ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಒಂದು ಸಲ ಶ್ರೀರಾಮ ಮತ್ತು ಸೀತಾಮಾತೆಯನ್ನು ಭೇಟಿಯಾಗಲು ಹನುಮಂತನು ಬರುತ್ತಾನೆ ಮತ್ತು ಅವರಿಗೆ ಮನಸಾರೆ ನಮಸ್ಕಾರವನ್ನು ಮಾಡುತ್ತಾರೆ. ಆಗ ಸೀತಾದೇವಿಗೆ ಅನಿಸುತ್ತದೆ, ಹನುಮಂತನು ನನ್ನ ಸ್ವಾಮಿಯ ಭಕ್ತನಿದ್ದಾನೆ. ಅವನು ಯಾವಾಗಲೂ ಸೇವೆ ಮಾಡುತ್ತಿರುತ್ತಾನೆ, ಅವನಿಗೆ ಏನಾದರೂ ನೀಡಬೇಕು. ಹೀಗೆ ಅನಿಸಿದ ತಕ್ಷಣ ಸೀತಾದೇವಿಯು ತನ್ನ ಕೊರಳಿನಲ್ಲಿರುವ ಮುತ್ತಿನ ಹಾರವನ್ನು ಹನುಮಂತನಿಗೆ ನೀಡುತ್ತಾಳೆ ಮತ್ತು ನಾನು ಪ್ರಸನ್ನಳಾಗಿದ್ದೇನೆ ಎಂದು ಹೇಳುತ್ತಾಳೆ. ಮಾಲೆಯನ್ನು ಪಡೆದ ಹನುಮಂತನು ಮುಂದೆ ಹೋಗಿ ಕೂತು ಪ್ರತಿಯೊಂದು ಮಣಿಯನ್ನು ದಾರದಿಂದ ತೆಗೆದು ನೋಡಿ ನೋಡಿ ಒಡೆಯುತ್ತಾನೆ. ಈ ರೀತಿ ಎಲ್ಲಾ ಮಣಿಗಳನ್ನು ಒಡೆದು ಹಾಕುತ್ತಾನೆ. ಇದನ್ನು ನೋಡಿದ ಸೀತಾದೇವಿಯು ಸಿಟ್ಟಿನಿಂದ ಕೇಳಿದಳು, "ನಾನು ಪ್ರೀತಿಯಿಂದ ನೀಡಿದ ಹಾರವನ್ನು ಯಾಕೆ ಹೀಗೆ ಮಾಡಿದೆ?"
ಹನುಮಂತನು ಹೇಳಿದನು, "ಈ ಮಾಲೆಯ ಯಾವ ಮಣಿಯಲ್ಲಿ ನನಗೆ ರಾಮನು ಕಾಣುತ್ತಾನೆಂದು ನೋಡುತ್ತಿದ್ದೆ. ಯಾವ ಮಣಿಯಲ್ಲಿ ರಾಮನು ಕಾಣಲಿಲ್ಲವೊ ಅದನ್ನು ನಾನು ಒಡೆದುಹಾಕಿದೆ". ಇದನ್ನು ಕೇಳಿದ ಸೀತಾಮಾತೆಗೆ ತಿಳಿಯಿತು, ಹಾರವನ್ನು ನಾನು ಕೊಡುತ್ತಿದ್ದೇನೆಂಬ ಭಾವದಲ್ಲಿ ಅವಳು ಹಾರವನ್ನು ನೀಡುವಾಗ ರಾಮನ ಸ್ಮರಣೆ ಮಾಡಿರಲಿಲ್ಲ. ಎಲ್ಲವನ್ನೂ ಶ್ರೀರಾಮನೇ ಮಾಡುವುದು.
ಸೀತಾದೇವಿಯು ಹನುಮಂತನ ಕ್ಷಮೆ ಕೇಳುತ್ತಾಳೆ ಮತ್ತು ಶ್ರೀರಾಮನ ಸ್ಮರಣೆ ಮಾಡುತ್ತಾ ಮತ್ತೊಂದು ಹಾರವನ್ನು ನೀಡುತ್ತಾಳೆ. ಅದನ್ನು ತಕ್ಷಣ ಹನುಮಂತನು ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಮಕ್ಕಳೇ, ಯಾವುದು ದೇವರ ಸ್ಮರಣೆ ಮಾಡಿಕೊಡುತ್ತದೆಯೊ ಅದು ಹನುಮಂತನಿಗೆ ಪ್ರಿಯವಾಗುತ್ತದೆ.
*****************ಕೃಪೆ: ಆಸೆ ಬ್ಲಾಗ್*****************