ಶಿಲಾಲತೆ (ಕವನಸಂಕಲನ)
೧.ಹಿಂದಿನ ಸಾಲಿನ ಹುಡುಗರು.
ಹಿಂದಿನ ಸಾಲಿನ ಹುಡುಗರು' ಎಂದರೆ
ನಮಗೇನೇನೂ ಭಯವಿಲ್ಲ !
ನಮ್ಮಿಂದಾಗದು ಶಾಲೆಗೆ ತೊಂದರೆ ;
ನಮಗೆಂದೆಂದೂ ಜಯವಿಲ್ಲ !
ನೀರಿನ ಜೋರಿಗೆ ತೇಲದು ಬಂಡೆ ;
ಅಂತೆಯೆ ನಾವೀ ತರಗತಿಗೆ !
ಪರೀಕ್ಷೆ ಎಂದರೆ ಹೂವಿನ ಚೆಂಡೆ ?-
ಚಿಂತಿಸಬಾರದು ದುರ್ಗತಿಗೆ.
ವರುಷ ವರುಷವೂ ನಾವಿದ್ದಲ್ಲಿಯೆ
ಹೊಸ ವಿದ್ಯಾರ್ಥಿಗಳಾಗುವೆವು ;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು !
ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬರಾವನು ನೋಯಿಸೆವು ;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೇರಿಸಲೆನ್ನುವೆವು.
ಸಂಬಳಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೆ ನಿಲ್ಲುವೆವು ;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.
ತರಗತಿಗೇನೋ ನಾವೇ ಹಿಂದು ;
ಹಿಂದುಳಿದವರೇ ನಾವಿಲ್ಲಿ !
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ
ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು !
ಕನ್ನಡಲ್ಲೇ ತೇರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು !
ಗೆದ್ದವರೆಲ್ಲಾ ನಮ್ಮವರೇ ಸರಿ ;
ಗೆಲ್ಲುವಾತುರವೆ ನಮಗಿಲ್ಲ .
ಸೋತವರಿಗೆ ನಾವಿಲ್ಲವೆ ಮಾದರಿ ?-
ಕೆರೆಗೆ ಬೀಳುವುದು ತರವಲ್ಲ .
ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು ;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೇ ನಂಬಿಹೆವು.
ಊರಿಗೆ ಊರೇ ಹಸೆಯಲಿ ನಿಂತಿದೆ
ಆರತಿ ಬೆಳಗಲು ಜನವೆಲ್ಲಿ ?
ಎಲ್ಲಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲೆ ?
ಲೋಕದ ಶಾಲೆಯ ಭಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು .
ಪುಸ್ತಕ ಓದದೆ ಪ್ರೀತಿಯನರಿತೆವು ;
ಗೆಲ್ಲದೆ ಹೆಮ್ಮೆಯ ಗಳಿಸಿದೆವು ;
ನಾವೀ ಶಾಲೆಯನೆಂದೂ ಬೆಡೆವು ;
ನೆಮ್ಮದಿಯಾಗಿಯೆ ಉಳಿಯುವೆವು !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ