ದುಷ್ಟ ವಾಲಿಯ ವಧೆ

ದುಷ್ಟ ವಾಲಿಯ ವಧೆ
      ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು. ನಾವು ಎಲ್ಲೆಡೆ ಶ್ರೀರಾಮನನ್ನು ಆದರ್ಶ ರಾಜನೆಂದು ಉಲ್ಲೇಖಿಸುತ್ತೇವೆ. ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಹೇಗೆ ದೊರಕಿಸಿಕೊಟ್ಟನು, ಎಂಬುದನ್ನು ರಾಮಾಯಣದ ಘಟನೆಯಿಂದ ನಾವು ನೋಡೋಣ.

ಅಣ್ಣ ತಮ್ಮಂದಿರಾದ ವಾಲಿ ಮತ್ತು ಸುಗ್ರೀವರು ಕಿಶ್ಕಿಂದಾ ನಗರದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಪರಸ್ಪರರ ಬಗ್ಗೆ ಬಹಳ ಪ್ರೇಮವಿತ್ತು. ಅವರಿಬ್ಬರಲ್ಲಿ ವಾಲಿಯು ಹಿರಿಯವನಾಗಿದ್ದರಿಂದ ಅವನು ಆ ನಗರದ ರಾಜನಾಗಿದ್ದನು. ಒಮ್ಮೆ ಆ ನಗರಕ್ಕೆ ಮಾಯಾವಿ ಎಂಬ ಓರ್ವ ಬಲಾಢ್ಯ ರಾಕ್ಷಸ ಬಂದನು. ವಾಲಿ ಹಾಗೂ ಆ ರಾಕ್ಷಸನ ನಡುವೆ ಭಯಂಕರ ಯುದ್ಧವಾಯಿತು. ಇಬ್ಬರೂ ಸಮಬಲದ ಪರಾಕ್ರಮಿಗಳಾಗಿದ್ದರು. ಯುದ್ಧ ಮಾಡುತ್ತ ಇಬ್ಬರೂ ಒಂದು ಗುಹೆಯನ್ನು ಪ್ರವೇಶಿಸಿದರು. ಗುಹೆಯ ದ್ವಾರದಲ್ಲಿ ನಿಂತಿದ್ದ ಸುಗ್ರೀವನಿಗೆ ಒಳಗಿನಿಂದ ಕೇಳೀಬರುವ ಶಬ್ಧದಿಂದ ಗುಹೆಯಲ್ಲಿ ಮಹಾಭಯಂಕರ ಯುದ್ಧ ನಡೆಯುತ್ತಿರುವುದರ ಅರಿವಾಯಿತು. ಒಮ್ಮೆಲೆ, ಗುಹೆಯಿಂದ ಒಂದು ದೊಡ್ಡ ಧ್ವನಿಸಹಿತ ರಕ್ತವು ಪ್ರವಾಹದಂತೆ ಹರಿದು ಬರುತ್ತಿರುವುದು ಕಾಣಿಸಿತು. ಅದನ್ನು ನೋಡಿ ಸುಗ್ರೀವನಿಗೆ ’ತನ್ನ ಅಣ್ಣನಿಗೆ ವೀರಗತಿ ಪ್ರಾಪ್ತಿಯಾಗಿದೆ’ ಎಂದು ಅನಿಸಿತು. ಮಾಯಾವಿ ರಾಕ್ಷಸನು ಗುಹೆಯಿಂದ ಹೊರಬಂದು ತನ್ನನ್ನು ಕೊಲ್ಲಬಹುದು, ಎಂಬ ಭಯದಿಂದ ಸುಗ್ರೀವನು ಒಂದು ದೊಡ್ಡ ಬಂಡೆಗಲ್ಲಿನಿಂದ ಗುಹೆಯ ದ್ವಾರವನ್ನು ಮುಚ್ಚಿಟ್ಟು ನಗರಕ್ಕೆ ಮರಳಿದನು. ಸುಗ್ರೀವನಿಗೆ ತನ್ನ ಅಣ್ಣನು ತನಗೆ ಬಿಟ್ಟು ಹೋದನೆಂಬ ದುಃಖವಿತ್ತು; ಆದರೆ ಜನತೆಯ ಆಗ್ರಹದಿಂದ ಹಾಗೂ ವಾಲಿಯ ಮಗನು ವಯಸ್ಸಿನಲ್ಲಿ ಚಿಕ್ಕವನಿರುವುದರಿಂದ ಕೊನೆಗೆ ಸುಗ್ರೀವನು ರಾಜ್ಯಾಭಿಷೇಕ ಮಾಡಿಸಿಕೊಂಡನು.

ಕೆಲ ದಿನಗಳ ನಂತರ ವಾಲಿಯು ಮರಳಿ ಬಂದನು. ಆಗ ಅವನು ’ರಾಜ್ಯದ ಆಸೆಯಿಂದ ಸುಗ್ರೀವನು ತನಗೆ ಮೋಸ ಮಾಡಿದನು’ ಎಂದು ತಪ್ಪಾಗಿ ತಿಳಿದು ಬಹಳ ಕೋಪಗೊಂಡನು. ಸಿಟ್ಟಿನ ಭರದಲ್ಲಿ ಅವನು ತನ್ನ ಪ್ರಿಯ ತಮ್ಮನನ್ನು ರಾಜ್ಯದಿಂದ ಹೊರಹಾಕಿ ಅವನ ಪತ್ನಿಯನ್ನು ಬಂಧಿಸಿದನು. ತನ್ನ ಬಲಾಢ್ಯ ಅಣ್ಣನ ಕೋಪಕ್ಕೆ ಹೆದರಿ ಸುಗ್ರೀವನು ಓಡಿ ಹೋದನು ಹಾಗೂ ಋಷ್ಯಮೂಕ ಪರ್ವತದಲ್ಲಿ ಸುರಕ್ಷಿತವಾಗಿ ಇದ್ದನು. ಮಾತಂಗ ಋಷಿಯ ಶಾಪದಿಂದ ವಾಲಿಯು ಅಲ್ಲಿಗೆ ಬರುವಂತೆ ಇರಲಿಲ್ಲ.

ಕೆಲ ಸಮಯದ ನಂತರ ರಾಮ-ಲಕ್ಷ್ಮಣರಿಬ್ಬರೂ ಸೀತೆಯನ್ನು ಹುಡುಕುತ್ತ ಆ ಪರ್ವತದ ಬಳಿ ಹೋಗುತ್ತಿದ್ದರು. ಇದನ್ನು ನೋಡಿ ಹನುಮಂತನು ಸುಗ್ರೀವನಿಗೆ ಈ ಬಗ್ಗೆ ತಿಳಿಸಿದನು. ತಕ್ಷಣ ಸುಗ್ರೀವನು ರಾಮನ ಬಳಿ ಹೋಗಿ ಅವನ ಕಾಲು ಹಿಡಿದು ತನಗಾದ ಅನ್ಯಾಯದ ಬಗ್ಗೆ ಹೇಳಿದನು. ರಾಮನು ಎಲ್ಲವನ್ನೂ ಶಾಂತವಾಗಿ ಕೇಳಿಕೊಂಡು, ’ಮಾತೆಯ ಸಮಾನಳಿರುವ ತನ್ನ ಅತ್ತಿಗೆಯನ್ನು ಬಂಧಿಸಿರುವುದರಿಂದ ವಾಲಿಯು ಮೃತ್ಯುವಿಗೆ ಪಾತ್ರನಾಗಿದ್ದಾನೆ. ನಾನು ವಾಲಿಯನ್ನು ವಧಿಸಿ ನಿನ್ನ ಪತ್ನಿ ಹಾಗೂ ನಿನ್ನ ರಾಜ್ಯವನ್ನು ನಿನಗೆ ದೊರಕಿಸಿ ಕೊಡುವೆನು’ ಎಂದು ಹೇಳಿದನು.

ನಿಶ್ಚಯಿಸಿದಂತೆ ಸುಗ್ರೀವನು ರಾಮ ಮತ್ತು ಲಕ್ಷ್ಮಣರೊಂದಿಗೆ ಕಿಶ್ಕಿಂದೆಗೆ ಹೋದನು ಹಾಗೂ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದನು. ಮೊದಲೇ ಕೋಪಗೊಂಡಿದ್ದ ವಾಲಿ ಸುಗ್ರೀವನನ್ನು ಕಂಡ ಕೂಡಲೆ ಅತ್ಯಂತ ಕೋಪದಿಂದ ಅವನ ಎದುರಿಗೆ ನಿಂತನು. ಇಬ್ಬರಲ್ಲಿ ಯುದ್ಧ ಪ್ರಾರಂಭವಾಯಿತು. ಇಲ್ಲಿ ಗಿಡದ ಮರೆಯಲ್ಲಿ ನಿಂತ ರಾಮ ಲಕ್ಷ್ಮಣರು ದಿಗ್ಭ್ರಾಂತರಾದರು; ಏಕೆಂದರೆ ವಾಲಿ ಹಾಗೂ ಸುಗ್ರೀವರಲ್ಲಿ ಇಷ್ಟೊಂದು ಸಾಮ್ಯವಿತ್ತೆಂದರೆ ಅವರಿಬ್ಬರನ್ನೂ ಗುರುತಿಸುವುದು ಕಠಿಣವಾಗಿತ್ತು. ನಂತರ ರಾಮನು ಗುರುತಿಗಾಗಿ ಸುಗ್ರೀವನಿಗೆ ಕೊರಳಿಗೆ ಹಾಕಲು ಒಂದು ಹೂವಿನ ಹಾರವನ್ನು ಕೊಟ್ಟನು. ಸುಗ್ರೀವನು ತನ್ನ ಸಹಾಯಕ್ಕೆ ರಾಮನಿರುವುದರಿಂದ ಆ ಹಾರವನ್ನು ಕೊರಳಲ್ಲಿ ಹಾಕಿಕೊಂಡು ಅತ್ಯಂತ ಆತ್ಮವಿಶ್ವಾಸದಿಂದ ಯುದ್ಧ ಮಾಡತೊಡಗಿದನು. ಕೆಲ ಸಮಯದ ನಂತರ ಸುಗ್ರೀವನು ಯುದ್ಧದಲ್ಲಿ ಹತಬಲನಾಗುತ್ತಿರುವುದನ್ನು ಕಂಡು ರಾಮನು ತನ್ನ ಬಾಣದಿಂದ ವಾಲಿಯನ್ನು ಹೊಡೆದನು. ಎದೆಯನ್ನು ಸೀಳಿದ ರಾಮನ ಬಾಣದಿಂದ ವಾಲಿಯುಧರೆಗುರುಳಿ ಮರಣ ಹೊಂದಿದನು. ಕೊನೆಯಲ್ಲಿ ಮಾತ್ರ ಅವನು ರಾಮ ಹಾಗೂ ಸುಗ್ರೀವರ ಬಳಿ ಕ್ಷಮೆ ಯಾಚಿಸಿದನು.
  *****************ಕೃಪೆ: ಬಾಲಸಂಸ್ಕಾರ****************

ಕಾಮೆಂಟ್‌ಗಳಿಲ್ಲ: