ಪಂಪಭಾರತ : ಉಪೋದ್ಘಾತ

ಉಪೋದ್ಘಾತ
ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕ್ರಿ.ಶ. ೯-೧೦ನೇ ಶತಮಾನಗಳು ಬಹು ಪ್ರಶಂಸನೀಯವಾದುವುಗಳು. ಈ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯವು ಯಾವುದೋ ಒಂದು ರೀತಿಯಲ್ಲಿದ್ದಿರಬೇಕು. ರಾಜ್ಯದ ಆಡಳಿತಗಳ ಸಂಘಟ್ಟದಿಂದಲೂ ಸಾಮಾಜಿಕ ಜೀವನದ ಚಳುವಳಿಗಳಿಂದಲೂ ಸಾಹಿತ್ಯದಲ್ಲಿ ಕ್ರಮೇಣ ಬದಲಾವಣೆಗಳು ತೋರಿ ಬರತೊಡಗಿದವು. ಒಂದು ಕಾಲವು ಇನ್ನೊಂದು ಕಾಲವಾಗಿ ಪರಿವರ್ತನೆಯಾಗುವಾಗ ಇವೆರಡು ಕಾಲಗಳ ಸಂಘಟನೆಗಳಿಂದಲೂ ಪರಸ್ಪರ ಸಮಾಗಮಗಳಿಂದಲೂ ಸಮಾಜದಲ್ಲಿ ಅನೇಕ ಹೊಸವಿಚಾರಗಳು ತಲೆದೋರಿ ತತಲವಾಗಿ ಕೃತಿಗಳು ಹೊರಬಿದ್ದು ವ್ಯವಹಾರದಲ್ಲಿ ಬರುವುವು. ಆದರೆ ಈ ಎರಡು ಕಾಲಗಳ ಸಂ ಸಮಯದಲ್ಲಿ ಸಿಕ್ಕಿಕೊಂಡಿರುವ ಕಾಲದ ಪರಿಸ್ಥಿತಿಯು ಬಹುವಿಲಕ್ಷಣವಾಗಿರುವುದು. ಜನಾಂಗವು ಪೂರ್ವಕಾಲದ ನಡವಳಿಕೆಗಳನ್ನು ಒಂದೇ ಸಲ ಬಿಟ್ಟು ಬಿಡುವುದಿಲ್ಲ. ಇದಕ್ಕೆ ಹೆಚ್ಚು ಕಾಲ ಬೇಕಾಗುತ್ತದೆ. ಈ ಮಧ್ಯೆ ಪೂರ್ವದ ನಡತೆಗಳನ್ನು ಬಿಡದಂತೆಯೂ ಹೊಸ ಚಳುವಳಿಗಳನ್ನು ಸಂಪೂರ್ಣವಾಗಿ ನಿರಾಕರಿಸದಂತೆಯೂ ಹಾಗೂ ಹೀಗೂ ಇರತಕ್ಕದ್ದು ಸ್ವಭಾವ. ಕ್ರಮೇಣ ಹಳೆಯ ಚಾಳಿಗಳೆಲ್ಲ ಮಾಯವಾಗಿ ನವೀನ ಪದ್ಧತಿಗಳು ಸಮಾಜದಲ್ಲಿ ಊರಿಕೊಳ್ಳುವುವು. ಆಮೇಲೆ ಅವುಗಳಿಗೆ ಪೂರ್ಣ ಆಶ್ರಯವು ದೊರೆತು ಅವುಗಳು ಸರ್ವತೋಮುಖವಾಗಿ ಬೆಳೆದು ತತ್ಕಾಲದ ಪ್ರಚಲಿತ ಪದ್ಧತಿಗಳಾಗಿ ಪರಿಣಮಿಸುವುವು. ಕರ್ನಾಟಕದ ಹತ್ತನೆಯ ಶತಮಾನದ ಸ್ಥಿತಿಯೂ ಹೀಗೆಯೇ. ೯-೧೦ನೆಯ ಶತಮಾನಗಳ ಹಿಂದೆ ಕರ್ನಾಟಕ ಸಾಹಿತ್ಯವು ಹೇಗಿತ್ತೆಂಬುದನ್ನು ಖಚಿತವಾಗಿ ನಿರ್ಧರಿಸಲು ಸಾಕಷ್ಟು ಸಲಕರಣೆಗಳು ಇನ್ನೂ ದೊರೆತಿಲ್ಲ. ಲಬ್ಧವಾದ ಕೆಲವು ಗ್ರಂಥಗಳ ಸಹಾಯದಿಂದಲೂ ಶಾಸನಗಳ ನೆರವಿನಿಂದಲೂ ಹೇಗಿದ್ದಿತೆಂಬುದನ್ನು ಊಹಿಸಲು ಅವಕಾಶವಿದೆ.

ಸುಮಾರು ಕ್ರಿ.ಪೂ. ಎರಡನೆಯ ಶತಮಾನದಲ್ಲಿ ಉತ್ತರ ದೇಶದಲ್ಲಿ ತಲೆದೋರಿದ ವೀರಕ್ಷಾಮದ ನಿಮಿತ್ತ ದಕ್ಷಿಣಕ್ಕೆ ವಲಸೆ ಬಂದ ಭದ್ರಬಾಹುವಿನ ತಂಡದವರು ಅಲ್ಲಿಂದ ಮುಂದಕ್ಕೆ ತಮ್ಮ ದಿಗಂಬರ ಪಂಥವನ್ನು ದಕ್ಷಿಣದಲ್ಲಿ ಬೆಳೆಸಿಕೊಂಡು ಬಂದರು. ಶ್ರವಣ ಬೆಳುಗೊಳವು ಅವರ ಕೇಂದ್ರವಾಯಿತು. ಅಲ್ಲಿಂದ ಅವರು ತಮ್ಮ ಧರ್ಮಪ್ರಸಾರವನ್ನು ಉದಾರವಾಗಿ ಮಾಡತೊಡಗಿದರು. ವೈದಿಕ ಧರ್ಮಕ್ಕೆ ನೇರವಿರೋಧವಾಗಿದ್ದ ಬೌದ್ಧ ಜೈನಧರ್ಮಗಳಲ್ಲಿ ಬೌದ್ಧಮತವು ಜನರ ಮೇಲೆ ವಿಶೇಷ ಪ್ರಭಾವಶಾಲಿಯಾಗದೆ ೮-೯ನೆಯ ಶತಮಾನದ ವೇಳೆಗೆ ನಾಮಾವಶೇಷವಾಗಿರಬೇಕು. ಜೈನರಿಗೆ ಹಿಂದೆ, ಕರ್ನಾಟಕದಲ್ಲಿ ದ್ರಾವಿಡಸಂಸ್ಕೃತಿಯೂ ಒಂದು ಬೌದ್ಧಸಾಹಿತ್ಯವೂ ಇದ್ದಿರಬೇಕು. ಇವೆರಡು ಆ ಕಾಲಕ್ಕೆ ಹಿಂದೆಯೇ ಮಾಯವಾಗಿರಬೇಕು. ಜೈನರಾದರೋ ಬೌದ್ಧರಂತಲ್ಲದೆ ತಮ್ಮ ಮತ ಧರ್ಮಗಳನ್ನು ದೇಶಕಾಲಕ್ಕೆ ಅನ್ವಯಿಸುವಂತೆ ಮಾರ್ಪಡಿಸಿಕೊಂಡು ಅವುಗಳಿಂದ ತಾವೂ ಪ್ರಭಾವಿತರಾಗಿ ದೇಶೀಯರ ಮನಸ್ಸನ್ನು ಆಕರ್ಷಿಸಿದರು. ಜೈನ ಸಂನ್ಯಾಸಿಗಳು ವಿರಕ್ತರೂ ಆಚಾರಶೀಲರೂ ಆಗಿದ್ದುದರಿಂದ ರಾಜ ನಿರ್ಮಾಪಕರಾಗಿ ಅವರ ಆದರ ಪೋಷಣೆಗೂ ಅವರ ಸಾಮಂತರ ಮತ್ತು ಅಕಾರಿಗಳ ಗೌರವಕ್ಕೂ ಪಾತ್ರರಾದರು. ಜೈನರ ಪಂಚಾಣುವ್ರತಗಳೂ, ದಾನಧರ್ಮಗಳೂ, ಪ್ರಜಾಸಮೂಹದ ಆದರ ಗೌರವಗಳಿಗೆ ಪಾತ್ರವಾಗಿ ಅವರ ಜೈನಧರ್ಮವು ಮನರಂಜಕವಾಯಿತು. ವೈದಿಕ ಪಂಥಕ್ಕೆ ಸರಿಹೋಗುವ ಅವರ ಆಚಾರ ವ್ಯವಹಾರಗಳೂ, ಜಾತಿಪದ್ಧತಿಗಳೂ ಕಾಲಾನುಕ್ರಮದಲ್ಲಿ ವೈದಿಕ ಆಕಾರಗಳನ್ನೇ ತಾಳಿದವು. ಜೈನಪಂಡಿತರೂ ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿದ್ದ ತಮ್ಮ ಮತಗ್ರಂಥಗಳನ್ನು ಸಂಸ್ಕ ತ ಮತ್ತು ದೇಶೀಯ ಭಾಷೆಗಳಿಗೆ ಅಳವಡಿಸಿ ಪರಿವರ್ತಿಸಿ ತಮ್ಮ ಶಾಸ್ತ್ರಗ್ರಂಥಗಳನ್ನು ಆಗ ಪ್ರಚಾರದಲ್ಲಿದ್ದ ಇತರ ಶಾಸ್ತ್ರಗ್ರಂಥಗಳ ಮಾದರಿಯಲ್ಲಿ ರಚಿಸಿ ಇತರ ಪಂಡಿತರೊಡನೆ ವಾಕ್ಕಾರ್ಥಮಾಡಿ ಅವರನ್ನು ಜಯಿಸಿ ಅವರಿಂದ ತಾವೂ ಜಯಿಸಲ್ಪಟ್ಟು ತಮ್ಮ ಶಾಸ್ತ್ರಗ್ರಂಥಗಳನ್ನು ಜೀವಂತವಾಗಿ ಬೆಳೆಸಿಕೊಂಡು ಬಂದರು.ಜೈನರು ಕರ್ನಾಟಕದಲ್ಲಿ ಕಾಲೂರಿದ ಮೇಲೆ ಅವರ ಪ್ರಾಬಲ್ಯವು ಕ್ರಮಕ್ರಮವಾಗಿ ಹೆಚ್ಚುತ್ತ ಹೋಗಿ ಕಾಲಕ್ರಮದಲ್ಲಿ ಕರ್ನಾಟಕವು ಅವರ ಒತ್ತಂಬಕ್ಕೆ ಒಳಪಟ್ಟು ತನ್ನ ನಿಜವಾದ ದ್ರಾವಿಡ ಸಂಸ್ಕೃತಿಯನ್ನು ತ್ಯಜಿಸಿರಬೇಕೆಂದು ಹೇಳಬಹುದು. ಮತಾಭಿಮಾನಿಗಳಾದ ಜೈನರು ತಮಗಿಂತ ಹಿಂದೆ ಇದ್ದ ಗ್ರಂಥಗಳನ್ನು ಇಲ್ಲದ ಹಾಗೆ ಮಾಡಿದುದರಿಂದಲೋ ಸರಿಯಾಗಿ ರಕ್ಷಿಸದೇ ಇದ್ದುದರಿಂದಲೋ ಆಗಿನ ಗ್ರಂಥಗಳೆಲ್ಲ ನಾಶವಾಗಿರಬೇಕು. ಆದರೆ ಒಂದು ವಿಷಯವನ್ನುಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರಬೇಕು. ಅದುವರೆಗಿದ್ದ ಗ್ರಂಥಗಳಲ್ಲಿ ಅನಾದರಣೆಯನ್ನು ತೋರಿದರೂ ಜೈನರು ಕನ್ನಡದಲ್ಲಿ ಅನಾದರಣೆಯನ್ನು ತೋರಲಿಲ್ಲ. ಅವರು ಕನ್ನಡ ಭಾಷೆಯನ್ನು ಮೆಚ್ಚಿ ಅದನ್ನು ಚೆನ್ನಾಗಿ ವ್ಯಾಸಂಗ ಮಾಡಿ ಅದರಲ್ಲಿ ಪಾಂಡಿತ್ಯವನ್ನು ಪಡೆದು ತನ್ಮೂಲಕವಾಗಿ ತಮ್ಮ ಮತತತ್ತ್ವಗಳನ್ನು ಜನಸಾಮಾನ್ಯರಿಗೆ ಬೋಸತೊಡಗಿದರು. ಕರ್ನಾಟಕದ ದ್ರಾವಿಡ ಸಂಸ್ಕ ತಿಯ ಸ್ಥಾನದಲ್ಲಿ ತಮ್ಮ ಸಂಸ್ಕೃತಿಯನ್ನು ನೆಲೆಗೊಳಿಸಿದರು. ಮೇಲೆಯೇ ತಿಳಿಸಿರುವಂತೆ ತಮ್ಮ ಗ್ರಂಥಗಳನ್ನು ಸಂಸ್ಕೃತ ಮತ್ತು ದೇಶೀಯ ಭಾಷಾಂತರಿಸಿ ಪಂಡಿತಪಾಮರರಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ಸಮಂತಭದ್ರ ಕವಿಪರಮೇಷ್ಠಿ ಪೂಜ್ಯಪಾದ ಮೊದಲಾದವರು ಸಂಸ್ಕೃತ ಭಾಷೆಯಲ್ಲಿಯೇ ತಮ್ಮ ಗ್ರಂಥಗಳನ್ನು ರಚಿಸಿ ತಮ್ಮ ಪ್ರಭಾವವನ್ನು ನೆಲೆಗೊಳಿಸಿದಂತೆ ಕಾಣುತ್ತದೆ. ಅವರಿಂದ ಮುಂದೆ ಬಂದವರು ಸಂಸ್ಕೃತ ಕನ್ನಡ ಭಾಷೆಗಳೆರಡನ್ನೂ ಮತಪ್ರಚಾರಕ್ಕಾಗಿ ಉಪಯೋಗಿಸಿಕೊಂಡು ಕರ್ನಾಟಕವನ್ನು ಸ್ವಾನ ಪಡಿಸಿಕೊಂಡರು. ಒಂಬತ್ತನೆಯ ಶತಮಾನದಲ್ಲಿದ್ದ ನೃಪತುಂಗನು ಕನ್ನಡದಲ್ಲಿ ಅನೇಕ ಗದ್ಯಪದ್ಯಾತ್ಮಕ ಗ್ರಂಥಗಳು ತನ್ನ ಕಾಲದಲ್ಲಿದ್ದವೆಂದು ಹೇಳಿ ಕೆಲವು ಕವಿಗಳ ಹೆಸರನ್ನು ಸೂಚಿಸಿದ್ದಾನೆ. ಆದರೆ ಆ ಕವಿಗಳ ಕೃತಿಗಳಾವುವೂ ಉಪಲಬ್ದವಾಗಿಲ್ಲ.

ಕರ್ನಾಟಕ ರಾಜಮನೆತನಗಳಲ್ಲಿ ಕದಂಬ, ಗಂಗ ಮತ್ತು ರಾಷ್ಟ್ರಕೂಟರು ಜೈನಧರ್ಮದ ಪ್ರಭಾವಕ್ಕೆ ಒಳಪಟ್ಟವರು. ಅವರು ಜೈನಗುರುಗಳಿಗೂ ಬಸದಿಗಳಿಗೂ ಅನೇಕ ದತ್ತಿಗಳನ್ನು ಬಿಟ್ಟಿದ್ದಾರೆ. ಅವರ ಪ್ರಭಾವಕ್ಕೆ ಒಳಗಾಗಿ ತಾವೂ ಜೈನಮತವನ್ನವಲಂಬಿಸಿದ್ದಾರೆ. ಗಂಗರ ದಂಡನಾಯಕನಾದ ರಾಚಮಲ್ಲನೇ ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ಸ್ಥಾಪಿಸಿದವನು. ನೃಪತುಂಗ ಅಮೋಘವರ್ಷ ಮತ್ತು ಕೃಷ್ಣರು ವೀರಜೈನರೇ ಆಗಿದ್ದರು. ನಾಲ್ಕನೆಯ ಇಂದ್ರನು ಶ್ರವಣಬೆಳುಗೊಳದಲ್ಲಿ ಸಲ್ಲೇಖನ ವ್ರತದಿಂದ ನಿರ್ವಾಣ ಹೊಂದಿದಂತೆ ತಿಳಿದುಬರುತ್ತದೆ. ಹತ್ತನೆಯ ಶತಮಾನದಲ್ಲಿ ಚಾಳುಕ್ಯದೊರೆಯಾದ ತೈಲಪನು ಇಮ್ಮಡಿಕಕ್ಕನನ್ನು ಸೋಲಿಸಿ ದಕ್ಷಿಣದಲ್ಲಿ ರಾಜ್ಯಾಪತ್ಯವನ್ನು ವಹಿಸಿಕೊಂಡು ಪುನ ಚಾಳುಕ್ಯರಾಜ್ಯವನ್ನು ಸ್ಥಾಪಿಸಿದನು. ಚಾಳುಕ್ಯರು ಶೈವರೇ ಆದರೂ ಜೈನಮತದಲ್ಲಿ ಪೂರ್ಣವಾದ ಸಹಾನುಭೂತಿಯನ್ನು ತೋರಿದರು.

ಆದಿಕಾಲದ ಕನ್ನಡಕವಿಗಳು ತಮ್ಮ ಕಾವ್ಯ ರಚನೆಗೆ ಆ ಕಾಲದ ಸಂಸತಕಾವ್ಯಗಳನ್ನು ಮಾದರಿಯನ್ನಾಗಿ ಅಂಗೀಕಾರ ಮಾಡಿದರು. ಆಗಿನ ಕಾಲಕ್ಕೆ ಸಂಸ್ಕೃತ ಸಾಹಿತ್ಯದ ಉನ್ನತ ಕಾಲ ಆಗಿ ಹೋಗಿತ್ತು. ಕಾವ್ಯಲಕ್ಷಣಗಳನ್ನು ಕುರಿತು ಅನೇಕ ಗ್ರಂಥಗಳು ತಲೆದೋರಿದ್ದವು. ಅವುಗಳ ಕಾವ್ಯಗಳ ದೋಷಗಳನ್ನು ಖಚಿತವಾಗಿ ನಿಷ್ಕರ್ಷೆ ಮಾಡಿದ್ದವು. ಭಾವದ ತೀವ್ರತೆಯೂ ಸರಳತೆಯೂ ಮಾಯವಾಗಿ ರೀತಿ, ಗುಣಾಲಂಕಾರಗಳಿಗೂ ಕವಿ ಸಮಯಗಳಿಗೂ ಪ್ರಾಶಸ್ತ್ಯವುಂಟಾಗಿದ್ದಿತು. ಆನಂದವರ್ಧನನ ಧ್ವನಿತತ್ತ್ವವು ಪ್ರತಿಪಾದಿತವಾಗಿದ್ದರೂ ರೂಢಿಗೆ ಬಂದಿರಲಿಲ್ಲವೆಂದು ಕಾಣುತ್ತದೆ. ನೃಪತುಂಗನ ಕಾಲಕ್ಕೆ ಕನ್ನಡ ಭಾಷೆಯಲ್ಲಿ ಒಂದು ಹೊಸ ಪರಿವರ್ತನೆಯು ತಲೆದೋರಿದ್ದಿತು. ಕಾವ್ಯಗಳೂ ಹೊಸರೀತಿಯಲ್ಲಿ ರಚಿತವಾಗುತ್ತಿದ್ದವು. ಕನ್ನಡದಲ್ಲಿ ಕಾವ್ಯಗಳನ್ನು ಬರೆಯುವ ಕವಿಗಳು ಸಂಸ್ಕೃತ ಭಾಷೆಯಲ್ಲಿ ತಮಗಿದ್ದ ಹೆಚ್ಚಾದ ಪಾಂಡಿತ್ಯದಿಂದ ಕನ್ನಡ ಭಾಷೆಯಲ್ಲಿ ಸಂಸ್ಕೃತವನ್ನು ವಿಶೇಷವಾಗಿ ತುಂಬ ತೊಡಗಿದರು. ಆ ಭರದಲ್ಲಿ ಕನ್ನಡ ನುಡಿಯ ಗಡಿಯ ಮರ್ಯಾದೆಯೂ ಮೀರಿ ಕನ್ನಡ ಕಾವ್ಯಗಳೆಲ್ಲ ಸಂಸ್ಕೃತ ಮಯವಾಗುವುದಕ್ಕೆ ಪ್ರಾರಂಭವಾದುವು. ಈ ಪರಿಸ್ಥಿತಿಯನ್ನು ನೋಡಿ ನೃಪತಂಗನು ವ್ಯಸನಪಟ್ಟ. ಕನ್ನಡದಲ್ಲಿ ಸಂಸ್ಕೃತವನ್ನು ಎಷ್ಟರಮಟ್ಟಿಗೆ ಮೇಳನ ಮಾಡಬಹುದು; ಬೆರಸುವಾಗ ಯಾವ ನಿಯಮವನ್ನನುಸರಿಸಬೇಕು ಮೊದಲಾದ ವಿಷಯಗಳನ್ನೊಳಗೊಂಡ ‘ಕವಿರಾಜಮಾರ್ಗ’ವೆಂಬ ಲಕ್ಷಣ ಗ್ರಂಥವೊಂದನ್ನು ರಚಿಸಿದನು. ಕನ್ನಡ ಲಕ್ಷಣ ಗ್ರಂಥಗಳಲ್ಲಿ ಇದೇ ಮೊತ್ತಮೊದಲನೆಯದು. ಈ ಲಕ್ಷಣ ಗ್ರಂಥವನ್ನನುಸರಿಸಿ ಹೊಸಮಾದರಿಯ ಗ್ರಂಥಗಳು ಹೊರಬೀಳತೊಡಗಿರಬೇಕು. ಕರ್ನಾಟಕದಲ್ಲಿ ಎಲ್ಲೆಲ್ಲಿಯೂ ಸಾಹಿತ್ಯಾಭಿಮಾನವು ತಲೆದೋರಿ ಹತ್ತನೆಯ ಶತಮಾನದ ವೇಳೆಗೆ ಕನ್ನಡದಲ್ಲಿ ಬೆಳ್ಳಿಯ ಬೆಳಸು ತಲೆದೋರಿತು. ವೀರಾಗ್ರೇಸರರೂ ತ್ಯಾಗವೀರರೂ ಆದ ರಾಜರುಗಳೂ ಅವರ ಮಂತ್ರಿ ಸೇನಾಪತಿಗಳೂ ಕವಿಗಳಿಗೆ ಪೋಷಕವಾದುದಲ್ಲದೆ ಸ್ವಯಂ ಕವಿಗಳಾದರು. ರಾಜರುಗಳೇ ಅಲ್ಲದೆ ಧರ್ಮಾಭಿಮಾನಿಗಳನೇಕರು ಕವಿಗಳಿಗೆ ಆಶ್ರಯದಾತರಾದರು. ಕವಿಗಳು ಕಲಿಗಳೂ ಆಗಿ ತಮಗೆ ದೊರೆತ ಆಶ್ರಯವನ್ನು ಸದುಪಯೋಗಿಸಿಕೊಂಡು ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕೂ ತಮ್ಮ ಧರ್ಮಋಣವನ್ನು ಪೂರ್ಣಮಾಡುವುದಕ್ಕೂ ಲೌಕಿಕ ಮತ್ತು ಧಾರ್ಮಿಕ ಗ್ರಂಥಗಳನ್ನು ರಚಿಸಿದರು. ಆಗಿನ ಕಾಲದ ಗಂಗ, ರಾಷ್ಟ್ರಕೂಟ ಚಾಳುಕ್ಯರಾಜರ ವಿಶೇಷ ಪ್ರೋತ್ಸಾಹದಿಂದ ಕನ್ನಡರತ್ನತ್ರಯರೆಂದು ಪ್ರಸಿದ್ಧರಾದ ಪಂಪ ಪೊನ್ನ ರನ್ನರು ವೀರರಸಪ್ರಧಾನ ವಾದ ರಾಮಾಯಣ ಭಾರತ ಕಥೆಗಳ ಮೂಲಕ ತಮ್ಮ ಆಶ್ರಯದಾತರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿಸಿದರೂ ಶಾಂತಿರಸಪ್ರಧಾನವಾದ ತೀರ್ಥಂಕರರ ಚರಿತ್ರೆಗಳನ್ನು ರಚಿಸಿ ತಾವು ಜಿನಸಮಯದೀಪಕರಾದುದೂ ಇದಕ್ಕೆ ಪ್ರತ್ಯಕ್ಷಸಾಕ್ಷಿ. ಇವರ ಕೃತಿಗಳ ಮಣಿವೆಳಗಿನಿಂದಲೇ ಆ ಕಾಲದ ಸಾಹಿತ್ಯ ಪ್ರಪಂಚವು ಜ್ವಾಜಲ್ಯಮಾನವಾಗಿದೆ-

ಪಂಪ : ಕನ್ನಡ ರತ್ನತ್ರಯರಲ್ಲಿ ಮೊದಲಿಗ ಪಂಪ. ಕಾಲದೃಷ್ಟಿಯಿಂದಲ್ಲದಿದ್ದರೂ ಯೋಗ್ಯತೆಯ ದೃಷ್ಟಿಯಿಂದ ಈತನು ಕನ್ನಡದ ಆದಿಕವಿ. ಅಲ್ಲದೆ ಕವಿವೃಷಭ. ‘ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪಂ’ ಎಂಬ ನಾಗರಾಜನ ಉಕ್ತಿಯು ಅಕ್ಷರಶ ಸತ್ಯ. ಈತನ ಕಾವ್ಯಗಳು ‘ಮುನ್ನಿ ಕಬ್ಬಗಳೆಲ್ಲವನು ಇಕ್ಕಿ ಮೆಟ್ಟಿದು’ ದಲ್ಲದೆ ಅಲ್ಲಿಂದ ಮುಂದೆ ಬಂದವುಗಳಿಗೆ ಮಾರ್ಗದರ್ಶಕವಾದುವು ಕನ್ನಡಿಗರ ಸುದೈವದಿಂದ ಪಂಪನು ತನ್ನ ಕಾವ್ಯಗಳಲ್ಲಿ ತನ್ನ ಪೋಷಕನ, ತನ್ನ ಮತ್ತು ತನ್ನ ಕಾವ್ಯಗಳ ವಿಷಯಕವಾದ ಪೂರ್ಣವಿವರಗಳನ್ನು ಕೊಟ್ಟಿದ್ದಾನೆ. ಅವುಗಳ ಸಹಾಯದಿಂದ ವಾಚಕರು ಕೃತಿಗಳ, ಕೃತಿಕರ್ತನ, ಮತ್ತು ಕೃತಿಭರ್ತನ ಪೂರ್ಣ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗಿದೆ.

ಪೂರ್ವಸಮುದ್ರ ತೀರದಲ್ಲಿದ್ದ ತೆಲುಗು ದೇಶಕ್ಕೆ ಸೇರಿದ ವೆಂಗಿಪಱವಿನಲ್ಲಿ ವಸಂತ, ಕೊಟ್ಟೂರು, ನಿಡುಗುಂದಿ, ವಿಕ್ರಮಪುರ ಎಂಬ ಅಗ್ರಹಾರಗಳಿದ್ದುವು. ಅವುಗಳಲ್ಲಿ ಅಗ್ರಗಣ್ಯನೂ ಊರ್ಜಿತಪುಣ್ಯನೂ ವತ್ಸಗೋತ್ರೋದ್ಭವನೂ ನಯಶಾಲಿಯೂ ಸಕಲಶಾಸ್ತ್ರಾರ್ಥ ಮತಿಯೂ ಆದ ಮಾಧವಸೋಮಯಾಜಿ ಎಂಬ ಬ್ರಾಹ್ಮಣನಿದ್ದನು. ಆತನು ಅನೇಕ ಯಜ್ಞಗಳನ್ನು ಮಾಡಿ ಸರ್ವಕ್ರತುಯಾಜಿಯಾದನು. ಆತನ ಯಜ್ಞಕುಂಡಗಳಿಂದ ಹೊರಟ ಹೋಮಧೂಮವು ದಿಗ್ವಿನಿತೆಯರಿಗೆ ಕೃತಕಕುರುಳಿನಂತೆಯೂ ತ್ರಿಭುವನಕಾಂತೆಗೆ ಕಂಠಾಭರಣದಂತೆಯೂ ಶೋಭಿಸುತ್ತಿದ್ದರೂ ಅವುಗಳಲ್ಲಿ ಆಹುತಿ ಮಾಡಿದ ಪಶುಹತ್ಯಾದೋಷದಿಂದ ಆತನ ಧವಳಕೀರ್ತಿ ಕರಿದಾಯಿತೆಂದು ಕವಿಯ ಕೊರಗು. ಆತನ ಮಗ ಅಭಿಮಾನಚಂದ್ರ. ಇವನು ಅರ್ಥಿಗಳು ಯಾಚಿಸಿದ ಸಾರವಸ್ತುಗಳನ್ನೆಲ್ಲ ನಿರ್ಯೋಚನೆಯಿಂದಿತ್ತು ಗುಣದಲ್ಲಿ ಪುರುಷೋತ್ತಮನನ್ನೂ ಮೀರಿಸಿದನು. ಭುವನಭವನಖ್ಯಾತನಾದ ಅಭಿಮಾನಚಂದ್ರನ ಮಗ ಕೊಮರಯ್ಯ. ಈತನು ವೇದವೇದಾಂಗಪಾರಗ. ಪುರಾತನಚರಿತ. ಈತನಿಗೆ ಗುಣಮಣಿರತ್ನಾಕರನೂ ಅಜ್ಞಾತಮೋನೀಕರನೂ ಆದ ಅಭಿರಾಮದೇವ ರಾಯನೆಂಬುವನು ತನಯ. ಈತನು ‘ಜಾತಿಯೊಳೆಲ್ಲ ಉತ್ತಮಜಾತಿಯ ವಿಪ್ರಕುಲಂಗೆ ನಂಬಲೇ ಮಾತೋ ಜಿನೇಂದ್ರ ಧರ್ಮಮೆವಲಂ ದೊರೆ ಧರ್ಮದೊಳೆಂದು ನಂಬಿ ತಜ್ಜಾತಿಯನುತ್ತರೋತ್ತರಂ ಮಾಡಿ ನೆಗೞದನ್.’ ಇತ್ತೀಚಿಗೆ ಲಬ್ಧವಾದ ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದ ಅಭಿರಾಮದೇವರಾಯನಿಗೆ ಭೀಮಪಯ್ಯನೆಂಬ ಹೆಸರೂ ಇದ್ದಂತೆ ತೋರುತ್ತದೆ. ಪಂಪನ ತಾಯಿ ಅಣ್ಣಿಗೇರಿಯ ಸಿಂಘಣ ಮಗಳಾದ ಅಬ್ಬಣಬ್ಬೆ. ಇವರ ಮಗನೇ ಕವಿತಾ ಗುಣಾರ್ಣವನಾದ ಪಂಪ. ಪಂಪನಿಗೆ ಜಿನವಲ್ಲಭನೆಂಬ ಒಬ್ಬ ತಮ್ಮನಿದ್ದನು. ಇವನು ಪಂಪನಂತೆಯೇ ಕವಿಯೂ ಪಂಡಿತನೂ ಆಗಿದ್ದನು. ವೆಂಗಿಪೆಳುವು ತೆಲುಗುದೇಶದ ಒಂದು ಭಾಗವಾಗಿದ್ದರೂ ಅವನು ಆ ಪ್ರಾಂತ್ಯದ ಅಂದರೆ ವೆಂಗಿಮಂಡಲದ-ವೇಮಲ ವಾಡದ ಚಾಳುಕ್ಯರ ಆಶ್ರಯದಲ್ಲಿದ್ದರೂ ಪಂಪನ ತಾಯಿಯ ತವರೂರಾದ ಅಣ್ಣಿಗೇರಿಯು ಕನ್ನಡದೇಶವೇ ಪಂಪನಿಗೆ ಮೊದಲಿನಿಂದಲೂ ಕನ್ನಡದೇಶದ ನಿಕಟ ಸಂಬಂಧವಿದ್ದಿರಬೇಕು.

ಪಂಪನು ದುಂದುಬಿಗಭಿರನಿನದ, ದುಂದುಭಿಸಂವತ್ಸರೋದ್ಭವ,

‘ಕದಳೀಗರ್ಭಶ್ಯಾಮಂ
ಮೃದು ಕುಟಿಲ ಶಿರೋರುಹಂ, ಸರೋರುಹವದನಂ
ಮೃದು ಮಧ್ಯಮತನು, ಹಿತಮಿತ
ಮೃದುವಚನಂ, ಲಲಿತಮಧುರ ಸುಂದರವೇಷಂ||

ವತ್ಸಕುಲತಿಲಕನ್, ಅಭಿಜನ
ವತ್ಸಲನ್, ಅಭಿಮಾನಮೂರ್ತಿ, ಕುಕವಿಯಶೋನಿ
ರ್ಮತ್ಸರನ್, ಅಮೃತಮಯೋಕ್ತಿ, ಶ
ರತ್ಸಮಯಸುಧಾಂಶುವಿಶದಕೀರ್ತಿ ವಿತಾನಂ’

ಆತನು ಲಲಿತಾಲಂಕರಣ, ರಸಿಕ, ಶಿಸ್ತುಗಾರ, ಸ್ವಾಭಿಮಾನಿ ಎಂದರೂ ಒಪ್ಪುತ್ತದೆ. ತಾನು ವನಿತಾಕಟಾಕ್ಷಕುವಲಯವನ ಚಂದ್ರವನಾಗಿದ್ದುದನ್ನು, ಕೇರಳವಿಟೀಕಟೀ ಸೂತ್ರಾರುಣಮಣಿಯಾಗಿದ್ದುದನ್ನು, ಮಲಯ ಮತ್ತು ಆಂಧ್ರ ಯುವತಿಯರು ತನ್ನ ರೂಪಕ್ಕೆ ಮಾರುಹೋಗಿ ತನಗೆ ಅನರಾಗಿದ್ದುದನ್ನು ಆತನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾನೆ. ಸ್ತ್ರೀಲಾವಣ್ಯದ ಆಕರ್ಷಣೆಯ ಒಳಗುಟ್ಟು

ಆತನಿಗೆ ಗೊತ್ತು. ಆದುದರಿಂದಲೇ ಆತನು ತನ್ನ ಕಾವ್ಯದಲ್ಲಿ ‘ಸಾರಂ ಅನಂಗಜಂಗಮಲತಾಲಲಿತಾಂಗಿಯರಿಂದಮಲ್ತೆ ಸಂಸಾರಂ’ ಎಂದು ಘೋಷಿಸಿರುವುದು. ಸಂಸಾರಸಾರೋದಯನಾದ ಆತನಿಗೆ ಭೋಗಸಾಮಗ್ರಿಗಳಾದ ಸ್ನಾನ, ಅನುಲೇಪನ, ಪುಷ್ಪಧಾರಣ, ಭೋಜನ, ತಾಂಬೂಲಚರ್ವಣ, ದುಕೂಲಾಚ್ಛಾದನ, ವನವಿಹಾರ, ಜಲಕ್ರೀಡಾದಿ ಸಮಸ್ತ ವಿಷಯಗಳಲ್ಲಿಯೂ ಅತ್ಯತಿಶಯವಾದ ಅನುಭವವೂ ರಸಿಕತೆಯೂ ಇತ್ತೆಂದು ಕಾಣುತ್ತದೆ. ಈ ಅನುಭವದ ವೈಭವವನ್ನು ನೋಡಬೇಕು ‘ಆದಿಪುರಾಣ’ದ ಹನ್ನೊಂದನೆಯ ಆಶ್ವಾಸದಲ್ಲಿ ಬರುವ ಭರತ ಚಕ್ರವರ್ತಿಯ ಚೈತ್ರಯಾತ್ರಾ ಸಂದರ್ಭದಲ್ಲಿ. ಆದರೂ ಪಂಪನಿಗೆ ಭೋಗದ ಮಿತಿಯೂ ತ್ಯಾಗದ ಹಿತವೂ ಚೆನ್ನಾಗಿ ತಿಳಿದಿತ್ತು. ಧರ್ಮಾರ್ಥಕಾಮಗಳ ಇತಿಮಿತಿಯು ಸ್ಪಷ್ಟವಾಗಿತ್ತು. ಅದನ್ನೇ ಅವನು ಮುಂದಿನ ಪದ್ಯಭಾಗದಲ್ಲಿ ವಿಶದಪಡಿಸಿದ್ದಾನೆ.

ಧರ್ಮಂ ಪ್ರಧಾನಂ, ಅರ್ಥಂ
ಧರ್ಮಾಂಘ್ರಿಪಫಳಂ, ಅವರ್ಕೆ ರಸಮದು ಕಾಮಂ||

ಪಂಪನ ಬಾಲ್ಯದ ವಿವರಗಳೇನೂ ತಿಳಿದಿಲ್ಲ. ಈತನ ವಿದ್ಯಾಭ್ಯಾಸವು ಸರ್ವತೋಮುಖವಾಗಿರಬೇಕು. ರಾಮಾಯಣ, ಮಹಾಬಾರತ, ಮತ್ತು ಜೈನಧರ್ಮ ಗ್ರಂಥಗಳ ಪರಿಚಯ ಈತನಿಗೆ ವಿಶೇಷವಾಗಿತ್ತು. ಪ್ರಾಕೃತ ಸಂಸ್ಕೃತ ಭಾಷೆಗಳಲ್ಲಿಯೂ ಪೂರ್ಣ ಪಾಂಡಿತ್ಯವಿತ್ತು. ಸಂಗೀತ, ನೃತ್ಯ, ಶಿಲ್ಪ, ವೈದ್ಯ, ಅರ್ಥಶಾಸ್ತ್ರ, ಕಾಮಶಾಸ್ತ್ರ, ನೀತಿಶಾಸ್ತ್ರ ಮೊದಲಾದುವುಗಳನ್ನು ಇವನು ಅಭ್ಯಾಸ ಮಾಡಿದ್ದಿರಬೇಕು. ಈತನ ಗುರು ಕೊಂಡಕುಂದಾನ್ವಯಕ್ಕೆ ಸೇರಿದ ದೇವೇಂದ್ರಮುನಿ. ಈತನಲ್ಲಿ ಪಂಪನಿಗೆ ಬಹಳಭಕ್ತಿ. ಆದುದರಿಂದಲೇ ಅವನು ತನ್ನನ್ನು ಆದಿಪುರಾಣದಲ್ಲಿ ‘ದೇವೇಂದ್ರ ಮುನೀಂದ್ರವಂದ್ಯ ಪರಮಜಿನೇಂದ್ರಮುಖ ವಾಕ್ಚಂದ್ರಿಕಾಪ್ರಸರಪ್ರಸಾದೋದೀರ್ಣ ಸೂಕ್ತಿಕಲ್ಲೋಲ ಮಾಲಾಕೀರ್ಣಕವಿತಾಗುಣಾರ್ಣವಂ’ ಎಂದು ಕರೆದುಕೊಂಡಿದ್ದಾನೆ. ಈ ದೇವೇಂದ್ರಮುನಿಯು ಶ್ರವಣಬೆಳಗೊಳ ದಲ್ಲಿದ್ದನೆಂಬುದು ಶಾಸನಗಳಿಂದ ತಿಳಿದು ಬರುತ್ತದೆ. ಪಂಪನು ವೆಂಗಿಪೞುವಿನಿಂದ ಇಲ್ಲಿಗೆ ಬಂದು ನೆಲಸಿ ಈ ಗುರುವಿನ ಪಾದದಡಿಯಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಈ ಕಾಲದಲ್ಲಿಯೇ ಅವನಿಗೆ ‘ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ’ ‘ಕೋಗಿಲೆಯಾಗಿ ಮೇಣ್ ಮಱಿದುಂಬಿಯಾಗಿ ಪುಟ್ಟುವುದು ನಂದನದೊಳ್ ಬನವಾಸಿದೇಶದೊಳ್’ ಎಂಬುದಾಗಿ ಅವನು ನಾನಾ ರೀತಿ ಹಾತೊರೆಯುವ ಬನವಾಸಿ ದೇಶದ ಸಂಬಂಧವುಂಟಾಗಿರಬೇಕು.

ಪಂಪನ ವಿದ್ಯಾವೈದುಷ್ಯದಿಂದ ಆಕರ್ಷಿತನಾದ, ಆಗ ವೆಂಗಿಮಂಡಲದ ಪಶ್ಚಿಮದ ಕಡೆ ಕನ್ನಡ ಸೀಮೆಗೆ ಸಮೀಪವಾದ ಲೆಂಬುಳ ಪಾಟಕವೆಂಬ ಪಟ್ಟಣದಲ್ಲಿ ರಾಜ್ಯವಾಳುತ್ತಿದ್ದ ರಾಷ್ಟ್ರಕೂಟರ ಮೂರನೆಯ ಕೃಷ್ಣನ ಸಾಮಂತರಾಜನಾದ ಅರಿಕೇಸರಿಯು ಪಂಪನನ್ನು ತನ್ನ ಆಸ್ಥಾನಕ್ಕೆ ಪ್ರೀತಿಯಿಂದ ಬರಮಾಡಿಕೊಂಡು ವಿಶೇಷವಾಗಿ ಮನ್ನಿಸಿ ಅವನಿಂದ ಗ್ರಂಥಗಳನ್ನು ಬರೆಯಿಸಿ ಪಂಚರತ್ನಗಳನ್ನೂ ಉಡುಗೊರೆಗಳನ್ನೂ ಧರ್ಮಪುರವೆಂಬ ಶಾಸನಾಗ್ರಹಾರವನ್ನೂ ದಯಪಾಲಿಸಿದನು. ಅಲ್ಲದೆ ತನ್ನ ಗುಣಾರ್ಣವನೆಂಬ ಬಿರುದಿಗೆ ಒಪ್ಪುವಂತೆ ಅವನಿಗೆ ‘ಕವಿತಾಗುಣಾರ್ಣವ’ನೆಂಬ ಬಿರುದನ್ನು ಕೊಟ್ಟನು. ಅವನ ಆಶ್ರಯದಲ್ಲಿ ಪಂಪನು ಆತ್ಮತೃಪ್ತಿಗಾಗಿಯೂ ತನ್ನ ಧರ್ಮಋಣದ ಪರಿಹಾರಕ್ಕಾಗಿಯೂ ಶಕವರ್ಷ ೮೬೩ಕ್ಕೆ ಸರಿಯಾದ ಪ್ಲವಸಂವತ್ಸರದಲ್ಲಿ ತನ್ನ ೩೯ನೆಯ ವಯಸ್ಸಿನಲ್ಲಿ ಅಂದರೆ ಕ್ರಿ.ಶ. ೯೪೧ರಲ್ಲಿ ಪ್ರಶಸ್ತವಾದ ತಿಥಿವಾರನಕ್ಷತ್ರಗಳಿಂದ ಕೂಡಿದ ಶುಭಮುಹೂರ್ತದಲ್ಲಿ ಆದಿತೀರ್ಥಂಕರನ ಚರಿತ್ರೆಯಾದ ‘ಆದಿಪುರಾಣ’ವನ್ನು ಬರೆದು ಮುಗಿಸಿದನು. ಇದಾದ ಕೆಲವು ದಿನಗಳಾದ ಮೇಲೆತನ್ನ ಆಶ್ರಯದಾತನ ಕೀರ್ತಿ ಸ್ಥಾಪನೆಗಾಗಿ ‘ವಿಕ್ರಮಾರ್ಜುನ ವಿಜಯ’ ಅಥವಾ ‘ಪಂಪಭಾರತ’ವೆಂಬ ಮತ್ತೊಂದು ಗ್ರಂಥವನ್ನೂ ರಚಿಸಿದನು. ಒಂದನ್ನು ಮೂರು ತಿಂಗಳುಗಳಲ್ಲಿಯೂ ಮತ್ತೊಂದನ್ನು ಆರು ತಿಂಗಳಲ್ಲಿಯೂ ರಚಿಸಿದೆನೆಂದೂ ಒಂದರಲ್ಲಿ ಜಿನಾಗಮವನ್ನೂ ಇನ್ನೊಂದರಲ್ಲಿ ಲೌಕಿಕವನ್ನೂ ಬೆಳಗಿರುವೆನೆಂದೂ ಕವಿಯೇ ಹೇಳಿಕೊಂಡಿದ್ದಾನೆ.

ಆದಿಪುರಾಣ- ನಮಗೆ ದೊರೆತಿರುವ ಪಂಪನ ಕೃತಿಗಳಲ್ಲಿ ಇದು ಮೊದಲನೆಯ ಕೃತಿ. (ಇದಕ್ಕೆ ಹಿಂದೆ ಪಂಪನು ಇನ್ನೂ ಕೆಲವು ಕೃತಿಗಳನ್ನು ರಚಿಸಿರಬಹುದು). ಇದು ಒಂದು ಧಾರ್ಮಿಕ ಗ್ರಂಥ. ಪ್ರಥಮತೀರ್ಥಂಕರನಾದ ಪುರುದೇವನ ಕಥೆ. ಇದರಲ್ಲಿ ಧರ್ಮದ ಜೊತೆಗೆ ಕಾವ್ಯಧರ್ಮವನ್ನೂ ನಿರೂಪಿಸುತ್ತೇನೆಂದು ಪಂಪನೇ ಹೇಳುತ್ತಾನೆ. ಧರ್ಮಗ್ರಂಥವಾದ ಇದರಲ್ಲಿ ಪುರಾಣದ ಅಷ್ಟಾಂಗಗಳಾದ ಲೋಕಾಕಾರಕಥನ, ನಗರ ಸಂಪತ್ಪರಿವರ್ಣನ, ಚತುರ್ಗತಿಸ ರೂಪ, ತಪೋಧ್ಯಾನವ್ಯಾವರ್ಣನ ಮೊದಲಾದುವುಗಳನ್ನು ಒಂದೂ ಬಿಡದೆ

ಶಾಸ್ತ್ರೀಯವಾದ ರೀತಿಯಲ್ಲಿ ವರ್ಣಿಸಬೇಕು. ಅಲ್ಲದೆ ಪಂಪನ ಆದಿಪುರಾಣಕ್ಕೆ ಮೂಲ, ಜಿನಸೇನಾಚಾರ್ಯರ ಸಂಸ್ಕೃತ ಪೂರ್ವಪುರಾಣ. ಆ ವಿಸ್ತಾರವಾದ ಪುರಾಣವನ್ನು ಅದರ ಮೂಲರೇಖೆ, ಉದ್ದೇಶ, ಸ್ವರೂಪ-ಯಾವುದೂ ಕೆಡದಂತೆ ಸಂಗ್ರಹಿಸುವುದು ಮಾತ್ರ ಅವನ ಕಾರ್ಯ. ಆದುದರಿಂದ ಈ ಗ್ರಂಥದಲ್ಲಿ ಅವನಿಗೆ ತನ್ನ ಪ್ರತಿಭಾಕೌಶಲವನ್ನು ಪ್ರಕಾಶಿಸಲು ವಿಶೇಷ ಅವಕಾಶವಿಲ್ಲ. ಆದರೂ ಪಂಪನು ತನ್ನ ಕಾರ್ಯವನ್ನು ಬಹುಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಆತನು ಪೂರ್ವಪುರಾಣಕ್ಕೆ ಬಹುಮಟ್ಟಿಗೆ ಋಣಿ. ಜಿನಸೇನಾಚಾರ್ಯರ ಕಥಾಸರಣಿಯನ್ನೇ ಅಲ್ಲದೆ ಭಾವಗಳನ್ನೂ ವಚನಗಳನ್ನೂ ವಚನಖಂಡಗಳನ್ನೂ ಪದ್ಯಭಾಗಗಳನ್ನೂ ವಿಶೇಷವಾಗಿ ಉಪಯೋಗಿಸಿ ಕೊಂಡಿದ್ದಾನೆ. ಆತನ ಗ್ರಂಥದ ಬಹುಭಾಗ ಪೂರ್ವಪುರಾಣದ ಅನುವಾದವಿದ್ದಂತೆಯೇ ಇದೆ. ಅಷ್ಟಾದರೂ ಅಲ್ಲಿ ಪಂಪನ ಕೈವಾಡ ಪ್ರಕಾಶವಾಗದೇ ಇಲ್ಲ. ಧರ್ಮಾಂಗಗಳನ್ನು ಬಿಟ್ಟು ಕಾವ್ಯಾಂಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಪಂಪನ ಪ್ರತಿಭಾಪಕ್ಷಿ ಗರಿಗೆದರಿ ಗಗನವಿಹಾರಿಯಾಗುತ್ತದೆ. ತನ್ನ ಸ್ವತಂತ್ರವಿಲಾಸದಿಂದ ವಾಚಕರ ಮೇಲೆ ಪ್ರತ್ಯೇಕವಾದ ಸಮ್ಮೋಹನಾಸ್ತ್ರವನ್ನು ಬೀರಿ ಮಂತ್ರಮುಗ್ಧರನ್ನಾಗಿಸುತ್ತದೆ. ಸಂಗ್ರಹ ಮತ್ತು ಅನುವಾದ ಕಾರ್ಯದಲ್ಲಂತೂ ಆತನು ಅತಿನಿಪುಣ. ಆದಿತೀರ್ಥಂಕರನ ಭವಾವಳಿಗಳನ್ನೂ ಪಂಚಕಲ್ಯಾಣಗಳನ್ನೂ ಕವಿಯು ಬಹು ಎಚ್ಚರಿಕೆಯಿಂದ ಸಂಗ್ರಹಿಸಿ ಸುಂದರವಾಗಿ ವರ್ಣಿಸಿದ್ದಾನೆ. ಜಿನಸೇನನ ಮಹಾಸಾಗರದಿಂದ ಅಣಿಮುತ್ತುಗಳನ್ನು ಆಯುವುದರಲ್ಲಿ ತನ್ನ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಥೆಗೆ ನೇರ ಸಂಬಂಧ ಪಡೆದ ಭಾಗಗಳನ್ನೆಲ್ಲ ತನ್ನ ವಿವೇಕಯುತವಾದ ಕತ್ತರಿಪ್ರಯೋಗದಿಂದ ತೆಗೆದುಹಾಕಿ ಗ್ರಂಥದ ಪೂರ್ವಾರ್ಧದಲ್ಲಿ ವಿಸ್ತ ತವಾಗಿರುವ ಭವಾವಳಿಗಳಲ್ಲಿ ಏಕಪ್ರಕಾರವಾಗಿ ಹರಿದು ಬರುವ ಸೂತ್ರಧಾರೆಯನ್ನು ಸ್ಪಷ್ಟೀಕರಿಸಿದ್ದಾನೆ. ಮೊದಲನೆಯ ಐದು ಜನ್ಮಗಳಲ್ಲಿ ಜೀವದ ಒಲವು ಐಹಿಕ ಭೋಗ ಸಾಮ್ರಾಜ್ಯದ ಕಡೆ ಅಭಿವೃದ್ಧಿಯಾಗುತ್ತ ಬಂದು ವ್ರತದಿಂದ ತಪಸ್ಸಿನಿಂದ ಕಡೆಯ ಐದು ಭವಗಳಲ್ಲಿ ಕ್ರಮಕ್ರಮವಾಗಿ ಆ ಭೋಗಾಭಿಲಾಷೆಯು ಮಾಯವಾಗಿ ತ್ಯಾಗದಲ್ಲಿ ಲೀನವಾಗಿ ಅನಂತವಾದ ಮೋಕ್ಷ ಸಿದ್ಧಿಯಾಗುವುದನ್ನು ಕವಿಯು ಬಹುರಮಣೀಯವಾಗಿ ವರ್ಣಿಸಿದ್ದಾನೆ. ಗ್ರಂಥದ ಉತ್ತಾರರ್ಧದಲ್ಲಿ ತೀರ್ಥಂಕರನ ಅನೇಕ ಪುತ್ರರಲ್ಲಿ ಪ್ರಸಿದ್ಧರಾದ ಭರತ ಬಾಹುಬಲಿಗಳ ಕಥೆ ಉಕ್ತವಾಗಿದೆ. ಇದರಲ್ಲಿ ಅಕಾರ ಲಾಲಸೆಯ, ಕೀರ್ತಿಕಾಮನೆಯ, ವೈಭವಮೋಹದ ಪರಮಾವಯನ್ನೂ ಅದರಿಂದ ವೈರಾಗ್ಯ ಹುಟ್ಟಬಹುದಾದ ರೀತಿಯನ್ನೂ ಬಹು ಕಲಾಮಯವಾಗಿ ಚಿತ್ರಿಸಿದ್ದಾನೆ. ‘ಭೋಗಂ ರಾಗಮನಾಗಿಸಿದೊಡಂ ಹೃದ್ರೋಗಮನುಂಟುಮಾಡುಗುಂ’ ‘ಅಮರೇಂದ್ರೋನ್ನತಿ, ಖೇಚರೇಂದ್ರವಿಭವಂ, ಭೋಗೀಂದ್ರ ಭೋಗಂ ಇವೆಲ್ಲಮಧ್ರುವಂ, ಅಭೀಷ್ಟಸುಖಪ್ರದಮದೊಂದೆ ಮುಕ್ತಿಸ್ಥಾನಂ.’ ಅದಕ್ಕೆ ಭೋಗವನ್ನು ತ್ಯಾಗದಲ್ಲಿಯೂ ವೈಭವವನ್ನು ವೈರಾಗ್ಯದಲ್ಲಿಯೂ ಲೀನಗೊಳಿಸುವುದೇ ಸಾಧನ ‘ಜಿನಧರ್ಮಾಮಾರ್ಮಂ’ ‘ಜಿನಚರಣಮೆ ಶರಣಂ’ ಇದೇ ಕಾವ್ಯದುದ್ದಕ್ಕೂ ಅನುರಣಿತವಾಗುತ್ತಿರುವ ಪಲ್ಲವಿ. ಈ ಭಾವವನ್ನು ವಾಚಕರ ಹೃದಯದಲ್ಲಿ ಪ್ರವೇಶಮಾಡಿಸುವ ಕಾರ್ಯದಲ್ಲಿ ಕವಿ ಕೃತಕೃತ್ಯನಾಗಿದ್ದಾನೆ. ಈ ಗ್ರಂಥದಲ್ಲಿ ಬರುವ ಚಿತ್ರಪರಂಪರೆ, ಭಾವಗಳ ಒಳತೋಟಿ, ಪಾತ್ರಗಳ ವ್ಯಕ್ತಿತ್ವವರ್ಣನಾ ವೈಖರಿ, ನಾಟಕೀಯತೆ ಇವು ಎಂತಹವನನ್ನಾದರೂ ಮುಗ್ಧಗೊಳಿಸುತ್ತವೆ. ಅದರ ಸ್ವಾರಸ್ಯದ ಸವಿಯನ್ನು ಅನುಭವಿಸುವುದಕ್ಕೆ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದಲಾದರೂ ಪರಿಚಯ ಮಾಡಿಕೊಳ್ಳುವುದೊಂದೇ ಮಾರ್ಗ.

ಆದಿಪುರಾಣದ ವಿಹಾರವಿಮರ್ಶೆ: ವೈರಾಗ್ಯಮೂರ್ತಿಯಾದ ಆದಿ ತೀರ್ಥಂಕರನಿಗೆ ಆ ಪರಿಪಾಕವುಂಟಾಗಬೇಕಾದರೆ ಹತ್ತು ಜನ್ಮಗಳಲ್ಲಿ ತೊಳಲಬೇಕಾಯಿತು. ಮೊದಲನೆಯ ಜನ್ಮದಲ್ಲಿ ಆತನು ಸಿಂಹಪುರದಲ್ಲಿ ಶ್ರೀಷೇಣ ಮತ್ತು ಸೌಂದರಿಯರ ಮಗನಾಗಿ ಹುಟ್ಟಿದನು. ಪ್ರಾಪ್ತವಯಸ್ಕನಾಗಲು ತಂದೆಯು ರಾಜ್ಯವನ್ನು ನ್ಯಾಯಪ್ರಾಪ್ತವಾಗಿ ತನಗೆ ಕೊಡದೆ ಜನಪ್ರಿಯವಾದ ಕಿರಿಯ ಮಗನಿಗೆ ಕೊಟ್ಟನು. ಇದರಿಂದ ಜಯವರ್ಮನಿಗೆ ವಿಶೇಷ ನೋವುಂಟಾಯಿತು. ಈ ಜನ್ಮದಲ್ಲಿ ಪಡೆಯಲಾರದ ವೈಭವವನ್ನು ಮುಂದಿನ ಜನ್ಮದಲ್ಲಾದರೂ ಪಡೆದು ಈಗ ನನಗುಂಟಾದ ಅಭಿಭವವನ್ನು ನೀಗುತ್ತೇನೆಂದು, ಸ್ವಯಂಪ್ರಭುಗುರು ಪಾದಮೂಲದಲ್ಲಿ ಜಿನದೀಕ್ಷೆಯನ್ನು ಪಡೆದು ಘೋರತಪಸ್ಸಿನಲ್ಲಿ ನಿರತನಾದನು. ಆ ಕಾಲಕ್ಕೆ ಸರಿಯಾಗಿ ಅಂತರಿಕ್ಷದಲ್ಲಿ ನಲ್ಲಳೊಡಗೂಡಿ ಸಮಸ್ತ ವೈಭವದಿಂದ ಹೋಗುತ್ತಿದ್ದ ವಿದ್ಯಾಧರನ ವಿಲಾಸಕ್ಕೆ ಮಾರುಹೋಗಿ ತಾನೂ ಅದನ್ನು ಪಡೆಯ ಬೇಕೆಂದಾಸೆ ಪಟ್ಟನು. ತಪಸ್ಸಿನಿಂದ ಪಡೆಯಬೇಕಾಗಿದ್ದ ಅನಲ್ಪಸುಖವನ್ನು ಮಾರಿ ಅಲ್ಪಸುಖಕ್ಕೆ ಮನಸೋತು ಗತಜೀವಿತವಾಗಿ ಅಳಕಾಪುರದ ಅತಿಬಳರಾಜನಿಗೂ ಆತನ ಮಹಾದೇವಿ ನಯನಮನೋಹರಿ ಮನೋಹರಿಗೂ ಮಹಾಬಳನೆಂಬ ಮಗನಾಗಿ ಹುಟ್ಟಿದನು. ತನು ಸಮಸ್ತ ವಿದ್ಯಾಧರ ವಿದ್ಯಾಸಾಗರನೂ ಅಶೇಷ ಶಾಸ್ತ್ರಪರಿಣತನೂ ಯವ್ವನಪರಿಪೂರ್ಣನೂ ಆಗಲಾಗಿ ಪೂರ್ವಜನ್ಮದ ತಪಸ್ಸಿನ ಫಲದಿಂದ

ಮೊಗಮುತುಲ್ಲ ಸರೋಜಹಾಸಿ, ನಯನಂ ನೀಲಾಂಬುಜರ್ಸ್ಪ, ಬಾ
ಹುಗಳಾಜಾನುವಿಳಂಬಿಗಳ್, ತೊಡಗಳುಂ ರಂಭಾಮೃದುಸ್ತಂಭ ಶೋ
ಭೆಗಳಂ ಗೆಲ್ದವು. ವಕ್ಷಮಂಬರಚರ ಶ್ರೀ ಗೇಹಮೆಂಬೊಂದೆ ರೂ
ಪೆ ಗಡಂ, ನೋಡಲೊಡಂ ಮರುಳ್ಗೊಳಿಸುಗುಂ ವಿದ್ಯಾಧರಸ್ತ್ರೀಯರಂ||

ಹೀಗೆ ವಿದ್ಯಾರೂಪಬಲ ಸಂಪನ್ನನಾದ ಕುಮಾರನಿಗೆ ಅತಿಬಳನು ಯುವರಾಜ ಪಟ್ಟವನ್ನು ಕಟ್ಟಲು

ಲಲಿತಾಲಂಕರಣಪ್ರಸನ್ನ ರಸವದ್ಗೇಯಂಗಳೊಳ್ ಮೂಡುತುಂ,
ಮುೞುಗುತ್ತುಂ, ಖಚರೀಜನಾನನನವಾಂಭೋಜಂಗಳೊಳ್ ಕಂಪನೀ
ೞ್ಕೊಳುತುಂ, ನಂದನರಾಜಿಯೊಳ್ ನಲಿಯುತುಂ, ತದ್‌ರಾಜಹಂಸಂ, ನಿರಾ
ಕುಳಮೀ ಮಾೞ್ಕೆ ಗಳಿಂದೆ, ಪೊೞ್ತುಗಳೆದಂ, ಸಂಸಾರಸಾರೋದಯಂ||

ಹೀಗಿರಲು ಒಂದು ದಿನ ರಾಜನು ಸಕಲವೈಭವದಿಂದ ಸಭಾಸ್ಥಾನದಲ್ಲಿದ್ದಾಗ ಆತನ ಮಂತ್ರಿಯಾದ ಸ್ವಯಂಬದ್ಧನೆಂಬುವನು ರಾಜನ ಅಭ್ಯುದಯಕಾಂಕ್ಷಿಯಾಗಿ ಅವನನ್ನು ಕುರಿತು

‘ನಿನ್ನೀ ವಿದ್ಯಾಧರಲಕ್ಷ್ಮಿ ಪುಣ್ಯಜನಿತಂ ವಿದ್ಯಾಧರಾಶ್ವರಾ’
ಭವವಾರಾಶಿನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಮೆಂ
ಬಿವೆ ಮೆಯ್ಯಾಗಿರೆ ಸಂದ ಧರ್ಮಮೆ ವಲಂ ಪೊತ್ತೆತ್ತುಗಂ, ಮುಕ್ತಿಪ
ರ್ಯವಸಾನಂಬರಮಾನುಶಷಂಗಿಕಫಲಂ, ಭೂಪೇಂದ್ರ, ದೇವೇಂದ್ರ ರಾ
ಜ್ಯವಿಲಾಸಂ ಪೆಱತಲ್ತು, ನಂಬು, ಖಚರಕ್ಷ್ಮಾಪಾಲಚೂಡಾಮಣೀ ||

ಎಂದು ಧರ್ಮಪ್ರಭಾವವನ್ನು ತತಲಸ್ವಭಾವವನ್ನು ತಿಳಿಸಲು ಅಲ್ಲಿಯೇ ಇದ್ದ ಮಹಾಮತಿ ಸಂಭಿನ್ನಮತಿ ಶತಮತಿಗಳೆಂಬ ಇತರ ಮಂತ್ರಿಗಳು ತಮ್ಮ ಲೋಕಾಯತಿಕ ಯೋಗಾಚಾರ ಮಾಧ್ಯಮಿಕ ಮತಕ್ಕನುಗುಣವಾಗಿ ಜೀವಾಭಾವವನ್ನೂ ಐಹಿಕ ಸುಖಪಾರಮ್ಯವನ್ನೂ ಬೋಸಲು ಸ್ವಯಂಬುದ್ಧನು ಅನುಭೂತ ಶ್ರುತದೃಷ್ಟಖೇಚರ ಕಥಾನೀಕಗಳಿಂದಲೂ ಯುಕ್ತಿಯಿಂದಲೂ ಜೀವಸಿದ್ಧಿಯನ್ನು ನಿಶ್ಚಯಿಸಿ ಪರಪಕ್ಷದೂಷಣಪುರಸ್ಸರವಾಗಿ ಸ್ವಪಕ್ಷವನ್ನು ಸಾಸಲು ಮಹಾಬಳನು ಸ್ವಯಂಬುದ್ಧನೇ ತನಗೆ ವಿಶ್ವಾಸಭೂಮಿಯಾಗಲು ಆತನ ಮಾರ್ಗವನ್ನೇ ಅನುಸರಿಸಿ ಅನೇಕ ವರ್ಷಕಾಲ ರಾಜ್ಯಭಾರ ಮಾಡಿ ಕೊನೆಯಲ್ಲಿ ಘೋರತಪಶ್ಚರಣೆಯ ಮೂಲಕ ಪ್ರಾಯೋಪಗಮನ ವಿಯಿಂದ ಶರೀರಭಾರವನ್ನಿಳಿಸಿ ಅನಲ್ಪಸುಖನಿವಾಸವೆನಿಸಿ ದೀಶಾನುಕಲ್ಪದಲ್ಲಿ ಲಲಿತಾಂಗದೇವನಾಗಿ ಹುಟ್ಟಿದನು. ಅಲ್ಲಿದ್ದ ಅನೇಕ ಮನೋನಯನವಲ್ಲಭೆಯರಲ್ಲಿ

‘ಅದು ಸುಖದೊಂದು ಪಿಂಡಂ, ಅದು ಪುಣ್ಯದ ಪುಂಜಂ, ಅದಂಗಜಂಗೆ
ಬಾೞು ಮೊದಲದು ಚಿತ್ತಜಂಗೆ ಕುಲದೈವಂ, ಅಂಗಚಕ್ರವರ್ತಿಗೆ
ತ್ತಿದ ಪೊಸವಟ್ಟಂ, ಅಂತದು ಮನೋಜನ ಕೈಪಿಡಿ’

ಎಂದು ರೂಪಿನ ಗಾಡಿಯಿಂದ ಕೂಡಿದ ಸ್ವಯಂಪ್ರಭೆಯು ಅವನ ಮನಸ್ಸನ್ನು ಸೂರೆಗೊಂಡಳು.

ನೆಗೞ್ದಮರಾಂಗನಾಜನದ ರೂಪುಗಳೆಲ್ಲಮದೀಕೆಯದೊಂದು ದೇ
ಸೆಗೆ ನಿಮಿರ್ವೊಂದು ಪುರ್ವಿನ ನಯಕ್ಕಮಮರ್ವೊಂದ ದಗುಂತಿಗೊಂದು ಭಂ
ಗಿಗೆ ನೆಗೞ್ದೊಂದು ಮೆಲ್ಪ್ಟಿನ ತೊದಳ್ನುಡಿಗಪ್ಪೊಡಮೆಯ್ದೆವಾರವೇ
ನೊಗಸುವಮೆಂದು ತಳ್ತಗಲನಾಕೆಯನಾ ಲಲಿತಾಗಂವಲ್ಲಭಂ ||

ವ್ರತದಿಂದ ಪಡೆದ ಇಂದ್ರಲೋಕವೈಭವವು ಮನಕ್ಕಾಹ್ಲಾದವನ್ನುಂಟು ಮಾಡುವ ಆ ಸತಿಯಿಂದ ಸಾರ್ಥಕವಾಯಿತೆಂದು ಲಲಿತಾಂಗದೇವನು ಸಂತೋಷಪಟ್ಟನು.

ಅಣಿಮಾದ್ಯಷ್ಟಗುಣಪ್ರಭೂತವಿಭವಂ, ದೇವಾಂಗನಾ ಮನ್ಮಥ
ಪ್ರಣಯಪ್ರೀಣಿತ ಮಾನಸಂ, ಸುರವಧೂಲೀಲಾವಧೂತ ಪ್ರತಿ
ಕ್ಷಣ ಚಂಚಚ್ಚಮರೀರುಹುಂ, ಪಟುನಟಪ್ರಾರಬ್ಧಸಂಗೀತಕಂ
ತಣಿದಂ ಸಂತತಮಿಂತು ದಿವ್ಯಸುಖದೊಳ್ ಸಂಸಾರಸಾರೋದಯಂ ||

ಆದರೆ ಈ ತಣಿವು ಎಷ್ಟು ಕಾಲ! ಆತ್ಮ ಪುಣ್ಯೋಪಾರ್ಜಿತಾಮರಲೋಕವಿಭವ ಮುಗಿಯುತ್ತ ಬಂದು ಆರು ತಿಂಗಳು ಮಾತ್ರ ಉಳಿಯಿತು. ಲಲಿತಾಂಗದೇವನು ಮುಡಿದಿದ್ದ ಹೂಮಾಲೆ ಬಾಡಿತು. ದೇಹಕಾಂತಿ ಮಸುಕಾಯಿತು. ಆಭರಣಗಳು ಕಾಂತಿಹೀನವಾದವು.

ತನ್ನ ಅವಸಾನಕಾಲದ ಸೂಚನೆಯುಂಟಾಯಿತು. ಅಲ್ಲಿಯ ಭೋಗವನ್ನು ಬಿಡಲಾರದೆ ಸುತ್ತಲಿನ ಕಲ್ಪವೃಕ್ಷಗಳನ್ನೂ ವಿಮಾನದ ಮಣಿಕಟ್ಟನ್ನೂ ಭೂಮಿಕೆಗಳನ್ನೂ ತನ್ನನ್ನು ಉಳಿಸಿಕೊಳ್ಳಬೇಕೆಂದು ಬೇಡಿದನು. ಕೊನೆಗೆ ತನ್ನ ಕಾಮಸಾಮ್ರಾಜ್ಯ ಸರ್ವಸ್ವಭೂತೆಯಾದ ನಲ್ಲಳ ಮುಖವನ್ನು ನೋಡಿ ‘ಮೆಯ್ಗಳೆರಡಾದೊಡಮೇನ್’ ಅಸುವೊಂದೆ ನೋೞ್ಪೊಡೆಂಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನು ಯ್ವಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇೞ್ ಸ್ವಯಂಪ್ರಭೆ’ ಎಂದು ಅಂಗಲಾಚಿದನು. ಆಗ ಆ ಪ್ರಲಾಪವನ್ನು ಕೇಳಿ ಸಾಮಾನಿಕದೇವರು ಬಂದು

ನಿನಗೊರ್ವಂಗಲ್ಲವಸ್ಥಾಂತರಮಮರಜನಕ್ಕೆಲ್ಲಮೀ ಪಾಂಗೆ, ಕಾರು
ಣ್ಯನಿನಾದಂ ನಿನ್ನನಾದಂ ನಗಿಸುಗುಮೆೞೆದುಯ್ವಂತಕಂಗಿಲ್ಲ ದೇವಾಂ
ಗನೆಯರ್ ಮಾಱುಂಪರೇ ಪೇೞು ಜನನ ಮೃತಿ ಜರಾತಂಕ ಶೋಕಾಗ್ನಿಯಂದಾ
ವನುವೀ ಸಂಸಾರದೊಳ್ ಬೇಯದನೊಳನೆ, ಶರಣ್ ಧರ್ಮದಿಂದೊಂದುಮುಂಟೆ ||

‘ಅಘವೈರಿಯಲ್ಲದುೞದಂ ಗೆಲಲಾರ್ಕುಮೆ ಮೃತ್ಯುರಾಜನಂ’ ಎಂದು ಎಚ್ಚರಿಸಲು ಲಲಿತಾಂಗನು ತನ್ನ ಉಳಿದ ಆಯಸ್ಸನ್ನು ಜಿನಾರ್ಚನೆ ಯಲ್ಲಿಯೇ ಕಳೆದು ಶರತ್ಸಮಯದ ಮೋಡದಂತೆ ಕರಗಿ ಉತ್ಪಲಖೇಟರೆಂಬ ಪುರದಲ್ಲಿ ವಜ್ರಬಾಹು ಮತ್ತು ವಸುಂಧರೆಯರಿಗೆ ವಜ್ರಜಂಘನೆಂಬ ಮಗನಾಗಿ ಹುಟ್ಟಿದನು. ಸ್ವಯಂಪ್ರಭೆಯೂ ಇನಿಯನಗಲ್ಕೆಯನ್ನು ಸಹಿಸಲಾರದೆ

ಮದನನ ಕೈದುವೆಲ್ಲಿದನ್, ಅನಂಗನ ಕೈಪೊಡೆಯೆಲ್ಲಿದಂ, ವಿಳಾ
ಸದ ಕಣಿಯೆಲ್ಲಿದಂ, ಚದುರ ಪುಟ್ಟಿದನೆಲ್ಲಿದನೆಲ್ಲಿದಂ, ವಿನೋ
ದದ ಮೊದಲೆಲ್ಲಿದಂ, ಸೊಬಗಿನಾಗರಮೆಲ್ಲಿದನ್, ಇಚ್ಛೆಯಾಣ್ಮನೆ
ಲ್ಲಿದನ್, ಎರ್ದೆಯಾಣ್ಮನೆನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ||

ಎಂದು ಪ್ರಾಣವಲ್ಲಭವಿಯೋಗ ಶೋಕೋದ್ರೇಕವ್ಯಾಕುಳೆಯಾಗಿ ಮಹತ್ತರ ದೇವಿಯರ ಸೂಚನೆಯ ಪ್ರಕಾರ ಮರುಭವದಲ್ಲಿ ಇನಿಯನನ್ನು ಪಡೆಯುವುದಕ್ಕಾಗಿ ಜಿನಪತಿಯನ್ನು ಪೂಜಿಸಿ ಗುರುಪಂಚಕವನ್ನು ನೆನೆದು ಉತ್ಸನ್ನಶರೀರೆಯಾಗಿ ಪುಂಡರೀಕಿಣಿಯಲ್ಲಿ ವಜ್ರದಂತನಿಗೂ ಲಕ್ಷ್ಮಿಮತೀಮಹಾದೇವಿಗೂ ಕಾಮನ ಮಂತ್ರ ದೇವತೆಯಂತೆ ಅತ್ಯಂತ ಸೌಂದರ್ಯದಿಂದ ಕೂಡಿದ ಶ್ರೀಮತಿಯೆಂಬ ಮಗಳಾಗಿ ಹುಟ್ಟಿ ನವಯವ್ವನ ಲಕ್ಷ್ಮಿಯನ್ನು ತಾಳಿದಳು. ಹಿಂದಿನ ಜನ್ಮದ ವಾಸನೆ ಶ್ರೀಮತಿಯೆಂಬ ಮಗಳಾಗಿ ಹುಟ್ಟಿ ನವಯವ್ವನಲಕ್ಷ್ಮಿಯನ್ನು ತಾಳಿದಳು. ಹಿಂದಿನ ಜನ್ಮದ ವಾಸನೆ ಶ್ರೀಮತಿ ವಜ್ರಜಂಘರಿಬ್ಬರನ್ನೂ ಬೆನ್ನಟ್ಟಿ ಬರುತ್ತದೆ. ಇಬ್ಬರೂ ಪರಸ್ಪರ ಸಮಾಗಮಕ್ಕೆ ಹಾತೊರೆಯುತ್ತಾರೆ. ಶ್ರೀಮತಿಯು ತನ್ನ ಹಿಂದಿನ ಜನ್ಮದ ನೆನಪುಗಳನ್ನೆಲ್ಲ ಚಿತ್ರಿಸಿದ್ದ ಚಿತ್ರಪಟದ ಸಹಾಯದಿಂದ ಅವಳ ಸಖಿಯಾದ ಪಂಡಿತೆಯೆಂಬುವಳು ಅವರಿಬ್ಬರನ್ನೂ ಒಟ್ಟುಗೂಡಿಸುತ್ತಾಳೆ. ತಂದೆಯಾದ ವಜ್ರದಂತನು ಮಗಳ ವಿವಾಹವನ್ನು ಅತಿ ವಿಜೃಂಭಣೆಯಿಂದ (ಈ ವಿವಾಹದ ವೈಭವವನ್ನು ಮೂಲದಲ್ಲಿಯೇ ಓದಿ ತೃಪ್ತಿ ಪಡಬೇಕು.)ನಡೆಸಿ ಮಗಳನ್ನು ಅಳಿಯನೊಡನೆ ಕಳುಹಿಸುತ್ತಾನೆ. ಇಲ್ಲಿ ಪಂಪನಿಗೆ ಮಹಾಕವಿ ಕಾಳಿದಾಸನ ಶಾಕುಂತಲದ ನಾಲ್ಕನೆಯ ನಾಲ್ಕು ಶ್ಲೋಕಗಳು ಸ್ಮರಣೆಗೆ ಬರುವುವು. ಅವುಗಳಲ್ಲಿ ಒಂದೆರಡರ ಸಾರವನ್ನು ಬಟ್ಟಿಯಿಳಿಸಿದ್ದಾನೆ. ರಾಜಾರಾಜನಾದ ವಜ್ರದಂತನು ಅಳಿಯನ ಮೊಗವನ್ನು ನೋಡಿ-

ಬಗೆದುಂ ನಿನ್ನವ್ವವಾಯೋನ್ನತಿಯನ್, ಇವಳ ಸ್ನೇಹ ಸಂಬಂಧಮಂ ನೀಂ
ಬಗೆದುಂ, ಸಂದೆಮ್ಮನಣ್ಪಂ ಬಗೆದುಮಱಯದೇನಾನುಮೆಂದಾಗಳುಂ ಮೆ
ಲ್ಲಗೆ ನೀಂ ಕಲ್ಪಿಪ್ಪುದೆಮ್ಮಂ ನೆನೆದೆರ್ದೆಗಿಡದಂತಾಗೆ ಪಾಲಿಪ್ಪುದಿಂತೀ
ಮೃಗಶಾಬೇಕ್ಷಾಕ್ಷಿಯಂ ಮನ್ನಿಸುವುದಿನಿತನಾಂ ಬೇಡಿದೆಂ ವಜ್ರಜಂಘಾ ||

ಎಂದೂ ಲಕ್ಷ್ಮೀಮತಿ ಮಹಾದೇವಿಯು ಪ್ರಿಯಾತ್ಮಜೆಯ ಮುಖವನ್ನು ಅತಿಪ್ರೀತಿಯಿಂದ ನೋಡಿ-

ಮನಮದಂಜಿ ಬೆರ್ಚಿ ಬೆಸಕೆಯ್, ನಿಜವಲ್ಲಭನೇನನೆಂದೊಡಂ
ಕಿನಿಸದಿರ್, ಒಂದಿದಗ್ರಮಹಿಷೀಪದದಲ್ಲಿ ಪದಸ್ಥೆಯಾಗು, ನಂ
ದನರನಗಣ್ಯಪುಣ್ಯಧನರಂ ಪಡೆಯೆಂದಮರ್ದಪ್ಪಿಕೊಂಡು ತ
ತ್ತನುಜೆಯಗಲ್ಕೆಯೊಳ್ ನೆಗಪಿದರ್, ಬಸಮಲ್ಲದ ಬಾಷ್ಪವಾರಿಯಂ ||

ಅಲ್ಲದೆ ಅನಂತ ಸಾಮಂತಾಂತ ಪುರಪುರಿಪರಿವಾರದೊಡನೆ ಕೂಡಿ ಅವರನ್ನು ಸ್ವಲ್ಪ ದೂರ ಕಳುಹಿಸಿ ಬರುವ ಸಂದರ್ಭದಲ್ಲಿ

ಪೊಡವಡುವಪ್ಪಿಕೊಳ್ವ, ನೆನೆಯುತ್ತಿರಿಮೆಂಬ, ಸಮಸ್ತವಸ್ತುವಂ
ಕುಡುವ, ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ, ಬುದ್ಧಿವೇೞ್ವ, ಕೈ
ಯೆಡೆ ನಿಮಗೆಂದೊಡಂಬಡಿಪ, ನಲ್ಲರಗಲ್ಕೆಗೆ ಕಣ್ಣನೀರ್ಗಳಂ
ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್

ಶ್ರೀಮತಿ ವಜ್ರಜಂಘರು ತಮ್ಮೂರನ್ನು ಸೇರಿದರು. ಅತಿವೈಭವದಿಂದ ಅನೇಕ ಸಮಸ್ತ ಭೋಗಗಳನ್ನು ಅನುಭವಿಸಿದರು. ಹೀಗಿರುವಲ್ಲಿ ಒಂದು ದಿನ ರಾತ್ರಿ ಶಯ್ಯಾಗೃಹದಲ್ಲಿ ಈ ದಂಪತಿಗಳು ಮಲಗಿರುವಾಗ ಸೆಜ್ಜೆವಳನು ಕೇಶಸಂಸ್ಕಾರಕ್ಕೆಂದು ಧೂಪಗುಂಡಿಗೆಯಲ್ಲಿ ಅಳವರಿಯದೆ ವಾಸನಾದ್ರವ್ಯವನ್ನಿಕ್ಕಿ ಆ ಸೆಜ್ಜೆವನೆಯ ಗವಾಕ್ಷಜಾಲಗಳನ್ನು ತೆರೆದಿಡಲು ಮರೆತುಬಿಟ್ಟನು. ಇದರ ಹೊಗೆ ಸುತ್ತಿ ಶ್ರೀಮತಿ ವಜ್ರಜಂಘರು ಪ್ರಾಣ ಬಿಟ್ಟರು.

ಮೊದಲೊಳ್ ನೀಳ್ದು ಪೊದೞ್ದು ಪರ್ವಿ ಪದಪಂ ಕೈಕೊಂಡು ಮಂದೈಸಿ ಮಾ
ಣದೆ ತನ್ನಂದದೊಳೇೞ್ಗೆಗುಂದದೆ ನಿರುದ್ಧೋಚ್ಛಾ ಸಮಪ್ಪನ್ನೆಗಂ
ಪುದಿದಾ ದಂಪತಿಯಂ ಪುದುಂಗೊಳಿಸಿ, ಲೋಕಾಶ್ಚರ್ಯವಂ ಮಾಡಿ ಕೊಂ
ದುದು ಕೃಷ್ಣಾಗರುಧೂಪಧೂಮನಿವಹಂ ಕೃಷ್ಣೋರಗಂ ಕೊಲ್ವವೊಲ್ ||

ಭೋಗಾಂಗಮಾಗಿಯುಂ ಕೃ
ಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ
ಭೋಗಿಗಳನಿಂತು ಸಂಸೃತಿ
ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್||

ಅನಿತು ಸುಖದನಿತು ಭೋಗದ
ಮನುಜಯುಗಂ ನೋಡೆ ನೋಡೆ ತತ್‌ಕ್ಷಣದೊಳ್ ತಾ
ನಿನಿತೊಂದು ದೆಸೆಯನೆಯ್ದಿದುದು

ಆದರೂ ‘ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ ಪ್ರಾಣಮನಂದೊಡೆಗಳೆದರ್ ಓಪರೋಪರೊಳೊಡಸಾಯಲ್ ಪಡೆದರ್’ ಇನ್ನಿದಕ್ಕಿಂತ ಭಾಗ್ಯವೇನು ಬೇಕು’?

ಹೀಗೆ ಸಹಮರಣದಿಂದ ಸತ್ತ ಶ್ರೀಮತಿ ವಜ್ರಜಂಘರ ಪ್ರೇಮಸಂಬಂಧ ಮುಂದಿನ ಜನ್ಮದಲ್ಲಿಯೂ ಅನುವರ್ತಿಸುತ್ತದೆ. ಅವರ ಭೋಗಕಾಂಕ್ಷೆಯೂ ಕಡಿಮೆಯಾಗುವುದಿಲ್ಲ. ಪುನ ಭೋಗಭೂಮಿಯಲ್ಲಿಯೇ ಹುಟ್ಟುತ್ತಾರೆ. ಹಿಂದಿನ ಸ್ವಯಂಬುದ್ಧನೇ ಪ್ರೀತಿಂಕರನೆಂಬ ರೂಪದಿಂದ ಬಂದು

ಸೂಕ್ತಂ ಭವ್ಯಜನಪ್ರ
ವ್ಯಕ್ತಂ ಜೈನಾಗಮೋಕ್ತಮಿಂ ನಿನಗೆ ಮದೀ
ಯೋಕ್ತಮಿದೆರ್ದೆಯೊಳ್ ನೆಲಸುಗೆ
ಮುಕ್ತಿ ಶ್ರೀಹಾರವಿಭ್ರಮಂ ಸಮ್ಯಕ್ವಂ ||

ಎಂದೆಂದೊಡಮ್ಮ ನೀನುಂ
ಸಂದಯಮಣಮಲ್ಲದಿದನೆ ನಂಬಿನಿತಂ ನಿ|
ನ್ನೊಂದಿದ ನಾರೀರೂಪದ
ದಂದುಗದೊಳ್ ತೊಡರ್ದು ಬಿಡದೆ ನವೆಯುತ್ತಿರ್ಪೈ ||

ಎಂದು ಪ್ರತಿಬೋಸುತ್ತಾನೆ. ಸಮ್ಯಕ್ತ್ವದ ಮಹಿಮೆಯಿಂದ ಶ್ರೀಮತಿ ವಜ್ರಜಂಘರು ತಮ್ಮ ಭೋಗತೃಷ್ಣೆಯನ್ನು ಕಡಿಮೆಮಾಡಿ ಕೊಂಡು ಬೇರೆ ಬೇರೆ ಜನ್ಮಗಳಲ್ಲಿ ಹುಟ್ಟಿ ತಪಶ್ಚರ್ಯೆಗಳಿಂದಲೂ ವ್ರತೋಪವಾಸಾದಿಗಳಿಂದಲೂ ಸಂಸ್ಕೃತರಾಗಿ ಪೂರ್ಣವಾಗಿ ಭೋಗವಿಮುಖರಾಗುತ್ತಾರೆ. ಕೊನೆಗೆ ವಜ್ರಜಂಘನು ಮಹಾಬಳನಿಂದ ಒಂಬತ್ತನೆಯ ಭವದಲ್ಲಿ ಅಹಮಿಂದ್ರನಾಗಿ ಸರ್ವಾರ್ಥಸಿದ್ಧಿಯೆಂಬ ಸ್ವರ್ಗದಿಂದಿಳಿದು ಬಂದು ತೀರ್ಥಂಕರನಾಗಿ ಜನಿಸಲು ಹದಿನಾಲ್ಕನೆಯ ಮನುವಾದ ನಾಭಿರಾಜನ ಪತ್ನಿಯಾದ ಮರುದೇವಿಯ ಗರ್ಭದಲ್ಲಿ ಸೇರುತ್ತಾನೆ. ತೀರ್ಥಂಕರನುದಯಿಸುವುದನ್ನು ಇಂದ್ರನು ತಿಳಿದು ಅಯೋಧ್ಯಾಪುರವನ್ನು ನಿರ್ಮಿಸಿ ಆರುತಿಂಗಳು ಮುಂಚೆಯೇ ವಸುಧಾರೆಯನ್ನು ಕರೆಯಿಸಿ ದೇವತಾಸ್ತ್ರೀಯರಿಂದ ಜಿನಾಂಬಿಕೆಯ ಗರ್ಭಸಂಶೋಧನವನ್ನು ಮಾಡಿಸಿರುತ್ತಾನೆ. ತೀರ್ಥಂಕರನುದಯಿಸುವನು. ಇಂದ್ರನಿಗೆ ಆಸನಕಂಪವಾಗುವುದು. ಸೌಧರ್ಮೇಂದ್ರನು ಶಚಿಯ ಮೂಲಕ ತಾಯಿಯ ಹತ್ತಿರ ಮಾಯಾಶಿಶುವನ್ನಿಡಿಸಿ ಜಿನಶಿಶುವನ್ನು ಐರಾವತದ ಮೇಲೇರಿಸಿಕೊಂಡು ಹೋಗಿ ಸಕಲಾಮರರೊ ಡನೆ ಮೇರುಪರ್ವತದಲ್ಲಿ ಜನ್ಮಾಭಿಷೇಕವನ್ನು ಮಾಡಿ ಆನಂದನೃತ್ಯವನ್ನು ಮುಗಿಸಿ ಮಗುವನ್ನು ಅಯೋಧ್ಯೆಗೆ ಕರೆದು ತಂದು ತಾಯಿತಂದೆಗಳಿಗೊಪ್ಪಿಸಿ ವೃಷಭಸ್ವಾಮಿಯೆಂದು ಹೆಸರಿಟ್ಟು ತನ್ನ ಲೋಕಕ್ಕೆ ತೆರಳುವನು. ಬಾಲಕನು ಸಹೋತ್ಪನ್ನಮತಿಶ್ರುತಾವಜ್ಞಾನ ಬೋಧನಾದುದರಿಂದ ಪ್ರತ್ಯಕ್ಷೀಕೃತ ಸಕಲವಾಙ್ಮಯನಾಗಿ ಪ್ರತಿದಿನ ಪ್ರವೃದ್ಧಮಾನ ತನೂವಯೋವಿಭವನಾಗಲು ಅವನ ಯವ್ವನವು ಅತಿಮನೋಹರವಾಗುವುದು. ಆದರೂ ಚಂಚಲೆಯಾದ ರಾಜ್ಯಲಕ್ಷ್ಮೀಯಲ್ಲಿಯೂ ಸಾರವಿಲ್ಲದ ಸಂಸಾರದಲ್ಲಿಯೂ ಪರಮನಿಗೆ ಅನಾದರಣೆವುಂಟಾಯಿತು. ಆಗ ತಂದೆಯಾದ ನಾಭಿರಾಜನು ಮಗನ ಪರಿಪೂರ್ಣಯವ್ವನ ಶ್ರೀಯನ್ನು ನೋಡಿ

ಇದು ದಲ್, ಅವಸ್ತುವೆನ್ನದೆ, ಮದುಕ್ತಿಯನೊಯ್ಯನೆ ಕೇಳ್ದು, ದಿವ್ಯಚಿ
ತ್ತದೊಳವಧಾರಿಸೆಂತೆನೆ ಜಗದ್ಗುರು ಲೋಹಿತಾರ್ಥದಿಂದೆ ಸ
ಲ್ವುದು ವಲಮಿಂತಿದಂ ಬಗೆದು ಪುತ್ರಕಳತ್ರಪರಿಗ್ರಹಕ್ಕೆ ಮಾ
ಣದೆ ಬಗೆದರ್ಪುದು, ಒಲ್ಲೆನಿದನೆಂದೊಡೆ ಸೃಷ್ಟಿಯೆ ಕೆಟ್ಟುಪೋಗದೇ ||

ಶಾಂತಾತ್ಮ ಮದುವೆನಿಲ್ ನೀ
ನಿಂತೆನ್ನ ಗೃಹಸ್ಥ ಧರ್ಮದಿಂದಂ ನೀನೆಂ
ತಂತೆ ಸಲೆ ನೆಗೞೆ ಜಗತೀ
ಸಂತಿತಿ ನಿನ್ನ ಧರ್ಮಸಂತತಿ ನಿಲ್ಕುಂ ||

ಎಂದು ಒತ್ತಾಯಪಡಿಸಲು ಆತನ ಉಪರೋಧಕ್ಕಾಗಿಯೂ ಪ್ರಜಾನುಗ್ರಹಕ್ಕಾಗಿಯೂ ಯಶಸ್ವತೀ ಮತ್ತು ಸುನಂದೆ ಎಂಬ ಎರಡು ಕನ್ಯಾರತ್ನಗಳನ್ನು ಪುರುದೇವನುವರಿಸುವನು. ಮೊದಲನೆಯವಳಲ್ಲಿ ಭರತನೂ ಬ್ರಹ್ಮಿಯೂ ಎರಡನೆಯವಳಲ್ಲಿ ಬಾಹುಬಲಿ ಸೌಂದರಿಯರಲ್ಲದೆ ಒಟ್ಟು ನೂರುಪುತ್ರರೂ ಇಬ್ಬರು ಪುತ್ರಿಯರೂ ಜನಿಸಿದರು. ವೃಷಭನಾಥನು ಇವರೆಲ್ಲರಿಗೂ ಮತ್ತು ಇತರರಿಗೂ ಸಮಸ್ತ ವಿದ್ಯೆಗಳನ್ನು ಉಪದೇಶ ಮಾಡಿ ಕೃತಯುಗವನ್ನು ಪ್ರಾರಂಭಿಸಿ ರಾಜ್ಯಾಭಿಷಿಕ್ತನಾಗಿ ವಿವಿಧ ರಾಜವಂಶಗಳನ್ನು ಸ್ಥಾಪಿಸಿ ಅನೇಕ ಸಹಸ್ರವರ್ಷಗಳ ಕಾಲ ಆಳಿ ಭೂಮಂಡಲದಲ್ಲಿ ಸಕಲ ಸಂಪತ್ಸಮೃದ್ಧಿಯನ್ನುಂಟು ಮಾಡಿದನು. ಆಗ ಆದಿದೇವನ ಪರಿನಿಷ್ಕ್ರಮಣ ಕಾಲ ಪ್ರಾಪ್ತವಾಯಿತು. ಇದನ್ನರಿತು ದೇವೇಂದ್ರನು ಸಂಗೀತ ಮತ್ತು ನೃತ್ಯಪ್ರಸಂಗದಿಂದ ಪ್ರತಿಬೋಸಲು ಸಕಲ ದೇವಾನೀಕದ ಜೊತೆಯಲ್ಲಿ ಬಂದು ಪರಮನ ಅಪ್ಪಣೆಯನ್ನು ಪಡೆದು ದೇವಗಣಿಕೆಯಾದ ತನ್ನಿಂದ ನಿಚ್ಚವೂ ಮೆಚ್ಚನ್ನು ಪಡೆಯುತ್ತಿರುವ ನೀಳಾಂಜ ನೆಯೆಂಬುವಳ ನೃತ್ಯಕ್ಕೆ ಏರ್ಪಡಿಸಿದನು. ಇಲ್ಲಿ ಪಂಪನ ಕೈವಾಡ ಅತ್ಯದ್ಭುತವಾಗಿದೆ. ಇಂತಹ ಚಿತ್ರ ಅಖಂಡ ಕನ್ನಡ ಸಾಹಿತ್ಯದಲ್ಲಿ ಅತಿ ವಿರಳ. ಇದನ್ನು ‘ಆದಿಪುರಾಣ’ದ ಸಾರವೆನ್ನಬಹುದು.

ಮದನನ ಬಿಲ್ಲೊಳಮಾತನ
ಸುದತಿಯ ಬೀಣೆಯೊಳಮೆಸೆವ ದನಿಯುಮನಿಱಸಿ
ತ್ತಿದು ದಲ್, ಎನಿಸಿದುದು, ಸುರತೂ
ರ್ಯದ ರವದೊಳ್ ಪುದಿದ ಸುರವಧೂಗೀತರವಂ ||

ಅಮರ್ದಿನ ಮೞೆಯೊಳಗೆಸೆದಪು
ದಮೃತಾಂಬುನಿನದಮೆನಿಸಿ ಸಬೆಯಿನಹೋ ಗೀ
ತಮಹೋ ವಾದಿತಮೆನಿಸಿದು
ದಮರೀಜನಗೀತಮಮರವಾದಿತಮಾಗಳ್||

ಕಲಗೀತಂ ವಾದ್ಯಂ ನೃತ್ಯ
ಲೀಲೆ ಪೆಱರ್ಗೊಪ್ಪದೀಕೆಗಲ್ಲದೆ…
ಎನಿಸಿದ ನೀಲಾಂಜನೆ ಕ
ರ್ಬಿನ ಬಿಲ್ಲಂ ಮಸೆದ ಮದನನಲರ್ಗಣೆ ಬರ್ದುಕಿ
ತ್ತೆನಿಸುತ್ತೊಳಪೊಕ್ಕಳ್ ಭೋಂ
ಕನೆ ನಿಖಿಲಜನಾಂತರಂಗಮಂ ರಂಗಮುಮಂ ||

ರಸ ಭಾವಾನುನಯಂಗಳ್
ಪೊಸವೆ, ಪುಗಿಲ್ ಪೊಸವೆ, ಚೆಲ್ಲಿಗಳ್ ಪೊಸವೆ, ನಯಂ
ಪೊಸವೆ, ಕರಣಂಗಳುಂ ನಿ
ಪ್ಪೊಸವೆನೆ ಪೊಸಯಿಸಿದಳಾಕೆ ನಾಟಾಗ್ಯಮಮಂ ||

ಕುಡುಪುಂ ಕಯ್ಯುಂ ಜತಿಯೊಳ್
ತಡವಡವರೆ ವಾದಕಂಗೆ ಪುರ್ವಿಂ ಜತಿಯಿಂ
ತೊಡರದೆ ನಡೆಯಿಸಿ ಪುರ್ವನೆ
ಕುಡುಪೆನೆ ನರ್ತಕಿಯ ಸಭೆಗೆ ವಾದಕಿಯಾದಳ್ ||

ಸುರಗಣಿಕಾನಾಟ್ಯರಸಂ
ಪರಮನ ಚಿತ್ತಮುಮನೆಯ್ದೆ ರಂಜಿಸಿದುದು ವಿ
ಸುರಿತಸಟಿಕಂ ಶುದ್ಧಾಂ
ತರಂಗಮೇನನ್ಯರಾಗದಿಂ ರಂಜಿಸದೇ ||

ಆದರೇನು ? ಆ ಮಧುರಾಕಾರೆಗೂ ಆಯುರಂತವು ತಲೆದೋರಿತು. ಮಿಂಚಿನ ಹಾಗೆ ಇದ್ದಕ್ಕಿದ್ದ ಹಾಗೆಯೇ ಅದೃಶ್ಯಳಾದಳು. ಒಡನೆಯೇ ಇಂದ್ರನು ರಸಭಂಗಭಯದಿಂದ ಅವಳಂತೆಯೇ ಇದ್ದ ಮತ್ತೊಬ್ಬಳನ್ನು ಒಬ್ಬರಿಗೂ ತಿಳಿಯದಂತೆ ಏರ್ಪಡಿಸಿದನು. ಸಭೆಯವರೆಲ್ಲರೂ ನೀಳಾಂಜನೆಯೇ ಅಭಿನಯಿಸುತ್ತಿರುವಳೆಂದು ಭ್ರಾಂತಿಯಿಂದ ನೋಡುತ್ತಿದ್ದರು. ಆದರೆ ವಿದ್ಯಾನಿಳಯನಾದ ಪುರುದೇವನು ತಕ್ಷಣ ಅದನ್ನರಿತು ದೇಹಾನಿತ್ಯತೆಗೆ ಆಶ್ಚರ್ಯಪಟ್ಟು

ನಾರೀರೂಪದ ಯಂತ್ರಂ
ಚಾರುತರಂ ನೋಡೆನೋಡೆ ಕರಗಿದುದೀ ಸಂ
ಸಾರದನಿತ್ಯತೆ ಮನದೊಳ್
ಬೇರೂಱದುದೀಗಳಿಂತಿದಂ ಕಡೆಗಣಿಪೆಂ ||

ಕೋಟಿ ತೆಱದಿಂದಮೆಸೆವೀ
ನಾಟಕಮಂ ತೋಱ ಮಾಣ್ದಳಿಲ್ಲಳ್ ಬಗೆಯೊಳ್
ನಾಟುವಿನಮಮರಿ, ಸಂಸೃತಿ
ನಾಟಕಮುಮನೆನಗೆ ನೆಯೆ ತೋದಳೀಗಳ್
ತನು ರೂಪ ವಿಭವ ಯವ್ವನ
ಧನ ಸೌಭಾಗ್ಯಯುರಾದಿಗಳ್ಗೆಣೆ ಕುಡುಮಿಂ
ಚಿನ ಪೊಳಪು ಮುಗಿಲ ನೆೞಲಿಂ
ದ್ರನ ಬಿಲ್ ಬೊಬ್ಬುಳಿಕೆಯುರ್ವು ಪರ್ವಿದ ಭೋಗಂ ||

ಕಷ್ಟಂ ದುಖಾನಿಲಪರಿ
ಪುಷ್ಪಂ ಚಿ ಗತಿಚತುಷ್ಟಯಂ ಪ್ರಾಣಿಗೆ ಸಂ
ತುಷ್ಟತೆಯನೆಯ್ದೆ ಪಡೆದುದ
ಭೀಷ್ಟಸುಖಪ್ರದಮದೊಂದೆ ಮುಕ್ತಿಸ್ಥಾನಂ ||

ಎಂದು ಸಂಸಾರ ಶರೀರ ಭೋಗ ವಿರಕ್ತಾಂತರಂಗನಾಗಿ ವಸುಂಧರಾ ರಾಜ್ಯವಿಮೋಹಮೆಂಬ ನಿಗಳವನ್ನು ಪರಿದು ಅಯೋಧ್ಯಾ ಪೌದನಪುರಗಳಲ್ಲಿ ಭರತಬಾಹುಬಲಿಗಳನ್ನಿರಿಸಿ ವೃಷಭನಾಥನು ತಾನು ತಪೋರಾಜ್ಯದಲ್ಲಿ ನಿಂತನು. ಇತ್ತ ಭರತನು ಜಗತೀರಾಜ್ಯದಲ್ಲಿ ನಿಂತನು. ಪುರುದೇವನಿಗೆ ಕೇವಲ ಜ್ಞಾನೋತ್ಪತ್ತಿಯಾಯಿತು. ಭರತನಿಗೆ ಆಯುಧಶಾಲೆಯಲ್ಲಿ ಚಕ್ರರತ್ನದ ಉತ್ಪತ್ತಿಯೂ ಭರತನ ಪತ್ನಿಯಾದ ಮಹಾದೇವಿಗೆ ಪುತ್ರರತ್ನದ ಉತ್ಪತ್ತಿಯೂ ಏಕಕಾಲದಲ್ಲುಂಟಾದುವು. ಭರತ ಬಾಹುಬಲಿಗಳು ಪುರುಪರಮೇಶ್ವರನಲ್ಲಿಗೆ ಬಂದು ತತ್ವೋಪದೇಶವನ್ನು ಪಡೆದರು. ಬ್ರಹ್ಮಿಯೂ ಸೌಂದರಿಯೂ ದೀಕ್ಷೆಗೊಂಡರು. ಆದಿದೇವನ ಸಮವಸರಣ, ತದಂಗವಾದ ಭಗವದ್ವಿಹಾರ, ಜಗತ್ತಿಗೆ ಧರ್ಮವರ್ಷ-ಒಂದಾದ ಮೇಲೊಂದು ಸಾಂಗವಾಗಿ ನಡೆದುವು.

ಇನ್ನು ಭರತ ಚಕ್ರವರ್ತಿಯು ಚಕ್ರಪೂಜೆ ಷಟ್ಖಂಡಮಂಡಳವನ್ನು ಜಯಿಸಲು ದಿಗ್ವಿಜಯಕ್ಕೆ ಹೊರಡುವನು. ಇಲ್ಲಿ ಪಂಪನು ಕಾವ್ಯ ಧರ್ಮದ ಮರ್ಮವನ್ನು ಪ್ರಕಾಶಿಸಲು ತನ್ನ ಸರ್ವಸ್ವವನ್ನೂ ವ್ಯಯಮಾಡಿದ್ದಾನೆ. ಶರತ್ಕಾಲ, ಪ್ರಸ್ಥಾನಭೇರಿ, ಅಂತಪುರಸ್ತ್ರೀವಿಭ್ರಮ, ವಾರನಾರೀವಿಳಾಸ, ಆರೋಗಣೆಯ ವೈಭವ, ತಾಂಬೂಲ ಚರ್ವಣದ ಬೆಡಗು, ಚತುರಂಗಸೈನ್ಯದ ವಿಸ್ತಾರ, ಮಂದಾನಿಳದ ಮಾಧುರ್ಯ, ಗಂಗಾ ನದಿಯ ಸೌಂದರ್ಯ, ತತ್ತೀರಪ್ರದೇಶದ ವನವಿಹಾರ, ಪುಷ್ಪಾಪಚಯ, ಗಾನಲಹರಿ, ಲತಾನರ್ತನ, ಜಲಕ್ರೀಡೆ, ಸೂರ್ಯಾಸ್ತ, ಸಂಧ್ಯಾರಾಗ, ಚಂದ್ರೋದಯ, ಕೌಮುದೀ ಮಹೋತ್ಸವ, ಚಂದ್ರಿಕಾವಿಹಾರ, ಸುಖಶಯನ, ಪ್ರಭಾತ ಕೃತ್ಯ, ಮೊದಲಾದವುಗಳ

ವರ್ಣನೆಗಳು ಒಂದಾದ ಮೇಲೊಂದು ಕಣ್ಣೆದುರಿಗೆ ನುಸುಳಿ ಹೃದಯವನ್ನು ಸೂರೆಗೊಂಡು ವಾಚಕರನ್ನು ಬೇರೊಂದು ಪ್ರಪಂಚಕ್ಕೆ ಸೆಳೆಯುತ್ತವೆ.

ಭರತ ಚಕ್ರವರ್ತಿಯು ಮುಂದೆ ನಡೆದು ಷಟ್ಖಂಡಮಂಡಳವನ್ನು ಚಕ್ರದ ಸಹಾಯದಿಂದ ಅನಾಯಾಸವಾಗಿ ಗೆದ್ದು ಗರ್ವೋದ್ದೀಪಿತನಾಗಿ ವೃಷಭಾದ್ರಿಗೆ ನಡೆದು ಅದರ ನೆತ್ತಿಯಲ್ಲಿ ತನ್ನ ‘ವಿಶ್ವವಿಶ್ವಂಭರಾವಿಜಯ’ ಪ್ರಶಸ್ತಿಯನ್ನು ಕೆತ್ತಿಸಲು ಆಸೆಯಿಂದ ನೋಡಲಾಗಿ

ಅದೞೊಳನೇಕ ಕಲ್ಪ ಶತಕೋಟಿಗಳೊಳ್ ಸಲೆಸಂದ ಚಕ್ರಿವೃಂ
ದದ ಚಲದಾಯದಾಯತಿಯ ಬೀರದ ಚಾಗದ ಮಾತುಗಳ್ ಪೊದ
ೞ್ದೊದವಿರೆ ತತ್ಪ್ರಶಸ್ತಿಗಳೊಳಂತವನೊಯ್ಯನೆ ನೋಡಿನೋಡಿ ಸೋ|
ರ್ದುದು ಕೊಳೆಗೊಂಡ ಗರ್ವರಸಮಾ ಭರತೇಶ್ವರಚಕ್ರವರ್ತಿಯಾ ||

ಅವನ ಗರ್ವಮೇರುವು ಚೂರ್ಣೀಕೃತವಾಯಿತು. ಆದರೂ ಸಾಂಪ್ರದಾಯಕವಾಗಿ ಹಿಂದಿನ ದೊರೆಗಳಲ್ಲೊಬ್ಬನ ಪ್ರಶಸ್ತಿಯನ್ನು ತನ್ನ ದಂಡದಿಂದ ಸೀಂಟಿ ಕಳೆದು ಅಲ್ಲಿ ತನ್ನದನ್ನು ಬರೆಸಿ ಮುಂದೆ ಅಯೋಧ್ಯಾಭಿಮುಖವಾಗಿ ನಡೆದನು.

ಅಯೋಧ್ಯೆಯ ಬಾಗಿಲಲ್ಲಿ ಆತನ ಚಕ್ರರತ್ನ ನಿಂತು ಬಿಟ್ಟನು. ಭರತನಿಗೆ ಆಶ್ಚರ್ಯವಾಯಿತು. ಪುರೋಹಿತರನ್ನು ಕರೆದು ಕಾರಣವನ್ನು ಕೇಳಲು ಹೊರಗಿನ ಸಮಸ್ತರನ್ನು ಗೆದ್ದರೂ ಒಳಗಿರುವ ಆತನ ತಮ್ಮಂದಿರು ಅನವಾಗದಿದ್ದುದರಿಂದ ಜೈತ್ರಯಾತ್ರೆ ಪೂರ್ಣವಾಗಲಿಲ್ಲವೆಂದು ತಿಳಿಸಿದರು. ವಿಜಯೋನ್ಮತ್ತನಾದ ಚಕ್ರವರ್ತಿಗೆ ಅವರನ್ನು ಗೆಲ್ಲಬೇಕೆಂಬ ತವಕ. ತನಗೆರಗಬೇಕೆಂದು ಅವರಿಗೆ ಹೇಳಿಕಳುಹಿಸಿದ. ದೂತನ ನುಡಿಯನ್ನು ಕೇಳಿದ ಅವರು

ಪಿರಿಯಣ್ಣಂ, ಗುರು, ತಂದೆಯೆಂದೆಱಗುವಂ ಮುನ್ನೆಲ್ಲಂ, ಇಂತೀಗಳಾ
ಳರಸೆಂಬೊಂದು ವಿಭೇದಮಾದೊಡೆಱಕಂ ಚಿ ಕಷ್ಟಮಲ್ತೇ ವಸುಂ
ಧರೆಗಯ್ಯಂ ದಯೆಗೆಯ್ಯೆ ಮುಂ ಪಡೆದುದರ್ಕಿಂತೀತನೊಳ್ ತೊಟ್ಟ ಕಿಂ
ಕರಭಾವಂ ನಮಗಕ್ಕಿಗೊಟ್ಟು ಮಡುಗೂೞುಣ್ಬಂದಮಂ ಪೋಲದೇ ||

ಎಂದು ಜುಗುಪ್ಸೆಗೊಂಡು ರಾಜ್ಯತ್ಯಾಗ ಮಾಡಿ ತಂದೆಯಲ್ಲಿಗೆ ಹೋಗಿ ದೀಕ್ಷೆಯನ್ನು ಪಡೆದರು. ಇದನ್ನು ಕೇಳಿಯೂ ಭರತನಿಗೆ ವಿವೇಕವುಂಟಾಗಲಿಲ್ಲ. ‘ಎನ್ನ ತೇಜಸುರಿತಕ್ಕೆ ಸೆಣಸಿನೊಳ್ ಮಾಱುರಿಗುಂ ಸೈರಿಸದು ತೇಜಮಾ ಭುಜಬಲಿಯಾ’ ‘ಸಾಮದಿಂದಳವಡಿಸಿ ನೋಡುವೆಂ, ಸಾಮದೊಳಂ ಪದವಡದೊಡೆ ಬೞಕಿರ್ದಪುದಲ್ತೆ ಪದವಡಿಸಲೆನ್ನ ಬಯಕೆಯಂ ದಂಡಂ’ ಎಂದು ನಿಶ್ಚಯಿಸಿ ಬುದ್ಧಿವೃದ್ಧನೂ ವಯೋವೃದ್ಧನೂ ಆದ ಮಹತ್ತರನ ಕೈಯಲ್ಲಿ ಲೇಖವನ್ನು ಅಟ್ಟಿದನು. ಲೇಖವನ್ನು ನೋಡಿದ ಬಾಹುಬಲಿಯ ಕೋಪಗರ್ಭಸ್ಮಿತನಾಗಿ

ಪಿರಿಯಣ್ಣಂಗೆಱಗುವುದೇಂ
ಪರಿಭವವೇ ಕೀಱ ನೆತ್ತಿಯೊಳ್ ಬಾಳಂ ನಿ
ರ್ನೆರಮೂಱ ಚಲನೆದಿಱಗಿಸ
ಲಿರೆ ಭರತಂಗೆಱಗುವೆಱಕಮಂಜಮೆಯಲ್ತೇ||

ಭರತಂ ಷಡ್ಖಂಡಭೂವಲ್ಲಭನೆನೆ ಸಿರಿಯಂ ಗೆಂಟಳ್ ಕೇಳ್ದು ರಾಗಂ
ಬೆರಸಿರ್ಪೀ ನಣ್ಪೆ ಸಾಲ್ಗುಂ, ಕರೆದೊಡೆ ಬೆಸನೇನೆಂಬ ಜೀಯೆಂಬ ದೇವೆಂ
ಬರಸೆಂಬಾಳೆಂಬ ದೈನ್ಯಕ್ಕೆಲವೊ ತನುವನಾನೊಡ್ಡುವಂತಾದಿದೇವಂ
ಪುರುದೇವಂ ದೇವದೇವಂ ಕುಡೆ ಪಡೆದ ನೆಲಕ್ಕಾರೊಳಂ ಪಂಥಮುಂಟೇ ||

‘ತಾ ಚಕ್ರೇಶನಾದೊಡಂ ತನ್ನಾಕ್ರಮಣಮನೆನ್ನೊಳೇಕೆ ಕೆಮ್ಮನೆ ತೋರ್ಪಂ, ಆಜಿಗೆ ಬಂದೊಡ್ಡಲ್ಕೆ ಪೇಳ್, ಸಂಗರನಿಕಷದೊಳೆಮ್ಮಂದಮಂ ನೀನೆ ಕಾಣ್ಬೆ .’ ಎಂದು ಹೇಳಿ ಕಳುಹಿಸಿ ಬಿಟ್ಟನು. ಭರತನ ಸಭಾಸದರು ‘ಷಡ್ಖಂಡಭೂಮಂಡಲ ಮೆರಗಿದುದೇ ಸಾಲ್ಗುಂ ನಿನ್ನ ತಮ್ಮಂ ನಿನಗೆಱಗಂ, ಈ ಆಕ್ಷೇಪಮಂ ಮಾಣ,’ ಎಂದು ಎಷ್ಟು ಹೇಳಿದರೂ ಕೇಳದೆ ಭರತನು ‘ಎಮ್ಮ ದಾಯಾದನುಂ ಕೋಪದಿನೆನ್ನೊಳ್ ಕಾದಲೆಂದು ಬರಿಸಿದ ಸಮರಾಟೋಪದಿಂ ನಿಂದೊಡಂ ಮಾಣ್ಬುದು ಸೂೞಲ್ತು, ಎಮ್ಮ ಸಾಪತ್ನನ ಭುಜಬಲಮಂ ನೋೞ್ಪಂ’ ಎಂದು ಯುದ್ಧವನ್ನೇ ನಿಶ್ಚಯಿಸಿದನು. ಘೋರಸಂಗ್ರಾಮಕ್ಕೆ ಸಿದ್ಧತೆಗಳಾದುವು. ಆಗ ಮಂತ್ರಿಮುಖ್ಯರು ಚರಮದೇಹಧಾರಿಗಳಾದ ಇವರ ಯುದ್ದದಲ್ಲಿ ಅನೇಕ ಪ್ರಜಾನಾಶವಾಗುವುದರಿಂದ ಅದನ್ನುಳಿದು ಧರ್ಮಯುದ್ಧಗಳಾದ ದೃಷ್ಟಿಯುದ್ದ, ಜಲಯುದ್ಧ ಮತ್ತು ಬಾಹುಯುದ್ಧಗಳಲ್ಲಿ ಅಣ್ಣತಮ್ಮಂದಿರು ತಮ್ಮ ಜಯಾಪಜಯಗಳನ್ನು ನಿಷ್ಕರ್ಷಿಸಿಕೊಳ್ಳಬೇಕೆಂದು ಪ್ರಾರ್ಥಿಸಿಕೊಂಡರು. ಅದಕ್ಕೆ ಇಬ್ಬರೂ ಒಪ್ಪಿದರು. ದೃಷ್ಟಿಜಲ ಯುದ್ಧಗಳಲ್ಲಿ ಬಾಹುಬಲಿಗೇ ನಿರಾಯಾಸವಾಗಿ ಜಯ ಲಭಿಸಿತು. ಬಾಹುಯುದ್ಧದಲ್ಲಿ ಬಾಹುಬಲಿಯ ಅಣ್ಣನನ್ನು ಒಂದೇ ಸಲ ಮೇಲಕ್ಕೆತ್ತಿ ಬಡಿಯುವಷ್ಟರಲ್ಲಿ ವಿವೇಕಯುತನಾಗಿ

ಭರತಾವನೀಶ್ವರಂ, ಗುರು
ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರನೀ
ದೊರೆಯನುಮಳವೞ ವಸುಂ
ಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ

ಎಂದು ನಿಧಾನವಾಗಿ ಕೆಳಕ್ಕಿಳಿಸಿದನು. ಭರತನಿಗೆ ಕೋಪವು ಮೇರೆಮೀರಿತು. ತಮ್ಮನ ಮೇಲೆ ಚಕ್ರವನ್ನೇ ಪ್ರಯೋಗಿಸಿ ಬಿಟ್ಟನು. ಚಕ್ರವು ಆತನಿಗೆ ಸ್ವಲ್ಪವೂ ಘಾತ ಮಾಡದೆ ಆತನನ್ನು ಮೂರು ಪ್ರದಕ್ಷಿಣೆ ಮಾಡಿ ಅವನ ಬಲಪಾರ್ಶ್ವದಲ್ಲಿ ನಿಂತಿತು. ದೇವಲೋಕದಿಂದ ಪುಷ್ಪವೃಷ್ಟಿಯಾಯಿತು. ಭರತನು ಮಾಡಬಾರದುದನ್ನು ಮಾಡಿದನೆಂದು ಹೇಳುತ್ತಿದ್ದ ಕುಲವೃದ್ಧರ ಮಾತುಗಳು ಭರತನನ್ನು ನಾಚಿಸಿದುವು. ಭರತನು ತಲೆತಗ್ಗಿಸಿ ನಿಂತುಕೊಂಡನು. ಆಗ ಬಾಹುಬಲಿಗೆ ಅದ್ಭುತವಾದ ವೈರಾಗ್ಯವು ತಲೆದೋರಿತು.

ಸೋದರರೊಳ್ ಸೋದರರಂ
ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು
ತ್ಪಾದಿಸುವುದು ಕೋಪಮನ್ ಅಳ
ವೀ ದೊರತೆನೆ ತೊಡರ್ವುದೆಂತು ರಾಜ್ಯಶ್ರೀಯೊಳ್

ಕಿಡುವೊಡಲ ಕಿಡುವ ರಾಜ್ಯದ
ಪಡೆಮಾತುಗೊಳಲ್ಕಮೆನ್ನ ಮೆಯ್ಯಗಿದಪುದೀ
ಗಡೆ ಜೈನದೀಕ್ಷೆಯಂ ಕೊಂ
ಡಡಿಗೆಱಗಿಸುವೆಂ ಸಮಸ್ತಸುರಸಮುದಯಮಂ ||

ಎಂದು ನಿಶ್ಚಯಿಸಿ ಅಣ್ಣನನ್ನು ಕುರಿತು ‘ನೆಲಸುಗೆ ನಿನ್ನ ವೃಕ್ಷದೊಳ್ ನಿಶ್ಚಲಮಾ ರಾಜ್ಯಲಕ್ಷ್ಮಿ,’ ‘ಭೂವಲಯಮನಯ್ಯನಿತ್ತುದಮಾಂ ನಿನಗಿತ್ತೆಂ ನೀನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ’ ಎಂದು ವಿಜ್ಞಾಪಿಸಿ ತಪಸ್ಸಿಗೆ ಹೊರಟು ತಂದೆಯಾದ ಆದಿದೇವನ ಸಮೀಪಕ್ಕೆ ಬಂದು ನಮಸ್ಕರಿಸಿ ‘ಹಿಂದೆ ಯುವರಾಜ ಪದವಿಯನ್ನು ದಯಪಾಲಿಸಿದ್ದಿರಿ; ಈಗ ಅಭ್ಯುದಯಕರವಾದ ಪ್ರವ್ರಜ್ಯದ ಪದವಿಯ ಯುವರಾಜ ಪದವಿಯನ್ನು ದಯಪಾಲಿಸಿ ಎಂದು ಪ್ರಾರ್ಥಿಸಿ ಪಡೆದು ಘೋರತಪಸ್ಸಿನಲ್ಲಿ ನಿರತನಾದನು. ಆದರೂ ಬಾಹುಬಲಿಯ ಮನಸ್ಸಿನಲ್ಲಿ ತಾನು ಭರತನ ನೆಲದಲ್ಲಿ ನಿಂತಿರುವೆನೆಂಬ ಚಿಂತೆಯಿಂದ ಶಾಂತಿಯುತ್ಪನ್ನವಾಗಿರಲಿಲ್ಲ. ಅದನ್ನರಿತು ಭರತನೇ ಬಂದು ‘ಈ ನೆಲನೀನೆನಗಿತ್ತ ನೆಲ, ನಿನ್ನದೇ ವಿನಾ ನನ್ನದಲ್ಲ’ ಎಂದು ಭಕ್ತಿಪೂರ್ವವಾಗಿ ತಿಳಿಸಿದ ಮೇಲೆ ಶಾಂತಚಿತ್ತನಾಗಿ ತಪೋನಿಷ್ಠನಾದನು.

ಭರತನ ಬಾಹುಬಲದ ಆಡಂಬರವೆಲ್ಲಿ ! ಬಾಹುಬಲಿಯ ವೈರಾಗ್ಯದ ವೈಭವವೆಲ್ಲಿ ! ಧರ್ಮಚಕ್ರದ ದಿಗ್ವಿಜಯದ ಮುಂದೆ ಚಕ್ರವರ್ತಿಯ ದಿಗ್ವಿಜಯ ಮುಂದೆ ಚಕ್ರವರ್ತಿಯ ದಿಗ್ವಿಜಯ ಬೊಬಳಿಕೆ; ನಿಸ್ಸಾರ. ಮುಂದೆ ಭರತನು ಅನೇಕ ಕಾಲ ರಾಜ್ಯವಾಳುತ್ತಾನೆ. ವಿಪ್ರವರ್ಣವನ್ನು ಸ್ಥಾಪಿಸಿ ಅವರ ಕರ್ಮಾದಿಗಳನ್ನು ನಿಷ್ಕರ್ಷೆ ಮಾಡುತ್ತಾನೆ. ಆದರೂ ಜೈನಧರ್ಮದ ಅವನತಿಯ ಅರಿವಾಗುತ್ತದೆ. ಅಷ್ಟರಲ್ಲಿ ಆದಿತೀರ್ಥಂಕರನ ಪರಿನಿರ್ವಾಣಕಲ್ಯಾಣ ಸಮೀಪಿಸುತ್ತದೆ. ಭರತನು ಅಲ್ಲಿಗೆ ಹೋಗಿ ಜಿನಸ್ತೋತ್ರ ಮಾಡುತ್ತಾನೆ. ಧರ್ಮದ ಸಾರವನ್ನು ತಿಳಿಯುತ್ತಾನೆ. ವಿಯೋಗಾಗ್ನಿಯಿಂದ ಬೇಯುತ್ತಿರುವ ಭರತನನ್ನು ವೃಷಭಸೇನಾಗ್ರಹಣಿಗಳು ಸಮಾಧಾನ ಮಾಡುತ್ತಾರೆ. ಭರತನು ತನ್ನ ರಾಜ್ಯವನ್ನು ತ್ಯಜಿಸಿ ತಪೋನಿರತನಾಗಿ ಮೋಕ್ಷಲಕ್ಷ್ಮೀಪತಿಯಾಗುತ್ತಾನೆ.

ಇದುವರೆಗಿನ ಒಂದು ವಿಹಾರವಿಮರ್ಶೆಯಿಂದ ಪಂಪನ ಕೈಚಳಕ ಯಥೋಚಿತವಾಗಿ ಅರ್ಥವಾಗುತ್ತದೆ. ಧರ್ಮ ಮತ್ತು ಕಾವ್ಯ ಧರ್ಮಗಳ ಮೇಳನ ಪರಿಸುಟವಾಗುತ್ತದೆ. ಜೈನರಿಗೆ ಅಲ್ಲದೇ ಜೈನೇತರರಿಗೂ ಅದರ ಸೊಬಗು ಮನವರಿಕೆಯಾಗುತ್ತದೆ. ಆದಿಪುರಾಣದಲ್ಲಿ ಪಂಪನು ಮಾಣಿಕ್ಯ ಜಿನೇಂದ್ರ ಬಿಂಬವನ್ನು ಕಡೆದು ದಿವ್ಯಚೈತ್ಯವನ್ನು ಕಟ್ಟಿರುವುದು ನಿಜ. ಅದಕ್ಕಿಂತಲೂ ಸಾಹಿತ್ಯೋಪಾಸಕರಿಗೆ ಆತನು ನಿರ್ಮಿಸಿರುವ ಭವ್ಯರಸಮಂದಿರಗಳು ಚಿರಸ್ಥಾಯಿಯಾಗಿ ಸರ್ವಾದರಣೀಯವಾಗಿವೆ. ಇದನ್ನೇ ಪಂಪನು ಮುಂದಿನ ಪದ್ಯಗಳಲ್ಲಿ ಬಹು ಸ್ವಾರಸ್ಯವಾಗಿಯೂ ವಿಸ್ತಾರವಾಗಿಯೂ ವಿಶದಪಡಿಸಿದ್ದಾನೆ.

ಪಂಪಭಾರತ : ಇದು ಪಂಪನ ದ್ವಿತೀಯ ಕೃತಿ. ಇದಕ್ಕೆ ವ್ಯಾಸ ಮಹಾಮುನಿಯ ಸಂಸ್ಕ ತ ಮಹಾಭಾರತವೇ ಮೂಲವೆಂಬುದು ಅವನೇ ಹೇಳಿಕೊಂಡಿರುವ ‘ವ್ಯಾಸಮುನೀಂದ್ರ ರುಂದ್ರವಚನಾಮೃತರ್ವಾಯನೀಸುವೆಂ’ ಎಂಬ ವಾಕ್ಯದಿಂದಲೇ ಪ್ರತಿಪಾದಿತವಾದರೂ ಪಂಪನ ಕಾಲಕ್ಕೆ ಹಿಂದೆ ಕೆಲವು ಕನ್ನಡ ಭಾರತಗಳಿದ್ದು ಅವು ಪಂಪನ ಮೇಲೆ ಪ್ರಭಾವ ಬೀರಿರಬಹುದೆಂದು ಊಹಿಸಬಹುದಾಗಿದೆ. ನಾಗವರ್ಮನ ‘ಕಾವ್ಯಾವಲೋಕನ’ದಲ್ಲಿ ಲಕ್ಷ್ಯವಾಗಿ ಕೊಟ್ಟಿರುವ ಕೆಲವು ಪದ್ಯಗಳು ಯಾವುದೋ ಕನ್ನಡ ಭಾರತದಿಂದ ಉದ್ಧರಿಸಲ್ಪಟ್ಟುದಾಗಿ ಕಾಣುತ್ತದೆ. ಅಲ್ಲದೆ ಪಂಪನೇ ‘ಮುಂ ಸಮಸ್ತ ಭಾರತಮನಪೂರ್ವಮಾಗೆ ಪೇೞ್ದ ಕವೀಶ್ವರರಿಲ್ಲ’ ಎಂದು ಹೇಳಿ ತನ್ನ ಭಾರತವನ್ನು ‘ಸಮಸ್ತ ಭಾರತಂ’ ಎಂದು ಹೇಳಿಕೊಂಡಿರುವುದರಿಂದ ಇವನಿಗೆ ಹಿಂದೆ ಕೆಲವರು ಭಾರತದ ಕೆಲಕೆಲ ಭಾಗಗಳನ್ನು ರಚಿಸಿದ್ದರೆಂದೂ ಸಂಪೂರ್ಣವಾಗಿ ಭಾರತವನ್ನು ರಚಿಸಿದವರಲ್ಲಿ ಇವನೇ ಮೊದಲಿಗನೆಂದೂ ಊಹಿಸಬಹುದಾಗಿದೆ. ‘ಕವಿವ್ಯಾಸನೆಂಬ ಗರ್ವಮೆನಗಿಲ್ಲ’ ಎಂದು ಪಂಪನು ಹೇಳಿರುವುದರಿಂದ ಇವನಿಗೆ ಹಿಂದೆ ಕವಿ ವ್ಯಾಸನೆಂಬುವನೊಬ್ಬನಿದ್ದು ಭಾರತವನ್ನು ರಚಿಸಿರಬಹುದು. ಆದರೆ ನಮಗೆ ದೊರೆತಿರುವ ಪುರಾತನ ಸಮಗ್ರ ಕನ್ನಡ ಭಾರತ ‘ವಿಕ್ರಮಾರ್ಜುನವಿಜಯ’ ವೊಂದೇ.

ಪಂಪನಿಗೆ ಧಾರ್ಮಿಕ ಪುರಾಣವಾದ ‘ಆದಿಪುರಾಣ’ಕ್ಕಿಂತ ಲೌಕಿಕಕಾವ್ಯವಾದ ‘ವಿಕ್ರಮಾರ್ಜುನ ವಿಜಯ’ದ ರಚನೆಯಲ್ಲಿ ಹೆಚ್ಚು ಸ್ವಾತಂತ್ರ್ಯವಿದೆ. ಅವನ ಪ್ರತಿಭಾ ಪ್ರಸರಣಕ್ಕೆ ಇಲ್ಲಿ ಹೆಚ್ಚಿನ ಅವಕಾಶವಿದೆ. ಅವನ ಅನಾದೃಶವಾದ ಲೋಕಾನುಭವಸಂಪತ್ತನ್ನು ಪ್ರದರ್ಶಿಸುವ ಗ್ರಂಥವಿದು. ತನ್ನ ಪೋಷಕನಾದ ಅರಿಕೇಸರಿಯ ಕೀರ್ತಿಯನ್ನು ಸ್ಥಿರಪಡಿಸುವುದಕ್ಕಾಗಿಯೂ ‘ಸಮಸ್ತ ಭಾರತಮನ ಪೂರ್ವ ಮಾಗೆ ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಂ’ ಎಂದು ಒತ್ತಾಯ ಮಾಡಿದ ಪಂಡಿತರನ್ನು ಸಂತೋಷ ಪಡಿಸುವುದಕ್ಕಾಗಿಯೂ ಭಾರತದ ಕಥಾವಸ್ತುವನ್ನು ಆ ಕಾಲದ ವಾತಾವರಣಕ್ಕೆ ಹೊಂದುವಂತೆ ವೀರರಸದಲ್ಲಿ ಎರಕ ಹೊಯ್ದು ಕಾವ್ಯಕ್ಕೆ ತಕ್ಕಂತೆ ಕಥೆಯನ್ನು ಮಾರ್ಪಡಿಸಿ ಕನ್ನಡ ಸಾಹಿತ್ಯ ದೇವಿಗೆ ‘ವಿಕ್ರಮಾರ್ಜುನ ವಿಜಯ’ವೆಂಬ ಒಂದು ರತ್ನಕಂಠಿಯನ್ನು ನಿರ್ಮಿಸಿದನು. ಹೀಗೆ ಅರಿಕೇಸರಿಯ ಕೀರ್ತಿಯನ್ನು ಬೆಳಗುವುದಕ್ಕೆ ಹೊರಟಿದ್ದುದರಿಂದಲೂ ‘ಬೆಳಗುವೆನಿಲ್ಲಿ ಲೌಕಿಕಮಂ’ ಎಂಬುದನ್ನು ಮನಸ್ಸಿನಲ್ಲಿಟ್ಟು ಕೊಂಡುದರಿಂದಲೂ ಪಂಪನು ತನ್ನ ಭಾರತವನ್ನು ಮೂಲಭಾರತದ ಕಥೆಯಂತೆ ನಡೆಸಲು ಸಾಧ್ಯವಿಲ್ಲದೆ ತನ್ನ ಪ್ರತಿಭಾ ಶಕ್ತಿಯಿಂದ ಕಥೆಯನ್ನು ಕುಗ್ಗಿಸಿಯೂ ಹಿಗ್ಗಿಸಿಯೂ ಮಾರ್ಪಡಿಸಿಯೂ ಕೆಲವೆಡೆಯಲ್ಲಿ ಅಜ್ಞಾತವಾಗಿ ಜೈನಸಂಪ್ರದಾಯಕ್ಕೆಳೆದೂ ಇದ್ದಾನೆ. ಹೀಗೆ ಮಾಡುವುದರಲ್ಲಿ ವಿಸ್ಮರಣೆಯಿಂದ ಕೆಲವೆಡೆಗಳಲ್ಲಿ ಮುಗ್ಗರಿಸಿರುವುದೂ ಉಂಟು. ಮತ್ತೆ ಕೆಲವೆಡೆಗಳಲ್ಲಿ ಮೂಲಭಾರತದ ಕಥೆಗೆ ಮತ್ತಷ್ಟು ಮಿರುಗುಕೊಟ್ಟು ಹೊಳೆಯುವಂತೆಯೂ ಮಾಡಿರುವನು.

ಪಂಪಭಾರತ ‘ಸಮಸ್ತಭಾರತ.’ ಇದನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಅದು ಸಂಪೂರ್ಣ ಅಥವಾ ಸಮಗ್ರ ಭಾರತ ಎಂಬುದು ಅದರ ಮೊದಲನೆಯ ಅರ್ಥ. ಮೂಲಭಾರತದ ಕಥೆಯ ವಾತಾವರಣಕ್ಕೆ ತನ್ನ ಕಾಲದ ವಾತಾವರಣವನ್ನು ಹೊಂದಿಸಿ ಹೇಳಿರುವುದು ಎಂಬುದು ಮತ್ತೊಂದರ್ಥ. ಹಾಗೆಯೇ ಭಾರತದಲ್ಲಿ ಕಥೆಯ ಜೊತೆಗೆ ತನ್ನ ಪ್ರಭುವಿನ ಕಥೆಯನ್ನೂ ಹಾಸುಹೊಕ್ಕಾಗಿ ಕೂಡಿಸಿ ಕಥಾರಚನೆ ಮಾಡಿರುವ ಗ್ರಂಥ ಎಂಬುದು ಮೂರನೆಯ ವ್ಯಾಖ್ಯಾನ. ಈ ಕೊನೆಯ ಅರ್ಥವು ಹೆಚ್ಚು ಆದರಣೀಯವಾಗಿದೆ. ಅದನ್ನು ಸಮನ್ವಯಗೊಳಿಸುವುದಕ್ಕಾಗಿ ಪಂಪನು ತನ್ನ ಕತೆಗೆ ನಾಯಕರನ್ನು ಆರಿಸುವುದರಲ್ಲಿ ಬಹಳ ಜಾಣ್ಮೆಯನ್ನು ತೋರಿಸಿದ್ದಾನೆ. ವ್ಯಾಸಭಾರತದ ಪ್ರಕಾರ ಮೇಲುನೋಟಕ್ಕೆ ಧರ್ಮರಾಜನೇ ನಾಯಕನೆಂದು ಕಂಡು ಬಂದರೂ ಪಂಚಪಾಂಡವರಲ್ಲಿ ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ಪ್ರಮುಖರಾಗಿ ನಾಯಕಸ್ಥಾನಕ್ಕೆ ಅರ್ಹರಾಗುತ್ತಾರೆ. ಆದುದರಿಂದ ಪಂಪನು ಬಹುವಿವೇಕದಿಂದ ಪಾಂಡವ ಮಧ್ಯಮನೂ ಅತುಲಪರಾಕ್ರಮಿಯೂ ಆದ ಅರ್ಜುನನನ್ನು ನಾಯಕನನ್ನಾಗಿ ಮಾಡಿ ಕಥೆಯನ್ನು ಅವನ ಸುತ್ತಲೂ ನೆಯ್ದಿದ್ದಾನೆ. ಆದುದರಿಂದಲೇ ಗ್ರಂಥಕ್ಕೆ ‘ವಿಕ್ರಮಾರ್ಜುನವಿಜಯ’ವೆಂದು ಹೆಸರಿಟ್ಟು ತನ್ನ ಆಶ್ರಯದಾತನಾದ ಇಮ್ಮಡಿ ಅರಿಕೇ ಸರಿಯನ್ನು ಅರ್ಜುನ ನೊಂದಿಗೆ ಅಬೇದವಾಗಿ ಸಂಯೋಜಿಸಿ ವರ್ಣಿಸಿದ್ದಾನೆ. ಹೀಗೆ ಮಾಡುವುದರಲ್ಲಿ ಪಂಪನಿಗೆ ಕಾರಣವಿಲ್ಲದೆ ಇಲ್ಲ. ಅರಿಕೇಸರಿಯ ವೀರಾಗ್ರೇಸರ. ಈತನ ವೃತ್ತಾಂತ ಅವನ ಮೇಮಲವಾಡದ ಶಿಲಾಶಾಸನದಿಂದಲೂ (ಕ್ರಿ.ಶ.ಸು ೯೨೭) ಅವನ ಮೊಮ್ಮಗನಾದ ಮೂರನೆಯ ಅರಿಕೇಸರಿಯ ಪರಭಣಿ ಶಾಸನದಿಂದಲೂ (ಕ್ರಿ.ಶ. ೯೬೬) ಪಂಪನ ತಮ್ಮನಾದ ಜಿನವಲ್ಲಭನ ಗಂಗಾಧರಂ ಶಾಸನದಿಂದಲೂ ಯಥೋಚಿತವಾಗಿ ವಿಶದವಾಗುತ್ತದೆ. ಪಂಪನ ಮಾತುಗಳು ಈ ವಿಷಯವನ್ನು ದೃಢೀಕರಿಸುತ್ತವೆ. ಅರಿಕೇಸರಿಯು ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದ. ಬಾಲ್ಯದಿಂದಲೂ ‘ಪರಬಲದ ನೆತ್ತರ ಕಡಲೊಳಗಣ ಜಿಗುಳೆ ತೆಱದೊಳೆ ಬಳೆದಂ.’ ಮುಂದೆ ತನ್ನ ಅರಾಜನಾದ ಗೋವಿಂದರಾಜನಿಗೆ ವಿರೋಧವಾಗಿ ನಿಂತು ಅವನ ಸಾಮಂತನಾದ ವಿನಯಾದಿತ್ಯನಿಗೆ ಆಶ್ರಯವನ್ನಿತ್ತಿದ್ದ ದುರ್ಮಾರ್ಗಿಯಾದ ಗೋವಿಂದರಾಜನನ್ನು ರಾಜ್ಯಭ್ರಷ್ಟನನ್ನಾಗಿ ಮಾಡುವುದಕ್ಕೆ ಇತರ ಸಾಮಂತರೊಡನೆ ತಾನೂ ಸೇರಿ ಆ ಕಾರ್ಯವನ್ನು ಸಾಸಿ ಆ ಸ್ಥಾನದಲ್ಲಿ ರಾಷ್ಟ್ರಕೂಟರಲ್ಲಿ ಪ್ರಸಿದ್ಧನಾದ ಮೂರನೆಯ ಕೃಷ್ಣನನ್ನು ಸ್ಥಾಪಿಸಲು ಸಹಾಯ ಮಾಡಿದ್ದ. ಇಂತಹವನ ವಿಷಯದಲ್ಲಿ ಪಂಪನಿಗೆ ಗೌರವವು ಹುಟ್ಟುವುದು ಸಹಜವೇ. ಸಾಲದುದಕ್ಕೆ ಅರಿಕೇಸರಿಯೂ ಪಂಪನೂ ಸ್ನೇಹಿತರು. ಸಮಾನವಾದ ಗುಣಶೀಲಗಳನ್ನುಳ್ಳವರು. ತನ್ನ ಸ್ವಾಮಿಯಂತೆಯೇ ಪಂಪನೂ, ಧಾತ್ರೀವಳಯನಿಳಿಂಪನೂ ಚತುರಂಗಬಲ ಭಯಂಕರನೂ’ ಆಗಿ ‘ನಿಜಾನಾಥನಾಹವದೊಳ ರಾತಿನಾಯಕರ ಪಟ್ಟನೆ ಪಾಱಸೆಸಂದ’ ಪೆಂಪುಳ್ಳವನು. ಸಾಲದುದಕ್ಕೆ ಅರಿಕೇಸರಿಯೂ ಪಂಪನೂ ಸ್ನೇಹಿತರಂತಿದ್ದವರು. ಅವರಿಬ್ಬರಲ್ಲಿ ಎಂದೂ ಸ್ವಾಮಿ ಭೃತ್ಯಭಾವ ತೋರಿಲ್ಲ. ಅದನ್ನು ಪಂಪನು ಪ್ರಕಾರಾಂತರದಿಂದ ದುರ್ಯೋಧನನು ಕರ್ಣನಿಗೆ ಹೇಳುವ ಮಾತಿನಲ್ಲಿ ಸ್ಪಷ್ಟ ಮಾಡಿದ್ದಾನೆ. ಇಂತಹ ಪ್ರೀತಿಪಾತ್ರನಾದ ಆಶ್ರಯದಾತನನ್ನು ಭಾರತಶ್ರೇಷ್ಠನಾದ ಅರ್ಜುನನಿಗೆ ಹೋಲಿಸಿ ಅವರ ಪರಸ್ಪರ ಗುಣಗಳನ್ನು ಇಬ್ಬರಲ್ಲಿಯೂ ಆರೋಪಿಸಿ ತನ್ನ ಉಪ್ಪಿನ ಋಣವನ್ನು ತೀರಿಸುವುದಕ್ಕಾಗಿ ಅದ್ಭುತವಾದ ಕಾಣಿಕೆಯನ್ನು ಅರ್ಪಿಸಿದ್ದಾನೆ. ಅಂದಮಾತ್ರಕ್ಕೆ ಪಂಪನು ಅರಿಕೇಸರಿಯ ಸಂಬಳದ ವಂದಿಯಲ್ಲ, ಅಭಿಮಾನಮೂರ್ತಿ. ‘ಪೆಱರೀವುದೇಂ, ಪೆಱಱ ಮಾಡುವುದೇಂ, ಪೆಱಱಂದಮಪ್ಪುದೇಂ’ ಎಂದು ‘ಆದಿಪುರಾಣ’ದಲ್ಲಿ ಘಂಟಾಘೋಷವಾಗಿ ಸಾರಿದ್ದಾನೆ.

ಪಂಪನು ಅರ್ಜುನ ಅರಿಕೇಸರಿಗಳನ್ನು ಅಭೇದದಿಂದ ವರ್ಣಿಸಿದ್ದಾನೆ. ಅರ್ಜುನನ ಅಪರಾವತಾರವೇ ಅರಿಕೇಸರಿಯೆಂಬುದು ಪಂಪನ ಕಲ್ಪನೆ. ಭಾರತ ಯುದ್ಧದಲ್ಲಿ ಯಮನಂದನನು ಕರ್ಣನಿಂದ ತಾಡಿತನಾಗಿ ಸೋತು ತನ್ನ ಪಾಳೆಯಕ್ಕೆ ಹಿಂದಿರುಗಿ ಬಂದು ತನಗಾದ ಪರಾಭವಕ್ಕೇವಯಿಸಿ ಅರ್ಜುನನ ಮೇಲೆ ಕೋಪಿಸಿಕೊಳ್ಳುವನು. ಆಗ ಅರ್ಜುನನು-

ನರಸಿಂಗಂಗಂ ಜಾಕ
ಬ್ಬರಸಿಗಮಳವೊದವೆ ಪುಟ್ಟಿ ಪುಟ್ಟಿಯುಮರಿಕೇ
ಸರಿಯೆನೆ ನೆಲೞ್ದುಮರಾತಿಯ
ಸರಿದೊರೆಗಂ ಬಂದೆನೆಪ್ಪೊಡಾಗಳ್ ನಗಿರೇ |

ಎಂದು ಹೇಳುವುದನ್ನು ನೋಡಿದರೆ ಈ ಅಭೇದಕಲ್ಪನೆ ವಿಶದವಾಗುವುದು. ಅಲ್ಲದೆ ಕುಂತಿಯೂ ಪಾಂಡುವೂ ಅರ್ಜುನನಿಗೆ ನಾಮಕರಣವನ್ನು ಮಾಡುವಾಗ ಅವನ ಅಷ್ಟೋತ್ತರ ಶತನಾಮಗಳಲ್ಲಿ ‘ಚಾಳುಕ್ಯವಂಶೋದ್ಭವಂ’, ‘ರಿಪುಕುರಂಗ ಕಂಠೀರವಂ’, ‘ಅಮ್ಮನ ಗಂಧವಾರಣಂ’, ‘ಸಾಮಂತ ಚೂಡಾಮಣಿ’ ಮೊದಲಾದ ಅರಿಕೇಸರಿಯ ನಾಮಾವಳಿಗಳನ್ನು ಇಟ್ಟು ಆಶೀರ್ವದಿಸುವರು. ಪ್ರಪಂಚವನ್ನೆಲ್ಲ ಏಕಚ್ಛತ್ರಾಪತ್ಯದಿಂದ ಆಳಿದ ಮೂರು ಲೋಕದ ಗಂಡನಾದ ಸವ್ಯಸಾಚಿಯು ಒಮ್ಮೊಮ್ಮೆ ಸಾಮಂತ ಚೂಡಾಮಣಿಯಾಗುವನು. ಇದು ಕೆಲವೆಡೆಗಳಲ್ಲಿ ಅಭಾಸವಾಗಿ ಕಾಣುವುದು. ಅರ್ಜುನನು ದೇಶಾಟನೆಗೆ ಹೊರಟು ದ್ವಾರಕಾಪಟ್ಟಣದಲ್ಲಿ ಕೃಷ್ಣನ ಅನುಮತಿಯ ಪ್ರಕಾರ ಸುಭದ್ರೆಯನ್ನು ಅಪಹರಿಸಿಕೊಂಡು ಹೋಗುವನಷ್ಟೆ. ಆ ಸಂದರ್ಭದಲ್ಲಿ ಪಂಪನು ಸುಭದ್ರೆಯನ್ನು ಅರ್ಜುನನು ಕೊಂಡು ಹೋದನೆಂದು ಹೇಳದೆ ಸಾಮಂತ ಚೂಡಾಮಣಿಯು ಕೊಂಡೊಯ್ದನೆಂದು ಹೇಳುವುದು ಮನಸ್ಸಿಗೆ ಅಷ್ಟು ಸಮರ್ಪಕವಾಗಿಲ್ಲ. ಪಂಪನು ಅರಿಕೇಸರಿಯನ್ನು ಅರ್ಜುನನಲ್ಲಿ ಹೋಲಿಸಿರುವುದು ಮನದೊಲವಿನಿಲ್ಲವೆಂದೂ ಅವನಲ್ಲಿ ನಿಜವಾಗಿಯೂ ‘ವಿಪುಳಯಶೋವಿತಾನಗುಣ’ವಿದ್ದಿತೆಂದೂ ಹೇಳುವನಾದರೂ ಮೂರುಲೋಕದ ಗಂಡನು ಸಾಮಂತಚೂಡಾಮಣಿಯಾದುದೇಕೆ ಎಂದು ಯೋಚಿಸಬೇಕಾಗುವುದು. ಅರಿಕೇಸರಿಯಾದ ಅರ್ಜುನನು ಸೋಲುವ ಪ್ರಸಂಗ ಬಂದಾಗಲೂ ಪ್ರತಿಪಕ್ಷದ ಇದುರಲ್ಲಿ ಅವನ ಸಾಹಸವು ಸಾಗದ ಸಂದರ್ಭವೊದಗಿದಾಗಲೂ ಪಂಪನು ಬಹುಕಾಲ ವಿಳಂಬಮಾಡದೆ ಅಲ್ಲಿಂದ ಬಲ ಬೇಗ ನುಸುಳಿಕೊಳ್ಳುವನು. ಆಗ ವೈರಿಗಜಘಟಾರಿಘಟನಂ’, ‘ವಿದ್ವಿಷ್ಟವಿದ್ರಾವಣಂ’, ‘ಅರಾತಿಕಾಲಾನಲಂ’,‘ರಿಪುಕುರಂಗ ಕಂಠೀರವಂ’ ಎಂಬ ಬಿರುದುಗಳು ಮಾಯವಾಗುವುವು. ಅಷ್ಟಮಾಶ್ವಾಸದಲ್ಲಿ ಯಕ್ಷನ ಮಾಯೆಯಿಂದ ಕೊಳದ ತಡಿಯಲ್ಲಿ ನೀರು ಕುಡಿದು ಆರೂಢಸರ್ವಜ್ಞನು ನಿಶ್ಚೇಷ್ಟಿತನಾಗಿ ನೆಲದಲ್ಲೊರಗಿದಾಗ ಪಂಪನು ಹೇಳುವುದು ಬಹು ಚಮತ್ಕಾರವಾಗಿದೆ.

ಆ ಕಮಳಾಕರಮಂ ಪೊ
ಕ್ಕಾಕಾಶಧ್ವನಿಯನುಱದೆ ಕುಡಿದರಿಭೂಪಾ
ನೀಕಭಯಂಕರನುಂ ಗಡ
ಮೇಕೆಂದಱಯೆಂ ಬೞಲ್ದು ಜೋಲ್ದುಂ ಧರೆಯೊಳ್’

ಎಂದು ಹೇಳುವನು. ಹಾಗೆಯೇ ಅರ್ಜುನನ ಸಾಹಸಕಾರ್ಯಗಳನ್ನು ವರ್ಣಿಸುವಾಗ ಅವನ ವಾಗೈ ಖರಿ ಪ್ರಜ್ವಲಿತವಾಗುವುದು. ಒಂದೆರಡು ಪದ್ಯಗಳಲ್ಲಾದರೂ ಬಹು ಹೃದಯಂಗಮವಾಗಿ ವರ್ಣಿಸುವನು. ವಿದ್ವಿಷ್ಟ ವಿದ್ರಾವಣನು ಮತ್ಸ್ಯಯಂತ್ರಭೇದನ ಮಾಡಿದುದೂ ಅಂಗಾವರ್ಮನನ್ನು ಅಂಗದಪರ್ಣನನ್ನೂ ಸೋಲಿಸಿದುದೂ ದುರ್ಯೋಧನನನ್ನು ಕೋಡಗಗಟ್ಟುಗಟ್ಟಿ ಎಳೆದೊಯುತ್ತಿದ್ದ ಚಿತ್ರಸೇನನನ್ನು ಪರಾಭವಿಸಿದುದೂ ಸ್ವಲ್ಪಮಾತಿನಲ್ಲಿ ವರ್ಣಿತವಾದರೂ ಅವನ ಪೂರ್ಣಸಾಹಸವು ವ್ಯಕ್ತವಾಗುವಂತಿವೆ. ಭಾರತಯುದ್ಧದಲ್ಲಿ ಅರ್ಜುನನು ಭೀಷ್ಮದ್ರೋಣ ಕರ್ಣಾದಿಗಳಲ್ಲಿ ಪ್ರದರ್ಶಿಸಿದ ಸಾಮರ್ಥ್ಯವನ್ನಂತೂ ಪಂಪನು ತನ್ನ ಕವಿತಾಶಕ್ತಿಯನ್ನೆಲ್ಲಾ ವೆಚ್ಚಮಾಡಿ ಬಹು ಆಕರ್ಷಕವಾಗಿ ವರ್ಣಿಸಿದ್ದಾನೆ. ಕೊನೆಗೆ ತಾನು ಮಾಡಿದ ವರ್ಣನೆಯಿಂದ ತೃಪ್ತಿಹೊಂದದೆ ಸಾಹಸಾಭರಣನ ಅದ್ಭುತವಾದ ಸಾಹಸವನ್ನು ಪಶುಪತಿಯ ಬಾಯಿಂದಲೇ ಹೊರಡಿಸಿರುವನು. ಕರ್ಣಾರ್ಜುನರು ಯುದ್ಧಮಾಡುತ್ತಿದ್ದುದನ್ನು ನೋಡುತ್ತಿದ್ದ ದೇವೇಂದ್ರನಿಗೂ ದಿವಸೇಂದ್ರನಿಗೂ ತಮ್ಮ ತನಯರ ಕಾರ್ಯದ ವಿಷಯದಲ್ಲಿ ನಡೆಯುತ್ತಿದ್ದ ಜಗಳವು ಹರನ ಕಿವಿಗೂ ಬೀಳಲು ಈಶ್ವರನು ಹೀಗೆನ್ನುವನು.

ಜಗಳಮಿದೇಂ ದಿನಕರ, ಪೊಣ
ರ್ದು ಗೆಲ್ವನೇ ನಿಜತನೂಭವಂ ಹರಿಗನೊಳೇಂ
ಬಗೆಗೆಟ್ಟೆಯೊ ಧುರದೊಳವಂ
ಮಿಗಿಲೆನಗೆ ನಿನಗೆ ಪಗಲೊಳೇಂ ಕೞ್ತಲೆಯೇ

ಕೊನೆಗೆ ಯುದ್ಧದಲ್ಲಿ ಅರಿನೃಪರನ್ನೆಲ್ಲ ನಿರ್ಮೂಲ ಮಾಡಿದ ಮೇಲೆ ಯಥಾವತ್ತಾಗಿ ವಿಕ್ರಮಾರ್ಜುನನಿಗೇ ಪಟ್ಟಾಭಿಷೇಕವಾಗುವುದು. ಧರ್ಮನಂದನನೂ ದೇವಕೀನಂದನನೂ ಇಂದ್ರನಂದನನನ್ನು ಕುರಿತು

ಪ್ರಾಯದ ಪೆಂಪೆ ಪೆಂಪು, ಎಮಗೆ ಮೀಱದರಂ ತವೆ ಕೊಂದ ಪೆಂಪು ಕ
ಟ್ಟಾಯದ ಪೆಂಪು ಶಕ್ರನೊಡನೇಱದ ಪೆಂಪು, ಇವು ಪೆಂಪುವೆತ್ತು ನಿ
ಟ್ಟಾಯುಗಳಾಗಿ ನಿನ್ನೊಳಮರ್ದಿರ್ದುವು ನೀಂ ತಲೆವೀಸದೆ ಉರ್ವರಾ
ಶ್ರೀಯನಿದಾಗದೆನ್ನದೆ, ಒಳಕೊಳ್ ಪರಮೋತ್ಸವದಿಂ ಗುಣಾರ್ಣವಾ

ಎಂದು ಹೇಳಿ ಅವನನ್ನು ಪಟ್ಟಾಭಿಷೇಕಕ್ಕೆ ಒಡಂಬಡಿಸುವರು. ಅದರೊಡನೆ ಸುಭದ್ರೆಗೆ ಮಹಾದೇವಿಪಟ್ಟವಾಗುವುದು. ಇದಕ್ಕೂ ಪಂಪನಿಗೆ ಸಾಕಷ್ಟು ಆಧಾರಗಳಿವೆ. ಅರಿಕೇಸರಿಯ ಹೆಂಡತಿಯಾದ ರೇವಕನಿರ್ಮಡಿಯೆಂಬ ಲೋಕಾಂಬಿಕೆಯು ಸುಭದ್ರೆಯಂತೆಯೇ ಯದುವಂಶಕ್ಕೆ ಸೇರಿದವಳು. ಅರಿಕೇಸರಿಯೂ ಅರ್ಜುನನಂತೆಯೇ ಲೋಕಾಂಬಿಕೆಯನ್ನು ಅವರ ಬಂಧುಗಳ ಇಷ್ಟಕ್ಕೆ ವಿರೋಧವಾಗಿ ಗುಪ್ತವಾಗಿ ಹರಣಮಾಡಿಕೊಂಡು ಬಂದು ‘ಪ್ರಿಯಗಳಘಿ’ಈಆ’ನೆಂಬ ಬಿರುದನ್ನು ಪಡೆದಿರಬಹುದು. ಅರಿಕೇಸರಿಗೂ ಲೋಕಾಂಬಿಕೆಯ ಅಣ್ಣನಾದ ಇಂದ್ರನಿಗೂ ಇದ್ದ ವೈಷಮ್ಯವೂ ಅರ್ಜುನ ಬಲರಾಮನ ಮೈಮನಸ್ಯದ ಹೋಲಿಕೆಯನ್ನು ಪಡೆದಿರಬಹುದು. ಆದರೂ ಅಖಂಡಭಾರತ ಕಥಾದೃಷ್ಟಿಯಿಂದ ಸುಭದ್ರಾಮಹಾದೇವಿಯ ಪಟ್ಟಾಭಿಷೇಕ ಅಷ್ಟು ಉಚಿತವಾಗಿ ಕಾಣುವುದಿಲ್ಲ. ಮೊದಲಿನಿಂದಲೂ ವಿಕ್ರಮಾರ್ಜುನನ ಪ್ರೀತಿಗೆ ಪಾತ್ರಳಾಗಿ ಸರ್ವದಾ ಅವನೊಡನಿದ್ದು ವಸ್ತ್ರಾಪಹರಣ ಕೇಶಾಪಕರ್ಷಣಗಳಿಗೆ ಸಿಕ್ಕಿ ಕಾಡುಮೇಡುಗಳಲ್ಲಿ ಅಲೆದು ಅಜ್ಞಾತವಾಸದಲ್ಲಿ ಪರರ ಸೇವೆಯಲ್ಲಿದ್ದು ಪಡಬಾರದ ಕಷ್ಟಪಟ್ಟು ಮಹಾಭಾರತಕ್ಕೆ ಆದಿಶಕ್ತಿಯೂ ಕುರುಕುಲಜೀವಾಕರ್ಷಣಕಾರಣಳೂ ಆಗಿದ್ದ ದ್ರೌಪದಿಯನ್ನು ಬಿಟ್ಟು ಸುಖವಾಗಿ ಅರಮನೆಯ ಅಂತಪುರದಲ್ಲಿದ್ದ ಸುಭದ್ರೆಗೆ ಮಹಾದೇವಿ ಪಟ್ಟಕಟ್ಟುವುದು ಅನುಚಿತವಾಗಿಯೇ ಕಾಣುತ್ತದೆ. ಪಂಪನು ಪ್ರಾರಂಭದಲ್ಲಿ ದ್ರೌಪದಿಯ ವಿಷಯವನ್ನು ಪ್ರಸ್ತಾಪಿಸಿ ಕೊನೆಗೆ ಅವಳ ಹೆಸರನ್ನೇ ಎತ್ತದೆ ಸುಭದ್ರೆಗೆ ಪಟ್ಟಾಭಿಷೇಕ ಮಾಡಿಸುವನು. ವಾಸ್ತವವಾಗಿ ನೋಡುವುದಾದರೆ ದ್ರೌಪದಿಗುಂಟಾದ ಅಪಮಾನವೇ ಭಾರತಯುದ್ಧಕ್ಕೆ ಮೂಲಕಾರಣ. ಅವಳಿಗೆ ಕೊನೆಯಲ್ಲಿ ಸ್ಥಾನವಿಲ್ಲದಿರುವುದು ಸಮರ್ಪಕವಲ್ಲ. ಪಂಪನು ಅರ್ಜುನನನ್ನು ಕಥಾನಾಯಕನನ್ನಾಗಿ ಮಾಡಿಕೊಂಡಾಗ ನಾಯಿಕೆಯ ವಿಷಯದಲ್ಲಿ ಅವನಿಗೆ ಸ್ವಲ್ಪ ತೊಡಕುಂಟಾಗಿರಬೇಕು. ವೀರಾವೇಶವುಳ್ಳವನೂ ಪಂಚಪತಿತ್ವವನ್ನುಳ್ಳವಳೂ ಕೇಶಾಪಕರ್ಷಣಾದಿ ಅವಮಾನಗಳಿಗೆ ಸಿಕ್ಕಿದವಳೂ ಆದ ದ್ರೌಪದಿಯು ಅವನ ದೃಷ್ಟಿಯಿಂದ ಕಥಾನಾಯಿಕೆಯಾಗಿರುವುದಕ್ಕೆ ಅರ್ಹಳಲ್ಲವೆಂದು ತೋರಿರಬೇಕು. ಆದುದರಿಂದ ಅವನು ಸುಭದ್ರೆಯನ್ನೇ ನಾಯಿಕೆಯನ್ನಾಗಿ ಮಾಡಿರುವನು. ಈ ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ಪಂಪನು ದ್ರೌಪದಿಯ ವಿವಾಹವನ್ನು ಒಂದೆರಡು ಪದ್ಯಗಳಲ್ಲಿ ಮುಗಿಸಿ ಸುಭದ್ರಾಪರಿಣಯವನ್ನು ಒಂದು ಆಶ್ವಾಸವನ್ನಾಗಿ ವಿಸ್ತರಿಸಿರುವುದು. ಪಂಪನು ಸುಭದ್ರೆಗೆ ರಾಜ್ಞೀಪದವಿಯನ್ನೂ ಕೊಟ್ಟರೂ ನಮಗೇನೋ ದ್ರೌಪದಿಯೇ ಆ ಸ್ಥಾನಕ್ಕೆ ಅರ್ಹಳೆನ್ನಿಸುತ್ತದೆ. ಮತ್ತೊಂದು ವಿಷಯ, ದ್ರೌಪದಿಯ ಪಂಚಪತಿತ್ವವೂ ಲೌಕಿಕ ದೃಷ್ಟಿಯಿಂದ ಅಷ್ಟು ಸಮಂಜಸವಲ್ಲರೆಂದೇನೋ ಪಂಪನು ಅದನ್ನು ಮಾರ್ಪಡಿಸಿರುವನು. ಅವನ ಅಭಿಪ್ರಾಯದಂತೆ ದ್ರೌಪದಿಯನ್ನು ಮದುವೆಯಾಗುವವನು ಅರ್ಜುನನೊಬ್ಬನೇ, ಐವರಲ್ಲಿ ವಿದ್ವಿಷ್ಟವಿದ್ರಾವಣನು ಕೈ ಹಿಡಿದ ಸ್ತ್ರೀಯ ಭೋಗದಲ್ಲಿ ಇತರರು ಭಾಗಿಗಳಾಗುವುದು ಹಾಸ್ಯಾಸ್ಪದವೆಂಬುದಾಗಿ ಆತನಿಗೆ ತೋರಿರಬೇಕು. ದ್ರೌಪದಿಯ ಹೋಲಿಕೆ ಮತ್ತು ರಾಜ್ಞೀಪದವಿ ರಾಣಿಯಾದ ಲೋಕಾಂಬಿಕೆಗೂ ಹಿತವಾಗಿದ್ದಿರಲಾರದು. ಆದುದರಿಂದ ಅದನ್ನು ತಪ್ಪಿಸುವುದಕ್ಕೆ ಪ್ರಯತ್ನಪಟ್ಟು ಅನೇಕ ಕಡೆ ತೊಂದರೆಗೆ ಸಿಕ್ಕಿ ಪೂರ್ವವಾಸನಾ ಬಲದಿಂದ ತನ್ನನ್ನೆ ತಾನು ಮರೆತಿದ್ದಾನೆ. ಪಾಂಚಾಲಿಗೆ ಬಂದೊದಗುವ ಆಪತ್ಕಾಲಗಳಲ್ಲೆಲ್ಲಾ ಆಕೆಯನ್ನು ಕಾಪಾಡುವುದು ಪಂಪನ ಪ್ರಕಾರ ಆಕೆಯ ಪತಿಯಾದ ಅರ್ಜುನನಿಗಿಂತಲೂ ಭೀಮಸೇನನೇ ಹೆಚ್ಚು. ಕಪಟದ್ಯೂತದಲ್ಲಿ ಧರ್ಮರಾಯನು ಎಲ್ಲರನ್ನೂ ಸೋತ ಮೇಲೆ ದ್ರೌಪದಿಯ ವಿಡಂಬನವಾಗುವ ಕಾಲದಲ್ಲಿ ಆ ಅನ್ಯಾಯವನ್ನು ನೋಡುತ್ತಿದ್ದಾಗ ಪ್ರೇಕ್ಷಕರಿಗೂ ಸಹಿಸಲಸಾಧ್ಯವಾದ ಆಕ್ರೋಶವುಂಟಾಗುವುದು. ಆಗ ಪಾಂಡವರು ಅಣ್ಣನ ನನ್ನಿಗೆ ಸಿಕ್ಕಿಬಿದ್ದು ಸುಮ್ಮನೆ ಕುಳಿತುಕೊಳ್ಳುವರು. ಆ ಸಂದರ್ಭದಲ್ಲಿ ದ್ರೌಪದಿಯು ತನಗಾದ ಅಪಮಾನದ ಸಿಗ್ಗಿನಿಂದ

ಮುಡಿಯಂ ಪಿಡಿದೆೞೆದವನಂ
ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನಂ
ಮುಡಿಯಿಸುಗೆ, ಆ ಮುಡಿಯಂ ದಲ್
ಮುಡಿಯೆಂ ಗಳಂ, ಈಗಳಿಂತೆನ್ನಯ ಮುಡಿಯಂ

ಎಂದು ಹೇಳಿದುದನ್ನು ಕೇಳಿ ಭೀಮಸೇನನು ಕೋಪೋದ್ರೇಕವನ್ನು ತಡೆಯಲಾರದೆ ನವಮೇಘನಾದದಿಂದ ಹೀಗೆಂದು ಪ್ರತಿಜ್ಞೆ ಮಾಡುವನು :

ಮುಳಿಸಿಂದಂ ನುಡಿದೊಂದು ನಿನ್ನ ನುಡಿಸಲ್ಗೆ, ಆರಾಗದೆಂಬರ್
ಮಹಾ ಪ್ರಳಯೋಲ್ಕೋಪಮ ಮದ್ಗದಾಹತಿಯಿನ್,
ಅತ್ಯುಗ್ರಾಜಿಯೊಳ್ ಮುನ್ನಮಿ|
ಖಳ ದುಶ್ಯಾಸನಂ ಪೊರಳ್ಚಿ ಬಸಿಱಂ
ಪೋಳ್ದಿಕ್ಕಿ ಬಂಬಲ್ಗರು
ಳ್ಗಳಿನ್, ಆನಲ್ತೆ ವಿಳಾಸದಿಂ ಮುಡಿಯಿಪೆಂ ಪಂಕೇಜಪತ್ರೇಕ್ಷಣೇ||

ಕುಡಿವೆಂ ದುಶ್ಯಾಸನೋರಸ್ಥಳಮನ್, ಅಗಲೆ ಪೋೞ್ದಾರ್ದು ಪೊ
ಕ್ಕುಡಿವೆಂ ಪಿಂಗಾಕ್ಷನೂರುದ್ವಯಮನ್, ಉರುಗದಾಘಾತದಿಂ ನುಚ್ಚುನೂಱು
ಗೊಡೆವೆಂ ತದ್ರತ್ನರಶ್ಮಿಪ್ರಕಟಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವು, ಅಹಿತರಂ ನೋಡಿ ಪಂಕೇಜವಕ್ರೇ ||

ಎಂದು ಗರ್ಜಿಸಿ ದಿಕ್ಪಾಲಕರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿ ‘ವಿಳಯಕಾಳಜಳಧರ ನಿನಾದದಿಂ’ ಮೊಳಗುವನು. ಈ ಕೋಪಾಟೋಪದ ಮಧ್ಯದಲ್ಲಿ ಪಂಪನ ಪ್ರಕಾರ ಪತಿಯಾದ ಅರ್ಜುನನು ಒಂದು ಮಾತನ್ನೂ ಆಡದೆ ಕುಳಿತಿರುವನು. ಇದು ಆಭಾಸವಾಗಿ ಕಾಣುವುದಿಲ್ಲವೆ? ಈಸಂದರ್ಭದಲ್ಲಿ ಭೀಮನಾಡಿದ ಮಾತನ್ನೇ ಪ್ರಕಾರಾಂತರವಾಗಿ ಅರ್ಜುನನೇ ಹೇಳಿದ್ದರೆ ಇನ್ನೂ ಹೆಚ್ಚು ಸಮಂಜಸವಾಗುತ್ತಿದ್ದಿತಲ್ಲವೆ? ಈ ಸಮಯದಲ್ಲಿ ಪಂಪನು ತನ್ನ ಮಾರ್ಪಾಟನ್ನು ಮರೆತು ಮೂಲಭಾರತದಲ್ಲಿದ್ದುದನ್ನು ಇದ್ದಂತೆಯೇ ಹೇಳಿ ಬಿಟ್ಟಿದ್ದಾನೆ.

ಮುಂದೆ ಇನ್ನೆರಡು ಸ್ಥಳಗಳಲ್ಲಿ ಪಂಪನು ಹೀಗೆಯೆ ಮುಗ್ಗರಿಸಿರುವನು. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಕೀಚಕನು ದೌಪದಿಯಲ್ಲಿ ಅತ್ಯಾಚಾರನಡೆಸಲು ಪ್ರಯತ್ನ ಪಟ್ಟಾಗ ದ್ರೌಪದಿಯು ರಾತ್ರಿಯ ವೇಳೆಯಲ್ಲಿ, ಅದೂ ಕಟ್ಟೇಕಾಂತದಲ್ಲಿ ದುರುಳದಮನಕ್ಕೆ ಮೊರೆಯಿಟ್ಟದ್ದ ಭೀಮನಲ್ಲಿ ; ಅರ್ಜುನನಲ್ಲಲ್ಲ. ಇದು ಮೊದಲಿಗಿಂತಲೂ ಹೆಚ್ಚು ಪಂಪನ ವಿಸ್ಮರಣೆಯನ್ನೂ ವ್ಯಕ್ತಗೊಳಿಸುತ್ತದೆ. ಅರ್ಜುನನು ಬೃಹನ್ನಳೆಯಾಗಿದ್ದುದರಿಂದ ದ್ರೌಪದಿಯು ಹೀಗೆ ಮಾಡಿದಳೆಂದು ಹೇಳಲಾಗುವುದಿಲ್ಲ. ಇದೇ ರೂಪದಲ್ಲಿದ್ದಾಗಲೇ ಅರ್ಜುನನು ಉತ್ತರಗೋಗ್ರಹಣ ಕಾಲದಲ್ಲಿ ಯುದ್ಧಮಾಡಿ ಎಲ್ಲರನ್ನೂ ಸೋಲಿಸಲಿಲ್ಲವೆ? ತಮ್ಮ ಗುಟ್ಟುರಟ್ಟಾಗುವುದೆಂದು ಹೀಗೆ ಮಾಡಿದನೆಂದು ಭಾವಿಸಿದರೂ ಆಗಲೂ ಅರ್ಜುನನೇ ಈ ಕೆಲಸವನ್ನು ಮಾಡಿದ್ದರೆ ಹೆಚ್ಚು ಸಮಂಜಸವಾಗಿ ಕಾಣುತ್ತಿತ್ತು. ಇಲ್ಲಿಯೂ ವಿಸ್ಮರಣೆಯೇ ಇದಕ್ಕೆ ಕಾರಣ. ಕೊನೆಗೆ ಭೀಮಸೇನನು ದುಶ್ಯಾಸನನನ್ನು ಸಂಹರಿಸಿ ತನ್ನ ಪೂಣ್ಕೆಯನ್ನು ಪೂರೈಸಿದ ಮೇಲೆ ‘ದ್ರುಪದಾತ್ಮಜೆಗೆ ಬೞಯನಟ್ಟಿ ಜಯವನಿತೆ ಬರ್ಪಂತೆ ಬಂದ ತನ್ನ ತಳೋದರಿಯಂ ಕೆಲದೊಳ್ ಕುಳ್ಳಿರಿಸಿ ಪೊಸೆದು ಜಡೆಗೊಂಡಿರ್ದ ಕೇಶಮಂ ಪಸರಿಸಿ ವೈರಿಯ ಪಲ್ಲ ಪಣಿಗೆಯಿಂ ಬಾಚಿ ದುಶ್ಯಾಸನನ ಕರುಳ್ಗಳೆ ಬಾಸಿಗಮಾಗೆ ಕೃಷ್ಣೆಯಂ ಮುಡಿಯಿಸಿ ಅವಳ ಮೊಗಮಂ ನೋಡಿ ಮುಗುಳ್ಗಗೆ ನಕ್ಕು’ ಅವಳಲ್ಲಿ ಪ್ರಣಯಮೋಹವಂ ಬೀರಿ ಮಾತನಾಡುವನು. ದ್ರೌಪದಿಯಾದರೋ ಭೀಮನಲ್ಲಿ ತನ್ನ ಅನುರಾಗವನ್ನು ವ್ಯಕ್ತಪಡಿಸುವಳು. ಈ ಸಂದರ್ಭಗಳಲ್ಲೆಲ್ಲಾ ಅರ್ಜುನನು ಪ್ರೇಕ್ಷಕನು ಮಾತ್ರನಾಗಿರುವನು. ಸಾಕ್ಷಾತ್‌ಪತಿಯೇ ಇದುರಿನಲ್ಲಿರುವಾಗ, ಅದರಲ್ಲಿಯೂ ಅವನು ಮೂರು ಲೋಕ ಗಂಡನಾಗಿರುವಾಗ ದ್ರೌಪದಿಯನ್ನು ರಕ್ಷಿಸಲು ಮೈದುನನಾದ ಭೀಮಸೇನನು ಈ ರೀತಿ ನಡೆದುಕೊಂಡುದು ವಿಸ್ಮಯಜನಕವಲ್ಲವೆ? ಈ ಸಮಯಗಳಲ್ಲೆಲ್ಲ ಪಂಪನು ಭೀಮಸೇನನು ದ್ರೌಪದಿಯ ಮೈದುನನೆಂಬುದನ್ನು ಮರೆತು ಪತಿಯೆಂಬ ಪೂರ್ವವಾಸನೆಯಿಂದಲೇ ಭ್ರಾಂತನಾಗಿದ್ದಾನೆ. ಅವನು ಮನಸ್ಸು ಮಾಡಿದ್ದರೆ ಈ ಸಂದರ್ಭಗಳನ್ನು ವ್ಯತ್ಯಾಸಮಾಡಲಾಗದಿರಲಿಲ್ಲ.

ಪಂಪನಲ್ಲಿ ಜೈನ ವೈದಿಕ ಸಂಸ್ಕಾರಗಳು ಮಿಳಿತವಾಗಿವೆ. ಅವನು ಭಾರತವನ್ನು ರಚಿಸುತ್ತಿರುವುದು, ವೈದಿಕನಾದ-ಶೈವನಾದ ಅರಿಕೇಸರಿಗಾಗಿ. ಅವನು ಅದನ್ನು ಜ್ಞಾಪಕದಲ್ಲಿಟ್ಟುಕೊಂಡು ಶಿವಭಕ್ತಿಗೆ, ಪೂಜೆಗೆ, ಸ್ತೋತ್ರಕ್ಕೆ, ಅಲ್ಲಲ್ಲೇ ಅವಕಾಶವನ್ನುಂಟುಮಾಡಿ ಕೊಂಡಿದ್ದಾನೆ. ಆದರೂ ತನ್ನ ಜೈನಸಂಸ್ಕಾರ ಅತಿಯಾಗಿಲ್ಲದಿದ್ದರೂ ಆಗಾಗ ಸ್ವಲ್ಪ ಹೆಡೆಯೆತ್ತಿ ಕಥಾಭಿತ್ತಿಯಲ್ಲಿಯೂ ಪಾತ್ರಪರಿಕಲ್ಪನೆಯಲ್ಲಿಯೂ ತನ್ನ ಪ್ರಭಾವವನ್ನು ಬೀರಿದೆ. ‘ಪಂಪ ಭಾರತ’ವೂ ‘ಜಿನಪದಾಂಭೋಜವರಪ್ರಸನ್ನ’ವಾದುದು. ಪಂಪನಿಗೆ ವ್ಯಾಸರು, ವ್ಯಾಸಭಟ್ಟಾರಕರು. ವಿಷ್ಣು ಕೃಷ್ಣರು ಅಭವ, ಅಜ, ಅಜಿತ,ಅನಂತರು. ಅರ್ಜುನನ ಜನ್ಮೋತ್ಸವದ ವರ್ಣನೆಯಲ್ಲಿ ತೀರ್ಥಂಕರ ಜನ್ಮೋತ್ಸವದ ಛಾಯೆಯಿದೆ. ಅರ್ಜುನನು ತಪಸ್ಸು ಮಾಡುವಾಗ ಇಂದ್ರನಿಗೆ ಆಸನಕಂಪವಾಗುತ್ತದೆ. ಸಂಸಾರಾಸಾರತೆಯ ಮತ್ತು ಭವಾವಳಿಗಳ ಸೂಚನೆ ಆಗಾಗ ಕಂಡುಬರುತ್ತದೆ. ಜನ್ಮಾಂತರಸ್ಮರಣೆ, ಜಾತಿಸ್ಮರತ್ವ, ಬಲದೇವ ವಾಸುದೇವರ ಜೋಡಿ ಇವೂ ಅಲ್ಲಲ್ಲಿ ಇವೆ. ಇವೆಲ್ಲಕ್ಕಿಂತಲೂ ಪಂಪನ ಜೈನಮತ ಪ್ರಭಾವ ವಿಶೇಷ ಕಂಡುಬರುವುದು ಶ್ರೀಕೃಷ್ಣನ ಪಾತ್ರರಚನೆಯಲ್ಲಿ. ಹಿಂದುಗಳಿಗೆ ಭಾರತವು ಪಂಚಮವೇದ. ಅದರ ಮೂಲಶಕ್ತಿ ಶ್ರೀಕೃಷ್ಣ. ಕೆಲವು ಕವಿಗಳಂತೂ ಭಾರತವನ್ನು ಕೃಷ್ಣಚರಿತೆಯೆಂದೇ ಕರೆದಿರುವುದೂ ಉಂಟು. ಜೈನರರಿಗೆ ಭಾರತದಲ್ಲಾಗಲಿ ಕೃಷ್ಣ ಭಗವಂತನಲ್ಲಾಗಲಿ ಈ ಪೂಜ್ಯಮನೋಭಾವವಿಲ್ಲ. ಅವರ ಪ್ರಕಾರ ಕೃಷ್ಣನು ಗುಣಾವಗುಣಮಿಶ್ರಿತವನಾದ ಒಬ್ಬ ಸಾಮಾನ್ಯ ಮನುಷ್ಯ-ವಾಸುದೇವ. ಈ ಜೈನಮತದ ಪ್ರಭಾವದ ಫಲವಾಗಿ ಪಂಪನು ಮಹಾಭಾರತದ ಬೃಹದ್ದೇವತೆಯಾದ ಶ್ರೀಕೃಷ್ಣನ ವಿಷಯದಲ್ಲಿ ತನ್ನ ಆ ತೀರ್ಥಂಕರನ ವಿಷಯದಲ್ಲಿದ್ದ ಶ್ರದ್ಧಾ ಭಕ್ತಿಗಳಿಲ್ಲದುದರಿಂದ ಅವನನ್ನು ಸಾಮಾನ್ಯ ವ್ಯಕ್ತಿಯಂತೆ ಚಿತ್ರಿಸಿ ಅವನ ಪ್ರಾಮುಖ್ಯವಿರುವ ಸನ್ನಿವೇಶಗಳನ್ನೆಲ್ಲಾ ತೇಲಿಸಿಬಿಟ್ಟು ಕೊನೆಗೆ ಆತನ ಗೀತೋಪದೇಶವನ್ನು ‘ವಿಕ್ರಮಾರ್ಜುನನೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋಱ…ನಿನಗೊಡ್ಡಿ ನಿಂದುದನಿದನೋವದೆ ಕೊಲ್ವೊಡೆ ನೀನುಮೆನ್ನ ಕಜ್ಜದೊಳೆಸಗೆಂದು ಸೈತಜಿತನಾದಿಯ ರೇದರಹಸ್ಯದೊಳ್ ನಿರಂತರದ ಪರಿಚರ್ಯೆಯಿಂ ನೆಯೆ ಯೋಜಿಸಿದಂ ಕದನತ್ರಿಣೇತ್ರನಂ’ ಎಂಬ ಭಾಗದಿಂದ ಮುಗಿಸಿಬಿಟ್ಟಿದ್ದಾನೆ. ಕೊನೆಗೆ ಮಹಾಭಾರತವು ಲೋಕಪೂಜ್ಯವಾಗುವುದಕ್ಕೆ ಕಾರಣರಾದ ವ್ಯಕ್ತಿಗಳನ್ನು ತಿಳಿಸುವ

ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ
ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ
ರ್ಮಲಂ ಚಿತ್ತಂ ಧರ್ಮಪುತ್ರಂ ಮಿಗಿಲ್, ಇವರ್ಗಳಿನೀ ಭಾರತಂ ಲೋಕಪೂಜ್ಯಂ ||

ಎಂಬ ಪದ್ಯದಲ್ಲಿಯೂ ಕೂಡ ಕೃಷ್ಣನ ಹೆಸರಿಗೆ ಒಂದು ಸ್ಥಾನವಿಲ್ಲ. ವ್ಯಾಸಭಾರತದ ದೃಷ್ಟಿಯಿಂದ ನೋಡುವುದಾದರೆ ಈ ಸಂಗತಿ ಸ್ವಲ್ಪ ಊನವಾಗಿಯೇ ಕಾಣುತ್ತದೆ. (ಇದು ಲೌಕಿಕಕಾವ್ಯವಾದುದರಿಂದ ಲೌಕಿಕವನ್ನು ಮೀರಿದ ಕೃಷ್ಣನ ಹೆಸರನ್ನು ಇದರಲ್ಲಿ ಸೇರಿಸಿಲ್ಲವೆಂದು ಭಾರತದ ಕೆಲವೆಡೆಯಲ್ಲಿ ಬರುವ ಕೃಷ್ಣನ ಶಕ್ತಿ ವೈಭವಗಳ ವರ್ಣನೆ ಪಂಪನಿಗೆ ಕೃಷ್ಣನಲ್ಲಿ ಪೂರ್ಣಭಕ್ತಿಯಿತ್ತೆಂದು ಸೂಚಿಸುವುದೆಂದೂ ಕೆಲವರು ಅಭಿಪ್ರಾಯ ಪಡುವುದು ಅಷ್ಟು ಸಮರ್ಪಕವಾಗಿ ಕಾಣುವುದಿಲ್ಲ.)

ಇನ್ನು ಕೆಲವೆಡೆಗಳಲ್ಲಿ ಪಂಪನ ಬದಲಾವಣೆಗಳು ಕಥಾಸಂವಿಧಾನಕ್ಕೆ ವಿಶೇಷ ಹೊಳಪನ್ನು ತರುವುವು. ವ್ಯಾಸಭಾರತದ ವಸ್ತ್ರಾಪಹರಣದ ಕಥೆಯು ಲೌಕಿಕದೃಷ್ಟಿಯಿಂದ ಅನುಚಿತವಾದುದೆಂದು ಭಾವಿಸಿ ಪಂಪನು ಅದನ್ನು ಬಿಟ್ಟು ಕೇಶಾಪಕರ್ಷಣದ ವಿಚಾರವನ್ನು ಮಾತ್ರ ಹೇಳಿ ಕೊನೆಯಲ್ಲಿ ದುಶ್ಯಾಸನನ ವಧಾನಂತರ

ಇದರೊಳ್ ಶ್ವೇತಾಪತ್ರಸ್ಥಗಿತ ದಶದಿಶಾಮಂಡಲಂ ರಾಜಚಕ್ರಂ
ಪುದಿದೞ್ಕಾಡಿತ್ತು ಅಡಂಗಿತ್ತಿದಳೆ ಕರುರಾಜಾನ್ವಯಂ, ಮತ್ಪ್ರತಾಪ
ಕ್ಕಿದಳೆ ನೋಡಗುರ್ವುರ್ವಿದುದು, ಇದುವೆ ಮಹಾಭಾರತಕ್ಕಾದಿಯಾಯ್ತು ಆ
ಬ್ಜದಳಾಕ್ಷಿ ಪೇೞ, ಸಾಮಾನ್ಯಮೆ, ಬಗೆಯೆ, ಭವತ್ಕೇಶಪಾಶಪ್ರಪಂಚಂ ||

ಎಂದು ಹೇಳಿ ವೇಣೀಸಂಹಾರವನ್ನು ಮುಗಿಸುವುದು ಸ್ವಾರಸ್ಯವಾಗಿದೆ.

ಹಾಗೆಯೇ ದ್ರೌಪದಿಯು ದುಶ್ಯಾಸನದಿಂದ ಸಭೆಗೆ ಸೆಳೆಯಲ್ಪಟ್ಟಾಗ ಕರ್ಣನು ನೋಡಿ ನಕ್ಕನೆಂದೂ ಸಲ್ಲದ ಮಾತುಗಳನ್ನಾಡಿದನೆಂದೂ ವ್ಯಾಸಭಾರತದಲ್ಲಿರುವುದನ್ನು ಬಿಟ್ಟಿರುವುದೂ ಕರ್ಣನನ್ನು ರಾಜಲಕ್ಷ್ಮಿ ಬಿಡಲಾರಳೆಂಬುವುದೂ ‘ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ’ ಎಂದು ಹೇಳುವುದೂ ಕರ್ಣನ ಪಾತ್ರಕ್ಕೆ ಗೌರವವನ್ನು, ಮಹಿಮೆಯನ್ನು ಕೊಡುವುದಲ್ಲದೆ ಒಟ್ಟಿನಲ್ಲಿ ಬಹಳ ಗಂಭೀರವಾಗಿದೆ.ಪಂಪಭಾರತದಲ್ಲಿ ಇನ್ನೂ ಕೆಲವು ಹೊಸಸಂಗತಿಗಳಿವೆ. ಯುಷ್ಠಿರನ ಆಜ್ಞಾನುಸಾರ ಯಕ್ಷನ ವಿಷಸರೋವರಕ್ಕೆ ನೀರು ತರಲು ಹೋದ ಭೀಮಾರ್ಜುನ ನಕುಲ ಸಹದೇವರು ಯಕ್ಷನ ಪ್ರಶ್ನೆಗೆ ಉತ್ತರಕೊಡದೆ ನೀರನ್ನು ಕುಡಿದು ಮೈಮರೆತು ಬೀಳುವರು. ದುರ್ಯೋಧನನ ಪುರೋಹಿತನಾದ ಕನಕಸ್ವಾಮಿಯು ಪಾಂಡವರನ್ನು ಕೊಲ್ಲಲು ಕಳುಹಿಸಿದ ಕೀರ್ತಿಗೆಯು ಬಂದು ಕೊಳದ ತಡಿಯಲ್ಲಿ ಬಿದ್ದಿದ್ದ ನಾಲ್ವರನ್ನೂ ತಿಂದು ಮುಗಿಸುವನೆಂದೆಣಿಸಿ ಕೈಹಾಕುವುದು ಅವರನ್ನು ಆ ಅವಸ್ಥೆಗೆ ತಂದ ದೈವವು ಪ್ರತ್ಯಕ್ಷವಾಗಿ ಆ ಉಗ್ರದೇವತೆಯನ್ನು ನೀನು ದೂರಪೋಗು ಎನ್ನಲು ‘ನಾನು ನನ್ನ ಮಾತಿನಂತೆ ನಡೆದುಕೊಳ್ಳಬೇಕು, ಯಾರನ್ನು ಭಕ್ಷಿಸಲಿ, ಎಂದು ಕೇಳುವುದು. ಆಗ ಯಕ್ಷನು ‘ಎಲೈ ಪಿಶಾಚಿಯೇ ನಿನ್ನನ್ನು ಯಾವನು ಹುಟ್ಟಿಸಿದನೋ ಅವನನ್ನೇ ತಿನ್ನು’ ಎಂದು ಹೇಳಲು ಆ ದೇವತೆಯು ಹಾಗೆಯೇ ಹಿಂದಿರುಗಿ ‘ಕನಕನ ಬೇಳ್ವೆ ಕನಕನಿಗೇ ತಟ್ಟಿತು’ಎಂದು ಜನರಾಡಿಕೊಳ್ಳುವಂತೆ ಅವನನ್ನೇ ತಿಂದು ಬಿಟ್ಟಿತು. ಈ ಕಥೆಯು ಪಂಪಭಾರತದಲ್ಲಿದೆ, ಮೂಲಭಾರತದಲ್ಲಿಲ್ಲ. ಅರ್ಜುನನಿಗೆ ‘ಕಿರೀಟಿ’ಯೆಂಬ ಹೆಸರು ಬರಲು ಪಂಪನು ಕೊಟ್ಟಿರುವ ಕಾರಣವೂ ವ್ಯಾಸಭಾರತದಲ್ಲಿಲ್ಲ. ಕೃಷ್ಣಪರಮಾತ್ಮನು ಸಂಧಾನಕ್ಕೆ ಬಂದ ಕಾಲದಲ್ಲಿ ದುರ್ಯೋಧನನು ವಿದುರನನ್ನು ಹೀಯಾಳಿಸಲು ವಿದುರನು ರೇಗಿ-

ಕಡು ಮುಳಿದು ನಿನ್ನ ತೊಡೆಗಳ
ನುಡಿವೆಡೆಯೊಳ್ ಭೀಮಸೇನನಾ ಪದದೊಳ್
ಪಿಡಿಯಲೈಂದಿರ್ದೆನಿದಂ
ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ ||

ಎಂದು ಹೇಳುವುದೂ ಪಂಪನದೇ. ಕರ್ಣನು ಕುಂತಿಯ ಮಗನೆಂದು ದುರ್ಯೋಧನನು ತಿಳಿದುಕೊಂಡುದು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ಎಂದು ಹೇಳುವ ಕೃಷ್ಣನ ಮಾತುಗಳಿಗೆ ಮೂಲಭಾರತದಲ್ಲಿ ಆಧಾರವಿಲ್ಲ. ಈ ಬದಲಾವಣೆಗಳಿಗೆಲ್ಲ ಸರಿಯಾದ ಕಾರಣವನ್ನು ಊಹಿಸುವುದು ಸಾಧ್ಯವಿಲ್ಲ. ಇವುಗಳನ್ನು ನೋಡಿದರೆ ಪಂಪನೇ ಮೂಲಭಾರತದಿಂದ ಈ ಬದಲಾವಣೆಗಳನ್ನು ಮಾಡಿಕೊಂಡನೇ ಅಥವಾ ಹೀಗೆ ಕಥಾಶರೀರದಲ್ಲಿ ವ್ಯತ್ಯಾಸವನ್ನು ಹೊಂದಿದ್ದ ಬಹುಸ ಜೈನಸಂಬಂಯಾದ ಬೇರೊಂದು ಭಾರತವೇ ಪಂಪನ ಕಾಲದಲ್ಲಿದ್ದಿತೋ ಎಂಬ ಸಂಶಯವು ಹುಟ್ಟುವುದು. ಸರಿಯಾದ ಆಧಾರಗಳು ಸಿಕ್ಕುವವರೆಗೆ ಹೀಗೆ ನಿರ್ಧರಿಸಲು ಸಾಧ್ಯವಿಲ್ಲ.

‘ಪಂಪ ಭಾರತ’ದಲ್ಲಿ ಪೂರ್ವಕವಿಗಳಿಂದ ಸ್ವೀಕರಣ ವಿಚಾರ : ಪಂಪನು ಮೇಲೆ ಹೇಳಿದಂತೆ ಮೂಲಭಾರತದಕಥೆಯಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿರುವುದಲ್ಲದೆ ಕನ್ನಡದ ಸಂಪತ್ತೂ ಸ್ವಾರಸ್ಯವೂ ಸುಟವಾಗುವಂತೆ ಸಂಸ್ಕೃತದ ಶ್ರೇಷ್ಠಕವಿಗಳಾದ ಕಾಳಿದಾಸ, ಭಾರವಿ, ಶ್ರೀಹರ್ಷ, ಭಟ್ಟನಾರಾಯಣ ಮೊದಲಾದವರ ಕೃತಿಗಳಿಂದ ಕೆಲವು ಭಾಗಗಳ ಸಾರವನ್ನು ತನ್ನ ಕಾವ್ಯದಲ್ಲಿ ಪ್ರಯೋಗಿಸಿದ್ದಾನೆ. ನಾಲ್ಕನೆಯ ಆಶ್ವಾಸದಲ್ಲಿ ಬರುವ ಮಲಯಪರ್ವತದ ವರ್ಣನೆಯು ನಾಗಾನಂದದ ಮಲಯಪರ್ವತದ ವಣ೭ನೆಯ ಅನುವಾದವಿರಬೇಕು. ಪಂಚಮಾಶ್ವಾಸದಲ್ಲಿ ವಿರಹಜ್ವಾಲೆಯಿಂದ ತಪ್ತಳಾದ ಸುಭದ್ರೆಯನ್ನು ಅರ್ಜುನನು ಮರೆಯಾಗಿ ನಿಂತು ನೋಡುತ್ತ ಅವರ ಸರಸಲ್ಲಾಪಗಳನ್ನು ಕೇಳುವ ಸನ್ನಿವೇಶವನ್ನು ಕಾಳಿದಾಸನ ‘ಶಾಕುಂತಲ’ದಿಂದ ತೆಗೆದುಕೊಂಡಿರಬೇಕು. ಸಪ್ತಮಾಶ್ವಾಸದ ಇಂದ್ರಕೀಲಪ್ರಕರಣವು ಭಾರವಿಯ ‘ಕಿರಾತಾರ್ಜುನೀಯ’ದ ಸಾರಾಂಶವೆಂದು ಹೇಳಬಹುದು. ಕರ್ಣಾಶ್ವತ್ಥಾಮರ ವಾಗ್ಯುದ್ಧವು ‘ವೇಣೀಸಂಹಾರ’ ನಾಟಕದ ಛಾಯೆಯಿಂದ ಕೂಡಿದೆ. ಹೀಗೆ ಪಂಪನು ಸಮಯೋಚಿತವಾಗಿ ಸಂಸ್ಕ ತದ ಉದ್ದಾಮಕವಿಗಳ ಉದಾತ್ತವಾದ ಪ್ರತಿಭೆಯನ್ನು ತನ್ನ ಕಾವ್ಯದಲ್ಲಿ ಪ್ರತಿಬಿಂಬಿಸಿ ಕನ್ನಡವನ್ನು ಸಂಪದ್ಯುಕ್ತವಾಗಿ ಮಾಡಿದ್ದಾನೆ. ಭಾವವನ್ನು ಇತರರಿಂದ ತೆಗೆದುಕೊಂಡಿದ್ದರೂ ನಿರೂಪಣ ರೀತಿಯನ್ನು ತನ್ನದನ್ನಾಗಿಯೇ ಮಾಡಿಕೊಂಡಿರುವುದು ಅವನ ವೈಶಿಷ್ಟ್ಯ.

ಪಂಪಭಾರತದ ಕಥಾಸರಣಿ : ಪಂಪನಿಗೆ ಸಮಗ್ರಭಾರತವನ್ನು ಬರೆಯುವ ಭರದಲ್ಲಿ ಹೆಚ್ಚು ವಿವರಗಳನ್ನು ತುಂಬುವುದಕ್ಕೆ ಅವಕಾಶವಿಲ್ಲ.‘ಪೆಱವುಮುಪಾಖ್ಯಾನ ಕಥೆಗಳೊಳಮೊಂದಂ ಕುಂದಲೀಯದೆ ಪೇೞ್ವೆಂ’ ಎಂದು ಹೇಳುವನಾದರೂ ಎಷ್ಟೋ ವಿಷಯಗಳನ್ನು ಬಹುಕೌಶಲದಿಂದ ಕ್ರೋಢೀಕರಿಸಿ ಒಂದೆರಡು ಮಾತುಗಳಲ್ಲಿ ಕಾವ್ಯಕ್ಕೆ ಸರಿಹೋಗುವಂತೆಯೂ ಆಯಾ ಸನ್ನಿವೇಶಗಳ ಮಹತ್ವವೂ ಪಾತ್ರಗಳ ವ್ಯಕ್ತಿತ್ವವೂ ಚೆನ್ನಾಗಿ ಸುರಿಸುವಂತೆಯೂ ಮೂಲಗ್ರಂಥದ ಆಶಯ ಕೆಡದಂತೆಯೂ ಮೂಲರೇಖೆಗಳನ್ನು ಮಾತ್ರ ಎಳೆದಿರುವನು. ಮೊದಲು ಪಾಂಡವ ಕೌರವ ಜನನದಿಂದ ಹೊರಟು ಅವಳ ಬಾಲಕೇಳಿ, ಭೀಮ ದುರ್ಯೋಧನರ ದ್ವೇಷಕ್ಕೆ ಕಾರಣ, ಲಾಕ್ಷಾಗೃಹದಹನ, ಹಿಡಿಂಬಾಸುರವಧೆ, ದ್ರೌಪದೀಪರಿಣಯ, ಇಂದ್ರಪ್ರಸ್ಥಗಮನ, ಇವುಗಳವರೆಗೆ ಕಥಾಸರಣಿಯಲ್ಲಿ ಎಲ್ಲಿಯೂ ಎಡರು ಬಾರದಂತೆ ಸರಿಪಡಿಸಿಕೊಂಡು ನಿರೂಪಿಸುತ್ತ ಹೋಗಿರುವನು. ಇಲ್ಲಿಂದ ಮುಂದೆ ಮೂಲಭಾರತದ ಪ್ರಕಾರ ನಾರದಾದೇಶದಂತೆ ಅರ್ಜುನನನ್ನು ಭೂಪ್ರದಕ್ಷಿಣೆಗೆ ಕಳುಹಿಸಬೇಕು. ಹಾಗೆ ಇಲ್ಲಿ ಮಾಡಲು ಸಾಧ್ಯವಿಲ್ಲ. ದ್ರೌಪದಿಯ ಪತಿಯು ಅರ್ಜುನನೊಬ್ಬನೇ ಎಂಬ ವಿಷಯದಲ್ಲಿ ಪಂಪನು ಜಾಗರೂಕನಾಗಿರುವನು. ಅಲ್ಲದೆ ‘ವರ್ಣಕಂ ಕತೆಯೊಳೆಡಂಬಡಂ ಪಡೆಯೆ’ ಹೇಳಬೇಕು ತಾನೆ? ಆದುದರಿಂದ ಅರ್ಜುನನ ಪ್ರಯಾಣಕ್ಕೆ ಪಂಪನು ಬೇರೆಯ ಕಾರಣವನ್ನು ಕಲ್ಪಿಸಿರುವನು. ಅದು ‘ದಿಗಂಗನಾ ಮುಖಾವಲೋಕನಕ್ಕಾಗಿ’. ಅರ್ಜುನು ದಿಗ್ವಿಜಯಾರ್ಥವಾಗಿ ಹೊರಟು ಸಮಸ್ತ ರಾಷ್ಟ್ರಗಳಲ್ಲಿ ‘ಆತ್ಮೀಯ ಶಾಸನಾಯತ್ತಂ’ ಮಾಡುತ್ತ ಬರುವನು. ಇಲ್ಲಿ ಪಂಪನಿಗೆ ಅನೇಕ ದೇಶಗಳನ್ನು, ತನ್ನ ವಿಸ್ತಾರವಾದ ಅನುಭವವನ್ನು ವರ್ಣಿಸುವುದಕ್ಕೆ ಅವಕಾಶ ಸಿಕ್ಕುವುದು. ಅರ್ಜುನನು ಮುಂದೆ ಹೊರಟು ಗೋಕರ್ಣ ಬನವಾಸಿಗಳನ್ನು ದಾಟಿ ದ್ವಾರಕಾಪುರವನ್ನು ಸೇರಿ ‘ಅಲ್ಲಿ ತನ್ನ ಹಲವು ಜನ್ಮಗಳ ಕೆಳೆಯ’ನಾದ ಕೃಷ್ಣನು ತನ್ನನ್ನು ಇದಿರ್ಗೊಳ್ಳಲು ಪುರಪ್ರವೇಶಮಾಡುವನು. ಪರಸ್ತ್ರೀಯರು ಫಲ್ಗುಣನ ರೂಪಾತಿಶಯವನ್ನು ನೋಡಿ ‘ಗುಣಾರ್ಣವನೀತನೇ’ ಎಂದು ಬೆರಗುಗೊಂಡು ನೋಡವರು. ಅಲ್ಲಿಂದ ಮುಂದೆ ಸುಭದ್ರಾರ್ಜುನರ ಅನುರಾಗ, ಸೂರ್ಯಸ್ತಮಯ, ರಾತ್ರಿ, ಚಂದ್ರೋದಯ, ಅರ್ಜುನ ಚಂದ್ರಿಕಾವಿಹಾರ, ವೇಶ್ಯಾವಾಟಿಕೆ, ಪಾನಗೋಷ್ಠಿ, ಸುಭದ್ರೆಯ ವಿರಹ, ಸುಭದ್ರಾಪರಿಣಯ-ಮೊದಲಾದವುಗಳಲ್ಲಿ ವರ್ಣಕಕಾವ್ಯದ ಲಕ್ಷಣಗಳನ್ನು ಪೂರ್ತಿಗೊಳಿಸುವುದಕ್ಕೆ ಸಹಾಯಕವಾಗುವುದು. ಇವುಗಳ ವರ್ಣನೆಗಳಿಂದ ಆಶ್ವಾಸಗಳು ತುಂಬಿ ತುಳುಕಾಡುವುವು. ಕಥೆಯ ಬೆಳವಣಿಗೆಗೆ-ಅನುಸೂತ್ಯವಾದ ಪ್ರವಾಹಕ್ಕೆ-ಇದು ಸ್ವಲ್ಪ ಕುಂದನ್ನು, ಅಡಚಣೆಯನ್ನು ಉಂಟು ಮಾಡಿದರೂ ಪಂಪನ ಅಪಾರವಾದ ಅನುಭವದ ಪ್ರದರ್ಶನಕ್ಕೂ ಆಳವಾದ ರಸಿಕತೆಗೂ, ಉತ್ತಮವಾದ ವರ್ಣನಾಕೌಶಲಕ್ಯೂ ಇವು ಕೈಗನ್ನಡಿಯಂತಿವೆ. ಇವುಗಳನ್ನು ಪ್ರತ್ಯೇಕವಾಗಿ ಓದಿದರೆ ಸ್ವತಂತ್ರ ಭಾವಗೀತೆಗಳಂತೆಯೇ ಇವೆ. ಇವನ್ನು ಓದುವಾಗ ಭಾರತವನ್ನು ಓದುತ್ತಿರುವ ಅರಿವೇ ಇರುವುದಿಲ್ಲ. ಚಿತ್ರದ ಮೇಲೆ ಚಿತ್ರ, ಏಕಪ್ರಕಾರವಾದ ಚಿತ್ರಪಟದ ಸುರುಳಿಯನ್ನು ಬಿಚ್ಚಿದಂತೆ ಕಣ್ಣುಮುಂದೆ ಹಾದು ಹೋಗಿ ಕಣ್ಮನಗಳನ್ನು ತೃಪ್ತಿಗೊಳಿಸಿ ವಾಚಕರನ್ನು ಮುಗ್ಧರನ್ನಾಗಿಸುವುವು. ಮುಂದೆ ಅರ್ಜುನನೂ ಸುಭದ್ರೆಯೂ ಇಂದ್ರಪ್ರಸ್ಥವನ್ನು ಪ್ರವೇಶಿಸುವುದು, ಸುಭದ್ರಾವಿವಾಹ, ಅಭಿಮನ್ಯುವಿನ ಜನನ, ಮೃಗಯಾವಿಹಾರ-ಇವೇ ಮೊದಲಾದುವು ಬಹು ರಸಭರಿತವಾಗಿಯೂ ಮಿತಿಯರಿತೂ ವರ್ಣಿತವಾಗಿವೆ.

ಮುಂದೆ ಅರ್ಜುನನ ಅನ್ಯಾದೃಶ್ಯವಾದ ಪೌರುಷವನ್ನು ವ್ಯಕ್ತಗೊಳಿಸುವ ಖಾಂಡವದಹನದ ದೃಶ್ಯ ಕಣ್ಣಿಗೆ ಬೀಳುವುದು. ಇಲ್ಲಿ ಕವಿಯು ಪ್ರಸ್ತುತ ವಿಷಯವನ್ನು ಮನದಟ್ಟಾಗುವಂತೆ ವರ್ಣಿಸುವ ವೈಖರಿಯೂ ಗ್ರಹಿಸಲಸಾಧ್ಯವಾದುದನ್ನು ಶಬ್ದಗಳ ಸಂವಿಧಾನದಿಂದ ಚಿತ್ರಿಸುವ ನೈಪುಣ್ಯವೂ ಬಹು ಶ್ಲಾಘನೀಯವಾಗಿವೆ. ಇನ್ನು ಮೇಲೆ ಕಥೆಯು ಹೆಚ್ಚು ವ್ಯತ್ಯಾಸವಾಗದೆ ಯಥಾಕ್ರಮವಾಗಿ ರಾಜಸೂಯಾರಂಭದಿಂದ ಪಾಂಡವರ ಅರಣ್ಯಪ್ರವೇಶದವರೆಗೆ ಬಹು ಜಾಗ್ರತೆಯಿಂದ ಸಾಗುವುದು. ಮೂಲಭಾರತದ ಪ್ರಕಾರ ಧರ್ಮನಂದನನು ಅರಣ್ಯಪ್ರವೇಶ ಮಾಡಿದೊಡನೆಯೇ ಋಷಿಗಳು ಬಂದು ಧರ್ಮೋಪದೇಶವನ್ನು ಮಾಡಬೇಕು. ಪಂಪನು ಈ ರಗಳೆಯನ್ನು ಬಿಟ್ಟಿದ್ದಾನೆ. ಹೇಗೂ ಹನ್ನೆರಡು ವರ್ಷಗಳು ಕಳೆಯಬೇಕು. ಅದಕ್ಕಾಗಿ ಕೆಲವು ವ್ಯಾಖ್ಯಾನಗಳನ್ನು ಮಾತ್ರ ಪಂಪನು ನಿರೂಪಿಸುವನು. ಇಷ್ಟರಲ್ಲಿ ಅರ್ಜುನನು ಇಂದ್ರಕೀಲದಲ್ಲಿ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದು ಬರುವನು. ಮುಂದೆ ಅಜ್ಞಾತವಾಸ, ಗೋಗ್ರಹಣ, ಕೃಷ್ಣದೌತ್ಯ, ಯುದ್ಧನಿರ್ಣಯ ಮೊದಲಾದವುಗಳಲ್ಲಿ ಸಂಕ್ಷೇಪವಾಗಿಯೂ ಲಲಿತವಾಗಿಯೂ ನಿರೂಪಿತವಾಗಿವೆ.

ಇವೆಲ್ಲ ಹತ್ತು ಆಶ್ವಾಸಗಳಲ್ಲಿ ಮುಗಿಯುವುವು. ಪಂಪನು ಮುಂದಿನ ಆಶ್ವಾಸಗಳನ್ನು ಪೂರ್ಣವಾಗಿ ಯುದ್ಧಕ್ಕಾಗಿಯೇ ಉಪಯೋಗಿಸಿ ಕೊಂಡಿರುವನು. ಮನಸ್ಸು ಮಾಡಿದ್ದರೆ ಇದನ್ನು ಇನ್ನೂ ಕಡಮೆಮಾಡಬಹುದಾಗಿತ್ತು. ಆದರೆ ಸಾಹಸಾಭರಣನ ಯುದ್ಧ ಕೌಶಲವನ್ನು ವಿಸ್ತಾರವಾಗಿ ವರ್ಣಿಸಬೇಕೆಂದೋ ಸಮಸ್ತ ಭಾರತವನ್ನು ತಪ್ಪದೇ ಹೇಳಬೇಕೆಂದೋ ಯುದ್ಧರಂಗದಲ್ಲಿ ತನಗಿದ್ದ ಅಪಾರವಾದ ಪರಿಚಯವನ್ನು ಪ್ರದರ್ಶನ ಮಾಡಬೇಕೆಂದೋ ಆ ಭಾಗವನ್ನು ವಿಸ್ತರಿಸಿದ್ದಾನೆ. ಈ ಭಾಗದಲ್ಲಿಯೇ ಭಾರತದ ಪ್ರಭಾವ ವ್ಯಕ್ತಿಗಳಾದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ, ದುಶ್ಯಾಸನ, ಶಲ್ಯ, ಅರ್ಜುನ, ಭೀಮ, ಧರ್ಮರಾಯ, ಅಭಿಮನ್ಯು, ಸೈಂಧವ, ಶ್ವೇತ ಮೊದಲಾದವರ ಉದ್ದಾಮ ಸಾಹಸದ, ಔನ್ನತ್ಯದ, ಮಹಾನುಭಾವತ್ವದ, ತ್ಯಾಗದ ವಿವಿಧ ಪರಿಚಯಗಳು ಮನದಟ್ಟಾಗುವುದು. ಕೌರವರ ಪಕ್ಷದ ವೀರಾವೀರರೆಲ್ಲರೂ ಯುದ್ಧರಂಗದಲ್ಲಿ ಮಡಿಯುವರು. ಪಾಂಡವರಿಗೆ ಜಯವು ಲಭಿಸುವುದು. ಅರ್ಜುನನ ಪಟ್ಟಾಭಿಷೇಕದೊಂದಿಗೆ ಕಾವ್ಯವು ಪರಿಸಮಾಪ್ತಿಗೊಳ್ಳುವುದು.

ಪಂಪನ ಶೈಲಿ- ಒಬ್ಬ ಕವಿಯ ವ್ಯಕ್ತಿತ್ವವೂ ಮಹತ್ವವೂ ಅವನ ಶೈಲಿಯಲ್ಲಿ ಪ್ರತಿಬಿಂಬಿಸುತ್ತದೆ ಎಂದು ತಿಳಿದವರು ಹೇಳುತ್ತಾರೆ. ಇದು ಬಹುಮಟ್ಟಿಗೆ ನಿಜ. ಅವನ ಆವೇಶ, ಅವನ ಮನೋಭಾವ, ಅವನ ಲೋಕಾನುಭವ, ಅವನ ಪ್ರತಿಭಾಸಂಪನ್ನತೆ, ಜ್ಞಾನ, ವಾಗ್ಧೋರಣೆ ವ್ಯಕ್ತಿತ್ವ-ಪ್ರತಿಯೊಂದೂ ಅವನ ಶೈಲಿಯಲ್ಲಿ ಸುಟವಾಗಿ ಎದ್ದು ಕಾಣುತ್ತವೆ. ಕವಿಯು ಹುಲುಗವಿಯಾದರೆ ಹಿಂದಿನ ಕಾವ್ಯಗಳನ್ನೇ ಮಾದರಿಯಾಗಿಟ್ಟುಕೊಂಡು ಅವುಗಳ ಸಾರವನ್ನು ಗ್ರಹಿಸದೆ ನಿರ್ಜೀವವಾದ ಕಟ್ಟಡವನ್ನು ತೆಗೆದುಕೊಂಡು ಶಬ್ದಗಳ ಜೋಡಣೆಯಿಂದ ಶುಷ್ಕವಾಗಿ ಪಡಿಯಚ್ಚನ್ನು ನಿರ್ಮಿಸುತ್ತಾನೆ. ಅದರಲ್ಲಿ ಸತ್ವವಿರುವುದಿಲ್ಲ, ಜೀವವಿರುವುದಿಲ್ಲ, ಮನುಷ್ಯನ ಭಾವನಾಡಿಗಳನ್ನೂ ಮೀಟುವ ಆವೇಶವಿರುವುದಿಲ್ಲ. ಕವಿಯು ಅರ್ಥವಿಲ್ಲದ ಕವಿಸಮಯಗಳನ್ನು ಒಂದರಮೇಲೊಂದನ್ನು ಮೂಟೆ ಮೂಟೆಯಾಗಿ ತುಂಬಿ ಜುಗುಪ್ಸೆಯನ್ನಂಟು ಮಾಡುತ್ತಾನೆ. ಹಾಗಲ್ಲದೆ ಕವಿಯು ಪ್ರಜ್ಞಾಶಾಲಿಯೂ ಕಲ್ಪನಾಚತುರನೂ ಪ್ರತಿಭಾಸಂಪನ್ನನೂ ಅನುಭವ ಶಾಲಿಯೂ ಆದರೆ ಕಾವ್ಯದಲ್ಲಿ ಒಂದೂ ವಿಧವಾದ ಆವೇಶವನ್ನು ತುಂಬಿ ವಾಚಕನ ಮೇಲೆ ತನ್ನದೇ ಆದ ಸಮ್ಮೋಹನಾಸ್ತ್ರವನ್ನು ಬೀರಿ ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ. ಸಾಧಾರಣವಾಗಿ ಕನ್ನಡ ಕವಿಗಳನೇಕರಿಗೆ ಈ ಕಾವ್ಯಮರ್ಮ ತಿಳಿಯದೆಂಬ ಅಪಪ್ರಥೆಯಿದೆ. ಆದರೆ ಕವಿತಾಗುಣಾರ್ಣವನಾದ ಪಂಪನ ವಿಷಯವೇ ಬೇರೆ. ಆತನು ಕವಿ ವೃಷಭ. ಕವಿಯಾಗಿದ್ದಂತೆಯೇ ಕಲಿಯೂ ಆಗಿದ್ದವನು.ಕನ್ನಡ,ಸಂಸ್ಕೃತ,ಪ್ರಾಕೃತ,ಅಪಭ್ರಂಶುಗಳ ಪೂರ್ಣಪಾಂಡಿತ್ಯವುಳ್ಳವನು. ಜೀವನದ ವಿವಿಧ ಕ್ಷೇತ್ರಗಳ ಪ್ರತ್ಯಕ್ಷಾನುಭವವನ್ನುಳ್ಳವನು. ವೈದಿಕ ಮತ್ತು ಜೈನ ಸಂಸ್ಕಾರಗಳ ಮೇಳವನ್ನುಳ್ಳವನು. ರಸಿಕತೆಯನ್ನೂ ರಾಜಾಶ್ರಯವನ್ನೂ ಆತ್ಮಾಭಿಮಾನವನ್ನೂ ಆನಂದಾನುಭವವನ್ನೂ ಉಳ್ಳವನು.ತನ್ನ ಹಿಂದಿನ ಗ್ರಂಥಗಳ ಮಾದರಿಯಲ್ಲಿ ಗ್ರಂಥರಚನೆಗೆ ಹೊರಟಿದ್ದರೂ ಅವುಗಳ ಸಾರವನ್ನು ಉಪಯೋಗಿಸಿಕೊಂಡಿದ್ದರೂ ಮಾರ್ಗ ಮತ್ತು ಶೈಲಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದಾನೆ. ಮುಂದಿನ ಕವಿಗಳಿಗೆ ಮಾರ್ಗದರ್ಶಕನಾಗಿದ್ದಾನೆ. ಆದುದರಿಂದ ಅವನ ಶೈಲಿಯಲ್ಲಿ ಪ್ರತ್ಯೇಕ ವ್ಯಕ್ತಿತ್ವವಿದೆ. ಒಂದು ಮೋಹಕ ಶಕ್ತಿಯಿದೆ. ಅವನು ಯಾವುದನ್ನು ಚಿತ್ರಿಸಿದರೂ ಮನದಟ್ಟಾಗುವಂತೆ ಚಿತ್ರಿಸುತ್ತಾನೆ. ಅದನ್ನು ಓದುತ್ತ ವಾಚಕನೂ ಮುಗ್ಧನಾಗಿ ಅಲ್ಲಿಯ ಪಾತ್ರಗಳು ಮತ್ತು ಸನ್ನಿವೇಶಗಳಲ್ಲಿ ಐಕ್ಯನಾಗುವನು. ಕಥಾಶರೀರದಲ್ಲಿ ತಾನೂ ಭೂಮಿಕೆಯಾಗಿ ಬಿಡುವನು. ಪಂಪನ ಯಾವ ವರ್ಣನೆಯನ್ನು ತೆಗೆದುಕೊಂಡರೂ ಹೀಗೆಯೇ. ಬನವಾಸಿಯ ವರ್ಣನೆಯನ್ನು ನೋಡಿ. ಅದರ ವೈಭವವನ್ನು ಓದಿದ ಕೂಡಲೆ ವಾಚಕನೂ ಬನವಾಸಿಯಲ್ಲಿ ಮರಿದುಂಬಿಯಾಗಿಯೋ ಕೋಗಿಲೆಯಾಗಿಯೋ ಹುಟ್ಟಬೇಕೆಂದು ಆಶಿಸುವನು. ಸುಭದ್ರಾಪರಿಣಯಕ್ಕೆ ಮುಂಚಿನ ಚಂದ್ರಿಕಾವಿಹಾರದಲ್ಲಿ ವೇಶ್ಯಾವಾಟಿಕೆಯ ವರ್ಣನೆಯನ್ನು ಓದುತ್ತಿದ್ದರೆತಾನೂ ಆ ಬೀದಿಯಲ್ಲಿ ಸಂಚರಿಸುತ್ತಿರುವಂತೆ ಭ್ರಾಂತಿಗೊಳ್ಳುವನು. ದುಶ್ಯಾಸನನು ದ್ರೌಪದಿಯ ಕೇಶಗ್ರಹಣ ಮಾಡಿ ಸೆಳೆದುಕೊಂಡು ಬರುವುದನ್ನು ವಾಚಿಸಿದಾಗ ಪಾಪಿ ದುಶ್ಯಾಸನನನ್ನು ಸೀಳಿ ಬಿಡೋಣವೇ ಎಂಬ ಆಕ್ರೋಶವನ್ನು ತಾಳುವನು. ಭೀಮಸೇನನು ಕಾಲಮೇಘದಂತೆ ಗರ್ಜಿಸಿ ಆರ್ಭಟಮಾಡುವುದನ್ನು ಓದುತ್ತಿದ್ದರೆ ಹೃದಯದಲ್ಲಿ ನಡುಕ ಹುಟ್ಟಿ ಸ್ತಬ್ದನಾಗುವನು. ಬಿದ್ದ ಚಕ್ರವರ್ತಿಯ ಮುಡಿಯನ್ನು ಭೀಮನು ಒದೆಯುತ್ತಿರುವುದನ್ನು ಓದುತ್ತಿದ್ದರೆ ‘ಛೀ ಭೀಮಾ ನಿನಗೆಷ್ಟು ದುರಹಂಕಾರ ! ನೀನು ಮೂರ್ಛಿತನಾಗಿದ್ದಾಗ ದುರ್ಯೋಧನನು ನಿನ್ನಲ್ಲಿ ಕರುಣೆಯನ್ನು ತೋರದಿದ್ದರೆ ನೀನೇನಾಗುತ್ತಿದ್ದೆ, ಅವನು ನಿನ್ನಲ್ಲಿ ತೋರಿಸಿದ ಕರುಣೆಗೆ ಇದೇ ಪ್ರತಿಫಲ’? ಎಂದು ಹೇಳಲುದ್ಯುಕ್ತನಾಗುವನು. ಗದಾಯುದ್ಧದ ಪ್ರಾರಂಭದಲ್ಲಿ ಹಲಾಯುಧನು ದುರ್ಯೋಧನನನ್ನು ಕುರಿತು ‘ನೀ ಮರುಳ್ತನಮನೇಕೆ ಮಾಡಿದಯ್’ ಎಂಬುದಕ್ಕೆ ಅವನು ‘ಪಾಂಡುತನಯರ್ ನಿರ್ದೋಷಿಗಳ್, ಮದ್ಬಂಧು ಶೋಕಾಗ್ನಿಯಿಂದುರಿದಪ್ಪೆಂ’ ಎನ್ನುತ್ತಿದ್ದರೆ ‘ದುರ್ಯೋಧನ, ನೀನು ನಿಜವಾಗಿಯೂ ಮಹಾನುಭಾವನೇ ಅಹುದು’ ಎನ್ನುವನು. ಕೊನೆಗ ಪಂಪನು ವಿಕ್ರಮಾರ್ಜುನನ ಪಟ್ಟಾಭಿಷೇಕ ಮಹೋತ್ಸವವನ್ನು ವರ್ಣಿಸುವಾಗ ಅವನೂ ಅದರಲ್ಲಿ ಭಾಗಿಯಾಗಿ ಪಾಂಡವರು ಹಸ್ತಿನಾಪುರವನ್ನು ಪ್ರವೇಶಿಸಿವಾಗ ಅವರನ್ನು ಸ್ವಾಗತಿಸುವ ಪಲ್ಲವಿತವಾದ ಆಮ್ರವನವನ್ನು ಕಣ್ಣಾರೆ ನೋಡುವನು. ಗುಡಿತೋರಣಗಳಿಂದ ವಿರಾಜಿಸುವ ಬೀದಿಗಳಲ್ಲಿ ಓಡಾಡುವನು. ಸಂಸಾರ ಸಾರೋದಯನ ಒಡ್ಡೋಲಗದಲ್ಲಿ ವೈತಾಳಿಕರೂ ಮಂಗಳಪಾಠಕರೂ ಒಂದೇ ಕೊರಳಿನಿಂದ ಮಂಗಳವನ್ನೋದುತ್ತ ‘ಅರಿಗಂಗೀಗೆ ಮಂಗಳ ಮಂಗಳ ಮಹಾಶ್ರೀಯಂ ಜಯಂ ಶ್ರೀಯುಮಂ’ ಎಂದು ಘೋಷಿಸುತ್ತಿದ್ದರೆ ತಾನೂ ಅವರೊಡನೆ ‘ಅರಿಕೇಸರಿಗೆ ಜೈ’ ಎನ್ನುತ್ತಾನೆ. ಇದೆಲ್ಲ ಏತರಿಂದ? ಪಂಪನ ಅನ್ಯಾದೃಶ್ಯವಾದ ಕಾವ್ಯರಚನಾ ಪ್ರೌಢಿಮೆಯಿಂದಲ್ಲವೇ? ಅವನು ಯಾವುದನ್ನು ವರ್ಣಿಸಿದರೂ ತಾನು ಮೊದಲು ಅದನ್ನು ಚಿತ್ರಿಸಿಕೊಂಡು ಅದರ ಪ್ರತಿಬಿಂಬ ವಾಚಕರಿಗೆ ತೋರುವಂತೆ ಸಹಜವಾದ ಸ್ವಾಭಾವಿಕವಾದ ಮಾತಿನಿದಂ ಹೇಳುತ್ತ ಹೋಗುವುದರಿಂದ ಆಯಾ ವರ್ಣನೆಗಳನ್ನು ಓದುತ್ತಿದ್ದಾಗ ಆಯಾ ಚಿತ್ರಗಳೇ ವಾಚಕರೆದುರಿಗೆ ಜೀವದುಂಬಿ ನಲಿಯುವಂತೆ ಭಾಸವಾಗುತ್ತದೆ.

ಪಂಪನ ಕಾವ್ಯತತ್ತ್ವ : ಕವಿತಾಗುಣಾರ್ಣವನು ಉತ್ತಮಕಾವ್ಯದ ತಿರುಳನ್ನೂ ತನ್ನ ಕಾವ್ಯದ ಮೂಲತತ್ವವನ್ನೂ ತಾನೇ ಮುಂದಿನ ಪದ್ಯಗಳಲ್ಲಿ ಶ್ರುತಪಡಿಸಿದ್ದಾನೆ.

ಮೃದು ಪದಗತಿಯಿಂ ರಸಭಾ
ವದ ಪೆರ್ಚಿಂ ಪಣ್ಯವನಿತೆಯೊಲ್ ಕೃತಿಸೌಂದ
ರ್ಯದ ಚಾತುರ್ಯದ ಕಣಿಯಿನೆ
ವಿದಗ್ಧಬುಧಜನಮನ್, ಅಲೆಯಲೆವೇಡಾ ||

ಕಿವಿಯಂ ಬಗೆವುಗುವೊಡೆ ಕೊಂ
ಕುವೆತ್ತ ಪೊಸನುಡಿಯೆ ಪುಗುಗುಂ…
ಮೃದುಮಧುರ ವಚನರಚನೆಯೊಳ್
ಉದಾತ್ತಂ,ಅರ್ಥಪ್ರತೀತಿಯಂ ಕೇಳ್ವ ಜನ
ಕ್ಕಿದಿರೊಳ್ ಕುಡದಂದದು…ಕವಿಯ ಮನದೊಳಿರ್ದಂತೆವಲಂ ||

ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದು, ಒಂದಿ ದೇಸಿಯೊಳ್
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಂ, ಒಪ್ಪುಗುಂ,
ಆ ಸಕಳಾರ್ಥಸಂಯುತಂ, ಅಳಂಕೃತಿಯುಕ್ತಂ, ಉದಾತ್ತವೃತ್ತಿ ವಿ-
ನ್ಯಾಸಂ, ಅನೇಕ ಲಕ್ಷಣಗುಣಪ್ರಭವಂ, ಮೃದುಪಾದಮಾದ ವಾಕೀಸುಭಗಂ ಕಳಾಕಳಿತಂ

ಪಂಪನು ರಾಜದ್ರಾಜಕಮೆನಿಸಿದ ಪುಲಿಗೆರೆಯ ತಿರುಳುಗನ್ನಡದಲ್ಲಿ ತನ್ನ ಕಾವ್ಯಗಳನ್ನು ರಚಿಸಿದ್ದಾನೆ. ಅದರಲ್ಲಿ ಪೊಸದೇಸಿಯಿದೆ, ಬೆಡಂಗಿದೆ, ಅರ್ಥವ್ಯಕ್ತಿಯಿದೆ, ಅದು ‘ವಿದಿತಂ ಪ್ರಾತೀತಿಕಂ, ಕೋಮಲಂ, ಅತಿಸುಭಗಂ, ಸುಂದರಂ, ಸೂಕ್ತಿಗರ್ಭಂ, ಮೃದುಸಂದರ್ಭಂ, ವಿಚಾರಕ್ಷಮಂ, ಉಚಿತಪದಂ, ಶ್ರವ್ಯಂ, ಆರ್ಯಾಕುಲಂ, ವ್ಯಾಪ್ತದಿಗಂತಂ ಕಾವ್ಯಂ’ ಎಂದು ಕವಿಜನ ಮೆಚ್ಚಿದ್ದಾರೆ. ಇದು ನಿಚ್ಚಂ ಪೊಸತರ್ಣವಂಬೊಲ್ ಅತಿ ಗಂಭೀರಂ, ಲಲಿತಪದವುಳ್ಳುದು, ಪ್ರಸನ್ನ ಕವಿತಾಗುಣ ಪೂರ್ಣವಾದುದು. ಆತನಿಂದ ಮುಂದೆ ಬಂದ ಕವಿಗಳು ಜಾತಿಮತ ಪಕ್ಷಪಾತವಿಲ್ಲದೆ ‘ಸುಭಗಕವಿ ಪಂಪನಿಂ ವಾಗ್ವಿಭವೋನ್ನತಿ ನೆಗೞ್ದುದು, ರಸಿಕಾಗ್ರಣಿ ಹಂಪದೇವಂ’, ‘ಸತ್ಕವಿಹಂಪನಕೃತಿ ಸೌಂದರೀಸುಭಗಂ’, ‘ಪಂಪನ ರೀತಿ’, ‘ಪಂಪನಿಂಪು’, ‘ಪಂಪನ ಗುಣಂ’, ‘ಪಂಪನೊಂದಸದೃಶಮಪ್ಪ ರಸಭಾವಂ’, ಎಂದು ಪಂಪನ ಶೈಲಿಯ ಅಸಾಧಾರಣಶಕ್ತಿಯನ್ನು ತಮ್ಮ ತಮ್ಮ ಅನುಭವಾನುಸಾರವಾಗಿ ಸ್ತೋತ್ರಮಾಡಿದ್ದಾರೆ. ಆ ಒಂದೊಂದು ಗುಣವನ್ನೂ ಪ್ರತ್ಯೇಕವಾಗಿ ನಿರ್ದೇಶಿಸಿ ತೋರಿಸುವುದು ಕಷ್ಟವಾದ ಕಾರ್ಯ. ಕೆಲವು ಪ್ರಧಾನವಾದ ಗುಣಗಳ ಸ್ಥೂಲ ಪರಿಚಯವನ್ನು ಮಾತ್ರ ಮಾಡಿಸಲು ಪ್ರಯತ್ನಪಡಬಹುದು.

ಪಂಪನ ಶೈಲಿಯ ಪ್ರಧಾನಗುಣ ಪ್ರಸಾದ, ಗಾಂಭೀರ್ಯ, ಅರ್ಥವ್ಯಕ್ತಿ, ಕೊಂಕುನುಡಿ, ಧ್ವನಿ, ಮೃದುಪದರಚನೆ, ಹಿತಮಿತ ಮೃದವಚನಪೂರ್ಣತೆ ಮತ್ತು ಸಂಯಮ. ಅವನು ಎಂದೂ ಆಡಂಬರಕ್ಕೂ ಆರ್ಭಟಕ್ಕೂ ಪ್ರಯತ್ನಪಡುವುದಿಲ್ಲ. ಆದುದರಿಂದಲೇ ಅವನ ಕಾವ್ಯದಲ್ಲಿ ವಿಶೇಷವಾದ ಓಜಸ್ಸಾಗಲಿ ಪದವೈತ್ರಿಯಾಗಲಿ ಕಾಣಲಾಗುವುದಿಲ್ಲ. ಈ ಎರಡು ಗುಣಗಳೂ ಶಕ್ತಿಕವಿಯಾದ ರನ್ನನಿಗೆ ಮೀಸಲು. ಚಿತ್ತಸ್ಥೆ ರ್ಯದಿಂದ ಮೃದುಪದಗತಿಯಿಂದ ಪೂರ್ವನಿಷ್ಠವಾದ ಆದರ್ಶಸಾಧನೆಗಾಗಿ ಸಂಯಮದಿಂದ ಸಾಗುವುದು ಪಂಪನ ಸ್ವಭಾವ. ಬಾಹುಬಲಿಯು ಅಣ್ಣನಾದ ಭರತನಿಗೆ ತಿಳಿಸುವ ಮುಂದಿನ ಪ್ರಾರ್ಥನೆ ಈ ಗುಣಗಳನ್ನು ಉದಹರಿಸುತ್ತದೆ.

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಳೋ
ತ್ಪಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನ್, ಆಂ ನಿನಗಿತ್ತೆನ್, ಇದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಂ, ಆಟಿಸಿದಂದು ನೆಗೞ್ತೆ ಮಾಸದೇ||

ಉಭಯಭಾಷಾಪಂಡಿತನಾದ ಪಂಪನಿಗೆ ಸಂಸ್ಕೃತದಲ್ಲಿ ವ್ಯಾಮೋಹ ಹೆಚ್ಚು. ಆತನು ತನ್ನ ಕಾವ್ಯಗಳನ್ನು ರಚಿಸಿದುದು ಪಂಡಿತರನ್ನು ಮೆಚ್ಚಿಸುವುದಕ್ಕಾಗಿಯೂ ಅಹುದು. ಅಚ್ಚಗನ್ನಡಶೈಲಿಯಲ್ಲಿ ಬರೆಯುವುದು ಇನ್ನೂ ಅವನ ಕಾಲಕ್ಕೆ ರೂಢಿಗೆ ಬಂದಿರಲಿಲ್ಲ. ಅಷ್ಟೇ ಅಲ್ಲದೆ ಸಂಸ್ಕೃತಪಂಡಿತರಾದ ಕನ್ನಡ ಕವಿಗಳು ತಮ್ಮ ಕನ್ನಡ ಕಾವ್ಯಗಳಲ್ಲಿಯೂ ಸಂಸ್ಕೃತವನ್ನು ತುಂಬುವುದು ಒಂದು ಗುಣವೆಂದು ಭಾವಿಸಿದ್ದರು. ಆದುದರಿಂದ ಪಂಪನ ಕಾವ್ಯವು ಸಂಸ್ಕೃತಮಯವಾಗಿರುವುದು ಆಶ್ಚರ್ಯವೇನೂ ಅಲ್ಲ. ಅವನು ಕೆಲವೆಡೆಗಳಲ್ಲಿ ಪೂರ್ಣವಾಗಿ ಸಂಸ್ಕೃತವೃತ್ತಗಳನ್ನೇ ರಚಿಸಿರುವನು. ಮುಂದಿನ ಈಶ್ವರನ ಪ್ರಾರ್ಥನೆಯನ್ನು ನೋಡಿ:

ಪ್ರಚಂಡಲಯತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ವಿಳಯಯಾ ಭುವಾ ಸಗಿರಿ ಸಾಕಾರದ್ವೀಪಯಾ
ಕುಲಾಲಕರನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸಸರ್ವಜಗತಾಂ ಗುರು, ಗಿರಿಸುತಾಪತಿ ಪಾತು ವ||

ಆದಿಪುರಾಣದಲ್ಲಿ ಬರುವ ಮುಂದಿನ ಆರೋಗಣೆಯ ವರ್ಣನೆಯು ಅವನ ಸಂಸ್ಕೃತ ಗದ್ಯದ ವೈಖರಿಯನ್ನು ವಿಶದಪಡಿಸುವುದು.

ಭರತಮಹೀಶಂ ಭೋಜನಭೂಮಿಗೆ ರಾಜಹಂಸವಿಳಾಸದಿಂ ಬಿಜಯಂಗೆಯ್ದು ಸಕಲ ವಿದ್ಯಾಪ್ರವೀಣಗುರುಜನಾರ್ಯಜನವಿಳಾಸಿನೀಜನಪರಿವೃತನ್ ಅತಿಮೃದುರಸನಾಮರ್ದನ ಮಾತ್ರ ದ್ರಾವಣೀಯಘೃತಪೂರಮುಮಂ ಅಲ್ಪದಶನದಂಶಮಾತ್ರಖಂಡನೀಯಮಂಡಕಮುಮಂ ಅತ್ಯಂತ ಕೋಮಲತಾಲುತಳಸಂಘಟ್ಟಮಾತ್ರಕ್ಷೋದನೀಯಮೋದಕಮುಮಂ, ಅನಿಷ್ಠುರೋಷ್ಠ ಪುಟಮಧ್ಯ ಸಂಧಾರಣಮಾತ್ರಚೂರ್ಣನೀಯ ಶಾಕವರ್ತಿಕಮುಮಂ, ಅತಿ ದೊರೋಚ್ಛ್ವಾಸ ವಿಕಾಸನಾಸಾಂಜಲಿಪುಟ ಪೀಯಮಾನದುಗ್ಧ ಹಯ್ಯಂಗವೀನಮುಮಂ, ನೀಹಾರಶಕಲಧವಲಪರಿಣತಕಪಿತ್ಥಫಲಪರಿಮಳ ಮಧುರದಯುಮಂ, ಏಕೀಭೂತಸಕಲ ಭುವನಶಿಶಿರ ದ್ರವ್ಯಸಂಚಾರದ್ರವ ಶಂಖಾಕಾರ ಶಿಖರಿಣೀರಮಣೀಯಮುಂ ಅಮೃತಪಿಂಡಾಯಮಾನ ಅಪಿಂಡದುಗ್ಧಸ್ನಿಗ್ಧಮುಮಪ್ಪ ಮನೋ ಹರಾಹಾರಮಂ||

ಪಂಪಭಾರತದಲ್ಲಿಯೇ ಹದಿನಾಲ್ಕನೆಯ ಆಶ್ವಾಸದಲ್ಲಿ ಅರಿಗನಿಗೆ ವಂದಿಮಾಗಧರು ಓದುವ ಮಂಗಳವೃತ್ತಗಳು ಸಂಪೂರ್ಣವಾಗಿ ಸಂಸ್ಕೃತಶ್ಲೋಕಗಳಾಗಿಯೇ ಇವೆ.

ಆದರೂ ಪಂಪನಿಗೆ ಅದರ ಇತಿ ಗೊತ್ತು. ಅದಕ್ಕಾಗಿಯೇ ಅವನು ಪುರಾಣ ಕಾವ್ಯವಾದ ‘ಆದಿಪುರಾಣ’ದಲ್ಲಿ ತುಂಬಿರುವಷ್ಟು ಸಂಸ್ಕೃತಶಬ್ದಗಳನ್ನೂ ಪಾರಿಭಾಷಿಕ ನುಡಿಗಟ್ಟನ್ನೂ ಲೌಕಿಕ ಕಾವ್ಯವಾದ ‘ವಿಕ್ರಮಾರ್ಜುನ ವಿಜಯ’ದಲ್ಲಿ ತುಂಬಿಲ್ಲ. ಸಂಸ್ಕೃತ ಶಬ್ದಗಳಿಂದ ಒಂದು ವಿಧವಾದ ಘೋಷವೂ, ಆರ್ಭಟವೂ, ಢಣಢಣತ್ಕಾರವೂ ಬರುವುದೆಂಬುದು ಆತನಿಗೆ ತಿಳಿದ ವಿಷಯ. ಆದುದರಿಂದ ವೀರರಸಪ್ರಧಾನವಾದ ಭೇರಿಯ ನಾದ, ರ ಪ್ರತಿಜ್ಞೆ, ಘೋರಯುದ್ಧ, ಜಯಘೋಷಣ- ಈ ಸಂದರ್ಭಗಳಲ್ಲಿ ಮಾತ್ರ ಸಂಸ್ಕೃತ ಶಬ್ದಗಳನ್ನು ಉಪಯೋಗಿಸಿಕೊಂಡು ಮಿಕ್ಕೆಡೆಗಳಲ್ಲೆಲ್ಲ ಕನ್ನಡ ಪದಗಳನ್ನೇ ಉಪಯೋಗಿಸಿ ಉತ್ಕೃಷ್ಟ ಭಾಷಾಸರಣಿಯಲ್ಲಿ ಕಾವ್ಯವನ್ನು ರಚಿಸಿದ್ದಾನೆ. ಇವನ ಗ್ರಂಥಗಳಲ್ಲಿ- ಅದರಲ್ಲಿಯೂ ಪಂಪಭಾರತದಲ್ಲಿ ಸಿಕ್ಕುವಷ್ಟು ಅಚ್ಚಗನ್ನಡ ಶಬ್ದಗಳು ಮತ್ತಾವ ಕನ್ನಡ ಕೃತಿಗಳಲ್ಲಿಯೂ ಸಿಕ್ಕಲಾರದೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಆದರೂ ಅವನ ಕೆಲವು ಸಮಾಸಪದಗಳು ಬಹುದೀರ್ಘವಾಗಿ ಅರ್ಥಕ್ಕೆ ತೊಡಕನ್ನುಂಟು ಮಾಡಿ ಉಚ್ಚಾರಣೆಗೂ ಕಷ್ಟವಾಗುವುವು. ಲಘುವಾಗಿ ಸರಳವಾಗಿದ್ದಾಗ ಅರ್ಥಪೂರ್ಣವೂ ಸುಶ್ರಾವ್ಯವೂ ಆಗಿರುತ್ತವೆ.

‘ಬಾಣಾಸನ ಬಾಣ ಪಾಣಿ ಕರ್ಣಂ ಬಂದಂ’ ‘ಕಷ್ಟಂ ದುಖಾನಿಳಪರಿ
ಪುಷ್ಪಂ’ ‘ಸಂಸ್ಕೃತಿ ಭೋಗಂಗಳ್ ಭೋಗಿ ಭೋಗದಿಂ ವಿಷಮಂಗಳ್’,

ಹಿಂದೆಯೇ ತಿಳಿಸಿರುವಂತೆ ಪಂಪನ ಹಿರಿಮೆ ಅವನ ವಿವಿಧ ರೀತಿಯ ವರ್ಣನೆಗಳು. ಅವನ ಅನ್ಯಾದೃಶವಾದ ಲೋಕಾನುಭವವೇ ಇದಕ್ಕೆ ಕಾರಣ. ತನ್ನ ಕಾಲದ ಎಲ್ಲ ಕ್ಷೇತ್ರಗಳ ವಿವಿಧ ಪರಿಚಯವೂ ಅವನಿಗಿದೆ. ಆದುದರಿಂದಲೇ ಅವನು ಪರಮಾಣುವಿನಿಂದ ಪರಮೇಶ್ವರನವರೆಗೆ ಯಾವುದನ್ನಾದರೂ ಪ್ರತ್ಯಕ್ಷೀಕರಿಸಬಲ್ಲ. ಸಾಸಿವೆಯಲ್ಲಿ ಸಾಗರವನ್ನು ತುಂಬಲು ಬಲ್ಲ. ಮಧುವನ್ನು ಮೇರುವಾಗಿಸಲೂ ಬಲ್ಲ. ವ್ಯಕ್ತಿ, ಸನ್ನಿವೇಶ, ಋತು, ಬೇಟೆ, ವೇಶ್ಯಾವಾಟಿ, ಪಾನಗೋಷ್ಠಿ, ಯುದ್ಧ ಮೊದಲಾದ ಯಾವುದರ ವರ್ಣನೆಯಾದರೂ ಮೂರ್ತಿಮತ್ತಾಗಿ ಎದುರಿಗಿರುವಂತೆ ಭಾಸವಾಗುವುದು. ಮಯನನ್ನು ಸನ್ಮಾನಿಸಿ ಕಳುಹಿಸಿದನಂತರ ಧರ್ಮಪುತ್ರನು ತನ್ನ ನಾಲ್ವರು ತಮ್ಮಂದಿರೊಡಗೂಡಿ ಓಲಗಗೊಂಡಿರುವಾಗ ಇಂದ್ರಲೋಕದಿಂದ ಬಂದ ನಾರದರ ಚಿತ್ರವಿದು.

ಸರಿಗೆಯೊಳ್ ಸಮೆದಕ್ಷಮಾಲಿಕೆ, ಪೊನ್ನ ಮುಂಜಿ, ತೊಳಪ್ಪ ಕ
ಪ್ಪುರದ ಭಸ್ಮರಜಸ್ತ್ರಿಪುಂಡ್ರಕಮೊಪ್ಪೆ, ಪಿಂಗಜಟಾಳಿ ತಾ
ವರೆಯ ಸೂತ್ರದೋಳಾದ ಜನ್ನವಿರಂ, ದುಕೂಲದ ಕೋವಣಂ
ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರುಳ್ಚಿದಂ ||

ಹಾಗೆಯೇ ಪಾಸುಪತಾಸ್ತ್ರವನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಿರುವ ಸೌಮ್ಯ ಭಯಂಕರನಾದ ಅರ್ಜುನನ ಚಿತ್ರ ಮತ್ತೂ ಸ್ಪಷ್ಟವಾಗಿದೆ.

ಅದಿರದ ಚಿತ್ತಂ, ಅಳ್ಕದ ಮನಂ, ಬಗೆಗೊಳ್ಳದೆ ಮೋಹಂ, ಎತ್ತಿದ ಕ
ಟ್ಟಿದ ಜಡೆ, ತೊಟ್ಟ ರತ್ನಕವಚಂ, ಕೊರಲೊಳ್ ಸಲೆ ಕೋದ ಬಿಲ್ ಪ್ರಯ
ತ್ನದೆ ಬಿಗಿದಿರ್ದೆರೞ್ದೊಣೆ ಮಿಸುಪ್ಪಸಿಖೇಟಕಂ, ಅಂತಿವೊಂದುಗುಂ
ದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ||

ಪಂಪನ ಸನ್ನಿವೇಶಚಿತ್ರಗಳೂ ಹೀಗೆಯೇ. ವಾಚಕರ ಮುಂದೆ ಪ್ರತ್ಯಕ್ಷವಾಗಿ ಬಂದು ನಿಲ್ಲುವುವು. ಏಕಚಕ್ರಪುರದಲ್ಲಿ ಬಕಾಸುರನಿಗೆ ಆಹಾರವನ್ನು ಕಳುಹಿಸುವುದಕ್ಕೆ ಜನಗಳಿಲ್ಲದೆವ್ಯಸನ ಪಡುತ್ತಿರುವ ಬ್ರಾಹ್ಮಣನ ಮನೆಯ ದೃಶ್ಯ ಎಷ್ಟು ಹೃದಯ ವಿದ್ರಾವಕವಾಗಿದೆ!

ಅಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ, ಧರ್ಮಪತ್ನಿ ಬಾ
ಯಱದು ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನಾದ ಶೋಕದಿಂ
ಗೞಗೞ ಕಣ್ಣನೀರ್ ಸುರಿಯೆ, ಚಿಂತಿಪ ಪಾರ್ವನ ಶೋಕದೊಂದು ಪೊಂ
ಪುೞಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ||

ದುರ್ಯೋಧನನು ಕಾಲವಂಚನೆಗಾಗಿ ಮುಳುಗಿರಲು ಬಂದ ವೈಶಂಪಾಯನ ಸರೋವರದ ದೃಶ್ಯ ಅತ್ಯಂತ ಭಯಂಕರವಾಗಿದೆ.

ಇದು ಪಾತಾಳಬಿಲಕ್ಕೆ ಬಾಗಿಲ್, ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ, ಪೆಱತಲ್ತು, ಇದುಗ್ರಲಯಕಾಳಾಂಭೋಧರಚ್ಛಾಯೆ ತಾ
ನೆ ದಲ್, ಎಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕಬಳಾಕಾನೀಕ ರಾವಾಕುಳಂ||

ಮಹಾಕಾವ್ಯಗಳ ಪ್ರಧಾನವಾದ ಅಷ್ಟಾದಶವರ್ಣನೆಗಳಲ್ಲಿ ಋತುವರ್ಣನೆ ಒಂದು ಪ್ರಧಾನವಾದ ಭಾಗ. ಆದುದರಿಂದ ಎಲ್ಲ ಕವಿಗಳಲ್ಲಿ ಅವನ್ನು ತಮ್ಮ ಕಾವ್ಯಗಳಲ್ಲಿಉಪಯೋಗಿಸದೇ ಇರುವುದಿಲ್ಲ. ಆದರೆ ಅವೆಲ್ಲ ಸಾಂಪ್ರದಾಯಿಕವಾದ ಕವಿಸಮಯಗಳ ಮಾಲೆಯಾಗಿರುತ್ತವೆ. ಆದರೆ ಅವೇ ಋತುವರ್ಣನೆಗಳು ಪಂಪನ ಕಾವ್ಯಗಳಲ್ಲಿ ಬಹುನವೀನವಾಗಿಯೂ ಅನುಭವಯೋಗ್ಯವಾಗಿಯೂ ಇವೆ. ಮುಂದಿನದು ವರ್ಷಾ ಕಾಲದ ವರ್ಣನೆ: ‘ಕರಿಯ ಮುಗಿಲ್ಗಳಿಂ ಗಗನಮಂಡಲಮೊಪ್ಪಿರೆ, ಸೋಗೆಯಿಂ ವನಾಂತರಮೆಸೆದೊಪ್ಪೆ, ತೋರ್ಪ ಮೊಳೆವುಲ್ಗಳಿನ್ ಈ ಧರಣೀವಿಭಾಗಮೊಪ್ಪಿರೆ, ಪೊಸವೇಟಕಾಱರ ಎರ್ದೆಗಳು ಪೊಸಕಾರ ಪೊಡರ್ಪು ಕಂಡು ಅದೇಂ ಕರಿತುವು ಅದೇಂ ಕಲಕಿದುವು ಅದೇಂ ಕುೞಗೊಂಡವು ಅದೇಂ ಕನಲ್ದವೋ’ ‘ಪಯೋಧರಕಾಲದೊಳ್ ಎರಡು ತಡಿಯುಮಂ ಪೊಯ್ದು ಪರಿವ ತೊಗಳುಮಂ ತೊವಲ್ತು ಸೊಗಯಿಸುವ ಅಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸುವಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ, ಬಲಿಗೆದಱದಂತೆ ಉಪಾಶ್ರಯಂಬಡೆದಳಂಕರಿಸಿದ ಇಂದ್ರಗೋಪಂಗಳುಮಂ, ಕಿಸುಗಾಡ ನೆಲಂಗಳೆಳದಳಿರ ಬಣ್ಣಮಂ ಕೆಯ್ಕೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು’.

ಇದು ವಸಂತಋತುವಿನ ವರ್ಣನೆ:

ಅಲರ್ವದಿರ್ಮುತ್ತೆ ಪೂತ ಪೊಸಮಲ್ಲಿಗೆ, ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ ಬಗೆದ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ
ಗಿಲೆ, ನನೆದೋಱ ನುಣ್ಪೆಸೆವ ಮಾಮರನ್, ಒರ್ಮೊದಲಿಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್

ಅಷ್ಟೇ ಅಲ್ಲ! ‘ಬಳ್ವಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಂ ಮಾಮರಂಗಳುಮಂ ಮರದಿಂದ ಮರಕ್ಕೆ ದಾಂಗುಡಿಯಿಡುವ ಮಾಧವೀಲತೆಗಳುಮಂ ನನೆಯ ಬಿರಿಮುಗ್ಗುಳ್ಗಳ ತುಱುಗಲೊಳೆಱಗಿ ತುಱುಗಿದ ಕಲ್ಪಲತೆಗಳುಮಂ ಭೋರ್ಗರೆದು ಮೊರೆವ ತುಂಬಿಗಳುಮಂ, ರಂಗವಲಿಯಿಕ್ಕಿದಂತೆ ಪುಳಿನಸ್ಥಳಗಳೊಳ್ ಉದಿರ್ದ ಕೞವೂಗಳುಮಂ ನಿಱನಿಱಗೊಂಡು ಸೊಗಯಿಸುವ ನಿಱುಗನ ನಿಱುದಳಿರ ಗೊಂಚಲ್ಗಳುಮಂ ಕಳಿಕಾಂಕುರಂ ಗಳುಮಂ ಸೊನೆಯ ಸೋನೆಗಳುಮಂ ಒಳಕೊಂಡು ವನಂಗಳ್ ಅನಂಗಂಗೆ ತೊೞ್ತುವೆಸಂಗೆಯ್ದುವು.’ ಶರತ್ಕಾಲದ ವರ್ಣನೆ ಇನ್ನೂ ಸೊಗಸು. ‘ಅಳಿ ಬಿರಿದಿರ್ದ ಜಾದಿಯೊಳೆ ಪಲ್ಮೊರೆಯುತ್ತಿರೆ ಹಂಸೆ ಪೂತ ಪೂಗೊಳದೊಳೆ ರಾಗಿಸುತ್ತಿರೆ, ಶುಕಾವಳಿ ಬಂಧುರ ಗಂಧಶಾಳಿ ಸಂಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ ಚಕೋರಂ ಇಂದು ಮಂಡಳಗಳಿತಾಮೃತಾಸವಮನುಂಡುಸುರುತ್ತಿರೆ ಚೆಲ್ವು ಶಾರದಂ-ಪುಳಿಯೊಳೆ ಕರ್ಚಿದ ಬಾಳ- ಬಣ್ಣಮನೆ ಪೋಲ್ವಾಕಾಶಂ, ಆಕಾಶಮಂಡಳಮಂ ಪರ್ವಿದ ಬೆಳ್ಮುಗಿಲ್ ಮುಗಿಲ ಬೆಳ್ಪು ಒಳ್ಪೊಕ್ಕು ತಳ್ಪೊಯ್ಯ ಬಳ್ವಳ ನೀಳ್ದಿರ್ದ ದಿಶಾಳಿ, ಶಾಳಿವನ ಗಂದಾಂಧದ್ವಿರೇಫಾಳಿ ಕಣ್ಗೊಳಿಸಿತ್ತು ಒರ್ಮೆಯೆ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ.’

ಮೃಗಯಾವಿನೋದದಲ್ಲಿಯೂ ಪಂಪನಿಗೆ ವಿಶೇಷ ಪರಿಚಯವಿದ್ದಿರಬೇಕು. ಪೆರ್ವೇಂಟೆ, ಕಿಱುವೇಂಟೆ, ದೀವದ ವೇಂಟೆ, ಪಂದಿಮೇಂಟೆ ಮೊದಲಾದವುಗಳ ವೈವಿಧ್ಯವನ್ನೂ ಬೇಂಟೆಯ ನಾಯ್, ಬೇಂಟೆವಸದನಂ, ಬೇಂಟೆಯ ಬಲೆಗಳ ಲಕ್ಷಣಗಳನ್ನೂ ಬೇಂಟೆಯ ಬಿನದ, ಬೇಂಟೆಯ ತಂತ್ರ, ಬೇಂಟೆಯ ಪ್ರಯೋಜನಗಳನ್ನೂ ಕಣ್ಕಟ್ಟುವಂತೆ ವರ್ಣಸಿದ್ದಾನೆ. ‘ಅವನ ಬೇಟೆಗಾಱರು, ನೆಲನುಂ ಗಾಳಿಯುಂ ಕೆಯ್ಯುಂ ಮೃಕಮನಱದು ಕಾಲಾಳೊಳಂ ಕುದುರೆಯೊಳಮೊಳಗಂ ಬರಲ್ ಬಲ್ಲರ್’ ಪೆರ್ವೇಂಟೆ ಮತ್ತು ದೀವದ ಬೇಂಟೆಯ ವಿಷಯವನ್ನು ತಿಳಿಸುವುದಾದರೆ ‘ಗಾಳಿಯುಂ ಕೞುವುಂ ಮುೞುವುಂ ಕಾಪುಂ ಮೇಪುಂ ತೋಡುಂ ಬೀಡುಂ ದೆಸೆಯುಂ ಕೊಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಱುಂ ಕೆದಱುಂ ಪೆರ್ಚುಂ ಕುಂದುಮನಱದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಂ ಏಱದುದನ್ ಏಱಸಲುಂ ಜಾಣನಾಗಿ ಮೂಱುಕೊಂಬುಮನ್ ಅಱು ನಾಣ್ಪೋಗುಮಂ ಎರೞ್ಪಜ್ಜೆಯುಮಂ ಮೂರು ಪೊೞ್ತುಮಂ ಮೃಗದ ಮೂಱರವುಮಂ ಅಱುಆರಯ್ಕೆಯುಮಂ ಗಾಳಿಯುಮಂ ಎಱಂಕೆಯುಮಂ ಬಲ್ಲರಾಗಿ ನಂಬಿದ ಬರುವುಮಂ ನಂಬದ ಬರುವುಮಂ ಅಱದುಂ ಅಲೆಯದುದಂ ಅಲೆಯಿಸಲು ಅಲೆದುದಂ ತೊಲಗಿಸಲುಂ ನಂಬದುದಂ ನಂಬಿಸಲುಂ ನಂಬಿದುದಂ ಬಿಡಿಸಲುಂ ಒಳಪುಗುವುದರ್ಕೆಡೆಮಾಡಲುಂ ಎಡೆಯಾಗದ ಮೃಗಮಂ ಅವಂಕಿಸಲಂ ಒಲ್ದುಂ ಒಲ್ಲದ ನಲ್ಲರಂತೆ ಮಿಡುಕಿಸಲುಂ ಪಣಮೊಡ್ಡಿದರಂತೆ ಅಡ್ಡಮಾಡಲಂಂ ಎಸೆದ ದೆಸೆಗಳ್ಗೆ ಓಡಿಸಲುಂ ಬಲ್ಲರ್’.

ಬೇಟೆಯಿಂದಾಗುವ ಪ್ರಯೋಜನವನ್ನು ಮುಂದಿನ ಪದ್ಯದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ-

ಪಸಿವು ದೊರಕೊಳ್ಗುಂ, ಉಣಿಸುಗಳಿನಿಕೆಯ್ಗುಂ, ಆವಂದದೊಳ್ ಕನಲ್ದಾ ಮೆಯ್ಯನ್
ಅಸಿಯಾನಾಗಿಪುದು, ಉಳಿದುವಪ್ಪುದು ಬಗೆಗೊಳಲಪ್ಪುದು ಮೃಗದ ಮೆಯ್ಯೊಳ್ ಲ
ನಿಸದಮೆಸೆವುದಂ ಬಿಲ್ಲಾಳ ಬಲ್ಬಲ್ಮೆ ತನ್ನೊಳಂ, ಇಸುತೆ ಲೇಸಪ್ಪುದು
ಬಸನಮೆಂದು, ಅಱಯದೆ, ಏಳಿಸುವರ್ ಬೇಂಟೆಯಂ, ಬೇಂಟೆಯೆ ಬಿನದಂಗಳರಸಲ್ತೆ

ಸ್ವಯಂ ಯೋಧನಾಗಿ ಯುದ್ಧರಂಗದ ಪ್ರತ್ಯಕ್ಷಾನುಭವವಿದ್ಧ ಪಂಪನಿಗೆ ಯುದ್ಧವರ್ಣನೆ ನೀರು ಕುಡಿದಂತೆ. ಅಲ್ಲಿ ಅವನು ಕಾಣದ ಕಾಣ್ಕೆಯಿಲ್ಲ, ನೋಡದ ನೋಟವಿಲ್ಲ, ತಿಳಿಯದ ತಂತ್ರವಿಲ್ಲ, ಅರಿಯದ ಆಯುಧಗಳಿಲ್ಲ. ಯುದ್ಧಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಯುದ್ಧ ಪ್ರಯಾಣ ಸಿದ್ಧತೆ, ಭೇರಿ, ವೀರಾಲಾಪ, ರಪ್ರತಿಜ್ಞೆ, ಬೀಳ್ಕೊಡುಗೆ, ಧ್ವಜಸಂಚಳನ, ರಥಚೀತ್ಕಾರ, ಭಟರ ಸಿಂಹನಾದ, ಉತ್ಕಟಜ್ಯಾರವ, ಶರಾಸಾರದ ತೀವ್ರತೆ, ವೈವಿಧ್ಯ, ಚೋದಕರ ವೇಗ, ಹಸ್ತ್ಯಶ್ವರಥ ಪದಾತಿಗಳ ಯುದ್ಧ ಪ್ರತಿಯುದ್ಧ, ಬಿದ್ದವರ ಕೊರಗು, ಎದ್ದವರ ಮೊಳಗು, ಪ್ರೇಕ್ಷಕರ ಪ್ರೇರಣೆ, ದೇವತೆಗಳ ಪುಷ್ಪವೃಷ್ಟಿ-ಇವು ಒಂದೊಂದರ ಅತಿ ವಿಶದ ವಿವರಗಳನ್ನು ಗ್ರಂಥದಲ್ಲಿ ಕಾಣಬಹುದು. ಕಣಯ, ಕಂಪಣ, ಮುಸಲ, ಮುಸುಂಡಿ, ಮುದ್ಗರ, ತೋಮರ, ಭಿಂಡಿವಾಳ, ಹಂತಿ, ಬಾಳ್, ಕಕ್ಕಡೆ, ಬುಂಧುರ, ಪಂಚರಾಯುಧ, ಆವುತಿ, ಮಾಳಜಿಗೆ, ಜಾಯಿಲ, ಪರಶು, ಶರ, ಸಂಕು, ಇಟ್ಟಿ, ಪಾರುಂಬಳೆ, ಮಾರ್ಗಣೆ- ಇವು ಆಯುಧಗಳು. ನಿರ್ವಾಯ, ನರುವಾಯ, ಮುಂಮೊನೆ, ನೆರಕೆ, ನಾರಾಚ, ತಗರ್ತಲೆ, ಕಣೆ, ಕಕ್ಕಂಬು, ಪೆಯಮುರುಗ, ಕಲ್ಲಂಬು, ಬಟ್ಟಿನಂಬು, ಪಾಯಂಬು, ಮೊನೆಯಂಬು, ಕಿಳ್ತಂಬು, ಬೆಳ್ಮಸೆಯಂಬು ಇವು ಬಾಣವಿಶೇಷಗಳು. ವಂಚನೆ, ಕೇಣ, ಆಸನ, ಕೊಸೆ, ದೆಸೆ, ದಿಟ್ಟಿ, ಮುಟ್ಟಿ, ಕಲ ಜಿಂಕೆ, ನಿವರ್ತನ, ಜಾಣ್ಮೆ, ಏರ್ವೆಸನ್, ಪುಸಿವಂಚನೆ, ಪುಸಿ, ಅಗಲಿತು, ತಕ್ಕುದಕ್ಕುಪಗೆ, ಕಯ್ಬನೆ, ಕೆಯ್‌ಕುಸುರಿ, ನುಸುಳ್, ತಳಗೋಂಟೆ, ಮೊದಲಾದವು ಯುದ್ಧತಂತ್ರಗಳು. ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬುವು ಆಸನಗಳು. ಮಂಡಳ, ಸವ್ಯ, ಅಪಸವ್ಯ ಭ್ರಾಂತ, ಉದ್ಭ್ರಾಂತ, ಸ್ಥಿತ, ಚಕ್ರ, ಸ್ಪಂದನ ಬಂಭನ ಇವು ರಥಕಲ್ಪಗಳು. ಪಾತ, ಲಕ್ಷ್ಮ, ಶೀಘ್ರ, ಘಾತ, ಬಹುವೇಗ, ವಿದ್ಯಾಧರಕರಣ ಇವು ಗದಾಯುದ್ಧದ ಪಟ್ಟುಗಳು. ಶರಸಂಕರ್ಷಣ, ಆಕರ್ಷಣ, ಹರಣಾದಿಗಳು ವಿವಿಧ ಶರಕಲ್ಪಕಳಾಪರಿಣತಿಗಳು. ಸಂ, ನಿಗ್ರಹ, ಯಾನ, ಆಸನ, ಸಂಶ್ರಯ, ದ್ವೆ ಭಾವಗಳು ಷಾಡ್ಗುಣ್ಯಗಳು. ಮೂಲ, ಭ್ರತ್ಯ, ಸುಹೃತ್, ಶ್ರೇಣಿ, ಮಿತ್ರ, ಆಟವಿಕ ಇವು ಷಡ್ವಿಧ ಬಲಗಳು, ಪ್ರಭುಸಿದ್ಧಿ, ಮಂತ್ರಸಿದ್ಧಿ ಉತ್ಸಾಹಸಿದ್ಧಿ ಇವು ಸಿದ್ಧಿತ್ರಯಗಳು. ಇವುಗಳನೇಕದರ ರೂಪರೇಖೆಗಳನ್ನು ಇಂದು ನಿಷ್ಕರ್ಷಿಸುವುದು ಸುಲಭಸಾಧ್ಯವಲ್ಲ.

ಯುದ್ಧಕ್ರಿಯೆಗಳ ವರ್ಣನೆಗಳೂ ಬಹುಮುಖವಾಗಿಯೂ ಆಕರ್ಷಕವಾಗಿಯೂ ಇವೆ- ‘ಪ್ರಯಾಣಭೇರಿಯಂ ಪೊಯ್ಸಿದಾಗಳ್ ಸುರೇಂದ್ರಾಚಳಂ ನಡುಗಿತ್ತು. ಅರ್ಕನಳುರ್ಕೆಗೆಟ್ಟು ನಭದಿಂ ತೂಳ್ದಂ. ಮರುಳ್ದಪ್ಪಿದಳ್ ಮೃಡನಂ ಗೌರಿ, ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್ ನಡುಗಿತ್ತು, ವಿಲಯಕಾಲಜಳನಿ ತಳರ್ವಂತೆ ಸುಯೋಧನನ ಸೇನೆ ತಳರ್ದುದು, ಘೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಂ,’ ‘ಸೈನ್ಯಪಾದೋತ್ಥಿತರಜಮಂಬರಸ್ಥಳಮಂ ಮುಟ್ಟೆ ತೆಳ್ಪುಗೆಟ್ಟು ಕೆಸರಾಯ್ತಾಕಾಶಗಂಗಾಜಲಂ.’ ‘ಕರಿಘಟೆಗಳ ಕರ್ಣತಾಳಹತಿಯಿಂ ಕುಲಗಿರಿಗಳಳ್ಳಾಡಿದುವು’ ಎರಡುಂ ಬೀಡುಗಳೊಳ್ ಕೊಳ್ಳಿ ವೀಸಿದಾಗಳ್ ಉರಿಮುಟ್ಟಿದರಳೆಯಂತಂಬರಮುರಿದತ್ತು.’ ‘ಸಿಡಿಲೊಳ್ ತಳ್ತುಪೋರ್ವ ಸಿಡಿಲಂತೆ ಬಾಳೊಳ್ ಬಾಳ್ ಪಳಂಚಿದುದು. ಪಲರ್ ಪಡವಳ್ಳರ ಮಾತುಗಳೆ ಮಂದರಕ್ಷುಭಿತದುಗ್ಧಪಯೋಗಭೀರನಾದಮಂ ಕೆಯ್ಕೊಂಡವು’ ‘ಸಿಡಿಲೇೞ್ಗೆಯುಮಂ ಕೋೞ್ಮಸಗಿದ ಪುಲಿಯ ಪಿಂಡುಮನನುಕರಿಸಿದುವು ಸಂದಣಿಗಳ್’. ‘ಕಾೞ್ತುರುಮಸಗಿದಂತೆ ಮಸಗಿದರ್ ಧನುರ್ಧರರ್’ ಭೂತಳಮಳ್ಳಾಡೆ ಕೆಸಱ ಕಡಿತದ ತಱದಿಂ ಶ್ವೇತ ಗಂಗಾಸುತನ ಒಡ್ಡಣಂ ನಿಂದವು. ಪ್ರಳಯಕಾಲಜಾತೋತ್ಪಾತವಾತನಿರ್ಘಾತದಿಂದ ತುಳ್ಕಾಡಿ ತಳ್ಳಂಕಗುಟ್ಟುವ ಜಳನಿಗಳಂತೆ ಉಭಯಸೈನ್ಯಗಳು ಮೇರೆದಪ್ಪಿದವು. ತಿಱದಿಕ್ಕಿದಂತೆ ತಲೆಗಳ್ ಪಱದುರುಳಿದುವು’ ‘ಮುಗಿಲ್ಗಳಿಟ್ಟೆಡೆಗಳೊಳ್ ತೊಡದಿರ್ದ ತಲೆಗಳ್ ಜೇನ ಪುಟ್ಟಿಗಳನೆ ಪೋಲ್ತವು.’ ಪ್ರಳಯಕಾಲದಂದು ಮೂಡುವ ಪನ್ನಿರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ಸುರಾಪಗಾತ್ಮಜಂ ತನ್ನೊಳಳವಡಿಸಿಕೊಂಡಂ’ ‘ಮಯ್ಯೊಳುಡಿದಂಬು ಗಳುಮನೆಲ್ವುಮಂ ನಟ್ಟುಡಿದ ಬಾಳಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಱತೋಱ ತೆಗೆಯುತ್ತಿರ್ದರ್’. ‘ಪೆಂಕುಳಿಗೊಂಡ ಸಿಂಹಮಂ ಮುತ್ತುವಂತೆ ಧರ್ಮಪುತ್ರಂ ಶಇಖಂಡಿಯಂ ಮುಂದಿಟ್ಟು ಭೀಷ್ಮನಂ ಮುತ್ತಿದಂ’ ‘ನಟ್ಟ ಕೂರ್ಗಣೆಯ ಬಿಣ್ಪೊರೆಯಿಂದೆ ಬಿೞಲ್ದನುರ್ವಿ ಪೆರ್ವಿದಿಱ ಸಿಡುಂಬಿನೊಳ್ ಪುದಿದೊಂದು ಕುಳಾಚಳದಂತೆ ಸಿಂಧುಜಂ’ ‘ಸಿಡುಂಬಿನ ಪೊದಳಗೆ ಮದೊಱಗಿದ ಮೃಗರಾಜನಂತೆ ಶರಶಯನದೊಳ್ ತೋರಿದಂ’ ‘ವಿಳಯಕಾಲ ಜಳಧರಂಗಳೆಲ್ಲವೊಂದಾಗಿ ಕುಲಗಿರಿಯಂ ಮುತ್ತುವಂತೆ ಕಳಿಂಗರಾಜ ಗಜಘಟೆ ಭೀಮನಂ ಮುತ್ತಿದುವು. ಗಜಾಸುರನೊಳ್ ಆಸುರಂ ಬೆರಸುತಾಗುವಂಧಕಾರಾತಿಯಂತೆ ಭೀಮಸೇನಂ ಪೊಣರ್ದಂ ‘ಮಹಾಮಕರಂ ಸಮುದ್ರದೊಳ್ ಪರಿವಂತೆವೊಲಾ ಸುಪ್ರತೀಕಗಜಂ ಪರಿದುದು’. ‘ಒಣಗಿದುದೊಂದು ಪೆರ್ವಿದಿರ ಪೆರ್ವೊದರಿಂದಮಾಱದುರ್ವುವಾ ಶುಶುಕ್ಷಣಿಯವೊಲ್ ಅಭಿಮನ್ಯುವಿನ ಕೂರ್ಗಣೆ ಪಾಯ್ದು ನುಂಗಿದವು’ ಅದರ್ವ ‘ನೂಱ್ವರುಂ ಪೊನ್ನ ತಾೞ್ಗಳ್ ಸೂೞೊಳ್ ಬೀಳ್ದಂತೆ ಬಿೞ್ದರ್’ ಇವು ಕೆಲವು ಮಾದರಿಗಳು ಮಾತ್ರ. ವರ್ಣನೆಗಳ ವೈಭವವನ್ನು ಮೂಲವನ್ನು ಓದಿಯೇ ಆಸ್ವಾದಿಸಬೇಕು.

ಚಂದ್ರಿಕಾವಿಹಾರ, ಮಧುಪಾನ, ವಿಹಾರಗಳೂ ಮಹಾಕಾವ್ಯದ ಅಂಗವಾದ ಅಷ್ಟಾದಶವರ್ಣನೆಗಳ ಭಾಗಗಳು. ‘ಲೌಕಿಕ ಕಾವ್ಯ’ವನ್ನು ‘ಸಮಸ್ತಭಾರತ’ವನ್ನು ಬರೆಯಲು ಹೊರಟ ಕವಿತಾಗುಣಾರ್ಣವನು ಈ ಭಾಗಗಳಲ್ಲಿ ತತ್ಕಾಲದ ಸಮಾಜಚಿತ್ರದ ಒಂದು ಕಿರುದೃಶ್ಯವನ್ನು ಕೊಡಲು ಪ್ರಯತ್ನಪಟ್ಟಿದ್ದಾನೆ. ಸುಭದ್ರಾಹರಣದ ಹಿಂದಿನ ರಾತ್ರಿ ಅರ್ಜುನನು ತನ್ನ ವಿರಹ ವೇಗವನ್ನು ಆರಿಸಿಕೊಳ್ಳುವುದಕ್ಕಾಗಿ ವಿಟ ವಿದೂಷಕರೊಡನೆ ಚಂದ್ರಿಕಾವಿಹಾರಕ್ಕಾಗಿ ಹೊರಟು, ಮಾಲೆಗೇರಿ, ವೇಶ್ಯಾವಾಟಿ ಮತ್ತು ಪಾನಭೂಮಿಗಳ ಮೂಲಕ ಹಾದು ಹೋಗುವನು. ಅಲ್ಲಿ ಅವನಿಗಾದ ಅನುಭವವನ್ನು ಪಂಪನು ಅತ್ಯಂತ ರೋಮಾಂಚಕಾರಿಯಾಗುವಂತೆ ವರ್ಣಿಸಿದ್ದಾನೆ. ಮೊದಲು ಅರ್ಜುನನು ಪೆಂಡವಾಸಗೇರಿಯನ್ನು ಪ್ರವೇಶಿಸಿದ ತಕ್ಷಣ ಅಲ್ಲಿರುವವರೆಲ್ಲರೂ ಸೌಭಾಗ್ಯದ ಭೋಗದ ಚಾಗದ ರೂಪಾದ ಮಾನಿಸರಂತೆ ಕಾಣುವರು. ಮೊದಲು ಅವನ ಕಣ್ಣಿಗೆ ಬೀಳುವುದು ಹೂವಿನ ಸಂತೆ. ‘ಅದು ಆರು ಋತುಗಳ ಪೂಗಳನೊಂದು ಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದೋಜಿನ ಸಾಲೆ’ಯಂತಿದೆ. ಮಾಲೆಗಾರ್ತಿಯರು ಹೂವನ್ನು ಮಾಲೆ ಹಾಕುತ್ತಿದ್ದಾರೆ. ಅವರ ಜೋಡುಗೆಯ್ತಗಳನ್ನು ನೋಡಿದರೆ ಅದು ಹೂವನ್ನು ಮಾರುವಂದವಲ್ಲ. ‘ಮನೆಯಾಣ್ಮನಂ ಮಾಱುವಂದಂ’ ಎನ್ನಿಸುತ್ತದೆ ಅರ್ಜುನನಿಗೆ. ಕಣ್ಮುಚ್ಚಿ ಮಲಗಿದ ಗಂಡನೆದುರಿಗೆ ಹೆಂಡತಿಯೊಬ್ಬಳು ಮಿಂಡನೊಡನೆ ಗೊಡ್ಡಾಟವಾಡುತ್ತಿದ್ದಾಳೆ. ಹಾದರದಲ್ಲಿ ಸಂಸಾರ ಸಾರಸರ‍್ವಸ್ವವನ್ನೂ ಗೆಲ್ಲುವ ರುಚಿಯಿದ್ದಿರಬೇಕು. ಇಲ್ಲದಿದ್ದರೆ ತಲೆ ಮೂಗುಗಳನ್ನಾದರೂ ಒತ್ತೆಯಿಟ್ಟು ಇಲ್ಲಿಗೆ ಬರುತ್ತಿದ್ದರೆ? ಎನ್ನುತ್ತಾನೆ ಅರಿಗ. ಅವರ ಸಂಭಾಷಣೆಯ ವೈಭವವೆಷ್ಟು! ಕುಹಕಕೇಳಿಗಳೆಷ್ಟು! ಸರಸಸಲ್ಲಾಪಗಳೆಷ್ಟು! ನೋವುನುಲಿತಗಳೆಷ್ಟು! ಎಷ್ಟು ರೀತಿಯ ಬೊಜಂಗರು! ಅರಬೋಜಂಗ, ಕಿರುಕುಳ ಬೊಜಂಗ, ಪೊರ್ಕುಳಿ ಬೊಜಂಗ, ಪೊೞಲ ಬೊಜಂಗ, ಕತ್ತುರಿ ಬೊಜಂಗರು’, ಅವರ ಬಿಯದಳವಿಗೆ ಮನಮೆಚ್ಚಿ ಬರುತ್ತಿದ್ದರೆ ಮುಂದೆ ‘ಕಳ್ಳಿನೊಳಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರು ಮೊಳ್ವೆಂಡಿರೊಂದೆಡೆಯೊಳಿರ್ದು ಕಾಮದೇವನೆಂಬ ಬಳಮರ್ದುಕಾಱನ ಮಾಡಿದ ಮರ್ದಿನಂತೆ ಬೆಳೆದು ದಳಂಬಡೆದು ಮೂನೂಱಱುವತ್ತು ಜಾತಿಯ ಕಳ್ಗಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಯ ಮಾಳ್ಕೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಗಳಂ ಮಂತ್ರಿಸಿ ನೆಲದೊಳೆದು, ತಲೆಯೊಳ್ ತಳಿದು, ಕಳ್ಳಿನೊಳ್ ಬೊಟ್ಟನಿಟ್ಟುಕೊಂಡು, ಕೆಲದರ್ಗೆಲ್ಲಂ ಬೊಟ್ಟಿಟ್ಟು, ಕಿಱಯರ್ಪಿರಿಯರಱದು ಪೊಡೆವಟ್ಟು ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಱಕಿಱದೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲದಲ್ಲಣಿಗೆಯ ಚಕ್ಕಣಂಗಳಂ ಮರೀಚಿ, ಚಿಂತಾಮಣಿ, ಕಕ್ಕರ ಮೊದಲಾದ ಸವಿಸವಿದುವುಗಳ ರುಚಿಯನ್ನು ನಾನಾರೀತಿಯಾಗಿ ವಿಮರ್ಶೆಮಾಡಿ ಕಾಂತೆಯರು ಕಾಮಾಂಗವನ್ನು ಕ್ಹುಣಿಯುತ್ತಾರೆ. ತೃಪ್ತಿಯಾಗಿ ಕುಡಿದು ಪ್ರಜ್ಞೆತಪ್ಪಿ, ನಿರ್ವಸ್ತ್ರಳಾಗಿ ಕುಣಿಯುತ್ತಾಳೆ, ಹಾಡುತ್ತಾಳೆ, ತೊದಲುತ್ತಾಳೆ. ಸೂಳೆಗೇರಿಗೆ ಹೋಗುವನೊಬ್ಬನನ್ನು ಸ್ನೇಹಿತನೊಬ್ಬನು ತಡೆಯುತ್ತಾನೆ. ಬೇರೊಬ್ಬ ಹೆಂಡತಿಯು ಅಲ್ಲಿಗೆ ಹೋಗುತ್ತಿದ್ದ ಗಂಡನನ್ನು ಕಣ್ಮೀರಿನ ಸಂಕೋಲೆಯಿಂದ ಬಿಗಿಯುತ್ತಿದ್ದಾಳೆ. ಕುಂಟಣಿಯ ಹಿಂಸೆಯಿಂದ ವಿಶೇಷ ಧನವನ್ನು ಸಂಪಾದಿಸುತ್ತಿದ್ದ ಸೂಳೆಯೊಬ್ಬಳು ಪಲ್ಲಿಲಿವಾಯನಾದ ಮುದುಕನೊಬ್ಬನ ಲೋಳೆಪೊನಲ್ಗಳಿಗೆ ಅಸಹ್ಯ ಪಡುತ್ತಿದ್ದಾಳೆ. ಈ ವರ್ಣನೆಗಳು ಮೂಲ ಕಥಾಪ್ರವಾಹಕ್ಕೆ ಅಡ್ಡಿಯಾದರೂ ಆಕರ್ಷಕವಾಗಿ ಆ ಕಾಲದ ಸಮಾಜದ ಚಿತ್ರವನ್ನು ಕೊಡುವುದಕ್ಕೆ ಬಹಳ ಸಹಾಯಕವಾಗಿವೆ.

ಪಂಪನ ಶೈಲಿಯು ದಿಣ್ಣೆಯಿಂದ ತಡೆಯಿಲ್ಲದೆ ಹರಿಯುವ ನದಿಯಂತೆ ಬಹುಶೀಘ್ರಗಾಮಿಯಾಗಿರುತ್ತವೆ. ಮಿತವಾದ ಭಾಷೆಯಿಂದ ವಿಶೇಷವಾದ ಕಥಾಭಾಗವು ಒಂದರ ಹಿಂದೆ ಒಂದು ಓಡುವುದು. ಮುಂದಿನ ವಚನವನ್ನು ಗಮನಿಸಿ:

‘ನಿಮ್ಮ ಮನಕ್ಕೆ ಕೊಕ್ಕರಿಕೆಯಾಗೆಯುಂ ಪಾೞಗೆ ಗೆಂಟಾಗೆಯುಂ ನೆಗೞ್ವಮಲ್ಲೆಂದು ಪೊಡಮಟ್ಟು ಕುಂತಿಯಂ ವಿದುರನ ಮನೆಯಲಿರಲ್ವೇೞ್ದ್ದು ಸುಭದ್ರೆಯನಭಿಮನ್ಯುವೆರಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳುಪಿ ನಿಜಜನಂಬೆರಸು ಗಂಗೆಯಂ ಪಾಯ್ದದಱ ಪಡುವಣದೆಸೆಯ ಕಾವ್ಯಕವನದ ಬಟ್ಟೆಯಂ ತಗುಳ್ದು ಪೋಗೆವೋಗೆ’ ಇಲ್ಲಿ ಎಷ್ಟು ವಿಷಯಗಳು ಅಡಕವಾಗಿವೆ!

ಪಂಪನ ಅನೇಕ ಪದ್ಯಗಳು ಛಂದೋಬದ್ಧವಾದ ಗದ್ಯದಂತೆ ಸರಳವಾಗಿ ಹರಿಯುತ್ತಿರುವುದು ಪಂಪನ ಶೈಲಿಯು ಶ್ಲಾಘನೀಯವಾಗುವುದಕ್ಕೆ ಮತ್ತೊಂದು ಕಾರಣ. ಅವನ ಪದ್ಯಗಳು ಒಂದರ ಮುಂದೊಂದು ಬರುವ ವಾಕ್ಯಮಾಲೆಗಳಾಗಿರುವವಲ್ಲದೆ ಅನೇಕ ಕಡೆಗಳಲ್ಲಿ ಪದ್ಯದಲ್ಲಿಯ ವಾಕ್ಯವು ಆ ಪದ್ಯದಲ್ಲಿಯೇ ಮುಗಿಯದೆ ಮುಂದೆ ಬರುವ ಗದ್ಯಪ್ರಾಂತದಲ್ಲವತರಿಸಿ ಪರಿಸಮಾಪ್ತವಾಗುವುದು: ಮುಂದಿನ ಎರಡು ಪದ್ಯಗಳು ಇವಕ್ಕೆ ಉತ್ತಮ ಉದಾಹರಣೆಗಳು.

ಬಲಿಯಂ ಕಟ್ಟಿದನಾವನ್, ಈ ಧರಣಿಯಂ ವಿಕ್ರಾಂತದಿಂದಂ ರಸಾ
ತಲದಿಂದೆತ್ತಿದನಾವನ್, ಅಂದು ನರಸಿಂಹಾಕಾರದಿಂ ದೈತ್ಯನಂ
ಚಲದಿಂ ಸೀಳ್ದವನಾವನ್, ಅಬ್ಧಿಮಥನಪ್ರಾರಂಭದೊಳ್ ಮಂದರಾ
ಚಲಮಂ ತಂದವನಾವನ್, ಆತನೆ ವಲಂ ತಕ್ಕಂ ಪೆಱರ್ ತಕ್ಕರೇ||

ದಿವಿಜೇಂದ್ರಂ ಸುಖಮಿರ್ದನೆ, ದಿತಿಸುತವ್ಯಾಬಾಧೆಗಳ್ ದೇವರ್ಗಿ
ಲ್ಲವಲಾ, ಷೋಡಶರಾಜರಿರ್ಪ ತೆಱನೇನ್, ಎಮ್ಮನ್ವಯಕ್ಷ್ಮಾಪರಾ
ವವಿಳಾಸಂಗಳೊಳಿರ್ಪರ್, ಏ ದೊರೆತು ತಾನೆಮ್ಮಯ್ಯನೈಶ್ವರ‍್ಯಮಂ
ತಿವೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ||

ಈ ಪದ್ಯಗಳು ಎಷ್ಟು ಸುಲಭವಾಗಿವೆ! ಸರಳವಾಗಿವೆ!

ಪಂಪನು ಕಥಾಶರೀರದಲ್ಲಿ ಬಹು ಭಾಗವನ್ನು ಸಂವಾದರೂಪದಲ್ಲಿ ಬರೆದಿರುವುದು ಅವನ ಕಾವ್ಯಕ್ಕೆ ಒಂದು ಪ್ರತ್ಯೇಕವಾದ ಚೈತನ್ಯವನ್ನುಂಟುಮಾಡಿದೆ. ಪಾತ್ರಗಳಾಡುವ ಭಾಷೆ ಬಹುಸರಳವಾಗಿದೆ. ಆದರೂ ಪೂರ್ಣವಾದ ತೂಕದಿಂದ ಕೂಡಿದೆ. ಅವು ಶಲ್ಯದ ಮೊನೆಯಂತೆ ನೇರವಾಗಿ ಹೃದಯವನ್ನು ಭೇದಿಸಿ ಪ್ರವೇಶಮಾಡುವುವು. ಅಗ್ರಪೂಜಾಸಂದರ್ಭದಲ್ಲಿ ಶಿಶುಪಾಲನು ಧರ್ಮರಾಜನಿಗೆ ಆಡಿದ ಮಾತುಗಳಿವು.

ಮನದೊಲವರಮುಳ್ಳೊಡೆ ಕುಡು
ಮನೆಯೊಳ್ ಹರಿಗಗ್ರಪೂಜೆಯಂ ಯಜ್ಞದೊಳೀ
ಮನುಜಾಶ್ವರ ಸಭೆಯೊಳ್
ನೆನೆಯಲುಮಾಗದು ದುರಾತ್ಮನಂ ಬೆಸಗೊಳ್ವಾ||

ಅಳವಱಯದೆಗ್ಗು ಬಳಬಳ
ಬಳೆವಿನೆಗಂ ಪಚ್ಚಪಸಿಯ ತುಱುಕಾಱಂಗ
ಗ್ಗಳಿಕೆಯನೆ ಮಾಡಿ ನೀನುಂ
ಪೞಯಂ ಕಟ್ಟಿದೆಯೊ ಭೂಪಂ ರಿನಿಬರ ಕೊರಲೊಳ್
ದೇವರನಡಿಗೆಱಗಿಸಿ ಸಕ
ಲಾವನಿತಳದಧಟರಂ ಪಡಲ್ವಡಿಸಿದ ಶೌ.
ರ‍್ಯಾಮಷ್ಟಂಭದೊಳಾನಿರೆ
ಗೋವಳಿಗಂಗಗ್ರಪೂಜೆಯಂ ನೀಂ ಕುಡುವಾ||

ಕುಡುವೇೞ್ವನ ಕುಡುವನ ಕುಡೆ
ಪಡೆವನ ಪೆಂಪೇಂ ನೆಗೞ್ತೆವಡೆಗುಮೊ ಪೇೞ್ವಂ
ಕುಡುವೇೞ್ಗೆಮ ಕುಡುವಣ್ಣಂ
ಕುಡುಗೆಮ ಕಡೆ ಕೊಳ್ಳ ಕಲಿಯನಱಯಲ್ಕಕ್ಕುಂ||

ಎಂದನಿತಱೂಳೆ ಮಾಣದೆ ಗೀರ್ವಾಣಾರಿಯಸುರಾರಿಯನಿಂತೆಂದಂ-

ದೊರೆಯಕ್ಕುಮೆ ನಿನಗೆ ಯು
ಷ್ಠಿರನರ್ಘ್ಯಮನೆತ್ತೆ ಶಂಖದೊಳ್ ಪಾಲೆದಂ
ತಿರೆ ಮಲಿನಮಿಲ್ಲದೊಳ್ಗುಲ
ದರಸುಗಳಿರೆ ನೀನುಮಗ್ರಪೂಜೆಯನಾಂಪಾ||

ಮನೆ ನಿನಗೆ ನಂದಗೋಪಾಲನ
ಮನೆ ತುಱುಗಾರ್ತಿ ನಿನಗೆ ಮನೆವೆಂಡಿತಿ ಪ
ಚ್ಚನೆ ಪಸಿಯ ಗೋವನೈ ಕರ
ಮನಯದೆ ನಿನ್ನಳವಿಗಳವನಱಯದೆ ನೆಗೞೈ||

ಮೀನ್, ಆವೆ ಪಂದಿಯೆಂದೆನಿ
ತಾನುಂ ತೆಱನಾಗಿ ಡೊಂಬವಿದ್ಯೆಯನಾಡಲ್
ನೀನಱವೆ, ಉರದಿದಿರ್ಚಿದೊ
ಡಾನಱವೆಂ ನಿನ್ನನಿಲ್ಲಿ ದೆಸೆವಲಿಗೆಯ್ಯಲ್||

ಅಱಯದಿದಂ ಮಾಡಿದೆನ್, ಎ
ನ್ನಱಯಮಿಕೆಗೆ ಸೈರಿಸೆಂದು ನೀಂ ಸಭೆಯೊಳ್ ಕಾ
ಲ್ಗೆಱಗು, ಎಱಗು ಕೊಲ್ಲೆನ್

ಒಂದೆ ಪದ್ಯದಲ್ಲಿ ನಿರೂಪಿತವಾಗಿರುವ ಭೀಮ-ಭಗದತ್ತರ ಸಂಭಾಷಣೆಯನ್ನು ಗಮನಿಸಿ:

ತೊಲಗು, ಇದು ಸುಪ್ರತೀಕಗಜಂ, ಆಂ ಭಗದತ್ತನೆನ್, ಇಲ್ಲಿ ನಿನ್ನ ತೋ
ಳ್ವಲದ ಪೊಡರ್ಪು ಸಲ್ಲದು, ಎಲೆ ಸಾಯದೆ ಪೋಗು, ಎನೆ ಕೇಳ್ದು ಭೀಮನ್ ಆಂ
ತೊಲೆಯದಿರ್, ಉರ‍್ಕಿನೊಳ್ ನುಡಿವೆ. ಈ ಕರಿಸೂಕರಿಯಲ್ತು ಪತ್ತಿ ಗಂ
ಟಲನೊಡೆಯೊತ್ತಿ ಕೊಂದಪೆನ್, ಇದಲ್ತಿದರಮ್ಮನುಂ, ಎನ್ನನಾಂಪುದೇ||

ಈ ಪದ್ಯಗಳಲ್ಲಿ ಪ್ರಕಾಶಿತವಾದ ದೇಶಿಯ ಸೊಬಗನ್ನು ಯಾರಾದರೂ ಮೆಚ್ಚಬಹುದು.

ಚಂದ್ರಸೂರ್ಯರ ಉದಯಾಸ್ತಗಳನ್ನು ಕಥಾಸಂವಿಧಾನದಲ್ಲಿ ಸೇರಿಸಿ ಉತ್ಪ್ರೇಕ್ಷಿಸಿ ಹೇಳುವುದು ಪಂಪನ ಸಂಪ್ರದಾಯ. ಇವು ಕಥಾಶರೀರದಲ್ಲಿ ಸೇರಿಕೊಂಡು ಉತ್ಪ್ರೇಕ್ಷೆಯೆಂಬ ಭಾವವನ್ನೇ, ಮರಸಿಬಿಡುತ್ತದೆ. ಮುಂದಿನದು ಈ ಮಾದರಿಯ ಸೂರ‍್ಯೋದಯ ವರ್ಣನೆ-

ಅದಟಂ ಸಿಂಧುತನೂಭವಂ ವಿಜಯನೊಳ್ ಮಾರ್ಕೊಂಡಣಂ ಕಾದಲಾ
ಱದೆ ಬೆಂಬಿೞ್ದೊಡೆ ಕಾದಲೆಂದು ಬೆಸನಂ ಪುಣ್ಯಂ ಗಡಂ ದ್ರೋಣನಂ
ತದುವಂ ನೋಡುವೆನೆಂದು ಕಣ್ ತಣಿವಿನಂ ನೋಡಲ್ಕೆ ಬರ್ಪಂತೆಂಬಂ
ದುದಯಾದ್ರೀಂದ್ರಮನೇ ಭಾನು ಪೊಱಮಟ್ಟೊಡ್ಡಿತ್ತನೀಕಾರ್ಣವಂ ||

ಮುಂದಿನ ಕರ್ಣವಧಾನಂತರದ ಸೂರ್ಯಾಸ್ತಮಯದ ವರ್ಣನೆಯೂ ಇಂತಹುದೆ-

ಪೞಯಿಗೆಯನುಡುಗಿ ರಥಮಂ
ಪೆೞವನನೆಸಗಲ್ಕೆವೇೞ್ದು ಸುತಶೋಕದ ಪೊಂ
ಪುೞಯೊಳ್ ಮೆಯ್ಯಱಯದೆ ನೀ
ರಿೞವಂತೆವೊಲ್, ಇೞದನಪಜಳಗೆ ದಿನಪಂ|

ಸಹಜವಾಗಿ ನೀರುಕುಡಿದಂತೆ ಮಾತನಾಡುವುದು ಪಂಪನ ಪದ್ಧತಿಯಾದುದರಿಂದ ಅವನು ಜನಸಾಮಾನ್ಯರಲ್ಲಿ ರೂಢಿಯಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ನುಡಿಕಟ್ಟನ್ನು ದೇಶೀಯಶಬ್ದಗಳನ್ನೂ ತನ್ನ ಕಾವ್ಯದಲ್ಲಿ ವಿಶೇಷವಾಗಿ ಉಪಯೋಗಿಸಿದ್ದಾನೆ. ‘ಪುಣ್ಯಭಾಜನಂನೆಗೆ ನೂಕೆ ಪಾಸು’ ‘ರಾಜಹಂಸ ಮಾನಸಸರೋವರವನಲ್ಲದೆ ಪೆಱತನೇಕೆ ಬಯಸುಗುಂ’ ‘ಕಕೇನಾರ್ಥೀ ಕೋದರಿದ್ರ’ ಪನಿಪುಲ್ಲಂ ನಕ್ಕೆ ತೃಷ್ಣೆವೋದಪುದೇ!’ ‘ನಿಯತಿ ಕೇನಲಂಘ್ಯತೆ’ ‘ಏನಾಗದೊ ಪಾಪದ ಫಳಂ ಎಯ್ದಿವಂದ ದಿವಸದೊಳಾರ್ಗಂ, ‘ಆನೆಯ ಕೋಡುಬಾಗದು’ ‘ಪಗೆಯಿಱಯ ಬಂದರ ಮೂಗನರಿದರೆಂಬಂತೆ’ ‘ಬೇರೊಳ್ ಬೆನ್ನೀರನೆಱ ಯದಿರ್’, ‘ಸೆಟ್ಟಿಯ ಬಳ್ಳಂ ಕಿಱದು’, ‘ಕಮ್ಮಱಯೋಜಂ ಬಿಲ್ಲೋಜನೆಂಬುದಂ ಮಾಡುವೆನೆ’ ‘ಬೆಳ್ಳಾಳ್ಗೆ ಪೊಳಪುದೋಱುವುದು ಒಳ್ಳಾಳೊಪೊಡರ್ಪುದೋಱುವುದು’ ‘ಪೆಣನನಿಱದು ಪಗೆಗೊಂಡರ್’ ‘ಎಂತಪ್ಪರೊಳಂ ಮುಳಿಸಱವನಾಗಲೇನಿತ್ತಪುದೇ?’ ‘ಅಪಾಂಡವಂ ಮಾಡದಂದು ಬಿಲ್ಲೆಯನ ಪುತ್ರನಲ್ಲೆಂ’ ‘ಗುರುವಿಯೋಗಭರಂ ಗುರುವಾಗದಿರ್ಕುಮೆ’ ‘ಪಗೆಯನೇಂ ಗಳ ಪಟ್ಟಮೆ ಪಾರಿ ತಿಂಗುಮೆ’, ‘ನಿನ್ನ ಕೆಯ್ದುವೆನಿತುಂ ಬಿಸುಟಿರ್ದ ಲೆಕ್ಕಮೆ’ ‘ವಿಷಮೊಳ್ಳೆಗುಳ್ಳೊಡಂ ಒಳ್ಳೆಯೆ, ಕಾಳಿಯನಾಗನಾಗದು’ ‘ನೃಪಚಿತ್ತ ವೃತ್ತಿ ಸಂಚಲಂ ಅದಱಂದಂ ಓಲಗಿಸಿ ಬಾೞ್ವುದೆ ಕಷ್ಟಂ ಇಳಾನಾಥರಂ’ ತೊೞರ ಮೊಲೆವಾಲನುಂಡ ಗುಣಮನ್ ಆರ್ ಕೆಡಿಪರಾ ನರೇಂದ್ರರೊಳ್’, ‘ಮೇಲಪ್ಪ ಪಗೆಗಂಜಿ ಕೊಂದಂತೆ, ಖಳನೊಳವಿಂಗೆ ಕುಪ್ಪೆವರಂ ‘ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೆ’ ‘ಅತ್ಯಾದರಸ್ಸಂಭ್ರಮಮುತ್ಪಾದಯತಿ’ ‘ಪಡೆ ನೋಡಲ್ ಬಂದವರಂ ಗುಡಿವೊರಿಸಿದರ್ ‘ದೈವಮನಾರಯ್ಯ’ ವಿಱ ಬಾೞಲ್ ನೆವರ್, ‘ಮೋಹಮಯನಿಗಳಂ ಕಳತ್ರಂ’ ‘ಪಾವುಗಳುಳ್ಳ ಪಗೆಯಂ ಮಯವು’ ‘ಸಿಂಹಮಾಡುವವರ ಬಾಲಮನಾಡಿದರ್’, ‘ಏಂ ಮಹಾಪುರುಷರಾಜ್ಞಾಲಂಘನಂ ಗೆಯ್ವರೇ?’ ಕೆಯ್ಗಳಿದ ಮನೆವಾರ್ತೆಗೆ ಬುದ್ಧಿಪೇೞಲೆಡೆಯಿಲ್ಲ’ ‘ಉಪ್ಪಿಕ್ಕಿದೊಡೆ ತುಪ್ಪಕ್ಕೆ ಮೇಳ್ಪಡಿತು’ ‘ಬಡಿಗಂಡನಿಲ್ಲ ಪಾಲಂ ಕಂಡಂ’ ‘ನೋಂತರ ಪಗೆವರನೆೞೞದಂತಾಯಿತು’ ‘ಕ್ಲೇಶದ ಫಲಮೆರ್ದೆಗೊಳ್ಳದೆ’ ‘ಕನಕನ ಬೇಳ್ವೆ ಕನಕನನ್ ತಿಂದುದು’ ‘ಪರವೆಣ್ಗೆ ಒಲ್ದಂಗಮೇನಾಗದು’ ‘ಪಾದರದೊಳ್ ಸತ್ತಂಗೞ್ವನ್ನರಾರ್’, ‘ಏವುದೋ ಶುಚಿಯಿಲ್ಲದವನ ಗಂಡುಂ ತೊಂಡುಂ’ ‘ಏಂ ಮಹಪಾಳರೊಳಾದ ಕಾರ‍್ಯಗತಿಗಳ್ ಬಗೆಯಲ್ಕೆ ಬಹುಪ್ರಕಾರವೋ ‘ಮೇಲ್ಪು ಬಲ್ಪನೞಗುಂ’ ‘ಕಾಯ್ದ ಬೆನ್ನೀರ್ ಮನೆಸುಡದು’ ‘ತನ್ನಿಕ್ಕಿದ ತತ್ತಿಯನೆ ಪಾವು ನೊಣೆವಂತಕ್ಕುಂ’ ‘ಶೂರಂ ಭೇದೇನ ಯೋಜಯೇತ್’ ‘ಎನಿತಾದೊಡಮೇಂ ಪ್ರಭು ಪೊಲ್ಲಕೆಯ್ಗುಮೆ’ ‘ಭಾನುವೆ ಸಾಲದೆ ಪಗಲೆನಿತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ’ ‘ಸೂಜಿಯ ಕೂರ್ಪೂ ಕುಂಬಳದೊಳಡಂಗುವಂತೆ’ ‘ನಷ್ಟಂ ನಷ್ಪಂ ಮೃತಂ ಮೃತಂ’ ‘ಆರ್ಗುಮೇಂ ಬಿದಿಯ ಕಟ್ಟಿದುದಂ ಕಳಿಯಲಾರ್ಗಮೇಂ ತೀರ್ದಪುದೇ’ ‘ಕಣ್ಕುರುಡಾದೊಡಮೇನೊ ಕುರುಡಾಗಲೆವೇೞ್ಕುಮೆ ನಿಮ್ಮ ಬುದ್ಧಿಯಂ’ ‘ಕೊಂದರ್ ಕೊಲೆ ಸಾವರ್’ ‘ಜಗದ್ವ್ಯಾಪಾರಮೀಶ್ವರೇಚ್ಛೆ’ ಇವುಗಳಲ್ಲಿ ಅನೇಕವು ಪ್ರತ್ಯೇಕವಾದ ನಾಣ್ನುಡಿಯಾಗಿ ರಂಜಿಸುವುವು. ಇವುಗಳನ್ನು ಉಪಯೋಗಿಸಿರುವುದರಿಂದ ಕಾವ್ಯಕ್ಕೆ ಒಂದು ಆತ್ಮೀಯತೆಯುಂಟಾಗಿದೆ.

ಪಂಪನು ‘ರೂಪಕರಾಜ್ಯದ ಚಕ್ರವರ್ತಿ’. ಅವನ ಉಪಮಾ ರೂಪಕೋತ್ಪ್ರೇಕೆಗಳು ಹಲವು ಕ್ಷೇತ್ರಗಳಿಂದ ಆಯ್ದುಕೊಂಡವು. ಅವುಗಳಲ್ಲಿ ಪ್ರತಿಯೊಂದರಲ್ಲಿಯೂ ಜೀವವಿದೆ, ಭಾರವಿದೆ, ಅರ್ಥಪುಷ್ಟಿಯಿದೆ ಮತ್ತು ವೈವಿಧ್ಯವಿದೆ. ಉಪಮಾನಗಳೆಲ್ಲವೂ ಬಹುಮಟ್ಟಿಗೆ ಮನುಷ್ಯನ ಸುತ್ತಮುತ್ತಲಿನ ಆವರಣದಿಂದ ಆರಿಸಿಕೊಂಡವು ವಾಚಕನು ಪ್ರತಿಯೊಂದನ್ನೂ ಪ್ರತ್ಯಕ್ಷವಾಗಿ ಅನುಭವಿಸಿ ಉಪಮೇಯದ ಸ್ಪಷ್ಟಚಿತ್ರವನ್ನು ಕಾಣಬಹುದು. ‘ಪಂದೆಯಂ ಪಾವಡರ್ದಂತೆ’ ‘ಪೊಳ್ಳುಮರನಂ ಕಿರ್ಚಳುರ್ವಂತೆ’ ‘ಉರಿಮುಟ್ಟಿದರಳೆಯಂತೆ’ ‘ತಣಿಯುಂಡಮರ್ದಂ ಗೋಮೂತ್ರದಿಂದೆ ಬಾಯ್ವೂಸಿದ ವೋಲ್’ ‘ಡೊಂಬರ ಕೋಡಗದಂತೆ’ ‘ಕೀಲೊಳ್ ಕಿಚ್ಚುಪುಟ್ಟಿ ಭೋರ್ಗರೆದುರಿವಂತೆ’ ‘ಆಡದಿರ್ದ ಮಡುವಂ ಪೋಲ್ತಂ’ ‘ಬಾಳೆಯ ಬನಮಂ ಕಾಡಾನೆವೊಯ್ದಂತೆ’ ‘ದೇಗುಲಕೆ ಪೆರ್ಮರನಂ ಕಡಿವಂತೆ’, ‘ಕುರುಡಂ ಕಣ್ಬೆತ್ತವೊಲ್’ ‘ಕಯ್ಯಕೂಸನಿಕ್ಕಿದವೋಲ್’ ‘ಆನೆ ಮೆಟ್ಟಿದ ಕುಳುಂಪೆಯ ನೀರಂತೆ’ ‘ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ’ ‘ಕರಿಕಳಭ ಗರ್ಜನೆಗೇಳ್ದ ಮೃಗರಾಜನಂತೆ’ ‘ಕೃಶಾನುವ ನೆೞಲಳುರದಂತೆ’ ‘ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತೆ’ ‘ಪುಳಿಯೊಳ್ ಕರ್ಚಿದ ಬಾಳ ಬಣ್ಣದಂತೆ’. ‘ಬಳೆಯಂ ಪೇರಾನೆ ಮೆಟ್ಟಿದಂತೆ’ ‘ನೆಯ್ದಿಲ ಕಾವಂ ತುದಿಗೆಯ್ದೆ ಸೀಳ್ವ ತೆಱದಿಂ’ ‘ಸಿಡಿಲೊಳ್ ಪೋರ್ವ ಸಿಡಿಲಂತೆ’. ‘ನೆಲನುಮಾಕಾಶಮುಮೊಂದೊಂದರೊಳ್ ತಾಗಿದಂತೆ’ ‘ತನ್ನ ಸಗ್ಗಮನೇಱುವುದನನುಕರಿಸುವಂತೆ’ ‘ಪರ್ದೆಱಗೆ ಸುರುಳ್ದು ಬೀಳ್ವ ಕಿರುವಕ್ಕಿಯವೋಲ್’ ‘ಕಲ್ವೞಯೊಳ್ ಭೋರ್ಗರೆವ ತೊಯವೋಲ್’ ‘ಬಳ್ವಳ ಬಳೆದುರಿವ ಕೇಸುರಿಯಂತೆ’ ‘ದೃಢಕಠಿಣ ಹೃದಯನಪ್ಪ ಹಿರಣ್ಯಾಕ್ಷನುರಮಂ ಪೊಳ್ವಂತೆ’, ‘ಸುಟ್ಟುರೆಯೊಳಗಣ ತರಗೆಲೆಯಂತೆ’ ‘ಬಡಿಗೊಂಡು ಮಸಗಿ ಭೈತ್ರಮನೊಡೆವ ಮಹಾಮಕರದಂತೆ’ ‘ದಿನಕರನ ಬೞದಪ್ಪಿದ ಕಿರಣಂಗಳ್ ಕೞಲ್ತೆಯಂ ಕಂಡಳ್ಕಿ ತನ್ನ ಮಯಂ ಪೊಕ್ಕಂತೆ’ ‘ಆವುಗೆವುರಿಯಂತೆ’ ‘ಕೃಪೆಯಂ ಜವಂ ಬಿಸುಟಂತೆ’ ‘ದಳಂಗಳ್ ಕೋಲಾಟಮಾಡುವಂತೆ’, ‘ಪ್ರಳಯದುರಿಯನುರುಳಿಮಾಡಿದಂತೆ’ ‘ಕಿಡಿಗಳ ಬಳಗಮನೊಳಗುಮಾಡಿದಂತೆ’, ‘ಕಾರಮುಗಿಲ್’ ಬಳ್ಳಿಮಿಂಚಿಂದುಳ್ಕುವವೋಲ್’ ‘ಚದುರಂಗದ ಮಣೆಯನಲುಗಿದಂತೆ’ ‘ಚತುದರ್ಶಭುವನಂಗಳೆಲ್ಲಮಂ ತೆರಳ್ಚಿ ತೇರೈಸಿ ನುಂಗುವಂತೆ’, ‘ಜವಂಗೆ ಬಿರ್ದಿಕ್ಕುವಂತೆ, ಅರಾತಿಗೆ ಮಿೞ್ತ್ತು ಬರ್ಪಂತೆ’ ‘ಶಿಖಾಕಳಾಪಂಗಳೊಳ್ ಪುಡಪುಡನೞ ಸಾಯ್ವ’ ಪತಂಗದಂತೆ’ ‘ಪೆಂಕೊಳಿಯ ಸಿಂಹಮಂ ಮುತ್ತುವಂತೆ’ ‘ಪೆರ್ವಿದಿರ ಸಿಡಿಂಬಿನೊಳ್ ಪುದಿದ ಕುಳಾಚಳದಂತೆ’, ‘ಸಿಡುಂಬಿನ ಪೊದೞೊಳ್ ಮೞೆದೊಱಗಿದ ಮೃಗರಾಜನಂತೆ’, ‘ಮಹಾಮಕರಂ ಸಮುದ್ರದೊಳ್ ಪರಿವವೋಲ್’ ‘ಇಂದ್ರನೀಲಮಂ ಮುತ್ತಿನೋಳಿಯೊಳ್ ಕೋದೆೞಲಿಕ್ಕಿದ ಮಾಲೆಯಂತೆ, ಅೞಯೆ ನೊಂದ ಸಿಂಗದ ಮೇಲೆ ಬೆರಗಱಯದ ಬೆಳ್ಳಾಳ್ ಪಾಯ್ವಂತೆ’ ‘ತೂಱಕೊಂಡ’ ಜೋಳದಂತೆ ‘ಆಗಾಮಿಪ ಸಂಗ್ರಾಮರಂಗಕ್ಕೆ ಪಾತ್ರಗಳಂ ಸಮೆಯಿಸುವ ಸೂತ್ರಧಾರನಂತೆ’ ‘ತಾರಾಗಣಗಳ ನಡುವಣ ಸಕಲ ಕಳಾಧರನಂತೆ ‘ಮದನನ ಕೆಯ್ಯಿಂ ಬರ್ದುಂಕಿ ಬಂದ ಅರಲಂಬು ಬರ್ಪಂತೆ’ ‘ಪಲರು ಮಂಬಂತೊಡೆ ನಡುವಿರ್ದೊಂದು ಪುಲ್ಲೆಯಂತೆ’ ‘ತೆಂಕಣಗಾಳಿಯ ಸೋಂಕಿನೊಳ್ ನಡುಮಂಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ ತೊಡರ್ದವೋಲ್’ ‘ಕಾಯ್ದು ಪುಡಿಯೊಳಗೆ ಬಿಸುಟೆಳೆವಾೞೆಯಂತೆ’ ‘ಏೞ್ಗೆವಾಡಿವದ’ ಸಸಿಯಂತೆ’ ‘ಕೃಷ್ಣೋರಗನಂ ಪಿಡಿದ ಬೆಳ್ಳಾಳಂತೆ’, ‘ಮುತ್ತಂ ಮೆಣಸಂ ಕೋದಂತೆ’ ಕಾಮದೇವನೇವಮಂ ಕೆಯ್ಕೊಂಡು ಸೀಂತಂತೆ ‘ಮೋಹರಸಮೆ ಕಣ್ಣಿಂ ತುಳುಕುವಂತೆ’ ‘ಅಶೇಷಧರಾಭಾರಮಂ ಶೇಷಂ ತಾಳ್ದುವಂತೆ. ‘ಗಾಳಿಗೊಡ್ಡಿದ ಪುಲ್ಲ ಪನಿಗಳಂತೆ’ ‘ಪುಲ್ಲ ಸೂಡನೀಡಾಡುವಂತೆ.’ ‘ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ, ಎಂಬಿವೇ’ ಮೊದಲಾದ ಉಪಮಾನಗಳೂ ‘ಪರಿದುದು ವಸಂತಗಜಂ’ ಎಂಬಂತಹ ರೂಪಕಗಳೂ ‘ಕಾಸಿದಿಟ್ಟಿಗೆಯ ರಜಂಬೊಲಿರೆ ಸಂಧ್ಯೆ’ ‘ಚಂದ್ರನು ಸಂಧ್ಯೆಯನ್ನು ಕೂಡಲು ರೋಹಿಣಿಯು ಕೋಪಗೊಂಡು ಒದ್ದುದರಿಂದ ಅವಳ ಕಾಲಿನ ಅಲತಿಗೆಯು ಮೆತ್ತಿಕೊಳ್ಳಲು ಚಂದ್ರಬಿಂಬವು ಕೆಂಪಾಗಿತ್ತು’ ‘ಕತ್ತಲೆಯೆಂಬ ಆನೆಯ ಕೋಡಿನ ಇರಿತದಿಂದ ಅವನ ಎದೆಯಲ್ಲಿದ್ದ ಹರಿಣವು ಗಾಯಗೊಂಡ ರಕ್ತದಿಂದ ಚಂದ್ರನು ಕೆಂಪಾಗಿ ಕಾಣಿಸಿಕೊಂಡನು’ ಎಂಬಂತಹ ಅನೇಕ ಉತ್ಪ್ರೇಕ್ಷೆಗಳೂ ಕಾವ್ಯದ ಮಧ್ಯೆ ಅನೇಕೆಡೆಗಳಲ್ಲಿ ಬಹಳ ಆಕರ್ಷಕವಾಗಿವೆ. ಪಂಪನ ಸಾಮರ್ಥ್ಯ ನಿಜವಾಗಿ ಎದ್ದು ಕಾಣುವುದು ಆತನ ಪಾತ್ರ-ಚಿತ್ರಣದಲ್ಲಿ. ಆತನ ಪ್ರತಿಯೊಂದು ಪಾತ್ರದಲ್ಲಿಯೂ ಪ್ರತ್ಯೇಕವಾದ ವ್ಯಕ್ತಿತ್ವವಿದೆ, ಪ್ರತಿಯೊಂದೂ ತನ್ನದೇ ಆದ ಗುಣಗಳನ್ನು ವ್ಯಕ್ತಪಡಿಸಿಕೊಂಡು ಆ ಗುಣಗಳಿಂದಲೇ ಮನೋಹರವಾಗಿದೆ. ಒಂದು ಕಡೆ ಮಹಾಭಾರತದ ಸೂತ್ರಧಾರನಂತಿರುವ ಕೃಷ್ಣಪರಮಾತ್ಮ (ಪಂಪನು ಅವನನ್ನು ಭಾರತದ ಪೂಜ್ಯವ್ಯಕ್ತಿಗಳ ಸಾಲಿನಲ್ಲಿ ಸೇರಿಸಿಲ್ಲದಿದ್ದರೂ ಅವನಿಲ್ಲದೆ ಕಥೆ ಮುಂದೆ ಸಾಗುವುದೇ ಇಲ್ಲ) ಮತ್ತೊಂದು ಕಡೆ ಧರ್ಮವೇ ಮೂರ್ತಿವೆತ್ತಂತಿರುವ ಧರ್ಮರಾಜ, ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯ, ಧನುರ್ಧರಾಗ್ರಗಣ್ಯನಾದ ದ್ರೋಣಾಚಾರ್ಯ, ಭಾರತಯುದ್ಧಕ್ಕೆ ಆದಿಶಕ್ತಿಯೆನಿಸಿದ ದ್ರೌಪದಿ-ಇವರೊಬ್ಬೊಬ್ಬರೂ ತಮ್ಮ ಒಂದೊಂದು ಗುಣದಿಂದಲೇ ಪ್ರಪಂಚದಲ್ಲಿ ಆಚಂದ್ರಾರ್ಕವಾದ ಕೀರ್ತಿಯನ್ನು ಪಡೆದಿದ್ದಾರೆ. ಪಂಪನು ಬಹುಶ ತನ್ನ ಕಾಲದಲ್ಲಿ ಪ್ರಧಾನ ಮೌಲ್ಯಗಳಾಗಿದ್ದಿರಬಹುದಾದ ಛಲ, ನನ್ನಿ, ಗಂಡು, ಬಲ, ಉನ್ನತಿ, ಚಾಪವಿದ್ಯೆ, ಸಾಹಸ, ಧರ್ಮ ಈ ಗುಣಗಳಿಗೆ ಪ್ರಸಿದ್ಧ ಪ್ರತಿನಿಗಳಾಗಿದ್ದ ದುರ್ಯೋಧನ, ಕರ್ಣ, ಭೀಮ, ಶಲ್ಯ, ಭೀಷ್ಮ, ದ್ರೋಣ, ಅರ್ಜುನ ಮತ್ತು ಧರ್ಮರಾಜರನ್ನು ಹೆಸರಿಸಿ ಅವರಿಂದ ಭಾರತವು ಲೋಕಪೂಜ್ಯವಾಗಿದೆ ಎಂದು ಹೇಳಿದ್ದಾನೆ. ಇವರೊಡನೆ ಕೃಷ್ಣ, ಅಭಿಮನ್ಯು, ಘಟೋತ್ಕಚ, ಶ್ವೇತ ಮೊದಲಾದವರ ಅದ್ಭುತ ವ್ಯಕ್ತಿತ್ವಗಳು ಕಾವ್ಯದಲ್ಲಿ ಮೂಡಿ ಬಂದಿವೆ. ಇವರಲ್ಲಿ ಪ್ರಧಾನವಾದ ಕೆಲವರ ಪಾತ್ರ ಚಿತ್ರಣವನ್ನು ಪರಿಶೀಲಿಸಬಹುದು.

ಮಹಾಭಾರತದ ಪ್ರಧಾನ ವ್ಯಕ್ತಿ ಶ್ರೀಕೃಷ್ಣ. ಆತನ ಹೆಸರನ್ನು ವಾಚ್ಯವಾಗಿ ಪಂಪನು ಎತ್ತಿ ಸೂಚಿಸದಿರುವುದಕ್ಕೆ ಕಾರಣಗಳನ್ನು ಊಹಿಸುವುದು ಸುಲಭವಲ್ಲ. ಹೆಸರಿಸದಿದ್ದರೂ ಆತನ ಕೈವಾಡ, ಪ್ರಭಾವ, ಪ್ರಾಮುಖ್ಯ ಪಂಪಭಾರತದಲ್ಲಿ ಎಲ್ಲಿಯೂ ಕಡಿಮೆಯಾಗಿಲ್ಲ. ಆತನಿಲ್ಲದಿದ್ದರೆ ಭಾರತದ ಕಥೆಯೇ ನಡೆಯುತ್ತಿರಲಿಲ್ಲವೆಂಬಷ್ಟು ಸ್ಥಾನವನ್ನು ಕವಿ ಅವನಿಗೆ ಕಲ್ಪಿಸಿದ್ದಾನೆ. ‘ಮಮ ಪ್ರಾಣಾ ಹಿ ಪಾಂಡವಾ’ ಎಂಬುದಾಗಿ ಮೂಲಭಾರತದಲ್ಲಿ ಬರುವ ಆತನ ಉಕ್ತಿಗೆ ಇಲ್ಲಿ ಊನ ಬಂದಿರುವಂತೆ ಕಾಣುವುದಿಲ್ಲ. ದ್ರೌಪದೀಸ್ವಯಂವರದಲ್ಲಿ ಪಾಂಡವರನ್ನು ಮೊದಲು ಕಂಡ ಆತನು ಅರ್ಜುನನ ಪಟ್ಟಾಭಿಷೇಕದವರೆಗೆ ಉದ್ದಕ್ಕೂ ಪಾಂಡವರ ಪ್ರಧಾನ ಶಕ್ತಿಯಾಗಿದ್ದಾನೆ. ಪಾಂಡವರು ಯಾವ ಕೆಲಸ ಮಾಡಬೇಕಾದರೂ ಅವನನ್ನು ವಿಚಾರಿಸದೆ ತೊಡಗುವುದಿಲ್ಲ. ಅವರ ಎಲ್ಲ ಸಹಾಯ ಸಂಪತ್ತುಗಳೂ ವಿಪತ್ಪರಿಹಾರಗಳೂ ಅವನಿಂದಲೇ ಉಂಟಾಗುವುವು. ಸುಭದ್ರಾಪರಿಣಯಕ್ಕೆ ಕಾರಣನಾದವನು ಆತನು. ರಾಜಸೂಯವನ್ನು ನಡೆಸಿದವನು ಆತನು, ಖಾಂಡವದಹನ ಪ್ರಸಂಗದಲ್ಲಿ ನೆರವಾಗಿದ್ದವನು, ಪಾಶುಪತಾದಿ ಅಮೌಲ್ಯಅಸ್ತ್ರಗಳನ್ನು ದೊರಕಿಸಿದವನು. ದುರ್ಯೋಧನನಿಗೆ ದೂತನಾಗಿ ಹೋಗಿ ಸಂಗಾಗಿ ಪ್ರಯತ್ನಪಟ್ಟವನು ಅವನೇ. ಭೇದೋಪಾಯದಿಂದ ಕರ್ಣನ ಶಕ್ತಿಯನ್ನು ಕುಂದಿಸಿದವನೂ, ಕುಂತಿಯ ಮೂಲಕ ಪಾಂಡವರಿಗೆ ಅವನಿಂದ ರಕ್ಷಣೆಯನ್ನು ದೊರಕಿಸಿದವನೂ ಅವನೇ ಯುದ್ಧದಲ್ಲಿ ವೀರಾವೀರರಾದ ಭೀಷ್ಮ ದ್ರೋಣ ಕರ್ಣ ಶಲ್ಯ ಮೊದಲಾದ ಎಲ್ಲ ನಾಯಕರನ್ನೂ ಜಯಿಸುವ ಉಪಾಯವನ್ನು ಹೇಳಿಕೊಟ್ಟವನೂ ಅವನೇ. ಪಾಂಡವರಿಗೆ ಯುದ್ಧದಲ್ಲಿ ಉಂಟಾದ ಎಲ್ಲ ವಿಪತ್ತುಗಳೂ ಅವನಿಂದಲೇ ಪರಿಹಾರವಾದುವು. ಅವನು ಅಜಿತ, ಅನಂತ, ಮಧು ಮಥನ, ನಾರಾಯಣ ಎಂಬುದು ಉಭಯಪಕ್ಷಗಳಿಗೂ ತಿಳಿದಿತ್ತು. ಹಾಗೆಯೇ ಎಲ್ಲರಿಗೂ ಅವನಲ್ಲಿ ಪೂರ್ಣವಾದ ಭಕ್ತಿಯಿತ್ತು. ಅವನ ಉಪದೇಶದಂತೆ ನಡೆದುಕೊಳ್ಳಿ ಎಂದು ದ್ರೋಣ ಭೀಷ್ಮಾದಿಗಳು ಪಾಂಡವರಿಗೆ ತಿಳಿಸುತ್ತಾರೆ. ದುರ್ಯೋಧನನಿಗೂ ಕೂಡ ಅವನ ನೆರವು ಅವಶ್ಯಕವೆಂದು ತಿಳಿದಿತ್ತು. ಅವನನ್ನು ಗೆಲ್ಲುವುದು ಕಷ್ಟಸಾಧ್ಯವೆಂಬ ಅರಿವೂ ಇತ್ತು ಎಂದು ಸ್ಪಷ್ಟವಾಗಿ ತಿಳಿಸಿದನು. ಕೊನೆಗೆ ಸಾಯುವಾಗ ‘ಆಗದು ಪಾಂಡವರಂ ಗೆಲಲ್ ಪುರಾತನಪುರುಷಂ ಮುರಾರಿ ಕೆಲದೊಳ್‌ನಿಲೆ’ ಎನ್ನುವನು. ಪಂಪನ ಕೃಷ್ಣನು ಭಗವಂತನೇ ಆದರೂ ಮಾನವನಂತೆಯೇ ಅರ್ಜುನನ ಪರಮಮಿತ್ರನಾಗಿ ಉಚ್ಚರಾಜಕಾರಣಪಟುವಾಗಿ ನಡೆದುಕೊಳ್ಳುತ್ತಾನೆ. ಕೊನೆಗೆ ವಿಬುಧವನಜವನಕಳಹಂಸನಾದ ಧರ್ಮರಾಜನು ಪುರುಷೋತ್ತಮನನ್ನು ಕುರಿತು

ನಿನ್ನ ದಯೆಯಿಂದಂ, ಅರಿನೃಪ
ರಂ, ನೆರೆ ಕೊಂದೆಮಗೆ ಸಕಳ ರಾಜ್ಯಶ್ರೀಯುಂ
ನಿನ್ನ ಬಲದಿಂದೆ ಸಾರ್ದುದು
ನಿನ್ನುಪಕಾರಮನದೇತಳ್ ನೀಗುವೆನೋ||

ಎಂದು ಅನುನಯವಚನ ರಚನಾಪರಂಪರೆಗಳಿಂದ ಮುಕುಂದನನ್ನು ದ್ವಾರಾವತಿಗೆ ಕಳುಹಿಸಿಕೊಡುತ್ತಾನೆ.

ಅರ್ಜುನನು ಪಂಪಭಾರತದ ಕಥಾನಯಕ. ಆದುದರಿಂದಲೇ ಅದಕ್ಕೆ ‘ವಿಕ್ರಮಾರ್ಜುನ ವಿಜಯ’ ಎಂದು ಕವಿ ನಾಮಕರಣ ಮಾಡಿದ್ದಾನೆ. ಅವನ ಅಪರಾವತಾರನೆಂದು ಭಾವಿಸಿದ ಅರಿಕೇಸರಿಯ ವೀರ್ಯ ಶೌರ್ಯ ಔದಾರ್ಯಗಳನ್ನು ಅದ್ಧೂರಿಯಿಂದ ಚಿತ್ರಿಸುವುದಕ್ಕಾಗಿಯೇ ಪಂಪನು ಈ ಕಾವ್ಯವನ್ನು ರಚಿಸಿದುದು. ಆದುದರಿಂದ ಅವನ ಪಾತ್ರರಚನೆಯಲ್ಲಿ ಕವಿತಾಗುಣಾರ್ಣವನು ತನ್ನ ಸರ್ವಶಕ್ತಿಯನ್ನು ವ್ಯಯಮಾಡಿದ್ದಾನೆ. ಎರಡು ಮಕ್ಕಳಾಗಿದ್ದರೂ ಕುಂತಿ ಸರ್ವ ಲಕ್ಷಣಸಂಪನ್ನನಾದ ಮತ್ತೊಬ್ಬನಿಗೂ ಅಸೆಪಡುತ್ತಾಳೆ. ವ್ರತೋಪವಾಸವನ್ನು ಮಾಡುತ್ತಾಳೆ. ಇಂದ್ರನನ್ನು ಪ್ರಾರ್ಥಿಸುತ್ತಾಳೆ. ಇಂದ್ರನು ‘ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮಂ ಆದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ, ವದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮಂ, ಈಶ್ವರನ ಪ್ರಭುಶಕ್ತಿಯುಮಂ, ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮಂ ಅವರವರ ದೆಸೆಗಳಿಂ ತೆಗೆದೊಂದುಗೂಡಿಸಿ ಕುಂತಿಯ ಗರ್ಭಪುಟೋದರದೊಳ್ ತನ್ನ ದಿವ್ಯಾಂಶವೆಂಬ ಮುಕ್ತಾಫಲಬಿಂದುವಿನೊಡನೆ ಸಂಕ್ರಮಿಸಿ’ ಇಡುತ್ತಾನೆ. ಕುಂತಿಗೆ ಷೋಡಶಸ್ವಪ್ನವಾಗುತ್ತದೆ. ಗ್ರಹಗಳೆಲ್ಲವೂ ತಂತಮ್ಮುಚ್ಚಸ್ಥಾನಗಳಲ್ಲಿದ್ದ ಶುಭಮುಹೂರ್ತದಲ್ಲಿ ತೇಜೋಮಯನಾದ ಶಿಶುವುದಿಸಿದನು, ದೇವದುಂದುಭಿ ಮೊಳಗಿತು. ಮೂವತ್ತುಮೂಱುದೇವರೂ ಇಂದ್ರನೊಡಗೂಡಿ ಜನ್ಮೋತ್ಸವವನ್ನು ಮಾಡಿ ಮುಂಡಾಡಿ ನೂರೆಂಟು ನಾಮಗಳಿಂದ ನಾಮಕರಣೋತ್ಸವವನ್ನು ಮಾಡಿದರು. ಭೀಷ್ಮನ ತೋಳ ತೊಟ್ಟಿಲಿನಲ್ಲಿ ಬೆಳೆದನು. ಕುಶಾಗ್ರಬುದ್ಧಿಯಾದ ಗುಣಾರ್ಣವನು ಕೃಪಾಚಾರ್ಯನ ಪಕ್ಕದಲ್ಲಿ ಉಳ್ಳೋದುಗಳನ್ನೆಲ್ಲ ಕಲಿತನು. ದ್ರೋಣಾಚಾರ್ಯರಲ್ಲಿ ಅಭ್ಯಸಿಸಿ ಪಾರಂಗತನಾದನು. ದ್ರುಪದನನ್ನು ಪರಾಭವಿಸಿ ಗುರುದಕ್ಷಿಣೆಯನ್ನಿತ್ತನು. ಅಲ್ಲಿ ಕರ್ಣನ ಪರಿಚಯವಾಯಿತು. ಹಾಗೆಯೇ ಅವನೊಡನೆ ಸ್ಪರ್ಧೆಯೂ ಪ್ರಾರಂಭವಾಯಿತು. ಕೆಲಕಾಲ ಸಹೋದರರೊಡನೆ ವಾರಣಾವತದಲ್ಲಿ ಸುಖವಾಗಿ ವಾಸಿಸಿದನು. ಅರಗಿನ ಮನೆಯ ಪ್ರಸಂಗದಿಂದ ಬೇರೆ ಬೇರೆ ಕಡೆಯಲ್ಲಿದ್ದು ಛತ್ರಪತಿ ಪುರದಲ್ಲಿ ಮತ್ಸ್ಯಭೇದನದಿಂದ ದ್ರೌಪದಿಯನ್ನು ವರಿಸಿದನು. ಅಲ್ಲಿಂದ ಮುಂದೆ ಪಂಪನು ಭಾರತದ ಬಹುಭಾಗವನ್ನು ಅವನ ಪ್ರಶಂಸೆಗಾಗಿಯೇ ಮೀಸಲಾಗಿಸಿದ್ದಾನೆ. ಸುಂಭದ್ರಾಹರಣ, ಖಾಂಡವದಹನ, ಇಂದ್ರಕೀಲಗೋಗ್ರಹಣ, ಸೈಂಧವವಧೆ, ಕರ್ಣಾರ್ಜುನರ ಯುದ್ಧಪ್ರಕರಣಗಳಲ್ಲಿ ಅವನ ಸಾಹಸಪರಾಕ್ರಮಗಳು ಅದ್ಭುತವಾಗಿ ವರ್ಣಿತವಾಗಿವೆ. ಇತಿಹಾಸವ್ಯಕ್ತಿಯಾದ ಅರಿಕೇಸರಿಯ ಪ್ರಶಂಸೆಯೇ ಪ್ರಧಾನವಾದ ಗುರಿಯಾದುದರಿಂದ ಅವನ ಪ್ರತಿನಿಯಾದ ಪೂರ್ವಾವತಾರವಾದ ಇವನನ್ನು ಅವನ ಬಿರುದು ಬಾವಲಿಗಳಿಂದಲೇ ಸಂದರ್ಭ ಸಿಕ್ಕಿದಾಗಲೆಲ್ಲ ಕವಿ ಹೊಗಳುತ್ತಾನೆ. ಗ್ರಂಥಾದಿಯ ನಾಂದಿ ಪದ್ಯಗಳಲ್ಲಿ ಆಶ್ವಾಸದ ಆದಿ ಅಂತ್ಯ ಪದ್ಯಗಳಲ್ಲಿ ಅವನ ಶ್ಲಾಘನರೂಪವಾದ ವಿಷಯಗಳೇ ಉಕ್ತವಾಗಿವೆ. ಆಚಾರ್ಯರಾದ ದ್ರೋಣರೂ ಪಿತಾಮಹರಾದ ಭೀಷ್ಮರೂ ಅವನನ್ನು ಜಯಿಸುವುದು ಅಸಾಧ್ಯವೆನ್ನುತ್ತಾರೆ. ಅವನಿಗೆ ಗುರುಹಿರಿಯರಲ್ಲಿದ್ದ ವಿಧೇಯತೆ ಬಹು ಶ್ಲಾಘನೀಯವಾದುದು. ಅಣ್ಣನ ಮಾತಿನ ಪ್ರಕಾರ ದುರ್ಯೋಧನನನ್ನು ಗಂಧರ್ವನಿಂದ ಬಿಡಿಸಿ ತರುತ್ತಾನೆ. ಕರ್ಣ ದುರ್ಯೋಧನಾದಿಗಳಿಗೂ ಅವನ ಪರಾಕ್ರಮ ತಿಳಿಯದ ವಿಷಯವಲ್ಲ. ತಮ್ಮ ಕಡೆಯವರಿಗೆ ಆಪತ್ತೊದಗಿದಾಗಲೆಲ್ಲ ಅದನ್ನು ಪರಿಹಾರ ಮಾಡುವವನು ಅವನೇ. ಅವನ ಶಕ್ತಿಸಾಮರ್ಥ್ಯಗಳನ್ನು ಅರಿಯದವರಿಲ್ಲ, ಅವನಿಗೆ ಧೈವಾನುಗ್ರಹ ಪೂರ್ಣವಾಗಿದೆ. ಇಂದ್ರನು ಅವನಿಗಾಗಿ ಕರ್ಣನಿಂದ ಕವಚಕುಂಡಲಗಳನ್ನು ಕಸಿದುಕೊಂಡ. ತನ್ನ ಗಂಟಲನ್ನಿಕ್ಕಿದರೂ ಶಿವನು ಇವನಿಗೆ ಪಾಶುಪತಾಸ್ತ್ರವನ್ನು ಇತ್ತನು. ಗೌರಿಯು ತಲ್ಲಟಿಯಾಗಿ ಅಂಜಲಿಕಾಸ್ತ್ರವನ್ನೂ ಕೊಟ್ಟಳು. ಇಂದ್ರನು ಅರ್ಧಾಸನವನ್ನಿತ್ತು ರಾಕ್ಷಸರ ಸಂಹಾರಕ್ಕೆ ಅವನ ನೆರವನ್ನು ಪಡೆದನು. ಅಗ್ನಿ ಅವನಿಂದ ಖಾಂಡವ ವನವನ್ನಪೇಕ್ಷಿಸಿ ತೃಪ್ತಿ ಪಡೆದನು. ಅವನ ಸೌಂದರ್ಯವು ಅತ್ಯಂತ ಮೋಹಕವಾದುದು. ರಂಭಾದಿ ದೇವವೇಶ್ಯೆಯರೂ ಅವನಿಗೆ ಸೋಲುತ್ತಾರೆ. ಆದರೆ ತನ್ನ ಶೌಚಗುಣದಿಂದ ಅವರ ಬಲೆಗೆ ಬೀಳದೆ ರಂಭೆಯಿಂದ ಶಾಪವನ್ನು ಪಡೆದರೂ ತನಗೆ ಅನುಕೂಲವಾದ ಸಂದರ್ಭದಲ್ಲಿ ಅದನ್ನು ಉಪಯೋಗಿಸಿಕೊಳ್ಳುತ್ತಾನೆ. ಮೊದಲಿನಿಂದ ಕೊನೆಯವರೆಗೆ ಪೂರ್ವಜನ್ಮದಲ್ಲಿ ನರ ನಾರಾಯಣರ ಸಂಬಂಧವನ್ನು ಪಡೆದಿದ್ದ ಮುಕುಂದನು ಅವನಿಗೆ ಪ್ರೇರಕನೂ ಪೋಷಕನೂ ಆಗಿ ಅವನ ಪೆಂಪನ್ನು ಪೂರ್ಣವಾಗಿ ಪ್ರದರ್ಶಿಸಿ ಯುದ್ಧಾಂತ್ಯದಲ್ಲಿ ಧರ್ಮರಾಯನು ಅರ್ಜುನನ್ನನ್ನು ಕುರಿತು

ಪ್ರಾಯದ ಪೆಂಪೆ ಪೆಂಪು, ಎಮಗೆ ಮೀಱದರಂ ತವೆ ಕೊಂದ ಪೆಂಪು, ಕ
ಟ್ಟಾಯದ ಪೆಂಪು, ಶಕ್ರನೊಡನೇಱದ ಪೆಂಪಿವು ಪೆಂಪುವೆತ್ತು, ನಿ
ಟ್ಟಾಯುಗಳಾಗಿ ನಿನ್ನೊಳಮರ್ದಿರ್ದುವು, ನೀಂ ತಲೆವೀಸದೆ, ಉರ್ವರಾ
ಶ್ರೀಯನಿದಾಗದು ಎನ್ನದೆ ಒಳಕೊಳ್ ಪರಮೋತ್ಸವದಿಂ ಗುಣಾರ್ಣವಾ||

ಎಂದಾಗ ದೇವಕೀಪುತ್ರನು ‘ಅಶೇಷಧರಾಭಾರಮಂ ಶೇಷಂ’ ತಾಳ್ದುವಂತೆ ವಿಕ್ರಮಾರ್ಜುನಂಗಲ್ಲದೆ ಪೆಱಂಗೆ ತಾಳಲರಿದು; ಇದರ್ಕಾನುಮೊಡಂಬಡುವೆನ್’ ಎಂದು ಹೇಳಿ ಅವನ ಪಟ್ಟಾಭಿಷೇಕಕಾರ್ಯವನ್ನು ತನ್ನ ಮೇಲ್ವಿಚಾರಣೆಯಲ್ಲಿಯೇ ನಡೆಸುವನು. ಪಂಪನು ವಿಕ್ರಮಾರ್ಜುನನ ಪಾತ್ರವನ್ನು ಅದ್ಭುತವಾದ ರೀತಿಯಲ್ಲಿ ಚಿತ್ರಿಸಿ ಕಾವ್ಯದ ನಾಮವಾದ ‘ವಿಕ್ರಮಾರ್ಜುನ ವಿಜಯ’ವೆಂಬುದನ್ನು ಸಾರ್ಥಕವನ್ನಾಗಿಸಿದ್ದಾನೆ. ಹಾಗೆಂದ ಮಾತ್ರಕ್ಕೆ ಅವನಷ್ಟು ಪ್ರಧಾನವಾದ ಇತರ ಪಾತ್ರಗಳಿಗೆ ಪಂಪನುಸೂಕ್ತಸ್ಥಾನವನ್ನು ದೊರಕಿಸಿಲ್ಲವೆಂದು ತಿಳಿಯಬೇಕಿಲ್ಲ. ಭಾರತದ ಕಥೆಯಲ್ಲಿ ಅರ್ಜುನನಷ್ಟೆ ಪ್ರಾಶಸ್ತ್ಯವುಳ್ಳವನು ಭೀಮಸೇನ. ಕೆಲವೆಡೆಗಳಲ್ಲಿ ಅವನ ಪಾತ್ರ ಅರ್ಜುನನಿಗಿಂತ ಹೆಚ್ಚು ಉಜ್ವಲವಾಗಿದೆ. ವಾಸ್ತವವಾಗಿ ಭಾರತಯುದ್ಧ ಮುಗಿದು ಪಾಂಡವರಿಗೆ ರಾಜ್ಯಪ್ರಾಪ್ತಿಯಾಗುವುದು, ದುರ್ಯೋಧನನ ಊರುಭಂಗ ಕಿರೀಟಭಂಗ ಪ್ರತಿಜ್ಞೆಗಳನ್ನು ಪೂರ್ಣ ಮಾಡುವುದರಿಂದ, ಅದು ಪೂರ್ಣವಾಗುವುದು ಭೀಮನಿಂದ, ಆದುದರಿಂದ ಪಂಪನು ಇದನ್ನು ಜ್ಞಾಪಕದಲ್ಲಿಟ್ಟುಕೊಂಡು ಭೀಮನ ಪೌರುಷಪ್ರದರ್ಶನದ ಸನ್ನಿವೇಷಗಳನ್ನೆಲ್ಲ ಪ್ರಭಾವಶಾಲಿಯಾಗುವ ಹಾಗೆ ವರ್ಣಿಸಿದ್ದಾನೆ. ಲಾಕ್ಷಾಗೇಹದಾಹ, ಹಿಡಿಂಬಾಸುರವಧೆ, ದ್ಯೂತಪ್ರಸಂಗದಲ್ಲಿನ ಭೀಷ್ಮಪ್ರತಿಜ್ಞೆ, ಕೀಚಕವಧೆ, ಭಗದತ್ತ ಯುದ್ಧ, ಸುಪ್ರತೀಕವಧೆ, ಜರಾಸಂಧವಧೆ, ದುಶ್ಯಾಸನ ರಕ್ತಪಾನ, ದುರ್ಯೋಧನನ ಊರುಭಂಗ, (ಗದಾಯುದ್ಧ) ವೇಣೀ ಸಂಹಾರ ಮೊದಲಾದೆಡೆಗಳಲ್ಲಿ ಅವನ ಸಾಹಸ ಎದ್ದು ಕಾಣುವುದು. ಅವನ್ನು ಓದುತ್ತಿರುವಾಗ ನಾವು ‘ವಿಕ್ರಮಾರ್ಜುನ ವಿಜಯ’ ವನ್ನೋದುತ್ತಿದ್ದೇವೆ ಎಂಬ ಅರಿವೇ ಮರೆವಾಗುವುದು.

ಭೀಮಾರ್ಜುನರ ಪಾತ್ರಗಳ ರಚನೆಯಲ್ಲಿ ಪಂಪನು ಅಷ್ಟು ಶ್ರಮಪಟ್ಟಿರುವಂತೆ ಕಾಣುವುದಿಲ್ಲ. ಏಕೆಂದರೆ ಈ ಪಾತ್ರಗಳ ವಿಷಯದಲ್ಲಿ ಮೂಲ ಭಾರತದಲ್ಲಿಯೇ ಸರಿಯಾದ ಸೌಷ್ಠವವಿದೆ. ದೈವಬಲವೂ ಅವರ ಕಡೆಯೇ ಇದೆ. ಧರ್ಮವೂ ಅವರನ್ನೇ ಆಶ್ರಯಿಸಿದೆ. ಅರ್ಜುನನಿಗೆ ಹೋಲಿಸಿರುವ ಅರಿಕೇಸರಿರಾಜನು ವೀರನೇ ಅಹುದು. ಮೂಲಭಾರತದಲ್ಲಿರುವಂತೆ ಇಲ್ಲಿಯ ಭೀಮಾರ್ಜುನರೂ ಆಗಾಗ ಕೃಷ್ಣನ ಬೆಂಬಲಕ್ಕೆ ಕಾಯುತ್ತ ಧರ್ಮದ ಹೆಸರಿನಲ್ಲಿ ಅಧರ್ಮದಲ್ಲಿಯೂ ಕಾಲಿಡುವುದುಂಟು. ಆಗ ಅವರು ವಾಚಕರ ಅಸಮ್ಮತಿಗೂ ಪಾತ್ರವಾಗುವ ಸಂಭವವುಂಟು. ಆಗ ಅವರಲ್ಲಿ ನಮ್ಮ ಪೂರ್ಣಸಹಾನುಭೂತಿಯಿರುವುದಿಲ್ಲ.

ಪ್ರತಿನಾಯಕರಾದ ಕರ್ಣ ದುರ್ಯೋಧನರು ಪಂಪನ ಹೃದಯವನ್ನು ಸೂರೆಗೊಂಡಿದ್ದಾರೆ. ಪಂಪನು ಅವರ ಪೌರುಷಕ್ಕೆ ಮೆಚ್ಚಿದ್ದಾನೆ. ಅವರ ದುಸ್ಥಿತಿಗೆ ಮರುಗಿದ್ದಾನೆ, ಸಹಾನುಭೂತಿಯಿಂದ ಕಣ್ಣೀರುಗರೆದಿದ್ದಾನೆ. ಅದರಲ್ಲಿಯೂ ಕರ್ಣನ ಸನ್ನಿ, ತ್ಯಾಗ, ಅಣ್ಮುಗಳನ್ನು ಅತ್ಯತಿಶಯವಾಗಿ ಪ್ರಸಂಸಿಸಿದ್ದಾನೆ. ಅವನ ದೃಷ್ಟಿಯಲ್ಲಿ ಕರ್ಣನ ದುರಂತಕಥೆಯೆ ಭಾರತ, ಅದನ್ನೇ ಅವನು ‘ಕರ್ಣಂಗೊಂಡಿತ್ತು ದಲ್ ಭಾರತಂ’ ಎಂಬ ಅರ್ಜುನನ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾನೆ. ಕರ್ಣನಲ್ಲಿ ತನಗಿರುವ ಬಹು ಉಚ್ಛಭಾವವೂ ಸಹಾನುಭೂತಿಯೂ ವಾಚಕರಲ್ಲಿ ನಿರರ್ಗಳವಾಗಿ ಕೋಡಿವರಿವಂತೆ ಅವನ ಪಾತ್ರವನ್ನು ಚಿತ್ರಿಸಿದ್ದಾನೆ.

ಕರ್ಣನ ಕಥೆ, ಕರುಣದ ಕಥೆ. ಅವನೊಬ್ಬ ದುರಂತವ್ಯಕ್ತಿ, ಬಾಲೆಯೊಬ್ಬಳ ಹುಡುಗಾಟದ ಅವಿವೇಕದ ಫಲವಾಗಿ ಕರ್ಣನು ಜನಿಸಿದನು. ಕೊಡಗೂಸುತನದ ಭಯದಿಂದ ತಾಯಿ ನಿಧಾನಮನೀಡಾಡುವಂತೆ ಕೈಯ ಕೂಸನ್ನು ಗಂಗೆಯಲ್ಲಿ ಈಡಾಡಿದಳು. ಗಂಗಾದೇವಿ ಆ ಕೂಸನ್ನು ಮುಳುಗಲೀಯದೆ ತನ್ನ ತೆರೆಗೈಗಳಿಂದ ದಡವನ್ನು ಸೇರಿಸಿದಳು. ಸೂತನೊಬ್ಬನದನ್ನು ಕಂಡು ನಿ ಕಂಡವನಂತೆ ಸಂತೋಷಸಿ ಎತ್ತಿ ಸಲಹಿದ ಆ ಮಗುವಿಗೆ ಸುಷೇಣ, ಕರ್ಣನೆಂಬ ಅನ್ವರ್ಥನಾಮಗಳಾದುವು. ಸುತಪುತ್ರನಾಗಿಯೇ ಬೆಳೆದನಾದರೂ ಆತನ ಚಾಗದ ಬೀರದ ಮಾತು ದೇವೇಂದ್ರನನ್ನು ಮುಟ್ಟಿತು. ಮುಂದೆ ಅರ್ಜುನನಿಗೂ ಅವನಿಗೂ ಒದಗುವ ದ್ವಂದ್ವಯುದ್ಧವನ್ನು ದಿವ್ಯಜ್ಞಾನದಿಂದ ತಿಳಿದು ಮಗನ ಸಹಾಯಕ್ಕಾಗಿ ಅವನೊಡನೆ ಹುಟ್ಟಿದ ಕವಚಕುಂಡಲಗಳನ್ನು ಇಂದ್ರನು ಯಾಚಿಸಿದನು. ತಾನೆ ‘ಕೊಳ್ಳೆಂದರಿದೀಡಾಡಿದನಿಂದ್ರಂಗೆ ರಾಧೇಯಂ’ ಬಳಿಕ ರೇಣುಕಾನಂದನನಲ್ಲಿ ವಿದ್ಯಾಪಾರಂಗತನಾದ. ಅಲ್ಲಿಯೂ ಇಂದ್ರನ ಕುತಂತ್ರದಿಂದ ಕರ್ಣನಿಗೆ ಹಿಂಸೆಯಾಯಿತು. ಶಾಪಹತನಾಗಿ ಹಿಂತಿರುಗಿದ. ದ್ರೋಣಾಚಾರ್ಯರ ಅಸ್ತ್ರವಿದ್ಯಾಶಿಕ್ಷಣದ ವೈಭವವು ಅವನ ಕಿವಿಗೂ ಬಿದ್ದಿತು. ಕೌರವರ್ಗೆಲ್ಲಂ ಪ್ರಾಣಂ ಬರ್ಪಾಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣ ಅಲ್ಲಿಗೆ ಹೋದ. ವಿಕ್ರಮಾರ್ಜುನನಿಗೂ ಇವನಿಗೂ ಸೆಣಸು ಮೊದಲಾಯಿತು. ಒಂದು ದಿನ ಬಾಲಕರ ವಿದ್ಯಾಪರೀಕ್ಷಣದ ಸಂದರ್ಭದಲ್ಲಿ ಕರ್ಣನೂ ಶರಪರಿಣತಿಯಿಂದ ಅತಿರಥಮಥನನೊಡನೆ ರ್ಸ್ಪಸಿದ. ಆಗ ದ್ರೋಣ ಕೃಪಾಚಾರ್ಯರು ಮಧ್ಯೆ ಬಂದು ‘ನಿನ್ನ ತಾಯಿ ತಂದೆಯಂ ಭಾವಿಸದೆ ಕರ್ಣ ನುಡಿವಂತೆ ಅವುದು ಸಮಕಟ್ಟು ನಿನಗಂ ಅರಿಕೇಸರಿಗಂ’ ಎಂದು ಅವನ ಕುಲವನ್ನು ಅವಹೇಳನ ಮಾಡಿದರು. ದುರ್ಯೋಧನನಿಗೆ ಅದು ಸಹಿಸಲಿಲ್ಲ. ‘ಕುಲವೆಂಬುದುಂಟೆ, ಬೀರಮೆ ಕುಲಮಲ್ಲದೆ, ಕುಲಮನಿಂತು ಪಿಕ್ಕದಿರಿಂ, ಈಗಳೆ ಕುಲಜನಂ ಮಾಡಿ ತೋರ್ಪೆನ್’ ಎಂದು ಅವನಿಗೆ ಅಂಗರಾಜ್ಯಾಭಿಷೇಕವನ್ನು ಮಾಡಿ ಕರ್ಣನನ್ನು ಕುರಿತು ‘ನೀನೆನಗೊಂದನೀಯಲ್ವೇೞ್ಪುದು’

ಪೊಡಮಡುವರ್, ಜೀಯ ಎಂಬರ್
ಕುಡು, ದಯೆಗೆಯ್, ಏಂ ಪ್ರಸಾದಂ, ಎಂಬಿವು ಪೆಱರೊಳ್
ನಡೆಗೆ, ಎಮ್ಮ ನಿನ್ನ ಯೆಡೆಯೊಳ್
ನಡೆಯಲ್ವೇಡ, ಎನಗೆ ಕೆಳೆಯನೈ ರಾಧೇಯ||

ಎಂದು ಬೇಡಿಕೊಂಡ. ಮುಂದೆ ಅವರ ಮೈತ್ರಿ ಅನ್ಯಾದೃಶವಾಯಿತು. ಕರ್ಣನ ಸ್ವಾಮಿಭಕ್ತಿಯೂ ಕೊನರಿ ಮೊಗ್ಗಾಯ್ತು. ಈ ಮಧ್ಯೆ ಕೌರವ ಪಾಂಡವರ ದ್ವೇಷ ಬೆಳೆದು ವನವಾಸ ಅಜ್ಞಾತವಾಸಗಳು ಮುಗಿದುವು. ಕೃಷ್ಣನ ಸಂಯ ಪ್ರಯತ್ನವೂ ವಿಫಲವಾಯಿತು. ಇಲ್ಲಿಂದ ಮುಂದೆ ಈಗಾಗಲೇ ತಲೆದೋರಿದ್ದ ಕರ್ಣನ ದುರಂತತೆ ಇಮ್ಮಡಿಯಾಯಿತು. ಸಾಮೋಪಾಯವು ಸಾಗದಿರಲು ಕೃಷ್ಣನು ಕರ್ಣನನ್ನು ಭೇದಿಸಲು ಅವನ ಮನೆಗೇ ಬಂದು ರಥದಿಂದಿಳಿದು ಅವನನ್ನು ಬಹು ಸ್ನೇಹದಿಂದ ಸಂಬೋಸಿ ಸ್ವಲ್ಪ ದೂರ ದಾರಿ ಕಳುಹಿಸಿ ಬರುವೆಯಂತೆ ಬಾ ಎಂದು ಕರೆದುಕೊಂಡು ಹೋಗಿ ಏಕಾಂತವಾಗಿ ಒಂದು ಕಡೆ ನಿಂತು

ಭೇದಿಸಲೆಂದೆ ದಲ್ ನುಡಿದರ್ ಎನ್ನದಿರು, ಒಯ್ಯನೆ ಕೇಳ ಕರ್ಣ ನಿ
ನ್ನಾದಿಯೊಳಬ್ಬೆ ಕೊಂತಿ, ನಿನಗಮ್ಮನ್ ಅಹರ್ಪತಿ, ಪಾಂಡುನಂದನರ್
ಸೋದರರ್, ಎಯ್ದೆ ಮಯ್ದುನನೆ ನಾನ್, ಪೆಱತೇನ್ ಪಡೆಮಾತೊ ನಿನ್ನದೀ
ಮೇದಿನಿ, ಪಟ್ಟಮುಂ ನಿನತೆ, ನೀನಿರೆ ಮತ್ತೆ ಪೆಱರ್ ನರೇಂದ್ರರೇ?||

ದುರ್ಯೋಧನ ಈ ವೃತ್ತಾಂತವನ್ನು ಸತ್ಯಂತಪರೆಂಬ ದಿವ್ಯಜ್ಞಾನಿಗಳಿಂದ ತಿಳಿದು ‘ಪಾಟಿಸುವೆನ್, ಒಯ್ಯನೆ ಮುಳ್ಳೊಳೆ ಮುಳ್ಳನೆಂದು ತಾನ್ ಈ ನಯದಿಂದೆ ಪೆರ್ಚಿ ಪೊರೆದೞ್ಕೞೊಳಂದೊಡನುಂಡನಲ್ಲವೆ?’ ಎಂದು ವಿಷಬೀಜವನ್ನು ಬಿತ್ತಿದನು. ಕರ್ಣನಿಗೆಎಂತಹ ಧರ್ಮಸಂಕಟ! ಸ್ವಲ್ಪ ಮನಸ್ಸನ್ನಿಳಿಸಿದ್ದರೆ ಭಾರತದ ಗತಿ ಹೇಗೆ ತಿರುಗುತ್ತಿತ್ತು! ಕರ್ಣನೆಂದಿಗೂ ಜಗ್ಗುವವನಲ್ಲ. ಅವನಲ್ಲಿ ಸಂತೋಷವೂ ದುಖವೂ ಏಕಕಾಲದಲ್ಲಿ ತಲೆದೋರಿದುವು. ‘ಏಕೆ ಪೇೞರೊ’ ಸುಯೋಧನನ್, ಎನಗೊಳ್ಳಿಕೈದ ಕೃತಮಂ ಪೆಱಗಿಕ್ಕಿ ನೆಗೞ್ತೆಮಾಸೆ ನಣ್ಪಿನ ನೆಪದಿಂದೆ ಪಾಂಡವರನ್, ಅನ್ ಒಳಪೊಕ್ಕೊಡೆ ನೀಮೆ ಪೇಸಿರೇ?’ ‘ಭೂಪೋತ್ತಮನಂ ಬಿಸುಟ್ಟು ಇರದೆ ನಿಮ್ಮೊಳೆ’ ಪೊಕ್ಕೊಡೆ ಬೇಡನಲ್ಲನೇ’? ಎಂದು ಖಡಾಖಂಡಿತವಾಗಿ ತಿಳಿಸಿ ತನ್ನಲ್ಲಿಯೇ ‘ಕುರುಪತಿಗಿಲ್ಲ ದೈವಬಲಂ, ಸೋದರರನೆಂತು ಕೊಲ್ವೆಂ? ಅೞ್ಕಳೊನ್ನಂ ಪೊರೆದು ಎಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ? ಎನ್ನೊಡಲಂ ನಾಂ ತವಿಪೆಂ, ಈ ಇಬ್ಬಗೆಯಾದ ಸಮಸ್ಯೆಯೂ ಈ ಕಠಿಣ ನಿರ್ಧಾರವೂ ಭಾರತದಲ್ಲಿ ಮತ್ತಾರಿಗೂ ಇಲ್ಲ. ದುರ‍್ಯೋಧನನ ಪಕ್ಷೀಯರಲ್ಲನೇಕರು ಉಪ್ಪಿನ ಋಣಕ್ಕಾಗಿ ಶರೀರವನ್ನು ಒಡೆಯನಿಗೆ ಒತ್ತೆಯಿಟ್ಟು ಹೃದಯವನ್ನು ಪಾಂಡವರಿಗೆ ಧಾರೆಯೆರೆದಿದ್ದರು. ರಾಜನು ಆಕ್ಷೇಪ ಮಾಡಿದಾಗ ಭರದಿಂದ ಕಾದಿದರೂ ಅವರ ಸಹಾಯದಿಂದಲೇ ಪಾಂಡವರು ಜಯಶಾಲಿಗಳಾದರು; ಕರ್ಣನದು ಹಾಗಲ್ಲ. ಸ್ವಾಮಿಭಕ್ತಿಗೂ ಕರ್ತವ್ಯನಿಷ್ಠೆಗೂ ಸೋದರಪ್ರೇಮಕ್ಕೂ ಮಧ್ಯೆ ನಡೆದ ಹೋರಾಟ. ವಿಯೇ ಉದ್ದೇಶಪೂರ್ವಕವಾಗಿ ಆ ಸ್ಥಿತಿಯನ್ನು ತಂದೊಡ್ಡಿತೆಂದು ಕಾಣುತ್ತದೆ. ಕರ್ಣವಧಾನಂತರ ಪಾಂಡವರು ದುಖ ಪಡುವಾಗ ಹೇಳುವಂತೆ ಮೊದಲೇ ಅವರಿಗೆ ಅವನ ಸಂಬಂಧ ತಿಳಿಸಿದ್ದರೆ ಅವನನ್ನೇ ರಾಜನನ್ನಾಗಿ ಮಾಡಿ ತಾವು ಅವನ ಸೇವೆ ಮಾಡಲು ಸಿದ್ಧರಾಗಿದ್ದರು.’ ದುರ‍್ಯೋಧನನಾದರೋ ಅದಕ್ಕಿಂತಲೂ ಮಿಗಿಲಾಗಿ ಧರಾತಳಮಂ ಅವನಿಗಿತ್ತು ಅವನ ಕೊಟ್ಟಿದ್ದನ್ನು ಪ್ರಸಾದವೆಂದು ಸ್ವೀಕರಿಸಿ ಮನೋಮುದದಿಂದ ಇರಬೇಕೆಂದಿದ್ದ. ವಿಯು ಅದಕ್ಕೆ ಅವಕಾಶ ಕೊಡಲಿಲ್ಲ. ಇಲ್ಲದ ತೊಡಕುಗಳನ್ನು ತಂದೊಡ್ಡಿ ಅವನನ್ನೇ ಆಹುತಿಯನ್ನಾಗಿ ತೆಗೆದುಕೊಂಡಿತು.

ಕೃಷ್ಣನು ಅಲ್ಲಿಗೇ ಬಿಡಲಿಲ್ಲ. ಕುಂತಿಯನ್ನು ಕರ್ಣನಲ್ಲಿಗೆ ಕಳುಹಿಸಿದ, ಅವಳು ಬಂದು ‘ನಿನ್ನನುಜರ್ ನಿನ್ನಂ ಬೆಸಕೆಯ್ಯೆ ನೀನೆ ನೆಲನನಾಳ್ವುದು ಕಂದ’ ಎಂದು ಬೇಡಿದಳು. ತಂದೆಯಾದ ದಿನಪನು ಬಂದು ‘ಅಂದಿನಂತೆ ಇಂದೂ ಮೋಸ ಹೋಗಬೇಡ.’ ಎಂದು ಎಚ್ಚರಿಸಿದ. ಕರ್ಣನಾದರೋ ಮುಗುಳ್ನಗೆ ನಕ್ಕು

ಪಾೞಯನೊಕ್ಕು, ಆಳ್ದನ ಗೆಯ್ದ ಸತ್ಕ ತಮುಮಂ ಪಿಂತಿಕ್ಕಿ ಜೋಳಕ್ಕೆ ತ
ಪ್ಪಿಯುಂ, ಇನ್ ಬಾೞ್ವುದೆ? ಪೂಣ್ದು ನಿಲ್ಲದಿಕೆಯಂ ಬಾೞ್ವಂತು ವಿಖ್ಯಾತ ಕೀ
ರ್ತಿಯವೊಲ್, ಈಯೊಡಲ್, ಆಬ್ದೆ ಪೇೞಂ ಎನಗೇಂ ಕಲ್ಪಾಂತರಸ್ಥಾಯಿಯೇ
ಮೀಂಗುಲಿಗನಾಗಿಯುಂ, ಅಣಂ,
ಆಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ
ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನೆ ಬಿಸುಡಿಂ, ಇನ್ ಎನ್ನೆಡೆಯೊಳ್
ಪಿಡಿಯೆಂ ಪುರುಗಣೆಯಂ ನರನ್,
ಎಡೆಗೊಂಡೊಡಂ, ಉೞದ ನಿನ್ನ ಮಕ್ಕಳನ್, ಇ, ಏ
ರ್ದೊಡಂ ಅೞಯಂ ಪೆರ್ಜಸಮನೆ
ಪಿಡಿದು, ಎನ್ನನೆ ರಣದೊಳ್, ಅೞವೆಂ ಇರದಡಿಯೆತ್ತಿಂ

ಎಂತಹ ನಿರ್ಧಾರ! ಮುಂದೆ ಯುದ್ಧವೇ ಕೈಗಟ್ಟಿತು. ಕರ್ಣನ ಸ್ವಾಮಿನಿಷ್ಠೆ ಸ್ವಲ್ಪವೂ ಸಡಿಲವಾಗಲಿಲ್ಲ. ಕುರುಕುಲಪಿತಾಮಹರಾದ ಭೀಷ್ಮರಿಗೆ ಪ್ರಥಮ ಸೇನಾಪಟ್ಟಾಭಿಷೇಕ ವಾಯಿತು. ಕರ್ಣನಿಗೆ ಆ ವಿಷಯದಲ್ಲಿ ಬಹಳ ಅಸಮಾಧಾನ. ಅವರು ಈ ಕಾರ‍್ಯದಲ್ಲಿ ಮನಸ್ಸು ಮಾಡುವುದಿಲ್ಲವೆಂದು, ಸ್ವಾಮಿಗೆ ಜಯ ಲಭಿಸುವುದಿಲ್ಲವೆಂದು ಅವನ ಸಂದೇಹ.

ಆದಿಯೊಳವರುಂ ಪಿರಿದೊಂ
ದಾದರದಿಂ ನಡಸಿದ, ಅಜ್ಜರಪ್ಪರ್, ಅದಱಂದಂ
ಕಾದರ್, ಇವರವರೊಳ್, ಅವರುಂ
ಕಾದರ್ ನೆರೆದಿವರೊಳ್….||

ಸತ್ಯವನ್ನು ಮರೆಮಾಚುವುದರಿಂದೇನು ಪ್ರಯೋಜನ! ಸ್ವಾಮಿಹಿತಕ್ಕೆ ಭಂಗಬಂದರೆ ಕರ್ತವ್ಯಪರಾಙ್ಮುಖನಾದ ಹಾಗಾಗಲಿಲ್ಲವೇ? ಆದುದರಿಂದ ಧೈರ‍್ಯದಿಂದಲೇ ಕರ್ಣನು ‘ಗುರುಗಳಂ ಕುಲವೃದ್ಧರಂ ಆಜಿಗುಯ್ದು ಕೆಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ, ಪಗೆವರ ನಿಟ್ಟೆಲ್ವಂ ಮುಱವೊಡೆನಗೆ ಪಟ್ಟಂಗಟ್ಟಾ’ ಎಂದು ನಿಸ್ಸಂಕೋಚದಿಂದ ಹೇಳುತ್ತಾನೆ.ದ್ರೋಣಾಚಾರ‍್ಯರು ಕರ್ಣನ ಹೃದಯವನ್ನು ಅರಿಯಲಿಲ್ಲ. ಕುಲಜರೂ ಭುಜಬಲಯುತರೂ ಆದ ಭೀಷ್ಮರನ್ನು ಹೀಗೆ ತೆಗಳಿದನಲ್ಲಾ ಎಂದು ‘ಕುಲಜರಂ…. ಈ ಸಭಾಮಧ್ಯದೊಳಗ್ಗಲಿಸಿದ ಮದದಿಂ ನಾಲಗೆ ಕುಲಮಂ ತುಬ್ಬುವವೋಲ್ ಉಱದೆ ನೀಂ ಕೆಡೆನುಡಿದೈ’ ಎಂದು ಅವನ ಕುಲದ ವಿಷಯವಾಗಿ ಕೆಣಕಿದರು. ಕರ್ಣನಿಗೆ ರೇಗಿಹೋಯಿತು.

ಕುಲಮನೆ ಮುನ್ನಂ, ಉಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾ
ರ್ಮಲೆವರನ್, ಅಟ್ಟಿ ತಿಂಬುವೆ, ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ
ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ ಬಗೆವಾಗಳೀಗಳ್ ಈ
ಕಲಹದೊಳಣ್ಣ ನಿಮ್ಮ ಕುಲಂ, ಆಕುಲಮಂ, ನಿಮಗುಂಟುಮಾಡುಗುಂ||

ಗಂಗಾಸುತಂ ಪೃಥಾಸುತ
ರಂ ಗೆಲ್ದೊಡೆ ತಪಕೆ ಪೋಪೆನ್, ಅವರ್ಗಳ ಕೈಯೊಳ್
ಗಾಂಗೇಯನ್, ಅೞದೊಡೆ, ಆಂತರನ್,
ಆಂ ಗೆಲೆ ತಳ್ತಿಱವೆನ್, ಅನ್ನೆಗಂ ಬಿಲ್ವಿಡಿಯೆಂ.

ಎಂದು ಪ್ರತಿಜ್ಞೆ ಮಾಡುವನು. ಭೀಷ್ಮರೇನು ಸಾಮಾನ್ಯರೇ? ಮುದಿಸಿಂಹ, ಅನನ್ಯ ಸಾಮಾನ್ಯವಾದ ಅನುಭವ. ಸ್ವಲ್ಪವೂ ಉದ್ರೇಕಗೊಳ್ಳದೆ ನಿಧಾನದಿಂದ

ಕಲಿತನದುರ್ಕೆ, ಜವ್ವನದ ಸೊರ್ಕು, ನಿಜೇಶನ ನಚ್ಚು ಮಿಕ್ಕ ತೋ
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತು, ಏನ್, ಎನಗುಂಟೆ, ಭಾರತಂ
ಕಲಂಹಂ, ಇದಿರ್ಚುವನ್ ಹರಿಗಂ, ಅಪ್ಪೊಡೆ ಮೊಕ್ಕಳಮೇಕೆ, ನೀಂ ಪಳಂ
ಚಲೆದಪೆಯಣ್ಣ, ಸೂೞ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್||

ಎಂದು ಬಹು ವ್ಯಂಗ್ಯವಾಗಿ ನುಡಿದು ತಾವು ಅಘಟನ ಘಟನಾಸಾಮರ್ಥ್ಯದಿಂದ ಯುದ್ಧ ಮಾಡುವುದಾಗಿ ಪ್ರತಿಜ್ಞೆ ಮಾಡುವರು. ಈ ಸನ್ನಿವೇಶ ಕರ್ಣನ ಪಾತ್ರದ ಒಂದು ಮುಖಮಾತ್ರ. ಈಗ ಹೀಗೆ ವರ್ತಿಸಿದವನು ಬೇರೊಂದು ಸಮಯದಲ್ಲಿ ಹೇಗೆ ನಡೆದುಕೊಳ್ಳುತ್ತಾನೆ! ಭೀಷ್ಮರು ಶರಶಯ್ಯಾಗತರಾಗಲು ದುರ್ಯೋಧನಾದಿಗಳು ಮುಂದೆ ಕರ್ಣನಿಗೆ ಸೇನಾಪತ್ಯಾಭಿಷೇಕವನ್ನು ನಿರ್ಧರಿಸುತ್ತಾರೆ. ಆಗ ಕರ್ಣನು ‘ಸುರಸಿಂಧೂದ್ಭವನಿಂ ಬೞಕ್ಕೆ ಪೆಱರಾರ್ ಸೇನಾಪತ್ಯಕ್ಕೆ ತಕ್ಕರ್, ಲೋಕೈಕಧನುರ್ಧರಂ ಕಳಶಜಂ ತಕ್ಕಂ’ ನದೀನಂದನ ಅವರಿಗೆ ಪಟ್ಟವನ್ನು ಕಟ್ಟಿ; ನಾನು ಅವರಿಗೆ ಸಹಾಯಕನಾಗಿ ಯುದ್ಧ ಮಾಡುತ್ತೇನೆ ಎಂದು ಹೇಳಿ, ತನ್ನ ಪ್ರತಿಜ್ಞೆಯನ್ನು ಲಕ್ಷ್ಯ ಮಾಡದೆ ಯುದ್ಧ ಮಾಡಿ ತನಗೆ ಇದಿರಾದ ಧರ್ಮರಾಜ ಭೀಮಸೇನರನ್ನು ಸಾಯಿಸದೆ ಬಡಿದು ತಾಯಿಗೆ ತಾನು ಕೊಟ್ಟ ವಾಗ್ದಾನಕ್ಕನುಗುಣವಾಗಿ ಅವರನ್ನು ಕೊಲ್ಲದೆ ತನ್ನ ಪರಾಕ್ರಮವನ್ನು ಮೆರೆಯುತ್ತಾನೆ. ದೃಷ್ಟದ್ಯುಮ್ನನಿಂದ ದ್ರೋಣಾಚಾರ‍್ಯರು ಹತರಾಗುತ್ತಾರೆ. ಸೇನಾಪತ್ಯಕ್ಕೆ ಕರ್ಣನ ಸರದಿ ಬರುತ್ತದೆ. ಪಟ್ಟಾಭಿಷಿಕ್ತನಾದ ದಿನ ಪ್ರಾತಕಾಲ ನಿತ್ಯಕರ್ಮಾನುಷ್ಠಾನವನ್ನು ತೀರಿಸಿಕೊಂಡು ನಿತ್ಯದಾನಕ್ಕೆಂದು ತರಿಸಿದ ಹದಿನೆಂಟು ಕೋಟಿ ಹೊನ್ನುಗಳನ್ನು ದೀನಾನಾಥರಿಗೆ ಕೊಡುಗೈಯಿಂದ ದಾನಮಾಡಿ ಸುವರ್ಣರಥವನ್ನು ಹತ್ತಿ “ಓರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿೞದು ಮೂಱು ಸೂಳ್ ಬಲವಂದು ತದೀಯ ಪಾದಪದ್ಮಂಗಳಂ ತನ್ನ ತಲೆಯೆಸೂಳಿಟ್ಟುಕೊಂಡು”

ಆನ್ ಮಾತಱಯದೆ, ಮುಳಿದುಂ
ನಿಮ್ಮಡಿಯಂ ನುಡಿದನ್, ಉಱದೆ, ಏಳಿಸಲ್, ಏನ್
ಎಮ್ಮಳವೆ? ಮವುದು, ಆ ಮನ
ದುಮ್ಮಚ್ಚರಮನ್, ಅಜ್ಜ, ನಿಮ್ಮನ್, ಎರೆಯಲೆ ಬಂದೆಂ”
ಧುರದೊಳ್ ನಿಮ್ಮಡಿಯುಂ ಗೆಲ್ಲಲ್,
ಆರಿಯದರನ್, ಆ ಪಾಂಡುಸುತರನ್, ಎಮ್ಮಂದಿಗರ್, ಆ
ಚ್ಚರಿಯಲ್ತೆ ಗೆಲ್ವೆವೆಂಬುದು
ಹರಿಗನೊಳ್, ಉರದೆ, ಎಂತುಂ, ಎನ್ನ ಚಲಮನೆ ಮೆವೆಂ

ಎಂದು ಅವರ ಕ್ಷಮೆಯನ್ನು ಬೇಡುವನು. ಅದಕ್ಕೆ ಭೀಷ್ಮಾಚಾರ‍್ಯರು ‘ನುಡಿವುದಂ ಪತಿಭಕ್ತಿಯ ಪೆಂಪಿಂ ನೀಂ ನುಡಿದಯ್ ಪೆಱತಂದದಿಂ ನುಡಿದೆಯಲ್ತೆ, ಎಂದುದೇಂ ತಪ್ಪಾದುದೇ? ಎಮ್ಮೊವಜರ್ ಜಸಂಬಡೆದ ಭಾರ್ಗವರಪ್ಪುದಱಂದಂ ನಾಂ ನಂಟರುಮಂಗ ಮಹೀಪತಿ ಅಲ್ಲದೆಯುಂ ನೀಂ ನಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈಸೆ’

ನಿನ್ನನೆ ನಚ್ಚಿದಂ ಕುರುಮಹೀಪತಿ ನಿನ್ನ ಶರಾಳಿಗಳ್ಗೆ ಮು
ನ್ನಂ, ನಡುಗುತ್ತಮಿರ್ಪುದು ಅರಿಸಾಧನಸಂಪದಂ ಅಂತೆ ಶಸ್ತ್ರಸಂ
ಪನ್ನನೆ ಆಗಿ ಶಲ್ಯನನೆ ಸಾರಥಿಯಾಗಿರೆ ಮಾಡಿ ಕಾದು ನೀಂ

ಎಂದು ತಮ್ಮ ನಣ್ಪನ್ನುಪದೇಶಿಸಿ ಆರ್ಶೀರ್ವಾದಮಾಡಿ ಗೆಲ್ಲುವ ಉಪಾಯವನ್ನು ಸೂಚಿಸಿ ಕಳುಹಿಸುತ್ತಾರೆ. ಅದರಂತೆ ದುರ‍್ಯೋಧನನು ಶಲ್ಯನನ್ನು ಕರ್ಣನ ಸಾರಥಿಯಾಗಿರುವಂತೆ ಪ್ರಾರ್ಥಿಸುತ್ತಾನೆ. ಅದಕ್ಕೆ ಮದ್ರರಾಜನು ಕಿನಿಸಿ ಕಿಂಕಿಱ ವೋಗಿ ಹೀಗೆ ಹೇಳುತ್ತಾನೆ.

ಪಿಂದೆ ಕಡಂಗಿ ತೇರನೆಸಗೆಂಬುವನ್ ಅಂಬಿಗನ್, ಆಜಿರಂಗದೊಳ್
ಮುಂದೆ ಸಮಾನನಾಗಿ ಬೆಸದಿರ್ಪವನುಂ ತುಱುಕಾಱನಾಗೆ ಮ
ತ್ಸ್ಯಂದನ ಚೋದನಕ್ರಮಮದುಂ ಪೊಲೆಯಂಗಮರ್ದಿರ್ಕುಂ ಅಂತುಟಂ
ನೀ ದಯೆಗೆಯ್ದು ಪೇಳ್ದೆ, ಇದನಾರ್ ಪಡೆವರ್ ಫಣಿರಾಜಕೇತನಾ

ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜನಿಕೇತನನಿಂತೆಂದಂ ಮಾವ, ಸಾಮಾನ್ಯ ಮನುಜನಲ್ಲನಂಗಮಹೀಶಂ

ಕುಲಹೀನನೆ ಅಪ್ಪೊಡೆ ಕೇ
ವಲಬೋಧಂ ಪರಶುರಾಮನ್, ಏನ್, ಈಗುಮೆ ನಿ
ರ್ಮಲಿನಕುಲಂಗಲ್ಲದೆ ಪಿಡಿ
ಯಲಲ್ಲದಂತಪ್ಪ ದಿವ್ಯ ಬಾಣಾವಳಿಯಂ
ಮಣಿಕುಂಡಲಮುಂ ಕವಚಂ
ಮಣಿಯದ ಚಾರಿತ್ರಮುಗ್ರತೇಜಮುಮೀ, ಒ
ಳ್ಗುಣಮುಂ ಕಲಿತನಮುಂ, ಇವೇಂ
ಪ್ರಣತಾರೀ ಸೂತಸುತನೊಳೊಡವುಟ್ಟುಗುಮೇ
ಕಲಿತನದ ನೆಗೞ್ದ ಕಸವರ
ಗಲಿತನದ ಪೊದೞ್ದ ಪರಮಕೋಟಿಗೆ ಪೆಱರಾರ್
ಸಲೆ ಕರ್ಣನಲ್ಲದೆನಿಸುವ
ಕಲಿತನಮುಂ ಹರಿಗೆ ಕವಚಮಿತ್ತುದೆ ಪೇೞ್ಗುಂ

ಎಂದು ‘ಶಲ್ಯನ ಹೃಚ್ಛಲ್ಯಮಂ ಕೞಲೆ’ ನುಡಿಯಲು ಅವನ ಸಾರಥ್ಯದಲ್ಲಿ ತನ್ನ ಪರಾಕ್ರಮವನ್ನು ಅದ್ವಿತೀಯನಾಗಿ ಮೆರೆಯುತ್ತಾನೆ. ಕರ್ಣಾರ್ಜುನಕಾಳಗವು ಲೋಕತ್ರಯಕ್ಕೂ ಆಶ್ವರ್ಯವನ್ನುಂಟುಮಾಡಿತು. ಮೊದಲಿನ ಒಪ್ಪಂದದ ಪ್ರಕಾರ ತನ್ನ ಮಾತಿನಂತೆ ತಲೆಗೆ ಗುರಿಯಿಟ್ಟ ಬಾಣವನ್ನು ಇಳಿಸಿ ಎದೆಗೆ ಹೊಡೆಯದುದರಿಂದ ಶಲ್ಯನು ಕೋಪಗೊಂಡು ಸಾರಥ್ಯವನ್ನು ನಡೆಸದೆ ತೇರನ್ನಿಳಿದು ಹೊರಟುಹೋಗುವನು. ಕರ್ಣನು ತಾನೇ ತೇರನ್ನು ನಡೆಸಿಕೊಂಡು ಏಕಾಂಗಶೌರ‍್ಯದಿಂದ ಯುದ್ಧ ಮಾಡುವನು. ಧರಿತ್ರಿ ಅವನ ತೇರಿನ ಚಕ್ರವನ್ನು ನುಂಗುವಳು. ರಥದಿಂದಿಳಿದು ಗಾಲಿಯನ್ನೆತ್ತುವಷ್ಟರಲ್ಲಿಯೇ ಅವನನ್ನಿಸುವಂತೆ ಮುಕುಂದನು ಅರ್ಜುನನನ್ನು ಬೋಸಲು ಅರ್ಜುನನಿಗೆ ಎಂದೂ ಇಲ್ಲದ ಮರುಕತೋರಿ

ಬಱುವಂ, ಸಾರಥಿಯಿಲ್ಲ, ಮೆಯ್ಗೆ ಮಯುಂ ತಾನಿಲ್ಲ, ಎಂತೀಗಳ್, ಆನ್
ಇಱವೆಂ ನೋಡಿರೆ ಮತ್ತನೊಂದನ್, ಎಸಲುಂ ಕಯ್ಯೇೞದು, ಏಕೆಂದುಂ, ಆಂ
ಅಱಯೆಂ, ಕೂರ್ಮೆಯೆ ಮಿಕ್ಕು ಬಂದಪುದು, ಇದರ್ಕೇಗೆಯ್ವೆನ್, ಏನೆಂರ್ಬೆ ಆಂ
ಮದೆಂ ಮುನ್ನಿನದೊಂದು ಮೈರಮನ್, ಇದಿಂತೇ ಕಾರಣಂ ಮಾಧವಾ||

ಎಂದು ಅಂಗಲಾಚುವನು. ಕೃಷ್ಣನು ಅವನಿಗೆ ಮರ್ಮೋದಾಟನವಾಗುವ ಮಾತುಗಳನ್ನಾಡಿ ರೇಗಿಸುವನು. ಅರ್ಜುನನು ಉತ್ಸಾಹಗೊಂಡು ಕರ್ಣನನ್ನು ಕುರಿತು

ಎನ್ನ ಪೆಸರ್ಗೇಳ್ದು ಸೈರಿಸ
ದನ್ನಯ್, ಅದೆಂತೀಗಳೆನ್ನ ರೂಪಂ ಕಂಡುಂ
ನಿನ್ನರಸನಣುಗದಮ್ಮನ
ನಿನ್ನ ತನೂಭವನ ಸಾವುಗಂಡುಂ ಮಾಣ್ಬಾ?….||

‘ಸೆಟ್ಟಿಯ ಬಳ್ಳಂ ಕಿಱದೆಂಬುದೊಂದು ನುಡಿಯಂ ನೀಂ ನಿಕ್ಕುವಂ ಮಾಡಿದೈ! ಮಾನಿಸರೇನಿನ್ನೂಱು ವರ್ಷಮಂ ಬೞ್ದಪರೇ’ ಎಂದು ತನ್ನನುದಾಟಿಸಿ ನುಡಿದೊಡೆ ಉಮ್ಮಚ್ಚರದೊಳ್ ಕರ್ಣನು ಮುಗುಳ್ನಗೆಯೊಡನೆ ಹೀಗೆಂದನು.

ಕಸವರದ ಸವಿಯುಮಂ ಭಯ
ರಸಕದ ಸವಿಯುಮನದೆಂತುಂ ಆನಱಯದುದಂ
ವಸುಮತಿಯಱವುದು ನೀಂ ಪುರು
ಡಿಸಿ ನುಡಿದೊಡೆ ನಿನ್ನ ನುಡಿದ ಮಾತೇಱುಗುಮೇ?||

ಒಡಲುಂ ಪ್ರಾಣಮುಮೇಂಬಿವು
ಕಿಡಲಾದುವು; ಜಸಮದೊಂದೆ ಕಿಡದು, ಅದನಾಂ ಬ
ಲ್ವಿಡಿವಿಡಿದು ನೆಗೞ್ದೆನ್, ಉೞದೞ
ವಡೆಮಾತಂ ಮಾಡಿ ನೀನೆ ಕೆಮ್ಮನೆ ನುಡಿವೈ||

ಬಿದಿವಸದಿಂದೆ ಪುಟ್ಟುವುದು, ಪುಟ್ಟಿಸುವಂ ಬಿದಿ, ಪುಟ್ಟಿದಂದಿವಂ
ಗಿದು ಬಿಯಂ, ಒಳ್ಪಿವಂಗಿದು, ವಿನೋದಮಿವಂಗಿದು, ಸಾವ ಪಾಂಗಿವಂ
ಗಿದು, ಪಡೆಮಾತಿವಂಗಿದು ಪರಾಕ್ರಮವೆಂಬುದನ್, ಎಲ್ಲ ಮಾೞ್ಕೆಯಿಂ
ಬಿದಿ ಸಮಕಟ್ಟಿ ಕೊಟ್ಟೊಡೆ, ಎಡೆಯೊಳ್ ಕೆಡಿಸಲ್ ಕುಡಿಸಲ್ ಸಮರ್ಥರಾರ್||

ಎಂದೀ ಬಾಯ್ಮಾತಿನೊಳ್, ಏ
ವಂದಪುದು, ಅಣ್ಮು ಅಣ್ಮು ಕಾದುಕೊಳ್ಳೆನುತುಂ ಭೋ
ರೆಂದಿಸೆ ಪೊಸಮಸೆಯಂಬಿನ
ತಂದಲ ಬೆಳ್ಸರಿಗಳ್, ಇರದೆ ಕವಿದುವು ನರನಂ||

ಪರಬಲಮಥನನಿಗೆ ಆಕ್ರೋಶವು ತಡೆಯದಾಯಿತು. ತಕ್ಷಣವೇ ಭುವನ- ಭವನ ಸಂಹಾರಕಮಪ್ಪ ಅಂಜಲಿಕಾಸ್ತ್ರಮನ್ ಅಮೋಘಾಸ್ತ್ರ ಧನಂಜಯನ್ ಆಕರ್ಣಾಂತಂಬರಂ ತೆಗೆದು ಕರ್ಣನ ಕುಧರಸಂಯಂ ನಿಟ್ಟಿಸಿ ಇಸಲ್ ಬಿೞ್ದುದು ಭರದೆ ಸಿಡಿಲ್ದತ್ತ ಕರ್ಣೋತ್ತ ಮಾಂಗಂ’ ಆಗ

ಕುಡುಮಿಂಚಿನ ಸಿಡಿಲುರುಳಿಯೊಳ್,
ಒಡಂಬಡಂ ಪಡೆಯೆ ಕರ್ಣನೊಡಲಿಂದಾಗಳ್
ನಡೆ ನೋಡೆನೋಡೆ ದಿನಪನೊಳ್
ಒಡಗೂಡಿದುದೊಂದು ಮೂರ್ತಿ ತೇಜೋರೂಪಂ||

ಇಂತಹ ಕರ್ಣನ ಅದ್ಭುತ ಜೀವನ ಪಂಪನ ಹೃದಯವನ್ನು ಸೂರೆಗೊಂಡಿತು. ಅರಾತಿಕಾಲಾನಲನ ಸಮಕ್ಷಮದಲ್ಲಿಯೇ ಮನಮುಟ್ಟುವಂತೆ ನಿರ್ಭಯವಾಗಿ ಆತನ ಚಮರಶ್ಲೋಕವನ್ನು ಹಾಡಿ ಆತನಲ್ಲಿರುವ ಪಕ್ಷಪಾತವನ್ನು ಕವಿತಾಗುಣಾರ್ಣವನು ಪ್ರದರ್ಶಿಸಿದನು.

ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನ್, ಒಂದೆಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ, ಕರ್ಣನೊಳ್, ಆರ್ ದೊರೆ, ಕರ್ಣನೇಱು, ಕ
ರ್ಣನ ಕಡು ನನ್ನಿ, ಕರ್ಣನಳವು, ಅಂಕದ ಕರ್ಣನ ಚಾಗಮೆಂದು ಕ
ರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ||

ಪಂಪನ ದುರ್ಯೋಧನನು ವೀರಾಗ್ರೇಸರ, ಆತ್ಮಾಭಿಮಾನಿ, ಅವನಲ್ಲಿ ಸತ್ಪುರುಷನಲ್ಲಿರಬೇಕಾದ ಅನೇಕಗುಣಗಳಿವೆ. ಆದರೆ ಅವನಲ್ಲಿರುವ ಛಲವೂ ಪಾಂಡವರಲ್ಲಿ ಅರನಿಗಿದ್ದ ದ್ವೇಷ ಮಾತ್ಸರ್ಯಗಳೂ ಅವನ ನಾಶಕ್ಕೆ ಕಾರಣವಾಗುವುವು. ಆದುದರಿಂದಲೇ ಅವನಲ್ಲಿ ವಾಚಕರಿಗೆ ಸಹಾನುಭೂತಿಯುಂಟಾಗುತ್ತದೆ. ಅವನ ಅನ್ಯಾದೃಶವಾದ ಮಿತ್ರಪ್ರೇಮ, ಗುರುಜನವಿಧೇಯತೆ, ಸೋದರಪ್ರೇಮ ಮೊದಲಾದ ಆಭಿಜಾತ್ಯಗುಣಗಳು ಚಿತ್ತಾಕರ್ಷಕವಾಗಿವೆ. ಇವನ್ನು ಪಂಪನು ಅವನ ಪಾತ್ರಚಿತ್ರಣದಲ್ಲಿ ಬಹುಸ್ಪಷ್ಟವಾಗಿ ಚಿತ್ರಿಸಿದ್ದಾನೆ. ಪ್ರಾರಂಭದಲ್ಲಿ ಭಾರತಯುದ್ಧದವರೆಗೆ ಪಂಪನ ದರ್ಯೋಧನನೂ ಹೆಚ್ಚು ಕಡಿಮೆವ್ಯಾಸರ ದುರ್ಯೋಧನನಂತೆಯೇ ಇರುವನು. ಪಂಪನು ದುರ್ಯೋಧನನ ದುರ್ಗುಣಗಳನ್ನು ಎತ್ತಿತೋರಿಸದಿದ್ದರೂ ಮೂಲಭಾರತದಂತೆಯೇ ಇಲ್ಲಿಯೂ ದುರ್ಯೋಧನನಲ್ಲಿ ಒಂದು ವಿಧವಾದ ದ್ವೇಷ, ಮಾತ್ಸರ್ಯ, ಕುಯುಕ್ತಿ, ಅಧರ್ಮ ಪ್ರವರ್ತನೆ ಮೊದಲಾದುವು ಕಂಡು ಬರುವುವು. ಪಂಪನು ಅವನ ಪ್ರಧಾನವಾದ ಗುಣ ಛಲವೆಂದು ಹೇಳಿದ್ದಾನೆ. ಛಲಕ್ಕೆ ಮೂಲಕಾರಣ ಮಾತ್ಸರ್ಯ. ಅವನ ಹುಟ್ಟು ಮಾತ್ಸರ್ಯದಿಂದಲೇ ಪ್ರಾರಂಭವಾಗುವುದು. ಕುಂತಿಗೆ ತನಗಿಂತ ಮೊದಲೇ ಸಂತಾನ ಪ್ರಾಪ್ತಿಯಾಯಿತೆಂಬ ಮಾತ್ಸರ್ಯದಿಂದಲೇ ಕೌರವರ ಅಕಾಲ ಜನನವಾಗುವುದು. ವಿದ್ಯಾಭ್ಯಾಸ ಮತ್ತು ಕ್ರೀಡಾವಿನೋದಗಳಲ್ಲಿ ಪಾಂಡವರ ಕೈ ಮೇಲಾದುದು ಅವರ ಮಾತ್ಸರ್ಯವನ್ನು ಹೆಚ್ಚಿಸುವುದು. ತಂದೆಗೆ ರಾಜ್ಯ ಪ್ರಾಪ್ತವಾಗದಿದ್ದುದೂ ಪಾಂಡವರು ಹೋದೆಡೆಗಳಲ್ಲೆಲ್ಲಾ ಅಭಿವೃದ್ಧಿಯಾಗುತ್ತಿದ್ದುದೂ ಮಾತ್ಸರ್ಯದ ಪರಮಾವಯಾಗಿ ಪರಿಣಮಿಸಿ ಪಾಂಡವರಲ್ಲಿ ವೈರವೂ ಅವರ ನಿರ್ಮೂಲನಕಾರ್ಯದಲ್ಲಿ ನಾನಾ ರೀತಿಯ ಪ್ರಯತ್ನಗಳೂ ಪ್ರಾರಂಭವಾಗುವುವು. ಮೊದಲು ಅವರಿಗೆ ಬೇರೆಯೆಡೆಯಲ್ಲಿರಲು ಏರ್ಪಾಟು. ಆಮೇಲೆ ಅರಗಿನ ಮನೆಯಲ್ಲಿ ಕೊನೆಗಾಣಿಸುವ ಸಂಚು. ಸಂಚು ಫಲಿಸದಿರುವಾಗ ವೈರವಾಗಿ ಪರಿಣಮಿಸಿ ಉದ್ದಿಷ್ಟ ಕಾರ್ಯಸಿದ್ಧಿಯಾಗದಿದ್ದಾಗ ಛಲದ ರೂಪವನ್ನು ತಾಳುತ್ತದೆ. ದ್ಯೂತಪ್ರಸಂಗ ದ್ರೌಪದೀಕೇಶಾಪಕರ್ಷಣ ಪಾಂಡವರ ವನವಾಸ ಅಜ್ಞಾತವಾಸಗಳಲ್ಲಿ ಛಲವೂ ಮತ್ತಷ್ಟು ರೂಢಮೂಲವಾಗಿ, ಪಾಂಡವರನ್ನು ಆದಷ್ಟು ಹಿಂಸಿಸುವುದೂ ಅವರ ಕಷ್ಟವನ್ನು ನೋಡಿ ತಾನು ಸುಖಿಸುವುದೂ ದುರ್ಯೋಧನನ ಪರಮಧ್ಯೇಯವಾಗುತ್ತದೆ. ಭೀಷ್ಮದ್ರೋಣಾದಿ ಹಿರಿಯರು ತನ್ನನ್ನೇ ಭರ್ತ್ಸನೆ ಮಾಡುವುದು ಛಲದ ಸಾಧನೆಗೆ ಮತ್ತಷ್ಟು ಪ್ರಚೋದಕವಾಗುವುದು. ಅಂಗಾರವರ್ಮ ಮತ್ತು ಅಂಗದಪರ್ಣರ ಪ್ರಸಂಗವು ಆತ್ಮಾಭಿಮಾನವನ್ನು ತಲೆಯೆತ್ತುವಂತೆ ಮಾಡುತ್ತದೆ. ಕೃಷ್ಣ ದೌತ್ಯವು ನಿಷ್ಪಲವಾಗಲು ಯುದ್ಧವು ಅನಿವಾರ್ಯವಾಗುವುದು. ಭೀಷ್ಮದ್ರೋಣಾದಿನಾಯಕರ ಅವಲಂಬನದಿಂದ ಜಯವನ್ನು ಗಳಿಸಲು ದುರ್ಯೋಧನನು ಪ್ರಯತ್ನಿಸುವನು. ಅಲ್ಪಕಾಲದಲ್ಲಿಯೆ ಅವರೆಲ್ಲ ಪಾಂಡವಪಕ್ಷಪಾತಿಗಳು. ಅಥವಾ ಮರೆಯ ಪಾಂಡವರು ಎಂಬ ಶಂಕೆಹುಟ್ಟುವುದು. ಯುದ್ಧದಲ್ಲಿ ಪುತ್ರಮಿತ್ರ ಬಾಂಧವರೆಲ್ಲ ಅಳಿಯುವರು. ಬಾಲ್ಯದಿಂದ ಒಡಲೆರಡು ಅಸುವೊಂದೆಂಬಂತಿದ್ದ ಕರ್ಣನೂ ದೈವಾನವಾಗುವನು. ಏಕಾದಶಾಕ್ಷೋಹಿಣಿಯಲ್ಲಿ ತಾನೊರ್ವನೆ ಉಳಿಯುವನು. ಅವನೊಡನೆ ಅವನ ಅಭಿಮಾನವೊಂದೆ ಉಳಿಯುವುದು. ಇಲ್ಲಿಂದ ಮುಂದೆ ಸಂಪನ ದುಯೋಧನನ ಪಾತ್ರವು ವ್ಯತ್ಯಸ್ತವಾಗುವುದು. ಆ ಪಾತ್ರದ ನಿಜವಾದ ವ್ಯಕ್ತಿತ್ವವು ಪ್ರಕಾಶಕ್ಕೆ ಬರುವುದು. ಕರ್ಣವಧಾನಂತರ ಪಂಪನ ದುರ್ಯೋಧನನು ಸಂಜಯ ದ್ವಿತೀಯನಾಗಿ ರಣರಂಗದಲ್ಲಿ ಹೊರಡುವನು. ಸೂರ್ಯಪುತ್ರನ ಮರಣವಾರ್ತೆಯನ್ನು ಕೇಳಿ ಮೂರ್ಛಿತನಾಗಿ ಎಚ್ಚೆತ್ತು ಅವನಿಗಾಗಿ ದುಖಪಡುವನು. ಇವನ ಸ್ನೇಹದ ಉತ್ಕಟಾವಸ್ಥೆಯೆಷ್ಟು!

ನೀನು ಮಗಲ್ದೆ, ಇನ್ನೆನಗೆ ಪೇೞನ್ ಪೆಱರಾರ್, ಎನಗಾಸೆ, ನಿನ್ನಂ
ನಾನುಂ ಅಗಲ್ದೆನೇ ಕೆಳೆಯ, ಬೆನ್ನನೆ ಬಂದಪೆನ್, ಆಂತರಂ ಯಮ
ಸ್ಥಾನಮನೆಯ್ದಿಸುತ್ತ, ಇದುವೆ ದಂದುಗಂ, ಎಂತೆರ್ದೆಮುಟ್ಟಿ ಕೂರ್ತು
ಪೇೞ್ ಮಾನಸವಾೞನ್, ಅಂಗವಿಷಯಾಪ ನೀಂ ಪೊಱಗಾಗೆ ಬಾೞ್ವೆನೇ?||

ಒಡಲೆರಡು, ಒಂದೆ ಜೀವಂ, ಇವರ್ಗೆ, ಎಂಬುದನ್, ಎಂಬುದು ಲೋಕಂ, ಈಗಳಾ
ನುಡಿ ಪುಸಿಯಾಯ್ತು, ನಿನ್ನಸು ಕಿರೀಟಿಯ ಶಾತಶರಂಗಳಿಂದೆ ಪೋ
ಪೊಡಂ, ಎನಗಿನ್ನುಂ ಈ, ಒಡಲೊಳಿರ್ದುದು ನಾಣಿಲಿಜೀವಂ, ಎಂದೊಡೆ, ಆ
ವೆಡೆಯೊಳ್ ನಿನ್ನೊಳ್ ಎನ್ನ ಕಡುಗೂರ್ಮೆಯುಂ, ಅೞ್ಕಱುಂ ಅಂಗವಲ್ಲಭಾ
ಅಱಯಂ ಸೋದರನೆಂದು ಧರ್ಮತನಯಂ ನಿರ್ವ್ಯಾಜದಿಂ ನಿನ್ನನ್, ಆನ್
ಅಱವೆಂ, ಮುನ್ನಱದಿರ್ದುಂ, ಎನ್ನರಸನ್, ಆನ್, ಏಕಿತ್ತೆನಿಲ್ಲ, ಏಕೆ, ಪೇೞ್ದು
ಅಱಪಲ್ಕೆ ಒಲ್ದೆನುಮಿಲ್ಲ ಕಾರ್ಯವಶದಿಂ ಕೂರ್ಪಂತೆವೋಲ್ ನಿನ್ನನ್ ಆಂ
ನೆ ಕೊಂದೆಂ, ಮುಳಿಸಿಂದಂ, ಅಂಗನೃಪತೀ ಕೌಂತೇಯರೇಂ ಕೊಂದರೇ||

ಎಂದು ಕರ್ಣನ ಮರಣಕ್ಕಾಗಿ ಬಾಯೞದು ಪಳಯಿಸುವನು.

ಅಷ್ಟರಲ್ಲಿ ದುಖತಪ್ತನಾದ ಮಗನನ್ನು ನೋಡಲು ಅವನ ಮಾತಾಪಿತೃಗಳಾದ ದೃತರಾಷ್ಟ್ರಗಾಂಧಾರಿಯರು ಬರುವುದನ್ನು ಕೇಳಿ ಅವರ ಮುಖವನ್ನು ನೋಡುವುದಕ್ಕೆ ನಾಚಿ ‘ಸಂಯನ್ ಒಲ್ವುದೆ ಕಜ್ಜಂ ಎಂಬವರ್ಗಳ ಮಾತುಗೇಳ್ವನಿತನ್, ಇನ್ನೆನಗೆ ಬಿದಿ ಮಾಡಿತಾಗದೇ’ ಎಂದು ಹಲುಬುತ್ತಿರುವಷ್ಟರಲ್ಲಿಯೇ ಅಲ್ಲಿಗೆ ತಾಯಿತಂದೆಗಳು ಬರುವರು, ದುರ್ಯೋಧನನು ಬಹು ವಿನಯಪೂರ್ವಕ ನಮಸ್ಕಾರಮಾಡುವನು. ಅವರು ಇವನನ್ನು ಹರಸಿ ‘ನೀನಿದ್ದರೆ ಉಳಿದವರೆಲ್ಲ ಇದ್ದಹಾಗೆಯೆ, ದಯವಿಟ್ಟು ನೀನು ಪಾಂಡವರಲ್ಲಿ ಸಂಮಾಡಿಕೊಂಡು ಸುಖವಾಗಿ ಬಾಳು’ ಎನ್ನುವರು. ದುರ್ಯೋಧನನಿಗೆ ಅದು ಸರ್ಮಥಾ ಇಷ್ಟವಿಲ್ಲ.

ತಲೆದೋಱಲ್ಕೆ, ಅಣಂ, ಅಳ್ಕಿ ವೈರಿನೆಲನಂ- ಪೋಪೊಕ್ಕೆನ್, ಎಂಬನ್ನೆಗಂ
ಚಲದಿಂದೆಯ್ದುವ ಕರ್ಣನುಗ್ರಂಥಮಂ ಮುಂ ನುಂಗಿದೀ ದ್ರೋಹಿಯೊಳ್
ನೆಲದೊಳ್ ಪಂಬಲೆ? ಮತ್ತಂ, ಎನ್ನ ಮುಳಿಸಿಂಗೆ, ಆಂ ಕಾದುವೆಂ, ಪೇಸಿದೆಂ
ನೆಲಗಂಡಂತೆ ನೆಲಕ್ಕೆ, ಗೆಲ್ದೊಡಂ, ಅದಂ ಚಿ ಮತ್ತಂ, ಆನಾಳ್ವೆನೇ?||

ತಪ್ಪದು ಕರ್ಣನ ಬೞಕೆ ಸಂಯ ಮಾತೆನಗೆ, ಆತನಿಲ್ಲದೆ, ಎಂ
ತಪ್ಪುದೊ ರಾಜ್ಯಂ, ಈ ಗದೆಯಂ, ಈ ಭುಜಾದಂಡಮುಳ್ಳಿನಂ ಕೊನ
ರ್ತಪ್ಪುದೊ ಪೇೞಂ, ಎನ್ನ ಪಗೆ, ನೋವಱದಂಜುವುದೇಕೆ? ನಿಂದರೇಂ
ತಪ್ಪುದೊ ಪೇೞಂ, ಅಯ್ಯ ನೊಸಲೊಳ್ ಬರೆದಕ್ಕರಂ, ಆ ವಿಧಾತ್ರನಾ||

ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ಸೂಚಿಸಿ ಅವರನ್ನು ಗೌರವದಿಂದ ಬೀಳ್ಕೊಟ್ಟು ತಾನು ಮಹಾಸತ್ವನಾದುದರಿಂದ ಶಾಂತಿಯುತನಾಗಿ ಶಲ್ಯನಿಗೆ ಸೇನಾಪತ್ಯಾಭಿಷೇಕವನ್ನು ಮಾಡಿ ಕಳುಹಿಸುವನು, ಶಲ್ಯನೂ ಯುದ್ಧದಲ್ಲಿ ಮಡಿಯುವನು. ಇಲ್ಲಿ ವ್ಯಾಸಭಾರತದ ದುರ್ಯೋಧನನು ಪಲಾಯನದಲ್ಲಿ ಮನಸ್ಸುಮಾಡಿ ಮಡುವನ್ನು ಕುರಿತು ಓಡುವನು. ಆದರೆ ಪಂಪನ ದುರ್ಯೋಧನನಾದರೋ ಮದ್ರನಾಥನು ಭಸ್ಮೀಭೂತನಾದುದನ್ನು ಕೇಳಿ

ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರರಾ
ಜಾದಿ ಮಹೀಭುಜರ್ ಧುರದೊಳ್, ಎನ್ನಯ ದೂಸಱನ್ ಆೞ ಮೞದಂ
ತಾದರ್, ಒಂದೆ ಮೆಯ್ಯುೞದುದು, ಎನಗಾವುದು ಮೆಳ್ಪಡು, ಎಯ್ದೆ ಮುಂ
ದಾದ ವಿರೋಸಾಧನಮನ್, ಎನ್ನ ಗದಾಶನಿಯಿಂದೆ, ಉರುಳ್ಪುವೆಂ||

ಎಂದು ‘ನಿಜಭುಜವಿಕ್ರಮೈಕಸಹಾಯಕನಾಗಿ ಗದೆಯಂ ಕೊಂಡು ಸಂಗ್ರಾಮಕ್ಕೆ ಏಕಾಕಿಯೆಂದೇಳಿಸಿದ ಸಂಜಯನಂ ನೋಡಿ ಮುನಿದು’ ನೆಣದ ಪಳ್ಳಗಳನ್ನು ಪಾಯ್ದು ನೆತ್ತರ ತೊಗಳನ್ನು ದಾಟಿ ಯುದ್ಧರಂಗದಲ್ಲಿ ಹೋಗುತ್ತಿರಲಾಗಿ ಮರುಳುಗಳು ತನ್ನನ್ನು ಮರುಳೆಂದು ಕರೆಯಲು ಅದಕ್ಕೆ ಮುಗುಳ್ನಗೆ ನಕ್ಕು ‘ಎನ್ನಂ ವಿಧಾತ್ರಂ’ ಮರುಳ್ಮಾಡಿದ ಕಾರಣದಿಂದಂ ಈ ಮರುಳ ಕಣ್ಣಿಗೆ ಆಂ ಮರುಳಾಗಿ ತೋಱದೆನೆಂದು ನೊಂದುಕೊಂಡು ಮುಂದೆ ‘ಧೃಷ್ಟದ್ಯುಮ್ನಕಚಗ್ರಹವಿಲುಳಿತಮೌಳಿಯುಂ ತದೀಯಕೌಕ್ಷೇಯಕಥಾ ವಿದಾರಿತಶರೀರನುಮಾಗಿ ಬಿೞರ್ದ ಶರಾಚಾರ್ಯರಂ’ ಕಾಣುವನು. ತತ್‌ಕ್ಷಣವೇ ಅವನ ಗುರುಭಕ್ತಿಯ ಎಲ್ಲೆಯು ಮಿತಿ ಮೀಱುವುದು.

ನೆಗೞ್ದುದು ಬಿಲ್ಲ ಬಿನ್ನಣಂ, ಇಳಾವಳಯಕ್ಕೆ ಸಮಸ್ತ ಧಾತ್ರಿ ಕೆ
ಯ್ಮುಗಿವುದು ನಿಮ್ಮದೊಂದು ಪೆಸರ್ಗೇಳ್ದೊಡೆ, ನಿಮ್ಮ ಸರಲ್ಗೆ ದೇವರುಂ
ಸುಗಿವರ್, ಅಯೋನಿಸಂಭವರಿರ್, ಎನ್ನಯ ದೂಸಱನ್, ಎನ್ನ ಕರ್ಮದಿಂ
ಪಗೆವರಿನ್, ಅಕ್ಕಟಾ ನಿಮಗಂ, ಈ ಇರವಾದುದೆ ಕುಂಭಸಂಭವಾ||

ಎಂದು ಅವರ ಪರಾಕ್ರಮವನ್ನು ಕೊಂಡಾಡಿ ತನ್ನ ನೈಜವಾದ ಗುರುಭಕ್ತಿಯನ್ನು ಪ್ರದರ್ಶಿಸಿ ಅವರಿಗೆ ನಮಸ್ಕರಿಸುವನು, ಮುಂದೆ ‘ವೃಕೋದರನಿಂ ನಿಶ್ಯೇಷಪೀತರುರನಪ್ಪ’ ದುಶ್ಯಾಸನನನ್ನು ಕಂಡು ‘ಸೋದರನ, ಅೞಲೊಳ್ ಕಣ್ಣ ನೀರ್ಗಳಂ ಸುರಿದು’

ನಿನ್ನಂ ಕೊಂದನ ಬಸಿಱಂ
ನಿನ್ನಂ ತೆಗೆಯದೆಯುಂ, ಅವನ ಕರುಳಂ ಪರ್ದಿಂ
ಮುಂ, ನುಂಗಿಸಿ ನೋಡದೆಯುಂ
ಮುನ್ನಮೆ ಯುವರಾಜ ನಿನ್ನನ್, ಆಂ ನೋಡಿದೇನೇ?||

ಎಂದು ಮರುಗುವನು. ಮುಂದೆ ವೃಷಸೇನನ ದೇಹವನ್ನು ಕಂಡು ಕರ್ಣನನ್ನೇ ನೆನೆದು ಅವನ ಶರೀರವನ್ನು ಹುಡುಕಿ ಆ ಕಳೇಬರವನ್ನು ನೋಡಿ ಸೈರಿಸಲಾರದೆ ಮೂರ್ಛೆ ಹೋಗಿ ಪುನ ಎಚ್ಚೆತ್ತು ಎದೆದೆರದು ದುಖಿಸಿ ಮುನ್ನಡೆದು ಶರಶಯ್ಯಾಗತರಾಗಿದ್ದ ಭೀಷ್ಮರನ್ನು ಕಾಣಲು ಅವರು ದುರ್ಯೋಧನನು ಬಂದ ಬರವಿನಿಂದಲೇ ಸಮರ ವೃತ್ತಾಂತವನ್ನು ತಿಳಿದು ‘ನಿನಗಮೀಯಿರವಾದುದೇ’ ಎಂದು ದುಖಿಸಿ ನಿನ್ನಗೆಯ್ವ ನಿಯೋಗ ಮಾವುದು ಗೆಯ್ಯಲ್ ಬಗೆದಪೆ ಎನೆ, ಅರಿನೃಪರನ್ನು ತರಿದೊಟ್ಟುವುದಲ್ಲದೆ ಮತ್ತೇನು? ಭವತ್ಪದಸರೋಜಮನಾಂ ಬಲಗೊಂಡು ಮತ್ತಮಾಜಿಗೆ ನಡೆಯಲ್ಕೆ ಬಂದೆಂ’ ಎಂದು ಹೇಳಿದ ದುರ್ಯೋಧನನಳವಿಂಗೆ ಮನಗೊಂಡು ‘ಮಗನೇ ನಿನಗಪ್ಪೊಡೆ ದೈವ ಪ್ರತಿಕೂಲಂ, ಮೈತ್ರೇಯರ್ ಕೊಟ್ಟ ಊರುಭಂಗಶಾಪಮನಿವಾರಿತಂ, ಎನ್ನ ಪ್ರಾಣಮುಳ್ಳಂತೆ ಸಂಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮಂ ಅಱದು ಬೞಯಂ ನಿನ್ನ ನೆಗೞ್ವುದಂ ನೆಗೞ್ವುದು’ ಎಂದು ನುಡಿದ ಪಿತಾಮಹನ ನುಡಿಗಳಿಗೆ ಕುರುರಾಜನ ಉತ್ತರವಿದು

ಶರಶಯ್ಯಾಗ್ರದೊಳಿಂತು ನೀಮಿರೆ, ಘಟಪ್ರೋದ್ಭೂತನಂತಾಗೆ ವಾ
ಸರನಾಥಾತ್ಮಜನ್, ಅಂತು ಸಾಯೆ ರಣದೊಳ್, ದುಶ್ಶಾಸನಂ ತದ್ವ ಕೋ
ದರನಿಂದೆ, ಅಂತೞ ದೞ್ಗೆ ಸೈರಿಸಿಯುಂ ಸಂಧಾನಮಂ ವೈರಿಭೂ
ಪರೊಳಿಂ ಸಂಸಿ ಪೇೞಂ, ಆರ್ಗೆ ಮೆವೆಂ ಸಂಪತ್ತುಮಂ ಶ್ರೀಯುಮಂ||

ಈ ಮಾತನ್ನು ಕೇಳಿ ಭೀಷ್ಮರು ವಿಸ್ಮಿತರಾಗಿ ಅದೊಂದು ದಿವಸ ವೈಶಂಪಾಯನ ಸರೋವರದಲ್ಲಿ ಮುಳುಗಿ ಕಾಲಯಾಪನೆ ಮಾಡುತ್ತಿದ್ದು ಮುಂದೆ ಅವನ ಸಹಾಯಕ್ಕೆ ಕಾದಿ ಗೆಲ್ಲತಕ್ಕದ್ದು ಎಂದು ಹಿತೋಪದೇಶ ಮಾಡಿ ಜಳಮಂತ್ರೋಪದೇಶಮಾಡಲು ಅವರ ಮಾತನ್ನು ಮೀರಲಾರದೆ ಬಹಳ ಕಷ್ಟದಿಂದ ಸರೋವರದಲ್ಲಿ ಹೋಗಿ ಮುಳುಗಿಕೊಳ್ಳುವನು. ವ್ಯಾಸಭಾರತದ ದುರ್ಯೋಧನನಿಗೂ ಪಂಪನ ದುರ್ಯೋಧನನಿಗೂ ಎಷ್ಟು ಅಂತರ

ಇಷ್ಟರಲ್ಲಿ ಭೀಮನು ದುರ್ಯೋಧನನ್ನು ಅರಸುತ್ತಾ ಬರುವನು. ಕಿರಾತರು ಕೊಳದ ತಡಿಯಲ್ಲಿ ದುರ್ಯೋಧನನ ಹೆಜ್ಜೆಯ ಗುರುತನ್ನು ತೋರಿಸಲು ಪಾಂಡವರು ಅಲ್ಲಿಗೆ ಹೋಗಿ ದುಯೋಧನನನ್ನು ಕೊಳದಿಂದ ಹೊರಗೆ ಹೊರಡಿಸಲು ಮರ್ಮೋದ್ಘಾಟಕವಾಗಿ ಮಾತನಾಡುವರು. ಎನ್ನ ಸರಂಗೇಳ್ದಲ್ಲದೆ ಈ ಬೂತು ಪೊಱಮಡುವನಲ್ಲಂ, ಈತಂಗಾನೆ ಬಲ್ಲೆನ್, ಉಸಿರದಿರಿಂ’ ಎಂದು ಸಕಳ ದಿಗ್ವಳಯ ಭರಿತ ಮಹಾಸಿಂಹನಾದದಿಂದ ಗರ್ಜಿಸಿದ ಭೀಮಸೇನನ ಆರ್ಭಟವನ್ನು ಕೇಳಿ ಸೈರಿಸಲಾರದೆ ‘ಕಿಡುಗುಂ ಮಚ್ಛೌರ್ಯಂ’ ಎಂದು ಉದ್ಧತಂ ರೌದ್ರಗದಾದಂಡಮಂ ಪ್ರಚಂಡಮಂ ಆಗಿ ಸೆಱಗಿಲ್ಲದ ಕಲಿತನದಿಂ ಕೊಳದಿಂ ಪೊಱಮಟ್ಟು’ ಬರುವನು. ಅವನನ್ನು ನೋಡಿ ಧರ್ಮನಂದನನು ಈಗಲೂ ಭೂಮಿಯನ್ನು ವಿಭಾಗಿಸಿಕೊಂಡು ಸ್ನೇಹದಿಂದಿರೋಣವೆನ್ನುವನು. ಛಲದಂಕಮಲ್ಲನೂ ಆಚಲಿತಮನಸ್ಕನೂ ಆದ ದುರ್ಯೋಧನನಿಗೆ ಇದು ಒಪ್ಪಿಗೆಯಾಗುವುದಿಲ್ಲ. ಒಡನೆಯೇ ರಾಜರಾಜನು ದುಶ್ಯಾಸನನನ್ನು ಕೊಂದ ಭೀಮನು ಇನ್ನೂ ಜೀವದಿಂದಿರುವಾಗ ಸಂಯೇ? ಯುದ್ಧವನ್ನೆ ಕೈಗೆತ್ತಿಕೊಂಡಿದ್ದೇನೆ’ ಎಂದು ಹೇಳುವನು. ಅಷ್ಟರಲ್ಲಿ ತೀರ್ಥಯಾತ್ರೆಯೆನ್ನು ಮುಗಿಸಿಕೊಂಡು ಅಲ್ಲಿಗೆ ಬಂದ ಬಲದೇವನು ತನಗೆ ನಮಸ್ಕಾರ ಮಾಡಿದ ಕೌರವಚಕ್ರವರ್ತಿಗೆ ಆಶೀರ್ವದಿಸಿ ಅವನನ್ನು ಆ ಸ್ಥಿತಿಗೆ ತಂದ ಮುರಾಂತಕನನ್ನೂ ಪಾಂಡವರನ್ನೂ ನೋಡಿ ಕೋಪಿಸಿಕೊಂಡು ಮಾನಮೇರುವಾದ ದುರ್ಯೋಧನನನ್ನು ಕುರಿತು ‘ನೀಂ ಮರುಳ್ತನಮನೇಕೆ ಮಾಡಿದೆ? ಎಂದು ಕೇಳಲು ಅವನು ಹೀಗೆಂದು ಉತ್ತರ ಕೊಡುವನು-

ಹರಿಯೆಂದಂದಂ, ಅದಂತೆ, ಪಾಂಡುತನಯರ್ ನಿರ್ದೋಷಿಗಳ್, ತಥ್ಯಮಿಂ
ತು, ರಣಸ್ಥಾನದೊಳ್, ಇನ್ನೆರೞ್ನುಡಿವೆನೆ? ಮದ್ಭಂಧುಶೋಕಾಗ್ನಿಯಿಂದೆ,
ಉರಿದಪ್ಪೆಂ, ತೊಡರ್ದೆನ್ನನ್, ಇಂ ಬಿಡು, ವಿರೋಕ್ಷ್ಮಾಪರ್, ಎನ್ನೀ ಗದಾ
ಪರಿಘಾಘಾತದಿಂ, ಅೞ ತೞ ಮಡಿದು, ಇ, ಅೞ್ಕೌಡದೇಂ ಪೋಪರೇ?
ಎಂತಹ ಮಾತು! ಮಹಾನುಭಾವನಿಗೆ ಮಾತ್ರ ಸಾಧ್ಯ.

ಮುಂದೆ ಗದಾಯುದ್ಧವು ಪ್ರಾರಂಭವಾಗುವುದು, ಭೀಮ ದುರ್ಯೋಧನರಿಬ್ಬರೂ ಸಿಡಿಲೆರಗುವಂತೆ ಎರಗಿ ಯುದ್ಧಮಾಡುವರು. ಭೀಮನು ದುರ್ಯೋಧನನ ಗದಾಪ್ರಹಾರದಿಂದ ಎರಗಿ ಯುದ್ಧಮಾಡುವರು. ಭೀಮನು ದುರ್ಯೋಧನನ ಗದಾಪ್ರಹಾರದಿಂದ ಆಚೇತನನಾಗಿ ನೆಲಕ್ಕೆ ಬೀಳುವನು. ಆ ಸಮಯದಲ್ಲಿ ಪಾಂಡವ ವಿರೋಯಾದ ದುರ್ಯೋಧನನು ಭೀಮನನ್ನು ಹೊಡೆದು ಮುಗಿಸಿಬಿಡಬಹುದಾಗಿತ್ತು. ಆದರೆ ಪಂಪನ ಕೌರವ ಧರ್ಮಿಷ್ಠ. ಅಧರ್ಮಯುದ್ಧದಲ್ಲಿ ಕೈ ಹಾಕಲು ಅವನಿಗೆ ಮನಸ್ಸು ಬಾರದು. ಆದುದರಿಂದ ಅವನು ‘ಬಿೞ್ದನನ್ ಇಱಯೆನ್’ ಎಂದು ಪವಮಾನ ಮಾರ್ಗದೊಳ್ ಅಲ್ಪಾಂತರದೊಳ್ ಗದೆಯಂ ಬೀಸಿದನ್’. ಗದೆಯ ಗಾಳಿಯಿಂದೆಚ್ಚೆತ್ತ ಭೀಮನು ಪುನ ಗದಾಯುದ್ಧಕ್ಕೆ ಪ್ರಾರಂಭ ಮಾಡಿ ಕೃಷ್ಣನ ಸೂಚನೆಯ ಪ್ರಕಾರ ಕುರುರಾಜನ ತೊಡೆಗಳೆರಡನ್ನೂ ಒಡೆಯುವನು. ಧಾರ್ತರಾಷ್ಟ್ರನು ಇಳಾತಳದಲ್ಲಿ ಕೆಡೆಯುವನು. ‘ಭೀಮಸೇನ ಚರಣಪ್ರಹರಣಗಳಿತ ಶೋಣಿತಾರ್ದ್ರಮೌಳಿಯುಮಾಗಿ ಕೋಟಲೆಗೊಳ್ಳುತ್ತಿದ್ದ ಕೌರವೇಶ್ವರನಲ್ಲಿಗೆ ಅಶ್ವತ್ಥಾಮನು ಬಂದು ’ಎನ್ನಂ ಬಂಚಿಸಿ ಪೋದದುಳ್ ನಿನಗೆ ಪಗೆವರಿಂದಿನಿತೆಡಱಯ್ತು ಆದಿತ್ಯತೇಜ ಬೆಸಸು, ಇದಿರಾದ ಪೃಥಾಸುತನುೞಯಲೀಯದೆ ಕೊಲ್ವೆಂ’ ಎನ್ನಲು ಫಣಿಕೇತನನು ನೆತ್ತರ ಧಾರೆಯಿಂ ಮೆತ್ತಿದ ಕಣ್ಗಳನೊತ್ತಂಬದಿಂ ತೆದು ಅಶ್ವತ್ಥಾಮನ ಮೊಗಮಂ ನೋಡಿ

ಎನಗಿನಿತೊಂದವಸ್ಥೆ ವಿಯೋಗದಿನಾದುದು, ಇದರ್ಕೆ ನೀನೞ
ಲ್ದು, ಇನಿತು ಮನಕ್ಷತಂಬಡದಿರು, ಆಗದು ಪಾಂಡವರಂ ಗೆಲಲ್ ಪುರಾ
ತನಪುರುಷಂ ಮುರಾರಿ ಕೆಲದೊಳ್ ನಿಲೆ, ನೀಂ ಕೊಲಲಾರ್ಪೊಡೆ, ಆಗದೆಂ
ಬೆನೆ ತಱದೊಟ್ಟ ವೈರಿಗಳನ್ ಎನ್ನಸುವುಳ್ಳಿನಂ, ಎಯ್ದೆ ವಾ ಗಡಾ||

ಎಂತಹ ಛಲ! ಅಸಾಧ್ಯವೆಂದು ಚೆನ್ನಾಗಿ ತಿಳಿದಿದ್ದರೂ ಕೊನೆಯ ಆಸೆ! ಅಶ್ವತ್ಥಾಮನು ಪಾಂಡವರ ನಿಕ್ಕಿದೊ, ಒಸಗೆವಾತನೀಗಳ್ ಕೇಳಿಸುವೆನ್ ಎಂದು ಹೋಗಿ ಉಪಪಾಂಡವರನ್ನು ಪಾಂಡವರೆಂದು ಭ್ರಮಿಸಿ ಅವರುತ್ತಮಾಂಗಗಳನ್ನು ಕತ್ತರಿಸಿ ಸೂರ್ಯೋದಯಕ್ಕೆ ಸರಿಯಾಗಿ ದುರ್ಯೋಧನನಲ್ಲಿಗೆ ಬಂದು ‘ಕೊಳ್ ನಿನ್ನ ನಚ್ಚಿನ ಪಾಂಡವರ ತಲೆಗಳನ್’ ಎಂದು ಮುಂದಿಡಲು ದುರ್ಯೋಧನನು ನೋಡಿ

ಬಾಲಕಮಳಂಗಳಂ ಕಮ
ಳಾಲಯದಿಂ ತಿಱದು ತರ್ಪವೋಲ್ ತಂದೈ ನೀಂ
ಬಾಲಕರ ತಲೆಗಳ್ ಅಕ್ಕಟ
ಬಾಲಕ ವಧದೋಷಮೆಂತು ನೀಂ ನೀಗಿದಪೈ||

ಎಂದು ನಿಟ್ಟುಸಿರು ಬಿಟ್ಟು ತನ್ನ ಕೊನೆಯುಸಿರನ್ನೆಳೆಯುವನು. ಈ ವಿಧವಾದ ಸಾವು ಸಾವಲ್ಲ, ಸೋಲು ಸೋಲಲ್ಲ. ಒಂದು ವಿಧವಾದ ವಿಜಯವೇ! ಈ ತೆರನಾದ ಮರಣವು ಅವಮಾನಕರವಾದುದಲ್ಲ, ಕೀರ್ತಿಕರ. ಹೇಡಿಯಂತೆ ಸಂಮಾಡಿಕೊಂಡು ತನುಜಾನುಜರ ಸಾವಿರ ಮನಕ್ಷತದಿಂದ ಸದಾ ಕೊರಗುತ್ತ ಜೀವಿಸುವುದಕ್ಕಿಂತ ವೀರ ಕ್ಷತ್ರಿಯನಂತೆ ಅಭಿಮಾನವನ್ನೇ, ಛಲವನ್ನೇ, ಹಗೆಯನ್ನೇ ಮುಂದಿಟ್ಟು ಧೈರ್ಯದಿಂದ ಕಾದಿ ಸಾಯುವುದು ಎಷ್ಟೋ ಮೇಲು. ಹೀಗೆ ಸತ್ತವನು ಸರ್ವರ ಶ್ಲಾಘನೆಗೂ ಅರ್ಹ. ಅದಕ್ಕಾಗಿಯೇ ಕವಿತಾಗುಣಾರ್ಣವನು ಅಭಿಮಾನಘನತೆಗೆ ಮೆಚ್ಚಿ ಮುಂದಿನ ಅವನ ಚರಮಗೀತೆಯನ್ನು ಹಾಡಿದನು.

ನುಡಿದುದನ್, ಎಯ್ದೆ ತುತ್ತತುದಿಯೆಯ್ದುವಿನಂ ನುಡಿದಂ, ವಲಂ ಚಲಂ
ಬಿಡಿದುದನ್, ಎಯ್ದೆ ಮುಂ ಪಿಡಿದುದಂ ಪಿಡಿದಂ, ಸಲೆ ಪೂಣ್ದ ಪೂಣ್ಕೆ ನೇ
ರ್ಪಡೆ ನಡೆವಂನ್ನೆಗಂ ನಡೆದನ್, ಆಳ್ಕದೆ ಬಳ್ಕದೆ ತನ್ನೊಡಲೆ ಪಡ
ಲ್ವಡುವಿನಂ, ಅಣ್ಮುಗುಂದನೆ ದಲ್, ಏನಭಿಮಾನಧನಂ ಸುಯೋಧನಂ||

ಹೀಗೆ ಎಲ್ಲ ದೃಷ್ಟಿಯಿಂದಲೂ ಪಂಪನು ಪ್ರತಿಭಾಶಾಲಿಯಾಗಿದ್ದುದರಿಂದಲೇ ಅವನ ತರುವಾಯ ಬಂದ ಕವಿಗಳಿಗೆ ಅವನು ಪ್ರೇರಕನಾದನು. ಪಂಪನ ದುರ್ಯೋಧನನಿಂದ ಆಕರ್ಷಿತನಾದ, ಮುಂದೆ ಬಂದ ಕವಿಚಕ್ರವರ್ತಿ ರನ್ನನು ದುರ್ಯೋಧನನನ್ನೇ ಪ್ರತಿನಾಯಕನನ್ನಾಗಿ ಮಾಡಿ ‘ಸಾಹಸಭೀಮ ವಿಜಯ’ವೆಂಬ ಉತ್ತಮ ಗ್ರಂಥವನ್ನು ರಚಿಸಿದನು. ಅವನ ದೃಷ್ಟಿಯಿಂದ ಅದು ಭೀಮವಿಜಯವಾದರೂ ವಾಚಕರಿಗೆ ‘ರಾಜರಾಜವಿಜಯ’ ದಂತೆಯೇ ಭಾಸವಾಗುವುದು. ರನ್ನನ ಕವಿಚಕ್ರವರ್ತಿತ್ವಕ್ಕೆ ಪಂಪನು ಬಹುಮಟ್ಟಿಗೆ ಕಾರಣ. ಅವನ ‘ಗದಾಯುದ್ಧ’ವು ಪಂಪಭಾರತದ ಹದಿಮೂರನೆಯ ಆಶ್ವಾಸದ ೧೦೮ ಪದ್ಯಗಳಲ್ಲಿ ಶಲ್ಯವಧೆಯ ವಿಚಾರವಾದ ೨೮ ಪದ್ಯಗಳನ್ನುಳಿದ ಭಾಗಗಳ ವಿಸ್ತರಣವೇ ಆಗಿದೆ. ವಸ್ತುವರ್ಣನೆ; ಶೈಲಿ ಮೊದಲಾದವುಗಳಲ್ಲಿ ಬಹುಭಾಗ ಪಂಪನದಾಗಿರುತ್ತದೆ. ರನ್ನನ ದುರ್ಯೋಧನನ ಪಾತ್ರಚಿತ್ರಣ ಪಂಪನ ಪ್ರೇರಣೆಯಿಂದಲೇ ಆಗಿರಬೇಕು.ಕೊನೆಯಲ್ಲಿ ಈ ಪ್ರಬಂಧವನ್ನು ಮುಗಿಸುವ ಮೊದಲು ಪಂಪನ ದೇಶಾಭಿಮಾನದ ವಿಷಯವಾಗಿ ಒಂದು ಮಾತನ್ನು ಹೇಳುವುದು ಅವಶ್ಯಕ. ಆಂಗ್ಲಭಾಷೆಯ ಗದ್ಯಗ್ರಂಥಕಾರರಲ್ಲಿ ಉದ್ದಾಮನಾದ ಮಯರ್ಸ್ ಎಂಬುವನು ವರ್ಡ್ಸ್‌ವರ್ತ್ ಕವಿಯ ಜೀವನ ಚರಿತ್ರೆಯನ್ನು ಬರೆಯುತ್ತ ಅವನ ದೇಶಾಭಿಮಾನವನ್ನು ಕುರಿತು ಚರ್ಚಿಸುವಾಗ ಹೀಗೆಂದು ಹೇಳುವನು- ಸ್ವದೇಶದ ಹಿತಕ್ಕಾಗಿಯೂ ಏಳಿಗೆಗಾಗಿಯೂ ಶರೀರವನ್ನರ್ಪಿಸಿ ಹೋರಾಡುವ ವೀರರು ಹೇಗೆ ದೇಶಾಭಿಮಾನಿಗಳೋ ಹಾಗೆಯೇ ಕವಿಯು ಅಂತಹ ದೇಶಾಭಿಮಾನಿಯೆಂದು ಕರೆಯಿಸಿಕೊಳ್ಳಲರ್ಹನು. ಇವನು ಕವಚವನ್ನು ಧರಿಸಿ ಬಿಲ್ಲು ಬಾಣಗಳನ್ನು ಹಿಡಿದು ರಥವನ್ನೇರಿ ಯುದ್ಧರಂಗದಲ್ಲಿ ವೈರಿಗಳೊಡನೆ ಯುದ್ಧ ಮಾಡಬೇಕಾಗಿಲ್ಲ. ಕವಿಯಾದವನು ದೇಶಕ್ಕಾಗಿ ಹೋರಾಡುವ ದೇಶಭಕ್ತರ ಸಾಹಸಕಾರ್ಯಗಳನ್ನು ತನ್ನಲ್ಲಿರುವ ಕವಿತಾಶಕ್ತಿಯಿಂದ ಗ್ರಂಥರೂಪದಲ್ಲಿ ಚಿರಸ್ಥಾಯಿಯಾಗಿ ಮಾಡುವುದರಲ್ಲಿ ನಿರತನಾಗುವುದು ತನ್ನ ದೇಶಾಭಿಮಾನದ ಹೆಗ್ಗುರುತು. ಯಾವ ಕವಿಯಲ್ಲಿ ಈ ತೆರನಾದ ದೇಶಾಭಿಮಾನವಿರುವುದಿಲ್ಲವೋ ಅಂತಹವನು ಇಂತಹ ಕಾವ್ಯವನ್ನು ರಚಿಸಲಾರ. ರಚಿಸಿದರೂ ನಿರ್ಜೀವವೂ ಕಲಾರಹಿತವೂ ಆಗುತ್ತದೆ ಎಂದು ಹೇಳಿ ವರ್ಡ್ಸ್‌ವರ್ತ್ ಕವಿಯನ್ನು ದೇಶಾಭಿಮಾನಿಗಳ ಗುಂಪಿನಲ್ಲಿ ಸೇರಿಸಿರುವನು. ಇದು ವಾಸ್ತವವಾದ ಅಂಶ. ಇಂತಹವರು ಯಾವಾಗಲೂ ದೇಶಕ್ಕಾಗಿ ಮಡಿಯಲು ಸಿದ್ಧರಾಗಿರುತ್ತಾರೆ. ಇಂತಹ ದೇಶಾಭಿಮಾನವು ಪಂಪನಲ್ಲಿ ತುಂಬಿ ತುಳಿಕುತ್ತಿರುವುದು ಅವನ ಕಾವ್ಯಗಳಲ್ಲಿ ಸ್ವಯಂಪ್ರಕಾಶವಾಗಿದೆ. ಪಂಪನ ದೇಶವಾತ್ಸಲ್ಯಗಳನ್ನು ವ್ಯಕ್ತಗೊಳಿಸುವ ಪದ್ಯಗಳು ಅವನ ಕಾವ್ಯಗಳಲ್ಲಿ ನಮಗೆ ಹೇರಳವಾಗಿ ಸಿಕ್ಕುವುವು. ಅರ್ಜುನನ್ನು ದಿಗ್ವಿಜಯಾರ್ಥವಾಗಿ ಬರುತ್ತಾ ಬನವಾಸಿಯನ್ನು ಸೇರುವನು. ಈ ದೇಶವನ್ನು ನೋಡಿ ಅವನ ಹೃದಯವು ಆನಂದಭರಿತವಾಗುವುದು. ಅಲ್ಲಿ ನೆಲೆಗೊಂಡಿದ್ದ ಬಗೆಬಗೆಯ ಸಂಪತ್ತು, ಪುಷ್ಪವಾಟಿ, ಕಾಸಾರ, ಲತಾಗೃಹ, ನಂದನವನ-ಇವು ಯಾವ ದಾರಿಗನಿಗಾದರೂ ಆನಂದವನ್ನುಂಟುಮಾಡುವುದು. ಅಲ್ಲಿಯ ನಿವಾಸಿಗಳು ಸ್ವರ್ಗಸುಖವನ್ನನುಭವಿಸುತ್ತಿರುವರು. ಇಂತಹ ನಾಡನಲ್ಲಿ ಒಂದು ಸಲ ಜನ್ಮವೆತ್ತುವುದೂ ಪುಣ್ಯಫಲದಿಂದಲೇ. ಇದಕ್ಕಾಗಿ ಮನುಷ್ಯನು ಎಷ್ಟು ತಪಸ್ಸು ಮಾಡಿದರೂ ಸಾರ್ಥಕವೇ. ‘ತುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ಬನವಾಸಿ ದೇಶದೊಳ್’! ಇದೇ ಅಲ್ಲವೇ ಹುಟ್ಟಿದುದಕ್ಕೆ ಸಾರ್ಥಕ! ಪಂಪನು ಬಾಲ್ಯದಲ್ಲಿ ಬನವಾಸಿಯಲ್ಲಿ ಬಹುಕಾಲ ಇದ್ದು ಅದರ ಸವಿಯನ್ನುಂಡಿರಬೇಕು. ಆದುದರಿಂದಲೇ ಅವನೆಲ್ಲಿದ್ದರೂ ಅದರ ನೆನಪು ಬಂದೇ ಬರುತ್ತದೆ. ಅದಕ್ಕಾಗಿಯೇ ಅವನು ಇಂದ್ರಪ್ರಸ್ಥಪುರದಿಂದ ದೇಶಾಟನೆಗೆ ಹೊರಟುಬಂದ ಅರ್ಜುನನ ಬಾಯಲ್ಲಿ ಅದರ ಮೇಲ್ಮೆಯನ್ನು ಹಾಡಿಸಿರುವುದು. ಅಲ್ಲಿರುವವರೆಲ್ಲರೂ ‘ಜಾಗದ, ಭೋಗದ, ಅಕ್ಕರದ, ಗೇಯದ, ಗೊಟ್ಟಿಯ, ಅಲಂಪಿನ, ಇಂಪುಗಳ್ಗೆ, ಆಗರಮಾದ ಮಾನಿಸರೆ’. ಅಲ್ಲಿಯ ‘ ಅಮರ್ದಂ ಮುಕ್ಕುಳಿಪಂತುಪಟ್ಟ ಸುಸಿಲ್ ಬಂದಿಂಪಂ ತಗುಳ್ದೊಂದು ಗೇಯಮುಂ ಆದ ಅಕ್ಕರಗೊಟ್ಟಿಯುಂ ಚದುರದ, ಒಳ್ವಾತುಂ ಕುಳಿರ್ ಕೋೞ್ದ ಜೊಂಪಮುಂ’ ಎಂತಹವರನ್ನೂ ಆಕರ್ಷಿಸುತ್ತದೆ. ಆದುದರಿಂದಲೇ

ತೆಂಕಣ ಗಾಳಿ ಸೋಂಕಿದೊಡಂ, ಒಳ್ನುಡಿಗೇಳ್ದೊಡಂ ಇಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಂ, ಆದ ಕೆಂದಲಂ
ಪಂ ಗೆಡೆಗೊಂಡೊಡಂ ಮದುಮಹೋತ್ಸವಮಾದೊಡಂ ಏನನೆಂಬೆನ್ ಆ
ರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ||

ಎಂದು ಪಂಪನು ಹಾತ್ತೊರೆಯುತ್ತಿರುವುದು. ಪಂಪನ ದೇಶವಾತ್ಸಲ್ಯದ ಪರಾಕಾಷ್ಠೆ ಇಲ್ಲಿ ಬಹು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಪಂಪನು ಅರಿಕೇಸರಿಯನ್ನು ಕಥಾನಾಯಕನನ್ನಾಗಿ ಮಾಡಿರುವುದೂ ದೇಶಾಭಿಮಾನದಿಂದಲೇ. ಕನ್ನಡನಾಡಿನ ವೀರರ ಕೀರ್ತಿಯನ್ನು ಚಿರಸ್ಥಾಯಿಯನ್ನಾಗಿ ಮಾಡುವುದಕ್ಕಾಗಿಯೇ. ಖಾಂಡವದಹನಪ್ರಕರಣದಲ್ಲಿ ಪಂಪನು ಅರಿಕೇಸರಿಯ ಸತ್ಯಸಂಧತೆಯನ್ನು ವ್ಯಕ್ತಗೊಳಿಸುವ ಮುಂದಿನ ಎರಡು ಪದ್ಯಗಳನ್ನು ಕೊಟ್ಟಿದ್ದಾನೆ.

ಎರೆದನ ಪೆಂಪು ಪೇೞ್ವೊಡನಲಂ, ಪೊಣರ್ವಾತನ ಪೆಂಪು ಪೇೞ್ವೊಡಾ
ಸುರಪತಿ, ಕೊಟ್ಟ ತಾಣದೆಡೆ ಪೇೞ್ವೊಡಂ, ಆ ಯುಮುನಾನದೀತಟಾಂ
ತರಂ ಒಸೆದಿತ್ತನಾನ್ ಎಯೆ ಕೇಳ್ದನ್, ಇಳಾಧರ ನೀನ್ ಇದರ್ಕೆ ಮಾ
ತೆರಡಣಮಾಡಲಾಗದು, ಇದು ಸೈಪಿನೊಳಲ್ಲದೆ ಕೂಡಿ ಬರ್ಕುಮೇ?

ಒತ್ತಿ ತಱುಂಬಿ ನಿಂದ ರಿಪುಭೂಜಸಮಾಜದ ಬೇರ್ಗಳಂ ನಭ
ಕ್ಕೆತ್ತದೆ ಬಂದು ತನ್ನ ಮವೊಕ್ಕೊಡೆ ಕಾಯದೆ ಚಾಗದೊಪ್ಪಿನ
ಚ್ಚೊತ್ತದೆ ಮಾಣ್ದು ಬಾೞ್ವ ಪುೞುವಾನಸನೆಂಬನ್, ಅಜಾಂಡಮೆಂಬುದೊಂ
ದತ್ತಿಯ ಪಣ್ಣೊಳಿರ್ಪ ಪುೞುವಲ್ಲದೆ ಮಾನಸನೇ ಮುಂರಾಂತಕಾ||

ಈ ಪದ್ಯಗಳನ್ನು ಬರೆಯುತ್ತಿರುವಾಗ ಪಂಪನ ಆದರ್ಶರಾಜನ ಚಿತ್ರ ಹೇಗಿದ್ದಿರಬೇಕು? ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಈ ಪಂಪನ ವಾಗ್ವಿಲಾಸವನ್ನು ಹೋಲುವ ಕವೀಂದ್ರರಾರಿದ್ದಾರೆ? ಆದುದರಿಂದಲೇ ಪಂಪನು ನಾಡೋಜನಾದುದು. ಆದುದರಿಂದಲೇ ಅವನ ಕಾವ್ಯಗಳು ಮುನ್ನಿನ ಕಾವ್ಯಗಳನ್ನು ಇಕ್ಕಿ ಮೆಟ್ಟಿದುದು.

ಒಟ್ಟಿನಲ್ಲಿ ‘ಪಂಪನ ಕವಿತಾಧೋರಣೆಯು ಅಸಾಮಾನ್ಯವಾದುದು. ಈತನ ನವೀನ ಕಲ್ಪನೆಗಳ ಪ್ರಾವೀಣ್ಯತೆಯೂ ರಸಾನುಗುಣವಾಗಿ ವಸ್ತುವನ್ನು (ಕಥಾಶರೀರವನ್ನು) ರಚಿಸುವ ಮತ್ತು ವಸ್ತುವಿಗೆ ತಕ್ಕಂತೆ ರಸವನ್ನು ಹಿಳಿದು ಬೆರೆಯಿಸುವ ಕೌಶಲವೂ ರಸಕ್ಕೆತಕ್ಕಂತೆ ಛಂದಸ್ಸನ್ನು ಯೋಜಿಸುವ ಪ್ರೌಢಿಮೆಯೂ, ಕಾವ್ಯದ ಒಟ್ಟು ಮೆಯ್ಯ ಅಂದವು ಸ್ವಲ್ಪವೂ ಕಡೆದಂತೆ ಅಂಗೋಪಾಂಗಗಳನ್ನು ಹೊಂದಿಕೆಗೊಳಿಸುವ ಚತುರತೆಯೂ ಪಾತ್ರಗಳಿಗೆ ಜೀವಕಳೆಯನ್ನು ತುಂಬಿ ಮೈವೆತ್ತು ಎದುರಿಗೆ ನಿಲ್ಲುವಂತೆ ಮಾಡುವ ರಚನಾಚಮತ್ಕಾರವೂ, ಅನೌಚಿತ್ಯಗಳನ್ನು ತಕ್ಕಂತೆ ಮಾರ್ಪಡಿಸಿ ಸಹಜಗೊಳಿಸುವ ಶಕ್ತಿಯೂ, ಪ್ರಾಚೀನಕಾವ್ಯಗಳಲ್ಲಿ ದೊರೆಯುವ ಸಾರವಾದ ಆಶಯಗಳನ್ನು ಆರಿಸಿ ತೆಗೆದು ತಕ್ಕಂತೆ ಮಾರ್ಪಡಿಸಿ ಸೇರಿಸಿಕೊಳ್ಳುವ ಪ್ರಜ್ಞಾವೈಭವವೂ, ಅಭಿಪ್ರಾಯವು ಥಟ್ಟನೆ ಮನಸ್ಸಿಗೆ ಹಿಡಿಯುವಂತೆ ಮಾಡುವ ಸಾಮರ್ಥ್ಯವೂ, ಸನ್ನಿವೇಶಕ್ಕೊಪ್ಪುವಂತೆಯೂ ಮಿತಿಮಿರದಂತೆಯೂ ಓದುಗರಲ್ಲಿ ನಿರ್ಮಲಭಕ್ತಿ ಮೂಡುವಂತೆಯೂ ಮಾಡುವ ಸ್ತೋತ್ರಪಾಠಗಳ ಗಾಂಭೀರ್ಯವೂ, ಬಳಕೆಯಲ್ಲಿರುವ ಗಾದೆಗಳನ್ನು ಒಪ್ಪುವಂತೆ ಅಲ್ಲಲ್ಲಿ ಪ್ರಯೋಗಿಸುವ ಔಚಿತ್ಯವು, ಅನೇಕ ವಾಕ್ಯಗಳಲ್ಲಿ ಹೇಳಬೇಕಾದ ವಿಷಯವನ್ನು ಕೆಲವೇ ಮಾತುಗಳಲ್ಲಿ ಅಡಗಿಸಿ ಅರ್ಥವಾಗುವಂತೆ ಅಂದವಾಗಿ ಹೇಳುವ ನೈಪುಣ್ಯವೂ, ಬಹುಪದ ಪ್ರಯೋಗದಕ್ಷತೆಯೂ, ಶೈಲಿಯ ಸರಳತೆಯೂ, ಬಂಧದ ಬಿಕ್ಕಟ್ಟೂ, ವರ್ಣನೆಗಳ ರಮ್ಯತೆಯೂ, ಅಲಂಕಾರಗಳ ಸಹಜಭಾವವೂ ಕಾವ್ಯಾಂಗಗಳಾದ ಇತರ ಸದ್ಭಾವಗಳ ರಚನವಿಚಕ್ಷಣತೆಯೂ ಈ ಕವಿಯನ್ನು ‘ಕರ್ಣಾಟಕ ಕವಿತಾ ಸಾರ್ವಭೌಮನನ್ನಾಗಿ ಮಾಡಿರುವುವು’ (ಪಂಪಭಾರತದ ಉಪೋದ್ಘಾತ, ಕರ್ಣಾಟಕ ಸಾಹಿತ್ಯಪರಿಷತ್ತಿನ ಪ್ರಕಟಣೆ ೧೯೩೧)

ಛಂದಸ್ಸಿನ ವಿಚಾರ: ಉಭಯಭಾಷಾಪಂಡಿತನಾದ ಪಂಪನು ತನ್ನ ಎರಡು ಕಾವ್ಯಗಳಲ್ಲಿಯೂ ವಿವಿಧ ಜಾತಿಯ ಕನ್ನಡ ಸಂಸ್ಕೃತ ಛಂದಸ್ಸುಗಳನ್ನು ಉಪಯೋಗಿಸಿದ್ದಾನೆ. ಅವುಗಳಲ್ಲಿ ಕನ್ನಡದ ಜಾಯಮಾನಕ್ಕೆ ಹೊಂದಿಕೊಂಡಿರುವ ಸಂಸ್ಕೃತದ ಆರ್ಯಾ ಪ್ರಾಕೃತದ ಸ್ಕಂದಕಕ್ಕೆ ಹೊಂದಿಕೊಂಡಿರುವ ಕಂದಪದ್ಯಗಳೇ ಹೆಚ್ಚಿನ ಭಾಗದವು. ಪಂಪಭಾರತದ ೧೬೦೭ ಮತ್ತು ಆದಿಪುರಾಣದ ೧೬೩೦ ಪದ್ಯಗಳಲ್ಲಿ ಕ್ರಮವಾಗಿ ಅವು ೭೩೦ ಮ್ತತು ೯೫೦ ಆಗಿರುತ್ತವೆ. ಅವುಗಳನ್ನು ಬಿಟ್ಟರೆ ಕನ್ನಡದಲ್ಲಿ ಸುಪ್ರಸಿದ್ಧವಾದ ಆರು ಸಂಸ್ಕೃತವೃತ್ತಗಳಾದ ಉತ್ಪಲಮಾಲೆ, ಶಾರ್ದೂಲ, ಸ್ರಗ್ಧರೆ ಮತ್ತು ಅವುಗಳ ಮಾರ್ಪಾಟೇ ಆಗಿರುವ ಚಂಪಕಮಾಲಾ, ಮತ್ತೇಭವಿಕ್ರೀಡಿತ ಮಹಾಸ್ರಗ್ಧರೆಗಳು ಪ್ರಧಾನಸ್ಥಾನವನ್ನು ಪಡೆದಿರುತ್ತವೆ. ಇವುಗಳಲ್ಲಿಯೂ ಚಂಪಕಮಾಲೆಗೆ ಅಗ್ರಸ್ಥಾನ. ಪಂಪಭಾರತದಲ್ಲಿಯೇ ಸುಮಾರು ೪೧೦ ಸಂಖ್ಯಾಕವಾಗಿವೆ. ಅವುಗಳಲ್ಲರ್ಧ ಮತ್ತೇಭವಿಕ್ರೀಡಿತವೂ ಅದರಲ್ಲರ್ಧ, ಉತ್ಪಲಮಾಲೆಯೂ ಇವೆ. ಈ ಸುಪ್ರಸಿದ್ಧವಾದ ಆರು ವೃತ್ತಗಳಲ್ಲದೆ ಪೃಥ್ವೀ, ತರಳ, ಹರಿಣ, ಮಲ್ಲಿಕಾಮಾಲೆ, ಖಚರಪ್ಲುತ, ಅನವದ್ಯ ಮೊದಲಾದ ವೃತ್ತಗಳು ಉಪಯುಕ್ತವಾಗಿವೆ. ಅಪರೂಪವಾಗಿ ಮಂದಾಕ್ರಾಂತ, ಅನುಷ್ಟುಪ್, ಪುಷ್ಪಿತಾಗ್ರಗಳನ್ನು ಕವಿಯು ಉಪಯೋಗಿಸಿದ್ದಾನೆ.ಕನ್ನಡ ಅಂಶಛಂದಸ್ಸಾದ ಅಕ್ಕರ ಮತ್ತು ಪಿರಿಯಕ್ಕರಗಳನ್ನು ಯಶಸ್ವಿಯಾಗಿ ಬಳಸಿದ್ದಾನೆ. ಆದರೆ ಇವುಗಳಿಗೆ ವಿಶೇಷ ವ್ಯತ್ಯಾಸ ಕಾಣುವುದಿಲ್ಲ. ಮೂರು ರೀತಿಯ ರಗಳೆಗಳೂ ಇಲ್ಲಿ ಪ್ರಯೋಗವಾಗಿವೆ. ತ್ರಿಪದಿಯು ಬಹು ಅಪರೂಪವಾಗಿ ಉಪಯುಕ್ತವಾಗಿದೆ. ಪಂಪನ ಛಂದೋವಿಲಾಸದಲ್ಲಿ ಇರುವ ವೈಶಿಷ್ಟ್ಯ, ಅವನಿಗೆ ಎಲ್ಲೆಲ್ಲಿ, ಯಾವ ಯಾವ ಪ್ರಕರಣದಲ್ಲಿ, ಯಾವ ಯಾವ ಛಂದಸ್ಸನ್ನು ಉಪಯೋಗಿಸಬೇಕೆಂಬ ವಿವೇಕ ಜ್ಞಾನ. ಅವನ ಈ ಜಾಣ್ಮೆಯಿಂದ ವರ್ಣಿತ ವಸ್ತುಗಳಿಗೆ ವಿಶೇಷ ಅರ್ಥ ವ್ಯಕ್ತಿತ್ವವೂ ನಾದಮಾಧುರ್ಯವೂ ಉಂಟಾಗುತ್ತದೆ. ಚಂಪೂಕೃತಿಗಳಾದ ಇವನ ಕೃತಿಗಳಲ್ಲಿ ಗದ್ಯಕ್ಕೂ ಪದ್ಯದಷ್ಟೇ ಪ್ರಭಾವವಿರುತ್ತದೆ. ಅನೇಕ ಗದ್ಯಭಾಗಗಳು ಛಂದೋರಹಿತವಾದ ಪದ್ಯಗಳಂತೆ ವಿಶೇಷನಾದಮಯವಾಗಿಯೂ ಇವೆ. ಅವನು ಮಾರ್ಗಿ ಮತ್ತು ದೇಸಿಗಳೆರಡಕ್ಕೂ ಸಮಾನವಾದ ಸ್ಥಾನವನ್ನೇ ಕೊಟ್ಟಿರುವುದರಿಂದ ಸಂಸ್ಕೃತ ಮತ್ತು ದೇಸೀ ಶಬ್ದಗಳ ಜೋಡಣೆ ಬಹು ರಂಜಕವಾಗಿರುತ್ತದೆ. ಅವನ ಕಾವ್ಯತತ್ವವನ್ನು ಸಿದ್ಧಾಂತಗೊಳಿಸುತ್ತವೆ. ಆದರೂ ಕಥಾನಿರೂಪಣೆಗೆ ಗದ್ಯವೂ ವರ್ಣನೆಗೆ ಪದ್ಯವೂ ಹೆಚ್ಚು ಹೊಂದಿಕೊಳ್ಳುವಂತೆ ಕಾಣುತ್ತದೆ. ಗದ್ಯಭಾಗದಲ್ಲಿ ಸಂಸ್ಕೃತ ಪದಗಳ ಮತ್ತು ಸಮಾಸಗಳ ಭಾಗ ಹೆಚ್ಚಿರುತ್ತದೆ. ಇಷ್ಟಾದರೂ ಶಾಸ್ತ್ರಗ್ರಂಥವಾದ ಆದಿಪುರಾಣದಲ್ಲಿರುವಷ್ಟು ಗದ್ಯಭಾಗವು ಲೌಕಿಕ ಕಾವ್ಯವಾದ ಪಂಪಭಾರತದಲ್ಲಿಲ್ಲ. ಆದುದರಿಂದಲೇ ಇದು ಪುರಾಣಕ್ಕಿಂತ ಹೆಚ್ಚು ಭಾವಪೂರ್ಣವಾಗಿದೆ.

ಗ್ರಂಥಪಾಠ ಮತ್ತು ಮುದ್ರಣಗಳು: ಪಂಪಭಾರತವು ಅತ್ಯುತ್ತಮ ಗ್ರಂಥವಾದರೂ ಅದರ ಶುದ್ಧಪಾಠವನ್ನು ನಿಷ್ಕರ್ಷಿಸಲು ಸಾಕಷ್ಟು ಹಸ್ತಪ್ರತಿಗಳು ಲಭ್ಯವಾಗಿಲ್ಲ. ಇದನ್ನು ಮೊತ್ತ ಮೊದಲನೆಯ ಸಲ ಮೈಸೂರುಪ್ರಾಚ್ಯಸಂಶೋಧನೆಯ ಇಲಾಖೆಯ ಮುಖ್ಯಾಕಾರಿಗಳಾಗಿದ್ದ ಮಿ|| ರೈಸ್ ಸಿ.ಐ.ಇ. ಅವರು ಪ್ರಾಕ್ತನವಿಮರ್ಶವಿಚಕ್ಷಣರಾದ ಆರ್. ನರಸಿಂಹಾಚಾರ್ಯರ ಸಹಾಯದಿಂದ ೧೮೯೮ರಲ್ಲಿ ಮೊದಲನೆಯ ಸಲ ಪ್ರಕಟಿಸಿದರು. ಆ ಮುದ್ರಣವನ್ನು ಅವರು ಮೈಸೂರು ಅರಮನೆಯ ಸರಸ್ವತೀಭಂಡಾರದ ಓಲೆ ಪ್ರತಿ ಮತ್ತು ಭಂಡಾರ್‌ಕರ್ ಓರಿಯಂಟಲ್ ರಿಸರ್ಚ್ ಸೊಸೈಟಿಯ ಮತ್ತೊಂದು ತಾಳೆಯೋಲೆಯ ಪ್ರತಿಗಳ ಸಹಾಯದಿಂದ ಸಂಶೋಸಿದರು. ಮುಂದೆ ಬಹು ಕಾಲ ಅದರ ಪುನರ್ಮುದ್ರಣವಾಗಲಿಲ್ಲ. ೧೯೧೭ನೆಯ ವರ್ಷದಲ್ಲಿ ಸರ್ಕಾರದವರ ಅಭಿಪ್ರಾಯದಂತೆ ಕರ್ಣಾಟಕದ ಸಾಹಿತ್ಯ ಪರಿಷತ್ತಿನವರು ಪಂಡಿತರುಗಳ ಸಹಾಯದಿಂದ ಪ್ರಕಟಿಸಲು ಒಪ್ಪಿಕೊಂಡರು. ಮ| ರಾ| ಗಳಾದ ಎಸ್. ತಿಮ್ಮಪ್ಪಯ್ಯಶಾಸ್ತ್ರಿಗಳು, ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್ಯರು, ಕಾನಕಾನ ಹಳ್ಳಿಯ ವರದಾಚಾರ್ಯರು, ಮೈಸೂರು ಸೀತಾರಾಮಶಾಸ್ತ್ರಿಗಳು- ಇವರುಗಳನ್ನೊಳಗೊಂಡ ಪಂಡಿತಮಂಡಳಿ ಈ ಕಾರ್ಯವನ್ನು ಆರಂಭಿಸಿತು. ಮುಂದೆ ಶ್ರೀ ಬೆಳ್ಳಾವೆ ವೆಂಟಕನಾರಾಯಣಪ್ಪನವರು ಪ್ರಧಾನ ಸಂಪಾದಕರಾದರು. ಅವರಿಗೆ ಪಂಡಿತ ಕೆ. ಭೂಜಬಲಿಶಾಸ್ತ್ರಿಗಳು ಉತ್ತರಭಾರತದ ಆರಾ ಎಂಬ ಪುಸ್ತಕ ಭಂಡಾರರದಲ್ಲಿದ್ದ ಪ್ರತಿಯನ್ನು ಕಳುಹಿಸಿ ಕೊಟ್ಟರು. ಸಂಪಾದಕರು ಮೇಲಿನ ಪಂಡಿತ ಮಂಡಳಿಯ ಸದಸ್ಯರ ಮತ್ತು ಇತರ ಪ್ರಸಿದ್ಧ ಕನ್ನಡ ಪಂಡಿತರುಗಳಾದ ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಎ. ಎನ್. ನರಸಿಂಹಯ್ಯ, ಡಿ.ವಿ.ಗುಂಡಪ್ಪ, ಬಿ. ಕೃಷ್ಟಪ್ಪ, ಬಿ. ರಾಮರಾವ್, ಶಾಂತಿರಾಜಶಾಸ್ತ್ರಿಗಳು- ಇವರ ನೆರವಿನಿಂದ ಕಡಬದ ನಂಜುಂಡಶಾಸ್ತ್ರಿಗಳು ಮತ್ತು ಟಿ.ಎಸ್. ವೆಂಕಟಣ್ಣಯ್ಯ ಇವರುಗಳ ಸಹಾಯ ಸಂಪಾದಕತ್ವದಲ್ಲಿ ೧೯೩೧ರಲ್ಲಿ ಉತ್ತಮ ಸಂಸ್ಕರಣವೊಂದನ್ನು ಪ್ರಕಟಿಸಿದರು. ಕಾಲಾನುಕಾಲದಲ್ಲಿ ಪ್ರತಿಗಳು ಮುಗಿಯಲು ಮೈಸೂರುವಿಶ್ವವಿದ್ಯಾನಿಲಯದವರು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಭಾಗಶ ಇದನ್ನು ಮುದ್ರಿಸಿ ಸಹಾಯ ಮಾಡಿದರು. ಈ ಉತ್ತಮಕೃತಿಯ ಪ್ರತಿಗಳ ಲಭ್ಯವೇ ಇಲ್ಲದುದರಿಂದ ವಿಶ್ವವಿದ್ಯಾನಿಲಯದವರು ಪರಿಷತ್ತಿನ ಪ್ರಕಟಣೆಯನ್ನೇ ಆಧಾರವಾಗಿಟ್ಟುಕೊಂಡು ೧೯೭೩ರಲ್ಲಿ ಅದರ ಪುನರ್ಮುದ್ರಣ ಮಾಡಿದರು. ಪ್ರಕೃತ ಅನುವಾದವು ಈ ಮುದ್ರಣದ ಪಾಠವನ್ನು ಅಂಗೀಕರಿಸಿದೆ. ಬೇರೆಯಾವ ಕೈ ಬರೆಹಗಳ ಸಹಾಯವೂ ದೊರೆತಿಲ್ಲವಾದುದರಿಂದ ಇದೇ ಮುದ್ರಣದಲ್ಲಿ ಕೊಟ್ಟಿರುವ ಕೆಲವು ಅಡಿ ಟಿಪ್ಪಣಿಯ ಪಾಠಾಂತರಗಳ ಪುನರ್ವಿಮೆಶೆಯಿಂದ ಕೆಲವು ಪಾಠಾಂತರಗಳನ್ನು ಉಪಯೋಗಿಸಿಕೊಂಡು ಅನುವಾದಿಸಿದೆ. ಅವರಿಗೆ ಸಂದೇಹಗಳಿದ್ದ ಅನೇಕ ಪಾಠಗಳು ನಮಗೂ ಹಾಗೆಯೇ ಉಳಿದಿರುವುದು ಅನಿವಾರ್ಯವಾಗಿದೆ.
************



************

ಕಾಮೆಂಟ್‌ಗಳಿಲ್ಲ: