ಭಗವದ್ಗೀತೆ ಅಧ್ಯಾಯ-18 (ಶ್ಲೋಕ 41 ರಿಂದ 66)



ಭಗವದ್ಗೀತೆ  ಅಧ್ಯಾಯ-18 (ಶ್ಲೋಕ 41 ರಿಂದ 66)
·  ಶ್ಲೋಕ - 41
ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥೪೧॥
ಬ್ರಾಹ್ಮಣ ಕ್ಷತ್ರಿಯ ವಿಶಾಮ್ ಶೂದ್ರಾಣಾಮ್ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವ ಪ್ರಭವೈಃ ಗುಣೈಃ -- ಓ ಅರಿಗಳ ಉರಿಯೆ, ಸ್ವಭಾವದಿಂದುಂಟಾದ ಗುಣಗಳಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ ಬೇರೆಬೇರೆಯಾಗಿವೆ.
ಜೀವಸ್ವಭಾವಕ್ಕನುಗುಣವಾಗಿ ಮೋಕ್ಷಯೋಗ್ಯವಾದ ಮಾನವನಲ್ಲಿ ನಾಲ್ಕು ವಿಧದ ವರ್ಣಗಳಿವೆ. ಸ್ವಭಾವಕ್ಕನುಗುಣವಾಗಿ ಪ್ರತಿಯೊಬ್ಬನ ನಡೆ-ನುಡಿ, ಆಚಾರ-ವಿಚಾರ. ಸ್ವಭಾವ ಭೇದದಿಂದಾಗಿ ಗುಣ-ಕರ್ಮ ಭೇದ. ಇದು ಪೂರ್ಣವಾಗಿ ಜೀವ ಸ್ವಭಾವಕ್ಕೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಇದಕ್ಕೂ ಜಾತಿಗೂ ಯಾವ ಸಂಬಂಧವೂ ಇಲ್ಲ. ಜಾತಿ ದೇಹಕ್ಕೆ ಸಂಬಂಧಪಟ್ಟಿದ್ದು, ವರ್ಣ ಜೀವಸ್ವರೂಪಕ್ಕೆ ಸಂಬಂಧಪಟ್ಟಿದ್ದು. [ಚಾತುರ್ವರ್ಣ್ಯದ ಬಗ್ಗೆ ಹೆಚ್ಚಿನ ವಿವರಣೆಯನ್ನು ಅಧ್ಯಾಯ ೦೪-ಶ್ಲೋಕ-೧೩ ರಲ್ಲಿ ವಿವರಿಸಲಾಗಿದೆ]. ಈ ನಾಲ್ಕು ವರ್ಣದವರ ಸಹಜ ಕರ್ಮದ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
·  ಶ್ಲೋಕ - 42
ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ ।
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥೪೨॥
ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ ।
ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ –– ಭಗವತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು.
ಜೀವ ಸ್ವಭಾವ ಬ್ರಾಹ್ಮಣವಾಗಿದ್ದರೆ ಅವರ ಸಹಜ ಕರ್ಮಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಈ ವರ್ಣದ ಸ್ವಭಾವಗಳು ಹೀಗಿವೆ:
(೧)ಶಮಃ : ಮನಸ್ಸು ಭಗವಂತನಲ್ಲಿ ನೆಲೆಗೊಂಡಿರುವುದು.
(
೨)ದಮಃ : ಇಂದ್ರಿಯಗಳ ಹತೋಟಿ.
(
೩)ತಪಃ : ಮಾನಸಿಕವಾಗಿ ವಿಷಯವನ್ನು ಆಳವಾಗಿ ಚಿಂತನೆ ಮಾಡುವುದು, ಮನಸ್ಸು ಒಳ್ಳೆಯದನ್ನು ಯೋಚಿಸುವುದಕ್ಕೆ ಪೂರಕವಾಗಿ ವೃತಾನುಷ್ಠಾನ, ನಿರಂತರ ಶಾಸ್ತ್ರ ಚಿಂತನೆ.
(
೪)ಶೌಚಮ್ : ಮನಸ್ಸಿನ ಶುದ್ಧತೆ ಮತ್ತು ಅದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ.
(
೫)ಕ್ಷಾಂತಿ : ತಪ್ಪು ಮಾಡಿದವರನ್ನೂ ಕ್ಷಮಿಸುವ, ಕೋಪಿಸಿಕೊಳ್ಳದ ಮನಸ್ಸು.
(
೬)ಆರ್ಜವ : ಸ್ವಚ್ಛ ನಿರಾಳ ಮನಸ್ಸು, ನೇರ ನಡೆ-ನುಡಿ.
(
೭)ಜ್ಞಾನ : ಭಗವದ್ ವಿಷಯಕವಾದ ಜ್ಞಾನ.
(
೮)ವಿಜ್ಞಾನ : ಭಗವಂತನ ಬಗ್ಗೆ ಆಳವಾದ ಅರಿವು, ಭಗವಂತನ ಗುಣಗಳ ವಿಶಿಷ್ಠ ಜ್ಞಾನ.
(
೯)ಆಸ್ತಿಕ್ಯ : ಪೂರ್ಣವಾಗಿ ಭಗವಂತನ ಅಸ್ತಿತ್ವದಲ್ಲಿ ಭರವಸೆ ಪಡೆದು ಮುಂದೆ ಸಾಗುವುದು.
ಈ ಎಲ್ಲ ಗುಣಗಳು ಎಲ್ಲ ವರ್ಣದವರಲ್ಲೂ ಇರಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿರುವುದು ಬ್ರಾಹ್ಮಣ ವರ್ಣದವರಲ್ಲಿ. ಇವುಗಳಲ್ಲಿ ಒಂದು ಗುಣದ ಪ್ರಮಾಣ ಕಡಿಮೆ ಇದ್ದರೂ ಆತ ಬ್ರಾಹ್ಮಣನೆನಿಸುವುದಿಲ್ಲ. ಒಂದು ವೇಳೆ ಕ್ಷತ್ರಿಯರಲ್ಲಿ ಈ ಗುಣಗಳ ಪ್ರಮಾಣ ಬ್ರಾಹ್ಮಣರಿಗಿಂತ ಹೆಚ್ಚಾಗಿ ಕಂಡುಬಂದರೆ ಆತ ರಾಜರ್ಷಿ ಎನಿಸುತ್ತಾನೆ. (ಉದಾಹರಣೆಗೆ ಜನಕ ಮಹಾರಾಜ)
·  ಶ್ಲೋಕ - 43
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ೪೩॥
ಶೌರ್ಯಂ ತೇಜಃ ಧೃತಿಃ ದಾಕ್ಷ್ಯಮ್ ಯುದ್ಧೇ ಚ ಅಪಿ ಅಪಲಾಯನಮ್ ।
ದಾನಮ್ ಈಶ್ವರ ಭಾವಃ ಚ ಕ್ಷಾತ್ರಮ್ ಕರ್ಮ ಸ್ವಭಾವಜಮ್ –– ಕೆಚ್ಚು, ಕಸುವು, ಗಟ್ಟಿತನ, ಕೌಶಲ, ಕಾಳಗದಲ್ಲಿ ಬೆನ್ನು ತೋರಿಸದಿರುವುದು, ಕೊಡುಗೈತನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು.
ಕ್ಷತ್ರಿಯನಾದವನ ಸಹಜ ಕರ್ಮಗಳನ್ನು ಇಲ್ಲಿ ಕೃಷ್ಣ ವಿವರಿಸಿದ್ದಾನೆ.
(೧) ಶೌರ್ಯಮ್ : ಎದುರಾಳಿಗಳನ್ನು ಬಗ್ಗುಬಡಿಯುವ ಶಕ್ತಿ.
(
೨) ತೇಜಸ್ಸು : ಎದುರಾಳಿಗಳು ನೋಡಿದಾಕ್ಷಣ ತಲೆ ತಗ್ಗಿಸುವ ತೇಜಸ್ಸು.
(
೩) ಧೃತಿ : ಪ್ರಾಣಾಪಾಯ ಬಂದಾಗಲೂ ಎದೆಗೆಡದೆ ಮುನ್ನುಗ್ಗುವ ಸಾಹಸ ಪ್ರವೃತ್ತಿ
(
೪) ದಕ್ಷತೆ: ಶತ್ರುಗಳನ್ನು ಮಣಿಸುವ ತಂತ್ರಗಾರಿಕೆ-ಚಾತುರ್ಯ.
(
೫) ಯುದ್ಧೇ ಚ ಅಪಿ ಅಪಲಾಯನಮ್ : ಯುದ್ಧ ಭೂಮಿಯಲ್ಲಿ ಬೆನ್ನು ಹಾಕದೆ, ಪಲಾಯನ ಮಾಡದೆ ಹೋರಾಡುವ ಧೀರತನ.
(
೬) ದಾನಮ್: ದಾನ ಧರ್ಮ ಮಾಡುವುದು.
ಈ ಮೇಲಿನ ಆರು ಗುಣಗಳು ಕ್ಷತ್ರಿಯನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇತರ ವರ್ಣದವರಲ್ಲಿ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಲ್ಲದೆ ಕ್ಷತ್ರಿಯರಿಗೇ ಮೀಸಲಾದ ಒಂದು ವಿಶೇಷ ಗುಣ (೭) ಈಶ್ವರ ಭಾವಃ : ಅಪರಾಧಿಗೆ ಸೂಕ್ತ ಶಿಕ್ಷೆ ಕೊಡುವ ಅಧಿಕಾರ. ಬೇರೆ ವರ್ಣದವರಿಗೆ ಈ ಅಧಿಕಾರವಿಲ್ಲ.
·  ಶ್ಲೋಕ - 44
ಕೃಷಿಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ॥೪೪॥
ಕೃಷಿ ಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ –– ಬೇಸಾಯ, ಆಕಳು ಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮ. ಸೇವಾರೂಪವಾದ ಕಾಯಕ ಶೂದ್ರ ಸ್ವಭಾವಕ್ಕೆ ಸಹಜವಾದದ್ದು.
ವೈಶ್ಯರ ಸ್ವಭಾವಸಹಜ ಕಾಯಕ ಕೃಷಿ, ಗೋರಕ್ಷಣೆ(ಹೈನುಗಾರಿಕೆ) ಮತ್ತು ವಾಣಿಜ್ಯ. ಭೀಷ್ಮಾಚಾರ್ಯರು ಧರ್ಮರಾಯನಿಗೆ ರಾಜಧರ್ಮ ಉಪದೇಶ ಮಾಡುತ್ತಾ ಯಾವ ದೇಶದಲ್ಲಿ ಕೃಷಿಕರು ಮತ್ತು ವಾಣಿಜ್ಯೋದ್ಯಮಿಗಳು ಕರಭಾರ ತಡೆಯಲಾಗದೆ ಬೇರೆ ದೇಶಕ್ಕೆ ಹೊರಟು ಹೋಗುತ್ತಾರೆ- ಆ ದೇಶ ಉದ್ಧಾರವಾಗದು" ಎಂದಿದ್ದಾರೆ. ಕೃಷಿ, ವಾಣಿಜ್ಯ ಮತ್ತು ಹೈನುಗಾರಿಕೆ ದೇಶದ ಬೆನ್ನೆಲುಬು. ಈ ಕಾಯಕ ವೈಶ್ಯರ ಸ್ವಭಾವಸಹಜವಾದ ಕರ್ಮ.
ಶೂದ್ರರಲ್ಲಿ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ. ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(Majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಉದಾಹರಣೆಗೆ: ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.
·  ಶ್ಲೋಕ - 45
ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು ೪೫॥
ಸ್ವೇ ಸ್ವೇ ಕರ್ಮಣಿ ಅಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತತ್ ಶೃಣು –- ತನ್ನತನ್ನ ಸಹಜ ಕರ್ಮದಲ್ಲಿ ನಿರತನಾದ ಮನುಷ್ಯ ಸಿದ್ಧಿಯನ್ನು ಪಡೆಯುತ್ತಾನೆ. ತನ್ನದಾದ ಕರ್ಮದಲ್ಲಿ ತೊಡಗಿದವನು ಹೇಗೆ ಸಿದ್ಧಿ ಪಡೆಯುತ್ತಾನೆ ಆ ಬಗೆಯನ್ನು ಕೇಳು.
ಅವರವರ ಸ್ವಭಾವಕ್ಕೆ ಅನುಗುಣವಾದ ಕರ್ಮವನ್ನು ಕೃಷ್ಣ ಸ್ವಕರ್ಮಎಂದು ಕರೆದಿದ್ದಾನೆ.ನಿನ್ನ ಕರ್ಮ ನೀನು ಮಾಡುಎಂದರೆ ನಿನ್ನ ಸ್ವಭಾವಕ್ಕೆ ಒಗ್ಗುವ ಕರ್ಮವನ್ನು ನೀನು ಮಾಡು ಎಂದರ್ಥ. ಪ್ರಾಮಾಣಿಕತೆ ಮತ್ತು ಸ್ವಕರ್ಮನಿಷ್ಠೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ತನ್ನ ಸ್ವಭಾವಕ್ಕೆ ಸಹಜವಾದ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ಮಾಡುತ್ತ ಪ್ರಾಮಾಣಿಕವಾಗಿ ಬದುಕುವುದೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ.
ನಮ್ಮಲ್ಲಿ ಕೆಲವರು ಕೇಳಬಹುದು: ಯಾವ ಕೆಲಸವಾದರೇನು, ಯಾವುದರಿಂದ ಹೆಚ್ಚು ಹಣ ಸಂಪಾದನೆ ಸಾಧ್ಯವೋ ಆ ಕೆಲಸವನ್ನು ಮಾಡುವುದರಲ್ಲಿ ತಪ್ಪೇನುಎಂದು. ಇಲ್ಲಿ ಕೃಷ್ಣ ಅದು ತಪ್ಪು ಎಂದಿದ್ದಾನೆ. ಯಾವುದೋ ಒಂದು ಕೆಲಸ ಮಾಡುವುದು ಬದುಕಲ್ಲ, ಅದು ಯಾತನೆ. ನಿನ್ನನಿನ್ನ ಸ್ವಭಾವಸಹಜವಾದ ಕರ್ಮದಲ್ಲಿ ನೀನು ಬದುಕಿದರೆ ಅದು ಬದುಕು. ಅದೇ ಮೋಕ್ಷ ಮಾರ್ಗ. ನಿನ್ನ ಸ್ವಭಾವಕ್ಕೆ ತಕ್ಕಂತೆ ನಿನ್ನ ಶಿಕ್ಷಣ; ನಿನ್ನ ಶಿಕ್ಷಣಕ್ಕೆ ತಕ್ಕಂತೆ ನಿನ್ನ ಕರ್ಮ. ಹೀಗೆ ಮಾಡಿದಾಗ ಕರ್ಮದಲ್ಲಿ ಅಭಿರತಿ(ಸಂಪೂರ್ಣ ತೃಪ್ತಿ ಮತ್ತು ಸಂತೋಷ) ಇರುತ್ತದೆ. ಈ ರೀತಿ ಖುಷಿಯಿಂದ ಭಗವದರ್ಪಣೆಯಾಗಿ ಕರ್ಮ ಮಾಡಿದಾಗ, ಬದುಕಿನ ಕೊನೆಯ ಸಿದ್ಧಿಯಾದ ಮೋಕ್ಷವನ್ನು ಪಡೆಯಬಹುದು. ಸ್ವಭಾವ ಸಹಜವಾದ ಕರ್ಮದಿಂದ ಹೇಗೆ ಸಿದ್ಧಿಯಾಗುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
·  ಶ್ಲೋಕ - 46
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ।
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥೪೬॥
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮ್ ಇದಂ ತತಮ್ ।
ಸ್ವಕರ್ಮಣಾ ತಮ್ ಅಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ -- ಯಾರಿಂದ ಜೀವಿಗಳ ಚಟುವಟಿಕೆಯೋ, ಯಾರು ಈ ಎಲ್ಲವನ್ನು ತುಂಬಿನಿಂತಿರುವನೋ ಅಂಥ ಭಗವಂತನನ್ನು ಮನುಷ್ಯ ಸ್ವಭಾವಸಹಜವಾದ ಕರ್ಮದಿಂದ ಆರಾಧಿಸಿ ಸಿದ್ಧಿ ಪಡೆಯುತ್ತಾನೆ.
ನಮ್ಮ ಸ್ವಭಾವ ಸಹಜ ಕರ್ಮವನ್ನು ಭಗವಂತನ ಅಭ್ಯರ್ಚನೆಯಾಗಿ ಮಾಡಿದಾಗ ಅದು ಅಧ್ಯಾತ್ಮವಾಗುತ್ತದೆ. ಇದಕ್ಕಿಂತ ಮಹತ್ತಾದ ಪೂಜೆ ಇನ್ನೊಂದಿಲ್ಲ. ಇಲ್ಲಿ ಅರ್ಚನೆ ಎಂದರೆ ಪುರೋಹಿತರ ಮುಖೇನ ದೇವಸ್ಥಾನದಲ್ಲಿ ಮಾಡುವ ಅರ್ಚನೆ ಅಲ್ಲ. ಇದು ಇಂದ್ರಿಯ ನಿಗ್ರಹ, ಶಮಃ, ದಮಃ ಎಲ್ಲವೂ ಸೇರಿ ಸ್ವಯಂ ಮಾಡತಕ್ಕ ಅರ್ಚನೆ. ಆದ್ದರಿಂದ ನಾವು ಮಾಡುವ ಸ್ವಭಾವ ಸಹಜ ಕರ್ಮದಲ್ಲಿ ನಮ್ಮ ಇಂದ್ರಿಯ ನಿಗ್ರಹ ಸೇರಿದೆ, ಭಗವನ್ನಿಷ್ಠೆ ಸೇರಿದೆ, ಭಗವದರ್ಪಣಾ ಬುದ್ಧಿ ಸೇರಿದೆ. ಇವೆಲ್ಲವೂ ಸೇರಿ ನಾವು ಮಾಡತಕ್ಕ ಪ್ರತಿಯೊಂದು ಸ್ವಕರ್ಮ/ಸಹಜಕರ್ಮ ಭಗವಂತನ ಪೂಜೆಯಾಗುತ್ತದೆ. ಈ ರೀತಿ ಬದುಕಿದಾಗ ನಮ್ಮ ಇಡೀ ಬದುಕು ದೇವರ ಪೂಜೆಯಾಗುತ್ತದೆ. ನಮಗೆ ಇಚ್ಛೆ ಮತ್ತು ಪ್ರವೃತ್ತಿಯನ್ನು ಕೊಟ್ಟ ಭಗವಂತನಿಗೆ ನಮ್ಮ ಕರ್ಮವನ್ನು ಅರ್ಪಿಸಿದಾಗ ನಮ್ಮ ಕರ್ಮವೇ ಒಂದು ಅರ್ಚನೆಯಾಗುತ್ತದೆ.
·  ಶ್ಲೋಕ - 47
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಭಾವನಿಯತಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್ ೪೭॥
ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್ ।
ಸ್ವಭಾವ ನಿಯತಂ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ –- ಚನ್ನಾಗಿ ಆಚರಿಸಿದ ಪರಧರ್ಮಕ್ಕಿಂತ ಆಚರಣೆಯಲ್ಲಿ ಕೊರತೆಯಿದ್ದರೂ ತನ್ನ ಸಹಜಧರ್ಮ ಮಿಗಿಲು. ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಮಾಡಿದರೆ ಪಾಪ ತಟ್ಟುವುದಿಲ್ಲ.
ನಮ್ಮ ಸ್ವಭಾವಕ್ಕೆ ಸಹಜವಾದ ಸ್ವಧರ್ಮ ಮಾಡುವುದರಿಂದ, ಆ ಕರ್ಮದಲ್ಲಿ ದೋಷವಿದ್ದರೂ ಕೂಡ ಅದರಿಂದ ಪಾಪ ತಟ್ಟುವುದಿಲ್ಲ. ಇದನ್ನು ಬಿಟ್ಟು ಪರಧರ್ಮ ಮಾಡುವುದು ಯುಕ್ತವಲ್ಲ. ವೇದವ್ಯಾಸರು ಯುದ್ಧಾನಂತರ ತಾನು ಸಿಂಹಾಸನವೇರಲಾರೆ, ನನಗೇನೂ ಬೇಡ, ನಾನು ಕಾಡಿಗೆ ಹೋಗುತ್ತೇನೆ ಎಂದು ಕುಳಿತ ಧರ್ಮರಾಯನಿಗೆ- ನೀನು ನಿನ್ನ ಸಹಜ ಧರ್ಮವನ್ನು ಬಿಟ್ಟು ಕಾಡಿಗೆ ಹೋಗುವುದು ಎಷ್ಟು ಅಸಂಗತವೋ, ಅಷ್ಟೇ ಅಸಂಗತ ನಾನು ತಪಸ್ಸನ್ನು ಬಿಟ್ಟು ಬಂದು ರಾಜ್ಯಭಾರ ಮಾಡುವುದುಎಂದು ಬುದ್ಧಿವಾದ ಹೇಳುತ್ತಾರೆ. ಇದರಿಂದ ನಾವು ತಿಳಿಯಬೇಕಾದದ್ದು ಏನೆಂದರೆ -ನಾವು ಪರಧರ್ಮ ಮಾಡುವುದಕ್ಕಿಂತ-ದೋಷವಿದ್ದರೂ ಸರಿ, ನಮ್ಮ ಸಹಜ ಕರ್ಮ ಮಾಡುವುದೇ ಅತ್ಯಂತ ಶ್ರೇಷ್ಠ ಧರ್ಮ
·  ಶ್ಲೋಕ - 48
ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ ॥೪೮॥
ಸಹಜಂ ಕರ್ಮ ಕೌಂತೇಯ ಸದೋಷಮ್ ಅಪಿ ನ ತ್ಯಜೇತ್ ।
ಸರ್ವಾರಂಭಾಃ ಹಿ ದೋಷೇಣ ಧೂಮೇನ ಅಗ್ನಿಃ ಇವ ಆವೃತಾಃ –- ಕೌಂತೇಯ, ಸಹಜವಾದ ಕರ್ಮವನ್ನು ದೋಷವಿದ್ದರೂ ಬಿಡಬಾರದು. ಎಲ್ಲ ಕರ್ಮಗಳಲ್ಲು ದೋಷವಿದ್ದೇ ಇದೆ. ಬೆಂಕಿಯಿದ್ದಲ್ಲಿ ಹೊಗೆ ಇರುವಂತೆ.
ನಾವು ನಮ್ಮ ಸ್ವಭಾವಕ್ಕೆ ಮತ್ತು ಪರಿಸ್ಥಿತಿಗೆ ಸಹಜವಾದ ಕರ್ಮದಲ್ಲಿ ಎಷ್ಟೇ ದೋಷವಿದ್ದರೂ ಸಹ ಆ ಕರ್ಮವನ್ನು ಬಿಡಬಾರದು. ಇಲ್ಲಿ ಪಾಂಡವರ ಸಹಜ ಧರ್ಮ ಅನ್ಯಾಯದ ವಿರುದ್ಧ ಹೋರಾಡುವುದು. ಹೀಗೆ ಹೋರಾಡುವಾಗ ಸಾವು ನೋವು ಉಂಟಾಗಬಹುದು. ಆದರೆ ಅದು ಪಾಪವಲ್ಲ. ಈ ಪ್ರಪಂಚದಲ್ಲಿ ದೋಷವಿಲ್ಲದ ಒಂದು ಕರ್ಮವಿಲ್ಲ. ಬೆಂಕಿ ಇದ್ದಲ್ಲಿ ಹೊಗೆ ಇದ್ದೇ ಇರುತ್ತದೆ. ಕರ್ಮದಲ್ಲಿ ಹಿಂಸೆ ಇರಬಹುದು, ಆದರೆ ಅದು ಸಹಜ ಧರ್ಮವಾದಾಗ ಅದನ್ನು ಕೈಬಿಡಲಾಗದು. ಸಹಜ ಧರ್ಮದಲ್ಲಿ ಹಿಂಸೆ ಅನಿವಾರ್ಯವಾದಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಪಾಲಿಗೆ ಒದಗಿ ಬರುವ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ನಿಷ್ಕಾಮನಾಗಿ ಮಾಡುವುದು ಧರ್ಮ. ಇದರಿಂದ ಪಾಪ ಅಂಟದು.
ಕೇವಲ ಸ್ವಭಾವದಂತೆ ನಡೆದುಕೊಂಡಮಾತ್ರಕ್ಕೆ ಮುಕ್ತಿ ಸಿಗುವುದಿಲ್ಲ. ಅದರ ಹಿಂದೆ ಕೆಲವು ಸಾಧನೆಗಳು ಬೇಕಾಗುತ್ತದೆ. ಕೆಲವು ಅನುಸಂಧಾನಗಳು ಬೇಕಾಗುತ್ತವೆ. ಅದರ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
·  ಶ್ಲೋಕ - 49
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ೪೯॥
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನ ಅಧಿಗಚ್ಛತಿ ಎಲ್ಲೂ ಬುದ್ಧಿಯನ್ನು ಅಂಟಿಸಿಕೊಳ್ಳದೆ , ಬಗೆಯನ್ನು ಗೆದ್ದು, ಬಯಕೆ ತೊರೆದವನು ಇಂಥ ಸಂನ್ಯಾಸದಿಂದ ಮೋಕ್ಷಪ್ರದವಾದ ಹಿರಿಯ ಯೋಗ ಸಿದ್ಧಿಯನ್ನು [ಅನಿಷ್ಟ ಕರ್ಮಗಳ ನಾಶವೆಂಬ ಸಿದ್ಧಿಯನ್ನು] ಪಡೆಯುತ್ತಾನೆ.
ಮೋಕ್ಷಸಾಧನವಾಗಿರತಕ್ಕಂತಹ ಸಿದ್ಧಿಯನ್ನು[ಪಾಪಕರ್ಮಗಳು ಇಲ್ಲದ ಸ್ಥಿತಿಯನ್ನು] ತಲುಪಲು ಕೇವಲ ಸ್ವಕರ್ಮದಲ್ಲಿ ತೊಡಗಿದರೆ ಸಾಲದು, ಬದಲಿಗಿ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಿ, ಯಾವುದೇ ಫಲಾಪೇಕ್ಷೆ ಇಲ್ಲದೆ, ನನ್ನಿಂದಾಯ್ತು ಎನ್ನುವ ಅಹಂಕಾರವನ್ನು ಬಿಟ್ಟು, ಭಗವದರ್ಪಣಾ ಭಾವದಿಂದ ಕರ್ಮವನ್ನು ಮಾಡಬೇಕು. ಅಹಂಕಾರ ಅಧ್ಯಾತ್ಮದ ದೊಡ್ಡ ಶತ್ರು. ಇದರ ಎಚ್ಚರ ನಮಗಿರಬೇಕು. ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ವತ್ರನನ್ನಿಂದಾಯಿತುಎನ್ನುವ ಅಹಂಕಾರವನ್ನು ಬಿಟ್ಟು, ಮನಸ್ಸನ್ನು ಗೆದ್ದು, ಬುದ್ಧಿಯಿಂದ ಫಲಕಾಮನೆಯನ್ನು ತೊಡೆದುಹಾಕಿ, ಕಾಮನೆಗಳ ನ್ಯಾಸ ಮಾಡಿ, ಎಲ್ಲವನ್ನು ಭಗವಂತನಲ್ಲಿ ಅರ್ಪಿಸಿ ಸ್ವಕರ್ಮ ಮಾಡಿದರೆ- ಮೋಕ್ಷವನ್ನು ಸೇರಲು ಬೇಕಾದ ಸಿದ್ಧಿ ಪ್ರಾಪ್ತವಾಗುತ್ತದೆ.
·  ಶ್ಲೋಕ - 50
ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾSSಪ್ನೋತಿ ನಿಬೋಧ ಮೇ ।
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ೫೦॥
ಸಿದ್ಧಿಂ ಪ್ರಾಪ್ತಃ ಯಥಾ ಬ್ರಹ್ಮ ತಥಾ ಆಪ್ನೋತಿ ನಿಬೋಧ ಮೇ ।
ಸಮಾಸೇನ ಏವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ಕೌಂತೇಯ, ಯಾವ ಬಗೆಯ ಸಿದ್ಧಿ ಪಡೆದವನು ಬ್ರಹ್ಮತತ್ವವನ್ನು[ಶ್ರೀತತ್ವವನ್ನು]ಸೇರುತ್ತಾನೆ ಆ ಬಗೆಯನ್ನು ಕೇಳು. ಈ ಸಿದ್ಧಿ ತಿಳಿವಿನ ಕೊನೆಯ ಮಜಲು.
ಯಾವ ಪಾತಕದಿಂದಲೂ ಕಲುಷಿತವಾಗದ ಜೀವನದ ನಡೆ(ನೈಷ್ಕರ್ಮ್ಯಸಿದ್ಧಿ) ರೂಪಿತವಾದಾಗ ನಮ್ಮ ಮನಸ್ಸಿನಲ್ಲಿ ಭಗವಂತ ಬಂದು ನೆಲೆಸುತ್ತಾನೆ. ಇದರಿಂದ ತಾಯಿ ಶ್ರಿಲಕ್ಷ್ಮಿಯನ್ನು ಸೇರಿ ಕೊನೆಗೆ ಭಗವಂತನನ್ನು ಸೇರಲು ಸಾಧ್ಯ. ಯಾವ ರೀತಿ ಬ್ರಹ್ಮತತ್ವವನ್ನು ಸೇರುವುದು ಎನ್ನುವುದನ್ನು ಮುಂದೆ ಕೃಷ್ಣ ಅಡಕವಾಗಿ ಹೇಳುತ್ತಾನೆ. ನೈಷ್ಕರ್ಮ್ಯಸಿದ್ಧಿ ಎನ್ನುವುದು ಒಬ್ಬ ಮನುಷ್ಯನ ಜ್ಞಾನಸಾಧನೆಯ ಕೊನೇಯ ಮಜಲು. ಈ ಹಂತವನ್ನು ತಲುಪಬೇಕಾದರೆ ನಾವು ಅಧ್ಯಾತ್ಮದಲ್ಲಿ ಕುಂತಿಯಂತೆ ಛಲವುಳ್ಳ-ಕೌಂತೇಯರಾಗಬೇಕು.
·  ಶ್ಲೋಕ - 51
ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ ।
ಶಬ್ದಾದೀನ್ ನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ ॥೫೧॥
ಬುದ್ಧ್ಯಾ ವಿಶುದ್ಧಯಾ ಯುಕ್ತಃ ಧೃತ್ಯ ಆತ್ಮಾನಂ ನಿಯಮ್ಯ ಚ ।
ಶಬ್ದ ಆದೀನ್ ವಿಷಯಾನ್ ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ -- ತಿಳಿಯಾದ ಬುದ್ಧಿಯಿರಬೇಕು. ದಿಟ್ಟತನದಿಂದ ಬಗೆಯನ್ನು ಬಿಗಿಹಿಡಿಯಬೇಕು. ಶಬ್ದ ಮುಂತಾದ ವಿಷಯಲಾಲಸೆಯನ್ನು ತೊರೆಯಬೇಕು. ಪ್ರೀತಿ-ಹಗೆತನಗಳನ್ನು ದೂರವಿರಿಸಬೇಕು.
ಅಧ್ಯಾತ್ಮ ಸಾಧನೆಯಲ್ಲಿ ನಮ್ಮ ಮನಸ್ಸು ಯಾವತ್ತೂ ಕೂಡ ಕೆಟ್ಟದ್ದನ್ನು ಯೋಚಿಸಬಾರದು. ಶುದ್ಧವಾದ ಬುದ್ಧಿ ನಮ್ಮದಾಗಿರಬೇಕು. ಮನಸ್ಸನ್ನು ಬಹಳ ಧೈರ್ಯದಿಂದ ನಿಯಂತ್ರಿಸಿ, ಅಸಾಧಾರಣ ಸಾಹಸದಿಂದ ಎಲ್ಲ ಕೆಟ್ಟ ವಿಚಾರವನ್ನು ಮನಸ್ಸಿನಿಂದ ಹೊಡೆದೋಡಿಸಬೇಕು. ಇಂದ್ರಿಯಗಳು ಮನಸ್ಸನ್ನು ಕದಡುವ ಸಾಧನಗಳು. ಆದ್ದರಿಂದ ಕೇಳುವ, ನೋಡುವ, ಮುಟ್ಟುವ, ಮೂಸುವ ಮತ್ತು ತಿನ್ನುವ ಚಪಲವನ್ನು ಮೊದಲು ಬಿಡಬೇಕು. ಮಗುವಿನಂತೆ ರಾಗ-ದ್ವೇಷವಿಲ್ಲದೆ ನಿರ್ಮಲ ಮನಸ್ಸಿನಿಂದಿರಬೇಕು.
·  ಶ್ಲೋಕ - 52
ವಿವಿಕ್ತಸೇವೀ ಲಘ್ವಾಶೀ ಯತವಾಕ್ ಕಾಯಮಾನಸಃ ।
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥೫೨॥
ವಿವಿಕ್ತಸೇವೀ ಲಘ್ವ ಆಶೀ ಯತ ವಾಕ್ ಕಾಯ ಮಾನಸಃ ।
ಧ್ಯಾನ ಯೋಗ ಪರಃ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ---- ಏಕಾಂತದಲ್ಲಿ ನೆಲೆಸಬೇಕು. ಮಿತವಾಗಿ ಉಣ್ಣಬೇಕು. ಮಾತು-ಮೈ-ಮನಗಳಲ್ಲಿ ಹಿಡಿತವಿರಬೇಕು. ಧ್ಯಾನಯೋಗದಲ್ಲಿದ್ದು ಅನುದಿನವೂ ವೈರಾಗ್ಯ ತಳೆಯಬೇಕು.
ಹಾಳು ಹರಟೆ ನಡೆಯುವ ಜನಸಂದಣಿಯಲ್ಲಿ ಬೆರೆಯದೆ, ಆದಷ್ಟು ಏಕಾಂತದಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಧ್ಯಾತ್ಮ ಸಾಧನೆಯಲ್ಲಿ ಆದಷ್ಟು ಪವಿತ್ರವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು. ಅತಿಯಾಗಿ ತಿಂದಾಗ ಮನಸ್ಸು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ನಿಯತವಾದ ಸಮಯದಲ್ಲಿ ನಿಯತ ಆಹಾರವನ್ನು ಸೇವನೆ ಮಾಡಬೇಕು. ಮಾತಿನ ಮೇಲೆ ನಿಯಂತ್ರಣ, ದೇಹದ ಚಟುವಟಿಕೆಯ ಮೇಲೆ ನಿಯಂತ್ರಣ, ಮನಸ್ಸಿನ ಚಿಂತನೆಯಲ್ಲಿ ನಿಯಂತ್ರಣವಿದ್ದು ಧ್ಯಾನ ಮಾಡಬೇಕು. ಜೀವನದಲ್ಲಿ ಎಲ್ಲವನ್ನು ಪ್ರೀತಿಸುತ್ತ ಯಾವುದನ್ನೂ ಅಂಟಿಸಿಕೊಳ್ಳದೆ ಬದುಕಬೇಕು.
·  ಶ್ಲೋಕ - 53
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ ೫೩॥
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾಂತಃ ಬ್ರಹ್ಮಭೂಯಾಯ ಕಲ್ಪತೇ –-ನಾನೆಂಬ ಹಮ್ಮು, ಬಲಾತ್ಕಾರ, ಸೊಕ್ಕು, ಕಾಮ, ಕೋಪ ಮತ್ತು ಕೈಯೊಡ್ಡುವ ಬುದ್ಧಿ ಇವುಗಳನ್ನು ತೊರೆದು, ಮಮತೆಯಳಿದು ಭಗವಂತನಲ್ಲಿ ಬಗೆಯಿಡಬೇಕು. ಆಗ ಭಗವಂತನಲ್ಲೆ ಬಗೆ ನೆಲೆಗೊಳ್ಳುತ್ತದೆ.[ಅಂಥವನು ಶ್ರೀತತ್ವವನ್ನು ಸೇರುತ್ತಾನೆ]
ಭಗವಂತನ ಚಿಂತನೆಗೆ ವಿರುದ್ಧವಾಗಿ ನಾನು ಮಾಡಿದೆಅನ್ನುವ ಅಹಂಕಾರ, ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯ ಹೇರುವುದು, ತನ್ನ ಸ್ಥಿತಿಯ ಬಗ್ಗೆ ದರ್ಪ, ಕಾಮ-ಕ್ರೋಧ, ಇನ್ನೊಬ್ಬರ ಮುಂದೆ ಕೈಯೊಡ್ಡುವ ಬುದ್ಧಿ- ಇವೆಲ್ಲವನ್ನು ತೊರೆದು, ನಾನು-ನನ್ನದು ಎನ್ನುವ ಮಮಕಾರವನ್ನು ಬಿಟ್ಟು, ಭಗವಂತನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಬ್ರಹ್ಮತತ್ವವನ್ನು ಸೇರಬಹುದು. [ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತದೆ; ಚತುರ್ಮುಖನ ಉಪದೇಶ ಪಡೆದು- ತಾಯಿ ಲಕ್ಷ್ಮಿಯನ್ನು ಸೇರುತ್ತಾನೆ].
·  ಶ್ಲೋಕ - 54
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ
ಸಮಃ ಸರ್ವೇಷು ಭೂತೇಷು ಮದ್ ಭಕ್ತಿಂ ಲಭತೇ ಪರಾಮ್ ೫೪॥
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ
ಸಮಃ ಸರ್ವೇಷು ಭೂತೇಷು ಮತ್ ಭಕ್ತಿಂ ಲಭತೇ ಪರಾಮ್ ಭಗವಂತನಲ್ಲೆ ಬಗೆ ನೆಟ್ಟವನು [ಶ್ರೀತತ್ವದಲ್ಲಿ ನೆಲೆಗೊಂಡವನು] ಬಗೆ ತಿಳಿಗೊಂಡು ಯಾವುದಕ್ಕೂ ದುಃಖಿಸುವುದಿಲ್ಲ; ಯಾವುದನ್ನೂ ಬಯಸುವುದಿಲ್ಲ. ಎಲ್ಲ ಜೀವಿಗಳಲ್ಲು ಸಮಭಾವ ಹೊಂದಿ ನನ್ನಲ್ಲಿ ಪರಾಭಕ್ತಿಯನ್ನು ಪಡೆಯುತ್ತಾನೆ.
ಭಗವಂತನಲ್ಲಿ ಬಗೆ ನೆಟ್ಟವನಿಗೆ ಯಾವದೇ ಬೇಕು-ಬೇಡಗಳಿರುವುದಿಲ್ಲ. ಆತನ ಮನಸ್ಸು ಸ್ವಚ್ಛವಾಗಿರುತ್ತದೆ. ಈ ಸ್ಥಿತಿಯಲ್ಲಿ ಸರ್ವೋತ್ಕೃಷ್ಟ ಭಕ್ತಿ ಬೆಳೆಯುತ್ತದೆ. ಗುಣಪೂರ್ಣನಾದ ಭಗವಂತನನ್ನು ಆತ ಪ್ರಪಂಚದ ಪ್ರತೀ ವಸ್ತುವಿನಲ್ಲೂ ಕಾಣುತ್ತಾನೆ. ಇದರಿಂದಾಗಿ ಆತನಲ್ಲಿ ಯಾವುದೇ ತಾರತಮ್ಯ, ದ್ವೇಷ ಇರುವುದಿಲ್ಲ.
·  ಶ್ಲೋಕ - 55
ಭಕ್ತ್ಯಾ ಮಾಮಭಿಜಾನಾತಿ ಯಾವಾನ್ ಯಶ್ಚಾಸ್ಮಿ ತತ್ತ್ವತಃ ।
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್ ॥೫೫॥
ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಃ ಚ ಅಸ್ಮಿ ತತ್ತ್ವತಃ ।
ತತಃ ಮಾಮ್ ತತ್ತ್ವತಃ ಜ್ಞಾತ್ವಾ ವಿಶತೇ ತತ್ ಅನಂತರಮ್ ಭಕ್ತಿಯಿಂದ ನಾನುಏನು ಎಂತು ಎನ್ನುವುದನ್ನು ಸರಿಯಾಗಿ ಅರಿಯಬಲ್ಲವನಾಗುತ್ತಾನೆ. ಅಂಥ ಪರಾಭಕ್ತಿಯಿಂದ ನನ್ನನ್ನು ಸರಿಯಾಗಿ ಅರಿತ ಅನಂತರ ನನ್ನನ್ನೆ ಸೇರುತ್ತಾನೆ.
ಇಂತಹ ಭಕ್ತಿಯ ಉತ್ಕೃಷ್ಟ ಸ್ಥಿತಿಯಲ್ಲಿರುವವನಿಗೆ ಯಾವುದೇ ತಪ್ಪು ತಿಳುವಳಿಕೆ ಇರುವುದಿಲ್ಲ. ಲಕ್ಷ್ಮಿಯ ಸನ್ನಿಧಾನದಿಂದ ಭಗವಂತ ಅಂದರೇನು, ಅವನ ಮಹಿಮೆ ಏನು, ಅವನ ಶಕ್ತಿ ಏನು, ಅವನ ಅನಂತ ಗುಣಗಳ ಹರವು ಏನು- ಎನ್ನುವುದು ಯಥಾವತ್ತಾಗಿ ಜೀವಯೋಗ್ಯತೆಯ ಪೂರ್ಣ ಪ್ರಮಾಣದಲ್ಲಿ ಅರಿಯುತ್ತಾನೆ. ಈ ರೀತಿ ತತ್ತ್ವತಃ ಭಗವಂತನನ್ನು ಯಥಾವತ್ತಾಗಿ ತಿಳಿದ ಮೇಲೆ ಅತ್ಯಂತ ಪರಿಶುದ್ಧ ಜ್ಞಾನ ಮತ್ತು ಭಕ್ತಿಯಿಂದ ನನ್ನನ್ನು ಬಂದು ಸೇರುತ್ತಾನೆಎನ್ನುತ್ತಾನೆ ಕೃಷ್ಣ.
·  ಶ್ಲೋಕ - 56
ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ ವ್ಯಪಾಶ್ರಯಃ
ಮತ್ ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ೫೬॥
ಸರ್ವ ಕರ್ಮಾಣಿ ಅಪಿ ಸದಾ ಕುರ್ವಾಣಃ ಮತ್ ವ್ಯಪಾಶ್ರಯಃ
ಮತ್ ಪ್ರಸಾದಾತ್ ಅವಾಪ್ನೋತಿ ಶಾಶ್ವತಮ್ ಪದಮ್ ಅವ್ಯಯಮ್ – 'ನಾನೆ' ಸರ್ವಸ್ವ ಎಂದು ತಿಳಿದು ಎಲ್ಲ ಕರ್ಮಗಳನ್ನು ನಿರಂತರ ಮಾಡುತ್ತಿರುವವನು ನನ್ನ ಹಸಾದದಿಂದ, ಅಳಿವಿರದ ಬದಲಾಗದ ತಾಣವನ್ನು ಸೇರುತ್ತಾನೆ.
ಭಗವಂತನೇ ಸರ್ವಸ್ವ ಎಂದು ತಿಳಿದು; ಯಾವುದೇ ಕರ್ಮ ಮಾಡಿದರೂ ಆ ಕರ್ಮದ ಗುರಿ ಭಗವಂತನನ್ನಾಗಿರಿಸಿಕೊಂಡು; ಪೂರ್ಣ ಭಗವದರ್ಪಣಾ ಬುದ್ಧಿಯಿಂದ ಕರ್ಮ ಮಾಡುವವರು, ಭಗವಂತನ ಅನುಗ್ರಹದಿಂದ ಎಂದೂ ಏರುಪೇರಿಲ್ಲದ ಮೋಕ್ಷವನ್ನು ಸೇರುತ್ತಾರೆ.
·  ಶ್ಲೋಕ - 57
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಃ ।
ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ೫೭॥
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಃ ।
ಬುದ್ಧಿಯೋಗಮ್ ಉಪಾಶ್ರಿತ್ಯ ಮತ್ ಚಿತ್ತಃ ಸತತಮ್ ಭವ ಒಳಬಗೆಯಿಂದ ಎಲ್ಲ ಕರ್ಮಗಳನ್ನು ನನಗೊಪ್ಪಿಸಿ, ನನ್ನನ್ನೆ ಪರತತ್ವವೆಂದು ತಿಳಿದು, ಜ್ಞಾನಯೋಗದ ದಾರಿ ಹಿಡಿದು ನಿರಂತರ ನನ್ನಲ್ಲೆ ಒಳಬಗೆಯನ್ನಿಡು.
ಇಲ್ಲಿ ಕೃಷ್ಣ ಹೇಳುತ್ತಾನೆ: ನನ್ನನ್ನು ತಿಳಿದು, ಎಲ್ಲ ಕರ್ಮವನ್ನು ನನ್ನಲ್ಲಿ ಅರ್ಪಿಸಿ, ಜ್ಞಾನಯೋಗದಿಂದ ಮನಸ್ಸನ್ನು ನಿರಂತರ ನನ್ನಲ್ಲಿರಿಸುಎಂದು . ಇಲ್ಲಿ ನಾವು ಮಾಡುವ ಎಲ್ಲ ಕರ್ಮವನ್ನು ಭಗವತನಿಗೆ ಅರ್ಪಿಸಿ ಮಾಡಬೇಕು ಎನ್ನುವುದು ಬಹಳ ಮುಖ್ಯವಾದ ವಿಷಯ. ಇಂದು ಈ ರೀತಿಯ ಕರ್ಮ ಸಾಧನೆ ಇಲ್ಲವಾಗಿದೆ. ಇದಕ್ಕೆ ಮೂಲ ಕಾರಣ ಅಜ್ಞಾನ. ನಾವು ಪೂಜೆ ಮಾಡುವುದು ಯಾವುದೋ ಫಲದ ಅಪೇಕ್ಷೆಯಿಂದ. ಕೆಲವೊಮ್ಮೆ ಜ್ಯೋತಿಷಿಗಳು ಯಾವುದೋ ಗ್ರಹ ದೋಷವಿದೆ ಎಂದು ಹೇಳುತ್ತಾರೆ. ಉದಾಹರಣೆಗೆ: ಕುಜದೋಷ. ಸಾಮಾನ್ಯವಾಗಿ ಜ್ಯೋತಿಷಿಗಳು ಕುಜದೋಷ ಎಂದು ಹೇಳಿದಾಗ ನಮಗೆ ಮೊದಲು ಕಾಣುವುದು ಈ ಗ್ರಹ ನಮಗೆ ತೊಂದರೆ ಕೊಡುತ್ತಿದೆಎಂದು. ವಸ್ತುತಃ ಕುಜದೋಷ ಎಂದರೆ ಕುಜನ ದೋಷವಲ್ಲ. ಅದು ನಮ್ಮ ದೋಷ. ನಮ್ಮ ಪ್ರಾರಾಬ್ಧಕರ್ಮ. ಅದನ್ನು ಈ ಗ್ರಹ ಸೂಚಿಸುತ್ತದೆ ಅಷ್ಟೆ. ಅದನ್ನು ನಾವು ತಪ್ಪಾಗಿ ಕುಜನೇ ನನ್ನ ಬೆನ್ನ ಹಿಂದೆ ಬಿದ್ದಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ. ಗ್ರಹಗಳಿರುವುದು ನಮಗೆ ಕಾಟ ಕೊಡಲಿಕ್ಕಾಗಿ ಅಲ್ಲ. ಅವರು ಎಂದೂ ಕಾಟ ಕೊಡುವುದಿಲ್ಲ. ಬದಲಿಗೆ ನಮಗೆ ನಮ್ಮ ಪ್ರರಾಬ್ಧದಿಂದ ಬರತಕ್ಕ ಕಾಟವನ್ನು ಅವರು ಸೂಚಿಸುತ್ತಾರೆ. ನಮಗೆ ಕಷ್ಟಬರುವ ಸಾಧ್ಯತೆಯನ್ನು ನಮಗೆ ಮುಂದಾಗಿ ತಿಳಿಸಿ, ನಾವು ಆ ಅನಿಷ್ಟವನ್ನು ಎದುರಿಸಲು ಮಾನಸಿಕ ಸಿದ್ಧತೆ ನಡೆಸುವಂತೆ ಮಾಡುವುದು ಗ್ರಹಗಳ ಕರ್ತವ್ಯ. ಹೀಗೆ ಪ್ರಾರಾಬ್ಧಕರ್ಮ ಇದೆ ಎಂದು ಗೊತ್ತಾದಾಗ, ಆ ಸಮಸ್ಯೆಯನ್ನು ಎದುರಿಸಿ, ಸಾಧನಾ ಮಾರ್ಗದಲ್ಲಿ ಮುಂದೆ ಸಾಗುವುದಕ್ಕೆ ಭಗವಂತನಲ್ಲಿ ಮೊರೆ ಹೋಗುವುದು ಪ್ರಾಯಶ್ಚಿತ ಪೂಜೆ ಹೊರತು-ಇದು ಗ್ರಹಗಳಿಗೆ ಕೊಡುವ ಲಂಚವಲ್ಲ. ಉದಾಹರಣೆಗೆ ನವಗ್ರಹ ಪೂಜೆ. ನಮ್ಮ ಪ್ರಾರಾಬ್ಧಕರ್ಮವನ್ನು ಗ್ರಹಗಳು ಸೂಚಿಸಿರುವುದರಿಂದ, ಆ ಗ್ರಹಗಳ ಅಂತರ್ಯಾಮಿಯಾಗಿರುವ ಭಗವಂತನನ್ನು ಪ್ರಾರ್ಥಿಸುವುದು ನವಗ್ರಹಪೂಜೆ.
ನಾರಾಯಣನ ಭಕ್ತನನ್ನೂ ಪ್ರಾರಾಬ್ಧಕರ್ಮ ಬಿಡುವುದಿಲ್ಲ. ನಮ್ಮ ಪ್ರಾರಾಬ್ಧಕ್ಕೆ ತಕ್ಕಂತೆ ನಾವು ನಮ್ಮ ಗ್ರಹಚಾರವನ್ನು ಅನುಭವಿಸಲೇಬೇಕು. ಜ್ಞಾನಿಗಳಿಗೂ ಕೂಡ ಕಷ್ಟ ಬರುತ್ತದೆ. ಆ ದುಃಖವನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿಲ್ಲದಾಗ ಭಗವಂತನನ್ನು ಪ್ರಾರ್ಥಿಸುವುದು ತಪ್ಪಲ್ಲ. ಇಲ್ಲಿ ಒಂದು ಬಹಳ ಮುಖ್ಯ ವಿಷಯ ಏನೆಂದರೆ ಫಲಾಪೇಕ್ಷೆ ಇಲ್ಲದೆ ಪರಮಾತ್ಮನಲ್ಲಿ ಪ್ರಾರ್ಥನೆ. ನಾನು ನನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವಾಗಿ ಇಂದು ಈ ಅನಿಷ್ಟವನ್ನು ಪಡೆದಿದ್ದೇನೆ. ನನ್ನ ಮುಂದಿರುವ ಈ ಗ್ರಹಚಾರವನ್ನು ನೀನು ಗ್ರಹಗಳ ಅಂತರ್ಯಾಮಿಯಾಗಿ ನಿಂತು ನನಗೆ ತೋರಿಸಿದ್ದೀಯ. ನಿನಗೆ ನನ್ನ ಕೋಟಿ-ಕೋಟಿ ನಮನ. ನನಗರಿವಿಲ್ಲದೆ ನಾನು ಮಾಡಿದ ತಪ್ಪನ್ನು ಮನ್ನಿಸಿ, ನಾನು ಈ ಅನಿಷ್ಟವನ್ನು ಎದುರಿಸಿ ಜ್ಞಾನ ಮಾರ್ಗದಲ್ಲಿ ಮುನ್ನೆಡೆದು ನಿನ್ನನ್ನು ಸೇರಲು ನನಗೆ ದಾರಿ ತೋರಿಸು; ನನ್ನೊಳಗಿರುವ ನೀನು ನಿನ್ನ ಪೂಜೆಯನ್ನು ನನ್ನನ್ನು ಮಾಧ್ಯಮವಾಗಿ ಬಳಸಿ ಮಾಡಿಸಿಕೊ; ನಾನು ನಿನ್ನಲ್ಲಿ ಶರಣಾಗಿದ್ದೇನೆಎನ್ನುವ ಅನುಸಂಧಾನ ಈ ಪೂಜೆಯ ಹಿಂದಿರಬೇಕು. ಹೀಗೆ ಭಗವಂತ ಸರ್ವಶ್ರೇಷ್ಠ ಎನ್ನುವ ಎಚ್ಚರದಿಂದ, ಎಲ್ಲ ದೇವತೆಗಳ ಆರಾಧನೆ ಮಾಡುವಾಗಲೂ ಸಹ- ಅವರ ಅಂತರ್ಯಾಮಿಯಾಗಿರತಕ್ಕಂತಹ ಭಗವಂತನನ್ನು ತಿಳಿದು, ಕರ್ಮವನ್ನು ಮಾನಸಿಕವಾಗಿ ಭಗವಂತನಲ್ಲಿ ಅರ್ಪಿಸಬೇಕು. ಇದು ನಿಜವಾಗಿ ಮಾಡಬೇಕಾದ ಕರ್ಮದ ವಿಧಾನ.
ಒಟ್ಟಿನಲ್ಲಿ ಹೇಳಬೇಕೆಂದರೆ: ನಾವು ನಮ್ಮ ಮನಸ್ಸು ಬೇರೆಕಡೆ ಹೋಗದಂತೆ ತಡೆದು ಅದನ್ನು ಭಗವಂತನಲ್ಲಿ ನೆಲೆಗೊಳಿಸಬೇಕು; ನಾವು ಮಾಡುವ ಎಲ್ಲ ಕರ್ಮಗಳೂ ಭಗವಂತನ ಪೂಜಾರೂಪವಾಗಿದ್ದು, ಅದನ್ನು ಭಗವಂತ ನಮ್ಮ ಕೈಯಿಂದ ಮಾಡಿಸುತ್ತಿದ್ದಾನೆ ಎನ್ನುವ ಎಚ್ಚರ ನಮ್ಮ ಮನಸ್ಸಿನಲ್ಲಿ ನೆಲೆಗೊಳ್ಳಬೇಕು. ನಮ್ಮ ಅನುಷ್ಠಾನ, ಅನುಸಂಧಾನ ಆನಂದಮಯವಾಗಿರಬೇಕು. ಅಲ್ಲಿ ಯಾವುದೇ ಒತ್ತಡ, ಭಯ, ಫಲಾಪೇಕ್ಷೆ ಇರಕೂಡದು.
·  ಶ್ಲೋಕ - 58
ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್ ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ ವಿವಿನಂಕ್ಷ್ಯಸಿ ೫೮॥
ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್ ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ ವಿವಿನಂಕ್ಷ್ಯಸಿ ನನ್ನಲ್ಲೆ ಒಳಬಗೆಯಿಟ್ಟಾಗ, ನನ್ನ ಹಸಾದದಿಂದ ಎಲ್ಲ ಕೋಟಲೆಗಳನ್ನು ದಾಟುವೆ. ಒಂದೊಮ್ಮೆ ಹೆಮ್ಮೆಯಿಂದ ಕಿವಿಗೊಡದಿದ್ದರೆ ಕೆಟ್ಟುಹೋಗುವೆ.
ಮನಸ್ಸನ್ನು ಭಗವಂತನತ್ತ ಹರಿಸಿ, ಬುದ್ಧಿಯಲ್ಲಿ ಭಗವಂತನನ್ನು ನೆಟ್ಟು, ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ, ಸುಪ್ತಪ್ರಜ್ಞೆಯಲ್ಲಿ ಕೂಡ ಭಗವಂತನ ಸ್ಮರಣೆ ಶಾಶ್ವತಗೊಳಿಸಿದಾಗ, ನಮ್ಮ ಎಲ್ಲ ಕ್ರಿಯೆಗಳೂ ಭಗವಂತನ ಪೂಜೆಯಾಗುತ್ತದೆ. ಇದರಿಂದ ನಮ್ಮ ಎಲ್ಲ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ ಹಾಗು ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ, ಕಾರ್ಪಣ್ಯಗಳನ್ನು ಎದುರಿಸುವ ಕ್ಷಮತೆ ಬರುತ್ತದೆ. ಹೀಗೆ ಜ್ಞಾನಿ ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲ ಆಪತ್ತುಗಳನ್ನು ನಿರಾಯಾಸವಾಗಿ ದಾಟಿ ಮುನ್ನೆಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿ ಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು ಬಿಟ್ಟು ವೇದಾಂತ ಕೇವಲ ಬೊಗಳೆ, ಅದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ ಕೈಯಾರೆ ನಾವು ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ.
·  ಶ್ಲೋಕ - 59
ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ ।
ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ೫೯॥
ಯತ್ ಅಹಂಕಾರಮ್ ಆಶ್ರಿತ್ಯ ನ ಯೋತ್ಸ್ಯೇ ಇತಿ ಮನ್ಯಸೇ ।
ಮಿಥ್ಯಾ ಏಷಃ ವ್ಯವಸಾಯಃ ತೇ ಪ್ರಕೃತಿಃ ತ್ವಾಮ್ ನಿಯೋಕ್ಷ್ಯತಿ ಅಹಂಕಾರದಿಂದ ಬೀಗಿ ನಾನು ಹೋರಾಡುವುದಿಲ್ಲಎಂದು ತಿಳಿದಿರುವೆಯಾದರೆ ನಿನ್ನ ಈ ನಿರ್ಧಾರ ಹುಸಿಯಾದದ್ದು. ನಿನ್ನ ಸ್ವಭಾವ [ಭಗವಂತನ ಇಚ್ಛೆ] ನಿನ್ನನ್ನು ಹೊರಾಡಿಸುತ್ತದೆ.
ನಾನು ಯುದ್ಧ ಮಾಡುವುದಿಲ್ಲಎಂದು ಅರ್ಜುನ ರಥದಲ್ಲಿ ಕುಸಿದು ಕುಳಿತಿದ್ದನ್ನು ನಾವು ಅಧ್ಯಾಯ ಒಂದರಲ್ಲಿ ನೋಡಿದ್ದೇವೆ. ಇಲ್ಲಿ ಕೃಷ್ಣ ಹೇಳುತ್ತಾನೆ “ ‘ನಾನು ಯುದ್ಧ ಮಾಡುವುದಿಲ್ಲಎನ್ನುವುದು ನಿನ್ನ ಅಹಂಕಾರಭರಿತ ಭ್ರಮೆ. ನೀನು ಏನನ್ನು ಮಾಡುವುದಿಲ್ಲ ಎಂದು ಹೇಳಿರುವೆಯೋ ಅದನ್ನೇ ಮಾಡುತ್ತೀಯಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿ ನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನು ನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ ನಡೆಯುತ್ತದೆ.
·  ಶ್ಲೋಕ - 60
ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋSಪಿ ತತ್ ೬೦॥
ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನ ಇಚ್ಛಸಿ ಯತ್ ಮೋಹಾತ್ ಕರಿಷ್ಯಸಿ ಅವಶಃ ಅಪಿ ತತ್ ಕೌಂತೇಯ, ಸ್ವಭಾವ ಸಹಜವಾದ ನಿನ್ನ ಕರ್ಮದಿಂದ ನೀನು ಸುತ್ತುವರಿದಿರುವೆ. ಅಜ್ಞಾನದಿಂದಾಗಿ ಯಾವುದನ್ನು ಮಾಡಬಾರದು ಎಂದೆಣಿಸಿರುವೆ ಅದನ್ನು ನೀನು ನಿನಗರಿವಿಲ್ಲದಂತೆಯೆ[ಭಗವದಿಚ್ಛೆಗೆ ವಶನಾಗಿ] ಮಾಡುವೆ.
ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ. ಈ ರೀತಿ ಯಾವ ಯೋಚನೆ ಮಾಡಿದರೂ ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ. ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಚೆಯಂತೆ ನಡೆಯುತ್ತದೆ.
·  ಶ್ಲೋಕ - 61
ಈಶ್ವರಃ ಸರ್ವಭೂತಾನಾಂ ಹೃದ್ದೇಶೇSರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ೬೧॥
ಈಶ್ವರಃ ಸರ್ವಭೂತಾನಾಂ ಹೃತ್ ದೇಶೇ ಅರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರ ಆರೂಢಾನಿ ಮಾಯಯಾ ಅರ್ಜುನ, ಎಲ್ಲ ಜೀವಿಗಳ ಎದೆಯ ತಾಣದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ ಸುತ್ತುವ ಜಗದ್ ಯಂತ್ರದಲ್ಲಿ ಕೂತ ಎಲ್ಲ ಜೀವಿಗಳನ್ನೂ ಪ್ರಕೃತಿಯ ಮಾಯೆಯಿಂದ [ತನ್ನ ಇಚ್ಛೆಯಿಂದ]ತಿರುಗಾಡಿಸುತ್ತ.
ಎಲ್ಲ ಜೀವರ ಹೃತ್ಕಮಲದ ಮಧ್ಯದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ ಒಡೆಯ. ಎಲ್ಲರೊಳಗಿದ್ದು ಅವರಿಗೆ ಅನುಭವವನ್ನು ಕೊಟ್ಟು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ. ಸರ್ವ ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಛೆಯಂತೆ ನಡೆಯುತ್ತದೆ.
·  ಶ್ಲೋಕ - 62
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ
ತತ್ ಪ್ರಸಾದಾತ್ ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ೬೨॥
ತಮ್ ಏವ ಶರಣಂ ಗಚ್ಛ ಸರ್ವಭಾವೇನ ಭಾರತ
ತತ್ ಪ್ರಸಾದಾತ್ ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ಭಾರತ, ಎಲ್ಲ ಬಗೆಯಿಂದಲೂ ಅವನಿಗೇ ಶರಣಾಗು. ಅವನ ಕರುಣೆಯಿಂದ ಹಿರಿದಾದ ಸುಖವನ್ನು, ಅಳಿವಿರದ ತಾಣವನ್ನು ಪಡೆಯುವೆ.
ಸರ್ವಸಮರ್ಥನಾದ ಭಗವಂತನಿಗೆ ನಾವು ನಮ್ಮನ್ನು ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು.[ಕೇವಲ ಕಷ್ಟ ಕಾಲದಲ್ಲಿ ಮಾತ್ರವಲ್ಲ]. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು, ಕತ್ತಲೆಯನ್ನು ದೂರಮಾಡಿ, ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ-ನಮಗೆ ನಿಜವಾದ ಪೂರ್ಣ ಸತ್ವದ ದರ್ಶನವಾಗುತ್ತದೆ. ಆ ಭಗವಂತ ಕಣ್ಣು ತೆರೆದು ಅನುಗ್ರಹ ಮಾಡಿದನೆಂದರೆ ನಂತರ ತಿಳಿವು ಬರಲು ಇತರ ಯಾವ ಸಾಧನವೂ ಬೇಡ. ಸತ್ಯ ತನ್ನಷ್ಟಕ್ಕೆ ತಾನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕೃಷ್ಟ ಆನಂದ ನಮ್ಮದಾಗುತ್ತದೆ. ಇದರಿಂದ ಜ್ಞಾನಾನಂದದ ತುತ್ತ ತುದಿಯಾದ ಮೋಕ್ಷವನ್ನು ಸೇರಬಹುದು.
·  ಶ್ಲೋಕ - 63
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯತರಂ ಮಯಾ ।
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ೬೩॥
ಇತಿ ತೇ ಜ್ಞಾನಮ್ ಆಖ್ಯಾತಂ ಗುಹ್ಯಾತ್ ಗುಹ್ಯತರಂ ಮಯಾ
ವಿಮೃಶ್ಯ ಏತತ್ ಅಶೇಷೇಣ ಯಥಾ ಇಚ್ಛಸಿ ತಥಾ ಕುರು -- ತುಂಬ ಜತನದಿಂದ ಬಚ್ಚಿಡಬೇಕಾದ ಈ ತಿಳಿವನ್ನು ನಾನು ನಿನ್ನೆದುರು ಬಿಚ್ಚಿಟ್ಟೆ. ಇದನ್ನೆಲ್ಲ ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ ಮಾಡು.
ಕೃಷ್ಣ ಹದಿನೈದನೇ ಅಧ್ಯಾಯದಲ್ಲಿ ಜ್ಞಾನದ ಉಪಸಂಹಾರ ಮಾಡಿದ್ದ. ಇಲ್ಲಿ ಉಪಾಸನೆಯ ಎಲ್ಲ ಅರಿವನ್ನು ಕೊಟ್ಟ ನಂತರ ಅದರ ಉಪಸಂಹಾರ ಮಾಡುತ್ತ ಹೇಳುತ್ತಾನೆ: ಇದು ಪ್ರಪಂಚದಲ್ಲಿನ ರಹಸ್ಯಗಳಲ್ಲಿ ರಹಸ್ಯ. ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದೆ. ನಾನು ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಮನವರಿಕೆಯಾದಂತೆ ಮಾಡುಎಂದು. ಇಲ್ಲಿ 'ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೊ ಹಾಗೆ ಮಾಡು' ಎಂದು ಅರ್ಜುನನಿಗೆ ಹೇಳುವ ಮೂಲಕ-ನಾವು ಇನ್ನೊಬ್ಬರ ಮೇಲೆ ನಮ್ಮ ಅಭಿಪ್ರಾಯ ಹೇರಬಾರದು ಎನ್ನುವ ಸಮಾಜನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ.
·  ಶ್ಲೋಕ - 64
ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟೋSಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ೬೪॥
ಸರ್ವ ಗುಹ್ಯ ತಮಮ್ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟಃ ಅಸಿ ಮೇ ದೃಢಮ್ ಇತಿ ತತಃ ವಕ್ಷ್ಯಾಮಿ ತೇ ಹಿತಮ್ ಎಲ್ಲಕ್ಕಿಂತ ಹೆಚ್ಚು ಬಚ್ಚಿಡಬೇಕಾದ ನನ್ನೀ ಹಿರಿಯ ಮಾತನ್ನು ಇನ್ನೊಮ್ಮೆ ಆಲಿಸು. ನೀನು ನನಗೆ ತುಂಬ ಮೆಚ್ಚಿನವನೆಂದು, ಅದಕ್ಕಾಗಿ ನಿನಗೆ ಹಿತವಾದ ಹೇಳುತ್ತಿದ್ದೇನೆ:
ಹಿಂದೆ ಹೇಳಿದ ಸಾಧನೆಯ ಸಾರವನ್ನು, ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು, ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ- ಕೇಳು:
·  ಶ್ಲೋಕ - 65
ಮನ್ಮನಾ ಭವ ಮದ್ ಭಕ್ತೋ ಮದ್ ಯಾಜೀ ಮಾಂ ನಮಸ್ಕುರು
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋSಸಿ ಮೇ ೬೫॥
ಮತ್ ಮನಾಃ ಭವ ಮತ್ ಭಕ್ತಃ ಮತ್ ಯಾಜೀ ಮಾಂ ನಮಸ್ಕುರು
ಮಾಮ್ ಏವ ಏಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯಃ ಅಸಿ ಮೇ -- ನನ್ನಲ್ಲೆ ಬಗೆಯಿಡು. ನನ್ನಲ್ಲೆ ಭಕ್ತಿಯಿಡು. ನನ್ನನ್ನೆ ಪೂಜಿಸು. ನನಗೇ ಪೊಡಮಡು. ಆಗ ನನ್ನನ್ನೆ ಸೇರುವೆ. ನೀನು ನನಗೆ ಮೆಚ್ಚಿನವ. ನಿನ್ನಾಣೆಗೂ ಇದು ನಿಜ.
ಸಾಧನೆಯ ಸಾರವನ್ನು ವಿವರಿಸುತ್ತ ಕೃಷ್ಣ ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು, ಸಾಧನೆಯ ಸಾರಸಂಗ್ರಹವನ್ನು ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ. ಕೃಷ್ಣ ಹೇಳುತ್ತಾನೆ: ನನ್ನಲ್ಲೇ ಮನಸ್ಸನ್ನಿಡುಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ಭಗವಂತನಲ್ಲಿ ಶುದ್ಧವಾದ ಪ್ರೀತಿ ಇರಲಿ”. ನಾವು ಮಾಡುವ ಎಲ್ಲ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿಎನ್ನುವ ಸತ್ಯವನ್ನು ತಿಳಿದು ಸರ್ವಾಂತರ್ಯಾಮಿ ಭಗವಂತನನ್ನು ಪೂಜಿಸು. ಈ ರೀತಿ ಎಲ್ಲ ಉಪಾಸನೆಯಲ್ಲಿ ಭಗವಂತನನ್ನು ಕಂಡರೆ "ನನ್ನನ್ನೇ ಬಂದು ಸೇರುತ್ತೀಯ ಇದು ನಿನ್ನಾಣೆಗೂ ಸತ್ಯ" ಎನ್ನುತ್ತಾನೆ ಕೃಷ್ಣ.
·  ಶ್ಲೋಕ - 66
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥೬೬॥
ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ ಶರಣಂ ವ್ರಜ ।
ಅಹಂ ತ್ವಾಮ್ ಸರ್ವ ಪಾಪೇಭ್ಯಃ ಮೋಕ್ಷಯಿಷ್ಯಾಮಿ ಮಾ ಶುಚಃ -- ಎಲ್ಲ ಬಿನುಗು ಧರ್ಮಗಳನ್ನೂ ಫಲದ ಹಂಬಲಗಳನ್ನೂ ತೊರೆದು ನನಗೊಬ್ಬನಿಗೇ ಶರಣಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಪಾರುಗಾಣಿಸುತ್ತೇನೆ. ಕೊರಗದಿರು.
ಸರ್ವಧರ್ಮಾನ್ ಪರಿತ್ಯಜ್ಯಎಂದರೆ ಎಲ್ಲ ಪುಣ್ಯಕರ್ಮಗಳನ್ನು ಮಾಡಿ ಅದರಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಹೇಳುತ್ತಾಳೆ: ಧರ್ಮೋ ರಕ್ಷತಿ ರಕ್ಷಿತಃ - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವುದನ್ನು ಕೇಳಿದ್ದೇನೆ, ಅದು ನಿನ್ನನ್ನು ಏಕೆ ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು? ” ಎಂದು. ಅದಕ್ಕೆ ಧರ್ಮರಾಯ ಕೊಡುವ ಉತ್ತರ ರೋಚಕ. ಆತ ಹೇಳುತ್ತಾನೆ: ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿ ಹೊರತು ಯಾವುದೋ ಫಲಾಪೇಕ್ಷೆಯಿಂದಲ್ಲಎಂದು. ಹೀಗೆ ಯಾವುದೇ ಧರ್ಮವಿದ್ದರೂ ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ. ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ.

ಇಲ್ಲಿಗೆ ಗೀತೆಯಲ್ಲಿ ಭಗವಂತನ ಉಪದೇಶದ ಭಾಗ ಮುಗಿಯಿತು. ಈ ಅಧ್ಯಾಯದ ಮುಂದಿನ ಶ್ಲೋಕಗಳಲ್ಲಿ ಗೀತೆಯ ಫಲಶ್ರುತಿಯನ್ನು ಕಾಣಬಹುದು.

3 ಕಾಮೆಂಟ್‌ಗಳು:

RAVIKUMAR ಹೇಳಿದರು...

ನಿಮ್ಮ ಗೀತೆಯ ಈ ಸಂಕಲನದಿಂದ ಬಹಳ ಉಪಕಾರವಾಯಿತು. ತುಂಬಾ ಧನ್ಯವಾದಗಳು.

RAVIKUMAR ಹೇಳಿದರು...

ನಿಮ್ಮ ಗೀತೆಯ ಈ ಸಂಕಲನದಿಂದ ಬಹಳ ಉಪಕಾರವಾಯಿತು. ತುಂಬಾ ಧನ್ಯವಾದಗಳು.

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.