ಇರುವಂತಿಗೆ (ಕವನ ಸಂಕಲನ)
೧.ನನ್ ಲಚ್ಚಿ.
ಹಾಗೇ ನೋಡ್ತಾ ನೋಡ್ತಾ ಹೋದ್ರೆ
ನನ್ ಲಚ್ಮೀನೆ ಒಳ್ಳ್ಯೋಳು |
ಘಟ್ಟ್ಯಾಗೇನೊ ಮಾತಾಡ್ತಾಳೆ
ಆದ್ರೂನೂವೆ ಒಳ್ಳ್ಯೋಳು ||
ಅವ್ಳೂ ಬಂದು ಸಿದ್ದೇ ಎಡ್ವಿ
ಹದ್ನಾರ್ ವರ್ಷ ಹಾರ್ಹೋಯ್ತು |
ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ
ಹೊನ್ನೀರ್ ಕಾಲ್ವೆ ತುಂಭೋಯ್ತು ||
ತುಂಬಿದ್ ಕಾಲ್ವೆ ತೋಟಕ್ ನುಗ್ಗಿ
ಚಿನ್ನದ್ ಸೊಪ್ನಾ ಸುರ್ದಿತ್ತು |
ಬೇಲೀ ಸುತ್ತಾ ಹೂವಿನ್ ಸುಗ್ಗಿ
ಜೀವದ್ ಕಣ್ಣೇ ತೆರ್ದಿತ್ತು ||
ಹಳ್ಳ್ಯೋಳೂಂತಾ ಅನ್ನೋರನ್ಲಿ
ಒಳ್ಳೇ ಹೆಂಡ್ತಿ ನನ್ ಲಚ್ಮಿ |
ಬೆಳ್ ಬೆಳ್ ಗಿದ್ದೋರ್ ಬೆಳ್ಕೋಂಡ್ ಬರ್ಲಿ
ಪಚ್ಚೇ ಬಳ್ಳಿ ನನ್ ಲಚ್ಮಿ ||
ತೊಟ್ಲೂ ಬಟ್ಲೂ ತಂದೋರ್ಯಾರು
ಅವ್ಳೇ ತಾನೆ ನನ್ ಲಚ್ಮಿ |
ಬಿಸ್ಲಲ್ ಮಳೇಲ್ ನಕ್ಕೋರ್ಯಾರು
ನೊಂದೋರ್ಯಾರು ನನ್ ಲಚ್ಮಿ ||
ಹನ್ನೊಂದ್ ಘಂಟೇಗನ್ನಾ ಹಾಕಿ
ಕಾಪಾಡೋಳೇ ನನ್ ಲಚ್ಮಿ |
ಮಕ್ಕಳ್ನೆಲ್ಲಾ ತೂಗಿ ಸಾಕಿ
ಬೆಳ್ಸೋ ದೇವ್ರೆ ನನ್ ಲಚ್ಚಿ ||
ಜೊತೇಲ್ ಬಂದು ಮರ್‍ಏಲ್ ನಿಂತು
ನನ್ನೇ ನೋಡ್ತಾಳ್ ನನ್ ಲಚ್ಚಿ |
ಮೋಡಲ್ ಮರೇಲ್ ಮುಂಗಾರ್ ಮಿಂಚು
ಹಾಡಿನ್ ತುಂಬಾ ನನ್ ಲಚ್ಮಿ ||
೨.ಅನ್ನದ್ ತಪ್ಲೆ.
ಹುಟ್ಟಿದ್ ಮಳೇ ಹಾಳಾಗ್ ಹೋಯ್ತು,
ಸುಮ್ನೆ ಗುಡುಗಿನ್ ಕೋಡಿ.-
ಅಕ್ಕಿ ಬೆಲೇ ಏರ್ತಾ ಹೋಯ್ತು
ದುಡ್ಡಿನ್ ಮೊಕಾ ನೋಡಿ.
ಅಕ್ಕೀಗಿಂತ ಅಲ್ಲಿದ್ ಕಲ್ಲೆ
ಮುತ್ನಂಗಿತ್ತು, ತಣ್ಗೆ !
ಕಟ್ಕೊಂಡೋಳ್ಗಿಂತಿಟ್ಕೊಂಡೋಳೇ
ಸುಂದ್ರೇ ಅಲ್ವೆ ಕಣ್ಗೆ !
ಒಲೇ ಕುರ್ಚೀಲನ್ನದ್ ತಪ್ಲೆ
ತಲೆ ತೂಗ್ತಾ ಇತ್ತು ;
ಅಕ್ಕೀ ಮೊಕಾ ನೋಡಿದ್ ಕೂಡ್ಲೆ
ಕುಣ್ಯೋದ್ ನಿಂತೇಹೋಯ್ತು !
ಅಕ್ಕಿ ಮೊಕಾ ಚಿಕ್ದಾಗ್ ಹೋಯ್ತು
ತಂದೋರ್ ತೊಂದ್ರೆ ನೋಡಿ ;
ನಕ್ಕೋರ್ ಮೊಕ ಮೂರ್ಕಾಸಾಯ್ತು
ಇದ್ದೋರ್ ಸಂಕ್ಟಾ ನೋಡಿ.
ಒಲೇ ಊದಿ - ತಲೇಗ್ ಬೂದಿ -
ಅಂತೂ 'ಅನ್ನಾ' ಅಂದ್ರು ;
ಕಸಾ ಗುಡ್ಸೀ ತಟ್ಟೇ ಹಾಕೀ
ಉಟಕ್ಕೆಲ್ಲಾ ಬಂದ್ರು.
ತೊಂಬತ್ತೊಂಬತ್ ಅಕ್ಕಿ ಬೆಂದ್ರೂ
ಬೆಂದಿರ್ಲಿಲ್ಲ ಕಲ್ಲು !
ಉಣ್ತಾ ಇದ್ದೋರ್ ಹೊಡಿಯಾಕ್ ಬಂದ್ರೂ..
ಕಲ್ - ಕಡಿದಿತ್ತು ಹಲ್ಲು !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ