ಕಿಷ್ಕಿಂಧಾ ಸಂಪುಟಂ ಸಂಚಿಕೆ : ಸಂಚಿಕೆ 5 – ಪೂಣ್ದೆನಗ್ನಿಯೆ ಸಾಕ್ಷಿ

ಬೀಳುಕೊಟ್ಟಳು ನಿಶೆಯನಾ ಸರೋವರ ಲಕ್ಷ್ಮಿ ತಾಂ
ಕುಮುದಮುಖದಿಂ ; ಕಮಲ ಕೋಮಲವದನೆಯಾಗಿ
ಮತ್ತಮೊಯ್ಯನೆ ತಿರುಗಿದನ್ ಸೊಗಂಬಯಸಲುಷೆಗೆ.
ಮೂಡುವೆಣ್ಣಿನ ನಿದ್ದೆಗಣ್ಣು ತನ್ನಿರುಳೆವೆಯ
ಕರ್ಪು ರೆಪ್ಪೆಯನರಳಿಸಲ್, ಬೆಸುಗೆ ಬಿರ್ಚಿದುದೊ
ಬಾನ್ ಬುವಿಗೆನಲ್, ಬಿರುಕುದೋರ್ದೊಳ್ಕಿದುದು ಪೊನಲ್
ಚೆಂಬಳದಿಯಾ. ಮತಂಗನ ಪೆಸರ ಮಡುವಿನೊಳ್
ನೀರು ಓಕುಳಿಯಾಯ್ತು. ಮಳಲದಿಣ್ಣೆಯ ಮೇಲೆ
ಕೊಡೆವಿಡಿದವೋಲೆದ್ದ ಬಂಡೆಯಡಿ ರಾತ್ರಿಯಂ
ಕಳೆದ ರಘುಜರ್, ಪ್ರಕೃತಿಕೃತ ಸಹಜಘಟ್ಟಮೆನೆ           10
ನೀರ್ಗೆ ನೀಡುಂ ಚಾಚಿ ಮಲಗಿರ್ದ ಪಾಸರೆಯ
ತುದಿಗೈದಿ, ಪ್ರಾಭಾತವಿಧಿಗಳಂ ಪೂರಯಿಸಿ,
ಋಶ್ಯಮೂಕದ ಕಡೆಗೆ ಮೊಗದಿರುಹಿ ಕುಳಿತರೈ,
ಗಗನ ನಗ ಕಾನನ ಸರೋವರಂಗಳನೊಂದೆ
ಕಣ್ಬೊಲಂಬಡೆದು.
ಒಯ್ಯೊಯ್ಯನೆ ದಿವಾಕರಂ
ತ್ರೈಲೋಕ್ಯ ಸೌಂದರ್ಯ ಸೌವರ್ಣ ಕಲಶಮೆನೆ
ಮೈದೋರಿ, ಮೇಲೇರಿ, ಕನಕಜಲ ಕಾನ್ತಿಯಂ
ಸಿಂಚನಂಗೈದು ಕಾಂಚನಿಸಿದನು ಕಾನನ
ಶ್ಯಾಮಾಂಬರಂ ಪೀತಮಪ್ಪಂತೆ. ವನಪಕ್ಷಿ
ಜಲಪಕ್ಷಿ ಕಂಠಕೃತ ತುಮುಲ ನಾನಾ ಸ್ವನಂ
ಬುಗ್ಗೆಯೋಲುಣ್ಮಿ ಪರಿದುದೊ ಸರೋವರಕೆನಲ್,         20
ನೀರು ತಾಂ ನೀರುಗಳಾಯ್ತು, ಬೇರೆ ಬೇರೆಯ ರಂಗು
ರಂಗಿಂದೆ : ಕರ್‌ನೀಲಿ ಬೆಳ್‌ನೀಲಿಯಾಯ್ತಿಲ್ಲಿ ;
ಬೆಳ್‌ನೀಲಿ ಹೂಹಳದಿಯಾಯ್ತಲ್ಲಿ. ಹೂಹಳದಿ
ಹೊನ್ನಾದುದಿಲ್ಲಿ ; ಹೊನ್ನಸುಗೆಗೆಂಪಾದುದದೊ
ಅಲ್ಲಿ. ಪಚ್ಚೆಯ ರಾಗಮೊಯ್ಯನೆಯೆ ಕಿಚ್ಚಾಯ್ತು ;
ಕಿಚ್ಚು ಕಣ್ಣಿಡೆ ತಿರುಗಿದುದು ಪುಷ್ಯರಾಗಕ್ಕೆ
ಮರಳಿ. ಅದೊ ಅಲ್ಲಿ ಗೋಮೇದಿಕಂ ; ನೋಡಲ್ಲಿ
ವೈಡೂರ್ಯಮತ್ತಲದೊ ವಿದ್ರುಮಂ ! ರವಿಶಿಲ್ಪಿ ತಾಂ
ಸಪ್ತರಾಗದ ಕಿರಣಟಂಕ ಕವಿಕರ್ಮದಿಂ                 30
ಕೆತ್ತಿ ಕಲ್ಪಿಸಿದನೊ ಅನೇಕ ರತ್ನಂಗಳಂ
ಪಂಪಾ ಸರೋವರದ ಬೃಹದೇಕ ನೀಲದಿಂ
ಪೇಳೆಂಬಿನಂ, ವಿವಿಧ ರಾಗ ರುಚಿರಂ ಹ್ರದಂ
ರಾರಾಜಿಸಿತು ರಾಮಹೃದಯಕೆ ವಿರಹದುರಿಯಂ
ಕೆರಳ್ವ ಕಾಮನ ಬಿಲ್ಲೆನೋಕುಳಿಯವೋಲ್ !
“ವತ್ಸ,
ಲಕ್ಷ್ಮಣಾ, ವೈವಾಹ ಮಂಟಪ ಸ್ಮರಣೆಯಂ
ಬಗೆಗೊಳಿಸುವೀ ಮನೋಹರ ಚಿತ್ರ ದೃಶ್ಯಮಂ
ನೋಳ್ಪೆನಗೆ ಬಾಳಿನುರಿ ನೂರ್ಮಡಿಸುತಿದೆ. ನಾಳ
ನಾಳದೊಳ್ ಜ್ವಾಳೆವರಿದಿದೆ ಮನ್ಮನೋಹರಿಯ
ಚಿಂತೆ. ಅದೊ ದಡದ ಮರದುಯ್ಯಾಲೆಯಿಂ ಗಾಳಿ       40
ಮಳೆಯೆರಚುತಿದೆ ಚಿನ್ನವೂಗಳಂ ; ಬಂಡೆಯುಂ,
ಪುಳಿನಮುಂ, ಶಿಖರಗೋಪುರದಂತೆ ನೀರಮೇಲ್
ನೀಳ್ದು ಮಲಗಿಹ ಬಂಡೆಕರ್ನೆಳಲುಮೆಸೆಯುತಿವೆ
ಸುಮರಂಗವಲ್ಲಿ ಚಿತ್ರಿತ ರತ್ನಕಂಬಳಿಯವೋಲ್ !
ಬಿರಿವ ನೀರ್ವೂಗಳೊಳ್ ಬಂಡುಣುವ ಪರಮೆ ಮೊರೆ
ನೀರ್ವಕ್ಕಿಗಳ ಬೇಟದಿಂಚರದೊಡನೆ ಹೊಂಚಿ
ನನ್ನನೇಳಿಪುದಲ್ತೆ ? ಅಃ ಆಲಿಸದೊ ಕೂಗುತಿದೆ,
ಆ ದರಿಯ ದುಮುಕುತಿಹ ವನನಿರ್ಝರದ ಮೊರೆಯ
ಮೀರಿ, ದಾತ್ಯೂಹಕಂ ! ವಿರಹದುಲಿ ! ಕರೆಯುತಿದೆ
ಪೆಣ್ವಕ್ಕಿಯಂ ! ಮೂದಲಿಸುತಿದೆ ನನ್ನನಯ್ಯೊ ಹಾ,      50
ಸೌಮಿತ್ರಿ : ಪಂಚವಟಿ ಪರ್ಣಶಾಲೆಯೊಳಂದು
ಈ ಉಲಿಯನಾಲಿಸಿದೊಡನೆ ದಯಿತೆ ತಾನುಮಾ
ಕೊರಳನನುಕರಿಸಿ, ಹಾ, ಕರೆಯುತಿರ್ದಳೊ ನಿನ್ನ
ಈ ನಿರ್ಭಾಗ್ಯನಂ …. ತಮ್ಮ, ಗತಿಶೂನ್ಯನಾದೆ !
ಮತಿಶೂನ್ಯನಾದೆನಗೆ ಸ್ಮೃತಿಯಲ್ಲದೆಯೆ ಬೇರೆ
ಸತಿಯಿಹಳೆ ? ಪೇಳಿಹಳೆ ? …. ಇನ್ನೆನಗೆ ವಿಸ್ಮೃತಿಯೆ
ಪರಮಾಶ್ರಯಂ, ಶಾಂತಿ, ಸದ್ಗತಿ, ಮಧುರ ಮೃತ್ಯು !”
ಲಕ್ಷ್ಮಣಂ ಕ್ಷಣಕಾಲಮುಂತಿರ್ದನಂತರಂ :
“ಅಜ್ಜಿ ಪೇಳ್ದಾ ಮಲೆ ಇದೆಂದೆ ತೋರ್ಪುದು ಕಣಾ
ಋಶ್ಯಮೂಕಂ. ದೂರದಿಲ್ಲಿಂದಮೆತ್ತರದ         60
ಆ ಬಂಡೆಮಂಡೆಯ ನೆತ್ತಿ ಮಲೆತಿರ್ಪುದೆಂತು
ಮುಗಿಲನಂಡಲೆದು ! ಪರ್ವತದ ಪಕ್ಷಿಯ ಕೊಕ್ಕು
ಕುಕ್ಕುತಿದೆ ನೀಲಾಂಡಮಂ ; ಮಲೆಯ ಗೂಳಿಯ ಕೋಡು
ಮಲೆತು ತಿವಿದಿದೆ ಮೋಡಡುಬ್ಬಮಂ ; ಗೂಳಿಯಾ
ಗುಟುರುಗಳೆ ಗುಂಡುಗುಂಡಾದಂತೆ ಹಿಂಡೆದ್ದು
ಮತ್ತೆ ಛಲದಿಂ ಲಗ್ಗೆಯೇರುವಂತಿವೆ ತಮ್ಮ
ಮೊದಲಿನುನ್ನತಿಗೆ ! ಏಂ ನಿಶ್ಚಲಂ ? ಏಂ ಛಲಂ ?
ಏಂ ಧೈರ್ಯಮೇಂ ಬಲಂ ? ಈ ಗಿರಿಯೊಳಾಂ ದಿಟಂ
ಪಡೆದಪೆವು ಛಲ ಬಲಾನ್ವಿತ ಮಹಾಧೈರ್ಯಯುತನಂ
ಸನ್ಮಿತ್ರನಂ, ದಿಟಂ !”
ವ್ಯಂಗ್ಯ ವಚನದಿ ತನಗೆ                   70
ಧೈರ್ಯಮಂ ಪೇಳ್ದಿಂಗಿತವನರಿತು ದಾಶರಥಿ
ತಾನಿನಿತು ನಾಣಿಂ ತಮ್ಮನಂ ನೋಡಿ, ದರಹಸಿತ
ಮುಖಿಯಾಗಿ, ಸುಯ್ದು, ಧ್ಯಾನಸ್ಥನಾದಂ, ಮರಳಿ
ಮಲೆನೆತ್ತಿಯಂತೆ ತಲೆಯೆತ್ತಿ. ಸರೋವರದಿಂದೆ,
ಮರಳ್ದಾಸೆಯುಸಿರವೊಲ್, ಏರ್ದುದಾವಿಯ ಮಂಜು,
ತೆಳ್ಳನೆ ಹೊಗೆಯ ಹೋಲಿ. ಬಂಡೆಗೋಪುರ ನೆಳಲ್,
ನೀರ ಮೇಲೊರಗಿರ್ದುದಾವಿಯ ಮೇಲೆ
ನೀಲಿರಂಗೋಲಿಯೋಲ್ ಚಿತ್ತಾರಮಂ ಮೆತ್ತಿ
ಕೆತ್ತಿ. ಮೇಣಲ್ಲಲ್ಲಿ ಮಂಜುಮೆಯ್ ರವಿಕಿರಣ
ರಾಗದಿಂ ಕಿಂಜಲ್ಕ ಪಿಂಜರಿತಮಾಯ್ತು. ಆ     80
ನೋಟಮಂ ನಿಡುವೊಳ್ತು ನೋಡುತಿರ್ದಿನಕುಲಗೆ
ಮನದೊಳೇನೊಂದಾಯ್ತೊ ! “ಆರಲ್ಲಿ, ಕಾಣ್ ಸೌಮಿತ್ರಿ ?”
ಬೆಸಗೊಳುತ್ತೆಳ್ದು ತೆಕ್ಕನೆ ಬಂಡೆ ಬಂಡೆಯೆಡೆ
ನುಸುಳತೊಡಗಿದನರಸುನೋಟದಿಂದಾರನೊ
ಹುಡುಕುವಂತೆ. “ಎಲ್ಲಿ ?” ಎನೆ ಲಕ್ಷ್ಮಣಂ “ಇಲ್ಲಿಯೋ
ಮೇಣೆಲ್ಲಿಯೋ ಅರಿಯೆನಾಂ, ವತ್ಸ ! ಕಾಣದು ಕಣ್ಗೆ ;
ಬಗೆಗೆ ಸುಳಿದಿದೆ ಬರವು ಬಾಳ್ಗೆಳೆಯನೊರ್ವನಾ !”
ಎನುತೆನುತೆ, ತನ್ನ ಬೆಳ್ಪಿಗೆ ತಾನೆ ಬೆರಗಾಗಿ,
ನಿಂದನು ಅನಾಥನೊಲ್ ಸೀತಾನಾಥ ದಾಶರಥಿ,
ಕಣ್‌ತೊಯ್ದು ಸುಯ್ದು. ನಿಂದಿರೆ, ಬಿಳ್ದುದೈ ದಿಟ್ಟಿ           90
ಮುಂದಿರ್ದೊಂದರೆಯ ಮೇಲೆ. ಆ ನಿಡುನೀಳ್ದ
ಪೇರಾನೆಯೊಡಲ ಬಂಡೆಯನಿರದೆ ನಿಟ್ಟಿಸುತೆ
ಇಂಗಿತವರಿತನಂತೆ, ಸೌಮಿತ್ರಿಯಂ ನೋಡಿ :
“ಕಂಡೆ ಕಂಡೆನೊ, ಕಂಡೆ ! ಬಂಡೆಯಂದದೊಳಿಂತು
ಕಂಡರಣೆಗೊಂಡ ಮಾತ್ರದೊಳೆನಗೆ ಕುರುಡಹುದೆ ?
ಏಳು, ಗೆಳೆಯನೆ, ಏಳು; ತಾಳು ನಿಜರೂಪಮಂ ;
ಸೀಳು, ಒಡೆ, ಬಾಳ್ಬಂಡೆಯಂ ; ಬುಗ್ಗೆಯುಕ್ಕುವೋಲ್
ಮೂಡಿ ನಿಲ್ ಕಣ್ಮುಂದೆ. ಕಿಳ್ತೆಸೆದು ಕಲ್ತನದ
ಈ ವೇಷಮಂ !”
ಮಾತು ಮುಗಿವನಿತರೊಳಗಾ ಬಂಡೆ
ಮಾತಾಡಿತೆಂಬವೊಲ್ ಕೇಳಿಸಿತ್ತೊಂದು ದನಿ.            100
ರಾಮಲಕ್ಷ್ಮಣರಿರ್ವರಚ್ಚರಿಯೊಳೀಕ್ಷಿಸಿರೆ,
ಋಶ್ಯಮೂಕ ಮಹತ್ತೆ ಮೈವೆತ್ತವೋಲಂತೆ,
ಪಳುವಪ್ಪಿದರೆಯ ನೆತ್ತಿಯನೇರಿ, ಬಾನ್ಪಟದಿ
ಮಸಿಯ ಚಿತ್ತಾರಮಂ ಕಂಡರಿಸಿದರೆನಲ್ಕೆ,
ಗೋಚರಿಸಿದನ್ ಬೃಹದ್ ಭವ್ಯನೊರ್ವಂ. ರಾಮಂಗೆ
ತನ್ನ ಗತಿಸಿದ ಧೈರ್ಯಮೈತಂದಿದಿರ್ ನಿಂದು
ಧೀರ ವಾಣಿಯೊಳಾರಿಪೋಲಾಗೆ, ಗುಡಿಗಟ್ಟಿ
ಕಿವಿಗೊಟ್ಟನಾ ಕಲಿ ಮಲೆಯನುಲಿಗೆ :
“ಗೆಲಮಕ್ಕೆ ;
ಸೊಗಮಕ್ಕೆ ; ನಿಮಗೆ ಮಂಗಳಮಕ್ಕೆ ! ನಿಮಗೆಮಗೆ
ಕೆಳೆಯಕ್ಕೆ ! ನಮ್ಮ ತೌರೀ ಮಲೆಗೆ ನಿಮಗಕ್ಕೆ         110
ನಲ್ಬರಂ ! ಸುಗ್ರೀವನನುಚರಂ ಹನುಮನೆಂ ;
ಮಾರುತನ ಮಗನಾಂಜನೇಯನೆಂ ! ನರವರಂ,
ವಾನರಂ, ಕಪಿಕೇತನರ ಕುಲಕೆ ಚೇತನಂ,
ದೇವ ಸುಗ್ರೀವನಟ್ಟಿದನೆನ್ನನೀಯೆಡೆಗೆ
ನಿಮಗೊಳ್ಪುವೇಳಲ್ಕೆ. ಶಬರಿಯಾಶ್ರಮಕೆ ನೀಂ
ಬಿಜಯಗೆಯ್ದುದನರಿತೆವಾವೆಮ್ಮ ಬೇಹಿಂದೆ.
ನಿಮ್ಮ ದುಃಖವನರಿತೆವಾವೆಮ್ಮ ದುಃಖಮುಂ
ಸದೃಶಮೆನೆ. ನೀಮೆಮಗೆ ನಾಂ ನಿಮಗೆ ನಂಟರಯ್ !
ರವಿಸುತಂ ನಮ್ಮೆರೆಯನಟ್ಟಿದನ್ ರವಿಕುಲದ
ನಿಮ್ಮ ಕೆಳೆಯಂ ಬಯಸಿ ಬೇಡಿ !”
ಆ ಮಲೆಯನಾ                                              120
ಕೊರಳ ಸಂಸ್ಕೃತಿಗೆ, ಮೆಯ್ಯಾಕೃತಿಗೆ, ಶಿತಮತಿಗೆ,
ಯೋಗ ನಯನದ್ಯುತಿಗೆ ಸೋಲ್ತನೈ ರಾಘವಂ :
ಮಲರಿಗೆರಗಿದ ಪರಮೆ ಬಂಡುಣುವ ಸೊಗಸಿಂಗೆ
ಮೊರೆಯಂ ಮರೆಯುವಂತೆ ರಾಮನೇನೊಂದುಮಂ
ನುಡಿಯಲಾರದೆ ನೋಡುತಿರ್ದನ್ ಮನೋಜ್ಞನಂ,
ವಾನರ ಮಹಾ ಪ್ರಾಜ್ಞನಂ ! ಸಮೀರಾತ್ಮಜಂ
ತಾನುಮಂತೆಯೆ ನೋಡುತಿರ್ದನ್ ಸಮುದ್ರಸಮ
ಗಂಭೀರನಂ, ನಭಃಸನ್ನಿಭ ಶರೀರನಂ, ಮೇಣ್
ಗಿರಿವನಪ್ರಿಯ ರಾಮಚಂದ್ರನಂ ! ನೆಲದರಿಕೆ
ವೆಸರ ಕಬ್ಬಿಗರಿರ್ವರೊರ್ವರೊರ್ವರನರಿತು          130
ಮೆಚ್ಚಿ ನೋಳ್ಪಂದದೊಳೆ ರಾಮಾಂಜನೇಯರುಂ
ದಿಟ್ಟಿಯಿಂದಪ್ಪುವೋಲೊರ್ವರೊರ್ವರನೊಪ್ಪಿ
ನಿಟ್ಟಿಸಿದರಲ್ಲಿ ನಿಬ್ಬೆರಗಾಗಿ ಲಕ್ಷ್ಮಣಗೆ !
ದೂರಾಂತರ ವಿಭಿನ್ನ ಗಿರಿಗಳಿಂದುದ್ಭವಿಸಿ,
ತಂತಮ್ಮ ಬೇರೆಬೇರೆಯ ಬಟ್ಟೆಯಂ ಪಿಡಿದು
ಪರಿದು, ಜೀವಿತ ಮಧ್ಯಮಾರ್ಗದೊಳೊಲಿದು ಕಲೆತು,
ಜೀವನೋದ್ದೇಶದಿಂದೈಕತಾ ಭಾವಮಂ
ತಳೆದು ಮುನ್ನಡೆವೆರಡು ಪೊಳೆವೊನಲ್ಗಳೋಲಂತೆ
ಲಕ್ಷ್ಮಣ ಸಹಿತ ರಾಮಾಂಜನೇಯಂ ವೆರಸಿ
ಏರ್ದನಾ ಋಶ್ಯಮೂಕಕ್ಕೆಡೆಗೆ ಸುಗ್ರೀವನಾ,           140
ಮಾರ್ಗಮೇರ್ವಾಗಳನಿಲಾತ್ಮಜಂ, ಮಿತಭಾಷಿ,
ವಾಕ್ಕೋವಿದಂ ಧನುರ್ಧ್ವನಿಯ ಗಾಂಭೀರ್ಯದಿಂ,
ಬ್ರಹ್ಮಚರ್ಯಜ ದೃಢಪ್ರತ್ಯಯ ಮಹೋದಾರ
ಶಾಂತಿಯಿಂ ಪರಿಚಯಿಸಿದನು ದಶರಥಾತ್ಮಜಗೆ
ಕಿಷ್ಕಿಂಧೆಯಂ, ಋಶ್ಯಮೂಕಮಂ, ವಾಲಿಯಂ,
ಸುಗ್ರೀವನಂ, ನೀಲ ನಳ ಜಾಂಬವಂತರಂ,
ವಾನರಕುಲದ ಕಥಾಮಹಿಮೆಯಂ, ಕೀರ್ತಿಯಂ,
ಮೇಣೊದಗಿದಪಕೀರ್ತಿಯಂ ! ಕೇಳ್ದು ರಾಘವಂ :
“ಅನಿಲಸುತ, ನೀಂ ಬಣ್ಣಿಸಿದ ಬಲ ಸಮುದ್ರರಾ
ಸೇನಾನಿಗಳ ನೇಹಮಿರ್ದೊಡಂ …… ವಾಲಿಯೇಂ    150
ಪಾಪದಿಂ ಕಲಿಯಾದನೇಂ ?” “ಪಾಪಮಂತಿರ್ಕೆ ;
ಕಲಿ ದಿಟಂ ! ವಾನರ ಕುಲಕೆ ಪೆರ್ಮೆಯಾತನಂ
ನಾಮೆಲ್ಲರಾರಾಧಿಸುತ್ತಿರ್ದೆವಯ್ ! ರವಿಸುತಂ
ಸುಗ್ರೀವನಖಿಲಮಂ ನಿಮಗೊರೆದಪಂ. ಲೋಕೈಕ
ವೀರನೆಂದೆನಿಸಿದಾ ದಶಕಂಠನುಂ ಬೆದರಿ
ದೂರಮಿರ್ದಂ ಬಳಿಗೆ ಬರಲಂಜಿ !” “ದುಷ್ಟಂಗೆ
ದುಷ್ಟನೆ ಭಯಂ ! ಶಿಷ್ಟ ಸಾತ್ವಿಕಕೆ ಸೆಡೆಯುವುದೆ
ಭ್ರಷ್ಟ ರಾಕ್ಷಸ ನೀತಿ ? ಕಣ್ಗೆ ಕಣ್, ಪಲ್ಗೆ ಪಲ್ ;
ದಂಡಮೇ ದಲ್ ಧರ್ಮಮಂತಪ್ಪ ನೀಚಕ್ಕೆ !”
ಸೇರಿದರು ಬಂಡೆಯಿಡುಕುರ್ ನಡುವೆ ನಡೆದೇರಿ         160
ಕಾಡುಬೀಡಿನ ಮಲೆಯ ನೆತ್ತಿಯ ಗುಹಾಮುಖದ
ನಿರ್ಜನಕೆ. ನಿಲ್ಲಿಮೆಂದೊರೆದುದೆ ತಡಂ, ಕಲ್ಲ
ಪೆರ್ದೆರೆಗಳೊಳ್ ಪೊಕ್ಕು ಮರೆಯಾದನಾಂಜನೇಯಂ.
ಬಿಸವಂದದಿಂದಮಾ ಸೌಮಿತ್ರಿ : “ಏಂ ನಿರ್ಜನಂ
ಈ ವನಂ ! ಶಂಕೆಗೆಡೆಯಾಗುತಿಹುದಣ್ಣ ! ಇದು
ವಾನರೇಶಂಗಿರ್ಕ್ಕೆಯಪ್ಪೊಡೇಕಿಂತು ಪಾಳ್
ಸುರಿಯುತಿದೆ ?” ಮಾತು ಮುಗಿವನಿತರೊಳೆ, ಆಲಿಸದೊ,
ನಾತಿದೂರದೊಳೊಂದು ಪೊಣ್ಮಿದುದು, ಸೀಳ್ವವೋಲ್
ವನ್ಯ ನಿಶ್ಶಬ್ದಮಂ, ದೀರ್ಘಶ್ರುತಿಯ ಶೀಳ್ !
ಬೆಚ್ಚಿ ಸುತ್ತುಂ ನಿಟ್ಟಿಸಿರೆ ರಾಮಲಕ್ಷ್ಮಣರ್                  170
ಸಿಲೆ ಬೆಸಲೆಯಾದುವೆನೆ, ಬಂಡೆಯೊಂದೊಂದರಿಂ
ಮೂಡಿದರ್ ವಾನರರ್ ಒಂದೆರಳ್ ಪತ್ತು ನೂರ್
ಲಕ್ಕಲೆಕ್ಕದ ಬೆಮೆಯನುಕ್ಕಿಸುತೆ ! ಬಳ್ಳಿ ವೂ
ನವಿಲ ಗರಿ ಕಯ್ಗಯ್ದ ತಲೆಯುಡೆಯ, ಪುಲಿ ಚಿರತೆ
ಮಿಗದ ತೋಲಂಗಿ ಸಿಂಗರಗೈದ ನವಿರಿಡಿದ
ಮೆಯ್ಯ, ಬಣ್ಣದ ನಾರ್ಗಳಿಂ ಸಮೆದ ವಸ್ತ್ರದಿಂ
ಶೋಭಿಸುವ ಮಲ್ಲಗಚ್ಚೆಯ ಕಟಿಯ ಆ ಮಲೆಯ
ಸಿಡಿಲಾಳ್ಗಳಂ ಮೆಚ್ಚಿ ನೋಡುತಿಹ ರಾಘವನ
ಬಳಿಗಾಂಜನೇಯನೈತಂದೊರೆದನಿಂತೆಂದು :
“ಸುಗ್ರೀವನಾಳ್ಗಳೀ ಕಾಣ್ಬರನಿಬರುಮ್. ಇದರ್ಕೆ        180
ನೂರುಮಡಿಯಿಹರಲ್ಲಿ ಕಿಷ್ಕಿಂಧೆಯೊಳ್. ವಾಲಿ
ಬಂಧಿಸಿಹನವರೆಲ್ಲರಂ ಭಯದ ಪಂಜರದ
ವಜ್ರದೊಳ್. ವಾಲಿಬೇಲಿಯ ಮುರಿಯೆ ನಮ್ಮದಯ್
ತೋಂಟಮನಿತುಂ ; ನಿನ್ನುದುಂ ಕಣಾ !” ಎನುತ್ತೆ ಕಯ್
ಸನ್ನೆಗೆಯ್ಯಲ್ಕೊಡನೆ ಮರೆಯಾದುದಾ ಸೇನೆ,
ಮಾಯವಾದಂತೆ ! ಮೂವರೆ ಪೊಕ್ಕರಾ ಗುಹಾ
ಕಿಷ್ಕಿಂಧೆಯಂ !
ಮರ್ಬಿನೊಳ್ ಚರಿಸಿ, ಕೆಲದೂರ
ನಡೆಯೆ, ತೋರ್ದುದು ರೂಕ್ಷತರ ಗುಹಾಮಂದಿರಂ.
ಕಂಡಿಕಂಡಿಗಳಿಂದೆ ಬಿಸಿಲ ಕೋಲುಗಳಿಳಿದು
ಪರ್ಬಿದತ್ತೊಂದು ಗುಹ್ಯತಾ ಕಾಂತಿ. ಅಲ್ಲಲ್ಲಿ              190
ಮಲಗಿದೊಲ್ ಕುಳಿತವೊಲ್ ನಿಂತವೊಲ್ ಕಲ್‌ಬಂಡೆ,
ರೂಪಾಂತರೆಂಬತ್ತು ಹೊಂಚಿರ್ಪ ಛದ್ಮನೆಯ
ಕಾಪಿನೋಲಂತೆ, ನಾನಾ ನ್ಯಾಸಮಂ ರಚಿಸಿ
ಚಿತ್ರಮಾದುವು ಕಣ್ಗೆ. ಗುಹೆಯ ಗೋಡೆಯ ಮೇಲೆ
ಮೆರೆದುವಾಯುಧ ಪಂಕ್ತಿ, ಫಣಿ ಭಯಂಕರಮಾದ
ಪುತ್ತುಮನಿಳಿಕೆಗೈದು ; ಮೇಣಂಗಣದ ನಡುವೆ
ದಂಡಾಗ್ರದೊಳ್ ಧೀರಮಿರ್ದತ್ತು ವಾನರರ
ಕೀರ್ತಿಯ ಕಪಿಪತಾಕೆ. ಅಲ್ಲಿ ಮಿತ್ರರ್ವೆರಸಿ
ಮಂತಣದೊಳಿರ್ದ ಸುಗ್ರೀವನುತ್ಸಾಹದಿಂ
ಮೇಲೆಳ್ದು, ಕೈಮುಗಿದತಿಥಿಗಳ್ಗೆ ಕಯ್ಮುಗಿದು,              200
ಸಾದರದಿ ಕೈವಿಡಿದು ತಳಿರ ತೊಂಗಲ್ ಮಣೆಗೆ
ಕರೆತಂದನವರ್ಗಳಂ ತುಂಬು ಗಾಂಭೀರ್ಯದಿಂ
ಶೋಭಿಪ ವಿನಯದಿಂದೆ. “ಧನ್ಯನಾಂ, ದಾಶರಥಿ,
ನಿನ್ನ ಕೆಳೆಯಂ ಪಡೆದೆನಿನ್ನೆನ್ನ ಬಾಳ್‌ಮರ್ಬ್ಬು
ಮಳ್ಗಿ ಬೆಳಗಾದತ್ತು ; ತೊಲಗಿತಿನ್ನಾಪತ್ತು,
ನನಗುಮೀ ನನ್ನ ನನಗಾಗಿ ನೆಲೆಗೆಟ್ಟಲೆವ
ನಳ ನೀಲ ಜಾಂಬವ ಹನುಮರಾದಿಯಾದೆಲ್ಲ
ಮಿತ್ರರ್ಗೆ. ನಾಂ ತಿಳಿದೆನಾಂಜನೇಯನ ಪೇಳ್ದ
ವಾರ್ತೆಯಿಂ ನಿಮ್ಮಖಿಲ ದುಃಖಕಥೆಯಂ. ನನ್ನ
ಪರಿಭವ ಪರಾಭವಂಗಳನೆಲ್ಲಮಂ ನಿಮಗೆ                   210
ತಿಳಿಪಿರ್ಪನೆನ್ನ ನಚ್ಚಿನ ಮಂತ್ರಿ. ಕಷ್ಟದಿಂ                  
ಮೇಣಿಷ್ಟಜನ ನಷ್ಟದಿಂದೆಮಗಿರ್ವರಿಗೆ ಸಮತೆ
ಸಮನಿಸಿದೆ. ದುಷ್ಟ ಸಂಹಾರಮುಂ ಸುವ್ರತಂ
ಇಲ್ಲಿ ನೆರೆದೆಮಗನಿಬರಿಗೆ. ಅಯೋಧ್ಯಾ ನಗರಿ
ಕಿಷ್ಕಿಂಧೆಗಕ್ಕೆಮ ಸಹೋದರಿ ! ರಘುಜ ಸೂನು, ಕೇಳ್,
ನಿನಗೆ ನಾಂ, ನನಗೆ ನೀಂ ! ಪೂಣ್ದೆನಗ್ನಿಯೆ ಸಾಕ್ಷಿ :
ನಿನ್ನರಸಿಯನ್ನರಸಿ ಕಳ್ದೊಯ್ದನನ್ನೊರಸಿ,
ಸಮೆಸುವೆನ್ ನಿನ್ನ ಸೇವೆಗೆ ನನ್ನ ಸರ್ವಮಂ ! -
ನನ್ನ ಸರ್ವಂ ? ಅಯ್ಯೊ, ನನ್ನ ಸರ್ವಮದೆಲ್ಲಿ ?
ಕಡವರವನೀವೆನೆಂಬುವ ಕಡು ಬಡವನಂತೆವೋಲ್     220
ಬರಿದೆ ಕೊಡುಗೆಯ ನುಡಿಯನಾಡುತಿಹೆನಾಂ !” ನಾಣ್ಚಿ
ತಲೆಬಾಗಿ ಕಣ್ಣೀರ್ಬಿಡುವ ಕಪಿಕುಲೇಂದ್ರಂಗೆ
ರಾಮಚಂದ್ರಂ : “ಪತ್ತುವಿಡು ಮನ್ಯುಮಂ ದೈನ್ಯಮಂ,
ವಾನರೇಂದ್ರ, ನಿನ್ನದೆಂದರಿ ಸಕಲ ಕಿಷ್ಕಿಂಧೆ !
ಪರಪತ್ನಿಗಳುಪಿದಾತಂ ಸತ್ತನೆಂದರಿ ದಿಟಂ !
ಪೂಣ್ದೆನಗ್ನಿಯೆ ಸಾಕ್ಷಿ !” ಒಡನೊಡನೆ ನಡುಗಿತಯ್
ನಾಲ್ವರ್ಗೆ ವಾಮನೇತ್ರಂ, ಕಾಮಿನಿಯರಿರ್ವರ್ಗೆ
ಮೇಣ್ ಕಾಮಾಂಧರಿರ್ವರಿಗೆ !
ಮಿಂದು ದೊಣೆನೀರ್ಗಳಂ,
ಪಣ್ಪಲಂ ಬೇರುಬಿಕ್ಕೆಗಳೌತಣವನುಂಡು,
ತುಸುವೊರಗಿ, ದಣಿದ ನಡುವಗಲಾಸರಂ ಕಳೆದು,       230
ಅನಂತರಂ ಕರೆದೊಯ್ದನತಿಥಿಗಳನಾ ಗಿರಿಧರಾ
ವ್ಯೂಹಮಂ ತೋರೆ. ಕಂದರದಾಳಮಂ, ವಿಪಿನ
ನಿಬಿಡತೆಯನದ್ರಿಯೌನ್ನತ್ಯಮಂ, ಕಡಿದಪ್ಪ
ಬಂಡೆ ನಿಂದಿಹ ತೆರನ ದುರ್ಗತೆಯನೆಲ್ಲಮಂ
ಪೇಳ್ದು, ಬಣ್ಣಿಸಿ, ತೋರ್ದು, ಕಿಷ್ಕಿಂಧೆಯಿರ್ದೆಡೆಗೆ
ಕಣ್ಣಾಗಿ ನಿಂದು ಸುಗ್ರೀವನಂ ಕಾಣುತಂ
ಕೌತುಕದೊಳಿರ್ದ ರಘುನಂದನನ ಕಿವಿಗಳ್ಗೆ
ಪರ್ಚಿದನನಿಲಜಾತನಿಂತೆಂದು : “ಅತ್ತಲಾ
ಕಿಷ್ಕಿಂಧೆಯಿರ್ಪುದಯ್, ಮಲೆಯ ತೋಳ್ ತಕ್ಕೆಯೊಳ್
ಪಟ್ಟವೋಲ್. ನೋಡು ಅದೆ ರುಮಾದೇವಿಯಂ ವಾಲಿ   240
ಸೆರೆಯೊಳಿಟ್ಟಚಲಚೂಡಂ ! ತನ್ನ ಅರ್ಧಾಂಗಿ
ನಮೆಯುತಿರ್ಪೆಡೆಯನವಲೋಕನಂಗೈದೆಮ್ಮ
ದೊರೆ ನಿಂದನೀ ಮಾಳ್ಕೆಯಿಂ ಸುಯ್ದು ……” ರಾಮಂಗೆ
ತನ್ನ ದಯಿತೆಯ ನೆನಹು ಮರುಕೊಳಿಸಿದಂತಾಗೆ :
“ಅಯ್ಯೊ, ಮರುತಾತ್ಮಜನೆ, ನನಗೆ ಆ ಪುಣ್ಯಮುಂ
ಇಲ್ಲಾಯ್ತಲಾ !” ಕೇಳ್ದದಂ ಮುದಿಯ ಜಾಂಬವಂ :
“ದೇವ, ನೀನಿಂತೇಕೆ ಮರುಗುತಿಹೆ ? ಸಂಪಾತಿ
ಸೋದರಂ ನಿನಗೊರೆದ ವಿತ್ತೇಶನವರಜಂ
ದಶಕಂಠ ಬಿರುದಿನಾ ಲಂಕೇಶ ರಾವಣನೆ
ದಿಟಂ ; ಭುವನದೊಳ್ ಬೇರೆ ಧೂರ್ತರಿನ್ನನ್ನರಂ          250
ಕಾಣೆನಾಂ. ಕೇಳ್ದುಮರಿಯೆಂ. ತಿಂಗಳಾಯಿತ್ತಿಲ್ಲ ;
ನಡೆದೊಂದಪೂರ್ವಮಂ ಪೇಳ್ವೆನ್. ಒರ್ಪಗಲೆಮ್ಮ
ವಾನರರ್, ಭಲ್ಲೂಕ ವಂಶಜರುಮಂತೆ ಕಪಿ
ವಂಶಜರುಮಾರಣ್ಯ ವ್ಯಾಯಾಮ ಸಕ್ರಿಯಿಂ
ವಿಹರಿಸುತ್ತಿರೆ, ಮೇಲೆ ಬಾಂದಳದಿ ಪಳಯಿಸುವ
ದನಿ ಕೇಳ್ದುದಂತೆ, ಕೊಂಚೆಗಳೆಂದು ಸರ್ವರುಂ
ತಲೆಯೆತ್ತಿ ನೋಡಲ್, ವಿಮಾನವೊಂದೆತ್ತರದಿ,
ಹತ್ತಿಮೋಡಗಳಾಚೆ, ಜವದಿಂ ಪರಿದು ನುಸುಳಿ
ಮರೆಯಾಯ್ತು. ಬಿಸವಂದದಿಂದೆಲ್ಲರೀಕ್ಷಿಸಿರೆ,
ಬೆರಗಿಗೆ ಬೆರಗನಿತ್ತು ಬಿಳ್ದತ್ತವನಿಗೊಂದು               260
ಪೊನ್ನೊಡವೆ.” ಸುಯ್ಪಿನುಬ್ಬೇಗದಿಂ ದಾಶರಥಿ :
“ನೋಳ್ಪಮೆಲ್ಲಿರ್ಪುದಾ ಬೀಳ್ಕೆ !” ಎನೆ ಜಾಂಬವಂ :
“ಬಿಳ್ದ ಬೇಗಕೆ ನುರ್ಗ್ಗುನುರಿಯಾದುದದರ ಕೃತಿ.
ನಿನಗವಿನ್ನಾಣಮಪ್ಪುದೆ ?” “ಸಾಲ್ಗುಮತಿ ಬುದ್ಧಿ !
ತೋರಯ್ಯ ತೋರೆನಗೆ ಬೇಗದಿಂ !” “ರವಿಸುತನ
ವಶಮಿರ್ಪುದವತಂಸಮ್.”
ಬರಿಸಿದನ್ ಬೇಗದಿಂ
ಪೊನ್ನೊಡವೆಯಂ. ನೀಡಿದನ್. ರಾಮನಾ ಕಯ್ಯ
ಕಂಪನಮೊಡನೆ ಬಿಸಿಯ ಸುಯ್ಲಾಯ್ತು. ಸುಯ್ಯೊಡನೆ
ಕಣ್ಣೀರವೊನಲಾಯ್ತು. ಮುಳುಗಿ ಕಣ್ಬನಿಯಲ್ಲಿ
ಮುಚ್ಚೆವೋದುದು ಮನಂ. ಹನುಮ ವಕ್ಷದೊಳೊರಗಿ    270
ಸೊರಗಿದುದು ರಾಮತನು, ಸೀತಾವಿರಹದುರಿಯ
ಹೊಯ್ಲಿನಲಿ. ಕಿರಿದು ಬೇಗದೊಳರಿವು ಮರಳಲ್ಕೆ,
ದುಃಖ ವಲ್ಮೀಕದಿಂ ರೋಷಫಣಿಯುರ್ಕ್ಕೇಳ್ವ
ತೆರದಿಂದೆ, ಸುಯ್ವೆಳ್ದನವನಿಜಾ ವಲ್ಲಭಂ :
“ಪೇಳೆಲೆ ಕಪಿಧ್ವಜ ಕುಲೇಂದ್ರ, ಹೇ ಸುಗ್ರೀವ,
ದೈತ್ಯನೆತ್ತಣ್ಗುಯ್ದನೆನ್ನುಸಿರ ದಯಿತೆಯಂ ?
ನಾಡೆಲ್ಲಿ ? ಬೀಡೆಲ್ಲಿ ? ನೆಲೆಯಾವುದಾತಂಗೆ ?
ತಡವೇಕೆ ? ಚಿಂತಿಸಿನಿಯಳ ಗತಿಯನೆಂತಿಂತು
ತಳ್ವುವೆನೊ ? ತೋರಾತನಿರ್ಪೆಡೆಯನೀಗಳೆಯೆ
ಮಿಳ್ತುವನೆವಾಗಿಲಂ ತೆರೆವೆನಾ ನೀಚಂಗೆ, -               280
ನುರ್ಗಾದ ನೀಂ ಪ್ರತಿಕೃತಿಯೆ ವಲಂ, ಪೊನ್ನೊಡವೆ,
ನನ್ನ ಸೀತಾ ಸ್ಥಿತಿಗೆ !” ಇಂತಿಂತು ಮೊದಲಾಗಿ
ಪಳಯಿಸುತ್ತಿರ್ದ ಮಳೆಮುಗಿಲ್ ಮೆಯ್ಯ ಬಣ್ಣಂಗೆ
ಸಮದುಃಖಿ ಸುಗ್ರೀವನಿಂತು : “ಹೇ ಅರಿಂದಮ,
ಮಸೆಯದಿರ್ ನೆನಹುಸಾಣೆಯೊಳಳಲ ಕತ್ತಿಯಂ.
ನೆನಹು ಹಿಂದಿಹುದಳುಕು ಮುಂದಿಹುದು; ಇರ್ಬ್ಬಾಯಿ
ನಿನ್ನ ಸಂಕಟದಸಿಗೆ. ತಾಳ್ಮೆಯೊರೆಗಿರುಕದೆಯೆ
ಬರಿದೆ ಬೀಸಿದರೆನ್ನ ಮೇಣ್ ನಿನ್ನ ಮೇಣಿವರೆಲ್ಲ
ಬಾಳ ಗೋನಾಳಿಯಂ ತರಿವುದೆ ದಿಟಂ. ಸೀತೆ ಮೇಣ್
ರುಮೆಯಿರ್ವರಿಗೆ ಸರ್ವನಾಶಮಪ್ಪುದೆ ಫಲಂ ! -          290
ನೀನಾರ್ಯನಾಂ ವಾನರಂ. ನನಗೆ ನಿನ್ನಂತೆವೋಲ್
ಮನೆ ಮಡದಿಗೆಟ್ಟ ಗತಿಯಿಪ್ಪುದಯ್ ….. ಧೈರ್ಯನಿಧಿ
ನೀನೆಲ್ಲರಾದರ್ಶಮಂತುಟೆ ಮಾರ್ಗದರ್ಶಿ.
ದೋಣಿ ಬಿರಿದರೆ ಪುಟ್ಟು ಪೊರೆಯುವುದೆ ? ನಿನ್ನೆರ್ದೆಯೆ
ನೆಚ್ಚಳಿದು ಕೆಚ್ಚುಗೆಟ್ಟರೆ ನಮ್ಮ ನೆಮ್ಮೆತ್ತಣಿಂ ? -
ಪೇಳ್ವೆನಾಂ ; ತಾಳ್ಮೆಯಿಂದಾಲಿಸಾ. ಕಳ್ದುಯ್ದ
ನೀಚಂ ದಶಗ್ರೀವನೆಂಬುದೆಮ್ಮೆಲ್ಲರೂಹೆ.
ಕೇಳಿ ಬಲ್ಲೆವು ಲಂಕೆಯಂ, ತೆಂಕಣದ ಕಡಲ
ನಡುವಣ ದೀವಿನಾಡಂ. ಆದೊಡಂ, ದಾಶರಥಿ,
ಸುಲಭಮಲ್ತಸುರಪುರಿ. ಕಳುಹುವೆನ್ ಕಲಿಗಳಂ,         300
ಗೂಢಚರ ವನಚರ ಸಮರ್ಥರಂ, ಪುಡುಕಲ್ಕೆ.
ತಡೆಯೆಮಗೆ ವಾಲಿಯಲ್ಲದೆ ರಾಕ್ಷಸೇಶ್ವರಂ
ತಾನಲ್ತು. ವಾಲಿಯ ತಡೆಯನಳಿಸುವುದೆ ತಡಂ ….”
“ಕಿಷ್ಕಿಂಧೆಯಂ ಮುತ್ತಿ ಲಗ್ಗೆಯೇರ್ವಂ ನಾಳೆ.
ತಡವೇಕೆ ?” ಎಂದ ಲಕ್ಷ್ಮಣಗೆ ಸುಗ್ರೀವಂ :
“ದಶ ದಶಗ್ರೀವರಾತಂಗೊಂದು ಸೀರ್ಪುಲ್ಗೆ
ಸಾಟಿ, ಶತಕೋಟಿ ಬಲಶಾಲಿ ವಾಲಿಗೆ ಕಣಾ !
ಸಮ್ಮುಖ ಸಮರನೀತಿಯಿಂದಾತನಂ ಜಯಿಸೆ
ಶತಮಾನಗಳೆವೇಳ್ಕುಮಯ್. ಪಿಂತೆ ನಾಮೆನಿತೊ
ಸೂಳ್ ಕಂಡಿರ್ಪೆವಾತನ ಚಂಡ ವಿಕ್ರಮದ             310
ದುರ್ದಮತೆಯಂ. ಬ್ರಹ್ಮವರಬಲಮಿರ್ಪುದೈ.
ಮಾರಾಂತು ನಿಲ್ವ ವೈರಿಯ ಬಲದೊಳರ್ಧಮಂ,
ಕಂಡೊಡನೆ, ಕೊಳ್ಗೆ ನಿನ್ನದಟೆಂದು. ಇಂದ್ರನುಂ
ಕರುಣಿಸಿ ಕುಮಾರಂಗೆ ಕೊಟ್ಟಿಹನು ರಕ್ಷೆಯಂ
ವಜ್ರವರ್ಮೋಪಮಂ. ಹಿಂದೆ ದುಂದುಭಿವೆಸರ
ದೈತ್ಯಂ, ಸಮುದ್ರಮಂ ಗಗನಮಂ ಗಿರಿವರ
ಹಿಮಾದ್ರಿಯಂ ಕೆಣಕಿ ಕಾಳೆಗಕೆ ಸೆಣಸಿದ ಮಹಾ
ಧೂರ್ತದೈತ್ಯಂ, ಬೃಹನ್ಮಹಿಷರೂಪವನಾಂತು
ಮಲೆತು ಗರ್ಜಿಸಿ ವಾಲಿಯಂ ಕಾಲ್ಕೆರೆಯೆ, – ಪೇಳ್ವೆನೇಂ ?
ಸಾಕ್ಷಿಯಿವರೆಲ್ಲರುಂ – ಧಂ ಧಂ ಧಮೆಂಬುವಾ            320
ಭೇರಿ ದುಂದುಭಿ ರವಕೆ ನಡುಗೆ ಗಿರಿವನ ಗುಹಾ
ಕಿಷ್ಕಿಂಧೆ, ಪೂಡಿತೈ ದ್ವಂದ್ವಯುದ್ಧಂ ಭಯಂ
ಕರಂ ಕಲಿಗಳಿರ್ವರಿಗೆ ! ಆ ಭೀಮ ಕರ್ಮಿಯಾ
ಎರ್ಮೆವೋರಿಯ ಮೆಯ್ಯ ರಕ್ಕಸನ ಶಿಖರಸಮ
ಕೋಡೆರಡನಿರ್ಕಯ್ಗಳಿಂದಡಸಿ ಪಿಡಿದೊತ್ತಿ,
ತಿರ್ರನೆ ತಿರುಪ್ಪಿ, ನೆತ್ತರ್ ಕಾರಿ ಗೋಣ್ಮುರಿಯೆ,
ತೆಗೆದೊಗೆದನೈ ಮುಗಿಲ ಮೊಗಕೆ ! ಬಿಳ್ದತ್ತು ಆ
ರಕ್ಕಸವೆಣಂ ಮತಂಗನ ವನವನುತ್ತರಿಸಿ
ಯೋಜನದತ್ತ ದೂರಕ್ಕೆ. ಬಿಸುಟ ಶವದಿಂದೆ
ಮುದ್ದೆಮುದ್ದೆಯೆ ನೆತ್ತರೊಳ್ಕಿ ಮುನಿಯಾಶ್ರಮದಿ         330
ಬೀಳೆ, ಶಪಿಸಿದನು ಋಷಿ, ಆ ಶಾಪಭೀತಿಯಿಂ
ವಾಲಿಯೈತರನಿಲ್ಲಿಗದರಿಂದೆಮಗೆ ರಕ್ಷೆ ! -
ಭೀಮಬಲವೊಂದೆಯಲ್ತಾತಂಗೆ, ಸಿದ್ಧಿಸಿದೆ
ಬಿಲ್ಬಲ್ಮೆಯುಂ. ಅಲ್ಲಿ, ಪಂಪಾ ಸರಸ್ತಟದಿ
ಬಲ್ಬೆಳೆದ ತಾಲತರವೊಂದೊಂದುಮವನೊಂದೆ
ಬಾಣದಿಂ ಜಜ್ಜರಿತಮಾಗಿ ಕೆಡೆವುವು ಕಣಾ ! -
ಸಮ್ಮುಖ ಸಮರ ನೀತಿಯಿಂದಾತನಂ ಜಯಿಸೆ
ಶತಮಾನಗಳೆವೇಳ್ಕುಮದು ದಿಟಂ !”
ಕೆಟ್ಟಾಸೆ
ನಿಟ್ಟುಸಿರನೆಳೆದ ಸುಗ್ರೀವನಂ ನೋಡುತ್ತಿನಿತು
ಕಿನಿಸಿಂ ಧನುರ್ಧರ ವರೇಣ್ಯಮ್ : “ವಾನರೇಂದ್ರ,      340
ಬಾಯ್‌ತುಂಬಿ ಬಣ್ಣಿಸಿರ್ಪಯ್ ನಿನ್ನಣ್ಣನಣ್ಮಮ್.
ನೀಂ ಗುಣಗ್ರಾಹಿಯೆ ವಲಂ ! ಕಂಡ ಬಲ್ಮೆಯಂ
ಕೊಂಡಾಡುವುದೆ ಬೀರರಿಗೆ ತಗುವ ಸಿರಿಗೆಯ್ಮೆ.
ಕಾಣದುದನಿಳಿಕೆಗೆಯ್ವುದುಮಂತೆ ಕೀಳ್‌ಗೆಯ್ಮೆ.
ನಮ್ಮ ಬಲ್ಮೆಯನರಿಯದಾಡುತಿಹೆ. ನಿನ್ನೆರ್ದೆಯ
ಶಂಕೆ ಬಯಲಪ್ಪವೊಲ್ ತೋರ್ಪೆನೆನ್ನಣ್ಮುಮಂ, ಮೇಣ್
ಬಿಲ್‌ಜಾಣ್ಮೆಯಂ.” ಬಾಗಿ ನಾಣ್ಚುತ್ತಿನಾತ್ಮಜಂ
ಕಯ್ಮುಗಿದೊರೆದನಿಂತು : “ಮನ್ನಿಸೆನ್ನಂ, ದೇವ,
ನಿನ್ನ ಜಸಮಂ ಕೇಳ್ದೆನಾದೊಡಂ ಬಗೆಯಳ್ಕು
ನುಡಿಸಿತ್ತು. ವಾಲಿಯಿಂದೆನಿತೊ ಸೂಳಾಂ ಸೋಲ್ತು     350
ಮಯ್‌ಮುರಿಸಿಕೊಂಡಿರ್ಪೆನದರಿಂದೆ ಮತ್ತೊರ್ಮೆ
ಪುಸಿಬಲ್ಮೆಯಂ ನೆಚ್ಚಿ ಮಾರಾಂಪಲೊಲ್ಲೆನಯ್
ಮಿಳ್ತುವಿಗೆಣೆಯ ಬೀರಂಗೆ !” “ನಾನೇನನೆಸಗೆ ಪೇಳ್
ನಿಶ್ಶಂಕಿ ನೀಂ ?” “ಮೈಬಲ್ಮೆ ಬಿಲ್ಜಾಣ್ಮೆಗಳ್ ಮೆರೆಯೆ
ವಾಲಿಯಂ ಮೀರ್ದಂತೆ ತೋರ್ !” “ತೋರ್ಪೆನೇಳಂಜದಿರ್ !”
ಪರಿಪಡುವವೋಲ್ ನುಡಿದು, ಕೋದಂಡಮಂ ಪಿಡಿದು
ಮೇಲೆಳ್ದನಾ ಮಿತ್ರವತ್ಸಲಂ. ತಾಮೊಡನೊಡನೆ
ಮೇಲೆಳ್ದರಿತರರುಂ. ಮಲೆಯನಿಳಿದರ್ ಕುರಿತು
ಪಂಪಾ ಸರಸ್ತೀರ ತಾಲವನಮಂ. ನಡೆಯೆ,
ದಾರಿಯೆಡೆ ನಿರ್ಮಾಂಸದಸ್ಥಿಪಂಜರಮಾಗಿ               360
ಕೆಡೆದಿರ್ದುದಚಲೋಪಮಂ ದುಂದುಭಿಯ ಶವಂ.
ಕಂಕಾಲ ಭೀಕರಮದಂ ಕಂಡು ಸೌಮಿತ್ರಿ :
“ನೀಂ ಪೇಳ್ದುದಿದೆ ಕಣಾ ನಿನ್ನಗ್ರಜಂ ಕೊಂದು
ಬಿಸುಟ ದುಂದುಭಿ ? ರಾಮಚಂದ್ರಂಗೆ ಕಿರಿಯನೆಂ !”
ತನ್ನಣ್ಣನಾರ್ಪನಾಶಂಕಿಸಿದ ವಾನರನ
ಕೀಳ್ಮೆಗವಹೇಳನಂ ಮಾಳ್ಪವೋಲ್, ಲಕ್ಷ್ಮಣಂ
ಕೊಂಕುನುಡಿಯಿಂದಿರಿದು ಕಿರುನಗುತ್ತಶ್ರಮದಿ
ಬಿಲ್ಲ ಕೊಪ್ಪಿಂ ಚಿಮ್ಮಿದನ್ ಕಳೇಬರ ಗಿರಿಯ
ಭಾರಮಂ. ಸದ್ದೊಡನೆ ಧೂಳಿ ಗಾಳಿಗಳೇಳೆ
ಕವಣೆಗಲ್ಲೆಸೆದಂತೆ ರೊಂಯ್ಯನೆದ್ದಾ ಪೆಣಂ               370
ತೂಂತಿಟ್ಟುದು ಮುಗಿಲ್ಗೆ ; ಮತ್ತೆ ತಿರ್ರನೆ ತಿರುಗಿ
ಪತ್ತು ಯೋಜನದಾಚೆ ಬಿಳ್ದತ್ತು ! ಕಂಡದಂ
ವಾನರರ್ಗಚ್ಚರಿಯುಮಾನಂದಮಾದೊಡಂ
ಮೃದುಹಾಸ್ಯಕೆಂಬಂತೆ ಸೂರ್ಯಸೂನು : “ತಿಳಿಯಯ್ಯ :
ಮಾಂಸಲಂ ರಕ್ತಾರ್ದ್ರಮಾಗಿರ್ದುದಾ ಶವಂ
ವಾಲಿ ಬಿಸುಟಂದು !” ನಗುತಿರೆ ರಾಮನೊಡಗೂಡಿ
ನಳ ನೀಲ ಜಾಂಬವರ್, ಹನುಮನೆಂದನ್ ಹಸನ್
ಮುಖಿ : “ಸುಮಿತ್ರಾತ್ಮಜನೆ, ನಮ್ಮ ವಾನರಬಲಕೆ
ಹೆಣದ ಹೊರೆ ಹಿರಿದಲ್ತು ! ನೀಂ ಗೈದ ಕಜ್ಜಮಂ
ಕಿರುಳರೆಸಗುವರೆಮ್ಮ ಸೇನೆಯಲಿ !” ನೆರೆನಾಣ್ವಿ       380
ನಸುಮುನಿದು ಕೆಂಪೇರ್ದ ತಮ್ಮನಂ ಮೊಗಂನೋಡಿ
ರಾಘವಂ : “ಸೋದರನೆ, ಕಪಿಗಳಿವರಸಾಮಾನ್ಯರ್,
ಇವರ ಕೆಳೆಯಿಂದೊಳ್ಪು ಕಯ್ಗೂಡಿದಪುದೆಮಗೆ.
ಬಿನದದಿಂ ಕಾಣ್ ಇವರ ಸರಳ ಸೌಜನ್ಯಮಂ.”
ಹಂಪೆಯ ಸರೋವರಂ ಪೆಂಪಿನೋಕುಳಿಯಾಗೆ
ಕೆಂಪೆರಚಿದುದು ಸಂಜೆ. ನಿಂದುದಪ್ರತಿಹತಂ
ತೀರರುಹ ದೈತ್ಯಗಾತ್ರದ ತಾಳತರುಪಂಕ್ತಿ.
ಬೈಗುವಿಸಿಲಾನ್ತದರ ನೆತ್ತಿಯ ನೆಳಲ ನೀಳ್ದು
ಜಂಗಮತೆವೆತ್ತಿರ್ದುದಯಗಿರಿ ಯಾತ್ರಿ : ಹಾ
ಭಂಗವಾದುದೆ ಯಾತ್ರೆ ? ಕಳ್ತರಿಸಿದಂತೆವೋಲ್        390
ಒರ್ಮೊದಲ್ ಕುನಿದುದು ತರುಚ್ಛಾಯೆ ! ಮರಮುಡಿಯ
ಗೂಡು ಗೊತ್ತುಗಳಿಂದೆ ಪಾರ್ದಾರ್ದ ಪಕ್ಕಿಗುಂಪಂ
ಕೇಳೊರೆವುದಾ ನಡೆದುದಂ : ಕಾರ್ಮುಕಪ್ರಳಯದೊಲ್
ಜ್ಯಾಜಿಹ್ವೆಯಿಂದುಜ್ಜ್ವಲಂ ಪೊಣ್ಮಿದುದೆ ತಡಂ, ಕೇಳ್,
ರಾಮನೆಚ್ಚಂಬು ತಾಂ, ದೆಸೆದೆಸೆ ನಡುಗೆ, ಪಡಿಗುಡುಗೆ
ಬೆಟ್ಟ ದರಿ ಕಾಡುಗಳ್, ತಲ್ಲಣಿಸಿ ಕಿಷ್ಕಿಂಧೆಯುಂ,
ಪಗಲುಳ್ಕೆವೋಲ್ ಮಿಳ್ತುಬೇಗದಿಂ ಪರಿತಂದು
ತುಂಡಿಸಿತು ಒಂದೆರಡು ಮೂರು ನಾಲ್ಕೈದಾರು
ಏಳಿಣಿಕೆಯಿಂ ಸಾಲುಗೊಂಡಿರ್ದ ತಾಳತರು
ಷಂಡಮಂ, ಕರಡಮಂ ಕುಡುಗೋಲ್ ಸವರುವಂತೆ !   400
ಮುಂಡಗಳುಡಿಯೆ ಪರ್ಣಚಂಡಿಕೆವೆರಸಿ ಕೆಡೆದವಂ
ತಾಳತರು ಸಪ್ತರುಂಡಂಗಳಂ ಕಂಡು ಕಪಿಕುಲ
ಪುಂಗವಂ ನಾಣ್ವೆರೆದ ಮೆಚ್ಚಿಂ ಮುದಂಗೊಂಡು :
“ನಿನ್ನುರ್ಕನ್ ಆಶಂಕಿಸಿದೆನಲ್ಪಬುದ್ಧಿಯೆಂ ;
ಮನ್ನಿಸಯ್, ಹೇ ಸೂರ್ಯತೇಜಸ್ವಿ.” ಎನುತೆ ಕಯ್
ಮುಗಿದೆರಗಿದನ್ ಕೊರಳ ಸರಮಿಳೆಗೆಳಲ್ವವೋಲ್.
ಮಲೆಮುಡಿಯ ಮರೆಗೊಂಡು ಮುಳುಗಿದುದು ಪೊಳ್ತು, ಮೇಣ್
ಬಾನ್‌ತಲೆಗೆ ಮಲರಿದುವರಿಲ್. ಹಾಡುವಕ್ಕಿಯ ಕೊರಲ್
ನಿದ್ದೆಗೈದುದು ತಿಪ್ಪುಳಿರ್ಕ್ಕೆಯೊಳ್. ಬಂಡೆಯೆಡೆ,
ಮರಗಳೆಡೆ, ಪಳುವಿನೆಡೆ, ಮೆಳೆಗಳೆಡೆ, ಗವಿಗಳೆಡೆ      410
ಹನುಮ ಜಾಂಬವ ನೀಲ ನಳ ರಾಮ ಸುಗ್ರೀವ
ಲಕ್ಷ್ಮಣರ ಮಂತ್ರಣ ರಹಸ್ಯವನುಸಿರ್ವವೋಲ್
ಮೆಲ್ಲಮೆಲ್ಲನೆ ಸುಯ್ದು ಹೊಂಚಿ ತೀಡಿತ್ತೆರಲ್,
ವೈರಿ ವಾಲಿಯ ಬೇಹುವೋಲಂತೆ. ನಿಂದುದಯ್
ವಿಶ್ವಧರ್ಮ ಸಹಸ್ರಾಕ್ಷ ಸಾಕ್ಷಿಯೆಂಬಂತೆವೋಲ್
ನಾಕ ಚುಂಬಿತ ಋಶ್ಯಮೂಕದ ಮೂಕರಾತ್ರಿ !

ಕಾಮೆಂಟ್‌ಗಳಿಲ್ಲ: