ಭಗವದ್ಗೀತೆ ಅಧ್ಯಾಯ-9 (ಶ್ಲೋಕ 1 ರಿಂದ 15)



ಭಗವದ್ಗೀತೆ ಅಧ್ಯಾಯ-9
·  ಶ್ಲೋಕ - 01
ಜ್ಞಾನ ಎಂದರೆ ಭಗವಂತನ ಅರಿವು (Spiritual wisdom). ಎಲ್ಲವನ್ನು ತಿಳಿದ ಭಗವಂತನೆಡೆಗೆ ನಮ್ಮ ಮನಸ್ಸು ಹರಿಯುವುದು ಜ್ಞಾನ. ಭಗವಂತ ಸರ್ವೋತ್ತಮ, ಭಗವಂತ ಸರ್ವಗತ, ಭಗವಂತ ಸರ್ವಜ್ಞ, ಇತ್ಯಾದಿಯಾಗಿ ತಿಳಿಯುವುದು ಜ್ಞಾನ. ಆ ನಂತರ ಅದರ ವಿವರಗಳ ಅರಿವು ವಿಜ್ಞಾನ(ವಿಶಿಷ್ಟವಾದ ಜ್ಞಾನ). ಭಗವಂತ ಗುಣಪೂರ್ಣ ಎನ್ನುವುದು ಜ್ಞಾನ. ಭಗವಂತ ಜ್ಞಾನಪೂರ್ಣ, ಭಗವಂತ ಆನಂದಪೂರ್ಣ, ಭಗವಂತ ಸೌಂದರ್ಯಪೂರ್ಣ, ಭಗವಂತ ದಯಾಪೂರ್ಣ, ಹೀಗೆ ಒಂದೊಂದು ಗುಣಗಳ ಪೂರ್ಣತೆಯನ್ನು ವಿವರವಾಗಿ ಅನುಸಂಧಾನ ಮಾಡುವುದು ವಿಜ್ಞಾನ(exclusive wisdom of God). ನಾವು ದೇವರನ್ನು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಆದರೆ ಪ್ರತಿಯೊಂದು ಜೀವನಿಗೆ ಅವನವನಿಗೆ ವಿಶಿಷ್ಟವಾದಂತಹ ಅರಿವಿನ ಮಟ್ಟವಿದೆ. ಎಲ್ಲರೂ ಒಂದೇ ರೀತಿ ತಿಳಿದುಕೊಳ್ಳಲು ಬರುವುದಿಲ್ಲ. ಅವರವರ ಮಟ್ಟಕ್ಕೆ ತಕ್ಕಂತೆ ಭಗವಂತನನ್ನು ಅರಿಯುವುದು ವಿಜ್ಞಾನ(individual exclusive wisdom of God ). ಹೀಗೆ ಭಗವಂತ ಸರ್ವೋತ್ತಮ ಎಂದು ತಿಳಿದುಕೊಳ್ಳುವುದು ಜ್ಞಾನವಾದರೆ, ಆ ಸರ್ವೋತ್ತಮ ತತ್ವವನ್ನು ವಿವರವಾಗಿ ಅದರ ಬೇರೆ ಬೇರೆ ಮುಖಗಳಿಂದ ಅವರವರ ಯೋಗ್ಯತೆಗೆ ತಕ್ಕಂತೆ ಅನುಸಂಧಾನ ಮಾಡುವುದು ವಿಜ್ಞಾನ. ಹೀಗೆ ಅನುಸಂಧಾನ ಮಾಡುವುದರಿಂದ ಭಗವಂತ ಎಲ್ಲವುದಕ್ಕಿಂತ ವಿಲಕ್ಷಣ ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ.
ಕೃಷ್ಣ ಏಳನೇ ಅಧ್ಯಾಯದಲ್ಲಿ ಅರ್ಜುನನಿಗೆ ಹೇಳಿದ್ದ- ತಿಳಿಯಬೇಕಾದ ನನ್ನ ಹಿರಿಮೆಯನ್ನು ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ಈ ವಿಷಯದಲ್ಲಿ ಬೇರೆ ತಿಳಿಯುವಂಥದೇನೂ ಉಳಿದಿರುವುದಿಲ್ಲಎಂದು (ಅ-೭ , ಶ್ಲೋ-೨). ಮತ್ತೆ ಇಲ್ಲಿ ಈ ಅಧ್ಯಾಯದಲ್ಲಿ ಪುನಃ ಜ್ಞಾನ ವಿಜ್ಞಾನದ ಬಗ್ಗೆ ವಿವರಿಸುತ್ತಾನೆ! ಏಕೆ ಹೀಗೆ? ಹಿಂದೆ ಹೇಳಿದ್ದನ್ನು ಕೃಷ್ಣ ಮರೆತು ಪುನಃ ವಿವರಿಸುತ್ತಿದ್ದಾನೋ?! ಅಲ್ಲ, ಅದಕ್ಕೆ ಕಾರಣಗಳಿವೆ. ಒಮ್ಮೆ ಹೇಳಿದ್ದನ್ನು ಮತ್ತೆ ಏಕೆ ಹೇಳುತ್ತಿದ್ದಾನೆ ಎಂದರೆ ಬೇರೆಬೇರೆ ಆಯಾಮದಲ್ಲಿ ಹೇಳುವುದಕ್ಕೊಸ್ಕರ’. ಆದ್ದರಿಂದ ಇಲ್ಲಿ ಹೇಳುವುದು ಹಿಂದೆ ಹೇಳಿದುದರ ವಿವರಣೆ ಮತ್ತು ಸೃಷ್ಟೀಕರಣ. ಸಂಕ್ಷಿಪ್ತವಾಗಿ ಅಲ್ಲಿ ವಿವರಿಸಿದ್ದನ್ನು ಇಲ್ಲಿ ಕೆಲವು ಹೊಸ ಅರ್ಥಗಳಿಂದ ಇನ್ನೊಂದು ರೀತಿಯಲ್ಲಿ ಕೃಷ್ಣ ವಿವರಿಸುತ್ತಾನೆ. ಭಗವಂತನ ತತ್ವ ಚಿಂತನೆಯನ್ನು ಒಂದು ಬಾರಿ ಮಾಡಿದರೆ ನಮ್ಮ ತಲೆಯೊಳಗೆ ಹೋಗುವುದಿಲ್ಲ! ನಿರಂತರ ಚಿಂತನೆ ಮಾಡುತ್ತಾ ಇದ್ದರೆ ಎಲ್ಲೋ ಸ್ವಲ್ಪ ಒಳಗೆ ಹೋಗುತ್ತದೆ! ಕೇಳಿದಾಗ, ಓದಿದಾಗ ಎಲ್ಲವೂ ತಿಳಿಯಿತು ಅನಿಸುತ್ತದೆ. ಆದರೆ ಸ್ವಲ್ಪ ಹೊತ್ತಿನ ನಂತರ ಒಂದೂ ನೆನಪಾಗುವುದಿಲ್ಲ! ಅದಕ್ಕೋಸ್ಕರ ಆವೃತ್ತಿ ಮಾಡುತ್ತಾ ಬೇರೆಬೇರೆ ಆಯಾಮದಲ್ಲಿ ಚಿಂತನೆ ಮಾಡಬೇಕು. ಈ ಅಧ್ಯಾಯದಲ್ಲಿ ಕೃಷ್ಣ ಹಿಂದೆ ಹೇಳಿದ್ದ ಜ್ಞಾನ-ವಿಜ್ಞಾನವನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಬೇರೆ ಬೇರೆ ಮುಖಗಳಿಂದ ಬೇರೆ ಬೇರೆ ಆಯಾಮದಲ್ಲಿ ವಿವರಿಸುತ್ತಾನೆ.
ಒಬ್ಬ ಸೈನಿಕನಾಗಿ ಯುದ್ಧರಂಗದಲ್ಲಿ ನಿಂತಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ಅಧ್ಯಾತ್ಮ ಚಿಂತನೆಯಲ್ಲಿ ಬಹಳ ಹತ್ತಿರವಾಗಿರುತ್ತದೆ. ಈ ಕಾರಣದಿಂದ ಯುದ್ಧರಂಗದಲ್ಲಿ ಕೃಷ್ಣ ಅಧ್ಯಾತ್ಮವನ್ನು ಬಿಚ್ಚುತ್ತಾನೆ. ಅರ್ಜುನ ಬಹಳ ದೊಡ್ಡ ಜ್ಞಾನಿ. ಸದಾ ಭಗವದ್ ಚಿಂತನೆಯಲ್ಲಿ ಇರತಕ್ಕಂತಹ ದೇವಾಂಶಸಂಭೂತ. ಅದರ ಜೊತೆಗೆ ಆತನನ್ನು ಯುದ್ಧರಂಗದಲ್ಲಿ ನಿಲ್ಲಿಸಿ ಮಾನಸಿಕವಾಗಿ ಹುಟ್ಟು ಸಾವುಗಳ ಈ ಲೀಲೆಯ ಆಚೆಗೆ ಅವನನ್ನು ಕರೆದೊಯ್ದು ಮಾನಸಿಕವಾಗಿ ಅಣಿಗೊಳಿಸಿ ಕೃಷ್ಣ ವೇದಾಂತವನ್ನು ಹೇಳುತ್ತಾನೆ. ಇಂತಹ ಕ್ಷಣದಲ್ಲಿ ಭಗವಂತನ ಬಗೆಗೆ ಹೇಳಿದರೆ ಬಹುಬೇಗ ಹೃದಯ ತುಂಬಿಕೊಳ್ಳುತ್ತದೆ. ನಾವಾದರೂ ಅಷ್ಟೇ, ನಮ್ಮ ದೈನಂದಿನ ಜೀವನದಲ್ಲಿ ಸರಿ-ತಪ್ಪು, ಧರ್ಮಾಧರ್ಮಗಳ ಸಂಘರ್ಷ ನಡೆಯುತ್ತಲೇ ಇರುತ್ತದೆ. ಅಂತಹ ಯುದ್ಧದ ಸಂದರ್ಭದಲ್ಲೇ ನಮಗೆ ಅಧ್ಯಾತ್ಮ ಅರ್ಥವಾಗುವುದು.
ಭಗವಾನುವಾಚ ।
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ।
ಜ್ಞಾನಂ ವಿಜ್ಞಾನಸಹಿತಂ ಯಜ್ ಜ್ಞಾತ್ವಾ ಮೋಕ್ಷ್ಯಸೇSಶುಭಾತ್ ॥೧॥
ಭಗವಾನುವಾಚ-ಭಗವಂತ ಹೇಳಿದನು :
ಇದಮ್ ತು ತೇ ಗುಹ್ಯತಮಮ್ ಪ್ರವಕ್ಷ್ಯಾಮಿ ಅನಸೂಯವೇ।
ಜ್ಞಾನಮ್ ವಿಜ್ಞಾನ ಸಹಿತಮ್ ಯತ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್- ಇದಂತೂ ತುಂಬಾ ಬಚ್ಚಿಡಬೇಕಾದದ್ದು. ಕಿಚ್ಚು ಪಡದೆ ಮೆಚ್ಚುವವನೆಂದು ಹೇಳುತ್ತಿದ್ದೇನೆ: ತಿಳಿವು ಮತ್ತು ತಿಳಿವಿನ ಬಿತ್ತರ. ಇದನ್ನು ತಿಳಿದು ಕುತ್ತಿನಿಂದ ಪಾರಾಗುವೆ.
ಕೃಷ್ಣ ಹೇಳುತ್ತಾನೆ ಭಗವದ್ ತತ್ವದ ಬಗೆಗೆ ನಿನಗೆ ಪುನಃ ಹೇಳುತ್ತೇನೆ; ಅತ್ಯಂತ ರಹಸ್ಯವಾದ ಉಪಾಸನೆ ಸಂಗತಿಯನ್ನು ನಿನ್ನ ಮುಂದೆ ಬಿಚ್ಚಿಡುತ್ತಿದ್ದೇನೆಎಂದು. ಇದು ಎಲ್ಲರ ಮುಂದೆ ತೆರೆದಿಡುವ ಸಂಗತಿಯಲ್ಲ. ಯಾರಿಗೆ ಭಗವಂತನ ಉಪಾಸನೆಯಲ್ಲಿ ಅನನ್ಯವಾದ ಕಾತರ ಇದೆ, ಭಗವಂತನಲ್ಲದೆ ನನಗೆ ಇನ್ನೇನೂ ಬೇಡ ಎನ್ನುವ ಮನಸ್ಸುಳ್ಳವರ ಮತ್ತು ಭಗವಂತನಿಗೋಸ್ಕರ ಹಾತೊರೆಯುವವರ ಮುಂದೆ ಹೇಳಬೇಕಾದ ಮಾತು. ಅತ್ಯಂತ ರಹಸ್ಯವಾದ ಗೊಪನೆ ಮಾಡಬೇಕಾದ ಸಂಗತಿ. ಅದನ್ನು ನಾನು ನಿನಗೆ ಹೇಳುತ್ತಿದ್ದೇನೆಎನ್ನುತ್ತಾನೆ ಕೃಷ್ಣ. ಇಲ್ಲಿ ಅರ್ಜುನನಿಗೆ ಈ ವಿಚಾರವನ್ನು ತಿಳಿಯುವ ಜಿಜ್ಞಾಸೆ ಮತ್ತು ಅರ್ಹತೆ ಇದ್ದುದರಿಂದ ಕೃಷ್ಣ ಆತನಿಗೆ ಆ ಗೋಪ್ಯವಾದ ವಿಚಾರವನ್ನು ಹೇಳುತ್ತಾನೆ. ಕೇಳುವ ಅರ್ಹತೆ ಮತ್ತು ಬಯಕೆ ಇದ್ದವರಿಗೆ ಮಾತ್ರ ಕೊಡಬೇಕಾದ ವಿದ್ಯೆ ಇದು. ಇದನ್ನು ಎಲ್ಲರಿಗೂ ಕೊಡಲಾಗುವುದಿಲ್ಲ.
ಇಲ್ಲಿ ಕೃಷ್ಣ ಅನಸೂಯವೇಎನ್ನುವ ಪದವನ್ನು ಬಳಸಿದ್ದಾನೆ. ಮನುಷ್ಯನಿಗೆ ವೇದಾಂತ ಓದುವ ಮತ್ತು ವೇದಾಂತ ಓದಿದ ನಂತರವೂ ಇರಬೇಕಾದ ಗುಣಮಟ್ಟ(Quality) ‘ಅಹಂಕಾರ ರಹಿತತೆ’(egolessness). ಅಹಂಕಾರ ಇದ್ದು ವೇದಾಂತ ಓದಿದರೆ ಏನೂ ಉಪಯೋಗವಿಲ್ಲ. ವೇದಾಂತ ಓದುವ ಮೊದಲು ಅಹಂ ಇರಬಾರದು. ಭಗವಂತನ ಮುಂದೆ ನಾನು ಏನೂ ಅಲ್ಲಎಂದು ತಿಳಿದಿದ್ದರೆ ಅಹಂಕಾರ ಬರುವುದಿಲ್ಲ. ವೇದಾಂತ ಓದಿ ನಾನು ದೊಡ್ಡ ಜ್ಞಾನಿಅನ್ನುವ ಅಹಂಕಾರ ಬಂದರೆ- ಓದಿ ದೇವರನ್ನು ಕಳೆದುಕೊಂಡಂತಾಗುತ್ತದೆ. ಆದರೆ ಇಂದು ನಾವು ಒಂದಲ್ಲ ಒಂದು ಅಹಂಕಾರಕ್ಕೆ ಒಳಗಾಗಿರುತ್ತೇವೆ. ಜ್ಞಾನದ ಅಹಂಕಾರ, ಅಧಿಕಾರದ ಅಹಂಕಾರ, ಸಂಪತ್ತಿನ ಅಹಂಕಾರ, ಸೌಂದರ್ಯದ ಅಹಂಕಾರ, ಯೌವನದ ಅಹಂಕಾರ, ಇಂತಹ ಅನೇಕ ಸಂಗತಿಗಳು ನಮ್ಮನ್ನು ಕಾಡುತ್ತಿರುತ್ತವೆ. ಅದನ್ನು ಕಳಚಿಕೊಂಡಾಗ ಮಾತ್ರ ವೇದಾಂತವನ್ನು ಅರಿಯಲು ನಾವು ಅರ್ಹತೆ ಪಡೆದಂತಾಗುತ್ತದೆ. ಎಲ್ಲಿಯ ತನಕ ನಮ್ಮಲ್ಲಿ ಅಹಂಕಾರ ತುಂಬಿದೆಯೋ ಅಲ್ಲಿಯ ತನಕ ವೇದಾಂತ ನಮಗೆ ಉಪಯೋಗಕ್ಕೆ ಬರುವುದಿಲ್ಲ.
ಎಲ್ಲಾ ಅಹಂಕಾರಕ್ಕಿಂತ ಜ್ಞಾನದ ಅಹಂಕಾರ ಬಹಳ ಅಪಾಯಕಾರಿ. ಇತರ ಅಹಂಕಾರಕ್ಕೆ ಕೊನೆ ಇದೆ, ಆದರೆ ಜ್ಞಾನದ ಅಹಂಕಾರಕ್ಕೆ ಕೊನೆ ಇಲ್ಲ.ನಾನು ಪಂಡಿತಎನ್ನುವ ಅಹಂಕಾರ ತಲೆಗೆ ಬಂದರೆ ಅಂತವನು ಮಹಾ ದರಿದ್ರ ಎನಿಸುತ್ತಾನೆ! ಅಹಂಕಾರದ ಮರಿ ಅಸೂಯೆ’. ಈ ಅಸೂಯೆ ನಮ್ಮನ್ನು ಸುಡುವ ಬೆಂಕಿ. ಅದಕ್ಕಾಗಿ ಅದನ್ನು ಕನ್ನಡದಲ್ಲಿ ಹೊಟ್ಟೆಕಿಚ್ಚುಎನ್ನುತ್ತಾರೆ. ಇದು ನಮ್ಮ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಅಂತವರಿಗೆ ವೇದಾಂತ ಹೇಳಿ ಉಪಯೋಗವಿಲ್ಲ. ನಿನಗೆ ಅಸೂಯೆ ಇಲ್ಲ, ಅದಕ್ಕಾಗಿ ನಿನಗೆ ಈ ಗೋಪ್ಯವನ್ನು ಹೇಳುತ್ತಿದ್ದೇನೆಎನ್ನುತ್ತಾನೆ ಕೃಷ್ಣ.
ಯುದ್ಧ ರಂಗದಲ್ಲಿ ನಿಂತ ವ್ಯಕ್ತಿಗೆ ಅಸೂಯೆ ಇಲ್ಲದೆ ಇರುವುದು ಅತ್ಯಂತ ಮಹಾನ್ ಸಂಗತಿ. ದ್ವೇಷ-ಅಸೂಯೆ ಅಹಂಕಾರಗಳು ಯುದ್ಧರಂಗದಲ್ಲಿ ಸದಾ ತುಂಬಿ ತುಳುಕುತ್ತಿರುತ್ತವೆ. ಇದನ್ನು ಗೆದ್ದು ನಿಂತವ ಅತ್ಯಂತ ಶ್ರೇಷ್ಠ. ಇಲ್ಲಿ ಕೃಷ್ಣ ಹೇಳುತ್ತಾನೆ ಇದನ್ನು ತಿಳಿದುಕೊಂಡರೆ ನಿನ್ನ ಮನಸ್ಸು ಪರಿಶುದ್ಧವಾಗಿ ಭಗವಂತನನ್ನು ಬಯಸುವುದು ಸಾಧ್ಯವಾಗುತ್ತದೆಎಂದು. ಜ್ಞಾನ ಬಂದರೆ ನಮ್ಮೊಳಗಿನ ಕೊಳೆ ತೊಳೆದು ಹೋಗಿ ಮನಸ್ಸು ನಿರ್ಮಲವಾಗುತ್ತದೆ. ನಮ್ಮ ಅತಿ ದೊಡ್ಡ ಸಂಪತ್ತು ಎಂದರೆ ಪ್ರಸನ್ನವಾದ ಸ್ವಚ್ಛ ಮನಸ್ಸು. ಅಂತಹ ಮನಸ್ಸಿನಲ್ಲಿ ಭಗವಂತ ಕಾಣಿಸಿಕೊಳ್ಳುತ್ತಾನೆ. ಅಹಂಕಾರ-ಅಸೂಯೆ ಇಲ್ಲದ ಮನಸ್ಸುವಸುದೇವಹಾಗು ಇಂತಹ ಮನಸ್ಸಿಗೆ ಕಾಣುವ ಭಗವಂತ ವಾಸುದೇವ’. ಶುದ್ಧ ಮನಸ್ಸಿನಿಂದ ಜ್ಞಾನ, ಇದರಿಂದ ಅಭಯ ಮತ್ತು ಆನಂದ. ಆನಂದಮಯವಾದ ಈ ಸ್ಥಿತಿಯಿಂದ ಪಾಂಚಬೌತಿಕ ಶರೀರದಿಂದ ಮತ್ತು ಸಂಸಾರದಿಂದ ಬಿಡುಗಡೆ ಮತ್ತು ಮೋಕ್ಷ.
ನಮಗೆ ಪಾಂಚಬೌತಿಕವಾದ ಮೂರು ಆವರಣವಿದೆ. ಈ ಮೂರು ಆವರಣದ ಒಳಗೆ ಜ್ಞಾನಾನಂದಮಯವಾದ ಆತ್ಮಸ್ವರೂಪವಿದೆ. ಲಿಂಗಶರೀರ, ಸೂಕ್ಷ್ಮಶರೀರ ಮತ್ತು ಸ್ಥೂಲಶರೀರ ಇವು ಆತ್ಮವನ್ನು ಆವರಿಸಿರುವ ಆವರಣಗಳು. ನಾವು ಈ ಮೂರೂ ಅಂಗಿಗಳನ್ನು ಕಳಚಿ, ಅಶುಭದಿಂದ ಬಿಡುಗಡೆಹೊಂದಿ, ಸ್ವರೂಪಭೂತವಾದ ನೈಜ ಸ್ಥಿತಿಯಲ್ಲಿ ಭಗವಂತನ ಮುಂದೆ ನಿಲ್ಲುವುದನ್ನು ಇಲ್ಲಿ ಕೃಷ್ಣಮೋಕ್ಷ್ಯಸೇSಶುಭಾತ್ಎಂದು ಸಂಕ್ಷಿಪ್ತವಾಗಿ ಹೇಳಿದ್ದಾನೆ.[ನಾವು ದೇವಸ್ಥಾನದಲ್ಲಿ ದೇವರ ಮುಂದೆ ಅಂಗಿ ತೆಗೆಯುವುದು ಭಗವಂತನ ಮುಂದೆ ಹಾಕಿಕೊಂಡಿರುವ ಎಲ್ಲ ಆವರಣವನ್ನು ತೆಗೆದು ದೇವರ ಮುಂದೆ ಬತ್ತಲಾಗುವುದುಎನ್ನುವ ಮುಖ್ಯಾರ್ಥವನ್ನು ಹೊಂದಿದೆ. ನಾವು ಭಗವಂತನ ಮುಂದೆ ಹಾಕಿಕೊಂಡ ಎಲ್ಲ ಮುಚ್ಚಳಗಳನ್ನು ಬಿಚ್ಚಿ ಆತನ ಮುಂದೆ ತೆರೆದುಕೊಳ್ಳಬೇಕು. ಆಗ ಆತ ನಮಗೆ ತೆರೆದುಕೊಳ್ಳುತ್ತಾನೆ.] ಹೀಗೆ ಯಾವ ರೀತಿ ಪಾಂಚಬೌತಿಕ ಶರೀರದಿಂದ ಬಿಡುಗಡೆ ಮತ್ತು ಮೋಕ್ಷ ಎನ್ನುವ ಜ್ಞಾನ-ವಿಜ್ಞಾನವನ್ನು ಭಗವಂತ ಸಮಷ್ಠಿಯಾಗಿ ಅರ್ಜುನನಿಗೆ ಹೇಳುವುದನ್ನುಮುಂದಿನ ಶ್ಲೋಕಗಳಲ್ಲಿ ನೋಡೋಣ.
·  ಶ್ಲೋಕ - 02
ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್
ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥೨॥
ರಾಜವಿದ್ಯಾ ರಾಜಗುಹ್ಯಮ್ ಪವಿತ್ರಮ್ ಇದಮ್ ಉತ್ತಮಮ್
ಪ್ರತ್ಯಕ್ಷ ಅವಗಮಮ್ ಧರ್ಮ್ಯಮ್ ಸು ಸುಖಮ್ ಕರ್ತುಮ್ ಅವ್ಯಯಮ್-ಇದು ಅರಿವುಗಳ ಅರಸ. ಗುಟ್ಟುಗಳ ಗುಟ್ಟು. ಮಿಗಿಲಾದ ಅಪ್ಪಟ. ಕಣ್ಣಲ್ಲಿ ಕೂತವನ ಕಾಣಿಸುವ ದಾರಿ. ಎಲ್ಲ ಹೊತ್ತವನನ್ನು ಕುರಿತದ್ದು. ಆಚರಿಸಲು ಆರಾಮ. ಅಳಿವಿಲ್ಲದ್ದು.
ಕೃಷ್ಣ ತಾನು ಮುಂದೆ ಉಪದೇಶ ಮಾಡಲಿರುವ ಅಧ್ಯಾತ್ಮ ವಿಜ್ಞಾನದ ಬಗ್ಗೆ ಹೇಳುತ್ತಾ ಹೇಳುತ್ತಾನೆ ಇದು ವಿದ್ಯೆಗಳಲ್ಲೆಲ್ಲಾ ಪ್ರಧಾನ ವಿದ್ಯೆ; ಅತ್ಯಂತ ರಹಸ್ಯವಾದ ಮತ್ತು ಪರಮ ಪವಿತ್ರವಾದ ವಿದ್ಯೆಎಂದು. ಪ್ರತ್ಯಕ್ಷ ಶಬ್ದವಾಚ್ಯನಾದ(ಇಂದ್ರಿಯ ನಿಯಾಮಕಗಿರುವ ) ಭಗವಂತನನ್ನು ಪ್ರತ್ಯಕ್ಷ ತೋರಿಸುವಂತಹ, ಜಗತ್ತಿನ ಧಾರಕ ಶಕ್ತಿಯಾದ ಭಗವಂತನನ್ನು ನೇರ ವಿಷಯೀಕರಿಸುವ ಸಾಕ್ಷಾತ್ ಭಗವದ್ ವಿಷಯಕವಾದ ವಿದ್ಯೆ. ಈ ವಿದ್ಯೆಯನ್ನು ತಿಳಿದು ಭಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಏಕೆಂದರೆ ಭಗವಂತನಿಗೆ ಅತ್ಯಂತ ಪ್ರೀಯವಾದದ್ದು ಜ್ಞಾನ. ಭಗವಂತ ಜ್ಞಾನಕ್ಕೆ ಒಲಿದಷ್ಟು ಸುಲಭವಾಗಿ ಯಾವ ದಾರಿಗೂ ಒಲಿಯುವುದಿಲ್ಲ. ಇದು ಅಳಿವಿರದ ದಾರಿಎನ್ನುತ್ತಾನೆ ಕೃಷ್ಣ. ಆದ್ದರಿಂದ ಜ್ಞಾನದ ದಾರಿ ಎಂದೂ ವ್ಯರ್ಥವಲ್ಲ.
·  ಶ್ಲೋಕ - 03
ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ೩॥
ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯ ಅಸ್ಯ ಪರಂತಪ
ಅಪ್ರಾಪ್ಯ ಮಾಮ್ ನಿವರ್ತಂತೇ ಮೃತ್ಯು ಸಂಸಾರ ವರ್ತ್ಮನಿ-ಅರಿಗಳ ಉರಿಯೆ, ಈ ನಡೆಯ ಬಗೆಗೆ ನಂಬಿಕೆಯಿಡದ ಮಂದಿ ನನ್ನನ್ನು ಪಡೆಯದೆ ಸಾವಿನ ಸುಳಿಯಾದ ಬಾಳ ದಾರಿಯಲ್ಲಿ ಜಾರಿಬೀಳುತ್ತಾರೆ.
ಹಿಂದೆ ಅಸೂಯೆ ಬಗ್ಗೆ ಹೇಳಿದ್ದ ಕೃಷ್ಣ ಇಲ್ಲಿ ಇನ್ನೊಂದು ಅತೀ ಮುಖ್ಯವಾದ ಗುಣದ ಬಗ್ಗೆ ಹೇಳುತ್ತಾನೆ- ಅದೇ ಶ್ರದ್ಧೆ’. ಯಾರಿಗೆ ಶ್ರದ್ಧೆ ಇಲ್ಲ ಅವರಿಗೆ ಏನನ್ನು ಹೇಳಿಯೂ ಉಪಯೋಗವಿಲ್ಲ. ನಮಗೆ ಯಾವುದರ ಮೇಲೆ ಶ್ರದ್ಧೆ ಇಲ್ಲವೋ ಅದನ್ನು ನಮ್ಮ ಮನಸ್ಸು ಸ್ವೀಕರಿಸುವುದೇ ಇಲ್ಲ. ಒಂದು ವಿಷಯವನ್ನು ನಾವು ಗ್ರಹಣ ಮಾಡಬೇಕಾದರೆ ನಮಗೆ ಆ ವಿಷಯದಲ್ಲಿ ಶ್ರದ್ಧೆ ಇರಬೇಕು. ನನಗೆ ಗೊತ್ತಿಲ್ಲದ ವಿಷಯಗಳು ಇರಲು ಸಾಧ್ಯ, ಏಕೆಂದರೆ ನನಗೆ ಗೊತ್ತಿಲ್ಲದೇ ಇರುವ ಬಹಳ ಸಂಗತಿಗಳಿವೆ” –ಎಂದು ತಿಳಿಯುವುದು ಶ್ರದ್ಧೆಯ ಮೊದಲ ಮೆಟ್ಟಿಲು. (I must know that I do not know). ನಮ್ಮ ಅಜ್ಞಾನದ ಅರಿವು ನಮಗಿರಬೇಕು. ಆಗ ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳುವ ಶ್ರದ್ಧೆ ಬರುತ್ತದೆ. ಮೊದಲು ಗೊತ್ತಿಲ್ಲ ಅನ್ನುವುದರ ಬಗ್ಗೆ ನಮಗೆ ಗೊತ್ತಿರಬೇಕು; ಆಮೇಲೆ ನಮಗೆ ಗೊತ್ತಿಲ್ಲದೆ ಇರುವ ಇರುವ ವಿಷಯ ಸತ್ಯವಾಗಿರುವ ಸಾಧ್ಯತೆ ಇದೆ ಎನ್ನುವ ಸಾಧ್ಯತೆಯ ಅರಿವು ಬೇಕು; ಅದನ್ನು ತಿಳಿಯುವ ಶ್ರದ್ಧೆ ಬೇಕು. ಹೀಗೆ ತಿಳಿಯುತ್ತಾ ಗೊತ್ತಿಲ್ಲದ ವಸ್ತು ಇದೆ ಎನ್ನುವ ಸತ್ಯ ತಿಳಿಯುತ್ತದೆ.
ಜ್ಞಾನದ ದಾರಿಯಲ್ಲಿ ಸಾಗುವ ಸಾಧಕನಿಗೆ ಮೂಲಭೂತವಾಗಿ ನಂಬಿಕೆ ಬೇಕು. ನಂಬದವನ ಮುಂದೆ ಏನು ಹೇಳಿಯೂ ಪ್ರಯೋಜನವಿಲ್ಲ. ಇದನ್ನೇ ಇಲ್ಲಿ ಕೃಷ್ಣ ಹೇಳುತ್ತಾನೆ ಯಾರಿಗೆ ಶ್ರದ್ಧೆ ಇಲ್ಲವೋ ಅಂತವರ ಪಾಲಿಗೆ ಸತ್ಯ ಇಲ್ಲಎಂದು. ಜಗತ್ತಿನ ಧಾರಕನಾದ ಭಗವಂತನ ಬಗೆಗೆ ನಂಬಿಕೆ ಇಲ್ಲದವರು ಭಗವಂತನನ್ನು ಸೇರುವುದಿಲ್ಲ. ಅಂತವರು ಆತ್ಮ ನಾಶವಾದ ತಮಸ್ಸನ್ನು ಸೇರುತ್ತಾರೆ ಅಥವಾ ಸಂಸಾರದ ಸುಳಿಯಲ್ಲಿ ಸುತ್ತುತ್ತಿರುತ್ತಾರೆಎನ್ನುತ್ತಾನೆ ಕೃಷ್ಣ.
ಈ ಶ್ಲೋಕದಲ್ಲಿ ಪರಂತಪ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಇದರ ಮೇಲ್ನೋಟದ ಅರ್ಥ ಶತ್ರುಗಳನ್ನು ಸುಡುವ ಶೂರ ಎಂದು. ನಮ್ಮ ಜೀವನ ಯುದ್ಧದಲ್ಲಿ ನಮ್ಮ ಶತ್ರುಗಳೆಂದರೆ ನಮ್ಮೊಳಗೆ ಇರುವ ಅಜ್ಞಾನ, ಮೋಹ, ಕಾಮ, ಕ್ರೋಧ, ಇತ್ಯಾದಿಗಳು. ಪ್ರತಿಯೊಬ್ಬ ಸಾಧಕ ಕೂಡಾ ಪರತತ್ವದಲ್ಲಿ ಶ್ರದ್ಧೆಯನ್ನಿಟ್ಟು ಇಂತಹ ಶತ್ರುಗಳನ್ನು ಸುಡುವ ಬೆಂಕಿಯಾಗಬೇಕು, ಸುಟ್ಟು ಬೆಳಗುವ ಪರಂತಪನಾಗಬೇಕು.
ಮುಂದಿನ ಶ್ಲೋಕಗಳಲ್ಲಿ ಕೃಷ್ಣ ತಿಳಿಯಬೇಕಾದ ಜ್ಞಾನದ ಬಗ್ಗೆ ಉಪದೇಶ ಮಾಡುತ್ತಾನೆ.
·  ಶ್ಲೋಕ - 04
ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ ೪॥
ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ ಈ ಎಲ್ಲ ಜಗತ್ತು ಮೈದೋರದ ನನ್ನಿಂದ ತುಂಬಿದೆ.ಇಲ್ಲಿ ಇರುವವೆಲ್ಲ ನನ್ನಲ್ಲಿ ನೆಲೆಸಿವೆ. ನಾನು ಅವುಗಳ ನೆರವಿನಲ್ಲಿಲ್ಲ.
ಕೃಷ್ಣ ಹೇಳುತ್ತಾನೆ ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿಎಂದು. ಇಲ್ಲಿ ಬಳಸಿರುವ ಅವ್ಯಕ್ತಮೂರ್ತಿ ಎನ್ನುವ ಪದದಲ್ಲಿ ಅವ್ಯಕ್ತ ಮತ್ತು ಮೂರ್ತಿ ಎನ್ನುವುದು ಪರಸ್ಪರ ವಿರುದ್ಧ ಪದಗಳು. ಅವ್ಯಕ್ತ ಎಂದರೆ ಕಾಣದ್ದು, ಆಕಾರವಿಲ್ಲದ್ದು. ಮೂರ್ತಿ ಎಂದರೆ ಆಕೃತಿ ಮತ್ತು ರೂಪ. ಭಗವಂತ ಆಕಾಶದಂತೆ ಎಲ್ಲೆಡೆ ವ್ಯಾಪಿಸಿರುವ ಅವ್ಯಕ್ತ ಆದರೆ ಆತ ಜ್ಞಾನಾನಂದಮಯನಾಗಿ ಎಲ್ಲರೊಳಗೆ ತುಂಬಿರುವ ಮೂರ್ತಿ. ಒಂದೊಂದು ವಸ್ತುವಿನಲ್ಲೂ ಒಂದೊಂದು ರೂಪದಲ್ಲಿ ತುಂಬಿರುವ ಅನಂತ ರೂಪಗಳುಳ್ಳವ ಆ ಭಗವಂತ. ಕೃಷ್ಣ ಹೇಳುತ್ತಾನೆ ಪ್ರತಿಯೊಂದು ವಸ್ತುವಿಗೂ ನಾನು ಆಧಾರ, ಈ ಇಡೀ ಪ್ರಪಂಚ ನನ್ನನ್ನು ಅವಲಂಬಿಸಿಕೊಂಡಿದೆ. ಆದರೆ ನಾನು ನಿರಾಲಂಬನಾಗಿ ಎಲ್ಲೆಡೆ ತುಂಬಿದ್ದೇನೆ”. ಎಂದು.
·  ಶ್ಲೋಕ - 05
ನಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ ।
ಭೂತಭೃನ್ನ ಚ ಭೂತಸ್ಥೋ ಮಮಾSತ್ಮಾ ಭೂತಭಾವನಃ ೫॥
ನಚ ಮತ್ ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮ್ ಈಶ್ವರಮ್ ।
ಭೂತಭೃತ್ ನಚ ಭೂತಸ್ಥಃ ಮಮ ಆತ್ಮಾ ಭೂತಭಾವನಃ ನನ್ನಲ್ಲಿ ಎಲ್ಲ ಉಂಟು; ನನಗಿಲ್ಲ ಯಾವುದರ ಅಂಟು. ನೋಡು-ಮಿಗಿಲಾದ ನನ್ನ ಮಹಿಮೆಯನ್ನು. ನನ್ನ ರೂಪ ಇವುಗಳಿಗೆ ರೂಪು ಕೊಟ್ಟಿದೆ. ಹೊತ್ತು ಸಲಹಿದೆ. ಆದರೂ ಇವುಗಳಲ್ಲಿಲ್ಲ.
ಹಿಂದಿನ ಮತ್ತು ಈ ಶ್ಲೋಕದಲ್ಲಿ ಕೃಷ್ಣ ಹೇಳುವ ವಿಚಾರವನ್ನು ನಾವು ಗಮನವಿಟ್ಟು ನೋಡಬೇಕು. ಮೇಲ್ನೋಟಕ್ಕೆ ಇವು ಒಂದೊಕ್ಕೊಂದು ವಿರುದ್ಧವಾಗಿರುವ ಒಗಟಿನ ಹೇಳಿಕೆಯಂತೆ ಕಾಣುತ್ತದೆ. ಕೃಷ್ಣ ಹೇಳುವ ಮಾತು ಹೀಗಿದೆ "ನನ್ನ ಸಾಮರ್ಥ್ಯವನ್ನು ತಿಳಿ, ನಾನು ಎಲ್ಲವುದರಲ್ಲೂ ಇದ್ದೇನೆ-ಆದರೆ ಯಾವುದರಲ್ಲೂ ಇಲ್ಲ. ಎಲ್ಲವೂ ನನ್ನಲ್ಲಿದೆ ಆದರೆ ಯಾವುದೂ ನನ್ನಲ್ಲಿಲ್ಲಇದು ಭಗವಂತನ ಅಚಿಂತ್ಯ ಶಕ್ತಿಯ ಅನುಸಂಧಾನ. ಭಾಗವತದಲ್ಲಿ ಹೇಳುವಂತೆನಾವು ಯಾವುದನ್ನು ಪ್ರಪಂಚದಲ್ಲಿ ವಿರೋಧಾತ್ಮಕ(Contradictory) ಎನ್ನುತ್ತೇವೋ ಅವು ಶುಭ ಧರ್ಮವಾದಲ್ಲಿ ಭಗವಂತನಲ್ಲಿ ಅನ್ವಯವಾಗುತ್ತವೆ’. ಈ ವಿರುದ್ಧವಾದ ಧರ್ಮವನ್ನು ಹೇಳುವುದರ ಮೂಲಕ ಇಲ್ಲಿ ಭಗವಂತ ಏನನ್ನು ತಿಳಿಸುತ್ತಿದ್ದಾನೆ ಅಂದರೆ ಎಲ್ಲವೂ ನನ್ನಲ್ಲಿದೆ ಆದರೆ ಯಾವ ಮಮಕಾರ(Attachment)ನನಗಿಲ್ಲ”. ಅಂದರೆ ಇದು ಭಗವಂತನ ನಿರ್ಲಿಪ್ತತೆಯನ್ನು ಸೂಚಿಸುತ್ತದೆ. ಆತ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಆತ ಯಾವುದನ್ನೂ ಆಶ್ರಯಿಸಿಕೊಂಡಿಲ್ಲ ಮತ್ತು ಯಾವುದರ ಲೇಪವೂ ಆತನಿಗಿಲ್ಲ. ಕೃಷ್ಣ ಹೇಳುತ್ತಾನೆ ಇದು ನನ್ನ ಈಶ್ವರೀಯ ಶಕ್ತಿಎಂದು. ಇದು ಭಗವಂತನ ಸರ್ವಸಮರ್ಥತೆ.
ಈ ವಿಚಾರವನ್ನು ಕೃಷ್ಣ ಇನ್ನೊಮ್ಮೆ ಸಂಕ್ಷಿಪ್ತ(Crisp)ವಾಗಿ ಭೂತಭೃತ್ ನಚ ಭೂತಸ್ಥಃಎಂದು ವಿವರಿಸುತ್ತಾನೆ. ಇಲ್ಲಿ ನಚಅನ್ನುವ ಪದ ಹೊಸ್ತಿಲಲ್ಲಿ ಇಟ್ಟ ದೀಪದಂತೆ ಎರಡು ಪದಗಳ ನಡುವೆ ಬಳಕೆಯಾಗಿದೆ. ಇದರರ್ಥ ಹೀಗೆ: ನಾನು ಭೂತಭೃತ್-ಎಲ್ಲಾ ಜೀವಜಾತಗಳನ್ನು ಧರಿಸಿದ್ದೇನೆ ಮತ್ತು ನಚಭೂತಭೃತ್-ಏನನ್ನೂ ಧರಿಸಿಲ್ಲ; ನಾನು ಭೂತಸ್ಥ-ಎಲ್ಲ ಜೀವಜಾತಗಳು ನನ್ನಲ್ಲಿವೆ ಮತ್ತು ನಾನು ನಚಭೂತಸ್ಥ-ಯಾವುದರಲ್ಲೂ ನಾನಿಲ್ಲ”.
ಕೃಷ್ಣ ಹೇಳುತ್ತಾನೆ ಮಮ ಆತ್ಮಾ ಭೂತಭಾವನಃಎಂದು. ಅಂದರೆ ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಭಗವಂತನಿಂದ. ಇಲ್ಲಿ ಕೃಷ್ಣ ಮಮ ಆತ್ಮಎಂದಿದ್ದಾನೆ. ಭಗವಂತ ಜ್ಞಾನಾನಂದ ಸ್ವರೂಪ. ಭಗವಂತ ಬೇರೆ ಆತನ ದೇಹ ಬೇರೆ ಅಲ್ಲ. ಭಗವಂತನ ಗುಣ ಕ್ರಿಯೆಗಳು ಬೇರೆ ಅಲ್ಲ. ಅವೆಲ್ಲವೂ ಅಖಂಡ. ಇದನ್ನು ಪಾಂಚಬೌತಿಕ ಮತ್ತು ತ್ರೈಗುಣ್ಯದ ಪರಿದಿಯಲ್ಲಿ ನಾವು ಕಲ್ಪಿಸಲು ಸಾಧ್ಯವಿಲ್ಲ.
ಭಗವಂತ ಹೇಗೆ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವುದನ್ನು ಕೃಷ್ಣ ಒಂದು ದೃಷ್ಟಾಂತದ ಮೂಲಕ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 06
ಯಥಾSSಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್।
ತಥಾ ಸರ್ವಾಣಿ ಭೂತಾನಿ ಮತ್ ಸ್ಥಾನೀತ್ಯುಪಧಾರಯ ೬॥
ಯಥಾ ಆಕಾಶಸ್ಥಿತಃ ನಿತ್ಯಮ್ ವಾಯುಃ ಸರ್ವತ್ರ ಗಃ ಮಹಾನ್।
ತಥಾ ಸರ್ವಾಣಿ ಭೂತಾನಿ ಮತ್ ಸ್ಥಾನಿ ಇತಿ ಉಪಧಾರಯ ಎಲ್ಲೆಡೆ ಹಿಗ್ಗಿ ತುಂಬಿರುವ ಗಾಳಿ ಎಂದೆಂದೂ ಆಗಸದಲ್ಲಿರುವಂತೆ ಜಗದ ಎಲ್ಲ ಇರುವಿಕೆಗಳೂ ನನ್ನಲ್ಲಿವೆ. ಎಂದು ಮನಗಾಣು.
ಗಾಳಿ ಎಲ್ಲಾ ಕಡೆ ಇದೆ. ಅದು ಒಳಗೂ ಇದೆ, ಹೊರಗೂ ಇದೆ. ಗಾಳಿ ನಮಗೆ ಕಾಣುವುದಿಲ್ಲ. ಗಾಳಿ ಈ ಆಕಾಶದಲ್ಲಿ ತುಂಬಿದೆ. ಹೀಗೆ ಭಗವಂತ ನಮ್ಮ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ. ಆದರೆ ಯಾವುದರ ಲೇಪವೂ ಆತನಿಗಿಲ್ಲ. ಈ ಜಗತ್ತಿನ ಸರ್ವ ಇರುವಿಕೆಯೂ ಭಗವಂತನಲ್ಲಿದೆ.
·  ಶ್ಲೋಕ - 07
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥೭॥
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಃ ತಾನಿ ಕಲ್ಪ ಆದೌ ವಿಸೃಜಾಮಿ ಅಹಮ್ ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ. ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನುನಾನು ನಿರ್ಮಿಸುತ್ತೇನೆ.
ಸೃಷ್ಟಿಯಾಗಿ 31,104 ಸಾವಿರ ಕೋಟಿ ವರ್ಷಗಳ ನಂತರ ಮಹಾಪ್ರಳಯ. ಇದು ಚತುರ್ಮುಖ ಬ್ರಹ್ಮನ ನೂರು ವರ್ಷ. ಇದನ್ನು ಕಲ್ಪಕ್ಷಯ ಎನ್ನುತ್ತಾರೆ. ಈ ಮಹಪ್ರಳಯದಲ್ಲಿ ಸತ್ಯಲೋಕದಿಂದ ಹಿಡಿದು ಪ್ರತಿಯೊಂದೂ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಭಗವಂತನ ಅಧೀನವಾದ ಪ್ರಕೃತಿಯನ್ನು ಸೇರುತ್ತವೆ. ಎಲ್ಲಾ ಜೀವ ಜಾತಗಳೂ ಕೂಡಾ ತನ್ನ ಸ್ಥೂಲ ರೂಪವನ್ನು ಕಳೆದುಕೊಂಡು ಭಗವಂತನ ಉದರವನ್ನು ಸೇರುತ್ತದೆ. ಮತ್ತೆ 31,104 ಸಾವಿರ ಕೋಟಿ ವರ್ಷ ಪ್ರಳಯಕಾಲ. ನಂತರ ಮರಳಿ ಈ ಸೃಷ್ಟಿ ನಿರ್ಮಾಣವಾಗುತ್ತವೆ. ಅಂದರೆ ಮರಳಿ ಸೂಕ್ಷ್ಮರೂಪದಿಂದ ಸ್ಥೂಲರೂಪವನ್ನು ಪಡೆಯುತ್ತವೆ.
·  ಶ್ಲೋಕ - 08
ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ ೮॥
ಪ್ರಕೃತಿಮ್ ಸ್ವಾಮ್ ಅವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತ ಗ್ರಾಮಮ್ ಇಮಿಮಮ್ ಕೃತ್ಸ್ನಮ್ ಅವಶಮ್ ಪ್ರಕೃತೇಃ ವಶಾತ್ ಪ್ರಕೃತಿಯ ನಿಯತಿಗೊಳಪಟ್ಟು ಪರತಂತ್ರವಾದ [ನನ್ನಂಕೆಯಲ್ಲಿರುವ] ಈ ಇಡಿಯ ವಿಶ್ವವನ್ನು ನನ್ನದೆ ಆದ ಪ್ರಕೃತಿಯನ್ನು ಬಳಸಿ ಮತ್ತೆ ಮತ್ತೆ ನಿರ್ಮಿಸುತ್ತೇನೆ.
ಪ್ರಳಯ ಕಾಲದಲ್ಲಿ ಸೂಕ್ಷ್ಮರೂಪದಲ್ಲಿ ಭಗವಂತನನ್ನು ಸೇರಿದ ಜಡ ಮತ್ತು ಜೀವವನ್ನು ಭಗವಂತ ತನ್ನ ಅಧೀನವಾದ ಪ್ರಕೃತಿಯನ್ನು ಬಳಸಿ ಮತ್ತೆ ಸೃಷ್ಟಿ ಮಾಡುತ್ತಾನೆ. ಭಗವಂತನ ಈ ಸೃಷ್ಟಿ ಮತ್ತು ಸಂಹಾರಚಕ್ರ ನಿರಂತರ. ಇಂತಹ ಅನಂತ ಬ್ರಹ್ಮಾಂಡಗಳು ಹಿಂದೆ ನಿರ್ಮಾಣವಾಗಿ ಸಂಹಾರವಾಗಿವೆ ಮತ್ತು ಇನ್ನೂ ಅನಂತ ಕಾಲದಲ್ಲೂ ಇದು ಮುಂದುವರಿಯುತ್ತದೆ. ಈ ಕಾರಣಕ್ಕಾಗಿ ಭಗವಂತನನ್ನು ಅನಂತ ಕೋಟಿ ಬ್ರಹ್ಮಾಂಡನಾಯಕ ಎಂದು ಕರೆಯುತ್ತಾರೆ.(ಈ ಬಗ್ಗೆ ವಿವರವಾಗಿ ನಾವು ಏಳನೇ ಅಧ್ಯಾಯದಲ್ಲೇ ಚರ್ಚಿಸಿದ್ದೇವೆ).
ಹೀಗೆ ನಿರಂತರ ಸೃಷ್ಟಿ-ಸಂಹಾರ ಮಾಡುವ ಭಗವಂತನಿಗೆ ಕರ್ಮ ಅಂಟುವುದಿಲ್ಲವೇ? ಮುಂದಿನ ಶ್ಲೋಕಗಳಲ್ಲಿ ನೋಡೋಣ:
·  ಶ್ಲೋಕ - 09
ನಚ ಮಾಂ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ ।
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು ॥೯॥
ನಚ ಮಾಮ್ ತಾನಿ ಕರ್ಮಾಣಿ ನಿಬಧ್ನನ್ತಿ ಧನಂಜಯ ।
ಉದಾಸೀನವತ್ ಆಸೀನಮ್ ಅಸಕ್ತಮ್ ತೇಷು ಕರ್ಮಸು ಧನಂಜಯ, ನಾನು ಮಾಡಿಯೂ ಮಾಡದವನಂತೆ ಇದ್ದುಬಿಡುತ್ತೇನೆ. ಆ ಕರ್ಮಗಳಲ್ಲಿ ನನಗೆ ನಂಟಿಲ್ಲ. ಅದರಿಂದ ಆ ಕರ್ಮಗಳು ನನ್ನನ್ನು ಕಟ್ಟಿ ಹಾಕಲಾರವು.
ಭಗವಂತ ನಿರ್ಲಿಪ್ತ, ಆತ ಕರ್ಮ ಮಾಡುವುದು ಆತನಿಗೊಸ್ಕರ ಅಲ್ಲ. ಸ್ವತಂತ್ರನಾದ ಭಗವಂತನನ್ನು ಎಂದೂ ಯಾವ ಕರ್ಮವೂ ಕಟ್ಟಿ ಹಾಕಲಾರವು.(ಒಂದು ವೇಳೆ ಹಾಗೆ ಕಟ್ಟಿ ಹಾಕುವುದಾದರೆ ಭಗವಂತ ಸ್ವತಂತ್ರ ಎನಿಸುವುದಿಲ್ಲ!). ನಾನು ನನಗೋಸ್ಕರ ಏನೂ ಮಾಡುವುದಿಲ್ಲ ಮತ್ತು ಕರ್ಮ ನನಗೆ ಅಂಟುವುದಿಲ್ಲಎಂದು ಸ್ಪಷ್ಟವಾಗಿ ಹೇಳುತ್ತಾನೆ ಕೃಷ್ಣ.
ಈ ಶ್ಲೋಕದಲ್ಲಿ ಧನಂಜಯ ಎನ್ನುವ ವಿಶೇಷಣ ಬಳಕೆಯಾಗಿದೆ. ವ್ಯವಹಾರಿಕವಾಗಿ ಈ ನಾಮವನ್ನು ನೋಡಿದರೆ ಜನರಿಂದ ಹಣವನ್ನು ದೋಚಿ ದುಷ್ಟ ರಾಜ್ಯಭಾರ ಮಾಡುವ ಶತ್ರು ರಾಜರನ್ನು ಸೋಲಿಸಿ, ಆ ಸಂಪತ್ತನ್ನು ಜಯಿಸಿ, ಅದನ್ನು ಪ್ರಜೆಗಳಿಗಾಗಿ ಸದುಪಯೋಗ ಮಾಡುವವ ಧನಂಜಯ’. [ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ಮೇಲೆ ದಾಳಿಮಾಡಿ ಹಣ ಗಳಿಸುವವ ದರೋಡೆಕೋರಎನಿಸುತ್ತಾನೆ ಹೊರತು ಧನಂಜಯ ಎನಿಸುವುದಿಲ್ಲ. ಮಹಾಭಾರತದಲ್ಲಿ ಏಕಲವ್ಯ ಈ ಎರಡನೇ ಗುಂಪಿಗೆ ಸೇರಿದವನಾಗಿದ್ದ. ಆದ್ದರಿಂದ ಆತನ ಬೆರಳನ್ನು ಕತ್ತರಿಸಲಾಯಿತು ಮತ್ತು ಕೃಷ್ಣ ಸ್ವತಃ ಆತನನ್ನು ಸಂಹಾರ ಮಾಡಿದ್ದ.] ಆಧ್ಯಾತ್ಮಿಕವಾಗಿ ನಿಜವಾದ ಧನ ಎಂದರೆ ಭಗವಂತ. ಅಂತಹ ಭಗವಂತನ ಜ್ಞಾನವನ್ನು ಪಡೆದವ ಧನಂಜಯ. ನಾವೆಲ್ಲರೂ ಅರ್ಜುನನಂತೆ ಭಗವಂತನ ಜ್ಞಾನವನ್ನು ಪಡೆದು ಧನಂಜಯರಾದಾಗ ಮಾತ್ರ ಮೋಕ್ಷವನ್ನು ಪಡೆಯಲು ಸಾಧ್ಯ.
·  ಶ್ಲೋಕ - 10
ಮಯಾSಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್।
ಹೇತುನಾSನೇನ ಕೌಂತೇಯ ಜಗದ್ ವಿಪರಿವರ್ತತೇ ॥೧೦॥
ಮಯಾ ಅಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರ ಅಚರಮ್।
ಹೇತುನಾ ಅನೇನ ಕೌಂತೇಯ ಜಗತ್ ವಿಪರಿವರ್ತತೇ-ಸಾಕ್ಷಿಯಾಗಿ ನಿಂತ ನನ್ನಿಂದಲೆ ಜೀವ-ಜಡಗಳನ್ನು ಬೆಸೆದು ಪ್ರಕೃತಿ ಹಡೆಯುತ್ತದೆ. ಕೌಂತೇಯ, ಈ ಕಾರಣದಿಂದಲೆ ಜಗತ್ತು ಬದಲುತ್ತ ಸುತ್ತುತ್ತಿದೆ.
ಜಗತ್ತನ್ನು ಸೃಷ್ಟಿ ಮಾಡಲು ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತು ಅದಕ್ಕೆ ಆಕಾರ ಕೊಡುವುದು ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂತು, ಕ್ರಿಯೆಯ ಹಿಂದಿನ ಶಕ್ತಿಯಾಗಿ, ಜಡ ಮತ್ತು ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತಾನೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.
·  ಶ್ಲೋಕ - 11
ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ೧೧॥
ಅವಜಾನಂತಿ ಮಾಮ್ ಮೂಢಾಃ ಮಾನುಷೀಂ ತನುಮ್ ಆಶ್ರಿತಮ್ ।
ಪರಮ್ ಭಾವಮ್ ಅಜಾನಂತಃ ಮಮ ಭೂತಮಹೇಶ್ವರಮ್-ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೆ ಬಗೆದು ಕಡೆಗಾಣಿಸುತ್ತಾರೆ-ಎಂದೆಂದು ಎಲ್ಲೆಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು.
ಈ ಶ್ಲೋಕದಲ್ಲಿ ಭಗವಂತ ತನ್ನ ಸ್ವರೂಪದ ಬಗ್ಗೆ ಇನ್ನ್ಯಾರೂ ಹೇಳಲಾಗದ ಒಂದು ಸಂಗತಿಯನ್ನು ಹೇಳುತ್ತಾನೆ. ಭಗವಂತನಿಗೆ ಪಾಂಚಭೌತಿಕ ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ನಮ್ಮಂತೇ ಶರೀರ ಉಳ್ಳವನಂತೆ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಅಲ್ಲಿ ಕಾಣುವ ಶರೀರವನ್ನು ಕಂಡು: ಭಗವಂತನ ಶರೀರ ನಮ್ಮಂತೆ ನಶ್ವರವಾದ, ಒಂದು ದಿನ ಬಿದ್ದು ಹೋಗುವ ಶರೀರ ಎಂದು ತಿಳಿಯುವವರು- ಸ್ವಭಾವತಃ ತಾಮಸರು ಅಥವಾ ತಾಮಸದ ಪ್ರಭಾವಕ್ಕೆ ಒಳಗಾದ ಭಗವಂತನ ಹಿರಿಮೆಯನ್ನರಿಯದ ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ.
ಇಲ್ಲಿ ಭೂತಮಹೇಶ್ವರ ಎನ್ನುವ ವಿಶೇಷಣ ಬಳಕೆಯಾಗಿದೆ. ಇದು ಭಗವಂತನ ಹಿರಿಮೆಯನ್ನು ಹೇಳುವ ವಿಶೇಷ ಪದ. ಸಮಷ್ಟಿಯಾಗಿ ಈ ಪದವನ್ನು ನೋಡಿದರೆ: ಭೂತಗಳು ಎಂದರೆ ಸಮಸ್ತ ಜೀವಗಳು. ಅವರಿಗೆ ಈಶರು ಬ್ರಹ್ಮಾದಿ ದೇವತೆಗಳು(ಭೂತೇಶರು). ಈ ದೇವತೆಗಳಿಗೆ ಮಹತ್ತಾದವಳು ಶ್ರೀಲಕ್ಷ್ಮಿ(ಭೂತಮಹೇಶಳು). ಇಂತಹ ಲಕ್ಷ್ಮಿಗೆ ವರನಾಗಿರುವ ಭಗವಂತ ಭೂತಮಹೇಶ್ವರ”. ಇದೇ ಪದವನ್ನು ಬಿಡಿಸಿ ನೋಡಿದರೆ ಭೂತಮಹಾನ್+ಈಶ್ವರ : ಅಂದರೆ ಬ್ರಹ್ಮಾದಿ ಸಮಸ್ತ ಭೂತಗಳಿಗೂ ಮಹಾನ್ ಆಗಿ ಎಲ್ಲರನ್ನು ನಿಯಂತ್ರಿಸುವ , ಸರ್ವೋನ್ನತನಾದ- ಸರ್ವಸಮರ್ಥ ಭಗವಂತ. ಇನ್ನೊಂದು ರೀತಿಯಲ್ಲಿ ಭೂತ+ಮಹತ್+ಈಶ್ವರ. ಇಲ್ಲಿ ಭೂತ ಎಂದರೆ: ಉನ್ನತಿಯ ತುತ್ತ ತುದಿಯಲ್ಲಿರುವ, ಹುಟ್ಟು ಸಾವಿಲ್ಲದ ಅನಾಧಿನಿತ್ಯ. ಮಹತ್ ಎಂದರೆ: ಕಾಲತಃ , ದೇಶತಃ, ಗುಣತಃ ಪರಿಪೂರ್ಣವಾಗಿರುವ ತತ್ತ್ವ. ಈಶ್ವರ ಎಂದರೆ : ಸರ್ವ ಸಮರ್ಥ ಭಗವಂತ. ಹೀಗೆ ಈ ವಿಶೇಷಣ ಅನೇಕ ರೂಪದಲ್ಲಿ ಭಗವಂತನ ಗುಣವನ್ನು ಸಾರುತ್ತದೆ.
·  ಶ್ಲೋಕ - 12
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ ।
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ೧೨॥
ಮೋಘ ಆಶಾ ಮೋಘಕರ್ಮಾಣಃ ಮೋಘಜ್ಞಾನಾಃ ವಿಚೇತಸಃ ।
ರಾಕ್ಷಸೀಮ್ ಆಸುರೀಮ್ ಚ ಏವ ಪ್ರಕೃತಿಮ್ ಮೋಹಿನೀಮ್ ಶ್ರಿತಾಃ ಇವರ ಆಸೆ ಈಡೇರದು. ಕರ್ಮಗಳು ಫಲಿಸವು. ತಿಳಿವು ಮಾಯವಾಗುವುದು.ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ ಅಸುರರ ತಾಮಸ ಸ್ವಭಾವಕ್ಕೆ ಒಳಗಾದವರು.
ಭಗವಂತ ಜ್ಞಾನಾನಂದ ಸ್ವರೂಪ, ಆತನಿಗೆ ಪಾಂಚಭೌತಿಕ ಶರೀರ ಇಲ್ಲಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಒತ್ತು ಕೊಟ್ಟು ಹೇಳುತ್ತಾನೆ. ದೇವರಿಗೆ ನಮ್ಮಂತೆ ಪಾಂಚಭೌತಿಕ ಶರೀರ ಇದೆ-ಅನ್ನುವ ಚಿಂತನೆಯೇ ಪಾತಕದ ದಾರಿಎನ್ನುತ್ತಾನೆ ಕೃಷ್ಣ. ಏಕೆಂದರೆ ಹಾಗೆ ಚಿಂತನೆ ಮಾಡುವವರು ಸಾತ್ವಿಕರಾಗಿರುವುದಿಲ್ಲ. ಅವರು ಎಂದೂ ಭಗವದ್ ಭಕ್ತರಾಗಿರುವುದಿಲ್ಲ. ಹೀಗೆ ಚಿಂತನೆ ಮಾಡುವವರ ಅಧ್ಯಾತ್ಮ ಸಾಧನೆಯ ಎಲ್ಲಾ ಆಸೆಗಳೂ ಕಮರಿ ಹೋಗುತ್ತವೆ. ಭಗವಂತನನ್ನು ನಶ್ವರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ. ಅವರು ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ. ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.
ಸಾತ್ವಿಕ ಚಿಂತನವೇ ಇಲ್ಲದವರು ಅಥವಾ ತಾಮಸ ಪ್ರಭಾವಕ್ಕೊಳಗಾದವರು ಭಗವಂತನನ್ನು ಈ ರೀತಿ ದೋಷ ಚಿಂತನೆ ಮಾಡುತ್ತಾರೆ. ಅವರಿಗೆ ಚಿಂತನಾ ಶಕ್ತಿ ಇರುವುದಿಲ್ಲ. ಇವರು ಯಾವ ಶಾಸ್ತ್ರ ಓದಿಯೂ ಉಪಯೋಗವಿಲ್ಲ. ಅವರ ಮನಸ್ಸು ಅಧ್ಯಾತ್ಮವನ್ನು ಗ್ರಹಿಸುವುದಿಲ್ಲ.ಇಂತವರು ರಾಕ್ಷಸರು ಅಥವಾ ಅಸುರರಾಗಿರುತ್ತಾರೆಎನ್ನುತ್ತಾನೆ ಕೃಷ್ಣ. ರಾಕ್ಷಸರು ಎಂದರೆ ಸ್ವಭಾವತಃ ತಾಮಸರು; ಅಸುರರು ಎಂದರೆ ರಾಜಸರು-ಇಂದ್ರಿಯ ಭೋಗದಲ್ಲೇ ಪುರುಷಾರ್ಥ ಕಾಣುವವರು. ಇವರ ಜೊತೆಗೆ ಪ್ರಭಾವದಿಂದ ಚಿಂತನಾ ಶೀಲತೆಯನ್ನು ಕಳೆದುಕೊಂಡವರು ಕೂಡಾ ಈ ರೀತಿ ಯೋಚಿಸುತ್ತಾರೆ. ಇವರಿಗೆ ಎಂದೂ ಸಹಜ ಚಿಂತನೆ ಬರುವುದೇ ಇಲ್ಲ. ಇವರು ಯಾವಾಗಲೂ ಸತ್ಯಕ್ಕೆ ವಿರುದ್ಧವಾಗಿ ಚಿಂತಿಸುತ್ತಿರುತ್ತಾರೆ.
·  ಶ್ಲೋಕ - 13
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ ।
ಭಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ ೧೩॥
ಮಹಾ ಆತ್ಮಾನಃ ತು ಮಾಮ್ ಪಾರ್ಥ ದೈವೀಮ್ ಪ್ರಕೃತಿಮ್ ಆಶ್ರಿತಾಃ ।
ಭಜಂತಿ ಅನನ್ಯ ಮನಸಃ ಜ್ಞಾತ್ವಾ ಭೂತ ಆದಿಮ್ ಅವ್ಯಯಮ್ ಓ ಪಾರ್ಥ, ಸಾತ್ವಿಕ ಸ್ವಭಾವದ ಹಿರಿಯ ಮಂದಿ, ಅಳಿವ ವಿಶ್ವಕ್ಕೆಲ್ಲ ಅಳಿವಿರದ ನಾನೆ ಕಾರಣ ಎಂದು ತಿಳಿದು, ಒಂದೆ ಬಗೆಯಿಂದ ನನ್ನನ್ನು ಪೂಜಿಸುತ್ತಾರೆ.
ಹಿಂದಿನ ಶ್ಲೋಕದಲ್ಲಿ ಆಸುರೀ ಮತ್ತು ರಾಕ್ಷಸ ಸ್ವಭಾವದವರನ್ನು ವಿವರಿಸಿದ ಕೃಷ್ಣ ಇಲ್ಲಿ ದೈವೀ ಸ್ವಭಾವದವರನ್ನು ವಿವರಿಸುತ್ತಾನೆ. ದೈವೀ ಸ್ವಭಾವದವರು ಸದಾ ಜ್ಞಾನದ, ಬೆಳಕಿನ, ಸತ್ಯದ ದಾರಿಯಲ್ಲಿ ಸಾಗುವವರು. ಅವರು ಭಗವಂತನನ್ನು ತಿಳಿಯುವ ಭಾಗ್ಯ ಪಡೆದವರು. ಇವರನ್ನು ಭಗವಂತ ಮಹಾತ್ಮರುಎನ್ನುತ್ತಾನೆ. ಭಗವಂತನಿಗೆ ಇವರ ಮೇಲೆ ಅಪಾರ ಪ್ರೀತಿ. ಕೃಷ್ಣ ಹೇಳುತ್ತಾನೆ ಅವರು ನನ್ನನ್ನು ಅನನ್ಯ ಮನಸ್ಸಿನಿಂದ ಭಜನೆ ಮಾಡುತ್ತಾರೆಎಂದು. ನಾವು ದೇವರನ್ನು ಪ್ರೀತಿಸುವುದು ಮತ್ತು ದೇವರು ನಮ್ಮನ್ನು ಪ್ರೀತಿಸುವುದು ನಿಜವಾದ ಭಜನೆ. ದೈವೀ ಸ್ವಭಾವದವರು ಭಗವಂತನನ್ನು ಬಿಟ್ಟು ಉಳಿದುದೆಲ್ಲವೂ ನಶ್ವರ, ಶಾಶ್ವತ ಸತ್ಯ ಭಗವಂತ ಮಾತ್ರ ಎನ್ನುವ ಸತ್ಯವನ್ನು ಅರಿತಿರುತ್ತಾರೆ. ಪ್ರಪಂಚದಲ್ಲಿ ಭಗವಂತ ಮತ್ತು ಆತನ ಜ್ಞಾನ ಮಾತ್ರ ಅವ್ಯಯ. ಉಳಿದ (ದುಡ್ಡು, ಆಸ್ತಿ, ಚಿನ್ನ, ಅಧಿಕಾರ, ಇತ್ಯಾದಿ) ಎಲ್ಲವೂ ವ್ಯಯ. ನಶ್ವರವಲ್ಲದ ಸಂಪತ್ತು ಭಗವಂತ ಮತ್ತು ಆತನ ಜ್ಞಾನ. ಈ ರೀತಿ ಭಗವಂತನ ಚಿಂತನೆ ಮಾಡುವವರು ಮಹಾತ್ಮರು.
ಈ ಶ್ಲೋಕದಲ್ಲಿ ಬಂದಿರುವ ವಿಶೇಷಣ ಪಾರ್ಥ’. “ಪ್ರಥೆಯ ಮಗನೆಎಂದು ಕೃಷ್ಣ ಅರ್ಜುನನನ್ನು ಸಂಬೋಧಿಸುತ್ತಿದ್ದಾನೆ ಎನ್ನುವುದು ಮೇಲ್ನೋಟದ ಅರ್ಥ. ವ್ಯುತ್ಪತ್ತಿ ಶಾಸ್ತ್ರೀಯ ದೃಷ್ಟಿಯಿಂದ(Etymologically) ನೋಡಿದರೆ ಈ ವಿಶೇಷಣದ ಹಿಂದೆ ಅಧ್ಯಾತ್ಮಿಕವಾಗಿ ಬೇರೆಯೇ ಅರ್ಥವಿದೆ. ಪ್ರಥ- ವಿಸ್ತಾರೆಧಾತು. ಯಾವುದು ಹಬ್ಬಿಕೊಂಡಿದೆಯೋ, ಯಾವುದು ಎಲ್ಲಾ ಕಡೆ ತುಂಬಿದೆಯೋ ಅದು ಪ್ರಥ’. ಇದು ಭಗವಂತನ ಸರ್ವಗತತ್ವವನ್ನು ಸೂಚಿಸುತ್ತದೆ. ಭಗವಂತ ಸರ್ವಗತ ಎನ್ನುವ ಸತ್ಯವನ್ನು ಅರಿತು ಅವನನ್ನು ಎಲ್ಲ ಕಡೆ ಕಾಣುವವರು ಪಾರ್ಥರು’. ಇನ್ನೊಂದು ಅರ್ಥದಲ್ಲಿ ವೇದಾರ್ಥಭೂತನಾದ ಭಗವಂತನನ್ನು, ಅವನ ಗುಣಗಳನ್ನು, ಸದಾ ಪಾನ ಮಾಡುವವರು ಪಾರ್ಥರು’. ನಾವೆಲ್ಲರೂ ವೇದಾರ್ಥವನ್ನು ಪಾನ ಮಾಡುತ್ತಾ ಪಾರ್ಥರಾಗಬೇಕು. ಎಲ್ಲೆಡೆ ಹಬ್ಬಿರುವ ಸರ್ವಗತವಾದ ಶಕ್ತಿಯನ್ನು ನಮ್ಮೊಳಗೂ ಕಾಣಬೇಕು ಎನ್ನುವುದು ಈ ಸಂಬೋಧನೆಯ ಹಿಂದಿರುವ ಸಂದೇಶ.
ದೈವೀ ಸ್ವಭಾವದವರು ಭಗವಂತನನ್ನು ಯಾವಯಾವ ಬಗೆಯಲ್ಲಿ ಉಪಾಸನೆ ಮಾಡುತ್ತಾರೆ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 14
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ ೧೪॥
ಸತತಮ್ ಕೀರ್ತಯಂತ ಮಾಮ್ ಯತಂತಃ ಚ ದೃಢ ವ್ರತಾಃ
ನಮಸ್ಯಂತ ಚ ಮಾಮ್ ಭಕ್ತ್ಯಾ ನಿತ್ಯ ಯುಕ್ತಾಃ ಉಪಾಸತೇ ಅನುದಿನವು ನನ್ನಲ್ಲಿ ಬಗೆಯಿಟ್ಟು ನನ್ನನ್ನೆ ಸೇವಿಸುತ್ತಾರೆ. ನಿರಂತರ ನನ್ನನ್ನು ಕೊಂಡಾಡುತ್ತಾ ನೇಮಗಳನ್ನುನೆಮ್ಮಿಕೊಂಡು ಹೆಣಗುತ್ತಾ ನನಗಾಗಿ ತಲೆಬಾಗುತ್ತ.
ದೈವೀ ಸ್ವಭಾವದವರು ನಿರಂತರ ನನ್ನನ್ನು ಕೀರ್ತನ ಮಾಡುತ್ತಾರೆಎನ್ನುತ್ತಾನೆ ಕೃಷ್ಣ. ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಭಗವದ್ ಪ್ರಜ್ಞೆ ಗಾಢವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ ತತವಾದ್ಯವನ್ನು ಹಿಡಿದು, ತಂತಿಯನ್ನು ಮೀಟುತ್ತಾ ಭಗವಂತನ ಗುಣಗಾನ ಮಾಡುತ್ತಾ, ಹಾಡುತ್ತಾ(ನಾರದ ಮಹರ್ಷಿಗಳಂತೆ) ಸದಾ ಸಂತೋಷವಾಗಿರುವವರು ದೈವೀ ಸ್ವಭಾವದವರು. ಇವರು ನಿರಂತರ, ತಮ್ಮ ಗುರಿ ತಲುಪುವತನಕವೂ ದೃಡ ಧೀಕ್ಷೆಯಿಂದ, ಅನನ್ಯ ಪ್ರೀತಿಯಿಂದ ಗೌರವಿಸುತ್ತಾ ಉಪಾಸನೆ ಮಾಡುತ್ತಾರೆ. ಇವರಲ್ಲಿ ಇನ್ನೊಂದು ವಿಧದ ಭಕ್ತರನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 15
ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತೋಮುಖಮ್ ೧೫॥
ಜ್ಞಾನಯಜ್ಞೇನ ಚ ಅಪಿ ಅನ್ಯೇ ಯಜಂತಃ ಮಾಮ್ ಉಪಾಸತೇ
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತಃ ಮುಖಮ್-ಕೆಲವರು ಅರಿವಿನ ಮಾನಸ ಯಜ್ಞದಿಂದ ಎಲ್ಲೆಡೆ ತುಂಬಿರುವ ನನ್ನನ್ನು ಪೂಜಿಸುತ್ತ ಸೇವಿಸುತ್ತಾರೆ- ಎಲ್ಲೆಡೆಯಿರುವ ಭಗವಂತನೊಬ್ಬನೆ ಎಂದು[ಏಕಮೂರ್ತಿಯೆಂದು], ಎಲ್ಲಕ್ಕಿಂತ ಬೇರೆಯೆಂದು[ಚತುರ್ಮೂರ್ತಿಯೆಂದು], ಬಗೆಬಗೆಯ ಬಣ್ಣದವನೆಂದು [ಅನೇಕಮೂರ್ತಿ ಯೆಂದು], ಹೀಗೆ ಹಲವಾರು ಬಗೆಯಿಂದ.
ಇನ್ನು ಕೆಲವರು ಭಗವಂತನ ಅರಿವಿನ ಪ್ರಪಂಚದಲ್ಲಿ ಮುಳುಗಿಬಿಟ್ಟಿರುತ್ತಾರೆ. ಧ್ಯಾನದಲ್ಲಿ ಅವರಿಗೆ ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ. ಧ್ಯಾನದಲ್ಲಿ ಭಗವಂತನನ್ನು ಅನೇಕ ಆಯಾಮದಲ್ಲಿ ಕಾಣುವುದೇ ಅವರ ಉಪಾಸನೆ. ಇವರ ಉಪಾಸನೆ ಧ್ಯಾನ ಪೂರ್ವಕವಾದ ಯಜ್ಞ. ಬಾಹ್ಯವಾಗಿ ಇವರನ್ನು ಮಹಾತ್ಮರು ಎಂದು ಗುರುತಿಸುವುದು ಬಹಳ ಕಷ್ಟ. ಕೃಷ್ಣ ಹೇಳುತ್ತಾನೆ ಇಂತವರು ನನ್ನನ್ನು ಒಂದಾಗಿ, ಬೇರೆಯಾಗಿ, ಬಹುವಾಗಿ ಕಾಣುತ್ತಾರೆಎಂದು. ಇಲ್ಲಿ ಏಕತ್ವೇನ ಅಂದರೆ ಭಗವಂತ ಒಬ್ಬನೆ ಎಂದು ಉಪಾಸನೆ ಮಾಡುವುದು. ಒಂದೊಂದು ದೇಶಕ್ಕೆ, ಒಂದೊಂದು ಜಾತಿಗೆ, ಒಂದೊಂದು ಮತಕ್ಕೆ ಒಬ್ಬ ದೇವರಲ್ಲ. ಎಲ್ಲರಿಗೂ ದೇವರು ಒಬ್ಬನೇ ಎಂದು ಉಪಾಸನೆ ಮಾಡುವುದು ಏಕತ್ವೇನ. ಪೃಥಕ್ತ್ವೇನ ಎಂದರೆ ಎಲ್ಲರಿಂದ ವಿಲಕ್ಷಣನಾದ ಭಗವಂತನನ್ನು ಅನೇಕ ಬಗೆಯಿಂದ ಕಾಣುವುದು. ಇವರು ಭಗವಂತನನ್ನು ಧ್ಯಾನದಲ್ಲಿ ಅನೇಕ ವರ್ಣದಿಂದ ಕಾಣುತ್ತಾರೆ. ಹೀಗೆ ವಿಶ್ವತೋಮುಖ ಭಗವಂತನನ್ನು ಏಕ ಎಂತಲೂ, ಚತುರ್ಮೂರ್ತಿ ಎಂತಲೂ, ಅನೇಕ ಮೂರ್ತಿ ಎಂತಲೂ, ಅನೇಕ ವರ್ಣದಿಂದ ಉಪಾಸನೆ ಮಾಡುತ್ತಾರೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.