ಭಗವದ್ಗೀತೆ ಅಧ್ಯಾಯ-18 (ಶ್ಲೋಕ 21 ರಿಂದ 40)



ಭಗವದ್ಗೀತೆ  ಅಧ್ಯಾಯ-18 (ಶ್ಲೋಕ 21 ರಿಂದ 40)
·  ಶ್ಲೋಕ - 21
ಪೃಥಕ್ ತ್ವೇನ ತು ಯಜ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್ ।
ವೇತ್ತಿ ಸರ್ವೇಷು ಭೂತೇಷು ತಜ್ ಜ್ಞಾನಂ ವಿದ್ಧಿ ರಾಜಸಮ್ ೨೧॥
ಪೃಥಕ್ ತ್ವೇನ ತು ಯತ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್
ವೇತ್ತಿ ಸರ್ವೇಷು ಭೂತೇಷು ತತ್ ಜ್ಞಾನಂ ವಿದ್ಧಿ ರಾಜಸಮ್ ಭಗವಂತನ ಶಕ್ತಿಯಲ್ಲಿ ಅಂತರವನ್ನು ಕಾಣುವುದು, ಎಲ್ಲ ಜೀವಿಗಳಲ್ಲಿ ಬಗೆಬಗೆಯ ದೈವೀಶಕ್ತಿಗಳು ಬೇರೆಬೇರೆಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಯುವುದು[ಎಲ್ಲ ಜೀವಿಗಳಲ್ಲಿರುವ ಭೇದವನ್ನು ಮಾತ್ರ ಗುರುತಿಸುವ, ಒಂದರಂತೆ ಒಂದಿಲ್ಲ ಎಂದರಿಯುವ, ಆದರೆ ಭಗವತ್ ಪ್ರಜ್ಞೆಯಿರದ ಕೇವಲ ಭೌತಿಕ ನಿಜದರಿವು] ರಾಜಸ ಎಂದು ತಿಳಿ.
ಏಕಭಕ್ತಿ ಇಲ್ಲದೆ ಅನೇಕ ದೇವತಾವಾದದಲ್ಲಿ ನಂಬಿಕೆ-ರಾಜಸ ಅರಿವು. ಇವರಿಗೆ ಅಖಂಡವಾದ ಪರತತ್ವದ ಎಚ್ಚರವಿರುವುದಿಲ್ಲ. ಇವರು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ದೇವತೆಗಳನ್ನು ಪೂಜೆ ಮಾಡುತ್ತಾರೆ. ಇಂದಿನ ಜ್ಯೋತಿಷ್ಯ ಕೂಡ ಜನರನ್ನು ಈ ತಪ್ಪು ದಾರಿಯಲ್ಲಿ ಹೋಗುವಂತೆ ಪ್ರೇರಣೆ ಮಾಡುತ್ತಿದೆ. ಅಖಂಡವಾದ ಭಗವಂತನ ಎಚ್ಚರವಿಲ್ಲದೆ ಒಂದೊಂದು ಗ್ರಹಚಾರಕ್ಕೆ ಒಂದೊಂದು ದೇವತೆಯಪೂಜೆ ಮಾಡುವುದು ರಾಜಸ ಅರಿವು. ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಭಗವಂತನ ಎಚ್ಚರದಿಂದ ಮಾಡಿದರೆ ಆ ಪೂಜೆ ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ ರಾಜಸವಾಗುತ್ತದೆ.
·  ಶ್ಲೋಕ - 22
ಯತ್ ತು ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ ।
ಅತತ್ತ್ವಾರ್ಥವದಲ್ಪಂ ಚ ತತ್ ತಾಮಸಮುದಾಹೃತಮ್ ೨೨॥
ಯತ್ ತು ಕೃತ್ಸ್ನವತ್ ಏಕಸ್ಮಿನ್ ಕಾರ್ಯೇ ಸಕ್ತಮ್ ಅಹೈತುಕಮ್ ।
ಅತತ್ತ್ವ ಅರ್ಥವತ್ ಅಲ್ಪಂ ಚ ತತ್ ತಾಮಸಮ್ ಉದಾಹೃತಮ್ –- ಯಾವುದೋ ಒಂದು ಕ್ಷುದ್ರವಾದ ಕಜ್ಜಕ್ಕೆ ಅಂಟಿಕೊಂಡು ಅದೇ ಸರ್ವಸ್ವವೆಂದು [ಬದಲಾಗದ ಜೀವವನ್ನೆ ಬದಲಾಗದ ಭಗವಂತನೆಂದು, ಇಡಿಯ ವಿಶ್ವ ಒಬ್ಬ ಜೀವನ ಕಲ್ಪನಾವಿಲಾಸ ಎಂದು] ನಂಬುವ, ಕಾರಣವಿರದ, ನಿಜವನ್ನು ಗ್ರಹಿಸಿದ [ವಿಶ್ವ ನಿಜವಲ್ಲ ಎಂದು ಗ್ರಹಿಸುವ] ಕ್ಷುಲ್ಲಕವಾದ ತಿಳಿವು ತಾಮಸ ಎನಿಸುತ್ತದೆ.
ತಾಮಸ ಸ್ವಭಾವಕ್ಕೆ ಅನೇಕ ಮುಖಗಳು. ಕಾಣುವುದು ಅನೇಕ-ಇರುವುದು ಏಕ ಎಂದು ತಿಳಿಯುವುದು; ಜೀವನಿಗಿಂತ ಬೇರೆಯಾದ ಭಗವಂತನನ್ನು ಒಪ್ಪದಿರುವುದು; ಈ ಪ್ರಪಂಚದಲ್ಲಿ ಯಥಾರ್ಥವಾದ ವಸ್ತುವಿಗೆ ಅಸ್ತಿತ್ವವೇ ಇಲ್ಲ ಎಂದು ತಿಳಿದುಕೊಳ್ಳುವುದು; ಅಜ್ಞಾನ-ಅದರಿಂದ ವಿಪರೀತಜ್ಞಾನ; ಅರಿವಿಲ್ಲದಿದ್ದರೂ ಕೂಡ ತನ್ನನ್ನು ತಾನು ಮಹಾಜ್ಞಾನಿ ಎಂದು ಭ್ರಮಿಸುವುದು; ಯಾವುದೋ ಒಂದು ವಿಷಯವನ್ನು ತಿಳಿದುಕೊಂಡು ನಾನು ಎಲ್ಲವನ್ನು ತಿಳಿದಿದ್ದೇನೆ ಅಂದುಕೊಳ್ಳುವುದು, ಇತ್ಯಾದಿ ತಾಮಸ ಅರಿವು ಎನಿಸುತ್ತದೆ. ನಾವು ನಮ್ಮ ಜ್ಞಾನದ ಇತಿ-ಮಿತಿಯನ್ನು ಅರಿತು ಪ್ರತಿ ಕ್ಷಣ ಅದಕ್ಕಿಂತ ಹೆಚ್ಚಿನ ಸತ್ಯವನ್ನು ತಿಳಿಯಲು ನಿರಂತರ ಪ್ರಯತ್ನ ಮಾಡಬೇಕು-ಇಲ್ಲದಿದ್ದರೆ ನಾವು ತಾಮಸರಾಗುತ್ತವೆ. ದ್ವೈತ ಸಿದ್ಧಾಂತ ನಮಗೆ ಸರಿಯಾಗಿ ಅರ್ಥವಾಗಬೇಕಾದರೆ ನಾವು ಅದ್ವೈತ ಮತ್ತು ವಿಶಿಷ್ಟಾದ್ವೈತವನ್ನು ಓದಿರಬೇಕು. ಹಿಂದುತ್ವ ಅರ್ಥವಾಗಬೇಕಾದರೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಏನು ಹೇಳುತ್ತದೆ ಎನ್ನುವ ಅರಿವು ನಮಗಿರಬೇಕು. ಇದನ್ನು ಬಿಟ್ಟು ನಾನು ನಂಬಿದ್ದೇ ಸತ್ಯ ಉಳಿದಿದ್ದೆಲ್ಲ ಮಿಥ್ಯ ಎಂದು ಗ್ರಹಿಸುವವನ ಮೂಢ ಅರಿವು ತಾಮಸವೆನಿಸುತ್ತದೆ. ಸದಾ ಸತ್ಯದ ಹುಡುಕಾಟ, ಜ್ಞಾನದ ದಾಹ- ನಮ್ಮನ್ನು ಸಾತ್ವಿಕತೆಯತ್ತ ಕೊಂಡೊಯ್ಯಬಲ್ಲದು. ಜ್ಞಾನವನ್ನು ತನ್ನ ಲೌಕಿಕ, ವ್ಯಾವಹಾರಿಕ ಬದುಕಿಗೆ ಸೀಮಿತಗೊಳಿಸಿಕೊಂಡು; ಇನ್ನೂಬ್ಬರಲ್ಲಿರುವ ಸಾತ್ವಿಕ ಜ್ಞಾನವನ್ನು ಗುರುತಿಸದೆ; ಪರಮಾತ್ಮನ ಪ್ರಜ್ಞೆ ಇಲ್ಲದ ಅನುಷ್ಠಾನದಲ್ಲಿ ಬದುಕುವುವಂತೆ ಮಾಡುವ ಮೂಢ ಅರಿವು ತಾಮಸ.
·  ಶ್ಲೋಕ - 23
ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮುಚ್ಯತೇ ೨೩॥
ನಿಯತಮ್ ಸಂಗರಹಿತಮ್ ಆರಾಗ ದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮ್ ಉಚ್ಯತೇ ಹಚ್ಚಿಕೊಳ್ಳದೆ, ಮೆಚ್ಚು-ಕಿಚ್ಚುಗಳಿಗೊಳಗಾಗದೆ, ಫಲದ ಹಂಬಲವಿರದೆ ಮಾಡಿದ ವಿಹಿತವಾದ ಕರ್ಮ ಸಾತ್ವಿಕ ಎನಿಸುತ್ತದೆ.
ನಮಗೆ ಪ್ರಾಪ್ತವಾಗಿರುವ ವಿಹಿತಕರ್ಮವನ್ನು ಭಗವಂತನ ಪೂಜಾರೂಪವಾಗಿ ಮಾಡಿದಾಗ ಅದು ಸಾತ್ವಿಕ ಕರ್ಮವಾಗುತ್ತದೆ. ಈ ಕರ್ಮದಲ್ಲಿ ಯಾವುದೇ ರಾಗ-ದ್ವೇಷವಿಲ್ಲ; ಫಲಾಪೇಕ್ಷೆಯಿಲ್ಲ; ಯಾವುದೇ ರೀತಿ ಅಂಟಿಸಿಕೊಳ್ಳುವಿಕೆಯಿಲ್ಲ.ಶ್ರದ್ಧಾ-ಭಕ್ತಿಯಿಂದ, ನಿರ್ಲಿಪ್ತತೆಯಿಂದ, ಕರ್ತವ್ಯವನ್ನು ನಿರ್ವಂಚನೆಯಿಂದ ಭಗವದರ್ಪಣಾಭಾವದಿಂದ ಮಾಡುವ ಕರ್ಮ ಸಾತ್ವಿಕ ಕರ್ಮ.
·  ಶ್ಲೋಕ - 24
ಯತ್ ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।
ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್ ೨೪॥
ಯತ್ ತು ಕಾಮ ಈಪ್ಸುನಾ ಕರ್ಮ ಸ ಅಹಂಕಾರೇಣ ವಾ ಪುನಃ
ಕ್ರಿಯತೇ ಬಹುಲ ಆಯಾಸಮ್ ತತ್ ರಾಜಸಮ್ ಉದಾಹೃತಮ್ ಫಲದ ಬಯಕೆಯಿಂದ ಅಥವಾ ಹಮ್ಮಿನಿಂದ ದೇಹವನ್ನು ಬಳಲಿಸಿ, ದಂಡಿಸಿ ಮಾಡುವ ಕರ್ಮ ರಾಜಸ ಎನಿಸುತ್ತದೆ.
ಮಾಡುವ ಕೆಲಸವೇನೋ ಒಳ್ಳೆಯ ಕೆಲಸವೆ. ಆದರೆ ಅದರ ಹಿಂದೆ ಅನೇಕ ಕಾಮನೆ, ನಾನುಮಾಡಿದೆ ಅನ್ನುವ ಅಹಂಕಾರ ಸೇರಿದಾಗ ಅದು ರಾಜಸ ಕರ್ಮವೆನಿಸುತ್ತದೆ. ನಮ್ಮ ಯಾವುದೋ ಸಮಸ್ಯೆಯ ಪರಿಹಾರಕ್ಕಾಗಿ ಕರ್ಮ ಮಾಡುವುದು, ಕರ್ಮ ಮಾಡುವಾಗ ಅನೇಕ ಫಲದ ಅಪೇಕ್ಷೆಯಿಂದ ಮಾಡುವುದು, ಮಾಡಿದ ಮೇಲೆ ನಾನು ಮಾಡಿದೆಎಂದು ಅಹಂಕಾರಪಡುವುದು ರಾಜಸ ಕರ್ಮದ ಲಕ್ಷಣ. ಜೀವನಪೂರ್ತಿ ಯಾವುದೋ ಕಾಮನೆಯ ಬೆನ್ನು ಹತ್ತಿ, ನಾಳೆಯ ಸುಖವನ್ನು ಬಯಸಿ, ಇದ್ದ ಇಂದಿನ ಸುಖವನ್ನು ಮರೆತು ದೇಹವನ್ನು ಬಳಲಿಸಿ ಮಾಡುವ ಕರ್ಮ ರಾಜಸ ಕರ್ಮ.
·  ಶ್ಲೋಕ - 25
ಅನುಬಂಧಂ ಕ್ಷಯಂ ಹಿಂಸಾಮನಪೇಕ್ಷ್ಯ ಚ ಪೌರುಷಮ್ ।
ಮೋಹಾದಾರಭ್ಯತೇ ಕರ್ಮ ಯತ್ ತತ್ ತಾಮಸಮುಚ್ಯತೇ ೨೫॥
ಅನುಬಂಧಂ ಕ್ಷಯಂ ಹಿಂಸಾಮ್ ಅನಪೇಕ್ಷ್ಯ ಚ ಪೌರುಷಮ್ ।
ಮೋಹಾತ್ ಆರಭ್ಯತೇ ಕರ್ಮ ಯತ್ ತತ್ ತಾಮಸಮ್ ಉಚ್ಯತೇ ಪರಿಣಾಮ, ಪೋಲು, ತೊಂದರೆಗಳನ್ನು ಗಮನಿಸದೆ, ತನ್ನಳವನ್ನು ಮೀರಿ ತಿಳಿಗೇಡಿತನದಿಂದ ತೊಡಗುವ ಕರ್ಮ ತಾಮಸ ಎನಿಸುತ್ತದೆ.
ತನ್ನ ಯೋಗ್ಯತೆಯನ್ನು ತಿಳಿದುಕೊಳ್ಳದೆ, ಮುಂದೇನಾಗುತ್ತದೆ ಎನ್ನುವ ಯೋಚನೆಯನ್ನೂ ಮಾಡದೆ, ಫಲಾಪೇಕ್ಷೆ, ದುಡುಕು, ಅಹಂಕಾರ, ದ್ವೇಷದಿಂದ; ಭಗವಂತನನ್ನು ಮರೆತು ಮಾಡುವ ಸಮಾಜ ವಿನಾಶಕವಾದ ಕರ್ಮ ತಾಮಸ ಕರ್ಮ. ಇದಕ್ಕೆ ಉತ್ತಮ ದೃಷ್ಟಾಂತ ದುರ್ಯೋಧನ ಮಾಡಿದ ಕರ್ಮಗಳು. ಮುಂದೆ ಆಗುವ ದುರಂತದ ಬಗ್ಗೆ ಯೋಚಿಸದೆ, ಇನ್ನೊಬ್ಬರಿಗೆ ಕೆಟ್ಟದ್ದಾಗಬೇಕು ಎನ್ನುವ ಅನಿಷ್ಟ ಚಿಂತನೆಯಿಂದ ಮಾಡುವ ಕರ್ಮ ತಾಮಸ. ಒಳ್ಳೆಯ ಕರ್ಮವೂ ಕೆಟ್ಟ ಉದ್ದೇಶದಿಂದ ಮಾಡಿದಾಗ ತಾಮಸವಾಗುತ್ತದೆ.
ಜ್ಞಾನ ಮತ್ತು ಕರ್ಮದಲ್ಲಿ ತ್ರೈವಿದ್ಯದ ವಿಧವನ್ನು ಹೇಳಿದ ಕೃಷ್ಣ ಮುಂದೆ ಕರ್ತಾನಲ್ಲಿ ಮೂರು ವಿಧವನ್ನು ವಿವರಿಸುತ್ತಾನೆ.
·  ಶ್ಲೋಕ - 26
ಮುಕ್ತಸಂಗೋSನಹಂವಾದೀ ಧೃತ್ಯುತ್ಸಾಹಸಮನ್ವಿತಃ ।
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ೨೬॥
ಮುಕ್ತ ಸಂಗಃ ಅನಹಂವಾದೀ ಧೃತಿ ಉತ್ಸಾಹ ಸಮನ್ವಿತಃ ।
ಸಿದ್ಧಿ ಅಸಿಧ್ಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ -- ಹಚ್ಚಿಕೊಳ್ಳದವನು, ನಾನು ಮಾಡಿದೆ ಎಂದು ಕೊಚ್ಚಿಕೊಳ್ಳದವನು, ಹುರುಪಳಿಯದ ಗಟ್ಟಿಗ, ಗಳಿಕೆ-ಅಳಿಕೆಗಳಿಂದ ವಿಚಲಿತನಾಗದವನು ಸಾತ್ವಿಕ ಕರ್ತಾರ ಎನಿಸುತ್ತಾನೆ.
ಸಾತ್ವಿಕ ಕರ್ತಾ ಯಾವುದನೂ ಅಂಟಿಸಿಕೊಳ್ಳುವುದಿಲ್ಲ. ಹೇಗೆ ಯಾವುದೇ ಪೂಜೆಯ ಕೊನೆಯಲ್ಲಿ ಶ್ರೀ ಕೃಷ್ಣಾರ್ಪಣಮಸ್ತುಎಂದು ಅರ್ಪಿಸುವ ಪದ್ಧತಿ ಇದೆಯೊ ಹಾಗೆ ಸಾತ್ವಿಕ ತನ್ನ ಜೀವನದಲ್ಲಿ ತಾನು ಮಾಡುವ ಎಲ್ಲ ಕರ್ಮವನ್ನು ಭಗವದ್ ಭಕ್ತಿಯಿಂದ ಭಗವದರ್ಪಣಾಭಾವದಿಂದ ಮಾಡುತ್ತಾನೆ. ಅವನಿಗೆ ನಾನು ಮಾಡಿದೆಎನ್ನುವ ಅಹಂಕಾರವೇ ಇಲ್ಲ. ಯಾವುದೇ ಕೆಲಸವಿರಲಿ ಆತ ಅದನ್ನು ಅತ್ಯುತ್ಸಾಹದಿಂದ ಮಾಡುತ್ತಾನೆ. ಮಾಡಿದ ಕೆಲಸ ಕೈಗೂಡದಿದ್ದಾಗ ಆತ ಕುಸಿಯುವುದಿಲ್ಲ, ಯಶಸ್ವೀಯಾದಾಗ ಹಾರಾಡುವುದಿಲ್ಲ. ಎಲ್ಲವನ್ನು ವಿರ್ವಿಕಾರನಾಗಿ ಮಾಡುತ್ತಾನೆ. ಇದನ್ನೇ ದ್ವಾದಷಸ್ತೋತ್ರದಲ್ಲಿ ಆಚಾರ್ಯರು ಈ ರೀತಿ ಸುಂದರವಾಗಿ ಹೇಳಿದ್ದಾರೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ ||
ನಿನ್ನ ಪಾಲಿನ ಕರ್ಮ ನೀನು ಮಾಡು. ಬಂದುದನುಣ್ಣು. ಹರಿಪಾದದ ಸ್ಮರಣೆ ತಪ್ಪದಿರಲಿ-ಇದು ಸಾತ್ವಿಕನ ಜೀವನದ ಮೂಲ ಮಂತ್ರ.
·  ಶ್ಲೋಕ - 27
ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋSಶುಚಿಃ
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ೨೭॥
ರಾಗೀ ಕರ್ಮಫಲ ಪ್ರೇಪ್ಸು ಲುಬ್ಧಃ ಹಿಂಸಾ ಆತ್ಮಕಃ ಅಶುಚಿಃ
ಹರ್ಷ ಶೋಕ ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ಹಚ್ಚಿಕೊಳ್ಳುವವ, ಫಲ ದೊರೆತಾಗ ಹಿಗ್ಗುವವ, ಇರದಾಗ ಕುಗ್ಗುವವ ಇಂಥ ಕರ್ತಾರ ರಾಜಸ ಎನಿಸುತ್ತಾನೆ.
ರಾಜಸನಾದವನು ಒಳ್ಳೆಯ ಕೆಲಸ ಮಾಡುತ್ತಾನೆ ಆದರೆ ಅದರಲ್ಲಿ ಹರ್ಷ ಶೋಕತುಂಬಿರುತ್ತದೆ. ಆತ ತನ್ನ ಕೆಲಸದಲ್ಲಿ ಯಶಸ್ವೀಯಾದಾಗ ಆಕಾಶಕ್ಕೇರುತ್ತಾನೆ, ಕೆಲಸ ಕೈಗೂಡದಾಗ ಪಾತಾಳಕ್ಕೆ ಕುಸಿಯುತ್ತಾನೆ. ಇದಕ್ಕೆ ಮೂಲ ಕಾರಣ ರಾಜಸನಾದವನು ತನ್ನ ಪ್ರತಿಯೊಂದು ಕರ್ಮವನ್ನು ಫಲಾಪೇಕ್ಷೆಯಿಂದಲೇ ಮಾಡುವುದು. ಆತ ಕರ್ಮವನ್ನು ಅಂಟಿಸಿಕೊಂಡು ಕರ್ಮಫಲದ ನಿರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಮಾಡುವ ಕಾರ್ಯದಲ್ಲಿ ಲೋಭ, ಶ್ರದ್ಧೆ ಇಲ್ಲದೆ ಮಾಡುವುದು, ಕರ್ಮ ಮಾಡುವಾಗ ಮಾನಸಿಕ ಸ್ವಚ್ಛತೆ ಇಲ್ಲದೇ ಇರುವುದು ರಾಜಸನಾದವನ ಸ್ವಭಾವ.
·  ಶ್ಲೋಕ - 28
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋSಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ೨೮॥
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠಃ ನೈಕೃತಿಕಃ ಅಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸಃ ಉಚ್ಯತೇ ನಡೆಗೇಡಿ, ಅಸಂಸ್ಕೃತ[ಭಗವಂತನಲ್ಲಿ ಭಕ್ತಿಯಿರದವ], ಹಿರಿಮೆಗೆ ತಲೆ ಬಾಗದವ, ಉದ್ಧಟ, ಮೋಸಗಾರ, ಸೋಮಾರಿ, ಹುರುಪಿರದವ, ಇನ್ನೊಬ್ಬರ ತಪ್ಪನ್ನೆ ಅನುಗಾಲ ಟೀಕಿಸುವವ [ಮತ್ತೆ ಮಾಡಿದರೆ ಸರಿ ಎಂದು ಕೆಲಸವನ್ನು ಸುಮ್ಮನೆ ಮುಂದೂಡುವವ]-ಇಂಥ ಕರ್ತಾರ ತಾಮಸ ಎನಿಸುತ್ತಾನೆ.
ತಾಮಸರಲ್ಲಿ ಅನೇಕ ವಿಧ.
(೧) ಅಯುಕ್ತಃ : ಮಾಡುವ ಕೆಲಸದಲ್ಲಿ ನಂಬಿಕೆ ಶ್ರದ್ಧೆ ಇಲ್ಲದೇ ಇರುವುದು. ಕರ್ಮ ಮಾಡುವಾಗ ಕರ್ಮ ನಿಯಾಮಕನಾದ ಭಗವಂತನಲ್ಲಿ ಮನೋಯೋಗವೇ ಇಲ್ಲದಿರುವುದು.
(
೨) ಪ್ರಾಕೃತಃ: ದೇವರ ಮೇಲೆ ನಂಬಿಕೆಯೇ ಇಲ್ಲದವರು. ಕೇವಲ ಪ್ರಾಕೃತ ಪ್ರಪಂಚದಲ್ಲಿ ಆಸಕ್ತಿ ಉಳ್ಳವರು.
(
೩) ಸ್ತಬ್ಧಃ: ತಾನು ಮಾಡುವ ಕರ್ಮದಲ್ಲಿ ತಪ್ಪಿದ್ದರೂ ಕೂಡ ಅದನ್ನು ತಿದ್ದಿಕೊಳ್ಳದೆ, ತಿಳುವಳಿಕೆ ಇಲ್ಲದೆ, ತಪ್ಪು ನಂಬಿಕೆಯನ್ನೇ ಆಚರಿಸಿಕೊಂಡು ಸಾಗುವವರು.
(
೪) ಶಠಃ : ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳುವ ಅಪೇಕ್ಷೆ ಇಲ್ಲದೆ ಇರುವವರು. ನಾನೇಕೆ ತಲೆ ತಗ್ಗಿಸಬೇಕು ಎನ್ನುವ ಮನೋವೃತ್ತಿ ಇರುವವರು.
(
೫)ನೈಕೃತಿಕಃ : ಒಳ್ಳೆಯತನದ ವೇಷಹಾಕಿಕೊಂಡು ಬುದ್ಧಿಪೂರ್ವಕವಾಗಿ ಇನ್ನೊಬ್ಬರಿಗೆ ಮೋಸಮಾಡಿ ಲಾಭಪಡೆಯುವವರು.
(
೬) ಅಲಸಃ : ಯಾವುದು ಒಳ್ಳೆಯದು ಎನ್ನುವುದು ಗೊತ್ತಿದೆ ಆದರೆ ಮಾಡಲು ಸೋಮಾರಿತನ ಇರುವವರು.
(
೭) ವಿಶಾದೀ :
ಒಂದು ಕ್ರಿಯೆಯನ್ನು ಅಯ್ಯೋ ಮಾಡಬೇಕಲ್ಲಾ' ಎಂದು ಮಾಡುವವರು. ಮಾಡಿದ ಮೇಲೂ ಮತ್ತೆ ಬೇಸರ ವ್ಯಕ್ತಪಡಿಸುವವರು.
(
೮) ದೀರ್ಘಸೂತ್ರಿ : ಮತ್ತೆ ಮಾಡಿದರಾಯ್ತು ಎಂದು ದೀರ್ಘಕಾಲ ಕೆಲಸವನ್ನು ಮುಂದೂಡುವವರು. ಇನ್ನೊಬ್ಬರ ಒಳ್ಳೆಯಗುಣವನ್ನು ಕಾಣದೇ ಅವರ ಯಾವುದೋ ಹಳೆಯ ತಪ್ಪನ್ನೇ ಎತ್ತಿ ಹೇಳುವವರು.
ಇಲ್ಲಿ ಹೇಳಿರುವ ಯಾವ ಒಂದು ಗುಣವಿದ್ದರೂ ಕೂಡ ಆತ ತಾಮಸನೆನಿಸುತ್ತಾನೆ. ಉದಾಹರಣೆಗೆ ಈ ಎಲ್ಲಾ ಗುಣಗಳಿದ್ದ ವ್ಯಕ್ತಿ ಮಹಾಭಾರತದ ದುರ್ಯೋಧನ.
·  ಶ್ಲೋಕ - 29
ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು ।
ಪ್ರೋಚ್ಯಮಾನಮಶೇಷೇಣ ಪೃಥಕ್ ತ್ವೇನ ಧನಂಜಯ ೨೯॥
ಬುದ್ಧೇಃ ಭೇದಮ್ ಧೃತೇಃ ಚ ಏವ ಗುಣತಃ ತ್ರಿವಿಧಮ್ ಶೃಣು ।
ಪ್ರೋಚ್ಯಮಾನಮ್ ಅಶೇಷೇಣ ಪೃಥಕ್ ತ್ವೇನ ಧನಂಜಯ –– ಧನಂಜಯ, ಬುದ್ಧಿ ಮತ್ತು ಧೈರ್ಯ ಕೂಡ ಗುಣದಿಂದ ಮೂರು ಬಗೆ. ಪೂರ್ತಿಯಾಗಿ ಅದರ ಪ್ರತ್ಯೇಕ ವಿವರಣೆಯನ್ನಾಲಿಸು.
ದೇಹ ಮತ್ತು ಇಂದ್ರಿಯಗಳು ಪೂರ್ಣಪ್ರಮಾಣದಲ್ಲಿ ವಿಕಸನ ಹೊಂದಿರುವುದು ಮಾನವರಲ್ಲಿ. ಅದಕ್ಕಾಗಿ ಮಾನವ ಶರೀರವನ್ನು ಪುರಎನ್ನುತ್ತಾರೆ. ಈ ದೇಹದಲ್ಲಿರುವ ಜೀವನಿಗೆ(ಪುರುಷ) ಬುದ್ಧಿ ಮತ್ತು ಧೃತಿ ಬಹಳ ಮುಖ್ಯವಾದ ಅಂಶ. ನಾವು ನಮ್ಮ ಜೀವನದಲ್ಲಿ ಹೇಡಿಗಳಾಗದೆ ಬುದ್ಧಿವಂತರಾಗಿ ಬದುಕಬೇಕು. ಈ ಬುದ್ಧಿ ಮತ್ತು ಧೃತಿಯಲ್ಲಿ ಕೂಡ ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ನಾವು ನಮ್ಮ ಜೀವನದಲ್ಲಿ ರಾಜಸ ಮತ್ತು ತಾಮಸವನ್ನು ಅನುಸರಿಸಬಾರದು. ಅದಕ್ಕಾಗಿ ಯಾವುದು ರಾಜಸ ಯಾವುದು ತಾಮಸ ಎನ್ನುವ ವಿಚಾರ ನಮಗೆ ತಿಳಿದಿರಬೇಕು.ಬುದ್ಧಿ ಮತ್ತು ಧೃತಿಯಲ್ಲಿ ಮೂರು ಬಗೆಯನ್ನು ಪೂರ್ಣವಾಗಿ, ಬಿಡಿಬಿಡಿಯಾಗಿ ಹೇಳುತ್ತೇನೆ-ಅದನ್ನು ಗಮನವಿಟ್ಟು ಕೇಳುಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ. ನಾವು ಸಾತ್ವಿಕ ಧೃತಿಯನ್ನು ಗೆದ್ದು ಧನಂಜಯರಾಬೇಕು ಎನ್ನುವುದು ಕೃಷ್ಣನ ಈ ಸಂದೇಶದ ಮೂಲ ಉದ್ದೇಶ.
·  ಶ್ಲೋಕ - 30
ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ೩೦॥
ಪ್ರವೃತ್ತಿಮ್ ಚ ನಿವೃತ್ತಿಮ್ ಚ ಕಾರ್ಯ ಅಕಾರ್ಯೇ ಭಯ ಅಭಯೇ ।
ಬಂಧಂ ಮೋಕ್ಷಮ್ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ಪಾರ್ಥ, ಇಹದ ಧರ್ಮ-ಪರದ ಧರ್ಮ, ಮಾಡಬೇಕಾದ್ದು-ಮಾಡಬಾರದ್ದು, ಅಂಜಬೇಕಾದ್ದು- ಅಂಜಬಾರದ್ದು, ಬಂಧನದ ದಾರಿ- ಬಿಡುಗಡೆಯ ದಾರಿ ಇವನ್ನೆಲ್ಲ ಅರಿಯಬಲ್ಲ ಬುದ್ಧಿಯೆ ಸಾತ್ವಿಕ ಬುದ್ಧಿ.
ನಮ್ಮ ಜೀವನದಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆ ಏನೆಂದರೆ ಒಂದು ಕೆಲಸವನ್ನು ಮಾಡಬೇಕೋ ಬೇಡವೋಎನ್ನುವ ಗೊಂದಲ. ಯಾವುದನ್ನು ಹಿಡಿಯಬೇಕು, ಯಾವುದನ್ನು ಬಿಡಬೇಕು; ಯಾವುದು ಒಳ್ಳೆಯ ಕೆಲಸ, ಯಾವುದು ಕೆಟ್ಟ ಕೆಲಸ ಎನ್ನುವ ತೀರ್ಮಾನ; ನನ್ನ ಕರ್ತವ್ಯ ಯಾವುದು ಎಂದು ತಿಳಿದಿರುವುದು; ಧರ್ಮ-ಅಧರ್ಮಗಳು; ಪಾಪ-ಪುಣ್ಯಗಳು; ಭಯ-ಅಭಯ; ಬಂಧನದ ಮತ್ತು ಬಿಡುಗಡೆಯ ದಾರಿ- ಇವೆಲ್ಲವುದರ ಬಗ್ಗೆ ಖಚಿತವಾದ ನಿರ್ಧಾರ ಸಾತ್ವಿಕ ಮನಸ್ಸಿಗಿರುತ್ತದೆ. ಇದು ಸ್ವಾರ್ಥದ ಸುಳಿವೇ ಇಲ್ಲದ(ಅಪಾರ್ಥ)-ಪ್ರಜ್ಞೆ; ಜ್ಞಾನದ ಆಳಕ್ಕೆ ಇಳಿದಾಗ ಬರುವ-ಪ್ರಜ್ಞೆ; ಬುದ್ಧಿ ವಿಸ್ತಾರವಾದಾಗ(ಪಾರ್ಥ) ಬರುವ-ಪ್ರಜ್ಞೆ. ವಿಶ್ಲೇಷಣೆ ಮಾಡಿ ನಾವು ಸರಿಯಾದ ದಾರಿಯಲ್ಲಿ ಹೋಗುವಂತೆ ತೀರ್ಮಾನ ಮಾಡತಕ್ಕಂತಹ-ವಿವೇಕಪ್ರಜ್ಞೆ. ನಮಗೆ ನಮ್ಮ ಆತ್ಮಸಾಕ್ಷಿ ಎಂದೂ ಮೋಸ ಮಾಡುವುದಿಲ್ಲ. ಪ್ರತಿಯೊಬ್ಬನ ಆತ್ಮಸಾಕ್ಷಿ ಕೊಡುವ ನಿರ್ಧಾರ ಖಚಿತವಾದ ನಿರ್ಧಾರವಾಗಿರುತ್ತದೆ ಮತ್ತು ಅದು ಸಾತ್ವಿಕ.
·  ಶ್ಲೋಕ - 31
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ ।
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ೩೧॥
ಯಯಾ ಧರ್ಮಮ್ ಅಧರ್ಮಮ್ ಚ ಕಾರ್ಯಮ್ ಚ ಅಕಾರ್ಯಮ್ ಏವ ಚ
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ಪಾರ್ಥ, ಯಾವುದು ಧರ್ಮ ಯಾವುದು ಅಧರ್ಮ, ಯಾವುದು ಮಾಡಬೇಕಾದ್ದು ಯಾವುದು ಮಾಡಬಾರದ್ದು ಎನ್ನುವುದನ್ನು ಸರಿಯಾಗಿ ನಿರ್ಧರಿಸಲಾಗದ ಬುದ್ಧಿ ರಾಜಸ ಬುದ್ಧಿ.
ಕೆಲವೊಮ್ಮೆ ಧರ್ಮವನ್ನೇ ಅಧರ್ಮ ಎಂದು ತಿಳಿಯುವುದು ಅಥವಾ ಅಧರ್ಮವನ್ನೇ ಧರ್ಮವೆಂದು ತಿಳಿಯುವುದು; ಇನ್ನು ಕೆಲವೊಮ್ಮೆ ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲದಲ್ಲಿ ಬೀಳುವುದು-ರಾಜಸ ಬುದ್ಧಿ. ಜೀವನದಲ್ಲಿ ಉಪಯೋಗಕ್ಕೆಬಾರದ ಈ ವಿಧವಾದ ಬುದ್ಧಿ, ಯಾವುದು ಮಾಡಬೇಕಾದದ್ದು-ಯಾವುದು ಮಾಡಬಾರದ್ದು ಎನ್ನುವುದನ್ನು ಸರಿಯಾಗಿ ನಿರ್ಧರಿಸಲಾರದು.
·  ಶ್ಲೋಕ - 32
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾSSವೃತಾ ।
ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ೩೨॥
ಅಧರ್ಮಮ್ ಧರ್ಮಮ್ ಇತಿ ಯಾ ಮನ್ಯತೇ ತಮಸಾ ಆವೃತಾ ।
ಸರ್ವ ಅರ್ಥಾನ್ ವಿಪರೀತಾನ್ ಬುದ್ಧಿಃ ಸಾ ಪಾರ್ಥ ತಾಮಸೀ ಪಾರ್ಥ, ಅಧರ್ಮವನ್ನೆ ಧರ್ಮವೆಂದು ಗ್ರಹಿಸುವ, ಹೀಗೆ ಎಲ್ಲ ಸಂಗತಿಯನ್ನು ವಿಪರೀತವಾಗಿಯೆ ಗ್ರಹಿಸುವ, ಕತ್ತಲು ಕವಿದ ಬುದ್ಧಿ ತಾಮಸ ಬುದ್ಧಿ.
ಇರುವ ವಿಷಯವನ್ನು ಯಥಾವತ್ತಾಗಿ ಗ್ರಹಿಸದೆ, ವ್ಯತಿರಿಕ್ತವಾಗಿಯೇ ಗ್ರಹಿಸುವ ಬುದ್ಧಿ ತಾಮಸ. ಇವರು ದುಃಖವನ್ನು ದುಃಖವೆಂದು ಗ್ರಹಿಸದೆ ಸುಖವೆಂದು ಗ್ರಹಿಸುತ್ತಾರೆ. ಉದಾಹರಣೆಗೆ ಮದ್ಯಪಾನ ಮಾಡುವುದು ಆನಂದ ಎಂದು ಭ್ರಮಿಸಿ ಮದ್ಯಪಾನ ವ್ಯಸನಿಗಳಾಗುವುದು. ಜ್ಞಾನವನ್ನೇ ಅಜ್ಞಾನವೆಂದು ತಿಳಿದು, ತಮ್ಮ ವಿಪರೀತ ಜ್ಞಾನವನ್ನೇ ಸರ್ವಸ್ವವಾಗಿರಿಸಿಕೊಂಡು, ಇನ್ನೊಬ್ಬರ ಮಾತಿಗೆ ಕಿವಿಗೊಡದಂತೆ ಮಾಡುವ ಬುದ್ಧಿ ತಾಮಸ ಬುದ್ಧಿ.
ಯಾರಿಗೆ ಒಳ್ಳೆಯ ಬುದ್ಧಿ ಇದೆ ಅವರಿಗೆ ಧೃತಿ ಇರುತ್ತದೆ. ಅಜ್ಞಾನದಿಂದ-ಭಯ, ಅರಿವಿನಿಂದ-ಅಭಯ. ವೇದಾಂತವಿರುವುದೇ ಅಭಯಕ್ಕಾಗಿ, ಮನಸ್ಸಿಗೆ ಧೈರ್ಯ ತುಂಬಿ ಮನುಷ್ಯನನ್ನು ನಿರ್ಭಯನನ್ನಾಗಿ ಮಾಡುವುದಕ್ಕೋಸ್ಕರ.
'ಧೃತಿ' ಎನ್ನುವುದರ ಮೇಲ್ನೋಟದ ಅರ್ಥ -ಧೈರ್ಯ, ಆತ್ಮವಿಶ್ವಾಸ(Confidence), ಎದೆಗಾರಿಗೆ(courage) ಇತ್ಯಾದಿ. ಇದರ ಪೂರ್ಣ ಪ್ರಮಾಣದ ಅರ್ಥ ಇನ್ನೂ ವಿಶಾಲ. ಅಷ್ಟಾಂಗಜಪದಲ್ಲಿ(ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ) ಹೇಳುವ ಧಾರಣ’-ಧೃತಿ. ಒಂದು ವಿಷಯವನ್ನು ಗ್ರಹಿಸಿ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಧೃತಿ. ಇಂಥಹ ಧೃತಿಯಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಸುಂದರ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕಾಣಬಹುದು.
·  ಶ್ಲೋಕ - 33
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ೩೩॥
ಧೃತ್ಯಾ ಯಯಾ ಧಾರಯತೇ ಮನಃ ಪ್ರಾಣ ಇಂದ್ರಿಯ ಕ್ರಿಯಾಃ
ಯೋಗೇನ ಅವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ಪಾರ್ಥ, ಭಕ್ತಿಯೋಗದಿಂದ ಬಗೆಗೊಂಡು ಯಾವ ಗಟ್ಟಿತನದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ವ್ಯಾಪಾರಗಳನ್ನು ದಾರಿಗೆಡದಂತೆ ಧರಿಸಬಲ್ಲುದೋ ಅದು ಸಾತ್ವಿಕ ಧೈರ್ಯ.
ಯಾವ ಧೃತಿಯಿಂದ ಮನಸ್ಸು, ದೇಹ, ಇಂದ್ರಿಯಗಳು ದಾರಿತಪ್ಪದೆ ಒಂದಕ್ಕೊಂದು ಪೂರಕವಾಗಿ ಭಕ್ತಿಯೋಗದಲ್ಲಿ ಕೆಲಸ ಮಾಡುತ್ತವೆ-ಅಂಥಹ ಧೃತಿ ಸಾತ್ವಿಕ ಧೃತಿ. ಮನಸ್ಸು ಯಥಾವತ್ತಾದದ್ದನ್ನು ಗ್ರಹಿಸುತ್ತದೆ, ಇಂದ್ರಿಯಗಳು ಮತ್ತು ದೇಹ ಅದಕ್ಕೆ ಪೂರಕವಾಗಿ, ಭಕ್ತಿಯಿಂದ ಕೆಲಸ ಮಾಡುತ್ತವೆ. ಇಲ್ಲಿ ಯೋಗ ಎಂದರೆ ಭಗವದ್ ಭಕ್ತಿಗೆ ಪೂರಕವಾಗಿ ವಾಸ್ತವವನ್ನು ಗ್ರಹಿಸುವ ಉಪಾಯ- ಅದೇ ನಮ್ಮ ಆತ್ಮವಿಶ್ವಾಸ. ಇದರಲ್ಲಿ ಅನೇಕ ಮುಖಗಳಿವೆ. ಉದಾಹರಣೆಗೆ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ’. ಸಾಮಾನ್ಯವಾಗಿ ತಪ್ಪನ್ನು ತಪ್ಪು ಎಂದು ಹೇಳಲು ಅನೇಕ ತೊಂದರೆಗಳಿರುತ್ತವೆ. ಇದಕ್ಕೆ ಮೊದಲ ಅಡ್ಡಿ-ದಾಕ್ಷಿಣ್ಯ. ಭಗವದ್ ಭಕ್ತಿಗೆ ಪೂರಕವಾದುದನ್ನು ನಾವು ನಿರ್ದಯವಾಗಿ ಹೇಳಿಬಿಡಬೇಕು. ದೈರ್ಯವಾಗಿ ತಪ್ಪನ್ನು ಪ್ರತಿಭಟಿಸಬೇಕು. ತಪ್ಪು ಗ್ರಹಿಕೆ ಮಾಡದೆ, ತಪ್ಪು ದಾರಿಯಲ್ಲಿ ಸಾಗದೆ, ಭಗವದ್ ಭಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದೆ, ಸತ್ಯವನ್ನು ನಿಷ್ಠುರವಾಗಿ ಹೇಳುವುದು ಸಾತ್ವಿಕ ಧೃತಿ. ಮನಸ್ಸು ಕೆಟ್ಟದ್ದನ್ನು ಯೋಚಿಸದೆ ಇರುವುದು, ದೇಹ ಕೆಟ್ಟದ್ದರ ಕಡೆ ಚಲಿಸದೇ ಇರುವುದು, ಇಂದ್ರಿಯಗಳು ಕೆಟ್ಟದ್ದನ್ನು ಗ್ರಹಿಸದೇ ಇರುವುದು- ಹೀಗೆ ಭಗವದ್ ಭಕ್ತಿಗೆ ಪೂರಕವಾಗಿರುವ ಎಲ್ಲವೂ ಸಾತ್ವಿಕ ಧೃತಿ.
ಸಾಮಾನ್ಯವಾಗಿ ನಾವು ನಮ್ಮ ದೇಹ ಇಂದ್ರಿಯಗಳನ್ನು ನಿಯಂತ್ರಿಸಬಹುದು, ಆದರೆ ಮನಸ್ಸು ಕೆಟ್ಟದ್ದನ್ನು ಯೋಚಿಸದಂತೆ ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಇದನ್ನು ಸಾಧಿಸಲು ಧೀರ್ಘಕಾಲದ ಸಾಧನೆ ಅಗತ್ಯ. ಈ ಎಲ್ಲ ವಿಷಯಗಳು ತಿಳಿದಾಗ ನಾವು ಸಾತ್ವಿಕ ಧೃತಿಯಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದು ತಿಳಿಯುತ್ತದೆ ಮತ್ತು ನಮ್ಮನ್ನು ನಾವು ತಿದ್ದಿಕೊಂಡು ಸಾತ್ವಿಕ ಧೃತಿಯತ್ತ ಸಾಗಲು ಸಹಾಯಕವಾಗುತ್ತದೆ.
·  ಶ್ಲೋಕ - 34
ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾ ಧಾರಯತೇSರ್ಜುನ ।
ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ೩೪॥
ಯಯಾ ತು ಧರ್ಮ ಕಾಮ ಅರ್ಥಾನ್ ಧೃತ್ಯಾ ಧಾರಯತೇ ಅರ್ಜುನ ।
ಪ್ರಸಂಗೇನ ಫಲ ಆಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ಪಾರ್ಥ, ಧರ್ಮ-ಕಾಮ-ಅರ್ಥಗಳನ್ನು ಓಲೈಸುವ, ಅತಿಯಾಗಿ ಹಚ್ಚಿಕೊಂಡು ಫಲದ ಆಸೆ ಹೊತ್ತ ಗಟ್ಟಿತನ ರಾಜಸ ಧೈರ್ಯ.
ತಾಯಿ ತನ್ನ ಮಗುವನ್ನು ನಿಸ್ವಾರ್ಥವಾಗಿ ಪ್ರೀತಿಸುವಂತೆ ಭಗವಂತನನ್ನು ಪ್ರೀತಿಸುವುದು ಭಕ್ತಿ. ಈ ಪ್ರೀತಿಯಲ್ಲಿ ಫಲಾಪೇಕ್ಷೆ ಸೇರಿದರೆ ಅದು ಭಕ್ತಿ ಎನಿಸದೆ ಸ್ವಾರ್ಥ ಎನಿಸುತ್ತದೆ. ರಾಜಸ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಆದಷ್ಟು ಧರ್ಮದ ಚೌಕಟ್ಟಿನಲ್ಲೇ ಕಾರ್ಯ ನಿರ್ವಹಿಸಬಹುದು. ಆದರೆ ಆತ ಹಣವನ್ನು ಗಳಿಸುವುದಕ್ಕಾಗಿ ಅಥವಾ ಅತಿಯಾದ ಮೋಹದಿಂದ ಫಲದ ಆಸೆ ಹೊತ್ತ ಗಟ್ಟಿತನ ತನ್ನದಾಗಿರಿಸಿಕೊಂಡಿರುತ್ತಾನೆ. ಇದು ರಾಜಸ ಧೃತಿ. ನಾವು ರಾಜಸ ಗುಣದ ಸ್ಪರ್ಶವಿಲ್ಲದ, ಬಿಳಿಯಾದ(ಅರ್ಜುನ)-ಶುದ್ಧಸಾತ್ವಿಕರಾಗಬೇಕು ಎನ್ನುವುದು ಕೃಷ್ಣನ ಸಂದೇಶ.
·  ಶ್ಲೋಕ - 35
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ೩೫॥
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ಪಾರ್ಥ, ನಿದ್ದೆ, ಅಂಜಿಕೆ, ದುಗುಡ, ನಿರುತ್ಸಾಹ, ಸೋಕ್ಕುಗಳನ್ನು ಬಿಟ್ಟಿರಲಾಗದ ತಿಳಿಗೇಡಿಯ ಗಟ್ಟಿತನವೆ ತಾಮಸ ಧೈರ್ಯ.
ಗ್ರಹಿಕೆಯಲ್ಲಿ ತಾಮಸ ಪ್ರವೃತ್ತಿ ಉಳ್ಳವ ತಿಳಿಗೇಡಿ, ಅವಿವೇಕಿ. ಆತ ಒಳ್ಳೆಯ ಗ್ರಹಿಕೆಗಳಿಗೆ ಹೋಗುವುದೇ ಇಲ್ಲ. ಒಳ್ಳೆಯ ವಿಷಯ ಚರ್ಚೆಯಾಗುವಾಗ ಈತ ನಿದ್ದೆಮಾಡುತ್ತಿರುತ್ತಾನೆ. ಈತನಿಗೆ ಯಾವಾಗಲೂ ಭಯ.[ಉದಾಹರಣೆಗೆ ಲಂಚ ತೆಗೆದುಕೊಳ್ಳುವುದು ಮತ್ತು ಅದರಿಂದಾಗಿ ಜೀವನಪೂರ್ತಿ ಭಯದಿಂದ ಬಾಳುವುದು]. ಈತನ ಜೀವನದಲ್ಲಿ ಲವಲವಿಕೆ, ಉತ್ಸಾಹ, ಗೆಲುವು ಇರುವುದಿಲ್ಲ. ತಾನು ಶ್ರೇಷ್ಠ ಉಳಿದವರು ಕನಿಷ್ಠ ಎನ್ನುವ ಅಶಾಸ್ತ್ರೀಯವಾದ ಸಂಕಲ್ಪ ತಾಮಸ ಧೃತಿ.
·  ಶ್ಲೋಕ - 36, 37
ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।
ಅಭ್ಯಾಸಾದ್ ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ೩೬॥

ಯತ್ ತದಗ್ರೇ ವಿಷಮಿವ ಪರಿಣಾಮೇSಮೃತೋಪಮಮ್ ।
ತತ್ ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ೩೭॥
ಸುಖಮ್ ತು ಇದಾನೀಮ್ ತ್ರಿವಿಧಮ್ ಶೃಣು ಮೇ ಭರತರ್ಷಭ ।
ಅಭ್ಯಾಸಾತ್ ರಮತೇ ಯತ್ರ ದುಃಖಾಂತಮ್ ಚ ನಿಗಚ್ಛತಿ ||
ಯತ್ ತತ್ ಅಗ್ರೇ ವಿಷಮ್ ಇವ ಪರಿಣಾಮೇ ಅಮೃತ ಉಪಮಮ್ ।
ತತ್ ಸುಖಮ್ ಸಾತ್ವಿಕಮ್ ಪ್ರೋಕ್ತಮ್ ಆತ್ಮ ಬುದ್ಧಿ ಪ್ರಸಾದಜಮ್ –– ಭರತರ್ಷಭ, ಈಗ ಮೂರುತೆರನಾದ ಸುಖವನ್ನು ನನ್ನಿಂದಾಲಿಸು: ಬಳಕೆಯಿಂದ ಖುಷಿಕೊಡುವಂಥದು, ದುಃಖವನ್ನು ನೀಗಿಸುವಂಥದು, ಮೊದಲು ವಿಷದಂತೆ ಅಪ್ರೀಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂಥದು ಇಂಥ ಸುಖ-ಸಾತ್ವಿಕ. ಇದು ತನ್ನ ಬಗೆ ತಿಳಿಯಾದಾಗ, ಭಗವಂತನ ಕರುಣೆಯಿಂದ ಬರುವಂಥದು.
ಮನುಷ್ಯ ಒಟ್ಟಾಗಿ ಜೀವನದಲ್ಲಿ ಬಯಸುವುದು ಸುಖವನ್ನು. ಆತನ ಜೀವನದ ಕೊನೆಯ ಗುರಿ ಸುಖ. ಆದರೆ ಯಾವುದು ನಿಜವಾದ ಸುಖ? ಸುಖದಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ.ತ್ರೈವಿದ್ಯೆಯ ವಿವರಣೆಯ ಕೊನೆಯಲ್ಲಿ ಸುಖದ ಮೂರು ವಿಧದ ವಿವರಣೆಯನ್ನು ಕೇಳುಎನ್ನುತ್ತಾನೆ ಕೃಷ್ಣ. ಇಲ್ಲಿ ಬಳಸಿರುವ ಭರತರ್ಷಭಎನ್ನುವ ವಿಶೇಷಣದ ಹಿಂದೆ ವ್ಯಾಸರು ನಮಗೆ ಅನೇಕ ಸಂದೇಶವನ್ನು ಕೊಟ್ಟಿರುವುದನ್ನು ನಾವು ಗಮನಿಸಬೇಕು. ಭಗವಂತನ ಭಕ್ತಿಯಲ್ಲಿ-ರತ(ಶ್ರೇಷ್ಠ)ರಾದಾಗ; ಭರತನಂತೆ ಲೌಕಿಕ ಸುಖದ ಆಸೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಶ್ರೀರಾಮಚಂದ್ರನನ್ನು ಪ್ರೀತಿಸಿದಾಗ; ಭಗವಂತನ ಭಕ್ತಿಯಲ್ಲಿ ನಿರತರಾದವರಲ್ಲಿ ಶ್ರೇಷ್ಠರಾದ ವಾಯು(ಹನುಮಂತ)ದೇವರಲ್ಲಿ ಗುರುಭಕ್ತಿಯನ್ನಿಟ್ಟು, ಭಗವದರ್ಪಣಾಭಾವದಿಂದ ನಮ್ಮ ಕರ್ಮ ನಿರ್ವಹಿಸಿದಾಗ- ನಾವು ಭರತರ್ಷಭರಾಗಬಹುದು. ಭರತರ್ಷಭನಾದವನಿಗೆ ನಿಜವಾದ ಸುಖ ಎಂದರೇನು ಎಂದು ತಿಳಿದು ಅದನ್ನು ಅನುಭವಿಸಲು ಸಾಧ್ಯ.
ಯಾವುದೇ ಒಂದು ವಿಷಯ ಪ್ರಾರಂಭದಿಂದಲೇ ಸುಖವಾಗಿ ಕಾಣಿಸಿದರೆ ಅದು ಸಾತ್ವಿಕ ಸುಖವಲ್ಲ. ಕಷ್ಟಪಡದೆ ಅನಾಯಾಸವಾಗಿ ಪಡೆಯುವುದು ಮೋಹದ ಸುಖ. ಸಾತ್ವಿಕ ಸುಖ ಮೊದಲು ಕಷ್ಟ ರೂಪದಲ್ಲಿರುತ್ತದೆ. ಇದಕ್ಕೆ ಉತ್ತಮ ದೃಷ್ಟಾಂತ ಸಮುದ್ರಮಥನ. ಅಲ್ಲಿ ಮೊದಲು ಬಂದಿರುವುದು ಅಮೃತವಲ್ಲ ಬದಲಿಗೆ ವಿಷ. ನಿಜವಾದ ಅಮೃತ ಸಿಕ್ಕಿರುವುದು ಕೊನೆಯಲ್ಲಿ. ಕೈಕೆಸರಾದರೆ ಬಾಯಿ ಮೊಸರು-ಕಷ್ಟಪಟ್ಟರೆ ಸುಖ. ನಾವು ಕುಡಿಯುವ ಔಷಧ ವಿಷದಂತೆ ಕಹಿ, ಆದರೆ ಅದರಿಂದ ಬರುವ ಆರೋಗ್ಯ ಅಮೃತದಂತೆ ಸಿಹಿ.
ಕೃಷ್ಣ ಇಲ್ಲಿ ಆತ್ಮ ಬುದ್ಧಿ ಪ್ರಸಾದಜಮ್ಎನ್ನುವ ಒಂದು ಅಪೂರ್ವ ವಿಶೇಷಣವನ್ನು ಬಳಸಿದ್ದಾನೆ. ಆತ್ಮಪ್ರಸಾದ ಅಂದರೆ ದೇವರ ಅನುಗ್ರಹ. ಸಾತ್ವಿಕ ಸುಖ ನಾವು ಬೇಕು ಎಂದು ಬಯಸಿದಾಗ ಸಿಗುವುದಿಲ್ಲ. ಅದು ಭಗವಂತನ ಅನುಗ್ರಹದಿಂದ ಸಿಗುವಂಥದ್ದು. ಅದನ್ನು ಪಡೆಯಲು ನಮಗೆ ಪಾರದರ್ಶಕವಾದ ಶುದ್ಧ ಮನಸ್ಸಿರಬೇಕು. ಅದು ಹೊರಗಿನಿಂದ ಬರುವುದಲ್ಲ ಬದಲಿಗೆ ಒಳಗಿನಿಂದ ಚಿಮ್ಮುವುದು. ಹೀಗೆ ಭಗವಂತನ ಅನುಗ್ರಹ ಮತ್ತು ಮನಸ್ಸಿನ ಪ್ರಸನ್ನತೆಯಿದ್ದಾಗ ಒಳಗಿನ ಸ್ವರೂಪಾನಂದದ ಸುಖವನ್ನು ಅನುಭವಿಸಲು ಸಾಧ್ಯ.
·  ಶ್ಲೋಕ - 38
ವಿಷಯೇಂದ್ರಿಯ ಸಂಯೋಗಾದ್ ಯತ್ ತದಗ್ರೇSಮೃತೋಪಮಮ್
ಪರಿಣಾಮೇ ವಿಷಮಿವ ತತ್ ಸುಖಂ ರಾಜಸಂ ಸ್ಮೃತಮ್ ೩೮॥
ವಿಷಯ ಇಂದ್ರಿಯ ಸಂಯೋಗಾತ್ ಯತ್ ತತ್ ಅಗ್ರೇ ಅಮೃತ ಉಪಮಮ್
ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್ ಸ್ಮೃತಮ್ -- ವಿಷಯ ಮತ್ತು ಇಂದ್ರಿಯಗಳ ನಂಟಿನಿಂದ ಉಂಟಾಗುವಂಥದು, ಮೊದಲು ಅಮೃತದಂತೆ ರೋಚಕ, ಕಡೆಗೆ ವಿಷದಂತೆ ಅಪಾಯಕಾರಿ ಅಂಥ ಸುಖ ರಾಜಸ ಎನಿಸುತ್ತದೆ.
ಯಾವುದು ಮೊದಲು ಅನುಭವಿಸುವಾಗ ಬಹಳ ಸುಖವನ್ನು ಕೊಟ್ಟು ಆ ನಂತರ ಪರಿಣಾಮ ದುಃಖಕರವಾಗಿರುತ್ತದೆ ಅದು ರಾಜಸ ಸುಖ. ಇದು ಬಾಹ್ಯಸುಖ. ಇದು ಹೊರಗಿನ ವಿಷಯಗಳಿಗೂ ನಮ್ಮ ಇಂದ್ರಿಯಗಳಿಗೂ ಸಂಪರ್ಕದಿಂದ ತತ್ಕಾಲಕ್ಕೆ ಸಿಗುವ ಸುಖ. ಇಂದು ನಾವು ಕಾಣುವ ಹೆಚ್ಚಿನ ಅಪರಾಧ ಸುದ್ಧಿಗಳು ಈ ರೀತಿಯ ಕ್ಷಣಿಕ ಸುಖದ ಹಿಂದೆ ಹೋಗಿ ಆಗುವ ಪರಿಣಾಮ. ವಿಷಯ ಸುಖವನ್ನು ಅನುಭವಿಸುವುದು ತಪ್ಪಲ್ಲ, ಆದರೆ ಅನುಭವಿಸಿ ಅದನ್ನು ಮೀರಿನಿಲ್ಲುವುದು ಬಹಳ ಮುಖ್ಯ. ಹಿಂದಿನವರು ಮುಖ್ಯವಾಗಿ ಎರಡನ್ನು ಗೆಲ್ಲು ಎಂದಿದ್ದಾರೆ. ಒಂದು-ಆಹಾರದ ಚಟ ಇನ್ನೊಂದು ಲೈಂಗಿಕ ಚಪಲ. ಒಟ್ಟಿನಲ್ಲಿ ಕ್ಷಣಿಕವಾದ ಇಂದ್ರಿಯ ಸುಖವನ್ನು ಗೆಲ್ಲುವುದು ಬಹಳ ಮುಖ್ಯ.
·  ಶ್ಲೋಕ - 39
ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ ।
ನಿದ್ರಾಲಸ್ಯಪ್ರಮಾದೋತ್ಥಂ ತತ್ ತಾಮಸಮುದಾಹೃತಮ್ ೩೯॥
ಯತ್ ಅಗ್ರೇ ಚ ಅನುಬಂಧೇ ಚ ಸುಖಂ ಮೋಹನಮ್ ಆತ್ಮನಃ ।
ನಿದ್ರಾ ಆಲಸ್ಯ ಪ್ರಮಾದ ಉತ್ಥಂ ತತ್ ತಾಮಸಮ್ ಉದಾಹೃತಮ್ –– ಮೊದಲೂ ಕೊನೆಗೂ ಮತ್ತು ಬರಿಸಿ ಮೈಮರೆಸುವಂಥ ಸುಖ, ನಿದ್ದೆ-ಮೈಗಳ್ಳತನ-ಎಚ್ಚರಗೇಡಿತನಗಳಿಂದ ಸಿಗುವಂಥ ಸುಖ-ತಾಮಸ ಎನಿಸುತ್ತದೆ.
ಮನುಷ್ಯನನ್ನು ವಾಸ್ತವ ಪ್ರಪಂಚದಿಂದ ಭ್ರಮೆಗೆ ತಳ್ಳಿ, ಅವನನ್ನು ಮೋಹದಬಲೆಯಲ್ಲಿ ಬೀಳಿಸಿ, ಬುದ್ಧಿಗೇಡಿಯನ್ನಾಗಿಸಿ, ಸಂತೋಷದ ಭ್ರಮೆ ಹುಟ್ಟಿಸುವುದು ತಾಮಸ ಸುಖ. ಇದರಲ್ಲಿ ಮೊದಲೂ ಸುಖವಿಲ್ಲ, ಕೊನೆಗೂ ಸುಖವಿಲ್ಲ. ಉದಾಹರಣೆಗೆ ಮದ್ಯಪಾನ, ಧೂಮಪಾನ ಇತ್ಯಾದಿ ಎಲ್ಲ ದುಶ್ಚಟಗಳು.
ಸೋಮಾರಿತನದಿಂದ ಬರುವ ಸುಖ, ನಿದ್ದೆಯಿಂದ ಬರುವ ಸುಖ, ಎಚ್ಚರಗೇಡಿತನದಿಂದ ಬರುವ ಸುಖ-ಇವು ಒಳಗಿನ ಮನಸ್ಸನ್ನು ಕೊಂದು ಪಡೆಯುವ ಬಾಹ್ಯ ಸುಖ- ಇದು ತಾಮಸ. ಉದಾಹರಣೆಗೆ ನಿದ್ದೆ. ಮನುಷ್ಯ ಮಗುವಾಗಿದ್ದಾಗ ಆತನಿಗೆ ಇಪ್ಪತ್ತು ಗಂಟೆ ನಿದ್ದೆ ಮತ್ತು ನಾಲ್ಕು ಗಂಟೆ ಎಚ್ಚರ ಅಗತ್ಯ. ಆದರೆ ಪ್ರಬುದ್ಧನಾದವನಿಗೆ ನಾಲ್ಕು ಗಂಟೆ ನಿದ್ದೆ ಸಾಕು. ಆತ ಅಭ್ಯಾಸ ಮಾಡಿದರೆ ಇಪ್ಪತ್ತು ಗಂಟೆ ಎಚ್ಚರವಾಗಿರಬಹುದು. ಆದರೆ ತಾಮಸ ಸುಖ ದಿನವಿಡೀ ನಿದ್ದೆ ಮಾಡುವುದೇ ಪರಮ ಸುಖ ಎಂದು ಭ್ರಮೆ ಹುಟ್ಟಿಸಿ ಮನುಷ್ಯನನ್ನು ದಾರಿ ತಪ್ಪಿಸುತ್ತದೆ.
·  ಶ್ಲೋಕ - 40
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ ತ್ರಿಭಿರ್ಗುಣೈಃ ೪೦॥
ನ ತತ್ ಅಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈಃ ಮುಕ್ತಂ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ –– ಭೂಮಿಯಲ್ಲಾಗಲಿ, ಸ್ವರ್ಗದಲ್ಲಿನ ದೇವತೆಗಳಲ್ಲಾಗಲಿ, ಪ್ರಕೃತಿಯಿಂದುಟಾದ ಈ ಮೂರು ಗುಣಗಳಿಂದ ಬಿಡುಗಡೆಗೊಂಡ ಜೀವಜಾತವೆಂಬುದಿಲ್ಲ.
ತ್ರೈಗುಣ್ಯದ ಬಗ್ಗೆ ವಿವರವಾದ ಚಿತ್ರಣವನ್ನು ಕೊಟ್ಟ ನಂತರ ಕೃಷ್ಣ ಜೀವ ಸ್ವಭಾವದ ವಿವರಣೆಯನ್ನು ಕೊಡುತ್ತಾನೆ. ಈ ಭೂಮಿಯಲ್ಲಾಗಲಿ, ಅಥವಾ ಸತ್ಯಲೋಕದ ತನಕ ಯಾವುದೇ ದೇವತಾ ಲೋಕವಿರಲಿ, ಸಮಸ್ತ ಜೀವಜಾತಗಳು ಈ ಪ್ರಕೃತಿಯಿಂದ ನಿರ್ಮಿತವಾದ ತ್ರಿಗುಣಗಳ ಅಧೀನ. ಪ್ರತಿಯೊಂದು ಜೀವವೂ ಕೂಡ ಈ ಮೂರು ಸ್ವಭಾವಕ್ಕೆ ಒಳಪಟ್ಟಿದೆ ಮತ್ತು ಪ್ರತಿಯೊಂದು ಜೀವ ಈ ಮೂರು ಗುಣಗಳ ಕಲಬೆರಕೆ. ನೂರಕ್ಕೆ ನೂರು ಸಾತ್ವಿಕ/ರಾಜಸ/ತಾಮಸ ಯಾರೂ ಇಲ್ಲ. ಇಡೀ ಜಗತ್ತು ಮೂರರ ಮಿಶ್ರಣ.
ಜೀವ ಸ್ವಭಾವವನ್ನು ನೇರವಾಗಿ ಸಾತ್ವಿಕ-ರಾಜಸ-ತಾಮಸ ಎಂದು ಮೂರು ವಿಭಾಗ ಮಾಡಲು ಬರುವುದಿಲ್ಲ. ಇದಕ್ಕಾಗಿ ಇದನ್ನು ಚಾತುರ್ವರ್ಣ್ಯವಾಗಿ ಕೃಷ್ಣ ವಿಗಡಿಸಿ ಹೇಳಿದ. ಹಿಂದೆ ವಿವರಿಸಿದಂತೆ ಚಾತುರ್ವರ್ಣ್ಯ ಜಾತಿವಿಭಾಗಅಲ್ಲ. ಇದು ವರ್ಣ ವಿಭಾಗ. ಭಗವದ್ಗೀತೆಯಾಗಲಿ , ವೇದವಾಗಲಿ ಜಾತಿ ವಿಭಾಗವನ್ನು ಒತ್ತುಕೊಟ್ಟು ಹೇಳುವುದಿಲ್ಲ. ಜಾತಿವಿಭಾಗ ಕೆಲವು ಧರ್ಮ ಶಾಸ್ತ್ರಗಳಲ್ಲಿ ಬಂದಿದೆ ಹೊರತು ವೇದ ಮತ್ತು ಭಗವದ್ಗೀತೆಯಲ್ಲಿ ಬಂದಿಲ್ಲ. ಜಾತಿ ಅನ್ನುವುದು ಸಮಾಜ ವ್ಯವಸ್ಥೆಗಾಗಿ ಮಾಡಿಕೊಂಡ ವಿಭಾಗ. ಆದರೆ ವರ್ಣ ಮನಃಶಾಸ್ತ್ರೀಯವಾಗಿ ಜೀವಸ್ವಭಾವವನ್ನು ಅರಿತು ಹೇಳುವಂತಾದ್ದು.
ಸ್ಥೂಲವಾಗಿ ಹೇಳಬೇಕೆಂದರೆ ದೇವತೆಗಳು-ಸಾತ್ವಿಕರು, ಮಾನವರು-ರಾಜಸರು ಮತ್ತು ದೈತ್ಯರು-ತಾಮಸರು. ಆದರೆ ಈ ವಿಭಾಗ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ಪ್ರತಿಯೊಂದು ವರ್ಗದಲ್ಲಿ ಮತ್ತೆ ಮೂರು ವಿಭಾಗವಿದೆ. ಉದಾಹರಣೆಗೆ ತಾಮಸ-ಸಾತ್ವಿಕರು. ಮನುಷ್ಯರಲ್ಲಿ ನರಾಧಮರು ತಾಮಸ-ಸಾತ್ವಿಕರು. ದೈತ್ಯ ಪರಿವಾರದವರು ತಾಮಸ-ರಾಜಸರು; ಅವರನ್ನು ನಿಯಂತ್ರಿಸುವ ಕಾಲನೇಮಿಯಂತಹ ದೈತ್ಯರು ತಾಮಸ-ತಾಮಸರು.
ಮಾನವರಲ್ಲಿ ರಾಜಸ-ತಾಮಸರು ನರಾಧಮರು. ರಾಜಸ-ರಾಜಸರು ಎಂದರೆ ನಿತ್ಯ ಸಂಸಾರಿಗಳು. ಅವರು ಎಂದೂ ತಮಸ್ಸಿಗಾಗಲಿ, ಮೋಕ್ಷಕ್ಕಾಗಲಿ ಹೋಗುವುದಿಲ್ಲ. ಸದಾ ಈ ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾರೆ. ಇನ್ನು ಮೂರನೆಯವರಾದ ರಾಜಸ-ಸಾತ್ವಿಕರು ಮೋಕ್ಷ ಯೋಗ್ಯರು. ಚಾತುರ್ವರ್ಣ್ಯ ಎನ್ನುವುದು ಈ ಮೂರನೆ ಗುಂಪಿಗೆ ಮಾತ್ರ ಸೀಮಿತವಾದದ್ದು. ಆದ್ದರಿಂದ ಮೋಕ್ಷ ಯೋಗ್ಯರಾದ ರಾಜಸ-ಸಾತ್ವಿಕರಲ್ಲಿ ನಾಲ್ಕು ವಿಧ. ಮೋಕ್ಷಯೋಗ್ಯ-ಬ್ರಾಹ್ಮಣ, ಮೋಕ್ಷಯೋಗ್ಯ- ಕ್ಷತ್ರಿಯ, ಮೋಕ್ಷಯೋಗ್ಯ-ವೈಶ್ಯ, ಮತ್ತು ಮೋಕ್ಷಯೋಗ್ಯ-ಶೂದ್ರ. ಇದು ಜೀವ ಸ್ವಭಾವದ ಮೇಲೆ ಇರುವ ನಾಲ್ಕು ವಿಭಾಗ. ಇಲ್ಲಿ ಮೇಲು-ಕೀಳು ಎನ್ನುವ ಭೇದವಿಲ್ಲ. ಎಲ್ಲರೂ ಮೋಕ್ಷ ಯೋಗ್ಯರು. ಸತ್ವ ರಜಸ್ಸು ಮತ್ತು ತಮಸ್ಸಿನ ಅನುಪಾತದಂತೆ ಮತ್ತೆ ಅನೇಕ ವಿಧವನ್ನು ಚಾತುರ್ವರ್ಣ್ಯದೊಳಗೆ ಕಾಣಬಹುದು.
(೧)ಪರಮಹಂಸರು(೯೦-ಅಂಶ ಸಾತ್ವಿಕ): ಇವರು ತಮ್ಮನ್ನು ತಾವು ಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳಿಸಿಕೊಂಡವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ ಕೇವಲ ೧೦.
(
೨)ಹಂಸರು(೮೫-ಅಂಶ ಸಾತ್ವಿಕ): ಹಂಸರು ಪರಮಹಂಸರ ನಂತರದವರು. ಇವರಲ್ಲಿ ರಾಜಸ ಮತ್ತು ತಾಮಸದ ಪ್ರಮಾಣ ೧೫-ಅಂಶ.
(
೩)ಬಹೂದಕರು(೮೦-ಅಂಶ ಸಾತ್ವಿಕ): ಇವರಿಗೆ ಒಂದು ಸ್ಥಿರವಾದ ನೆಲೆ ಇಲ್ಲ. ದಿನಕ್ಕೊಂದು ಕಡೆ ಇವರ ವಾಸ. ಇವರಲ್ಲಿ ಸಾತ್ವಿಕ ಅಂಶ ೮೦ ಮತ್ತು ರಾಜಸ-ತಾಮಸ ಅಂಶ-೨೦
(
೪)ಕುಟೀಚಕರು(೭೫-ಅಂಶ ಸಾತ್ವಿಕ): ಇವರು ಬಹೂದಕರಂತೆ. ಆದರೆ ಇವರು ಒಂದು ಕಡೆ ಒಂದು ಮನೆಯಲ್ಲಿ ವಾಸಿಸುವವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ-೨೫.
(
೫)ವಾನಪ್ರಸ್ಥರು(೭೦-ಅಂಶ ಸಾತ್ವಿಕ): ಮನೆಯಲ್ಲಿ ಗೃಹಸ್ಥರಾಗಿದ್ದು, ನಂತರ ತಮ್ಮ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ಕಾಡಿಗೆ ಹೋಗಿ ಸಾಧನೆ ಮಾಡುವವರು. ಇವರಲ್ಲಿ ೩೦ ಅಂಶ ರಾಜಸ-ತಾಮಸವಿದ್ದರೆ ಉಳಿದ ೭೦-ಅಂಶ ಸಾತ್ವಿಕ. ಇವರಿಗೆ ಅಗ್ನಿ ಕರ್ಮವಿದೆ, ಸ್ತ್ರೀ-ಸಂಗವಿಲ್ಲ.
(
೬)ಬ್ರಹ್ಮಚಾರಿಗಳು(೬೫-ಅಂಶ ಸಾತ್ವಿಕ): ಇವರಲ್ಲಿ ಶೇಕಡಾ ೩೫ ಅಂಶ ರಾಜಸ ಮತ್ತು ತಾಮಸ. ಇವರಿಗೆ ಸ್ತ್ರೀ-ಸಂಗ ನಿಷಿದ್ಧ.
(
೭)ಗೃಹಸ್ಥರು : ಇವರಲ್ಲಿ ಸಾತ್ವಿಕ ಅಂಶ ೬೦, ಉಳಿದ ೪೦- ರಾಜಸ ಮತ್ತು-ತಾಮಸ ಅಂಶ. ಇವರು ಸಾಂಸಾರಿಕ ಜೀವನ ನೆಡೆಸಬಹುದು. ಈ ಮೇಲಿನ ೭ ವಿಧ ಬ್ರಾಹ್ಮಣ ವರ್ಗಕ್ಕೆ ಸಂಬಂಧಪಟ್ಟಿದ್ದು. ಒಟ್ಟಿನಲ್ಲಿ ಹೇಳಬೇಕೆಂದರೆ ಕನಿಷ್ಠ ೬೦-ಪ್ರಮಾಣ ಸಾತ್ವಿಕ-ಅಂಶ ಇರುವ ಮೋಕ್ಷಯೋಗ್ಯ ಮಾನವ ಬ್ರಾಹ್ಮಣ ಎನಿಸುತ್ತಾನೆ.
(
೮)ಕ್ಷತ್ರಿಯರು(೫೫:೩೫:೧೦): ಇವರಲ್ಲಿ ಸಾತ್ವಿಕ ಅಂಶ-೫೫ ಮತ್ತು ರಾಜಸ ಅಂಶ ೩೫. ಇವರಿಗೆ ಆಡಳಿತದಲ್ಲಿ ಆಸಕ್ತಿ. ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಇವರ ಕರ್ತವ್ಯ.
(
೯)ವೈಶ್ಯರು (೪೦:೪೦:೨೦): ಇವರಲ್ಲಿ ಸಾತ್ವಿಕ ಮತ್ತು ರಾಜಸ ಅಂಶ ಸಮನಾಗಿದೆ(೪೦). ಇವರಿಗೆ ಕೃಷಿ, ಹೈನುಗಾರಿಕೆ, ವ್ಯಾಪಾರದಲ್ಲಿ ಆಸಕ್ತಿ.
(
೧೦)ಶೂದ್ರರು(೩೫:೩೫:೩೦): ಇವರು ಇಡೀ ಸಮಾಜದ ಅಡಿಪಾಯ. ಇವರು ಸೇವಾ ಮನೋವೃತ್ತಿ ಇರುವವರು.
ಹೀಗೆ ಸ್ವರೂಪ ಸ್ವಭಾವದಂತೆ ವರ್ಣ ವಿಂಗಡಣೆ. ಇಲ್ಲಿ ಹೇಳಿದ ಎಲ್ಲ ಪ್ರಮುಖ ೪ ವರ್ಣದವರು ಮೋಕ್ಷ ಯೋಗ್ಯರು. ಇವರಲ್ಲಿ ಮೇಲು ಕೀಳು ಎನ್ನುವುದಿಲ್ಲ. ಇದು ಕೇವಲ ಭಾರತಕ್ಕೆ ಮೀಸಲಾದ ವಿಂಗಡಣೆ ಅಲ್ಲ. ಈ ರೀತಿಯ ಸ್ವಭಾವ ವಿಂಗಡಣೆ ಪ್ರಪಂಚದ ಎಲ್ಲ ಮೂಲೆಗೂ ಅನ್ವಯ. ಭಾರತದ ತತ್ವಶಾಸ್ತ್ರ ಇದನ್ನು ಗುರುತಿಸಿ ನಮಗೆ ನೀಡಿದೆ ಅಷ್ಟೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡುವುದಾದರೆ: ಒಂದು ಮನೆಯಲ್ಲಿ ನಾಲ್ಕು ಜನ ಅಣ್ಣ-ತಮ್ಮಂದಿರರಿದ್ದಾರೆ. ಅವರಲ್ಲಿ ಹಿರಿಯ ಮಗ ಎಲ್ಲ ಮನೆಮಂದಿಗೆ ಪಾಠ-ಪ್ರವಚನ ಮಾಡಿಕೊಂಡು, ವೇದಾಧ್ಯಯನ ಮಾಡಿಕೊಂಡಿದ್ದರೆ-ಆತ ಬ್ರಾಹ್ಮಣ ವರ್ಣ. ಎರಡನೆಯವ ಮನೆಯ ಯಜಮಾನಿಕೆ ನೋಡಿಕೊಂಡರೆ ಆತ-ಕ್ಷತ್ರಿಯ. ಮೂರನೆಯವ ತೋಟ, ಬೇಸಾಯ ಇತ್ಯಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ ಆತ-ವೈಶ್ಯ. ನಾಲ್ಕನೆಯವ ತನ್ನ ಅಣ್ಣಂದಿರರಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ-ಶೂದ್ರ. ಇದು ಮನಃಶಾಸ್ತ್ರೀಯವಾದ ವರ್ಣ ಪದ್ಧತಿ. ಬ್ರಹ್ಮ-ಅಣತಿ ಬ್ರಾಹ್ಮಣಃ. ದೊಡ್ದದ್ದನ್ನು ತಿಳಿಯುವವನು, ಜ್ಞಾನ ಸಾಧಕ-ಬ್ರಾಹ್ಮಣ. ಕ್ಷತ್ರ-ತ್ರಾಣಃ ಕ್ಷತ್ರಿಯಃ. ಯಾರಿಗಾದರೂ ಅಪಾಯವಾದಾಗ ರಕ್ಷಣೆಗೆ ಮುನ್ನುಗ್ಗುವವ ಕ್ಷತ್ರಿಯ. ವಿಶ್ ಎಂದರೆ ಸಮಾಜ. ಸಮಾಜಕ್ಕೆ ಬೇಕಾದ ಆಹಾರ ಸಲಕರಣೆ ಪೂರೈಸುವವ ವೈಶ್ಯ. ನಾನಾ ಜನಸ್ಯ ಶುಶ್ರೂಷಃ-ಶೂದ್ರಃ. ಮನುಷ್ಯನ ಮೂಲಭೂತ ಧರ್ಮವಾದಸೇವೆಯಲ್ಲಿ ನಿರತನಾದವನು ಶೂದ್ರ. ಕೃಷ್ಣ ಈ ಕುರಿತು ಕೊಡುವ ಅಪೂರ್ವ ವಿಶ್ಲೇಷಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.