೧೨. ಕಾಳೂ ಇರಲಿ ಹಾಳೂ ಇರಲಿ

ಕಾಳೂ ಇರಲಿ ಹಾಳೂ ಇರಲಿ
ತೆನೆಗಳ ಭಾರದಲಿ
ಮಾವಿನ ನೆರೆಗೇ ಬೇವೂ ಇರಲಿ
ತೋರಣ ದಾರದಲಿ

ಆಸೆಯೆ ಚಲನೆಗೆ ನೆಪವಾಗಿ
ಸಿಹಿ ಕಹಿ ಜೂಟಾಟ
ಭಯವೇ ಆಚೆಯ ಗಡಿಯಾಗಿ
ನಿಯಂತ್ರಿಸಿದೆ ಓಟ

ನೋವಿನ ಭಯವೇ ಇರದವರೋ
ಜಿಗಿವರು ಬೇಲಿಗಳ
ಬೇಲಿಯ ಆಚೆಯ ಬಯಲಿನಲಿ
ಇಡುವರು ದಾಳಿಗಳ

ತೆರಳಲಿ ಕ್ಷಣ ದಿನ ಮಾಸಗಳು
ಉರುಳಲಿ ದಾಳಗಳು
ಗರಕ್ಕೆ ಮೂಡುವ ಮೇಳಗಳ
ತಾಳಲಿ ಜೀವಗಳು.

ಕಾಮೆಂಟ್‌ಗಳಿಲ್ಲ: