ನರಕಚತುರ್ದಶಿಯ ಎರಡನೇ ದಿವಸ ಬಲಿಪಾಡ್ಯಮಿ. ಈ ದಿವಸ ಜನರೆಲ್ಲರೂ ಬಲೀಂದ್ರ ಪೂಜೆಯನ್ನು ಮಾಡುತ್ತಾರೆ. ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ.
ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ. ಆತನು ಮಹಾ ವಿಷ್ಣುಭಕ್ತ. ಆತನ ಮಗ ವಿರೋಚನ.
ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ. ಆದರೆ ರಾಕ್ಷಸ
ವಂಶದಲ್ಲಿ ಹುಟ್ಟಿದವನಾದ್ದರಿಂದ ರಜೋತಮ ಗುಣಪ್ರಬಲನಾಗಿದ್ದನು. ಅಂದರೆ ತನ್ನ ಹಿಂಸಾ
ಪ್ರವೃತ್ತಿಯನ್ನು ಬಿಡುತ್ತಿರಲಿಲ್ಲ. ಈತನ ರಾಜ್ಯವು ಸುಭಿಕ್ಷವಾಗಿತ್ತು. ಎಷ್ಟು
ವಿಷ್ಣುವನ್ನು ಪೂಜಿಸುತ್ತಿದ್ದನೋ ಅಷ್ಟೇ ಹಿಂಸೆಯನ್ನು ಇತರರಿಗೆ ನೀಡುತ್ತಿದ್ದನು.
ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು.
ಋಷಿಪತ್ನಿಯರನ್ನು ಹಿಂಸಿಸುತ್ತಿದ್ದನು. ಈತನನ್ನು ಸಂಹಾರ ಮಾಡಬೇಕೆಂಬ ಕೋರಿಕೆಯನ್ನು
ಋಷಿಗಳು ವಿಷ್ಣುಪರಮಾತ್ಮನಲ್ಲಿ ಇಟ್ಟರು.
ಅದೇ ಸಮಯಕ್ಕೆ ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಬೇಕೆಂಬ ಯೋಚನೆ ಬಂತು. ಈ ಯಾಗ
ಮಾಡುವಾಗ ಯಾರೇ ಬರಲಿ, ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ
ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡನು. ಇತ್ತ ಶುಕ್ರಚಾರ್ಯರು ಈತನಿಗೆ ಈ ಕೆಲಸ ಮಾಡಬೇಡ
ಎಂಬುದಾಗಿ ಸಲಹೆಯಿತ್ತರು. ಆದರೆ ಅವರ ಈ ಮಾತಿಗೆ ಬಲಿಚಕ್ರವರ್ತಿ ಬೆಲೆ ಕೊಡಲಿಲ್ಲ.
ಅಶ್ವಮೇಧ ಯಾಗ ನಡೆಯಿತು. ಬಂದವರಿಗೆಲ್ಲಾ ದಾನ ನೀಡಲಾಯಿತು. ಇದೇ ಸಮಯದಲ್ಲಿ
ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ತಕ್ಕ ಸಮಯವೆಂದು ಭಾವಿಸಿದ ವಿಷ್ಣುವು, ವಾಮನ
ರೂಪವನ್ನು ತಾಳಿ ಯಾಗ ನಡೆಯುವ ಸ್ಥಳಕ್ಕೆ ಬಂದನು. ಬಂದವನೇ ತನಗೆ ದಾನ ನೀಡಬೇಕೆಂದು
ಕೇಳಿಕೊಂಡನು.
ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ
ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುವುದು. ಈ ಸಮಯದಲ್ಲಿ
ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಪ್ಪೆರೂಪ ತಾಳಿ ಕಮಂಡಲದ
ರಂಧ್ರದಲ್ಲಿ ಸೇರಿಕೊಂಡರು. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು
ಬೀಳುತ್ತಿರಲಿಲ್ಲ. ಶುಕ್ರಾಚಾರ್ಯರ ಕುಯುಕ್ತಿಯನ್ನು ಅರಿತ ವಿಷ್ಣು ಪರಮಾತ್ಮ
ದರ್ಭೆಯನ್ನು ತೆಗೆದುಕೊಂಡು ಬಲಿಚಕ್ರವರ್ತಿಯಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ ಅದನ್ನು
ತೆಗೆಯುತ್ತೇನೆ ಎಂದು ಕಮಂಡಲದ ನಾಳಕ್ಕೆ ಚುಚ್ಚಿದನು. ಅದು ಕಪ್ಪೆಯ ಕಣ್ಣನ್ನು
ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು.
ಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು.
ಮುಂದೆ ಬಲಿಚಕ್ರವರ್ತಿ ತಮಗೇನು ನೀಡಬೇಕೆಂದು ವಾಮನನಲ್ಲಿ ಕೇಳಿಕೊಂಡನು. ಆಗ ವಾಮನನು
ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳಿದನು. ಸರಿ ಎಂದು ಬಲಿಚಕ್ರವರ್ತಿ
ನಿನ್ನ ಜಾಗವನ್ನು ತೆಗೆದುಕೋ ಎಂದನು. ಬಲಿಯು ಹೇಳಿದ ನಂತರ ವಾಮನನು ನೋಡುತ್ತಿದ್ದಂತೆ
ತ್ರಿವಿಕ್ರಮನಾದನು. ತ್ರಿವಿಕ್ರಮ ಎಂದರೆ ಬಹಳ ಅಗಲವಾದ ಪಾದಗಳುಳ್ಳವ ಎಂದರ್ಥ.
ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ
ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ
ತೋಚದ ಬಲಿ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ
ತಲೆಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು.
ನಂತರ ಬಲಿಚಕ್ರವರ್ತಿಗೆ ವಿಷ್ಣುವು ಒಂದು ವರ ನೀಡಿದನು. ಅದೇನೆಂದರೆ ಆಶ್ವಯುಜ
ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ
ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ
ಪೂಜೆ ಕೈಗೊಳ್ಳುತ್ತಾರೆ.
**********ಕೃಪೆ:ಬಾಲಸಂಸ್ಕಾರ***********
1 ಕಾಮೆಂಟ್:
Story sariyagi bandilla. Purna pramanadalli kodi. Edu half aagide.
ಕಾಮೆಂಟ್ ಪೋಸ್ಟ್ ಮಾಡಿ