೩. ಕಾಮಕಸ್ತೂರಿ

ಕಾಮಕಸ್ತೂರಿ
(ಹೊಲದ ಹತ್ತರ)

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~

ಬೇಂದ್ರೆಯವರು ರಚಿಸಿದ ‘ಕಾಮಕಸ್ತೂರಿ’ ಕವನವು ಅದೇಹೆಸರಿನ ಸಂಕಲನದಲ್ಲಿ ಅಡಕವಾದ ಮೊದಲನೆಯ ಕವನ. ಕಾಮಕಸ್ತೂರಿ ಇದು ವಿಶಿಷ್ಟ ಸುವಾಸನೆಯ ಒಂದು ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು Ocimum basilicum. ತುಳಸಿಯ ದಳವನ್ನು ದೇವರ ಪೂಜೆಗೆ ಬಳಸುವಂತೆಯೇ, ಈ ಸಸ್ಯದ ಹೂವನ್ನು ಸಹ ದೇವರ ಪೂಜೆಗೆ ಬಳಸುತ್ತಾರೆ. 
ಗಂಡು ಹೆಣ್ಣಿನ ನಡುವಿನ ಆಕರ್ಷಣೆಯು  ಕಾಮಮೂಲವಾಗಿರಬಹುದು; ಆದರೆ ಇದು ಕಾಮಕ್ಕೆ ಸೀಮಿತವಾಗಬಾರದು. ಕಸ್ತೂರಿಯಂತೆ ಇದು ಮೃಗಮಲವಾಗಬಾರದು; ಆದರೆ ಕಾಮಕಸ್ತೂರಿಯಂತೆ ಸುಗಂಧದ ಸಸ್ಯವಾಗಬೇಕು ಎನ್ನುವದು ಬೇಂದ್ರೆಯವರ ಆಶಯವಾಗಿದೆ.

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

‘ಕಾಮಕಸ್ತೂರಿ’ ಕವನದ ಮೊದಲ ನುಡಿಯಲ್ಲಿ ಹಳ್ಳಿಯ ತರುಣನೊಬ್ಬ ತನ್ನ ನಲ್ಲೆಯನ್ನು ಕಂಡಾಗ ಅವನ ಮನದಲ್ಲಿ ಮೂಡಿದ ಭಾವನೆಗಳ ವರ್ಣನೆ ಇದೆ. ಈ ತರುಣನಿಗೆ ತನ್ನ ನಲ್ಲೆಯ ಬಗೆಗೆ ಆಕರ್ಷಣೆ ಇದೆ. ಅವಳ ಚೆಲುವನ್ನು ಆತ ಗಮನಿಸುತ್ತಾನೆ. ‘ತುಂಬಿತುರುಬಿನವಳೆ’ ಎಂದು ಅವಳನ್ನು ಬಣ್ಣಿಸುತ್ತಾನೆ. ಅವಳಿಗೆ ತನ್ನ ಪ್ರಣಯದ ಸಂಕೇತವಾಗಿ ಕಾಮಕಸ್ತೂರಿಯ ತೆನೆಯೊಂದನ್ನು ತುರುಬಿನಲ್ಲಿ ಮುಡಿಯಲು ನೀಡುತ್ತಾನೆ. ದೈಹಿಕ ಆಕರ್ಷಣೆಯ ನಿರೂಪಣೆ ಇಲ್ಲಿಗೇ ಮುಗಿಯುತ್ತದೆ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಎರಡನೆಯ ನುಡಿಯಲ್ಲಿ ಆತನ ಅಪೇಕ್ಷೆಯನ್ನು ನಿರೂಪಿಸಲಾಗಿದೆ. ಕಾಮಕಸ್ತೂರಿಯನ್ನು ಮುಡಿದ ತನ್ನ ನಲ್ಲೆಯಿಂದ ಆತ ಬಯಸುವದು ಏನನ್ನು? ಅವಳ ದೈಹಿಕ ಸಾಮೀಪ್ಯವನ್ನು ಆತ ಬೇಡುತ್ತಿಲ್ಲ. ಅವಳ ಮುಡಿಯ ಮೇಲೆ ನವಿರಾಗಿ ಬೀಸಿದ ಗಾಳಿಯ ಸುಳಿಯೊಂದು, ಆ ಕಾಮಕಸ್ತೂರಿಯ ಪರಿಮಳವನ್ನು ಹೊತ್ತು ತಂದು ತನ್ನನ್ನು ತಗಲಿದರೆ ಸಾಕು ಎನ್ನುವದು ಅವನ ಹಂಬಲ. ಅಷ್ಟರಿಂದಲೇ ಅವನ ಮನಸ್ಸು ತಣಿದು ತೃಪ್ತವಾಗುವದು. ಗಂಡು ಹೆಣ್ಣುಗಳ ನಡುವೆ ದೈಹಿಕ ಆಕರ್ಷಣೆಯನ್ನು ಮೀರಿದ ಪ್ರೀತಿಯನ್ನು ಬೇಂದ್ರೆಯವರು ಈ ರೀತಿಯಲ್ಲಿ ತೋರಿಸುತ್ತಿದ್ದಾರೆ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.

ಮೂರನೆಯ ನುಡಿಯಲ್ಲಿ ಈ ಪ್ರೀತಿಯ ಗಾಢತೆಯನ್ನು, ಉದಾತ್ತತೆಯನ್ನು ಬೇಂದ್ರೆ ಹೇಳುತ್ತಿದ್ದಾರೆ.  ಇವರ ಪ್ರಣಯಭಾವವನ್ನು ಕಂಡಂತಹ ಜನ ಏನೇ ಟೀಕೆಯನ್ನು ಮಾಡಲಿ, ಅದನ್ನು ಉಪೇಕ್ಷಿಸು ಎಂದು ನಾಯಕನು ತನ್ನ ನಲ್ಲೆಗೆ ಸೂಚಿಸುತ್ತಾನೆ. ತಮ್ಮ ನಡುವಿನ ಪ್ರೇಮವು ಅಸಾಮಾನ್ಯವಾಗಿದೆ. ತನ್ನ ನಲ್ಲೆಯೂ ಸಹ ಅಸಾಮಾನ್ಯಳೇ. ಅವಳು ಹಾಗು ಅವಳ ಪ್ರೀತಿ ಸಾಮಾನ್ಯ ಮಟ್ಟದ ಜನರಿಗೆ ಹೊರತಾಗಿದೆ ಎನ್ನುವದು ನಾಯಕನ ಭಾವನೆ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~
ಟಿಪ್ಪಣಿ:
(೧) ಬೇಂದ್ರೆಯವರು ರಚಿಸಿದ ಪ್ರಣಯಕವನಗಳು ಹೆಚ್ಚಾಗಿ ಗ್ರಾಮೀಣ ಪರಿಸರದ ಕವನಗಳಾಗಿರುವದು ಕುತೂಹಲದ ಸಂಗತಿಯಾಗಿದೆ. ಈ ಕವನಗಳಲ್ಲಿ ಅವರು ಬಳಸುವ ಭಾಷೆಯೂ ಸಹ ಹಳ್ಳಿಯ ಮಾತಿನ ಭಾಷೆಯೇ ಆಗಿದೆ. ಇದರ ಕಾರಣವೇನಿರಬಹುದು? ಬೇಂದ್ರೆಯವರ ವೈಚಾರಿಕತೆ ಹಾಗು ಆದರ್ಶ ಇವು ನಗರ ಪರಿಸರದಿಂದ ಪ್ರಭಾವಿತವಾಗಿವೆ. ಆದರೆ ಅವರ ಎದೆಯಾಳದ ಭಾವನೆಗಳ ಪ್ರೇರಣೆ ಜಾನಪದದಲ್ಲಿದೆ. ‘ಟೊಂಕದ ಮೇಲೆ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ’ ಎನ್ನುವ ಅವರ ಕವನವು ಪ್ರಣಯಕವನವೇನಲ್ಲ.  ಹೆಣ್ಣಿನ ಚೆಲುವನ್ನು, ಅವಳ ಒಟ್ಟು ವ್ಯಕ್ತಿತ್ವವನ್ನು ಗಮನಿಸುತ್ತ, ಆಸ್ವಾದಿಸುತ್ತ ಬೆರಗು ಪಡುತ್ತಿರುವ ವ್ಯಕ್ತಿಯೋರ್ವನ ಹಾಡು ಇದು. ಈ ಕವನವೂ ಸಹ ಗ್ರಾಮೀಣ ಧಾಟಿಯಲ್ಲಿಯೇ ಇದೆ ಎನ್ನುವದನ್ನು ಗಮನಿಸಿಬೇಕು. ಅದರಂತೆಯೆ ‘ಬೆಳದಿಂಗಳs ನೋಡ’ ಅಥವಾ ‘ಶೀಗಿ ಹುಣ್ಣಿವೆ ಮುಂದೆ ಸೋಗಿನ ಚಂದ್ರಮ’ ಕವನಗಳ ಜಾನಪದ ಧಾಟಿ ಹಾಗು ಭಾಷೆಗಳನ್ನು ಗಮನಿಸಿದಾಗ ಅವರ ಭಾವನೆಗಳ ಮೂಲದ ಕುರುಹು ಹೊಳೆದಂತಾಗುತ್ತದೆ. ಒಟ್ಟಿನಲ್ಲಿ ಶಿಷ್ಟ ಭಾಷೆ ಬೇಂದ್ರೆಯವರ ವೈಚಾರಿಕ ಭಾಷೆ ಹಾಗು ದೇಸಿ ಅಥವಾ ಜಾನಪದ ಭಾಷೆ ಅವರ ಭಾವನೆಗಳ ಭಾಷೆ ಎನ್ನಬಹುದು.

(೨) ನವೋದಯದ ಹಿರಿಯ ಸಾಹಿತಿಗಳಿಗೂ, ನವ್ಯ ಸಾಹಿತಿಗಳಿಗೂ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ ‘ಕಾಮ’ದ ಬಗೆಗೆ ಅವರಿಗಿರುವ ದೃಷ್ಟಿಕೋನ. ಗಂಡು ಹೆಣ್ಣಿನ ನಡುವೆ ಇರಬೇಕಾದ ದೈಹಿಕ ಕಾಮವು ಸೃಷ್ಟಿಗೆ ಅವಶ್ಯವಾದಂತಹ ಒಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇದ್ದಂತೆಯೆ ಒಪ್ಪಿಕೊಳ್ಳಲು ನವೋದಯ ಸಾಹಿತಿಗಳಿಗೆ ಇರಸು ಮುರಸು ಆಗುತ್ತಿತ್ತೇನೊ. ಆದುದರಿಂದ ಅವರು ‘ಕಾಮ’ಕ್ಕಿಂತ ‘ಪ್ರೇಮ’ ಉಚ್ಚವಾದದ್ದು ಎಂದು ಸಾರಿದರು. ಬೇಂದ್ರೆಯವರನ್ನು ಈ ಧೋರಣೆಯ ಲಕ್ಷಣಕವಿಗಳು ಎನ್ನಬಹುದು.

ಹೆಚ್ಚಿನ ಓದಿಗೆ: http://sallaap.blogspot.com/2011/02/blog-post_21.html

ಕಾಮೆಂಟ್‌ಗಳಿಲ್ಲ: