ಪಂಪಭಾರತ : ಗದ್ಯಾನುವಾದ - ಏಕಾದಶಾಶ್ವಾಸಂ

ಏಕಾದಶಾಶ್ವಾಸಂ

ಕಂ|| ಶ್ರೀ ಯುವತಿಯನಾ ವೀರ
ಶ್ರೀ ಯುವತಿಗೆ ಸವತಿಮಾೞ್ಪೆನೆಂದರಿ ನೃಪರು|
ಳ್ಳಾಯವೆರಸೆೞೆದುಕೊಂಡು ಧ
ರಾ ಯುವತಿಗೆ ನೆಗೞ್ದ ಹರಿಗನೊರ್ವನೆ ಗಂಡಂ|| ೧

ಎಂಬ ನಿಜ ಚರಿತಮಂ ಪಲ
ರುಂ ಬಣ್ಣಿಸೆ ಕಿವಿಯನಾಂತು ಕೇಳುತ್ತುಮಳುಂ|
ಬಂ ಬೀರಮೆನಿಸಿ ತನಗಿದಿ
ರಂ ಬಂದು ಕಡಂಗಿ ಸತ್ತರಂ ಪೊಗೞುತ್ತುಂ|| ೨

ವ|| ಅಂತು ವಿಕ್ರಾಂತ ತುಂಗನಿರ್ಪನ್ನೆಗಮಿತ್ತಲೆರಡುಂ ಪಡೆಯ ನಾಯಕರೞಯೆ ನೊಂದ ತಮ್ಮಣುಗಾಳ್ಗಳ ಕೊಂಡಾಟದಾನೆಗಳ ನಚ್ಚಿನ ಕುದುರೆಗಳ ಪುಣ್ಗಳನುಡಿಯಲುಮೋವಲುಂ ಮರ್ದುಬೆಜ್ಜರಮನಟ್ಟುತ್ತುಮಿಕ್ಕಿದ ಸನ್ನಣಂಗಳಂ ಗೆಲ್ದು ಕಣಕೆನೆ ಪೋಗುರ್ಚಿ ತಮ್ಮ ಮೆಯ್ಯೊಳಡಿದಂಬುಗಳುಮನೆಲ್ವಂ ನಟ್ಟುಡಿದ ಬಾಳ ಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಱ ತೆಗೆಯಿಸುತ್ತುಂ ವಜ್ರಮುಷ್ಟಿಯ ಪೊಯ್ಲೊಳಂ ಬಾಳ ಕೊಳೊಳಮುಚ್ಚಳಿಸಿದ ಕಪಾಲದೋಡುಗಳಂ ಗಂಗೆಗಟ್ಟುತ್ತುಂ-

ಉ|| ಉನ್ನತಮಸ್ತಕಸ್ಥಳದೊಳಂಬುಗಳೞ್ದುಡಿದಿರ್ದೊಡತ್ತಮಿ
ತ್ತನ್ನೆ ತಂದು ಬಲ್ದಡಿಗರಿೞ್ಕುೞನೊಳ್ ಕಿೞೆ ನೊಂದೆನೆನ್ನದ|
ಎನ್ನದಣಂ ಮೊಗಂ ಮುರಿಯದಳ್ಕದೆ ಬೇನೆಗಳೊಳ್ ಮೊಗಂಗಳಂ
ಬಿನ್ನಗೆ ಮಾಡದಿರ್ದರಳವಚ್ಚರಿಯಾಗೆ ಕೆಲರ್ ಮಹಾರಥರ್|| ೩

ಚಂ|| ರಸಮೊಸರ್ವನ್ನೆಗಂ ತಗುಳೆ ಪಾಡುವ ಗಾಣರ ಗೇಯಮೞ್ಕಱಂ
ಪೊಸಯಿಸೆ ಸೋಂಕುವೊಲ್ದೊಲಿಸುವೋಪಳ ಸೋಂಕು ಪೊದೞ್ದ ಜಾದಿಯೊಳ್|
ಮಸಗಿದ ಕಂಪು ಕಂಪನೊಳಕೊಂಡಲೆವೊಂದೆಲರೆಂಬಿವಂದು ಪಾ
ಱಸುವುವುದಗ್ರ ವೀರ ಭಟರಾಹವಕೇಳಿ ಪರಿಶ್ರಮಂಗಳಂ|| ೪

ವ|| ಆಗಳ್ ಧರ್ಮನಂದನಂ ಮುಕುಂದಂಗೆ ಬೞಯನಟ್ಟಿ ಬರಿಸಿ ನಮ್ಮ ಸೇನಾನಾಯಕ ನುತ್ತಾಯಕನಾಗಿ ಗಾಂಗೇಯರಿಂದಮೞದ ನಿನ್ನಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಮೆನೆ-

೧. ಐಶ್ವರ್ಯಲಕ್ಷ್ಮಿಗೆ ಜಯಲಕ್ಷ್ಮಿಯನ್ನು ಸವತಿಯನ್ನಾಗಿ ಮಾಡುತ್ತೇನೆಂದು ಶತ್ರುರಾಜರನ್ನು ಅವರ ಸಮರಸಾಮರ್ಥ್ಯದಿಂದ ಸೆಳೆದು ಅನಮಾಡಿಕೊಂಡು ಭೂದೇವಿಯ ಒಡೆಯನಾದ (ಭೂಪತಿ) ಅರ್ಜುನನೊಬ್ಬನೇ ಶೂರನಾದವನು ೨. ಎಂಬ ತನ್ನ ಚರಿತ್ರವನ್ನು ಅನೇಕರು ವರ್ಣಿಸುತ್ತಿರಲು ಅದನ್ನು ಕಿವಿಗೊಟ್ಟು ಕೇಳುತ್ತಲೂ ಅತಿಶಯ ಸಾಹಸಿಗಳೆನಿಸಿಕೊಂಡು ಉತ್ಸಾಹದಿಂದ ತನಗೆ ಇದಿರಾಗಿ ಬಂದು ಕಾದಿ ಸತ್ತವರನ್ನು ಹೊಗಳುತ್ತಲೂ ಇದ್ದನು. ವ|| ಹಾಗೆ ಅತ್ಯಂತ ಪರಾಕ್ರಮಿಯಾದ ಅರ್ಜುನನು ಇರುತ್ತಿರಲು ಎರಡು ಸೈನ್ಯದ ನಾಯಕರೂ ಸಾಯುವಷ್ಟು ನೋವನ್ನು ಪಡೆದಿದ್ದ ತಮ್ಮ ಪ್ರೀತಿಪಾತ್ರರಾದ ಸೇವಕರ, ತಮ್ಮ ಹೊಗಳಿಕೆಗೆ ಪಾತ್ರವಾದ ಆನೆಗಳ, ತಮ್ಮ ಮೆಚ್ಚಿನ ಕುದುರೆಗಳ ಹುಣ್ಣುಗಳನ್ನು (ಗಾಯವನ್ನು) ಗುಣಪಡಿಸುವುದಕ್ಕೂ ರಕ್ಷಿಸುವುದಕ್ಕೂ ಔಷಧವನ್ನೂ ಲೇಪನವನ್ನೂ ಕಳುಹಿಸುತ್ತಿದ್ದರು. ಅವರು ಧರಿಸಿದ್ದ ಕವಚಗಳನ್ನೂ ಭೇದಿಸಿಕೊಂಡು ನೇರವಾಗಿ ಒಳಕ್ಕೆ ಪ್ರವೇಶಿಸಿ ಚುಚ್ಚಿಕೊಂಡು ಶರೀರದೊಳಗೆ ಮುರಿದುಹೋಗಿದ್ದ ಬಾಣಗಳನ್ನೂ ಎಲುಬುಗಳನ್ನೂ ಕತ್ತಿ ಮತ್ತು ಮುಳ್ಳುಗೋಲುಗಳ ಚೂರುಗಳನ್ನೂ ಸೂಜಿಗಲ್ಲನ್ನು (ಅಯಸ್ಕಾಂತ) ತೋರಿಸಿ ತೆಗೆಯಿಸುತ್ತಿದ್ದರು. ವಜ್ರಮುಷ್ಟಿಯ ಪೆಟ್ಟಿನಿಂದಲೂ ಕತ್ತಿಯ ಇರಿತದಿಂದಲೂ ಸಿಡಿದುಹೋದ ತಲೆಯ ಚಿಪ್ಪುಗಳನ್ನು ಗಂಗಾನದಿಗೆ ಕಳುಹಿಸುತ್ತಿದ್ದರು. ೩. ಎತ್ತರವಾದ ತಲೆಯ ಪ್ರದೇಶದಲ್ಲಿ ಬಾಣಗಳು ನಾಟಿಕೊಂಡು ಮುರಿದಿರಲು ಬಲಿಷ್ಠರಾದ ದಾಂಡಿಗರು ಆ ಕಡೆಯಿಂದ ಈ ಕಡೆಯಿಂದ ಒಟ್ಟಾಗಿ ಬಂದು ಸೇರಿ ಇಕ್ಕಳದಿಂದ ಅವುಗಳನ್ನು ಕೀಳುತ್ತಿದ್ದರೂ ನೋವಾಯಿತು ಎನ್ನದೆ ಅ ಎನ್ನದೆ ಸ್ವಲ್ಪವೂ ಮುಖವನ್ನು ತಿರುಗಿಸದೆ ಹೆದರದೆ ಮುಖವನ್ನು ಪೆಚ್ಚಾಗಿ ಮಾಡಿಕೊಳ್ಳದೆ ಕೆಲವು ಮಹಾರಥರು ತಮ್ಮ ಸಾಮರ್ಥ್ಯವು ಆಶ್ಚರ್ಯಕರವಾಗುವ ಹಾಗೆ ಇದ್ದರು. ೪. ರಸವು ಪ್ರಸರಿಸುವವರೆಗೂ ಬಿಡದೆ ಹಾಡುವ ಗಾಯಕಿಯರ ಗಾನ, ಪ್ರೀತಿಯನ್ನು ಉಂಟುಮಾಡುವಂತೆ ಹತ್ತಿರವೇ ಕುಳಿತು ಸುಖವನ್ನು ಹೆಚ್ಚಿಸುತ್ತಿರುವ ಪ್ರಿಯಳ ಸ್ಪರ್ಶ, ಎಲ್ಲೆಡೆಯೂ ಹರಡಿದ ಜಾಜಿಯ ವಿಜೃಂಭಿಸಿದ ವಾಸನೆಯಿಂದ ಕೂಡಿದ ಗಾಳಿ ಎಂಬವು ಶ್ರೇಷ್ಠರಾದ ವೀರಭಟರ ಯುದ್ಧಪರಿಶ್ರಮವನ್ನು ಹೋಗಲಾಡಿಸುತ್ತಿದ್ದುವು. ವ|| ಆಗ ಧರ್ಮರಾಜನು

ಕಂ|| ಬೇಳ್ವೆಯ ಕೊಂಡದೊಳುರ್ಚಿದ
ಬಾಳ್ವೆರಸರಿಬಲಮನರಿಯಲೆಂದಂಕದ|
ಟ್ಟಾಳ್ವೀರನತಿ ಬಲಂ ನಿನ
ಗಾಳ್ವೆಸಕೆಂದಿರ್ದನಲ್ತೆ ಧೃಷ್ಟದ್ಯುಮ್ನಂ|| ೫

ವ|| ಎಂಬುದುಮೀ ಕಜ್ಜಮೆನ್ನ ಮನದೊಳೊಡಂಬಟ್ಟ ಕಜ್ಜಮಾತನೆ ವೀರಪಟ್ಟಕ್ಕೆ ತಕ್ಕನೆಂದು ಧರ್ಮನಂದನಂ ದ್ರುಪದನಂದನಂಗೆ ಬೞಯನಟ್ಟಿ ಬರಿಸಿ ಪಿರಿದುಮೊಸಗೆವೆರಸು ತಾನೆ ವೀರಪಟ್ಟಮಂ ಕಟ್ಟಿ-

ಕಂ|| ಆ ಸಮರಮುಖದೊಳೆಸೆವರಿ
ಕೇಸರಿಯ ವಿರೋ ರುರ ಜಲನಿವೊಲ್ ಸಂ|
ಧ್ಯಾಸಮಯಮೆಸೆಯೆ ತೞತೞ
ನೇಸಱು ಮೂಡುವುದುಮೊಡ್ಡಣಕ್ಕೆೞ್ತಂದರ್|| ೬

ವ|| ಅಂತಜಾತಶತ್ರು ಮುನ್ನಮೆ ಬಂದೊಡ್ಡಿ ಶತ್ಕುಬಲಜಲನಿಯಳ್ಳಾಡೆ ವಿಳಯ ಕಾಳಾನಿಳನೆ ಬೀಸುವಂತೆ ಕೆಯ್ವೀಸಿದಾಗಳ್-

ಮ|| ಚತುರಂಗಂ ಚತುರಂಗ ಸೈನ್ಯದೊಳಡುರ್ತ್ತುಂ ತಿಱ್ರನೆಯ್ತಂದು ತಾ
ಗಿ ತಡಂಮೆಟ್ಟದೆ ಕಾದೆ ಬಾಳ್ಗಳುಡಿಗಳ್ ಜೀೞ್ದು ಮಾರ್ತಾಗಿ ಶೋ|
ಣಿತ ಧಾರಾಳಿಗಳುರ್ಚಿ ಪೆರ್ಚಿ ಸಿಡಿಯಲ್ ತೇಂಕಲ್ ವಿಮಾನಂಗಳ
ಳ್ಕಿ ತಗುಳ್ದಾಗಳೆ ಮತ್ತಮತ್ತ ತಳರ್ದರ್ ದೇವರ್ ನಭೋಭಾಗದೊಳ್|| ೭

ವ|| ಆಗಳೆರಡುಂ ಪಡೆಯ ನಾಯಕರೊಂದೊರ್ವರೊಳ್ ತಾಗಿ ಕಿಡಿಗುಟ್ಟಿದಂತೆ ಕಾದುವಾಗಳಭಿಮನ್ಯು ಉಗ್ರತೇಜನಪ್ಪ ಮಗಧ ತನೂಜನನೊಂದೆ ಪಾಯಂಬಿನೊಳ್ ಕೆಯ್ಯ ಕೂಸನಿಕ್ಕುವಂತಿಕ್ಕುವುದುಂ ನೆಪ್ಪಿಂಗೆ ನೆಪ್ಪುಗೊಳ್ಳದೆ ಮಾಣೆನೆಂಬಂತೆ ಬಕಾಸುರನ ಮಗನಳಂಭೂಷನರ್ಜುನನ ಮಗನಿಳಾವಂತನನಂತಕಲೋಕಮನೆಯ್ದಿಸುವುದುಂ ಘಟೋತ್ಕಚನಿಳಾವಂತನ ಸಾವಂ ಕಂಡು ಸೈರಿಸದಳಂ ಭೂಷನನೆೞ್ಬಟ್ಟುವುದುಮವನಳ್ಕಿ ಭಗದತ್ತನಾನೆಯ ಮಯಂ ಪುಗುವುದುಮಳಂಭೂಷನಂ ಪಿಂತಿಕ್ಕಿ ಭಗದತ್ತಂ ಘಟೋತ್ಕಚನಂ ಮಾರ್ಕೊಂಡು-

ಶ್ರೀಕೃಷ್ಣನಲ್ಲಿಗೆ ದೂತನನ್ನು ಕಳುಹಿಸಿ ಬರಮಾಡಿಕೊಂಡು ‘ನಮ್ಮ ನಾಯಕನು ತನ್ನ ಪ್ರತಾಪವನ್ನು ಮೆರೆದು ಭೀಷ್ಮರಿಂದ ನಾಶವಾದನು. ಇನ್ನಾರಿಗೆ ವೀರಪಟ್ಟವನ್ನು ಕಟ್ಟೋಣ ಹೇಳಿ’ ಎಂದು ಕೇಳಿದನು. ೫. ಯಜ್ಞಕುಂಡದಲ್ಲಿ ಬಿಚ್ಚಿದ ಕತ್ತಿಯಿಂದ ಕೂಡಿ ಶತ್ರುರಾಜರನ್ನು ಕತ್ತರಿಸುವುದಕ್ಕಾಗಿಯೇ ಉದ್ಭವಿಸಿದ, ಸುಪ್ರಸಿದ್ಧನೂ ಮಹಾಬಲಿಷ್ಠನೂ ವೀರನೂ ಆದ ಧೃಷ್ಟದ್ಯುಮ್ನನು ನಿನಗೆ ಸೇವೆಮಾಡಲೆಂದೇ ಸಿದ್ಧನಾಗಿದ್ದಾನೆಯಲ್ಲವೇ? ವ|| ಎನ್ನಲು ಈ ಕಾರ್ಯ ನನ್ನ ಮನಸ್ಸಿಗೂ ಒಪ್ಪಿದ ಕಾರ್ಯವೇ. ಅವನೇ ವೀರಪಟ್ಟಕ್ಕೆ ಯೋಗ್ಯನಾದವನು ಎಂದು ಧರ್ಮರಾಜನು ದ್ರುಪದನ ಮಗನಾದ ಧೃಷ್ಟದ್ಯುಮ್ನನಿಗೆ ಹೇಳಿಕಳುಹಿಸಿ ಬರಮಾಡಿ ವಿಶೇಷಪ್ರೀತಿಯಿಂದ ಕೂಡಿ ತಾನೆ ವೀರಪಟ್ಟವನ್ನು ಕಟ್ಟಿದನು. ೬. ಆ ಯುದ್ಧಪ್ರಾರಂಭದಲ್ಲಿ ಪ್ರಸಿದ್ಧನಾದ ಅರ್ಜುನನ ಶತ್ರುಗಳ ರಕ್ತ ಸಮುದ್ರದ ಹಾಗೆ ಸಂಧ್ಯಾಕಾಲವು ಪ್ರಕಾಶಿಸುತ್ತಿರಲು ಸೂರ್ಯನು ತಳತಳನೆ ಉದಯಿಸಿದನು. ಎಲ್ಲರೂ ಯುದ್ಧರಂಗಕ್ಕೆ ಬಂದು ಸೇರಿದರು. ವ|| ಧರ್ಮರಾಜನು ಮೊದಲೇ ಬಂದು ಸೈನ್ಯವನ್ನೊಡ್ಡಿ ಶತ್ರುಸೇನಾಸಮುದ್ರವು ನಡುಗುವಂತೆಯೂ ಪ್ರಳಯಕಾಲದ ಮಾರುತವು ಬೀಸುವ ಹಾಗೆಯೂ ಯುದ್ದಪ್ರಾರಂಭಸೂಚಕವಾಗಿ ಕೈಬೀಸಿದನು. ೭. ಒಂದು ಚತುರಂಗಸೈನ್ಯವು ಮತ್ತೊಂದು ಚತುರಂಗಸೈನ್ಯವನ್ನು ಸಮೀಪಿಸಿ ಬಂದು ತಿಱ್ರನೆ ತಗುಲಿ ಸಾವಕಾಶ ಮಾಡದೆ ಕಾದಿದವು. ಕತ್ತಿಯ ಚೂರುಗಳು ಜೀರ್ ಎಂದು ಶಬ್ದ ಮಾಡಿಕೊಂಡು ತಮ್ಮತಮ್ಮನ್ನೇ ತಗಲಿದುವು. ರಕ್ತಧಾರೆಗಳು ಮೇಲಕ್ಕೆದ್ದು ಹಾರಿ ಸಿಡಿದುವು. ವಿಮಾನಗಳು ತೇಲಾಡಿದುವು. ಅಂತರಿಕ್ಷಭಾಗದಲ್ಲಿ ದೇವತೆಗಳು ಹೆದರಿ ಒಟ್ಟಾಗಿ ಸೇರಿ ಅತ್ತಿತ್ತ ಜಾರಿದರು. ವ|| ಆಗ ಎರಡು ಸೈನ್ಯದ ನಾಯಕರೂ ಒಬ್ಬರಲ್ಲಿ ಒಬ್ಬರು ತಾಗಿ ಕೆಂಡವನ್ನು ಸುರಿಸುವ ಹಾಗೆ ಯುದ್ಧಮಾಡಲು ಅಭಿಮನ್ಯುವು ಬಹಳ ಉಗ್ರವಾದ ತೇಜಸ್ಸನ್ನುಳ್ಳ ಭಗದತ್ತನನ್ನು ಒಂದೇ ಹಾರುವ ಬಾಣದಿಂದ ಕಯ್ಯಲ್ಲಿರುವ ಕೂಸನ್ನು ಬಡಿಯುವಂತೆ ನೆಲಕ್ಕೆ ಅಪ್ಪಳಿಸಿದನು. ಕೊಲೆಗೆ ಪ್ರತಿಯಾಗಿ ಕೊಲೆಮಾಡದೆ ಬಿಡುವುದಿಲ್ಲ ಎನ್ನುವ ಹಾಗೆ ಬಕಾಸುರನ ಮಗನಾದ ಅಳಂಭೂಷನೆಂಬುವನು ಅರ್ಜುನನ ಮಗನಾದ ಇಳಾವಂತನೆಂಬುವನನ್ನು ಯಮಲೋಕಕ್ಕೆ ಕಳುಹಿಸಿದನು. ಘಟೋತ್ಕಚನು ಇಳಾವಂತನ ಸಾವನ್ನು ಸೈರಿಸಲಾರದೆ ಅಳಂಭೂಷನನ್ನು ಎದುರಿಸಲು ಅವನು ಹೆದರಿ ಭಗದತ್ತನ ಆನೆಯನ್ನು ಮರೆಹೊಕ್ಕನು. ಭಗದತ್ತನು

ಕಂ|| ಉತ್ಕೋಪ ದಹನದೊಡನೆ ಪೃ
ಷತ್ಕಂಗಳ್ ಕೋಟಿ ಗಣಿತದಿಂದುಱುವಿನಮಾ|
ರ್ದುತ್ಕಚ ದಿತಿಜನನುಱದೆ ಘ
ಟೋತ್ಕಚನಂ ಬಿೞ್ದು ಮೂರ್ಛೆವೋಪಿನಮೆಚ್ಚಂ|| ೮

ವ|| ಅನ್ನೆಗಂ ವೃಕೋದರಂ ಚತುರ್ದಶ ಭುವನಂಗಳೆಲ್ಲಮಂ ತೆರಳ್ಚಿ ತೇರೈಸಿ ನುಂಗುವಂತೆ ಮಸಕದಿಂ ಭಗದತ್ತನಂ ಮಾರ್ಕೊಂಡು-

ಚಂ|| ಇಸುವುದುಮೆಚ್ಚ ಶಾತ ಶರ ಸಂತತಿಯಂ ಭಗದತ್ತನೆಯ್ದೆ ಖಂ
ಡಿಸಿ ರಥಮಂ ಪಡಲ್ವಡಿಸೆ ಮಚ್ಚರದಿಂ ಗಜೆಗೊಂಡು ತಾಗೆ ಮಾ|
ಣಿಸಲಮರಾಪಗಾಸುತನಿದಿರ್ಚುವುದುಂ ರಥಮೞ ಪೊಯ್ದು ಶಂ
ಕಿಸದಿದಿರಾಂತ ಸೈಂಧವನುಮಂ ಪವನಾತ್ಮಜನೋಡೆ ಕಾದಿದಂ|| ೯

ವ|| ಅಂತು ಕಾದೆ ಸಿಂಧುರಾಜನ ಬೆಂಬಲದೊಳ್ ಕಾದಲೆಂದು ಬಂದ ನೂರ್ವರ್ ಕೌರವರುಂ ಭೀಮನೊಳ್ ತಾಗೆ ತಾಗಿದ ಬೇಗದಿಂ ದುರ್ಧರ್ಷಣ ದುರ್ಧರ್ಷಣ ದೀರ್ಘಬಾಹು ಮಹಾಬಾಹು ಚಿತ್ರೋಪಚಿತ್ರ ನಂದೋಪನಂದರ್ ಮೊದಲಾಗೆ ಮೂವತ್ತು ಮೂವರಂ ಜವಂಗೆ ಬಿರ್ದನಿಕ್ಕುವಂತಿಕ್ಕಿ ಮತ್ತಿನುೞದರುಮನುೞಯಲೀಯದೆ ಬೞಸಂದಾಗಳ್-

ಮ|| ಮೊದಲಿಟ್ಟಂ ಕೊಲಲೆಂದು ಕೌರವರನಿನ್ನೇಕಿರ್ಪನಾರ್ದುರ್ಚಿ ಮು
ಕ್ಕದಿವಂಗಾಂ ಕರಮೆಯ್ದೆ ಕೂರ್ಪೆನಿವರುಂ ಸತ್ತಪ್ಪರಿಂದಿಂಗೆ ಕಾ|
ವುದನಾಂ ಕಾವೆನೆನುತ್ತ ಬೇ ರಥಮಂ ಬಂದೇಱ ಪೋ ಪೋಗಲೆಂ
ದೊದಱುತ್ತುಂ ಪರಿತಂದು ತಾಗಿ ತಗರ್ದಂ ಗಂಗಾಸುತಂ ಭೀಮನಂ|| ೧೦

ವ|| ಅನ್ನಗೆಮತ್ತ ಸಂಸಪ್ತಕ ಬಲಮೆಲ್ಲಮನಳ ಪೆಳ ಕಿವುೞದುೞದು ಕೊಲ್ವಲ್ಲಿ ವಿಕ್ರಮಾರ್ಜುನಂ ಮುರಾಂತಕನೊಳಿಂತೆಂದಂ-

ಚಂ|| ಪ್ರಳಯ ಪಯೋ ನಾದಮನೆ ಪೋಲ್ತು ರಣಾನಕ ರಾವಮೀಗಳ
ಗ್ಗಳಮೆಸೆದಪ್ಪುದತ್ತ ಕವಂಬಿನ ಬಲ್ಸರಿಯಿಂದಮಾ ದಿಶಾ|
ವಳಿ ಮಸುಳ್ದಿಂತು ನೀಳ್ದಪುದು ಪೋಗದೆ ಕಾದುವ ಗಂಡರಿಲ್ಲ ನಿ
ನ್ನಳಿಯನುಮಾ ವೃಕೋದರನುಮಲ್ಲದರಿಲ್ಲ ಪೆಱರ್ ಮುರಾಂತಕಾ|| ೧೧

ಅಳಂಭೂಷನನ್ನು ಹಿಂದಕ್ಕೆ ತಳ್ಳಿ ಘಟೋತ್ಕಚನನ್ನು ಪ್ರತಿಭಟಿಸಿದನು. ೮. ಅತ್ಯತಿಶಯವಾದ ಕೋಪಾಗ್ನಿಯೊಡನೆ ಬಾಣಗಳು ಕೋಟಿ ಸಂಖ್ಯೆಯಿಂದ ಹೆಚ್ಚಾಗುತ್ತಿರಲು ಆರ್ಭಟಿಸಿ ಕೆದರಿದ ಕೂದಲನ್ನುಳ್ಳ ರಾಕ್ಷಸನಾದ ಘಟೋತ್ಕಚನನ್ನು ಮೂರ್ಛೆಹೋಗುವ ಹಾಗೆ ಭಗದತ್ತನು ಹೊಡೆದನು. ವ|| ಅಷ್ಟರಲ್ಲಿ ಭೀಮನು ಹದಿನಾಲ್ಕು ಲೋಕಗಳನ್ನೂ ಉಂಡೆ ಮಾಡಿ ಚಪ್ಪರಿಸಿ ನುಂಗುವಂತೆ ರೇಗಿ ಭಗದತ್ತನನ್ನು ಪ್ರತಿಭಟಿಸಿದನು. ೯. ಅವನ ಆ ಹರಿತವಾದ ಬಾಣಸಮೂಹವನ್ನು ಭಗದತ್ತನು ಪೂರ್ಣವಾಗಿ ಕತ್ತರಿಸಿ ರಥವನ್ನು ಉರುಳಿಸಲು ಭೀಮನು ಮತ್ಸರದಿಂದ ಗದೆಯನ್ನು ಧರಿಸಿ ತಾಗಿದನು. ಅದನ್ನು ತಪ್ಪಿಸಲು ಭೀಷ್ಮನು ಎದುರಿಸಿದನು. ಭೀಮನು ಅವನ ರಥವನ್ನು ನಾಶವಾಗುವಂತೆ ಹೊಡೆದು ಸಂದೇಹವೇ ಪಡದೆ, ತನ್ನನ್ನು ಎದುರಿಸಿದ ಸೈಂಧವನನ್ನು ಪಲಾಯನಗೊಳ್ಳುವಂತೆ ಕಾದಿದನು. ವ|| ಸೈಂಧವನ ಸಹಾಯಕನಾಗಿ ಕಾದಲು ಬಂದ ನೂರುಮಂದಿ ಕೌರವರೂ ಭೀಮನನ್ನು ಮುತ್ತಿದರು. ತಕ್ಷಣವೇ ದುರ್ಧರ್ಷಣ, ದುರ್ಮರ್ಷಣ, ದೀರ್ಘಬಾಹು, ಮಹಾಬಾಹು, ಚಿತ್ರೋಪಚಿತ್ರ, ನಂದೋಪನಂದರೇ ಮೊದಲಾದ ಮೂವತ್ತುಮೂರು ಜನರನ್ನು ಭೀಮನು ಯಮನಿಗೆ ಆತಿಥ್ಯ ಮಾಡುವ ಹಾಗೆ ಹೊಡೆದು ಕೊಂದನು. ಇನ್ನುಳಿದವರನ್ನೂ ಉಳಿಯುವುದಕ್ಕೆ ಅವಕಾಶ ಕೊಡದೆ ಸಮೀಪಕ್ಕೆ ಬಂದಾಗ ೧೦. ‘ಇವನು ಕೌರವರನ್ನು ಕೊಲ್ಲಬೇಕೆಂದು ಪ್ರಾರಂಭಿಸಿದ್ದಾನೆ. ಆರ್ಭಟಮಾಡಿ ಕತ್ತರಿಸಿ ನುಂಗದೇ ಬಿಡುವುದಿಲ್ಲ. ಇವನನ್ನು ನಾನು ವಿಶೇಷವಾಗಿ ಪ್ರೀತಿಸುತ್ತೇನೆ. ಇವರೂ ಸತ್ತುಹೋಗುತ್ತಾರೆ ಎಂಬುದು ನಿಜವೇ ಆದರೂ ಈ ದಿನ ನಾನು ಸಾಮರ್ಥ್ಯವಾದಷ್ಟು ರಕ್ಷಿಸುತ್ತೇನೆ ಎನ್ನುತ್ತ ಬೇರೊಂದು ರಥವನ್ನು ತರಿಸಿ ಅದನ್ನು ಏರಿಕೊಂಡು ‘ಹೋಗಬೇಡ, ಹೋಗಬೇಡ’ ಎಂಬುದಾಗಿ ಕೂಗಿಕೊಳ್ಳುತ್ತಾ ಓಡಿ ಬಂದು ಭೀಷ್ಮನು ಭೀಮನನ್ನು ತಡೆಗಟ್ಟಿದನು. ವ|| ಅಷ್ಟರಲ್ಲಿ ಆ ಕಡೆ ವಿಕ್ರಮಾರ್ಜುನನು ಸಂಸಪ್ತಕಬಲವನ್ನೆಲ್ಲ ಹೆದರಿ ಬೆವರುವಂತೆ ಅವುಕಿ ಹಿಂಡಿ ಕೊಲ್ಲುತ್ತ ಕೃಷ್ಣನೊಡನೆ ಹೀಗೆಂದನು- ೧೧. ಈಗ ರಣಭೇರಿಯ ಧ್ವನಿಯು ಪ್ರಳಯಸಮುದ್ರದ ಧ್ವನಿಯಂತೆ ಕೇಳಿಸುತ್ತಿದೆ. ಆ ಕಡೆ ಸುರಿಯುತ್ತಿರುವ ಬಾಣದ ಮಳೆಯಿಂದ ಆ ದಿಕ್ಕುಗಳ ಸಮೂಹವು ಮಾಸಲಾಗಿ ಕಾಂತಿಹೀನವಾಗಿ ಚಾಚಿಕೊಂಡಿದೆ. ಕೃಷ್ಣ, ನಿನ್ನಳಿಯನಾದ ಅಭಿಮನ್ಯು ಮತ್ತು ಭೀಮನು ವಿನಾ ಕಾದುವ ಶೂರರು ಮತ್ತಾರೂ ಅಲ್ಲಿ

ಚಂ|| ಗುರು ಗುರುಪುತ್ರ ಶಲ್ಯ ಭಗದತ್ತ ನದೀಸುತರೆಂಬ ಸಂದ ಬೀ
ರರೆ ಮಱುವಕ್ಕಮಣ್ಣನೊಡನಿರ್ವರೆ ಕೂಸುಗಳೆಂಬ ಶಂಕೆಯುಂ|
ಪಿರಿದೆನಗೀಗಳಾದಪುದು ಮಾಣದೆ ಚೋದಿಸು ಬೇಗಮತ್ತಲ
ತ್ತ ರಥಮನೆಂದು ಭೋರ್ಗರೆಯೆ ಬಂದನರಾತಿಗೆ ಮಿೞ್ತು ಬರ್ಪವೋಲ್|| ೧೨

ವ|| ಅಂತು ನೆಲನದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ ಕುರುಬಲಮೆಲ್ಲ ಮೊಲ್ಲನುಲಿದೊಡಿ ಸುರಾಪಗಾನಂದನನ ಮಯಂ ಪೊಕ್ಕಾಗಳ್-

ಮ|| ಎಡೆಗೊಂಡಂಕದ ಶಲ್ಯ ಸೈಂಧವ ಕೃಪ ದ್ರೋಣರ್ಕಳುಂ ಸಾಯಕಂ
ಗಿಡೆ ತನ್ನೆಚ್ಚ ಶರಾಳಿಗಳ್ ವಿಲಯ ಕಾಲೋಲ್ಕಂಗಳಂ ತಾಗಿದಾ|
ಗಡೆ ತತ್ಸೂತ ರಥಾಶ್ವ ಕೇತನ ಶರವ್ರಾತಂಗಳುಂ ನುರ್ಗಿ ಕ
ಣ್ಗಿಡೆ ಬೆನ್ನಟ್ಟಿದನಂತು ನಮ್ಮ ಹರಿಗಂ ಗಂಡಂ ಪೆಱರ್ ಗಂಡರೇ|| ೧೩

ವ|| ಅಂತತಿರಥ ಸಮರಥ ಮಹಾರಥಾರ್ಧರರ್ಥರ್ಕಳನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆದೆಸೆಗೆ ಕೆದಱುವನ್ನಮೆೞ್ಬಟ್ಟಿ ದಾಗಳ್ ಸೋಲ್ತ ತನ್ನ ಬಲಮನಳುಂಬಮಾದ ವಿಕ್ರಮಾರ್ಜುನನ ಭುಜಬಲಮುಮಂ ಕಂಡು ಕನಕತಾಳಧ್ವಜಂಗೆ ಪನ್ನಗಧ್ವಜನಿಂತೆಂದಂ-

ತರಳ|| ಮುಳಿಯೆ ಬಿನ್ನಪಮಜ್ಜ ದಾಯಿಗರೊಳ್ ವಿರೋಧಮನಿಂತು ಬ
ಳ್ವಳನೆ ಮಾೞ್ಪುದನಂದು ನಿಮ್ಮನೆ ನಂಬಿ ಮಾಡಿದೆನಿಂತು ಗೋ|
ವಳಿಗನಂ ಗೆಡೆಗೊಂಡು ಮುಂ ಬಳೆದೊಟ್ಟ ಪೇಡಿಯೆ ನಿಮ್ಮನಿಂ
ತಿಳಿಸಿ ಮದ್ದಲಮೆಲ್ಲಮಂ ಕೊಲೆ ನೋಡುತಿರ್ಪುದು ಪಾೞಯೇ|| ೧೪

ಕಂ|| ಮೇಳದೊಳೆಂತುಂ ಪೋ ಪೆಱ
ರಾಳಂ ಛಿದ್ರಿಸುವೆವೆಂಬ ಪಾಡವರೊಳ್ ನೀಂ|
ಮೇಳಿಸಿ ನಣ್ಪನೆ ಬಗೆದಿರ್
ಜೋಳದ ಪಾೞಯುಮನಿನಿಸು ಬಗೆಯಿಂ ನಿಮ್ಮೊಳ್|| ೧೫

ವ|| ಎಂಬುದುಂ ಸಿಂಧುತನೂಜನಿಂತೆಂದಂ-

ಮ|| ತ್ರಿಜಗಕ್ಕಂ ಗುರು ದೇವನಾದಿಪುರುಷಂ ಕೇಳೊರ್ವನೊರ್ವಂ ರಿಪು
ಧ್ವಜಿನೀ ಧ್ವಂಸಕನಾಗಿ ಸಂದ ಕಲಿಯುಂ ಬಿಲ್ಲಾಳುಮಿನ್ನೆಂದೊಡೆಂ|
ತು ಜಗತ್ಖ್ಯಾತರನೇಳಿಪೈ ಮವೆನೇ ಮುಂ ಪೂಣ್ದುದಂ ಬಿಲ್ ರಥಂ
ಧ್ವಜಮಂಬೆಂಬಿವನೆಯ್ದೆ ಸಂಸು ಜಸಂ ನಿಲ್ವನ್ನೆಗಂ ಕಾದುವೆಂ|| ೧೬

ಇಲ್ಲ. ೧೨. ಶತ್ರುಪಕ್ಷದಲ್ಲಿ ದ್ರೋಣ, ಅಶ್ವತ್ಥಾಮ, ಶಲ್ಯ, ಭಗದತ್ತ, ಭೀಷ್ಮ ಮೊದಲಾದ ಪ್ರಸಿದ್ಧ ವೀರರಿದ್ದಾರೆ. ನಮ್ಮ ಕಡೆ ಅಣ್ಣನಾದ ಭೀಮನೊಡನೆ ಮಕ್ಕಳಿಬ್ಬರು ಇದ್ದಾರಲ್ಲ (ಅಭಿಮನ್ಯು ಮತ್ತು ಘಟೋತ್ಕಚರು) ಎಂಬ ಶಂಕೆಯಾಗಿದೆ. ಆದುದರಿಂದ ಜಾಗ್ರತೆಯಾಗಿ ರಥವನ್ನು ತಡೆಯದೆ ಆ ಕಡೆ ನಡೆಯಿಸು ಎಂದು ಶಬ್ದಮಾಡುತ್ತ ಶತ್ರುವಿಗೆ ಮೃತ್ಯು ಬರುವ ಹಾಗೆ (ಆ ಕಡೆಗೆ) ಬಂದನು. ವ|| ಹಾಗೆ ನೆಲವು ನಡುಗುವ ಹಾಗೆ ಬರುತ್ತಿರುವ ಅರ್ಜುನನ ಬರುವಿಕೆಗೆ ಕೌರವಸೈನ್ಯವೆಲ್ಲ ಒಟ್ಟಿಗೆ ಕೂಗಿಕೊಂಡು ಓಡಿ ಭೀಷ್ಮನ ಮರೆಹೊಕ್ಕವು. ೧೩. ನಡುವೆ ಬಂದ ಶಲ್ಯ ಸೈಂಧವ ಕೃಪ ದ್ರೋಣಾದಿಗಳ ಬಾಣಗಳು ನಿಷ್ಪ್ರಯೋಜಕವಾದುವು. ಭೀಷ್ಮರು ಪ್ರಯೋಗಿಸದ ಬಾಣಸಮೂಹಗಳು ಪ್ರಳಯಕಾಲದ ಉಲ್ಕಾಪಾತಗಳು ಸರಿ. ಆದರೂ ಅರ್ಜುನನು ಅವರ ಆ ಸಾರಥಿ, ತೇರು, ಕುದುರೆ, ಬಾವುಟ, ಬಾಣಸಮೂಹ -ಎಲ್ಲವೂ ಪುಡಿಯಾಗುವ ಹಾಗೆ ಹಿಂಬಾಲಿಸಿದನು. ಶೂರನೆಂದರೆ ಅರಿಕೇಸರಿ. ಅವನಂತೆ ಮತ್ತಾರಿದ್ದಾರೆ. ವ|| ಹಾಗೆ ಅತಿರಥ ಸಮರಥ ಮಹಾರಥ ಅರ್ಧರಥರುಗಳನ್ನು ಆನೆ ತುಳಿದು ಕದಡಿದ ಕುಂಟೆಯ ನೀರಿನ ಹಾಗೆ ದಿಕ್ಕುದಿಕ್ಕಿಗೂ ಚೆದುರುವ ಹಾಗೆ ಎಬ್ಬಿಸಿ ಓಡಿಸಿದಾಗ ದುರ್ಯೋಧನನು ಭೀಷ್ಮನನ್ನು ಕುರಿತು ಹೀಗೆಂದನು. ೧೪. ಅಜ್ಜ, ವಿಜ್ಞಾಪನೆ; ಕೋಪಮಾಡಬೇಡಿ, ದಾಯಾದಿಗಳಲ್ಲಿ ಈ ರೀತಿಯ ವಿರೋವನ್ನು ಮಾಡುವಾಗ ನಿಮ್ಮ ವಿಶೇಷವಾದ ಸಹಾಯವನ್ನೇ ನಂಬಿ ಮಾಡಿದೆನು. ಹೀಗಿರುವಲ್ಲಿ ಈಗ ಹೀಗೆ ದನಕಾಯುವವನೊಬ್ಬನ ಸ್ನೇಹಮಾಡಿಕೊಂಡು ಬಳೆದೊಟ್ಟ ಹೇಡಿಯೊಬ್ಬನು ನಿಮ್ಮನ್ನು ಹೀಗೆ ಅವಮಾನಮಾಡಿ ನನ್ನ ಸೈನ್ಯವೆಲ್ಲವನ್ನೂ ಕೊಲ್ಲುತ್ತಿರಲು ಅದನ್ನು ನೀವು ಉದಾಸೀನವಾಗಿ ನೋಡುತ್ತಿರುವುದು ಸೂಕ್ತವೇ?

೧೫. ‘ಸ್ನೇಹದಿಂದ ಪರಪಕ್ಷದ ಶೂರರನ್ನು ಭೇದಿಸಬಲ್ಲೆವು ಬಿಡು’ ಎಂಬುದಾಗಿರುವ ಪಾಂಡವರಲ್ಲಿ ನೀವು ಸೇರಿಕೊಂಡು ಬಾಂಧವ್ಯವನ್ನೇ ಬಗೆದಿರಿ; ನಿಮ್ಮ ಮನಸ್ಸಿನಲ್ಲಿ ಉಪ್ಪಿನ ಋಣವನ್ನು ಸ್ವಲ್ಪ ಯೋಚಿಸಿ. ವ|| ಎನ್ನಲು ಭೀಷ್ಮನು ಹೀಗೆ ಹೇಳಿದನು. ೧೬. “ಧುರ್ಯೋಧನ,

ವ|| ಎಂಬುದುಮನೇಕ ಶರಭರಿತ ಶಕಟಸಹಸ್ರಮನೊಂದುಮಾಡಿ ಗಾಂಗೇಯನ ಪೆಱಗೆ ನಿಲಿಸಿದಾಗಳಮರಾಪಗಾನಂದನನುಮ ಮರೇಂದ್ರನಂದನನುಮೊರ್ವರೊರ್ವರುಂ ಗಱಸನ್ನೆಗೆಯ್ದು ಕಾದುವಾಗಳಂಬರತಳದೊಳೆಲ್ಲಂ ಬಿಳಿಯ ಮುಗಿಲ್ಗಳ ಚೌಪಳಿಗೆಗಳೊಳ್ ಬಂದಿರ್ದ ದೇವ ವಿಮಾನಂಗಳುಮೊಡನೊಡನೆ ಕಲಂಕೆ ಕುಲಗಿರಿಗಳುಂ ದಿಕ್ಕರಿಗಳುಮೊಡನೊಡನೆ ತಾಗಿದಂತೆ ತಾಗಿದಾಗಳ್-

ಮ|| ಉಪಮಾತೀತದ ಬಿಲ್ಲ ಬಲ್ಮೆ ಸಮಸಂದೊಂದೊರ್ವರೊಳ್ ಪರ್ವೆ ಪ
ರ್ವಿ ಪರವ್ಯೂಹ ಭಯಂಕರಂ ನೆಗೆದು ಪಾರ್ದಾರ್ದೆಚ್ಚೊಡಂಬಂಬನ|
ಟ್ಟಿ ಪಳಂಚುತ್ತೆ ಸಿಡಿಲ್ದ ತೋರಗಿಡಿಯಿಂದೊಂದೊಂದಳ್ ಬೇವುದುಂ
ತ್ರಿಪುರಂಬೊತ್ತಿಸಿದಂತೆ ಪೊತ್ತಿ ಪೊಗೆದತ್ತೆತ್ತಂ ವಿಯನ್ಮಂಡಳಂ|| ೧೭

ವ|| ಅಂತು ಬ್ರಹ್ಮಾಂಡಮುರಿಯೆ ಕಾದೆ-

ಚಂ|| ನಡಪಿದನಜ್ಜನೆಂದು ವಿಜಯಂ ಕಡುಕೆಯ್ದಿಸನೆನ್ನ ಮಂಮನಾಂ
ನಡಪಿದನೆಂದು ಸಿಂಧುತನಯಂ ಕಡುಕೆಯ್ದಿಸನಿಂತು ಪಾಡುಗಾ|
ದೊಡನೊಡನಿರ್ವರುಂ ಮೆಯಲೆಂದೆ ಶರಾಸನ ವಿದ್ಯೆಯ ಪಡ
ಲ್ವಡಿಸಿದರೆತ್ತಮಿದಿರೊಳ್ ಮಲೆದೊಡ್ಡಿದ ಚಾತುರಂಗಮಂ|| ೧೮

ವ|| ಅಂತು ಕಿಱದು ಪೊೞ್ತು ಕೆಯ್ಗಾದು ಕಾದೆ ಸರಿತ್ಸುತನ ಸುರಿವ ಸರಲ ಮೞೆಯೊಳೞದ ನಿಜ ವರೂಥಿನಿಯ ಸಾವುಂ ನೋವುಮೇವಮಂ ಮಾಡೆ-

ಚಂ|| ಮುನಿದೆರಡಂಬಿನೊಳ್ ರಥಮುಮಂ ಪದವಿಲ್ಲುಮನೆಯ್ದೆ ಪಾರ್ದು ನೆ
ಕ್ಕನೆ ಕಡಿದಿಂದ್ರನಂದನನಳುರ್ಕೆಯಿನಾರ್ದೊಡೆ ದಿವ್ಯ ಸಿಂಧುನಂ|
ದನನಿರದೇಱ ಬೇ ಪೆಱತೊಂದು ಶರಾಸನಕ್ಕೆ ಮೆ
ಲ್ಲನೆ ನಿಡುದೋಳನುಯ್ದು ಕರಮಚ್ಚರಿಯಾಗೆ ಕಡಂಗಿ ಕಾದಿದಂ|| ೧೯

ಕೇಳು, ಅವರಲ್ಲಿ ಒಬ್ಬನಾದ ಕೃಷ್ಣನು ಮೂರುಲೋಕಕ್ಕೂ ಗುರು, ಒಡೆಯ, ಆದಿಪುರುಷ, ಮತ್ತೊಬ್ಬನಾದ ಅರ್ಜುನನು ಶತ್ರುಪಕ್ಷವನ್ನು ನಾಶಮಾಡುವುದರಲ್ಲಿ ಪ್ರಸಿದ್ಧನಾದ ಶೂರ. ಹೀಗಿರುವಾಗ, ಲೋಕಪ್ರಸಿದ್ಧರಾದವರನ್ನು ಹೇಗೆ ತಿರಸ್ಕರಿಸುತ್ತೀಯೆ? ನಾನು ಮೊದಲು ಮಾಡಿದ ಪ್ರತಿಜ್ಞೆಯನ್ನು ಮರೆಯುತ್ತೇನೆಯೆ? ಬಿಲ್ಲು, ಬಾವುಟ, ಬಾಣ, ತೇರುಗಳನ್ನು ಸಿದ್ಧಮಾಡು. ಯಶಸ್ಸು ಶಾಶ್ವತವಾಗಿ ನಿಲ್ಲುವ ಹಾಗೆ ಕಾದುತ್ತೇನೆ ವ|| ಎನ್ನಲು ದುರ್ಯೋಧನನು ಅನೇಕ ಬಾಣಗಳಿಂದ ತುಂಬಿದ ಸಾವಿರಾರು ಬಂಡಿಗಳನ್ನು ಒಟ್ಟುಗೂಡಿಸಿ ಭೀಷ್ಮನ ಹಿಂದೆ ನಿಲ್ಲಿಸಿದನು. ಭೀಷ್ಮನೂ ಅರ್ಜುನನೂ ಒಬ್ಬರನ್ನೊಬ್ಬರು ಬಾಣದ ಗರಿಯಿಂದ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ಆಕಾಶಪ್ರದೇಶದಲ್ಲೆಲ್ಲ ಚೌಕಾಕಾರದ ಮಂಟಪ (ತೇರು)ಗಳಲ್ಲಿ ಬಂದಿದ್ದ ದೇವವಿಮಾನಗಳು ಜೊತೆ ಜೊತೆಯಲ್ಲಿಯೇ ಕ್ರಮತಪ್ಪಿ ಕಲಕಿಹೋದುವು. ಕುಲಪರ್ವತಗಳೂ ದಿಗ್ಗಜಗಳೂ ಒಟ್ಟಿಗೆ ತಾಗುವ ಹಾಗೆ ತಾಗಿದುವು. ೧೭. ಒಬ್ಬೊಬ್ಬರಲ್ಲಿಯೂ ಹೋಲಿಕೆಯಿಲ್ಲದ ಅಸ್ತ್ರವಿದ್ಯಾ ನೈಪುಣ್ಯವು ಕೂಡಿಕೊಂಡು ವ್ಯಾಪಿಸುತ್ತಿತ್ತು. ಶತ್ರುಸೈನ್ಯಭಯಂಕರನಾದ ಅರ್ಜುನನು ಎದುರುನೋಡುತ್ತ ಆರ್ಭಟಿಸಿ ಹೊಡೆಯಲು ಅವನ ಒಂದು ಬಾಣವು ಮತ್ತೊಂದನ್ನು ಹಿಂಬಾಲಿಸುತ್ತ ತಟ್ಟನೆ ತಗುಲಿ ಸಿಡಿದು ಅದರ ದಪ್ಪನಾದ ಕಿಡಿಗಳು ಒಂದೊಂದರಲ್ಲಿಯೂ ಬೇಯುತ್ತಿರಲು ತ್ರಿಪುರಾಸುರರ ಪಟ್ಟಣಗಳು ಹತ್ತಿ ಉರಿದಂತೆ ಆಕಾಶಮಂಡಲವು ಎಲ್ಲೆಡೆಯಲ್ಲಿಯೂ ಹತ್ತಿ ಹೊಗೆಯಾಡುತ್ತಿತ್ತು. ವ|| ಹಾಗೆ ಬ್ರಹ್ಮಾಂಡವೇ ಉರಿಯುವ ಹಾಗೆ ಕಾದುತ್ತಿರಲು ೧೮. ಅಜ್ಜನು ನನ್ನನ್ನು ಸಾಕಿದನು ಎಂದು ಅರ್ಜುನನೂ ವಿಶೇಷ ಉತ್ಸಾಹದಿಂದ ಬಾಣಪ್ರಯೋಗಮಾಡುವುದಿಲ್ಲ ; ನಾನು ಸಾಕಿದ ನನ್ನ ಮೊಮ್ಮಗ ಎಂದು ಭೀಷ್ಮನೂ ಕ್ರೂರವಾಗಿ ಬಾಣಪ್ರಯೋಗ ಮಾಡುವುದಿಲ್ಲ. ಹೀಗೆ ಇಬ್ಬರೂ ಸಾಂಪ್ರದಾಯಕವಾಗಿ ಶಸ್ತ್ರಕೌಶಲವನ್ನು ಮೆರೆಯುವುದಕ್ಕಾಗಿ ಮಾತ್ರ ಬಾಣಪ್ರಯೋಗಮಾಡಿ ಉತ್ಸಾಹದಿಂದ ಕೂಡಿದ ಚತುರಂಗಸೈನ್ಯವನ್ನು ಎಲ್ಲೆಡೆಯಲ್ಲಿಯೂ ಉರುಳಿಸಿದರು. ವ|| ಹಾಗೆ ಭೀಷ್ಮನು ಸ್ವಲ್ಪಕಾಲ (ಶತ್ರುಸೈನ್ಯಕ್ಕೆ) ರಕ್ಷಣೆಕೊಟ್ಟು ಕಾದಿದರೂ ಭೀಷ್ಮನ ಧಾರಾಕಾರವಾಗಿ ಸುರಿಯುತ್ತಿರುವ ಬಾಣದ ಮಳೆಯಲ್ಲಿಯೇ ನಾಶವಾದ ತನ್ನ ಸೈನ್ಯದ ಸಾವೂ ನೋವೂ ಅರ್ಜುನನಿಗೆ ವಿಶೇಷ ಕೋಪವನ್ನುಂಟುಮಾಡಿತು. ೧೯. ಅವನು ಕೋಪಿಸಿಕೊಂಡು ಭೀಷ್ಮರ ರಥವನ್ನು ಹದವಾದ ಬಿಲ್ಲನ್ನು ಚೆನ್ನಾಗಿ ನೋಡಿ ನೆಕ್ಕನೆ ಕತ್ತರಿಸಿ ಅತಿಶಯವಾಗಿ ಆರ್ಭಟಮಾಡಿದನು. ಭೀಷ್ಮನು ಸಾವಕಾಶಮಾಡದೆ ಬೇರೆ ರಥವನ್ನು ಹತ್ತಿಕೊಂಡು ತನ್ನ ದೀರ್ಘವಾದ ತೋಳನ್ನು ಬತ್ತಳಿಕೆಗೆ ನೀಡಿ ವಿಶೇಷ ಆಶ್ಚರ್ಯಕರವಾಗುವ ಹಾಗೆ ಉತ್ಸಾಹದಿಂದ

ವ|| ಅಂತು ತೋಡುಂ ಬೀಡು ಕಾಣಲಾಗದೆರ್ದೆಗಾಯಲೆಕ್ಕೆಯಿನೆಂಬತ್ತು ನಾಲ್ಕು ಲಕ್ಕ ಬಂಡಿಯೊಳ್ತಂಡ ತಂಡದೆ ತೀವಿದಕಾಂಡ ಪ್ರಳಯಾನಳ ವಿಸುಲಿಂಗೋಪಮಾನಂಗಳಪ್ಪ ನಿಶಿತ ಕಾಂಡಂಗಳಿಂದೊಡ್ಡಿದ ಚತುರ್ಬಲಂಗಳ ಮೆಯ್ಯೊಳ್ ರೋಮ ರೋಮಂದಪ್ಪದೆ ನಡುವನ್ನಮೆಚ್ಚು ಪಯಿಂಛಾಸಿರ್ವರ್ ಮಕುಟಬದ್ಧರುಮನೊಂದು ಲಕ್ಕ ಮದದಾನೆಯುಮಂ ಮೂಱುಲಕ್ಕ ರಥಮುಮನೊಂದು ಕೋಟಿ ತುರುಷ್ಕ ತುರಂಗಂಗಳುಮಂ ಪದಿನೆಂಟು ಕೋಟಿ ಪದಾತಿಯುಮನಲಸದೆ ಪೇಸೇೞೆ ಕೊಂದು ಪರಶುರಾಮನಲ್ಲಿ ಪಡೆದ ದಿವ್ಯಾಸ್ತ್ರಂಗಳನೊಂದನೊಂದು ಸೂೞೊಲೆ ತೊಟ್ಟು-

ಕಂ|| ನುಡಿವಳಿಗೆ ನರನ ರಥಮಂ
ಪಡುವೆಣ್ಗಾವುದುವರಂ ಸಿಡಿಲ್ವಿನಮೆಚ್ಚ|
ಚ್ಚುಡಿಯೆ ಭುಜಬಲದೆ ಹರಿಯುರ
ದೆಡೆಯಂ ಬಿರಿಯೆಟ್ಟು ಮೆದನಳವಂ ಭೀಷ್ಮಂ|| ೨೦

ವ|| ಆಗಳ್-

ಕಂ|| ದೇವಾಸುರದೊಳಮಿಂದಿನ
ನೋವಂ ನೊಂದಱಯೆನುೞದ ಕೆಯ್ದುವಿನೊಳಿವಂ|
ಸಾವನೆ ಸೆರಗಂ ಬಗೆದೊಡೆ
ಸಾವಾದಪುದೆಂದು ಚಕ್ರಿ ಚಕ್ರದೊಳಿಟ್ಟಂ|| ೨೧

ಇಟ್ಟೊಡೆ ತನಗಸುರಾರಿಯ
ಕೊಟ್ಟ ಮಹಾ ವೈಷ್ಣವಾಸ್ತ್ರಮಂ ಗಾಂಗೇಯಂ|
ತೊಟ್ಟಿಸುವುದುಮೆರಡುಂ ಕಿಡಿ
ಗುಟ್ಟಿ ಸಿಡಿಲ್ ಸಿಡಿಯೆ ಪೋರ್ದುವಂಬರತಳದೊಳ್|| ೨೨

ಪೋರ್ವುದುಮಿಂ ಪೆಱತಂಬಿಂ
ತೀರ್ವುದೆ ಪಗೆಯೆಂದು ಪಾಶುಪತಮಂ ಪಿಡಿಯಲ್|
ಪಾರ್ವುದುಮರ್ಜುನನಾಗಳ್
ಬೇರ್ವೆರಸು ಕಿೞಲ್ಕೆ ಬಗೆಯೆ ಸುರರೆಡೆವೊಕ್ಕರ್|| ೨೩

ವ|| ಆ ಪ್ರಸ್ತಾವದೊಳ್-

ಕಂ|| ಎನ್ನುಮನಸುರಾರಿಯ ಪಿಡಿ
ವುನ್ನತ ಕರಚಕ್ರಮೆಂದು ಭೀಷ್ಮಂ ತಱಗುಂ|
ಮುನ್ನಮಡಂಗುವೆನೆಂಬವೊ
ಲನ್ನೆಗಮಸ್ತಾಚಳಸ್ಥನಾದಂ ದಿನಪಂ|| ೨೪

ಕಾದಿದನು. ವ|| ಹಾಗೆ ಬಾಣವನ್ನು ತೊಡುವುದೂ ಬಿಡುವುದೂ ಕಾಣಲಾಗದ ರೀತಿಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಒಂದೇಸಲ ಎಂಬತ್ತು ನಾಲ್ಕು ಲಕ್ಷ ಬಂಡಿಯಲ್ಲಿ ರಾಶಿರಾಶಿಯಾಗಿ ತುಂಬಿದ್ದ ಅಕಾಲದ ಪ್ರಳಯಾಗ್ನಿಯ ಕಿಡಿಗಳಿಗೆ ಸಮಾನವಾದ ಹರಿತವಾದ ಬಾಣಗಳಿಂದ ಚತುರಂಗಸೈನ್ಯದ ಶರೀರದಲ್ಲಿ ಒಂದು ಕೂದಲೂ ತಪ್ಪದೆ ನಾಟುವ ಹಾಗೆ ಹೊಡೆದು ಹತ್ತು ಸಾವಿರ ತುರುಷ್ಕ ಕುದುರೆಗಳನ್ನು ಹದಿನೆಂಟು ಕೋಟಿ ಕಾಲಾಳುಬಲವನ್ನೂ ಶ್ರಮವಿಲ್ಲದೆ ಜುಗುಪ್ಸೆಯಾಗುವ ಹಾಗೆ ಕೊಂದನು. ಪರಶುರಾಮನಿಂದ ಪಡೆದಿದ್ದ ದಿವ್ಯಾಸ್ತ್ರಗಳೊಂದೊಂದನ್ನೂ ಒಂದೊಂದು ಸರದಿಯಿಂದ ತೊಟ್ಟು ೨೦. ಆಡಿದ ಮಾತನ್ನು ಪೂರ್ಣಗೊಳಿಸುವುದಕ್ಕೆ (ಮಾತ್ರ) ಅರ್ಜುನನ ತೇರನ್ನು ಪಶ್ಚಿಮದ ಕಡೆ ಎಂಟುಗಾವುದದವರೆಗೆ ಸಿಡಿದು ಹೋಗುವಂತೆ ಹೊಡೆದನು. ರಥದ ಅಚ್ಚು ಮುರಿಯಿತು. ಬಾಹುಬಲದಿಂದ ಕೃಷ್ಣನ ಹೃದಯಪ್ರದೇಶವನ್ನು ಬಿರಿಯುವಂತೆ ಹೊಡೆದು ಭೀಷ್ಮನು ತನ್ನ ಶಕ್ತಿಯನ್ನು ಪ್ರದರ್ಶಿಸಿದನು. ವ|| ಆಗ ೨೧. ದೇವಾಸುರರ ಯುದ್ಧದಲ್ಲಿಯೂ ಈ ದಿನದ ನೋವನ್ನು ಅನುಭವಿಸಿರಲಿಲ್ಲ ; ಉಳಿದ ಆಯುಧಗಳಿಂದ ಇವನು ಸಾಯುತ್ತಾನೆಯೇ? ಸಹಾಯವನ್ನು ಅಪೇಕ್ಷಿಸಿದರೆ ಮರಣವುಂಟಾಗುತ್ತದೆ ಎಂದು ಶ್ರೀಕೃಷ್ಣನು ಚಕ್ರಾಯುಧದಿಂದಲೇ ಹೊಡೆದನು. ೨೨. ಭೀಷ್ಮನು ವಿಷ್ಣುವು ಕೊಟ್ಟ ಮಹಾವೈಷ್ಣವಾಸ್ತ್ರವನ್ನು ಪ್ರಯೋಗಿಸಿದನು. ಎರಡು ಅಸ್ತ್ರಗಳೂ ಕಿಡಿಗಳನ್ನು ಚೆಲ್ಲಿ ಸಿಡಿಲು ಸಿಡಿಯುವಂತೆ ಆಕಾಶ ಪ್ರದೇಶದಲ್ಲಿ ಹೋರಾಡಿದುವು. ೨೩. ಶತ್ರುವು ಇನ್ನು ಬೇರೆಯ ಬಾಣದಿಂದ ನಾಶವಾಗುವುದಿಲ್ಲವೆಂದು ಯೋಚಿಸಿ ಮೂಲೋತ್ಪಾಟನ ಮಾಡುವುದಕ್ಕೆ ಅರ್ಜುನನು ಪಾಶುಪತಾಸ್ತ್ರವನ್ನೇ ಹಿಡಿಯಲು ನೋಡುತ್ತಿರಲು (ಅವನನ್ನು ತಡೆಯುವುದಕ್ಕಾಗಿ) ದೇವತೆಗಳು ಮಧ್ಯೆ ಪ್ರವೇಶ ಮಾಡಿದರು. ೨೪. ನನ್ನನ್ನು ಕೃಷ್ಣನು ಹಿಡಿಯುವ ಶ್ರೇಷ್ಠವಾದ ಚಕ್ರವೆಂದೇ ಭೀಷ್ಮನು ತರಿದುಹಾಕುತ್ತಾನೆ. ಮೊದಲೇ

ವ|| ಆಗಳೆರಡುಂ ಪಡೆಗಳಪಹಾರತೂರ್ಯಂಗಳಂ ಬಾಜಿಸಿ ಮುನ್ನೊತ್ತಿದ ವೇಳೆಗಳ್ ಸಮುದ್ರಂಗಳಂ ಪುಗುವಂತೆ ತಂತಮ್ಮ ಬೀಡುಗಳಂ ಪೊಕ್ಕರಾಗಳ್-

ಕಂ|| ಬರಿಸಿ ಮನೆಗನುಸುರವೈರಿಯ
ನರಸಂ ಭೀಷ್ಮಂಗೆ ಚಕ್ರಮಿಂತೇಕೆ ಮೊಗಂ|
ದಿರಿದುದೊ ನಿಮ್ಮಂ ಪಿಡಿದೆನ
ಗರಿದೆನಲರಿದುಂಟೆ ಧುರದೊಳೇನಸುರಾರೀ|| ೨೫

ಬೆಸಸೆನೆ ನುಡಿದಂ ಮುರನೆಂ
ಬಸುರನನೆನಗಾಗಿ ಕಾದಿ ಭೀಷ್ಮಂ ಪಿಡಿದೊ|
ಪ್ಪಿಸಿದೊಡೆ ವೈಷ್ಣವ ಬಾಣಮ
ನೊಸೆದಿತ್ತೆನದಂ ಗೆಲಲ್ಕೆ ಕೆಯ್ದುಗಳೊಳವೇ|| ೨೬

ಭೇದದೊಳಲ್ಲದೆ ಗೆಲಲರಿ
ದಾದಂ ಸುರಸಿಂಧುಸುತನನಿಂದಿರುಳೊಳ್ ನೀಂ|
ಭೇದಿಸೆನೆ ನೃಪತಿಯೊರ್ವನೆ
ಆದರದಿಂ ಬಂದು ಸಿಂಧುಸುತನಂ ಕಂಡಂ|| ೨೭

ಕಣ್ಡು ಪೊಡೆವಟ್ಟು ನಯಮೆರ್ದೆ
ಗೊಣ್ಡಿರೆ ಪತಿ ನುಡಿದನೆನಗೆ ದೇವರ್ ಕಲುಷಂ|
ಗೊಣ್ಡಾಗಳ್ ಕಾವರ್ ಕಣೆ
ಗೊಣ್ಡವೊಲೆಂದೆಂಬ ಮಾತಿನಂತಾಗಿರದೇ|| ೨೮

ತೋಂಬಯ್ಸಾಸಿರ್ವರ್ ನಿ
ಮ್ಮಂಬಿನ ಬಿಂಬಲೊಳೆ ಮಕುಟಬದ್ಧರ್ ಮಡಿದರ್|
ನಂಬಿಂ ನಂಬಲಿಮಿಂದಿಂ
ಗೊಂಬತ್ತು ದಿನಂ ದಲೆಮ್ಮ ಬೆನ್ನಲೆ ನಿಂದಿರ್|| ೨೯

ಚಕ್ರಿಯ ಚಕ್ರದೊಳಂ ತೊಡ
ರ್ದಾಕ್ರಮಿಸಿದುದೆಚ್ಚ ನಿಜ ಪತತ್ರಿ ದಲೆನೆ ನಿ|
ಮ್ಮೀ ಕ್ರಮಕಮಲಕ್ಕೆಱಗದೆ
ವಕ್ರಿಸಿ ಭೂಚಕ್ರದೊಳಗೆ ಬಾೞ್ವರುಮೊಳರೇ|| ೩೦

ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಅಸ್ತಾಚಲದಲ್ಲಿ ಸೇರುವವನಾದನು. (ಸೂರ್ಯನು ಅಸ್ತವಾದನು). ವ|| ಆಗ ಎರಡು ಸೈನ್ಯಗಳೂ ಯುದ್ಧ ನಿಂತಿತೆಂದು ತಿಳಿಸುವ ವಾದ್ಯಗಳನ್ನು ಬಾಜಿಸಿದುವು. ಮೊದಲು ಎದ್ದಿದ್ದ ಅಲೆಗಳು ಸಮುದ್ರವನ್ನು ಪ್ರವೇಶಿಸುವಂತೆ ಸೈನ್ಯಗಳು ತಮ್ಮ ತಮ್ಮ ಶಿಬಿರಗಳನ್ನು ಪ್ರವೇಶಿಸಿದವು. ಆಗ ೨೫. ಧರ್ಮರಾಜನು ಕೃಷ್ಣನನ್ನು ಮನೆಗೆ ಬರಮಾಡಿಕೊಂಡು ನಿಮ್ಮ ಚಕ್ರವು ಭೀಷ್ಮನಿಗೇಕೆ ವಿಮುಖವಾಯಿತೋ? ಕೃಷ್ಣ! ನಿಮ್ಮನ್ನಾಶ್ರಯಿಸಿದ ನನಗೆ ಯುದ್ಧದಲ್ಲಿ ಅಸಾಧ್ಯವೆಂಬುದಿಲ್ಲ ಎಂದನು.

೨೬. ಕೃಷ್ಣ ಹೇಳಿದನು : ಮುರನೆಂಬ ಅಸುರನೊಂದಿಗೆ ಕಾದಿ ಸೋಲಿಸಿ ನನಗೊಪ್ಪಿಸಿದುದರಿಂದ ಮೆಚ್ಚಿ ಭೀಷ್ಮನಿಗೆ ನಾನು ವೈಷ್ಣವಾಸ್ತ್ರ ಕೊಟ್ಟಿದ್ದೆ. ಅದನ್ನು ಯಾರೂ ಗೆಲ್ಲಲಾರರು ಎಂದನು. ೨೭. ಭೀಷ್ಮನನ್ನು ಭೇದೋಪಾಯದಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಈ ರಾತ್ರಿ ನೀನು ಅವನನ್ನು ಭೇದಿಸು ಎನ್ನಲು ರಾಜನೊಬ್ಬನೇ ಆದರದಿಂದ ಬಂದು ಭೀಷ್ಮನನ್ನು ಕಂಡನು. ೨೮. ನಮಸ್ಕಾರಮಾಡಿ ಪೂರ್ವಕವಾಗಿ ಧರ್ಮರಾಜನು ಹೇಳಿದನು. ನನಗೆ ಸ್ವಾಮಿಯಾದ ತಾವು ಕೋಪಮಾಡಿದರೆ ‘ರಕ್ಷಿಸಬೇಕಾದವರೇ ಬಾಣವನ್ನು ಹೂಡಿದ ಹಾಗೆ’ ಎಂಬ ಗಾದೆಯ ಮಾತಿನಂತಾಗುವುದಿಲ್ಲವೆ? ೨೯. ತೊಂಬತ್ತುಸಾವಿರ ಕಿರೀಟಧಾರಿಗಳಾದ ರಾಜರು ನಿಮ್ಮ ಬಾಣದ ಸಮೂಹದಿಂದ ಸತ್ತರು. ನಂಬಿ, ನಂಬದಿರಿ ಈ ಒಂಬತ್ತು ದಿನವೂ ನೀವು ನಮಗೆ ವಿರೋಧವಾಗಿ ನಿಂತಿರಿ. ೩೦. ನೀವು ಪ್ರಯೋಗಿಸಿದ ಬಾಣವು ಶ್ರೀಕೃಷ್ಣನ ಚಕ್ರವನ್ನೂ ಅಡ್ಡಗಟ್ಟಿ ಆಕ್ರಮಿಸಿತು ಎನ್ನುವಾಗ ನಿಮ್ಮ ಈ ಪಾದಕಮಲಕ್ಕೆ ನಮಸ್ಕಾರಮಾಡದೆ ವಕ್ರವಾಗಿ ನಿಂತು ಈ

ಸಾವೆ ನಿಮತಿಚ್ಚೆಯೆನೆ ಪೊಣ
ರ್ದಾವಂ ತಳ್ತಿಱದು ಗೆಲ್ವನೆಮಗದಱಂದಂ|
ಸಾವು ದಿಟಂ ನಿಮ್ಮಡಿ ಕೊಲೆ
ಸಾವುದು ಲೇಸಲ್ತೆ ಸುಗತಿವಡೆಯಲ್ಕಕ್ಕುಂ|| ೩೧

ವ|| ಎಂದೊಡದೆಲ್ಲಮನೆಯ್ದೆ ಕೇಳ್ದು ಕರುಣಾರಸ ಹೃದಯನಾಗಿ ಮಮ್ಮಗನ ಮೊಗಮಂ ಕೂರ್ಮೆಯಿಂ ನೋಡಿ ಕಣ್ಣ ನೀರಂ ನೆಗಪಿ-

ಚಂ|| ಜಗದೊಳವಧ್ಯನಂ ಗೆಲಲೆಬಾರದದಾಡೊಡಮೇಂ ಶಿಖಂಡಿ ತೊ
ಟ್ಟಗೆ ಕೊಳೆ ಬಂದು ಮುಂದೆ ನಿಲೆ ಸಾವೆನಗಪ್ಪುದು ನಾಳಿನೊಂದು ಕಾ|
ಳೆಗದೊಳಿದಂ ನರಂಗಱಪದೀ ತೆಱದಿಂ ನೆಗೞ್ದೆಯ್ದೆ ವೀರ ಲ
ಕ್ಷ್ಮಿಗೆ ನೆಲೆಯಾಗು ಪೋಗೆನೆ ನೃಪಂ ಪೊಡೆವಟ್ಟು ಮನೋನುರಾಗದಿಂ|| ೩೨

ವ|| ಬಂದು ಮಂದರಧರಂಗೆ ತದ್ವೃತ್ತಾಂತಮನೆಲ್ಲಮನಱಪಿ ನಿಶ್ಚಿಂತಮನನಾಗಿ ಪವಡಿಸಿದಾಗಳ್-

ಚಂ|| ಚಲ ಚಲದಾಂತು ಕಾದುವ ಸುಯೋಧನ ಸಾಧನದೊಡ್ಡುಗಳ್ ಕೞ
ಲ್ದಲಱ ತೆರಳ್ದು ತೂಳ್ದು ಬಿಱುತೋಡೆ ಗುಣಾರ್ಣವನಿಂದಮಾಜಿಯೊಳ್|
ಕೊಲಿಸಿ ಸಮಸ್ತ ಧಾತ್ರಿಯುಮನಾಳಿಪೆವೆಂದುಲವಂತೆ ಪಕ್ಕಿಗಳ್
ಚಿಲಿಮಿಲಿಯೆಂಬ ಪೊೞ್ತಳೆ ಬಂದುಱದೊಡ್ಡಿದನಂತಕಾತ್ಮಜಂ|| ೩೩

ವ|| ಆಗಳ್ ಕುರುಧ್ವಜಿನಿಯುಮನೇಕ ಶಂಖ ಕಾಹಳ ಭೇರೀ ಪಣವ ಝಲ್ಲರೀ ಮೃದಂಗ ತೂರ್ಯಂಗಳಂತಕಾಲಾಂತಕ ವಿಕಟಾಟ್ಟಹಾಸಂಗಳೆಂಬಂತೆ ಮೊೞಗೆ ಮಲೆದು ಬಂದೊಡ್ಡಿ ನಿಂದಾಗಳ್-

ಕಂ|| ಉಭಯ ಬಲದರಸುಗಳ್ ರಣ
ರಭಸಂಗಳ್ವೆರಸು ಮುಳಿದು ಕೆಯ್ವೀಸೆ ಲಯ|
ಕ್ಷುಭಿತ ಜಲನಿ ನಿನಾದಮ
ನಭಿನಯಿಸಿದುದೊಗೆದು ನೆಗೆದ ಸಮರಾರಾವಂ|| ೩೪

ಇಸುವ ಧನುರ್ಧರರಿಂ ಪಾ
ಯಿಸುವ ದೞಂಗಳಿನಗುರ್ವು ಪರ್ವುವಿನಂ ಚೋ|
ದಿಸುವ ರಥಂಗಳಿನೆಂಟುಂ
ದೆಸೆ ಮಸುಳ್ವಿನಮಿಱದುವಾಗಳುಭಯಬಲಂಗಳ್|| ೩೫

ಭೂಮಂಡಲದಲ್ಲಿ ಬಾಳುವವರೂ ಇದ್ದಾರೆಯೇ? ೩೧. ನಾವು ಸಾಯುವುದೇ ನಿಮಿಚ್ಛೆಯಾದರೆ (ನೀವು ಕೊಲ್ಲುವೆನೆಂದು ಮನಸ್ಸು ಮಾಡಿಬಿಟ್ಟರೆ) ನಿಮ್ಮನ್ನು ಪ್ರತಿಭಟಿಸಿ ಯುದ್ಧಮಾಡಿ ಯಾವನು ಗೆಲ್ಲುತ್ತಾನೆ. ಆದುದರಿಂದ ನಮಗೆ ಸಾವೆಂಬುದು ನಿಶ್ಚಯ. ಸದ್ಗತಿಯನ್ನು ಹೊಂದುವುದಕ್ಕೆ ನಿಮ್ಮಿಂದ ಕೋಪಿಸಿಕೊಂಡು ಸಾಯುವುದು ಉತ್ತಮವಲ್ಲವೇ? ವ|| ಅದನ್ನು ಪೂರ್ಣವಾಗಿ ಕೇಳಿ ಕರುಣಾರಸಹೃದಯನಾಗಿ ಭೀಷ್ಮನು ಮೊಮ್ಮಗನ ಮುಖವನ್ನು ಪ್ರೀತಿಯಿಂದ ನೋಡಿ ಕಣ್ಣಿನಲ್ಲಿ ನೀರನ್ನು ತುಂಬಿಕೊಂಡು ಹೇಳಿದನು. ೩೨. ‘ಲೋಕದಲ್ಲಿ ಕೊಲ್ಲಲಾಗದವನನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ತಾನೆ ಏನು? ನಾಳೆಯ ದಿನದ ಯುದ್ಧದಲ್ಲಿ ಶಿಖಂಡಿಯು ಬೇಗನೆ ಮುಂದೆ ಬಂದು ನಿಂತರೆ ನನಗೆ ಮರಣವಾಗುತ್ತದೆ. ಈ ವಿಷಯವನ್ನು ಅರ್ಜುನನಿಗೆ ತಿಳಿಸದೆ ಮಾಡಿ ವೀರಲಕ್ಷ್ಮಿಗೆ ಪೂರ್ಣವಾಗಿ ನೆಲೆಯಾಗು ಹೋಗು’ ಎಂದನು. ಧರ್ಮರಾಜನು ಮನಸ್ಸಿನ ಸಂತೋಷದಿಂದ ನಮಸ್ಕಾರ ಮಾಡಿ ಹಿಂತಿರುಗಿದನು. ವ|| ಬಂದು ಶ್ರೀಕೃಷ್ಣನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿ ಚಿಂತೆಯಿಲ್ಲದ ಮನಸ್ಸಿನಿಂದ ಮಲಗಿದನು- ೩೩. ‘ಹೆಚ್ಚಿನ ಹಠದಿಂದ ಕಾದುತ್ತಿರುವ ದುರ್ಯೋಧನನ ಸೈನ್ಯದ ಗುಂಪುಗಳು ಕೃಶವಾಗಿ ಚೆದರಿ ಒತ್ತರಿಸಲ್ಪಟ್ಟು ಬೆದರಿ ಓಡಿಹೋಗುವಂತೆ ಅರ್ಜುನನಿಂದ ಕೊಲ್ಲಿಸಿ ಸಮಸ್ತ ಭೂಮಂಡಲವನ್ನು ಅವನಿಂದಲೇ ಆಳುವ ಹಾಗೆ ಮಾಡುತ್ತೇವೆ’ ಎಂದು ಕೂಗುವ ಹಾಗೆ ಹಕ್ಕಿಗಳು ಚಿಲಿಮಿಲಿಯೆಂದು ಶಬ್ದಮಾಡುತ್ತಿರುವ ಹೊತ್ತಿನಲ್ಲಿಯೇ (ಅರುಣೋದಯದಲ್ಲಿಯೇ) ಧರ್ಮರಾಯನು ಬಂದು ಸಾವಕಾಶ ಮಾಡದೆ ಸೈನ್ಯವನ್ನು ಒಡ್ಡಿದನು. ವ|| ಆಗ ಕೌರವ ಸೈನ್ಯವೂ ಅನೇಕ ಶಂಖ, ಕೊಂಬು, ನಗಾರಿ, ಪಣವ, ಜಲ್ಲರಿ, ಮೃದಂಗವೆಂಬ ವಾದ್ಯಗಳು ಪ್ರಳಯಕಾಲದ ಯಮನ ವಿಕಾರವಾದ ನಗುವಿನಂತೆ ಶಬ್ದಮಾಡಲು ಮದಿಸಿ ಬಂದು ಒಡ್ಡಿ ನಿಂತಿತು. ೩೪. ಎರಡು ಸೈನ್ಯದ ರಾಜರುಗಳೂ ಯುದ್ಧವೇಗದಿಂದ ಕೂಡಿ ಕೋಪದಿಂದ ಕೈಬೀಸಲಾಗಿ ಆಗ ಹುಟ್ಟಿ ಚಿಮ್ಮಿದ ಯುದ್ಧದ ಮೊಳಗು ಪ್ರಳಯಕಾಲದ ಕಲಕಿದ ಸಮುದ್ರಧ್ವನಿಯನ್ನು ಅನುಕರಿಸಿತು. ೩೫. ಬಾಣ

ಅೞದೞದ ಕರಿ ಘಟೆಗಳ
ಬಳಗದಿನುಚ್ಚಳಿಸಿ ಮೊರೆವ ನೆತ್ತರ ತೆರೆಗಳ್|
ಸುೞಸುೞದೊಡವರಿದವು ಕ
ಲ್ವೞಯೊಳ್ ಭೋರ್ಗರೆದು ಪರಿವ ತೊಗಳ ತೆಱದಿಂ|| ೩೬

ವ|| ಅಂತು ಚಾತುರ್ದಂತಮೊಂದೊಂದಳೋರಂತೆ ನಡುವಗಲ್ವರುಂ ಕಾದುವುದುಂ ನಾವಿಂದಿನನುವರಮನನಿಬರುಮೊಂದಾಗಿ ಭೀಷ್ಮರೊಳ್ ಕಾದುವಮೆಂದು ಸಮಕಟ್ಟಿ ಧರ್ಮಪುತ್ರಂ ಕದನತ್ರಿಣೇತ್ರನಂ ಮುಂದಿಟ್ಟುಂ ಸಮಸ್ತಬಲಂಬೆರಸು ಕಾದುವ ಸಮಕಟ್ಟಂ ದುರ್ಯೋಧನನಱದು-

ಚ|| ಕುರುಬಲಮೆಂಬುದೀ ಸುರನದೀಜನ ತೋಳ್ವಲಮೆಂಬ ವಜ್ರ ಪಂ
ಜರದೊಳಗಿರ್ದು ಬೞ್ದಪುದು ಪಾಂಡವ ಸೈನ್ಯಮುಮಿಂದು ಭೀಷ್ಮರೊ|
ರ್ವರೊಳಿರದಾಂತು ಕಾದಲವರಂ ಪೆಱಗಿಕ್ಕಿ ಕಡಂಗಿ ಕಾದಿ ನಿ
ತ್ತರಿಸುವೆನೆಂದು ಪಾಂಡವ ಬಲಕ್ಕಿದಿರಂ ತಱಸಂದು ತಾಗಿದಂ|| ೩೭

ವ|| ಅಂತು ತಾಗುವುದುಂ ಸಾತ್ಯಕಿ ಕೃತವರ್ಮನೊಳ್ ಯುಷ್ಠಿರಂ ಶಲ್ಯನೊಳ್ ಸೌಭದ್ರನಶ್ವತ್ಥಾಮನೊಳ್ ಸಹದೇವಂ ಶಕುನಿಯೊಳ್ ನಕುಲಂ ಚಿತ್ರಸೇನನೊಳ್ ಚೇಕಿತಾನಂ ಸೈಂಧವನೊಳ್ ಘಟೋತ್ಕಚಂ ಕೃಪನೊಳ್ ಭೀಮಸೇನಂ ಕೌರವನೊಳ್ ಕಳಿಂಗರಾಜಂ ಪಾಂಚಾಳರಾಜನೊಳ್ ಅತಿರಥಮಥನಂ ದ್ರೋಣಾಚಾರ್ಯರೊಳ್ ಅವರವರೊಳದಿರದಾಂತಾಗಳ್-

ಚಂ|| ನಡುವಿಡುವುರ್ಚುವಾರ್ದರಿವ ನೇರ್ವ ಪಳಂಚುವ ಪೋರ್ವ ಬಾಣದಿಂ
ದುಡಿದು ಸಿಡಿಲ್ದು ಸೂಸಿಯೆ ಕೞಲ್ದು ಬೞಲ್ದು ಸಡಿಲ್ದು ಜೋಲ್ದು ನೇ|
ಲ್ದುಡಿದ ನೊಗಂ ಧ್ವಜಂ ಪಲಗೆ ಕೀಲ್ ಕವರಚ್ಚು ತುರಂಗಮಂ ರಥಂ
ಕಿಡೆ ಕವರಿಂದಗುರ್ವನೊಳಕೊಂಡಿರೆ ತಳ್ತಿಱದರ್ ಮಹಾರಥರ್|| ೩೮

ವ|| ಅಂತು ಕಿಡಿಗುಟ್ಟಿದಂತೆ ತಳ್ತಿಱಯೆ ಜಗದೇಕಮಲ್ಲಂಗೆ ಮಾರ್ಮಲೆಯಲಾಱದೆ ಕುರುಬಲಮೆಲ್ಲಮೊಲ್ಲನುಲಿದೋಡಿ ಭೀಷ್ಮರ ಮಯಂ ಪೊಕ್ಕಾಗಳ್-

ಪ್ರಯೋಗಮಾಡುವ ಬಿಲ್ಗಾರರಿಂದಲೂ ಮುನ್ನುಗ್ಗಿಸುವ ಸೈನ್ಯಗಳಿಂದಲೂ ಭಯಂಕರತೆಯು ಹೆಚ್ಚುತ್ತಿರಲು ನಡೆಸುತ್ತಿರುವ ತೇರುಗಳಿಂದ ಎಂಟು ದಿಕ್ಕುಗಳೂ ಮಂಕಾಗುತ್ತಿರಲು ಎರಡು ಸೈನ್ಯಗಳೂ ಯುದ್ಧ ಮಾಡಿದುವು. ೩೬. ಸತ್ತು ನಾಶವಾದ ಆನೆಗಳ ರಾಶಿಯಿಂದ ಮೇಲಕ್ಕೆ ಹಾರಿ ಶಬ್ದಮಾಡುತ್ತಿರುವ ರಕ್ತದ ಅಲೆಗಳು ಸುಳಿಸುಳಿದು ಕಲ್ಲುದಾರಿಯಲ್ಲಿ ಭೋರೆಂದು ಶಬ್ದ ಮಾಡುತ್ತ ಹರಿಯುವ ನದಿಗಳ ರೀತಿಯಿಂದ ಒಡನೆ ಹರಿದುವು. ವ|| ಚತುರಂಗಬಲವೂ ಒಂದೊಂದು ಒಂದೊಂದರಲ್ಲಿ ನಡುಹಗಲಿನವರೆಗೆ ಒಂದೇ ಸಮನಾಗಿ ಕಾದಿದುವು. ಧರ್ಮರಾಜನು ನಾವು ಭೀಷ್ಮರೊಡನೆ ಇಂದಿನ ಯುದ್ಧವನ್ನು ಎಲ್ಲರೂ ಒಟ್ಟಿಗೆ ಸೇರಿ ಕಾದೋಣ ಎಂದು ನಿಷ್ಕರ್ಷಿಸಿ ಅರ್ಜುನನನ್ನು ಮುಂದಿಟ್ಟುಕೊಂಡು ಸಮಸ್ತಸೈನ್ಯವನ್ನೂ ಕೂಡಿಸಿದನು. ಈ ಸುದ್ದಿ ದುರ್ಯೋಧನನನ್ನೂ ಮುಟ್ಟಿತು.

೩೭. ‘ಈ ಕೌರವ ಸೈನ್ಯವೆಂಬುದು ಭೀಷ್ಮನ ಬಾಹುಬಲವೆಂಬ ವಜ್ರಪಂಜರದಲ್ಲಿದ್ದು ಬದುಕುತ್ತಿದೆ. ಪಾಂಡವಸೈನ್ಯವು ಈ ದಿನ ಭೀಷ್ಮರೊಬ್ಬರನ್ನು ಬಿಡದೆ ಪ್ರತಿಭಟಿಸಿ ಕಾದಲು ಯೋಚಿಸಿದೆ. ಆದುದರಿಂದ ಅವರನ್ನು ಈ ದಿನ ನಾನು ಹಿಂದಿಕ್ಕಿ (ರಕ್ಷಿಸಿ) ಉತ್ಸಾಹದಿಂದ ಕಾದಿ ಕಾರ್ಯಸಾಧನೆ ಮಾಡುತ್ತೇನೆ’ ಎಂದು ದುರ್ಯೋಧನನು ನಿಶ್ಚಯಿಸಿ ಪಾಂಡವಸೈನ್ಯಕ್ಕೆ ಇದಿರಾಗಿ ಬಂದು ತಾಗಿದನು (ಪ್ರತಿಭಟಿಸಿದನು). ವ|| ಸಾತ್ಯಕಿಯು ಕೃತವರ್ಮನೊಡನೆಯೂ ಧರ್ಮರಾಜನು ಶಲ್ಯನೊಡನೆಯೂ ಅಭಿಮನ್ಯುವು ಅಶ್ವತ್ಥಾಮನೊಡನೆಯೂ ಸಹದೇವನು ಶಕುನಿಯೊಡನೆಯೂ ನಕುಲನು ಚಿತ್ರಸೇನನೊಡನೆಯೂ ಚೇಕಿತಾನನು ಸೈಂಧವನೊಡನೆಯೂ ಘಟೋತ್ಕಚನು ಕೃಪನೊಡನೆಯೂ ಭೀಮಸೇನನು ದುರ್ಯೋಧನನೊಡನೆಯೂ ಕಳಿಂಗರಾಜನು ದ್ರುಪದನೊಡನೆಯೂ ಅರ್ಜುನನು ದ್ರೋಣಾಚಾರ್ಯರೊಡನೆಯೂ ಪರಸ್ಪರ ಹೆದರದೆ ಪ್ರತಿಭಟಿಸಿದರು. ೩೮. (ಬಾಣಗಳನ್ನು) ನಾಟುವ, ಬೀಸಿ, ಎಸೆಯುವ, ಚುಚ್ಚುವ, ಶಬ್ದಮಾಡಿ ಕತ್ತರಿಸುವ, ತುಂಡುಮಾಡುವ, ಪ್ರತಿಭಟಿಸಿ ತಗಲುವ ಹೋರಾಡುತ್ತಿರುವ, ಬಾಣಗಳಿಂದ ಮುರಿದು ಸಿಡಿದು ಚೆಲ್ಲಿ ಶಿಥಿಲವಾಗಿ ಜೋತು ಬಿದ್ದು ನೇತಾಡಿ ತುಂಡರಿಸಿದ ನೊಗ, ಬಾವುಟ, ಹಲಗೆ, ಕೀಲು, ಕವಲುಮರ, (ತೇರಿನ) ಅಚ್ಚು, ಕುದುರೆ, ತೇರು ಇವುಗಳು ನಾಶವಾಗಲು ಮಹಾರಥರು ಒಟ್ಟುಗೂಡಿ ಭಯಂಕರವಾಗಿ ಯುದ್ಧಮಾಡಿದರು. ವ|| ಬೆಂಕಿಯ ಕಿಡಿಯು ಚೆಲ್ಲುವ ಹಾಗೆ ಜಗದೇಕಮಲ್ಲನಾದ ಅರ್ಜುನನು ಯುದ್ಧಮಾಡುತ್ತಿರಲು ಅವನನ್ನು ಪ್ರತಿಭಟಿಸಲಾರದೆ ಕೌರವಸೈನ್ಯವೆಲ್ಲವೂ ಮೆಲ್ಲನೆ ಕೂಗಿಕೊಂಡು ಓಡಿ ಭೀಷ್ಮರ ಮರೆಯನು

ವ|| ಅಂತ ಕಿಡಿಗುಟ್ಟಿದಂತೆ ತಳ್ತಿಱಯೆ ಜಗದೇಕಮಲ್ಲಂಗೆ ಮಾರ್ಮಲೆಯಲಾಱದೆ ಕರುಬಲಮೆಲ್ಲಮೊಲ್ಲನುಲಿದೋಡಿ ಭೀಷ್ಮರ ಮಯಂ ಪೊಕ್ಕಾಗಳ್

ಕಂ|| ಧವಳ ಹಯಂ ಧವಳ ರಥಂ
ಧವಳೋಷ್ಣೀಷಂ ಶಶಾಂಕ ಸಂಕಾಶ ಯಶೋ|
ಧವಳಿತ ಭುವನಂ ತಾಗಿದ
ನವಯವದಿಂ ಬಂದು ಧರ್ಮತನಯನ ಬಲದೋಳ್|| ೩೯

ವ|| ಅಂತು ತಾಗಿದ ಸಿಂಧುನಂದನನ ಕೋಪಶಿಖಿ ಶಿಖಾಕಳಾಪಂಗಳೊಳ್ ಪುಡುಪುಡನೞ ಸಾಯಲೆಂದು ಪಾಯ್ವ ಪತಂಗಂಗಳಂತೆ ಸೋಮಕ ಶ್ರೀಜಯ ಪ್ರಮುಖ ನಾಯಕರೊಂದಕ್ಷೋಹಿಣೀ ಬಲಂಬೆರಸು ಭರಂಗೆಯ್ದಾಂತೊಡೆ-

ಮ|| ಶರಸಂಧಾನದ ಬೇಗಮಂಬುಗಳನಂಬೀಂಬಂತೆ ಮೇಣಂಬಿನಾ
ಗರಮೆಂಬಂತೆನೆ ಪಾಯ್ವರಾತಿ ಶರ ಸಂಘಾತಂಗಳಂ ನುರ್ಗಿ ನೇ||
ರ್ದರಿದಟ್ಟುಂಬರಿಗೊಂಡು ಕೂಡೆ ಕಡಿದಂತಾ ಸೈನ್ಯಮಂ ಪರ್ವಿ ಗೋ
ೞ್ಮುರಿಗೊಂಡುರ್ವಿದುವಾ ರಸಾತಳಮುಮಂ ಗಾಂಗೇಯನಸ್ತ್ರಾಳಿಗಳ್|| ೪೦

ವ|| ಅಂತು ಭೀಷ್ಮಂ ಗ್ರೀಷ್ಮಕಾಲದಾದಿತ್ಯನಂತೆ ಕಾಯ್ದಂತಕಾಲದಂತಕನಂತೆ ಕೆಳರ್ದು ವಿಳಯಕಾಲಮೇಘದಂತೆ ಮೊೞಗಿ ಮಹಾಪ್ರಳಯಭೈರವನಂತೆ ಮಸಗಿ ಪಯಿಂಛಾಸಿರ್ವರ್ ಮಕುಟಬದ್ಧರಂ ಕೊಂದಾಗಳ್-

ಚಂ|| ಮಣಿಮಕುಟಾಳಿಗಳ್ವೆರಸುರುಳ್ದ ನರೇಂದ್ರಶಿರಂಗಳೊಳಾಣಾ
ಮಣಿಗಳ ದೀಪ್ತಿಗಳ್ ಬೆಳಗೆ ಧಾತ್ರಿಯನೊಯ್ಯನೆ ಕಂಡಿ ಮಾಡಿ ಕಣ್|
ತಣಿವಿನಮಂದು ನಿಂದಿಱದ ಕೊಳ್ಗುಳನಂ ನಡೆ ನೊೞ್ಪಹೀಂದ್ರರೊಳ್
ಸೆಣಸಿದುವೆಂದೊಡೇವೊಗೞ್ಪುದೇರ್ವೆಸನಂ ಸುರಸಿಂಧುಪುತ್ರನಾ|| ೪೧

ವ|| ಅಂತ ಸೋಮಕಬಲಮೆಲ್ಲಮಂ ಪೇೞೆ ಪೆಸರಿಲ್ಲದಂತು ಕೊಂದು ಶ್ರೀ ಜಯಬಲಕ್ಕಪಜಯಮಾಗೆ ಕೊಂದುಮೋಡಿಸಿಯುಮಿಕ್ಕಿ ಗೆಲ್ದ ಮಲ್ಲನಂತಿರ್ದಾಗಳ್ ಜಗದೇಕಮಲ್ಲಂ ಮೊದಲಾಗೆ ವಿರಾಟ ವಿರಾಟಜ ದ್ರುಪದ ದ್ರುಪದಜ ಚೇಕಿತಾನ ಯುಧಾಮನ್ಯೂತ್ತಮೋಜಸ್ಸೌಭದ್ರ ಘಟೋತ್ಕಚ ನಕುಲ ಸಹದೇವ ಸಾತ್ಯಕಿ ಪಂಚಪಾಂಡವ ಪ್ರಮುಖನಾಯಕರೆಲ್ಲರುಂಬೆರಸು ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟುಕೊಂಡು ಬಂದು ಪೇಂಕುಳಿಗೊಂಡ ಸಿಂಹಮಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್-

ಸೇರಿತು. ೩೯. ಬಿಳಿಯ ಕುದುರೆ, ಬಿಳಿಯ ತೇರು, ಬಿಳಿಯ ತಲೆಯುಡಿಗೆ, ಚಂದ್ರನಿಗೆ ಸಮಾನವಾದ (ಶುಭ್ರಕಾಂತಿಯಿಂದ ಕೂಡಿದ) ಯಶಸ್ಸಿನಿಂದ ಲೋಕವನ್ನೇ ಬಿಳುಪಾಗಿ ಮಾಡಿದ (ಕೀರ್ತಿ ಇವುಗಳಿಂದ ಕೂಡಿದ) ಭೀಷ್ಮನು ಆಶ್ರಮದಿಂದ ಧರ್ಮರಾಜನ ಸೈನ್ಯದೊಡನೆ ಬಂದು ತಾಗಿದನು. ವ|| ಭೀಷ್ಮನ ಕೋಪಾಗ್ನಿಜ್ವಾಲೆಯ ರಾಶಿಯಲ್ಲಿ ಬಿಸಿಬಿಸಿಯಾಗಿ ಬೆಂದು ನಾಶವಾಗಿ ಸಾಯಬೇಕೆಂದು ಹಾಯುವ ‘ದೀಪದ ಹುಳುಗಳ ಹಾಗೆ ಸೋಮಕ ಶ್ರೀಜಯನೇ ಮೊದಲಾದ ನಾಯಕರು ಒಂದಕ್ಷೋಹಿಣೀ ಸೈನ್ಯದಿಂದೊಡಗೂಡಿ ಬಂದು ಆಭರ್ಟಿಸಿ ಮುತ್ತಿದರು. ೪೦. ಭೀಸ್ಮನ ಬಾಣಪ್ರಯೋಗಮಾಡುವ ವೇಗವು ಬಾಣಗಳು ಬಾಣಗಳನ್ನು ಹೆರುತ್ತಿರುವ ಹಾಗೆ, ಅಥವಾ ಬಾಣಗಳ ಅಕರದಂತಿರಲು ಆ ಭೀಷ್ಮನ ಬಾಣಗಳು ಹಾರಿ ಬರುತ್ತಿರುವ ಶತ್ರುಗಳ ಬಾಣಸಮೂಹವನ್ನು ಪುಡಿಮಾಡಿ ನೇರವಾಗಿ ಕತ್ತರಿಸಿ, ತುಂಡುಮಾಡಿ, ಹಿಂಬಾಲಿಸಿ ಆಗಲೇ ಕತ್ತರಿಸಿದಂತೆ, ಆ ಸೈನ್ಯವನ್ನು ಆವರಿಸಿ ಕತ್ತನ್ನು ಕತ್ತರಿಸಿ ಪಾತಾಳವನ್ನು ತುಂಬಿದುವು ವ|| ಭೀಷ್ಮನು ಬೇಸಿಗೆಯ ಸೂರ್ಯನಂತೆ ಕೋಪಗೊಂಡು ಪ್ರಳಯಕಾಲದ ಯಮನಂತೆ ರೇಗಿ ವಿಳಯಕಾಲದ ಮೋಡದಂತೆ ಶಬ್ದಮಾಡಿ ಮಹಾಪ್ರಳಯಭೈರವನಂತೆ ಕೆರಳಿ ಹತ್ತು ಸಾವಿರ ರಾಜರನ್ನು ಕೊಂದನು. ೪೧. ರತ್ನಖಚಿತವಾದ ಕಿರೀಟಗಳ ಸಮೂಹದೊಡನೆ ಉರುಳಿದ ಚಕ್ರವರ್ತಿಗಳ ತಲೆಗಳು ಆ ದಿನದ ಭಗ್ನವಾದ ಯುದ್ಧವನ್ನು ನೋಡಬೇಕೆಂಬ ಕುತೂಹಲದಿಂದ ಭೂಮಿಯನ್ನು ನಿಧಾನವಾಗಿ ರಂಧ್ರಮಾಡಿಕೊಂಡು ಪಾತಾಳಲೋಕದಿಂದ ಬಂದು ಕಣ್ಣು ತೃಪ್ತಿಯಾಗುವಷ್ಟು ಇಣಿಕಿ ನೋಡುತ್ತಿರುವ ಸರ್ಪಗಳ ಹೆಡೆಯ ರತ್ನಗಳ ಕಾಂತಿಯನ್ನೂ ರ್ಸ್ಪಸುವಂತಿತ್ತು ಎನ್ನುವಾಗ ವ|| (ಭೀಷ್ಮನು) ಹಾಗೆ ಸೋಮಕ ಸೈನ್ಯವೆಲ್ಲವನ್ನೂ ಹೇಳಲು ಹೇಸರಿಲ್ಲದ ಹಾಗೆ ಕೊಂದು ಶ್ರೀಜಯಬಲಕ್ಕೆ ಸೋಲುಂಟಾಗುವ ಹಾಗೆ ಸಂಹರಿಸಿಯೂ ಓಡಿಸಿಯೂ ಹೊಡೆದೂ ಗೆದ್ದ ಜಟ್ಟಿಯ ಹಾಗೆ ಇದ್ದನು. ಜಗದೇಕಮಲ್ಲನಾದ ಅರ್ಜುನನೇ ಮೊದಲಾದ ವಿರಾಟ, ಉತ್ತರ, ದ್ರುಪದ, ದ್ರೌಪದೇಯ, ಚೇಕಿತಾನ, ಯುಧಾಮನ್ಯು, ಉತ್ತಮೋಜ, ಅಭಿಮನ್ಯು, ಘಟೋತ್ಕಚ, ಭೀಮಸೇನ, ನಕುಲ, ಸಹದೇವ, ಸಾತ್ಯಕಿ, ಪಂಚಪಾಂಡವರೇ ಮುಖ್ಯವಾಗಿರುವ ನಾಯಕರೆಲ್ಲರೊಡಗೂಡಿ ಧರ್ಮರಾಯನು ಶಿಖಂಡಿಯನ್ನು ಮುಂದುಮಾಡಿಕೊಂಡು ಬಂದು, ಹುಚ್ಚು ಹಿಡಿದ ಸಿಂಹವನ್ನು ಮುತ್ತುವ ಹಾಗೆ ಮುತ್ತಿದನು.

ಉ|| ಅಂಬರಮೆಲ್ಲಮಂಬಿನೊಳೆ ಪೂೞೆ ಮಹೀಭುಜರೆತ್ತಮೆಚ್ಚ ಕಿ
ತ್ತಂಬುಗಳೆತ್ತಮವ್ವಳಿಸೆ ಮಾಣದವಂ ಕಡಿದಿಕ್ಕಿ ತನ್ನ ನ|
ಲ್ಲಂಬುಗಳಿಂದಮಾರ್ದಿರದಡುರ್ತಿಸೆ ಭೂಭುಜರೆಲ್ಲಮಲ್ಲಿ ಬಿ
ಲ್ಲುಂ ಬೆಱಗಾಗೆ ಬಂದು ಪೊಣರ್ದಂ ಸೆರಗಿಲ್ಲದೆ ವಿಕ್ರಮಾರ್ಜುನಂ|| ೪೨

ವ|| ಅಂತು ಪೊಣರ್ದಾಗಳೆಮ್ಮ ಮಮ್ಮಂಗಮೆಮಗಮೀಗಳನುವರಂ ದೊರೆಯಾಯ್ತೆಂದು ಪರಶುರಾಮನ ಕೊಟ್ಟ ದಿವ್ಯಾಸ್ತ್ರಂಗಳನೊಂದನೊಂದು ಸೂೞೊ ಳೆ ತೊಟ್ಟೆಚ್ಚಾಗಳ್-

ಚಂ|| ಜ್ವಳನ ಪತತ್ರಿಯಂ ಕಡಿದು ವಾರುಣ ಪತತ್ರಿಯಿನೈಂದ್ರ ಬಾಣಮಂ
ಕಳೆದು ಸಮೀರಣಾಸ್ತ್ರದಿನಿರ್ಚಿದ ಭೂಭುಜರೆಲ್ಲರಂ ಭಯಂ|
ಗೊಳಿಸಿ ನಿಶಾತ ವಜ್ರಿಶರದಿಂ ಸುರರಂಬರದೊಳ್ ತಗುಳ್ದು ಬಿ
ಚ್ಚಳಿಸೆ ನದೀಜನುಚ್ಚಳಿಸೆ ಕಾದಿದನೇಂ ಕಲಿಯೋ ಗುಣಾರ್ಣಮಂ|| ೪೩

ವ|| ಅಂತಮೋಘಾಸ್ತ್ರ ಧನಂಜಯಂ ತನ್ನಮೋಘಾಸ್ತ್ರಂಗಳಂ ಕಡಿದೊಡೆ ಸಾಮಾನ್ಯಾಸ್ತ್ರಂಗಳೊಳ್ ಧರ್ಮಪುತ್ರಂಗೆ ತನ್ನ ನುಡಿದ ನುಡಿವಳಿಯಂ ನೆನೆದಲ್ಲಳಿಗಾಳೆಗಂಗಾದೆ-

ಚಂ|| ಕಡಿದನುದಗ್ರ ನಾಯಕರ ಸಾಯಕಮೆಲ್ಲಮನಾ ಶಿಖಂಡಿ ಪೊ
ಕ್ಕಡಿಗಿಡೆ ಬಂದು ಮುಂದೆ ನಿಲೆಯುಂ ಮೊಗಮಂ ನಡೆ ನೋಡಿಯಾತನಾ|
ರ್ದೊಡನೊಡನೆಚ್ಚೊಡೆಚ್ಚ ಮೊನೆಯಂಬುಗಳೞಡಿವೋಗೆಯುಂ ಮನಂ
ಗಿಡನವನಾಂಕೆಗೊಳ್ಳನಗಿಯಂ ಸುಗಿಯಂ ಸುರಸಿಂಧುನಂದನಂ|| ೪೪

ಇದು ರಣಮೊನ್ನೊಳಾಂತಿಱವ ಮೆಯ್ಗಲಿಯುಂ ಸಮರೈಕಮೇರುವೆ
ನ್ನದಟುಮಳುರ್ಕೆಯುಂ ಪಿರಿದು ಪೇಡಿಗದೆಂತಿದಿರಾಂಪೆನೆಂದಣಂ||
ಬೆದಱದೆ ನಟ್ಟ ಕೂರ್ಗಣೆಯ ಬಿಣ್ಪೊಯಿಂದೆ ಬೞಲ್ದನುರ್ವಿ ಪೆ
ರ್ವಿದಿರ ಸಿಡಿಂಬಿನೊಳ್ ಪುದಿದದೊಂದು ಕುಳಾಚಳದಂತೆ ಸಿಂಧುಜಂ|| ೪೫

ಉ|| ತಿಂತಿಣಿಯಾಗೆ ನಟ್ಟ ಕಣೆಯೊಳ್ ನೆಲ ಮುಟ್ಟದೆ ಮೆಯ್ಯೊಳತ್ತಮಿ
ತ್ತಂ ತೆದಿರ್ದ ಪುಣ್ಗಳೆಸೆವಕ್ಕರದಂತಿರೆ ನೋಡಿ ಕಲ್ಲಿಮೆಂ|
ಬಂತೆವೊಲಿರ್ದನಟ್ಟವಣೆ ಕೋಲ್ಗಳ ಮೇಲೆಸೆದಿರ್ದ ವೀರ ಸಿ
ದ್ಧಾಂತದ ಶಾಸನಂ ಬರೆದ ಪೊತ್ತಗೆಯಂತಮರಾಪಗಾತ್ಮಜಂ|| ೪೬

೪೨. ಭೀಷ್ಮನು ಆಕಾಶ ಪ್ರದೇಶವೆಲ್ಲವೂ ಬಾಣಸಮೂಹಗಳಲ್ಲಿಯೇ ಹೂತುಹೋಗುವ ಹಾಗೆ ರಾಜರುಗಳು ಎಲ್ಲ ಕಡೆಗಳಿಂದಲೂ ಪ್ರಯೋಗಿಸಿದ ಬಾಣಗಳು ಯಾವ ಕಡೆಗೂ ನುಗ್ಗಲು ಅವಕಾಶಕೊಡದೆ ತನ್ನ ಉತ್ತಮ ಬಾಣಗಳಿಂದ ಕತ್ತರಿಸುತ್ತಿರಲು ಅರ್ಜುನನು ಆರ್ಭಟಮಾಡಿ ಸಾವಕಾಶಮಾಡದೆ ಸಮೀಪಿಸಿ ಹೊಡೆದು ಅಲ್ಲಿಯ ರಾಜರುಗಳೆಲ್ಲ ಸಂಭ್ರಾಂತರಾಗುವ ಹಾಗೆ ಭಯವಿಲ್ಲದೆ ಮುಂದೆ ಬಂದು ಹೋರಾಡಿದನು. ವ|| ನಮ್ಮ ಮೊಮ್ಮಗನಿಗೂ ನಮಗೂ ಈಗ ಯುದ್ಧವು ಸಮಾನವಾಯಿತು ಎಂದು ಭೀಷ್ಮನು (ತಮ್ಮ ಆಚಾರ್ಯರಾದ) ಪರಶುರಾಮನು ಕೊಟ್ಟ ದಿವ್ಯಾಸ್ತ್ರಗಳನ್ನು ಒಂದೊಂದಾಗಿ ಕ್ರಮದಿಂದ ಪ್ರಯೋಗಿಸಿದನು. ೪೩. ಆಗ್ನೇಯಾಸ್ತ್ರವನ್ನು ವಾರಣಾಸ್ತ್ರದಿಂದ ಕತ್ತರಿಸಿ ಐಂದ್ರಾಸ್ತ್ರವನ್ನು ವಾಯ್ವಸ್ತ್ರದಿಂದ ಎದುರಿಸಿ ರಾಜರುಗಳನ್ನೆಲ್ಲ ಹೆದರುವ ಹಾಗೆ ಮಾಡಿ ದೇವತೆಗಳೆಲ್ಲ ಆಕಾಶದಲ್ಲಿ ಗುಂಪುಗುಂಪಾಗಿ ಕೂಡಿ ಸ್ತೋತ್ರ ಮಾಡುತ್ತಿರಲು ಅರ್ಜುನನು ಇಂದ್ರಾಸ್ತ್ರದಿಂದ ಭೀಷ್ಮನು ಮೇಲಕ್ಕೆ ನೆಗೆಯುವ ಹಾಗೆ ಹೋರಾಡಿದನು. ಅರ್ಜುನನ ಶೌರ್ಯ ಸಾಮಾನ್ಯವೆ? ವ|| ಹಾಗೆ ಬೆಲೆಯೇ ಇಲ್ಲದ ಅಸ್ತ್ರಗಳನ್ನುಳ್ಳ ಅರ್ಜುನನು ತನ್ನ ಅಮೋಘಾಸ್ತ್ರಗಳನ್ನು ಕತ್ತರಿಸಲು ಭೀಷ್ಮನು ಧರ್ಮರಾಜನಿಗೆ ತಾನು ಕೊಟ್ಟ ಮಾತನ್ನು ಜ್ಞಾಪಿಸಿಕೊಂಡು ಸಾಮಾನ್ಯವಾದ ಬಾಣಗಳಿಂದ ಮೇಳಗಾಳೆಗವನ್ನು ಕಾದಿದನು. ೪೪. ಶ್ರೇಷ್ಠರಾದ ನಾಯಕರ ಬಾಣಗಳೆಲ್ಲವನ್ನೂ ಭೀಷ್ಮನು ಕಡಿದು ಹಾಕಿದನು. (ಆಗ) ಆ ಶಿಖಂಡಿಯು ಹೆಜ್ಜೆ ತಪ್ಪಿ ಮುಂದೆ ಬಂದು ನಿಂತರೂ ಮುಖವನ್ನು ದೀರ್ಘವಾಗಿ ನೋಡಿದರೂ ಆರ್ಭಟಮಾಡಿ ಹೊಡೆದರೂ ಮೊನಚಾದ ಬಾಣಗಳು ತನ್ನ ಶರೀರದಲ್ಲಿ ನಾಟಿಕಿಕ್ಕಿರಿದರೂ ಭೀಷ್ಮನು ತನ್ನ ಮನಸ್ಥೆ ರ್ಯವನ್ನು ಕಳೆದುಕೊಳ್ಳಲಿಲ್ಲ, ಪ್ರತಿಭಟಿಸಲಿಲ್ಲ, ಹೆದರಲಿಲ್ಲ, ಬೆದರಲಿಲ್ಲ. ೪೫. ಇದು ಯುದ್ಧ; ನನ್ನನ್ನು ಪ್ರತಿಭಟಿಸುವ ಶೂರನಾದರೋ ಸಮರೈಕಮೇರುವೆಂಬ ಬಿರುದುಳ್ಳ ಅರ್ಜುನ; ನನ್ನ ಪರಾಕ್ರಮವೂ ಅದರ ವ್ಯಾಪ್ತಿಯೂ ಹಿರಿದಾದುದು. ಹೇಡಿಗೆ ಹೇಗೆ ಪ್ರತಿಭಟಿಸಲಿ? ಎಂದು ಸ್ವಲ್ಪವೂ ಹೆದರದೆ ತನ್ನ ಶರೀರದಲ್ಲಿ ನಾಟಿಕೊಂಡಿರುವ ಹರಿತವಾದ ಬಾಣಗಳ ವಿಶೇಷವಾದ ಭಾರದಿಂದ ಉಬ್ಬಿ ಬೆಳೆದ ಹೆಬ್ಬಿದಿರಿನ ಮೆಳೆಯಿಂದ ತುಂಬಿದ ಒಂದು ಕುಲಪರ್ವತದಂತೆ ಭೀಷ್ಮನು ಆಯಾಸದಿಂದ ಜೋತುಬಿದ್ದನು. ೪೬. ಶರೀರದ ನಾನಾಕಡೆಗಳಲ್ಲಿ ಎಲ್ಲೆಲ್ಲಿಯೂ ನೆಲವನ್ನು ಮುಟ್ಟದೆ ಗುಂಪುಗುಂಪಾಗಿ

ಚಂ|| ನಡೆದುದು ಬಾಳ ಕಾಲದೊಳೆ ತೊಟ್ಟೆನಗಂಕದ ಶೌಚವೀಗಳೋ
ಗಡಿಪುದೆ ಮುಟ್ಟಿ ನಾಂ ನೆಲನನೇಕದು ಪೆಣ್ಗಡಿಮೆಂದು ಮೆಯ್ಯೊಳ|
ೞಡಿದ ವಿಕರ್ಣ ಕೋಟಿಯೊಳಣಂ ನೆಲ ಮುಟ್ಟದೆ ನೋಡೆ ಬಿೞ್ದೊಡಂ
ಬಡಿಸಿದನಯ್ಯ ಶೌಚ ಗುಣದುನ್ನತಿಯಂ ಸುರಸಿಂಧುನಂದನಂ|| ೪೭

ವ|| ಅಂತ ಶರಪಂಜರದೊಳೊಱಗಿಯುಮೊಡಲಿಂ ಪತ್ತುವಿಟ್ಟು ಪೋಪ ಜೀವಮಂ ಪೋಗಲೀಯದೆ ಸ್ವಚ್ಛಂದಮಿೞ್ತ್ತು ವಪ್ಪುದಱಂದುತ್ತರಾಯಣಂ ಬರ್ಪನ್ನಮಿರಿಸಿದನಂತು ಮಾಗಳ್ ಕುರುಬಲಮೆಲ್ಲಂ ಕುರುಕುಳವನಸಿಂಹಂ ಶರಪಂಜರದೊಳೊಱಗಿದನಿನ್ನೆಮ್ಮಂ ಕಾವರಾರೆಂದೊಲ್ಲನುಲಿದೋಡಿ ಬೀಡಂ ಪೊಕ್ಕಾಗಳ್ ಧರ್ಮಪುತ್ರಂ ನಿಜಾನುಜ ಸಹಿತಂ ಬಂದು ಬಲಗೊಂಡು ಕಾಲ ಮೇಲೆ ಕವಿದು ಪಟ್ಟು-

ಕಂ|| ಕರುಣದಿನೆಮ್ಮಂ ತಾಯ್ವೋಲ್
ತರುವಲಿಗಳನೆಯ್ದೆ ನಡಪಿದಜ್ಜರ್ ನೀಮಿಂ|
ತಿರೆಯುಂ ನೋಡಿದೆವೇನೆಮ
ಗರಸಿಕೆಯೋ ಪೇೞಮೆಂದು ಶೋಕಂಗೆಯ್ದರ್|| ೪೮

ವ|| ಅಂತು ಶೋಕಂಗೆಯ್ದೊಡೆ ನೀಮಂತೆನಲ್ವೇಡ ಕ್ಷತ್ರಿಯಧರ್ಮಮಿಂತದರ್ಕೞಲ್ವೇಡ ಬೀಡಿಂಗೆ ಪೋಗಿಮೆಂದೊಡೆ ಮಹಾಪ್ರಸಾದಮಂತೆ ಗೆಯ್ವೆಮೆಂದನಿಬರುಮೆಱಗಿ ಪೊಡೆವಟ್ಟು ಪೋದರಾಗಳ್ ದುರ್ಯೋಧನಂ ಬಂದು ಪೊಡೆವಟ್ಟು-

ಚಂ|| ಇಱವುದನಾಂತ ಮಾರ್ವಲಮನಿನ್ನೆಗಮಚ್ಚರಿಯಾಗೆ ತಾಗಿ ತ
ಳ್ತಿಱದಿರಿದೊಂದವಸ್ಥೆ ನಿಮಗೆನ್ನಯ ಕರ್ಮದಿನಾದುದೆಂದೊಡಿಂ|
ಮವುದು ಕಂದ ಪಾಂಡವರ ವೈರಮನೆನ್ನೊಡವೋಕೆ ಕೋಪಮುಂ
ಕಱು ಪುಮೊಡಂಬಡೇವುದದನಿನ್ನು ಮೊಡಂಬಡು ಸಂಮಾಡುವೆಂ|| ೪೯

ವ|| ಎಂಬುದುಂ ದುರ್ಯೋಧನನಿಂತೆಂದಂ-

ನಾಟಿಕೊಂಡಿರುವ ಬಾಣಗಳಿಂದ ಬಾಯಿಬಿಟ್ಟುಕೊಂಡಿರುವ ಹುಣ್ಣುಗಳು ‘ಇಲ್ಲಿ ನೋಡಿ ಕಲಿಯಿರಿ’ ಎಂಬ ಪ್ರಕಾಶಮಾನವಾದ ಅಕ್ಷರಗಳ ಹಾಗಿರಲು ಭೀಷ್ಮನು ವ್ಯಾಸಪೀಠದ ಮೇಲಿರುವ ಪ್ರತಾಪತತ್ವದ ವೀರಶಾಸನವನ್ನು ಬರೆದಿರುವ ಪುಸ್ತಕದ ಹಾಗೆ ಶೋಭಿಸುತ್ತಿದ್ದನು. ೪೭. ಬಾಲ್ಯಕಾಲದಿಂದ ಹಿಡಿದು ಪ್ರಸಿದ್ಧವಾದ ಬ್ರಹ್ಮಚರ್ಯವು ನಡೆದುಬಂದಿದೆ. ಈಗ ನಾನು ಸ್ತ್ರೀಯಾದ ಅವಳನ್ನು ಮುಟ್ಟಿ ನನ್ನ ಶೌಚಗುಣವನ್ನು ಹೋಗಲಾಡಿಸುವುದೇ? ಕೆಡಿಸುವುದೇ? ಎಂದು ಶರೀರದಲ್ಲಿ ನಾಟಿಕೊಂಡು ತುಂಬಿದ್ದ ಲೆಕ್ಕವಿಲ್ಲದ ಬಾಣಗಳಿಂದ ಭೂದೇವಿಯನ್ನು ಸ್ವಲ್ಪವೂ ಮುಟ್ಟದೆ ಭೀಷ್ಮನು ತನ್ನ ಶೌಚಗುಣವನ್ನು ಪ್ರಸಿದ್ಧಪಡಿಸಿದನು. ವ|| ಹೀಗೆ ಶರಪಂಜರದಲ್ಲೊರಗಿದ್ದರೂ ಶರೀರದಿಂದ ತೊಲಗಿಹೋಗುವ ಜೀವವನ್ನು ಹೋಗುವುದಕ್ಕೆ ಅವಕಾಶ ಕೊಡದೆ ಸ್ವೇಚ್ಛಾಮರಣಿಯಾದುದರಿಂದ ಉತ್ತರಾಯಣವು ಬರುವವರೆಗೆ ಇರಿಸಿದನು. ಆಗ ಕೌರವಸೈನ್ಯವೆಲ್ಲವೂ ಕುರುಬಲವೆಂಬ ಕಾಡಿಗೆ ಸಿಂಹದೋಪಾದಿಯಲ್ಲಿದ್ದ ಭೀಷ್ಮನು ಶರಪಂಜರದಲ್ಲೊರಗಿದನು, ಇನ್ನು ನಮ್ಮನ್ನು ರಕ್ಷಿಸುವವರಾರು ಎಂದು ನಿಧಾನವಾಗಿ ನುಡಿದು ಓಡಿ ಬೀಡನ್ನು ಸೇರಿತು. ಧರ್ಮರಾಜನು ತನ್ನ ತಮ್ಮಂದಿರೊಡನೆ ಬಂದು ಪ್ರದಕ್ಷಿಣೆ ಮಾಡಿ ಭೀಷ್ಮರ ಕಾಲ ಮೇಲೆ ಕವಿದುಬಿದ್ದು ಅತ್ತನು. ೪೮. ತಬ್ಬಲಿಗಳಾದ ನಮ್ಮನ್ನು ದಯೆಯಿಂದ ತಾಯಿಯ ಹಾಗೆ ಸಾಕಿದ ಅಜ್ಜರಾದ ನೀವು ಈ ಸ್ಥಿತಿಯಲ್ಲಿರುವುದನ್ನು ನೋಡಿದೆವು. ನಮಗೆ ಎಂತಹ ಅರಸಿಕೆಯೋ ಹೇಳಿ ಎಂದು ದುಖಪಟ್ಟನು. ವ|| ‘ನೀವು ಹಾಗೆ ಹೇಳಬೇಡಿ; ಕ್ಷತ್ರಧರ್ಮವೇ ಹಾಗೆ; ಬೀಡಿಗೆ ಹೋಗಿ’ ಎನ್ನಲು ‘ಮಹಾಪ್ರಸಾದ ಹಾಗೆಯೇ ಮಾಡುತ್ತೇವೆ’ ಎಂದು ಎಲ್ಲರೂ ಎರಗಿ ನಮಸ್ಕಾರ ಮಾಡಿ ಹೋದರು. ಆಗ ದುರ್ಯೋಧನನು ಬಂದು ನಮಸ್ಕಾರಮಾಡಿ ಹೇಳಿದನು. ೪೯. ‘ಪ್ರತಿಭಟಿಸಿದ ಪರಪಕ್ಷವನ್ನು ಇಲ್ಲಿಯವರೆಗೆ ಆಶ್ಚರ್ಯವಾಗುವ ಹಾಗೆ ತಗುಲಿ ಕೂಡಿಕೊಂಡು ಕತ್ತರಿಸಿದಿರಿ. ಈಗ ಈ ಶರಶಯನದಲ್ಲಿ ಮಲಗುವ ದುರವಸ್ಥೆಯು ನನ್ನ ಪುರಾತನ ಕರ್ಮದಿಂದಾಯಿತು ಎನ್ನಲು ಭೀಷ್ಮನು ‘ಮಗು, ಪಾಂಡವರ ಮೇಲಿನ ದ್ವೇಷವನ್ನು ಇನ್ನು ಮೇಲಾದರೂ ಬಿಡು. ಕೋಪವೂ ದ್ವೇಷವೂ ನನ್ನೊಡನೆ ಹೋಗಲಿ; ವೈರದಿಂದೇನು ಪ್ರಯೋಜನ? ನೀನು ಒಪ್ಪುವವನಾಗು ಸಂಯನ್ನು ಮಾಡುತ್ತೇನೆ. ವ|| ಎನ್ನಲು ದುರ್ಯೋಧನನು

ಚಂ|| ಅದಟಿನಳುರ್ಕೆಯಂ ಬಲದಳುರ್ಕೆಯುಮಂ ಗೆಡೆಗೊಂಡು ನೀಮಿದಾ
ವುದು ಪಡೆಮಾತನಿಂತು ನುಡಿದಿರ್ ಪುದುವಾೞ್ಕೆಯೊಳೆನ್ನ ಬಳ್ಕಿದ|
ಳ್ಕಿದ ಬಗೆಗಂಡಿರೇ ಮಗನೆ ನೀಂ ಪಗೆಯಂ ತಱದೊಟ್ಟು ನೆಟ್ಟನೆ
ನ್ನದೆ ಬಗೆಗೆಟ್ಟು ದಾಯಿಗರೊಳಿಂ ಮಗುೞ್ದುಂ ಪುದುವಾೞ್ವುದೆಂಬಿರೇ|| ೫೦

ವ|| ಎಂಬುದುಮಿಲ್ಲಿಂದಂ ಮೇಲಾದ ಕಜ್ಜಮಂ ನೀನೆ ಬಲ್ಲೆ ಬೀಡಿಂಗೆ ಬಿಜಯಂಗೆಯ್ಯಿಮೆನೆ ಪೊಡೆವಟ್ಟು ಸುಯೋಧನಂ ಪೋದನಾಗಳ್-

ಚಂ|| ನೆರೆದ ವಿರೋನಾಯಕರನಾಹವದೊಳ್ ತಱದೊಟ್ಟಲೊಂದಿದೊ
ಡ್ಡುರುಳ್ವಿನಮಾ ಗುಣಾರ್ಣವನಡುರ್ತಿಱದಲ್ಲಿ ಸಿಡಿಲ್ದ ನೆತ್ತರೊಳ್|
ಪೊರೆದು ನಿರಂತರಂ ಪೊಲಸು ನಾಱುವ ಮೆಯ್ಯನೆ ಕರ್ಚಲೆಂದು ಚೆ
ಚ್ಚರಮಪರಾಂಬುರಾಶಿಗಿೞವಂತಿೞದಂ ಕಮಳೈಕಬಾಂಧವಂ|| ೫೧

ವ|| ಆಗಳ್ ದುರ್ಯೋಧನನಾತ್ಮೀಯ ಸೇನಾನಾಯಕನಪ್ಪ ಗಾಂಗೇಯಂ ಬಿದಿರ ಸಿಡಿಂಬಿನ ಪೊದಳಗೆ ಮದೊಱಗಿದ ಮೃಗರಾಜನಂತೆ ಶರಶಯನದೊಳೊಱಗಿದಂ ಕದನತ್ರಿಣೇತ್ರನನೆಂತು ಗೆಲ್ವೆನೆಂದು ಚಿಂತಿಸಿ ಮಂತ್ರಶಾಲೆಯಂ ಪೊಕ್ಕು ಕರ್ಣ ದ್ರೋ ಕೃಪ ಕೃತವರ್ಮಾಶ್ವತ್ಥಾಮ ಶಲ್ಯ ಶಕುನಿ ಸೈಂಧವ ಭೂರಿಶ್ರವ ಪ್ರಭೃತಿಗಳ್ಗೆಲ್ಲಂ ಬೞಯನಟ್ಟಿ ಬರಿಸಿ

ಶಾ|| ಆಯ್ತೇ ಸಾಸಿಕೊಂಡು ಪಾಂಡುಸುತರಂ ನಣ್ಪಿಂಗೆ ಬೆನ್ನಿತ್ತು ದಲ್
ಸಯ್ತಾಯ್ತಜ್ಜನ ಮಾತು ನಮ್ಮ ಪಡೆಯಂ ಕಾವನ್ನರಿನ್ನಾರೊ ಸು|
ಪ್ಠೀತಂ ಕಾವೊಡೆ ಕರ್ಣನಕ್ಕುಮದಱಂ ನಾಮೆಲ್ಲಮಾತಂಗೆ ನಿ
ರ್ದ್ವೈತಂ ಬೀರದ ಬೀರವಟ್ಟಮನಿದಂ ನಿರ್ವ್ಯಾಜದಿಂ ಕಟ್ಟುವಂ ೫೨

ವ|| ಎಂಬುದುಂ ಕರ್ಣನಿಂತೆಂದಂ-

ಮ|| ಸುರಸಿಂಧೂದ್ಧವನಿಂ ಬೞಕ್ಕೆ ಪೆಱರಾರ್ ಸೇನಾಪತ್ಯಕ್ಕೆ ತ
ಕ್ಕರೆ ಲೋಕೈಕ ಧನುರ್ಧರಂ ಕಳಶಜಂ ತಕ್ಕಂ ನದೀನಂದನಂ|
ಗೆ ರಣಕ್ಕಾಂ ನೆರಮಾದೆನಪ್ಪೊಡಿನಿತೇಕಾದಪ್ಪುದೀ ಪೊೞ್ತೆ ಪೊ
ೞರವೇಡೀವುದು ಬೀರವಟ್ಟಮನದಂ ದೋರಣಂಗೆ ನೀಂ ಭೂಪತೀ|| ೫೩

ಹೀಗೆಂದನು- ೫೦. ಪರಾಕ್ರಮದ ಅತಿಶಯವನ್ನೂ ಸೈನ್ಯದ ಆಕ್ಯವನ್ನೂ ಒಟ್ಟಿಗೇ ಹೊಂದಿ ನೀವು ‘ಕೂಡಿ ಬಾಳಿ’ ಎಂಬ ಈ ಪ್ರತಿಮಾತನ್ನು (ಉಪದೇಶವನ್ನು) ಈ ರೀತಿ ನುಡಿದಿರಿ. ಅಳುಕಿದ ಹೆದರಿದ ಮನಸ್ಸನ್ನೇನಾದರೂ ಕಂಡಿರೇನು? ಮಗನೆ ನೀನು ನೇರವಾಗಿ ಶತ್ರುವನ್ನು ಕತ್ತರಿಸಿ ರಾಶಿಮಾಡು ಎಂದು ಹೇಳದೆ ಜ್ಞಾತಿಗಳಲ್ಲಿ ಇನ್ನೂ ಕೂಡಿ ಬಾಳು ಎನ್ನುವುದೇ? ವ|| ಎನ್ನಲು ‘ಇನ್ನು ಇದಕ್ಕಿಂತಲೂ ಉತ್ತಮವಾದ ಕಾರ್ಯವನ್ನು (ಇನ್ನು ಮೇಲಾಗಬೇಕಾದ ಕಾರ್ಯವನ್ನು) ನೀನೇ ಬಲ್ಲೆ, ಬೀಡಿಗೆ ಹೊರಡು’ ಎನ್ನಲು ನಮಸ್ಕಾರಮಾಡಿ ದುರ್ಯೋಧನನು ಹೋದನು. ೫೧. ಒಟ್ಟುಗೂಡಿದ ಶತ್ರುನಾಯಕರನ್ನು ತರಿದು ಯುದ್ಧದಲ್ಲಿ ರಾಶಿ ಮಾಡಲು ಸೇರಿದ್ದ ಆ ಸೈನ್ಯದ ರಾಶಿಯು ಉರುಳುವಂತೆ ಅರ್ಜುನನು ಸಮೀಪಕ್ಕೆ ಬಂದು ಇರಿದಾಗ ಸಿಡಿದ ರಕ್ತದಿಂದ ಲೇಪನಗೊಂಡು ಯಾವಾಗಲೂ ದುರ್ನಾತ ಹೊಡೆಯುತ್ತಿದ್ದ ತನ್ನ ಶರೀರವನ್ನು ತೊಳೆಯಬೇಕೆಂದು ಸೂರ್ಯನು ಜಾಗ್ರತೆಯಾಗಿ ಪಶ್ಚಿಮಸಮುದ್ರಕ್ಕೆ ಇಳಿದನೋ ಎಂಬಂತೆ ಸೂರ್ಯನು ಮುಳುಗಿದನು. ವ|| ಆಗ ದುರ್ಯೋಧನನು ತನ್ನ ಸೇನಾನಾಯಕನಾದ ಭೀಷ್ಮನು ಬಿದಿರ ಮೆಳೆಯ ಪೊದರಿನಲ್ಲಿ ಮರೆತು ಮಲಗಿದ ಸಿಂಹದಂತೆ ಶರಶಯನದಲ್ಲಿ ಮಲಗಿದನು. ಅರ್ಜುನನನ್ನು ಹೇಗೆ ಗೆಲ್ಲಲಿ ಎಂದು ಚಿಂತಿಸಿ ಮಂತ್ರಶಾಲೆಯನ್ನು ಪ್ರವೇಶಮಾಡಿ ಕರ್ಣ, ದ್ರೋಣ, ಕೃಪ, ಕೃತವರ್ಮ, ಅಶ್ವತ್ಥಾಮ, ಶಲ್ಯ, ಶಕುನಿ, ಸೈಂಧವ, ಭೂರಿಶ್ರವನೇ ಮೊದಲಾದವರಿಗೆಲ್ಲ ದೂತರನ್ನು ಕಳುಹಿಸಿ ಬರಮಾಡಿದನು. ೫೨. ಪಾಂಡವರನ್ನು ಗೆದ್ದುದಾಯಿತೇ? ಬಾಂಧವ್ಯಕ್ಕೆ ಆಶ್ರಯಕೊಟ್ಟ (ಸೋತು) ಅಜ್ಜನಾಡಿದ ಮತು ನೆಟ್ಟಗಾಯಿತಲ್ಲವೇ? ಇನ್ನು ಮೇಲೆ ನಮ್ಮ ಸೈನ್ಯವನ್ನು ರಕ್ಷಿಸುವವರಾರಿದ್ದಾರೆ. ರಕ್ಷಿಸುವುದಕ್ಕೆ ಸಮರ್ಥನಾದವನು ಈ ಕರ್ಣನೇ! ಆದುದರಿಂದ ನಾವೆಲ್ಲ ಎರಡನೆಯ ಮಾತಿಲ್ಲದೆ (ಸರ್ವಾನುಮತದಿಂದ) ಯಾವ ನೆಪವೂ ಇಲ್ಲದೆ ವೀರಪಟ್ಟವನ್ನು (ಸೇನಾಪತ್ಯವನ್ನು) ಅವನಿಗೆ ಕಟ್ಟೋಣ ವ|| ಎನ್ನಲು ಕರ್ಣನು ಹೀಗೆಂದನು- ೫೩. ಭೀಷ್ಮನಾದ ಮೇಲೆ ಸೇನಾಪತ್ಯಕ್ಕೆ ಯೋಗ್ಯರಾದವರು ಬೇರೆ ಯಾರಿದ್ದಾರೆ? ಯೋಗ್ಯರಾದವರಿರುವ ಪಕ್ಷದಲ್ಲಿ ಪ್ರಪಂಚದ ಬಿಲ್ಗಾರರಲ್ಲೆಲ್ಲ ಅಗ್ರೇಸರನಾದ ದ್ರೋಣನೇ ಯೋಗ್ಯನಾದವನು. ನಾನು ಭೀಷ್ಮನಿಗೆ ಸಹಾಯಮಾಡಿದ್ದಿದ್ದರೆ ಹೀಗೇಕಾಗುತ್ತಿತ್ತು. ಈ ಹೊತ್ತೇ ಹೊತ್ತು (ಇದೇ ಸರಿಯಾದ ಕಾಲ).

ವ|| ಅಂತು ಭೀಷ್ಮಾದನಂತರಂ ದ್ರೋಣಯೆಂಬುದು ಪರಾಶರ ವಚನಮೆನೆ ಕರ್ಣನ ನುಡಿಗೊಡಂಬಟ್ಟು-

ಕಂ|| ವಿಸಸನ ರಂಗಕ್ಕಾನಿರೆ
ಬೆಸಗೊಳ್ವುದೆ ಪೆಱರನೆಂದು ಜಯಪಟಹಂಗಳ್|
ದೆಸೆದೆಸೆಗೆಸೆವಿನೆಗಂ ಕ
ಟ್ಟಿಸಿಕೊಂಡಂ ಬೀರವಟ್ಟಮಂ ಕಳಶಭವಂ|| ೫೪

ವ|| ಅಂತು ಕುಂಭಸಂಭವನನೇಕ ಶಾತಕುಂಭ ಕುಂಭಸಂಭೃತ ಮಂಗಳಗಂಗಾ ಜಲಂಗಳಿಂ ಪವಿತ್ರೀಕೃತಗಾತ್ರನಾಗಿ ಕೌರವಬಳಾಗ್ರಗಣ್ಯನಾಗಿರ್ದನಿತ್ತ ತದ್ವೃತ್ತಾಂತಮ ನೆಲ್ಲಮನಜಾತಶತ್ರು ಕೇಳ್ದು ಜನಾರ್ದನನೊಡನೆ ರಿಪುಬಳಮರ್ದನೋಪಾಯಮಂ ಸಮಕಟ್ಟುತಿರ್ಪನ್ನೆಗಂ-

ಮ|| ಅದಟಂ ಸಿಂಧುತನೂಭವಂ ವಿಜಯನೊಳ್ ಮಾರ್ಕೊಂಡಣಂ ಕಾದಲಾ
ಱದೆ ಬೆಂಬಿೞ್ದೊಡೆ ಕಾದಲೆಂದು ಬೆಸನಂ ಪೂಣ್ದಂ ಗಡಂ ದ್ರೋಣನಂ||
ತದುವಂ ನೋಡುವೆನೆಂದು ಕಣ್ ತಣಿವಿನಂ ನೋಡಲ್ಕೆ ಬರ್ಪಂತೆ ಬಂ
ದುದಯಾದ್ರೀಂದ್ರಮನೇ ಭಾನು ಪೊಱಮಟ್ಟೊಡ್ಡಿತ್ತನೀಕಾರ್ಣವಂ|| ೫೫

ವ|| ಆಗಳ್ ಪಾಂಡವ ಬಲದ ಸೇನಾನಾಯಕಂ ಧೃಷ್ಟದ್ಯುಮ್ನನೊಡ್ಡಿದ ವಜ್ರವ್ಯೂಹಕ್ಕೆ ಪದ್ಮವ್ಯೂಹಮನೊಡ್ಡಿ ತದ್ವ್ಯೂಹದ ಮೊನೆಗೆ ವಂದು-

ಮಂ|| ಕ್ರಾಂ|| ಶೋಣಾಶ್ವಂಗಳ್ ರಜತ ವಥಮಂ ಪೂಡೆ ಕುಂಭಧ್ವಜಂ ಗೀ
ರ್ವಾಣಾವಾಸಂಬರಮಡರೆ ಮಾಡ್ಡು ದಲ್ ಸಾಲದೆನ್ನೀ|
ಬಾಣಾವಾಸಕ್ಕೆನುತುಮಳವಂ ಬೀಱುತುಂ ಬಿಲ್ಗೆ ಜಾಣಂ
ದ್ರೋಣಂ ನಿಂದಂ ಮಸಗಿ ತಿರುಪುತ್ತೊಂದು ಕೂರಂಬನಾಗಳ್|| ೫೬

ಕಂ|| ಆ ಸಕಳ ಧರಾಶರ
ಬೀಸುವ ಕುಂಚಮನೆ ಪಾರ್ದು ಬೀಸಲೊಡಂ ಕೆ|
ಯ್ವೀಸಲೊಡಮಱದು ತಾಗಿದು
ವಾಸುಕರಂ ಬೆರಸು ತಡೆಯದುಭಯ ಬಲಂಗಳ್|| ೫೭

ವ|| ಅಂತು ಚಾತುರ್ದಂತಮೊಂದೊಂದಳ್ ತಾಗಿ ತಳ್ತಿಱವಲ್ಲಿ ತಲೆಗಳ್ ಪಱಯೆ ಬರಿಗಳ್ ಮುಱಯೆ ತೊಡೆಗಳುಡಿಯೆ ಪುಣ್ಗಳ್ ಸುಲಿಯೆ-

ಸಾವಕಾಶ ಮಾಡಬೇಡ; ದುರ್ಯೋಧನ, ವೀರಪಟ್ಟವನ್ನು ನೀನು ದ್ರೋಣನಿಗೆ ಕೊಡು. ವ|| ‘ಭೀಷ್ಮನಾದ ಮೇಲೆ ದ್ರೋಣ ಎಂಬುದು ವ್ಯಾಸಋಷಿಗಳ ಮಾತು’ ಎನ್ನಲು ಹಾಗೆಯೇ ಆಗಲಿ ಎಂದು ಕರ್ಣನ ಮಾತಿಗೆ ಒಪ್ಪಿದನು. ೫೪. ಯುದ್ಧರಂಗಕ್ಕೆ ನಾನಿರುವಾಗ ಬೇರೆಯವರನ್ನು ಪ್ರಶ್ನೆಮಾಡುವುದೇ (ವಿಚಾರಮಾಡುವುದೇ) ಎಂದು ಹೇಳುತ್ತ ಜಯಭೇರಿಗಳು ದಿಕ್ಕುದಿಕ್ಕುಗಳಲ್ಲಿಯೂ ಭೋರ್ಗರೆಯುತ್ತಿರಲು ದ್ರೋಣನು ವೀರಪಟ್ಟವನ್ನು ಕಟ್ಟಿಸಿಕೊಂಡನು. ವ|| ಹಾಗೆ ದ್ರೋಣಾಚಾರ್ಯನು ಅನೇಕ ಚಿನ್ನದ ಕಲಶಗಳಲ್ಲಿ ತುಂಬಿಟ್ಟಿದ್ದ ಮಂಗಳ ಗಂಗಾಜಲದಿಂದ ಶುದ್ಧಿ ಮಾಡಲ್ಪಟ್ಟ ಶರೀರವುಳ್ಳವನಾಗಿ ಕೌರವಸೈನ್ಯದ ಮೊದಲಿಗನಾಗಿದ್ದನು. ಈ ಕಡೆ ಈ ವೃತ್ತಾಂತವನ್ನೆಲ್ಲ ಧರ್ಮರಾಯನು ಕೇಳಿ ಕೃಷ್ಣನೊಡನೆ ಶತ್ರುಸೈನ್ಯವನ್ನು ನಾಶಪಡಿಸುವ ಉಪಾಯವನ್ನು ಏರ್ಪಡಿಸಿದ್ದನು. ೫೫. ಪರಾಕ್ರಮಶಾಲಿಯಾದ ಭೀಷ್ಮನು ಅರ್ಜುನನನ್ನು ಪ್ರತಿಭಟಿಸಿ ವಿಶೇಷವಾಗಿ ಕಾದಲಾರದೆ ಬೆನ್ನು ತಿರುಗಿಸಲು ದ್ರೋಣನು ತಾನು ಕಾದುವೆನೆಂದು ಕಾರ್ಯವನ್ನು ಪ್ರತಿಜ್ಞೆ ಮಾಡಿದನಲ್ಲವೇ? ಅದನ್ನು ನೋಡಿಯೇಬಿಡುತ್ತೇನೆ ಎಂದು ಕಣ್ಣು ತೃಪ್ತಿಪಡುವವರೆಗೆ ನೋಡಲು ಬರುವ ಹಾಗೆ ಸೂರ್ಯನು ಉದಯ ಪರ್ವತವನ್ನೇರಿದನು. ಸೇನಾಸಮುದ್ರವು ಹೊರಟು ಚಾಚಿಕೊಂಡಿತು. ವ|| ಆಗ ಪಾಂಡವಸೈನ್ಯದ ಸೇನಾನಾಯಕನಾದ ದೃಷ್ಟದ್ಯುಮ್ನನು ಒಡ್ಡಿದ್ದ ವಜ್ರವ್ಯೂಹಕ್ಕೆ ಪ್ರತಿಯಾಗಿ ಪದ್ಮವ್ಯೂಹವನ್ನೊಡ್ಡಿ ಆ ವ್ಯೂಹದ ಮುಂಭಾಗಕ್ಕೆ ಬಂದು ೬೫. ಬೆಳ್ಳಿಯ ತೇರಿಗೆ ಕೆಂಪುಕುದುರೆಗಳನ್ನು ಹೂಡಿರಲು ಕಲಶದ ಚಿಹ್ನೆಯುಳ್ಳ ಬಾವುಟವು ದೇವಲೋಕದವರೆಗೆ ಹತ್ತಿರಲು, ಶತ್ರುಸೈನ್ಯವು ಈ ನನ್ನ ಬತ್ತಳಿಕೆಗೆ ಸಾಕಾಗುವುದಿಲ್ಲವಲ್ಲವೇ ಎಂದು ಹೇಳಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತ ಬಿಲ್ಲಿನಲ್ಲಿ ಜಾಣನಾದ ದ್ರೋಣನು ರೇಗಿ ಒಂದು ಹರಿತವಾದ ಬಾಣವನ್ನು ಬೀಸುತ್ತ ನಿಂತು ಕೊಂಡನು. ೫೭. ಆ ರಾಜರುಗಳಲ್ಲಿ ಬೀಸುವ ಚವುರಿಗಳನ್ನೇ ನೋಡಿಕೊಂಡು ಕೈಬೀಸಿದೊಡನೆಯೇ ಎರಡುಸೈನ್ಯಗಳೂ ಅದನ್ನು ತಿಳಿದು ಸಾವಕಾಶಮಾಡದೆ ವೇಗದಿಂದ ಕೂಡಿ ತಾಗಿದುವು.

ವ|| ಚತುರಂಗಬಲವೂ ಒಂದರೊಡನೊಂದು ತಾಗಿ ಕೂಡಿಕೊಂಡು ಯುದ್ಧಮಾಡುವಾಗ ತಲೆಗಳು ಹರಿದುವು, ಪಕ್ಕೆಗಳು

ಚಂ|| ಒಡನೆ ನಭಂಬರಂ ಸಿಡಿಲ್ವ ಪಂದಲೆ ಸೂಸುವ ಕಂಡದಿಂಡೆಗಳ್
ತೊಡರೆ ತೆರಳ್ದ ನೆತ್ತರ ಕಡಲ್ ನೆಣದೊಳ್ಗೆಸಳ್ ಜಿಗಿಲ್ತಗು|
ರ್ವಡರೆ ನಿರಂತರಂ ಪೊಳೆವ ಬಾಳುಡಿ ಸುಯ್ವ ನವ ವ್ರಣಂಗಳೊಳ್
ಪೊಡರೆ ಪೊದೞ್ದುದದ್ಭುತ ಭಯಾನಕಮಾಹವ ರಂಗಭೂಮಿಯೊಳ್|| ೫೮

ವ|| ಆಗಳೆರಡುಂ ಬಲದ ಸೇನಾನಾಯಕರೊಂದೊರ್ವರೊಳ್ ಕಾದುವಾಗಳ್ ಕುಂಭಸಂಭವಂ ಧರ್ಮಪುತ್ರನ ಮೊನೆಯೊಳ್ ಭರಂಗೆಯ್ದು ಕಾದುವಾಗಳ್-

ವ|| ಧ್ವಜಮಂ ಖಂಡಿಸಿ ಪೂಣ್ದು ಬಾಣದೊಳೆ ಧೃಷ್ಪದ್ಯುಮ್ನನಂ ನೆಟ್ಟನೊ
ಟ್ಟಜೆಯಿಂ ತೂಳ್ದಿ ಶಿಖಂಡಿಯಂ ದ್ರುಪದನಂ ಕಾಯ್ಪಿಂದಮೇಸಾಡಿ ಮಿ|
ಕ್ಕು ಜವಂ ಕೊಲ್ವವೊಲಾತನಿಂ ಕಿಱಯರಂ ಪನ್ನೊರ್ವರಂ ಕೊಂದು ಮ
ತ್ಸ್ಯಜನಂ ಮಾಣದೆ ಕೊಂದನೊಂದೆ ಶರದಿಂ ನಿಶ್ಯಂಕನಂ ಶಂಕನಂ|| ೫೯

ವ|| ಆಗಳ್ ಸಾಲ್ವಲ ದೇಶದರಸಂ ಚೇಕಿತ್ಸಂ ಪ್ರಳಯಕಾಲದ ಮೇಘಘಟೆಗಳೆನಿಸುವ ನೇಕಾನೇಕಪ ಘಟೆಗಳ್ವೆರಸರಸನಂ ಪೆಱಗಿಕ್ಕಿ ಬಂದು ತಾಗಿದಾಳ್-

ಕಂ|| ಓರೊಂದೆ ಪಾರೆಯಂಬಿನೊ
ಳೋರೊಂದೆ ಗಜೇಂದ್ರಮುರುಳೆ ತೆಗೆನೆದೆಚ್ಚೆ|
ಚ್ಚೋರಣದೊಳ್ ಚೇಕಿತ್ಸನ
ನಾರುಮಗುರ್ವಿಸೆ ಘಟೋದ್ಭುವಂ ತಱದಾರ್ದಂ|| ೬೦

ವ|| ಅಂತು ಪಾಂಡವ ಬಲಮೆಲ್ಲಮನಲ್ಲಕಲ್ಲೋಲಂ ಮಾಡಿ ಕಳಶಕೇತನನಜಾತಶತ್ರುಮಂ ಪಿಡಿಯಲೆಯ್ತರ್ಪಾಗಳ್

ಸ್ರ|| ಕಾದಲ್ ಸಂಸಪ್ತಕರ್ಕಳ್ ಕರೆದೊಡವರ ಬೆನ್ನಂ ತಗುಳ್ದಾದ ಕಾಯ್ಪಿಂ
ಕಾದುತ್ತಿರ್ಪಾತನಂತಾ ಕಳಕಳಮನದಂ ಕೇಳ್ದು ಭೋರೆಂದು ಬಂದೆ|
ಚ್ಚಾ ದಿವ್ಯಾಸ್ತ್ರಂಗಳಿಂ ತಮ್ಮೊವಜರುಗಿಯೆ ತಮ್ಮಣ್ಣನಂ ಶೌರ್ಯದಿಂದಂ
ಕಾದಂ ಮುಂ ಬಿಜ್ಜನಂ ಕಾದರಿಗನುೞದರಂ ಕಾವುದೇಂ ಚೋದ್ಯಮಾಯ್ತೆ|| ೬೧

ವ|| ಆಗಳ್ ಮರ್ತಾಂಡಂ ಪ್ರಚಂಡಮಾರ್ತಾಂಡನ ಶರ ನಿಕರ ಸುರಿತ ಕಿರಣಂಗಳ್ ಕವಿಯೆ ತನ್ನ ಕಿರಣಂಗಳ್ ಮಸುಳ್ದಪರಜಳನಿಗಿೞದನಾಗಳೆರಡುಂ ಪಡೆಗಳಪಹಾರತೂರ್ಯಂಗಳಂ ಬಾಜಿಸಿದಾಗಳ್-

ಮುರಿದುವು, ತೊಡೆಗಳು ಒಡೆದುವು, ಹುಣ್ಣುಗಳು ಬಿರಿದುವು- ೫೮. ಒಡನೆಯೇ ಆಕಾಶದವರೆಗೂ ಸಿಡಿಯುವ ಹಸಿಯ ತಲೆಯೂ ಚೆಲ್ಲುವ ಮಾಂಸಖಂಡದ ಮುದ್ದೆಗಳೂ ಸಾಂದ್ರವಾದ ರಕ್ತಸಮುದ್ರದ ಕೊಬ್ಬಿನ ಒಳ್ಳೆಯ ಕೆಸರಿನಲ್ಲಿ ಅಂಟಿಕೊಂಡು ಭಯವನ್ನು ಹೆಚ್ಚಿಸುತ್ತಿರಲು, ಒಂದೇ ಸಮನಾಗಿ ಹೊಳೆಯುತ್ತಿರುವ ಕತ್ತಿಯ ಚೂರುಗಳು ದುಡಿಯುತ್ತಿರುವ ಹೊಸಗಾಯಗಳಲ್ಲಿ ಥಳಥಳಿಸುತ್ತಿರಲು ಯುದ್ಧಭೂಮಿಯಲ್ಲಿ ಆಶ್ಚರ್ಯವೂ ಭಯವೂ ವ್ಯಾಪಿಸಿದುವು. ವ|| ಆಗ ಎರಡು ಸೈನ್ಯದ ಸೇನಾ ನಾಯಕರೂ ಪರಸ್ಪರ ಕಾದುವಾಗ ದ್ರೋಣನು ಧರ್ಮರಾಜನೊಡನೆ ಆರ್ಭಟಮಾಡಿ ಕಾದಿದನು. ೫೯. ಬಾವುಟವನ್ನು ಕತ್ತರಿಸಿ ಧೃಷ್ಟದ್ಯುಮ್ನನನ್ನು ಬಾಣಗಳಲ್ಲಿ ಹೂಳಿ ಶಿಖಂಡಿಯನ್ನು ನೇರವಾಗಿ ಪೌರುಷದಿಂದ ತಳ್ಳಿ ದ್ರುಪದನನ್ನು ಕೋಪದಿಂದ ಹೊಡೆದು ಮೀರಿ ಆತನ ತಮ್ಮಂದಿರಾದ ಹನ್ನೊಂದು ಜನರನ್ನೂ ಯಮನು ಕೊಲ್ಲುವ ಹಾಗೆ ಕೊಂದು ವಿರಾಟನ ಮಗನಾದ ಶಂಕಾರಹಿತನಾದ ಶಂಖನನ್ನು ಒಂದೇ ಬಾಣದಿಂದಕೊಂದು ಹಾಕಿದನು. ವ|| ಆಗ ಸಾಲ್ವಲದೇಶದ ಅರಸನಾದ ಚೇಕಿತ್ಸನು ಪ್ರಳಯಕಾಲದ ಮೋಡಗಳೆನಿಸುವ ಅನೇಕ ಆನೆಯ ಗುಂಪುಗಳನ್ನು ಕೂಡಿಕೊಂಡು ರಾಜನನ್ನು ಹಿಂದಿಕ್ಕಿ ಬಂದು ತಗುಲಿದನು. ೬೦. ಒಂದೊಂದು ಪಾರೆಯಂಬಿನಿಂದಲೇ ಒಂದೊಂದು ಅನೆಯುರುಳಲು ಹೆದೆಯನ್ನು ಕಿವಿಯವರೆಗೆ ಸೆಳೆದು ಹೊಡೆದು ಕ್ರಮವಾಗಿ ಎಲ್ಲರೂ ಭಯಪಡುವ ಹಾಗೆ ಚೇಕಿತ್ಸನನ್ನು ದ್ರೋಣನು ಕತ್ತರಿಸಿ ಆರ್ಭಟಮಾಡಿದನು. ವ|| ಪಾಂಡವಸೈನ್ಯವನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಚೆದುರಿಸಿ ದ್ರೋಣನು ಧರ್ಮರಾಜನನ್ನು ಹಿಡಿಯಲು ಬಂದನು. ೬೧. ಸಂಸಪ್ತಕರುಗಳು ತಮ್ಮೊಡನೆ ಕಾದಲು ಕರೆಯಲಾಗಿ ಅವರ ಬೆನ್ನಟ್ಟಿಹೋಗಿ ವಿಶೇಷಕೋಪದಿಂದ ಕಾದುತ್ತಿದ್ದ ಅರ್ಜುನನು ಆ ಕಳಕಳಶಬ್ದವನ್ನು ಕೇಳಿ ಭೋರೆಂದು ಬಂದು ಪ್ರಯೋಗಿಸಿದ ಶ್ರೇಷ್ಠವಾದ ಬಾಣಗಳಿಂದ ದ್ರೋಣಾಚಾರ್ಯರು ಹಿಮ್ಮೆಟ್ಟಿಸಲು ಅರ್ಜುನನು ತಮ್ಮಣ್ಣನಾದ ಧರ್ಮರಾಜನನ್ನು ಪರಾಕ್ರಮದಿಂದ ರಕ್ಷಿಸಿದನು. ಮೊದಲು ವಿಜಯಾದಿತ್ಯನನ್ನು ರಕ್ಷಿಸಿದವನಿಗೆ ಉಳಿದವರನ್ನು ರಕ್ಷಿಸುವುದೇನು ಆಶ್ಚರ್ಯವೇ? ವ|| ಆಗ ಸೂರ್ಯನು ಪ್ರಚಂಡಮಾರ್ತಾಂಡನಾದ ಅರ್ಜುನನ ಬಾಣರಾಶಿಯ ಪ್ರಕಾಶಮಾನವಾದ ಕಿರಣಗಳಿಂದ ನಿಸ್ತೇಜವಾಗಿ ಪಶ್ಚಿಮಸಮುದ್ರಕ್ಕಿಳಿದನು. ಆಗ ಎರಡುಸೈನ್ಯಗಳೂಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವ

ಹರಿಣೀಪು ತಂ|| ಪಡೆಗಳೆರಡುಂ ಬೀಡಿಂಗೆತ್ತಂ ತೆರಳ್ದು ನೆಗೞ್ತೆಯಂ
ಪಡೆದೞದರಂ ಮೆಚ್ಚುತ್ತುತ್ಸಾಹದಿಂ ಪೊಗೞುತ್ತುಮೊ|
ಳ್ಪಡರೆ ನುಡಿಯುತ್ತಂತಿರ್ದಾದಿತ್ಯನಂದುದಯಾದ್ರಿಯ
ತ್ತಡರೆ ಪೊಱಮಟ್ಟಾಗಳ್ ಬಂದೊಡ್ಡಿ ನಿಂದುವು ಕೋಪದಿಂ|| ೬೨

ಕಂ|| ಅಂತೊಡ್ಡಿ ನಿಂದ ಚಾತು
ರ್ದಂತಂ ಕೆಯ್ವೀಸುವನ್ನೆಗಂ ಸೈರಿಸದೋ|
ರಂತೆ ಪೆಣೆದಿಱದುವಂತೆ ದಿ
ಗಂತಾಂತಮನೆಯ್ದಿ ಪರಿಯೆ ನೆತ್ತರ ತೊಗಳ್|| ೬೩

ಅೞದ ಬಿಲ್ವಡೆ ಮಾಣದೆ
ತೞದ ರಥಮೆಯ್ದೆ ಬಗಿದ ಪುಣ್ಗಳ ಪೊಯಿಂ|
ಮೊೞದ ಕರಿ ಘಟೆ ಜವನಡು
ವೞ್ಗೆಯನನುಕರಿಸೆ ವೀರ ಭಟ ರಣರಂಗಂ|| ೬೪

ವ|| ಆಗಳ್ ಧೃಷ್ಟಕೇತು ವೃಷಸೇನನೊಳ್ ಸಾತ್ಯಕಿ ಭಗದತ್ತನೊಳ್ ದ್ರುಪದ ಧೃಷ್ಟಧ್ಯುಮ್ನರಿರ್ವರುಂ ದ್ರೋಣಾಚಾರ್ಯನೊಳ್ ಪ್ರತಿವಿಂಧ್ಯಂ ಸೌಬಲನೊಳ್ ಘಟೋತ್ಕಚಂ ಕರ್ಣನೊಳ್ ಪೆಣೆದು ಕಾದೆ-

ಚಂ|| ಪೊಸಮಸೆಯಂಬುಗಳ್ ದೆಸೆಗಳಂ ಮಸುಳ್ವನ್ನೆಗಮೆಯ್ದೆ ಪಾಯೆ ಪಾ
ಯಿಸುವ ರಥಂಗಳಾ ರಥದ ಕೀಲ್ಮುಱದಾಗಳೆ ಕೆಯ್ಯನಲ್ಲಿ ಕೋ|
ದೆಸಗುವ ಸೂತರಂಬು ಕೊಳೆ ಸೂತರುರುಳ್ದುಮಿಳಾತಳಕ್ಕೆ ಪಾ
ಯ್ದಸಿಯೊಳೆ ತಾಗಿ ತಳ್ತಿಱವ ನಿಚ್ಚಟರೊಪ್ಪಿದರಾಜಿರಂಗದೊಳ್|| ೬೫

ವ|| ಆಗಳ್ ಕಳಿಂಗರಾಜನ ಗಜಘಟೆಗಳನಿತುವೊಂದಾಗಿ ಭೀಮಸೇನನ ರಥಮಂ ವಿಳಯ ಕಾಳ ಜಳಧರಂಗಳೆಲ್ಲವೊಂದಾಗಿ ಕುಲಗಿರಿಯಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್

ಮ|| ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ ಕೆಯ್ಸಾರ್ದುದಸ್ಮನ್ಮನೋ
ರಥಮಿಂದೆಂದು ಕಡಂಗಿ ಮಾಣದೆ ಸಿಡಿಲ್ ಪೊಯ್ವಂತೆವೋಲ್ ಪೊಯ್ವುದುಂ|
ರಥಯೂಥ ಧ್ವಜ ಶಸ್ತ್ರ ಶಂಖಪುಟದೊಳ್ ಘಂಟಾಸಮೇತಂ ಮಹಾ
ರಥನಿಂದಂ ಕುಳಶೈಳದಂತೆ ಕರಿಗಳ್ ಬೀೞ್ತಂದುವುಗ್ರಾಜಿಯೊಳ್|| ೬೬

ವಾದ್ಯಗಳನ್ನು ಬಾಜಿಸಿದುವು. ೬೨. ಸೈನ್ಯಗಳೆರಡೂ ತಮ್ಮ ಪಾಳೆಯಗಳ ಕಡೆಗೆ ಹೋಗಿ (ಸೇರಿ) ಖ್ಯಾತಿಯನ್ನು ಪಡೆದು ಸತ್ತವರನ್ನು ಉತ್ಸಾಹದಿಂದ ಮೆಚ್ಚಿ ಹೊಗಳುತ್ತ ಸದ್ಗುಣವು ಪ್ರಕಾಶವಾಗುವ ಹಾಗೆ ಮಾತನಾಡುತ್ತ ಸೂರ್ಯನು ಉದಯಪರ್ವತವನ್ನೇರಲು ಹೊರಟು ಕೋಪದಿಂದ ಬಂದೊಡ್ಡಿ ನಿಂದವು. ೬೩. ಹಾಗೆ ಬಂದೊಡ್ಡಿ ನಿಂತ ಚತುರಂಗಸೈನ್ಯವು (ಯುದ್ಧಸೂಚಕವಾದ) ಕೈಬೀಸುವಷ್ಟರವರೆಗೂ ಸೈರಿಸದೆ ಒಂದೇಸಮನಾಗಿ ಹೆಣೆದುಕೊಂಡು ರಕ್ತಪ್ರವಾಹವು ದಿಗಂತದ ಕೊನೆಯನ್ನು ಸೇರಿ ಹರಿಯುವ ಹಾಗೆ ಯುದ್ಧಮಾಡಿದುವು. ೬೯. ವೀರ್ರ‍ಟ ರಣರಂಗವು ನಾಶವಾದ ಬಿಲ್ಗಾರರ ಸೈನ್ಯದಿಂದಲೂ ತಪ್ಪದೆ ತಗ್ಗಿದ ರಥದಿಂದಲೂ ಅದರುವ ಹುಣ್ಣುಗಳ ಭಾರದಿಂದಲೂ ಕುಗ್ಗಿದ ಆನೆಗಳ ಸಮೂಹದಿಂದಲೂ ಯಮನು ಅಡುಗೆಮಾಡುವ ಅಡುಗೆಯ ಮನೆಯನ್ನು ಹೋಲುತ್ತಿತ್ತು. ವ|| ಆಗ ದೃಷ್ಟಿಕೇತುವು ವೃಷಸೇನನಲ್ಲಿಯೂ ಸಾತ್ಯಕಿಯು ಭಗದತ್ತನಲ್ಲಿಯೂ ದ್ರುಪದ ಧೃಷ್ಟದ್ಯುಮ್ನರಿಬ್ಬರೂ ದ್ರೋಣಾಚಾರ್ಯನಲ್ಲಿಯೂ ಪ್ರತಿವಿಂದ್ಯನು ಶಕುನಿಯಲ್ಲಿಯೂ ಘಟೋತ್ಕಚನು ಕರ್ಣನಲ್ಲಿಯೂ ಹೆಣೆದುಕೊಂಡು ಕಾದಿದರು. ೬೫. ಹೊಸದಾಗಿ ಮಸೆದ ಬಾಣಗಳೂ, ದಿಕ್ಕುಗಳನ್ನೆಲ್ಲ ಮಲಿನಮಾಡುವ ರೀತಿಯಲ್ಲಿ ವ್ಯಾಪಿಸಲು ಚೋದಿಸುತ್ತಿದ್ದ ರಥಗಳೂ, ಆ ರಥಗಳ ಕೀಲು ಮುರಿದೊಡನೆ ತಮ್ಮ ಕೈಗಳನ್ನೇ ಆ ಕೀಲಿನ ಸ್ಥಾನದಲ್ಲಿ ಪೋಣಿಸಿ ರಥವನ್ನು ನಾಟಲು ಸೂತರು ನೆಲಕ್ಕೆ ಉರುಳಿದರೂ ರಥದಿಂದ ನೆಲಕ್ಕೆ ನೆಗೆದು ನೆಗೆದು ಕತ್ತಿಯಿಂದ ಘಟ್ಟಿಸಿ (ಪರಸೈನ್ಯವನ್ನು) ಪ್ರತಿಭಟಿಸಿ ಸ್ಥೆ ರ್ಯದಿಂದ ಹೋರಾಡುವ ಯೋಧಾಗ್ರೇಸರರೂ ಯುದ್ಧರಂಗದಲ್ಲಿ ಶೋಭಿಸಿದರು. ವ|| ಆಗ ಕಳಿಂಗರಾಜನ ಆನೆಯ ಸಮೂಹವಷ್ಟೂ ಒಂದಾಗಿ ಭೀಮಸೇನನ ತೇರನ್ನು ಪ್ರಳಯಕಾಲದ ಮೋಡಗಳೆಲ್ಲ ಒಂದಾಗಿ ಕುಲಪರ್ವತವನ್ನು ಮುತ್ತುವಂತೆ ಸುತ್ತಿ ಮುತ್ತಿದುವು. ೬೬. ಭೀಮಸೇನನು ರಥದಿಂದ ಭೂಮಿಗೆ ಹಾರಿ ಗದೆಯನ್ನೆತ್ತಿಕೊಂಡು ‘ನನ್ನ ಇಷ್ಟಾರ್ಥ ಈದಿನ ಕೈಗೂಡಿತು’ ಎಂದು ಉತ್ಸಾಹಿಸಿ ತಡಮಾಡದೆ ಸಿಡಿಲು ಹೊಡೆಯುವ ಹಾಗೆ ಹೊಡೆಯಲು

ಮ|| ಮದವದ್ದಂತಿಗಳಂ ಕಱುತ್ತಸಗವೊಯ್ಲೊ ಯ್ದಾಜಿಯೊಳ್ ಭೀಮನಾ
ರ್ದೊದೆದೀಡಾಡಿದೊಡತ್ತಜಾಂಡ ತಟಮಂ ತಾಪನ್ನೆಗಂ ಪಾಱ ತಾ|
ಱದ ಪೇರಾನೆಯೊಡಲ್ಗಳಭ್ರತಳದೊಳ್ ಸಿಲ್ಕಿರ್ದುವೋರೊಂದು ಮಾ
ಣದೆ ಬೀೞ್ತರ್ಪುವು ಬೆಟ್ಟು ಬೀೞ್ವ ತೆಱದಿಂದಿನ್ನುಂ ಕುರುಕ್ಷೇತ್ರದೊಳ್|| ೬೭

ಕಂ|| ತೊಡರೆ ತಡಂಗಾಲ್ ಪೊಯ್ದೊಡೆ
ಕೆಡೆದುಂ ತಿವಿದೊಡೆ ಸುರುಳ್ದು ಮೋದಿದೊಡಿರದೆ|
ಲ್ವಡಗಾಗಿ ಮಡಿದು ಬಿೞ್ದುವು
ಗಡಣದೆ ಕರಿಘಟೆಗಳೇಂ ಬಲಸ್ಥನೊ ಭೀಮಂ|| ೬೮

ವ|| ಅಂತಲ್ಲಿ ಪದಿನಾಲ್ಸಾಸಿರ ಮದದಾನೆಯುಮಂ ಕಳಿಂಗನಾಯಕಂ ಭಾನುದತ್ತಂ ಮೊದಲಾಗೆ ನೂರ್ವರರಸುಮಕ್ಕಳುಮಂ ಕೊಂದೊಡೆ ಕೌರವಬಲಮೆಲ್ಲಮೊಲ್ಲನುಲಿದೋಡಿ ಭಗದತ್ತನಾನೆಯ ಮಯಂ ಪೊಕ್ಕಾಗಳ್-

ಮ|| ಸ್ರ|| ನೆಗೞ್ದೆಂ ದೇವೇಂದ್ರನೈರಾವತದ ಕೆಳೆಯನೆನ್ನೇಱದೀಯಾನೆಯುಂ ದಲ್
ದಿಗಿಭಂ ದುರ್ಯೋಧನಂ ನಚ್ಚಿದನೆನಗಿದಿರಂ ಭೀಮನೆೞ್ತಂದನೀಗಳ್|
ಮುಗಿಲಂ ಮುಟ್ಟಿತ್ತು ಸಂದೆನ್ನಳವುಮದಟುಮೆಂದಾರ್ದು ದೋರ್ದರ‍್ಪಯುಕ್ತಂ
ಭಗದತ್ತಂ ಸುಪ್ರತೀಕದ್ವಿಪಮನುಪಚಿತೋತ್ಸಾಹದಿಂ ತೋಱಕೊಟ್ಟಂ|| ೬೯

ಕಂ|| ಮದಕರಿಯ ಪರಿವ ಭರದಿಂ
ದದಿರ್ದೊಡೆ ನೆಲನೊಡ್ಡಿ ನಿಂದ ಚತುರಂಗಮಮೊ|
ರ್ಮೊದಲೆ ನಡುಗಿದುದು ಕೂಡಿದ
ಚದುರಂಗದ ಮಣೆಯನಲ್ಗಿದಂತಪ್ಪಿನೆಗಂ|| ೭೦

ವ|| ಆಗಳಸುರನುಯ್ಯಂ ನೆಲನನಾದಿ ವರಾಹನಱಸಲೆಂದು ಸಕಳ ಜಳಚರಕಳಿತ ಜಳನಿಗಳಂ ಕಲಂಕುವಂತೆ ಪಾಂಡವ ಬಳ ಜಳನಿಯನಳಿಕುಳ ಝೇಂಕಾರ ಮುಖರಿತ ವಿಶಾಳ ಕರಟ ತಟಮಾ ದಿಶಾಗಜೇಂದ್ರಂ ಕಲಂಕೆ-

ಚಂ|| ತಳರ್ದುದು ಕರ್ಣತಾಳ ಪವನಾಹತಿಯಂ ಜಳರಾಶಿ ಕೆಯ್ಯ ಬ
ಳ್ವಳಿಕೆಗೆ ದಿಗ್ಗಜಂ ದೆಸೆಯಿನತ್ತ ತೆರಳ್ದುವುಕಾಯ್ಪಿನಿಂ ದಿಶಾ|
ವಳಿವೆರಸಂಬರಂ ಪೊಗೆದು ಪೊತ್ತಿದುದಾದ ಮದಾಂಬುವಿಂ ಜಗಂ
ಜಳವೊಲಾಯ್ತದಂ ನೆಯೆ ಬಣ್ಣಿಪರಾರ್ ಗಳ ಸುಪ್ರತೀಕಮಂ|| ೭೧

ರಥಗಳ ಸಮೂಹ, ಬಾವುಟಗಳು, ಆಯುಧಗಳು ಇವುಗಳ ಪರಸ್ಪರ ತಾಕಲಾಟದಲ್ಲಿ ಕತ್ತಿನ ಗಂಟೆಯೊಡನೆ ಆನೆಗಳು ಆ ಘೋರಯುದ್ಧದಲ್ಲಿ ಕುಲಪರ್ವತಗಳ ಹಾಗೆ ಕೆಳಕ್ಕೆ ಬಿದ್ದವು. ೬೭. ಸೊಕ್ಕಿದ ಆನೆಗಳನ್ನು ಗುರಿಯಿಟ್ಟು ಅಗಸನು ಒಗೆಯುವ ಹಾಗೆ ಒಗೆದು ಆರ್ಭಟಮಾಡಿ ಭೀಮನು ಯುದ್ಧದಲ್ಲಿ ಒದ್ದು ಎಸೆದನು. ಆ ಒಣಗಿದ ಹಿರಿಯಾನೆಯ ಶರೀರಗಳು ಬ್ರಹ್ಮಾಂಡದ ದಡವನ್ನು ತಗಲುವಷ್ಟು ದೂರ ಹಾರಿ ಮೋಡಗಳ ಪದರದ ಮಧ್ಯೆ ಸಿಕ್ಕಿದ್ದು ಅಲ್ಲಿಂದ ಬೆಟ್ಟಗಳು ಬೀಳುವ ಹಾಗೆ ಇನ್ನೂ ಕುರುಕ್ಷೇತ್ರದಲ್ಲಿ ಬೀಳುತ್ತಿವೆ. ೬೮. ಭೀಮನು ಅಡ್ಡಗಾಲಿಗೆ ಸಿಕ್ಕಿಸಿಕೊಂಡು ಒದೆದರೆ ಕೆಳಕ್ಕೆ ಬಿದ್ದೂ ತಿವಿದರೆ ಸುರುಳಿಕೊಂಡೂ ಗುದ್ದಿದರೆ ತಡವಿಲ್ಲದೆ ಎಲುಬು ಮಾಂಸಗಳಾಗಿಯೂ ಆನೆಗಳ ಸಮೂಹವು ರಾಶಿಯಾಗಿ ಬಿದ್ದವು. ಭೀಮನು ಎಷ್ಟು ಬಲಶಾಲಿಯೋ! ವ|| ಹಾಗೆ ಅಲ್ಲಿ ಹದಿನಾಲ್ಕು ಸಾವಿರ ಮದ್ದಾನೆಗಳನ್ನೂ ಕಳಿಂಗನಾಯಕನಾದ ಭಾನುದತ್ತನೇ ಮೊದಲಾದ ನೂರುಮಂದಿ ರಾಜಕುಮಾರರನ್ನೂ ಕೊಂದನು. ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಭಗದತ್ತನಾನೆಯ ಮರೆಯನ್ನು ಹೊಕ್ಕಿತು. ೬೯. ನಾನು ಪ್ರಖ್ಯಾತನಾದವನು; ನಾನು ಹತ್ತಿರುವ ಈ ಆನೆಯೂ ದೇವೇಂದ್ರನ ಐರಾವತದ ಸ್ನೇಹಿತ. ಹಾಗೆಯೇ ದಿಗ್ಗಜವೂ ಹೌದು. ನನ್ನನ್ನು ದುರ್ಯೋಧನನು ನಂಬಿಕೊಂಡಿದ್ದಾನೆ. ಈಗ ನನಗೆ ಭೀಮನೇ ಪ್ರತಿಭಟಿಸಿ ಬಂದಿದ್ದಾನೆ. ಈಗ ನನ್ನ ಪೌರುಷವೂ ಪರಾಕ್ರಮವೂ ಗಗನವನ್ನು ಮುಟ್ಟಿದೆ ಎಂದು ಆರ್ಭಟಮಾಡಿ ಬಾಹುಬಲದ ಅಹಂಕಾರದಿಂದ ಕೂಡಿದ ಭಗದತ್ತನು ಕೂಡಿಕೊಂಡಿರುವ ಉತ್ಸಾಹದಿಂದ ಸುಪ್ರತೀಕವೆಂಬ ಆನೆಯನ್ನು ಸೈನ್ಯದ ಮುಂದುಗಡೆ ನೂಕಿದನು. ೭೦. ಆ ಮದ್ದಾನೆಯು ನಡೆಯುವ ವೇಗದಿಂದ ಭೂಮಿಯು ಅಲುಗಾಡಲು ಅದರ ಮೇಲೆ ನಿಂತಿರುವ ಚತುರಂಗ ಸೈನ್ಯವೂ ಕಾಯಿಗಳಿಂದ ಕೂಡಿದ ಚದುರಂಗದ ಮಣೆಯನ್ನು ಅಲುಗಾಡಿಸಿದಂತೆ ಇದ್ದಕ್ಕಿದ್ದ ಹಾಗೆ ಒಡನೆಯೇ ನಡುಗಿದವು. ವ|| ಆಗ ರಾಕ್ಷಸನಾದ ಹಿರಣ್ಯಾಕ್ಷನು ಎತ್ತಿಕೊಂಡು ಹೋದ ಭೂದೇವಿಯನ್ನು ಆದಿವರಾಹನಾದ ವಿಷ್ಣುವು ಹುಡುಕಬೇಕೆಂದು ಸಮಸ್ತ ಜಲಚರಗಳಿಂದ ತುಂಬಿದ ಸಮುದ್ರಗಳನ್ನು ಕಲಕಿದ ಹಾಗೆ ಪಾಂಡವಸೇನಾಸಮುದ್ರವನ್ನು ದುಂಬಿಗಳ ಝೇಂಕಾರಶಬ್ದದಿಂದ ಧ್ವನಿಮಾಡಲ್ಪಟ್ಟ ವಿಶಾಲವಾದ ಕಪೋಲಪ್ರದೇಶವುಳ್ಳ ಆ ದಿಗ್ಗಜವು ಕಲಕಿತು. ೭೧. ಅದು ಕಿವಿಯನ್ನು ಬಿಸುವುದರಿಂದುಂಟಾದ

ಚಿಂ|| ಕರ ನಖ ದಂತ ಘಾತದಿನುರುಳ್ವ ಚತುರ್ಬಲದಿಂ ತೆರಳ್ವ ನೆ
ತ್ತರ ಕಡಲಾ ಕಡಲ್ವರೆಗಮೆಯ್ದೆ ಮಹಾಮಕರಂ ಸಮುದ್ರದೊಳ್|
ಪರಿವವೊಲಿಂತಗುರ್ವುವೆರಸಾ ಭಗದತ್ತನ ಕಾಲೊಳಂತದೇಂ
ಪರಿದುದೊ ಸುಪ್ರತೀಕ ಗಜಮಚ್ಚರಿಯಪ್ಪಿನಮಾಜಿರಂಗದೊಳ್|| ೭೨

ವ|| ಅಂತು ಪರಿದ ಬೀದಿಗಳೊಳೆಲ್ಲಂ ನೆತ್ತಂ ತೊಗಳ್ ಪರಿಯೆ ಕೆಂಡದ ತೊಯಂತೆ ಪರಿದ ಸುಪ್ರತೀಕಂ ಕೆಯ್ಯ ಕಾಲ ಕೋಡೇಱನೊಳ್ ಬಲಮನೆಲ್ಲಂ ಜವನೆ ಜಿವುಳಿದುೞವಂತೆ ತೊೞ್ತುೞದುೞದು ಪದಿನಾಲ್ಸಾಸಿರ ಮದಾಂಧ ಗಂಧಸಿಂಧುರಂಗಳುಮನೊಂದು ಲಕ್ಕ ರಥಮುಮನರೆದು ಸಣ್ಣಿಸಿದಂತೆ ಮಾಡಿದಾಗಳ್ ಗಜಾಸುರನೊಳಾಸುರಂಬೆರಸು ತಾಗುವಂಧಕಾರಾತಿಯಂತೆ ಭೀಮಸೇನಂ ಬಂದು ಪೊಣರೆ-

ಚಂ|| ತೊಲಗಿದು ಸುಪ್ರತೀಕ ಗಜಮಾಂ ಭಗದತ್ತನೆನಿಲ್ಲಿ ನಿನ್ನ ತೋ
ಳ್ವಲದ ಪೊಡರ್ಪು ಸಲ್ಲದೆಲೆ ಸಾಯದೆ ಪೋಗೆನೆ ಕೇಳ್ದು ಭೀಮನಾಂ|
ತೊಲೆಯದಿರುರ್ಕಿನೊಳ್ ನುಡಿವೆಯೀ ಕರಿ ಸೂಕರಿಯಲ್ತೆ ಪತ್ತಿ ಗಂ
ಟಲನೊಡೆಯೊತ್ತಿ ಕೊಂದಪೆನಿದಲ್ತಿದಱಮ್ಮನುಮೆನ್ನನಾಂಪುದೇ|| ೭೩

ವ|| ಎಂದು ನಾರಾಚಂಗಳಿಂ ತೋಡುಂ ಬೀಡುಂ ಕಾಣಲಾಗದಂತು ಸುಪ್ರತೀಕ ಕರಿಯೆಂಬ ಗಿರಿಯ ಮೇಲೆ ಭೀಮನೆಂಬ ಕಾಲಮೇಘಂ ಸರಲ ಸರಿಯಂ ಸುರಿಯೆ-

ಚಂ|| ಸಿಡಿಲೆಱಪಂದದಿಂದೆಱಗಿ ದಿಕ್ಕರಿ ತನ್ನ ವರೂಥಮಂ ಪಡ
ಲ್ವಡಿಸೆ ಮರುತ್ಸುತಂ ಮುಳಿದು ಮಚ್ಚರದಿಂ ಗಜೆಗೊಂಡು ಸುತ್ತುಗೊಂ||
ಡಡಿಗಿಡೆ ನುರ್ಗಿ ಪೊಯ್ದು ಪೆಱಪಿಂಗುವುದುಂ ಕರಿ ನೊಂದು ಕೋಪದಿಂ
ಪಿಡಿದೆಱಗಿತ್ತು ಭೀಮನನಗುರ್ವಿಸಿ ಪಾಂಡವ ಸೈನ್ಯಮಳ್ಕುಱಲ್|| ೭೪

ವ|| ಅಂತೆಱಗಿದೊಡೆ ಕೋಡಕೆಯ್ಯ ಕಾಲೆಡೆಗಳೊಳ್ ಬಿಣ್ಪುಮಂ ಪೆಣೆವಂದದಿಂದೇರ್ದು ಡೊಕ್ಕರಂಗೊಂಡು ಕುರುಕ್ಷೇತ್ರದಿಂದತ್ತ ಪನ್ನೆರಡು ಯೋಜನಂಬರಮೊತ್ತುವುದುಂ-

ಗಾಳಿಯ ಹೊಡೆತದಿಂದ ಸಮುದ್ರವು ಚಲಿಸಿತು. ಸೊಂಡಿಲಿನ ಬಲವಾದ ಬೀಸುವಿಕೆಗೆ ದಿಗ್ಗಜಗಳು ದಿಕ್ಕುಗಳಿಂದ ಆಚೆಗೆ ಹೋದುವು. (ಅದರ) ಕೋಪದಿಂದ ದಿಕ್ಕುಗಳ ಸಮೂಹದೊಡನೆ ಆಕಾಶವೂ ಹೊಗೆಯಿಂದ ಕೂಡಿ ಉರಿಯಿತು. ಸುರಿದ ಮದೋದಕದಿಂದ ಭೂಮಂಡಲವು ಸಮುದ್ರದ ಹಾಗಾಯಿತು. ಆ ಸುಪ್ರತೀಕವನ್ನು ಸಂಪೂರ್ಣವಾಗಿ ವರ್ಣಿಸುವವರಾರಿದ್ದಾರೆ?೭೨. ಸೊಂಡಿಲು, ಉಗುರು, ದಂತಗಳ ಹೊಡೆತದಿಂದ ಉರುಳಿ ಬೀಳುವ ಚತುರಂಗ ಬಲದಿಂದ ಹೊರಡುವ ರಕ್ತಸಮುದ್ರವು ಆ ಸಮುದ್ರದವರೆಗೂ ಹರಿಯಲು ಸಮುದ್ರ ಮಧ್ಯೆ ಹರಿಯುವ ದೊಡ್ಡ ಮೊಸಳೆಯ ಹಾಗೆ ಭಯಂಕರತೆಯಿಂದ ಕೂಡಿ ಆ ಭಗದತ್ತನು ನಡೆಸುತ್ತಿದ್ದ ಸುಪ್ರತೀಕವೆಂಬ ಆನೆಯು ಯುದ್ಧರಂಗದ ಮಧ್ಯೆ ಆಶ್ಚರ್ಯವಾಗುವ ಹಾಗೆ ನಿರಾಯಾಸವಾಗಿ ಹರಿಯಿತು! ವ|| ಹಾಗೆ ಓಡಿದ (ಪರಿದ) ಬೀದಿಗಳಲ್ಲೆಲ್ಲ ರಕ್ತನದಿಗಳು ಹರಿದುವು. ಕೆಂಡದ ಪ್ರವಾಹದಂತೆ ಹರಿಯುತ್ತಿರುವ ಸುಪ್ರತೀಕದ ಸೊಂಡಲಿನ, ಕಾಲಿನ, ಕೊಂಬಿನ ಪೆಟ್ಟಿನಿಂದ ಸೈನ್ಯವೆಲ್ಲವನ್ನು ಯಮನೇ ಚೂರ್ಣ ಮಾಡಿದಂತೆ (ಚಿಗುಳಿಯನ್ನು ತುಳಿದಂತೆ) ಸಂಪೂರ್ಣವಾಗಿ ತುಳಿದು ಹದಿನಾಲ್ಕು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳನ್ನೂ ಒಂದು ಲಕ್ಷ ರಥವನ್ನೂ ಅರೆದು ಪುಡಿಮಾಡಿತು. ಅದನ್ನು ನೋಡದ ಭೀಮನು ಗಜಾಸುರನೆಂಬ ರಾಕ್ಷಸನೊಡನೆ ರಭಸದಿಂದ ಕೂಡಿ ತಗಲುವ ಈಶ್ವರನಂತೆ ಬಂದು ಹೋರಾಡಿದನು-೭೩. (ಭಗದತ್ತನು ಭೀಮನನ್ನು ಕುರಿತು) ತೊಲಗು ಇದು ಸುಪ್ರತೀಕವೆಂಬ ಆನೆ. ನಾನೇ ಭಗದತ್ತ. ಇಲ್ಲಿ ನಿನ್ನ ತೋಳಿನ ಶಕ್ತಿಯ ಹಿರಿಮೆಯು ಸಲ್ಲುವುದಿಲ್ಲ. ಎಲವೋ ಸಾಯದೆ ಹೋಗು ಎಂದನು. ಅದನ್ನು ಕೇಳಿ ಭೀಮನು (ಎಲವೋ) ನಾನು ಭೀಮ; ಅಹಂಕಾರದಿಂದ ತೂಗಾಡಬೇಡ. ಗರ್ವದಿಂದ ಅಹಂಕಾರದಿಂದ ಮಾತನಾಡುತ್ತಿದ್ದೀಯೆ. ಈ ಆನೆಯು ನನಗೆ ಹಂದಿಗೆ ಸಮಾನ. ಇದರ ಮೇಲೆ ಹತ್ತಿ ಇದರ ಗಂಟಲನ್ನು ಅಮುಕಿ ಕೊಲ್ಲುತ್ತೇನೆ. ಇದಲ್ಲ ಇದರಪ್ಪನೂ ನನ್ನನ್ನು ಪ್ರತಿಭಟಿಸಬಲ್ಲುದೇ? ವ|| ಎಂದು ಬಾಣಗಳನ್ನು ತೊಡುವುದೂ ಬಿಡುವುದೂ ಕಾಮದಂತೆ ಸುಪ್ರತೀಕಗಜವೆಂಬ ಬೆಟ್ಟದ ಮೇಲೆ ಭೀಮನೆಂಬ ಪ್ರಳಯಕಾಲದ ಮೋಡವು ಬಾಣದ ಮಳೆಯನ್ನು ಸುರಿಸಿತು. ೭೪. ದಿಗ್ಗಜವಾದ ಸುಪ್ರತೀಕವು ಸಿಡಿಲೆರಗುವ ವೇಗದಿಂದ ಎರಗಿ ತನ್ನ ತೇರಿನ್ನು ತಲೆಕೆಳಗುಮಾಡಲು ಭೀಮನು ಕೋಪಿಸಿಕೊಂಡು ಮತ್ಸರದಿಂದ ಗದೆಯನ್ನು ತೆಗೆದುಕೊಂಡು ಸುತ್ತಲೂ ಬಳಸಿ ಹೆಜ್ಜೆ ಕೆಡುವಂತೆ ನುಗ್ಗಿ ಹೊಡೆದು ಹಿಂದಕ್ಕೆ ಹೋದನು. ಆನೆಯು ವಿಶೇಷವಾಗಿ ಯಾತನೆಯನ್ನನುಭವಿಸಿ ಕೋಪದಿಂದ ಭೀಮನನ್ನು ಹೆದರಿಸಿ ಪಾಂಡವಸೈನ್ಯವು ಭಯಪಡುವ ಹಾಗೆ ಅವನನ್ನು ಹಿಡಿದು ಮೇಲೆ ಬಿದ್ದಿತು. ವ|| ಭೀಮನು ಆ ಆನೆಯ ಕೊಂಬು, ಸೊಂಡಿಲು ಕಾಲಿನ ಮಧ್ಯದಲ್ಲಿ ಭಾರವನ್ನು ಹೊರಳಿಸುವ ರೀತಿಯಿಂದ ಹತ್ತಿ ಡೊಕ್ಕರವೆಂಬ ಪಟ್ಟಿನಿಂದ ಆನೆಯನ್ನು ಕುರುಕ್ಷೇತ್ರದಿಂದ ಆ ಕಡೆಗೆ ಹನ್ನೆರಡುಯೋಜನದವರೆಗೆ ನೂಕಿದನು.

ಕಂ|| ಕರಿಯುಂ ಕುರುಭೂಮಿಯ ನಡು
ವರೆಗಂ ಪವನಜನನೊತ್ತೆ ತೋಳ್ವಲಮಾಗಳ್|
ಸರಿ ಸರಿಯಾದುದು ತದ್ದಿ
ಕ್ಕರಿಗಂ ಬೀಮಂಗಮುಗ್ರ ಸಂಗರ ಧರೆಯೊಳ್|| ೭೫

ವ|| ಅನ್ನೆಗಮಿತ್ತ ಸಂಸಪ್ತಕಬಲಮೆಲ್ಲಮನಳ ಪೆಳ ಕಿವುೞೆದುೞದು ಕೊಲ್ವ ವಿಕ್ರಾಂತತುಂಗಂ ಚಕ್ರಿಯನಿಂತೆಂದಂ-

ಚಂ|| ಪರಿದುದು ಸುಪ್ರತೀಕ ಗಜಮೇಱದವಂ ಭಗದತ್ತನಾಮದ
ದ್ವಿರದಮನಾಂಕೆಗೊಂಡು ಪೆಣೆವಂ ಪವನಾತ್ಮಜನೀಗಳಾಹವಂ|
ಪಿರಿದುದಲತ್ತ ಪೋಪಮೆನೆ ತದ್ರಥಮಂ ಹರಿ ವಾಯುವೇಗದಿಂ
ಪರಿಯಿಸೆ ತಾಗಿದಂ ಹರಿಗನಂಕದ ಪೊಂಕದ ಸುಪ್ರತೀಕಮಂ|| ೭೬

ವ|| ಅಂತು ತಾಗಿ ಮೃಗರಾಜ ನಖರ ಮಾರ್ಗಣಂಗಳೊಳಂ ಕೂರ್ಮನಖಾಸ್ತ್ರಂಗಳೊಳ ಮಾನೆಯುಮಂ ಭಗದತ್ತನುಮಂ ಪೂೞ್ದೊಡೆ ಭಗದತ್ತಂ ಮುಳಿದು ಭೂದತ್ತಮಪ್ಪ ದಿವ್ಯಾಂಕುಶಮಂ ಕೊಂಡು-

ಕಂ|| ಇಡುವುದುಮದು ವಿಲಯಾಗ್ನಿಯ
ಕಿಡಿಗಳನುಗುೞುತ್ತುಮೆಯ್ದೆವರ್ಪುದುಮಿದಿರಂ|
ನಡೆದಜರನುರದಿನಾಂತೊಡೆ
ತುಡುಗೆವೊಲೆಸೆದಿರ್ದುದಂಕುಶಂ ಕಂಧರದೊಳ್|| ೭೭

ವ|| ಆಗಳ್ ವಿಕ್ರಾಂತತುಂಗಂ ಚೋದ್ಯಂಬಟ್ಟಿದೇನೆಂದು ಬೆಸಗೊಳೆ-

ಚುಂ|| ಇದು ಪೆಱತಲ್ತು ಭೂತಲಮನಾಂ ತರಲಾದಿ ವರಾಹನಾದೆನಂ
ದದಱ ವಿಷಾಣಮಂ ಬೞಯಮಾ ವಸುಧಾಂಗನೆಗಿತ್ತೆನೀತನಾ|
ಸುದತಿಯ ಪೌತ್ರನಾಕೆ ಕುಡೆ ಬಂದುದಿವಂಗೆನಗಲ್ಲದಾನಲಾ
ಗದುದಱನಾಂತೆನಿಂ ತಱವುದೀ ಕರಿ ಕಂಧರಮಂ ಗುಣಾರ್ಣವಾ|| ೭೮

ಉ|| ಎಂಬುದುಮೊಂದೆ ದಿವ್ಯಶರದಿಂ ಶಿರಮಂ ಪಱಯೆಚ್ಚೊಡಾತನೊ
ತ್ತಂಬದಿನಾಂತೊಡಾಂ ಬಱದೆ ತಪ್ಪಿದೆನೆಂದು ಕಿರೀಟಿ ತನ್ನ ಬಿ|
ಲ್ಲಂ ಬಿಸುಟಿರ್ದೊಡಚ್ಯುತನಿದೇತರಿನಾಕುಲಮಿರ್ದೆ ನೋಡಿದೆಂ
ತೆಂಬುದುಮೆಚ್ಚನಂತೆರಡು ಕೆಯ್ಗಳುಮಂ ಮುಳಿಸಿಂ ಗುಣಾರ್ಣವಂ|| ೭೯

೭೫. ಆನೆಯೂ ಭೀಮನನ್ನು ಕುರುಭೂಮಿಯ ಮಧ್ಯದವರೆಗೆ ನೂಕಲು ಆಗ ಆ ಭಯಂಕರವಾದ ಯುದ್ಧರಂಗದಲ್ಲಿ ಬಾಹುಬಲ ಭೀಮನಿಗೂ ಆ ಆನೆಗೂ ಸರಿಸಮಾನವಾಯಿತು. ವ|| ಅಷ್ಟರಲ್ಲಿ ಸಂಸಪ್ತಕಂ ಸೈನ್ಯವನ್ನೆಲ್ಲ ಹೆದರಿ ಬೆದರುವಂತೆ ಅಜ್ಜುಗುಜ್ಜಿ ಯಾಗುವ ಹಾಗೆ ತುಳಿದು ಕೊಲ್ಲುವ ಮಹಾಪರಾಕ್ರಮಿಯಾದ ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು. ೭೬. ಸುಪ್ರತೀಕವೆಂಬ ಆನೆಯು ಓಡಿಬರುತ್ತಿದೆ. ಅದನ್ನು ಹತ್ತಿ ಬರುತ್ತಿರುವವನು ಭಗದತ್ತ; ಆ ಮದ್ದಾನೆಯನ್ನು ತಡೆದು ಹೆಣೆದುಕೊಂಡಿರುವವನು ಭೀಮ. ಈಗ ಆ ಕಡೆ ಯುದ್ಧವು ಹಿರಿದಾಗಿದೆ. ಆ ಕಡೆ ಹೋಗೋಣ’ ಎಂದನು. ಆ ತೇರನ್ನು ಕೃಷ್ಣನು ವಾಯುವೇಗದಿಂದ ಆ ಕಡೆಗೆ ಓಡಿಸಿದನು. ಅರ್ಜುನನು ಖ್ಯಾತವೂ ಅಹಂಕಾರಿಯೂ ಆದ ಸುಪ್ರತೀಕವೆಂಬ ಆನೆಯನ್ನು ಬಂದು ತಾಗಿದನು. ವ|| ಸಿಂಹದ ಉಗುರಿನಂತಿರುವ ಬಾಣಗಳಲ್ಲಿಯೂ ಆಮೆಯ ಉಗುರಿನಂತಿರುವ ಅಸ್ತ್ರಗಳಲ್ಲಿಯೂ ಆನೆಯನ್ನೂ ಭಗದತ್ತನನ್ನೂ ಹೂಳಿದನು. ಭಗದತ್ತನು ಕೋಪಿಸಿಕೊಂಡು ಭೂದೇವಿಯಿಂದ ಕೊಡಲ್ಪಟ್ಟ ದಿವ್ಯಾಂಕುಶವನ್ನು ತೆಗೆದುಕೊಂಡು ೭೭. ಎಸೆಯಲು ಅದು ಪ್ರಳಯಾಗ್ನಿಯ ಕಿಡಿಯನ್ನು ಉಗುಳುತ್ತ ಸಮೀಪಕ್ಕೆ ಬರಲು ಕೃಷ್ಣನು ಎದುರಾಗಿ ಹೋಗಿ ಎದೆಯಿಂದ ಅದನ್ನು ಎದುರಿಸಿದನು. ಆ ಅಂಕುಶವು ಅವನ ಕತ್ತಿನಲ್ಲಿ ಆಭರಣದ ಹಾಗೆ ಪ್ರಕಾಶಿಸಿತು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಆಶ್ವರ್ಯಪಟ್ಟು ಇದೇನೆಂದು ಪ್ರಶ್ನೆಮಾಡಿದನು- ೭೮. ಇದು ಬೇರೆಯಲ್ಲ; ಭೂಮಂಡಲವನ್ನು ತರಲು ನಾನು ಆದಿವರಾಹನಾದೆನು. ಇದು ಅದರ ಕೋರೆಹಲ್ಲು. ಬಳಿಕ ಅದನ್ನು ನಾನು ಭೂದೇವಿಗೆ ಕೊಟ್ಟೆನು. ಈತನು ಆ ಭೂದೇವಿಯ ಮೊಮ್ಮಗ, ಅವಳು ಕೊಡಲು ಇವನಿಗೆ ಬಂದಿತು. ನಾನಲ್ಲದೆ ಮತ್ತಾರೂ ಇದನ್ನು ಎದುರಿಸಲಾಗದುದರಿಂದ ನಾನು ಎದುರಿಸಿದೆನು. ಅರ್ಜುನಾ, ಇನ್ನು ಈ ಆನೆಯ ಕತ್ತನ್ನು ಕತ್ತರಿಸು ಎಂದನು. ೭೯. ಒಂದೆ ದಿವ್ಯಾಸ್ತ್ರದಿಂದ ಆನೆಯ ತಲೆಯನ್ನು ಹರಿದುಹೋಗುವ ಹಾಗೆ ಹೊಡೆದನು. ಆ ಭಗದತ್ತನು ಅದನ್ನು ಬಲಾತ್ಕಾರದಿಂದ

ತಾನು ಎದುರಿಸಿದನು. ಅರ್ಜುನನು ನಾನು ವ್ಯರ್ಥವಾಗಿ ಪ್ರಯೋಗಮಾಡಿದೆ (ಆನೆಯ ತಲೆಯನ್ನೂ ಭಗದತ್ತನ ತಲೆಯನ್ನೂ ಒಟ್ಟಿಗೆ

ಕಂ|| ಎಚ್ಚವನ ತಲೆಯುಮಂ ಪಱ
ಯೆಚ್ಚೊಡೆ ದಿಕ್ಕರಿಯ ತಲೆಯುಮಾತನ ತಲೆಯುಂ|
ಪಚ್ಚಿಕ್ಕಿದಂತೆ ಕೆಯ್ಗಳು
ಮಚ್ಚರಿಯಪ್ಪಿನೆಗಮೊಡನುರುಳ್ದುವು ಧರೆಯೊಳ್|| ೮೦

ಉ|| ಇತ್ತರಿಗಂಗಮಿತ್ರ ಜಯಮಪ್ಪುದುಮತ್ತಮರರ್ಕಳಾರ್ದು ಸೂ
ಸುತ್ತಿರೆ ಪುಷ್ಪವೃಷ್ಟಿಗಳನೋಗರವೂಗಳ ಬಂಡನೆಯ್ದೆ ಪೀ|
ರುತ್ತೊಡವಂದುವಿಂದ್ರವನದಿಂ ಮಱದುಂಬಿಗಳಿಂದ್ರನೀಲಮಂ
ಮುತ್ತು ಮನೋಳಿಯೋಳಿಯೊಳೆ ಕೋದೆೞಲಿಕ್ಕಿದ ಮಾಲೆಯಂತೆವೋಲ್|| ೮೧

ಕಂ|| ಧರಣೀಸುತನೞದಂ ದಿ
ಕ್ಕರಿ ಕೆಡೆದುದು ನರಶರಂಗಳಿಂ ಭುವನಮುಮಿ|
ನ್ನುರಿಯದಿರದಾನಡಂಗುವೆ
ನಿರದೆಂಬವೊಲರ್ಕನಪರಜಳನಿಗಿೞದಂ|| ೮೨

ವ|| ಆಗಳೆರಡುಂ ಪಡೆಗಳಪಹಾರತೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳ್ಗೆ ಪೊಪುದುಂ ಸುಯೋಧನಂ ಭಗದತ್ತನ ಸಾವಿಂಗೞಲ್ದು ತೊಟ್ಟ ಸನ್ನಣಮನಪ್ಟೊಡಂ ಕಳೆಯದೆಯು ಮಸಮನೆಗೆ ಪೋಗದೆ ಕುಂಭಸಂಭವನಲ್ಲಿಗೆ ವಂದು-

ಮ|| ಮಸಕಂಗುಂದದ ಸುಪ್ರತೀಕ ಗಜಮಂ ಧಾತ್ರೀಸುತಂ ಕೀಱ ಚೋ
ದಿಸಿ ಭೀಮಂ ಗೆಲೆ ಮುಟ್ಟೆವಂದು ಹರಿಯುಂ ತಾನುಂ ಭರಂಗೆಯ್ದು ತ|
ನ್ನೆಸಕಂಗಾಯದಧರ್ಮಯುದ್ಧದೆ ನರಂ ಕೊಲ್ವಲ್ಲಿ ಕಂಡಿಂತುಪೇ
ಕ್ಷಿಸಿ ನೀಮುಂ ನಡೆ ನೋಡುತಿರ್ದಿರೆನೆ ಮತ್ತಿನ್ನಾರನಾಂ ನಂಬುವೆಂ|| ೮೩

ವ|| ಎಂದು ನುಡಿದ ಪನ್ನಗದ್ವಜನ ನುಡಿಗೆ ಕಾರ್ಮುಕಾಚಾರ್ಯನಿಂತೆಂದಂ-

ಮ|| ಎನ್ನಗಲ್ತಾರ್ಗಮಸಾಧ್ಯನಲ್ತೆ ವಿಜಯಂ ನೀನಾತನಂ ಗೆಲ್ವ ಮಾ
ತನಮೋಘಂ ಬಿಸುಡಿಂದೆ ನಾಳೆ ವಿಜಯಂ ಮಾರ್ಕೊಳ್ಳದಂದುರ್ಕಿ ಪೊ|
ಕ್ಕನನಾಂತೊರ್ವನನಿಕ್ಕುವೆಂ ಕದನದೊಳ್ ಮೇಣ್ ಕಟ್ಟುವೆಂ ಧರ್ಮ ನಂ
ದನನಂ ನೀನಿದನಿಂತು ನಂಬು ಬಗೆಯಲ್ವೇಡನ್ನನಂ ಭೂಪತೀ|| ೮೪

ಹೊಡೆಯಬೇಕಾಗಿದ್ದಿತು) ಎಂದು ಬಿಲ್ಲನ್ನು ಬಿಸುಟಿರಲು ಕೃಷ್ಣನು ಇದೇಕೆ ವ್ಯಾಕುಲನಾಗಿದ್ದೀಯೆ? ‘ನೋಡು ಇದು ಹೀಗೆ’ ಎಂದು ತೋರಿಸಿದನು. ಅರ್ಜುನನು ಕೋಪದಿಂದ ಭಗದತ್ತನ ಎರಡು ಕೈಗಳನ್ನು ಹೊಡೆದನು. ೮೦. ಕೈಗಳನ್ನು ಕತ್ತರಿಸಿ ಅವನ ತಲೆಯನ್ನು ಹರಿದುಹೋಗುವಂತೆ ಹೊಡೆಯಲು ದಿಕ್ಕರಿಯ ತಲೆಯೂ ಆತನ ತಲೆಯೂ ಕೈಗಳೂ ಭಾಗಮಾಡಿದಂತೆ ಆಶ್ಚರ್ಯಯುತವಾಗಿ ಜೊತೆಯಾಗಿಯೇ ಭೂಮಿಯ ಮೇಲೆ ಉರುಳಿದುವು. ೮೧. ಈ ಕಡೆ ಅರಿಗನಿಗೆ (ಅರ್ಜುನನಿಗೆ) ಶತ್ರುಜಯವಾಗಲು ಆ ಕಡೆ ದೇವತೆಗಳು ಜಯಘೋಷಮಾಡಿ ಹೂಮಳೆಯನ್ನು ಸುರಿಸಿದರು. ಆ ಮಿಶ್ರುಪುಷ್ಪಗಳ ವಾಸನೆಯನ್ನು ಪೂರ್ಣವಾಗಿ ಹೀರುತ್ತ ಇಂದ್ರನ ತೋಟವಾದ ನಂದನವನದಿಂದ ಮರಿದುಂಬಿಗಳು ಇಂದ್ರನೀಲಮಣಿರತ್ನವನ್ನೂ ಮುತ್ತುಗಳನ್ನೂ ದಂಡೆದಂಡೆಯಾಗಿ ಸಾಲಾಗಿ ಪೋಣಿಸಿ ಜೋಲುಬಿಟ್ಟ ಹಾರದಂತೆ ಜೊತೆಯಲ್ಲಿಯೇ ಬಂದುವು. ೮೨. ಅರ್ಜುನನ ಬಾಣದಿಂದ ಭೂಪುತ್ರನಾದ ಭಗದತ್ತನು ನಾಶವಾದನು. ದಿಗ್ಗಜವು ಕೆಳಗುರುಳಿತು. ಪ್ರಪಂಚವು ಇನ್ನು ಸುಟ್ಟು ಹೋಗದೇ ಇರುವುದಿಲ್ಲ; ನಾನು ಇಲ್ಲಿರದೆ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು. ವ|| ಆಗ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಸೂಚಿಸುವ ವಾದ್ಯಗಳನ್ನು ಬಾಜಿಸಲು ತಮ್ಮ ತಮ್ಮ ಶಿಬಿರಕ್ಕೆ ಹೋದುವು. ದುರ್ಯೋಧನನು ಭಗದತ್ತನ ಸಾವಿಗೆ ದುಖಪಟ್ಟು ಧರಿಸಿದ ಯುದ್ಧಕವಚವನ್ನು ಕಳೆಯದೆಯೂ ಅರಮನೆಗೆ ಹೋಗದೆಯೂ ದ್ರೋಣಾಚಾರ್ಯರ ಹತ್ತಿರಕ್ಕೆ (ಬಳಿಗೆ) ಬಂದನು- ೮೩. ಮದವಡಗದ ಸುಪ್ರತೀಕಗಜವನ್ನು ಭಗದತ್ತನು ಭಯಶಬ್ದಮಾಡುತ್ತ ರೇಗಿಸಿ ಮುಂದೆ ನುಗ್ಗಿಸಿ ಭೀಮನನ್ನು ಗೆಲ್ಲಲು ಕೃಷ್ಣನೂ ಅರ್ಜುನನೂ ಹತ್ತಿರಕ್ಕೆ ಬಂದು ವೇಗದಿಂದ (ತನ್ನ ಮಾತಿನಂತೆ ನಡೆದುಕೊಳ್ಳದೆ ಯುದ್ಧ ಮಾಡುವುದಿಲ್ಲವೆಂಬ ತನ್ನ ಪ್ರತಿಜ್ಞೆಯನ್ನು, ಕಾರ್ಯವನ್ನು, ಮಾತನ್ನು ಪರಿಪಾಲಿಸದೆ) ಅಧರ್ಮಯುದ್ಧದಲ್ಲಿ ಅರ್ಜುನನು ಕೊಲ್ಲುತ್ತಿರುವುದನ್ನು ನೋಡಿ ನೀವು ಹೀಗೆ ಉಪೇಕ್ಷಿಸಿ ನೋಡುತ್ತೀರಿ ಎಂದ ಮೇಲೆ ನಾನು ಮತ್ತಾರನ್ನು ನಂಬಲಿ ವ|| ಎಂದು ಹೇಳಿದ ದುಯೋಧನನ ಮಾತಿಗೆ ದ್ರೋಣನು ಹೀಗೆ ಹೇಳಿದನು- ೮೪. ಮಹಾರಾಜನೇ ಅರ್ಜುನನು ನನಗಲ್ಲ, ಯಾರಿಗೂ ಅಸಾಧ್ಯನಾದವನು. ನೀನು ಅವನನ್ನು ಗೆಲ್ಲುವ ಮಾತು ವ್ಯರ್ಥವಲ್ಲವೇ? ಅದನ್ನು ಈ ದಿನವೇ

ವ|| ಎಂಬುದಮಾನಿನಿತಂ ನಿಮ್ಮ ಪೂಣಿಸಲೆ ಬಂದೆನೆಂದು ಪೊಡೆಮಟ್ಟು ಬೀೞ್ಕೊಂಡು ಪೋಗಿ ಸಂಸಪ್ತಕರ್ಕಳ್ಗೆ ಬೞಯನಟ್ಟಿ ಬರಿಸಿ-

ಚಂ|| ಅರಿಗನನಾಂಪ ಗಂಡುಮದಟುಂ ನಿಮಗಾವಗಮಾದುದಾಹವಾ
ಜಿರದೊಳದರ್ಕೆ ನಾಳೆ ನರನಂ ತೆಗೆದುಯ್ವುದು ಧರ್ಮಪುತ್ರನಂ|
ಗುರು ಪಿಡಿದಪ್ಪನೆಂದವರನಾಗಳೆ ಪೂಣಿಸಿ ಪೋಗವೇೞ್ದು ಮ
ಚ್ಚರದೊಳೆ ಮಾಣದೊಡ್ಡಿದನಸುಂಗೊಳೆ ಕಕ್ಕರ ಸಂಜೆ ಸಂಜೆಯೊಳ್|| ೮೫

ವ|| ಆಗಳ್ ಪಾಂಡವ ಪತಾಕಿನಿಯುಮಿರದೆ ಪೊಱಮಟ್ಟರ್ಧಚಂದ್ರ ವ್ಯೂಹಮನೊಡ್ಡಿ ನಿಲೆ ಸಂಸಪ್ತಕರ್ ತಮಗೆ ಮಿೞ್ತುಗರೆವಂತೆ ವಿಕ್ರಮಾರ್ಜುನನಂ ಕರೆದುಯ್ದರಿತ್ತ-

ಅನವದ್ಯ|| ಅಱಪಿದಂ ಗುರು ಭಾರ್ಗವನಿಂತೀಯೊಡ್ಡನಿದಂ ಗೆಲಲಾವನುಂ
ನೆಯನುರ್ಕಿನಳುರ್ಕೆಯಿನೊರ್ವಂ ಪೊಕ್ಕೊಡೆ ಪೊಕ್ಕನೆ ಮತ್ತಣಂ|
ಪೊಱಮಡಂ ತಱದೊಟ್ಟುವೆನಂತಾ ಪಾಂಡವಸೈನ್ಯಮನೆಂದು ಬಿ
ಲ್ಲೆಯನೊಡ್ಡಿದನಂಕದ ಚಕ್ರವ್ಯೂಹಮನಾಹವರಂಗದೊಳ್|| ೮೬

ವ|| ಅಂತೊಡ್ಡಿದ ಚಕ್ರವ್ಯೂಹದ ನಡುವೆಡೆಯಱದು ಕಳಿಂಗರಾಜನ ಕರಿಘಟೆಗಳುಮಂ ಕರ್ಣ ಶಲ್ಯ ಶಕುನಿ ಕೃಪ ಕೃತವರ್ಮ ಭೂರಿಶ್ರವೋಶ್ವತ್ಥಾಮ ದುರ್ಯೋಧನ ವೃಷಸೇನ ಲಕ್ಕಣಾದಿಗಳಪ್ಪತಿರಥ ಮಹಾರಥ ಸಮರಥಾರ್ಧರಥರ್ಕಳನಿರಿಸಿ ಮತ್ತಮವರ ಬಳಸಿಯುಮನೇಕ ಸಾಮಜಬಲಂಬೆರಸು ಜಯತ್ಸೇನ ಸುದಕ್ಷಿಣ ಕಾಂಭೋಜಾದಿ ನಾಯಕರನಿರಿಸಿ ಮತ್ತಮವರ ಕೆಲದೊಳೆಡೆಯಱದು ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಷಣ ಹಳಾಯುಧ ಮುಸಳಾಯುಧ ಕಾಳ ನೀಳ ರೂಕ್ಷ ರಾಕ್ಷಸ ಬಲಮನಿರಿಸಿ ಮತ್ತಮವರ ಕೆಲದೊಳಿವರ್ಗಿವರ್ ಷಾಸಟಿಯಾಗಿರ್ಪುದೆಂದು ನಿಂದ ನೆಲೆಯೊಳ್ ತಳರದೆ ನಿಲ್ವಂತಾಗಿರಿಸಿ ಗುಹೆಯ ಬಾಗಿಲೊಳ್ ಸಿಂಹಮಿರ್ಪಂದದಿಂ ಭಾರದ್ವಾಜಂ ಸಿಂಧುರಾಜಂಬೆರಸು ಚಕ್ರವ್ಯೂಹದ ಬಾಗಿಲೊಳ್ ನೆದು ಮೆದು ನಿಂದಾಗಳ್ ಧರ್ಮಪುತ್ರನೇಗೆಯ್ವ ತೆಱನುಮನಱಯದಭಿಮನ್ಯುವಂ ಕರೆದಿಂತೆಂದಂ-

ಬಿಸಾಡು. ನಾಳೆಯ ದಿನ ಅರ್ಜುನನು ಪ್ರತಿಭಟಿಸದಿರುವಾಗ ಅಹಂಕಾರದಿಂದ ಹೊಕ್ಕಂಥ ಯಾವನನ್ನಾದರೂ ಎದುರಿಸಿ ಯುದ್ಧದಲ್ಲಿ ಕೊಲ್ಲುತ್ತೇನೆ. ಅಲ್ಲದೆ ಧರ್ಮರಾಜನನ್ನು ಸೆರೆಹಿಡಿಯುತ್ತೇನೆ. ನೀನು ಇದನ್ನು ನಂಬು ನನ್ನನ್ನು ಅಂಥವನೆಂದು ಗಣಿಸಬೇಡ.

ವ|| ಎನ್ನಲು ನಾನು ನಿಮ್ಮಲ್ಲಿ ಇಷ್ಟನ್ನು ಪ್ರತಿಜ್ಞೆಮಾಡಿಸಬೇಕೆಂದೇ ಬಂದೆನೆಂದು ನಮಸ್ಕಾರಮಾಡಿ ಅವರನ್ನು ಬಿಟ್ಟುಹೋಗಿ ಸಂಸಪ್ತಕರುಗಳಿಗೆ ದೂತರನ್ನು ಕಳುಹಿಸಿ ಬರಮಾಡಿಕೊಂಡನು. ೮೫. ಯುದ್ಧರಂಗದಲ್ಲಿ ಅರ್ಜುನನನ್ನು ಪ್ರತಿಭಟಿಸುವ ಪೌರುಷವೂ ಶಕ್ತಿಯೂ ನಿಮಗೆ ಯಾವಾಗಲೂ ಇದೆ. ಅದಕ್ಕಾಗಿ ನಾಳೆ ಅರ್ಜುನನನ್ನು ದೂರಕ್ಕೆ ಕರೆದುಕೊಂಡು ಹೋಗುವುದು. ದ್ರೋಣಾಚಾರ್ಯನು ಧರ್ಮಪುತ್ರನನ್ನು ನಾಳೆ ಸೆರೆಹಿಡಿಯುತ್ತಾನೆ ಎಂದು ಅವರನ್ನು ಆಗಲೇ ಪ್ರತಿಜ್ಞೆ ಮಾಡಿಸಿ ಹೋಗಹೇಳಿದನು. ಮಾತ್ಸರ್ಯದಿಂದ ತಡವಿಲ್ಲದೆ ಬೆಳಗಿನ ಜಾವದಲ್ಲಿಯೇ ಎಂತಹ ಕಠಿಣರಾದವರೂ ಹೆದರುವ ಹಾಗೆ ಶತ್ರುಗಳ ಪ್ರಾಣಾಪಹಾರಕ್ಕಾಗಿ ಭಯಂಕರವಾದ ಸೈನ್ಯವನ್ನು ಒಡ್ಡಿದನು-ವ|| ಆಗ ಪಾಂಡವಸೈನ್ಯವೂ ಸುಮ್ಮನಿರದೆ ಹೊರಟು ಅರ್ಧಚಂದ್ರಾಕಾರದ ಸೈನ್ಯರಚನೆಯನ್ನು ಚಾಚಿ ನಿಲ್ಲಲು ಸಂಸಪ್ತಕರು ತಮಗೆ ಮೃತ್ಯುವನ್ನು ಕರೆಯುವಂತೆ ಅರ್ಜುನನನ್ನು ಕರೆದುಕೊಂಡೆಯ್ದರು. ಈ ಕಡೆ ೮೬. ಚಕ್ರವ್ಯೂಹ ರಚನೆಯನ್ನು ಆಚಾರ್ಯನಾದ ಪರಶುರಾಮನು ನನಗೆ ಉಪದೇಶಮಾಡಿದ್ದಾನೆ. ಇದನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಉತ್ಸಾಹಾತಿಶಯದಿಂದ ಯಾವನಾದರೊಬ್ಬ ಪ್ರವೇಶಮಾಡಿದರೆ ಅವನು ಪ್ರವೇಶಮಾಡಿದವನೇ. ಪುನ ಹೇಗೂ ಹೊರಟುಹೋಗಲಾರ; ಆ ಪಾಂಡವ ಸೈನ್ಯವನ್ನು ಇದರಿಂದ ಕತ್ತರಿಸಿ ಹಾಕುತ್ತೇನೆ ಎಂದು ಬಿಲ್ಲೋಜನಾದ ದ್ರೋಣನು ಪ್ರಸಿದ್ಧವಾದ ಚಕ್ರವ್ಯೂಹವನ್ನು ಯುದ್ಧರಂಗದಲ್ಲಿ ಹೂಡಿದನು- ವ|| ಹಾಗೆ ಒಡ್ಡಿದ ಚಕ್ರವ್ಯೂಹದ ಮಧ್ಯಭಾಗದಲ್ಲಿ ಯೋಗ್ಯವಾದ ಸ್ಥಳಗಳನ್ನು ಗೊತ್ತುಮಾಡಿ ಕಳಿಂಗ ರಾಜನ ಆನೆಯ ಸಮೂಹವನ್ನೂ ಕರ್ಣ, ಶಲ್ಯ, ಶಕುನಿ, ಕೃತವರ್ಮ, ಭೂರಿಶ್ರವ, ಅಶ್ವತ್ಥಾಮ, ದುರ್ಯೋಧನ, ವೃಷಸೇನ, ಲಕ್ಷಣನೇ ಮೊದಲಾದ ಅತಿರಥ ಮಹಾರಥ ಸಮರಥ ಅರ್ಧರಥರುಗಳನ್ನು ಇರಿಸಿದನು. ಅದರ ಸುತ್ತಲೂ ಅನೇಕ ಆನೆಯ ಸೈನ್ಯದೊಡನೆ ಜಯತ್ಸೇನ, ಸುದಕ್ಷಿಣ, ಕಾಂಭೋಜರೇ ಮೊದಲಾದ ನಾಯಕರುಗಳನ್ನಿಟ್ಟನು. ಮತ್ತು ಅವರ ಪಕ್ಕದಲ್ಲಿ ಸೂಕ್ತ ಸ್ಥಳವನ್ನು ವಿಚಾರಮಾಡಿ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷಣ, ಹಳಾಯುಧ, ಮುಸಳಾಯುಧ, ಕಾಳನೀಳರ ಭಯಂಕರವಾದ ರಾಕ್ಷಸ ಸೈನ್ಯವನ್ನಿರಿಸಿದನು. ಅವರ ಪಕ್ಕದಲ್ಲಿ ಇವರಿಗೆ ಇವರು ಸಮನಾಗಿರುತ್ತದೆ ಎಂದು ನಿಂತ ಸ್ಥಳದಲ್ಲಿಯೇ ಚಲಿಸದೆ ನಿಲ್ಲುವ ಹಾಗೆ ಇರಿಸಿ ಗುಹೆಯ ಬಾಗಿಲಿಗೆ ಸಿಂಹವಿರುವ ಹಾಗೆ ದ್ರೋಣಾಚಾರ್ಯನು ಸೈಂಧವನೊಡಗೂಡಿ ಚಕ್ರವ್ಯೂಹದ ಬಾಗಿಲಿನಲ್ಲಿ ಕೂಡಿಕೊಂಡು ಮೆರೆದು ನಿಂತನು. ಧರ್ಮರಾಜನು

ಮ|| ಸ್ರ|| ಇದು ಚಕ್ರವ್ಯೂಹಮೀ ವ್ಯೂಹಮನೊಡೆವದಟಂ ಪಾರ್ಥನಂತಾತನುಂ ಗೆಂ
ಟಿದನೆಮ್ಮೀ ನಾಲ್ವರುಂ ಭೇದಿಸಲಱಯೆವಿದಂ ಕಂದ ನೀಂ ಬಲ್ಲ ಪೇೞೆಂ|
ಬುದುಮಾನೆಮ್ಮಯ್ಯನಲ್ ಕೇಳ್ದಱವೆನಿದನಿದೇನಯ್ಯ ಚಿಂತಾಂತರಂ ಪೊ
ಕ್ಕಿದನೀಗಳ್ ವನ್ಯಗಂಧದ್ವಿರದಮೆ ಕೊಳನಂ ಪೊಕ್ಕವೋಲ್ ಕಾದಿ ತೋರ್ಪೆ|| ೮೭

ಚಂ|| ಆನಲನ ಕೊಟ್ಟ ಗಾಂಡಿವದ ತೇರ ಮುರಾರಿಯ ಮೆಚ್ಚ ದೇವ ದೇ
ವನ ದಯೆಗೆಯ್ದ ಸಾಯಕದ ಬೆಂಬಲದೊಳ್ ಕಲಿಯೆಂದು ಕೆಮ್ಮನ|
ಮ್ಮನನದಟೞ್ಗುತಿರ್ಪಿರವಿದೇಂ ಪೆಗೆಯೊಡ್ಡು ಗೆಲಲ್ಕಳುಂಬಮೆಂ
ಬನಿತುವರಂ ಮನಕ್ಕೆ ನಿಮಗತ್ತಳಗಂ ಬರೆ ಮತ್ತೆ ಮಾಣ್ಬೆನೇ|| ೮೮

ಚಂ|| ನೆದು ಚತುರ್ವಲಂಬೆರಸು ಬಂದುಱದೊಡ್ಡಿದ ಗಂಡರಾರುಮೆ
ನ್ನಱಯದ ಗಂಡರೇ ನೆಗೆದ ನೆತ್ತರ ಸುಟ್ಟುರೆಕಂಡದಿಂಡೆಗಳ್|
ಪಱದು ನಭಂಬರಂ ಪರೆದು ಪರ್ವಿ ಲಯಾಗ್ನಿ ಶಿಖಾಕಳಾಪಮಂ
ಮಯಿಸೆ ತಾಗಿ ತಳ್ತಿಱಯದನ್ನೆಗಮೆಂತು ನರಂಗೆ ವುಟ್ಟಿದೆಂ|| ೮೯

ವ|| ಎಂಬುದುಂ ಯಮನಂದನನಿಂತೆಂದಂ-

ಚಂ|| ಅನುವರದಲ್ಲಿ ತಳ್ತು ಪಗೆಯಂ ತವೆ ಕೊಂದೊಡಮಾಂತರಾತಿ ಸಾ
ಧನದೊಳಗೞ ತೞದೊಡಮೆನ್ನಯ ಸಂತತಿಗಾಗಿಸಿರ್ದ ನಿ|
ನ್ನನೆ ಮದದಂತಿ ದಂತ ಮುಸಲಾಹತಿಗಂ ಕರವಾಳ ಬಾಯ್ಗಮಂ
ಬಿನ ಮೊನೆಗಂ ಮಹಾರಥರ ತಿಂತಿಣಿಗಂ ಪಿಡಿದೆಂತು ನೂಂಕುವೆಂ|| ೯೦

ಕಂ|| ಮಗನೆ ಪದಿನಾಲ್ಕು ವರುಷದ
ಮಗನೈ ನಿನ್ನನ್ನನೊರ್ವನಂ ಪಗೆವಡೆಯೊ|
ಡ್ಡುಗಳನೊಡೆಯಲೈವೇೞ್ದೆರ್ದೆ
ಧಗಮೆನೆ ಸೈರಿಸುವುಪಾಯಮಾವುದು ಕಱುವೇ|| ೯೧

ವ|| ಎಂದೊಡಾ ಮಾತಂ ಮಾರ್ಕೊಂಡಭಿಮನ್ಯುವಿಂತೆಂದಂ-

ಏನು ಮಾಡಬೇಕೆಂಬುದನ್ನು ತಿಳಿಯದೆ ಅಭಿಮನ್ಯುವನ್ನು ಕರೆದು ಹೀಗೆ ಹೇಳಿದನು. ೮೭. ಇದು ಚಕ್ರವ್ಯೂಹ, ಈ ಚಕ್ರವ್ಯೂಹವನ್ನು ಒಡೆಯುವ ವೀರ ಅರ್ಜುನ, ಅವನೂ ದೂರವಾದನು. ನಾವುನಾಲ್ಕು ಜನವೂ ಇದನ್ನು ಭೇದಿಸಲು ತಿಳಿಯೆವು. ಮಗು ನೀನೇನಾದರೂ ತಿಳಿದಿದ್ದೀಯಾ ಹೇಳು ಎನ್ನಲು ಇದನ್ನು ತಂದೆಯಲ್ಲಿ ಕೇಳಿ ತಿಳಿದಿದ್ದೇನೆ. ಇದಕ್ಕೇಕೆ ವಿಶೇಷ ಚಿಂತೆ. ಇದನ್ನು ಈಗಲೇ ಪ್ರವೇಶಿಸಿ ಮಹಾಸತ್ವಶಾಲಿಯಾದ ಕಾಡಾನೆಯು ಕೊಳವನ್ನು ಪ್ರವೇಶಿಸುವ ಹಾಗೆ ಕಾದಿ ತೋರಿಸುತ್ತೇನೆ. ೮೮. ಅಗ್ನಿಯು ದಾನಮಾಡಿದ ಗಾಂಡೀವಾಸ್ತ್ರದ, ಸಾರಥಿಯಾಗಿರುವ ಕೃಷ್ಣನ ಪ್ರಸಾದದ, ದೇವದೇವನಾದ ಈಶ್ವರನು ಅನುಗ್ರಹಿಸಿದ ಪಾಶುಪತಾಸ್ತ್ರದ ಬೆಂಬಲದಿಂದ ಶೂರನೆಂದು ವ್ಯರ್ಥವಾಗಿ ಕರೆಯಿಸಿಕೊಳ್ಳುವ ತಂದೆಯಾದ ಅರ್ಜುನನ ಪರಾಕ್ರಮವನ್ನು ಒಲಿದು ಮೆಚ್ಚುತ್ತಿರುವ ಈ ಸ್ಥಿತಿಯದೇನು? ಶತ್ರುಸೈನ್ಯವು ಗೆಲ್ಲುವುದಕ್ಕೆ ಸಾಧ್ಯವೆಂದು ಹೇಳುವವರೆಗೆ ಮನಸ್ಸಿಗೆ ಚಿಂತೆಯುಂಟಾದರೆ ಪುನ ನಿಲ್ಲುತ್ತೇನೆಯೇ? (ಇಲ್ಲಿ ಈಗಲೇ ಯುದ್ಧಕ್ಕೆ ಹೊರಡುತ್ತೇನೆ) ೮೯. ಚತುರಂಗ ಬಲದೊಡನೆ ಕೂಡಿಕೊಂಡು ವೇಗವಾಗಿ ಸೈನ್ಯವನ್ನೊಡ್ಡಿರುವ ಶೂರರು ನನಗೆ ತಿಳಿಯದ ಶೂರರೇ? ಮೇಲಕ್ಕೆ ಚಿಮ್ಮಿದ ರಕ್ತಪ್ರವಾಹವು ಆಕಾಶಕ್ಕೆ ಚಿಮ್ಮುವಂತೆಯೂ ಮಾಂಸಖಂಡದ ರಾಶಿಗಳು ಕತ್ತರಿಸಿ ಮುಗಿಲವರೆಗೆ ಚೆಲ್ಲಾಡುವಂತೆಯೂ ಪ್ರಳಯಾಗ್ನಿ ಜ್ವಾಲೆಗಳನ್ನು ಮರೆಮಾಡುತ್ತಿರಲು ಎದುರಿಸಿ ಕೂಡಿ ಯುದ್ಧ ಮಾಡದಿದ್ದರೆ ನಾನು ಅರ್ಜುನನಿಗೆ ಹೇಗೆ ಹುಟ್ಟಿದವನಾಗುತ್ತೇನೆ? ವ|| ಎನ್ನಲು ಯಮನ ಪುತ್ರನಾದ ಧರ್ಮರಾಯನು ಹೀಗೆಂದನು- ೯೦. ಯುದ್ಧದಲ್ಲಿ ಸೇರಿ ಶತ್ರುವನ್ನು ಪೂರ್ಣವಾಗಿ ಕೊಲ್ಲಬಹುದು ಅಥವಾ ಪ್ರತಿಭಟಿಸಿದ ಶತ್ರುಸೈನ್ಯದಲ್ಲಿ ನಾಶವಾಗಬಹುದು. ಆದರೆ ನನ್ನ ವಂಶೋದ್ಧಾರಕ್ಕಾಗಿಯೇ ಹುಟ್ಟಿರುವ ನಿನ್ನನ್ನೇ ಮದ್ದಾನೆಯ ದಂತವೆಂಬ ಒನಕೆಯ ಪೆಟ್ಟಿಗೂ ಕತ್ತಿಯ ಬಾಯಿಗೂ ಬಾಣದ ತುದಿಗೂ ಮಹಾರಥರ ಸಮೂಹಕ್ಕೂ ಹಿಡಿದು ಹೇಗೆ ನೂಕಲಿ? ೯೧. ಮಗು ನೀನು ಇನ್ನೂ ಹದಿನಾಲ್ಕು ವರ್ಷದ ಮಗುವಪ್ಪಾ. ನಿನ್ನಂತಹ ಒಬ್ಬನನ್ನು ಶತ್ರುಸೈನ್ಯದ ಗುಂಪನ್ನು ಭೇದಿಸಲು ಹೇಳಿ ಎದೆ ಧಗ್ಗೆಂದು ಉರಿಯಲು ತಡೆದುಕೊಳ್ಳುವ ಉಪಾಯವಾವುದು ಕಂದಾ? ವ|| ಎನ್ನಲು ಆ ಮಾತನ್ನು

ಮ|| ಕ್ರಮಮಂ ಕೆಯ್ಕೊಳಲೆಂದು ಪುಟ್ಟಿ ರಣದೊಳ್ ಸಾವನ್ನೆಗಂ ಮಾಣ್ದೊಡ
ಕ್ರಮಮಕ್ಕುಂ ಕ್ರಮಮಕ್ಕುಮೇ ಕ್ರಮಮನಾಗೇಗೆಯ್ದಪೆಂ ವಿಕ್ರಮಂ|
ಕ್ರಮಮಾಂ ವಿಕ್ರಮದಾತನೆಂ ಕ್ರಮದ ಮಾತಂತಿರ್ಕೆ ಮಾಣ್ದಿರ್ದೊಡಾಂ|
ಕ್ರಮಕೆಂದಿರ್ದೆನೆ ಬಿಟ್ಟೊಡಂ ಬಿಡದೊಡಂ ಬೀೞ್ಕೊಂಡೆನಿಂ ಮಾಣ್ಬೆನೇ|| ೯೨

ವ|| ಎಂದು ತನ್ನೇಱದ ಕನಕ ರಥಮಂ ತನ್ನ ಮನದನ್ನನಪ್ಪ ಜಯನೆಂಬ ಸಾರಥಿಯಂ ಚೋದಿಸೆಂದಾಗಳ್-

ಚಂ|| ಎಱಗುವ ಬಟ್ಟಿನಂಬುಗಳ ಬಲ್ಲರಿ ಕುಂಭಜನಂ ಮರಳ್ಚೆ ಪಾ
ಯ್ದಱಕೆಯ ಪಾರೆಯಂಬುಗಳ ತಂದಲಗುರ್ವಿಸಿ ಸಿಂಧುರಾಜನಂ|
ಮಱುಗಿಸೆ ಬಾಗಿಲೊಳ್ ಮುಸುಱ ನಿಂದ ಘಟಾವಳಿಯಂ ತೆರಳ್ಚಿ ತ
ತ್ತಱದಱದೊತ್ತಿ ಪೊಕ್ಕನಭಿಮನ್ಯು ವಿರೋಬಳಾಂಬುರಾಶಿಯಂ|| ೯೩

ವ|| ಅಂತು ಪೊಕ್ಕು ವಿರೋ ಸೈನ್ಯಮಂ ಮಾರಿ ಪೊಕ್ಕಂತೆ ಪೆಣಮಯಂ ಮಾಡಿ ತೂಱಕೊಂಡ ಜೋಳದಂತಿರೆ ಪಡಲ್ವಡಿಸಿದಾಗಳ್-

ಚಂ|| ಒಣಗಿದುದೊಂದು ಪೆರ್ವಿದಿರ ಪೆರ್ವೊದಱಂ ಮೊರೆದುರ್ವುವಾಶುಶು
ಕ್ಷಣಿಯವೊಲಾಂತ ಖೞ್ಗ ನಿವಹಕ್ಕೆ ರಥಕ್ಕೆ ದೞಕ್ಕೆ ಮತ್ತವಾ|
ರಣ ನಿವಹಕ್ಕೆ ತಕ್ಕಿನಭಿಮನ್ಯುವ ಕೂರ್ಗಣೆ ಪಾಯ್ದು ನುಂಗಲುಂ
ಟೊಣೆಯಲುಮುರ್ಚಿ ಮಕ್ಕಲುಮಿದೇಂ ನೆ ಕಲ್ತುವೊ ಯುದ್ಧರಂಗದೊಳ್ ||೯೪

ವ|| ಅಂತಿದಿರಾಂತ ಮಾರ್ಪಡೆಯೆಲ್ಲಮಂ ಜವನ ಪಡೆಗೆ ಪಡಿಗಚ್ಚಿಕ್ಕುವಂತಿಕ್ಕಿ ನಿಂದ ನರನಂದನನಂ ಕಂಡು ವಿಕ್ರಮಕ್ಕಂ ಕ್ರಮಕ್ಕಂ ಪುರುಡಿಸುವ ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರುಮೊಂದಾಗೆ ಬಂದು ತಾಗಿದಾಗಳ್-

ಸ್ರ|| ಸೂೞೈಸೆಚ್ಚೆಚ್ಚು ಬಿಲ್ಲಂ ರಥದ ಕುದುರೆಯಂ ಸೂತನಂ ಖಂಡಿಸುತ್ತಾ
ೞೆಂಟೊಂಬತ್ತು ಪತ್ತೆಂಬಱಕೆಯ ಸರಲಿಂದೂಱಕೊಂಡಾವ ಮೆಯ್ಯುಂ|
ಪಾೞೆಂಬಂತಾಗೆ ಪಾರ್ದಾರ್ದುಱದಿಸೆ ಮುಳಿಸಿಂ ನೂರ್ವರುಂ ಪೊನ್ನ ತಾೞ್ಗಳ್
ಸೂೞೊಳ್ ಬೀೞ್ವಂತೆ ಬಿೞ್ದರ್ ಮಕುಟಮಣಿಗಣದ್ಯೋತಿಸಾರರ್ ಕುಮಾರರ್|| ೯೫

ಪ್ರತಿಭಟಿಸಿ ಅಭಿಮನ್ಯುವು ಹೀಗೆ ಹೇಳಿದನು. ೯೨. ಯುದ್ಧದಲ್ಲಿ ಕ್ರಮಪ್ರಾಪ್ತವಾದುದನ್ನು ಸ್ವೀಕರಿಸುವುದಕ್ಕಾಗಿಯೇ ಹುಟ್ಟಿ, ಸಾಯುವುದಕ್ಕೆ ತಪ್ಪಿದರೆ (ಹೆದರಿದರೆ) ಅದು ಅಕ್ರಮವಾಗುತ್ತದೆ; ಕ್ರಮವಾಗುತ್ತದೆಯೇ? ಕ್ರಮವನ್ನು ನಾನು ಏನು ಮಾಡುತ್ತೇನೆ. ಕ್ರಮದ ಮಾತು ಹಾಗಿರಲಿ; ಪರಾಕ್ರಮವೇ ಕ್ರಮ. ನಾನು ಪರಾಕ್ರಮಶಾಲಿ. ನೀವು ಅಪ್ಪಣೆ ಕೊಡಿದಿದ್ದರೂ ನಾನು ಕ್ರಮಕ್ಕಾಗಿ ಇದ್ದೇನೆ. ನೀವು ಬಿಡಲಿ ಬಿಡದಿರಲಿ ಹೊರಟಿದ್ದೇನೆ. ಅದನ್ನು ಇನ್ನು ಬಿಡುತ್ತೇನೆಯೇ? ವ|| ಎಂದು ತಾನು ಹತ್ತಿದ್ದ ಚಿನ್ನದ ತೇರನ್ನು ತನಗೆ ಪ್ರೀತಿಪಾತ್ರನಾದ ಜಯನೆಂಬ ಸಾರಥಿಯನ್ನು ನಡಸೆಂದು ಹೇಳಿ-ಹೊರಟೇಬಿಟ್ಟನು. ೯೩. ಮೇಲೆ ಬೀಳುತ್ತಿರುವ ದುಂಡಾದ ಬಾಣಗಳ ಬಲವಾದ ಮಳೆಯು ದ್ರೋಣನನ್ನು ಹಿಂದಿರುಗಿಸಿತು. ಹಾರಿಹೋಗುತ್ತಿರುವ ಪ್ರಸಿದ್ಧವಾದ ಪಾರೆಯಂಬುಗಳ ಜಿನುಗು ಮಳೆಯು ಸೈಂಧವನನ್ನು ಹೆದರಿಸಿ ವ್ಯಥೆಪಡಿಸಿತು. ಚಕ್ರವ್ಯೂಹದ ಬಾಗಿಲಿನಲ್ಲಿ ಮುತ್ತಿಕೊಂಡು ನಿಂತಿದ್ದ ಆನೆಯ ಸೈನ್ಯವನ್ನು ಓಡಿಸಿ ಚೂರುಚೂರಾಗಿ ತರಿದು ಶತ್ರುಸೇನಾಸಮುದ್ರವನ್ನು ಅಭಿಮನ್ಯುವು ನೂಕಿ ನುಗ್ಗಿದನು. ವ|| ಹಾಗೆ ಶತ್ರುಸೈನ್ಯವನ್ನು ಪ್ರವೇಶಮಾಡಿ ಮಾರಿ ಹೊಕ್ಕಂತೆ ಹೆಣಮಯವನ್ನಾಗಿ ಮಾಡಿ ಗಾಳಿಯಲ್ಲಿ ತೂರಿದ ಜೋಳದ ಹಾಗೆ ನೆಲಕ್ಕೆ ಚೆಲ್ಲಾಪಿಲ್ಲಿಯಾಗಿ ಬೀಳಿಸಿದನು. ೯೪. ಒಣಗಿಸಿದ ಒಂದು ಹೆಬ್ಬಿದಿರಿನ ದೊಡ್ಡ ಮೆಳೆಯಿಂದ ಶಬ್ದಮಾಡಿಕೊಂಡು ಉಬ್ಬುವ ಅಗ್ನಿಯ ಹಾಗೆ ಪ್ರತಿಭಟಿಸಿದ ಖಡ್ಗಧಾರಿಗಳ ಗುಂಪಿಗೆ, ತೇರಿಗೆ, ಸೈನ್ಯಕ್ಕೆ, ಮದ್ದಾನೆಗಳ ಸಮೂಹಕ್ಕೆ, ಯೋಗ್ಯವಾದ (ಸಮರ್ಥವಾದ) ಅಭಿಮನ್ಯುವಿನ ಹರಿತವಾದ ಬಾಣಗಳು ಹಾಯ್ದು ನುಂಗುವುದಕ್ಕೂ ಚಪ್ಪರಿಸುವುದಕ್ಕೂ ಮುಕ್ಕುವುದಕ್ಕೂ ಯುದ್ಧರಂಗದಲ್ಲಿ ಎಷ್ಟು ಚೆನ್ನಾಗಿ ಕಲಿತುವೋ! ವ|| ಹಾಗೆ ಪ್ರತಿಭಟಿಸಿದ ಸೈನ್ಯವೆಲ್ಲವನ್ನೂ ಯಮನ ಸೈನ್ಯಕ್ಕೆ ನಿಯಮಿತ ನಿತ್ಯಾಹಾರ(?)ವನ್ನು ಕೊಡುವ ಹಾಗೆ ಕೊಟ್ಟು ನಿಂತಿರುವ ಅಭಿಮನ್ಯುವನ್ನು ಕಂಡು ಪರಾಕ್ರಮಕ್ಕೂ ಸಂಪ್ರದಾಯಕ್ಕೂ ಸ್ಪರ್ಧೆಮಾಡುತ್ತಿದ್ದ ದುರ್ಯೋಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರುಮಂದಿಯೂ ಒಟ್ಟಾಗಿ ಬಂದು ತಾಗಿದರು. ೯೫. ಸರದಿಯ ಪ್ರಕಾರ ಬಿಲ್ಲನ್ನೂ ರಥದ ಕುದುರೆಯನ್ನು ಸಾರಥಿಯನ್ನೂ ಹೊಡೆಹೊಡೆದು ಕತ್ತರಿಸುತ್ತ ಆರು, ಏಳು, ಎಂಟು, ಒಂಬತ್ತು, ಹತ್ತು ಎಂಬ ಸಂಖ್ಯೆಯ ಸಿದ್ಧವಾದ ಬಾಣಗಳಿಂದ ನಾಟಿಕೊಳ್ಳುವ ಹಾಗೆ ಮಾಡಿ ಎಲ್ಲ ಶರೀರಗಳೂ ಹಾಳು (ದ್ದದು- ಪೊಳ್ಳು) ಎನ್ನುವ ಹಾಗೆ ಆರ್ಭಟ ಮಾಡಿ ಹೊಡೆಯಲು ಕಿರೀಟದ ರತ್ನಸಮೂಹದ ಕಾಂತಿಯಿಂದ ಪ್ರಕಾಶರಾದ ನೂರ್ವರು ಕುಮಾರರು ಹೊಂದಾಳೆಯ

ವ|| ಆಗಳ್ ಸುಯೋಧನನ ಮಕ್ಕಳ ಸಾವಂ ಕಂಡು ತಮ್ಮಣ್ಣನ ಮೊಗಮನಾವ ಮೊಗದೊಳ್ ನೋೞ್ಪೆನೆಂದು ದುಶ್ಯಾಸನಂ ಬಂದು ತಾಗಿದಾಗಳ್-

ಕಂ|| ಒಂದೆ ಸರಲಿಂದಮವನೆರ್ದೆ
ಯಂ ದೊಕ್ಕನೆ ತಿಣ್ಣಮೆಚ್ಚು ಕೊಲಲೊಲ್ಲನೆ ಸಂ|
ಕ್ರಂದನ ನಂದನ ತನಯಂ
ತಂದೆಯ ಪೂಣ್ಕೆಯನೆ ನೆನೆದು ದುಶ್ಯಾಸನನಂ|| ೯೬

ವ|| ಆಗಳ್ ಕಾನೀನಸೂನು ವೃಷಸೇನನೇನುಂ ಮಾಣದೆ ಕಾದುತ್ತಿರ್ದನನ್ನೆಗಮಿತ್ತ ನರನಂದನನ ಬೞವೞಯಂ ತಗುಳ್ದು ಗೞೆವೞಯ ಪಾವಿನಂತೆ ಚಕ್ರವ್ಯೂಹಮಂ ಪುಗಲೆಂದು ಬರ್ಪ ದ್ರುಪದ ವಿರಾಟ ಧೃಷದ್ಯುಮ್ನ ಭೀಮಸೇನ ಸಹದೇವ ನಕುಲ ಯುಷ್ಠಿರ ಘಟೋತ್ಕಚಾದಿಗಳೊಡನೆ ಮಲ್ಲಾಮಲ್ಲಿಯಾಗಿ ಕಾದುವ ಕುಂಭಸಂಭವನಲ್ಲಿಗೆ ದುರ್ಯೋಧನಂ ಬಂದು ನಮ್ಮ ಬಲಮೆಲ್ಲಮಭಿಮನ್ಯುವಿನಂಬಿನ ಮೊನೆಯೊಳ್ ತೂಳ್ದು ತೆರಳ್ದೋಡಿದಪ್ಪುದು ನಿಮಗಲ್ಲಿ ಕಾಳೆಗಮತಿಭರಮೇಗೆಯ್ವಮೆನೆ ಸಿಂಧುರಾಜನಿಂದಿನನುವರಕೀಯೆಡೆಯೊಳೆ ನಿತಾದೊಡಮೀಶ್ವರ ವರಪ್ರಸಾದದೊಳಾನೆ ಸಾಲ್ವೆನೆಂದಿಂತೆಂದಂ-

ಚಂ|| ಉಱದಿದಿರಾಂತು ನಿಂದ ರಿಪುಸೈನ್ಯಮನಾಹವರಂಗದಲ್ಲಿ ತ
ತ್ತಱದಱದಿಕ್ಕಲಾಂ ನೆವೆನಿನ್ನಿರವೇಡೊಡಗೊಂಡು ಪೋಗು ನಿ|
ನ್ನಱಕೆಯ ಕುಂಭಸಂಭವನನೆಂದೊಡೆ ಪಾಂಡವಸೈನ್ಯಮಂ ಕಱು
ತ್ತಿಱವನಿತೊಂದಳುರ್ಕೆ ನಿನಗೇತಳಾದುದೊ ಪೇೞ್ ಜಯದ್ರಥಾ|| ೯೭

ವ|| ಎನೆ ಜಯದ್ರಥನಿಂತೆಂದಂ-

ಮ|| ನರನೊಳ್ ಮುನ್ನಗಪಟ್ಟುದೊಂದೞಲೊಳಾಂ ಕೈಳಾಸ ಶೈಳೇಶನಂ
ಪಿರಿದುಂ ಭಕ್ತಿಯೊಳರ್ಚಿಸುತ್ತುಮಿರೆ ತದ್ದೇವಾಪಂ ಮೆಚ್ಚಿದೆಂ|
ನರನೊರ್ವಂ ಪೊಢಗಾಗಲೊಂದು ದಿವಸಂ ಕೌಂತೇಯರಂ ಕಾದಿ ಗೆಲ್
ನಿರುತಂ ನೀನೆನೆ ಪೆತ್ತೆನಾಂ ಬರಮನದ್ರೀಂದ್ರಾತ್ಮಜಾಶನೊಳ್|| ೯೮

ವ|| ಎಂದ ಸಿಂಧುರಾಜನ ನುಡಿಗೆ ರಾಜಾರಾಜನೆರಡು ಮುಯ್ವುಮಂ ನೋಡಿ-

ಮರಗಳು ಸರಿದಿಯ ಮೇಲೆ ಬೀಳುವಹಾಗೆ ಬಿದ್ದರು. ವ|| ಆಗ ದುರ್ಯೋಧನನ ಮಕ್ಕಳ ಸಾವನ್ನು ನೋಡಿ ನಮ್ಮಣ್ಣನ ಮುಖವನ್ನು ಯಾವ ಮುಖದಲ್ಲಿ ನೋಡಲಿ ಎಂದು ದುಶ್ಯಾಸನನು ಬಂದು ಮೇಲೆ ಬಿದ್ದನು. ೯೬. ಒಂದೇ ಬಾಣ ಅವನ ಎದೆಯನ್ನು ದೊಕ್ಕೆಂದು ತೀಕ್ಷ್ಣವಾಗಿ ಹೊಡೆದು ತಂದೆಯಾದ ಭೀಮನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಂಡು ಅಭಿಮನ್ಯುವು ದುಶ್ಯಾಸನನನ್ನು ಕೊಲ್ಲಲು ಒಪ್ಪದವನಾದನು. ವ|| ಆಗ ಕರ್ಣನ ಮಗನಾದ ವೃಷಸೇನನು ಒಂದೇ ಸಮನಾಗಿ ಕಾದುತ್ತಿದ್ದನು. ಅಷ್ಟರಲ್ಲಿ ಈ ಕಡೆ ಅಭಿಮನ್ಯುವು ಬಂದ ದಾರಿಯನ್ನೇ ಹಿಡಿದು ಬಿದುರುಗಣೆಯ ಮೇಲಿರುವ ಹಾವಿನಂತೆ ಚಕ್ರವ್ಯೂಹವನ್ನು ಪ್ರವೇಶಿಸಬೇಕೆಂದು ಬರುತ್ತಿರುವ ದ್ರುಪದ, ವಿರಾಟ, ಧೃಷ್ಟದ್ಯುಮ್ನ, ಭೀಮಸೇನ, ಸಹದೇವ, ನಕುಲ, ಯುಷ್ಠಿರ, ಘಟೋತ್ಕಚನೇ ಮೊದಲಾದವರೊಡನೆ ದ್ವಂದ್ವಯುದ್ಧದಿಂದ ಯುದ್ಧಮಾಡುತ್ತಿರುವ ದ್ರೋಣನಲ್ಲಿಗೆ ದುರ್ಯೋಧನನು ಬಂದು ನಮ್ಮ ಸೈನ್ಯವೆಲ್ಲ ಅಭಿಮನ್ಯುವಿನ ಬಾಣದ ತುದಿಯಲ್ಲಿ ತೂಗಲ್ಪಟ್ಟು ಚದುರಿ ಓಡಿಹೋಗುತ್ತಿದೆ. ನಿಮಗೆ ಅಲ್ಲಿ ಕಾಳಗವು ಬಹಳ ಜೋರಾಗಿದೆ. ಏನು ಮಾಡೋಣ ಎಂದು ಕೇಳಿದನು. ಸೈಂಧವನು ಈ ದಿನ ಯುದ್ಧಕ್ಕೆ ಹೇಗಾದರೂ ಈಶ್ವರನ ಪ್ರಸಾದದಿಂದ ಈ ಸಂದರ್ಭದಲ್ಲಿ ನಾನೇ ಸಮರ್ಥನಾಗುತ್ತೇನೆ ಎಂದು ಹೀಗೆ ಹೇಳಿದನು. ೯೭. ವೇಗವಾಗಿ ಪ್ರತಿಭಟಿಸಿ ನಿಂತಿರುವ ಶತ್ರುಸೈನ್ಯವನ್ನು ಯುದ್ಧರಂಗದಲ್ಲಿ ಚೂರು ಚೂರಾಗಿ ಕತ್ತರಿಸಿ ತರಿದಿಕ್ಕಲೂ ನಾನು ಸಮರ್ಥನಾಗಿದ್ದೇನೆ. ಇನ್ನು ನೀನು ಇಲ್ಲಿರಬೇಕಾಗಿಲ್ಲ. ಪ್ರಸಿದ್ಧನಾದ ನಿನ್ನ ದ್ರೋಣನನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗು ಎಂದನು. ಅದಕ್ಕೆ ರಾಜರಾಜನು ‘ಎಲೈ ಸೈಂಧವನೇ ಪಾಂಡವ ಸೈನ್ಯವನ್ನು ಗುರಿಯಿಟ್ಟು ಕತ್ತರಿಸುವ ಅಷ್ಟೊಂದು ಪರಾಕ್ರಮವು ನಿನಗೆ ಹೇಗೆ ಬಂದಿತು’ ಎಂದು ಕೇಳಿದನು. ವ|| ಎನ್ನಲು ಸೈಂಧವನು ಹೀಗೆಂದನು. ೯೮. ಅರ್ಜುನನಲ್ಲಿ ಮೊದಲು ಸೆರೆಸಿಕ್ಕಿದ ಒಂದು ವ್ಯಥೆಯಿಂದ ನಾನು ಕೈಲಾಸಾಪತಿಯಾದ ಈಶ್ವರನನ್ನು ಮೊದಲು ಸೆರೆಸಿಕ್ಕಿದ ಒಂದು ವ್ಯಥೆಯಿಂದ ನಾನು ಕೈಲಾಸಾಪತಿಯಾದ ಈಶ್ವರನನ್ನು ಭಕ್ತಿಯಿಂದ ಪೂಜೆ ಮಾಡುತ್ತಿರಲು ಆ ದೇವತೆಗಳ ಒಡೆಯನಾದ ಈಶ್ವರನು ‘ಮೆಚ್ಚಿದ್ದೇನೆ’, ಅರ್ಜುನನೊಬ್ಬನನ್ನು ಬಿಟ್ಟು ಉಳಿದ ಪಾಂಡವರೊಡನೆ ನೀನು ಕಾದಿ ಒಂದು ದಿವಸ ನಿಶ್ಚಯವಾಗಿ ಗೆಲ್ಲು ಎನ್ನಲು ಆ ವರವನ್ನು ಪಾರ್ವತಿಪತಿಯಿಂದ ಪಡೆದೆನು. ವ|| ಎಂದು

ಹೇಳಿದ ಸೈಂಧವನ ಮಾತಿಗೆ ಚಕ್ರವರ್ತಿಯಾದ ದುರ್ಯೋಧನನು (ತನ್ನ) ಎರಡು ಹೆಗಲುಗಳನ್ನು ನೋಡಿಕೊಂಡು ಸಂತೋಷಪಟ್ಟನು.

ಉ|| ನಿನ್ನನೆ ನಚ್ಚಿ ಪಾಂಡವರೊಳಾಂತಿಱಯಲ್ ತಱಸಂದು ಪೂಣ್ದೆನಾಂ
ನಿನ್ನ ಶರಾಳಿಗಳ್ಗಗಿದು ನಿಂದುವು ಪಾಂಡವ ಸೈನ್ಯಮೆಂದೊಡಿಂ|
ನಿನ್ನ ಭುಜಪ್ರತಾಪದಳವಾರ್ಗಮಸಾಧ್ಯಮಾಯ್ತದೇಂ
ನಿನ್ನಳವಿಂದಮಿನ್ನೆನಗೆ ಸಾರ್ದುದರಾತಿ ಜಯಂ ಜಯದ್ರಥಾ|| ೯೯

ವ|| ಎಂದು ಪೊಗೞ್ದು ಸಿಂಧುರಾಜನನಿರಲ್ವೇೞ್ದು ಕುಂಭಸಂಭವನುಂ ತಾನುಮಭಿ ಮನ್ಯುವಿನ ಸಂಗ್ರಾಮರಂಗಮನಯ್ದೆ ವಂದು-

ಚಂ|| ಉಡಿದ ರಥಂಗಳಿಟ್ಟೆಡೆಗಳೊಳ್ ಮಕುಟಂಗಳ ರತ್ನದೀಪ್ತಿಗಳ್
ಪೊಡರ್ವಿನಮೞ ತೞದ ನಿಜಾತ್ಮಜರಂ ನಡೆ ನೋಡಿ ಕಣ್ಣ ನೀ|
ರೊಡನೊಡನುರ್ಚಿ ಪಾಯೆ ಮುಳಿಸಿಂದದನೊಯ್ಯನೆ ತಾಳ್ದಿ ಕಾಯ್ಪಿನೊಳ್
ಕಡಗಿ ಜಗಂಗಳಂ ನೊಣೆದು ನುಂಗುಲುಮಾಟಿಸಿದಂ ಸುಯೋಧನಂ|| ೧೦೦

ವ|| ಆಗಳ್ ದ್ರೋಣ ದ್ರೋಣಪುತ ಕೃಪ ಕೃತವರ್ಮ ಕರ್ಣ ಶಲ್ಯ ಶಕುನಿ ದುಶ್ಯಾಸನ ವೃಷಸೇನಾದಿಗಳಾಳ್ದನ ಮುಳಿದ ಮೊಗಮನಱದು ಧರ್ಮಯುದ್ಧಮಂ ಬಿಸುಟು ನರನಂದನನ ರಥಮಂ ಸುತ್ತಿ ಮುತ್ತಿಕೊಂಡು-

ಕಂ|| ತೇರಂ ಕುದುರೆಯನೆಸಗುವ
ಸಾರಥಿಯಂ ಬಿಲ್ಲನದಱ ಗೊಣೆಯುಮನುಱದಾ|
ರ್ದೋರೊರ್ವರೊಂದನೆಚ್ಚೊಡೆ
ಬೀರಂ ಗದೆಗೊಂಡು ಬೀರರಂ ಬೆಂಕೊಂಡಂ|| ೧೦೧

ಬೆಂಕೊಳೆ ಕಳಿಂಗ ರಾಜನ
ನೂಂಕಿದ ಕರಿಘಟೆಯನುಡಿಯೆ ಬಡಿ ಬಡಿದೆತ್ತಂ|
ಕಿಂಕೊೞೆಮಾೞ್ಪುದುಮುಱದೆ
ಚ್ಚಂ ಕರ್ಣಂ ನಿಶಿತ ಶರದಿನೆರಡುಂ ಕರಮಂ|| ೧೦೨

ಕರಮೆರಡುಂ ಪಱವುದುಮಾ
ಕರದಿಂದಂ ತನ್ನ ಕುನ್ನಗೆಯ್ಯೊಳೆ ಕೊಂಡು
ದ್ಧುರ ರಥಚಕ್ರದಿನಿಟ್ಟಂ
ತಿರಿಪಿ ನರಪ್ರಿಯ ತನೂಜನಕ್ಷೋಹಿಣಿಯಂ|| ೧೦೩

ವ|| ಆಗಳ್ ದುಶ್ಯಾಸನನ ಮಗಂ ಗದಾಯುಧನೞಯೆ ನೊಂದ ಸಿಂಗದ ಮೇಲೆ ಬೆರಗಱಯದ ಬೆಳ್ಳಾಳ್ ಪಾಯ್ವಂತೆ ಕಿೞ್ತ ಬಾಳ್ವೆರಸು ಪಾಯ್ವುದುಂ-

ವ|| ನಿನ್ನನ್ನು ನಂಬಿಕೊಂಡೇ ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ನಿಷ್ಕರ್ಷಿಸಿ ಪ್ರತಿಜ್ಞೆಮಾಡಿದೆನು. ನಿನ್ನ ಬಾಣ ಸಮೂಹಗಳಿಗೆ ಹೆದರಿ ಪಾಂಡವಸೈನ್ಯವು ನಿಂತಿತು ಎಂದಾಗ ನಿನ್ನ ತೋಳಿನ ಬಲದ ಪ್ರಮಾಣ ಮತ್ತಾರಿಗೂ ಅಸಾಧ್ಯವಾಯಿತು. ಸೈಂಧವನೇ ನಿನ್ನ ಪರಾಕ್ರಮದಿಂದ ನನಗೆ ಶತ್ರುಜಯವುಂಟಾಯಿತು ವ|| ಎಂದು ಹೊಗಳಿ ಸೈಂಧವನನ್ನು ಅಲ್ಲಿಯೇ ಇರುವಂತೆ ಹೇಳಿ ದ್ರೋಣನೂ ತಾನೂ ಅಭಿಮನ್ಯುವಿನ ಯುದ್ಧರಂಗವನ್ನು ಸೇರಿದರು. ೧೦೦. ಮುರಿದ ತೇರುಗಳ ಸಂದಿಯಲ್ಲಿ ಕಿರೀಟಗಳ ರತ್ನಕಾಂತಿಗಳು ಹೊಳೆಯುತ್ತಿರಲು ನಾಶವಾಗಿ ಸತ್ತುಬಿದ್ದಿರುವ ತನ್ನ ಮಕ್ಕಳುಗಳನ್ನು ದುರ್ಯೋಧನನು ನಿಟ್ಟಿಸಿ ನೋಡಿದಾಗ ಕಣ್ಣಿರು ಒಡನೆಯೇ ಚಿಮ್ಮಿ ಹರಿಯಿತು. ಅದನ್ನು ನಿಧಾನವಾಗಿ ಸಹಿಸಿಕೊಂಡು ಕೋಪದಿಂದ ರೇಗಿ ಲೋಕವನ್ನೆಲ್ಲ ಚಪ್ಪರಿಸಿ ನುಂಗಲು ಆಶಿಸಿದನು. ವ|| ಆಗ ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಕರ್ಣ, ಶಲ್ಯ, ಶಕುನಿ, ದುಶ್ಯಾಸನ, ವೃಷಸೇನನೇ ಮೊದಲಾದವರು ಒಡೆಯನಾದ ದುರ್ಯೋಧನನ ಕೋಪದಿಂದ ಕೂಡಿದ ಮುಖವನ್ನು ನೋಡಿ ತಿಳಿದು ಧರ್ಮಯುದ್ಧವನ್ನು ಬಿಸಾಡಿ (ಬಿಟ್ಟು) ಅಭಿಮನ್ಯುವಿನ ರಥವನ್ನು ಸುತ್ತಿ ಮುತ್ತಿಕೊಂಡರು. ೧೦೧. ತೇರನ್ನೂ ಕುದುರೆಯನ್ನೂ ಅದನ್ನು ನಡೆಸುವ ಸಾರಥಿಯನ್ನೂ ಬಿಲ್ಲನ್ನೂ ಆದರ ಹೆದೆಯನ್ನೂ ಸಾವಕಾಶ ಮಾಡದೆ ಒಬ್ಬೊಬ್ಬರೊಂದನ್ನು ಹೊಡೆಯಲು ವೀರನಾದ ಅಭಿಮನ್ಯುವು ಗದೆಯನ್ನು ತೆಗೆದುಕೊಂಡು ವೀರರನ್ನು ಬೆನ್ನಟ್ಟಿದನು. ೧೦೨. ಕಳಿಂಗ ರಾಜನು ಮುಂದಕ್ಕೆ ತಳ್ಳಿದ ಆನೆಯ ಸಮೂಹವನ್ನು ಒಡೆಯುವ ಹಾಗೆ ಬಡಿಬಡಿದು ಎಲ್ಲೆಲ್ಲಿಯೂ ಸಂಕಟಪಡಿಸಲು ಕರ್ಣನು ವೇಗವಾಗಿ ಬಂದು ಹರಿತವಾದ ಬಾಣದಿಂದ ಅಭಿಮನ್ಯುವಿನ ಎರಡುಕೈಗಳನ್ನು ಹೊಡೆದನು (ಕತ್ತರಿಸಿದನು).

೧೦೩. ಕೈಗಳೆರಡೂ ಕತ್ತರಿಸಿಹೋದರೂ ಅಭಿಮನ್ಯುವು ವೇಗವಾಗಿ ತನ್ನ ಮೋಟುಗೈಗಳಿಂದಲೇ ಕಳಚಿ ಬಿದ್ದಿದ್ದ ಗಾಲಿಯೊಂದನ್ನು ತೆಗೆದುಕೊಂಡು ಸುತ್ತಿ ತಿರುಗಿ ಪ್ರಯೋಗಮಾಡಿ ಒಂದಕ್ಷೋಹಿಣೀ ಸೈನ್ಯವನ್ನು ಹೊಡೆದು ಹಾಕಿದನು. ವ|| ಆಗ ದುಶ್ಯಾಸನನ ಮಗನಾದ ಗದಾಯುಧನು ಸಾಯುವ ಹಾಗೆ ಯಾತನೆಪಡುತ್ತಿರುವ ಸಿಂಹದ ಮೇಲೆ ಅವಿವೇಕಿಯಾದ ದಡ್ಡನು ಹಾಯುವ ಹಾಗೆ

ಚಂ|| ಸುರಿತ ಕೃಪಾಣಪಾಣಿಗಿದಿರಂ ನಡೆದಳ್ಕು ತೊಟ್ಟು ವಾಯ್ದು ಡೊ
ಕ್ಕರದೊಳೆ ಮಿಕ್ಕ ದಿಕ್ಕರಿಯನಿಕ್ಕುವವೋಲ್ ನೆಲಕಿಕ್ಕಿ ಪತ್ತಿ ಕ|
ತ್ತರಿಗೊಳೆ ಕಾಯ್ದು ಕಣ್ತುಮುೞ್ದ್ದುಸಿರ್ ಕುಸಿದಂತಕನಂತಮೆಯ್ದೆ ಮೆಯ್
ಪರವಶವಾಗೆ ಜೋಲ್ದನಭಿಮನ್ಯು ಭಯಂಕರ ರಂಗಭೂಮಿಯೊಳ್|| ೧೦೪

ಕಂ|| ಅನಿತಣ್ಮಿ ಸತ್ತ ನರನಂ
ದನಂಗೆ ಕಣ್ ಸೋಲ್ತು ಬಗೆಯದಮರೇಂದ್ರನನಿ|
ನ್ನೆನಗೆ ತನಗೆಂಬ ದೇವಾಂ
ಗನೆಯರ ಕಳಕಳಮೆ ಪಿರಿದುಮಾಯ್ತಂಬರದೊಳ್|| ೧೦೫

ಅಭಿಮನ್ಯು ಮರಣ ವಾರ್ತಾ
ಪ್ರಭೂತ ಶೋಕಾಗ್ನಿ ಧರ್ಮತನಯನನಿರದಂ|
ದಭಿಭವಿಸಿ ತನ್ನನಳುರ್ದಂ
ತೆ ಭಾಸ್ಕರಂ ಕೆಂಕಮಾದನಸ್ತಾಚಲದೊಳ್|| ೧೦೬

ವ|| ಅಂತು ನಿಜತನೂಜನ ಮರಣ ಶ್ರವಣಾಶನಿಘಾತದಿಂ ಕುಳಶೈಲಂ ಕೆಡೆವಂತೆ ಕೆಡೆದು ಮೂರ್ಛಾಗತನಾದ ಧರ್ಮಪುತ್ರನಂ ಭೀಮಸೇನ ನಕುಳ ಸಹದೇವ ಸಾತ್ಯಕಿ ದ್ರುಪದ ವಿರಾಟಾದಿಗಳಪಹತ ಕದನರ್ ಮುಂದಿಟ್ಟೊಡಗೊಂಡು ಬೀಡಿಂಗೆ ಪೋದರಾಗಳ್ ಧರ್ಮಪುತ್ರನ ಶೋಕಮನಾಱಸಲೆಂದು ಕೃಷ್ಣದ್ವೈಪಾಯನಂ ಬಂದು ಸಂಸಾರಸ್ಥಿತಿಯನಱಯದವರಂತೆ ನೀನಿಂತು ಶೋಕಾಕ್ರಾಂತನಾದೊಡೆ-

ಚಂ|| ಎನಿತಿದಿರಾಂತರಾತಿಬಲಮಂತನಿತಂ ತವೆ ಕೊಂದು ತತ್ಸುಯೋ
ಧನ ಸುತರೆನ್ನ ಬಾಣಗಣದಿಂ ತವದಿರ್ದರೊ ಯುದ್ಧದಾಳ್ಗೆ ರೋ|
ದನಮೆನಗಾವುದಯ್ಯನೆನಗೇಕೆಯೊ ಶೋಕಿಪನೆಂದು ಧರ್ಮನಂ
ದನ ನರನಂದನಂ ನಿನಗೆ ಸಗ್ಗದೊಳೇನಭಿಮನ್ಯು ನೋಯನೇ|| ೧೦೭

ಕಂ|| ಜ್ಞಾನಮಯನಾಗಿ ಸಂಸಾ
ರಾನಿತ್ಯತೆಯಂ ಜಲಕ್ಕನಾಗಱದಿರ್ದ|
ಜ್ಞಾನಿಯವೋಲ್ ನೀನುಂ ಶೋ
ಕಾನಲ ಸಂತಪ್ತ ಚಿತ್ತನಪ್ಪುದು ದೊರೆಯೇ|| ೧೦೮

ವ|| ಎಂದು ಷೋಡಶರಾಜೋಪಾಖ್ಯಾನಮನಱಪಿ ಧರ್ಮಪುತ್ರನ ಶೋಕಮನಾ ನುಡಿದು ಪಾರಾಶರ ಮುನೀಂದ್ರಂ ಪೋದನಿತ್ತಲ್

ಒರೆಯಿಂದ ಹೊರಗೆ ಕಿತ್ತ (ಸೆಳೆದ) ಕತ್ತಿಯೊಡನೆ ಹಾಯ್ದನು. ೧೦೪. ಪ್ರಕಾಶದಿಂದ ಕೂಡಿರುವ ಕತ್ತಿಯನ್ನು ಹಿಡಿದಿರುವ ಗದಾಯುಧನಿಗೆ ಅಭಿಮನ್ಯುವು ಇದಿರಾಗಿ ನಡೆದು ಭಯಂಕರವಾದ ರೀತಿಯಲ್ಲಿ ಥಟ್ಟನೆ ಹಾಯ್ದು ಡೊಕ್ಕರವೆಂಬ ಪಟ್ಟಿನಿಂದ ದಿಗ್ಗಜವನ್ನು ಇಕ್ಕುವಂತೆ ಅವನನ್ನು ನೆಲಕ್ಕೆ ಅಪ್ಪಳಿಸಿ ಅವನ ಮೇಲೆ ಹತ್ತಿ ಕತ್ತರಿಯಂತೆ ಹಿಡಿಯಲು ಆ ಗದಾಯಧನ ಕೋಪದಿಂದ ಅವನ ಕಣ್ಣಿನ ಗುಳ್ಳೆ ಹೊರಕ್ಕೆ ಬಂದು ಉಸಿರು ಕುಗ್ಗಿ ಸತ್ತನು. ಅಭಿಮನ್ಯುವು ಭಯಂಕರವಾದ ಯುದ್ಧಭೂಮಿಯಲ್ಲಿ ಮೂರ್ಛೆಹೋಗಿ ಜೋತುಬಿದ್ದನು. ೧೦೫. ಅಷ್ಟು ಪರಾಕ್ರಮವನ್ನು ಪ್ರದರ್ಶಿಸಿ ಸತ್ತ ಅಭಿಮನ್ಯುವಿಗೆ ಮೋಹಗೊಂಡು ದೇವೇಂದ್ರನನ್ನೂ ಅಲಕ್ಷಿಸಿ ಅಭಿಮನ್ಯುವು ನನಗೆ ಬೇಕು ತನಗೆ ಬೇಕು ಎನ್ನುವ ಅಪ್ಸರಸ್ತ್ರೀಯರ ಕಳಕಳ ಶಬ್ದವೇ ಆಕಾಶಪ್ರದೇಶದಲ್ಲಿ ವಿಶೇಷವಾಯಿತು. ೧೦೬. ಅಭಿಮನ್ಯುವಿನ ಮರಣವಾರ್ತೆಯಿಂದ ಉಂಟಾದ ಶೋಕಾಗ್ನಿಯು ಧರ್ಮರಾಜನನ್ನು ಅಂದು ಬಿಡದೆ ಆಕ್ರಮಿಸಿ ತನ್ನನ್ನೂ ವ್ಯಾಪಿಸಿದಂತೆ (ಆವರಿಸಿರುವಂತೆ) ಅಸ್ತಪರ್ವತದಲ್ಲಿ ಸೂರ್ಯನು ಕೆಂಪಗಾದನು. ವ|| ಹಾಗೆ ತನ್ನ ಮಗನು ಸತ್ತ ಮಾತನ್ನು ಕೇಳುವಿಕೆಯೆಂಬ ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳು ಉರುಳುವಂತೆ ಉರುಳಿ ಮೂರ್ಛೆ ಹೋದನು. ಭೀಮಸೇನ, ನಕುಳ, ಸಹದೇವ, ಸಾತ್ಯಕಿ, ದ್ರುಪದ, ವಿರಾಟನೇ ಮೊದಲಾದವರು ಯುದ್ಧವನ್ನು ನಿಲ್ಲಿಸಿ ಧರ್ಮಜನನ್ನು ಮುಂದಿಟ್ಟುಕೊಂಡು ಯುದ್ಧದಿಂದ ಹಿಂತಿರುಗಿದವರಾಗಿ ತಮ್ಮ ಬೀಡಿಗೆ ಹೋದರು. ಆಗ ಧರ್ಮರಾಜನ ದುಖವನ್ನು ಶಮನಮಾಡಬೇಕೆಂದು ವೇದವ್ಯಾಸರೇ ಬಂದರು. (ಧರ್ಮರಾಜನನ್ನು ಕುರಿತು) ‘ಮಹಾರಾಜ, ಸಂಸಾರಸ್ಥಿತಿಯನ್ನು ತಿಳಿಯದವರಂತೆ ನೀನು ಹೀಗೆ ದುಖಿಸಬಾರದು. ೧೦೭. ಪ್ರತಿಭಟಿಸಿದಷ್ಟು ಶತ್ರುಸೈನ್ಯವನ್ನೆಲ್ಲ ಪೂರ್ಣವಾಗಿ ಕೊಂದು ದುರ್ಯೋಧನನ ಮಕ್ಕಳೆಷ್ಟೋ ಜನವನ್ನು ತನ್ನ ಬಾಣದ ಸಮೂಹದಿಂದ ನಾಶಪಡಿಸಿದ ಶೂರನಾದ ನನಗಾಗಿ ಆರ್ಯನಾದ ಧರ್ಮರಾಜನು ಏಕೆ ಅಳುತ್ತಿದ್ದಾನೆ ಎಂದು ಸ್ವರ್ಗದಲ್ಲಿರುವ ಅಭಿಮನ್ಯುವು ನೊಂದುಕೊಳ್ಳುವುದಿಲ್ಲವೆ? ೧೦೮. (ಲೋಕ) ಜ್ಞಾನದಿಂದ ಪರಿಪೂರ್ಣವಾಗಿ ಈ ಸಂಸಾರದ ಅಶಾಶ್ವತೆಯನ್ನು ಚೆನ್ನಾಗಿ ತಿಳಿದೂ ತಿಳಿವಿಲ್ಲದವನ ಹಾಗೆ ನೀನೂ ಶೋಕಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವನಾಗುವುದು ಯೋಗ್ಯವೇ?’ ವ|| ಎಂದು ಹದಿನಾರುರಾಜರ ಕಥೆಯನ್ನು ತಿಳಿಸಿ ಧರ್ಮರಾಜನ

ಕದನದಿನಾಂ ಬರೆ ನಿಚ್ಚಲು
ಮಿದಿರ್ವಂದು ಕೊರಲ್ಗೆ ವಾಯ್ದು ಬಾಯ್ವಾಯೊಳಲಂ|
ಪಿದಿರ್ಗೊಳೆ ತಂಬುಲಮಂ ಕೊ
ಳ್ಳದೆ ಮಾಣ್ದೇ ಮಗನ ತಡವಿದೇನಸುರಾರೀ|| ೧೧೫

ವ|| ಎನುತ್ತುಂ ಬೀಡನೆಯ್ದೆ ವಂದು ಶೋಕಸಾಗರದೊಳ್ ಮುೞುಗಾಡುವ ಪರಿಜನಮುಂ ತನ್ನ ಮೊಗಮಂ ನೋಡಲ್ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರ್ದ ವೀರಭಟರುಮಂ ಕಂಡು ಮಗನ ಸಾವಂ ನಿಶ್ಚೆ ಸಿ ರಾಜಮಂದಿರಮಂ ಪೊಕ್ಕು ರಥದಿಂದಮಿೞದು ಧರ್ಮಪುತ್ರಂಗಂ ವಾಯುಪುತ್ರಂಗಂ ಪೊಡೆವಟ್ಟು ಕುಳ್ಳಿರ್ಪುದುಮವರ್ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರೆ ಕಿರೀಟಿ ಕಂಡಿದೇನೆಂದು ಬೆಸಗೊಳೆ ಧರ್ಮಪುತ್ರನಿಂತೆಂದ-

ಮ||ಸ್ರ|| ಗುರು ಚಕ್ರವ್ಯೂಹಂ ಪಣ್ಣಿದೊಡೆ ಪುಗಲಿದಂ ಬಲ್ಲರಾರೆಂದೊಡಿಂ ನಾ
ನಿರೆ ಮತ್ತಾರ್ ಬಲ್ಲರೆಂದೊರ್ವನೆ ರಿಪುಬಳವಾರಾಶಿಯಂ ಪೊಕ್ಕು ಮಿಕ್ಕಾಂ|
ತರನಾಟಂದಿಕ್ಕಿ ದುರ್ಯೋಧನನ ತನಯರಂ ನೂರ್ವರಂ ಕೊಂದು ತತ್ಸಂ
ಗರದೊಳ್ ಕಾದೆಮ್ಮನಿಂತಾಂತಿಱದು ನಿಜಸುತಂ ದೇವಲೋಕಕ್ಕೆ ಸಂದಂ|| ೧೧೬

ಮ|| ಬರಮಂ ಬಾಳ ಶಶಾಂಕಮೌಳಿ ಕುಡೆ ಪೆತ್ತೊಂದುರ್ಕಿನಿಂದೋವದಾಂ
ತು ರಣೋತ್ಸಾಹದಿನೆಮ್ಮನೊರ್ವನೆ ಭರಂಗೆಯ್ದತ್ತ ದುರ್ಯೋಧನಂ|
ಬೆರಸಾ ದ್ರೋಣನನಟ್ಟಿ ಸಿಂಧು ವಿಷಯಾಶಂ ಪೊದೞ್ದೊಂದು ಮ
ಚ್ಚರದಿಂ ನಿನ್ನ ತನೂಜನಂ ಕೊಲಿಸಿದಂ ಮತ್ತಾಂತವರ್ ಕೊಲ್ವರೇ|| ೧೧೭

ವ|| ಎಂಬುದುಂ ಪ್ರಚಂಡ ಕೋಪ ಪಾವಕ ಪ್ರಶಮಿತ ಶೋಕರಸನುಮುನ್ನತ ಲಲಾಟ ತಟ ಘಟಿತ ಭೀಷಣ ಭ್ರುಕುಟಿಯುಂ ಕಲ್ಪಾಂತ ದಿನಕರ ದುರ್ನಿರೀಕ್ಷನುಮುತ್ಪಾತ ಮಾರುತನಂತೆ ಸಕಲ ಭೂಭೃಕ್ಕಂಪಕಾರಿಯುಂ ವಿಂಧ್ಯಾಚಳದಂತೆ ವರ್ಧಮಾನೋತ್ಸೇಧನು ಮಂಧಕಾರಾತಿಯಂತೆ ಭೈರವಾಕಾರನುಮಾಗಿ-

ಮ|| ರಸೆಯಿಂ ಭೂತಳದಿಂ ಕುಳಾದ್ರಿ ದಿಗ್ದಂತಿಯಿಂ ರ್ವಾಯಿಂ
ದೆಸೆಯಿಂದಾಗಸದಿಂದಜಾಂಡ ತಟದಿಂದತ್ತೆಲ್ಲಿ ಪೊಕ್ಕಿರ್ದುಮಿಂ|
ಮಿಸುಕಲ್ ತೀರ್ಗುಮೆ ವೈರಿಗೆನ್ನ ಸುತನಂ ಕೊಂದಿರ್ದುದಂ ಕೇಳ್ದು ಸೈ
ರಿಸಿ ಮಾಣ್ದಿರ್ದಪೆನಿನ್ನುಮೆಂದೊಡಿದನಾಂ ಪೇೞೇತಳ್ ನೀಗುವೆಂ|| ೧೧೮

ಬಗೆಗೆ ಮನೋವ್ಯಥೆ ಮನಸ್ಸನ್ನು ವಿಶೇಷವಾಗಿ ಪೀಡಿಸುತ್ತಿರಲು ಅರ್ಜುನನು ಹೀಗೆಂದನು ೧೧೫. ದಿನದಂತೆ ನಾನು ಯುದ್ಧದಿಂದ ಬರಲು ಎದುರಾಗಿ ಬಂದು ಕೊರಳಿಗೆ ಹಾರಿ ಅಪ್ಪಿಕೊಂಡು ನನ್ನ ಬಾಯಿಂದ ತನ್ನ ಬಾಯಿಗೆ ಸುಖವಾಗಿರುವ ಹಾಗೆ ತಾಂಬೂಲವನ್ನು ಕೊಳ್ಳದೇ ಇರುವ ಮಗನ ಈ ಸಾವಕಾಶವಿದೇನು ಕೃಷ್ಣ? ವ|| ಎನ್ನುತ್ತ ಬೀಡನ್ನು ಸೇರಿ (ಮನೆಯ ಹತ್ತಿರಕ್ಕೆ ಬಂದು) ದುಖಸಮುದ್ರದಲ್ಲಿ ಮುಳುಗಾಡುವ ಸೇವಕರನ್ನೂ ತನ್ನ ಮುಖವನ್ನು ನೋಡಲು ನಾಚಿಕೆಯಿಂದ ಕೂಡಿ ತಲೆಯನ್ನು ಬಗ್ಗಿಸಿಕೊಂಡು ನೆಲವನ್ನು ಬರೆಯುತ್ತಿದ್ದ ವೀರಭಟರನ್ನೂ ನೋಡಿ ಮಗನ ಸಾವನ್ನು ನಿಶ್ಚಯಿಸಿದನು. ಅರಮನೆಯನ್ನು ಪ್ರವೇಶ ಮಾಡಿದನು. ರಥದಿಂದಿಳಿದು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರ ಮಾಡಿ ಕುಳಿತುಕೊಂಡನು. ಅವರು ತಲೆಯನ್ನು ತಗ್ಗಿಸಿ (ದುಖದಿಂದ) ನೆಲವನ್ನು ಬರೆಯುತ್ತಿರಲು ಅರ್ಜುನನು ಇದೇನೆಂದು ಪ್ರಶ್ನೆ ಮಾಡಿದನು. ಧರ್ಮರಾಜನು ಹೀಗೆ ಹೇಳಿದನು. ೧೧೬. ಗುರುವಾದ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಲು ಇದನ್ನು ಪ್ರವೇಶಿಸಲು ತಿಳಿದವರಾರು ಎಂದು ಕೇಳುತ್ತಿರುವಾಗಲೇ ಮತ್ತಾರು ತಿಳಿದಿದ್ದಾರೆ ಎಂದು ಶತ್ರುಸೇನಾಸಮೂಹವನ್ನು ಒಬ್ಬನೇ ಪ್ರವೇಶಿಸಿದನು. ಮೀರಿ ಪ್ರತಿಭಟಿಸಿದವರನ್ನು ಕೊಂದು ದುರ್ಯೋಧನನ ನೂರು ಜನ ಮಕ್ಕಳನ್ನೂ ಸಂಹರಿಸಿ ಆ ಯುದ್ಧದಲ್ಲಿ ನಮ್ಮನ್ನು ರಕ್ಷಿಸಿ ಹೀಗೆ ಎದುರಾಗಿ ಯುದ್ಧಮಾಡಿ ನಿನ್ನ ಮಗನಾದ ಅಭಿಮನ್ಯುವು ದೇವಲೋಕವನ್ನು ಸೇರಿದನು. ೧೧೭. ಸೈಂಧವನು ಈಶ್ವರನಿಂದ ಪಡೆದ ವರದ ಅಹಂಕಾರದಿಂದ ದಾಕ್ಷಿಣ್ಯರಹಿತನಾಗಿ ನಮ್ಮನ್ನು ಎದ್ದು ಎದುರಿಸಿ ಆರ್ಭಟ ಮಾಡುತ್ತ, ದುರ್ಯೋಧನನೊಡನೆ ದ್ರೋಣನನ್ನು ಬೇರೆ ಕಡೆಗೆ ಕಳುಹಿಸಿ ತನ್ನಲ್ಲಿ ನೆಲೆಗೊಂಡಿದ್ದ ಮತ್ಸರದಿಂದ ನಿನ್ನ ಮಗನನ್ನು ಕೊಲ್ಲಿಸಿದನು. ಬೇರೆಯವರು ಅಭಿಮನ್ಯುವನ್ನು ಕೊಲ್ಲಲು ಸಾಧ್ಯವೇ? ವ|| ಎನ್ನಲು ಅತ್ಯಂತ ಘೋರವಾದ ಕೋಪಾಗ್ನಿಯಿಂದ ಶೋಕರಸವು ಆರಿಹೋಯಿತು. ಎತ್ತರವಾದ ಮುಖದಲ್ಲಿ ಹುಬ್ಬು ಭಯಂಕರವಾಗಿ ಗಂಟಿಕ್ಕಿತು. ಪ್ರಳಯಕಾಲದ ಸೂರ್ಯನಂತೆ (ಕಣ್ಣಿನಿಂದ) ನೋಡಲಾಗದವನೂ ವಿಪತ್ಕಾಲದ ಗಾಳಿಯಂತೆ ಸಮಸ್ತ ಬೆಟ್ಟಗಳನ್ನೂ ನಡುಗಿಸುವವನೂ ವಿಂಧ್ಯಪರ್ವತದಂತೆ ಎತ್ತರವಾಗಿ ಬೆಳೆಯುತ್ತಿರುವವನೂ ಈಶ್ವರನಂತೆ ಭಯಂಕರಾಕಾರವುಳ್ಳವನೂ ಆದನು. ೧೧೮. ಪಾತಾಳದಿಂದಲೂ ಭೂಮಂಡಲದಿಂದಲೂ ಕುಲಪರ್ವತಗಳ ಸಮೂಹದಿಂದಲೂ ದಿಗ್ಗಜಗಳಿಂದಲೂ ಸಮುದ್ರಗಳಿಂದಲೂ ದಿಕ್ಕುಗಳಿಂದಲೂ ಬ್ರಹ್ಮಾಂಡದಿಂದಲೂ ಆಚೆಯ

ಕಂ|| ಬಳೆದ ಸುತಶೋಕದಿಂದೀ
ಗಳೆ ಸುರಿಗುಮೆ ಸುರಿಯವಾ ಜಯದ್ರಥನ ಚಿತಾ|
ನಳನಿಂದಮೊಗೆದ ಪೊಗೆಗಳ್
ಕೊಳೆ ಸುರಿವೊಡೆ ಸುರಿವುವೆನ್ನ ನಯನಜಲಂಗಳ್|| ೧೧೯

ಬಿಸಜಭವನಕ್ಕೆ ಮೃಡನ
ಕ್ಕಸುರಾಂತಕನಕ್ಕೆ ಕಾವೊಡಂ ನಾಳಿನೊಳ|
ರ್ವಿಸೆ ಕೊಂದು ಸಿಂಧುರಾಜನ
ಬಸಿಱಂ ಪೋೞ್ದೆನ್ನ ಮಗನನಾಂ ತೆಗೆಯದಿರೆಂ|| ೧೨೦

ಕೊಂದೆನ್ನ ಮಗನನಿಂ ಭಯ
ದಿಂದಂ ರಸೆವೊಕ್ಕುಮಜನ ಗುಂಡಿಗೆವೊಕ್ಕುಂ|
ಮಂದರಧರನೀ ಪೊರ್ಕುೞ
ಪೊಂದಾವರೆವೊಕ್ಕು ಮೇವಣಂ ಬರ್ದುಕುವನೇ|| ೧೨೧

ಚಂ|| ಪಡೆ ಪಡೆಮೆಚ್ಚೆಗಂಡನೆನೆ ಸಂದರಿಕೇಸರಿಯೆಂಬಗುರ್ವು ನೇ
ರ್ಪಡೆ ನೆಗೞುನಣಂ ಸೆಡೆದು ಮಾಣ್ಬೆನೆ ನಾಳೆ ದಿನೇಶನಸ್ತದ|
ತ್ತುಡುಗದ ಮನ್ನ ಸೈಂಧವನಗುರ್ವಿಸೆ ಕೊಲ್ಲದೊಡೇನೊ ಗಾಂಡಿವಂ
ಬಿಡಿದೆನೆ ಚಿ ತೊವಲ್ವಿಡಿದೆನಲ್ಲೆನೆ ವೈರಿಗೆ ಯುದ್ಧರಂಗದೊಳ್|| ೧೨೨

ವ|| ಎಂದು ನೃಪ ಪರಮಾತ್ಮಂ ಕೃತಪ್ರತಿಜ್ಞನಾದುದಂ ಸೈಂಧವನ ಸಜ್ಜನಂ ದುಜ್ಜೋದನನ ತಂಗೆ ದುಶ್ಶಳೆ ಕೇಳ್ದು ಮಲಮಲ ಮಱುಗಿ ತಮ್ಮಣ್ಣನಲ್ಲಿಗೆ ವಂದು ಕಾಲ ಮೇಲೆ ಕವಿದು ಪಟ್ಟು-

ಕಂ|| ತನ್ನ ಸುತನೞಯಲೞಯಲ್
ನಿನ್ನಯ ಮಯ್ದುನನನರ್ಜುನಂ ಪೂಣ್ದನದ|
ರ್ಕಾನ್ನಡುಗಿ ಬಂದೆನಿನ್ನೀ
ನೆನ್ನೋಲೆಯ ಕಡಗದೞವನೇಂ ನೋಡಿದಪಾ|| ೧೨೩

ವ|| ಎಂಬುದುಂ ಸುಯೋಧನಂ ಮುಗುಳ್ನಗೆ ನಕ್ಕಿಂತೆಂದಂ-

ಕಂ|| ಮರುಳಕ್ಕ ಮಗನ ಶೋಕದಿ
ನುರುಳ್ದುಂ ಪೂಣ್ದವನ ಪೂಣ್ಕೆ ದುಶ್ಶಾಸನನೊಳ್|
ಕರತನದಿಂದೆನ್ನೊಳಮಾ
ಮರುತ್ಸುತಂ ಪೂಣ್ದ ಪೂಣ್ಕೆಯಂತೆವೊಲಕ್ಕುಂ|| ೧೨೪

ಕಡೆ ಎಲ್ಲಿ ಹೊಕ್ಕಿದ್ದರೂ ನನ್ನ ಶತ್ರುವಿಗೆ (ಅಲ್ಲಿಂದ) ಅಳ್ಳಾಡಲು ಸಾಧ್ಯವೇ? ನನ್ನ ಮಗನನ್ನು ಕೊಂದಿರುವುದನ್ನು ಕೇಳಿಯೂ ಸೈರಿಸಿಕೊಂಡು ಇನ್ನೂ ಸುಮ್ಮನಿದ್ದೇನೆ ಎಂದರೆ ಈ ದುಖವನ್ನು ನಾನು ಮತ್ತಾವುದರಿಂದ ಪರಿಹಾರ ಮಾಡಿಕೊಳ್ಳಲಿ. ೧೧೯. ಅಭಿವೃದ್ಧಿಯಾಗುತ್ತಿರುವ ಪುತ್ರಶೋಕದಿಂದ ಈಗ ನನ್ನ ಕಣ್ಣೀರು ಸುರಿಯುತ್ತಿಲ್ಲ, ಸುರಿಯುವುದಿಲ್ಲ ; ಆ ಸೈಂಧವನ ಚಿತಾಗ್ನಿಯಿಂದ ಹುಟ್ಟಿದ ಹೊಗೆಗಳು ಸುತ್ತಿ ಆವರಿಸಲು ಆಗ ಮಾತ್ರ ನನ್ನ ಕಣ್ಣೀರು ಸುರಿಯುವುದು. ೧೨೦. ಬ್ರಹ್ಮನಾಗಲಿ ರುದ್ರನಾಗಲಿ ವಿಷ್ಣುವಾಗಲಿ ರಕ್ಷಿಸಿದರೂ ನಾಳೆ ಭಯಂಕರವಾದ ರೀತಿಯಲ್ಲಿ ಕೊಂದು ಆ ಸೈಂಧವನ ಹೊಟ್ಟೆಯನ್ನು ಸೀಳಿ ನನ್ನ ಮಗನನ್ನು ತೆಗೆಯದೆ ಇರುವುದಿಲ್ಲ. ೧೨೧. ನನ್ನ ಮಗನನ್ನು ಕೊಂದು ಭಯದಿಂದ ಇನ್ನು ಅವನು ಪಾತಾಳವನ್ನು ಪ್ರವೇಶಿಸಿದರೂ ಬ್ರಹ್ಮನ ಕಮಂಡಲವನ್ನು ಪ್ರವೇಶಿಸಿದರೂ ವಿಷ್ಣುವಿನ ನಾಭಿಕಮಲವನ್ನು ಸೇರಿದರೂ ಪುನ ಆ ಸೈಂಧವನು ಬದುಕಬಲ್ಲನೇ? ೧೨೨. ಸೈನ್ಯವು ನನ್ನನ್ನು ‘ಪಡೆಮೆಚ್ಚೆಗಂಡ’ ಎನ್ನುತ್ತಿರುವಾಗ ಪ್ರಸಿದ್ಧವಾದ ಅರಿಕೇಸರಿಯೆಂಬ ಪ್ರಶಸ್ತಿಯಿಂದ ನೇರವಾಗಿ ಪ್ರಸಿದ್ಧವಾಗಿರುವಾಗ ನಾನು ಸ್ವಲ್ಪ ಹೆದರಿ ಭಯದಿಂದ ಕುಗ್ಗಿಬಿಡುತ್ತೇನೆಯೇ? ನಾಳೆ ಸೂರ್ಯನು ಮುಳುಗುವುದಕ್ಕೆ ಮುಂಚೆಯೇ ಜಯದ್ರಥನು ಹೆದರುವಂತೆ ಅವನನ್ನು ಕೊಲ್ಲದಿದ್ದರೆ ನಾನು ಗಾಂಡೀವವನ್ನು ಧರಿಸಿದವನೇ ಅಲ್ಲ. ಯುದ್ಧರಂಗದಲ್ಲಿ ಹೆದರಿ ಭಯಸೂಚಕವಾದ ಚಿಗುರು ಹಿಡಿದವನಾಗುವುದಿಲ್ಲವೇ? ವ|| ಎಂದು ನೃಪಪರಮಾತ್ಮನಾದ ಅರ್ಜುನನು ಪ್ರತಿಜ್ಞೆ ಮಾಡಿದುದನ್ನು ಸೈಂಧವನ ಪತ್ನಿಯೂ ದುರ್ಯೋಧನನ ತಂಗಿಯೂ ಆದ ದುಶ್ಶಳೆಯು ಕೇಳಿ ವಿಶೇಷವಾಗಿ ದುಖಪಟ್ಟು ತಮ್ಮ ಅಣ್ಣನ ಹತ್ತಿರಕ್ಕೆ ಬಂದು ಕಾಲಿನ ಮೇಲೆ ಕವಿದು ಬಿದ್ದಳು. ೧೨೩. ಅರ್ಜುನನು ತನ್ನ ಮಗನು ಸಾಯಲು ನಿನ್ನ ಮಯ್ದುನನ ಸಾವಿಗೆ ಪ್ರತಿಜ್ಞೆ ಮಾಡಿದ್ದಾನೆ. ಅದಕ್ಕಾಗಿ ನಾನು ನಡುಗಿ ಬಂದೆನು. ನೀನು ನನ್ನ ಓಲೆ ಮತ್ತು ಕಡಗದ ನಾಶವನ್ನು (ಸೌಮಂಗಲ್ಯದ ನಾಶವನ್ನು) ನೋಡುತ್ತೀಯಾ? ವ|| ಎನ್ನಲು ದುರ್ಯೋಧನನು ಹುಸಿನಗೆ ನಕ್ಕು ಹೀಗೆಂದನು. ೧೨೪. ಹುಚ್ಚುತಂಗೀ,

ಚಂ|| ಕೃತ ವಿವಿಧಾಸ್ತ್ರಶಸ್ತ್ರ ಯಮಪುತ್ರ ಮರುತ್ಸುತ ಯಜ್ಞಸೇನರು
ದ್ಧತ ಬಳರೆತ್ತಿ ಕಾದಿ ಸುಗಿದೋಡಿದರಲ್ಲರೆ ಕಾವರೀ ವಿವಿಂ|
ಶತಿ ಕೃಪ ಕರ್ಣ ಶಲ್ಯ ಕಳಶೋದ್ಭವ ತತ್ಪ್ರಿಯ ಪುತ್ರರೆಂದೊಡ
ಪ್ರತಿರಥನಂ ಜಯದ್ರಥನನಾಜಿಯೊಳೆಯ್ತರೆ ವರ್ಪ ಗಂಡರಾರ್|| ೧೨೫

ವ|| ಎಂದು ದುಶ್ಶಳೆಯನೊಡಗೊಂಡು ಕುಂಭಸಂಭವನಲ್ಲಿಗೆ ವಂದಿಂತೆಂದಂ-

ಮ||ಸ್ರ|| ಸುತಶೋಕೋದ್ರೇಕದಿಂ ಸೈಂಧವನನೞವೆಂದರ್ಜುನಂ ಪೂಣ್ದನಿಂತೀ
ಸತಿ ಬಂದಳ್ ಕಾವುದಾತ್ಮಾನುಜೆಯ ಕಡಗಮಂ ನೀಮೆ ಮಾರ್ಕೊಳ್ವೊಡಾರ್ ತಾ|
ವಿತರರ್ ಮುಟ್ಟಲ್ ಸಮರ್ಥರ್ ಕದನದೊಳೆನೆ ಗೆಲ್ವಾಸೆಯಂತಿರ್ಕೆ ಸಿಂಧು
ಕ್ಷಿತಿಪಂ ತಾನೇನನಾದಂ ರಣದೊಳದನೆ ಪೋಗಾನುಮಪ್ಪೆಂ ನರೇಂದ್ರಾ|| ೧೨೬

ಮ|| ಬಿಜಯಂಗೆಯ್ಯೆನೆ ಪೋಪುದುಂ ನೃಪನದಂ ಧರ್ಮಾತ್ಮಜಂ ಕೇಳ್ದು ಪೇ
ೞ್ದಜಿತಂಗಾ ಹಠಿ ಪೇೞ್ದುದೊಂದು ನಯದಿಂದಾ ರಾತ್ರಿಯೊಳ್ ಪೋಗಿ ಕುಂ|
ಭಜನಂ ಕಂಡು ವಿನಮ್ರನಾಗಿ ನುಡಿದಂ ನೀಮಿಂತು ಕೆಯ್ಕೊಂಡು ಕಾ
ದೆ ಜಗತ್ಪೂಜಿತ ಬೆಟ್ಟನಾದೊಡೆಮಗಿಂ ಬಾೞುಸೆಯಾವಾಸೆಯೋ|| ೧೨೭

ಕಂ|| ನಿಮ್ಮಳವನಱದು ಮುನ್ನಮೆ
ನಿಮ್ಮಂ ಪ್ರಾರ್ಥಿಸಿದೆಮೀಗಳದುವಂ ಮದಿರ್|
ನಿಮ್ಮಯ ಧರ್ಮದ ಮಕ್ಕಳೆ
ವೆಮ್ಮಂ ಕಡೆಗಣಿಸಿ ನಿಮಗೆ ನೆಗೞ್ವುದು ದೊರೆಯೇ|| ೧೨೮

ಎನೆ ಗುರು ಕರುಣಾರಸಮದು
ಮನದಿಂ ಪೊಱಪೊಣ್ಣೆ ನಿನಗೆ ಜಯಮಕ್ಕುಮನಂ|
ತನ ಪೇೞ್ದತೆಱದೆ ನೆಗೞೆನೆ
ವಿನಯದೆ ಬೀೞ್ಕೊಂಡು ನೃಪತಿ ಬೀಡಂ ಪೊಕ್ಕಂ|| ೧೨೯

ವ|| ಆಗಳಾರೂಢಸರ್ವಜ್ಞಂ ಪ್ರತಿಜ್ಞಾರೂಢನಾಗಿ ಗಂಗಾನದೀ ತರಂಗೋಪಮಾನ ದುಕೂಲಾಂಬರ ಪರಿಧಾನನುಮಾಗಿ ಧವಳಶಯ್ಯಾತಳದೊಳ್ ಮದೊಱಗಿದನಮೋಘಾಸ್ತ್ರ ಧನಂಜಯನಂ ಪುಂಡರೀಕಾಕ್ಷಂ ನೋಡಿ-

ಮಗನ ದುಖದಿಂದ ಅರ್ಜುನನು ಉರುಳಾಡಿ ಮಾಡಿದ ಪ್ರತಿಜ್ಞೆಯು ಭೀಮನು ದುಶ್ಶಾಸನನಲ್ಲಿಯೂ ನನ್ನಲ್ಲಿಯೂ ಬಹಳ ತೀವ್ರತೆಯಿಂದ ಮಾಡಿದ ಪ್ರತಿಜ್ಞೆಯಂತೆಯೇ ನಿಷಲವಾಗುತ್ತದೆ. ೧೨೫. ನಾನಾ ಶಸ್ತ್ರಾಸ್ತ್ರಗಳಲ್ಲಿ ಪ್ರವೀಣರಾದ ಧರ್ಮರಾಜ, ಭೀಮ, ಧೃಷ್ಟದ್ಯುಮ್ನರು ವಿಶೇಷ ಶಕ್ತಿಯುಳ್ಳವರು- ದಂಡೆತ್ತಿ ಬಂದು ಯುದ್ಧಮಾಡಿ ಹೆದರಿ ಓಡಿದವರಲ್ಲವೇ? (ಜಯದ್ರಥನೊಡನೆ ಕಾದಲಾರದೆ ಹೆದರಿ ಓಡಿ ಹೋದರಲ್ಲವೇ?) ವಿವಿಶಂತಿ, ಕೃಪ, ಕರ್ಣ, ಶಲ್ಯ, ದ್ರೋಣ, ಅವನ ಪ್ರಿಯಪುತ್ರನಾದ ಅಶ್ವತ್ಥಾಮ ಮೊದಲಾದವರು ಜಯದ್ರಥನನ್ನು ರಕ್ಷಿಸುವರು ಎನ್ನುವಾಗ ಸಮಾನವಾದ ರಥಿಕರೇ ಇಲ್ಲದ ಜಯದ್ರಥನು ಯುದ್ಧದಲ್ಲಿ ಬರುತ್ತಿದ್ದರೆ ಅವನನ್ನು ಬಂದು ಎದುರಿಸುವ ಶೂರರಾರಿದ್ದಾರೆ? ವ|| ಎಂದು ದುಶ್ಶಳೆಯನ್ನು ಜೊತೆಯಲ್ಲಿ ಕರೆದುಕೊಂಡು ದ್ರೋಣಾಚಾರ್ಯರಲ್ಲಿಗೆ ಬಂದು ಹೀಗೆಂದು ಹೇಳಿದನು- ೧೨೬. ಪುತ್ರಶೋಕೋದ್ರೇಕದಿಂದ ಅರ್ಜುನನು ಸೈಂಧವನನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿದನು. ಅದಕ್ಕಾಗಿ ಈ ತಂಗಿ ಬಂದಿದ್ದಾಳೆ. ನನ್ನ ತಂಗಿಯ ಕಡಗವನ್ನು ನೀವೆ ರಕ್ಷಿಸಬೇಕು. ಯುದ್ಧದಲ್ಲಿ ನೀವೆ ಪ್ರತಿಭಟಿಸಿದರೆ ಅವನನ್ನು ಮುಟ್ಟಲು ಸಮರ್ಥರಾಗುತ್ತಾರೆಯೇ ಎಂದನು. ಗೆಲ್ಲುವಾಸೆ ಹಾಗಿರಲಿ, ದುರ್ಯೋಧನಾ, ಯುದ್ಧದಲ್ಲಿ ಸೈಂಧವನೇನಾಗುತ್ತಾನೆಯೋ ಅದನ್ನೇ ನಾನೂ ಆಗುತ್ತೇನೆ ಹೋಗು. ೧೨೭. ನೀನು ದಯಮಾಡಿಸು ಎನ್ನಲು ರಾಜನು ಹೊರಟು ಹೋದನು. ಅದನ್ನು ಧರ್ಮರಾಯನು ಕೇಳಿ ಕೃಷ್ಣನಿಗೆ ತಿಳಿಸಿದನು. ಅದನ್ನು ಹೇಳಿದ ಒಂದು ನೀತಿ (ಉಪಾಯ)ಯಿಂದ ರಾತ್ರಿಯಲ್ಲಿ ಹೋಗಿ ದ್ರೋಣನನ್ನು ಕಂಡು ಬಹಳ ನಮ್ರತೆಯಿಂದ ಹೇಳಿದನು. ನೀವು ಹೀಗೆ ಅಂಗೀಕಾರ ಮಾಡಿ (ದುರ್ಯೋಧನನ ಪಕ್ಷವನ್ನು) ಕರುಣವಿಲ್ಲದೆ ಕಾದಿದರೆ ಲೋಕಪೂಜ್ಯರಾದವರೇ ನಮಗೆ ಇನ್ನು ಬಾಳುವಾಸೆ ಯಾವುದು? ೧೨೮. ನಿಮ್ಮ ಶಕ್ತಿಯನ್ನು ತಿಳಿದು ಮೊದಲೇ ನಿಮ್ಮನ್ನು ಪ್ರಾರ್ಥಿಸಿದೆನು. ಈಗ ಅದನ್ನೂ ಮರೆತು ನಿಮ್ಮ ಧರ್ಮದ ಮಕ್ಕಳಾದ ನಮ್ಮನ್ನು ಉದಾಸೀನ ಮಾಡಿ ನೀವು ನಡೆದುಕೊಳ್ಳುವುದು ಸರಿಯೇ?

೧೨೯. ಎನ್ನಲು ಆಚಾರ್ಯನಾದ ದ್ರೋಣನು ಕರುಣಾರಸವು ಮನಸ್ಸಿನಿಂದ ಹೊರಹೊಮ್ಮುತ್ತಿರಲು ‘ಕೃಷ್ಣನು ಹೇಳಿದ ಹಾಗೆ ಮಾಡು, ನಿನಗೆ ಜಯವಾಗುತ್ತದೆ’ ಎಂದನು. ವಿನಯದಿಂದ ಅಪ್ಪಣೆಯನ್ನು ಪಡೆದು ಹೊರಟು ಧರ್ಮರಾಜನು ತನ್ನ ಮನೆಯನ್ನು ಪ್ರವೇಶಿಸಿದನು. ವ|| ಆಗ ಆರೂಢಸರ್ವಜ್ಞನಾದ ಅರ್ಜುನನು ಪ್ರತಿಜ್ಞೆಯನ್ನು ಮಾಡಿದ ನಾಗಿ ಗಂಗಾನದಿಯ ಅಲೆಗಳಿಗೆ ಸಮಾನವಾದ

ಚಂ|| ಅರಿದು ಕೊಲಲ್ಕೆ ಸೈಂಧವನನಾಜಿಯೊಳೀತನ ಪೂಣ್ದ ಪೂಣ್ಕೆಯುಂ
ಪಿರಿದವನುಗ್ರ ಪಾಶುಪತ ಬಾಣದಿನಲ್ಲದೆ ಸಾಯನಂತದಂ|
ಹರನೊಸೆದಿತ್ತುಮೇನದಱ ಮುಷ್ಟಿಯನೀಯನೆ ಬೇಡವೇೞ್ಪುದಾ
ದರದದನೆಂದು ಚಕ್ರಿ ಶಿವನಲ್ಲಿಗೆ ಕೊಂಡೊಗೆದಂ ಕಿರೀಟಿಯಂ|| ೧೩೦

ವ|| ಅಂತು ಮನಪವನವೇಗದಿಂ ಕೈಳಾಸ ಶೈಳಮನೆಯ್ದಿ ಕದನತ್ರಿಣೇತ್ರನಂ ತ್ರಿಣೇತ್ರನ ಮುಂದಿೞಪುವುದುಮಭವಂ ತನ್ನ ಪಾದಪದ್ಮಂಗಳ್ಗೆಱಗಿದತಿರಥ ಮಥನನುಮಂ ಮಧುಮಥನನು ಮನಮೃತದೃಷ್ಟಿಯಿಂ ನೋಡಿ ಪಾಶುಪತದ ಮುಷ್ಟಿಯಂ ಬೇಡಲೆಂದು ಬಂದುದಂ ತನ್ನ ದಿವ್ಯಜ್ಞಾನದಿಂದಮಱದು-

ಕಂ|| ಅಪಗತ ಕಪಟದೆ ನಟನದ
ನುಪದೇಶಂಗೆಯ್ದು ಪರಸಿ ಪೋಗೆನೆ ಪೊಡೆಮ|
ಟ್ಟು ಪಸಾದಮೆಂದ ಹರಿಗನ
ನುಪೇಂದ್ರನಾ ದರ್ಭಶಯನ ತಳಕಿೞಪುವುದುಂ|| ೧೩೧

ವ|| ಅಂತುವಾರ ಮಹೇಶ್ವರನೀಶ್ವರ ವರಪ್ರಸಾದಮೆಲ್ಲಂ ತನಗೆ ನನಸಾಗೆಯುಂ ಕನಸಿನಂದಮಾಗಿ ತೋ ಮಂಗಳಪಾಠಕರವಂಗಳೊಳ್ ಭೋಂಕನೆೞ್ಚತ್ತನನ್ನೆಗಂ-

ಕಂ|| ತನ್ನ ಸುತನೞಲೊಳರ್ಜುನ
ನೆನ್ನುದಯಮನೆಯ್ದೆ ಪಾರ್ದು ಪಗೆವರ ಬೇರೊಳ್|
ಬೆನ್ನೀರಯದಿರನದ
ನಾನ್ನೋಡುವೆನೆಂಬ ತೆಱದಿನಿನನುದಯಿಸಿದಂ|| ೧೩೨

ವ|| ಅಗಳುಭಯ ಸೈನ್ಯಾಂಬುರಾಶಿಗಳಂಬುರಾಶಿಗಳ್ ನೆಲೆಯಿಂ ತಳರ್ವಂತೆ ತಳರೆ ಕಳಶಸಂಭವನಂದಿನನುವರದೊಳ್ ತನ್ನಂ ಪರಿಚ್ಛೇದಿಸಿ ಕನಕ ಕಳಶ ಸಂಭೃತ ಮಂಗಳ ಜಳಂಗಳಂ ಮಿಂದು ಧವಳ ವಸನ ದುಕೂಲಾಂಬರ ಮಂಗಳ ವಿಭೂಷಣನುಂ ನಿರ್ವತೀತ ಸಂಧ್ಯೋಪಾಸನನುಂ ಪರಿಸಮಾಪ್ತ ಜಪನುಮರ್ಚಿತ ಶಿತಿಕಂಠನುಮಾಹುತಿ ಹುತಾಗ್ನಿಹೋತ್ರನುಂ ಪೂಜಿತ ಧರಾಮರನುಂ ನೀರಾಜಿತ ರಥತುರಗನುಮಾಗಿ ರಜತ ರಥಮನೇಱ ಸಂಗ್ರಾಮ ಭೂಮಿಯನೆಯ್ದೆವಂದು ಸಾಮಂತ ಚೂಡಾಮಣಿಯನಿನಿಸು ಮಾರ್ಕೊಂಡು ನಿಲ್ವೊಡಂ ಸಿಂಧುರಾಜನಂ ಕಾವೊಡಮನೇಕ ವ್ಯೂಹರಚನೆಯೊಳಲ್ಲದೆ ಗೆಲಲ್ ಬಾರದೆಂದು ಚಕ್ರವ್ಯೂಹದೊಳಂಗರಾಜ ಶಲ್ಯ ವೃಷಸೇನ ಕೃಪ ಕೃತವರ್ಮಾಶ್ವತ್ಥಾಮರಂ ದುರ್ಯೋಧನಂ ಬೆರಸಿರಿಸಿ ಮತ್ತಿತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲೊಳ್ ಬಾಹ್ಲೀಕ

ರೇಷ್ಮೆಯ ಬಟ್ಟೆಯ ಹೊದಿಕೆಯುಳ್ಳವನಾಗಿ ಬಿಳಿಯ ಹಾಸಿಗೆಯ ಮೇಲೆ ಮರೆತು ಮಲಗಿದನು. ಹಾಗೆ ಮಲಗಿದ್ದ ಅಮೋಘಾಸ್ತ್ರ ಧನಂಜಯನಾದ ಅರ್ಜುನನನ್ನು ಕೃಷ್ಣನು ನೋಡಿ- ೧೩೦. ಸೈಂಧವನನ್ನು ಯುದ್ಧದಲ್ಲಿ ಕೊಲ್ಲುವುದು ಅಸಾಧ್ಯ. ಇವನು (ಅರ್ಜುನನು) ಮಾಡಿದ ಆಜ್ಞೆಯೂ ಗುರುತರವಾದುದು. ಜಯದ್ರಥನು ಉಗ್ರವಾದ ಪಾಶುಪತದಿಂದಲ್ಲದೆ ಸಾಯುವುದಿಲ್ಲ. ಹಾಗೆ ಅದನ್ನು ಈಶ್ವರನು ಪ್ರೀತಿಯಿಂದ ಕೊಟ್ಟಿದ್ದರೆ ತಾನೆ ಏನು ಪ್ರಯೋಜನ? ಅದರ ಪ್ರಯೋಗ ಮಂತ್ರವನ್ನು ಕೊಟ್ಟಿಲ್ಲವಲ್ಲ ; ಅದನ್ನು ಭಕ್ತಿಯಿಂದ ಬೇಡಬೇಕಾಗಿದೆ ಎಂದು ಕೃಷ್ಣನು ಅರ್ಜುನನನ್ನು ಶಿವನಲ್ಲಿಗೆ ಕರೆದುಕೊಂಡು ಹೋದನು. ವ|| ಮನೋವೇಗ ವಾಯುವೇಗದಿಂದ ಕೈಲಾಸ ಪರ್ವತವನ್ನು ಸೇರಿ ಅರ್ಜುನನನ್ನು ಈಶ್ವರನ ಮುಂದೆ ಇಳಿಸಿದನು. ಶಿವನು ತನ್ನ ಪಾದಕಮಲಗಳಿಗೆರಗಿದ ಅರ್ಜುನನನ್ನೂ ಕೃಷ್ಣನನ್ನೂ ಅಮೃತದೃಷ್ಟಿಯಿಂದ ನೋಡಿದನು. ಪಾಶುಪತದ ಮುಷ್ಟಿಯನ್ನು ಬೇಡುವುದಕ್ಕಾಗಿ ಬಂದಿರುವುದನ್ನು ತನ್ನ ದಿವ್ಯಜ್ಞಾನದಿಂದ ತಿಳಿದನು. ೧೩೧. ನಿಷ್ಕಪಟದಿಂದ ಆ ಮಂತ್ರೋಪದೇಶ ಮಾಡಿ ಹರಸಿದನು. ನಮಸ್ಕರಿಸಿ ಅನುಗ್ರಹೀತನಾದೆನೆಂದು ಹೇಳಿದ ಅರ್ಜುನನನ್ನು ಕೃಷ್ಣನು ದರ್ಭೆಯಿಂದ ಮಾಡಿದ (ಹಿಂದಿನ) ಹಾಸಿಗೆಯ ಮೇಲಕ್ಕೆ ತಂದು ಇಳಿಸಿದನು. ವ|| ಉದಾರಮಹೇಶ್ವರನಾದ ಅರ್ಜುನನು ಈಶ್ವರನ ವರಪ್ರಸಾದವೆಲ್ಲ ತನಗೆ ಪ್ರತ್ಯಕ್ಷನಾಗಿದ್ದರೂ ಕನಸಿನಂತೆ ತೋರುತ್ತಿರಲು ಸ್ತುತಿಪಾಠಕರ ಮಂಗಳಧ್ವನಿಯಿಂದ ಭೋಂಕನೆ ಎಚ್ಚರಗೊಂಡನು; ಅಷ್ಟರಲ್ಲಿ ೧೩೨. ತನ್ನ ಮಗನ ಸಾವಿನ ದುಖದಲ್ಲಿ ಅರ್ಜುನನು ನನ್ನುದಯವನ್ನೇ ನಿರೀಕ್ಷಿಸುತ್ತಿದ್ದು ಶತ್ರುಗಳ ಬೇರಿನಲ್ಲಿ ಬಿಸಿನೀರನ್ನು ಎರೆಯದೇ ಇರುವುದಿಲ್ಲ ; ಅದನ್ನು ನಾನು ನೋಡುತ್ತೇನೆ ಎಂಬ ರೀತಿಯಲ್ಲಿ ಸೂರ್ಯನು ಉದಯವಾದನು. ವ|| ಆಗ ಎರಡು ಸೇನಾಸಮುದ್ರಗಳೂ ನೆಲೆಯಿಂದ ಹೊರಡುವಂತೆ ಹೊರಟರು. ದ್ರೋಣಾಚಾರ್ಯನು ಆ ದಿನದ ಯುದ್ಧದಲ್ಲಿ ತನ್ನನ್ನು (ತನ್ನ ಸ್ಥಿತಿಯನ್ನು) ನಿಶ್ಚಯಿಸಿಕೊಂಡು ಚಿನ್ನದ ಕಲಶಗಳಲ್ಲಿ ತುಂಬಿದ ಮಂಗಳಜಲದಲ್ಲಿ ಸ್ನಾನಮಾಡಿ ಬಿಳಿಯ ರೇಷ್ಮೆಯ ಉಡುಪೇ ಮೊದಲಾದ ಮಂಗಳಾಭರಣಯುತನಾಗಿ ಸಂಧ್ಯಾವಂದನವನ್ನೂ ಜಪವನ್ನೂ ಮುಗಿಸಿ ಶಿವನನ್ನು ಆರಾಸಿ ಅಗ್ನಿಗಾಹುತಿಯನ್ನಿತ್ತು ಬ್ರಾಹ್ಮಣರನ್ನು ವಂದಿಸಿ ರಥ ಕುದುರೆಗಳಿಗೆ ಆರತಿ ಮಾಡಿ ಬೆಳ್ಳಿಯ ತೇರನ್ನು ಹತ್ತಿ ಯುದ್ಧರಂಗದ ಸಮೀಪಕ್ಕೆ ಬಂದನು. ಸಾಮಂತ ಚೂಡಾಮಣಿಯಾದ ಅರ್ಜುನನನ್ನು ಸ್ವಲ್ಪ

ಸೋಮದತ್ತವಿಂದಾನುವಿಂದರೊಡನೆ ಸಂಸಪ್ತಕರನಿರಿಸಿ ಶಕಟವ್ಯೂಹದ ಪೆಱಗೆ ನಾಲ್ಕು ಯೋಜನದೊಳರ್ಧಚಂದ್ರವ್ಯೂಹದೊಳಕ ಬಲರಪ್ಪ ಸೌಬಲ ದುಶ್ಶಾಸನಾದಿ ಪ್ರಧಾನ ವೀರಭಟ ಕೋಟಿಯ ನಡುವೆ ಸಿಂಧುರಾಜನನಿರಿಸಿ ಮೊದಲ ಚಕ್ರವ್ಯೂಹದ ಬಾಗಿಲೊಳ್ ಶರಾಸನಾಚಾರ್ಯಂ ನಿಂದನಿತ್ತ ಪಾಂಡವಬಲಮೆಲ್ಲಮುಂ ವಿಕ್ರಮಾರ್ಜುನನುಂ ವಜ್ರಪಂಜರದಂತಭೇದ್ಯ.ಮಪ್ಪ ವಜ್ರವ್ಯೂಹಮನೊಡ್ಡಿ ಧರ್ಮರಾಜನೊಡನೆ ಭೀಮ ನಕುಳ ಸಹದೇವ ಸಾತ್ಯಕಿ ಧೃಷ್ಟದ್ಯುಮ್ನ ಘಟೋತ್ಕಚ ಪ್ರಮುಖ ನಾಯಕರಂ ಪೇೞ್ದು ದ್ರುಪದ ವಿರಾಟ ಶಿಖಂಡಿ ಯುಧಾಮನ್ಯೂತ್ತಮೌಜಕೈಕಯ ಪ್ರಧಾನ ನಾಯಕರಂ ತನ್ನೊಡನೆ ಕೂಡಿಕೊಂಡು ನಿಜಾಗ್ರಜನಂ ಬೀೞ್ಕೊಂಡು ನಿಜರಥಮಂ ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱು ಸೂೞ್ ಬಲವಂದು ಪೊಡಮಟ್ಟು ರಥುಮನೇಱ ವಜ್ರಕವಚಮಂ ತೊಟ್ಟು ತವದೊಣೆಗಳನಮರೆ ಬಿಗಿದು ಗಾಂಡೀವಮನೇಱಸಿ ನೀವಿ ಜೇವೊಡೆದಾಗಳ್-

ಪಥ್ವಿ || ಭವಂ ಭವನ ಗೋತ್ರದಿಂದಜನಜಾಂಡದಿಂ ಭಾನು ಭಾ
ನು ವೀಯಿನಿಳಾತಳಂ ತಳದಿನೆಯ್ದೆ ಕಿೞ್ತೆೞ್ದು ತೂ|
ಳ್ವವಾರ್ಯ ಭುಜವೀರ್ಯಮಂ ನೆಯೆ ತೋರ್ಪಿನಂ ಕುಂಭ ಸಂ
ಭವಂ ಮರಲೆ ತಾಗಿದಂ ರಿಪುಕುರಂಗ ಕಂಠೀರವಂ|| ೧೩೩

ವ|| ಅಂತು ತಾಗಿ ಚಕ್ರವ್ಯೂಹದ ಬಾಗಿಲೊಳ್ ತನ್ನಂ ಪುಗಲೀಯದಡ್ಡಮಾಗಿ ನಿಂದ ಕಾರ್ಮುಕಾಚಾರ್ಯನನು ಸೆಗೆಯ್ಯದೆ ವಿನಯಾಸ್ತ್ರಮನೆಚ್ಚು ವಿನಯಮನೆ ಮುಂದಿಟ್ಟು ಬಲವಂದು ಪೊಡೆಮಟ್ಟು ಪೋಗೆವೋಗೆ-

ಮ|| ಕಮನೀಯಂ ಬಲವಂದು ಪೋಪನನೆಲೇ ಪೋಪೋಗದಿರ್ ಪೋಗದಿರ್
ಸಮರಕ್ಕೆನ್ನೊಡನಂಜಿ ಪೋದೆಯೆನಲಿಂತೆಂದಂ ನರಂ ದ್ರೋಣರಂ|
ನಿಮಗಾನಂಜುವುದೆನ್ನ ಬಾಲತನದಿಂದಂದಾದುದಿಂದಾದುದೇ
ನಿಮಗಾನಂಜದೊಡಂಜಿಸಲ್ ನೆವೆನೇ ತ್ರೈಲೋಕ್ಯಮಂ ಯುದ್ಧದೊಳ್|| ೧೩೪

ಎದುರಿಸಿ ನಿಲ್ಲಬೇಕಾದರೂ ಸೈಂಧವನನ್ನು ರಕ್ಷಿಸಬೇಕಾದರೂ ಅನೇಕ ವ್ಯೂಹರಚನೆಯಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲವೆಂದು ಚಕ್ರವ್ಯೂಹವನ್ನೇ ಮುಂಭಾಗದಲ್ಲಿ ಒಡ್ಡಿ ಸಾಮಂತರಾಜರ ಸಮೂಹವನ್ನು ಅಲ್ಲಿ ಇರಹೇಳಿದನು. ಅಲ್ಲಿಗೆ ನಾಲ್ಕು ಯೋಜನದ ದೂರದಲ್ಲಿದ್ದ ಪದ್ಮವ್ಯೂಹದಲ್ಲಿ ಕರ್ಣ, ಶಲ್ಯ, ವೃಷಸೇನ, ಕೃಪ, ಕೃತವರ್ಮಾಶ್ವತ್ಥಾಮರನ್ನು ದುರ್ಯೋಧನನೊಡನೆ ಇರಿಸಿದನು. ಮತ್ತೆ ಈ ಕಡೆ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲಿನಲ್ಲಿ ಬಾಹ್ಲಿಕ ಸೋಮದತ್ತ ವಿಂದಾನುವಿಂದರೊಡನೆ ಸಂಸಪ್ತಕರನಿಟ್ಟನು. ಶಕಟವ್ಯೂಹದ ಹಿಂದೆ ನಾಲ್ಕು ಯೋಜನದಲ್ಲಿ ಅರ್ಧಚಂದ್ರವ್ಯೂಹದಲ್ಲಿ ಅಕಬಲರಾದ ಶಕುನಿ ದುಶ್ಶಾಸನನೇ ಮೊದಲಾದ ಪ್ರಧಾನ ನಾಯಕರ ಸಮೂಹದ ಮಧ್ಯದಲ್ಲಿ ಸಿಂಧುರಾಜನನ್ನು ಇರಿಸಿದನು. ಮೊದಲನೆಯ ಚಕ್ರವ್ಯೂಹದ ಬಾಗಿಲಿನಲ್ಲಿ ಚಾಪಾಚಾರ್ಯನಾದ ದ್ರೋಣನೇ ನಿಂತುಕೊಂಡನು. ಈ ಕಡೆ ಅರ್ಜುನನೂ ಪಾಂಡವಸೈನ್ಯವನ್ನೆಲ್ಲ ವಜ್ರಪಂಜರದಂತೆ ಭೇದಿಸುವುದಕ್ಕಾಗದಿರುವ ವಜ್ರವ್ಯೂಹವನ್ನೊಡ್ಡಿ ಧರ್ಮರಾಜನೊಡನೆ ಭೀಮ ನಕುಳ ಸಹದೇವ ಸಾತ್ಯಕಿ ಧೃಷ್ಟದ್ಯುಮ್ನ ಘಟೋತ್ಕಚರೇ ಮುಖ್ಯರಾದ ನಾಯಕರನ್ನು ಇರಹೇಳಿ ದ್ರುಪದ ವಿರಾಟ ಶಿಖಂಡಿ ಯುಧಾಮನ್ಯೂತ್ತಮೌಜಸ್ ಕೈಕಯರೇ ಮೊದಲಾದ ನಾಯಕರನ್ನು ತನ್ನೊಡನೆ ಸೇರಿಸಿಕೊಂಡು ತಮ್ಮಣ್ಣನ ಅಪ್ಪಣೆಯನ್ನು ಪಡೆದು ಹೋದನು. ಕೃಷ್ಣನನ್ನು ಮೊದಲು ತನ್ನ ತೇರನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣ ನಮಸ್ಕಾರಮಾಡಿ ರಥವನ್ನು ಹತ್ತಿ ವಜ್ರಕವಚವನ್ನು ತೊಟ್ಟು ಬರಿದಾಗದ ಬತ್ತಳಿಕೆಯನ್ನು (ಅಕ್ಷಯತೂಣೀರ) ಬಿಗಿಯಾಗಿ ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯೇರಿಸಿ ನೀವಿ ಶಬ್ದ ಮಾಡಿದನು. ೧೩೩. ಆ ಶಬ್ದದಿಂದ ಈಶ್ವರನು ಕೈಲಾಸಪರ್ವತದಿಂದಲೂ ಬ್ರಹ್ಮನು ಬ್ರಹ್ಮಾಂಡದಿಂದಲೂ ಸೂರ್ಯನು ಆಕಾಶಮಾರ್ಗದಿಂದಲೂ ಭೂಮಂಡಲವು ತನ್ನ ಮೂಲದಿಂದಲೂ ಪೂರ್ಣವಾಗಿ ಕಿತ್ತು ಎದ್ದು ಬರುವ ಹಾಗಾಯಿತು. ತಡೆಯಲಸಾಧ್ಯವಾದ ತನ್ನ ಬಾಹುಬಲವನ್ನು (ಅರ್ಜುನನು) ಪೂರ್ಣವಾಗಿ ಪ್ರದರ್ಶಿಸಿ ದ್ರೋಣಾಚಾರ್ಯನು ಸಂತೋಷಪಡುವಂತೆ ರಿಪುಕುರಂಗ ಕಂಠೀರವನಾದ ಅರ್ಜುನನು (ಪ್ರತಿಸೈನ್ಯವನ್ನು) ತಾಗಿದನು. ವ|| ಚಕ್ರವ್ಯೂಹದ ಬಾಗಿಲಿನಲ್ಲಿ ತಾನು ಪ್ರವೇಶಿಸುವುದಕ್ಕೆ ನಿಂತಿದ್ದ ಚಾಪಾಚಾರ್ಯನಾದ ದ್ರೋಣಾಚಾರ್ಯನನ್ನು ಚೆನ್ನಾಗಿ ಸೆರೆಹಿಡಿಯದೆ ವಿನಯಾಸ್ತ್ರವನ್ನೇ ಪ್ರಯೋಗಿಸಿ ನಮ್ರತೆಯನ್ನೆ ಮುಂದುಮಾಡಿಕೊಂಡು ಪ್ರದಕ್ಷಿಣ ನಮಸ್ಕರಮಾಡಿ ಮುಂದೆ ಹೋದನು. ೧೩೪. ಮನಗೊಳ್ಳುವಂತೆ (ಆಕರ್ಷಕವಾದ ರೀತಿಯಲ್ಲಿ) ಪ್ರದಕ್ಷಿಣೆ ಮಾಡಿ ಹೋಗುತ್ತಿರುವ ಅರ್ಜುನನನ್ನು ದ್ರೋಣಾಚಾರ್ಯನು ತಡೆದು ‘ಎಲವೋ ಹೋಗಬೇಡ, ಹೋಗಬೇಡ, ನನ್ನೊಡನೆ ಯುದ್ಧ ಮಾಡುವುದಕ್ಕೆ ಹೆದರಿ ಹೋಗುತ್ತಿದ್ದೀಯೆ’ ಎಂದರು. ಅರ್ಜುನನು ಆಚಾರ್ಯರನ್ನು ಕುರಿತು ಹೀಗೆಂದನು- ‘ನಿಮಗೆ ಹೆದರುವುದು ಬಾಲ್ಯದಿಂದಾದುದು, ಇಂದಾಯಿತೇ? ನಿಮಗೆ ನಾನು ಹೆದರದಿದ್ದರೆ ಯುದ್ಧದಲ್ಲಿ ಮೂರುಲೋಕವನ್ನು ಹೆದರಿಸಲು ಸಮರ್ಥ

ವ|| ಅಂತು ವಿನಯಮನೆ ನುಡಿದ ವಿಕ್ರಮಾರ್ಜುನನಂ ಗುರುವನೇಕಾಶೀರ್ವಚನಂಗಳಿಂ ಪರಸುವುದುಂ ಪದುಮನಾಭನ ಚೋದಿಸುವ ರಥವೇಗದಿಂ ಪದ್ಮವ್ಯೂಹಮನೆಯ್ದೆವಂದು ಸುಯೋಧನನ ಸಾಧನದೊಳ್ ತಾಗಿದಾಗಳ್-

ಚಂ|| ಪೊಸ ಮಸೆಯಂಬು ಕಾರಮೞೆವೋಲ್ ಕಯುತ್ತಿರೆ ನೇರ್ದು ಸೀಳ್ದು ಖಂ
ಡಿಸಿ ಕಡಿದೊಟ್ಟಿ ಸುಟ್ಟನಿತುಮಂ ನಿಜ ಮಾರ್ಗಣ ಕೋಟಿಯಿಂದಗು|
ರ್ವಿಸೆ ತೆಗೆದೆಚ್ಚು ತನ್ನ ಮೊನೆಯಂಬುಗಳಿಂ ಚತುರಂಗಮೆಯ್ದೆ ಕೀ
ಲಿಸೆ ಪಡೆ ಚಿತ್ರದೊಂದೆ ಪಡೆಯಂತೆವೊಲಾಯ್ತಕಳಂಕರಾಮನಿಂ|| ೧೩೫

ಅಡಿ ತೊಡೆ ಪೊರ್ಕುೞುಂ ತೆಗಲೆ ಕೈ ಕಣಕಾಲ್ ಕೊರಲೆಂಬಿವುಂ ಬೆರಲ್
ನಡುವುರ ಬೆನ್ ಬಸಿ ತೊಳಕು ಕರ್ಚರೆ ಮುಯ್ವು ಮುಸುಂಬು ಮೂಗು ಪೆ
ರ್ದೊಡೆ ಕಟಿ ಮುಂಮಡಂ ಪರಡು ಸಂದಿ ನೊಸಲ್ ಪಣೆ ಕಣ್ ಕದಂಪಿವೆಂ
ಬೆಡೆಯನೆ ನಟ್ಟುವುರ್ಚಿದುವು ನೇರ್ದುವು ಸೀಳ್ದುವು ಪಾರ್ಥನಂಬುಗಳ್|| ೧೩೬

ವ|| ಅಂತು ಮಾಱುಂತ ಮಾರ್ಪಡೆಯೆಲ್ಲವಂ ಜವನೊಕ್ಕಲಿಕ್ಕಿ ತನ್ನೊಳ್ ಪೋಗದೆ ಪೆಣೆದ ಬಾಹ್ಲೀಕ ಸೋಮದತ್ತ ಭೂರಿಶ್ರವರನಾನೆ ಮೆಟ್ಟಿದ ಕುಳುಂಪೆಯ ನೀರಂತೆ ದೆಸೆದೆಸೆಗೆ ಸೂಸುವನ್ನೆಗಮೆೞ್ಬಟ್ಟಿ ಕಾಂಭೋಜ ಸುದಕ್ಷಿಣ ಜಯತ್ಸೇನರೆಂಬರೆಯ್ತರೆ ಮೂವರಕ್ಷೋಹಿಣೀ ಪತಿಗಳ್ವೆರಸು ನಾಲ್ಸಾಸಿರ್ವರ್ ಮಕುಟವರ್ಧನರಂ ಕೊಂದು ಶಲ್ಯನುರಮಂ ಬಿರಿಯೆಚ್ಚು ಕೃಪರಂ ವಿರಥರ್ಮಾಡಿ ನಡುವಗಲಿೞವಿನಂ ಕಾದಿ ಬೞಲ್ದು ಕುದುರೆಗಳಂ ನೀರೊಳಿಕ್ಕಲೆಂದು ದೇವಖಾತಮೆಂಬ ಮಡುವಿಂಗೆ ಬರ್ಪುದುಮಿತ್ತ ದುರ್ಯೋಧನಂ ದ್ರೋಣರಲ್ಲಿಗೆ ವಂದು-

ಚಂ|| ಅೞದುದು ಚಾತುರಂಗ ಬಲಮಳ್ಕುಱದಾಂತ ಮಹಾರಥರ್ಕಳುಂ
ಕೞಕುೞಮಾದುದೊಡ್ಡಣಮಣಂ ತಲೆದೋಱಲೆ ಗಂಡರಿಲ್ಲ ತೊ|
ತ್ತೞದುೞದಪ್ಪನಿನ್ನಿನಿಸು ಬೇಗದೆ ಸೈಂಧವನಂ ನೆಗೞ್ತೆಯಂ
ಗೞಯಿಸಿಕೊಳ್ವೊಡಿನ್ನಿನಿಸು ನಿಂದಿಱಯಿಂ ತಱಸಂದು ಪಾರ್ಥನೊಳ್|| ೧೩೭

ವ|| ಎಂಬುದುಂ ದ್ರೋಣಾಚಾರ‍್ಯಂ ಮುಗುಳ್ನಗೆ ನಕ್ಕು ವಿಕ್ರಮಾರ್ಜುನನನಿಳಿಸಿ ನುಡಿವ ನಿನ್ನೆಣಗೋಣಂಗಳುಮೆಕ್ಕಸಕ್ಕತನಂಗಳು ಮೆತ್ತವೋದುವು-

ನಾಗುತ್ತೇನೆಯೇ?’ ವ|| ಎಂದು ನಮ್ರತೆಯಿಂದಲೇ ಮಾತನಾಡಿದ ವಿಕ್ರಮಾರ್ಜುನನನ್ನು ದ್ರೋಣಾಚಾರ್ಯರು ಅನೇಕ ಆಶೀರ್ವಚನಗಳಿಂದ ಹರಸಿದರು. ಕೃಷ್ಣನು ನಡೆಸಿದ ರಥದ ವೇಗದಿಂದ ಪದ್ಮವ್ಯೂಹದ ಸಮೀಪಕ್ಕೆ ಬಂದು ದುರ್ಯೋಧನನ ಸೈನ್ಯವನ್ನು ತಾಗಿದನು. ೧೩೫. ಹೊಸದಾಗಿ ಮಸೆದಿರುವ ಬಾಣಗಳು ಕಾರ್ಗಾಲದ ಮಳೆಯ ಹಾಗೆ ಸುರಿಯುತ್ತಿರಲು ಅರ್ಜುನನು ಅಷ್ಟನ್ನೂ ತನ್ನ ಬಾಣಗಳ ತುದಿಯಿಂದ ಕತ್ತರಿಸಿ, ಸೀಳಿ, ಮುರಿದು, ತುಂಡಿಸಿ, ರಾಶಿಮಾಡಿ ಸುಟ್ಟು ತನ್ನ ಬಾಣಗಳ ಸಮೂಹದಿಂದ ಚತುರಂಗ ಸೈನ್ಯವೂ ಹೆದರುವ ಹಾಗೆ ಸೆಳೆದು ಹೊಡೆದು ಚೆನ್ನಾಗಿ ನಾಟಿಸಲು ಸೈನ್ಯವು ಚಿತ್ರದಲ್ಲಿ ಬರೆದ ಸೈನ್ಯದಂತೆ ಆಯಿತು. ೧೩೬. ಪಾದ, ತೊಡೆ, ಹೊಕ್ಕಳು, ಹೆಗ್ಗತ್ತು, ಕೈ, ಕಾಲಿನ ಕೆಳಭಾಗ, ಕೊರಳು ಎಂಬುವುಗಳನ್ನೂ ಬೆರಳು, ನಡು, ಎದೆ, ಬೆನ್ನು, ಹೊಟ್ಟೆ, ತೊಳಕುಸ(?) ಕರ್ಚರೆ, ಹೆಗಲು, ಮೂತಿ, ಹೆದ್ದೊಡೆ, ಸೊಂಟ, ಕಾಲ ಹರಡಿನ ಹಿಂಭಾಗ ಮತ್ತು ಮುಂಭಾಗ, ಕಾಲಿನ ಹರಡು, ಕೀಲು, ಹಣೆ, ಕಣ್ಣು, ಕೆನ್ನೆ -ಈ ಎಲ್ಲಾ ಸ್ಥಳಗಳನ್ನೂ ಅರ್ಜುನನ ಬಾಣಗಳು ನಾಟಿದುವು, ಸೀಳಿದವು ಮತ್ತು ಹೋಳು ಮಾಡಿದುವು. ವ|| ಎದುರಿಸಿದ ಪ್ರತಿ ಸೈನ್ಯವೆಲ್ಲವನ್ನೂ ಯಮನ ಒಕ್ಕಲವರನ್ನಾಗಿ ಮಾಡಿದನು. ಹೋಗದೆ ತನ್ನಲ್ಲಿಯೆ ಹೆಣೆದುಕೊಂಡ ಬಾಹ್ಲೀಕ ಸೋಮದತ್ತ ಭೂರಿಶ್ರವರನ್ನು ಆನೆಯು ತುಳಿದ ಕುಂಟೆಯ ನೀರಿನಂತೆ ದಿಕ್ಕು ದಿಕ್ಕಿಗೂ ಚೆಲ್ಲುವವರೆಗೆ ಎಬ್ಬಿಸಿದನು. ಕಾಂಭೋಜ, ಸುದಕ್ಷಿಣ, ಜಯತ್ಸೇನರೆಂಬುವರು ಮೂರು ಅಕ್ಷೋಹಿಣೀಪತಿಗಳನ್ನೂ ಕೂಡಿಕೊಂಡು ಬರಲು ನಾಲ್ಕು ಸಾವಿರ ರಾಜರನ್ನು ಕೊಂದು ಶಲ್ಯನ ಎದೆಯನ್ನು ಬಿರಿಯುವ ಹಾಗೆ ಹೊಡೆದು ಕೃಪರನ್ನು ರಥವಿಲ್ಲದವರಂತೆ ಮಾಡಿ ನಡುಹಗಲು ಇಳಿಯುವವರೆಗೂ ಕಾದಿ ಬಳಲಿ ಕುದುರೆಯನ್ನು ನೀರಿಗೆ ಬಿಡಬೇಕೆಂದು ದೇವಖಾತವೆಂಬ ಮಡುವಿಗೆ ಬಂದನು. ದುರ್ಯೋಧನನು ದ್ರೋಣನಲ್ಲಿಗೆ ಬಂದನು.

೧೩೭. ಚತುರಂಗಬಲವೂ ನಾಶವಾಯಿತು. ಹೆದರದೆ ಪ್ರತಿಭಟಿಸಿದ ಮಹಾರಥರುಗಳೂ ಚೆಲ್ಲಾಪಿಲ್ಲಿಯಾದರು. ಸೈನ್ಯವು ಸ್ವಲ್ಪವಾದರೂ ಕಾಣಿಸಿಕೊಳ್ಳಲು ಶೂರರಾದವರಾರೂ ಇಲ್ಲ. ಸ್ವಲ್ಪ ಕಾಲದಲ್ಲಿಯೇ ಸೈಂಧವನನ್ನು ತುಳಿದುಹಾಕುತ್ತಾನೆ. ಪ್ರಸಿದ್ಧಿಯನ್ನು ಪಡೆಯಬೇಕಾದರೆ ಸ್ವಲ್ಪ ಸ್ಥಿರವಾಗಿ ನಿಂತುಕೊಂಡು ಅರ್ಜುನನೊಡನೆ ಯುದ್ಧಮಾಡಿ ಎಂದನು. ವ|| ದ್ರೋಣಾಚಾರ್ಯನು ಮುಗುಳ್ನಗೆ ನಕ್ಕು ವಿಕ್ರಮಾರ್ಜುನನನ್ನು ತಿರಸ್ಕರಿಸಿ ಮಾತನಾಡುವ ವಕ್ರವಾದ ಅಹಂಕಾರದ ಮಾತುಗಳೂ ನಿಂದೆ ಮತ್ತು ಪರಿಹಾಸದ ಮಾತುಗಳೂ

ಚಂ|| ನಿನಗರಸಾಳ್ತನಂ ನುಡಿವ ಬೀರರ ಬೀರದಳುರ್ಕೆ ವಿಕ್ರಮಾ
ರ್ಜುನನೊಳದೇಕೆ ಸಲ್ಲದೆನಗಾತನಸಾಧ್ಯನವಧ್ಯನಾನುಮೀ|
ಮೊನೆಯೊಳೆ ನಿಂದು ಕಾದಿದಪೆನನ್ನೆಗಮೆನ್ನ ವರೂಥ ಸೂತ ಕೇ
ತನ ಕವಚಂಗಳಿಂ ನೆದು ತಳ್ತಿಱ ನೀಂ ಜಗದೇಕಮಲ್ಲನೊಳ್|| ೧೩೮

ವ|| ಎಂಬುದುಂ ಸುಯೋಧನನೇನಾದೊಡೇನಾದುದೆನ್ನ ಪಗೆಯ ನಾನೇ ಕೊಲ್ವೆನೆಂದ ಭೇದ್ಯ ಕವಚಮಂ ತೊಟ್ಟು ದಿವ್ಯಶರಾಸನ ಶರಂಗಳಂ ಕೊಂಡು ಕಳಶ ಕೇತನ ವರೂಥನಾಗಿ ಪೋಗಿ-

ಚಂ|| ತಡೆಯದೆ ರಾಜರಾಜನಿದಿರಂ ಬರೆ ಭೋರ್ಗರೆದೆಚ್ಚೊಡಂಬುಗಳ್
ನಡದೆ ಸಿಡಿಲ್ವುದುಂ ಕರತಳದ್ವಯಮಂ ಬಿರಿಯೆಚ್ಚು ಕೆಯ್ವುವಂ|
ಪಿಡಿವದಟೆಲ್ಲಮಂ ಕಿಡಿಸಿ ತಾಂ ಕೊಲಲೊಲ್ಲನೆ ಭೀಮನಾತನಂ
ಮಡಿಪುವೆನೆಂದ ಪೂಣ್ಕೆ ಪುಸಿಯಾದಪುದೆಂದಮರೇಂದ್ರನಂದನಂ|| ೧೩೯

ವ|| ಅನ್ನೆಗಮಿತ್ತ ಧರ್ಮಪುತ್ರನಮೋಘಾಸ್ತ್ರ ಧನಂಜಯನಂ ಕೆಯ್ಕೊಳಲಟ್ಟಿದೊಡೆ ಕೌರವಬಳ ಜಳನಿಯ ನಡುವನುತ್ತರಿಸಿ ಬರ್ಪ ಸಾತ್ಯಕಿಯಂ ಭೂರಿಶ್ರವನೆಡೆಗೊಂಡಾಂತು-

ಉ|| ಪೋಗದಿರೆಂದು ಮೂದಲಿಸೆ ಸಾತ್ಯಕಿ ತೀವ್ರ ಶರಾಳಿಯಿಂದಗು
ರ್ವಾಗೆ ವರೂಥಮಂ ಕಡಿದೊಡುರ್ಚಿದ ಬಾಳ್ವೆರಸಾತನೆಯ್ದೆವಂ|
ದಾಗಳಿದಿರ್ಚೆ ತಾನುಮಸಿಯಂ ಸೆರಗಿಲ್ಲದೆ ಕಿೞ್ತು ಪಾಯ್ದು ಭೂ
ಭಾಗ ನಭೋವಿಭಾಗವರಮಳ್ಕು ತಳ್ತಿಱದರ್ ವಿರೋಗಳ್|| ೧೪೦

ವ|| ಅಂತಿರ್ವರುಮೋರೊರ್ವರೊಳ್ ಬೀರಮುಮಂ ಬಿಂಕಮುಮಂ ಮೆದು ದಾಸವಣದಂಡೆಯಂ ತೋರದಿಂಡೆಯಾಡಿದಂತೆ ದೆಸೆ ದೆಸೆಗೆ ಕೆದಱದ ಕಂಡದಿಂಡೆಗಳುಂ ನಾರಂಗ ಸಕಳವಟ್ಟೆಯ ಪೞಯಿಗೆಗಳಂತೆ ನಭಕ್ಕೆ ಮಿಳಿರ್ದು ಮಿಳ್ಳಿಸಿ ಪಾಱುವ ನೆತ್ತರ ಸುಟ್ಟುರೆಗಳುಮತಿ ಭಯಂಕರಾಕಾರಮಾಗೆ ಕಾದಿ ಬಸವೞದ ಸಾತ್ಯಕಿಯಂ ಭೂರಿಶ್ರವನಶ್ರಮದೊಳ್ ನೆಲಕಿಕ್ಕಿ ಗಂಟಲಂ ಮೆಚ್ಚಿ ತಲೆಯನರಿವಾಗಳ್ ಸಾತ್ಯಕಿ ಭೂಮಿಯುದ್ಧ ಪ್ರವೀಣನಪ್ಪುದಱಂದಾತನ ಬಾಳ ಬಾಯೊಳ್ ಚಕ್ರಾಕೃತಿಯೊಳ್ ತಲೆಯಂ ತಿರುಪುತ್ತುಮಿರ್ದಾ ಗಳದಂ ಮುರಾಂತಕಂ ಕಂಡು ವಿದ್ವಿಷ್ಟ ವಿದ್ರಾವಣಂಗೆ ತೋಱದೊಡೆ-

ಈಗೆಲ್ಲಿಗೆ ಹೋದುವು- ೧೩೮. ನಿನಗೆ ಚಕ್ರವರ್ತಿತ್ವವನ್ನು ಘೋಷಿಸುವ ವೀರರ ಶೌರ್ಯದ ಆಕ್ಯವು ವಿಕ್ರಮಾರ್ಜುನನಲ್ಲಿ ಅದೇಕೆ ಸಲ್ಲುವುದಿಲ್ಲ. ನನಗೆ ಅವನು ಗೆಲ್ಲುವುದಕ್ಕೆ ಅಸಾಧ್ಯನಾದವನು. ಕೊಲ್ಲಲಾಗದವನು. ನಾನೂ ಈ ಯುದ್ಧಮುಖದಲ್ಲಿಯೇ ನಿಂತು ಕಾದುತ್ತೇನೆ. ಅಲ್ಲಿಯವರೆಗೆ ನೀನೂ ನನ್ನ ತೇರು, ಸಾರಥಿ, ಧ್ವಜ ಕವಚಗಳಿಂದ ಕೂಡಿಕೊಂಡು ಜಗದೇಕಮಲ್ಲನಲ್ಲಿ ಸಂಸಿ ಯುದ್ಧಮಾಡು. ವ|| ಎನ್ನಲು ದುರ್ಯೋಧನನು ಏನಾದರೇನಾಯಿತು. ನನ್ನ ಶತ್ರುವನ್ನು ನಾನೇ ಕೊಲ್ಲುತ್ತೇನೆ ಎಂದು ಒಡೆಯಲಾಗದ ಕವಚವನ್ನು ತೊಟ್ಟು ಶ್ರೇಷ್ಠವಾದ ಬಿಲ್ಲುಬಾಣಗಳನ್ನು ತೆಗೆದುಕೊಂಡು ಕಳಶಧ್ವಜರಥದಿಂದ ಕೂಡಿಕೊಂಡು ಹೋದನು. ೧೩೯. ದುರ್ಯೋಧನನು ತಡೆಯದೆ ಎದುರಾಗಿ ಬಂದು ಭೋರ್ಗರೆದು ಬಾಣಪ್ರಯೋಗ ಮಾಡಲು ಬಾಣಗಳು ನಾಟಿಕೊಳ್ಳದೆ ಸಿಡಿದುವು. ಅರ್ಜುನನು ಅವನ ಎರಡು ಕೈಗಳನ್ನೂ ಬಿರಿದುಹೋಗುವ ಹಾಗೆ ಹೊಡೆದು ಆಯುಧವನ್ನು ಹಿಡಿಯುವ ಶಕ್ತಿಯನ್ನೂ ಕೆಡಿಸಿದನು. ಭೀಮನು ಆತನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯು ಹುಸಿಯಾಗುವುದೆಂದು ಅವನನ್ನು ಕೊಲ್ಲಲಾರದೆ ಹೋದನು. ವ|| ಅಷ್ಟರಲ್ಲಿ ಈ ಕಡೆ ಧರ್ಮರಾಯನು ಅರ್ಜುನನ ರಕ್ಷಣೆಗಾಗಿ ಸಾತ್ಯಕಿಯನ್ನು ಕಳುಹಿಸಲು ಕೌರವಸೇನಾಸಮುದ್ರದ ಮಧ್ಯಭಾಗವನ್ನು ದಾಟಿ ಬರುತ್ತಿದ್ದ ಸಾತ್ಯಕಿಯನ್ನು ಭೂರಿಶ್ರವನು ಅಡ್ಡಗಟ್ಟಿ ಎದುರಿಸಿದನು. ೧೪೦. ಹೋಗಬೇಡ ಎಂದು ಮೂದಲಿಸಲು ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ ಅವನ ತೇರನ್ನು ಕತ್ತರಿಸಲು ಹಿರಿದ ಕತ್ತಿಯೊಡನೆ ಆತನು ಸಮೀಪಕ್ಕೆ ಬಂದು ಎದುರಿಸಿದನು. ಆಗ ತಾನೂ ಭಯವಿಲ್ಲದೆ ಕತ್ತಿಯನ್ನು ಹೊರಸೆಳೆದು ನುಗ್ಗಿ ಭೂಮ್ಯಾಕಾಶಗಳವರೆಗೆ ಭಯಂಕರವಾಗಿ ವಿರೋಗಳು ಸಂಸಿ ಯುದ್ಧಮಾಡಿದನು. ವ|| ಹಾಗೆ ಇಬ್ಬರೂ ಒಬ್ಬೊಬ್ಬರಲ್ಲಿ ವೀರವನ್ನೂ ಗರ್ವವನ್ನೂ ಪ್ರಕಾಶಿಸಲು ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ ದಿಕ್ಕು ದಿಕ್ಕಿಗೆ ಚೆದುರಿ ಮಾಂಸದ ಉಂಡೆಗಳೂ ಕಿತ್ತಳೆಯ ಮತ್ತು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಂತೆ ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟುರುಗಾಳಿಗಳೂ ಅತಿ ಭಯಂಕರಾಕಾರದುವು. ಹಾಗೆ ಕಾದಿ ಶಕ್ತಿಗುಂದಿದ ಸಾತ್ಯಕಿಯನ್ನು ಭೂರಿಶ್ರವನು ಶ್ರಮವಿಲ್ಲದೆಯೇ ನೆಲಕ್ಕೆ ಬಡಿದು ಗಂಟಲನ್ನು ಮೆಟ್ಟಿ ತಲೆಯನ್ನು ಕತ್ತರಿಸುವಾಗ ಸಾತ್ಯಕಿಯು ಭೂಮಿಯುದ್ಧದಲ್ಲಿ ಪ್ರವೀಣನಾಗಿದ್ದುದರಿಂದ ಆತನ ಕತ್ತಿಯ ಬಾಯಲ್ಲಿ ಚಕ್ರಾಕೃತಿಯಿಂದ ತಲೆಯನ್ನು ತಿರುಗಿಸುತ್ತಿದ್ದಾಗ ಅದನ್ನು

ಕಂ|| ನರನೆಚ್ಚೊಡೆ ಪಱದು ಕರಂ
ಕರವಾಳೊಡನಮರೆ ಕಾಸಿ ಬೆಚ್ಚಂತೆ ವಸುಂ|
ಧರೆಯೊಳ್ ಬೞರ್ದುದದೇಂ
ತಿರವೋ ಪೂಣಿಸಿದ ಮುಷ್ಟಿ ಭೂರಿಶ್ರವನಾ|| ೧೪೧

ವ|| ಆಗಳ್ ಸಾತ್ಯಕಿ ಮುಳಿಸಿನೊಳ್ ಕಣ್ಗಾಣದೆ ಭೂರಿಶ್ರವನ ತಲೆಯನರಿದು ತನ್ನೇಱಂಗೆ ತಾನೆ ಸಿಗ್ಗಾಗಿ ಪೋದನನ್ನೆಗಂ ಯಮನಂದನನ ಬೆಸದೊಳ್ ಫಲ್ಗುಣನಂ ಕೆಯ್ಕೊಳಲ್ ಬರ್ಪ ಮರುನ್ನಂದನಂಗಾ ದ್ರೋಣರಡ್ಡಂ ಬಂದೊಡೆ ಗುರುಗೆ ಗುರುದಕ್ಷಿಣೆ ಗುಡುವಂತವರ ರಥಮಂ ಶತಚೂರ್ಣಂ ಮಾಡಿ ಕಳಿಂಗರಾಜ ಗಜಘಟೆಗಳನೌಂಕಿ ಸೊರ್ಕುತ್ತುಂ ಬರೆ ದುಶ್ಶಾಸನಾದಿಗಳದಿರದಿದಿರಂ ಬಂದಾಂತೊಡೆ-

ಚಂ|| ನಿಡುವಗೆ ಸೈಪಿನಿಂದೆ ದೊರೆಕೊಂಡುದಿವರ್ ಗಜೆಗೊಂಡೆನಪ್ಪೊಡೀ
ಗಡೆ ಪರೆದಪ್ಪರೆಚ್ಚು ತವೆ ಕೊಲ್ವೆನಿವಂದಿರನೆಂದು ನಚ್ಚಿನ|
ಚ್ಚುಡಿವಿನಮೆಚ್ಚೊಡೆಯಿನೆಚ್ಚರುಣಾಂಬು ಕಲಂಕಿ ಪಾಯೆ ಮು
ನ್ನಡಿಯೊಳುರುಳ್ದರಂಧನೃಪನಂದನರಂದು ಮರುತ್ತನೂಜನಾ|| ೧೪೨

ವ|| ಅಂತು ದುರ್ಮುಖ ದುರ್ಮದ ದುರ್ಧರ್ಷಣರ್ ಮೊದಲಾಗೆ ಮೂವತ್ತು ಮೂವರಂ ಕೊಂದು ದುಶ್ಶಾಸನನಂ ವಿರಥನಂ ಮಾಡಿ ದುರ್ಯೋಧನನನೊಂದೆ ನಿಶಿತ ವಿಶಿಖ ಹತಿಯಿಂ ಸುರುಳ್ದುರುಳ್ವಿನಮೆಚ್ಚು ಮೂರ್ಛಾಗತನಂ ಮಾಡಿ ಸಿಂಹನಾದದಿನಾರ್ದು ಮುಟ್ಟೆವರ್ಪಾಗಳಾಳ್ದನ ಸಾವಂ ನೋಡಲಾಱದೆ-

ಮ|| ಎಡೆಗೊಂಡಂಕದ ಕರ್ಣನೆಯ್ದೆವರೆ ದಿವ್ಯಾಸ್ತ್ರಂಗಳಿಂದಂ ಸಿಡಿಲ್
ಪೊಡೆವಂತಪ್ಪಿನಮೆಚ್ಚುದಗ್ರರಥಮಂ ಮುಯ್ಯೇೞು ಸೂೞು ಕೋಪದಿಂ|
ಕಡಿಯಲ್ ಸಾರ್ದೊಡೞಲ್ದು ಸೂತಸುತನೊಂದುಗ್ರೇಷುವಿಂ ತಿಣ್ಣಮೆ
ಚ್ಚೊಡನಾರ್ದಂ ನಸುಮೂರ್ಛೆಹೋಗಿ ರಥದೊಳ್ ಭೀಮಂ ನರಲ್ವನ್ನೆಗಂ|| ೧೪೩

ವ|| ಅಂತು ಮೂರ್ಛಾಗತನಾದ ಭೀಮನ ಕೊರಲೊಳ್ ಬಿಲ್ಲಂ ಕೋದು ಮೇಗಿಲ್ಲದೆ ತೆಗೆದು-

ಕೃಷ್ಣನು ನೋಡಿ ವಿದ್ವಿಷ್ಟ ವಿದ್ರಾವಣನಾದ ಅರ್ಜುನನಿಗೆ ತೋರಿಸಿದನು. ೧೪೧. ಅರ್ಜುನನು (ಭೂರಿಶ್ರವನನ್ನು) ಹೊಡೆಯಲು ಅವನ ಕೈ ಕತ್ತರಿಸಿಹೋಗಿ ಕತ್ತಿಯೊಡನೆ ಕಾಯಿಸಿ ಬೆಸೆದ ಹಾಗೆ ಅಂಟಿಕೊಂಡಿದ್ದು ಭೂಮಿಯಲ್ಲಿ ಬಿದ್ದಿತು. ಭೂರಿಶ್ರವನು ಪ್ರತಿಜ್ಞೆಮಾಡಿ ಹಿಡಿದ ಮುಷ್ಟಿಯ ಎಷ್ಟು ಸ್ಥಿರವಾದುದೊ! ವ|| ಆಗ ಸಾತ್ಯಕಿಯು ಕೋಪದಿಂದ ಕುರುಡನಾಗಿ ಭೂರಿಶ್ರವನ ತಲೆಯನ್ನು ಕತ್ತರಿಸಿದನು. ತನ್ನ ಯುದ್ಧಕಾರ್ಯಕ್ಕೆ ತಾನೆ ನಾಚಿಕೊಂಡು ಹೋದನು. ಅಷ್ಟರಲ್ಲಿ ಧರ್ಮರಾಜನ ಆಜ್ಞೆಯ ಪ್ರಕಾರ ಅರ್ಜುನನಿಗೆ ಸಹಾಯಕನಾಗಿ ಬರುತ್ತಿದ್ದ ಭೀಮನಿಗೆ ದ್ರೋಣಾಚಾರ್ಯರು ಅಡ್ಡಲಾಗಿ ಬರಲು ಭೀಮನು ಗುರುವಿಗೆ ಗುರುದಕ್ಷಿಣೆಯನ್ನು ಕೊಡುವಂತೆ ಅವರ ತೇರನ್ನು ನೂರು ಚೂರುಗಳನ್ನಾಗಿ ಮಾಡಿ ಕಳಿಂಗರಾಜನ ಆನೆಯ ಸಮೂಹವನ್ನು ಒತ್ತಿ ಸೋಕುತ್ತ ಬರಲು ದುಶ್ಶಾಸನನೇ ಮೊದಲಾದವರು ಹೆದರದೆ ಎದುರಾಗಿ ಬಂದು ಪ್ರತಿಭಟಿಸಿದರು. ೧೪೨. ದೀರ್ಘಕಾಲದ ಶತ್ರುಗಳಾದ ಇವರು ಅದೃಷ್ಟದಿಂದ ದೊರೆಕೊಂಡಿದ್ದಾರೆ. ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದುರಿ ಓಡಿಹೋಗುತ್ತಾರೆ. ಇವರನ್ನು ಬಿಲ್ಲಿನಿಂದಲೇ ಪೂರ್ಣವಾಗಿ ಹೊಡೆದು ಕೊಂದುಹಾಕುತ್ತೇನೆ. ಎಂದು ತನ್ನ ಆತ್ಮವಿಶ್ವಾಸಕ್ಕೆ ಪಾತ್ರವಾದ ಮುದ್ರೆಯನ್ನು ಒಡೆಯುವ ಹಾಗೆ ಹೊಡೆಯಲು ಆ ಹೊಡೆದ ಕಡೆಯ ಗಾಯದಿಂದ ಹೊರಟ ರಕ್ತವು ಕದಡಿ ಹಾಯಲು ಕುರುಡುದೊರೆಯಾದ ಧೃತರಾಷ್ಟ್ರನ ಮಕ್ಕಳು ಆ ವಾಯುಪುತ್ರನಾದ ಭೀಮನ ಕಾಲಿನ ಮುಂಭಾಗದಲ್ಲಿ ಉರುಳಿದರು. ವ|| ಹಾಗೆ ದುರ್ಮುಖ, ದುರ್ಮದ, ದುರ್ಧರ್ಷಣರೇ ಮೊದಲಾದ ಮೂವತ್ತು ಮೂರು ಮಂದಿಯನ್ನೂ ಕೊಂದು ದುಶ್ಶಾಸನನನ್ನು ರಥವಿಲ್ಲದವನನ್ನಾಗಿ ಮಾಡಿ (ತೇರಿನಿಂದ ಉರುಳಿಸಿ) ದುರ್ಯೋಧನನನ್ನು ಒಂದೇ ಹರಿತವಾದ ಬಾಣದ ಪಟ್ಟಿನಿಂದ ಮುರಿದುಕೊಂಡು ಉರುಳಿ ಬೀಳುವ ಹಾಗೆ ಹೊಡೆದೂ ಮೂರ್ಛಿತನನ್ನಾಗಿ ಮಾಡಿ ಸಿಂಹಧ್ವನಿಯಿಂದ ಗರ್ಜಿಸಿ ಹತ್ತಿರಕ್ಕೆ ಬಂದಾಗ ತನ್ನನ್ನಾಳಿದ ಯಜಮಾನನ ಸಾವನ್ನು ನೋಡಲಾರದೆ- ೧೪೩. ಪ್ರಸಿದ್ಧನಾದ ಕರ್ಣನು ದುರ್ಯೋಧನ ಮತ್ತು ಭೀಮರ ಮಧ್ಯೆ ಪ್ರವೇಶಿಸಿ ಹತ್ತಿರ ಬರಲು (ಭೀಮನು ತನ್ನ) ಶ್ರೇಷ್ಠವಾದ ಬಾಣಗಳಿಂದ ಸಿಡಿಲು ಹೊಡೆಯುವ ಹಾಗೆ ಹೊಡೆದು (ಕರ್ಣನ) ಎತ್ತರವಾದ (ಶ್ರೇಷ್ಠವಾದ) ತೇರನ್ನು ಇಪ್ಪತ್ತೊಂದು ಸಲ ಕೋಪದಿಂದ ಕಡಿದು ಹಾಕಿದನು. ಕರ್ಣನು ವ್ಯಥೆಪಟ್ಟು ತನ್ನ ಶ್ರೇಷ್ಠವಾದ ಬಾಣದಿಂದ ತೀಕ್ಷ್ಣವಾಗಿ ಹೊಡೆದು ಭೀಮನು ರಥದಲ್ಲಿಯೇ ಸ್ವಲ್ಪ ಮೂರ್ಛೆಹೋಗಿ ನರಳುವ ಹಾಗೆ ಹೊಡೆದು ಆರ್ಭಟ ಮಾಡಿದನು. ವ|| ಹಾಗೆ ಮೂರ್ಛೆ ಹೋದ ಭೀಮನ ಕತ್ತಿಗೆ ಬಿಲ್ಲಿನ ಹಗ್ಗವನ್ನು ಸುತ್ತಿ ಅಸಮಾನವಾದ ರೀತಿಯಲ್ಲಿ ಸೆಳೆದು

ಕಂ|| ತಾಂ ಗಡಮೆನ್ನಾಳ್ದನ ತೊಡೆ
ಯಂ ಗಡಮಿನ್ನುಡಿವನೆನ್ನೊಳಂ ಕಾದುವನೆಂ|
ದಂಗಪತಿ ನುಡಿದು ಕೊಲ್ಲದೆ
ತಾಂಗಿದನಂಬಿಕೆಗೆ ನುಡಿದ ನುಡಿ ನಿಲೆ ಮನದೊಳ್|| ೧೪೪

ವ|| ಅನ್ನೆಗಮಿತ್ತ ಚಾಣೂರಾರಿ ಜರಾಸಂಧಾರಿಯ ಮುನ್ನೆಗೆದು ಬೞಕ್ಕಡಂಗಿದ ಸಿಂಹನಾದಕ್ಕೆ ಮನಕ್ಷತಂಬಟ್ಟು ಸಾತ್ಯಕಿಯ ನಾರಯಲಟ್ಟಿದೊಡಾತಂ ಬಂದಚೇತನನಾಗಿ ಬಿೞರ್ದ ವೃಕೋದರನಂ ತನ್ನ ರಥಮನೇಱಸಿಕೊಂಡು ಕೂಡೆ ವಂದನನ್ನೆಗಂ ದುರ್ಯೋಧನಂ ಕರ್ಣಂ ಬೆರಸು ಸೈಂಧವನ ಮೊನೆಯೊಳಾತನಂ ಪೆಱಗಿಕ್ಕಿ ಮುಂದೆ ನಿಂದಾಗಳ್-

ಚಂ|| ದಿನಕರನಸ್ತಮಸ್ತಕಮನಾಸೆವಡಲ್ ಬಗೆದಪ್ಪನೇಕೆ ಕೆ
ಮ್ಮನೆ ತಡೆವೈ ಜಯದ್ರಥನನಿಕ್ಕುೞದಾರೊಳಮಿಂ ತೊಡಂಕವೇ|
ಡೆನುತುಮಜಂ ಮರುಜ್ಚವದೆ ಚೋದಿಸೆ ಪಾರ್ಥನ ದೇವದತ್ತ ನಿ
ಸ್ವನದೊಳೆ ತೀವಿ ಪೊಟ್ಟನೊಡೆವಂತೆವೊಲಾದುದಜಾಂಡಮಂಡಳಂ|| ೧೪೫

ಚಂ|| ಚಟುಳಿತ ಚಕ್ರನೇಮಿ ಪರಿವರ್ತನ ಘಟ್ಟನ ಘಾತ ನಿರ್ಭರ
ಸುಟಿತ ಧರಾತಳಂ ವಿಜಯನುಗ್ರರಥಂ ಪರಿದತ್ತು ದಲ್ ಘಟಾ|
ಘಟಿತ ಹಟದ್ವಿರೋ ರುರಪ್ಲವಲಂಪಟ ಸಂಕಟೋತ್ಕಟಂ
ಕಟಕಟ ಘಾತ ನಾಕತಟ ಸಂಕಟ ಸಂಗರ ರಂಗಭೂಮಿಯೊಳ್|| ೧೪೬

ವ|| ಆಗಳ್ ಕುರುಧ್ವಜಿನಿಗೆ ಭಯಜ್ವರಮುಂ ಮಹೇಶ್ವರಜ್ವರಮುಂ ಬರೆ ಬರ್ಪುದಾರ ಮಹೇಶ್ವರನ ರಥದ ಬರವಂ ಕಂಡು ಕರ್ಣ ಶಲ್ಯ ಶಕುನಿ ಶಾರದ್ವತ ಕೃತವರ್ಮ ದುರ್ಯೋಧನ ದುಶ್ಶಾಸನರ್ ಮೊದಲಾದತಿರಥ ಸಮರಥ ಮಹಾರಥಾರ್ಧರಥರೊಂದೆವಿಂದೆಯಲ್ಲ ದೊಂದೊರ್ವರೊಳ್ ಸಂಸಿ ಗೊಂದಣಿಸಿ ನಿಂದಾಗಳ್-

ಚಂ|| ಶರದೊಳಗುರ್ಚಿಪೋಪ ಪೊಳಪಿಂಗೊಳಗಾಗಿ ತಗುಳ್ದುದೊಂದು ಬೆ
ಳ್ಸರಿಗೆಣೆಯಾದುದೀಯೆಱಗುವಂಬಿನ ಬಲ್ಸರಿಯೆಂಬಿನಂ ನಿರಂ|
ತರದೊಳೆ ಪಾಯ್ದ ಕೂರ್ಗಣೆಗಳಂ ತಱದೊಟ್ಟಿ ತೆರಳ್ಚಿ ತೂಳ್ದಿಕೊಂ
ಡರೆದು ಮುಗೞ ಸಣ್ಣಿಸಿದನಾಂತ ಚತುರ್ವಲಮಂ ಗುಣಾರ್ಣವಂ|| ೧೪೭

೧೪೪. ಇವನೇ ಅಲ್ಲವೇ ನನ್ನ ಯಜಮಾನನ ತೊಡೆಯನ್ನು ಒಡೆಯುವವನು; ಇನ್ನು ನನ್ನಲ್ಲಿಯೂ ಕಾದುವವನು ಎಂದು ಹೇಳಿ ಕರ್ಣನು ತಾಯಿಗೆ ಕೊಟ್ಟ ಮಾತು (ಭಾಷೆ) ಮನಸ್ಸಿನಲ್ಲಿ ನಿಂತಿರಲಾಗಿ ಭೀಮನನ್ನು ಕೊಲ್ಲದೆ ತಡೆದನು. ವ|| ಅಷ್ಟರಲ್ಲಿ ಈ ಕಡೆ ಕೃಷ್ಣನು ಭೀಮನ ಮುಂದಕ್ಕೆ ಹಾರಿ ಬಳಿಕ ಕುಗ್ಗಿದ ಸಿಂಹಧ್ವನಿಗೆ ಮನಸ್ಸಿನಲ್ಲಿಯೇ ವ್ಯಥೆಪಟ್ಟು ಸಾತ್ಯಕಿಯನ್ನು ನೋಡಿಕೊಂಡು ಬರಲು ಕಳುಹಿಸಿದನು. ಆತನು ಬಂದು ಶಕ್ತಿಗುಂದಿ ಬಿದ್ದಿದ್ದ ಭೀಮನನ್ನು ತನ್ನ ರಥದಲ್ಲಿ ಏರಿಸಿಕೊಂಡು ಜೊತೆಯಲ್ಲಿಯೇ ಬಂದನು. ಅಷ್ಟರಲ್ಲಿ ಕರ್ಣನೊಡಗೂಡಿ ದುರ್ಯೋಧನನು ಸೈಂಧವನ ಯುದ್ಧಭೂಮಿಗೆ ಬಂದು ಆತನನ್ನು ಹಿಂದೆ ಹಾಕಿ ತಾನು ನಿಂತನು.

೧೪೫. ಸೂರ್ಯನು ಅಸ್ತಪರ್ವತದ ನೆತ್ತಿಯನ್ನು ಸೇರಲು (ಮುಳುಗಲು) ಯೋಚಿಸುತ್ತಿದ್ದಾನೆ. ಏಕೆ ಸುಮ್ಮನೆ ಸಾವಕಾಶ ಮಾಡುತ್ತಿದ್ದೀಯೆ? ಜಯದ್ರಥನನ್ನು ಹೊಡೆ; ಮಿಕ್ಕವರಾರಲ್ಲಿಯೂ ತೊಡಕಿಕೊಳ್ಳಬೇಡ ಎನ್ನುತ್ತ ಕೃಷ್ಣನು ವಾಯುವೇಗದಿಂದ ರಥವನ್ನು ಚೋದಿಸಿದನು. ಅರ್ಜುನನ ದೇವದತ್ತವೆಂಬ ಶಂಖದ ಧ್ವನಿಯಿಂದ ತುಂಬಿ ಬ್ರಹ್ಮಾಂಡಮಂಡಲವು ಒಡೆಯುವಂತಾಯಿತು. ೧೪೬. ವೇಗವಾಗಿ ಚಲಿಸುತ್ತಿರುವ ತೇರಿನ ಚಕ್ರದ ಬಳೆಯ ಸುತ್ತುವುದರ ಪೆಟ್ಟಿನ ಹೊಡೆತದಿಂದ ಭರಿಸಲಸಾಧ್ಯವಾಗಿ ಭೂಪ್ರದೇಶವು ಸೀಳಿತು. ಅರ್ಜುನನ ಭಯಂಕರವಾದ ರಥವು ಆನೆಗಳ ಗುಂಪಿನಿಂದ ಕೂಡಿದ ಶತ್ರುಗಳ ಪ್ರಕಾಶಮಾನವಾದ ರಕ್ತಪ್ರವಾಹದಲ್ಲಿ ಆಸಕ್ತಿಯುಳ್ಳ ತಮ್ಮ ಕಟಕಟವೆಂಬ ಹೊಡೆತದಿಂದ ಸ್ವರ್ಗಕ್ಕೆ ಹಿಂಸೆಯನ್ನುಂಟುಮಾಡುತ್ತ ಯುದ್ಧಭೂಮಿಯಲ್ಲಿ ಹರಿಯಿತು. ವ|| ಆಗ ಕೌರವಸೈನ್ಯಕ್ಕೆ ಭಯವೆಂಬ ಜ್ವರವೂ ಈಶ್ವರನ ಹಣೆಗಣ್ಣಿನ ಜ್ವರವೂ ಬರುವ ಹಾಗೆ ಬರುತ್ತಿರುವ ಉದಾರಮಹೇಶ್ವರನಾದ ಅರ್ಜುನನ ರಥದ ಬರುವಿಕೆಯನ್ನು ಕಂಡು ಕರ್ಣ, ಶಲ್ಯ, ಶಕುನಿ, ಶಾರದ್ವತ, ಕೃತವರ್ಮ, ದುರ್ಯೋಧನ, ದುಶ್ಶಾಸನನೇ ಮೊದಲಾದ ಅತಿರಥ, ಸಮರಥ, ಮಹಾರಥ, ಅರ್ಧರಥರು ಗುಂಪಾಗಿರದೆ ಬೇರೆ ಬೇರೆಯಾಗಿ ಒಬ್ಬೊಬ್ಬರಲ್ಲಿ ಸೇರಿಕೊಂಡು ನಿಂತರು. ೧೪೭. ನಿರಂತರವಾಗಿ ಬೀಳುವ ಬಾಣಗಳ ಮಳೆಯ ನಡುವೆ ನುಸುಳಿಕೊಂಡು ಬಂದು ಪ್ರಕಾಶಿಸುವ ಸೂರ್ಯಕಿರಣವು ಬಾಣದ ಮಳೆಯ ಮಧ್ಯೆ ಸುರಿಯುವ ಬಿಳಿಯ ಕಿರಣಗಳ ಮಳೆಯೆಂಬಂತಾಯಿತು ಎನ್ನುವ ಹಾಗೆ ಎಡಬಿಡದೆ ಹಾದು ಬರುತ್ತಿರುವ ಬಾಣಗಳಿಂದ ಪ್ರತಿಭಟಿಸಿದ

ಮ||ಸ್ರ|| ಕಲಿಗಂ ಬಲ್ಲಾಳ್ಗಮಂಬೆತ್ತಿದೆನಿದುವೆ ಪದಂ ಮಾರ್ಕೊಳಲ್ ಸಿಂಧುರಾಜಂ
ಗೆಲಲೆಂದಾಂ ಬಂದೆನಿಂ ಕೊಂದಪನೆ ನೆರದು ನಿಂದಾನಿಮೆಂದಾಂತರಂ ಮೂ|
ದಲಿಸುತ್ತೆಚ್ಚಂ ಪ್ರಚಂಡ ಪ್ರಳಯ ಘನ ಘಟಾರಾವದಿಂದಾರ್ದು ಬಾಣಾ
ವಲಿಯಿಂದಂ ಪೂೞೆ ರೋದೋವಿವರಮನೊದವಿತ್ತೊಂದು ಘೋರಾಂಧಕಾರಂ|| ೧೪೮

ವ|| ಅಂತಮೋಘಾಸ್ತ್ರಧನಂಜಯನೆಚ್ಚ ಶರಸಂಘಾತದಿನೊಗೆದ ರಣಗೞ್ತಲೆಯೆ ಮೊಲಗೞ್ತಲೆಯಂ ಮಾಡೆ ನೇಸೞು ಪಟ್ಟತ್ತು ವಿಜಯಂ ಸೋಲ್ತನೆಂದು ಕೌರವಬಲಮಾರ್ದೊಡೆ-

ಚಂ|| ಜ್ವಳದನಳಾಸ್ತ್ರದಿಂದಮಿಸೆ ಕೞ್ತಲೆ ತೂಳ್ದು ತೆರಳ್ದುದಾಗಳು
ಮ್ಮಳಿಸಿ ಮಹಾರಥರ್ ಪೆಳ ಸೈಂಧವನೆನ್ನಳವಿಂಗಮೆನ್ನ ದೋ|
ರ್ವಳದಳವಿಂಗಮಿಂ ಸೆಡೆದಿರಲ್ ದೊರೆಯಲ್ತೆನಗೆಂದು ಬಂದಸುಂ
ಗೊಳೆ ಪೊಣರ್ದಂ ಸುರರ್ ಪೊಗೞೆ ತನ್ನಳವಂ ಜಗದೇಕಮಲ್ಲನೊಳ್|| ೧೪೯

ವ|| ಅಂತತಿರಥ ಮಥನನ ರಥಕ್ಕದಿರದಿದಿರಂ ತನ್ನ ರಥಮಂ ಪರಿಯಿಸಿ ಜಯದ್ರಥಂ ಮುಟ್ಟೆವಂದು-

ಉ|| ನಿನ್ನೆ ಪೊರಳ್ಚಿ ನಿನ್ನ ಮಗನಂ ಸೆರಗಿಲ್ಲದೆ ಕೊಂದನಿಂದುಮಿಂ
ತಿನ್ನೆಗಮಿರ್ಪುದಂ ಭಯದಿನಿರ್ದೆನೆ ನಿನ್ನನೆ ಪಾರುತಿರ್ದೆನೆಂ|
ದುನ್ನತ ಶೌರ್ಯದಿಂದಜಿತನಂ ನರನಂ ಮುನಿದೆಚ್ಚನೇೞುಮೆಂ
ಟುನ್ನಿಶಿತಾಸ್ತ್ರದಿಂದದಟದೇಂ ದೊರೆವೆತ್ತುದೊ ಸಿಂಧುರಾಜನಾ|. ೧೫೦

ವ|| ಅಂತೆ ಚ್ಚು ಕಿಚ್ಚುಂ ಕಿಡಿಯುಮಾಗಿ ಪೆರ್ಚಿದುಮ್ಮಚ್ಚರದಿಂದಚ್ಚರಿಯಾಗಿ ಕಾದೆ

ಸ್ರ|| ಎಂತಸ್ಮತ್ಪ್ರುತ್ರನಂ ಸಂಗರದೊಳೞದೆಯಿನ್ನಂತೆ ನಿಲ್ ಶಕ್ತಿ ಚಾತು
ರ್ದುಂತಂಗಳ್ ನಿನ್ನನಾಂ ಕೊಲ್ವೆಡೆಯೊಳೆಲವೊ ಪೇೞ್ ಕಾವುವೇ ಕಾಯವಣ್ಮೆಂ|
ದಂತಾಂತೆಚ್ಚೆಚ್ಚು ಸೂತ ಧ್ವಜ ಹಯ ರಥ ಸಂಘಾತಮಂ ನುರ್ಗೆ ಲೋಕ
ಕ್ಕಂತಂ ಮಾೞ್ಪಂತಕಂಬೋಲ್ ಗದೆವಿಡಿದುಱದೆಯ್ತರ್ಪನಂ ಕಂಡನಂತಂ|| ೧೫೧

ಚತುರಂಗಸೈನ್ಯವನ್ನು ಅರ್ಜುನನು ಕತ್ತರಿಸಿ, ಓಡಿಸಿ ರಾಶಿಮಾಡಿಕೊಂಡು ಅರೆದು ಪುಡಿಮಾಡಿದನು. ೧೪೮. ‘ಶೂರರಿಗೂ ಬಲಿಷ್ಠರಾದ ವೀರರಿಗೂ ಸವಾಲು ಮಾಡುತ್ತಿದ್ದೇನೆ. (ಬಾಣಗಳನ್ನು ಎತ್ತಿದ್ದೇನೆ). ಪ್ರತಿಭಟಿಸುವುದಕ್ಕೆ ಇದೇ ಹದವಾದ ಕಾಲ. ಸೈಂಧವನನ್ನು ಗೆಲ್ಲುವುದಕ್ಕಾಗಿ ನಾನು ಬಂದಿದ್ದೇನೆ. ಕೊಲ್ಲುತ್ತೇನೆ. ಗುಂಪಾಗಿ ನಿಂತು ಎದುರಿಸಿ ಎಂದು ಪ್ರತಿಭಟಿಸಿದವರನ್ನು ಮೂದಲಿಸಿದನು (ಅಣಕವಾಡಿದನು). ಪ್ರಪಂಚವಾದ ಪ್ರಳಯಕಾಲದ ಗುಡುಗಿನ ಶಬ್ದದಿಂದ ಆರ್ಭಟಮಾಡಿ ಹೊಡೆದು ಬಾಣಗಳ ಸಮೂಹದಿಂದ ಆಕಾಶಪ್ರದೇಶವನ್ನು ಹೂಳಿದನು. ಅದರಿಂದ ಭಯಂಕರವಾದ ಕತ್ತಲೆಯು ಆವರಿಸಿತು. ವ|| ಹಾಗೆ ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಹೊಡೆದ ಬಾಣಗಳ ಸಮೂಹದಿಂದುಂಟಾದ ಯುದ್ಧಗತ್ತಲೆಯೇ ಮೊಲಗತ್ತಲೆಯನ್ನು (ಚಂದ್ರನಲ್ಲಿರುವ ಮೊಲಗತ್ತಲೆಯನ್ನು- ರಾತ್ರಿಯ ಭ್ರಮೆಯನ್ನು) ಉಂಟುಮಾಡಲು “ಸೂರ್ಯನು ಮುಳುಗಿದನು-ಅರ್ಜುನನು ಸೋತನು” ಎಂದು ಕೌರವ ಸೈನ್ಯವು ಕೂಗಿಕೊಂಡಿತು. ೧೪೯. ತಕ್ಷಣವೇ ಅರ್ಜುನನು ಪ್ರಕಾಶಮಾನವಾದ ಆಗ್ನೇಯಾಸ್ತ್ರವನ್ನು ಪ್ರಯೋಗಿಸಲು ಕತ್ತಲೆ ಹರಿದು ಓಡಿಹೋಯಿತು. ಆಗ ಮಹಾರಥರು ವ್ಯಥೆಪಟ್ಟು ಹೆದರಿದರು. ಸೈಂಧವನು ತನ್ನ ಶಕ್ತಿಗೂ ತನ್ನ ಬಾಹುಬಲದ ಶಕ್ತಿಗೂ ಇನ್ನು ಭಯದಿಂದ ನಾನು ಕುಗ್ಗಿರುವುದು ಯೋಗ್ಯವಲ್ಲ ಎಂದು ಹೊರಗೆ ಬಂದು ಪ್ರಾಣಾಪಹಾರಮಾಡುವ ಹಾಗೆ ತನ್ನ ಪರಾಕ್ರಮವನ್ನು ದೇವತೆಗಳೂ ಹೊಗಳುತ್ತಿರಲು ಜಗದೇಕಮಲ್ಲನಾದ ಅರ್ಜುನನಲ್ಲಿ ಹೋರಾಡಿದನು- ವ|| ಅತಿರಥಮಥನನಾದ ಅರ್ಜುನನ ರಥಕ್ಕಿದಿರಾಗಿ ಹೆದರದೆ ತನ್ನ ರಥವನ್ನು ಹಾಯಿಸಿ ಸೈಂಧವನು ಸಮೀಪಕ್ಕೆ ಬಂದು ೧೫೦. “ನಿನ್ನೆಯ ದಿನ ಭಯವಿಲ್ಲದೆ ನಿನ್ನ ಮಗನಾದ ಅಭಿಮನ್ಯುವನ್ನು ಹೊರಳಿಸಿ ಕೊಂದೆ. ಇಂದು ಇಲ್ಲಿಯವರೆಗೆ ಭಯದಿಂದ ಮರೆಯಾಗಿದ್ದೆನೆ? ನಿನ್ನನ್ನೇ ನಿರೀಕ್ಷಿಸುತ್ತಿದ್ದೆ” ಎಂದು ಕೋಪದಿಂದಲೂ ಅತಿಶಯವಾದ ಪರಾಕ್ರಮದಿಂದಲೂ ಕೃಷ್ಣನನ್ನೂ ಅರ್ಜುನನ್ನೂ ಬಹಳಹರಿತವಾದ ಏಳೆಂಟು ಬಾಣಗಳಿಂದ ಹೊಡೆದನು. ಸೈಂಧವನ ಪರಾಕ್ರಮವು ಅದ್ಭುತವಾಯಿತು! ವ|| ಕೋಪಗೊಂಡು ಹೆಚ್ಚಿದ ಮತ್ಸರದಿಂದ ಆಶ್ಚರ್ಯವಾಗವ ಹಾಗೆ ಕಾದಿದನು. ೧೫೧. “ನನ್ನ ಮಗನನ್ನು ಹೇಗೆ ಕೊಂದೆಯೋ ಇದು ಹಾಗೆಯೇ; ನಿಲ್ಲು, ಶಕ್ತಿಯುಕ್ತವಾದ ಚತುರಂಗಸೈನ್ಯಗಳು ನಾನು ನಿನ್ನನ್ನು ಕೊಲ್ಲುವ ಸಂದರ್ಭದಲ್ಲಿ ರಕ್ಷಿಸಲಾರವು. ಸಾಯಿ” ಎಂದು ಪ್ರತಿಭಟಿಸಿ ಸಾರಥಿ, ಬಾವುಟ, ಕುದುರೆ ಮತ್ತು ತೇರಿನ ಸಮೂಹಗಳನ್ನು ನುಚ್ಚುನೂರಾಗಿ

ಪುಡಿಯಾಗುವ ಹಾಗೆ ಹೊಡೆದನು. ಸೈಂಧವನು ರೋಷಾವೇಶದಿಂದ ಪ್ರಪಂಚಕ್ಕೆ ಅಂತ್ಯವನ್ನುಂಟುಮಾಡುವ ಯಮನಂತೆ ಗದೆಯನ್ನು

ಕಂ|| ತುಡು ಪಾಶುಪತಮನೆನೆ ನರ
ನೆಡೆಮಡಗದೆ ತುಡೆ ದಿಶಾಳಿ ನಡುಗಿದುದು ಸುರು|
ಳ್ದುಡುಗಿದುದು ವಿಯತ್ತಳಮೆಳೆ
ಪಿಡುಗಿದುದು ಕಲಂಕಿ ಕದಡಿದುದು ಶಿವನ ಮನಂ|| ೧೫೨

ಉ|| ಸುಱಯೊಳಗಿರ್ದು ಬೆಟ್ಟು ಪೊಱಪೊಣ್ಮುವಿನಂ ಲವಣಾಂಬುರಾಶಿ ಕು
ಕ್ಕುೞಗುದಿವಲ್ಲಿ ಕೂೞ್ಗುದಿಯೆ ಮೇಗೆ ಸಿಡಿಲ್ದಗುಳಂತೆ ಕೂಡೆ ತ|
ತ್ತೞಗುದಿಯುತ್ತುಮಿರ್ಪ ಕುದಿಯೊಳ್ ಸಿಡಿದಲ್ಲಿಯ ಮುತ್ತುಗಳ್ ಛೞಲ್
ಛೞಲೆನೆ ಕೊಂಡುವೊರ್ಮೊದಲೆ ರುದ್ರ ಸುರೇಂದ್ರ ವಿಮಾನಪಙ್ಕಿ ಯಂ|| ೧೫೩

ವ|| ಅಂತು ಸಮುದ್ರಕ್ಷೋಭಮುಂ ತ್ರೈಲೋಕ್ಯಕ್ಷೋಭಮುಮೊಡನೊಡನಾಗೆ

ಚಂ|| ತೆಗೆನೆ ದೊಱಕೊಂಡಿಸೆ ಶಿರಂ ಪರಿದತ್ತ ವಿಯತ್ತಳಂಬರಂ
ನೆಗೆದೊಡೆ ರಾಹು ಬಾಯ್ದೆದು ನುಂಗಲೆ ಬಂದಪುದೆಂಬ ಶಂಕೆಯಿಂ|
ದಗಿದು ದಿನೇಶನಸ್ತಗಿರಿಯಂ ಮಗೊಂಡನಮೋಘಮೆಂಬ ಮಾ
ತುಗಳ ನೆಗೞ್ತೆಯಂ ಪಡೆದನಾಹವದೊಳ್ ಪರಸೈನ್ಯಭೈರವಂ|| ೧೫೪

ಚಂ|| ಬಿರಿದಲರೋಳಿ ಸಗ್ಗದ ಮದಾಳಿಗಳಂ ಗೆಡಗೊಂಡು ದೇವಸುಂ
ದರಿಯರ ಕೆಯ್ಗಳಿಂದಮುಗೆ ತುಂಬುರು ನಾರದರೊಂದು ಗೇಯದಿಂ|
ಚರಮೆರ್ದೆಯಂ ಪಳಂಚಲೆಯೆ ವೀರಲತಾಂಗಿಯ ಸೋಂಕು ಮೆಯ್ಯೊಳಂ
ಕುರಿಸೆ ನಿರಾಕುಳಂ ಕಳೆದನಾಜಿ ಪರಿಶ್ರಮಮಂ ಗುಣಾರ್ಣವಂ|| ೧೫೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ
ಚತುರ ಕವಿತಾಗುಣಾರ್ಣವ ವಿರಚಿತಮಪ್ಪ
ವಿಕ್ರಮಾರ್ಜುನ ವಇಜಯದೊಳ್

ಏಕಾದಶಾಶ್ವಾಸಂ

ಹಿಡಿದು ವೇಗವಾಗಿ ಬರುತ್ತಿದ್ದುದನ್ನು ಕೃಷ್ಣನು ನೋಡಿ ಅರ್ಜುನನಿಗೆ ೧೫೨. ‘ಪಾಶುಪತಾಸ್ತ್ರವನ್ನು ಪ್ರಯೋಗಿಸು’ ಎಂದು (ಕೃಷ್ಣನು) ಹೇಳಿದನು. ಅರ್ಜುನನು ಸಾವಕಾಶಮಾಡದೆ ಅದನ್ನು ಪ್ರಯೋಗಿಸಲು ದಿಕ್ಕುಗಳ ಸಮೂಹವು ನಡುಗಿತು. ಆಕಾಶಪ್ರದೇಶವು ಸುರುಳಿಯಾಗಿ ಸುಕ್ಕಿಹೋಯಿತು. ಭೂಮಿಯು ಒಡೆಯಿತು. ಈಶ್ವರನ ಮನಸ್ಸು ಕದಡಿಹೋಯಿತು. ೧೫೩. ಸಮುದ್ರದ ಸುಳಿಯಲ್ಲಿದ್ದ ಪರ್ವತಗಳು ಹೊರಹೊಮ್ಮುತ್ತಿರಲು ಉಪ್ಪುನೀರಿನ ಸಮುದ್ರವು ಅನ್ನವು ಕುದಿಯುವಂತೆ ಕುದಿಯುವಾಗ ಮೇಲಕ್ಕೆ ಸಿಡಿದ ಅನ್ನದ ಅಗುಳಂತೆ ಕೂಡಲೆ ತಳತಳವೆಂದು ಕುದಿಯುತ್ತಿರುವ ಕುದಿತದಲ್ಲಿ ಆ ಸಮುದ್ರದ ಮುತ್ತುಗಳು ಛಿಟಿಲ್ ಛಿಟಿಲ್ ಎಂದು ಆಕಾಶಕ್ಕೆ ಹಾರಿ ಶಿವನ ಮತ್ತು ದೇವೇಂದ್ರನ ವಿಮಾನಗಳ ಸಾಲುಗಳನ್ನು ಒಂದೇಸಲ ಆಕ್ರಮಿಸಿದುವು. ವ|| ಹಾಗೆ ಸಮುದ್ರದ ಕ್ಷೋಭವೂ (ಕುಲಕುವಿಕೆಯೂ) ಮೂರು ಲೋಕಗಳ ಕ್ಷೋಭವೂ (ಭಯಕಂಪನಾದಿಗಳೂ) ಜೊತೆಜೊತೆಯಲ್ಲಿಯೇ ಉಂಟಾದವು. ೧೫೨. ಅರ್ಜುನನು ಬಾಣವನ್ನು ದೀರ್ಘವಾಗಿ ಕಿವಿಯವರೆಗೂ ಸೆಳೆದು ಬಲವಾಗಿ ಅದುಮಿಕೊಂಡು ಹೊಡೆಯಲು ಸೈಂಧವನ ತಲೆಯು ಕತ್ತರಿಸಿ ಆಕಾಶದೆಡೆ ಹಾರಲು ರಾಹುಗ್ರಹವು ಬಾಯಿ ತೆರೆದುಕೊಂಡು ನುಂಗಲು ಬಂದಿದೆಯೋ ಎನ್ನುವ ಭಯದಿಂದ ಸೂರ್ಯನು ಹೆದರಿ ಅಸ್ತಪರ್ವತದಲ್ಲಿ ಅಡಗಿದನು. (ಮರೆಯಾದನು). ಪರಸೈನ್ಯಭರವನಾದ ಅರ್ಜುನನು ಇದರಿಂದ ಯುದ್ಧದಲ್ಲಿ ಬೆಲೆಯಿಲ್ಲದ ಶಕ್ತಿಯುಳ್ಳವನು ಎಂಬ ಕೀರ್ತಿಯನ್ನು ಪಡೆದನು. ೧೫೫. ಅರಳಿದ ಪುಷ್ಪಗಳ ಸಮೂಹವು ಸ್ವರ್ಗದ ಮದಾಳಿ (ಮದಿಸಿದ ದುಂಬಿ) ಗಳಿಂದ ಕೂಡಿ ದೇವಸುಂದರಿಯರ ಕೈಗಳಿಂದ ಸುರಿಯುತ್ತಿರಲು (ಪುಷ್ವವೃಷ್ಟಿಯಾಗುತ್ತಿರಲು) ತುಂಬುರು ನಾರದರ ಗೀತದ ಒಂದು ಇಂಪಾದ ಸ್ವರವು ಎದೆಯನ್ನು ತಾಗಿ ಅಲೆಯುತ್ತಿರಲು ವಿಜಯಲಕ್ಷ್ಮಿಯ ಸ್ಪರ್ಶವು ಶರೀರದಲ್ಲಿ ರೋಮಾಂಚನವಾಗುತ್ತಿರಲು ಅರ್ಜುನನು ಯುದ್ಧದ ಆಯಾಸವನ್ನು ಶ್ರಮವಿಲ್ಲದೆಯೇ ಕಳೆದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹನ್ನೊಂದನೆಯ ಆಶ್ವಾಸ.
***********




***********

ಕಾಮೆಂಟ್‌ಗಳಿಲ್ಲ: