೧. ನೀ ಹೀಂಗ ನೋಡಬ್ಯಾಡ ನನ್ನ

ಪುತ್ರಶೋಕ ನಿರಂತರ ಎಂದು ಹೇಳುತ್ತಾರೆ. ಬೇಂದ್ರೆ ದಂಪತಿಗಳು ತಮಗೆ ಜನಿಸಿದ ೯ ಮಕ್ಕಳಲ್ಲಿ ೬ ಮಕ್ಕಳನ್ನು ಕಳೆದುಕೊಂಡ ದುರ್ದೈವಿಗಳು. ಮೇಲಿಂದ ಮೇಲೆ ಎರಗಿದ ಈ ಆಘಾತಗಳನ್ನು ಸಹಿಸಿದ ಬೇಂದ್ರೆಯವರು ತಮ್ಮ ಸಹೃದಯ ಓದುಗರಿಗೆ ಹೇಳುವದು ಹೀಗೆ:

“ಎನ್ನ ಪಾಡೆನೆಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ !
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ !”
………………………………………………………………………
“ ನೀ ಹೀಂಗ ನೋಡಬ್ಯಾಡ ನನ್ನ ” ಕವನದಲ್ಲಿಯೂ ಸಹ ಶಿಶುವಿನ ಮರಣದ ಸಂದರ್ಭ ವರ್ಣಿತವಾಗಿದೆ. ಅದನ್ನು ಕವಿ ಹೀಗೆ ಸೂಚಿಸಿದ್ದಾರೆ:
“ ಆಪತ್ಯಗಳನ್ನು ಕಳೆದುಕೊಂಡ ಸತಿಯೊಬ್ಬಳು ಆಸನ್ನಮರಣ ಶಿಶುವನ್ನು ನೋಡಲು ಬಂದ ಪತಿಯನ್ನು ಕುರಿತು ಅನಿರ್ವಚನೀಯ ದುಃಖದಿಂದ ಅರ್ಥಪೂರ್ಣವಾಗಿ ನೋಡಿದಾಗ, ಅವನ ಎದೆಯಲ್ಲಿ ಹುಟ್ಟಿದ ಹಾಡು ಇದು…”

ಬೇಂದ್ರೆಯವರು ಈ ಕಾಲ್ಪನಿಕ ಕವನವನ್ನು ಬರೆದ ಬಳಿಕ, ಅವರು ನಿಜಜೀವನದಲ್ಲಿಯೂ ಇಂತಹದೇ ಆಘಾತವನ್ನು ಎದುರಿಸಿದರು. ಅವರ ಒಂದೂವರೆ ತಿಂಗಳ ಹೆಣ್ಣುಕೂಸು ‘ಲಲಿತಾ’ ಮರಣವನ್ನಪ್ಪಿದಳು. ಆ ಸಂದರ್ಭದಲ್ಲಿ ಅವರು ಬರೆದ ಶೋಕಗೀತೆ ‘ಲಲಿತಾ’.
………………………………………………………………
“ ನೀ ಹೀಂಗ ನೋಡಬ್ಯಾಡ ನನ್ನ ” ಕವನದ ಪೂರ್ತಿಪಾಠ ಹೀಗಿದೆ :

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ? ||ಪಲ್ಲ||

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
………………………………………………………………..

ಕಣ್ಣೆದುರಿನಲ್ಲಿಯೇ ಕೊನೆಯುಸಿರನ್ನು ಎಳೆಯುತ್ತಿರುವ ಕೂಸನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ ತಾಯಿ ತನ್ನ ಪತಿಯ ಕಡೆಗೆ ನೋಡುತ್ತಾಳೆ. ಆ ನೋಟದಲ್ಲಿ ಏನೆಲ್ಲ ಭಾವನೆಗಳು ಅಡಗಿವೆ? ಸಾಯುತ್ತಿರುವ ಕೂಸಿನ ಬಗೆಗಿನ ದುಃಖ, ತನ್ನ ಪತಿ ಏನಾದರೂ ಮಾಡಿ ಆ ದುರಂತವನ್ನು ತಪ್ಪಿಸಬಹುದೇನೊ ಎನ್ನುವ ಆಸೆ, ತನ್ನ ಹಾಗೂ ತನ್ನ ಪತಿಯ ಅಸಹಾಯಕತೆ ಹಾಗು ಅವನ ದುಃಖದ ಅರಿವು ಇವೆಲ್ಲ ಅವಳ ನೋಟದಲ್ಲಿವೆ.

ಕೂಸು ಜೀವ ಬಿಡುತ್ತಿರುವ ಈ ಗಳಿಗೆಯಲ್ಲಿ, ಅವಳ ಪತಿಯೂ ಅಸಹಾಯಕ. ಅವಳ ಶೋಕದ ಉಪಶಮನಕ್ಕಾಗಿ, ಅವಳ ಕೂಸನ್ನು ಬದುಕಿಸುವ ಭರವಸೆ ಕೊಡಲು ಗಂಡನಾದ ಆತ ಏನೂ ಮಾಡಲಾರ. ಅವಳ ನೋಟವನ್ನು ಎದುರಿಸಲಾರ. ಇದು ಪತಿಯಾದವನ ಸಂಕಟದ ಪರಾಕಾಷ್ಠೆ.
“ ನೀನು ಈ ರೀತಿಯಾಗಿ ನನ್ನನ್ನು ನೋಡಿದರೆ, ನಾನು ನಿನ್ನ ನೋಟವನ್ನು ಎದುರಿಸಲಾರೆ, ನಿನ್ನ ಕಣ್ಣಲ್ಲಿ ಕಣ್ಣಿಡಲಾರೆ, ನಿನಗೆ ಸಾಂತ್ವನ ಹೇಳಲಿಕ್ಕಾದರೂ ನಿನ್ನ ಮುಖ ಹೇಗೆ ನೋಡಲಿ ?” ಎನ್ನುವ ಭಾವನೆ ಕವನದ ಪಲ್ಲದಲ್ಲಿ ಮೂಡಿದೆ :

“ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ?”

ಗಂಡನ ಅಸಹಾಯಕತೆ ಏನೇ ಇದ್ದರೂ, ಹೆಂಡತಿಗೆ ಅವನೇ ಆಸರೆ ಅಲ್ಲವೆ? ಇವನು ತನ್ನ ನೋಟವನ್ನು ಹೊರಳಿಸಿದರೂ ಸಹ ಅವಳು ಮತ್ತೆ ಮತ್ತೆ ಇವನ ಕಡೆಗೆ ನೋಡುತ್ತಾಳೆ. ಅದಕ್ಕವನು ತನ್ನ ಅಸಹಾಯಕತೆಯನ್ನು ಅವಳೆದುರಿಗೆ ವ್ಯಕ್ತಪಡಿಸಲೇ ಬೇಕು, ಅವಳಿಗೆ ಸಮಾಧಾನ ಹೇಳಲೇ ಬೇಕು.
“ಈ ಸಂಸಾರದಲ್ಲಿ ಎಣಿಸಲಾರದಷ್ಟು ದುಃಖವಿದೆ. ಇದನ್ನು ಸಹಿಸುವದು ಅನಿವಾರ್ಯ. ಈ ಸಂಸಾರವೆನ್ನುವ ದುಃಖಸಾಗರದ ಆಚೆಯ ದಂಡೆ ಎಲ್ಲಿದೆಯೊ ತನಗೂ ತಿಳಿಯದು. ತಮ್ಮೆಲ್ಲಾ ಭಾರವನ್ನು ದೇವರ ಮೇಲೆ ಹೊರಿಸಿ ಬಿಡೋಣ. ಈ ಕೂಸು ಸಾಯುವದೇ ದೈವೇಚ್ಛೆಯಾಗಿದ್ದರೆ, ಅದನ್ನು ತಡೆಯುವದು ತನ್ನಿಂದ ಸಾಧ್ಯವೆ? ಸುಮ್ಮನೆ ಯಾಕೆ ನನ್ನ ಕಡೆಗೆ ಆಸೆಯಿಂದ, ಸಂಕಟದಿಂದ ನೋಡುತ್ತೀ?” ಎನ್ನುವ ಭಾವವು ಮೊದಲನೆಯ ನುಡಿಯಲ್ಲಿ ವ್ಯಕ್ತವಾಗಿದೆ.

“ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?”

ತಾನೇನೊ ಅವಳಿಗೆ ಸಾಂತ್ವನವನ್ನು ಹೇಳಿದೆ. ಆದರೆ ಶೋಕತಪ್ತಳಾದ ಅವಳನ್ನು ಇಂತಹ ಮಾತುಗಳಿಂದ ಸಂತೈಸಬಹುದೆ? ಅವಳ ಪರಿಸ್ಥಿತಿ ಹೇಗಿದೆ?
ಮನಸ್ಸು ವ್ಯಸ್ತವಾದಾಗ ದೇಹದ ಚೆಲುವೂ ಅಸ್ತವಾಗುತ್ತದೆ.
ಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ.
ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ. ಇವಳಿಗೆ ಯಾವುದೊ ಗಾಳಿ (=evil spirit) ತಾಕಿರಬಹುದೆ? ಇವಳ ಮೋರೆಯ ಮೇಲೆ ಮಾರಿಯ (=ಭಯಾನಕ ದೇವಿಯ) ಕಳೆ ಕಾಣುತ್ತಿದೆ. ಸಾವಿನ ಕೈ ಇವಳ ಮುಖದ ಮೇಲೆ ಆಡಿತೊ ಎನ್ನುವಂತೆ ಮುಖ ರಾವು ಹೊಡೆದಿದೆ. ಅವಳ ಈ ಭಯಾನಕ ಚೆಹರೆಯನ್ನು ಕಂಡು ಗಂಡನಿಗೆ “ಮುಂದೇನು ಪರಿಸ್ಥಿತಿ ಕಾದಿದೆಯೊ?” ಎನ್ನುವ ಭಯ ಆವರಿಸುತ್ತದೆ. ಈ ಭಾವನೆಯು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ :

“ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.”

ಈ ಆಘಾತಕ್ಕಿಂತ ಮೊದಲಲ್ಲಿ ಅವರ ಸಂಸಾರವು ಸರಸಮಯವಾಗಿತ್ತು ಎನ್ನುವ ಸೂಚನೆಯನ್ನು ತಾಂಬೂಲ ಹಾಗೂ ಗಿಣಿ ಕಚ್ಚಿದ ಹಣ್ಣಿನ ಮೂಲಕ ಬೇಂದ್ರೆ ನೀಡುತ್ತಾರೆ. ಆದರೆ ಆ ಸರಸಮಯ ಸಂಸಾರದಲ್ಲಿ ಶಿಶುಮರಣದ ವಿಷದ ಹನಿ ಬಿದ್ದಿದೆ.
ಅವನಿಗೆ ಈಗ self-remorse ಆವರಿಸುತ್ತದೆ. ತನ್ನ ಹೆಂಡತಿಯ ಈ ಸ್ಥಿತಿಗೆ ತಾನೇ ಕಾರಣ. ತನ್ನ ಕೈ ಹಿಡಿದದ್ದರಿಂದಲೇ ಅವಳಿಗೆ ಇಂತಹ ಸ್ಥಿತಿ ಬಂದಿದೆ. ಮದುವೆಯಾಗುವಾಗ ಅವಳಿಗೆ ಏನೆಲ್ಲ ಆಕಾಂಕ್ಷೆಗಳಿದ್ದವೊ ಏನೊ? ಮದುವೆಯಲ್ಲಿ ಧಾರೆ ಎರೆದು ಕೊಡುವಾಗ ತಾನು ಹಿಡಿದ ಕೈ ತನಗೆ ತಂಪು ನೀಡುವದು ಎಂದವಳು ಭಾವಿಸಿದ್ದಳು. ಆದರೆ ಈ ಕೈ ಬೂದಿ ಮುಚ್ಚಿದ ಕೆಂಡವಾಗಿದೆ ! ಅದು ತಿಳಿದ ಮೇಲೂ ಅವನ ಕೈಯನ್ನು ಆಕೆ ಬಿಡುತ್ತಿಲ್ಲವಲ್ಲ !

“ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?”

ಆತ ಆಕಾಶ ,ಇವಳು ಭೂಮಿ. ಭೂಮಿಯೇ ಎಲ್ಲ ಜೀವರಿಗೂ ನೆಲೆ ಕೊಡುವದು. ಆಕಾಶವೇ ಕಪ್ಪರಿಸಿದಾಗ, ಆತನೇ ಧೃತಿಗೆಟ್ಟಾಗ, ನೆಲವೇ ಕುಸಿದು ಹೋಗುತ್ತದೆ. ಆಕಾಶ ಕುಸಿಯಲಾರದು ಎನ್ನುವ ನೀತಿಯಲ್ಲಿ ನಂಬಿಕೆ ಇಟ್ಟ ಈ ಹುಚ್ಚು ಹೆಣ್ಣು ಆತನೇ ತನ್ನ ಬಾಳಿನ ಭರವಸೆ ಎಂದು ತಿಳಿದಿದ್ದಾಳೆಯೆ? ಅವಳಿಗೆ ಭರವಸೆ ಕೊಡಲಾದರೂ ಏನು ಉಳಿದಿದೆ ಅವಳಲ್ಲಿ ?

ಅವಳಲ್ಲಿರುವ ಬಾಳು ಬತ್ತಿ ಹೋಗಿದೆ. ಅವಳ ಕಣ್ಣುಗಳ ಹೊಳಪು ಮಾಸಿ ಹೋಗಿದೆ.
ಅವಳನ್ನು ನೋಡಿದರೆ ಅಲ್ಲಿ ಕಾಣುವದು ಒಂದು ನಿರ್ಜೀವ ದೇಹ.

“ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !”

ಕನ್ನಡ ಕಾವ್ಯದಲ್ಲಿಯೇ ಅತ್ಯಂತ ಸಂವೇದನಾಪೂರ್ಣವಾದ ಎರಡು ಉಪಮೆಗಳನ್ನು ಈ ನುಡಿಯಲ್ಲಿ ನೋಡುತ್ತೇವೆ. ಕವಳಿ ಹಣ್ಣುಗಳನ್ನು ನೋಡಿದವರು (--ಈಗ ಕವಳಿ ಹಣ್ಣುಗಳೇ ಅಪರೂಪವಾಗಿವೆ--) ಅವು ಎಷ್ಟು ನೀಲಿಕಪ್ಪಾಗಿರುತ್ತವೆ ಎನ್ನುವದನ್ನು ಬಲ್ಲರು. ಕವಳಿಕಂಟಿಯ ದಪ್ಪವಾದ ಬಿಳಿ ಹಾಲು ಈ ಹಣ್ಣುಗಳಿಗೆ ಅಂಟಿಕೊಂಡಿರುತ್ತದೆ. ಚಳಿಗಾಲದಲ್ಲಿ ಈ ಕವಳಿ ಹಣ್ಣುಗಳ ಮೇಲೆ ಇಬ್ಬನಿ ಸಂಗ್ರಹವಾಗುವದರಿಂದ, ಹಣ್ಣುಗಳು ತೊಳೆದಂತಾಗಿರುತ್ತವೆ. ಇವಳ ಕಣ್ಣುಗಳ ಬಿಳಿಭಾಗ ಆ ಹಾಲಿನಂತೆ ; ಇವಳ ಕಣ್ಣ ಪಾಪೆಗಳು ಅಷ್ಟು ನೀಲಿಕಪ್ಪು ; ಕಣ್ಣುಗಳ ತೇಜ ಇಬ್ಬನಿಯ ಹೊಳಪಿನಂತೆ ಎಂದು ಆತನಿಗೆ ತೋರುತ್ತಿತ್ತು. ಆದರೆ ಈಗ ಆ ಕಣ್ಣುಗಳಲ್ಲಿಯ ಜೀವವೇ ಹೋಗಿ ಬಿಟ್ಟಿದೆ. ಈ ನಿಸ್ತೇಜ ಕಣ್ಣುಗಳು ಅವಳ ಕಣ್ಣುಗಳೆ ಎಂದು ಆತ ಕೇಳುತ್ತಾನೆ.
ಮೊದಲಲ್ಲಿ ಅವಳ ಮುಖವು ಹುಣ್ಣಿವೆಯ ಚಂದಿರನ ಹಾಗೆ ಪ್ರಕಾಶಮಾನವಾಗಿತ್ತು.
ಈಗ ನೋಡಿದರೆ ಅವನಿಗೆ ಅಲ್ಲಿ ಕಾಣುವದು ಪ್ರೇತಕಳೆ:
“ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !”

ಓದುಗನಲ್ಲಿ ದಿಗ್ಭ್ರಮೆ ಹುಟ್ಟಿಸುವ ಉಪಮೆ ಇದು. ಹುಣ್ಣಿಮೆಯ ಚಂದ್ರ ಹಗಲಿನಲ್ಲಿ ಕಾಣುವದಿಲ್ಲ. ಕಂಡರೆ ಅದು ಅನೈಸರ್ಗಿಕ ; ಅದು ಚಂದ್ರನ ಹೆಣ. ಅವನ ಹೆಂಡತಿಯೂ ಸಹ ಮಾನಸಿಕವಾಗಿ ಹೆಣವೇ ಆಗಿದ್ದಾಳೆ. ಅವಳ ಮುಖವು ಈಗ ಹಗಲಿನಲ್ಲಿ ತೇಲಿದ ಚಂದ್ರನ ಹೆಣದಂತೆ ಕಾಣುತ್ತಿದೆ.

ಸಾವಿನ ಎದುರಿಗೆ ಇಬ್ಬರೂ ಅಸಹಾಯಕರು. ಇಬ್ಬರಿಗೂ ಇದರ ಅರಿವಾಗುತ್ತಿದೆ. ಒಬ್ಬರನ್ನೊಬ್ಬರು ಸಮಾಧಾನಿಸಲು ಏನೇನೊ ಪ್ರಯತ್ನಿಸುತ್ತಿದ್ದಾರೆ. ಅವಳು ತನ್ನ ದುಃಖವನ್ನು ಹತ್ತಿಕ್ಕಿ ಇವನಿಗೆ ಸಾಂತ್ವನ ನೀಡಲು ಬಯಸುತ್ತಾಳೆ. ಇವನನ್ನು ನೋಡಿ, ನಕ್ಕಂತೆ ಮಾಡಿ, ತನ್ನ ದುಃಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅದು ಹುಚ್ಚು ಪ್ರಯತ್ನ , ಹುಚ್ಚರ ಪ್ರಯತ್ನ.
ಅವಳ ಒಳಗೆ ತುಂಬಿಕೊಂಡ ಶೋಕ ಹೊರಗೆ ಬರಬೇಕು.
ಶುಷ್ಕ ಸಾಂತ್ವನ ನೀಡಿದ ಆತ ಈಗ “ಸಮಾಧಾನದ ಈ ಸುಳ್ಳು ರೂಪ ಸಾಕು; ಅತ್ತು ಬಿಡು, ದುಃಖವನ್ನು ಹೊರಹಾಕು” ಎಂದು ಹೇಳುತ್ತಾನೆ :

“ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.”

ಕಣ್ಣೀರ-ಮಳೆ ಹೊಡೆಯಲು ಸಿದ್ಧವಾಗಿ ನಿಂತಿದೆ. ಈಗೋ ಇನ್ನೊಂದು ಕ್ಷಣಕ್ಕೊ ಅದು ಸುರಿಯಬೇಕು. ಅವನಿಗೆ ತನ್ನ ಶೋಕ ತಿಳಿಯದಿರಲು ಅವಳು ಅದನ್ನು ತಡೆ ಹಿಡಿದಿದ್ದಾಳೆ, ನಡುನಡುವೆ ಹುಚ್ಚುನಗೆ ನಗುತ್ತಾಳೆ. ಆದರೆ ಅದು ತಿಳಿಯದಿರಲು ಆತ ಹುಚ್ಚನೆ?
“ನಿನ್ನ ದುಃಖ ಹೊರ ಬರಲಿ, ಪ್ರವಾಹ ಬಂದಂತೆ ಬರಲಿ ; ರೆಪ್ಪೆ ಬಡಿದರೆ ಕಣ್ಣೀರು ಹೊರಗೆ ಬಂದೀತೆಂದು ರೆಪ್ಪೆ ಬಡಿಯದೆ ಇದ್ದೀಯಾ. ಆದರೆ ನಿನ್ನ ಈ ಬಿರಿಗಣ್ಣು ನನ್ನನ್ನು ಹೆದರಿಸುತ್ತದೆ. ನಿನ್ನ ಅಳುವನ್ನು ಹೊರಗೆ ಹಾಕು, ತುಟಿಕಚ್ಚಿ ಹಿಡಿದು ಅದನ್ನು ಒಳಗೇ ಇಟ್ಟುಕೊಳ್ಳಬೇಡ” ಎಂದು ಆತ ಹೇಳುತ್ತಾನೆ.
ತನ್ನ ಕೈಹಿಡಿದಾಕೆಗೆ ಆತ ಬೇರೇನು ಸಮಾಧಾನ ಹೇಳಬಲ್ಲ?
........................................
ವಾಲ್ಮೀಕಿಗಾದ ದುಃಖದಿಂದ “ರಾಮಾಯಣ” ಮಹಾಕಾವ್ಯ ಹುಟ್ಟಿತು. ಭರ್ತೃಹರಿಯು ತನ್ನ ಉತ್ತರ ರಾಮಾಯಣ ನಾಟಕದಲ್ಲಿ “ದುಃಖವನ್ನು ಸಹಿಸಲೆಂದೇ ರಾಮನಲ್ಲಿ ಚೈತನ್ಯವನ್ನು ತುಂಬಲಾಯಿತು” ಎಂದು ಹೇಳಿದ್ದಾನೆ. ಬೇಂದ್ರೆಯವರು ಸಹ ತಮ್ಮೆಲ್ಲ ದುಃಖಗಳಲ್ಲಿ ಬೆಂದು, ತಮ್ಮ ಪಾಡನ್ನು ಹಾಡಾಗಿಸಿ ನಮಗೆ ನೀಡಿದ್ದಾರೆ, “ಸಖೀಗೀತ”ದಲ್ಲಿ ಅವರು ಹೇಳುವಂತೆ:

“ ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.”

ಹೆಚ್ಚಿನ ಓದಿಗೆ :http://sallaap.blogspot.com/2008/08/blog-post_20.html

ಕಾಮೆಂಟ್‌ಗಳಿಲ್ಲ: