೧೭. ಕಾಗದದ ದೋಣಿಗಳು

ಕಾಗದದ ದೋಣಿಗಳು ತೇಲಿದರು ಏನಂತೆ
ಮಿನುಗದೇ ಮರಿ ಬೆಳಕು ಮಡಿಲಿನಲ್ಲಿ ?
ತೆವಳಿದರು ಏನಂತೆ ಕಾಲು ಇಲ್ಲದ ಗಾಳಿ
ಚೆಲ್ಲದೇ ಕಂಪನ್ನು ದಾರಿಯಲ್ಲಿ ?

ನಾರುತಿಹ ಗೊಬ್ಬರವು ಜೀವರಸವಾಗಿ
ಊರದೇ ಪರಿಮಳವ ಮಲ್ಲಿಗೆಯಲಿ ?
ತಿಂದೆಸೆದ ಓಟೆಯೂ ಮರವಾಗಿ ಹರವಾಗಿ
ವರವಾಗದೇ ಹೇಳು ಹಣ್ಣಿನಲ್ಲಿ ?

ಉಪ್ಪಾದರೂ ಕಡಲು ನೀರ ಒಡಲಲ್ಲಿಟ್ಟು
ಸೀನೀರ ಮೋಡಗಳ ತಾರದೇನು ?
ಸಾಗರಕೆ ಬಿದ್ದ ಜಲ ಕೂಡಿಟ್ಟ ಅನ್ನ ಬಲ,
ಕಾಯುವುದು ಸಮಯದಲಿ ಲೋಕವನ್ನು

ಒಂದೊಂದು ವಸ್ತುವಿಗೂ ಒಂದೊಂದು ಮಾಯೆ
ಒಂದೊಂದಕೂ ಸ್ವಂತ ಧಾಟಿ ನಡಿಗೆ
ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ
ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ.

ಕಾಮೆಂಟ್‌ಗಳಿಲ್ಲ: