ಬಂದನಾ ಹುಲಿರಾಯನು
ರಂಗಯ್ಯ ಆ ದಿನ ಮರಸಿಗೆ ಹೊರಟಾಗ ಬೈಗಾಗಿತ್ತು. ಮೊನ್ನೆ ಹರಟುತ್ತಿದ್ದಾಗ ನಿಮಗೆ ಮರಸುಬೇಟೆಯ ವಿಚಾರವಾಗಿ ಒಂದೆರಡು ಮಾತು ಹೇಳಿದ್ದೆ. ನಿಮಗೆ ನೆನಪಿರಬಹುದು. ಇಂದು ಸ್ವಲ್ಪ ವಿಶದವಾಗಿ ಹೇಳುತ್ತೇನೆ. ಮರಸುಬೇಟೆ ಎಂದರೆ ಮೃಗಗಳಿಗಾಗಿ ಒಂದೆಡೆ ಕುಳಿತು ಕಾಯುವುದು. ಬೇಟೆಗಾರ ಕೆಲವು ಸಾರಿ ಮರಗಳ ಮೇಲೆ ಕೂರುತ್ತಾನೆ. ಇನ್ನು ಕೆಲವು ಸಾರಿ ನೆಲದ ಮೇಲೆಯ ಪೊದೆಗಳ ನಡುವೆ ಮರೆಮಾಡಿಕೊಂಡು ಕೂತು ಪ್ರಾಣಿಗಳು ಬರುವುದನ್ನೆ ಜಾಗರೂಕತೆಯಿಂದ ನಿರೀಕ್ಷಿಸುತ್ತಾನೆ. ಮರಸುಬೇಟೆಗೆ ತಕ್ಕ ಸಮಯ ಎಂದರೆ ಪ್ರಾತಃಕಾಲ, ಸಂಧ್ಯಾಕಾಲ, ಬೆಳ್ದಿಂಗಳ ರಾತ್ರಿ. ಪ್ರಾಣಿಗಳು ಸಂಜೆಯಾಗಲು ಅರಣ್ಯದ ಮಧ್ಯದಿಂದ ಇಳಿಯಲು ತೊಡಗುತ್ತವೆ. ಏಕೆಂದರೆ ಕಣಿವೆಗಳಲ್ಲಿ, ಗದ್ದೆಗಳಲ್ಲಿ ಅವುಗಳಿಗೆ ಮೇವು ಸಿಕ್ಕುವುದು ಸುಲಭ. ಹಂದಿ, ಕಾಡುಕುರಿ, ಮಿಗ ಮೊದಲಾದ ಪ್ರಾಣಿಗಳು ಪೈರಿಗೆ ಮಾರಿಗಳು. ಬೇಟೆಗಾರರು ಜೀವಿಗಳು ಇಳಿದುಬರುವ ಮಾರ್ಗಗಳನ್ನು ಅನುಭವದಿಂದಲೊ ಅಥವಾ ಐತಿಹ್ಯದಿಂದಲೊ ಅರಿತು ಅಂತಹ ಕಂಡಿಗಳನ್ನು ಕಾಯುತ್ತಾರೆ. ಆದ್ದರಿಂದ ಕಾಡಿನಿಂದ ಕೆಳಗಿಳಿವ ಪ್ರಾಣಿಗಳನ್ನು ಹೊಡೆಯಬೇಕಾದರೆ ಸಾಯಂಕಾಲ ಸುಸಮಯ. ಹಾಗೆ ಇಳಿದ ಪ್ರಾಣಿಗಳು ರಾತ್ರಿಯೆಲ್ಲ ಗದ್ದೆಗಳನ್ನೋ ತೋಟಗಳನ್ನೊ ಲೂಟಿಮಾಡಿ ಉಷಃಕಾಲಕ್ಕೆ ಸರಿಯಾಗಿ ಪುನಃ ಅರಣ್ಯಾಭಿಮುಖವಾಗಿ ಮೇಲೇರುತ್ತವೆ. ಆದ್ದರಿಂದ ಬಯಲಿನಿಂದ ಮೇಲೇರುವ ಜೀವಾದಿಗಳನ್ನು ಸುಡಬೇಕಾದರೆ ಬೆಳಗಿನ ಜಾವ ಪ್ರಶಸ್ತ. ಇನ್ನು ಕಾಡಿನಲ್ಲಿ ಹಣ್ಣಿನ ಮರಗಳಿಗೆ ಬರುವುದು ಬೆಳಗ್ಗೆ ಎಂಟುಗಂಟೆಯ ಒಳಗೆ, ಅಥವಾ ಸಾಯಂಕಾಲ ಐದು ಗಂಟೆಯ ಮೇಲೆ. ಬೆಳ್ದಂಗಳ ರಾತ್ರಿಯಲ್ಲಿ ರಾತ್ರಿ ಎಷ್ಟುಹೊತ್ತಿಗಾದರೂ ಬರಬಹುದು. ನಾನು ಹಿಂದೆ ನಿಮಗೆ ಕಾಡಿನಲ್ಲಿ ಕಳೆದ ಒಂದಿರುಳಿನ ಅನುಭವವನ್ನು ಹೇಳಿದ್ದೇನೆ. ಅದನ್ನು ಮರೆತಿರಲಾರಿರಿ. ಮರೆತಿದ್ದರೆ ಮರಳಿ ಓದಿನೋಡಿ.
ಮಲೆನಾಡಿನ ಕಾಡುಗಳಲ್ಲಿ ಹಣ್ಣಿನ ಮರಗಳಿಗೆ ಬರಗಾಲವಿಲ್ಲ. ಅದರಲ್ಲಿಯೂ ವಸಂತ ಋತುವಿನಲ್ಲಿ ಕೇಳಬೇಕಾದುದೇ ಇಲ್ಲ. ಎಲ್ಲಿ ನೋಡಿದರೂ ಹಣ್ಣು ಎತ್ತ ನೋಡಿದರೂ ಹೂವು! ಕಾಡಿಗೆ ಹಣ್ಣು ಹೂವುಗಳ ಹುಚ್ಚು ಹಿಡಿದುಹೋಗಿರುವಂತೆ ತೋರುವುದು. ಕಾಡುಮಾವಿನ ಹಣ್ಣು, ನೇರಿಲಹಣ್ಣು, ಸೂಣೆಹಣ್ಣು, ಕಲ್ಲುಸಂಪಗೆ ಹಣ್ಣು, ಕಣಗಿಲುಹಣ್ಣು, ಗೋಳಮಟೆಹಣ್ಣು, ಇಪ್ಪೆಹಣ್ಣು, ಹೆಬ್ಬಲಸಿನಹಣ್ಣು, ಹಲಸಿನಹಣ್ಣು ಇವೇ ಮೊದಲಾದ ಹಣ್ಣುಗಳು ಸೂರೆಹೋಗಿರುತ್ತವೆ. ನೀವು ಒಂದು ಪ್ರಶ್ನೆ ಹಾಕಬಹುದು. ಏನೆಂದರೆ, ಕಾಡಿನ ತುಂಬಾ ಜಂತುಗಳಿದ್ದರೆ ಯಾವ ಯಾವ ಮರಗಳಿಗೆ ಯಾವ ಯಾವ ಜಂತುಗಳು ಯಾವಾಗ ಬರುತ್ತವೆ? ಬೇಟೆಗಾರರಿಗೆ ಈ ಪ್ರಶ್ನೆ ಅಷ್ಟೇನೂ ಗಹನವಾದುದಲ್ಲ. ಎಲ್ಲ ಮಾವಿನ ಮರದ ಹಣ್ಣುಗಳಿಗೂ ಒಂದೇ ತರದ ರುಚಿಯಿರುವುದಿಲ್ಲ. ಆದ್ದರಿಂದ ಪ್ರಾಣಿಗಳು ರುಚಿಯಿರುವ ಹಣ್ಣಿನ ಮರಗಳಿಗೇ ಬರುತ್ತವೆ. ನಾನೇ ಎಷ್ಟೋ ಕಾಡುಮಾವಿನ ಮರಗಳ ಹಣ್ಣುಗಳನ್ನು ತಿಂದು ನೋಡಿದ್ದೇನೆ. ಕೆಲವು ಹುಳಿ ಹೆಚ್ಚು. ಕೆಲವು ಸಿಹಿ ಹೆಚ್ಚು. ಕೆಲವು ಒಗರು. ಕೆಲವು ಸಪ್ಪೆ. ಹಣ್ಣಿನ ರುಚಿಯೊಂದೇ ಅಲ್ಲ. ಮರಗಳಿರುವ ಸ್ಥಾನವನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು. ಸಾಧಾರಣವಾಗಿ ಮೃಗಗಳು ಕಾಡಿನ ತುಂಬಾ ವಾಸ ಮಾಡುವುದಿಲ್ಲ. ಅವುಗಳಿಗೂ ಕೂಡ ನಿಯತಸ್ಥಾನಗಳಿರುತ್ತವೆ; ಹಕ್ಕೆಗಳಿರುತ್ತವೆ. ಹಕ್ಕೆಗಳಿಗೆ ಸಮೀಪವಾಗಿ, ಹಣ್ಣು ರುಚಿಯಾಗಿ, ಸ್ಥಳ ನಿರ್ಜನವಾಗಿ, ಜೀವಿಗಳು ತಿರುಗಾಡುವ ಕಂಡಿಗಳಲ್ಲಿರುವ ಮರಗಳಿಗೆ ಪ್ರಾಣಿಗಳು ಬಂದೇ ಬರುತ್ತವೆ. ಅಂತಹ ಜಾಗಗಳಲ್ಲಿಯೇ ಬೇಟೆಗಾರರು ಮರಸುಕೂರುತ್ತಾರೆ.
ರಂಗಯ್ಯ ಆ ದಿನ ಮರಸಿಗೆ ಹೋದುದು ಹಣ್ಣಿನ ಮರಕ್ಕಲ್ಲ. ಪೈರಿನ ಕಂಪುಗಾಳಿಗೆ ಮೋಹಗೊಂಡು ಪ್ರಾಣಿಗಳು ಬೆಟ್ಟದಿಂದ ಇಳಿದುಬರುವ ಕಂಡಿಯೊಂದನ್ನು ಕಾಯುವುದಕ್ಕೆ. ಅವನು ಮನೆಯಿಂದ ಹೊರಟಾಗ ಆಗಲೆ ಸಾಯಂಕಾಲವಾಗುತ್ತಿತ್ತು. ಕೇಪಿನ ಕೋವಿಯೊಂದನ್ನು ಹೆಗಲ ಮೇಲೆ ಹೇರಿ ಕೊಂಡು, ಕಂಬಳಿಯನ್ನು ಹೊದೆದುಕೊಂಡು, ಎಲೆಯಡಿಕೆ ಚೀಲವನ್ನೂ ಕೋವಿಯ ಚೀಲವನ್ನೂ ಬಗಲಿಗೆ ಸಿಕ್ಕಸಿಕೊಂಡು ಬೆಟ್ಟವೇರಿದನು. ನಾಲ್ಕೈದು ಕಂಡಿಗಳನ್ನು ಪರೀಕ್ಷೆಮಾಡಿ ಕಡೆಗೆ ಒಂದು ಕಡೆ ಮರಸು ಕೂರಲು ನಿರ್ಧರಿಸಿದನು. ಪೊದೆಗಳ ನಡುವೆ, ತಾನು ತಂದ ಕತ್ತಿಯಿಂದ ಕಡಿದು, ಕೂರಲು ಜಾಗ ಮಾಡಿ ಸುತ್ತಲೂ ಹಸುರು ಕೊಂಬೆಗಳನ್ನು ಕಡಿದು ಒಡ್ಡು ಹಾಕಿ ಮರೆಮಾಡಿಕೊಂಡು ಕೂತ. ಕಂಬಳಿಯ ಅರ್ಧಭಾಗವನ್ನು ಸೊಂಟದವರೆಗೂ ಮುಚ್ಚಿದ್ದ. ಸಂಜೆಗೆಂಪು ಮೆಲುಮೆಲನೆ ಜಾರುತ್ತಿತ್ತು. ಬೈಗುಗಪ್ಪು ಇಳಿಯುತ್ತಿತ್ತು. ಹಕ್ಕಿಗಳ ಕೂಗಾಟ ಬರಬರುತ್ತ ಕಡಿಮೆಯಾಗುತ್ತಿತ್ತು. ವನ್ಯಕ್ರಿಮಿಕೀಟಗಳ ಅಸ್ಪಷ್ಟ ಅನಾಹತ ಧ್ವನಿ ವಾಯುಮಂಡಲ ವನ್ನೆಲ್ಲ ಗಂಭೀರವಾಗಿ ತುಂಬಿತ್ತು. ಆದರೂ ಆ ಸದ್ದಿನಿಂದ ವನದ ಮೌನಕ್ಕೆ ಭಂಗಬಂದಂತೆ ತೋರುತ್ತಿರಲಿಲ್ಲ. ಭೀಮಾಕಾರವಾದ ವೃಕ್ಷಗಳು ಸ್ತೂಪಾಕಾರವಾಗಿ ಮೇಲೆದ್ದು ನಿಬಿಡಪರ್ಣವಿತಾನಗಳಿಂದ ಆಕಾಶಮಂಡಲವನ್ನು ಆಚ್ಛಾದಿಸಿದ್ದುವು. ಎಂದಿನಂತೆ ಬನಗುತ್ತಲು ಮುಸುಗಿತ್ತು. ಹೆಮ್ಮರಗಳ ನಡುನಡುವೆ ಕ್ಷುದ್ರ ತರುಗುಲ್ಮ ಲತಾದಿಗಳು ಒಂದನ್ನೊಂದು ಹೆಣೆದುಕೊಂಡಿದ್ದುವು. ಎಲ್ಲಿಯೋ ಒಂದೊಂದು ಎಡೆ ಮಾತ್ರ ಸ್ವಲ್ಪ ಬಿಡುವಿದ್ದಿತು. ಅಂತಹ ಸ್ಥಳಗಳಲ್ಲಿಯೇ ಪ್ರಾಣಿಗಳು ಗುರಿಗೆ ಸಿಕ್ಕಿಬೀಳುವುದು.
ರಂಗಯ್ಯ ಕುಳಿತನು. ಸ್ವಲ್ಪಹೊತ್ತು ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ದಿಕ್ಕುದಿಕ್ಕುಗಳನ್ನು ನೋಡಿದನು. ತರುವಾಯ ಕೋವಿಯನ್ನು ತೊಡೆಯಮೇಲಿಟ್ಟುಕೋಂಡು ಕುಳಿತನು. ಸುತ್ತಲೂ ವೀಣಾ ವಾದ್ಯಧ್ವನಿ ಗೈಯುತ್ತ ಸೊಳ್ಳೆಗಳು ಹಾರಾಡಿ ಕಡಿಯುತ್ತಿದ್ದುವು. ಅವುಗಳನ್ನು ಸದ್ದು ಮಾಡದಂತೆ ಅಟ್ಟುತ್ತ ಕುಳಿತನು. ಮರಸಿಗೆ ಕೂತವರು ಅಲ್ಲಾಡಬಾರದು. ಅಷ್ಟೇ ಏಕೆ, ಗಟ್ಟಿಯಾಗಿ ಉಸಿರಾಡಬಾರದು. ಮೈ ಕೆರೆದುಕೊಂಡರೂ ಕೂಡ ಆ ವನಮೌನದಲ್ಲಿ ಸದ್ದಾಗಿ, ಜೀವಿಗಳು ಎಚ್ಚರಗೊಂಡು ಬಂದ ಹಾದಿಯಿಂದ ಹಿಂತಿರುಗುತ್ತವೆ. ಮೈ ಮೇಲೆ ಕುಳಿತು ರಕ್ತಹೀರುವ ಸೊಳ್ಳೆಗಳನ್ನು ಕೈಯಿಂದ ತಟ್ಟಿದರೆ ಚಪ್ಪಾಳೆ ಹೊಡೆದ ಸದ್ದಾಗುತ್ತದೆ. ಆದ್ದರಿಂದ ಅವುಗಳೇನು ಮಾಡಿದರೂ ಎಷ್ಟು ನೆತ್ತರು ಹೀರಿದರೂ ಒಳ್ಳೆಯ ಸತ್ಯಾಗ್ರಹಿಗಳಂತೆ ‘ಕಂ ಕಂ’ ಎನ್ನದೆ ಕೂತಿರಬೇಕು. ಅಟ್ಟಿದರೆ ಮೆಲ್ಲಗೆ ಕೈ ಅಲ್ಲಾಡಿಸಿ ಅಟ್ಟಬೇಕು. ಮರಸಿಗೆ ಕೂರುವುದೆಂದರೆ ಒಂದು ತಪಸ್ಸೇ ಸರಿ. ಅದನ್ನು ಅನುಭವಿಸಿ ನೋಡಬೇಕು. ಆ ಹಾಳು ನುಸಿಗಳೂ* ಕೂಡ ಅದನ್ನೇ ಸಮಯವೆಂದು ತಿಳಿದು ತಂಡೋಪತಂಡವಾಗಿ ಬಂದು ತಮ್ಮ ರಕ್ತಶೋಷಕ ಕರಾಳ ದಂಷ್ಟ್ರಗಳನ್ನು ಬಲವಾಗಿ ಊರಿ ಫಜೀತಿಪಡಿಸುತ್ತವೆ. ಅವುಗಳಿಗೆ ಯಾರು ತಂತಿಕೊಡುತ್ತಾರೋ ಏನೋ! ಜನರಿಲ್ಲ; ಮಾತಿಲ್ಲ; ಕಾಯುವ ಕೆಲಸವಲ್ಲದೆ ಬೇರೆ ಕೆಲಸವಿಲ್ಲ; ನಿಶ್ಯಬ್ಧ. ಸುತ್ತಲೂ ಹೆಗ್ಗಾಡು ‘ಬೇಕೋ’ ಎನ್ನುತ್ತಿರುತ್ತದೆ; ವನ್ಯ ಕ್ರಿಮಿಕೀಟಗಳ ಮ್ಲಾನಕರವಾದ ವಿಕಟ ನಿರ್ಘೋಷ; ದೀರ್ಘನಿರೀಕ್ಷೆಯ ನಿರ್ವಣ್ಣತೆ; ಇವುಗಳ ಜೊತೆಗೆ ಹಾಳು ನುಸಿಗಳ ಯಮಕಾಟ! ಬಲ್ಲವನೆ ಬಲ್ಲ ಬೆಲ್ಲದ ಸವಿಯ! ಅಂತೂ ಬೆಲ್ಲವನ್ನು ಸವಿಯುತ್ತ ಕುಳಿತಿದ್ದ ರಂಗಯ್ಯ!
ರಂಗಯ್ಯ ಕುಳಿತಿದ್ದ. ಎಷ್ಟು ಹೊತ್ತು ತಾನೆ ಚಲಿಸದೆ ಸುಮ್ಮನೆ ಕುಳಿತಾನು? ಅದರಲ್ಲಿಯೂ ಮೂರು ಹೊತ್ತೂ ಎಲೆಯಡಕೆ ಜಗಿಯುತ್ತಲೇ ಇರುವ ಮಹಾನುಭಾವ ಎಷ್ಟೆಂದು ಸುಮ್ಮನಿದ್ದಾನು? ಅತ್ತ ಇತ್ತ ದೃಷ್ಟಿಸಿ ನೋಡುತ್ತ ಸ್ವಲ್ಪ ಸಮಯ ಕಳೆಯಿತು. ಆಮೇಲೆ ಆಕಳಿಕೆಗೆ ಪ್ರಾರಂಭವಾಯಿತು. ಕಡೆಗೆ ತೊಡೆಯ ಮೇಲೆ ಅಡ್ಡಲಾಗಿ ಮಲಗಿದ್ದ ಕೋವಿಯನ್ನು ಮೆಲ್ಲಗೆ ತೆಗೆದೆತ್ತಿ ನೆಲದ ಮೇಲಿಟ್ಟು, ಬಗಲಿನಿಂದ ಎಲೆಯಡಕೆ ಚೀಲವನ್ನು ತೆಗೆದು ವೀಳ್ಯೆ ಸವಿಯಲು ಪ್ರಾರಂಭಿಸಿದನು. ಕಾಲಹರಣಮಾಡಲು ಎಲೆಯಡಕೆ ಚೀಲವನ್ನು ತೆಗೆದು ವೀಳ್ಯೆ ಸವಿಯಲು ಪ್ರಾರಂಭಿಸಿದನು. ಕಾಲಹರಣಮಾಡಲು ಎಲೆಯಡಕೆ ಬಹಳ ಸಹಾಯಮಾಡುತ್ತದೆ. ಇಷ್ಟಬಂದರೆ ಅದನ್ನು ಒಂದೆರಡು ನಿಮಿಷಗಳಲ್ಲಿ ಪೂರೈಸಿಬಿಡಬಹುದು. ಬೇಕಾದರೆ ಕಾಲುಗಂಟೆ ಅರ್ಧಗಂಟೆಗಳನ್ನು ಸಹ ಕಳೆದುಬಿಡಬಹುದು. ಮಲೆನಾಡಿನಲ್ಲಿ ಬಾಲ್ಯ ಕಳೆದುದಕ್ಕೆ ಎಲೆಯಡಕೆ ಹಾಕಿಕೊಳ್ಳುವುದು ಒಂದು ಚಿಹ್ನೆ. ಎಂದ ಮೇಲೆ ಹೊರತಿಲ್ಲದೆ ದೊಡ್ಡವರೆಲ್ಲ ಎಲೆಯಡಕೆ ಹಾಕಿಕೊಳ್ಳುವರು. ಅದರಲ್ಲಿಯೂ ಮರಸು ಬೇಟೆಗೆ ಹೋಗುವವರಿಗೆ ಏನಾದರೂ ಒಂದು ಚಾಳಿ ಇದ್ದೇ ಇರಬೇಕು: ಎಲೆಯಡಕೆ ಹಾಕಿಕೊಳ್ಳುವವರು ಕೆಲವರು, ನಶ್ಯ ಹಾಕಿಕೊಳ್ಳುವವರು ಕೆಲರು. ಅದರಲ್ಲಿಯೂ ಮಡ್ಡಿ ನಶ್ಯ – ನಮ್ಮ ಕಡೆ ಉಂಡೆನಶ್ಯವನ್ನು ಮಡ್ಡಿ ನಶ್ಯ ಎನ್ನುತ್ತಾರೆ – ಮಡ್ಡಿನಶ್ಯವನ್ನು ಮೂಗಿಗೇರಿಸುವುದರಲ್ಲಿ ಬಹಳ ಹೊತ್ತು ಕಳೆಯಬಹುದು: ಅಂಗೈಗೆ ಸುಣ್ಣ ಹಚ್ಚುವುದು; ಹಚ್ಚಿದ ಸುಣ್ಣವನ್ನು ಬಾಯಲ್ಲಿ ಊದಿ ನೀರು ಅರಿಸುವುದು; ಹಚ್ಚಿದ್ದು ದಪ್ಪವಾಯ್ತೇ ಎಂದು ನೋಡುವುದು; ನಶ್ಯದ ಡಬ್ಬಿ ತೆಗೆಯುವುದು; ನಶ್ಯವನ್ನು ಸಣ್ಣದಾಗಿ ಉಂಡೆ ಕಟ್ಟಿ ಪ್ರಮಾಣ ನಿರ್ಣಯಮಾಡುವುದು; ಅದನ್ನು ಅಂಗೈ ಮೇಲೆ ಹಾಕಿಕೊಂಡು ಅದೊಂದು ಠೀವಿಯಿಂದ ತಿಕ್ಕುವುದು. ಹೀಗೆಲ್ಲ ಒಟ್ಟು, ಮಡ್ಡಿ ನಶ್ಯದಿಂದ ಕಾಲಹನನವನ್ನು ಹೆಚ್ಚಾಗಿ ಮಾಡಬಹುದು. ಆದರೆ ಸಾಧಾರಣವಾಗಿ ಮರಸಿಗೆ ಕೂತಾಗ ನಶ್ಯತಿಕ್ಕುವುದು ಕಡಮೆ. ಏಕೆಂದರೆ, ಒಂದು ವೇಳೆ ಬೇಟೆಗಾರ ಸುಣ್ಣ ಹಚ್ಚಿ, ನಶ್ಯದುಂಡೆ ಕಟ್ಟಿ, ತಿಕ್ಕಲು ಪ್ರಾರಂಭಿಸಿ, ಅರೆದೂರ ಹೋದಾಗಲೆ ಯಾವುದಾದರೊಂದು ಪ್ರಾಣಿ ಓಡುತ್ತ ಬಂದುಬಿಟ್ಟರೆ? ಆದ್ದರಿಂದ ಮನೆಯಲ್ಲಿಯೆ ನಶ್ಯ ತಿಕ್ಕಿ ಚಿಟಿಕೆಕಟ್ಟಿ ತೆಗೆದುಕೊಂಡು ಹೋಗುತ್ತಾರೆ. ನಶ್ಯ ಎಲೆಯಡಕೆಗಳನ್ನು ಮರಸಿಗೆ ಕೂತಾಗ ಉಪಯೋಗಿಸಬಹುದು; ಆದರೆ ಬೀಡಿ ಸಿಗರೇಟು ಮದ್ಯಗಳನ್ನು ಖಂಡಿತ ಉಪಯೋಗಿಸಬಾರದು. ಬೀಡಿ ಸಿಗರೇಟು ಹೊತ್ತಿಸಿದರೆ ಹೊಗೆಯೆದ್ದು, ಪ್ರಾಣಿಗಳಂತಿರಲಿ, ಸೊಳ್ಳೆಗಳು ಕೂಡ ಸಮೀಪಕ್ಕೆ ಬುರುವುದಿಲ್ಲ! ಮದ್ಯಪಾನಮಾಡಿದರೊ? ಗೊತ್ತೇ ಇದೆ!
ಚೀಲದಿಂದ ಹತ್ತೆಂಟು ಅಡಕೆಗಳನ್ನು ತೆಗೆದು ಹಸನಾದುದನ್ನು ನಿಧಾನವಾಗಿ ಆರಿಸಿದ. ಆಯ್ದಮೇಲೆ ಅದನ್ನು ಒಂದು ಸಾರಿ ಪದ್ಧತಿಯಂತೆ ‘ಉಫ್’ ಎಂದು ಮೆಲ್ಲಗೆ ಊದಿ ಬಾಯಿಗೆ ಎಸೆದುಕೊಂಡ. ಆದಷ್ಟು ಪ್ರಯತ್ನದಿಂದ ಸದ್ದಾಗದಂತೆ ಅದನ್ನು ಕಡಿಯತೊಡಗಿದ. ತರುವಾಯ ಎಲೆಗಳನ್ನು ತೆಗೆದು, ಒಂದನ್ನು ವರಿಸಿ, ಅದನ್ನು ಚೆನ್ನಾಗಿ ಹಿಂಗೈಯಿಂದ ನೀವಿ ಒರಸಿ, ಸಂಪ್ರದಾಯದಂತೆ ಶಿರವನ್ನು ತುಂಡುಮಾಡಿ, ಸುಣ್ಣದ ಡಬ್ಬಿಯಿಂದ ಸುಣ್ಣವನ್ನು ತೆಗೆದು ಬಳಿದು, ನಿಧಾನವಾಗಿ ಎಲೆಯನ್ನು ಮಡಿಸಿ, ಆಲೆಯ ಕಣೆಗೆ (ಕಬ್ಬಿನ ಗಾಣಕ್ಕೆ) ಕಬ್ಬನ್ನು ಕೊಡುವಂತೆ ಬಾಯಮೂಲೆಯಿಂದ ಎಲೆಯನ್ನು ಒಳಗೆ ತೂರಿಸಿದ. ಆಮೇಲೆ ಹೊಗೆಸೊಪ್ಪನ್ನು ತೆಗೆದು ಅಂಗೈ ಮೇಲೆ ಸುಣ್ಣಹಚ್ಚಿ ನೀವಲಾರಂಭಿಸಿದ. ಚೆನ್ನಾಗಿ ನೀವಿ ಅದನ್ನು ಕೈಬೆರಳುಗಳಲ್ಲಿ ಚಿಟಿಕೆ ಹಿಡಿದುಕೊಂಡು ಬಾಯಿಗೆ ಹಾಕಿಕೊಳ್ಳಲೋಸುಗ ತಲೆಯನ್ನು ಮೇಲೆತ್ತಿದ. ರಂಗಯ್ಯ ಬೆಚ್ಚಿದನು! ಕಣ್ಣು ಕತ್ತಲೆಗಟ್ಟುವಂತಾಯ್ತು! ಏನನ್ನೋ ಆಲೋಚಿಸುತ್ತ ದಿವಾಸ್ವಪ್ನಸ್ಥನಾದ ಮನುಷ್ಯನ ಮೈಮೇಲೆ ತಕಪಕ ಕುದಿಯುವ ಬಿಸಿನೀರನ್ನು ಹೊಯ್ದಂತಾಯ್ತು! ನೋಡುತ್ತಾನೆ. ತನ್ನೆದುರು – ತಾನು ಕುಳಿತು ಪೊದೆಗೆ ಒಂದೂವರೆ ಮಾರು ದೂರದಲ್ಲಿ, ಕುಳಿತಿದೆ ಒಂದು ಹುಲಿ! ಹೆಬ್ಬಲಿ!!
ರಂಗಯ್ಯ ಎಲೆ ಅಡಕೆ ಹಾಕುವ ಸಂಭ್ರಮದಲ್ಲಿ ಬಾಹ್ಯ ಜಗತ್ತನ್ನೇ ಮರೆತುಬಿಟ್ಟಿದ್ದ. ಆ ಹಾಳು ಹೆಬ್ಬಲಿ, ಕೆಲವು ಅತಿಥಿಗಳಂತೆ, ಹೇಳದೆ ಕೇಳದೆ, ಒಂದಿನಿತು ಸದ್ದನ್ನು ಕೂಡ ಮಾಡದೆ ಅಲ್ಲಿ ಬಂದು ಕುಳಿತದ್ದು ತಲ್ಲೀನವಾಗಿದ್ದ ಅವನ ದೃಷ್ಟಿಗೆ ಬೀಳಲೇ ಇಲ್ಲ. ಮೊದಲೇ ಕಣ್ಣಿಗೆ ಬಿದ್ದಿದ್ದರೆ ಅದನ್ನು ದೂರದಿಂದಲೇ ಸುಡುತಿದ್ದ. ಅವನೇನು ಅಷ್ಟೊಂದು ಅಂಜುಬುರಕನಲ್ಲ. ಎದೆಗಾರ ಬೇಟೆಗಾರ. ಹಿಂದೆ ಹುಲಿಗಳನ್ನು ಹೊಡೆದಿದ್ದ. ವನವರಾಹಗಳನ್ನು ಅಟ್ಟಿಯಟ್ಟಿ ಸುಟ್ಟು ಕೆಡವಿದ್ದ. ಆದರೆ ಆ ಅನಿಷ್ಟ ಪ್ರಾಣಿ ಮೆತ್ತಗೆ ಬಂದು ಹತ್ತಿರ ಕುಳಿತುಬಿಟ್ಟಿತ್ತು! ಅವನಿಗೆ ಇದ್ದಕ್ಕಿದ್ದ ಹಾಗೆ ಲೋಕಗಳೆಲ್ಲ ಮುಳುಗಿ ಹೋದಂತಾಯಿತು. ಕಣ್ಣು ಕೂಡ ಹೆದರಿ ರೆಪ್ಪೆ ಹಾಕಲಿಲ್ಲ. ತಂಬಾಕನ್ನು ಬಾಯಿಗೆ ತಲುಪಿಸುತ್ತಿದ್ದ ಕೈ ಅರ್ಧದಲ್ಲಿಯೆ ನಿಂತು ನಿಷ್ಪಂದವಾಯಿತು. ಬಾಯಿ ಎಲೆಯಡಕೆ ಜಗಿಯುವುದನ್ನು ಹೇಳದೆ ಕೇಳದೆ ನಿಲ್ಲಿಸಿಬಿಟ್ಟಿತು. ಉಸಿರಾಡುವುದು ಮಾತ್ರ ಕಡಮೆಮಾಡಬೇಕೆಂದು ಅವನು ಯತ್ನಿಸಿದಂತೆಲ್ಲ ಪ್ರಬಲವಾಗತೊಡಗಿತು. ಮೈನವಿರು ನಿಮಿರಿ ನಿಂತಿತು. ಮೊದಲು ಕಾಡಿನ ಕುಳಿರ್ಗಾಳಿಯಿಂದ ಚಳಿಯಾಗುತ್ತಿದ್ದ ಅವನಿಗೆ ಈಗ ಸೆಕೆಯಾಗಲಾರಂಭಿಸಿತು. ಹಣೆ ಬೆವರಿ ಹೋಯಿತು. ಅಂಗಿಯ ಒಳಗೆ ನೀರಿನ ಚಿಲುಮೆಗಳು ಉಕ್ಕಿಯುಕ್ಕಿ ಹರಿಯತೊಡಗಿದುವು. ‘ಗೋವಿನ ಕಥೆ’ಯಲ್ಲಿ ಬರುವ “ಬಂದನಾ ಹುಲಿರಾಯನು” ಎಂಬ ಪಂಕ್ತಿಯ ಅರ್ಥ ಅವನಿಗೆ ಚೆನ್ನಾಗಿ ಸ್ಫುರಿಸಿತೆಂದು ತೋರುತ್ತದೆ!
ಇದೇ ಸಮಯ. ಹುಲಿಗಳ ನಡತೆಯ ವಿಚಾರವಾಗಿ ನಿಮಗೆ ಎರಡು ಮಾತು ಹೇಳಿಬಿಡುತ್ತೇನೆ. ಹುಲಿಗಳ ನಡತೆ ನನಗೇನೋ ಅಷ್ಟು ಸಮರ್ಪಕವಾಗಿ ಕಾಣುವುದಿಲ್ಲ. “ಬಾಲಬೋಧೆ” ಯಲ್ಲಿ “ಎಲೆ ಬೆಕ್ಕೆ ರೂಪಿ ನಿಂದಲೆ ಹುಲಿ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ” ಎಂಬ ಪದ್ಯವನ್ನು ನೀವೆಲ್ಲ ಓದಿರಬೇಕು. ನನಗೇನೋ ಹೀಗೆಂದು ತೋರುತ್ತದೆ. ಬೆಕ್ಕು ಹೆಮ್ಮೆಪಡುವಷ್ಟು ಶ್ರೇಷ್ಠವಾದುದಲ್ಲ ಹುಲಿಯ ಜಾತಿ. ಸಿಂಹದಂತಹ ದೊಡ್ಡ ದೇಹದ ಹುಲಿಯೊಳಗೆ ಇರುವುದು ಬೆಕ್ಕಿನಂತಹ ಕ್ಷುದ್ರ ಪ್ರಾಣಿಯ ಹೀನಾತ್ಮ. ವ್ಯಕ್ತಿತ್ವಕ್ಕೆ ತಕ್ಕ ಆತ್ಮಗೌರವ ಬೇಡವೇ? ವೇಷವನ್ನು ನೋಡಿದರೆ ದೊಡ್ಡದೊಡ್ಡ ಪಟ್ಟೆನಾಮದ ವನಾಚಾರ್ಯ! ಆಚಾರವನ್ನು ನೋಡಿದರೆ ಅತಿಹೀನ. ಬರಿಯ ಕುಹಕ, ಠಕ್ಕು, ಠೌಳಿ, ಮೋಸ. ಕಳ್ಳರು ಕೂಡ ನಾಚಿಕೆಪಟ್ಟುಕೊಳ್ಳುವಂತಹ ಕೀಳು ನಡತೆ. ನನಗೇನೋ ಖಂಡಿತ ಸಮರ್ಪಕವಾಗಿಲ್ಲ ಹುಲಿಗಳ ನಡತೆ. ಹುಟ್ಟಿಸಿದ ದೇವರಿಗೂ ಅವನಮಾನಕರವೆಂದೇ ಹೇಳಬಹುದು. ಅವು ಮಲೆನಾಡಿನಲ್ಲಿ ಮಾಡುವ ಕಳ್ಳತನವನ್ನೂ ಮೋಸವನ್ನೂ ಅನ್ಯಾಯವನ್ನೂ ಕುರಿತು ನಿಮಗೆ ನಾನು ಹೇಳಿದರೆ ಆಗ ಗೊತ್ತಾಗುವುದು. ನಾನು ಹೇಳುವ ಮಾತು ವೇದವಾಕ್ಯವೆಂದು. ಅವುಗಳನ್ನೆಲ್ಲ ಕುರಿತು ಇನ್ನಾವಾಗಲಾದರೂ ಸಮಯದೊರೆತಾಗ ಉಪನ್ಯಾಸಮಾಡುವೆನು. ಈಗ ಸದ್ಯಕ್ಕೆ ಅವುಗಳ ಮೆಲ್ಲಡಿಗಳ ವಿಚಾರ ಹೇಳುತ್ತೇನೆ. ಬೇಸಗೆಯಲ್ಲಿ ಕಾಡಿನ ನಡುವೆ ಯಾವ ಪ್ರಾಣಿ ತಿರುಗಾಡಿದರೂ ಸದ್ದಾಗದೆ ಇರುವುದಿಲ್ಲ. ಏಕೆಂದರೆ ಚೆನ್ನಾಗಿ ಒಣಗಿ ಗರಿಗರಿ ಎನ್ನುವ ತರಗೆಲೆಗಳು ಸಾಂದ್ರವಾಗಿ ಬಿದ್ದಿರುತ್ತವೆ. ಗಾಳಿ ನಡೆದರೂ ಕೂಡ ಸದ್ದಾಗುವುದು. ಹಲ್ಲಿ ಹರಿದರೂ ಕೂಡ ಸದ್ದಾಗುವುದು. ಇನ್ನು ಹಂದಿ, ಕಣೆಹಂದಿ, ಮಿಗ, ಬರ್ಕ, ಮುಂಗುಸಿ, ಕಬ್ಬೆಕ್ಕು, ಕಾಡುಕುರಿ, ಸಾರಗ, ಕಾಡುಕೋಳಿ, ಚಿಪ್ಪಿನಹಂದಿ, ಕಾಡುಕೋಣ ಇವುಗಳು ಬಂದರಂತೂ ಹೇಳುವುದೇನು! ಎರಡು ಫರ್ಲಾಂಗು ದೂರದಿಂದಲೆ ಬೇಟೆಗಾರನಿಗೆ ವರ್ತಮಾನ ಸಿಕ್ಕುತ್ತದೆ. ಆದರೆ ಈ ಹಾಳು ಹುಲಿಗಳು ಮಾತ್ರ ಒಂದಿನಿತು ಸದ್ದನ್ನೂ ಮಾಡದೆ ಸಂಚರಿಸಬಲ್ಲವು. ತಮ್ಮ ನಖಗಳನ್ನು ಮೇಲಕ್ಕೆ ಸೇದಿಕೊಂಡು ಅಂಗಾಲನ್ನು ಬೂರುಗದ ಹತ್ತಿಯ ತಲೆದಿಂಬಿನಂತೆ ಮಾಡಿಕೊಂಡು ತರಗೆಲೆಗಳಿಗೆ ಮೆಲ್ಲಗೆ ಮುತ್ತು ಕೊಡುತ್ತ ಸಂಚಾರ ಮಾಡುತ್ತವೆ. ಇದನ್ನು ನೋಡಿ ತಿಳಿಯದ ಕೆಲವು ಬೇಟೆಗಾರರು ಹುಲಿಗಳು, ದೇವತೆಗಳಂತೆ, ನೆಲದ ಮೇಲೆ ನಡೆಯುವುದೇ ಇಲ್ಲ ಎಂದು ಸಾಧಿಸುತ್ತಾರೆ. ಹುಲಿ ತನ್ನ ಮತ್ತೆಗಾಲನ್ನು ‘ಧಪ್ ಧಪ್’ ಎಂದು ನಿಧಾನವಾಗಿ ಇಡುತ್ತ ಬಂದಿತೆಂದರೆ ಕೇಳುವುದಕ್ಕೆ ನೂರು ಕಿವಿಗಳಿದ್ದರೂ ಸಾಲದು. ಹೀಗಿರುವಾಗ ಅನ್ಯಮನಸ್ಯರಾಗಿ ಮೇಯುವ ದನಕರುಗಳು ಹುಲಿರಾಯನ ಆಗಮನವನ್ನು ತಿಳಿಯುವ ಬಗೆ ಹೇಗೆ? ತತ್ಪರತೆಯಿಂದ ಎಲೆಯಡಕೆ ಹಾಕುತ್ತ ಕುಳಿತ ರಂಗಯ್ಯನಂತಹ ಬೇಟೆಗಾರರು ಅರಣ್ಯಾಚಾರ್ಯನ ಆಗಮನವನ್ನು ಅರಿಯುವುದೆಂತು?
ಅಂತೂ ರಂಗಯ್ಯನ ಮುಂದೆ ಹೆಬ್ಬುಲಿ ಕುಳಿತಿತ್ತು. ರಂಗಯ್ಯ ಎಲ್ಲಿ ಹುಲಿಯ ಗಮನ ತನ್ನ ಮೇಲೆ ಬೀಳುವುದೋ ಎಂದು ಹೆದರಿ ಸೆಡೆತುಕೊಂಡು ನೋಡಿದ. ದೊಡ್ಡ ಹೆಬ್ಬುಲಿ. ಅದಕ್ಕೂ ತನಗೂ ಒಂದೇ ಮಾರು! ಅಥವಾ ಒಂದೂವರೆ ಮಾರು! ಮುಂದಿನ ಕಾಲುಗಳೆರಡನ್ನು ನೆಲದ ಮೇಲೆ ನೇರವಾಗಿ ಊರಿಕೊಂಡು, ನೀಳವಾದ ಬಾಲವನ್ನು ಗಾಳಿಯಲ್ಲಿ ಆಡಿಸುತ್ತ, ಭಯಂಕರವಾದ ಮೀಸೆಗಳನ್ನು ಅತ್ತಿತ್ತ ಕುಣಿಸುತ್ತ, ಮಿಂಚಿನ ಕಣ್ಣುಗಳನ್ನು ಗುಡ್ಡೆಗಳಲ್ಲಿ ಹೊರಳಿಸುತ್ತ, ಉಗ್ರಕರಾಳವದನವನ್ನು ಒಂದೊಂದು ಸಾರಿ ಅತ್ತಿತ್ತ ತಿರುಗಿಸಿ ವನಪ್ರಾಂತವನ್ನು ಧೀರವಾಗಿ ಪರೀಕ್ಷಿಸುತ್ತ ಸರಿಯಾದ ಆಳಿನ ಎದೆಯೆತ್ತರ ಕೂತಿದೆ! ಕೂತಿದೆ!! ನಿಂತರೇನು ಗತಿ?
ಪಾಪ, ಎಂತಹ ಬೇಟೆಗಾರನಾದರೂ ಅಂತಹ ಸನ್ನಿವೇಶದಲ್ಲಿ ಏನು ಮಾಡುತ್ತಾನೆ? ಹುಲಿ ಸ್ವಲ್ಪವಾದರೂ ದೂರವಾಗಿದ್ದರೆ ಸುಡಬಹುದು. ಅದರಲ್ಲಿಯೂ ರಂಗಯ್ಯನ ಕೋವಿ ಕೇಪಿನ ಕೋವಿ. ಒಂದೂವರೆ ಮಾರಿಗಿಂತ ಹೆಚ್ಚೇ ಉದ್ದವಿದೆಯೋ ಏನೋ! ಹುಲಿಗೆ ಅವನು ಕೂತದ್ದು ಗೊತ್ತಾದರೆ ಗತಿಯೇನು? ಮುಂದಿನ ಪಾದವೊಂದನ್ನು ನಿರ್ಲಕ್ಷ್ಯವಾಗಿ ಬೀಸಿದರೂ ಸಾಕು, ರಂಗಯ್ಯನ ಕರುಳು, ಬಾಲ್ಯದಿಂದಲೂ ಮಮತೆಯಿಂದ ಸಾಕಿ ಸಲಹಿದ ಕರುಳು, ಪೊಲೀಸಿನವರ ಯಮಪೀಡನೆಗೆ ಸಿಕ್ಕಿದ ಕಳ್ಳನ ಕದ್ದ ಗಂಟಿನಂತೆ ಈಚೆಗೆ ಬರುತ್ತದೆ. ಕರುಳಿನ ಜೊತೆಗೆ ಕುಂಬಳಕಾಯಿಯಷ್ಟು ದಪ್ಪವಾಗಿರುವ ಅವನ ಜ್ವರದ ಗಡ್ಡೆಯಂತೂ, ಸಿಂಹಗರ್ಜನೆಗೆ ಬೆದರಿದ ಗರ್ಭಿಣಿ ಜಿಂಕೆಯ ಬಸಿರಿನಿಂದ ಅರೆಬೆಳೆದ ಭ್ರೂಣ ಜಗುಳಿ ಬೀಳುವಂತೆ, ಹೊರಬೀಳುತ್ತದೆ. ಕಾಸೂ ಖರ್ಚಿಲ್ಲದೆ ಶಸ್ತ್ರ ಚಿಕಿತ್ಸೆಯಾಗುತ್ತದೆ. ಅದರಲ್ಲಿಯೂ ಹೆಬ್ಬುಲಿಯೊಡನೆ ಇತರ ಪ್ರಾಣಿಗಳ ಮೇಲೆ ಕೆಚ್ಚು ತೋರಿಸುವಂತೆ ತೋರಿಸಲಾಗುವುದಿಲ್ಲ. ರಂಗಯ್ಯ ವಾಘ್ರ ನಖಾಘಾತದಿಂದ ಆದ ಅನಾಹುತಗಳನ್ನು ಹಿಂದೆ ಕಂಡುಕೇಳಿದ್ದ. ಒಂದು ಉಗುರೇ ಸಾಕು ಮನುಷ್ಯನ ಎದೆ ಹೊಟ್ಟೆಗಳನ್ನು ಸೀಳುವುದಕ್ಕೆ! ಇಪ್ಪುತ್ತು ಉಗುರುಗಳಿವೆ! ಅವುಗಳ ಸಹಾಯಕ್ಕೆ ಆ ಹಾಳು ಕರಾಳದಂಷ್ಟ್ರಗಳು ಬೇರೆ! ಹೆಸರು ನೋಡಿದರೆ “ಹುಲಿ!” ಎಷ್ಟು ಅಸಮಂಜಸ! ಅಷ್ಟು ದೊಡ್ಡ ಭಯಂಕರವಾದ ಪ್ರಾಣಿಗೆ ಕನ್ನಡದಲ್ಲಿ ಎಷ್ಟು ನಯವಾದ ಪುಟ್ಟ ಹೆಸರು! ಸಂಸ್ಕೃತದ ಹೆಸರೇ ಸರಿಯಾಗಿದೆ. “ವ್ಯಾಘ್ರ!” ಶಬ್ದವು ಕೇಳುವುದಕ್ಕೂ ನೋಡುವುದಕ್ಕೂ ಪ್ರಾಣಿಯಂತೆಯೇ ಕರ್ಕಶಭಯಾನಕವಾಗಿದೆ.
ರಂಗಯ್ಯನ ಬಳಿ ಇದ್ದದ್ದು ಒಂಟಿನಳಿಗೆ ಕೇಪಿನ ಕೋವಿ. ಕೇಪಿನ ಕೋವಿಯೇ ಫಜೀತಿ! ಒಂದು ಈಡು ಹೊಡೆದರೆ ಮತ್ತೊಂದು ಈಡು ತುಂಬಬೇಕಾದರೆ ಐದುನಿಮಿಷವಾದರೂ ಬೇಕೇ ಬೇಕು. ತೋಟಾಕೋವಿಯಾದರೋ ಸಿದ್ಧವಾಗಿರುವ ತೋಟಾಗಳು ಜೇಬಿನಲ್ಲಿ ಇರುತ್ತವೆ. ತೋಟಾ ತುಂಬುವುದೊಂದೇ ತಡ, ಎಷ್ಟು ಗುಂಡುಗಳನ್ನು ಬೇಕಾದರೂ ಸಿಡಿಯಬಹುದು. ಅದರಲ್ಲಿಯೂ ಒಂದು ನಳಿಗೆ ಕೇಪಿನ ಕೋವಿ! ಜೋಡುನಳಿಗೆ ಯಾಗಿದ್ದರೆ ಎರಡು ಈಡುಗಳನ್ನಾದರೂ ಹಾರಿಸಬಹುದು! ಒಂದು ತಪ್ಪಿದರೆ ಮತ್ತೊಂದು! ಅಥವಾ ಒಂದು ಗುಂಡಿಗೆ ಅರೆಪೆಟ್ಟಾದರೆ ಮತ್ತೊಂದು ಗುಂಡು ಹೊಡೆದು ಕೊಲ್ಲಬಹುದು. ಅಲ್ಲದೆ ಹುಲಿಯನ್ನು ಅಷ್ಟು ಸಮೀಪ ಹೊಡೆಯುವುದು ಕ್ಷೇಮಕರವಲ್ಲ. ನೀವು ಯಾರಾದರೂ ರಂಗಯ್ಯ ಹೇಡಿ ಎಂದು ಹೇಳಿದರೆ ನನಗೆ ಕೋಪ ಬರುತ್ತದೆ. ನಾನು ಬಲ್ಲೆ ಅದರ ಸುಖಾಸುಖಗಳನ್ನು. ಅಂತಹ ಸಮಯದಲ್ಲಿ ಭಗವದ್ಗೀತೆಯ “ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ” ಎಂಬ ಶ್ಲೋಕವನ್ನು ಎಷ್ಟುಸಾರಿ ಹೇಳಿಕೊಂಡರೂ ಪ್ರಯೋಜನವಿಲ್ಲ. ರಂಗಯ್ಯನ. ಮುಂದಿದ್ದುದು ಊಹನೆಯ ಶಸ್ತ್ರಗಳಲ್ಲ; ತತ್ತ್ವ ಶಾಸ್ತ್ರದ ಪಾವಕನಲ್ಲ. ಅರಣ್ಯದ ಶನಿಯಾದ ವ್ಯಾಘ್ರದ ಸಾಕ್ಷಾತ್ ನಖಗಳು! ಗೀತೆಯು “ನೈನಂ ಛಿಂಧಂತಿ” ಎಂದು ಹೇಳಿದ್ದರೂ ಕೂಡ ರಂಗಯ್ಯನಿಗೆ ಗೊತ್ತು ಅದು ಸುಳ್ಳು ಎಂದು. ವ್ಯಾಘ್ರ ತನ್ನ ಕ್ರೂರ ನಖಾನ್ವಿತ ಪಾದಗಳನ್ನು ಬೀಸಿದ್ದರೆ ಸಾಕು, ಭಗವದ್ಗೀತೆಯೆಲ್ಲಾ ಹರಿದು ಹರಿದು ಚೂರುಚೂರಾಗಿ ಕರಳು, ರಕ್ತ, ಜ್ವರಗಡ್ಡೆ, ಹೃದಯ, ಶ್ವಾಸಕೋಶ, ಆರೋಗ್ಯಶಾಸ್ತ್ರ, ಶಿವ ಮಾಡಿದ ಸೃಷ್ಟಿ ಎಲ್ಲವೂ, ಸ್ವಲ್ಪವೂ ದಾಕ್ಷಿಣ್ಯವಿಲ್ಲದೆ ಹೊರಗೆ ಹಾರುತ್ತಿದ್ದುವು! ಆದ್ದರಿಂದ ರಂಗಯ್ಯ ಎಷ್ಟು ಎದೆ ಗಟ್ಟಿಮಾಡಿಕೊಂಡರೂ ದೇಹ ಮೆಲ್ಲಗೆ ಕಂಪಿಸಲು ಪ್ರಾರಂಭವಾಯಿತು. ಅದರಲ್ಲಿಯೂ ಹುಲಿ ಒಂದು ಸಾರಿ ಆಕಳಿಸಿ, ಕಣ್ಣು ಮೀಸೆಗಳನ್ನು ತಿರುಗಿಸಿ, ಭುಜಪ್ರದೇಶವನ್ನು ನೆಕ್ಕಿಕೊಂಡಿತು. ಆಗ ಅದರ ಪಾಳ್ಮೊಗದ ಗುಟ್ಟು ರಂಗಯ್ಯನಿಗೆ ಸ್ವಲ್ಪ ಗೊತ್ತಾಯಿತು. ಏನು ದಂತಪಂಕ್ತಿಗಳು! ಎಂತಹ ನಾಲಗೆ! ಎಷ್ಟು ಉದ್ದ ಆ ಕೋರೆ ದಾಡೆಗಳು! ಯಶೋಧೆ ಕೃಷ್ಣನ ಬಾಯಲ್ಲಿ ಬ್ರಹ್ಮಾಂಡಗಳನ್ನು ಕಂಡು ಭಯಗೊಂಡುದು ಸುಳ್ಳೋ ನಿಜವೋ ನನಗೆ ಗೊತ್ತಿಲ್ಲ. ರಂಗಯ್ಯನಂತೂ ಹುಲಿಯ ಬಾಯೊಳಗೆ ಪಾತಾಳ, ನರಕ, ಮೃತ್ಯು ಎಲ್ಲವನ್ನೂ ಒಂದೇ ತಡವೆ ಕಂಡು ನಡುಗತೊಡಗಿದನು. ನಡುಕ ಹೆಚ್ಚಿತು. ನಡುಗಿದರೆ ಎಲ್ಲಿ ಹುಲಿಗೆ ತಾನಡಗಿರುವುದು ಗೊತ್ತಾಗುವುದೋ ಏನೋ ಎಂದು ನಡುಕವನ್ನು ತಡೆಯಲು ಬಹಳ ಪ್ರಯತ್ನಪಟ್ಟನು. ಸ್ಪಂದನ ಇನ್ನೂ ಹೆಚ್ಚಾಗಿ ಹೋಯಿತು. ಅರಳಿಯ ಎಲೆಗಳು ಗಾಳಿಗೆ ಕಂಪಿಸುವಂತೆ ಅವನ ದೇಹ ಸಮಸ್ತವೂ ಗಡಗಡ ನಡುಗತೊಡಗಿತು. ಮೆದುಳಿನಲ್ಲಿ ವಿಪ್ಲವಕ್ಕಾರಂಭ ವಾಯಿತು. ಕಣ್ಣು ಕಿವಿಯಾಯಿತು; ಮೂಗು ಬಾಯಿಯಾಗಿ, ಬಾಯಿ ಮೂಗಾಗಿ, ಕೂದಲು ತಲೆಯೊಳಗೆ ಇಳಿಯ ತೊಡಗಿದುವುದ, ಹೆದರಿಕೆಯಿಂದ! ತಲೆಯ ಕೂದಲೆ ಹೆದರಿ ಬುರುಡೆಯೊಳಗೆ ಹುದುಗ ಹೊರಟರೆ ರಂಗಯ್ಯ ಏನು ಮಾಡಿಯಾನು? ಇಷ್ಟರಲ್ಲಿ ಉಸಿರು ಮೂಗು ಬಾಯಿಗಳಲ್ಲಿ ತಿದಿಯೊತ್ತುತ್ತಿತ್ತು. ಇಷ್ಟಾದರೂ ನಾನು ರಂಗಯ್ಯ ಎದೆಗಾರನೆಂದೇ ಸಾರಿಸಾರಿ ಹೇಳುತ್ತೇನೆ. ಏಕೆಂದರೆ ನಾವು ಯಾರಾದರೂ ಆಗಿದ್ದರೆ, ಸತ್ತು ಆಗಲೇ ಶತಮಾನವಾಗಿರುತ್ತಿತ್ತು.
ರಂಗಯ್ಯ ಜೀವದ ಮೇಲೆ ಆಸೆಬಿಟ್ಟನು. ನೆಲದ ಮೇಲಿದ್ದ ಕೋವಿಯನ್ನು ಎತ್ತಿಕೊಳ್ಳುವುದಕ್ಕೂ ಅವನಿಗೆ ಚೈತನ್ಯವಿರಲಿಲ್ಲ. ವಾಘ್ರವೇನೋ ಆಕಳಿಸುತ್ತ ಮೈ ನೆಕ್ಕಿಕೊಳ್ಳುತ್ತ ನಿರ್ದಾಕ್ಷಿಣ್ಯವಾಗಿ ಕುಳಿತಿತ್ತು. ರಂಗಯ್ಯ ಹರಿಕಥೆಗಳಲ್ಲಿ ಕೇಳಿದ್ದನು, ಸಾಯುವ ಹೊತ್ತು ಬಾರದೆ ಯಾರೂ ಸಾಯುವುದಿಲ್ಲ ಎಂದು. ಹುಲಿ ಆ ಹೊತ್ತನ್ನೇ ಕಾಯುತ್ತಿದೆ ಎಂದು ನಿರ್ಧರಿಸಿದ. ಅಂತೂ, ನಾನು ಸಾಯುತ್ತೇನೆ! ಈಗಲೋ ಆಗಲೋ ಅಷ್ಟೆ! ಸಾಯುವುದೇನೋ ನಿಶ್ಚಯ! ಹೀಗೆಂದು ಚಿಂತಿಸುತ್ತಿದ್ದ ಹಾಗೆಯೇ ಕಣ್ಣು ಹನಿಗಣ್ಣಾಯಿತು. ಎರಡು ಅಶ್ರು ಕೆನ್ನೆಯ ಮೇಲುರುಳಿ ತೊಡೆಯ ಮೇಲಿದ್ದ ಕಂಬಳಿಯ ಮೇಲೆ ಬಿದ್ದು ಬತ್ತಿ ಹೋದುವು. ಹುಲಿರಾಯ ಆಗ ಅವನನ್ನು ನೋಡಿದ್ದರೆ ಮರುಕ ದಿಂದ ತೊಲಗುತ್ತಿದ್ದನೆಂದು ತೋರುತ್ತದೆ. ಆದರೆ ಆ ಮಹಾನುಭಾವನ ಧೀರಪ್ರ ಶಾಂತದೃಷ್ಟಿಗೆ ಈ ಬಡಪಾಯಿಯ ಗೋಳು ಬೀಳಲೇ ಇಲ್ಲ. ನಸುಗಪ್ಪು ಬಾನಿನಿಂದಿಳಿಯುತ್ತಿತ್ತು.
ರಂಗಯ್ಯ ಹೆಂಡಿರು ಮಕ್ಕಳನ್ನು ನೆನೆದ. ಆಸ್ತಿಪಾಸ್ತಿಗಳನ್ನು ನೆನೆದ. ನೆಂಟರಿಷ್ಟರನ್ನು ನೆರೆದ. ಮನೆಮಾರುಗಳನ್ನು ನೆನೆದ. ಕಣ್ಣೀರು ಧಾರೆಧಾರೆಯಾಗಿ ಹರಿದು ನೆನೆದುಹೋದ. ತಾನು ಬೆಳೆದಿದ್ದ ತರಕಾರಿಯ ತೋಟ, ಬೆಳೆದು ನಿಂತ ಗದ್ದೆಗಳು, ಸಾಕಿ ಸಲಹಿದ ದನಕರುಗಳು, ಮೊನ್ನೆ ತಾನೇ ಸಾಲಮಾಡಿ ಕೊಂಡುಕೊಂಡಿದ್ದ ಅಡಕೆತೋಟ ಎಲ್ಲವೂ ಚಿತ್ತಭಿತ್ತಿಯಲ್ಲಿ ಚಲನಚಿತ್ರಗಳಂತೆ ಮಿಂಚಿದುವು. ಇಷ್ಟರಲ್ಲಿ ಹುಲಿ ಒಂದು ಸಾರಿ ಮೆಲ್ಲನೆ ಗರ್ಜಿಸಿತು. ರಂಗಯ್ಯ ತನಗೆ ಸಾಯುವ ಹೊತ್ತು ಬಂತೆಂದು ತಿಳಿದ. ಹುಲಿ ಮೈಮೇಲೆ ಹಾರುವುದಕ್ಕೆ ಪೀಠಿಕಾಪ್ರಾಯವಾಗಿ “ಮರಣಕ್ಕೆ ಸಿದ್ಧನಾಗು” ಎಂದು ಎಚ್ಚರಿಕೆ ಹೇಳಲು ಗರ್ಜಿಸಿತೆಂದು ತಿಳಿದುಕೊಂಡ. ಗರ್ಜನೆ ಮೌನವಾಗುತ್ತಿದ್ದ ಕಾಡಿನಲ್ಲಿ ಧುಮುಕಿ, ಅನುರಣನವಾಗಿ ದೂರದಲ್ಲಿ ಮುಳುಗಿಹೋಯಿತು. ಇರುಳಿನ ಕರಿನೆರಳುಗಳು ಹಿಂಡು ಹಿಂಡಾಗಿ, ಮುಂದೆ ಮುಂದೆಯಾಗಿ, ಒಂದರ ಮೇಲೊಂದು ಇಳಿದು ಅಡವಿಯನ್ನು ಮುತ್ತತೊಡಗಿದುವು. ವ್ಯಾಘ್ರದೇಹ ಮಬ್ಬು ಮಬ್ಬಾಗುತ್ತ ಬಂದ ಹಾಗೆಲ್ಲ ಅದರ ಅಗ್ನಿ ತುಲ್ಯನೇತ್ರಗಳು ಕೆಂಗೆಂಡಗಳಾಗುತ್ತ ಬಂದುವು. ರಂಗಯ್ಯ ನಡನಡ ನಡುಗುತ್ತಿದ್ದ. ಬೆವರು ಎಡೆಬಿಡದೆ ಸುರಿಯುತ್ತಿತ್ತು. ಬಾಯಲಿದ್ದ ಎಲೆಯಡಿಕೆ ಸದ್ದುಮಾಡದೆ ಸ್ವಲ್ಪವೂ ಚಲಿಸದೆ ಹೆದರಿ ಹೆದರಿ ದವಡೆಮೂಲೆಯನ್ನು ಸೇರಿತ್ತು. ರಂಗಯ್ಯ ತನ್ನ ತೋಟದಾಚೆಯ ಭೂತವನ್ನು ನೆನೆದು ಬೇಡಿಕೊಂಡ. ಬೇಟೆದೇವರಿಗೆ ಹಣ್ಣುಕಾಯಿ ಕೊಡುವೆನೆಂದು ಹೇಳಿಕೊಂಡ. ಪಂಜರಳ್ಳಿಗೆ ಪೂಜೆ ಮಾಡಿ ಕೋಳಿಬಲಿ ಕೊಡುವೆನೆಂದು ಹರಕೆ ಹೊತ್ತ. ಜಕ್ಕಿಣಿಗೆ ಹೆಚ್ಚಾಗಿ ಎಡೆಯಿಕ್ಕುವಂತೆ ಪ್ರಲೋಭನಗೊಳಿಸಿದ. ದ್ರಾವಿಡ ದೆವ್ವಗಳೆಲ್ಲ ಪೂರೈಸಿದ ಮೇಲೆ ಆರ್ಯದೇವತೆಗಳಿಗೆ ಹರಕೆ ಹೊತ್ತ. ಮನೆದೇವರಾದ ತಿರುಪತಿ ವೆಂಕಟರಮಣನನ್ನು ಸಂಕಟಕಾಲದಲ್ಲಿ ಪ್ರಾರ್ಥಿಸಿದ. ಧರ್ಮಸ್ಥಳಕ್ಕೆ ತನ್ನಷ್ಟುದ್ದ ಚಿನ್ನದ ತಂತಿ ಮಾಡಿಸಿಕೊಡುವಂತೆ ಪ್ರತಿಜ್ಞೆಮಾಡಿದ. ಅವನ ಅಲ್ಪಬುದ್ಧಿಗೆ ತಿಳಿದ ದೇವತೆಗಳನ್ನೆಲ್ಲ ಅಂಗಲಾಚಿ ಬೇಡಿಕೊಂಡ. ಆದರೂ ಹುಲಿರಾಯ ಇಟ್ಟ ಹೆಜ್ಜೆಯನ್ನು ಕೀಳಲಿಲ್ಲ.
ಕಡೆಯಲ್ಲಿ ಹುಲಿಗಳು ಮನುಷ್ಯರ ಸದ್ದನ್ನು ಕೇಳಿದರೆ ಓಡಿಹೋಗುತ್ತವೆ ಎಂಬುದನ್ನು ತಿಳಿದಿದ್ದ ಅವನು ಏನಾದರೂ ಸದ್ದು ಮಾಡಲು ಧೈರ್ಯಮಾಡಿದ. ಮೆಲ್ಲಗೆ ಕೆಮ್ಮಿದ. ಹುಲಿಗೆ ಕೇಳಿಸಿದಂತೆ ತೋರಲಿಲ್ಲ. ಸ್ವಲ್ಪ ಗಟ್ಟಿಯಾಗಿ ಕೆಮ್ಮಿದ. ಅದೂ ಕೂಡ ಹುಲಿಗೆ ಕೇಳಿಸಿದಂತೆ ತೋರಲಿಲ್ಲ. ಅದರ ಕಿವಿ ಸ್ವಲ್ಪ ಮಂದವಾಗಿರಬಹುದೆಂದು ತಿಳಿದು ಮೆಲ್ಲಗೆ “ಹೋ!!” ಎಂದು ಕೂಗಿದ. ಅದೂ ಕೇಳಿಸಲಿಲ್ಲ. ಆಮೇಲೆ ಇನ್ನೂ ಸ್ವಲ್ಪ ಗಟ್ಟಿಯಾಗಿ ದೂರದಲ್ಲಿರುವ ಯಾರನ್ನೋ ಕರೆಯುವಂತೆ “ಹೋ!!” ಎಂದು ಕೂಗಿದ. ಅದೂ ಹುಲಿಗೆ ಕೇಳಿಸಿದಂತೆ ತೋರಲಿಲ್ಲ. ಹಾಳು ಪ್ರಾಣಿ ಕಿವುಡೋ ಏನೋ? ಕಿವಿಡಾಗಿರಬಹುದು! ಯಾಕಾಗಬಾರದು? ಹುಲಿಗೆ ವಾಸನೆಯೇನೋ ಇತರ ಕಾಡು ಪ್ರಾಣಿಗಳಿಗೆ ಸಿಕ್ಕಿದಂತೆ ಸಿಕ್ಕುವುದಿಲ್ಲ ಎಂದು ಹೇಳುತ್ತಾರೆ. ಇರಬಹುದು. ಆದರೆ ಕಿವಿಗೇನು ಕೇಡು? ಇಷ್ಟಾದಮೇಲೆ ರಂಗಯ್ಯನ ಎದೆಯಲ್ಲಿ ನಿರಾಶೆಯಿಂದ ನಿರ್ಲಕ್ಷ್ಯತೆ ಹುಟ್ಟಿತು; ನಿರ್ಲಕ್ಷ್ಯತೆಯಿಂದ ಮೊಂಡಕೆಚ್ಚು ಜನಿಸಿತು. ಆದುದಾಗಲಿ ಎಂದು ಆಲೋಚಿಸಿ ಗಟ್ಟಿಯಾಗಿ “ಹೋ”!! ಎಂದು ಕೂಗಿಕೊಳ್ಳಲಾರಂಭಿಸಿದನು. ಅವನ ಕೂಗು ಕಾಡಿನಲ್ಲೆಲ್ಲ ತೊಳಲಿ ತೊಳಲಿ ಕತ್ತಲೆಯಲ್ಲಿ ನುಗ್ಗಿನುಗ್ಗಿ ಬೆಟ್ಟದ ತಪ್ಪಲಿನ ಕಣಿವೆಯಲ್ಲಿದ್ದ ಅವನ ಮನೆಗೂ ಮುಟ್ಟಿತು. ಆದರೆ ಮಹಾನುಭಾವ ಹುಲಿರಾಯನ ಕಿವಿಗೆ ಮುಟ್ಟಿದಂತೆ ತೋರಲಿಲ್ಲ. ಅಂತೂ ಹುಲಿ ರಂಗಯ್ಯನ ಕಡೆಗೆ ತಿರುಗಿ ಕುಳಿತುಕೊಂಡಿತು ಎಂಬುದು ಅದರ ತಳತಳಿಸುವ ಕಣ್ಣುಗಳಿಂದ ಗೊತ್ತಾಯಿತು. ಆದರೂ ಅದು ತಾನಿದ್ದ ಸ್ಥಳದಿಂದ ಕದಲಲಿಲ್ಲ. ರಂಗಯ್ಯನ ಮೇಲೂ ಬೀಳಲಿಲ್ಲ.
ಕಾಡುಪ್ರಾಣಿಗಳು ಸುಮ್ಮಸುಮ್ಮನೆ ಮನುಷ್ಯರ ಮೇಲೆ ಬೀಳುವುದಿಲ್ಲ. ಹುಲಿ ಬಹುಶಃ ಆಗತಾನೆ ಭೋಜನವನ್ನು ಪೂರೈಸಿತ್ತೆಂದು ತೋರುತ್ತದೆ. ಸುಮ್ಮನೆ ವಾಯುವಿಹಾರಕ್ಕೆ ಹೊರಟಿದ್ದಿರಬಹುದು. ಆದ್ದರಿಂದ ಬಡಪಾಯಿ ರಂಗಯ್ಯನ ಕಡೆ ನೋಡುತ್ತ ಆಶ್ಚರ್ಯಪಡುತ್ತ ಕುಳಿತುಕೊಂಡಿತ್ತೇ ಹೊರತು ಸಿಟ್ಟಿಗೇಳಲಿಲ್ಲ. ಅದಕ್ಕೆ ಪ್ರಹಸನ; ಇವನಿಗೆ ಪ್ರಾಣಸಂಕಟ!
ರಂಗಯ್ಯನ ಕೂಗು ಮಾಲೆಮಾಲೆಯಾಗಿ ಅವನ ಮನೆಗೆ ಮುಟ್ಟಿತು. ಮಲೆನಾಡಿನಲ್ಲಿ ಮನೆಯಿಂದ ಹೊರಟು ಮಧ್ಯಕಾಡಿಗೆ ಹೋದರೂ ಕಾಡು ಬೆಟ್ಟಗಳು ಇಳಿಜಾರಾಗಿರುವುದರಿಂದ ಮನೆಯಿಂದ ಹೊರಟು ಮಧ್ಯಕಾಡಿಗೆ ಹೋದರೂ ಕಾಡು ಬೆಟ್ಟಗಳು ಇಳಿಜಾರಾಗಿರುವುದರಿಂದ ಮನೆಯಿಂದ ಅಲ್ಲಿಗೆ ನೇರ ದೂರ ಕಡಿಮೆಯಾಗಿರುತ್ತದೆ. ಅದರಲ್ಲಿಯೂ ಇರುಳಾದ ಮೇಲೆ ಭಯಂಕರಮೌನ ಗಗನದಿಂದಿಳಿತಂದು ಭೂಮಿಯ ಮೇಲೆ, ಹಕ್ಕಿ ಮೊಟ್ಟೆಯನ್ನು ಅಪ್ಪಿ ಕಾವು ಕೂರುವಂತೆ ಕೂರುವುದರಿಂದ, ಕಾಡಿನಲ್ಲಿ ಗಟ್ಟಿಯಾಗಿ ಮಾತಾಡಿದರೆ ಮನೆಗೆ ಕೇಳಿಸುತ್ತದೆ. ಅಂತೂ ರಂಗಯ್ಯನ ಕೂಗು ಕೇಲಿ ಅವನ ತಮ್ಮ ಸಿದ್ದಣ್ಣ, ಅಣ್ಣ ಏನೋ ದೊಡ್ಡ ಪ್ರಾಣಿಯನ್ನು ಹೊಡೆದು, ಕೊಂದು, ಹೊರಲಾರದೆ ತನ್ನನ್ನು ಕರೆಯುವನೆಂದು ಬಗೆದು, ಒಂದು ಬಂದೂಕನ್ನು ಕೈಲಿ ಹಿಡಿದುಕೊಂಡು ಕೂಗಿಗೆ ಉತ್ತರವಾಗಿ ಕೂಗುತ್ತ ಹೊರಟುಬಂದ. ರಂಗಯ್ಯನಿಗೆ ಸ್ವಲ್ಪ ಧೈರ್ಯವಾಗಿ, ಇನ್ನೂ ಗಟ್ಟಿಯಾಗಿ ಕೂಗಿದನು. ವ್ಯಾಘ್ರವು ವಿಚಿತ್ರಪ್ರಾಣಿಯ ವಿಚಿತ್ರಸ್ವರಮಾಲೆಗಳನ್ನು ಆಲೈಸುತ್ತ ಆಶ್ಚರ್ಯಪಡುತ್ತಿತ್ತು. ಈ ವಿಷಯ ಸಿದ್ದಣ್ಣನಿಗೆ ಗೊತ್ತಾಗಿದ್ದರೆ ಅವನು ಅಷ್ಟು ಕೆಚ್ಚಿನಿಂದ ಕೂಗುತ್ತ ಬರುತ್ತಿರಲಿಲ್ಲ. ಸಿದ್ಧಣ್ಣ ಕೂಗುತ್ತ ಕೂಗುತ್ತ ಹತ್ತಿರ ಬರಲು ಹುಲಿರಾಯ ನಾಟಕರಂಗದಿಂದ ಚಿಮ್ಮಿ ಕಣ್ಮರೆಯಾದನು. ರಂಗಯ್ಯನ ಆಗಿನ ಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ. ಅವನು ಯಾವ ದೇವರಿಗೂ ಹರಕೆ ಒಪ್ಪಿಸಲಿಲ್ಲ. ಏಕೆಂದರೆ, ಯಾವ ದೇವರ ಕೃಪೆಯಿಂದ ಅವನು ಬದುಕಿದನೆಂದು ಯಾರುತಾನೇ ತೀರ್ಮಾನಮಾಡುವರು? ಅಲ್ಲಿಗೆ ಬಂದ ಸಿದ್ಧಣ್ಣ ನಿಜವನ್ನು ಕೇಳಿ ತಿಳಿದು, ಮರವಟ್ಟು ಹೋಗಿದ್ದ ಅಣ್ಣನನ್ನು ಕೈಹಿಡಿದು ಎತ್ತಿ ನಿಲ್ಲಿಸಿದ; ರಂಗಯ್ಯ ಕೈಯಲ್ಲಿ ಹಿಡಿದಿದ್ದ ತಂಬಾಕಿನ ಚಿಟಿಕೆಯನ್ನು ಬಾಯಿಗೆ ಹಾಕಿಕೊಂಡು ಎಲೆಯಡಕೆ ಜಗಿಯಲು ಪ್ರಾರಂಭಿಸಿದ!
ಈ ಸಂಗತಿ ನಾನೇ ಅವನ ಬಾಯಿಂದ ಕೇಳಿ ತಿಳಿದುಕೊಂಡದ್ದು. ಅವನ ಶೈಲಿ, ಅವನ ಭಾಷೆ, ಅವನ ಚಮತ್ಕಾರ, ಅವನ ವರ್ಣನಾಶಕ್ತಿ ನನಗಿಲ್ಲ. ನಿರ್ಜೀವಲೇಖನಿ ಸಜೀವಜಿಹ್ವೆಯ ಕಾರ್ಯವನ್ನು ಸಮರ್ಪಕವಾಗಿ ಮಾಡಬಲ್ಲುದೇ? ಅಂತೂ ರಂಗಯ್ಯ ಅಂದಿನಿಂದ ಮರಸುಬೇಟೆಗೆ ಹೋಗುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದಾನೆ. ನೀವು ಯಾವಾಗಲಾದರೂ ಮಲೆನಾಡಿನಲ್ಲಿ ನಮ್ಮೂರ ಕಡೆಗೆ ಹೋದರೆ ಈ ಕತೆಯನ್ನು ಅವನ ಬಾಯಿಯಿಂದಲೇ ಕೇಳಿ ನೋಡಿ.
*********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ