ಮೈಸೂರು ಮಲ್ಲಿಗೆ (ಕವನ ಸಂಕಲನ)
೧.ಏನ ಬೇಡಲಿ ?ದೇವ, ನಿನ್ನ ಮಾಯೆಗಂಜಿ
ನಡುಗಿ ಬಾಡೆನು ;
ನಿನ್ನ ಇಚ್ಛೆಯಂತೆ ನಡೆವೆ -
ನಡ್ಡಿ ಮಾಡೆನು.
ಮುಕ್ತಿ ! ಮುಕ್ತಿ ! ನನ್ನ ನಾನು
ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
ಅಡಗಿಕೊಳ್ವುದೋ ?
ಶಕ್ತಿಯಿತ್ತೆ ಮುಕ್ತಿಯನ್ನು
ಗಳಿಸಿಕೊಳ್ಳುಲು ;
ನೀರನೆರೆದೆ ಬಳ್ಳಿಯನ್ನು
ಬೆಳಸಿಕೊಳ್ಳಲ್ಲು ;
ಜ್ಞಾನರವಿಯನಿತ್ತೆ ಎದೆಯ
ನೋಡಿಕೊಳ್ಳಲು ;
ಗೀತೆಯನ್ನು ಕೊಟ್ಟೆ ಕೊಳಲೊ -
ಳೂದಿಕೊಳ್ಳಲು.
ಎಲ್ಲವನ್ನು ಕೊಟ್ಟಿರುವ ;
ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ !
೨.ವಿರಹಿಣಿ. ಹನ್ನೆರಡು ದುಃಖಗಳು ನನ್ನಾಹುತಿಗೊಂಡಿವೆ;
ಮಲಗಿ ಮರೆಯುವೆನೆಲ್ಲ ಎಂಬಾಸೆ ಒಂದು ಗಳಿಗೆ.
ಹಾಸಿ ಹೊದ್ದಿಸಿದಳಲು ನಿದ್ದೆಯನು ಕಣ್ಗೆ ಬಿಡದೆ,
ನಾನಿಲ್ಲಿ ಕೊರಗುವೆನು ಮೆತ್ತೆಯಲಿ ಮೆತ್ತಗಾಗಿ.
ನನ್ನ ಗುಡಿಸಿಲ ಮೇಲೆ ಮಲಗಿಹುದು ಬೆಳ್ಳಿಬೆಳಕು.
ಅರೆಬೆಳೆದ ಚಂದಿರನ ತಂಪಾದ ಎಳೆಯ ಬೆಳಕು.
ನನ್ನಿಯ, ನಿನ್ನನೇ ಬಯಸುವೆನು; ಅಗಲಿ, ಕೊರಗಿ
ನಾನಿಲ್ಲಿ ಕರಗುವೆನು ದುಃಖದಲಿ ತೇಲಿ ಮುಳುಗಿ.
೩.ನೀನು ಯಾರೆ?
ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ,
ನಿನ್ನ ಹೆರ್‍ಅಳೊಳಗಿತ್ತು ಮಲ್ಲಿಗೆಯ ದಂಡೆ;
ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ,
ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ.
ಸೀರೆ ಸೆರಗನು ಹಿಡಿದು ಗಾಳಿಯಲಿ ನಿಂತ
ನಿನ್ನ ನೋಟವೆ ಸಾಕು, ಪ್ರತಿದಿನ ವಸಂತ;
ನಿನ್ನ ಮುಂಬೆರಳಲ್ಲಿ ಹೊಳೆದಿತ್ತು ಮಿಂಚು'
ನೀನುಟ್ಟ ಸೀರೆಯದು ಹೊಬಳ್ಳಿಯಂಚು.
ನಿನ್ನ ಕಿವಿಯಲಿ ಹೊಳೆಯುತಿತ್ತು ಬೇಂಡೋಲೆ,
ನಿನ್ನ ಕೊರಳೊಳಗಿತ್ತು ನವರತ್ನಮಾಲೆ;
ನಿನ್ನ ಕಾಲ್ಗೆಜ್ಜೆಗಳ ಇನಿದನಿಗಳಲ್ಲಿ
ನಾನು ಒಲವನು ಕಂಡೆ ಹಾಡಹಗಲಲ್ಲಿ.
ನಾಕಂಡ ಮಂದಹಾಸವನು ವರ್ಣಿಲಾರೆ,
ಅಪ್ಸರೆಯೊ ಕಿನ್ನರಿಯೊ, ಓ ನೀನು ಯಾರೆ?
೪.ಸಿರಿಗೆರೆಯ ನೀರಲ್ಲಿ
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ನೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು
ನಿನ್ನ ಹೆಸರು…
ಜೋಯಿಸರಾ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು
ನಿನ್ನ ಹೆಸರು…
ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು
ಒಂದಾಳೆ ಹೂವಲ್ಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು
ಉಯ್ಯಾಲೆ ನಿನ್ನಾ ಹೆಸರು…
ಮರೆತ ತುಟಿಗೆ ಬಾರದೆ ಮೋಡಮರೆಯೊಳಗೆ ಬೆಳದಿಂಗಳೊ ನಿನ್ನ ಹೆಸರು
ನೆನೆದಾಗ ಕಣ್ಣ ಮುಂದೆಲ್ಲಾ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು
ನಿನ್ನ ಹೆಸರು… ನಿನ್ನ ಹೆಸರು
ನಿನ್ನ ಹೆಸರು… ನಿನ್ನ ಹೆಸರು
೫.ರಾಯರು ಬಂದರು.
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿದ್ರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು
ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು
ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು
ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು
ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ
ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ
ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
ಮೆಲುದನಿಯಲಿ ನಾದಿನ ಇಂತೆಂದಳು ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ
ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗಲಿ ಯಾರಿಗೆ ಎನ್ನಲು ಹರುಷದಲಿ
ಪದುಮಳು ಬಂದಳು..ಪದುಮಳು ಬಂದಳು..
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ
ರಾಯರ ಕೋಣೆಯಲಿ.ರಾಯರ ಕೋಣೆಯಲಿ.
೬.ಎರಡನೆಯ ಮೆಟ್ಟಲು.
ನಿನ್ನಿಂದ ನಾನೆಂದು ಕಾಮದಲಿ ಕನವರೆಸಿ
ಕಣ್ಣ ಚುಂಬಿಸಿ ಕೆನ್ನೆ ಕೆನ್ನೆಯೊತ್ತಿ
ನಳಿನಾಕ್ಷಿ ನೀನೆಂದು ಚಪಲತೆಯೆ ನಾನಾಗಿ
ಅಧರಾಮೃತದ ಮಧುರ ಪಾನ ಬಯಸಿ,
ಊರೂರನಲೆದಲೆದು ಹಗಲಿರುಳು ಹಂಬಲಿಸಿ
ನಿನ್ನ ಕಂಡರೆ ಸಾಕು ಎಂದು ಬಂದು
ಪ್ರೀತಿವೀಣೆಯ ನುಡಿಸಿ ಬಗೆಬಗೆಯ ಹೂಮುಡಿಸಿ
ನಿನ್ನ ಬಯಕೆಯ ಜಾಡ ಹಿಡಿದು
ಬಂದಿಹೆನು ಬಲುದೂರ ; ಉರುಳಿಹುದು ಬಹುಕಾಲ.
ಕಾಮಭೋಗದ ಕನಸ ಕಂಡೆವಲ್ಲ!
ಸುತ್ತಿದೆವು ಕಂಬಗಳ, ಬಳಸಿದೆವು ದೇಗುಲವ;
ಒಳಗುಡಿಯ ಮೂರ್ತಿಯನು ನೋಡಲಿಲ್ಲ.
ಮೊದಲೆ ರತಿ ನೀನಲ್ಲ : ಮನ್ಮಥನು ನಾನೆ ?- ಅಲ್ಲ,
ಹೊಗಳಿ ಪಡೆವುದನೆಲ್ಲ ನಾವೆಂದೊ ಪಡೆದೆವಲ್ಲ !
ಹಂಗು ಹೊಣೆಯಿಲ್ಲದೆಯೆ ಪ್ರೀತಿಯಲಿ ನಲಿವ ಬಾರ ! ಮಿಂಚಿಳಿದರೇನೊಳಗೆ ? ತಾರೆಯಿದೆ ತುಂಬ ದೂರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ