೨೦. ನನ್ನ ಮನದಾಳಕ್ಕೆ

ನನ್ನ ಮನದಾಳಕ್ಕೆ ನೀನು ಇಳಿದುದೆ ಚಂದ
ಸುಳಿದಂತೆ ಮಲೆನಾಡ ಗಾಳಿ ಗಂಧ
ಎಳೆಗರಿಕೆ ಮೇಲೇಳುವಂತೆ ಸುಡುನೆಲದಿಂದ
ಸಂಜೆ ಹಣ್ಣಾದಂತೆ ಬಾನ ತುಂಬ

ನೀ ಸುಳಿದ ಗಳಿಗೆ ಪ್ರೀತಿಯ ಹೊಳೆಗೆ ನೆರೆ ಬಂತು
ಬಣ್ಣ ಬದಲಾಗಿತ್ತು ಪೂರ ಇಳೆಗೆ
ಮಣ್ಣು ಹೊನ್ನಾಗಿತ್ತು ಮೌನ ಹೂ ಬಿಡುತಿತ್ತು
ಕಣ್ಣಾಟವಾಡಿತ್ತು ಚಿಕ್ಕೆ ಜೊತೆಗೆ

ಜೀವ ಎಡ ಜನಿಸಿದ್ದ ಕೋಟಿ ಮಣಿಗಳ ತೊಟ್ಟ
ಸೂತ್ರದಲಿ ಮೂಡಿತ್ತು ದಿವ್ಯಮಾಲೆ
ಕಣ್ಣ ಶಾಪವು ಕಳೆದು ಕಂಗೊಳಿಪ ಶ್ರೀಮೂರ್ತಿ
ತಿಳಿಯಿತೀ ವಿಶ್ವವೇ ನಿನ್ನ ಲೀಲೆ

ಹಾಳೂರಿಗೊಬ್ಬ ಆಳುವ ಒಡೆಯ ಬಂದಂತೆ
ಬೀಳು ಭೂಮಿಯ ಮಳೆಯು ವರಿಸಿದಂತೆ
ಗುಡಿಸಿ ಹಾಕಿದ ಮಾತು ಕವಿತೆಯಲಿ ಹೊಳೆದಂತೆ
ಹನಿಯ ಬದುಕಿಗೆ ಕಡಲ ಹಿರಿಮೆ ತಂದೆ

ಕಾಮೆಂಟ್‌ಗಳಿಲ್ಲ: