ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

೧೩. ಹೇಗೆ ಬರಲಿ ಇನಿಯ ನಿನ್ನ ಬಳಿಗೆ

ಧೋ ಎಂದು ಸುರಿಯುತಿದೆ ಭಾರಿ ಮಳೆ ಇಲ್ಲಿ
ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ
ಹೇಗೆ ಬರಲಿ ನಿನ್ನ ಬಳಿಗೆ ಇನಿಯ?
ಕೇಳಬೇಕಿದೆ ನಿನ್ನ ಜೇನದನಿಯ.

ಇಂಗಿ ಹೋಯಿತು ಸಂಜೆ ಇರುಳ ಸೆರಗಲ್ಲಿ,
ಭಂಗಪಡುತಿವೆ ತಾರೆ ಮುಗಿಲ ಮರೆಯಲ್ಲಿ,
ನಿನ್ನ ಬಿಟ್ಟಿರಲಾರೆ ಇಂತ ಹೊತ್ತಲ್ಲಿ.
ಹೇಗೆ ತಲುಪಲಿ ಹೇಳು ನಿನ್ನ ಮನೆಯ?
ಹೇಗೆ ಸೇರಲಿ ಪ್ರೀತಿಪಥದ ಕೊನೆಯ?

ಹಳ್ಳ ಕೂಗುತ್ತಲಿದೆ ತುಂಬಿ ಮಳೆಯಲ್ಲಿ,
ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,
ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.
ಹೇಗೆ ಬರಲಿ ಇನಿಯ ನಿನ್ನ ಬಳಿಗೆ?
ಕರಗಬೇಕೊ ನಿನ್ನ ಪ್ರೀತಿಯೊಳಗೆ!

೧೨. ನಿನ್ನ ನೀತಿ ಅದಾವ ದೇವರಿಗೆ ಪ್ರೀತಿ

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ!
ನೀನೆ ಸರಿ ಅನ್ನಬೇಕು
ಪ್ರೀತಿಗಾಗಿಯೆ ಎಲ್ಲ ತೆತ್ತ ಜೀವವ ಹೀಗೆ
ಆಡಿ ಕಾಡಿಸುವುದು ಸಾಕು.

ಏಕಾಂತವೆನ್ನುವುದೆ ಇಲ್ಲ ನನಗೀಗ
ಎದೆಯಲೆ ಬಿಡಾರ ಹೂಡಿರುವೆ:
ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ
ನಿನ್ನದೇ ನಾಮಜಪ ನನಗೆ.

ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು
ಏನೆಲ್ಲ ಕನಸಿತ್ತು ನನಗೆ:
ಎಲ್ಲ ತೀರಿತು ನಿನ್ನ ದ್ಯಾನವೊಂದೆ ಈಗ
ಕಿಚ್ಚಾಗಿ ಹಬ್ಬುತಿದೆ ಒಳಗೆ.

ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು?
ಶರಣಾದ ಜೀವಕ್ಕೆ ಮರುಗು ಸಂತೈಸದೇ
ದೂರವಾದರೆ ಹೇಗೆ ಒಲವು?

೧೧. ಹೇಳದಿದ್ದರೂ ನೀನು

ಹೇಳದಿದ್ದರೂ ನೀನು
ಎಲ್ಲ ಬಲ್ಲೆನು ನಾನು
ಏನಿದೆ ಎಂದು ಎದೆಯಾಳದಲ್ಲಿ
ನಿನ್ನ ಕಣ್ಣಿನೊಳೇನೊ
ನೋವು ತೇಲುತ್ತಿಹುದು
ಕರಿಮೋಡ ಸುಳಿದಂತೆ ಬಾನಿನಲ್ಲಿ

ನೂರು ಹಳೆ ನೆನಪುಗಳು
ಚೀರಿ ಚಿಮ್ಮುತ್ತಲಿವೆ
ಮರೆವೆಯಲಿ ಹುಗಿದರೂ ಮೇಲಕ್ಕೆದ್ದು
ನಮ್ಮ ಮೇಲೆ ಏಕೆ
ವಿಧಿಗೆ ಈ ಬಗೆ ಜಿದ್ದು
ಬೆಂದವರ ಬೆನ್ನಿಗೇ ಗುದ್ದು?

ಬಾಗುವುದು ಏಗುವುದು
ಸಹನೆಯಲಿ ಸಾಗುವುದು
ಇಷ್ಟಕೇ ಮುಗಿಯಿತೆ ನಮ್ಮ ಬಾಳು
ಕಾಣಬಾರದ್ದೆಲ್ಲ
ಕಂಡರೂ ಕಹಿಬೇಡ
ಕನಸಿನಲಿ ಹುಗಿಯೋಣ ನಮ್ಮ ಗೋಳು

೧೦. ನಿನ್ನ ಕನಸುಗಳಲ್ಲಿ ಮುಳುಗಿ ಹೋದೆನು

ನಿನ್ನ ಕನಸುಗಳಲ್ಲಿ
ಮುಳುಗಿ ಹೋದೆನು ನಾನು
ಎತ್ತಿ ಕಾಪಾಡುವರು ಯಾರು ?
ಸವಿನೆನಪಿನಾಳದಲಿ
ಹುದುಗಿ ಹೋಗಿರುವೆನು
ಅಗೆದು ತೆಗೆಯುವರಿಲ್ಲವೇನು ?

ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ
ಹಿಡಿದು ನಿಲ್ಲಿಸುವವರು ಯಾರು ?
ಕ್ರೂರ ವಿರಹಾಗ್ನಿಯಲಿ
ಬೇಯುತಲೆ ಇರುವೆ
ನೀರೆರೆದು ಉಳಿಸುವವರಾರು ?

ಬಾ ಚಿನ್ನ, ನೀ ನನ್ನ
ಪ್ರೀತಿಯಾಳಗಳಲ್ಲಿ
ಇಳಿದು ತಳಮುಟ್ಟು ನೋಡೋಣ ?
ಬಾ ಚಿನ್ನ, ನೀ ನನ್ನ
ಪ್ರೀತಿಗಿರಿ ಶಿಖರಗಳ
ತುದಿತನಕ ಹತ್ತು ನೋಡೋಣ ?

ಹಗೆ ತೋರುವಾತನಿಗೆ
ಶಿಕ್ಷೆ ನೀಡುವುದು ಸರಿ.
ಮನ ಮೆಚ್ಚಿ ಬಂದವನ ಹೀಗೆ
ವಿರಹದಲಿ ಕಾಯಿಸಿ
ನೋವಿನಲಿ ಹಾಯಿಸಿ
ದುಖಃದಲಿ ತೋಯಿಸಲು ಹೇಗೆ?

೯. ಹಿಂದೆ ಹೇಗೆ ಚಿಮ್ಮುತಿತ್ತು!

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ !
ಈಗ ಯಾಕೆ ಜ್ವಲಿಸುತಿದೆ
ಏನೊ ಶಂಕೆ ಭೀತಿ !

ಜೇನು ಸುರುಯುತಿತ್ತು ನಿನ್ನ
ದನಿಯ ಧಾರೆಯಲ್ಲಿ,
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ?
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ?

ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಸೀಳು,
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು.

೮. ನಿನ್ನ ಗಾನದ ಸವಿಗೆ

ನಿನ್ನ ಗಾನದ ಸವಿಗೆ
ನನ್ನೆದೆಯ ಬಾನಿನಲಿ
ಆಡುವುವು ಮುಸ್ಸಂಜೆ ಮುಗಿಲು;
ಹೊಂಬಿಸಿಲ ಕಾಂತಿಯಲಿ
ಹಾಯುವುವು ಹಕ್ಕಿಗಳು
ಬೆರೆಸುತ್ತ ಮುಗಿಲಲ್ಲಿ ನೆರಳು.

ಎದೆಯ ಗಾಯಗಳೆಲ್ಲ
ಉರಿಯಾರಿ ಮಾಯುವುವು,
ಹಾಯೆನಿಸಿ ತಂಪಾಗಿ ಜೀವ
ಕನಸುಗಳ ಆಕಾಶ-
ಗಂಗೆಯಲಿ ಮೀಯುವುದು
ಮರೆತು ಈ ಲೋಕದ ನೋವ.

ಭೋರೆಂದು ಸುರಿಯುವುವು
ಭಾವನೆಯ ಧಾರೆಗಳು
ತುಳುಕುವುದು ತಿಂಗಳಿನ ಕಾಂತಿ;
ತಾಯಿ ಮರಿಯನು ತಬ್ಬಿ
ಪ್ರೇಮ ಎಲ್ಲೆಡೆ ಹಬ್ಬಿ
ಹರಿವುದು ಅಲೌಕಿಕದ ಶಾಂತಿ.

೭. ಏಳುವುವು ಚಿಂತೆಗಳು

ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ
ಗಾಳಿ ಬೀಸಲು ಏಳುವಂತೆ ಧೂಳಿ,
ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ-
ವಾದ್ಯದಲಿ ಮಲ್ಹಾರ ಭಾವದಾಳಿ.

ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ
ನುಡಿಸಿ ವಿರಹವ ಹೃದಯವೀಣೆಯಲ್ಲಿ,
ನಿನ್ನ ನೆನಪಿನ ಅಲೆಯು ತಾಗಿದೊಡನೆ
ದನಿ ಹಬ್ಬುವುದು ಸುಖಕೆ ಇಂಪಿನಲ್ಲಿ

ಬಾನಿನಲ್ಲೇನೊ ಆತಂಕ ಮರೆಗೆ
ಕಣ್ಣೀರ ಸುರಿಸುತಿದೆ ಮುಗಿಲು ಅದಕೆ
ಕಾದಿರಲು ನಾ ದೀನ, ಮರದ ಕೆಳಗೆ
ಹಾರಿತೇ ಕೋಗಿಲೆ ಬೇರೆ ಮರಕೆ !
( ಆಧಾರ : ಲಾಲ್ ಮೆಹ್ತಾಬ್ ರಾಮ್ ಸಬಖತ್ ಅವರ ಒಂದು ಕವಿತೆ)

೬. ತೊರೆದು ಹೋಗದಿರೊ ಜೋಗಿ

ತೊರೆದು ಹೋಗದಿರೊ ಜೋಗಿ,
ಅಡಿಗೆರಗಿದ ಈ ದೀನಳ ಮರೆತು
ಸಾಗುವೆ ಏಕೆ ವಿರಾಗಿ?

ಪ್ರೇಮಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆಯೆನಗೆ;
ನಿನ್ನ ವಿರಹದಲೆ ಉರಿದು ಹೋಗಲೂ
ಸಿದ್ಧಳಿರುವ ನನಗೆ.

ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ;
ಉರಿ ಸೋಕಿಸು ಪ್ರಭುವೇ ಚಿತೆಗೆ
ಪ್ರೀತಿಯಿಂದ ನೀನೇ.

ಉರಿದೂ ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ,
ಮೀರಾಪ್ರಭು ಗಿರಿಧರನೆ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.

೫. ಯಾವುದೀ ಹೊಸ ಸಂಚು?

ಯಾವುದೀ ಹೊಸ ಸಂಚು
ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು ?
ಗಿರಿಕಮರಿಯಾಳದಲಿ
ತೆವಳಿದ್ದ ಭಾವಗಳ
ಮುಗಿಲ ಮಂಚದೊಳಿಟ್ಟು ತೂಗುತಿಹುದು ?

ಸತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪವುರಿದು,
ಬಾಳ ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ
ಮೈಯ ಕಣಕಣದಲ್ಲು ಹಿಗ್ಗು ಉರಿದು.

ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷ ಹಣ್ಣು ಹಿಳಿದ ರುಚಿಯ ?
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೆ ಸರಿದೀತು ಎಂಬ ವ್ಯಥೆಯ ?

೪. ಬಾರೆ ನನ್ನ ದೀಪಿಕಾ

ಬಾರೆ ನನ್ನ ದೀಪಿಕಾ
ಮಧುರ ಕಾವ್ಯರೂಪಕ
ಕಣ್ಣ ಮುಂದೆ ಸುಳಿಯೆ ನೀನು
ಕಾಲದ ತೆರೆ ಸರಿದು ತಾನು
ಜನುಮ ಜನುಮ ಜ್ಞಾಪಕ.

ನಿನ್ನ ಬೊಗಸೆಗಣ್ಣಿಗೆ
ಸಮ ಯಾವುದೆ ಚೆನ್ನೆ ನಿನ್ನ
ಜಡೆ ಹರಡಿದ ಬೆನ್ನಿಗೆ ?

ನಿನ್ನ ಕನಸು ಬಾಳಿಗೆ
ಧೂಪದಂತೆ ಗಾಳಿಗೆ
ಬೀಸಿ ಬರಲು, ಜೀವ ಹಿಗ್ಗಿ
ವಶವಾಯಿತೆ ಧಾಳಿಗೆ.

ಮುಗಿಲ ಮಾಲೆ ನಭದಲಿ
ಹಾಲುಪಯಿರು ಹೊಲದಲಿ,
ರೂಪಿಸುತಿದೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ.

೩. ಏಕೆ ಹೀಗೆ?

ಏಕೆ ಹೀಗೆ
ನಮ್ಮ ನಡುವೆ
ಮಾತು ಬೆಳೆದಿದೆ ?
ಕುರುಡು ಹಮ್ಮು
ಬೇಟೆಯಾಡಿ
ಪ್ರೀತಿ ನರಳಿದೆ ?

ಭೂಮಿ ಬಾಯ
ತೆರೆಯುತಿದೆ,
ಬಾನು ಬೆಂಕಿ
ಸುರಿಯುತಿದೆ,
ಧಾರೆ ಒಣಗಿ
ಚೀರುತಿದೆ
ಚಿಲುಮೆ ಎದೆಯಲಿ.

ಮುಗಿಲು ಬರುವ
ಕಾಯುತಿದೆ,
ಮಳೆಯ ಕನಸ
ನೇಯುತಿದೆ,
ನಿನ್ನ ಬಯಸಿ
ಬೇಯುತಿದೆ
ನನ್ನ ಹೃದಯವು.

೨. ಯಾಕೆ ಕಾಡುತಿದೆ ಸುಮ್ಮನೆ ನನ್ನನು?

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ ?
ಒಂದೆ ಸಮನೆ ಹಾಯುತಲಿದೆ ಅರಿವಿಗೆ
ಗುರುತೆ ತಪ್ಪಿದಾಗ.

ಯಾವುದೊ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ,
ಮುಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ.

ಕರುಳ ಕೊರೆವ ಚಳಿಯಿರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ,
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ.

ಕರಗಿದ ಪ್ರೀತಿಯ ಸ್ಮರಣೆಯಲಿ
ಕುದಿಯುವ ಭಾವದ ಬೇಗೆಯಲಿ,
ತೋಯುವೆ ಬೇಯುವೆ ರೇಸಿಮೆ ಎಳೆಗಳ-
ನೀಯುವೆ ಮುಗಿಯುವೆ ಹಾಡಿನಲಿ.

೧. ದಣಿದ ಜೀವಕೆ ಮತ್ತೆ ಕನಸನುಣಿಸಿ

ದಣಿದ ಜೀವಕೆ ಮತ್ತೆ ಕನಸನುಣಿಸಿ
ಕುಣಿಸಿರುವ ನೀರೆ ನೀನು ಯಾರೆ ?
ಯಾರೆ ಚದುರೆ, ನೀನು ಯಾರೆ ಚದುರೆ ?
ಬಗೆಗಣ್ಣ ತೆರೆಸಿದ ಭಾವಮದಿರೆ

ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ
ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ,
ಮಾತಿನಾಳಕೆ ಸಿಗದ ಉರಿಯ ಚಿಗುರ
ಬೊಗಸೆಗಣ್ಣಿನ ಪಾತಿಯಲ್ಲಿ ಬೆಳೆಸಿ,
ಏಕೆ ಕಾಡುವೆ ನೀನು ಯಾರೆ ಚದುರೆ
ನಿನ್ನ ಚೆಲುವಿಗೆ ಎಷ್ಟು ಸ್ವರ್ಗ ಇದಿರೆ ?

ದಾರಿ ಹುಡುಕಿದೆ ಹೇಗೆ ಚೆಲುವೆ ಈ ಮನೆಗೆ
ನೂರು ಕಳವಳ ಕಾಲು ಕಚ್ಚುವೆಡೆಗೆ ?
ಕಾರಿರುಳು ಕವಿದಿರಲು ಬಂದೆ ಹೇಗೆ
ಮೈತುಂಬ ಪ್ರೀತಿಯನು ತಂದೆ ಹೇಗೆ ?

ನಡೆದಿದೆ ಪೂಜಾರತಿ (ಆಯ್ದ ಭಾವಗೀತೆಗಳ ಸಂಗ್ರಹ) (ಎನ್.ಎಸ್.ಎಲ್)

೧. ದಣಿದ ಜೀವಕೆ ಮತ್ತೆ ಕನಸನುಣಿಸಿ
೨. ಯಾಕೆ ಕಾಡುತಿದೆ ಸುಮ್ಮನೆ ನನ್ನನು?
೩. ಏಕೆ ಹೀಗೆ? 
೪. ಬಾರೆ ನನ್ನ ದೀಪಿಕಾ 
೫. ಯಾವುದೀ ಹೊಸ ಸಂಚು?
೬. ತೊರೆದು ಹೋಗದಿರೊ ಜೋಗಿ 
೭. ಏಳುವುವು ಚಿಂತೆಗಳು 
೮. ನಿನ್ನ ಗಾನದ ಸವಿಗೆ 
೯. ಹಿಂದೆ ಹೇಗೆ ಚಿಮ್ಮುತಿತ್ತು! 
೧೦. ನಿನ್ನ ಕನಸುಗಳಲ್ಲಿ ಮುಳುಗಿ ಹೋದೆನು 
೧೧. ಹೇಳದಿದ್ದರೂ ನೀನು
೧೨. ನಿನ್ನ ನೀತಿ ಅದಾವ ದೇವರಿಗೆ ಪ್ರೀತಿ
೧೩. ಹೇಗೆ ಬರಲಿ ಇನಿಯ ನಿನ್ನ ಬಳಿಗೆ 

೫. ಎಲ್ಲಿಗೆ ಕರೆದೊಯ್ಯುವೆ ನೀ

ಎಲ್ಲಿಗೆ ಕರೆದೊಯ್ಯುವೆ ನೀ
ಹೇಳು ಕನ್ನಯ್ಯಾ ?
ಬೃಂದಾವನ ಬೀದಿಗಳಲಿ
ಹೂ ಚೆಲ್ಲಿದ ಹಾದಿಗಳಲಿ
ಎಳೆದೊಯ್ಯುವೆ ಎಲ್ಲಿಗೆ
ಹೇಳು ಕನ್ನಯ್ಯಾ ?

ಮಡಿಕೆ ಒಡೆದು ಮೊಸರ ಕುಡಿದೆ
ನನ್ನ ಭಂಗಿಸಿ
ಬೆಣ್ಣೆ ಸವಿದು ನಡೆದೆ ಪುಂಡ
ನನ್ನ ನಂಬಿಸಿ !
ಮೋಡಿ ಮಾಡಿ ಕೂಡಿ ಮುಂದೆ
ಎಲ್ಲಿ ಹೋದೆಯೋ ?
ಅರಿಯದಂಥ ಹಾದಿಗೆಳೆದು
ಹೇಗೆ ತೊರೆದೆಯೋ ?

ನಂಬಿ ಬಂದ ಹೆಣ್ಣ ಭಂಡ
ಹಾಗೆ ತೊರೆವುದೇ ?
ಎಂದೋ ನೆನಪು ಬಂದು ಹೀಗೆ
ಒಮ್ಮೆ ಬರುವುದೇ !
ನಾನು ಮಾತ್ರ ನಿನ್ನ ನೆನೆದೆ
ಬಾಳುತಿರುವೆನೋ
ನೀನಿಲ್ಲದೆ ಗಿರಿಧಾರಿ
ಹೇಗೆ ಉಳಿವೆನೋ ?

೨. ನಾನೆನುವುದು ಏನಿದೆ

ನಾನೆನುವುದು ಏನಿದೆ
ನೀ ಎನುವುದು ಇರದೆ ?
ನನ್ನಿಂದಲೆ ನಾ ಎನ್ನುವುದು
ಸುಳ್ಳಲ್ಲದೆ ಬರಿದೆ ?

ಮರವಿದ್ದೂ ಒಳಗೆ
ಕೊಡಲಾರದು ಬೀಜ
ಜೊತೆಗೂಡದೆ ನೀರು ಮಣ್ಣು
ಗಾಳಿ ಸೂರ್ಯತೇಜ

ಕಡಲ ಹಂಡೆ ಕಾಯದೆ
ಮೈ ಪಡೆಯಿತೆ ಮುಗಿಲು ?
ನೆಲಕಿಳಿಯದೆ ಮುಗಿಲು
ತಲೆದೂಗಿತೆ ಪಯಿರು ?

ತಿರುಗುತ್ತಿವೆ ಗ್ರಹಗಳು
ಉರಿಯುತ್ತಿವೆ ತಾರೆ
ನಿಂತರೊಂದು ಗಳಿಗೆ
ಸಾವೇ ಈ ತಿರೆಗೆ

ಋಣ ತುಂಬಿದ ಗಣಿಯೊ
ನಮ್ಮದೆನ್ನುವ ಬಾಳು
ಸ್ಮರಿಸಿ ಎಲ್ಲ ಸಾಲ
ಕೃತಜ್ನತೆಯ ಹೇಳು.

೨೭. ಹಾಡುಗಳ ನಾಡು

ಹಾಡುಗಳ ನಾಡು
ನಿನ್ನ ಮೈ ಬೀಡು,
ರಾಗಕ್ಕೆ ಎಡೆ ನೀಡಲಿ
ಆ ರಾಗ ನನ್ನದಿರಲಿ.

ಅಂಕೆಗಳು ನೂರು
ಸಿಗಲು ನಿನ್ನೂರು,
ಅದನು ಭಾಗಿಸಿ ಕೂಡಲಿ - ಆ
ಲೆಕ್ಕಿಗನು ನಾನಾಗಲಿ.

ಮುತ್ತುಗಳ ಮೇಳ
ನಿನ್ನೊಲವಿನಾಳ,
ಶೃಂಗಾರಕದು ಒದಗಲಿ - ಆ
ಸಿಂಗರಿಗ ನಾನಾಗಲಿ.

ನಿನ್ನ ಮಲೆನಾಡು
ಗಿರಿ ಕಣೆವೆ ಕಾಡು,
ಅಲೆದಾಟ ನನಗಾಗಲಿ - ಅಲ್ಲಿ
ಏರಿಳಿದು ದಣೆವಾಗಲಿ.

೨೬. ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ

ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ
ಕಂಡವರಿಗೆ ?
ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ
ಕೊಂಡವರಿಗೆ ?

ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ
ಪರಿಮಳವನು,
ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ ಹೊನ್ನ
ಸಂಜೆಯನ್ನು,
ಪುಟ್ಟ ಕನಕಾಂಬರಿಗೆ ಮೈಯೆಲ್ಲ ಸವರಿದೆ
ತುಟಿಯ ರಂಗು,
ನಿನ್ನ ಸಂಪತ್ತನ್ನು ತೂರುವುದೆ ಹೀಗೆ
ಏನು ದುಂದು ?

ನಿನ್ನೆದೆಯ ಸವಿಜೇನು ತುಂಬಿ ತುಳುಕಿದೆ ಮಾವು-
ಕಿತ್ತಳೆಯಲಿ.
ಥಣ್ಣನೆಯ ರಾತ್ರಿಯಲಿ ನಿನ್ನ ಕಣ್ಣಿನ ಕಾಂತಿ
ಚಿಕ್ಕೆಯಲ್ಲಿ,
ನಿನ್ನ ಹೆರಳಿನ ಕಪ್ಪು ಮಿಂಚುತಿದೆ ಕಾರ್ಮುಗಿಲ
ಮಾಲೆಯಲ್ಲಿ
ನಿನ್ನ ಕಾಣಿಕೆ ಹೊರತು ಏನಿದೆಯೆ ಸಂಪತ್ತು
ಪ್ರಕೃತಿಯಲ್ಲಿ ?

೨೫. ಶಾಂತಮಧುರ ದನಿಗಳೇ

ಮನಸಿನಾಳಕಿಳಿದು ನಿಂತ ಶಾಂತ ಮಧುರ ದನಿಗಳೇ
ಕಾಲಜಲದ ತಳಕಿಳಿದೂ ಮಿನುಗುತಿರುವ ಮಣಿಗಳೇ
ಹೇಗೆ ಅಲ್ಲಿಗಿಳಿದಿರಿ
ಯಾಕೆ ಅಲ್ಲಿ ಉಳಿದಿರಿ?
ಎಂದೊ ಮರೆಯಲಾಗದಂತೆ ಹಾಗೆ ಹೇಗೆ ಇರುವಿರಿ?

ಅದುದೆಲ್ಲ ಮುಗಿಯಿತೆಂಬ ಮಾತು ಬರೀ ಸುಳ್ಳು
ಈಗಿರುವುದೆ ನಿಜವೆನ್ನುವ ಮಾತೂ ಸಹ ಜೊಳ್ಳು
ಭಾವವೊಂದೆ ಸತ್ಯ
ಕಾಲ ಬರೀ ಮಿಥ್ಯ
ನಿಜವಾದುದೆ ಎಲ್ಲ ಕಾಲ ಉಳಿಯುವಂಥ ನಿತ್ಯ

ಸ್ನೇಹ ಪ್ರೀತಿ ಇತ್ತ ಜೀವ ಹೇಗೆ ಬದಿಗೆ ಸರಿವುದು ?
ದೇಹ ಮರೆಗೆ ಸರಿದರೂ ನೆನಪು ಹೇಗೆ ಅಳಿವುದು?
ಎದುರಿಗಿರುವ ಏನೇನೋ
ಕಸ ಮನಸಿಗೆ ಬಾರದು
ಆಗಿ ಹೋದ ರಸಗಳಿಗೆಯೆ ಸದಾ ಮನವನಾಳ್ವುದು.

೨೪. ನಾನೆಂಬ ಮಬ್ಬಿಳಿದು

ನಾನೆಂಬ ಮಬ್ಬಿಳಿದು ನೀ ಹಬ್ಬುತಿರುವಾಗ
ಬಂದ ಗಾಳಿಯಲಿತ್ತು ದಿವ್ಯಗಂಧ
ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು
ಮೂಡಿದರು ಅಲ್ಲಿಯೇ ಸೂರ್ಯಚಂದ್ರ

ಕಾಡಿದರೆ ಏನಂತೆ, ಕೂಡಿದರೆ ಏನಂತೆ
ಹಾಡುಗಳೆ ಪಾಡಳಿದು ಹೋಗಿಲ್ಲವೆ ?
ಒಂದು ಸೇರಿದ್ದೆಲ್ಲ ನಂದೆನುವ ಭ್ರಮೆ ಯಾಕೆ
ಒಂದೊಂದಕೂ ದಾರಿ ಬೇರಲ್ಲವೆ ?

ಮಣ್ಣನ್ನು ಹಿಡಿದೆತ್ತಿ ಮಣ್ಣಿಗೇ ಬಿಡುವಾಗ
ಕಣ್ಣಲ್ಲಿ ನೀರೇಕೆ, ಪ್ರೀತಿ ಮರುಳು
ಪಡೆದ ಗಳಿಗೆಯ ಚೆಲುವು ನಿತ್ಯ ನೆನಪಿಗೆ ವರವು
ವಸ್ತುವನೆ ಬೇಡುವುದು ಏನು ಹುರುಳು ?

ಬೆಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ
ಮರ್ತ್ಯಲೋಕದ ಮಿತಿಗೆ ಮಾನ ಬರಲಿ
ಎಲ್ಲಿದ್ದರೂ ಪ್ರೀತಿ, ರೀತಿಗಳ ಋಣ ಸಲಿಸಿ
ಇದ್ದಲ್ಲೆ ಅರಳಿ ಪರಿಮಳ ಬೀರಲಿ.