ಅಧ್ಯಾಯ-1
· ಶ್ಲೋಕ - 1
ಧೃತರಾಷ್ಟ್ರ
ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥
ಧೃತರಾಷ್ಟ್ರ ಉವಾಚ-
ಧೃತರಾಷ್ಟ್ರ ಕೇಳಿದನು:ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥೧॥
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾಃ ಯುಯುತ್ಸವಃ
ಮಾಮಕಾಃ ಪಾಂಡವಾಃ ಚ ಏವ ಕಿಮ್ ಅಕುರ್ವತ ಸಂಜಯ - ಧರ್ಮದ ತಾಣವಾದ ಕುರುಕ್ಷೇತ್ರದಲ್ಲಿ ಯುದ್ಧದ ಬಯಕೆಯಿಂದ ನೆರೆದ ನನ್ನವರು ಮತ್ತು ಪಾಂಡವರು ಏನು ಮಾಡಿದರು ಸಂಜಯನೆ ?
ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ 'ಜೀವದ' ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೆ ಏನೂ ಗೊತ್ತಿಲ್ಲ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ! ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಆರಂಭವಾಗುತ್ತದೆ.
ಕಣ್ಣು ಕಾಣದ ಧೃತರಾಷ್ಟ್ರ ದೂರದರ್ಶನ ಹಾಗು ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಪರಶುರಾಮನಿಂದ ಸಮಂತಪಂಚಕ (ಸುತ್ತಲೂ ಐದು ಸರೋಹರ) ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಈ ಯುದ್ಧ ಭೂಮಿ, ಆನಂತರ 'ಕುರು' ಎನ್ನುವ ರಾಜನ ಕಾಲದಲ್ಲಿ ಪರಮ ಧಾರ್ಮಿಕಕ್ಷೇತ್ರವಾಗಿ ಕುರುಕ್ಷೇತ್ರವಾಯಿತು. ಇದನ್ನೇ ಇಲ್ಲಿ "ಧರ್ಮಕ್ಷೇತ್ರೇ ಕುರುಕ್ಷೇತ್ರೇ" ಎಂದು ಸಂಬೋಧಿಸಿದ್ದಾರೆ. ನಮ್ಮ ಹೃದಯ-ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಮನಸ್ಸು(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ.
ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ ಕೇಳುತ್ತಾನೆ "ಹೋರಾಟ ಬಯಸಿ ಎದುರುಬದುರಾದ 'ನನ್ನವರು' ಮತ್ತು 'ಪಾಂಡವರು' ಏನು ಮಾಡಿದರು?" ಎಂದು. ಇಲ್ಲಿ 'ನನ್ನವರು ಮತ್ತು ಪಾಂಡವರು' ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ.
· ಶ್ಲೋಕ - 2
ಸಂಜಯ
ಉವಾಚ ।
ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥೨॥
ಸಂಜಯ ಉವಾಚ- ಸಂಜಯ
ಹೇಳುತ್ತಾನೆ:ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥೨॥
ದೃಷ್ಟ್ವಾ ತು ಪಾಂಡವ ಅನೀಕಮ್ ವ್ಯೂಢಮ್ ದುರ್ಯೋಧನಃ ತದಾ ಆಚಾರ್ಯಮ್ ಉಪಸಂಗಮ್ಯ ರಾಜಾ ವಚನಮ್ ಅಬ್ರವೀತ್- ಆಗ ದೊರೆಯಾದ ದುರ್ಯೋಧನ ಸಜ್ಜುಗೊಂಡ ಪಾಂಡವ ಪಡೆಯನ್ನು ಕಂಡು, ಆಚಾರ್ಯನತ್ತ ನಡೆದು ಮಾತನಾಡಿದನು.
ಈ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಇಲ್ಲಿ ಬಂದಿರುವ 'ಅನೀಕ' ಎನ್ನುವ ಪದದ ಅರ್ಥವನ್ನು ಸ್ವಲ್ಪ ತಿಳಿದುಕೊಳ್ಳೋಣ. ನಿಮಗೆ ತಿಳಿದಂತೆ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ. ಅದರಲ್ಲಿ ಏಳು ಅಕ್ಷೋಹಿಣಿ ಪಾಂಡವರ ಕಡೆ ಹೋರಾಟ ಮಾಡಿದರೆ ಉಳಿದ ಸೈನ್ಯ ಕೌರವನ ಕಡೆಯದು. ಇಲ್ಲಿ ಅಕ್ಷೋಹಿಣಿ ಎನ್ನುವುದು ಸೇನೆಯ ಅತಿದೊಡ್ಡ ವಿಭಾಗ. ಹಿಂದಿನ ಕಾಲದಲ್ಲಿ ಸೇನೆಯನ್ನು ಒಂಬತ್ತು ವಿಭಾಗಗಳಾಗಿ ವಿಂಗಡಿಸುತ್ತಿದ್ದರು.
ಅವುಗಳೆಂದರೆ:
(೧) ಪತ್ತಿ: ಒಂದು ಆನೆ; ಒಂದು ರಥ; ಮೂರು ಕುದುರೆ ಹಾಗು ಐದು ಕಾಲಾಳುಗಳ ಒಂದು ತುಕಡಿ., (೨) ಸೇನಾಮುಖ: ಮೂರು ಪತ್ತಿ, (೩) ಗುಲ್ಮ: ಮೂರು ಸೇನಾ ಮುಖ, (೪) ಗಣ : ಮೂರು ಗುಲ್ಮ, (೫) ವಾಹಿನಿ : ಮೂರು ಗಣ, (೬) ಪೃತನಾ: ಮೂರು ವಾಹಿನಿ, (೭) ಚಮೂ: ಮೂರು ಪೃತನಾ, (೮) ಅನೀಕಿನಿ: ಮೂರು ಚಮೂ, (೯) ಅಕ್ಷೋಹಿಣಿ: ಹತ್ತು ಅನೀಕಿನಿ- ಅಂದರೆ 21870 ಆನೆಗಳು, 21870 ರಥ, 65610 ಕುದುರೆಗಳು, 1,09,350 ಕಾಲಾಳುಗಳು. (ಇಲ್ಲಿರುವ ಸಂಖ್ಯಾ ಚಮತ್ಕಾರವನ್ನು ಗಮನಿಸಿ: 2+1+8+7+0=18; 6+5+6+1+0=18; 1+0+9+3+5+0=18).
ಈ ಮೇಲಿನ ಲೆಕ್ಕಾಚಾರದಂತೆ ಒಂದು ಅನೀಕಿನಿ ಎಂದರೆ ಹತ್ತನೇ ಒಂದು ಅಕ್ಷೋಹಿಣಿ. ಅಂದರೆ 2187 ಆನೆಗಳು, 2187 ರಥ, 6561 ಕುದುರೆಗಳು, 1,09,35 ಕಾಲಾಳುಗಳು. ಇದು ಪಾಂಡವ ಸೇನೆಯ ಎಪ್ಪತ್ತನೇ ಒಂದು ಭಾಗ. ಯುದ್ಧ ಮಾಡುವಾಗ ಎಲ್ಲಾ ಹದಿನೆಂಟು ಅಕ್ಷೋಹಿಣಿ ಒಮ್ಮೆಗೆ ಸೇರಿ ಯುದ್ಧ ಮಾಡುವುದಿಲ್ಲ. ಒಂದು ತುಕಡಿ ಒಮ್ಮೆಗೆ ಒಂದು ನಿರ್ಧಿಷ್ಟ ವ್ಯೂಹ ರಚಿಸಿ ಹೋರಾಟ ಮಾಡುತ್ತಾರೆ. ವಿಶಿಷ್ಟವಾದ ವಿನ್ಯಾಸದಿಂದ( ವ್ಯೂಢಂ) ಶಿಸ್ತುಬದ್ಧವಾಗಿ ಸಜ್ಜಾಗಿ ನಿಂತ ಪಾಂಡವ ಸೇನೆಯ ಒಂದು 'ಅನೀಕ' ವನ್ನು ಕಂಡಾಗ ದುರ್ಯೋಧನನ ದುಗುಡ ಹೆಚ್ಚುತ್ತದೆ. ಇದು ಮಾನಸಿಕವಾಗಿ ಆತನಿಗಾಗುತ್ತಿರುವ ಮೊದಲ ಆಘಾತ. ಈ ಮಾನಸಿಕ ಸ್ಥಿತಿಯಲ್ಲಿ ಆತ ಆಚಾರ್ಯನ ಬಳಿ ಹೋಗುತ್ತಾನೆ. ಇಲ್ಲಿ ಆಚಾರ್ಯ ಅಂದರೆ ಗುರುಗಳಲ್ಲಿ ಹಿರಿಯರಾದ ದ್ರೋಣಾಚಾರ್ಯರು. ಅವರ ಬಳಿಗೆ ಹೋಗಿ ನಮಸ್ಕರಿಸಿ; ಶಿಷ್ಯನ ರೀತಿ ವರ್ತಿಸದೆ, ತಾನು ರಾಜ ಎನ್ನುವಂತೆ ಅಹಂಕಾರದಿಂದ ಆಡಬಾರದ ರೀತಿ ಮಾತನಾಡುತ್ತಾನೆ.
ಈ ಶ್ಲೋಕದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ. ಯುದ್ಧ ಭೂಮಿಗೆ "ತಾನು ಗೆದ್ದೇ ಗೆಲ್ಲುತ್ತೇನೆ” ಎಂದು ಬಂದಿದ್ದ ದುರ್ಯೋಧನ, ಪಾಂಡವರ ಒಂದು ಅನೀಕವನ್ನು ನೋಡಿದಾಕ್ಷಣ ಮಾನಸಿಕ ಅಸಮತೋಲನ ಹೊಂದುತ್ತಾನೆ. ಅದರಿಂದ ಆತ ಹೇಗೆ ತಳಮಳಗೊಂಡ ಎನ್ನುವುದನ್ನು ಈ ಶ್ಲೋಕದಲ್ಲಿ 'ದೃಷ್ಟ್ವಾತು(ಮೇಲಂತೂ)' ಎನ್ನುವಲ್ಲಿ ಒತ್ತಿ ಹೇಳಿದ್ದಾರೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಇದ್ದಾಗ್ಯೂ, ಪಾಂಡವರ ಒಂದು ಪುಟ್ಟ ಅನೀಕವನ್ನು ಕಂಡು ಮಾನಸಿಕವಾಗಿ ವಿಪ್ಲವನಾದ ದುರ್ಯೋಧನ, ಆಚಾರ್ಯ ದ್ರೋಣರಲ್ಲಿ ಹೋಗಿ ಹೇಗೆ ಅಹಂಕಾರದಿಂದ ಮಾತನಾಡಿದ ಎನ್ನುವುದು ಮುಂದಿನ ಶ್ಲೋಕ.
· ಶ್ಲೋಕ - 3
ಪಶ್ಯೈತಾಂ
ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್।
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ॥೩॥
ಪಶ್ಯ ಎತಾಮ್
ಪಾಂಡುಪುತ್ರಾಣಾಮ್ ಆಚಾರ್ಯ ಮಹತೀಮ್ ಚಮೂಮ್ ವ್ಯೂಢಾಮ್ ದ್ರುಪದಪುತ್ರೇಣ
ತವ ಶಿಷ್ಯೇಣ ಧೀ-ಮತಾ
-ನೋಡು ಆಚಾರ್ಯ, ಪಾಂಡು
ಪುತ್ರರ ಈ ದೊಡ್ಡ ದಂಡನ್ನು. ನಿನ್ನ ಜಾಣ ಶಿಷ್ಯ ದ್ರುಪದ ಪುತ್ರನಿಂದ
ಸಜ್ಜುಗೊಂಡಿದ್ದನ್ನು.ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ॥೩॥
ದುರ್ಯೋಧನ ಸೇನಾಧಿಪತಿ ಭೀಷ್ಮರ ಬಳಿ ಹೋಗದೆ, ದ್ರೋಣಾಚಾರ್ಯರ ಬಳಿ ಹೋಗಿ, ಭೀಷ್ಮಾಚಾರ್ಯರಿಗೆ ಕೇಳುವಂತೆ, ಆಚಾರ್ಯ ದ್ರೋಣರಲ್ಲಿ ನಂಜಿನ ಮಾತನ್ನಾಡುತ್ತಾನೆ. ಇಲ್ಲಿ ದ್ರೋಣನನ್ನು ದುರ್ಯೋಧನ "ಪಾಂಡವರ ಆಚಾರ್ಯ" ಎಂದು ಚುಚ್ಚಿ ಸಂಬೋಧಿಸುತ್ತಾನೆ. “ತನ್ನ ಪ್ರೀತಿಯ ಶಿಷ್ಯರು ಎಂದು ಉದಾರ ತೋರಬೇಡಿ” ಎನ್ನುವುದು ಆತನ ಈ ಮಾತಿನ ಅರ್ಥ.
ಪಾಂಡವರ ಸೇನಾಧಿಪತ್ಯವನ್ನು ದ್ರುಪದ ಪುತ್ರನಾದ ದೃಷ್ಟಧ್ಯಮ್ನ ವಹಿಸುರುತ್ತಾನೆ. ದ್ರುಪದ ಮತ್ತು ದ್ರೋಣರು ಬಾಲ್ಯ ಸ್ನೇಹಿತರು, ಆದರೆ ಕೆಲಕಾಲಾನಂತರ ದ್ರುಪದ ಸಿಂಹಾಸನವೇರುತ್ತಾನೆ. ಆ ಸಮಯದಲ್ಲಿ ಬಡ ಬ್ರಾಹ್ಮಣನಾದ ದ್ರೋಣ ತನ್ನ ಮಗನಿಗೆ ಹಾಲು ಕುಡಿಸಲು ಒಂದು ಹಸುವನ್ನು ಕೊಡು ಎಂದು ದ್ರುಪದನನ್ನು ಬಾಲ್ಯದ ಸಲಿಗೆಯಲ್ಲಿ ಕೇಳಿಕೊಂಡು ಬರುತ್ತಾನೆ. ಆದರೆ ದ್ರುಪದ "ನಿನಗೆ ನನ್ನನ್ನು ಸ್ನೇಹಿತ ಎಂದು ಕರೆಯುವ ಯೋಗ್ಯತೆ ಇಲ್ಲ, ನಾನು ರಾಜ, ಆದರೆ ನೀನೊಬ್ಬ ಬಡ ಬ್ರಾಹ್ಮಣ. ನನಗೂ ನಿನಗೂ ಏಂತಹ ಸ್ನೇಹ" ಎಂದು ಹೇಳಿ ಅಪಮಾನಗೊಳಿಸುತ್ತಾನೆ. ಇದೇ ದ್ವೇಷದಿಂದ ದ್ರೋಣಾಚಾರ್ಯರು ಕೌರವ-ಪಾಂಡವರ ಗುರುವಾಗಿ ಸೇರಿ, ಅವರ ವಿಧ್ಯಾಭಾಸ ಮುಗಿದ ಮೇಲೆ ಪಾಂಡವರಿಂದ ದ್ರುಪದನನ್ನು ಸೇರಿಹಿಡಿದು, ಆತನ ಅರ್ಧ ರಾಜ್ಯವನ್ನು ಕಿತ್ತುಕೊಂಡು, "ಈಗ ನಾನು ನಿನಗೆ ಸಮನಾಗಿದ್ದೇನೆ. ಈಗಲಾದರೂ ನನ್ನನ್ನು ಸ್ನೇಹಿತ ಎಂದು ಒಪ್ಪಿಕೊ" ಎನ್ನುತ್ತಾರೆ. ಇದೇ ಸೇಡಿನಿಂದ ದ್ರುಪದ ಒಂದು ಮಹಾಯಾಗವನ್ನು ಮಾಡಿ ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ವರವಾಗಿ ಪಡೆದು ಆತನನ್ನು ದ್ರೋಣಾಚಾರ್ಯರಲ್ಲೇ ವಿದ್ಯಾಭಾಸ ಮಾಡಿಸಿ, ತನ್ನ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿರುತ್ತಾನೆ. ಆತನೇ ದೃಷ್ಟಧ್ಯಮ್ನ-ಪಾಂಡವ ಸೇನಾಧಿಪತಿ.
ದುರ್ಯೋಧನ ದ್ರೋಣನನ್ನು ಕುರಿತು "ನಿಮ್ಮ ಶಿಷ್ಯ-ದ್ರುಪದ ಪುತ್ರ, ಅತೀ ಹತ್ತಿರದಲ್ಲಿ, ಶಿಸ್ತುಬದ್ಧವಾಗಿ ನಿರ್ಮಿಸಿರುವ ಸೇನಾ(ಚಮೂ) ವ್ಯೂಹವನ್ನು ನೋಡಿರಿ" ಎಂದು ಕುಹಕದಿಂದ ನುಡಿಯುತ್ತಾನೆ. ಇಲ್ಲಿ ಅಂತರಂಗದಲ್ಲಿ ಭಯಗೊಂಡ ದುರ್ಯೋಧನ ಕ್ಷಣಕ್ಷಣಕ್ಕೂ ಮಾಡುತ್ತಿರುವ ತಪ್ಪನ್ನು ಸೂಕ್ಷ್ಮವಾಗಿ ಗಮನಿಸಿ. ತಾನೇ ರಾಜನಾಗಬೇಕೆಂಬ ಆಸೆ, ಅದರಿಂದ ದ್ವೇಷ, ಅದರಿಂದ ಅಸೂಯೆ, ಅದರಿಂದ ಮಾನಸಿಕ ಸ್ಥಿಮಿತ ತಪ್ಪುವಿಕೆ, ಅದರಿಂದ ಮಾಡಬಾರದ್ದನ್ನು ಮಾಡುವುದು. ಇದು ನಾವು ದೈನಂದಿನ ಜೀವನದಲ್ಲಿ ಕಾಣುವ ಅತಿಸಾಮಾನ್ಯ ವಿಚಾರ. ಮನುಷ್ಯ ದಾರಿತಪ್ಪುವ ವಿವಿಧ ಹಂತಗಳಿವು.
· ಶ್ಲೋಕ - 4
ಅತ್ರ
ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ || ೪ ||
ಅತ್ರ ಶೂರಃ ಮಹಾ ಇಷು
ಆಸಾಃ ಭೀಮಾರ್ಜುನ ಸಮಾಃ ಯುಧಿ ಯುಯುಧಾನಃ ವಿರಾಟಃ ಚ ದ್ರುಪದಃ ಚ ಮಹಾ ರಥಃ -ಇಲ್ಲಿ ಎಲ್ಲರೂ ವೀರರು. ಹಿರಿಯ
ಬಿಲ್ಗಾರರು. ಕಾದುವಲ್ಲಿ ಭೀಮಾರ್ಜುನರಿಗೆ ಸಾಟಿಯಾದವರು. ಸಾತ್ಯಕಿ, ವಿರಾಟ ಮತ್ತು ದ್ರುಪದ ಕೂಡಾ ಹಿರಿಯ ತೇರಾಳು.ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ || ೪ ||
ಪಾಂಡವರ ಸೈನ್ಯವನ್ನು ನೋಡಿ ಮಾನಸಿಕವಾಗಿ ತಳಮಳಗೊಂಡ ದುರ್ಯೋಧನ ದ್ರೋಣಾಚಾರ್ಯರ ಬಳಿ ಹೋಗಿ ಪಾಂಡವ ಸೇನೆಯ ಬಗ್ಗೆ, ಅಲ್ಲಿರುವ ವೀರರ ಬಗ್ಗೆ ಮಾತನಾಡುತ್ತಾನೆ. ಸಾಮಾನ್ಯವಾಗಿ ನಮಗೆ ಯಾರ ಬಗ್ಗೆ ಭಯವಿದೆಯೋ, ಅವರೇ ಎಲ್ಲಾ ಕಡೆ ಕಂಡಂತೆ ಬಾಸವಾಗುತ್ತದೆ. ಕಂಸನಿಗೆ ಕೃಷ್ಣ ಕಾಣಿಸಿಕೊಂಡಂತೆ. ಇದು ಮನಃಶಾಸ್ತ್ರ. ಇಲ್ಲಿ ದುರ್ಯೋಧನನಿಗೆ ಭೀಮಾರ್ಜುನರ ಭಯ. ಆ ಭಯದಿಂದಲೇ ಹೇಳುತ್ತಾನೆ "ಅಲ್ಲಿರುವ ವೀರರೆಲ್ಲರೂ ಭೀಮಾರ್ಜುನರಿಗೆ ಸಮನಾದವರು. ಅಸಾಧಾರಣ ಬಿಲ್ಲನ್ನು ಹಿಡಿದು ಹೋರಾಡಿ ಗೆಲ್ಲಬಲ್ಲ ಮಹಾವೀರರು" ಎಂದು. ವಾಸ್ತವವಾಗಿ ಆಗಿನ ಕಾಲದಲ್ಲಿ ಇದ್ದ ಮಹಾಬಿಲ್ಲು ಎಂದರೆ ಗಾಂಢೀವ. ಗಾಂಢೀವ ಹಿಡಿದು ಯುದ್ಧ ಮಾಡಬಲ್ಲವರೆಂದರೆ ಅರ್ಜುನ-ಭೀಮ ಮತ್ತು ಶ್ರೀಕೃಷ್ಣ. ಈ ಸಂದರ್ಭದಲ್ಲಿ ದುರ್ಯೋಧನನಿಗೆ ಪಾಂಡವರ ಪಡೆಯಲ್ಲಿನ ಮಹಾವೀರರೆಲ್ಲರು ಭೀಮಾರ್ಜುನರಿಗೆ ಸಮನಾದ ಬಿಲ್ಗಾರರಾಗಿ ಕಾಣುತ್ತಾರೆ. ಇದು ದುರ್ಯೋಧನನ ಮನಃಸ್ಥಿತಿಯನ್ನು ಹೇಳುತ್ತದೆ.
ಮುಂದೆ ದುರ್ಯೋಧನ ಪಾಂಡವರ ಕಡೆಗಿನ ವೀರರ ಹೆಸರನ್ನು ಒಂದೊಂದಾಗಿ ಹೇಳಲಾರಂಭಿಸುತ್ತಾನೆ. “ಸಾತ್ಯಕಿ, ವಿರಾಟ, ದ್ರುಪದರಂತಹ ಮಹಾರಥರು ಪಾಂಡವ ಸೇನೆಯಲ್ಲಿದ್ದಾರೆ” ಎನ್ನುತ್ತಾನೆ. ಇಲ್ಲಿ ಈ ಮೂರು ಹೆಸರು ಬರಲು ವಿಶೇಷ ಕಾರಣವಿದೆ. ಈ ಮೂವರೂ ಕೂಡಾ ಕೌರವನ ಕಡೆಗೆ ಬರಬೇಕಾಗಿತ್ತು. ಜರಾಸಂಧನೊಡನಿದ್ದು, ಕೃಷ್ಣನ ವಿರುದ್ಧ ಹೋರಾಡಿದ್ದ ದ್ರುಪದನನ್ನು ಹಿಂದೆ ಪಾಂಡವರು ಬಂಧಿಸಿ, ಅವನ ಅರ್ಧರಾಜ್ಯವನ್ನು ಕಿತ್ತುಕೊಂಡು ದ್ರೋಣನಿಗೆ ಕೊಟ್ಟ ವಿಷಯ ಈ ಹಿಂದೆ ನೋಡಿದ್ದೇವೆ. ಆದರೆ ಪಾಂಡವರಿಗೆ ದ್ರೌಪದಿಯನ್ನು ಕೊಟ್ಟು ಸಂಬಂಧ ಬೆಳೆಸಿದ ದ್ರುಪದ-ಪಾಂಡವರ ಪರ ನಿಂತ. ವಿರಾಟ ಈ ಹಿಂದೆ ಕೀಚಕನಿಗೆ ಹೆದರಿಕೊಂಡು ರಾಜ್ಯಭಾರ ಮಾಡುತ್ತಿದ್ದ. ಕೀಚಕನನ್ನು ಭೀಮ ಕೊಂದಿದ್ದರಿಂದ ವಿರಾಟ ಪಾಂಡವರ ಪಾಳಯವನ್ನು ಸೇರಿಕೊಂಡ. ಇನ್ನು ಬಲರಾಮನ ಆಣತಿಯನ್ನು ಮೀರದ ಸಾತ್ಯಕಿ. ಇಲ್ಲಿ ಬಲರಾಮ ‘ಯುದ್ಧದಲ್ಲಿ ತಾನು ತಲೆ ಹಾಕುವುದಿಲ್ಲ’ ಎಂದು ತೀರ್ಥಯಾತ್ರೆಗೆ ಹೊರಟು ಹೋಗಿರುವುದರಿಂದ ಸಾತ್ಯಕಿ ಕೂಡ ಪಾಂಡವರ ಪರ ನಿಂತ. ಹೀಗೆ ಈ ಪ್ರತಿಯೊಂದು ಹೆಸರನ್ನು ತೆಗೆದು ಹೇಳುತ್ತಿರುವ ದುರ್ಯೋಧನನಿಗೆ ಅಂತರಂಗದಲ್ಲಿ “ಅಯ್ಯೋ ನನ್ನ ಕಡೆ ಇರಬೇಕಾದ ಈ ಮಹಾರಥರು ಪಾಂಡವರ ಪಕ್ಷದಲ್ಲಿದ್ದಾರಲ್ಲ” ಎನ್ನುವ ನೋವಿದೆ. ಇದು ದುರ್ಯೋಧನನ ವಿಷಾದ! ಆತ ತನ್ನ ಯುದ್ಧತಂತ್ರವನ್ನು ರೂಪಿಸುವುದನ್ನು ಬಿಟ್ಟು, ಇಲ್ಲಿ ತನ್ನ ಕಡೆಗೆ ಬರಬೇಕಾಗಿದ್ದವರು ಪಾಂಡವರ ಕಡೆ ಸೇರಿದ್ದಾರಲ್ಲಾ ಎಂದು ವಿಷಾದಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾನೆ. ಇನ್ನೂ ಅನೇಕ ವೀರರ ಹೆಸರನ್ನು ದುರ್ಯೋಧನ ಪಟ್ಟಿ ಮಾಡುತ್ತಾನೆ.
· ಶ್ಲೋಕ - 5
ಧೃಷ್ಟಕೇತುಶ್ಚೇಕಿತಾನಃ
ಕಾಶಿರಾಜಶ್ಚ ವೀರ್ಯವಾನ್ ।
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ ॥೫॥
ಧೃಷ್ಟಕೇತುಃ
ಶ್ಚೇಕಿತಾನಃ ಕಾಶಿರಾಜಃ ಚ ವೀರ್ಯವಾನ್ ಪುರುಜಿತ್ ಕುಂತಿಭೋಜಃ ಚ ಶೈಬ್ಯಃ ಚ ನರಪುಂಗವಃ –ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಕೂಡಾ ಕಡುಗಲಿ. ಪುರುಜಿತನು, ಕುಂತಿಭೋಜನು,ಶೈಭ್ಯ ಕೂಡಾ ಗಂಡುಗಲಿ.ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ ॥೫॥
ಮೇಲ್ನೋಟಕ್ಕೆ ಈ ಶ್ಲೋಕದಲ್ಲಿ ನಾವು ಆರು ಮಂದಿ ವೀರರ ಹೆಸರನ್ನು ಕಾಣುತ್ತೇವೆ. ಆದರೆ ಇಲ್ಲಿ ನಾವು ನೋಡಬೇಕಾದದ್ದು ಕೇವಲ ಈ ಆರು ವ್ಯಕ್ತಿಗಳನ್ನಲ್ಲ. ಈ ವ್ಯಕ್ತಿಗಳ ಹೆಸರನ್ನು ಹೆಕ್ಕಿ ಹೇಳುತ್ತಿರುವ ದುರ್ಯೋಧನನ ಮನಃಸ್ಥಿತಿಯನ್ನು. ಆತನ ವೇದನೆಯನ್ನು. ಇಲ್ಲಿ ಬರುವ ಒಂದೊಂದು ವ್ಯಕ್ತಿಗಳ ಹಿಂದಿರುವ ಇತಿಹಾಸವನ್ನು ನೋಡಿದಾಗ ಮಾತ್ರ ಇದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೊದಲನೆಯದಾಗಿ ಧೃಷ್ಟಕೇತು. ಈತ ಶಿಶುಪಾಲನ ಮಗ. ಶಿಶುಪಾಲನನ್ನು ಕೃಷ್ಣ ರಾಜಸೂಯ ಯಜ್ಞದ ಕಾಲದಲ್ಲಿ ಕೊಂದಿದ್ದ. ಇಂತಹ ಶಿಶುಪಾಲನ ಮಗ ಇಂದು ಪಾಂಡವರ ಪಕ್ಷದಲ್ಲಿ! ಇದು ದುರ್ಯೋಧನನ ಸಂಕಟ. ಚೇಕಿತಾನ: ಈತ ಕೂಡ ಸಾತ್ಯಕಿಯಂತೆ ಒಬ್ಬ ಯಾದವ ವೀರ. ಬಲರಾಮನ ಅನುಪಸ್ಥಿತಿಯಿಂದಾಗಿ ಈತ ಪಾಂಡವರ ಪಾಳಯ ಸೇರಿದ್ದ. ಮುಂದೆ ದುರ್ಯೋಧನ ಕಾಶಿರಾಜನ ಹೆಸರನ್ನು ಹೇಳುತ್ತಾನೆ. ಇಲ್ಲಿ ಕಾಶಿರಾಜ ಎಂದಾಗ ನಮಗೆ ಇಬ್ಬರು ಕಾಶಿರಾಜರು ನೆನಪಿಗೆ ಬರುತ್ತಾರೆ. ಒಂದುಕಡೆ ಸಂಗಮವಾಗಿರುವ ಎರಡು ನದಿಗಳು ಕಾಶಿ ನಗರವನ್ನು 'ವರಣ' ಮತ್ತು 'ಅಸಿ' ಎನ್ನುವ ಎರಡು ಭಾಗವನ್ನಾಗಿ ವಿಂಗಡಣೆ ಮಾಡಿವೆ. ಅದೇ ಇಂದಿನ ವಾರಣಾಸಿ. ಈ ಎರಡು ಭಾಗದ ರಾಜರನ್ನು ಕಾಶಿರಾಜರೆಂದು ಕರೆಯುತ್ತಾರೆ. ಒಬ್ಬ ದುರ್ಯೋಧನನಿಗೆ ಹೆಣ್ಣುಕೊಟ್ಟ ಮಾವ, ಹಾಗು ಇನ್ನೊಬ್ಬ ಭೀಮಸೇನನಿಗೆ ಕಾಳಿಯನ್ನು ಕೊಟ್ಟು ಮದುವೆ ಮಾಡಿದವ. ಭಾಗಶಃ ಇಲ್ಲಿ ಬರುವ ಕಾಶಿರಾಜ ಭೀಮಸೇನನ ಮಾವ. ಏಕೆಂದರೆ ದುರ್ಯೋಧನನ ಮಾವ ಹಿಂದೆ ಪೌಂಡ್ರಿಕ ಯುದ್ದದಲ್ಲಿ ಕೃಷ್ಣಚಕ್ರದಿಂದ ಹತನಾಗಿದ್ದ. ಇಲ್ಲಿ ನಾವು ಸೂಕ್ಷ್ಮವಾಗಿ ನೋಡಿದಾಗ "ಅಯ್ಯೋ ಕಾಶಿರಾಜನೂ ಕೂಡಾ ಪಾಂಡವರ ಪರವಾಗಿ ಹೋರಾಟ ಮಾಡುತ್ತಿದ್ದಾನೆ. ನನ್ನ ಮಾವನಾದ ಕಾಶಿರಾಜ ಇಂದು ನನ್ನೊಂದಿಗಿಲ್ಲವಲ್ಲ" ಎನ್ನುವ ಕಳವಳ ದುರ್ಯೋಧನನನ್ನು ಕಾಡುತ್ತಿದೆ. ಈ ಮೂವರನ್ನು ದುರ್ಯೋಧನ 'ವೀರವಾನ್' ಎಂದು ಕರೆಯುತ್ತಾನೆ. ಇಲ್ಲಿ ವೀರವಾನ್ ಎಂದರೆ ಅಪಾರವಾದ ಶಕ್ತಿ ತುಂಬಿರುವ ಕಡುಗಲಿಗಳು.
ಮುಂದೆ ದುರ್ಯೋಧನ ಪುರುಜಿತ್, ಕುಂತಿಭೋಜ ಹಾಗು ಶೈಭ್ಯನ ಹೆಸರನ್ನು ಹೇಳುತ್ತಾನೆ. ಇಲ್ಲಿ ಪುರುಜಿತ್ ಮತ್ತು ಕುಂತಿಭೋಜ- ಕುಂತಿದೇಶದವರು. ಮೂಲತಃ ಕುಂತಿ ಯಾದವ ವಂಶದವಳು. ವಸುದೇವನ ಸಹೋದರಿ. ಆಕೆಯ ಮೂಲ ಹೆಸರು 'ಪ್ರಥು'. ಆಕೆಯನ್ನು ಕುಂತಿ ದೇಶದ ರಾಜ ದತ್ತು ಪಡೆದಿದ್ದ. ಈ ದತ್ತು ಸಂಬಂಧದಿಂದಾಗಿ ಪುರುಜಿತ್ ಮತ್ತು ಕುಂತಿಭೋಜ ಪಾಂಡವರ ಪರ ಸೇರಿಕೊಂಡಿದ್ದಾರೆ ಎನ್ನುವುದು ದುರ್ಯೋಧನನ ಅಳಲು. ಇನ್ನು ಶೈಭ್ಯ. ಈತ ಶಿಭಿ ದೇಶದ ರಾಜ. ಈತನ ಮಗ ಕಾಡಿನಲ್ಲಿದ್ದ ದ್ರೌಪದಿಯನ್ನು ಅಪಹರಿಸಲು ಜಯದ್ರತನಿಗೆ ಸಹಾಯ ಮಾಡಿದ್ದಕ್ಕಾಗಿ ಭೀಮಸೇನನಿಂದ ಕೊಲ್ಲಲ್ಪಟ್ಟಿದ. 'ಹೀಗಿದ್ದೂ ಕೂಡಾ ಶೈಭ್ಯ ಪಾಂಡವರ ಪಕ್ಷವನ್ನು ವಹಿಸಿದ್ದಾನೆ' ಎಂದು ದುರ್ಯೋಧನ ತನ್ನ ಮನದಾಳದ ಅಳಲನ್ನು ದ್ರೋಣರಲ್ಲಿ ಪರಿತಪಿಸುತ್ತಾನೆ! ಈ ಮೂವರನ್ನು ಆತ ನರಪುಂಗವರು ಎಂದು ಸಂಬೋಧಿಸುತ್ತಾನೆ. ನರಪುಂಗವ ಎಂದರೆ ಗೂಳಿಯಂತೆ ನೆಡಿಗೆಯುಳ್ಳ ಗಂಡುಗಲಿ. ಅವರ ನಡಿಗೆ ಹಾಗು ನೋಟ ವೈರಿಯ ಎದೆ ನಡುಗಿಸಬಲ್ಲುದು.
ಇಲ್ಲಿ ಮಾನಸಿಕ ತುಮುಲಕ್ಕೊಳಪಟ್ಟ ಒಬ್ಬ ವ್ಯಕ್ತಿ , ತನ್ನ ಹಿಂದಿನ ಘಟನೆಗಳನ್ನು ಮೆಲುಕುಹಾಕಿಕೊಂಡು, ಹೇಗೆ ಆತ್ಮಸ್ಥರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ಅದರಿಂದಾಗಿ ಹೇಗೆ ತನ್ನ ನಿಜವಾದ ಸಾಮರ್ಥ್ಯವನ್ನು ಮರೆತು ವರ್ತಿಸುತ್ತಾನೆ ಎನ್ನುವುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಇಂತಹ ಸ್ಥಿತಿಯಲ್ಲಿ ಯಾರೂ ಕೂಡ ಜಯವನ್ನು ಕಾಣಲಾರರು.
· ಶ್ಲೋಕ - 6
ಯುಧಾಮನ್ಯುಶ್ಚ
ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ ।
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥೬॥
ಯುಧಾಮನ್ಯುಃ ಚ
ವಿಕ್ರಾಂತ ಉತ್ತಮೌಜಾಃ ಚ ವೀರ್ಯ-ವಾನ್ ಸೌಭದ್ರಃ ದ್ರೌಪದೇಯಾಃ ಚ ಸರ್ವೇ ಏವ ಮಹಾರಥಾಃ - ಯುಧಾಮನ್ಯುವು
ಕೆಚ್ಚೆದೆಯವನು. ಉತ್ತಮೌಜ ಕೂಡಾ ಕಡುಗಲಿ. ಸುಭದ್ರೆಯ ಮಗ, ದ್ರೌಪದಿಯ ಮಕ್ಕಳು ಎಲ್ಲರೂ ನಿಶ್ಚಯವಾಗಿ
ಹಿರಿಯ ತೇರಾಳುಗಳೆ.ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥೬॥
ಪಾಂಡವ ಸೇನೆಯನ್ನು ಕಂಡು ಅಂತರಂಗದಲ್ಲಿ ಗಾಬರಿಗೊಂಡ ದುರ್ಯೋಧನನು, ಒಂದೇ ಮನೆಯಿಂದ ಬಂದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಾನೆ. ಯುಧಾಮನ್ಯು ಹಾಗು ಉತ್ತಮೌಜ ಇವರು ದ್ರುಪದನ ಇನ್ನಿಬ್ಬರು ಮಕ್ಕಳು. ಇವರನ್ನು ದುರ್ಯೋಧನ ವೀರ ನೆಡೆಯುಳ್ಳ ವಿಕ್ರಾಂತರು ಎಂದು ಸಂಬೋಧಿಸುತ್ತಾನೆ. ಇಷ್ಟೇ ಅಲ್ಲ ಆತ ಸುಭದ್ರೆಯ ಮಗ ಅಭಿಮನ್ಯು ಹಾಗು ಇನ್ನೂ ಪ್ರಾಯಪ್ರಭುದ್ದರಲ್ಲದ ಸುಮಾರು ಹದಿಮೂರರಿಂದ ಹದಿನೆಂಟು ಪ್ರಾಯದ ಐದು ಮಂದಿ ದ್ರೌಪದಿಯ ಮಕ್ಕಳನ್ನು ಮಹಾರಥರು ಎಂದು ಸಂಬೋಧಿಸುತ್ತಾನೆ!
ಇಲ್ಲಿ ಸ್ಪಷ್ಟವಾಗಿ ನಾವು ಕಂಡು ಕೊಳ್ಳಬೇಕಾದ ವಿಷಯವೆಂದರೆ, ಒಮ್ಮೆ ನಾವು ಭಯಕ್ಕೊಳಪಟ್ಟರೆ ನಮಗೆ ಹಗ್ಗ ಹಾವಿನಂತೆ ಕಾಣಲಾರಂಭಿಸುತ್ತದೆ. ಇಂತಹ ಸಂಧರ್ಭದಲ್ಲಿ ನಮ್ಮಲ್ಲಿರುವ ನಿಜವಾದ ಸಾಮರ್ಥ್ಯ ಕೂಡಾ ವ್ಯರ್ಥವಾಗುತ್ತದೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದೂ ಕೂಡ, ಯುದ್ಧಕ್ಕೆ ಮೊದಲು ತನ್ನ ಸೈನ್ಯವನ್ನು ಹುರಿದುಂಬಿಸುವುದನ್ನು ಬಿಟ್ಟು, ದುರ್ಯೋಧನ ಪಾಂಡವ ಸೈನ್ಯದಲ್ಲಿನ ವೀರರ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಆತನ ಮನಃಸ್ಥಿತಿಯನ್ನು ಸೂಚಿಸುತ್ತದೆ. ಆತ ಇಲ್ಲಿ ಹನ್ನೊಂದು ಮಂದಿ ವೀರರ ಹೆಸರನ್ನು ಹೇಳಿರುವುದನ್ನು ನಾವು ಗಮನಿಸಬೇಕು(ಸಾತ್ಯಕಿ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ,ಶೈಭ್ಯ, ಯುಧಾಮನ್ಯು ಹಾಗು ಉತ್ತಮೌಜ). ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಪ್ರತಿನಿಧಿಸುವ ವೀರರಿದ್ದರೂ ಕೂಡ, ಆತನಿಗೆ ಏಳು ಅಕ್ಷೋಹಿಣಿ ಸೈನ್ಯವಿರುವ ಪಾಂಡವ ಸೈನ್ಯದಲ್ಲಿ ಹನ್ನೊಂದು ಮಂದಿ ವೀರರು ಎದ್ದು ಕಾಣಲಾರಂಭಿಸುತ್ತಾರೆ! ಭಗವಂತನನಿಂದ ದೂರ ನಿಂತ ಅಧರ್ಮಿಯಾದ ಪ್ರತಿಯೊಬ್ಬರ ಪಾಡು ಇಷ್ಟೇ. ಅವರು ಎಂದೆಂದೂ ಅಂತರಂಗದ ಭಯದಲ್ಲೇ ಬದುಕುತ್ತಾರೆ ಹಾಗು ಆ ಭಯವನ್ನು ಮುಚ್ಚಿಡಲು ಇಲ್ಲ ಸಲ್ಲದ ಮಾತನ್ನಾಡುತ್ತಾರೆ. ಒಬ್ಬ ದುಷ್ಟ ಕೆಟ್ಟದಾಗಿ ಗೌರವವಿಲ್ಲದೆ ಮಾತನಾಡುತ್ತಿದ್ದಾನೆ ಎಂದರೆ ಆತ ಅಂತರಂಗದಲ್ಲಿ ತುಂಬಾ ಭಯಭೀತನಾಗಿದ್ದಾನೆ ಎಂದರ್ಥ. ಅಂತವರಲ್ಲಿ ಎಷ್ಟೇ ಶಕ್ತಿ ಇದ್ದರೂ ಕೂಡಾ ಅದು ಎಂದೂ ಅವರ ರಕ್ಷಣೆ ಮಾಡಲಾರದು. ಏಕೆಂದರೆ ಅವರಿಗೆ ತಮ್ಮ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿರುವುದಿಲ್ಲ. ಇದು ಇಲ್ಲಿ ನಾವು ಕಂಡುಕೊಳ್ಳಬೇಕಾದ ಮನಃಶಾಸ್ತ್ರ.
· ಶ್ಲೋಕ - 7
ಅಸ್ಮಾಕಂ
ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ ।
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥೭॥
ಅಸ್ಮಾಕಮ್ ತು
ವಿಶಿಷ್ಟಾಃ ಯೇ ತಾನ್ ನಿಬೋಧ ದ್ವಿಜ ಉತ್ತಮ ನಾಯಕಾಃ ಮಮ ಸೈನ್ಯಸ್ಯ ಸಂಜ್ಞಾ ಅರ್ಥಮ್ ತಾನ್ ಬ್ರವೀಮಿ ತೇ - ಓ
ದ್ವಿಜೋತ್ತಮ, ನಮ್ಮ
ಕಡೆಯ ಹೆಚ್ಚಾಳುಗಳು, ನನ್ನ
ಪಡೆಯ ಮುಂದಾಳುಗಳು ಯಾರಿದ್ದಾರೆ. ಅವರ ಬಗೆಗೆ ಕೇಳು. ನಿನ್ನ ಸನ್ನೆಗೆಂದು ಅವರನ್ನು
ಹೆಸರಿಸುತ್ತಿದ್ದೇನೆ.ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥೭॥
ಒಬ್ಬ ವೀರನಾದವನು ತನ್ನ ಶಕ್ತಿ-ಸಾಮರ್ಥ್ಯ ಕಡಿಮೆ ಇದ್ದರೂ ಕೂಡಾ ಯುದ್ಧಕಾಲದಲ್ಲಿ ಯುಕ್ತಿಯಿಂದ ಕಾರ್ಯ ನಿರ್ವಹಿಸುತ್ತಾನೆ. ಮುಂದಾಳುವಾದವನು ತನ್ನ ಸೈನ್ಯವನ್ನು, ತನ್ನ ಹಿಂಬಾಲಕರನ್ನು ಹುರಿದುಂಬಿಸುತ್ತಾನೆ. ತಾವು ಶತ್ರು ಸೈನ್ಯಕ್ಕಿಂತ ಶಕ್ತರು ಎನ್ನುವ ಆತ್ಮವಿಶ್ವಾಸವನ್ನು ತನ್ನ ಸೈನ್ಯದಲ್ಲಿ ತುಂಬುತ್ತಾನೆ. ಆದರೆ ಇಲ್ಲಿ ದುರ್ಯೋಧನ ತನ್ನ ಸೇನಾಧಿಪತಿ ಭೀಷ್ಮರಲ್ಲಿ ಪರಾಮಾರ್ಷೆ ಮಾಡುವುದನ್ನು ಬಿಟ್ಟು, ಆಚಾರ್ಯ ದ್ರೋಣರಲ್ಲಿ ಶತ್ರು ಸೈನ್ಯದ ವೀರರ ಬಗ್ಗೆ ವಿಶಿಷ್ಟವಾಗಿ ಮಾತನಾಡಿ, 'ನಿಮ್ಮ ಸನ್ನೆಗೆಂದು ನಮ್ಮ ಸೈನ್ಯದ ಮುಂದಾಳುಗಳ ಬಗ್ಗೆ ಹೇಳುತ್ತೇನೆ' ಎನ್ನುತ್ತಾನೆ!
· ಶ್ಲೋಕ - 8
ಭವಾನ್
ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥೮॥
ಭವಾನ್ ಭೀಷ್ಮಃ ಚ ಕರ್ಣಃ
ಚ ಕೃಪಃ ಚ ಸಮಿತಿಮ್ ಜಯಃ ಅಶ್ವತ್ಥಾಮಾ ವಿಕರ್ಣಃ ಚ ಸೌಮದತ್ತಿಃ ತಥಾ ಏವ ಚ- ಪೂಜ್ಯನಾದ ನೀನು,
ಭೀಷ್ಮ ಮತ್ತು ಕರ್ಣ,
ಕೃಪ ಕೂಡಾ ಗೆಲುಗಾರ. ಅಶ್ವತ್ಥಾಮಾ
ಮತ್ತು ವಿಕರ್ಣ; ಸೋಮದತ್ತನ
ಮಗ ಭೂರಿಶ್ರವ ಕೂಡಾ.ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥೮॥
ಪಾಂಡವ ಸೇನೆಯಲ್ಲಿ-ಸೇನಾಧಿಪತಿ, ಹನ್ನೊಂದು ಮಂದಿ ಮಹಾ ವೀರರು ಹಾಗು ಪಾಂಡವರ ಆರು ಮಂದಿ ಮಕ್ಕಳ ವೀರತ್ವವನ್ನು ವಿವರಿಸಿದ ದುರ್ಯೋಧನನಿಗೆ, ತನ್ನ ಕಡೆಯಲ್ಲಿರುವ ವೀರರು ಕಾಣಿಸುವುದೇ ಇಲ್ಲ! ಇಲ್ಲಿ ಆತ ಕುಹಕವಾಗಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಹೇಳುತ್ತಾನೆ. 'ಭವಾನ್' ಅಂದರೆ ತಾವು(ಪಾಂಡವರ ಆಚಾರ್ಯರು ಎನ್ನುವಂತೆ !); ಯುದ್ಧಕ್ಕೆ ಮೊದಲು ಧರ್ಮರಾಯನಿಗೆ ಜಯವಾಗಲಿ ಎಂದು ಆಶೀರ್ವಾದ ಮಾಡಿದ ಭೀಷ್ಮಾಚಾರ್ಯ! ; ‘ಭೀಷ್ಮ ಯುದ್ಧಭೂಮಿಯಲ್ಲಿ ಇರುವ ತನಕ ತಾನು ಹೋರಾಟ ಮಾಡುವುದಿಲ್ಲ' ಎಂದು ಶಪತಮಾಡಿ ಕುಳಿತ ಕರ್ಣ; ವೇದ ಪಾರಾಂಗತ ಆಚಾರ್ಯ ಕೃಪಾ; ವಿಕ್ಷಿಪ್ತ ಮನಸ್ಸಿನ ಅಶ್ವತ್ಥಾಮ; ದ್ರೌಪದಿಯ ಮಾನಭಂಗವನ್ನು ಖಂಡಿಸಿ ಅದರಿಂದ ಲಾಭ ಪಡೆಯಲೆತ್ನಿಸಿದ ವಿಕರ್ಣ; ದಾಕ್ಷಿಣ್ಯಕ್ಕಾಗಿ ಬಂದ ಭೀಷ್ಮಾಚಾರ್ಯರ ತಂದೆ-ಶಂತನುವಿನ ಅಣ್ಣನ ಮಗ-ಸೋಮದತ್ತನ ಮಗ ಭೂರಿಶ್ರವ! ಈ ರೀತಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಕುಹಕವಾಗಿ ದುರ್ಯೋಧನ ಭೀಷ್ಮಾಚಾರ್ಯರಿಗೆ ಕೇಳಿಸುವಂತೆ ದ್ರೋಣಾಚಾರ್ಯರಲ್ಲಿ ಹೇಳುತ್ತಾನೆ.
ಇಲ್ಲಿ ನಾವು ವಿವರವಾಗಿ ನೋಡಿದರೆ ಕೌರವನ ಕಡೆಯಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಮುನ್ನೆಡೆಸಬಲ್ಲ ವೀರರಿದ್ದರು. ಆತನ ತೊಬತ್ತೊಂಬತ್ತು ಮಂದಿ ತಮ್ಮಂದಿರರಿದ್ದರು. ಶಲ್ಯ ಭಗದತ್ತರಂತಹ ವೀರಾದಿವೀರರು ದುರ್ಯೋಧನನ ಕಡೆಗಿದ್ದರು. ಆದರೆ ಪಾಂಡವರ ಸೈನ್ಯವನ್ನು ನೋಡಿ ಭಯಗೊಂಡು, ಇದನ್ನೆಲ್ಲವನ್ನು ಮರೆತ ದುರ್ಯೋಧನ, ತನ್ನ ಕಡೆ ಇರುವ ಮಹಾ ವೀರರ ಬಗೆಗೆ ಕೇವಲವಾಗಿ ಮಾತನಾಡುತ್ತಾನೆ! ಇಲ್ಲಿ ಮಾನಸಿಕವಾಗಿ ದುರ್ಯೋಧನ ಎಷ್ಟೊಂದು ವಿಚಲಿತನಾಗಿದ್ದ ಎನ್ನುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಯುದ್ಧ ಪರಿಣಾಮದ ಬಗ್ಗೆ ಯೋಚಿಸುತ್ತ, ಆತ ತನ್ನ ಕರ್ತವ್ಯವನ್ನೇ ಮರೆತಿದ್ದ!
· ಶ್ಲೋಕ - 9
ಅನ್ಯೇ
ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ ।
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೯॥
ಅನ್ಯೇ ಚ ಬಹವಃ ಶೂರಾಃ
ಮತ್ ಅರ್ಥೇ ತ್ಯಕ್ತ ಜೀವಿತಾಃ ನಾನಾ ಶಸ್ತ್ರ ಪ್ರಹರಣಾಃ ಸರ್ವೇ ಯುದ್ಧ ವಿಶಾರದಾಃ - 'ಇನ್ನೂ ಬಹಳ ಮಂದಿ ವೀರರಿದ್ದಾರೆ. ನನಗಾಗಿ
ಬದುಕು ತೆರಲು ಬಂದವರು.
ಬಗೆಬಗೆಯ ಆಯುಧಗಳಿಂದ ಹೋರಬಲ್ಲವರು. ಎಲ್ಲರೂ ಕಾಳಗದಲ್ಲಿ ಪಳಗಿದವರು.ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥೯॥
ಮೇಲ್ನೋಟಕ್ಕೆ ಈ ಶ್ಲೋಕವನ್ನು ನೋಡಿದರೆ ನಮಗೆ ದುರ್ಯೋಧನ ತನ್ನ ಕಡೆಯ ವೀರರ ಬಗ್ಗೆ ಹೇಳುತ್ತಿರುವಂತೆ ಕಂಡರೂ ಕೂಡಾ, ಇಲ್ಲಿ ಆತ ಹೇಳುತ್ತಿರುವ ವಿಷಯವೇ ಬೇರೆ. ಆತ ಈ ಮಾತನ್ನು ದ್ರೋಣರಲ್ಲಿ ಹೇಳುತ್ತಿದ್ದಾನೆ, ಹಾಗು ಆತ ತನ್ನ ಮಾತನ್ನು ಆರಂಭಿಸಿದ್ದು "ಪಾಂಡವರ ಆಚಾರ್ಯರೇ" ಎಂದು. ಇಲ್ಲಿ ಆತ- ನಮ್ಮ ಕಡೆ ಅನೇಕ ಶೂರರಿದ್ದಾರೆ, 'ಎಲ್ಲರೂ ತಮ್ಮ ಪ್ರಾಣ ಕೊಡಲು ಬಂದವರು' ಎಂದು ಕುಹಕದಿಂದ ಹೇಳುತ್ತಿದ್ದಾನೆ. ಅವರೆಲ್ಲರೂ ವಿವಿಧ ಶಸ್ತ್ರಗಳನ್ನು ಪ್ರಯೋಗಿಸಬಲ್ಲರು ಎನ್ನುವ ದುರ್ಯೋಧನ, ತನ್ನ ಪಾಲಿಗೆ ಯಾರೂ ಇಲ್ಲ ಎನ್ನುವ ಭಾವನೆಯನ್ನು ವ್ಯಕ್ತಪಡಿಸುತ್ತಾನೆ.
· ಶ್ಲೋಕ - 10
ಅಪರ್ಯಾಪ್ತಂ
ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥೧೦॥
ಅಪರ್ಯಾಪ್ತಮ್ ತತ್
ಅಸ್ಮಾಕಮ್ ಬಲಮ್ ಭೀಷ್ಮ ಅಭಿರಕ್ಷಿತಮ್ ಪರ್ಯಾಪ್ತಮ್ ತು ಇದಮ್ ಏತೇಷಾಮ್ ಬಲಮ್ ಭೀಮ
ಅಭಿರಕ್ಷಿತಮ್-ಭೀಷ್ಮಾಚಾರ್ಯರ ಕಣ್ಗಾಪಿನ ಆ ನಮ್ಮ ಸೇನೆಯ ಸಜ್ಜು ಸಾಲದು. ಭೀಮನ ಕಣ್ ಗಾಪಿನ ಇವರ ಈ ಸೇನೆಯೋ
ಸಾಕಷ್ಟು ಸಿದ್ಧಗೊಂಡಿದೆ.ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥೧೦॥
ಇಲ್ಲಿ ದುರ್ಯೋಧನನ ಮಾತಿನ ಪರ್ಯಾವಸಾನ(Conclusion)ವಿದೆ . ಆತ ಹೇಳುತ್ತಾನೆ “ಆ ನಮ್ಮ ಸೈನ್ಯವಿದೆಯಲ್ಲ, ಪಾಂಡವ ಪಕ್ಷಪಾತಿ ಭೀಷ್ಮಾಚಾರ್ಯರ ಮುಂದಾಳತ್ವದಲ್ಲಿನ ಆ ನಮ್ಮ ಸೈನ್ಯ, ಅದು ಭೀಮನ ಕಣ್ಗಾಪಿನ ಈ ಸೈನ್ಯದ ಮುಂದೆ ಸಜ್ಜಾಗಿರುವುದು ಸಾಲದು” ಎಂದು. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ ಭೀಷ್ಮಾಚಾರ್ಯರು ಕೌರವ ಸೇನಾಧಿಪತಿ. ಆದರೆ ಭೀಮ ಪಾಂಡವ ಸೇನಾಧಿಪತಿ ಅಲ್ಲ. ದುರ್ಯೋಧನನಿಗೆ ಭೀಮನ ಮೇಲೆ ದ್ವೇಷವಿದೆ ಹಾಗು ಭಯವಿದೆ. ಆ ಕಾರಣದಿಂದ ಆತ ಭೀಮನ ಕಣ್ಗಾಪಿನ ಪಾಂಡವ ಸೇನೆ ಎಂದು ಸಂಬೋಧಿಸುತ್ತಾನೆ. ಇನ್ನೂ ಸೂಕ್ಷ್ಮವಾಗಿ ನೋಡಿದರೆ- ದುರ್ಯೋಧನ ಯುದ್ಧ ಭೂಮಿಯಲ್ಲಿ ತನ್ನ ಸೇನೆಯ ಮುಂಚೂಣಿಯಲ್ಲಿ ನಿಂತಿದ್ದಾನೆ. ಪಾಂಡವ ಸೇನೆ ಆತನಿಂದ ದೂರದಲ್ಲಿದೆ. ಆದರೆ ಮಾತನಾಡುವಾಗ ಆತ "ಈ ಪಾಂಡವ ಸೇನೆ" ಹಾಗು "ಆ ನಮ್ಮ ಸೇನೆ" ಎಂದು ಸಂಬೋಧಿಸುತ್ತಾನೆ. ಪಾಂಡವ ಸೇನೆ ಈಗಾಗಲೇ ತನ್ನ ಹತ್ತಿರ ಬಂದು ನಿಂತಿದೆ ಹಾಗು ತನ್ನ ಸೇನೆ ತನ್ನಿಂದ ಬಲು ದೂರದಲ್ಲಿದೆ ಎನ್ನುವಂತೆ ಆತ ಮಾತನಾಡುತ್ತಿದ್ದಾನೆ.
· ಶ್ಲೋಕ - 11
ಅಯನೇಷು
ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥೧೧॥
ಅಯನೇಷು ಚ ಸರ್ವೇಷು ಯಥಾ
ಭಾಗಮ್ ಅವಸ್ಥಿತಾಃ ಭೀಷ್ಮಮ್ ಏವ ಅಭಿರಕ್ಷಂತು ಭವಂತಃ ಸರ್ವೇ ಏವ ಹಿ- ಆಯಕಟ್ಟಿನ ಎಲ್ಲೆಡೆಗಳಲ್ಲೂ
ತಕ್ಕಂತೆ ಹಂಚಿಕೊಂಡು, ಕಾವಲು ನಿಂತು-ನೀವೆಲ್ಲರೂ
ಭೀಷ್ಮನನ್ನೇ ಕಾಯುತ್ತಿರಬೇಕು.ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥೧೧॥
“ಆಯಕಟ್ಟಿನ ಎಲ್ಲೆಡೆಗಳಲ್ಲೂ ತಕ್ಕಂತೆ ಹಂಚಿಕೊಂಡು ಕಾವಲು ನಿಂತು ನೀವೆಲ್ಲರೂ ಭೀಷ್ಮರನ್ನು ಕಾಯುತ್ತಿರಬೇಕು” ಎಂದು ದುರ್ಯೋಧನ ದ್ರೋಣರನ್ನುದ್ದೇಶಿಸಿ ಮಾತನಾಡುತ್ತಾನೆ. ಇಲ್ಲಿ "ಸ್ವಲ್ಪ ನಮ್ಮ ಮುದುಕ ಸೇನಾಧಿಪತಿ ಭೀಷ್ಮಾಚಾರ್ಯರನ್ನು ನೋಡಿಕೊಳ್ಳಿ" ಎನ್ನುವಂತಿದೆ ಆತನ ಮಾತು. ಆತನಿಗೆ ತನ್ನ ಸೇನಾಧಿಪತಿಯ ಮೇಲೇ ನಂಬಿಕೆ ಇಲ್ಲ!
ಈ ಮಾತನ್ನು ಕೇಳಿ ಭೀಷ್ಮಾಚಾರ್ಯರಿಗೆ ಅದೆಷ್ಟು ನೋವಾಗಿರಬೇಕು. ತನ್ನ ಆತ್ಮ ಸಾಕ್ಷಿಗೆ ವಿರುದ್ಧವಾಗಿ, ತಾನು ಹುಟ್ಟಿಬಂದ ಮನೆತನದ ರಾಜಾಜ್ಞೆಗೆ ಬದ್ಧನಾಗಿ, ತನ್ನ ಅಂತರಂಗದ ಇಚ್ಛೆಗೆ ವಿರುದ್ಧವಾಗಿ, ತಾನು ಪ್ರೀತಿಸಿದ ತನ್ನ ಮೊಮ್ಮೊಕ್ಕಳ ವಿರುದ್ಧ ಹೋರಾಟಕ್ಕೆ ಪ್ರಾಮಾಣಿಕವಾಗಿ ನಿಂತಾಗ, ಭರವಸೆ ಕಳೆದುಕೊಂಡು ಮಾತನಾಡುತ್ತಿರುವ ದುರ್ಯೋಧನನ ಕುಹಕ ನುಡಿ ಅವರಿಗೆ ಎಷ್ಟೊಂದು ನೋವನ್ನುಂಟುಮಾಡಿರಬಹುದು. ಇದನ್ನು ನಾವು ಊಹಿಸುವುದೂ ಕಷ್ಟ. ಈ ಮಾತನ್ನು ಕೇಳಿಸಿಕೊಂಡ ಭೀಷ್ಮಾಚಾರ್ಯರು ಏನು ಮಾಡಿದರು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.
· ಶ್ಲೋಕ - 12
ತಸ್ಯ
ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ ।
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ॥೧೨॥
ತಸ್ಯ ಸಂಜನಯನ್ ಹರ್ಷಮ್
ಕುರುವೃದ್ಧಃ ಪಿತಾಮಹಃ ಸಿಂಹನಾದಮ್ ವಿನದ್ಯ ಉಚ್ಚೈಃ ಶಂಖಮ್ ದಧ್ಮೌ ಪ್ರತಾಪವಾನ್ -ಅವನಿಗೆ ಸಂತಸಬರಿಸಲೆಂದು
ಕುರುಗಳ ಹಿರಿಯಜ್ಜನಾದ ಆ ಎದೆಗಾರ ಭೀಷ್ಮ, ಗಟ್ಟಿಯಾದ ಸಿಂಹನಾದ ಗೈದು ಶಂಖವನ್ನು
ಊದಿದರು..ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ॥೧೨॥
ಯುದ್ಧ ಪೂರ್ವದಲ್ಲಿ ಭರವಸೆಯನ್ನು ಕಳೆದುಕೊಂಡು ವಿಷಾದದಿಂದ ಮಾತನಾಡುತ್ತಿರುವ ದುರ್ಯೋಧನನ ಭರವಸೆ ಹೆಚ್ಚಿಸಲು, ಆತನಿಗೆ ಆತ್ಮ ವಿಶ್ವಾಸವನ್ನು ತುಂಬಲು, ಕುರು ವಂಶದ ಅತ್ಯಂತ ಹಿರಿಯ ಪ್ರತಾಪಶಾಲಿ ವಯೋವೃದ್ಧ ಭೀಷ್ಮಾಚಾರ್ಯರು ಸಿಂಹನಾದಗೈದು, ತನ್ನ ಕರ್ತವ್ಯಕ್ಕೆ ತಕ್ಕಂತೆ ಶಂಖವನ್ನೂದಿದರು.
ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯ ಮೂಲೆ-ಮೂಲೆಯಿಂದ ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಇದಕ್ಕೆ ಕಾರಣ ಶಂಖ ನಾದದಲ್ಲಿರುವ ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಮೃತ್ಯುವಿನ ತಾಂಡವವಾದ ರಣರಂಗದಲ್ಲಿ ಆಸುರೀ ಶಕ್ತಿಯ ಪ್ರಭಾವ ಇರಬಾರದು ಎನ್ನುವುದಕ್ಕಾಗಿ, ಯುದ್ದಕ್ಕೆ ತಮ್ಮವರನ್ನು ಸಿದ್ಧಗೊಳಿಸುವುದಕ್ಕಾಗಿ ಮತ್ತು ಶತ್ರುಗಳಿಗೆ ತಾವು ಸಿದ್ಧ ಎನ್ನುವ ಸಂಕೇತ ಕೊಡಲು ಹಿಂದೆ ಶಂಖವನ್ನು ಬಳಸುತ್ತಿದ್ದರು. ಇಲ್ಲಿ ಭೀಷ್ಮಾಚಾರ್ಯರು ಶಂಖನಾದದಿಂದ ತಮ್ಮ ಸಿದ್ದತೆಯ ಸಂಕೇತವನ್ನು ಕೌರವ ಸೈನ್ಯಕ್ಕೂ ಹಾಗು ಪಾಂಡವ ಸೈನ್ಯಕ್ಕೂ ರವಾನಿಸುತ್ತಾರೆ.
· ಶ್ಲೋಕ - 13
ತತಃ
ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ ।
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋsಭವತ್ ॥೧೩॥
ತತಃ ಶಂಖಾಃ ಚ ಭೇರ್ಯಃ ಚ
ಪಣವ ಅನಕ ಗೋಮುಖಾಃ ಸಹಸಾ ಏವ ಅಭ್ಯಹನ್ಯಂತ ಸಃ ಶಬ್ದಃ ತುಮುಲಃ ಅಭವತ್--ಆ ಬಳಿಕ ಶಂಖಗಳು, ನಗಾರಿಗಳು, ತಮಟೆ -ಡೋಲು- ಗೊಮುಖಗಳು (ಕಹಳೆ)- ಒಮ್ಮೆಲೆ
ಬಾರಿಸಲ್ಪಟ್ಟವು. ಆ ಸದ್ದು ಕಿವಿಗಡಚಿಕ್ಕುವ ಗದ್ದಲವಾಯಿತು.ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋsಭವತ್ ॥೧೩॥
ಪ್ರಧಾನ ಸೇನಾಧಿಪತಿಯಾದ ಭೀಷ್ಮಾಚಾರ್ಯರು ಶಂಖನಾದ ಮಾಡಿದ ಬಳಿಕ, ಕೌರವ ಸೈನ್ಯದಿಂದ ಶಂಖಗಳು, ನಗಾರಿ-ಡೋಲು-ಗೊಮುಖಗಳು-ಒಮ್ಮೆಲೆ ಬಾರಿಸಲ್ಪಟ್ಟವು. ಆ ಸದ್ದು ಕಿವಿಗಡಚಿಕ್ಕುವ ಗದ್ದಲವಾಯಿತು. ಇಲ್ಲಿ ದುರ್ಯೋಧನಾಗಲಿ ಆತನ ತಮ್ಮಂದಿರರಾಗಲಿ ಶಂಖ ನಾದ ಮಾಡಲಿಲ್ಲ. ಬದಲಾಗಿ ಸೇನಾಧಿಪತಿಯಿಂದ ಶಂಖ ನಾದವಾಯಿತು. ಅದರ ಹಿಂದೆ ಸೈನ್ಯದ ಮುಖಂಡರಿಂದ, ಸೈನಿಕರಿಂದ. ಈ ರೀತಿ ವ್ಯವಸ್ಥಿತ ರೀತಿಯಲ್ಲಿಲ್ಲದ ನಾದ ಗದ್ದಲದಂತೆ ಬಾಸವಾಗುತ್ತಿತ್ತು. ಇಲ್ಲಿ ದುರ್ಯೋಧನ ತನ್ನಲ್ಲಿರುವ ಶಕ್ತಿಯನ್ನು ವ್ಯವಸ್ಥಿತವಾಗಿ ರೂಪಿಸಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ನಮ್ಮಲ್ಲಿ ಎಷ್ಟೇ ಯುಕ್ತಿ ಸಾಧನವಿರಲಿ(Resource), ಎಲ್ಲಿಯ ತನಕ ನಮಗೆ ಆ ಸಾಧನವನ್ನು ನಿಯಮಬದ್ಧವಾಗಿ ಉಪಯೋಗಿಸಿಕೊಳ್ಳಲು ಬರುವುದಿಲ್ಲವೋ ಅಲ್ಲಿಯ ತನಕ ಆ ಸಾಧನ ಇದ್ದೂ ವ್ಯರ್ಥ. ಸಾಧನವನ್ನು ಕೈಯಲ್ಲಿಟ್ಟುಕೊಂಡು ಅಧಿಕಾರದ ಆಸೆಯಿಂದ ಮನಃಸ್ಥಿತಿ ಕಳೆದುಕೊಳ್ಳುವ ಮುಂದಾಳು(Leader) ಎಂದೂ ಯಶವನ್ನು ಕಾಣಲಾರ.
· ಶ್ಲೋಕ - 14
ತತಃ
ಶ್ವೇತೈರ್ಹಯೈರ್ಯುಕ್ತೇ ಮಹತಿ ಸೈಂದನೇ ಸ್ಥಿತೌ ।
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ॥೧೪॥
ತತಃ ಶ್ವೇತೈಃ ಹಯೈಃ
ಯುಕ್ತೇ ಮಹತಿ ಸೈಂದನೇ ಸ್ಥಿತೌ ಮಾಧವಃ ಪಾಂಡವಃ ಚ ಏವ ದಿವ್ಯೌ ಶಂಖೌ ಪ್ರದಧ್ಮತುಃ - ಆ ಬಳಿಕ ಬಿಳಿಯ
ಕುದುರೆಗಳಿಂದ ಸಜ್ಜುಗೊಂಡ ಹಿರಿಯ ರಥದಲ್ಲಿ ಕುಳಿತ ಶ್ರೀಕೃಷ್ಣ ಮತ್ತು ಅರ್ಜುನ ವೆಗ್ಗಳದ
ಶಂಖಗಳನ್ನು ಊದಿದರು.ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ॥೧೪॥
ಕೌರವ ಸೇನೆಯ ಶಂಖ ನಗಾರಿ ಗದ್ದಲದ ನಂತರ ನಾಲ್ಕು ಬಿಳಿ ಕುದುರೆಗಳಿಂದ ಸಜ್ಜುಗೊಂಡ, ಅಲ್ಲಿ ಇರುವ ರಥಗಳಲ್ಲೇ ಅತಿ ದೊಡ್ಡ ರಥದಲ್ಲಿ ಕುಳಿತ ಶ್ರೀಕೃಷ್ಣ ಮತ್ತು ಅರ್ಜುನರು ತಮ್ಮ ದಿವ್ಯ ಶಂಖ ನಾದವನ್ನು ಮಾಡುತ್ತಾರೆ.(ಮೊದಲು ಶ್ರೀಕೃಷ್ಣ ಆ ನಂತರ ಅರ್ಜುನ).
ಈ ಶ್ಲೋಕದಲ್ಲಿ ಮಾಧವ ಮತ್ತು ಪಾಂಡವ ಎನ್ನುವ ಎರಡು ವಿಶೇಷಣ ಬಳಕೆಯಾಗಿದೆ. ಇಲ್ಲಿ ಭಗವಂತನನ್ನು ಮಾಧವಃ ಎಂದು ಸಂಬೋಧಿಸಿದ್ದಾರೆ. 'ಮಾ' ಅಂದರೆ ಮಾತೆ ಲಕ್ಷ್ಮಿ. ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ-ಶ್ರೀಮನ್ನಾರಾಯಣ . ಇನ್ನು 'ಮಾ' ಅಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾಧವ. ಶ್ರೀಕೃಷ್ಣ-ಅವತಾರದಲ್ಲಿ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದು ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಗ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ರಾಮಾಯಣ, ಮಹಾಭಾರತ ಹಾಗು ಪುರಾಣಗಳನ್ನು ಮಾತೃ ಎನ್ನುತ್ತಾರೆ.ಅದ್ದರಿಂದ ಸಮಸ್ತ ವೈದಿಕ ವಾಗ್ಮಯ ಪ್ರತಿಪಾದನಾದ ಭಗವಂತ ಮಾಧವ.
ಇಲ್ಲಿ ಅರ್ಜುನನನ್ನು 'ಪಾಂಡವ' ಎಂದು ಸಂಬೋಧಿಸಿದ್ದಾರೆ. ಅರ್ಜುನ ಕುಂತಿಯ ಮೂರು ಮಂದಿ ಮಕ್ಕಳಲ್ಲಿ ಕೊನೆಯವನು, ಯಾವಾಗಲೂ ಕೊನೆಯ ಮಗನ ಮೇಲೆ ಪ್ರೀತಿ ಹೆಚ್ಚು. ಅದಕ್ಕಾಗಿ ಆತನನ್ನು ಪಾರ್ಥ, ಕೌಂತೇಯ, ಪಾಂಡವ ಎಂದು ಕರೆಯುತ್ತಿದ್ದರು. ಅರ್ಜುನನಲ್ಲಿ ಭಗವಂತನ ವಿಶೇಷ ಸನ್ನಿಧಾನವಿತ್ತು. ಆತ ನಾರಾಯಣನ ಜೊತೆಗಾರನಾದ 'ನರನ' ರೂಪ ಕೂಡಾ ಹೌದು.
ನಮ್ಮ ದೇಹ ಕೂಡಾ ಒಂದು ರಥ. ಅಂತಹ ರಥದಲ್ಲಿ ಜೀವನನ್ನು ನಡೆಸುವ ಭಗವಂತನ ಸನ್ನಿಧಾನವಿದೆ. ನಾಲ್ಕು ಕುದುರೆಗಳೆಂದರೆ ನಾಲ್ಕು ವೇದಗಳು. ಬಿಳಿ ಬಣ್ಣ ಸತ್ವ ಗುಣದ ಸಂಕೇತ
· ಶ್ಲೋಕ - 15
ಪಾಂಚಜನ್ಯಂ
ಹೃಷೀಕೇಶೋ ದೇವದತ್ತಂ ಧನಂಜಯಃ ।
ಪೌಂಡ್ರಂ ದಧ್ಮೌ ಮಹಾ ಶಂಖಂ ಭೀಮಕರ್ಮಾ ವೃಕೋದರಃ ॥೧೫॥
ಪಾಂಚಜನ್ಯಮ್ ಹೃಷೀಕ ಈಶಃ
ದೇವದತ್ತಮ್ ಧನಂಜಯಃ ಪೌಂಡ್ರಮ್ ದಧ್ಮೌ ಮಹಾಶಂಖಮ್ ಭೀಮಕರ್ಮಾ ವೃಕ ಉದರಃ -ಶ್ರೀಕೃಷ್ಣನು
ಪಾಂಚಜನ್ಯವನ್ನು, ಅರ್ಜುನನು
ದೇವದತ್ತವನ್ನು, ಪೌಂಡ್ರ
ಎನ್ನುವ ಮಹಾ ಶಂಖವನ್ನು ಭೀಮನು ಊದಿದನು.ಪೌಂಡ್ರಂ ದಧ್ಮೌ ಮಹಾ ಶಂಖಂ ಭೀಮಕರ್ಮಾ ವೃಕೋದರಃ ॥೧೫॥
ಪಾಂಡವರ ಕಡೆಯಿಂದ ಮೊತ್ತಮೊದಲಿಗೆ ಶ್ರೀಕೃಷ್ಣ ತನ್ನ ಶಂಖವನ್ನು ಮೊಳಗಿಸುತ್ತಾನೆ. ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ. ಈ ‘ಪಾಂಚಜನ್ಯ’ ಶಂಖದ ಹಿಂದೆ ಒಂದು ಕಥೆಯಿದೆ. ಶ್ರೀಕೃಷ್ಣ ತನ್ನ ವಿದ್ಯಾಭ್ಯಾಸವನ್ನು ಮಾಡಿದ್ದು ಸಾಂದೀಪನಿ ಮುನಿಯ ಆಶ್ರಮದಲ್ಲಿ. ವಿದ್ಯಾಭಾಸ ಮುಗಿಸಿ ಹಿಂತಿರುಗುವ ಸಮಯದಲ್ಲಿ ಶಿಷ್ಯರು ಗುರುದಕ್ಷಿಣೆ ಕೊಡುವುದು ಸಾಮಾನ್ಯ. ಇಲ್ಲಿ ಕೃಷ್ಣ ತನ್ನ ಗುರುವಿಗೆ ಕೊಟ್ಟ ಗುರುದಕ್ಷಿಣೆ ಬಹಳ ವಿಶಿಷ್ಟವಾದುದು. 'ಪಾಂಚಜನ' ಎನ್ನುವ ಅಸುರ ಸಾಂದೀಪನಿ ಮುನಿಯ ಪುತ್ರನನ್ನು ಕೊಂದಿದ್ದ. ತನ್ನ ವಿದ್ಯಾಭಾಸ ಮುಗಿದು ಹಿಂದಿರುಗುವ ಸಮಯದಲ್ಲಿ ಕೃಷ್ಣ ಗುರುದಂಪತಿಗಳಿಗೆ ಗುರುದಕ್ಷಣೆಯಾಗಿ ಅವರ ಪುತ್ರನನ್ನೇ ಮರಳಿಸಿದ. ಆ ಪಾಂಚಜನ ಎನ್ನುವ ರಾಕ್ಷಸನಿದ್ದ ಶಂಖವೇ ಪಾಂಚಜನ್ಯ. ಪಾಂಚಜನ್ಯ-ಅಸುರ ಸಂಹಾರಕ ಹಾಗು ಜ್ಞಾನಾನಂದದ ಸಂಕೇತ.
ಕೃಷ್ಣನ ಶಂಖ ನಾದದ ಬೆನ್ನಿಗೆ ಅರ್ಜುನ ತನ್ನ 'ದೇವದತ್ತ' ಎನ್ನುವ ಶಂಖವನ್ನೂದಿದ. ವಾನಪ್ರಸ್ಥ ಕಾಲದಲ್ಲಿ ಅಸುರರ ವಿರುದ್ಧ ಹೊರಾಡಿದ್ದಕ್ಕಾಗಿ ಅರ್ಜುನನಿಗೆ ಇಂದ್ರ ದೇವಲೋಕದಲ್ಲಿ ವಿಶಿಷ್ಟವಾದ ಕಿರೀಟವನ್ನು ತೊಡಿಸಿ ಈ ಶಂಖವನ್ನು ಉಡುಗೊರೆಯಾಗಿ ಕೊಟ್ಟಿದ್ದ. ಈ ಶಂಖವೂ ಕೂಡಾ ದುಷ್ಟ ನಿಗ್ರಹದ ಸಂಕೇತ.
ಅರ್ಜುನನ ಶಂಖ ನಾದದ ನಂತರ ವೃಕೋದರನಾದ ಭೀಮನು ಪೌಂಡ್ರ ಎನ್ನುವ ಮಹಾ ಶಂಖವನ್ನು ಊದಿದನು. ಇಲ್ಲಿ ಭೀಮನನ್ನು ವೃಕೋದರ ಎಂದು ಸಂಬೋಧಿಸಿದ್ದಾರೆ. ವೃಕೋದರ ಎಂದರೆ ಇಡೀ ವಿಶ್ವವನ್ನು ಸುಡಬಲ್ಲ ಅಗ್ನಿಯನ್ನು ಉದರದಲ್ಲಿ ಧರಿಸಿದವನು ಎಂದರ್ಥ. ಭೀಮ ಎಂತಹ ಪರಾಕ್ರಮಶಾಲಿ ಎನ್ನುವುದನ್ನು ಇಲ್ಲಿ ಈ ರೀತಿ ವ್ಯಕ್ತಪಡಿಸಿದ್ದಾರೆ.
ಈ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ಹೃಷೀಕೇಶ ಎಂದು ಸಂಬೋಧಿಸಿದ್ದಾರೆ. ಹೃಷೀಕೇಶ ಎಂದರೆ ಹೃಷೀಕಗಳಿಗೆ ಈಶ. ಇಲ್ಲಿ ಹೃಷೀಕ ಎಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ. ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎನ್ನುವ ಅರ್ಥವಿದೆ. ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ. ಈ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ
· ಶ್ಲೋಕ - 16
ಅನಂತವಿಜಯಂ
ರಾಜಾ ಕುಂತೀಪುತ್ರೋ ಯುಧಿಷ್ಠಿರಃ ।
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ॥೧೬॥
ಅನಂತವಿಜಯಮ್ ರಾಜಾ
ಕುಂತೀಪುತ್ರಃ ಯುಧಿಷ್ಠಿರಃ – ನಕುಲಃ
ಸಹದೇವಃ ಚ ಸುಘೋಷ ಮಣಿಪುಷ್ಪಕೌ-ಕುಂತೀಪುತ್ರನಾದ ರಾಜ ಯುಧಿಷ್ಠಿರ ಅನಂತವಿಜಯವನ್ನು,
ನಕುಲ ಸಹದೇವರು ಸುಘೋಷ ಮತ್ತು
ಮಣಿಪುಷ್ಪವೆಂಬ ಶಂಖವನ್ನೂದಿದರುನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ॥೧೬॥
ಭೀಮನ ನಂತರ ಕುಂತಿಯ ಹಿರಿಮಗ, ದೊರೆ ಯುಧಿಷ್ಠಿರ- ಧರ್ಮ ಮತ್ತು ವಿಜಯದ ಸಂಕೇತವಾದ 'ಅನಂತವಿಜಯ' ಎನ್ನುವ ಶಂಖವನ್ನು ಊದಿದನು. ನಕುಲ ಹಾಗು ಸಹದೇವರು ಸುಘೋಷ ಮತ್ತು ಮಣಿಪುಷ್ಪವೆಂಬ ಶಂಖವನ್ನು ಕ್ರಮಬದ್ಧವಾಗಿ ಮೊಳಗಿಸಿದರು.
ಮಹಾಭಾರತದಲ್ಲಿ ಬೇರೆ ಯಾವ ರಾಜರ ಶಂಖದ ಹೆಸರಿನ ಬಗ್ಗೆ ಉಲ್ಲೇಖ ಇಲ್ಲ. ಎಲ್ಲಿಯೂ ಬೇರೆ ಶಂಖದ ಹೆಸರನ್ನು ಹೇಳಿಲ್ಲ. ಪಾಂಡವರ ಐದು ಶಂಖಗಳ ಹೆಸರನ್ನು ಭಗವದ್ಗೀತೆಯಲ್ಲಿ ಮಾತ್ರ ಕಾಣಬಹುದು. ಪ್ರಾಯಶಃ ಇದು ನಮಗೆ ನಿತ್ಯ ಸ್ಮರಣೀಯವಾಗಿರಬೇಕು ಎನ್ನುವ ಉದ್ದೇಶದಿಂದ ಗೀತೆಯಲ್ಲಿ ಈ ಐದು ಹೆಸರನ್ನು ವಿಶೇಷವಾಗಿ ಉಲ್ಲೇಖಿಸಿರಬಹುದು.
· ಶ್ಲೋಕ - 17
ಕಾಶ್ಯಶ್ಚ
ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ ।
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ॥೧೭॥
ಕಾಶ್ಯ ಚ ಪರಮ ಇಷು ಆಸಃ
ಶಿಖಂಡೀ ಚ ಮಹಾರಥಃ ಧೃಷ್ಟದ್ಯುಮ್ನಃ ವಿರಾಟಃ ಚ ಸಾತ್ಯಕಿಃ ಚ ಅಪರಾಜಿತಃ -ಹಿರಿಯ ಬಿಲ್ಲೋಜ ಕಾಶಿರಾಜ,
ಹಿರಿಯ ತೇರಾಳು ಶಿಖಂಡಿ
ಸೇರಿದಂತೆ, ಧೃಷ್ಟದ್ಯುಮ್ನ
ಮತ್ತು ವಿರಾಟ, ಸೋಲರಿಯದ
ಸಾತ್ಯಕಿಯೊಂದಿಗೆ ಶಂಖನಾದ ಮಾಡಿದರು.ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ॥೧೭॥
ತದನಂತರ ಹಿರಿಯ ಬಿಲ್ಲೋಜ ಕಾಶಿರಾಜ, ಹಿರಿಯ ತೇರಾಳು ಶಿಖಂಡಿ, ಧೃಷ್ಟದ್ಯುಮ್ನ ಮತ್ತು ವಿರಾಟ, ಸೋಲರಿಯದ ಸಾತ್ಯಕಿ, ಹೀಗೆ ಒಬ್ಬೊಬ್ಬರಾಗಿ ಶಂಖ ನಾದವನ್ನು ಮಾಡಿದರು.
ಇಲ್ಲಿ ಶಿಖಂಡಿಯನ್ನು ಮಹಾರಥ ಎಂದು ಸಂಬೋಧಿಸಿರುವುದನ್ನು ನಾವು ಗಮನಿಸಬೇಕು. ಬಹಳಷ್ಟು ಜನ ಶಿಖಂಡಿ ಎಂದರೆ ನಪುಂಸಕ ಎಂದು ತಿಳಿದಿರುತ್ತಾರೆ. ಆದರೆ ಶಿಖಂಡಿ ಎಂದರೆ ನಪುಂಸಕ ಅಲ್ಲ. ಶಿಖಂಡಿ ಎಂದರೆ ಮೂಲಭೂತವಾಗಿ ಶಿಖಂಡ(ಶಿಖ+ಅಂಡ )ಉಳ್ಳವನು. ಇಲ್ಲಿ ಶಿಖ ಎಂದರೆ ತಲೆಗೂದಲು. ತಲೆ ಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಮಹಾಭಾರತದ ಈ ಶಿಖಂಡಿ ಹುಟ್ಟಿದಾಗ ಹೆಣ್ಣಾಗಿದ್ದು , ಆ ಬಳಿಕ ಗಂಡಾದ ಮಹಾರಥ. ಈತ 'ಸ್ತ್ರೀಪೂರ್ವವಾದ್ದರಿಂದ' ಭೀಷ್ಮಾಚಾರ್ಯರು ಆತನ ವಿರುದ್ಧ ಬಾಣ ಪ್ರಯೋಗ ಮಾಡಿರಲಿಲ್ಲ.
· ಶ್ಲೋಕ - 18
ದ್ರುಪದೋ
ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ ।
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದುಧ್ಮುಃ ಪೃಥಕ್ ಪೃಥಕ್ ॥೧೮॥
ದ್ರುಪದಃ ದ್ರೌಪದೇಯಾಃ ಚ
ಸರ್ವಶಃ ಪೃಥಿವೀ ಪತೇ ಸೌಭದ್ರಃ ಚ ಮಹಾಬಾಹುಃ ಶಂಖಾನ್ ದುಧ್ಮುಃ ಪೃಥಕ್ ಪೃಥಕ್- ಓ ನೆಲದೊಡೆಯನೆ;
ದ್ರುಪದ, ದ್ರೌಪದಿಯ ಮಕ್ಕಳು ಸೇರಿದಂತೆ, ತುಂಬುತೋಳಿನ ಮಹಾ ಪರಾಕ್ರಮಿ ಅಭಿಮನ್ಯು. ಹೀಗೆ
ಎಲ್ಲರೂ, ಒಬ್ಬೊಬ್ಬರಾಗಿ ಶಂಖವನ್ನೂದಿದರು.ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದುಧ್ಮುಃ ಪೃಥಕ್ ಪೃಥಕ್ ॥೧೮॥
ಇಲ್ಲಿ ಸೂಕ್ಷ್ಮವಾಗಿ ನೋಡಿದಾಗ ಪಾಂಡವರ ಕಡೆ ಇದ್ದ ಶಿಸ್ತು(Discipline) ಎದ್ದು ಕಾಣುತ್ತದೆ. ಕೌರವರ ಪಾಳಯದಿಂದ ಗದ್ದಲರೂಪದ ಶಂಖ ನಗಾರಿಗಳ ಸದ್ದಿಗೆ ಉತ್ತರವಾಗಿ ಪಾಂಡವರು ಶಿಸ್ತುಬದ್ದವಾಗಿ, ಕ್ರಮಬದ್ಧವಾಗಿ ಶಂಖನಾದ ಮಾಡುತ್ತಾರೆ. ಮನಃಶಾಸ್ತ್ರೀಯವಾಗಿ ನೋಡಿದಾಗ, ಶಿಸ್ತುಬದ್ಧವಾದ ಚಿಕ್ಕ ಸೇನೆ ಅಶಿಸ್ತಿನಿಂದ ಕೂಡಿದ ಬಹುದೊಡ್ಡ ಸೇನೆಯ ಎದೆಯನ್ನು ಹೇಗೆ ನಡುಗಿಸಬಲ್ಲದು ಎನ್ನುವುದನ್ನು ಇಲ್ಲಿ ನಾವು ಕಂಡುಕೊಳ್ಳಬಹುದು. ಭಗವಂತನಿಗೆ ಸರ್ವಸಮರ್ಪಣೆ ಭಾವದಲ್ಲಿ, ಯಾವುದೇ ಅಹಂಕಾರವಿಲ್ಲದೆ, ಭಗವಂತನ ಸಾರಥ್ಯದಲ್ಲಿ, ಧರ್ಮಯುದ್ಧಕ್ಕೆ ಸಿದ್ಧವಾದ ಪಾಂಡವ ಸೇನೆ-ಮಾನಸಿಕವಾಗಿ ಸಂಪೂರ್ಣ ಸಿದ್ಧವಾಗಿತ್ತು. ಅಹಂಕಾರದ ಅಮಲಿನಲ್ಲಿ, ಅಧಿಕಾರದ ಆಸೆಯಿಂದ, ಮಾನಸಿಕ ಸ್ಥಿಮಿತ ಕಳೆದುಕೊಂಡು, ಭಗವಂತನ ವಿರುದ್ಧ ನಿಂತ ದುರ್ಯೋಧನನ ಮುಂದಾಳತ್ವದಲ್ಲಿನ ಕೌರವಸೇನೆ- ಈಗಾಗಲೇ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು.
ಇಲ್ಲಿ ಕಾಣುವ ಇನ್ನೊಂದು ವಿಶೇಷತೆ ಎಂದರೆ- ಪಾಂಡವರ ಕಡೆಯಿಂದ ಕ್ರಮಬದ್ಧವಾಗಿ ಹದಿನೆಂಟು ಮಂದಿ ಶಂಖನಾದ ಮಾಡಿದ್ದಾರೆ. ಸಂಖ್ಯಾಶಾಸ್ತ್ರವನ್ನು ನೋಡಿದಾಗ, ಅಕ್ಷರಾಂಕದ ಪದ್ಧತಿಯಲ್ಲಿ ಹದಿನೆಂಟು ಎಂದರೆ ಜಯ. ಜ=8 ಯ=1. ಅಕ್ಷರಾಂಕದಲ್ಲಿ ಮೊದಲನೆಯದು ಏಕ ಸ್ಥಾನ, ಎರಡನೆಯದು ದಶಕ ಸ್ಥಾನ.ಆದ್ದರಿಂದ ಜ-ಯ ಎಂದರೆ 81 ಅಲ್ಲ-18. ಜಯದ ಸಂಕೇತವಾದ 'ಹದಿನೆಂಟು ಶಂಖನಾದ' ಪಾಂಡವರ ಪಾಳಯದಲ್ಲಿ ಮೊಳಗಿತು ಎನ್ನುವಲ್ಲಿಗೆ ಭಗವದ್ಗೀತೆಯ ಹದಿನೆಂಟನೇ ಶ್ಲೋಕ ಮುಗಿಯಿತು!
· ಶ್ಲೋಕ - 19
ಸ
ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ ।
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ ॥೧೯॥
ಸ ಘೋಷಃ
ಧಾರ್ತರಾಷ್ಟ್ರಾಣಾಮ್ ಹೃದಯಾನಿ ವ್ಯದಾರಯತ್ ನಭಃ ಚ ಪೃಥಿವೀಮ್ ಚ ಏವ ತುಮುಲಃ ವ್ಯನುನಾದಯನ್-
ಆ ಸದ್ದು ನೆಲ-ಮುಗಿಲು ತಬ್ಬಿ, ಪಡಿನುಡಿದು
ಅಬ್ಬರಿಸಿ, ಧೃತರಾಷ್ಟ್ರನೆಂದು
ಹೆಸರಾದ ನಿನ್ನ ಮಕ್ಕಳ ಎದೆಗಳಿಗಬ್ಬರಿಸಿತು.ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ ॥೧೯॥
ಇಲ್ಲಿ ಸಂಜಯನು ಧೃತರಾಷ್ಟ್ರನ ಮಕ್ಕಳನ್ನು 'ಧಾರ್ತರಾಷ್ಟ್ರಾಣಾಂ' ಎಂದು ಸಂಬೋಧಿಸುತ್ತಾನೆ. ಏಕೆಂದರೆ ಇದು ಅವರ ಉಪನಾಮ(Surname). ಈ ಹಿಂದೆ "ನನ್ನ ಮಕ್ಕಳು ಮತ್ತು ಪಾಂಡವರು" ಎಂದು ಸಂಬೋಧಿಸಿದ್ದ ಧೃತರಾಷ್ಟ್ರನಿಗೆ ಸಂಜಯನ ಕುಹಕದ ಉತ್ತರವಿದು.
ಸಂಜಯ ಹೇಳುತ್ತಾನೆ: “ಪಾಂಡವರ ಕಡೆಯಿಂದ ಕ್ರಮಬದ್ಧವಾಗಿ ಮೊಳಗಿದ ಶಂಖನಾದ, ನೆಲಮುಗಿಲನ್ನು ತುಂಬಿ, ಪಡಿನುಡಿದು ಅಬ್ಬರಿಸಿ, ಧೃತರಾಷ್ಟ್ರನೆಂದು ಹೆಸರಾದ ನಿನ್ನ ಮಕ್ಕಳ ಎದೆಯನ್ನು ಸೀಳಿತು” ಎಂದು. ಈ ಹಿಂದೆ ಹೇಳಿದಂತೆ ಪಾಂಡವರ ಶಿಸ್ತುಬದ್ಧ ನಡೆ ಈಗಾಗಲೇ ಕೌರವರ ಎದೆಯನ್ನು ಭೇದಿಸಿತ್ತು. ಯುದ್ಧ ಪ್ರಾರಂಭವಾಗುವ ಮೊದಲೇ ಪಾಂಡವರು ಕೌರವರನ್ನು ಮಾನಸಿಕವಾಗಿ ಸೋಲಿಸಿದ್ದರು.
· ಶ್ಲೋಕ - 20
ಅಥ
ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ।
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ॥೨೦॥
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ।
ಅಥ ವ್ಯವಸ್ಥಿತಾನ್
ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ಪ್ರವೃತ್ತೇ ಶಸ್ತ್ರಸಂಪಾತೇ ಧನುಃ ಉದ್ಯಮ್ಯ ಪಾಂಡವಃ
ಹೃಷೀಕೇಶಮ್ ತದಾ ವಾಕ್ಯಮ್ ಇದಮ್ ಆಹ ಮಹೀಪತೇ – ಓ ದೊರೆಯೇ, ಹನುಮನ ಬಾವುಟದ ಅರ್ಜುನ ಧಾರ್ತರಾಷ್ಟ್ರರು
ಸಜ್ಜಾದದ್ದನ್ನು ಕಂಡು, ಹೋರಾಟಕ್ಕೆ
ತೊಡಗಲು ತನ್ನ ಬಿಲ್ಲನ್ನು ಅಣಿಗೊಳಿಸಿ, ಕೃಷ್ಣನನ್ನು
ಕುರಿತು ಈ ಮಾತನ್ನು ಹೇಳಿದನು.ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ॥೨೦॥
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ।
ಎರಡೂ ಕಡೆ ಶಂಖನಾದವಾದಾಗ ಯುದ್ಧ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ, ತನ್ನ ರಥದಲ್ಲಿ ಆಂಜನೇಯನ ವಿಶೇಷ ಸನ್ನಿಧಾನವುಳ್ಳ ಅರ್ಜುನನು, ಇಂದ್ರಿಯಗಳ ಒಡೆಯನಾದ ಶ್ರೀಕೃಷ್ಣ(ಹೃಷೀಕೇಶ)ನಲ್ಲಿ ಮಾತನ್ನಾಡಿದನು.
ಇಲ್ಲಿ ಅರ್ಜುನನ ರಥದಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿತ್ತು. ನಮ್ಮ ದೇಹವೆಂಬ ರಥದಲ್ಲಿ ಕೂಡಾ ಜೀವನನ್ನು ಸದಾ ಪ್ರಾಣ 'ಭಗವಂತನ ಸನ್ನಿಧಾನದಲ್ಲಿ' ರಕ್ಷಿಸುತ್ತಿರುತ್ತಾನೆ. ಏಲ್ಲಿ ಪ್ರಾಣನೋ ಅಲ್ಲಿ ಭಗವಂತನ ಸನ್ನಿಧಾನ. ಪೌರಾಣಿಕವಾಗಿ ಅರ್ಜುನನ ರಥದಲ್ಲಿ ಆಂಜನೇಯನ ಸನ್ನಿಧಾನವಿರಲು ಕಾರಣ ವಾಯು ದೇವರ ಇನ್ನೊಂದು ರೂಪವಾದ ಭೀಮಸೇನ. ಸೌಗಂಧಿಕಾ ಪುಷ್ಪ ತರಲು ಹೊರಟ ಭೀಮಸೇನನನ್ನು ಹನುಮಂತ ಬಾಲದಿಂದ ತಡೆದ. ಈ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಆಂಜನೇಯ ತಾನು ವಿಶೇಷವಾಗಿ ಅರ್ಜುನನ ರಥದಲ್ಲಿ ಸನ್ನಿಹಿತನಾಗಿರುತ್ತೇನೆ ಎಂದು ಭೀಮಸೇನನಿಗೆ ಮಾತು ಕೊಟ್ಟಿರುತ್ತಾನೆ. ಇಲ್ಲಿ ಭೀಮಸೇನ ಹಾಗು ಆಂಜನೇಯ ಎನ್ನುವುದು ಪ್ರಾಣದೇವರ ಎರಡು ರೂಪ (ರಾಮ ಮತ್ತು ಪರಶುರಾಮ ಇದ್ದಂತೆ).
ತನ್ನ ಧ್ವಜದಲ್ಲಿ ಆಂಜನೇಯನ ಸನ್ನಿಧಾನ, ಕೈಯಲ್ಲಿ ಗಾಂಡೀವ, ರಥದ ಸಾರಥಿ ಕೃಷ್ಣ, ಜೊತೆಯಲ್ಲಿ ಮಹಾ ಪರಾಕ್ರಮಿ ಭೀಮಸೇನ. ಈ ರೀತಿ ಯುದ್ಧಕ್ಕೆ ಸಜ್ಜಾದ ಅರ್ಜುನನನ್ನು ಅಹಂಕಾರ(Ego) ಕಾಡುತ್ತದೆ. ಈ ಅಹಂಕಾರದಿಂದ ಆತ ಕೃಷ್ಣನನ್ನು ಕುರಿತು ಹೀಗೆ ಹೇಳುತ್ತಾನೆ:
· ಶ್ಲೋಕ - 21
ಅರ್ಜುನ
ಉವಾಚ ।
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ ॥೨೧॥
ಅರ್ಜುನ ಉವಾಚ-
ಅರ್ಜುನನು ನುಡಿದನು ಸೇನಯೋಃ ಉಭಯೋಃ ಮಧ್ಯೇ ರಥಮ್ ಸ್ಥಾಪಯ ಮೇ- ಅಚ್ಯುತ- 'ಅಳಿವಿರದ ಕೃಷ್ಣನೇ' ಎರಡು ಪಡೆಗಳ ನಡುವೆ ನನ್ನ ರಥವನ್ನು
ನಿಲ್ಲಿಸು.ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ ॥೨೧॥
ಈ ಶ್ಲೋಕದಲ್ಲಿ ನಾವು ಸೂಕ್ಷ್ಮವಾಗಿ ಅರ್ಜುನನ ಅಹಂಕಾರದ ಧ್ವನಿಯನ್ನು ಗಮನಿಸಬೇಕು. ‘ಮೇ’ ಅಂದರೆ ‘ನನ್ನ’. ಅರ್ಜುನನ ರಥದ ಸಾರಥ್ಯವನ್ನು ಸ್ವಯಂ ಶ್ರೀಕೃಷ್ಣ ವಹಿಸಿದ್ದರೂ ಕೂಡಾ, ಇಲ್ಲಿ ಅಹಂಕಾರದಲ್ಲಿ ಆತ ಕೃಷ್ಣನನ್ನು ಸಾಮಾನ್ಯ ಸಾರಥಿಯಂತೆ ಮಾತನಾಡಿಸಿ, "ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಹೇಳುತ್ತಾನೆ.
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ಅಚ್ಯುತ ಎಂದು ಸಂಬೋಧಿಸುತ್ತಾನೆ. ಅಚ್ಯುತ ಎಂದರೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ. ಬಾಹ್ಯವಾಗಿ ಅಹಂಕಾರ ತೋರಿದರೂ ಕೂಡಾ, ಅರ್ಜುನನ ಅಂತರಾತ್ಮ ಮಾತ್ರ ಎಚ್ಚರದಿಂದಿತ್ತು, ಆ ಅಂತರಾತ್ಮ ಆತನ ಬಾಯಲ್ಲಿ ಈ ನಾಮವನ್ನು ನುಡಿಸಿದೆ. ಅಹಂಕಾರ ಎಂತಹ ಮಹಾತ್ಮರನ್ನೂ ಬಿಟ್ಟಿಲ್ಲ. ಒಮ್ಮೆ ನಮ್ಮ ಕೈಯಲ್ಲಿ ಬಲವಿದೆ ಎಂದು ತಿಳಿದಾಗ ನಾವು ಎಲ್ಲವನ್ನೂ ಮರೆತು ಅಹಂಕಾರದ ದಾಸರಾಗುತ್ತೇವೆ. ಈ ಅಹಂಕಾರ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಅರ್ಜುನ ಮಹಾಜ್ಞಾನಿ ಮತ್ತು ಶ್ರೀಕೃಷ್ಣನ ಭಕ್ತ. ತನ್ನ ಭಕ್ತ ಅಹಂಕಾರಕ್ಕೊಳಪಟ್ಟಾಗ, ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಿಯೆ ತೋರುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
· ಶ್ಲೋಕ - 22
ಯಾವದೇತಾನ್
ನಿರೀಕ್ಷೇsಹಂ
ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ॥೨೨॥
ಯಾವತ್ ಏತಾನ್ ನಿರೀಕ್ಷೇ
ಅಹಮ್ ಯೋದ್ಧುಕಾಮಾನ್ ಅವಸ್ಥಿತಾನ್ ಕೈಃ ಮಯಾ ಸಹ ಯೋದ್ಧವ್ಯಮ್ ಅಸ್ಮಿನ್ ರಣ ಸಮುದ್ಯಮೇ--ಕಾದ
ಬಯಸಿ ನೆರೆದ ಇವರತ್ತ ನಾನೊಮ್ಮೆ ಕಣ್ಣು ಹಾಯಿಸುತ್ತೇನೆ. ಈ ಕದನದ ಕಾಯಕದಲ್ಲಿ ಯಾರು
ನನ್ನ ಜೊತೆ ಹಾಗು ಯಾರ ಜೊತೆ ನಾನು ಕಾದಬೇಕು ಎಂದು?ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ॥೨೨॥
ಮಹಾಭಾರತ ಯುದ್ಧ ಇತಿಹಾಸದಲ್ಲಿ ದಾಖಲೆಯಾದ ಮೊದಲ ಜಾಗತಿಕ ಯುದ್ಧ. ಇಂತಹ ಯುದ್ಧದ ಮಂಚೂಣಿಯಲ್ಲಿ ನಿಂತ ಅರ್ಜುನ ಅಹಂಕಾರದಿಂದ ಮಾತನಾಡುತ್ತಿದ್ದಾನೆ. ಆತ ಶ್ರೀಕೃಷ್ಣನಲ್ಲಿ "ಇಲ್ಲಿ ನೆರೆದ ಇವರತ್ತ ನಾನೊಮ್ಮೆ ಕಣ್ಣು ಹಾಯಿಸಬೇಕು. ನನ್ನ ವಿರುದ್ಧ ಯುದ್ಧ ಮಾಡಲು ಬಂದವರು ಯಾರು, ಹಾಗು ನನ್ನ ಕಡೆಯಿಂದ ನನ್ನ ಸಹ ಯುದ್ಧ ಮಾಡಲು ಬಂದವರು ಯಾರು ಎಂದು ನಾನೊಮ್ಮೆ ನೋಡಬೇಕು" ಎನ್ನುತ್ತಾನೆ. ಇಲ್ಲಿ "ನನ್ನೊಂದಿಗೆ ಯುದ್ಧ ಮಾಡಲು ಬಂದವರನ್ನೊಮ್ಮೆ ನೋಡಬೇಕು" ಎನ್ನುವಲ್ಲಿ ಅಹಂಕಾರಭರಿತ ವ್ಯಂಗ್ಯವಿದೆ. ತಾನು ಮಹಾವೀರ, ನನ್ನೆದುರು ನೆರೆದ ಈ ಸೇನೆ ನನಗೆ ಏನೂ ಅಲ್ಲ ಎನ್ನುವ ಸೊಕ್ಕಿನ ಮಾತಿದು.
· ಶ್ಲೋಕ - 23
ಯೋತ್ಸ್ಯಮಾನಾನವೇಕ್ಷೇಹಂ
ಯ ಏತೇತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ॥೨೩॥
ಯೋತ್ಸ್ಯಮಾನಾನ್
ಅವೇಕ್ಷೇ ಅಹಮ್ ಯೇ ಏತೇ ಅತ್ರ ಸಮಾಗತಾಃ ಧಾರ್ತರಾಷ್ಟ್ರಸ್ಯ ದುರ್ಬುದ್ಧೇ ಯುದ್ಧೇ ಪ್ರಿಯ ಚಿಕೀರ್ಷವಃ
-ಇಲ್ಲಿ ನೆರೆದ- ಈ ಕಾದ ಹೊರಟವರನ್ನು, ಬುದ್ಧಿಗೇಡಿಯಾದ
ದುರ್ಯೋಧನನ ಹಿತವನ್ನು ಬಯಸಿ ಯುದ್ಧದಲ್ಲಿ ಆತನಿಗೆ ಹೆಗಲು ಕೊಡ ಬಯಸಿದವರನ್ನು, ನಾನೊಮ್ಮೆ ನೋಡುತ್ತೇನೆ ಎನ್ನುತ್ತಾನೆ
ಅರ್ಜುನ.ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ॥೨೩॥
"ಬುದ್ಧಿಗೇಡಿ ದುರ್ಯೋಧನನಿಗೆ ಜಯವಾಗಬೇಕು ಎಂದು ಬಯಸಿ, ನಮಗೆ ತೊಂದರೆ ಕೊಡಲು ನನ್ನ ವಿರುದ್ಧ ನಿಂತವರನೊಮ್ಮೆ ನಾನು ನೋಡಬೇಕು" ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಆಜ್ಞಾರೂಪಿ ಸ್ವರದಲ್ಲಿ ಹೇಳುತ್ತಾನೆ. ಇಲ್ಲಿ 'ಅಹಮ್' ಎಂದು ಸಂಬೋಧಿಸುತ್ತಿರುವ ಅರ್ಜುನ ಅಹಂಕಾರದ ದಾಸನಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.
· ಶ್ಲೋಕ - 24
ಏವಮುಕ್ತೋ
ಹೃಷೀಕೇಶೋ ಗುಡಾಕೇಶೇನ ಭಾರತ ।
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ॥೨೪॥
ಸಂಜಯ ಉವಾಚ ಏವಮ್
ಉಕ್ತಃ ಹೃಷೀಕೇಶಃ ಗುಡಾಕೇಶೇನ ಭಾರತ ಸೇನಯೋಃ ಉಭಯೋಃ ಮಧ್ಯೇ ಸ್ಥಾಪಯಿತ್ವಾ ರಥ ಉತ್ತಮಮ್- ಸಂಜಯನು
ಹೇಳಿದನು: ಓ ಭರತ ವಂಶದ ದೊರೆಯೇ, ಗುಡಾಕೇಶನ
ಮಾತನ್ನು ಆಲಿಸಿದ ಹೃಷೀಕೇಶಃ, ಎರಡು
ಸೈನ್ಯದ ಮಧ್ಯೆ ಹಿರಿಯ ತೇರನ್ನು ನಿಲ್ಲಿಸಿದ.ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ॥೨೪॥
ಇಂದ್ರಿಯದ ದೊರೆಯಾದ ಶ್ರೀಕೃಷ್ಣನು ಏನೂ ಮಾತನಾಡದೆ, ರಥವನ್ನು ಎರಡೂ ಸೈನ್ಯದ ಮಧ್ಯೆ ನಿಲ್ಲಿಸಿದ. ಇಲ್ಲಿಂದ ಮುಂದೆ ನಾವು ಶ್ರೀಕೃಷ್ಣನ ಪ್ರತಿಯೊಂದು ನಡೆಯಲ್ಲಿ ಮನಃಶಾಸ್ತ್ರೀಯ ಚಿಕಿತ್ಸಾ ಪದ್ಧತಿಯನ್ನು(Psychotherapy) ಕಾಣಬಹುದು. ಅಹಂಕಾರವೆನ್ನುವುದು ಒಂದು ಮಾನಸಿಕ ಸ್ಥಿತಿ. ನಾವು ಅಂತಹ ಸ್ಥಿತಿಯಿಂದ ಹೊರ ಬರಬೇಕಾದರೆ, ನಮಗೆ ಮಾನಸಿಕ ಚಿಕಿತ್ಸೆ ಬೇಕು. ಅದನ್ನೇ ಕೃಷ್ಣ ಇಲ್ಲಿ ಮಾಡಿ ತೋರಿಸಿದ್ದಾನೆ. ಇಂತಹ ಶ್ರೀಕೃಷ್ಣನನ್ನು ನಾವು ಮನಃಶಾಸ್ತ್ರದ ಪಿತಾಮಹ(Father of Psychology) ಎಂದರೆ ತಪ್ಪಾಗದು. ಮನಃಶಾಸ್ತ್ರದ ಅನೇಕ ವಿಷಯಗಳು ಗೀತೆಯ ಮೊದಲ ಅಧ್ಯಾಯದಲ್ಲೇ ಅಡಗಿದೆ.
ಈ ಶ್ಲೋಕದಲ್ಲಿ ಕೃಷ್ಣನನ್ನು ಹೃಷೀಕೇಶಃ ಎಂದೂ ಹಾಗು ಅರ್ಜುನನನ್ನು ಗುಡಾಕೇಶನೆಂದೂ ಸಂಬೋಧಿಸಿದ್ದಾರೆ. ಗುಡಾಕೇಶ ಎಂದರೆ ನಿದ್ದೆಯನ್ನು ಗೆದ್ದವನು ಎಂದರ್ಥ.
· ಶ್ಲೋಕ - 25
ಭೀಷ್ಮದ್ರೋಣಪ್ರಮುಖತಃ
ಸರ್ವೇಷಾಂ ಚ ಮಹೀಕ್ಷಿತಾಮ್ ।
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ॥೨೫॥
ಭೀಷ್ಮಃ ದ್ರೋಣ
ಪ್ರಮುಖತಃ ಸರ್ವೇಷಾಮ್ ಚ ಮಹೀಕ್ಷಿತಾಮ್ ಉವಾಚ ಪಾರ್ಥ ಪಶ್ಯ ಏತಾನ್ ಸಮವೇತಾನ್ ಕುರೂನ್ ಇತಿ- ಭೀಷ್ಮ, ದ್ರೋಣರು, ಹಾಗು ಇತರ ಅರಸರು ನೇರವಾಗಿ ಕಣ್ಣಿಗೆ ಬೀಳುವಂತೆ
ರಥವನ್ನು ನಿಲ್ಲಿಸಿ ಕೃಷ್ಣ ಹೇಳುತ್ತಾನೆ: “ಹೇ ಪಾರ್ಥ, ನೋಡು
ಈ ನೆರೆದ ಕುರುಗಳನ್ನು”
ಎಂದು.ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ॥೨೫॥
ಶ್ರೀಕೃಷ್ಣನು ಅರ್ಜುನನ ಅಣತಿಯಂತೆ ರಥವನ್ನು ಎರಡೂ ಸೈನ್ಯದ ಮಧ್ಯದಲ್ಲಿ ತಂದು, ಭೀಷ್ಮ-ದ್ರೋಣರು ಮತ್ತು ಎಲ್ಲ ಅರಸರು ನೇರವಾಗಿ ಕಣ್ಣಿಗೆ ಕಾಣುವಂತೆ ನಿಲ್ಲಿಸಿ, ಭಾಂದವ್ಯವನ್ನು ಬಡಿದೇಳಿಸುವ ಧ್ವನಿಯಲ್ಲಿ ಹೇಳುತ್ತಾನೆ: "ಹೇ ಪಾರ್ಥ, ಇಲ್ಲಿ ಸೇರಿರುವ ನಿನ್ನ 'ಕುರುಗಳನ್ನು' ನೋಡು" ಎಂದು.
ಇದು ಶ್ರೀಕೃಷ್ಣನ ಅದ್ಭುತ ಮಾನಸಿಕ ಚಿಕಿತ್ಸೆ(Psycho therapy). ಇಲ್ಲಿ ಅರ್ಜುನನ ಮನಃಸ್ಥಿತಿಯ ಪರೀಕ್ಷೆ ನಡೆಯುತ್ತಿದೆ. ಅರ್ಜುನ ಒಬ್ಬ ರಾಜ. ಆತನ ಮೂಲ ಕರ್ತವ್ಯ ಧರ್ಮದ ಪರ ಹೋರಾಟ ಮಾಡುವುದು ಹಾಗು ಪ್ರಜಾಪಾಲನೆ ಮಾಡುವುದು. ಹೀಗೆ ತನ್ನ ಕರ್ತವ್ಯ ಪಾಲನೆ ಮಾಡುತ್ತಿರುವಾಗ, ಧರ್ಮದ ವಿರುದ್ಧ ನಿಂತವರು ಯಾರೇ ಆಗಿರಲಿ, ಅವರನ್ನು ಶಿಕ್ಷಿಸುವುದು ಆತನ ಕರ್ತವ್ಯ. ಆತನೊಬ್ಬ ನ್ಯಾಯಾಧೀಶನಿದ್ದಂತೆ. ಇಲ್ಲಿ ನನ್ನ ಕುಟುಬದವರು, ನನ್ನ ಬಂಧುಗಳು, ನನ್ನ ಸ್ನೇಹಿತರು ಎನ್ನುವ ತಾರತಮ್ಯ ಸಲ್ಲದು. ಇಂತಹ ಜವಾಬ್ಧಾರಿಯುತ ಕಾರ್ಯದಲ್ಲಿ ತೊಡಗಿದ ಅರ್ಜುನ, ತನ್ನ ಸಮೀಪಬಂಧುಗಳನ್ನು, ಗುರುಗಳನ್ನು ಕಂಡಾಗ ಹೇಗೆ ಪರಿತಪಿಸುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.
· ಶ್ಲೋಕ - 26
ತತ್ರಾಪಶ್ಯತ್
ಸ್ಥಿತಾನ್ ಪಾರ್ಥಃ ಪಿತ ನಥ ಪಿತಾಮಹಾನ್ ।
ಆಚಾರ್ಯಾನ್ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ॥೨೬॥
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ ।
ತತ್ರ ಅಪಶ್ಯತ್ ಸ್ಥಿತಾನ್ ಪಾರ್ಥಃ ಪಿತ ನಥ ಪಿತಾಮಹಾನ್ |
ಆಚಾರ್ಯಾನ್ ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀನ್ ತಥಾ ||
ಶ್ವಶುರಾನ್ ಸುಹೃದಃ ಚ
ಏವ ಸೇನಯೋಃ ಉಭಯೋಃ ಅಪಿ -ಅಲ್ಲಿ ಎರಡೂ ಕಡೆಯ ಪಡೆಗಳಲ್ಲಿ ನೆರೆದವರನ್ನು ಅರ್ಜುನನು ಕಂಡನು.
ತಂದೆಯಂತಿರುವವರನ್ನು, ಅಜ್ಜಂದಿರನ್ನು,
ಗುರುಗಳನ್ನು, ಸೋದರಮಾವಂದಿರನ್ನು, ಅಣ್ಣ-ತಮ್ಮಂದಿರನ್ನು, ಮಕ್ಕಳನ್ನು, ಮೊಮ್ಮೊಕ್ಕಳನ್ನು, ಸಂಗಾತಿಗಳನ್ನು ಮಾವಂದಿರನ್ನು ಮತ್ತು
ಗೆಳೆಯರನ್ನು.ಆಚಾರ್ಯಾನ್ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ॥೨೬॥
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ ।
ತತ್ರ ಅಪಶ್ಯತ್ ಸ್ಥಿತಾನ್ ಪಾರ್ಥಃ ಪಿತ ನಥ ಪಿತಾಮಹಾನ್ |
ಆಚಾರ್ಯಾನ್ ಮಾತುಲಾನ್ ಭ್ರಾತ ನ್ ಪುತ್ರಾನ್ ಪೌತ್ರಾನ್ ಸಖೀನ್ ತಥಾ ||
ಕೃಷ್ಣನು ರಥವನ್ನು ಅರ್ಜುನನ ಆತ್ಮೀಯ ಬಂಧುಗಳ ಎದುರು ನಿಲ್ಲಿಸಿದ್ದರಿಂದ, ಅಲ್ಲಿ ನೆರೆದ ಎಲ್ಲರನ್ನೂ ಅರ್ಜುನ ನೋಡುತ್ತಾನೆ. ಇಷ್ಟು ಹೊತ್ತು ಜಂಭದ ಮಾತನಾಡಿದ ಆತನಿಗೆ ಈಗ ತನ್ನೆದುರಿಗೆ ನಿಂತ ತಂದೆ ಸಮಾನರು, ಅಜ್ಜಂದಿರು, ವಿದ್ಯೆ ಕೊಟ್ಟ ಆಚಾರ್ಯರು, ಸೋದರಮಾವಂದಿರು, ಅಣ್ಣತಮ್ಮಂದಿರು, ಮಕ್ಕಳು, ಮೊಮ್ಮೊಕ್ಕಳು, ಸ್ನೇಹ ಸಂಗಾತಿಗಳು, ಮಾವಂದಿರು, ಹಿತೈಷಿಗಳು, ಎಲ್ಲರು ಎರಡೂ ಕಡೆಗಳಲ್ಲಿ ಕಾಣಿಸುತ್ತಾರೆ.
ಎಚ್ಚರದಿಂದ ಈ ಶ್ಲೋಕವನ್ನು ಗಮನಿಸಿದರೆ, ಅರ್ಜುನನಿಗೆ ಅಲ್ಲಿ ಕಾಣಿಸಿದ್ದು ಕೇವಲ ಗುರು ಹಿರಿಯರು, ಬಂಧುಗಳು ಮತ್ತು ಆತ್ಮೀಯರು. ಇಲ್ಲಿ ಆತನಿಗೆ ಬಂಧು ಪ್ರೇಮ ಎಚ್ಚರ ಆಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕರ್ತವ್ಯ ನಿರತ ಜನಪಾಲಕ ರಾಜನಿಗೆ ಬಂಧು ಪ್ರೇಮ ತರವಲ್ಲ. ಪ್ರಜಾಪಾಲಕನಾದವನಿಗೆ ಪ್ರಜಾಪಾಲನೆ ಮೂಲಧರ್ಮ. ಅದನ್ನು ಆತ ಎಂದೂ ಚ್ಯುತಿ ಬರದಂತೆ ನಿರ್ವಹಿಸಬೇಕು. ಈ ರೀತಿ ಕಾರ್ಯ ನಿರ್ವಹಿಸುತ್ತಿರುವಾಗ ‘ನನ್ನ ಬಂಧುಗಳು, ನನ್ನ ಪರಿವಾರ’ ಎಂದು ಯಾವ ತಾರತಮ್ಯ ಮಾಡುವಂತಿಲ್ಲ.
· ಶ್ಲೋಕ - 27
ತಾನ್ಸಮೀಕ್ಷ್ಯ
ಸ ಕೌಂತೇಯಃ ಸರ್ವಾನ್ಬನ್ಧೂನವಸ್ಥಿತಾನ್ ॥೨೭॥
ಕೃಪಯಾ ಪರಯಾssವಿಷ್ಟೋ ವಿಷೀದನ್ನಿದಮಬ್ರವೀತ್ ।
ತಾನ್ ಸಮೀಕ್ಷ್ಯ ಸಃ
ಕೌಂತೇಯಃ ಸರ್ವಾನ್ ಬಂಧೂನ್ ಅವಸ್ಥಿತಾನ್ ಕೃಪಯಾ ಪರಯಾ ಆವಿಷ್ಟಃ ವಿಷೀದನ್ ಇದಮ್ ಅಬ್ರವೀತ್ -ಆ ಎಲ್ಲಾ ಬಂಧುಗಳು
ಒಂದೆಡೆ ಸೇರಿರುವುದನ್ನು ಕಂಡ ಅರ್ಜುನ ಕಡು ಕರುಣೆಗೊಳಗಾಗಿ, ಭಾವಪರವಶನಾಗಿ -ಹೀಗೆ ಹೇಳಿದನು ಕೃಪಯಾ ಪರಯಾssವಿಷ್ಟೋ ವಿಷೀದನ್ನಿದಮಬ್ರವೀತ್ ।
ಆ ಎಲ್ಲಾ ಬಂಧುಗಳು ಒಂದುಗೂಡಿರುವುದನ್ನು ಕಂಡ ಅರ್ಜುನ, ಕರುಣೆಗೊಳಗಾಗಿ, ಕಾರುಣ್ಯದಿಂದ, ದುಖಃದಿಂದ, ತನ್ನ ತುಮುಲವನ್ನು ಕೃಷ್ಣನಲ್ಲಿ ತೋಡಿಕೊಳ್ಳುತ್ತಾನೆ.
ಇಲ್ಲಿಂದ ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ಅಳಲನ್ನು ಶ್ರೀಕೃಷ್ಣನ ಮುಂದೆ ತೊಡಿಕೊಳ್ಳುವುದನ್ನು ಕಾಣುತ್ತೇವೆ. ಮುಂದಿನ ಶ್ಲೋಕಗಳನ್ನು ನೋಡುವ ಮೊದಲು ಇಲ್ಲಿ ಒಂದು ಪುಟ್ಟ ವಿಶ್ಲೇಷಣೆ ಮಾಡೋಣ. ಗೀತೆಯನ್ನು ಓದುವಾಗ ಕೆಲವರಿಗೆ ಶ್ರೀಕೃಷ್ಣನ ನಡೆ ಅರ್ಥವಾಗುವುದಿಲ್ಲ. "ಅಯ್ಯೋ- ಹೇಗೆ ನನ್ನ ಬಂಧುಗಳ ವಿರುದ್ಧ ಹೋರಾಡಲಿ" ಎಂದು ಅರ್ಜುನ ಕೇಳಿದರೆ, ಕೃಷ್ಣ "ಯುದ್ಧ ಮಾಡು" ಎಂದು ಹೇಳುತ್ತಾನೆ. ಇದು ನ್ಯಾಯವೇ ಎನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಅರ್ಜುನ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಮಾತನ್ನು ಹೇಳಿದ್ದರೆ ಖಂಡಿತವಾಗಿ ನಾವು ಒಪ್ಪಬೇಕಾದ ವಿಷಯವಿದು. ಆದರೆ ಇಲ್ಲಿ ಆತ ಭರತಖಂಡದ ರಕ್ಷಕನಾಗಿ ಧರ್ಮದ ಪರ ಹೋರಾಟಮಾಡಲು ಧರ್ಮರಾಯನ ಪರ ನಿಂತ ಅರಸ. ಆತ ಒಂದು ವೇಳೆ "ನಮಗೋಸ್ಕರ ಭರತ ಖಂಡದ ಜನರು ಸಾಯುವುದು ಬೇಡ" ಎಂದಿದ್ದರೆ ಒಪ್ಪಬಹುದಿತ್ತು. ಆದರೆ ಆತ ಹಾಗೆ ಹೇಳಲಿಲ್ಲ. ಆತನಿಗೆ ಅಲ್ಲಿ ಕಾಣಿಸಿದ್ದು ಕೇವಲ ಬಂಧುಗಳು. ರಾಜನಾದವನಿಗೆ ಧರ್ಮದ ಕಡೆ ನಿಂತವನು ಮಾತ್ರ ಬಂಧು. ಧರ್ಮದ ವಿರುದ್ಧ ಯಾರೇ ನಿಂತಿರಲಿ ಆತ ಕೇವಲ ಅಪರಾಧಿ. ಅವರನ್ನು ಶಿಕ್ಷಿಸುವುದು ರಾಜನ ಪರಮ ಧರ್ಮ. ನ್ಯಾಯ ಸ್ಥಾನದಲ್ಲಿ ನಿಂತ ನ್ಯಾಯಾಧೀಶ, ಅನ್ಯಾಯ ಮಾಡಿ ಬಂದ ತನ್ನ ಬಂಧುವನ್ನು 'ನನ್ನ ಕಡೆಯವನು' ಎಂದು ಹೇಗೆ ಕ್ಷಮಿಸುವಂತಿಲ್ಲವೋ, ಹಾಗೆ ರಾಜನಾದವನೂ ಕೂಡಾ.
ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ವಿತಂಡವಾದದಿಂದ(Arguments) ಶ್ರೀಕೃಷ್ಣನನ್ನು ಸಮಜಾಯಿಸಲು (Convince) ನೋಡುತ್ತಾನೆ. ಆದರೆ ಶ್ರೀಕೃಷ್ಣ ಎಲ್ಲೂ ಈ ವಿತಂಡವಾದಕ್ಕೆ ನೇರ ಉತ್ತರ ಕೊಡುವುದಿಲ್ಲ. ಏಕೆಂದರೆ ಒಂದು ವೇಳೆ ಹಾಗೆ ಮಾಡಿದ್ದರೆ ಆತ ಬೇಡವಾದ ವಾದಕ್ಕೆ ಮಣೆ ಹಾಕಿದಂತಾಗುತ್ತಿತ್ತು. ಒಬ್ಬ ಉತ್ತಮ ಕೇಳುಗನಂತೆ ಎಲ್ಲವನ್ನೂ ಕೇಳಿ, ಆ ನಂತರ ಒಬ್ಬ ಮಾನಸಿಕ ರೋಗಿಗೆ ಚಿಕಿತ್ಸೆ ಕೊಡುವ ರೀತಿಯಲ್ಲಿ ಕೃಷ್ಣ ನಡೆದಿರುವುದನ್ನು ಇಲ್ಲಿ ನಾವು ಕಾಣುತ್ತೇವೆ. ಬನ್ನಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶ್ಲೋಕವನ್ನು ನೋಡೋಣ.
· ಶ್ಲೋಕ - 28 ಹಾಗೂ 29
ದೃಷ್ಟ್ವೇಮಂ
ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ॥೨೮॥
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ॥೨೯॥
ಅರ್ಜುನ ಉವಾಚ ದೃಷ್ವಾ
ಇಮಮ್ ಸ್ವಜನಮ್ ಕೃಷ್ಣ ಯುಯುತ್ಸುಮ್ ಸಮುಪಸ್ಥಿತಮ್ ಸೀದಂತಿ ಮಮ ಗಾತ್ರಾಣಿ ಮುಖಮ್ ಚ ಪರಿಶುಷ್ಯತಿ
ವೇಪಥುಃ ಚ ಶರೀರೇ ಮೇ ರೋಮ ಹರ್ಷಃ ಚ ಜಾಯತೇ-ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ॥೨೯॥
ಅರ್ಜುನ ಹೇಳಿದನು: ಕೃಷ್ಣ, ಯುದ್ಧೋತ್ಸಾಹದಿಂದ ಇಲ್ಲಿ ನೆರೆದ ನಮ್ಮ ಮಂದಿಯನ್ನು ನೋಡಿದಾಗ ನನ್ನ ಅಂಗಾಂಗಗಳು ಕಂಗೆಡುತ್ತಿವೆ. ಬಾಯಿಯೂ ಬತ್ತುತ್ತಿದೆ. ನನ್ನ ಮೈಯಲ್ಲವೂ ನವಿರೆದ್ದು ನಡುಗುತ್ತಿದೆ.
"ಇಲ್ಲಿ ನೆರೆದ ನನ್ನ ಹಿರಿಯ ಬಂಧುಗಳನ್ನು ನೋಡಿದಾಗ ನನ್ನ ಅಂಗಾಂಗಗಳು ಮುದುಡುತ್ತಿವೆ. ನಾವು ಪರಸ್ಪರ ಸ್ನೇಹಪೂರ್ವಕವಾಗಿ ಬದುಕಬೇಕಾದವರು ಇಂದು ಈ ರಣರಂಗದಲ್ಲಿ ಎದುರುಬದುರಾಗಿ ಹೊಡೆದಾಡಿಕೊಳ್ಳಲು ನಿಂತಿರುವುದನ್ನು ಕಂಡು ನನ್ನ ಮುಖ ನಾಚಿಕೆಯಿಂದ ಬಾಡುತ್ತಿದೆ. ತಿಳುವಳಿಕೆಯುಳ್ಳ ನಾವೇ ಇಂತಹ ಅಸಹ್ಯ ಕೆಲಸಕ್ಕೆ ಇಳಿದುಬಿಟ್ಟೆವಲ್ಲ. ಈ ತೀರ್ಮಾನವನ್ನು ನಾವೇ ಮಾಡಿ ಅದಕ್ಕೆ ನಾವೇ ಬದ್ಧರಾಗಿ ರಣರಂಗದಲ್ಲಿ ನಿಂತಿದ್ದೇವಲ್ಲ. ಇದನ್ನು ಯೋಚಿಸಿದರೆ ಮೈ ಮುದುಡುತ್ತಿದೆ. ಮುಖ ಒಣಗಿ ಮಾತನಾಡಲು ಆಗುತ್ತಿಲ್ಲ. ಎಷ್ಟು ಕೆಳಮಟ್ಟಕ್ಕಿಳಿದೆವು ನಾವು. ಇದನ್ನು ಯೋಚಿಸಿದರೆ ನಡುಕ ಬರುತ್ತದೆ" ಎನ್ನುತ್ತಾನೆ. ಇಲ್ಲಿ ಅರ್ಜುನನ ಮಾತಿನಲ್ಲಿ ಮೊದಲು ಅನುಕಂಪ, ಅದರಿಂದ ಲಜ್ಜೆ, ಅದರಿಂದ ಭಯ, ಅದರಿಂದ ವಿಸ್ಮಯ ವ್ಯಕ್ತವಾಗಿರುವುದನ್ನು ನಾವು ಕಾಣುತ್ತೇವೆ.
· ಶ್ಲೋಕ - 30
ಗಾಂಡೀವಂ
ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ ।
ನಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ॥೩೦॥
ಗಾಂಡೀವಮ್ ಸ್ರಂಸತೇ
ಹಸ್ತಾತ್ ತ್ವಕ್ ಚೈವ ಪರಿದಹ್ಯತೇ ನಚ ಶಕ್ನೋಮಿ ಅವಸ್ಥಾತುಂ ಭ್ರಮತೀವ ಚ ಮೇ ಮನಃ -ಗಾಂಡೀವ ಕೈಯಿಂದ
ಜಾರುತ್ತಿದೆ, ತೊಗಲು
ಉರಿಯೆದ್ದಿದೆ. ನಿಂತಲ್ಲಿ ನಿಲ್ಲಲಾಗುತ್ತಿಲ್ಲ. ನನ್ನ ಮನಸ್ಸು ಗೊಂದಲಮಯವಾಗುತ್ತಿದೆ.ನಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ॥೩೦॥
ಒಬ್ಬ ವ್ಯಕ್ತಿ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಂಡಾಗ, ಆತನ ಅಂತರಂಗದ ಅನುಭವ ದೈಹಿಕವಾಗಿ ಹೇಗೆ ಹೊರಹೊಮ್ಮುತ್ತದೆ ಎನ್ನುವುದನ್ನು ಇಲ್ಲಿ ಕಾಣಬಹುದು.ಆತ್ಮವಿಶ್ವಾಸವಿರದ ವ್ಯಕ್ತಿ ತನ್ನ ಮುಷ್ಠಿ ಬಿಗಿ ಹಿಡಿಯಲಾರ. ಇಲ್ಲಿ ಅರ್ಜುನನ ಸ್ಥಿತಿ ಕೂಡಾ ಹಾಗೇ ಆಗಿದೆ. ಆತ ಹೇಳುತ್ತಾನೆ: "ಗಾಂಡೀವ ನನ್ನ ಕೈಯಿಂದ ಜಾರುತ್ತಿದೆ, ಇಡೀ ಮೈ ಉರಿ ಎದ್ದ ಹಾಗೆ ಸಂಕಟವಾಗುತ್ತಿದೆ" ಎಂದು. ಇದು ಒಳಗಿನ ಭಾವದ, ತುಮುಲದ ಅಭಿವ್ಯಕ್ತ. ಒಮ್ಮೆ ಮನಸ್ಸು ಸ್ಥಿರವಿಲ್ಲದಿದ್ದರೆ ದೇಹಕೂಡಾ ಸ್ಥಿರವಿರಲಾರದು. ಅದೇ ರೀತಿ ದೇಹ ಸ್ಥಿರವಿಲ್ಲದಿದ್ದರೆ ಮನಸ್ಸನ್ನು ಸ್ಥಿರಗೊಳಿಸುವುದು ಸಾದ್ಯವಿಲ್ಲ. "ಈ ರಥದಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಮನಸ್ಸು ಗೊಂದಲಮಯವಾಗಿದೆ" ಎಂದು ಕೃಷ್ಣನಲ್ಲಿ ಅರ್ಜುನ ಪರಿತಪಿಸುತ್ತಾನೆ.
· ಶ್ಲೋಕ - 31
ನಿಮಿತ್ತಾನಿ
ಚ ಪಶ್ಯಾಮಿ ವಿಪರೀತಾನಿ ಕೇಶವ ।
ನಚ ಶ್ರೇಯೋssನುಪಶ್ಯಾಮಿ ಹತ್ವಾ ಸ್ವಜನಮಾಹವೇ ॥೩೧॥
ನಿಮಿತ್ತಾನಿ ಚ ಪಶ್ಯಾಮಿ
ವಿಪರೀತಾನಿ ಕೇಶವ ನಚ ಶ್ರೇಯಃ ಅನುಪಶ್ಯಾಮಿ ಹತ್ವಾ ಸ್ವಜನಮ್ ಆಹವೇ- ಕೇಶವ, ಕೆಟ್ಟ ಶಕುನಗಳನ್ನೇ ಕಾಣುತ್ತಿದ್ದೇನೆ.
ಕದನದಲ್ಲಿ ನಮ್ಮ ಮಂದಿಯನ್ನೆ ಕೊಂದು ಏನು ಒಳಿತೋ ತಿಳಿಯದು.ನಚ ಶ್ರೇಯೋssನುಪಶ್ಯಾಮಿ ಹತ್ವಾ ಸ್ವಜನಮಾಹವೇ ॥೩೧॥
'ನಿಮಿತ್ತಗಳು' ಎಂದರೆ ಶಕುನಗಳು. ಇಲ್ಲಿ ಅರ್ಜುನ ಹಿಂದೆ ನಡೆದ ಕೆಲವು ಕೆಟ್ಟ ಶಕುನಗಳನ್ನು ನೆನಪಿಸಿಕೊಳ್ಳುತ್ತಾನೆ. ಈ ಶಕುನಗಳನ್ನು ಆತ ಯುದ್ಧ ಭೂಮಿಗೆ ಬರುವ ಮೊದಲೇ ಗಮನಿಸಿದ್ದ. ಆದರೆ ಆತನಿಗೆ ಅದು ಈಗ ನೆನಪಿಗೆ ಬರುತ್ತದೆ.
ಹಿಂದಿನವರು ಶಕುನಗಳಿಗೆ ಬಹಳ ಮಹತ್ವ ಕೊಡುತ್ತಿದ್ದರು. ಈ ಪ್ರಪಂಚದಲ್ಲಿ ಎಲ್ಲವೂ ಒಂದೊಕ್ಕೊಂದು ಬೆಸೆದುಕೊಂಡಿದೆ. ಒಂದು ಪರಮಾಣುವಿನಿಂದ ಹಿಡಿದು ಬ್ರಹ್ಮಾಂಡದ ತನಕ ಒಂದಕ್ಕೊಂದು ಸುಸಂಬದ್ಧವಾಗಿ ಎಲ್ಲವೂ ಗಣಿತಬದ್ಧ. ಈ ಕಾರಣದಿಂದ ಯಾವುದನ್ನು ಬೇಕಾದರೂ ಗಣಿತಬದ್ಧವಾಗಿ ಕಂಡುಕೊಳ್ಳಬಹುದು. ಇದೇ ಜ್ಯೋತಿಷ್ಯ, ಶಕುನ, ಪಂಚಾಗ ಇತ್ಯಾದಿ. ಇಲ್ಲಿ ಯಾವುದೂ ಆಕಸ್ಮಿಕವಲ್ಲ. ನಮಗೆ ತಿಳಿಯದಿದ್ದಾಗ ಮಾತ್ರ ಅದು ನಮಗೆ ಆಕಸ್ಮಿಕ.
ಮಹಾಭಾರತ ಕಾಲದಲ್ಲಿ ಕಂಡ ಕೆಲವು ಶಕುನಗಳನ್ನು ಇಲ್ಲಿ ನೋಡೋಣ: ಆನೆಗಳು, ಕುದುರೆಗಳು ಯುದ್ಧಕ್ಕೆ ಮೊದಲು ಕಣ್ಣೀರು ಸುರಿಸುತ್ತಿದ್ದವು. ನರಿಗಳು ಸೇನಾಪಡೆಯ ಸುತ್ತ ಊಳಿಡುತ್ತಿದ್ದವು. ಪ್ರಾಣಿಗಳಿಗೆ ರಕ್ತಪಾತದ ಹಾಗು ಸಾವಿನ ಮುನ್ಸೂಚನೆ ಇರುತ್ತದೆ. ಮುಂದೆ ನಡೆಯುವುದನ್ನು ಅವು ನಿಖರವಾಗಿ ಗ್ರಹಿಸಬಲ್ಲವು. ಇದು ಮಹಾಭಾರತ ಯುದ್ಧಕ್ಕೆ ಮೊದಲು ಕಂಡ ಒಂದು ಶಕುನ. ಇನ್ನು ಬ್ರಹ್ಮಾಂಡದಲ್ಲಿ ಹದಿಮೂರು ದಿನಗಳ ಅಂತರದಲ್ಲಿ ಎರಡು ಗ್ರಹಣ ಮಹಾಭಾರತ ಯುದ್ಧಕಾಲದಲ್ಲಿ ಘಟಿಸಿದೆ. ಯುದ್ಧ ಪ್ರಾರಂಭವಾಗಿ ಐದನೇ ದಿನಕ್ಕೆ ಒಂದು ಗ್ರಹಣ, ಪುನಃ ಹದಿಮೂರು ದಿನಗಳ ಅಂತರದಲ್ಲಿ ಇನ್ನೊಂದು ಗ್ರಹಣ. ಇದು ಮೃತ್ಯು ಸೂಚಕ ಭೀಕರ ಶಕುನ. ಇದನ್ನು ವ್ಯಾಸರು ಮೊದಲೇ ಧೃತರಾಷ್ಟ್ರನಿಗೆ ತಿಳಿಸಿದ್ದರು. 'ಲೋಕಕಂಟಕನಾದ ನಿನ್ನ ಮಗನಿಂದ-ಲೋಕ ನಾಶವಾಗುತ್ತದೆ' ಎಂದು.
ಹೀಗೆ ಹಿಂದೆ ನಡೆದ ಶಕುನಗಳನ್ನು ನೆನಪಿಸಿದ ಅರ್ಜುನ, ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸುತ್ತಾನೆ. ಪ್ರಾರಂಭದಲ್ಲಿ 'ಕೃಷ್ಣ' ಎಂದು ಆತ ಸಂಬೋಧಿಸಿರುವುದನ್ನು ನಾವು ನೋಡಿದ್ದೇವೆ. ಕೃಷ್ಣ ಎಂದರೆ ಕೃಷಿ+ಣಃ -ಅಂದರೆ ಭೂಮಿಗೆ ಆನಂದವನ್ನು ಕೊಡಲು, ಬಲತುಂಬಲು ಬಂದವ ಎಂದರ್ಥ. ಕೇಶವ ಎಂದರೆ ಕಾ+ಈಶ+ವ. ಇಲ್ಲಿ 'ಕಾ' ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ; 'ಈಶ' ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ; ಕೇಶವ ಎಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಪರಶಕ್ತಿ.
ಇಲ್ಲಿ ಅರ್ಜುನ ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸುತ್ತಿರುವುದಕ್ಕೆ ವಿಶೇಷ ಕಾರಣವಿದೆ. "ಭೂಮಿಗೆ ಆನಂದವನ್ನು, ತ್ರಾಣವನ್ನು ಕೊಡಲು ಇಳಿದುಬಂದ ಸೃಷ್ಟಿಕರ್ತನಾದ ನೀನೇ ಸಂಹಾರಕಾರಕನಾಗಿ, ಈ ಯುಗಾಂತದ ಮಹಾಯುದ್ಧದ ಸೂತ್ರದಾರಿಯಾಗಿ ಏಕೆ ನಿಂತೆ? ಏನು ನಿನ್ನ ಉದ್ದೇಶ?" ಎನ್ನುವುದು ಈ ವಿಶೇಷಣದ ಹಿಂದಿರುವ ಧ್ವನಿ. ಮಹಾಭಾರತ ಯುದ್ಧದ ಹದಿನೆಂಟನೆ ದಿನ ದ್ವಾಪರಯುಗ ಅಂತ್ಯವಾಗಿ ಕಲಿಯುಗ ಪ್ರಾರಂಭವಾದದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.
ಇಲ್ಲಿಂದ ಮುದುವರಿದು ಅರ್ಜುನ ತಾನು ಏಕೆ ಯುದ್ಧ ಮಾಡಬಾರದು ಎನ್ನಲು ಕೆಲವು ಕಾರಣಗಳನ್ನು ಕೊಡಲಾರಂಭಿಸುತ್ತಾನೆ. "ನಚ ಶ್ರೇಯಃ ಅನುಪಶ್ಯಾಮಿ ಹತ್ವಾ ಸ್ವಜನಮ್ ಆಹವೇ"-'ನಮ್ಮ ಬಂಧುಗಳನ್ನು ಕೊಲ್ಲುವುದರಿಂದ ನಮ್ಮ ಹೆಸರು ಇತಿಹಾಸದಲ್ಲಿ, ಮುಂದಿನ ಯುಗಗಳಲ್ಲಿ ಪ್ರಶಂಸನೀಯವಾಗಿ ಉಳಿಯುತ್ತದೆ ಎಂದು ನನಗೆ ಯಾವ ನೆಲೆಯಲ್ಲೂ ಅನಿಸುವುದಿಲ್ಲ' ಎನ್ನುತ್ತಾನೆ ಅರ್ಜುನ.
· ಶ್ಲೋಕ - 32
ನ
ಕಾಂಕ್ಷೇ ವಿಜಯಂ ಕೃಷ್ಣ ನಚ ರಾಜ್ಯಂ ಸುಖಾನಿ ಚ ।
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥೩೨॥
ನ ಕಾಂಕ್ಷೇ ವಿಜಯಮ್
ಕೃಷ್ಣ ನಚ ರಾಜ್ಯಮ್ ಸುಖಾನಿ ಚ ಕಿಮ್ ನೋ ರಾಜ್ಯೇನ ಗೋವಿಂದ ಕಿಮ್ ಭೋಗೈ ಜೀವಿತೇನ ವಾ- ಕೃಷ್ಣ, ನಾನು ಗೆಲುವನ್ನು ಬಯಸುವುದಿಲ್ಲ; ಇಲ್ಲ ಅರಸೊತ್ತಿಗೆಯನ್ನು; ಸುಖಗಳನ್ನು ಕೂಡಾ. ಗೋವಿಂದ, ನಮಗೆ ದೊರೆತನದಿಂದೇನು? ಐಷಾರಾಮಗಳಿಂದೇನು ? ಬದುಕಿಯಾದರೂ ಏನು ?ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥೩೨॥
ಅರ್ಜುನ ಧರ್ಮರಾಯನ ಪರ ಹೋರಾಟಕ್ಕೆ ನಿಂತವ. ಯುದ್ಧವನ್ನು ನಿಲ್ಲಿಸುವುದಾಗಲಿ ಅಥವಾ ನಿರ್ಣಯ ತೆಗೆದುಕೊಳ್ಳುವುದಾಗಲಿ ಅದು ಕೊನೆಯದಾಗಿ ಧರ್ಮರಾಯನ ವಿವೇಚನೆಯಂತೇ ನಡೆಯಬೇಕು. ಇಲ್ಲಿ ಅರ್ಜುನ ತಾನೇ ನಿರ್ಣಾಯಕ ಎನ್ನುವಂತೆ ಮಾತನಾಡುತ್ತಾನೆ. "ಯಾರಿಗೆ ಬೇಕಾಗಿದೆ ಈ ಗೆಲುವು ಕೃಷ್ಣ, ನನಗೆ ವಿಜಯ ಬೇಕಾಗಿಲ್ಲ, ನಾನು ಗುರುಹಿರಿಯರನ್ನು ಕೊಂದು, ಗೆಲುವನ್ನು ಬಯಸುವುದಿಲ್ಲ" ಎನ್ನುತ್ತಾನೆ. ಈ ಶ್ಲೋಕದಲ್ಲಿ ಆತ ಪುನಃ "ಕೃಷ್ಣ" ಎಂದು ಸಂಬೋಧಿಸುತ್ತಾನೆ. ಇಲ್ಲಿ "ಕೃಷ್ಣಃ" ಎಂದರೆ ಕರ್ಷಣೆ ಮಾಡುವವ. ತನ್ನ ಸೌಂದರ್ಯದಿಂದ ಆಕರ್ಷಿಸಿ ಉತ್ಕರ್ಷಣೆ ಮಾಡುವವ ಎಂದರ್ಥ. "ಲೋಕದ ಆಕರ್ಷಣ ಶಕ್ತಿಯಾದ ನೀನು ನಮ್ಮನ್ನು, ಈ ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಏಕೆ ಎಳೆದುತಂದೆ?" ಎನ್ನುವ ಭಾವಾರ್ಥದಲ್ಲಿ ಅರ್ಜುನ ಮಾತನಾಡುತ್ತಾನೆ.
ಇಲ್ಲಿಂದ ಮುಂದುವರೆದು ಹೇಳುತ್ತಾನೆ "ನಮಗೆ ಈ ರಾಜ್ಯ ಪಡೆದು ಏನಾಗಬೇಕಾಗಿದೆ. ಈ ರಾಜ್ಯವನ್ನು ಪಡೆದು, ಭೋಗವನ್ನು ಪಡೆದು ಏನು ಪ್ರಯೋಜನ ಗೋವಿಂದಾ?" ಎಂದು. ಇಲ್ಲಿ ಅರ್ಜುನ ಭಗವಂತನನ್ನು "ಗೋವಿಂದಃ" ಎಂದು ಸಂಬೋಧಿಸುತ್ತಾನೆ. ಗೋವಿಂದ ಎಂದರೆ ವೇದವನ್ನು ಪಡೆದವನು, ವೇದಗಳಿಂದ ವಾಚ್ಯನಾದವನು, ವೇದಗಳ ಸಮಗ್ರ ಅರ್ಥ ತಿಳಿದವನು, ಭೂಮಿಗಿಳಿದು ಬಂದವನು, ಗೋವುಗಳನ್ನು ಕಾಯ್ದವನು ಇತ್ಯಾದಿ. ಕೃಷ್ಣ ಎಷ್ಟೋ ದುಷ್ಟ ರಾಕ್ಷಸರ ಹಾಗು ರಾಜರ ಸಂಹಾರ ಮಾಡಿದವ. ಆದರೆ ಎಲ್ಲಿಯೂ ಸಿಂಹಾಸನವೇರಿ ಅರಸೊತ್ತಿಗೆ ಮಾಡಿರಲಿಲ್ಲ. ಗೋಪಾಲಕರ ಜೊತೆಗೆ ಸೇರಿ ಗೋವುಗಳನ್ನು ಕಾಯ್ದವ ಆತ. ಇಲ್ಲಿ ಅರ್ಜುನ "ನಿನ್ನಂತೆ ನನಗೆ ಯಾವುದೇ ಸಿಂಹಾಸನವೇರುವ ಆಸೆ ಇಲ್ಲ" ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾನೆ. "ಭೂಮಿಗಿಳಿದು ಬಂದ ನೀನು ನನ್ನನ್ನೇಕೆ ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಿ? " ಎನ್ನುವ ಭಾವದಲ್ಲಿ ಆತ ಭಗವಂತನನ್ನು 'ಗೋವಿಂದ' ಎಂದು ಸಂಬೋಧಿಸಿದ್ದಾನೆ.
· ಶ್ಲೋಕ - 33
ಯೇಷಾಮರ್ಥೇ
ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ।
ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ॥೩೩॥
ಯೇಷಾಮ್ ಅರ್ಥೇ
ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ತೇ ಇಮೇ ಅವಸ್ಥಿತಾ ಯುದ್ಧೇ ಪ್ರಾಣಾನ್ ತ್ಯಕ್ತ್ವಾ ಧನಾನಿ
ಚ-ಯಾರಿಗಾಗಿ ಅರೆಸೋತ್ತಿಗೆ? ಸುಖ-ಭೋಗಕ್ಕಾಗಿ ಇವರು
ಹರಣದ ಮತ್ತು ಹಣದ ಹಂಗು ತೊರೆದು ಕಾಳಗದ ಕಣದಲ್ಲಿ ನಿಂತಿದ್ದಾರೆ.ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ॥೩೩॥
ಒಂದು ವೇಳೆ ಈ ರಾಜಭೋಗ ಬೇಕಿದ್ದರೆ ಅದು ಯಾರಿಗೋಸ್ಕರ? ನಮ್ಮೆಲ್ಲ ಗುರು ಹಿರಿಯರ ಮಧ್ಯ, ಸಂತೋಷದಿಂದ ನಾವಿರಬೇಕು. ಅವರನ್ನೆಲ್ಲಾ ಕೊಂದು ನಾವೇನು ಸಂತೋಷಪಡುವುದು? ಯಾರಿಗೋಸ್ಕರ ಈ ಜೀವನದ ಸುಖವನ್ನು ಸಾಮ್ರಾಜ್ಯವನ್ನು ಬಯಸುತ್ತಿದ್ದೆವೋ, ಅವರೆಲ್ಲರೂ ಪ್ರಾಣದ ಹಂಗನ್ನು ತೊರೆದು, ಸರ್ವಸ್ವವನ್ನೂ ಕಳೆದುಕೊಳ್ಳಲು ಸಿದ್ಧರಾಗಿ ನಮ್ಮೆದುರು ಯುದ್ಧಕ್ಕೆ ನಿಂತಿದ್ದಾರೆ.
· ಶ್ಲೋಕ - 34
ಆಚಾರ್ಯಾಃ
ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ ।
ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ ॥೩೪॥
ಆಚಾರ್ಯಾಃ ಪಿತರಃ
ಪುತ್ರಾಃ ತಥಾ ಏವ ಚ ಪಿತಾಮಹಾಃ ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಃ ತಥಾ-ಗುರುಗಳು, ತಂದೆ ತಾಯಿಯಂತಿರುವವರು, ಮಕ್ಕಳು. ಅಂತೆಯೇ ಅಜ್ಜಂದಿರು, ಮಾವಂದಿರು, ಸೋದರ ಮಾವಂದಿರು, ಮೊಮ್ಮಕ್ಕಳು, ಮೈದುನಂದಿರು ಮತ್ತು ನೆಂಟರಿಷ್ಟರು.ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ ॥೩೪॥
ಅರ್ಜುನ ತನ್ನ ಬಂಧುಗಳನ್ನು, ಕುಟುಂಬದ ಸದಸ್ಯರ ಪಟ್ಟಿಯನ್ನು ಕೃಷ್ಣನ ಮುಂದೆ ಹೇಳಿಕೊಳ್ಳುತ್ತಾನೆ. ಗುರುಗಳು, ಪಿತೃಸಮಾನರು, ಮಕ್ಕಳು, ಅಜ್ಜಂದಿರು, ಮಾವಂದಿರು, ಹೆಣ್ಣು ಕೊಟ್ಟ ಮಾವಂದಿರು, ಮೊಮ್ಮಕ್ಕಳು, ಹೆಂಡತಿಯ ಅಣ್ಣ-ತಮ್ಮಂದಿರು ಮತ್ತು ನೆಂಟರಿಷ್ಟರು. ಹೀಗೆ ಕೇವಲ ತನ್ನ ಸಂಬಂಧಿಗಳ ಪಟ್ಟಿ ಕೊಡುತ್ತಿರುವ ಅರ್ಜುನ ತನ್ನ ಸಾಮಾಜಿಕ ಕರ್ತವ್ಯ ಮರೆತು ವೈಯಕ್ತಿಕವಾಗಿ ಮಾತನಾಡುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
· ಶ್ಲೋಕ - 35
ಏತಾನ್
ಹಂತುಮಿಚ್ಛಾಮಿ ಘ್ನತೋsಪಿ
ಮಧುಸೂದನ ।
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ॥೩೫॥
ಏತಾನ್ ನ ಹಂತುಮ್
ಇಚ್ಛಾಮಿ ಘ್ನತಃ ಅಪಿ ಮಧುಸೂದನ ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋಃ ಕಿಮ್ ನು ಮಹೀ ಕೃತೇ- ಓ ಮಧುಸೂದನ, ನನ್ನನ್ನು ಕೊಲ್ಲಬಂದರೂ ನಾನಿವರನ್ನು
ಕೊಲ್ಲಬಯಸೆ. ಮೂರು
ಲೋಕದ ದೊರೆತನಕ್ಕಾಗಿ ಕೂಡಾ. ಇನ್ನು ಭೂಮಿಯ ಮಾತೇನು?ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ॥೩೫॥
ನನಗೆ ಇವರನ್ನು ಕೊಲ್ಲುವ ಬಯಕೆ ಇಲ್ಲ. ಒಂದು ವೇಳೆ ಅವರು ನನ್ನನ್ನು ಕೊಲ್ಲ ಬಂದರೂ ಕೂಡಾ ನಾನವರನ್ನು ಕೊಲ್ಲಲಾರೆ. ಇಡೀ ಬ್ರಹ್ಮಾಂಡದ ಒಡೆತನ ಸಿಗುತ್ತದೆ ಎಂದರೂ ಕೂಡಾ ನಾನು ಯುದ್ಧ ಮಾಡಲಾರೆ. ಅಂಥದ್ದರಲ್ಲಿ ಈ ತುಂಡು ಭೂಮಿಗಾಗಿ ಏಕೆ ಯುದ್ಧ?
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು 'ಮಧುಸೂದನ' ಎಂದು ಸಂಬೋಧಿಸಿದ್ದಾನೆ. ಮಧು ಎಂದರೆ ಆನಂದ. ಮಧುಸೂದನ ಎಂದರೆ ಆನಂದ ನಾಶಕ. ಧರ್ಮ ಮಾರ್ಗವನ್ನು ಬಿಟ್ಟು, ಅಧರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ಧಾರ ಮಾಡುವ ಆನಂದರೂಪಿ ಭಗವಂತ ಮಧುಸೂದನ. “ಸಾತ್ವಿಕರಿಗೆ ಆನಂದವನ್ನು ಕೊಟ್ಟು ತಾಮಸಿಗಳ ಆನಂದ ಹರಣ ಮಾಡುವ ನೀನು ಏನು ಮಾಡಲು ಬಂದವ?” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. “ಯುದ್ಧ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ” ಎಂದು ಅರ್ಜುನ ತನ್ನ ತುಮುಲವನ್ನು ಕೃಷ್ಣನಲ್ಲಿ ವ್ಯಕ್ತಪಡಿಸುತ್ತಾನೆ.
· ಶ್ಲೋಕ - 36
ನಿಹತ್ಯ
ಧಾರ್ತರಾಷ್ಟ್ರಾನ್ ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ ।
ಪಾಪಮೇವಾsಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ॥೩೬॥
ನಿಹತ್ಯ
ಧಾರ್ತರಾಷ್ಟ್ರಾನ್ ನಃ ಕಾ ಪ್ರೀತಿಃ ಸ್ಯಾತ್ ಜನಾರ್ದನ ಪಾಪಮ್ ಏವ ಆಶ್ರಯೇತ್ ಅಸ್ಮಾನ್
ಹತ್ವಾ ಏತಾನ್ ಆತತಾಯಿನಃ -ಧಾರ್ತರಾಷ್ಟ್ರರನ್ನು ಕೊಂದು ನಮಗಾದರೂ ಏನು ಸುಖವುಂಟು ಜನಾರ್ದನ? ಈ ಕುಲಗೇಡಿಗಳನ್ನು ಕೊಂದರೆ ನಮಗೆ ಪಾಪವೇ
ತಟ್ಟೀತು.ಪಾಪಮೇವಾsಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ॥೩೬॥
ಒಂದು ವೇಳೆ ಧಾರ್ತರಾಷ್ಟ್ರರನ್ನು ಕೊಂದರೆ ನಮಗೆ ಆನಂದವೇನು ? ಅದರಿಂದ ಸಾಯುವ ತನಕ ನಿರಂತರ ಪಾಪಪ್ರಜ್ಞೆ ನಮ್ಮನ್ನು ಕಾಡಬಹುದು. ಇವರನ್ನು ಕೊಂದು ಪಾಪಪ್ರಜ್ಞೆಯಿಂದ ಬದುಕಬೇಕೇ ಹೊರತು ಇನ್ನೇನೂ ಲಾಭವಿಲ್ಲ.
ಈ ಶ್ಲೋಕದಲ್ಲಿ ಅರ್ಜುನ "ಆತತಾಯಿ" ಎನ್ನುವ ಪದವನ್ನು ಬಳಸಿದ್ದಾನೆ. ಆತತಾಯಿ ಎಂದರೆ ಇನ್ನೊಬ್ಬರ ಮನೆಗೆ ಬೆಂಕಿ ಹಾಕುವವ, ಇನ್ನೊಬ್ಬರ ಆಹಾರಕ್ಕೆ ವಿಷ ಬೆರೆಸಿ ಕೊಡುವವ, ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸುವವ, ಪರ ಸ್ತ್ರೀಯರ ಮೇಲೆ ಕೈ ಹಾಕುವವ ಇತ್ಯಾದಿ. ಶಾಸ್ತ್ರ 'ಆತತಾಯಿನರನ್ನು' ಕಂಡಲ್ಲಿ ಹೊಡೆದು ಸಾಯಿಸು ಎನ್ನುತ್ತದೆ. ಇಲ್ಲಿ ದುರ್ಯೋಧನ ಮೇಲಿನ ಎಲ್ಲಾ ಕೆಟ್ಟ ಕೆಲಸವನ್ನೂ ಮಾಡಿದ್ದ. ಭೀಮನಿಗೆ ವಿಷ ಸೇರಿಸಿ ಕೊಟ್ಟಿದ್ದ, ದ್ರೌಪದಿ ವಸ್ತ್ರಾಪಹರಣ ಮಾಡಿದ್ದ, ಪಾಂಡವರಿದ್ದ ಅರಗಿನ ಮನೆಗೆ ಬೆಂಕಿ ಇಟ್ಟಿದ್ದ. ಆದರೆ ಇಲ್ಲಿ ಅರ್ಜುನನಿಗೆ ಬಂಧು ಪ್ರೇಮ ಎಲ್ಲಿಯವರೆಗೆ ಕಾಡುತ್ತಿದೆ ಎಂದರೆ: “ಇವರೆಲ್ಲರೂ ಆತತಾಯಿನರಾದರೂ ಕೂಡಾ, ನನ್ನ ದೊಡ್ಡಪ್ಪನ ಮಕ್ಕಳಲ್ಲವೇ?” ಎಂದು ಕೃಷ್ಣನಲ್ಲಿ ಪರಿತಪಿಸುತ್ತಾನೆ.
ಈ ಶ್ಲೋಕದಲ್ಲಿ ಅರ್ಜುನ ಶ್ರೀಕೃಷ್ಣನನ್ನು ‘ಜನಾರ್ದನ’ ಎಂದು ಸಂಬೋಧಿಸಿದ್ದಾನೆ. ಜನಾರ್ದನ ಎಂದರೆ ದುರ್ಜನ ಸಂಹಾರಕ ಹಾಗು ಸಜ್ಜನರಿಗೆ ಮುಂದೆ ಹುಟ್ಟಿಲ್ಲದ ಮೊಕ್ಷಪ್ರದವಾದ ಸಾವನ್ನು ಕೊಡುವವ. "ಮೋಕ್ಷಪ್ರದನಾದ ನೀನು ಮತ್ತೆ ಪುನಃ ಈ ಹುಟ್ಟು-ಸಾವಿನ ಚಕ್ರದಲ್ಲಿ ಬರುವ ಈ ಯುದ್ಧದಲ್ಲಿ ನಮ್ಮನ್ನು ಏಕೆ ತೊಡಗಿಸುತ್ತಿರುವೆ? ಯುದ್ಧ ಎಂದೂ ಮೊಕ್ಷಪ್ರದವಲ್ಲ, ಅದು ಸೇಡು-ದ್ವೇಷದಿಂದ ಕೂಡಿರುತ್ತದೆ. ಹಾಗಿರುವಾಗ ಈ ಯುದ್ಧ ಏಕೆ?” ಎನ್ನುವುದು ಈ ಸಂಬೋಧನೆಯ ಹಿಂದಿರುವ ಧ್ವನಿ.
· ಶ್ಲೋಕ - 37
ಯದ್ಯಪ್ಯೇತೇ
ನ ಪಶ್ಯಂತಿ ಲೋಭೋಪಹತಚೇತಸಃ ।
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ॥೩೮॥
ಯದಿ ಅಪಿ ಏತೇ ನ
ಪಶ್ಯಂತಿ ಲೋಭ ಉಪಹತ ಚೇತಸಃ ಕುಲಕ್ಷಯ ಕೃತಮ್ ದೋಷಮ್ ಮಿತ್ರದ್ರೋಹೇ ಚ ಪಾತಕಮ್- -ಇವರೆಲ್ಲರ ಹೃದಯ ಲೋಭದ ವಶವಾಗಿದೆ.
ಕುಲದ ಅಳಿವಿನಿಂದಾಗುವ ಮತ್ತು ಮಿತ್ರ ದ್ರೋಹದಿಂದಾಗುವ ಪಾತಕವನ್ನು ಇವರು
ಕಾಣುತ್ತಿಲ್ಲ.ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ॥೩೮॥
ದುಡ್ಡಿನ ಆಸೆಯಿಂದ, ಲೋಭದಿಂದ ಕುರುಡಾಗಿ ಅವರ ಮನಸ್ಸು ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಇದರಿಂದ ಕುಲಕ್ಷಯವಾಗುತ್ತದೆ. ಇಡೀ ಭರತವಂಶ ನಿರ್ವಂಶವಾಗುತ್ತದೆ. ಬಂಧುಗಳಾದ ನಾವು ಒಬ್ಬರಿಗೊಬ್ಬರು ಮಿತ್ರರಂತೆ ಆತ್ಮೀಯತೆಯಿಂದ ಬದುಕಬೇಕಿತ್ತು. ಆದರೆ ಒಬ್ಬರನೊಬ್ಬರು ದ್ವೇಷಿಸುತ್ತಿದ್ದೇವೆ. ಇದು ದ್ರೋಹ.
ಇಲ್ಲಿ 'ಮಿತ್ರ' ಎನ್ನುವ ಪದ ಬಳಕೆಯಾಗಿದೆ. ಯಾರು ನಿಜವಾದ ಮಿತ್ರ? ನಮಗೆ ಯಾವಾಗ ಆಪತ್ತು ಬಂದೀತು ಎಂದು ನಮಗಿಂತ ಮೊದಲೇ ಊಹಿಸಿ, ಪೂರ್ವಭಾವಿಯಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಜೀವಕ್ಕೆ ಜೀವ ಕೊಡುವವನು 'ಮಿತ್ರ'.
· ಶ್ಲೋಕ - 38
ಯದ್ಯಪ್ಯೇತೇ
ನ ಪಶ್ಯಂತಿ ಲೋಭೋಪಹತಚೇತಸಃ ।
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ॥೩೮॥
ಯದಿ ಅಪಿ ಏತೇ ನ
ಪಶ್ಯಂತಿ ಲೋಭ ಉಪಹತ ಚೇತಸಃ ಕುಲಕ್ಷಯ ಕೃತಮ್ ದೋಷಮ್ ಮಿತ್ರದ್ರೋಹೇ ಚ ಪಾತಕಮ್- -ಇವರೆಲ್ಲರ ಹೃದಯ ಲೋಭದ ವಶವಾಗಿದೆ.
ಕುಲದ ಅಳಿವಿನಿಂದಾಗುವ ಮತ್ತು ಮಿತ್ರ ದ್ರೋಹದಿಂದಾಗುವ ಪಾತಕವನ್ನು ಇವರು
ಕಾಣುತ್ತಿಲ್ಲ.ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ॥೩೮॥
ದುಡ್ಡಿನ ಆಸೆಯಿಂದ, ಲೋಭದಿಂದ ಕುರುಡಾಗಿ ಅವರ ಮನಸ್ಸು ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಇದರಿಂದ ಕುಲಕ್ಷಯವಾಗುತ್ತದೆ. ಇಡೀ ಭರತವಂಶ ನಿರ್ವಂಶವಾಗುತ್ತದೆ. ಬಂಧುಗಳಾದ ನಾವು ಒಬ್ಬರಿಗೊಬ್ಬರು ಮಿತ್ರರಂತೆ ಆತ್ಮೀಯತೆಯಿಂದ ಬದುಕಬೇಕಿತ್ತು. ಆದರೆ ಒಬ್ಬರನೊಬ್ಬರು ದ್ವೇಷಿಸುತ್ತಿದ್ದೇವೆ. ಇದು ದ್ರೋಹ.
ಇಲ್ಲಿ 'ಮಿತ್ರ' ಎನ್ನುವ ಪದ ಬಳಕೆಯಾಗಿದೆ. ಯಾರು ನಿಜವಾದ ಮಿತ್ರ? ನಮಗೆ ಯಾವಾಗ ಆಪತ್ತು ಬಂದೀತು ಎಂದು ನಮಗಿಂತ ಮೊದಲೇ ಊಹಿಸಿ, ಪೂರ್ವಭಾವಿಯಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಜೀವಕ್ಕೆ ಜೀವ ಕೊಡುವವನು 'ಮಿತ್ರ'.
· ಶ್ಲೋಕ - 39
ಕಥಂ
ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ ।
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥೩೯॥
ಕಥಮ್ ನ ಜ್ಞೇಯಮ್
ಅಸ್ಮಾಭಿಃ ಪಾಪಾತ್ ಅಸ್ಮಾತ್ ನಿವರ್ತಿತುಮ್ ಕುಲಕ್ಷಯ ಕೃತಮ್ ದೋಷಮ್ ಪ್ರಪಶ್ಯದ್ಭಿ ಜನಾರ್ದನ- ಓ ಜನಾರ್ದನ,
ಕುಲದ ಅಳಿವಿನಿಂದಾಗುವ
ಕೇಡನ್ನು ಮುಂಗಾಣಬಲ್ಲ
ನಾವು ಇಂಥ ತಪ್ಪಿನಿಂದ ದೂರವಿರಬೇಕು ಎಂದರಿಯದಿದ್ದರೆ ಹೇಗೆ?ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥೩೯॥
ಇಂಥಹ ಮಹಾಪಾಪವನ್ನು ಮಾಡಬಾರದು ಎಂದು ನಾವು ತಿಳಿದುಕೊಳ್ಳದಿದ್ದರೆ, ದುರ್ಯೋಧನನಿಗೂ ನಮಗೂ ಇರುವ ವೆತ್ಯಾಸವಾದರೂ ಏನು? ಹುಟ್ಟು ಸಾವುಗಳ ಬಂಧದಿಂದ ಪಾರುಮಾಡುವ ಓ ಜನಾರ್ದನನೇ, ಒಂದು ಕುಲವನ್ನು ನಾಶ ಮಾಡುವಂತಹ ದೋಷ ಸ್ಪಷ್ಟವಾಗಿ ನನ್ನ ಕಣ್ಣಿಗೆ ಕಾಣುತ್ತಿದೆ. ಯುದ್ಧೋತ್ತರ ಭಾರತದ ಚಿತ್ರ ನನ್ನ ಕಣ್ಣಿಗೆ ಕಟ್ಟುತ್ತಿದೆ. ಯುದ್ಧದಿಂದಾಗುವ ಅನಿಷ್ಟ ಗೊತ್ತಿದ್ದೂ ಕೂಡಾ, ಯುದ್ಧಕ್ಕೆ ಕಾಲು ಕೆದಕುವ ಬುದ್ಧಿಯನ್ನು ನಾವು ತೋರಿಸಿದರೆ ದುರ್ಯೋಧನನಂತೆ ನಾವು ಕೀಳು ಮಟ್ಟಕ್ಕಿಳಿದಂತಾಗುವುದಿಲ್ಲವೇ? ಇದು ಅರ್ಜುನನ ಪ್ರಶ್ನೆ.
· ಶ್ಲೋಕ - 40
ಕುಲಕ್ಷಯೇ
ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ ।
ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋsಭಿಭವತ್ಯುತ ॥೪೦॥
ಕುಲಕ್ಷಯೇ ಪ್ರಣಶ್ಯಂತಿ
ಕುಲ ಧರ್ಮಾಃ ಸನಾತನಾಃ ಧರ್ಮೇ ನಷ್ಟೇ ಕುಲಮ್ ಕೃತ್ಸ್ನಮ್ ಅಧರ್ಮಃ ಅಭಿಭವತಿ ಉತ- -ಕುಲ ಕುಸಿದಾಗ
ಅಳಿವಿರದ ಕುಲ ಧರ್ಮಗಳು ಕಣ್ಮರೆಯಾಗುತ್ತವೆ. ಧರ್ಮ ಮರೆಯಾದರೆ ಇಡಿಯ ಕುಲವನ್ನು ಅಧರ್ಮ
ಆಕ್ರಮಿಸಿಬಿಡುತ್ತದೆ.ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋsಭಿಭವತ್ಯುತ ॥೪೦॥
ಯುದ್ಧದಿಂದಾಗುವ ದೊಡ್ಡ ಸಮಸ್ಯೆ ಎಂದರೆ "ಕುಲಧರ್ಮ" ನಾಶ. ಈ ಶ್ಲೋಕದಲ್ಲಿ ಅರ್ಜುನ ಧರ್ಮದ ಕುರಿತಾದ ಕೆಲವು ಪದಗಳನ್ನು ಬಳಸುತ್ತಾನೆ. ಜಾತಿಧರ್ಮ, ಕುಲಧರ್ಮ, ಸನಾತನಧರ್ಮ ಇತ್ಯಾದಿ ಶಬ್ದಗಳು ಅರ್ಥವಾಗಬೇಕಾದರೆ ಮೊದಲು ನಾವು ಧರ್ಮ ಅಂದರೆ ಏನು? ಅದರಲ್ಲಿ ಎಷ್ಟು ವಿಧ? ಎನ್ನುವುದನ್ನು ತಿಳಿದುಕೊಳ್ಳಬೇಕು.
ಸಾಮಾನ್ಯವಾಗಿ ಜಾತಿಧರ್ಮ ಎಂದಾಗ ನಮಗೆ ಕಾಣುವುದು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎನ್ನುವ ಜಾತಿ. ಇನ್ನು ಕುಲಧರ್ಮ ಎಂದಾಗ ಒಂದು ಮನೆತನದ ಮೂಲ ಕೆಲಸ-ಬಡಗಿ, ಕಮ್ಮಾರ ಚಮ್ಮಾರ ಇತ್ಯಾದಿ. ಆದರೆ ಇಲ್ಲಿ ಹೇಳುವುದು ಇದನ್ನಲ್ಲ. ಕುಲಧರ್ಮ ಎಂದರೆ ಸಮಾಜಧರ್ಮ(Religion of Society); ಜಾತಿಧರ್ಮ ಎಂದರೆ ಹುಟ್ಟುಗುಣದಿಂದ ಬಂದ ಮನುಷ್ಯನ ಸಹಜ ವೈಯಕ್ತಿಕ ಧರ್ಮ. ಈ ಎರಡು ಧರ್ಮದ ಆಚೆಗೆ ಸನಾತನಧರ್ಮ. ಅದು ಶಾಶ್ವತಧರ್ಮ. ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಸನಾತನಧರ್ಮ ಬದಲಾಗದು. ವ್ಯಕ್ತಿಧರ್ಮ ವ್ಯಕ್ತಿಗಳ ನಡುವೆ ಬದಲಾಗುತ್ತದೆ. ಸಮಾಜಧರ್ಮ ಕಾಲಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಬದಲಾಗುತ್ತದೆ.
ಜಾತಿಧರ್ಮ ಎಂದರೆ ನಮ್ಮ ಸಹಜವಾದ ಹುಟ್ಟುಗುಣ (ಸ್ವಭಾವ). ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿದೆ, ಆದರೆ ಪತ್ತೆ ಹಚ್ಚುವುದು ಕಷ್ಟ. ಏಕೆಂದರೆ ಅದರ ಮೇಲಿರುವ ಎರಡು ಆವರಣ. ಒಂದು ಅನುವಂಶೀಯ ಹಾಗು ಇನ್ನೊಂದು ಬೆಳೆದ ವಾತಾವರಣದ ಪ್ರಭಾವ. ಪರಿಸರದ ಶಿಶುವಾದ ಮಾನವ ಅನುವಂಶೀಯವಾಗಿ ಹರಿದುಬರುವ ಗುಣಗಳು ಹಾಗು ಪರಿಸರದ ಪ್ರಭಾವದಲ್ಲಿ ಬದುಕುತ್ತಾನೆ. ಇವು ನೈಜ ಸ್ವಭಾವವನ್ನು ಮುಚ್ಚಿಬಿಡುತ್ತವೆ. ಸಮಾಜಧರ್ಮ : ನಾವು ಇನ್ನೊಬ್ಬರ ನೆರವಿಲ್ಲದೆ ಏಕಾಂಗಿಯಾಗಿ ಬದುಕುವವರಲ್ಲ. ಆದ್ದರಿಂದ ಸಂಘಟನೆಗೆ ಒಂದು ಪ್ರತ್ಯೇಕಧರ್ಮ. ವ್ಯಕ್ತಿ ಧರ್ಮವನ್ನು(ವೈಯಕ್ತಿಕ ಅಭಿರುಚಿಯನ್ನು) ಸಮಾಜಧರ್ಮಕ್ಕೊಸ್ಕರ ಬದಲಿಸಿಕೊಳ್ಳಬೇಕಾಗುತ್ತದೆ (ಉದಾಹರಣೆಗೆ: ಜೋರಾಗಿ ಮಾತನಾಡುವುದು ನನ್ನ ವೈಯಕ್ತಿಕಧರ್ಮ. ಆದರೆ ಆಸ್ಪತ್ರೆಯಲ್ಲಿ ನಿಶ್ಯಬ್ಧ ಕಾಪಾಡುವುದು ಸಮಾಜಧರ್ಮ). ಸಮಾಜಧರ್ಮ ಸಮಾಜ ಬದಲಾದಂತೆ, ಸಮಾಜಕ್ಕನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ ವಿವಾಹಧರ್ಮ. ಇಂತಹ ವಯಸ್ಸಿಗೆ ಮದುವೆಯಾಗಬೇಕು ಎನ್ನುವುದು ಕಾಲಕ್ಕನುಗುಣವಾಗಿ ಬದಲಾಗುತ್ತದೆ. ವೇದಕಾಲದಲ್ಲಿ ಹೆಣ್ಣು ಮಕ್ಕಳ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು. ಕಾರಣವೇನೆಂದರೆ ಆಗ ಗುರುಕುಲ ಪದ್ಧತಿ ಇದ್ದು ಗಂಡುಮಕ್ಕಳು ತಮ್ಮ ಎಂಟನೆ ವಯಸ್ಸಿನಿಂದ ಇಪ್ಪತ್ತನೆ ವಯಸ್ಸಿನ ತನಕ ಗುರುಕುಲದಲ್ಲಿ ವಿಧ್ಯಾಭ್ಯಾಸ ಮಾಡಿ ನಂತರ ಮನೆಗೆ ಹಿಂತಿರುಗುತ್ತಿದ್ದರು(ಇದನ್ನು ಸಮಾವರ್ತನ ಎನ್ನುತ್ತಾರೆ). ಹಾಗೆ ಕಲಿತು ಬಂದ ಹುಡುಗನಿಗೆ ಎಂಟು ವರ್ಷದ ಹೆಣ್ಣನ್ನು ಮದುವೆ ಮಾಡಿಸುತ್ತಿದ್ದರು. ಆಕೆ ಆತನ ಶಿಷ್ಯೆಯಾಗಿ ವಿಧ್ಯಾಭಾಸ ಕಲಿತು ವಯಸ್ಸಿಗೆ ಬಂದನಂತರ ಸಂಸಾರ ಮಾಡುತ್ತಿದ್ದಳು. ಇದರಿಂದ ಆಕೆಗೆ ಗಂಡನನ್ನು ಅರಿಯುವ, ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಬರುತ್ತಿತ್ತು. ಕ್ರಮೇಣ ಗುರುಕುಲ ಪದ್ಧತಿ ಕೊನೆಗೊಂಡಾಗ, ಈ ಬಾಲ್ಯ ವಿವಾಹ ಕೂಡಾ ಕೊನೆಗೊಂಡಿತು. ರಾಮಾಯಣ ಮಹಾಭಾರತ ಕಾಲದಲ್ಲಿ ಬಾಲ್ಯವಿವಾಹ ಇರಲಿಲ್ಲ. ನಂತರ ಇತ್ತೀಚೆಗೆ ಸುಮಾರು ಒಂದು ಸಾವಿರ ವರ್ಷದ ಹಿಂದೆ ವಿದೇಶಿ ಆಕ್ರಮಣವಾದಾಗ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದೇ ಬೇಗ ಮದುವೆ ಮಾಡಿಸಲಾರಂಭಿಸಿದರು. ಇದು ಸಾಮಾಜಿಕ ಒತ್ತಡದಿಂದ ಆದ ಬದಲಾವಣೆ. ಹೀಗೆ ಸಮಾಜಧರ್ಮ ಸಮಯಕ್ಕನುಗುಣವಾಗಿ, ಸಮಾಜಕ್ಕನುಗುಣವಾಗಿ ಬದಲಾಗುತ್ತದೆ. ಸನಾತನಧರ್ಮ : ಇದು ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಿತಿಯಲ್ಲೂ ಎಂದೂ ಬದಲಾಗದ ಧರ್ಮ. ವೇದ ಹೇಳುವುದು ಸನಾತನ ಧರ್ಮವನ್ನು. ಉದಾಹರಣೆಗೆ: ಪ್ರಾಮಾಣಿಕವಾಗಿ ಬದುಕಬೇಕು, ಇನ್ನೊಬ್ಬರ ಸೊತ್ತನ್ನು ಕದಿಯಬಾರದು, ಸತ್ಯವನ್ನು ಹೇಳಬೇಕು, ದೇವರನ್ನು ನಂಬಿ ನಡೆಯಬೇಕು, ಇತ್ಯಾದಿ. ಇದು ಶಾಶ್ವತ ಧರ್ಮ. ಎಲ್ಲ ದೇಶ-ಕಾಲದಲ್ಲೂ ಬದಲಾಗದ ಧರ್ಮ.
ಸನಾತನ ಧರ್ಮಕ್ಕನುಗುಣವಾಗಿ ಸಾಮಾಜಿಕ ಧರ್ಮವನ್ನು ಹೊಂದಿಸಿಕೊಳ್ಳಬೇಕು. ಜಾತಿಧರ್ಮವನ್ನು ಸಮಾಜಧರ್ಮಕ್ಕನುಗುಣವಾಗಿ ಹೊಂದಿಸಿಕೊಳ್ಳಬೇಕು. ಒಂದು ವಸ್ತುವಿನ ಅಸಾಧಾರಣ ಗುಣ(Quality) ಅದರ ಧರ್ಮ. ಉದಾಹರಣೆಗೆ: ನೋಡುವುದು ಕಣ್ಣಿನ ಧರ್ಮ, ಕೇಳುವುದು ಕಿವಿಯ ಧರ್ಮ. ಆದರೆ ಯಾವುದು ಧರ್ಮವೋ ಅದೇ ಅಧರ್ಮವಾಗಬಹುದು. ನೋಡಬಾರದ್ದನ್ನು ನೋಡುವುದು ಅಧರ್ಮ! ನೋಡುವುದಕ್ಕೆ ಒಂದು ಸೀಮೆ ಇದೆ. ಅದನ್ನು ದಾಟಿದಾಗ ಧರ್ಮವೇ ಅಧರ್ಮವಾಗುತ್ತದೆ.
ಇಲ್ಲಿ ಅರ್ಜುನ ಹೇಳುತ್ತಾನೆ : “ಕುಲಕ್ಷಯವಾದಾಗ ಸಮಾಜ ಧರ್ಮವನ್ನು ನಡೆಸಬೇಕಾದ ನ್ಯಾಯಾಂಗ ವ್ಯವಸ್ಥೆ ನಾಶವಾಗಿ ಸಮಾಜ ಧರ್ಮ ನಾಶವಾಗುತ್ತದೆ. ಸಾಮಾಜಿಕ ವ್ಯವಸ್ತೆ ಕುಸಿದು ಬೀಳುತ್ತದೆ. ಇಡೀ ಸಮಾಜ ಅಧರ್ಮದಲ್ಲಿ ಮುಳುಗುತ್ತದೆ. ಇದು ಯುದ್ಧ ಮಾಡುವುದರಿಂದ ಸಮಾಜಕ್ಕೆ ನಾವು ಕೊಡುವ ಕಾಣಿಕೆ” ಎಂದು. ಇದು ಅರ್ಜುನನ ವಾದ.
· ಶ್ಲೋಕ - 41
ಅಧರ್ಮಾಭಿಭವಾತ್
ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ ।
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ॥೪೧॥
ಅಧರ್ಮ ಅಭಿಭವಾತ್ ಕೃಷ್ಣ
ಪ್ರದುಷ್ಯಂತಿ ಕುಲಸ್ತ್ರಿಯಃ ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ -ಓ ವಾರ್ಷ್ಣೇಯ,
ಅಧರ್ಮದ ಆಕ್ರಮಣದಿಂದ
ಸಮಾಜದಲ್ಲಿ ಹೆಣ್ಣು
ಮಕ್ಕಳು ದಾರಿಗೆಡುತ್ತಾರೆ. ಅದರಿಂದ ಸಮಾಜ ವರ್ಣಸಂಕರಕ್ಕೀಡಾಗುತ್ತದೆ.ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ॥೪೧॥
ಯುದ್ಧವಾದರೆ ಅದರಿಂದ ಯುವಕರೆಲ್ಲರೂ ಸಾಯುತ್ತಾರೆ. ಅಧರ್ಮ ಸಮಾಜವನ್ನು ಆಕ್ರಮಿಸುತ್ತದೆ. ಯುವಕರಿಲ್ಲದ ಸಮಾಜ ಸೃಷ್ಟಿಯಾಗುತ್ತದೆ. ಸಾಮಾಜಿಕವಾಗಿ ಸ್ತ್ರೀಗೆ ಭಧ್ರತೆ ಇಲ್ಲದಂತಾಗುತ್ತದೆ. ಅದರ ಪರಿಣಾಮ ಆಕೆಯ ಮುಗ್ಧತೆಯ ದುರುಪಯೋಗ. ಅದರಿಂದ ಸಮಾಜದಲ್ಲಿ ವರ್ಣಸಂಕರ ಉಂಟಾಗುತ್ತದೆ ಎನ್ನುತ್ತಾನೆ ಅರ್ಜುನ.
ಇಲ್ಲಿ ವರ್ಣಸಂಕರ ಎಂದರೆ ಜೀವದ ಬಣ್ಣ ಅಥವಾ ಸ್ವಭಾವ ಹಾಳಾಗುವುದು. ಹೆಣ್ಣಿಗೆ ಬಲವಂತವಾಗಿ ಆಕೆಯ ಮನಸ್ಸಿಗೆ ವಿರುದ್ಧವಾಗಿ ಉಚ್ಚ ಶಿಕ್ಷಣ ಕೊಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಾರಣ ಅದರಿಂದ ಆಕೆಯ ಗರ್ಭಕೋಶದ ಮೇಲೆ ಪರಿಣಾಮವಾಗುತ್ತದೆ. ಅದರ ಪರಿಣಾಮ ಹುಟ್ಟುವ ಮಗುವಿನ ಮೇಲೆ ಆಗುತ್ತದೆ. ಹೆಣ್ಣು ತನಗಿಷ್ಟವಿಲ್ಲದೆ ತನ್ನನ್ನು ತೊಡಗಿಸಿಕೊಂಡಾಗ; ಅನೇಕ ಪುರುಷರ ಸಂಗ ಮಾಡುವುದರಿಂದ; ಮುಂದಿನ ಸಂತಾನದ ಮೇಲೆ ಘೋರ ಪರಿಣಾಮವುಂಟಾಗುತ್ತದೆ. ಯಾರ ಮಾತನ್ನೂ ಕೇಳದ, ಯಾರ ನಿಯಮಕ್ಕೂ ಬಗ್ಗದ ವಿಕ್ಷಿಪ್ತ ಸಂತತಿ ಹುಟ್ಟುವ ಸಾಧ್ಯತೆ ಇದೆ. ಇದು ಇಲ್ಲಿ ಅರ್ಜುನ ಹೇಳುತ್ತಿರುವ ವರ್ಣಸಂಕರ.
ಇಲ್ಲಿ ಅರ್ಜುನ ಕೃಷ್ಣನನ್ನು 'ವಾರ್ಷ್ಣೇಯ' ಎಂದು ಸಂಬೋಧಿಸಿದ್ದಾನೆ. ಯಾದವ ಮನೆತನದ ಹಿರಿಯ ರಾಜ ವೃಷ್ಣಿ. ಆ ವಂಶದಲ್ಲಿ ಅವತರಿಸಿದ ಕೃಷ್ಣ ವಾರ್ಷ್ಣೇಯ. ಈ ಹೆಸರಿನ ಬಗ್ಗೆ ವೇದದಲ್ಲಿ ಉಲ್ಲೇಖವಿದೆ. ಬಯಸಿದ ಅಭೀಷ್ಟವನ್ನು ಕೊಡುವ ಹಿರಿಯ ಶಕ್ತಿಗಳಾದ ದೇವತೆಗಳ ಒಡೆಯ ಭಗವಂತ ವಾರ್ಷ್ಣೇಯ. “ಎಲ್ಲರ ಅಭೀಷ್ಟವನ್ನು ಈಡೇರಿಸುವ, ಧರ್ಮ ಸಂಸ್ಥಾಪನೆಗಾಗಿ ಇಳಿದುಬಂದ ನೀನು, ಏಕೆ ಈ ಯುದ್ಧವನ್ನು ತಡೆಯುತ್ತಿಲ್ಲ” ಎನ್ನುವ ಧ್ವನಿ ಅರ್ಜುನನ ಈ ಸಂಬೋಧನೆಯಲ್ಲಿದೆ.
· ಶ್ಲೋಕ - 42
ಸಂಕರೋ
ನರಕಾಯೈವ ಕುಲಘ್ನಾನಾಂ ಕುಲಸ್ಯ ಚ ।
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ॥೪೨॥
ಸಂಕರಃ ನರಕಾಯ ಏವ
ಕುಲಘ್ನಾನಾಮ್ ಕುಲಸ್ಯ ಚ ಪತಂತಿ ಪಿತರಃ ಹಿ ಏಷಾಮ್ ಲುಪ್ತ ಪಿಂಡ ಉದಕ ಕ್ರಿಯಾಃ -ಬಣ್ಣಗೇಡು ಕುಲಗೇಡಿಗಳನ್ನೂ,
ಕುಲವನ್ನೂ ನರಕಕ್ಕೆ
ತಳ್ಳುತ್ತದೆ. ಇಂಥವರ ಪೂರ್ವಜರು ಪಿಂಡ-ತರ್ಪಣಗಳಿಲ್ಲದೆ ನರಳುತ್ತಾರೆ.ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ॥೪೨॥
ವಿಕ್ಷಿಪ್ತ ಮನಸ್ಸಿನ ಮಕ್ಕಳು ಹುಟ್ಟುವುದರಿಂದ, ಇಡೀ ಸಮಾಜ ನರಕಕ್ಕೆ ಹೋಗಬೇಕಾಗುತ್ತದೆ. ಹಾಗು ಅದಕ್ಕೆ ಕಾರಣರಾದ ನಾವೂ ಕೂಡಾ ನರಕಕ್ಕೆ ಹೋಗಬೇಕಾಗುತ್ತದೆ. ಸಮಾಜ ಈ ರೀತಿ ಸಂಕೀರ್ಣವಾದಾಗ, ಎಲ್ಲಾ ನಂಬಿಕಯನ್ನು ಕಳೆದುಕೊಂಡಾಗ, ಪಿತೃಗಳು ಪಿಂಡ ಇಲ್ಲದೆ ನರಕದಲ್ಲಿ ಬೀಳುತ್ತಾರೆ ಎನ್ನುವುದು ಅರ್ಜುನನ ಯುದ್ಧೋತ್ತರ ಪರಿಣಾಮದ ಭೀಕರತೆಯ ಪರಿಕಲ್ಪನೆ.
ಇಲ್ಲಿ ಪಿಂಡ ಅಂದರೆ ಏನು? ಅದರ ಮಹತ್ವ ಏನು? ಅದು ಯಾರಿಗೆ ಹೋಗಿ ಹೇಗೆ ಸೇರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳೋಣ. ನಾವು ಹಾಕುವ ಸ್ಥೂಲವಾದ ಪಿಂಡ ಸತ್ತ ಜೀವಕ್ಕೆ ನೇರವಾಗಿ ಹೋಗಿ ಸೇರುವುದಿಲ್ಲ. ಸತ್ತ ನಂತರ ಸ್ಥೂಲ ಜೀವದಲ್ಲಿ ಇರುವ ಜೀವಕ್ಕೆ ಸ್ಥೂಲವಾದ ಪಿಂಡ ಬೇಕಿಲ್ಲ. ಜೀವ ತನ್ನ ಕರ್ಮಾನುಸಾರ ತಾನು ಹೋಗಬೇಕಾದಲ್ಲಿಗೆ ಹೋಗುತ್ತದೆ. ನಾವು ಪಿಂಡ ಹಾಕುವುದು ಪಿತೃದೇವತೆಗಳಿಗೆ. ಇದೊಂದು ದೇವತಾಗಣ. ಅದರಲ್ಲಿ ಒಟ್ಟು ನೂರು ದೇವತೆಗಳು. ಅವರಲ್ಲಿ ಮೂರು ಪ್ರಧಾನ`ಪಿತೃಗಳು.
ಜೀವಿತ ಕಾಲದಲ್ಲಿ ತತ್ವಾಭಿಮಾನಿ ದೇವತೆಗಳನ್ನು ಹೇಗೆ ಪೂಜಿಸುತ್ತೆವೋ ಹಾಗೆ ಸತ್ತ ನಂತರ, ಈ ಸ್ಥೂಲಶರೀರದಿಂದ ಈಚೆ ಬಂದ ಮೇಲೆ, ಜೀವವನ್ನು ರಕ್ಷಿಸುವ ದೇವತಾಗಣ-ಪಿತೃಗಣ. ಈ ಪಿತೃಗಳನ್ನು ನಿಯಂತ್ರಿಸುವವರು ವಸು-ರುದ್ರ-ಆದಿತ್ಯರು. ಈ ಪಿತೃ ದೇವತೆಗಳನ್ನು ನಮ್ಮ ಪೂರ್ವಜರು ತೀರಿಕೊಂಡ ದಿನದಂದು ಆರಾಧಿಸುವುದು ಸಂಪ್ರದಾಯ. ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಕಾರಣ ಏನೆಂದರೆ, ಒಂದು ವೇಳೆ ಕಾರಣ ವಿಶೇಷದಿಂದ ನಮ್ಮ ಹಿರಿಯರಿಗೆ ಅವರ ದಾರಿಯಲ್ಲಿ ಬಾಧಕವಾಗಿದ್ದರೆ, ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ. “ಪ್ರಾರಾಬ್ದ ಕರ್ಮದಿಂದ ಅವರನ್ನು ಕಾಪಾಡಿ” ಎನ್ನುವ ಪಿತೃ-ದೇವತೆಗಳ ಪೂಜೆ. ಇನ್ನು ಕಾಗೆ ಮುಟ್ಟುವುದು ಎಂದರೆ ಪಿತೃ ದೇವತೆಗಳು ನಮ್ಮ ಪೂಜೆಯನ್ನು ಸ್ವೀಕರಿಸಿದ ಶಕುನ ಸಂಕೇತ.
· ಶ್ಲೋಕ - 43
ದೋಷೈರೇತೈಃ
ಕುಲಘ್ನಾನಾಂ ವರ್ಣಸಂಕರಕಾರಕೈಃ ।
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ॥೪೩॥
ದೋಷೈ ಏತೈಃ
ಕುಲಘ್ನಾನಾಮ್ ವರ್ಣಸಂಕರ ಕಾರಕೈಃ ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಃ ಚ ಶಾಶ್ವತಾಃ -ಸಮಾಜದ ಬಣ್ಣಗೇಡಿಗೆ
ಕಾರಣರಾದ ಕುಲಗೇಡಿಗಳ ಇಂಥ ತಪ್ಪುಗಳಿಂದ ಸಹಜ ಧರ್ಮಗಳು ಮತ್ತು ಅಳಿವಿರದ ಕುಲಧರ್ಮಗಳು
ನೆಲೆಗೆಡುತ್ತವೆ.ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ॥೪೩॥
ಯುದ್ಧದಿಂದ ಸಮಾಜದ ಮೇಲೆ ಆಗುವ ನೇರ ಪರಿಣಾಮ ಎಂದರೆ, ನಾಯಕರಿಲ್ಲದ, ಯುವಕರಿಲ್ಲದ ಸಮಾಜ. ಗಂಡು-ಹೆಣ್ಣಿನ ಅನುಪಾತ ವೆತ್ಯಾಸ.
ಇದು ಸರಿ ಹೊಂದಬೇಕಾದರೆ ಅದೆಷ್ಟು ವರ್ಷಗಳು ಬೇಕು? ನಾವು ಮಹಾಭಾರತ ಯುದ್ಧವನ್ನು ನೋಡಿದರೆ ಅಲ್ಲಿ ಕನಿಷ್ಠ ಐವತ್ತು ಲಕ್ಷ ಮಂದಿ ಜನ ಸತ್ತಿದ್ದಾರೆ. ಇಂತಹ ಮಹಾಯುದ್ಧದಿಂದ ಇಡೀ ಸಮಾಜ ನಾಶಮಾಡಿದ ಕುಲಕಂಟಕರು ನಾವಾಗುತ್ತೇವೆ ಎನ್ನುವುದು ಅರ್ಜುನನ ಕಳಕಳಿ. “ಸಮಾಜದ ವ್ಯವಸ್ಥೆ ನಾಶವಾಗುವುದರಿಂದ ಸ್ವಭಾವ ನಾಶವಾಗುತ್ತದೆ. ಇದರಿಂದ ಆಯಾ ಜೀವದ ಸ್ವಭಾವದ ಅಭಿವೃದ್ಧಿ ಆಗದೆ, ವ್ಯಕ್ತಿತ್ವ ವಿಕಸನ ನಾಶವಾಗುತ್ತದೆ. ಶಾಶ್ವತ ಮೌಲ್ಯದ ಸಮಾಜಧರ್ಮ ನಾಶವಾಗುತ್ತದೆ. ಅನಾದಿ ಕಾಲದಿಂದ ಸಮಾಜ ಒಪ್ಪಿಕೊಂಡು ಬಂದ ಸ್ಥಿರಧರ್ಮ ಕೊಚ್ಚಿಕೊಂಡು ಹೋಗುತ್ತದೆ” ಎಂದು ಅರ್ಜುನ ಕೃಷ್ಣನ ಮುಂದೆ ತನ್ನ ವಾದವನ್ನು ಮಂಡಿಸುತ್ತಾನೆ.
· ಶ್ಲೋಕ - 44
ಉತ್ಸನ್ನಕುಲಧರ್ಮಾಣಾಂ
ಮನುಷ್ಯಾಣಾಂ ಜನಾರ್ದನ ।
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ॥೪೪॥
ಉತ್ಸನ್ನ ಕುಲಧರ್ಮಾಣಾಮ್
ಮನುಷ್ಯಾಣಾಮ್ ಜನಾರ್ದನ ನರಕೇ ನಿಯತಮ್ ವಾಸಃ ಭವತಿ ಇತಿ ಅನುಶುಶ್ರುಮ- ಓ ಜನಾರ್ಧನ, ಕುಲ ಧರ್ಮದ ನೆಲೆದಪ್ಪಿದವರಿಗೆ ನರಕವೇ ಮುಗಿಯದ
ನೆಲೆ ಎಂದು ಕೇಳಿ
ಬಲ್ಲೆವು.ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ॥೪೪॥
ಇಹದಲ್ಲೂ ನರಕ, ಪರದಲ್ಲೂ ನರಕ, ಹೀಗೆ ಜನ್ಮವೆಲ್ಲಾ ನರಕದಲ್ಲಿ. ಎಂದೆಂದೂ ನರಕದಲ್ಲೇ ಕೊಳೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿದವರು ಹೇಳುವುದನ್ನು ಕೇಳಿ ತಿಳಿದಿದ್ದೇನೆ. ಹೀಗೆ ಇಹವೂ ನರಕ, ಪರವೂ ನರಕವಾಗಲು ನಾವೇ ಕಾರಣವಾಗುತ್ತೇವೆ.
· ಶ್ಲೋಕ - 45
ಅಹೋ
ಬತ ಮಹತ್ ಪಾಪಂ ಕರ್ತುಂ ವ್ಯವಸಿತಾ ವಯಮ್ ।
ಯದ್ ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ॥೪೫॥
ಅಹೋ ಬತ ಮಹತ್ ಪಾಪಮ್
ಕರ್ತುಮ್ ವ್ಯವಸಿತಾ ವಯಮ್ ಯದ್ ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ॥೪೫॥
ಯತ್ ರಾಜ್ಯಸುಖಲೋಭೇನ ಹಂತುಮ್ ಸ್ವಜನಮ್ ಉದ್ಯತಾಃ -ಅಯ್ಯೋ....! ಎಂಥ ಹಿರಿಯ ತಪ್ಪನ್ನು ಮಾಡತೊಡಗಿದ್ದೆವು ನಾವು ! ದೊರೆತನದ ಸುಖದ ದುರಾಸೆಯಿಂದ ನಮ್ಮ ಮಂದಿಯನ್ನೇ ಕೊಲ್ಲ ಹೊರಟಿದ್ದೇವಲ್ಲ !
ಇಲ್ಲಿ ಅರ್ಜುನ ಕುಸಿದು ಬೀಳುವ ದ್ವನಿಯಲ್ಲಿ ಹೇಳುತ್ತಾನೆ- “ಅಯ್ಯೋ.. ಎಂಥ ದೊಡ್ಡ ದುರಂತ, ಎಂಥ ದೊಡ್ಡ ಪಾಪ ಕಾರ್ಯ ನಮ್ಮ ಮುಂದೆ ನಡೆಯುತ್ತಿತ್ತು? ಎಂಥ ಪ್ರಮಾದ ಆಗಿ ಹೋಗುತ್ತಿತ್ತು? ನಾವು ದೊಡ್ಡ ತಪ್ಪನ್ನು ಮಾಡಲು ಕೈ ಹಾಕುತ್ತಿದ್ದೆವು. ರಾಜ್ಯ ಸುಖದ ಲೋಭದಿಂದ ನಮ್ಮ ಜನರನ್ನೇ ನಾವು ಕೊಂದು ಇಡೀ ಜನಾಂಗವನ್ನು ಅಧಃಪಾತಕ್ಕೆ ತಳ್ಳುವ ಕೆಲಸ ನಮ್ಮಿಂದಾಗುತ್ತಿತ್ತು” ಎಂದು.
· ಶ್ಲೋಕ - 46
ಯದಿ
ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರಪಾಣಯಃ ।
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ॥೪೬॥
ಯದಿ ಮಾಮ್ ಅಪ್ರತೀಕಾರಮ್
ಅಶಸ್ತ್ರಮ್ ಶಸ್ತ್ರಪಾಣಯಃ ಧಾರ್ತರಾಷ್ಟ್ರಾಃ ರಣೇ ಹನ್ಯುಃ ತತ್ ಮೇ ಕ್ಷೇಮ ತರಮ್ ಭವೇತ್-- ಒಂದೊಮ್ಮೆ
ಎದುರು ನಿಂತು ಹೋರಾಡದ, ಆಯುಧ
ಹಿಡಿಯದ ನನ್ನನ್ನು
ಧಾರ್ತರಾಷ್ಟ್ರರು ಆಯುಧ ಹಿಡಿದು ಕೊಲ್ಲುವುದಾದರೆ ಅದು ನನ್ನ ಭಾಗ್ಯವಾದೀತು.ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ॥೪೬॥
ನಾನು ಪ್ರತಿಕಾರ ಮಾಡುವುದೇ ಇಲ್ಲ. ಒಂದು ವೇಳೆ ಅವರು ನನ್ನನ್ನು ಹೊಡೆಯಲು ಬಂದರೆ ನಾನು ಪ್ರತಿಯಾಗಿ ಹೊಡೆಯುವುದೂ ಇಲ್ಲ. ಕತ್ತಿ ಹಿಡಿದು ನನ್ನನ್ನು ಕೊಂದರೆ ಅದು ನನ್ನ ಭಾಗ್ಯವೆಂದು ನಾನು ಸಾಯುತ್ತೇನೆ. ಏಕೆ ಇಂತಹ ದುರಂತ ನೋಡಿ ಬದುಕಬೇಕು? ಏನಾದರೂ ಸರಿ, ನನಗೆ ಯುದ್ಧ ಬೇಡ. ಎಂದು ಅರ್ಜುನ ಕೈಚಲ್ಲುತ್ತಾನೆ.
ಯುದ್ಧ ಪ್ರಾರಂಭದಲ್ಲಿ "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ" ಎಂದು ದರ್ಪದಿಂದ ಹೇಳಿದ ಅರ್ಜುನ- ಕ್ಷಣ ಮಾತ್ರದಲ್ಲಿ ಕರಗಿ ಹೋದ. ಇದು ಆತನ ಸುಪ್ತಪ್ರಜ್ಞೆಯಲ್ಲಿ ಅವನಿಗೆ ತಿಳಿಯದಂತೆ ಅಡಗಿ ಕುಳಿತಿದ್ದ ಭಾವನೆ. ಕೃಷ್ಣ ತನ್ನ ಮನಃಶಾಸ್ತ್ರೀಯ ಚಿಕಿತ್ಸೆ(Psychotherapy)ಯಿಂದ ಅದನ್ನು ಸಂಪೂರ್ಣ ಹೊರ ಬೀಳುವಂತೆ ಮಾಡಿದ. ಇದು ಮಾನಸಿಕ ಸಂಘರ್ಷಕ್ಕೊಳಗಾದವನಿಗೆ ಮೊದಲು ಮಾಡುವ ಚಿಕಿತ್ಸೆ. ಮನುಷ್ಯನ ಮನೋರೋಗವನ್ನು ಹೇಗೆ ಗುಣಪಡಿಸಬಹುದು ಎಂದು ಜಗತ್ತಿಗೆ ತೋರಿಸಿದ ಮೊದಲ ಮಹಾ ಮನೋವಿಜ್ಞಾನಿ ಕೃಷ್ಣ. ಒಂದು ವೇಳೆ ಕೃಷ್ಣ ಅರ್ಜುನನ ಆತ್ಮೀಯರ ಮುಂದೆ ರಥವನ್ನು ನಿಲ್ಲಿಸದೇ ಇದ್ದಿದ್ದರೆ, ಈ ಎಲ್ಲಾ ವಿಚಾರಗಳು ಆತನ ಮನಸ್ಸಿನಿಂದ ಹೊರ ಬರುತ್ತಿರಲಿಲ್ಲ. ಶ್ರೀಕೃಷ್ಣನ ಈ ಮಾನಸಿಕ ಚಿಕೆತ್ಸೆ, ತತ್ವಶಾಸ್ತ್ರದೊಂದಿಗೆ ಮನಃಶಾಸ್ತ್ರವನ್ನು ಅರಿತು ವಿಶ್ಲೇಷಿಸಿದಾಗ ಮಾತ್ರ ನಮಗೆ ಅರ್ಥವಾಗುತ್ತದೆ.
· ಶ್ಲೋಕ - 47
ಸಂಜಯ
ಉವಾಚ ।
ಏವಮುಕ್ತ್ವಾsರ್ಜುನಃ ಸಂಖೇ ರಥೋಪಸ್ಥ ಉಪಾವಿಶತ್ ।
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ॥೪೭॥
ಸಂಜಯ ಉವಾಚ -ಸಂಜಯ
ಹೇಳಿದನು:ಏವಮುಕ್ತ್ವಾsರ್ಜುನಃ ಸಂಖೇ ರಥೋಪಸ್ಥ ಉಪಾವಿಶತ್ ।
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ॥೪೭॥
ಏವಮ್ ಉಕ್ತ್ವಾ ಅರ್ಜುನಃ ಸಂಖೇ ರಥ ಉಪಸ್ಥೇ ಉಪಾವಿಶತ್ ವಿಸೃಜ್ಯ ಸಶರಮ್ ಚಾಪಮ್ ಶೋಕ ಸಂವಿಗ್ನ ಮಾನಸಃ- ಕಾಳಗದ ಕಣದಲ್ಲಿ ಅರ್ಜುನ ಬಿಲ್ಲು ಬಾಣಗಳನ್ನು ಬಿಸುಟು, ಅಳಲಿನಿಂದ ತಳಮಳಿಸುತ್ತ ತೇರ ಮಡಿಲಲ್ಲಿ ಕುಳಿತುಬಿಟ್ಟ.
ರಥದಲ್ಲೇ ನಿಂತು ಇಷ್ಟು ಮಾತನಾಡಿದ ಅರ್ಜುನ,ರಥದ ಮಧ್ಯದಲ್ಲಿ ಕುಸಿದು ಕುಳಿತುಬಿಟ್ಟ. ತನ್ನೆಲ್ಲಾ ಶಸ್ತ್ರಾಸ್ತ್ರಗಳನ್ನು ಕೆಳಗೆ ಬಿಟ್ಟು ಕೈಚಲ್ಲಿ ಕುಳಿತು ಬಿಟ್ಟ.
ಈ ಅಧ್ಯಾಯದಲ್ಲಿ ಅರ್ಜುನ ತನ್ನೆಲ್ಲ ಭಾವನೆಗಳನ್ನು ಕೃಷ್ಣನ ಮುಂದೆ ಬಿಚ್ಚಿಟ್ಟಿದ್ದಾನೆ. ಅರ್ಜುನ ಮಾತನಾಡಿದ ಪ್ರತಿಯೊಂದು ವಿಷಯ ನಮಗೆ ತಿಳಿದ ವಿಷಯ. ಆದರೆ ಮುಂದೆ ಕೃಷ್ಣ ಹೇಳುವುದು ನಮಗೆ ತಿಳಿಯದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಭಗವಂತನ ಉತ್ತರವನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.
ಮುಂದಿನ ಅಧ್ಯಾಯಕ್ಕೆ ಹೋಗುವ ಮುನ್ನ ಒಂದು ಪುಟ್ಟ ವಿಶ್ಲೇಷಣೆ. ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಅನುಮಾನವಿದೆ. “ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಹೇಗೆ ಈ ಏಳುನೂರು ಶ್ಲೋಕಗಳ ಸಂಭಾಷಣೆ ಮಾಡಿದರು? ಅವರಿಗೆ ಅಷ್ಟು ಸಮಯ ಇತ್ತೇ?” ಎಂದು. ಈ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ಮೊದಲು ನಾವು ಮಹಾಭಾರತ ಕಾಲದ ಯುದ್ಧ ಪದ್ಧತಿಯನ್ನು ತಿಳಿದಿರಬೇಕು. ಆಗಿನ ಕಾಲದ ಯುದ್ಧ ನಿಯಮದ ಪ್ರಕಾರ ಯುದ್ಧದಲ್ಲಿ ಎದುರಾಳಿ ಸಿದ್ಧವಿಲ್ಲದಿದ್ದರೆ ಅವನ ಮೇಲೆ ಆಕ್ರಮಣ ಮಾಡುವಂತಿರಲಿಲ್ಲ. ಒಬ್ಬ ಸಜ್ಜಾಗಿ ನಿಲ್ಲದೆ ಯುದ್ಧ ಪ್ರಾರಂಭವಾಗುತ್ತಿರಲಿಲ್ಲ. ಇನ್ನು ಎಷ್ಟು ಹೊತ್ತು ಅವರ ಸಂಭಾಷಣೆ ನಡೆಯಿತು ಎನ್ನುವ ಪ್ರಶ್ನೆ. ಅರ್ಜುನ ಆ ಕಾಲದ ಮಹಾಮೇಧಾವಿಗಳಲ್ಲಿ ಒಬ್ಬ. ಇಲ್ಲಿ ಸಂಭಾಷಣೆ ನೆಡೆಯುತ್ತಿರುವುದು ಇಬ್ಬರು ಮೇಧಾವಿಗಳ ನಡುವೆ. ಆ ಮಟ್ಟದ ಜ್ಞಾನವನ್ನು ಇದು ನಾವು ಊಹಿಸುವುದೂ ಕಷ್ಟ. ಅವರ ಸಂಪೂರ್ಣ ಸಂಭಾಷಣೆ ನಡೆದಿದ್ದು ಇಂದಿನ ಈ ಏಳುನೂರು ಶ್ಲೋಕ ರೂಪದಲ್ಲಿ ಅಲ್ಲ. ವೇದವ್ಯಾಸರು ಅವರ ಸಂಭಾಷಣೆಯನ್ನು ನಮಗೆ ಅರ್ಥವಾಗುವಂತೆ ಏಳುನೂರು ಶ್ಲೋಕ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾರೆ ಅಷ್ಟೆ. ಇಂದು ನಮಗೆ ಈ ಶ್ಲೋಕ ಕೂಡಾ ಅರ್ಥವಾಗುವುದಿಲ್ಲ. ಅದಕ್ಕಾಗಿ ನಾವು ಗೀತೆಯ ಭಾಷ್ಯವನ್ನು ಸಾವಿರಾರು ಪುಟಗಳಲ್ಲಿ ಕಾಣುತ್ತೇವೆ. ಆದರೆ ಮಹಾ ಮೇಧಾವಿಗಳು ಇದನ್ನು ಅತೀ ಸಂಕ್ಷಿಪ್ತವಾಗಿ ಅತೀ ಕಡಿಮೆ ಸಮಯದಲ್ಲಿ ಹೇಳಬಲ್ಲರು ಹಾಗು ಅರ್ಥ ಮಾಡಿಕೊಳ್ಳಬಲ್ಲರು. ಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂಭಾಷಣೆ ಕೂಡಾ ಇಂತಹ ವಿಷಯಭರಿತ ಸಂಕ್ಷಿಪ್ತ ಸಂಭಾಷಣೆ.
ಇನ್ನೊಂದು ಮುಖ್ಯ ವಿಷಯ ಎಂದರೆ ಗೀತೆಯನ್ನು ಕೃಷ್ಣ ಅರ್ಜುನನಿಗೇ ಏಕೆ ಹೇಳಿದ? ಆತನ ಅಣ್ಣ ಭೀಮನಿಗೆ ಅಥವಾ ಇತರರಿಗೆ ಏಕೆ ಹೇಳಲಿಲ್ಲ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಅತಿ ಸುಲಭ. ರೋಗ ಬಂದವನಿಗೆ ಮದ್ದೇ ಹೊರತು ಇತರರಿಗಲ್ಲ. ಅಲ್ಲಿ ಮಾನಸಿಕವಾಗಿ ಆಂತರಿಕ ತುಮುಲದಲ್ಲಿದ್ದವನು ಅರ್ಜುನ ಮಾತ್ರ. ಅದಕ್ಕಾಗಿ ಶ್ರೀಕೃಷ್ಣ ಅರ್ಜುನನಿಗೆ (ಆತನ ಮುಖೇನ ನಮಗೆ) ಗೀತೋಪದೇಶ ಮಾಡಿದ.
ಇತಿ ಪ್ರಥಮೋsಧ್ಯಾಯಃ
ಮೊದಲನೇ ಅಧ್ಯಾಯ ಮುಗಿಯಿತು.
ಮೊದಲನೇ ಅಧ್ಯಾಯ ಮುಗಿಯಿತು.
2 ಕಾಮೆಂಟ್‌ಗಳು:
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
೩೮ನೆ ಶ್ಲೋಕ ಎರಡು ಸಲ ಬಂದಿದೆ; ೩೭ ಕಳೆದುಹೋಗಿದೆ.
तस्मान्नार्हा वयं हन्तुं धार्तराष्ट्रान्स्वबान्धवान् |
स्वजनं हि कथं हत्वा सुखिन: स्याम माधव || 37|
ಕಾಮೆಂಟ್ ಪೋಸ್ಟ್ ಮಾಡಿ