ಯಮನ ಸೋಲು - ದೃಶ್ಯ ೫

ದೃಶ್ಯ ೫

(ಅರಣ್ಯ. ಸತ್ಯವಾನನು ಸಾವಿತ್ರಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದಾನೆ; ಯಮನು ಮುಂದೆ ನಿಂತಿದ್ದಾನೆ.)
ಸಾವಿತ್ರಿ
ಭೀಕರದ ಆಕೃತಿಯೆ, ನೀನಾರು? ಯಾರು?
ಏತಕಾಗಿಲ್ಲಿಗೈತಂದಿರುವೆ? ಬೇಗ ನುಡಿ!
ತಡವಾದರೆನ್ನ ಶಾಪದ ಬೆಂಕಿ ದಹಿಸುವುದು
ನಿನ್ನ.
ಯಮ
(ಗಾಂಭೀರ್ಯದಿಂದ)
ಎಲೆ ತಾಯೆ, ತಡಮಾಡು, ತಡಮಾಡು!
ಜಗದ ಧರ್ಮಧಿಕಾರಿಯು ನಾನು. ಯಮನೆಂಬರ್
ಎನ್ನ. ನಿನ್ನಿನಿಯ ಸತ್ಯವಾನಾತ್ಮನಂ
ಕೊಂಡೊಯ್ಯಲೆಂದಿಲ್ಲಿಗೈತಂದಿಹೆನು, ದೇವಿ!
ದೂತನನ್ನಟ್ಟಿದ್ದೆ. ನಿನ್ನೋಜೆಯುರಿಯಲ್ಲಿ
ಬೆಂದು, ಪತಿಯ ಜೀವವನೊಯ್ಯಲಾರದಲೆ,
ಓಡಿ ಬಂದೆನಗೊರೆದನಮ್ಮಾ! ಅದಕಾಗಿ ೧೦
ದಿವ್ಯಾತ್ಮನಾದಿವನನೊಯ್ಯೆ ಯಮನಾದ
ಕಣ್ಣಿಟ್ಟು ಒಪ್ಪಿಸೆನಗಾತನನು. ನಿನ್ನ ಬಳಿ
ಬರಲಾರೆ, ತಾಯೆ; ದಯೆಯಿಂದ ದೂರ ಸರಿ!
ಸಾವಿತ್ರಿ
ನಮಿಸುವೆನು ಜಗದ ಧರ್ಮಾಧಿಕಾರಿಯೆ ನಿನಗೆ!
ಯಮದೇವ, ನನ್ನ ಮೇಲಿನ ಕರುಣದಿಂದ
ನನ್ನೆರೆಯನನ್ನುಳುಹಲಾರೆಯಾ ನೀನು?
ಯಮ
ಧರ್ಮವರಿತವಳು ನೀನೆಲೆ ತಾಯೆ, ಸಾವಿತ್ರಿ.
ವಿಶ್ವ ಧರ್ಮಕೆ ಎರಡು ನಾಲಗೆಗಳಿಲ್ಲ.
ವಿಶ್ವನಿಯಮಚ್ಯುತಿಯೆ ವಿಶ್ವನಾಶಕೆ ಹೇತು! ೨೦
ದೂರ ಸರಿ, ಬಿಡು ತಾಯೆ. ವಿನಯದಿಂದೊರೆಯುವೆನು!
ಸಾವಿತ್ರಿ
ಹೇ ಧರ್ಮ, ಹದಿಬದೆಯತನ, ನನ್ನಿ, ನಿಷ್ಕಾಮ
ಪ್ರೇಮ, ಪರಮೇಶಭಕ್ತಿ ಇವುಗಳಿಗಾಗಿ —
ಯಾದರೂ ಋತವು ಹೊರತನು ಒಪ್ಪಲಾರದೆ?
ಯಮ
ಇಲ್ಲ, ದೇವಿಯೆ, ಇಲ್ಲ. ಸರ್ವವೂ ವಿಶ್ವ
ಧರ್ಮದ, ಋತದ ಅಂಗಾಂಗಗಳು, ತಾಯೆ, ಧರ್ಮ —
ಬದ್ಧವಾಗಿಹುದೀ ಮಹಾವಿಶ್ವ. ಧರ್ಮಾಧಿ
ಕಾರಿಯಾದೀ ನಾನು ಕೂಡ ತರಗೆಲೆಯ
ಋತನಿಯಮದೆದುರು! ತಾಯೆ, ಮೃತ್ಯುವನು
ಜಯಸಿದವರುಂಟೆ? ಶ್ರೀರಾಮನಳಿಯನೇ? ೩೦
ಶ್ರೀಕೃಷ್ಣನಳಿಯನೇ? ಋಷಿ ವ್ಯಾಸ ವಾಲ್ಮೀಕಿ
ಮೊದಲಾದರೆಲ್ಲರೂ ಮರುಮಾತನಾಡದಲೆ
ನನ್ನೊಡನೆ ಬಂದಿಹರು. ಹಿಂದೆ ನಚಿಕೇತನೂ
ನನ್ನೊಡನೆ ವಾದಿಸಿದ. ಹುಟ್ಟಿದವರೆಲ್ಲರಿಗು
ಮರಣ ಉಂಟೇ ಉಂಟು. ಜನನ ಮರಣವನೆಳೆದು
ಕೊಂಡೇ ಬರುವುದೆಲೆ ತಾಯೆ, ಸಾವಿತ್ರಿ.
ನಿನ್ನ ಬಳಿ ಬರಲಾರೆ, ದೂರ ಸರಿ, ದೇವಿ.
ವಿನಯದಿಂದೊರೆಯುವೆನು, ಬೇಡುವೆನು!
ಸಾವಿತ್ರಿ
ಯಮದೇವ,
ನೀನಂತು ಧರ್ಮವಂ ಮೀರಲಾರೆಯದು ದಿಟ!
ಪತಿಯ ಕೂಡೆನ್ನನೂ ಕೊಂಡೊಯ್ಯಲಾರೆಯಾ?
ಪತಿಯಳಿದ ಮೇಲೆ ಸತಿಗೆ ಜೀವವೆ ಸಾವು!
ಹರ್ಷದಿಂದೈತರುವೆ ಪತಿಯೊಡನೆ. ಯಮದೇವ,
ಅದೊಂದು ವರವನು ನೀಡು!
ಯಮ
ಇಲ್ಲ; ಆಗುವುದಿಲ್ಲ!
ಕಡೆಯ ಕಾಲವು ಬರದ ನರರ ಬಳಿ ನಾ ಸುಳಿಯೆ.
ಆಯುವಿದ್ದವರನ್ನು ಕೊಂಡೊಯ್ವುದೂ, ದೇವಿ,
ಧರ್ಮಕೆ ವಿರುದ್ಧ. ಚರಮದಿನ ಬಂದೊದಗ
ದೊಂದು ಕೀಟವ ನಾನು ಕೊಂಡೊಯ್ಯಲಾರೆ.
ಸಾವಿತ್ರಿ
ಹೇ ಧರ್ಮ, ನಿನ್ನ ತರ್ಕಕೆ ಸೋತೆ. ಆದರೂ.
ಯಮದೇವ, ಬ್ರಹ್ಮಾಂಡವೆಲ್ಲವೂ ತರ್ಕಾತ್ಮ —
ವಾದುದೇ? ಚೈತನ್ಯಮಯನಾದ ಪರಮೇಶ —
ನೀ ಬರಿಯ ಯಂತ್ರಲೋಕದ ಸೃಜಿಸಿ ಸಂತೃಪ್ತಿ
ಹೊಂದುವನೆ? ನಿನ್ನ ಬುದ್ಧಿಗೆ ಮೀರಿ, ನನಗೆ
ತೋರದಿಹ, ತರ್ಕ ವಾದ ವಿವಾದಗಳಿಗೆಲ್ಲ
ಮೀರಿರುವ ಧರ್ಮವೊಂದಿರಬೇಕು, ಯಮರಾಯ,
ನಿಯಮವೊಂದಿರಬೇಕು!
ಯಮ
ಇರಬಹುದು, ದೇವಿ,
ಇರಬಹುದು. ಆದರೆನ್ನೀ ಕಾರ್ಯ ರೇಫ
ರಾಜ್ಯದ ಕಾರ್ಯವಲ್ಲ. ‘ಬಹುದು’ ರಾಜ್ಯದ ಕಾರ್ಯ —
ವಲ್ಲ. ಕರ್ಮ ರಾಜ್ಯದ ಕಾರ್ಯ. ಸಾವಿತ್ರಿ,
ವಿನಯದಿಂದೊರೆಯುವೆನು; ದೂರ ಸರಿ ತಾಯೆ!
ಸಾವಿತ್ರಿ
ಧರ್ಮಕೊಲವನು ಶರಣು ಮಾಡುವೆನು, ಯಮದೇವ. ೬೦
ಆದರಿನ್ನೊಂದ ನಾ ಕೇಳುವೆನು. ಧರ್ಮವೊಲವಿಗೆ ಶರಣು
ಎಂದು ನೀನರಿತಾಗ ನನ್ನಿನಿಯನನ್ನೆನಗೆ
ಹಿಂದಕೊಪ್ಪಿಸಬೇಕು. ನಿನ್ನಾಜ್ಞೆಯಂತಿಗೋ
ನಿಲ್ಲುವೆನು ದೂರ ಸರುದು.
(ಸಾವಿತ್ರಿ ದೂರ ಹೋಗಿ ನಿಲ್ಲುತ್ತಾಳೆ. ಯಮನು ಹೋಗಿ ಸತ್ಯವಾನನ ಜೀವವನ್ನು ಪಾಶದಿಂದ ಬಿಗಿದು ಕಟ್ಟಿ ಹೊರಡುತ್ತಾನೆ.)
ಯಮ
ಮಹಾತ್ಮಳೌ,
ಸಾವಿತ್ರಿ, ನೀನು. ನಿನ್ನಂತೆ ಮೃತ್ಯುವನು
ಕ್ಷಣಕಾಲವಾದರೂ ತಡೆಗಟ್ಟಿ ನಿಲ್ಲಿಸಿದ
ಧೀರಾತ್ಮರರೂಪ! ಹೋಗಿಬರುವೆನು, ತಾಯೆ,
ನಮಿಸುವೆನು ನಿನಗೆ!
(ಹೋಗುತ್ತಾನೆ.)
ಸಾವಿತ್ರಿ
(ದುಃಖಾತಿಶಯದಿಂದ)
ಮರುಳಾದೆನಲ್ಲಾ!
ಮೃತ್ಯುವಶಮಾಡಿದೆನೆ ನಾನೊಲಿದ ನನ್ನದೆಯ?
ಧರ್ಮಾಧಿಕಾರಿಯನು ಹಿಂಬಾಲಿಸುವೆನೀಗ. ೭೦
ಪ್ರೇಮಾನುರಾಗವು ಧರ್ಮವನು ಮೀರಿರುವು —
ದೆಂಬುದನು ಸಾಧಿಸುವೆ. ಎದೆಯೊಲವು ಋತನಿಯಮ —
ಕತೀತವೆಂಬುದನು ತೋರಿಸುವೆ; ಸಾಧಿಸುವೆ!
ಸರ್ವ ಧರ್ಮವ ಮೀರಿದೊಂದು ಧರ್ಮವದುಂಟು
ಎಂಬುದನು ಜಗಕಿಂದು ತೋರಿಸುವೆ, ಎಲೆ ಋತವೆ,
ಪ್ರೇಮದುರ್ಗದ ಮೇಲೆ ಗೆಲವಿಂದ ಹಾರುತಿಹ
ನಿನ್ನಾ ಕೇತನವ ಹೆಂಗಿಪಳು ಸಾವಿತ್ರಿ
ಇಂದು. ನಾನೆಂದು ವೀರ ಕ್ಷತ್ರಿಯ ಪುತ್ರಿ!
(ತೆರಳುತ್ತಾಳೆ.)

ಕಾಮೆಂಟ್‌ಗಳಿಲ್ಲ: