ಎನ್.ಎಸ್.ಲಕ್ಷ್ಮಿನಾರಾಯಣಭಟ್ಟರ ಭಾವಗೀತೆಗಳು - Lyrics of N.S.Lakshminarayanabhattಯಾಕೆ ಹರಿಯುತಿದೆ ಈ ನದಿ ಹೀಗೆ / Yaake hariyutide ee nadi heege

ಯಾಕೆ ಹರಿಯುತಿದೆ ಈ ನದಿ ಹೀಗೆ ದಡಗಳನ್ನೆ ದೂಡಿ
ತನ್ನನು ಕಾಯುವ ಎಲ್ಲೆಗಳನ್ನೇ ಇಲ್ಲದಂತೆ ಮಾಡಿ

ಹೀಗೆ ಹಾಯುವುದೇ ಮಲ್ಲಿಗೆ ಕಂಪು ಗಡಿಗಳನ್ನು ಮೀರಿ
ತನ್ನಿರವನ್ನೇ ಬಯಲುಗೊಳಿಸುವುದೆ ಬನದ ಆಚೆ ಸಾರಿ

ಯಾರು ನುಡಿಸುವರು ಎಲ್ಲೋ ದೂರದಿ ಮತ್ತೆ ಮತ್ತೆ ಕೊಳಲ
ಯಾಕೆ ಮೀಟುವುದು ಆ ದನಿ ಹೀಗೆ ನನ್ನ ಆಳದಳಲ

ತುಂಬಿದ ಜೇನಿನ ಗಡಿಗೆಗೆ ಯಾರೋ ಕಲ್ಲನು ಬೀರಿದರು
ಒಳಗಿನ ಸವಿಯು ಹೊರಗೆ ಹರಿವ ಥರ ತಂತ್ರವ ಹೂಡಿದರು

ಹೊಸ ವರ್ಷ ಬಂದಂತೆ ಯಾರು ಬಂದಾರು / Hosa varsha bandante yaaru bandaaru

ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು.

ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ.

ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿದರೆ ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ .

ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸಾ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ .

ದೀಪಗಳ ದಾರಿಯಲಿ / Deepagala daariyali

ದೀಪಗಳ ದಾರಿಯಲಿ ನಡುನಡುವೆ ನೆರಳು,
ನೆರಳಿನಲಿ ಸರಿವಾಗ ಯಾವುದೋ ಬೆರಳು
ಬೆನ್ನಿನಲಿ ಹರಿದಂತೆ ಭಯಚಕಿತ ಜೀವ
ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ.

ಆಸೆ ಕನಸುಗಳೆಲ್ಲ ತೀರಿದುವು ಕುಸಿದು,
ಭಾಷೆಗೂ ಸಿಗದಂಥ ಭಯದ ಮಳೆ ಬೆಳೆದು,
ಕಪ್ಪು ಮೋರೆಯ ಬೇಡ ಕರಿದಾರ ಹಿಡಿದು
ಪಕ್ಕದಲಿ ಹೋದನೇ ಪ್ರಾಣಕ್ಕೆ ಮುನಿಸು?

ನಾಲಗೆಗೆ ಇರುಳ ಹನಿ ತಾಕಿತೋ ಹೇಗೆ?
ಕೊರಳ ಬಳಿ ಬಳ್ಳಿ ಸರಿದಾಡಿತೋ ಹೇಗೆ?
ನಟ್ಟಿರುಳಿನಲಿ ಯಾರೊ ಹಿಂದೆಯೇ ಬಂದು
ಥಟ್ಟನೇ ಹೆಗಲನ್ನು ಜಗ್ಗಿದರೊ ಹೇಗೆ?

ಅಯ್ಯೋ ದೇವರೆ ಎಂದು ಚೀರುವಂತಾಗಿ
ನಡುಕಗಳು ನಾಲಿಗೆಗೆ ಮೂಡದಂತಾಗಿ
ಬಿಚ್ಚುತಿರೆ ದೂರದಲಿ ಮತ್ತೆ ದೀಪಗಳು,
ಬೆಚ್ಚನೆಯ ಬೆಳಕಿನಲಿ ಮತ್ತೆ ಕನಸುಗಳು. 

 

ತಾಯೆ ನಿನ್ನ ಕಂದನಾದೆನಲ್ಲ / Taaye ninna kandanaadenalla

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ
ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ !

ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು
ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು
ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ
ಅಂಬರದಲಿ ಮಿಂಚಿದೆ ನಿನ್ನ ಕೈಯ ಶಸ್ತ್ರ.

ರಾಮಕೃಷ್ಣರನ್ನು ತೊಡೆಯಲಾಡಿಸಿದಾ ಮಾತೆ
ವ್ಯಾಸ ಭಾಸ ಜನಕ ಕಾಳಿದಾಸ ಜನ್ಮದಾತೆ
ರಾಮಾಯಣ ಭಾರತ ನೀನಾಡಿದ ಮಾತು
ಬೆರಗಿನಿಂದ ಆಲಿಸಿದೆ ಲೋಕ ಅವಕೆ ಸೋತು.

ನಿನ್ನ ದಿವ್ಯರೂಪ ತೇಜ ಗಾಂಭೀರ್ಯದ ಭಾವ
ವಿಶ್ವದಲ್ಲೆ ಎಲ್ಲಿದೆ ಇಂಥ ಹಿರಿಯ ಜೀವ
ಪ್ರೀತಿ ಸಹನೆ ಸ್ನೇಹದಲ್ಲಿ ಯಾರು ನಿನಗೆ ಸಮವೆ?
ಅದಕೆ ಕರಗಿ ಗಂಗೆಯಾಯ್ತು ಕೈಲಾಸದ ಹಿಮವೆ.


ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ / ninna hoobanadalli maali

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ
ಕನ್ನಯ್ಯಾ, ಓ ಕನ್ನಯ್ಯಾ,
ನಿನ್ನ ಶ್ರೀಚರಣಗಳ ಹಾದಿ ಬೆಳೆಸುವೆ ವನವ
ಕನ್ನಯ್ಯಾ, ನನ್ನ ಕನ್ನಯ್ಯಾ.

ಕನಕಾಂಬರೀ  ಬಣ್ಣದ ಸೀರೆಯನ್ನುಡುವೆ,
ಬಣ್ಣ ಬಣ್ಣದ ಗಿಡವ ಪಾತಿಯಲಿ ನೆಡುವೆ,
ಸೇವೆಯಾನಂದವೇ ಕೂಲಿ ನನಗೆನುವೆ,
ಹೂ ಬೆಳೆಸಿದುದೆ ಭಾರಿ ಜಹಗೀರಿ ಎನುವೆ.

ನವಿಲುಗರಿಯ ಕಿರೀಟ, ಪೀತಾಂಬರ,
ಮುಗಿಲ ನೀಲಿಯ ಎದೆಗೆ ಮಿಂಚಿನ ಸರ;
ಭಾವಬಂಗಾರ ಓ ಕೃಷ್ಣಲಾಲ,
ಹೇಗೆ ಅರಿಯಲೊ ನಿನ್ನ ಪ್ರೇಮಜಾಲ.

ಸಾಧುಜನ ದಿನವು ಬೃಂದಾವನಕ್ಕೆ
ಸಾಗುವರು ಕೃಷ್ಣನನು ಕಾಣಲಿಕ್ಕೆ;
ಮೀರಳಾ ಹೃದಯವೇ ಬೃಂದಾವನ,
ಸಿಗುವನೋ ಗಿರಿಧರ ಬಯಸಿದ ಕ್ಷಣ.

ಹಿಂದೆ ಹೇಗೆ ಚಿಮ್ಮುತಿತ್ತು!! / Hinde hege chimmutittu

ಹಿಂದೆ ಹೇಗೆ ಚಿಮ್ಮುತಿತ್ತು
ಕಣ್ಣ ತುಂಬ ಪ್ರೀತಿ !
ಈಗ ಯಾಕೆ ಜ್ವಲಿಸುತ್ತಿದೆ
ಏನೋ ಶಂಕೆ ಭೀತಿ !

ಜೇನು ಸುರಿಯುತಿತ್ತು ನಿನ್ನ
ದನಿಯ ಧಾರೆಯಲ್ಲಿ,
ಕುದಿಯುತಿದೆ ಈಗ ವಿಷ
ಮಾತು ಮಾತಿನಲ್ಲಿ.

ಒಂದು ಸಣ್ಣ ಮಾತಿನಿರಿತ
ತಾಳದಾಯ್ತೆ ಪ್ರೇಮ ?
ಜೀವವೆರಡು ಕೂಡಿ ಉಂಡ
ಸ್ನೇಹವಾಯ್ತೆ ಹೋಮ ?

ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಹೋಳು,
ಕೂಡಿಕೊಳಲಿ ಮತ್ತೆ ಪ್ರೀತಿ
ತಬ್ಬಿಕೊಳಲಿ ತೋಳು.

ಬಂದೇ ಬರತಾವ ಕಾಲ... / Bande barataava kaala

ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂಥ ಮನಸನು
ಒಂದು ಮಾಡುವ ಸ್ನೇಹಜಾಲ
                              - ಬಂದೇ ಬರತಾವ ಕಾಲ

ಮಾಗಿಯ ಎದೆ ತೂರಿ
ಕೂಗಿತೊ ಕೋಗಿಲ,
ರಾಗದ ಚಂದಕೆ
ಬಾಗಿತೊ ಬನವೆಲ್ಲ,
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
                             - ಬಂದೇ ಬರತಾವ ಕಾಲ

ಹುಣ್ಣಿಮೆ ಬಾನಿಂದ
ತಣ್ಣನೆ ಸವಿಹಾಲು
ಚೆಲ್ಲಿದೆ ಮೆಲ್ಲನೆ
ತೊಯಿಸಿದೆ ಬುವಿಯನು
ಮುಸುಕಿದೆ ಮಾಯೆ ಜಗವನು
ಬುವಿ ಬಾನು ಸೇರಿ ಹರಸ್ಯಾವ ಬಾಳನು
                            - ಬಂದೇ ಬರತಾವ ಕಾಲ

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? / Amma emba maatiginta bere mantra

ಅಮ್ಮ ಎಂಬ ಮಾತಿಗಿಂತ 
ಬೇರೆ ಮಂತ್ರ ಎಲ್ಲಿದೆ ?
ಅದು ನೀಡುವ ಶಾಂತಿ ಕಾಂತಿ 
ಯಾವ ತಾರೆ ರವಿಗಿದೆ ?

ಹಾಲು ಕುಡಿಸಿ ಹೃದಯ ಬಿಡಿಸಿ 
ಪ್ರೀತಿ ಉಣಿಸಿ ಮನಸಿಗೆ 
ಬಾಳ ತೇದು ಮಕ್ಕಳಿಗೆ 
ಬೆರೆದಳಲ್ಲ ಕನಸಿಗೆ !

ಗಾಳಿಯಲ್ಲಿ ನೀರಿನಲ್ಲಿ 
ಮಣ್ಣು ಹೂವು ಹಸಿರಲಿ 
ಕಾಣದೇನು ಕಾಯ್ವ ಬಿಂಬ 
ಆಡುತಿರುವ ಉಸಿರಲಿ ?

ಮರೆವೆ ಹೇಗೆ ಹೇಳೆ ತಾಯೆ 
ನಿನ್ನೀ ವಾತ್ಸಲ್ಯವ ?
ಅರಿವೆ ಹೇಗೆ ಹೇಳೆ ತಾಯೆ 
ನಿನ್ನ ಪ್ರೀತಿ ಎಲ್ಲೆಯ ?

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ .. / Yaake heege beesuttirabeku gaali

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ 
ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ;
ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ
ನಗುವ ಯಾಕೆ ಯಮ ಜೀವಗಳೆಲ್ಲವ ಹೂಳಿ?

ಹೇಗೆ ಚಿಗುರುವುದು ಬೋಳು ಗಿಡದಿಂದ ಹಸಿರು 
ಹೇಗೆ ಸೇರುವುದು ದೇಹ ದೇಹದಲಿ ಉಸಿರು;
ಯಾವುದು ಈ ವಿಶ್ವವನೆ ಪೊರೆಯುವ ಬಸಿರು
ಚುಕ್ಕಿ ಸಾಲಿನಲಿ ಹೊಳೆಯುವುದದಾರ ಹೆಸರು?

ಯಾರು ಕರೆಸುವರು ತಪ್ಪದೆ ಪ್ರತಿದಿನ ಸೂರ್ಯನ 
ಯಾರು ಕಳಿಸುವರು ಬಾನಿಗೆ ಹುಣ್ಣಿಮೆ ಚಂದ್ರನ;
ಫಳ ಫಳ ಹೊಳೆಯುವ ತಾರೆಗೆ ಯಾರೋ ಕಾರಣ 
ಬುಗುರಿ ಆಡಿಸುವರಾರೋ ಭೂಮಿಯ ದಿನ ದಿನ ?

ಅದನು ಕಾಣುವ ಆಸೆಯು ಕಾಡಲಿ ಕಣ್ಣನು 
ಅದನೆ ಕೇಳುವ ಆಸೆಯು ಕವಿಯಲಿ ಕಿವಿಯನು 
ಅದನು ಅರಿಯುವ ಬಯಕೆಯು ಬರೆಸಲಿ ಹಾಡನು 
ಅದರೊಳು ಬೆರೆಯುವ ಹುಚ್ಚಿಗೆ ತಿನಿಸುವೆ ಬಾಳನು 

 

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ / banni bhaavagale banni nanndege

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ ||

ಬನ್ನಿ ಸ೦ಜೆ ಹೊಂಬಿಸಿಲಿನ ಹೊಳೆಯೊಳು
ಮೀಯುವ ಮುಗಿಲಿನಲಿ
ತವರಿನೆದೆಗೆ ತಂಪೆರೆಯುವ ಮೇಘದ
ಪ್ರೀತಿಯ ಧಾರೆಯಲಿ ||

ಲೋಕಕೆ ಹೊದಿಸಿದ ಕರಿತೆರೆ ಸರಿಸುವ
ಅರುಣೋದಯದಲ್ಲಿ
ಪಕ್ಷಕ್ಕೊಮ್ಮೆ ಬಿಳಿಪತ್ತಲ ನೇಯುವ
ಹುಣ್ಣಿಮೆ ಹಸ್ತದಲಿ ||

ಬನ್ನಿ ಬನ್ನಿ ನನ್ನೆದೆಯ ಬಯಲಿದು
ಬಿತ್ತದ ಕನ್ನೆನೆಲ
ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯ
ನಮಿಸುವೆ ನೂರು ಸಲ ||

ನಿಮ್ಮನೆ ಕನವರಿಸಿ
ನಿಮಗೇ ಮನವರಿಸಿ
ಕಾಯುತ್ತಿರುವೆನು ಕ್ಷಣಕ್ಷಣವೂ
ಎದೆಯನು ಹದಗೊಳಿಸಿ ||


ಬಾರೆ ನನ್ನ ದೀಪಿಕಾ / Baare nanna deepika

ಬಾರೆ ನನ್ನ ದೀಪಿಕಾ
ಮಧುರ ಕಾವ್ಯ ರೂಪಕ,
ಕಣ್ಣ ಮುಂದೆ ಸುಳಿಯೆ ನೀನು,
ಕಾಲದಾ ತೆರೆ ಸರಿದು ತಾನು,
ಜನುಮ ಜನುಮ ಜ್ಞಾಪಕ.

ನಿನ್ನ ಬೊಗಸೆಗಣ್ಣಿಗೆ,
ಕೆನ್ನೆ ಜೇನು ದೊನ್ನೆಗೆ,
ಸಮ ಯಾವುದೇ ಚೆನ್ನೆ ನಿನ್ನ
ಜಡೆ ಹರಡಿದ ಬೆನ್ನಿಗೆ?

ನಿನ್ನ ಕನಸು ಬಾಳಿಗೆ,
ಧೂಪದಂತೆ ಗಾಳಿಗೆ,
ಬೀಸಿ ಬರಲು ಜೀವ ಹಿಗ್ಗಿ,
ವಶವಾಯಿತೆ ದಾಳಿಗೆ.

ಮುಗಿಲ ಮಾಲೆ ನಭದಲಿ,
ಹಾಲು ಪೈರು ಹೊಲದಲಿ,
ರೂಪಿಸುತಿದೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ.

 

ಮಲಗೋ ಮಲಗೆನ್ನ ಮರಿಯೆ / Malago malagenna mariye

ಮಲಗೋ ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ,
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಬುವಿಗೆ?
ತಾವರೆದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು,
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ,
ನಿದ್ದೆಯ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು!
ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ,
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ,
ಚೆಲುವಲ್ಲಿ ಸಾಟಿಯೆ ಕಾಮ?
ತಿಮ್ಮಪ್ಪನಿಗೂ ಮೂರು ನಾಮ!

ಯಾವುದೀ ಹೊಸ ಸಂಚು / Yaavudee hosa sanchu

ಯಾವುದೀ ಹೊಸ ಸಂಚು
ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು?
ಗಿರಿಕಮರಿಯಾಳದಲಿ
ತೆವಳಿದ್ದ ಭಾವಗಳ
ಮುಗಿಲ ಮಂಚದೊಳಿಟ್ಟು ತೂಗುತಿಹುದು?

ಸತ್ತ ಬಾಳಿಗೆ ಮತ್ತೆ ಅಮೃತವೆರೆದು
ಕತ್ತಲಾಳಗಳಲ್ಲಿ ದೀಪವುರಿದು,
ಬಾಳು ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ
ಮೈಯ ಕಣಕಣದಲ್ಲೂ ಹಿಗ್ಗು ಉರಿದು.

ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ
ಕಲ್ಪವೃಕ್ಷದ ಹಣ್ಣು ಹಿಳಿದ ರುಚಿಯ?
ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ
ಉಳಿಯದೆಯೆ ಸರಿದೀತು ಎಂಬ ವ್ಯಥೆಯ?

ಬಾರೋ ವಸಂತ ಬಾರೋ ಬಾ... ಬಾರೋ

ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ ||

ಬಾರೋ ಸಂತನೆಗಳ ಕಳಚಿ
ಹೆಜ್ಜೆಗಳಿಗೆ  ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖ ದೃಶ್ಯವ ಸಲಿಸಿ ||

ಮೊಗಚುತ ನೆನ್ನೆಯ ದುಃಖಗಳ
ತೆಗೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ ||

ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿಶೀಲ ಹೊಸ ಹೆಜ್ಜೆಯಲಿ ||  

 

ಎಲ್ಲಿರುವೆ ಕಾಣಿಸದೆ ಕರೆವ ಕೊಳಲೇ.

ಎಲ್ಲಿರುವೆ ಕಾಣಿಸದೆ ಕರೆವ ಕೊಳಲೇ.
ಎಲ್ಲಿರುವೆ ಹೇಳು ನೀ ನಿಜದೆ ನೆರಳೇ.

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ.
ನಿಂತ ಎದೆ ಬನದಲ್ಲಿ ಚಿಂತೆ ಬರೆಯಲು ಯಾರ
ಎಸೆದ ಕೋಗಿಲೆಯ ದನಿ ಹರಡಿದಂತೆ.

ನಿನಗೆಂದೇ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ.
ಓಡಿ ಬಂದೆನು ಇದೋ ಪರಿವೆ ಇರದೆ
ಓಡಿ ಬರುವಂತೆ ನದಿ ಕಡಲ ಕರೆಗೆ.


ತೊರೆದು ಹೋಗದಿರೋ ಜೋಗಿ....

ತೊರೆದು ಹೋಗದಿರೋ ಜೋಗಿ.
ಅಡಿಗೆರಗಿದ ಈ ದೀನಳ ಮರೆತು,
ಸಾಗುವೆ ಏಕೆ ವಿರಾಗಿ.

ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ.
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ.

ಹೂಡುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ,
ಉರಿ ಸೋಕಿಸು ಪ್ರಭುವೇ,
ಚಿತೆಗೆ ಪ್ರೀತಿಯಿಂದ ನೀನೇ.

ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ.
ಮೀರಾಪ್ರಭು ಗಿರಿಧರನೇ, ಜ್ಯೋತಿಯು
ಜ್ಯೋತಿಯ ಸೇರಲಿ ಹೀಗೆ.

ಎಲ್ಲಿ ಜಾರಿತೋ ಮನವು...

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.

ದೂರದೊಂದು ತೀರದಿಂದ 
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ 
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...

 

ನನ್ನ ಇನಿಯನ ನೆಲೆಯ ಬಲ್ಲೆಯೇನೆ?

ನನ್ನ ಇನಿಯನ ನೆಲೆಯ ಬಲ್ಲೆಯೇನೆ?
ಹೇಗೆ ತಿಳಿಯಲಿ ಅದನು ಹೇಳೆ ನೀನೆ.

ಇರುವೆ ಸರಿಯುವ ಸದ್ದು,
ಮೊಗ್ಗು ಬಿರಿಯುವ ಸದ್ದು,
ಮಂಜು ಇಳಿಯುವ ಸದ್ದು ಕೇಳಬಲ್ಲ.
ನನ್ನ ಮೊರೆಯನು ಏಕೆ ಕೇಳಲೊಲ್ಲ.

ಗಿರಿಯ ಎತ್ತಲು ಬಲ್ಲ,
ಶರಧಿ ಬತ್ತಿಸಬಲ್ಲ,
ಗಾಳಿಗುಸಿರನೇ ಕಟ್ಟಿ ನಿಲಿಸಬಲ್ಲ.
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ.

ನೀರು ಮುಗಿಲಾದವನು,
ಮುಗಿಲು ಮಳೆಯಾದವನು,
ಮಳೆ ಬಿತ್ತು ತೆನೆ ಎತ್ತು ತೂಗುವವನು.
ನಲ್ಲೆ ಅಳಲನು ಏಕೆ ತಿಳಿಯನವನು.

ಯಾರು ಜೀವವೇ ಯಾರು ಬಂದವರು

ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ 
ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ ||

ಬಾನ ನೀಲಿಯಲಿ ಕರಿಬಿಳಿ ಬಣ್ಣದ ಗಾನ ಚಿಮ್ಮಿದವರು 
ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು || ಯಾರು ||

ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ ಬಿಡುವವರು 
ಮಣ್ಣಿನ ಮುಖದಲಿ ಹಸಿರಿನ ಸುಂದರ ಕಣ್ಣ ಬಿಡಿಸಿದವರು || ಯಾರು ||

ಯಾರು ಜೀವವೇ ಗಳಿಗೆ ಹಿಂದೆ ನನ್ನೆದೆಯಲಿ ಮೂಡಿದರು
ಯಾರು ಎಂದು ನಾ ತಿಳಿಯುವ ಮೊದಲೇ ಕಾಣದೆ ಸರಿದವರು || ಯಾರು ||

 

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ 
ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವೆಯಿತ್ತೇ.... ಗೆಳತಿ ||

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೆ 
ಅಮ್ಮನು ಬಡಿಸಿದ ಊಟದ ಸವಿಯು ಘಮ್ಮನೆ ಕಾಡಿತ್ತೆ
ಅಣ್ಣನ ಕೀಟಲೆ ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೆ || ||

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ ಸುಳ್ಳಿನ ಸೊಬಗಿತ್ತೆ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು ಬೆಲ್ಲವ ಮೀರಿತ್ತೆ 
ಸುಳ್ಳೇ ನೆರಿಗೆಯ ಚಿಮ್ಮುವ ನಡಿಗೆಗೆ ಬಳ್ಳಿಯ ಬೆಡಗಿತ್ತೆ || ||

ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ
ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೇ ||

                                                               - ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ


ಕಾಮೆಂಟ್‌ಗಳಿಲ್ಲ: