರಸಿದ್ಧ ಕವನ “ಬೆಳಗು” ಇದಕ್ಕೊಂದು ಉತ್ತಮ ಉದಾಹರಣೆ. “ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣ, ಇದು ಬರಿ ಬೆಳಗಲ್ಲೊ ಅಣ್ಣ” ಎಂದು ಹೇಳುವ ಮೂಲಕ ಬೇಂದ್ರೆಯವರು ಭೌತಿಕ ವಸ್ತುವಿನ ಹಿಂದೆ ಅಡಗಿರುವ ಅಭೌತಿಕ ಚೈತನ್ಯವನ್ನು ಓದುಗರಿಗೆ ತೋರಿಸುತ್ತಿದ್ದಾರೆ.

ಬೇಂದ್ರೆಯವರ ಮತ್ತೊಂದು ಕವನ “ಅನಂತ ಪ್ರಣಯ”ದಲ್ಲಿ, ಅವರು ಇದಕ್ಕೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ಇಲ್ಲಿ ಸೂರ್ಯ, ಚಂದ್ರ ಹಾಗು ಭೂಮಿ ಇವು ಚೈತನ್ಯದ ಭೌತಿಕ ರೂಪಗಳು. ಇಷ್ಟೇ ಅಲ್ಲ, ಈ ಚೈತನ್ಯದ ರೂಪಗಳಲ್ಲಿ ಪರಸ್ಪರ ಪ್ರೇಮಾಕರ್ಷಣೆ ಇದೆ. ಈ ಪ್ರೇಮಾಕರ್ಷಣೆಯು ಭಗವತ್ಪ್ರೇಮದ ಭಾಗವೇ ಆಗಿದೆ. ಭಗವಂತನ ಪ್ರೇಮವೇ ಸೃಷ್ಟಿರೂಪವಾಯಿತು ಎಂದು ಭಾರತೀಯ ದರ್ಶನಗಳಲ್ಲಿ ಹೇಳಲಾಗುತ್ತಿದೆ.

“ಮೇಘದೂತ”ದ ಕನ್ನಡಾನುವಾದದ ಪೀಠಿಕೆಯಲ್ಲಿ, ಬೇಂದ್ರೆಯವರು ಭಾರತೀಯ ದರ್ಶನದಲ್ಲಿ ಸೃಷ್ಟಿ ರೂಪುಗೊಂಡ ಬಗೆಯನ್ನು ವರ್ಣಿಸುತ್ತ ಹೀಗೆ ಬರೆದಿದ್ದಾರೆ:

“ ಬ್ರಹ್ಮ ಹೃದಯದಲಿ ಜನಿಸಿದಿಚ್ಛೆ ಕೊನೆಗಾಣಲೆಂದು ಬಾಳಿ
ಕಂಡ ಕಡೆಗು ಶತರೂಪೆಯಲ್ಲಿ ಮಧು-ರೂಪ-ರೂಪತಾಳಿ
ಜಗದ ತಂದೆ-ತಾಯಿಯರ ಕಂದ ಅವತರಿಸೆ ಜೀವನಾಗಿ
ಬಂತು ಪೂರ್ವದಲಿ ದೇವ-ಕಾಮವೇ ಕಾಮ-ದೇವನಾಗಿ ”

ಈ ರೀತಿಯಾಗಿ ದೇವಕಾಮವೇ ಕಾಮದೇವನಾಗಿ ರೂಪ ತಾಳಿ, ಸೃಷ್ಟಿಲೀಲೆಯಲ್ಲಿ ತೊಡಗಿದ್ದಾನೆ. ಈ ವಿಶ್ವದ ಎಲ್ಲ ಚರಾಚರ ವಸ್ತುಗಳು ಪ್ರೇಮಾಕರ್ಷಣೆಯಲ್ಲಿ ಬಂಧಿತವಾಗಿವೆ.
…………………………………………………………………
“ಅನಂತ ಪ್ರಣಯ”ವು ವಿಶ್ವವ್ಯಾಪ್ತಿಯುಳ್ಳ ತ್ರಿಕೋಣಪ್ರೇಮದ ಕತೆ. ಸೂರ್ಯ ಹಾಗು ಚಂದ್ರರು ಮಿತ್ರರು. ಚಂದ್ರನಿಗೆ ಭೂಮಿಯಲ್ಲಿ ಆಕರ್ಷಣೆ. ಆದರೆ ಭೂಮಿ ಹಾಗು ಸೂರ್ಯ ಪರಸ್ಪರ ಪ್ರಣಯಿಗಳು. ಇದೊಂದು ಕೊನೆಯಿಲ್ಲದ ಪ್ರಣಯಕತೆ. ಅಂತೆಯೇ ಈ ಕವನಕ್ಕೆ “ಅನಂತ ಪ್ರಣಯ” ಎನ್ನುವ ಶೀರ್ಷಿಕೆ ಕೊಡಲಾಗಿದೆ.

ಕವನದ ಪೂರ್ತಿಪಾಠ ಹೀಗಿದೆ:

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.
………………………………………………………………………
ಮೊದಲ ನುಡಿ:
“ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.”

ಕವನದ ಮೊದಲ ನುಡಿಯ ಮೊದಲೆರಡು ಸಾಲುಗಳಲ್ಲಿಯೇ, ಬೇಂದ್ರೆಯವರು ಭೂಮಿಯಲ್ಲಿ ತುಂಬಿರುವ ಪ್ರಣಯಭಾವದ ಗುರುತುಗಳನ್ನು ಸೂಚಿಸಿದ್ದಾರೆ.

ಭೂಮಿಯ ಉತ್ತರ ಧ್ರುವ ಹಾಗು ದಕ್ಷಿಣ ಧ್ರುವಗಳಲ್ಲಿ polar magnets ಇವೆ ಎನ್ನುವದು ಒಂದು ವೈಜ್ಞಾನಿಕ ಸತ್ಯ. ವಿರುದ್ಧ ಬಗೆಯ ಚುಂಬಕಗಳು (=magnets) ಪರಸ್ಪರ ಆಕರ್ಷಿಸುತ್ತವೆ ಎನ್ನುವದೂ ಸಹ ವೈಜ್ಞಾನಿಕ ಸತ್ಯವೇ. ಆದರೆ ಈ ವಾಸ್ತವತೆ ಬೇಂದ್ರೆಯವರ ಅನುಪಮ ಕಲ್ಪನೆಯಲ್ಲಿ ತಾಳುವ ಸುಂದರ ರೂಪವೇ ಬೇರೆ:
Magnetic force ಎನ್ನುವ ಭೌತಿಕ ಆಕರ್ಷಣೆ ಈ ಕವನದಲ್ಲಿ ಪ್ರಣಯಭಾವವಾಗಿದೆ.

ಭೂಮಿಯಲ್ಲಿರುವ ಪ್ರಣಯಭಾವವು ಜಾಗೃತವಾಗಿದ್ದಂತೆಯೇ, ಇನ್ನೆರಡು ಚೈತನ್ಯರೂಪಿಗಳಾದ ಸೂರ್ಯ ಹಾಗು ಚಂದ್ರರಲ್ಲಿಯೂ ಸಹ ಗೆಳೆತನದ ಒಲುಮೆ ಇದೆ.
“ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.”

ಈ ಗೆಳೆಯರಲ್ಲಿ ಒಬ್ಬನು, ಅಂದರೆ ಚಂದ್ರನು ಭೂಮಿಯಲ್ಲಿ ಪ್ರಣಯಾಸಕ್ತನಾಗಿದ್ದಾನೆ. ಭೂಮಿಗಾಗಿ ಅವನು ಹಲಬುವದನ್ನು ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ರೀತಿಯಾಗಿ ಬಣ್ಣಿಸುತ್ತಾರೆ:

“ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.”

ಚಂದ್ರನೇನೋ ಭೂಯಾಮಿನಿಯನ್ನು ಪ್ರಣಯಕ್ರೀಡೆಗೆ ಕರೆಯುತ್ತಿದ್ದಾನೆ. ಆದರೆ ಈ ಭೂಯಾಮಿನಿ ಅವನ ಯಾಚನೆಯನ್ನು ಒಪ್ಪಿಲ್ಲ. ಹೀಗಾಗಿ ಚಂದ್ರನು (=ತಿಂಗಳು), ಪ್ರತಿತಿಂಗಳೂ ಕ್ಷೀಣಿಸುತ್ತಿದ್ದಾನೆ; ಅವಳು ತನ್ನ ಬೇಟಕ್ಕೆ ಒಪ್ಪಿಕೊಳ್ಳಬಹುದೆನ್ನುವ ಆಸೆಯಲ್ಲಿ ಮತ್ತೆ ಮತ್ತೆ ಮೈತುಂಬಿಕೊಳ್ಳುತ್ತಾನೆ. ಪೂರ್ಣಿಮೆಯಂದು ತನ್ನ ಪ್ರೇಮದ ಬೆಳದಿಂಗಳನ್ನು ಹೊರಸೂಸಿ ಭೂಮಿಯ ಮೇಲೆ ತುಳುಕಿಸುತ್ತಾನೆ. ಈ ಯಾಚನೆ ಹಾಗು ಯಾತನೆಯ ಸವಿಯನ್ನು ಚಂದ್ರನು ತನ್ನೊಳಗೇ ಸವಿಯುತ್ತಿದ್ದಾನೆ.
ವಿಪ್ರಲಂಭ ಶೃಂಗಾರಕ್ಕೆ ಈ ನುಡಿಯು ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು.

ಆದರೆ ಇತ್ತ ಭೂಮಿ ಹಾಗು ಸೂರ್ಯರ ಪ್ರಣಯ ಅಬಾಧಿತವಾಗಿ ಸಾಗಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಿಂದಾಗಿ ಋತುಗಳು ಬದಲಾಗುತ್ತಿವೆ. ಪ್ರತಿ ವಸಂತಕ್ಕೂ ಭೂಮಿಯ ಮೇಲೆ ಹೂಗಳು ಮತ್ತೆ ಮತ್ತೆ ಅರಳುತ್ತವೆ. ಇದು ಎಷ್ಟು ಕೋಟಿ ವರ್ಷದಿಂದ ನಡೆದಿದೆಯೊ ಬಲ್ಲವರಾರು? ಬೇಂದ್ರೆಯವರ ಕವಿ ಕಣ್ಣಿಗೆ ಇದು ಕಾಣುವ ಬಗೆ ಬೇರೆ. ಸೂರ್ಯನ ಕಿರಣಸ್ಪರ್ಷದಿಂದ ಪುಲಕಿತಳಾದ ಭೂಮಿ ಮರಳಿ ಮರಳಿ ಕುಸುಮಿಸುತ್ತಾಳೆ; ಕೋಟಿ ಕೋಟಿ ಸಲ ಅವಳು ಹೊಸತನ ಪಡೆಯುತ್ತಾಳೆ ಎಂದು ಬೇಂದ್ರೆ ಹೇಳುತ್ತಾರೆ.
ಭೂಮಿಯ ಪ್ರಣಯವೇನೋ ನವಯೌವನದಿಂದಲೇ ತುಂಬಿದೆ. ಸೂರ್ಯನೂ ಸಹ ಅಷ್ಟೇ ಪ್ರೇಮದಿಂದ ತುಂಬಿಕೊಂಡಿದ್ದಾನೆ. ಮಿತ್ರನ (=ಸೂರ್ಯನ) ಮೈತ್ರಿಯ (=ಒಲವಿನ) ಒಸಗೆ(=ಸಂದೇಶ) ಮಸಗದಿದೆ(=ಕಳೆಗುಂದಿಲ್ಲ); ಬದಲಾಗಿ ಅದು ಹೆಚ್ಚಾಗುತ್ತಲೆ ಇದೆ. (=ಮಸೆಯಿಸಿತು.)

ಆಕಾಶದೇವತೆಗಳ ಈ ಪ್ರಣಯಕ್ಕೆ ಬೇಂದ್ರೆಯವರು ಆಕಾಶದಲ್ಲಿರುವ ನಕ್ಷತ್ರಪುಂಜಗಳನ್ನೇ ಸಾಕ್ಷಿಯಾಗಿ ಮಾಡುತ್ತಾರೆ. ಕಣ್ಣು ತೆರೆದುಕೊಂಡೇ ಇರುವ (=ಅಕ್ಷಿನಿಮೀಲನ ಮಾಡದ) ನಕ್ಷತ್ರಗಳಿವು.
ದೇವತೆಗಳು ಅಕ್ಷಿನಿಮೀಲನ ಮಾಡುವದಿಲ್ಲವೆನ್ನುವದನ್ನು ನೆನಪಿಸಿಕೊಂಡರೆ, ಈ ನಕ್ಷತ್ರಗಳೂ ಸಹ ದೇವತಾಸಮೂಹವೇ ಎನ್ನುವ ಕಲ್ಪನೆ ಬರುವದು. ಆದರೆ ಈ ತಾರಾಸಮೂಹವು ಗಗನದಲ್ಲಿ ಶೋಭಿಸುತ್ತಿರುವ ಹಾರದಂತೆ ಕಾಣುತ್ತದೆ ಎಂದು ಬೇಂದ್ರೆಯವರು ಕಲ್ಪಿಸುತ್ತಾರೆ.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

ಇತ್ತ ಚಂದ್ರನ ಗತಿ ಏನು? ಆತ ತನ್ನ ಹಂಬಲವನ್ನು ಜೀವಂತವಾಗಿ ಇಟ್ಟುಕೊಂಡ ಭಗ್ನಪ್ರಣಯಿ.
ಅಂತೆಯೇ,
“ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ”!

ಭೂಮಿ ಹಾಗು ಸೂರ್ಯರ ಕೂಟ ನಿರಂತರವಾಗಿದೆ. ಭೂಮಿಗಾಗಿ ಚಂದ್ರನ ಬೇಟ ನಿರಂತರವಾಗಿದೆ.
ಇದು ನಿರಂತರವಾದ ಅನಂತ ಪ್ರಣಯ.
ಬೇಂದ್ರೆಯವರ ಕಲ್ಪನಾಪ್ರತಿಭೆಯು ಸಮಗ್ರ ವಿಶ್ವವನ್ನೇ ಆವರಿಸಿಕೊಳ್ಳಬಲ್ಲದು ಎನ್ನುವದಕ್ಕೆ ಈ ಕವಿತೆ ಸಾಕ್ಷಿಯಾಗಿದೆ.

(ಈ ಗೀತೆಯನ್ನು ದಿವಂಗತ ಪುಟ್ಟಣ್ಣ ಕಣಗಾಲ ಅವರು ತಮ್ಮ “ಶರಪಂಜರ” ಚಲನಚಿತ್ರದಲ್ಲಿ ಬಳಸಿಕೊಂಡಿದ್ದಾರೆ.)
ಹೆಚ್ಚಿನ ಓದಿಗೆ :http://sallaap.blogspot.com/2008/08/blog-post.html

ಕಾಮೆಂಟ್‌ಗಳಿಲ್ಲ: