ಭಗವದ್ಗೀತೆ ಅಧ್ಯಾಯ-11 (ಶ್ಲೋಕ 41 ರಿಂದ 55)



ಭಗವದ್ಗೀತೆ  ಅಧ್ಯಾಯ-11 (ಶ್ಲೋಕ 41 ರಿಂದ 55)
·  ಶ್ಲೋಕ - 41 & 42
ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ॥೪೧॥

ಯಚ್ಚಾಪಹಾಸಾರ್ಥಮಸತ್ ಕೃತೋSಸಿ ವಿಹಾರಶಯ್ಯಾಸನಭೋಜನೇಷು ।
ಏಕೋSಥವಾSಪ್ಯಚ್ಯುತ ತತ್ ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ ॥೪೨॥
ಸಖಾ ಇತಿ ಮತ್ವಾ ಪ್ರಸಭಮ್ ಯತ್ ಉಕ್ತಮ್ ಹೇ ಕೃಷ್ಣ ಹೇ ಯಾದವ ಹೇ ಸಖೇ ಇತಿ ।
ಅಜಾನತಾ ಮಹಿಮಾನಮ್ ತವ ಇದಮ್ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ||
ಯತ್ ಚ ಅವಹಾಸ ಅರ್ಥಮ್ ಅಸತ್ ಕೃತಃ ಅಸಿ ವಿಹಾರ ಶಯ್ಯಾ ಆಸನ ಭೋಜನೇಷು ।
ಏಕಃ ಅಥವಾ ಅಪಿ ಅಚ್ಯುತ ತತ್ ಸಮಕ್ಷಮ್ ತತ್ ಕ್ಷಾಮಯೇ ತ್ವಾಮ್ ಅಹಮ್ ಅಪ್ರಮೇಯಮ್ನಿನ್ನ ಹಿರಿಮೆಯನ್ನು ಅರಿಯದೆ ಗೆಳೆಯನೆಂದು ತಿಳಿದು ದುಡುಕಿ ನುಡಿದದ್ದುಂಟು. ನನ್ನ ಎಡವಿನಿಂದ ಅಥವಾ ಸಲಿಗೆಯಿಂದ- ಏ ಕೃಷ್ಣ, ಏ ಗೆಳೆಯಎಂದು ಕರೆದದ್ದುಂಟು. ವಿಹಾರದಲ್ಲಿದ್ದಾಗ, ಮಲಗಿದ್ದಾಗ, ಕೂತಾಗ, ಊಟಮಾಡುವಾಗ- ಎಲ್ಲ ಮಾಡಿಸುವ ನಿನ್ನನ್ನು ಅಣಕಕ್ಕಾಗಿ ಕಡೆಗಣಿಸಿದ್ದುಂಟು. ಆದ್ದರಿಂದ ಓ ಕುಗ್ಗದ ಎತ್ತರವೇ, ತಿಳಿವಿಗೆಟುಕದ, ಸಾಟಿಯಿರದ ನಿನ್ನೆದುರು ಬೇಡಿಕೊಳ್ಳುತ್ತಿದ್ದೇನೆ-ಅದನೆಲ್ಲ ಮರೆತು ಮನ್ನಿಸುವಂತೆ.
ಅರ್ಜುನನಿಗೆ ತಾನು ಹಿಂದೆ ಕೃಷ್ಣನೊಂದಿಗೆ ನಡೆದುಕೊಂಡ ರೀತಿ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಕೃಷ್ಣ ಜಗತ್ತಿನ ಮೂಲಶಕ್ತಿ ಎನ್ನುವ ಕಲ್ಪನೆ ಇಲ್ಲದೆ ತಾನು ನಡೆದುಕೊಂಡ ರೀತಿ ಬಗ್ಗೆ ಆತ ಕೃಷ್ಣನಲ್ಲಿ ಕ್ಷೆಮೆ ಬೇಡುತ್ತಾನೆ. ತಿಳಿದೋ ತಿಳಿಯದೆಯೋ, ಬೇಜವಾಬ್ಧಾರಿಯಿಂದಲೋ ಅಥವಾ ಪ್ರೀತಿಯಿಂದಲೋ ಮಾಡಿದ ತಪ್ಪುಗಳನ್ನು ಕ್ಷಮಿಸು ಎಂದು ಆತ ಭಗವಂತನಲ್ಲಿ ಬೇಡುತ್ತಾನೆ. ಇಲ್ಲಿ ಬಂದಿರುವ ಏಕಎನ್ನುವ ಪದಕ್ಕೆ ವಿಶೇಷ ಅರ್ಥವಿದೆ. ಏಕಃ ಎಂದರೆ ಸರ್ವೋತ್ತಮ ಮತ್ತು ಸರ್ವಕರ್ತ(ಏಷ ಏವ ಕರೋತಿ-ಏಕಃ). ಸರ್ವಕರ್ತ-ಸರ್ವೋತ್ತಮನಾದ ನಿನ್ನನ್ನು ಪರಿಹಾಸ್ಯ ಮಾಡಿ ಸಲುಗೆಯಿಂದ ಮಾತನಾಡಿದೆ, ನೀನು ಅಚ್ಯುತಃ. ನಿನ್ನ ಸಾಮರ್ಥ್ಯ, ಗುಣ, ದೇಹದಲ್ಲಿ ಚ್ಯುತಿ ಇಲ್ಲ. ಚ್ಯುತವಾದ ನನ್ನ ಬುದ್ಧಿಯಿಂದ ಇದನ್ನು ನಾನು ಗ್ರಹಿಸಲಿಲ್ಲ. ನಾನು ಈ ರೀತಿ ನೆಡೆದುಕೊಳ್ಳಬಾರದಿತ್ತು. ನಾನು ಮಾಡಿರುವ ಅಪರಾಧಕ್ಕೆ ನಿನ್ನ ಬಳಿ ಕ್ಷಮೆ ಬೇಡುತ್ತಿದ್ದೇನೆ. ನೀನು ಅಪ್ರಮೇಯ- ಕಾಲ-ದೇಶಗಳಿಂದ ವ್ಯಾಪ್ತನಾದ ನೀನು ನಮ್ಮ ಅರಿವಿಗೆ ಎಟುಕದವನು. ಈಗ ನನಗೆ ನನ್ನ ತಪ್ಪಿನ ಅರಿವಾಯಿತು. ಅಜ್ಞಾನದಿಂದ ತಪ್ಪು ಮಾಡುತ್ತಿದ್ದೇನೆ ಎನ್ನುವ ತಿಳುವಳಿಕೆ ಬಂತು.
·  ಶ್ಲೋಕ - 43
ಪಿತಾSಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ ಸಮೋSಸ್ತ್ಯಭ್ಯಧಿಕಃ ಕುತೋನ್ಯೋ ಲೋಕತ್ರಯೇSಪ್ಯಪ್ರತಿಮಪ್ರಭಾವ ॥೪೩॥
ಪಿತಾ ಅಸಿ ಲೋಕಸ್ಯ ಚರ ಅಚರಸ್ಯ ತ್ವಮ್ ಅಸ್ಯ ಪೂಜ್ಯಃ ಚ ಗುರುಃ ಗರೀಯಾನ್
ನ ತ್ವತ್ ಸಮಃ ಅಸ್ತಿ ಅಭ್ಯಧಿಕಃ ಕುತಃ ಅನ್ಯಃ ಲೋಕತ್ರಯೇ ಅಪಿ ಅಪ್ರತಿಮ ಪ್ರಭಾವ ಚರಾಚರದ ಜಗದ ತಂದೆ ನೀನು. ಆರಾಧನೆಯ ಕೇಂದ್ರ. ಗುರುವಿಗೂ ಹಿರಿಯ ಗುರು. ಜೋಡಿಯಿರದ ಹಿರಿಮೆಯೆ, ಮೂರು ಲೋಕದಲ್ಲು ನಿನಗೆ ಸಾಟಿ ಇಲ್ಲ. ಬೇರೆ ಮಿಗಿಲು ಮತ್ತೆಲ್ಲಿ?
ಎಲ್ಲರನ್ನು ಸೃಷ್ಟಿಸಿದವ, ಎಲ್ಲರನ್ನು ಪಾಲಿಸುವ ನೀನು ಜಗದ ತಂದೆ. ಜಗದ ಗುರುವಾದ ನಿನ್ನನ್ನು ನಾನು ತೀರ ಸಲುಗೆಯಿಂದ ಕಂಡೆ. ನಿನಗೆ ಸಾಟಿಯಾದವರು ಇನ್ನೊಬ್ಬರಿಲ್ಲ. ನಿನ್ನನ್ನು ಹೋಲಿಸುವ ಇನ್ನೊಂದು ದೃಷ್ಟಾಂತವಿಲ್ಲ. ಇಡೀ ಜಗತ್ತಿನಲ್ಲಿ ನಿನ್ನನ್ನು ಮೀರಿಸುವ ಇನ್ನೊಂದು ಶಕ್ತಿ ಇಲ್ಲ. [ಇಲ್ಲಿ ಮೂರು ಲೋಕ ಎಂದರೆ ಭೂಮಿಯಿಂದ ಕೆಳಗಿರುವ ಲೋಕಗಳು, ಭೂಲೋಕ ಮತ್ತು ಭೂಮಿಯಿಂದ ಮೇಲಿರುವ ಲೋಕಗಳು] ನೀನು ಎಲ್ಲ ಕಾರಣಗಳ ಕಾರಣ. ನಿನಗಿಂತ ಮಿಗಿಲು ಇನ್ನೆಲ್ಲಿ?
·  ಶ್ಲೋಕ - 44
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ೪೪॥
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್ ಪ್ರಸಾದಯೇ ತ್ವಾಮ್ ಅಹಮ್ ಈಶಮ್ ಈಡ್ಯಮ್ ।
ಪಿತಾ ಇವ ಪುತ್ರಸ್ಯ ಸಖಾ ಇವ ಸಖ್ಯುಃ ಪ್ರಿಯಃ ಪ್ರಿಯಾಯಾಃ ಅರ್ಹಸಿ ದೇವ ಸೋಢುಮ್ಆದ್ದರಿಂದ, ಎಲ್ಲರು ಹೊಗಳುವ, ಎಲ್ಲರ ದೊರೆಯಾದ ನಿನ್ನೆದುರು ಮೈಚಲ್ಲಿ, ಕಾಲಿಗೆರಗಿ ಒಲೈಸುತ್ತಿದ್ದೇನೆ: ಓ ದೇವ, ನನ್ನ ಮೆಚ್ಚಿನ ನೀನು ನಿನ್ನ ಮೆಚ್ಚಿನ ನನಗಾಗಿ ನನ್ನ ತಪ್ಪುಗಳನ್ನು ಮನ್ನಿಸಬೇಕು-ತಂದೆ-ಮಗನ ತಪ್ಪನ್ನು, ಗೆಳೆಯ-ಗೆಳೆಯನ ತಪ್ಪನ್ನು ಮನ್ನಿಸುವಂತೆ.
ನಿನ್ನೆದುರು ನಿಲ್ಲಲಾಗುತ್ತಿಲ್ಲ. ಮೈಚೆಲ್ಲಿ ಹೊರಳಾಡಬೇಕು ಎನ್ನಿಸುತ್ತಿದೆ. ಎಲ್ಲರಿಂದ ಸ್ತುತನಾದ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಮಗ ಮಾಡಿದ ತಪ್ಪನ್ನು ತಂದೆ ಕ್ಷಮಿಸುವಂತೆ, ಗೆಳೆಯನ ತಪ್ಪನ್ನು ಗೆಳೆಯ ಕ್ಷಮಿಸುವಂತೆ, ಜಗದ ತಂದೆಯಾದ ನೀನು, ಜಗತ್ತಿನ ಎಲ್ಲರ ಅಂತಃಕರಣದ ಮಿತ್ರನಾದ ನೀನು, ನನ್ನನ್ನು ಕ್ಷಮಿಸು.
·  ಶ್ಲೋಕ - 45
ಅದೃಷ್ಟಪೂರ್ವಂ ಹೃಷಿತೋSಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ
ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ ೪೫॥
ಅದೃಷ್ಟ ಪೂರ್ವಮ್ ಹೃಷಿತಃ ಅಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯದಿ ತಮ್ ಮನಃ ಮೇ
ತತ್ ಏವ ಮೇ ದರ್ಶಯ ದೇವ ರೂಪಮ್ ಪ್ರಸೀದ ದೇವೇಶ ಜಗನ್ನಿವಾಸ ಹಿಂದೆಂದೂ ಕಂಡರಿಯದ ರೂಪವನ್ನು ಕಂಡು ಸಡಗರಪಟ್ಟಿದ್ದೇನೆ; ಕಂಡು ಗಾಬರಿಗೊಂಡು ಬಗೆಗೆಟ್ಟಿದ್ದೇನೆ ಕೂಡ. ಓ ಸಗ್ಗಿಗರ ದೊರೆಯೆ, ಓ ಜಗದ ಆಸರೆಯೆ, ದಯೆದೋರು. ಓ ದೇವ, ನನಗೆ ಅದೇ ರೂಪವನ್ನು ತೋರು.
ಎಂದೂ ಕಾಣದ ಈ ನಿನ್ನ ಅದ್ಭುತ ರೂಪವನ್ನು ಕಂಡು ಖುಷಿ ಪಟ್ಟಿದ್ದೇನೆ. ಆದರೆ ಇಡೀ ಜಗತ್ತನ್ನು ಸಂಹಾರ ಮಾಡುವ ನಿನ್ನ ಉಗ್ರ ರೂಪವನ್ನು ಕಂಡ ಭಯವಾಗುತ್ತಿದೆ. ಒಂದು ಕಡೆ ಆನಂದ ಮತ್ತು ಇನ್ನೊಂದು ಕಡೆ ದಿಗಿಲು. ಇದರಿಂದ ನಾನು ಕಂಗಾಲಾಗಿದ್ದೇನೆ. ಅದಕ್ಕಾಗಿ ಆ ನಿನ್ನ ಕೃಷ್ಣರೂಪವನ್ನು ತೋರು.
·  ಶ್ಲೋಕ - 46
ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ ॥೪೬॥
ಕಿರೀಟಿನಮ್ ಗದಿನಮ್ ಚಕ್ರಹಸ್ತಮ್ ಇಚ್ಛಾಮಿ ತ್ವಾಮ್ ದ್ರಷ್ಟುಮ್ ಅಹಮ್ ತದಾ ಏವ
ತೇನ ಏವ ರೂಪೇಣ ಚತುಃ ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇಮುಕುಟವಿಟ್ಟ, ಕೈಯಲ್ಲಿ ಗದೆ-ಚಕ್ರ ತೊಟ್ಟ ನಿನ್ನನ್ನು ಆ ರೂಪದಲ್ಲೆ ಕಾಣಬಯಸುತ್ತೇನೆ. ಸಾವಿರ ತೋಳಿನ ವಿಶ್ವರೂಪನೆ, ಮತ್ತೊಮ್ಮೆ ನಾಲ್ಕು ತೋಳಿನ ಅದೇ ರೂಪದಿಂದ ಕಾಣಿಸಿಕೊ.
ನೀನು ಹಿಂದೆ ಕಾಣಿಸಿಕೊಂಡಂತೆ ಚತುರ್ಭುಜನಾಗಿ, ಕಿರೀಟ ಧರಿಸಿದ ಗದಾ-ಚಕ್ರ ಹಿಡಿದಿರುವ ನಿನ್ನ ರೂಪವನ್ನು ತೋರುಎಂದು ಅರ್ಜುನ ಸಹಸ್ರ ತೋಳಿನ ವಿಶ್ವರೂಪಿ ಭಗವಂತನಲ್ಲಿ ಕೈಜೋಡಿಸಿ ಬೇಡಿಕೊಳ್ಳುತ್ತಾನೆ. ಇಲ್ಲಿ ಅರ್ಜುನ ಕೃಷ್ಣನಲ್ಲಿ –“ನಿನ್ನ ಚತುರ್ಭುಜ ರೂಪವನ್ನು ತೋರುಎಂದಿದ್ದಾನೆ. ಕೃಷ್ಣ ತನ್ನ ಅಂತರಂಗದ ಭಕ್ತರಿಗೆ ತನ್ನ ಚತುರ್ಭುಜ ರೂಪವನ್ನು ತೋರಿದ್ದ. ಇದನ್ನು ಅರ್ಜುನ ಕೂಡ ನೋಡಿದ್ದಾನೆ. ಭಾಗವತದಲ್ಲಿ- ಬಾಲಕನಾಗಿದ್ದಾಗ ಕೃಷ್ಣ ತನ್ನ ಚತುರ್ಭುಜ ರೂಪವನ್ನು ತೋರಿದ್ದ ಎನ್ನುವುದನ್ನು ಹೀಗೆ ಹೇಳಿದ್ದಾರೆ:
ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಗದಾದ್ಯುದಾಯುಧಂ,
ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಸೌಭಗಂ ||೧೦.೦೩.೯||
ಸಾಮಾನ್ಯರು ಕಾಣದ ಭಗವಂತನ ಚತುರ್ಭುಜ ರೂಪವನ್ನು ಕೃಷ್ಣ ಕೆಲವರಿಗೆ ತೋರಿದ್ದ ಎನ್ನುವುದನ್ನು ಈ ಶ್ಲೋಕ ದೃಡಪಡಿಸುತ್ತದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಆತನ ವಿಶ್ವರೂಪ ದರ್ಶನವನ್ನು ಕೊನೆಗೊಳಿಸಿ ತನಗೆ ಚತುರ್ಭುಜ ರೂಪವನ್ನು ತೋರಿಸು ಎಂದು ಬೇಡಿಕೊಳ್ಳುತ್ತಾನೆ.
ಇಲ್ಲಿ ನಾವು ತಿಳಿಯಬೇಕಾದ ಮುಖ್ಯ ವಿಚಾರ ಎಂದರೆ: ಭಗವಂತನ ವಿಶ್ವರೂಪದ ಉಪಾಸನೆ ಸಾಮಾನ್ಯರಾದ ನಮಗೆ ಅಸಾಧ್ಯ. ಆತನ ವಿಶ್ವರೂಪವನ್ನು ಮಹಾ ಜ್ಞಾನಿಯಾದ ಅರ್ಜುನನಿಂದಲೇ ನೋಡಿ ತಡೆದುಕೊಳ್ಳಲು ಆಗಿಲ್ಲ. ಹಾಗಿರುವಾಗ ನಾವು ಅದನ್ನು ನಮ್ಮ ಧ್ಯಾನದಲ್ಲಿ ಜೀರ್ಣಿಸಿಕೊಳ್ಳವುದು ಸಾಧ್ಯವೇ? ಈ ಕಾರಣಕ್ಕಾಗಿ ಧ್ಯಾನದಲ್ಲಿ ಭಗವಂತನ ವಿಶ್ವ ರೂಪವನ್ನು ಉಪಾಸನೆ ಮಾಡುವುದಕ್ಕಿಂತ, ಭಗವಂತನ ವಿಶ್ವ ಶಕ್ತಿಯ ಎಚ್ಚರದಿಂದ ಆತನ ಅವತಾರ ರೂಪದಲ್ಲಿ ಆತನನ್ನು ಉಪಾಸನೆ ಮಾಡುವುದು ಶ್ರೇಯಸ್ಕರ.
ಅರ್ಜುನನ ಈ ಬೇಡಿಕೆಯನ್ನು ಕೃಷ್ಣ ಹೇಗೆ ಪುರಸ್ಕರಿಸಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
·  ಶ್ಲೋಕ - 47
ಭಗವಾನುವಾಚ ।
ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ೪೭॥
ಭಗವಾನ್ ಉವಾಚ-ಭಗವಂತ ಹೇಳಿದನು :
ಮಯಾ ಪ್ರಸನ್ನೇನ ತವ ಅರ್ಜುನ ಇದಮ್ ರೂಪಮ್ ಪರಮ್ ದರ್ಶಿತಮ್ ಆತ್ಮಯೋಗಾತ್
ತೇಜಃ ಮಯಮ್ ವಿಶ್ವಮ್ ಅನಂತಮ್ ಆದ್ಯಮ್ ಯತ್ ಮೇ ತ್ವತ್ ಅನ್ಯೇನ ನ ದೃಷ್ಟ ಪೂರ್ವಮ್ಅರ್ಜುನ, ನಾನೆ ಮೆಚ್ಚಿ ಆತ್ಮ ಶಕ್ತಿಯಿಂದ ನಿನಗೆ ತೋರಿಸಿದೆ ಈ ಹಿರಿಯ ರೂಪವನ್ನು. ಇದು ಬೆಳಕಿನ ಮೊತ್ತ. ಗುಣಗಳ ಗುಂಪು. ಇದಕ್ಕೆ ಕೊನೆಯಿಲ್ಲ. ಇದು ಎಲ್ಲದಕ್ಕು ಮೊದಲು. ನನ್ನೀ ರೂಪವನ್ನು ಇನ್ನಾರೂ ಈ ಮೊದಲು ಹೀಗೆ ಕಂಡದ್ದಿಲ್ಲ.
ಭಗವಂತನ ಸಂಹಾರ ರೂಪವನ್ನು ಕಂಡು ಭಯಗ್ರಸ್ತನಾಗಿರುವ ಅರ್ಜುನನ್ನು ಕೃಷ್ಣ ಸಂತೈಸುತ್ತಾನೆ. ಕೃಷ್ಣ ಹೇಳುತ್ತಾನೆ: ನಾನು ನಿನಗೆ ವಿಶ್ವರೂಪ ತೋರಿದ್ದು ನಿನ್ನ ಭಕ್ತಿಗೆ ಪ್ರಸನ್ನನಾಗಿ ಹೊರತು, ನಿನ್ನನ್ನು ಹೆದರಿಸುವುದಕ್ಕೊಸ್ಕರ ಅಲ್ಲಎಂದು. ಕೃಷ್ಣ ತನ್ನ ಅವತಾರದಲ್ಲಿ ಅನೇಕ ಬಾರಿ ತನ್ನ ವಿಶ್ವರೂಪ ದರ್ಶನ ತೋರಿದ್ದ. ಯಶೋದೆ-ಮಣ್ಣು ತಿಂದ ಕೃಷ್ಣನ ಬಾಯಿಯನ್ನು ತೆರೆಯಲು ಹೇಳಿದಾಗ, ಅಲ್ಲಿ ಆಕೆಗೆ ತನ್ನ ಬಾಯಿಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದ್ದ. ಇನ್ನೊಮ್ಮೆ ಹಾಲು ಕುಡಿದು ಆಕಳಿಸಿದ ಪುಟ್ಟ ಕೃಷ್ಣನ ಬಾಯಿಯಲ್ಲಿ ಯಶೋದೆ ಭಗವಂತನ ವಿಶ್ವರೂಪ ದರ್ಶನ ಪಡೆದಿದ್ದಳು. ಸಂಧಾನಕ್ಕೆದು ದೃತರಾಷ್ಟ್ರನ ಸಭೆಗೆ ಬಂದ ಕೃಷ್ಣನನ್ನು ದುರ್ಯೋಧನ ಬಂಧಿಸಲು ಪ್ರಯತ್ನಿಸಿದಾಗ, ಅಲ್ಲಿ ಕೃಷ್ಣ ತನ್ನ ವಿಶೇಷ ರೂಪವನ್ನು ತೋರಿದ್ದ. ಇಷ್ಟೇ ಅಲ್ಲದೆ ಗರ್ಗಾಚಾರ್ಯರಿಗೆ, ಉದಂಕ ಮುನಿಗೆ ಕೂಡ ಕೃಷ್ಣನ ವಿಶ್ವರೂಪ ದರ್ಶನವಾಗಿತ್ತು. ಆದರೆ ಇಲ್ಲಿ ಅರ್ಜುನನಿಗೆ ಕೃಷ್ಣ ತೋರಿದ ವಿಶ್ವರೂಪ ಎಲ್ಲಕ್ಕಿಂತ ಅಪರಿಮಿತವಾದುದು. ಭೂಲೋಕದಲ್ಲಿ ಯಾರೂ ಈ ಮೊದಲು ಹೀಗೆ ಕಂಡದ್ದಿಲ್ಲ ಎನ್ನುತ್ತಾನೆಕೃಷ್ಣ. ಭಗವಂತನ ವಿಶ್ವರೂಪ-ಅದೊಂದು ಬೆಳಕಿನ ಪುಂಜ. ಅದು ಗುಣಗಳ ಸಾಗರ. ಅನಂತವಾದ ಈ ವಿಶ್ವರೂಪ ದರ್ಶನವನ್ನು ಅರ್ಜುನ ಪಡೆದ.
·  ಶ್ಲೋಕ - 48
ನ ವೇದಯಜ್ಞಾಧ್ಯಯನೈರ್ನ ದಾನೈಃ ನಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ॥೪೮॥
ನ ವೇದ ಯಜ್ಞ ಅಧ್ಯಯನೈಃ ನ ದಾನೈಃ ನ ಚ ಕ್ರಿಯಾಭಿಃ ನ ತಪೋಭಿಃ ಉಗ್ರೈಃ ।
ಏವಮ್ ರೂಪಃ ಶಕ್ಯಃ ಅಹಮ್ ನೃಲೋಕೇ ದ್ರಷ್ಟುಮ್ ತ್ವತ್ ಅನ್ಯೇನ ಕುರು ಪ್ರವೀರ ಕುರುವಂಶದ ಕಡುಗಲಿಯೆ, ಭೂಲೋಕದಲ್ಲಿ ನೀನಲ್ಲದೆ ಇನ್ನಾರೂ ಇಂಥ ಬಗೆಯ ನನ್ನನ್ನು ಕಾಣುವುದು ಸಾಧ್ಯವಿಲ್ಲ. ಸಾಧ್ಯವಿಲ್ಲ ವೇದಗಳಲ್ಲಿ ಕರ್ಮಕಾಂಡವನ್ನರಸುವ ಕಲಿಕೆಗಳಿಂದ. ಇಲ್ಲ ಕೊಡುಗೆಗಳಿಂದ. ಇಲ್ಲ ನೇಮ ನೋಂಪಿಗಳಿಂದ. ಇಲ್ಲ ಕಟ್ಟುನಿಟ್ಟಿನ ತಪಗಳಿಂದ.
ಭಗವಂತನ ಪ್ರೀತಿಗೆ ಪಾತ್ರರಾಗದ ಯಾರೂ ಆತನ ವಿಶ್ವ ರೂಪ ದರ್ಶನ ಪಡೆಯಲು ಸಾಧ್ಯವಿಲ್ಲ. ವೇದಾಧ್ಯಾಯದಿಂದ, ಯಜ್ಞದಿಂದ, ದಾನದಿಂದ ಇತ್ಯಾದಿ ಕರ್ಮದಿಂದ ಸರ್ವೋತ್ತಮನಾದ, ಸರ್ವ ವಿಲಕ್ಷನನಾದ ಭಗವಂತನ ವಿಶ್ವರೂಪ ದರ್ಶನ ಪಡೆಯುವುದು ಸಾಧ್ಯವಿಲ್ಲ. ಅಂಥಹ ನನ್ನ ರೂಪವನ್ನು ಕರ್ಮ ನಿಷ್ಠನಾದ(ಕುರುಪ್ರವೀರ) ನೀನು ಕಂಡೆಎನ್ನುತ್ತಾನೆ ಕೃಷ್ಣ.
·  ಶ್ಲೋಕ - 49
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ॥೪೯॥
ಮಾ ತೇ ವ್ಯಥಾ ಮಾ ಚ ವಿಮೂಢಭಾವಃ ದೃಷ್ಟ್ವಾ ರೂಪಮ್ ಘೋರಮ್ ಈದೃಕ್ ಮಮ ಇದಮ್ ।
ವ್ಯಪೇತ ಭೀಃ ಪ್ರೀತ ಮನಾಃ ಪುನಃ ತ್ವಮ್ ತತ್ ಏವ ಮೇ ರೂಪಮ್ ಇದಮ್ ಪ್ರಪಶ್ಯನಡುಗಿಸುವ ನನ್ನ ಈ ಇಂಥ ರೂಪವನ್ನು ಕಂಡು ಕಳವಳಿಸಬೇಡ; ಕಂಗೆಡಬೇಡ. ಮತ್ತೆ ನೀನು ನನ್ನ ಆ ಮೊದಲ ರೂಪವನ್ನೆ ನೋಡು- ಅಂಜಿಕೆ ತೊರೆದು,ಬಗೆಯೊಳಕ್ಕರೆ ತುಂಬಿ.
ಶತ್ರು ಸಂಹಾರಕವಾದ ನನ್ನ ಈ ರೂಪವನ್ನು ಕಂಡು ಗಾಬರಿಯಾಗಬೇಡ. ನಿನ್ನೆಲ್ಲ ಭಯವನ್ನು ಬಿಟ್ಟು ನೋಡು ನಿನಗಿಷ್ಟವಾದ ನನ್ನ ಚತುರ್ಭುಜ ರೂಪವನ್ನು ಎನ್ನುತ್ತಾನೆ ಕೃಷ್ಣ.
·  ಶ್ಲೋಕ - 50
ಸಂಜಯ ಉವಾಚ ।
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ೫೦॥
ಸಂಜಯ ಉವಾಚ- ಸಂಜಯ ಹೇಳಿದನು :
ಇತಿ ಅರ್ಜುನಮ್ ವಾಸುದೇವಃ ತಥಾ ಉಕ್ತ್ವಾ ಸ್ವಕಮ್ ರೂಪಮ್ ದರ್ಶಯಾಮ್ ಆಸ ಭೂಯಃ
ಆಶ್ವಾಸಯಾಮ್ ಆಸ ಚ ಭೀತಮ್ ಏನಮ್ ಭೂತ್ವಾ ಪುನಃ ಸೌಮ್ಯವಪುಃ ಮಹಾತ್ಮಾ ವಾಸುದೇವ ಹೀಗೆ ನುಡಿದು ಮರಳಿ ಅರ್ಜುನನಿಗೆ ತನ್ನ ಕೃಷ್ಣ ರೂಪವನ್ನೇ ತೋರಿದ. ಮಹಾತ್ಮನಾದ ಕೃಷ್ಣ ಹೀಗೆ ಮರಳಿ ಸೌಮ್ಯರೂಪ ತಾಳಿ ಅಂಜಿದ್ದ ಅರ್ಜುನನನ್ನು ಸಂತೈಸಿದ.
ಈ ಶ್ಲೋಕದಲ್ಲಿ ಸಂಜಯ ಭಗವಂತನನ್ನು ವಾಸುದೇವ ಎಂದು ಸಂಬೋಧಿಸಿದ್ದಾನೆ. ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳಿವೆ. ವಾಸು+ದೇವ-ವಾಸುದೇವ. ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಸಂಸಾರ ಬಂಧನದ ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ) ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.
·  ಶ್ಲೋಕ - 51
ಅರ್ಜುನ ಉವಾಚ ।
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ॥೫೧॥
ಅರ್ಜುನ ಉವಾಚ-ಅರ್ಜುನ ಹೇಳಿದನು :
ದೃಷ್ಟ್ವಾ ಇದಮ್ ಮಾನುಷಮ್ ರೂಪಮ್ ತವ ಸೌಮ್ಯಮ್ ಜನಾರ್ದನ ।
ಇದಾನೀಮ್ ಅಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಮ್ ಗತಃ ಜನಾರ್ದನ, ಮನುಷ್ಯಾಕಾರದ ನಿನ್ನ ಈ ಸೌಮ್ಯರೂಪವನ್ನು ಕಂಡು ಜೀವ ಬಂತು. ಈಗ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದೇನೆ.
ಇಲ್ಲಿ ಅರ್ಜುನ ಭಗವಂತನನ್ನು ಜನಾರ್ದನ ಎಂದು ಸಂಬೋಧಿಸಿದ್ದಾನೆ. ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಅಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ. 'ಜನ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. ಜನ ಅಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ. "ದುರ್ಜನರ ಸಂಹಾರಕ್ಕೆಂದು ನಿಂತಿರುವ ನಿನ್ನ ಆ ರೂಪವನ್ನು ಕಂಡು ನಾನು ಭಯಗೊಂಡಿದ್ದೆ. ಭಕ್ತರ ಕರೆಗೆ ಓಗೊಟ್ಟು, ತನ್ನ ಭಕ್ತರಿಗೆ ಮೋಕ್ಷವನ್ನು ಕರುಣಿಸುವ ನಿನ್ನ ಈ ಸೌಮ್ಯ ರೂಪವನ್ನು ಕಂಡು ನಾನು ಚೇತರಿಸಿಕೊಂಡೆ”- ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
·  ಶ್ಲೋಕ - 52 & 53
ಭಗವಾನುವಾಚ ।
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ॥೫೨॥

ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ೫೩॥
ಭಗವಾನುವಾಚ-ಭಗವಂತ ಹೇಳಿದನು :
ಸುದುರ್ದರ್ಶಮ್ ಇದಮ್ ರೂಪಮ್ ದೃಷ್ಟವಾನ್ ಅಸಿ ಯತ್ ಮಮ ।
ದೇವಾಃ ಅಪಿ ಅಸ್ಯ ರೂಪಸ್ಯ ನಿತ್ಯಮ್ ದರ್ಶನ ಕಾಂಕ್ಷಿಣಃ ||
ನ ಅಹಂ ವೇದೈಃ ತಪಸಾ ನ ದಾನೇನ ನ ಚ ಇಜ್ಯಯಾ ।
ಶಕ್ಯಃ ಏವಂ ವಿಧಃ ದ್ರಷ್ಟುಮ್ ದೃಷ್ಟವಾನ್ ಅಸಿ ಮಾಮ್ ಯಥಾ ––ನೀನು ಕಂಡ ನನ್ನ ಈ ರೂಪ ಸುಲಭವಾಗಿ ಕಾಣಬರುವಂಥದಲ್ಲ. ದೇವತೆಗಳು ಕೂಡ ಈ ರೂಪವನ್ನು ಕಾಣಲೆಂದು ಅನುಗಾಲ ಕಾಯುತ್ತಿರುತ್ತಾರೆ.
ನೀನು ಕಂಡ ಹಾಗೆ ಈ ಬಗೆಯ ನನ್ನನ್ನು ಕಾಣಲು ಬರಿದೆ ವೇದಗಳನ್ನೋದುವುದರಿಂದ ಸಾಧ್ಯವಿಲ್ಲ. ಇಲ್ಲ ತಪಸ್ಸಿನಿಂದ, ಇಲ್ಲ ದಾನದಿಂದ, ಇಲ್ಲ ಯಜ್ಞದಿಂದಲೂ.
ಭಗವಂತ ಅರ್ಜುನನಿಗೆ ಕಾಣಿಸಿದ ತನ್ನ ಅಪೂರ್ವ ರೂಪ ಬಹಳ ದುರ್ಲಭರೂಪ. ಇಂಥಹ ಅಪೂರ್ವ ರೂಪವನ್ನು ಕಾಣಲು ದೇವತೆಗಳೂ ಕೂಡ ಆಸೆಯಿಂದ ಅನುಗಾಲ ಕಾಯುತ್ತಿರುತ್ತಾರೆ. ಕೃಷ್ಣ ಇಲ್ಲಿ ಮತ್ತೆ ಒತ್ತು ಕೊಟ್ಟು ಹಿಂದೆ ಹೇಳಿದ ವಿಚಾರವನ್ನು ಮರಳಿ ಹೇಳುತ್ತಾನೆ.ಸ್ವಸಾಮರ್ಥ್ಯದಿಂದ(ವೇದಾಧ್ಯಾಯನ, ಯಜ್ಞ, ದಾನ, ತಪಸ್ಸು ಇತ್ಯಾದಿ ಕರ್ಮಗಳನ್ನು ಮಾಡುವ ಮುಖೇನ) ನನ್ನ ಈ ವಿಶಿಷ್ಠ ರೂಪವನ್ನು ಕಾಣಲು ಸಾಧ್ಯವಿಲ್ಲಎನ್ನುತ್ತಾನೆ ಕೃಷ್ಣ.
·  ಶ್ಲೋಕ - 54
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋSರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ೫೪॥
ಭಕ್ತ್ಯಾ ತು ಅನನ್ಯಯಾ ಶಕ್ಯಃ ಅಹಂ ಏವಮ್ ವಿಧಃ ಅರ್ಜುನ ।
ಜ್ಞಾತುಮ್ ದ್ರಷ್ಟುಮ್ ಚ ತತ್ತ್ವೇನ ಪ್ರವೇಷ್ಟುಮ್ ಚ ಪರಂತಪ ಅರಿಗಳನ್ನು ಸುಟ್ಟುರಿಯುವ ಅರ್ಜುನ, ನನ್ನನ್ನು ಈ ಪರಿ ಸರಿಯಾಗಿ ಅರಿಯಲು, ಅರಿತು ಕಾಣಲು, ಕಂಡು ಸೇರಲು ನನ್ನಲ್ಲೆ ನೆಲೆಗೊಂಡ ಭಕ್ತಿಯಿಂದ ಮಾತ್ರವೆ ಸಾಧ್ಯ.
ಭಗವಂತನನ್ನು ಕಾಣಲು ಇರುವ ಮೂಲ ಮಂತ್ರ ಭಕ್ತಿ’. ಏಕನಿಷ್ಠೆಯಿಂದ ಭಗವಂತನನ್ನು ಅನನ್ಯವಾಗಿ ಭಕ್ತಿ ಮಾಡುವುದರಿಂದ ಆತನನ್ನು ಸೇರಲು ಸಾಧ್ಯ. ಎಲ್ಲರಿಗೂ ಮಿಗಿಲಾದ ಭಗವಂತ ಭಕ್ತ ಪರಾಧೀನ.
·  ಶ್ಲೋಕ - 55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ೫೫॥
ಮತ್ ಕರ್ಮ ಕೃತ್ ಮತ್ ಪರಮಃ ಮತ್ ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮ್ ಏತಿ ಪಾಂಡವ ಓ ಪಾಂಡವ, ಎಲ್ಲವನ್ನು ನನಗಾಗಿ ಮಾಡುವವನು, ನನ್ನನ್ನೆ ಪರದೈವವೆಂದು ತಿಳಿದವನು, ವಿಷಯದ ನಂಟು ತೊರೆದು ನನ್ನಲ್ಲಿ ಭಕ್ತಿಯಿಟ್ಟವನು, ಯಾವ ಜೀವಿಗಳಲ್ಲು ಹಗೆಗೊಳ್ಳದವನು ನನ್ನನ್ನು ಪಡೆಯುತ್ತಾನೆ.
ಭಗವಂತನನ್ನು ಕಾಣಲು ಭಕ್ತಿಯ ಜೊತೆಗೆ ಇರುವ ಅತಿ ಮುಖ್ಯವಾದ ಅಂಶವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಾವು ಮಾಡುವ ಕಾರ್ಯವನ್ನು ನಾನು ಮಾಡಿದೆಎಂದು ಅಹಂಕಾರ ಪಡದೆ, ಭಗವಂತ ನನ್ನ ಕೈಯಿಂದ ಮಾಡಿಸಿದ ಎನ್ನುವ ಅನುಸಂಧಾನ; ಅರ್ಪಣ ಭಾವ, ಫಲದ ಅಪೇಕ್ಷೆ ಇಲ್ಲದ ಭಕ್ತಿ, ದ್ವೇಷ ಪ್ರತೀಕಾರವಿಲ್ಲದೆ ಭಗವಂತನಲ್ಲಿ ಶರಣಾಗತಿ, ನಿರ್ಲಿಪ್ತ ಭಾವದಿಂದ ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು ಆತನನ್ನು ಪ್ರೀತಿಸುವುದು-ಇದರಿಂದ ಭಗವಂತನನ್ನು ಕಾಣಲು ಸಾಧ್ಯ.

ಇತ್ಯೇಕಾದಶೋSಧ್ಯಾಯಃ
ಹನ್ನೊಂದನೆಯ ಅಧ್ಯಾಯ ಮುಗಿಯಿತು

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.