ಭಗವದ್ಗೀತೆ ಅಧ್ಯಾಯ-11 (ಶ್ಲೋಕ 1 ರಿಂದ 20)



ಭಗವದ್ಗೀತೆ  ಅಧ್ಯಾಯ-11 (ಶ್ಲೋಕ 1 ರಿಂದ 20)
·  ಶ್ಲೋಕ - 01
ಈ ಅಧ್ಯಾಯ ಭಗವಂತನ ಉಪಾಸನೆ ಮಾಡುವಾಗ ಆತನನ್ನು ಹೇಗೆ ಚಿಂತನೆ ಮಾಡಬೇಕು ಎಂದು ಹೇಳುವ ಅಧ್ಯಾಯ. ಇದು ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ. ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ.
ಭಗವಂತನ ಸರ್ವಗತವಾದ ವಿಶ್ವರೂಪವನ್ನು ಎಲ್ಲರೂ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲ ಕಡೆ ತುಂಬಿರುವ ಭಗವಂತನ ಕಿಂಚಿತ್ ದರ್ಶನ ಪ್ರತಿಯೊಬ್ಬರೂ ಧ್ಯಾನ ಯೋಗದಲ್ಲಿ ಪಡೆಯಲು ಸಾಧ್ಯವಿದೆ. ಹೇಗೆ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನೋ ಹಾಗೆ ನಮಗೆ ಧ್ಯಾನದಲ್ಲಿ ಕೂಡ ತನ್ನ ರೂಪವನ್ನು ಆತನೇ ತೋರಿಸಬೇಕು. ಇದು ಹೊರಪ್ರಪಂಚದಲ್ಲಿ ಕಾಣುವ ರೂಪವಲ್ಲ. ನಾವು ನಮ್ಮ ಒಳಗಣ್ಣನ್ನು ತೆರೆದು ಕುಳಿತು ಧ್ಯಾನ ಮಾಡಬೇಕು, ಭಗವಂತನಲ್ಲಿ ಶರಣಾಗಬೇಕು. ಕಾತರತೆಯಿಂದ ಕರೆದಾಗ ಒಳಗಿನಿಂದ ಏನು ಅನುಭೂತಿ ಬರುತ್ತದೆ ಅದು ಲೌಕಿಕ ಅನುಭೂತಿಯನ್ನು ಮೀರಿದ ವಿಚಾರ.
ಈ ಅಧ್ಯಾಯದಲ್ಲಿ ಭಗವಂತನ ಮಾತು ಕಡಿಮೆ. ಇಲ್ಲಿ ಕೃಷ್ಣನ ವಿಶ್ವರೂಪವನ್ನು ಕಂಡವರ ಮಾತಿದೆ. ಅವರು ಕಂಡ ರೀತಿಯನ್ನು ಕೇಳಿ ನಾವು ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇದು ನಮ್ಮ ಅಂತರಂಗದ ಅಧ್ಯಾತ್ಮದ ಸಾಕ್ಷಾತ್ಕಾರಕ್ಕೆ ಪೂರಕವಾದ, ಧ್ಯಾನದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಬಹಳ ಮಹತ್ವದ ಅಧ್ಯಾಯ. ಬನ್ನಿ, ವ್ಯಾಸರು ದಾಖಲಿಸಿದ ಭಗವಂತನ ಅಪೂರ್ವ ವಿಶ್ವರೂಪ ವರ್ಣನೆಯನ್ನು ಕೇಳಿ ಧನ್ಯರಾಗೋಣ.
ಅಧ್ಯಾಯಕ್ಕೆ ಪ್ರವೇಶಿಸುವ ಮುನ್ನ ನಾವು ಒಂದು ವಿಚಾರವನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ತಿಳುವಳಿಕೆ ಇದೆ. ಅರ್ಜುನನಿಗೆ ಭಗವಂತನ ಸಂದೇಶವನ್ನು ಮನವರಿಕೆ ಮಾಡಿಸಲು ಕೃಷ್ಣ ತನ್ನ ವಿಶ್ವರೂಪ ದರ್ಶನ ಮಾಡಿಸಬೇಕಾಯಿತುಎಂದು. ಸ್ವತಃ ಶ್ರೀಕೃಷ್ಣನಿಂದಲೇ ಉಪದೇಶ ಪಡೆದರೂ ಸಹ ಅರ್ಜುನನಿಗೆ ಮನವರಿಕೆ ಆಗಲಿಲ್ಲ, ಇನ್ನು ನಮ್ಮ ಪಾಡೇನು? ನಮಗೆ ಯಾರು ವಿಶ್ವರೂಪ ದರ್ಶನ ಮಾಡಿಸುತ್ತಾರೆ”-ಎಂದು ಯೋಚಿಸುವವರಿದ್ದಾರೆ. ಆದರೆ ಇದು ನಮ್ಮ ತಪ್ಪು ತಿಳುವಳಿಕೆ. ಅರ್ಜುನನಿಗೆ ಭಗವಂತನ ಸಂದೇಶ ಪೂರ್ಣ ಮನವರಿಕೆ ಆಗಿತ್ತು. ಈ ವಿಚಾರ ಈ ಅಧ್ಯಾಯದ ಮೊದಲ ಶ್ಲೋಕದಲ್ಲೇ ತಿಳಿಯುತ್ತದೆ. ಅರ್ಜುನ ಹೇಳುತ್ತಾನೆ ಮೋಹೋಯಂ ವಿಗತೋ ಮಮ”- ‘ನಿನ್ನ ಮಹಿಮೆ ತಿಳಿದು ನನ್ನ ಎಲ್ಲ ಸಂಶಯವೂ ಕಳೆಯಿತುಎಂದು. ಇದರಿಂದ ತಿಳಿಯುವುದೇನೆದರೆ ಅರ್ಜುನ ಭಗವಂತನ ವಿಶ್ವರೂಪ ದರ್ಶನ ಬಯಸಿದ್ದು ಕೇವಲ ನೋಡಿ ಧನ್ಯನಾಗುವುದಕ್ಕೋಸ್ಕರ ಹೊರತು, ಪುರಾವೆಗಾಗಿ ಅಲ್ಲ. ಸಾಮಾನ್ಯವಾಗಿ ಮನುಷ್ಯ ಸ್ವಭಾವವೇನೆಂದರೆ ಒಂದು ವಿಷಯವನ್ನು ಕೇಳಿದ ಮೇಲೆ ಅದನ್ನೊಮ್ಮೆ ನೋಡಬೇಕು ಎನ್ನುವ ಸಹಜ ಅಭಿಲಾಷೆ. ಅರ್ಜುನ ಕೃಷ್ಣನ ಮುಂದಿಟ್ಟಿರುವುದು ಕೂಡಾ ಇಂಥಹದ್ದೇ ಬಯಕೆಯನ್ನು. ಮುಂದಿನ ನಾಲ್ಕು ಶ್ಲೋಕಗಳಲ್ಲಿ ಈ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.
ಅರ್ಜುನ ಉವಾಚ ।
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್
ಯತ್ ತ್ವಯೋಕ್ತಂ ವಚಸ್ತೇನ ಮೋಹೋSಯಂ ವಿಗತೋ ಮಮ ॥೧॥
ಅರ್ಜುನಃ ಉವಾಚ- ಅರ್ಜುನ ಹೇಳಿದನು :ಮತ್ ಅನುಗ್ರಹಾಯ ಪರಮಮ್ ಗುಹ್ಯಮ್ ಅಧ್ಯಾತ್ಮಸಂಜ್ಞಿತಮ್
ಯತ್ ತ್ವಯಾ ಉಕ್ತಮ್ ವಚಃ ತೇನ ಮೋಹಃ ಅಯಮ್ ವಿಗತಃ ಮಮ –-ನನ್ನ ಮೇಲೆ ದಯೆದೋರಲೆಂದು, ಅಧ್ಯಾತ್ಮವೆಂಬ ಹಿರಿಯ ಗುಟ್ಟನ್ನು ನೀನು ನುಡಿದೆ. ಆ ನುಡಿಯಿಂದ ನನ್ನೀ ಮಂಕು ಕಳೆಯಿತು.
ಅರ್ಜುನ ಹೇಳುತ್ತಾನೆ: ನನ್ನ ಮೇಲಿನ ಅನುಗ್ರಹದಿಂದ ಅಧ್ಯಾತ್ಮದ ಪರಮ ಗುಹ್ಯವಾದ ವಿಚಾರವನ್ನು ನನಗೆ ಹೇಳಿದಿಎಂದು. ಇಲ್ಲಿ ಅನುಗ್ರಹಎಂದರೆ-ತಮ್ಮಿಂದ ಚಿಕ್ಕವರನ್ನು ಸರಿದಾರಿಯಲ್ಲಿ ತಂದು, ಎತ್ತರಕ್ಕೇರಿಸಿ ಉದ್ಧಾರ ಮಾಡಬೇಕು ಎಂಬ ಹಿರಿಯರ ಇಚ್ಛೆ. ದಾರಿ ತಪ್ಪಿ ನಡೆಯಲಿದ್ದ ನನ್ನನ್ನು ಸರಿದಾರಿಗೆ ತಂದು ಉದ್ಧಾರ ಮಾಡಿದಿಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ್ದಾನೆ. ಇಲ್ಲಿ ಮತ್ಎನ್ನುವ ಪದ ಬಳಕೆಯಾಗಿದೆ. ಮತ್ಎಂದರೆ ಕೇವಲ ನನ್ನ ಅಥವಾ ನನಗೆಅನ್ನುವ ಅರ್ಥವಷ್ಟೇ ಅಲ್ಲ. ಮತ್ಎನ್ನುವುದು ಯತ್ ಇದ್ದಂತೆ. ಮಾತೀತಿ ಮತ್’-ಅಂದರೆ ಸಮಸ್ತ ಜ್ಞಾನಿಗಳುಅನ್ನುವ ಅರ್ಥವನ್ನು ಕೊಡುತ್ತದೆ. ಆದ್ದರಿಂದ ಮದನುಗ್ರಹ ಅಂದರೆ ಸಮಸ್ತ ಜ್ಞಾನಿಗಳ ಉದ್ಧಾರಕ್ಕೋಸ್ಕರಎಂದರ್ಥ. ಭಗವಂತ ಸಮಸ್ತ ಮನುಕುಲಕ್ಕೆ ಈ ಅಪೂರ್ವ ಸಂದೇಶವನ್ನು ತಲುಪಿಸಲು ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡಿ, ಅದನ್ನು ತಾನೇ ವ್ಯಾಸರೂಪನಾಗಿ ದಾಖಲಿಸಿ ನಮಗೆ ಕೊಟ್ಟನೆ ಹೊರತು, ಕೇವಲ ಅರ್ಜುನನಿಗೋಸ್ಕರ ಹೇಳಿದ್ದಲ್ಲ.
ಈ ಪ್ರಪಂಚದಲ್ಲಿ ಅತ್ಯಂತ ಗೋಪ್ಯವಾಗಿರಬೇಕಾದ ವಿದ್ಯೆ-ಅಧ್ಯಾತ್ಮ ವಿದ್ಯೆ. ಯಾವಾಗಲೂ ಅಪೂರ್ವ ವಿಷಯವನ್ನು ಗೋಪ್ಯವಾಗಿಡುತ್ತಾರೆ. ಏಕೆಂದರೆ ಅದು ದುರುಪಯೋಗವಾಗಬಾರದು ಮತ್ತು ಅದರ ಮಹತ್ವ ತಿಳಿಯದವರಿಗೆ ತಲುಪಬಾರದೆಂದು. ಅಧ್ಯಾತ್ಮ-ಮನೋವಿಜ್ಞಾನ, ಜೀವವಿಜ್ಞಾನ ಮತ್ತು ಪರಮಾತ್ಮವಿಜ್ಞಾನ. ಇಂತಹ ಅಪೂರ್ವ ವಿದ್ಯೆಯನ್ನು ಕೃಷ್ಣ ಅರ್ಜುನನ ಮುಂದೆ ತೆರೆದಿಟ್ಟಿರುವುದಕ್ಕೆ ಅರ್ಜುನ ಭಗವಂತನನ್ನು ಕೊಂಡಾಡುತ್ತಾನೆ ಮತ್ತು ಹೇಳುತ್ತಾನೆಇದರಿಂದ ನನ್ನೆಲ್ಲ ಮಾನಸಿಕ ಗೊಂದಲ ಹೊರಟು ಹೋಗಿ ಮೋಹ ಕಳೆಯಿತುಎಂದು.
·  ಶ್ಲೋಕ - 02
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥೨॥
ಭವ ಅಪ್ಯಯೌ ಹಿ ಭೂತಾನಾಮ್ ಶ್ರುತೌ ವಿಸ್ತರಶಃ ಮಯಾ ।
ತ್ವತ್ತಃ ಕಮಲಪತ್ರ ಅಕ್ಷ ಮಾಹಾತ್ಮ್ಯಮ್ ಅಪಿ ಚ ಅವ್ಯಯಮ್ –- ಜೀವಿಗಳ ಹುಟ್ಟು ಸಾವುಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ; ಓ ತಾವರೆ ಎಸಳಂಥ ಕಣ್ಗಳವನೆ, ನಿನ್ನ ಅಳಿವಿರದ ಮಹಿಮೆಯನ್ನು ಕೂಡ.
ಜೀವಿಗಳ ಭವ ಮತ್ತು ಅಪ್ಯಯಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆಎನ್ನುತ್ತಾನೆ ಅರ್ಜುನ. ಇಲ್ಲಿ ಭವ ಮತ್ತು ಅಪ್ಯಯ ಎನ್ನುವುದಕ್ಕೆ ಹುಟ್ಟು-ಸಾವು, ಸೃಷ್ಟಿ-ಸಂಹಾರ ಎನ್ನುವ ಅರ್ಥವಲ್ಲದೆ ಇನ್ನೊಂದು ಬಹಳ ರೋಚಕವಾದ ಅರ್ಥವಿದೆ. ವೇದಕಾಲದ ಋಷಿಗಳು ಇದನ್ನು ಒಂದು ಹೊಸ ಅರ್ಥದಲ್ಲಿ ಬಳಸುತ್ತಿದ್ದರು. ಪ್ರಭವಾಪ್ಯಯೌ ಭೂತಾನಾಂಎಂದು ಉಪನಿಷತ್ತಿನಲ್ಲಿ ಬರುತ್ತದೆ. ಸುಖಪ್ರಾಪ್ತಿ-ಭವ ಮತ್ತು ದುಃಖನಿವೃತ್ತಿ-ಅಪ್ಯಯ. ಇದು ಪ್ರಾಚೀನ ಋಷಿಗಳ ಅರ್ಥ. ಯಾವ ರೀತಿಯ ನಡೆಯಿಂದ ಸುಖ ಪಡೆಯಬಹುದು, ಯಾವ ರೀತಿಯ ನಡೆಯಿಂದ ನಮ್ಮ ಬದುಕಿನ ದುಃಖದಿಂದ ಪಾರಾಗಬಹುದು ಅನ್ನುವ ಮೂಲ ಮಂತ್ರವನ್ನು ನಿನ್ನ ಬಾಯಿಯಿಂದಲೇ ಹೇಳಿದಿ-ಅದನ್ನು ನಾನು ಕಿವಿಯಾರೆ ಕೇಳಿದೆಎನ್ನುತ್ತಾನೆ ಅರ್ಜುನ.
ಇಲ್ಲಿ ಕಮಲಪತ್ರಾಕ್ಷಎನ್ನುವ ಒಂದು ವಿಶೇಷಣ ಬಳಸಿದ್ದಾರೆ. ಇದನ್ನು ಅರ್ಜುನ ಪ್ರಯೋಗ ಮಾಡುವುದರಲ್ಲಿ ಒಂದು ವಿಶೇಷವಿದೆ. ನೀನು ನನ್ನ ಮೇಲೆ ಕಾರುಣ್ಯದ ರಸಧಾರೆಯನ್ನು ಹರಿಸಿದೆಯಲ್ಲ ಕೃಷ್ಣಎನ್ನುವ ಭಾವ ಈ ವಿಶೇಷಣದ ಹಿಂದಿದೆ. ನಿನ್ನ ಮಹಿಮೆ ಅವ್ಯಯ ಅನಂತವಾಗುಳಿಯುವ ಸಂಪತ್ತು. ಆ ಮಹತ್ತಾದ ಜ್ಞಾನವನ್ನು ನನಗೆ ಕೊಟ್ಟೆ. ಅತಿ ದುರ್ಲಭವಾದ ನಿನ್ನ ಮಹಿಮೆಯನ್ನು ನನಗೆ ಹೇಳಿದೆಎನ್ನುತ್ತಾನೆ ಅರ್ಜುನ.
·  ಶ್ಲೋಕ - 03
ಏವಮೇತದ್ ಯಥಾSSತ್ಥ ತ್ವಮಾತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ॥೩॥
ಏವಮ್ ಏತತ್ ಯಥಾ ಆತ್ಥ ತ್ವಮ್ ಆತ್ಮಾನಮ್ ಪರಮೇಶ್ವರ ।
ದ್ರಷ್ಟುಮ್ ಇಚ್ಛಾಮಿ ತೇ ರೂಪಮ್ ಐಶ್ವರಮ್ ಪುರುಷೋತ್ತಮ ಪರಮೇಶ್ವರ, ನೀನು ನಿನ್ನ ಬಗೆಗೆ ಏನಂದೆಯೋ ಅದೆಲ್ಲ ನಿಜ. ಓ ಪುರುಷೋತ್ತಮ, ಜಗವನಾಳುವ ನಿನ್ನ ರೂಪವನ್ನು ಕಾಣುವ ತವಕ ನನಗೆ.
ನೀನು ಹೇಳಿದ್ದರಲ್ಲಿ ನನಗೆ ಯಾವ ಸಂಶಯವೂ ಇಲ್ಲಎನ್ನುತ್ತಾನೆ ಅರ್ಜುನ. ಇಲ್ಲಿ ಅರ್ಜುನ ಕೃಷ್ಣನನ್ನು ಪರಮೇಶ್ವರಃಎಂದು ಸಂಬೋಧಿಸಿದ್ದಾನೆ. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವ ಅಂತಃಕರಣ ಹಾಗು ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗು ಬ್ರಹ್ಮ ವಾಯು-ಈಶ್ವರರು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೇಶ್ವರಃ.ನೀನು ಹೇಳಿದ ವಿಚಾರದಲ್ಲಿ ನನಗೆ ಗೊಂದಲವಿಲ್ಲ. ಏಕೆಂದರೆ ನೀನು ಪರಮೇಶ್ವರಃ. ಆದರೆ ನನಗೆ ಆ ನಿನ್ನ ಸರ್ವಸಾಮರ್ಥ್ಯದಿಂದ ತುಂಬಿದ ರೂಪವನ್ನು ಕಾಣುವ ತವಕವಾಗುತ್ತಿದೆಎಂದು ಭಗವಂತನ ಅದ್ಭುತ ರೂಪವನ್ನು ಕಾಣಬೇಕುಎನ್ನುವ ತನ್ನ ಬಯಕೆಯನ್ನು ಅರ್ಜುನ ಕೃಷ್ಣನ ಮುಂದಿಡುತ್ತಾನೆ.
ಇಲ್ಲಿ ಅರ್ಜುನ ಭಗವಂತನನ್ನು ಪುರುಷೋತ್ತಮಃಎಂದು ಸಂಬೋಧಿಸಿದ್ದಾನೆ. ಈ ಪದಕ್ಕಿರುವ ವಿಶಿಷ್ಠ ಅರ್ಥವನ್ನು ಕೃಷ್ಣ ಅಧ್ಯಾಯ ಹದಿನೈದರಲ್ಲಿ(ಅ-೧೫, ಶ್ಲೋ-೧೬-೧೮) ವಿವರವಾಗಿ ವಿವರಿಸಿದ್ದಾನೆ. ಲೋಕದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭). ಕ್ಷರವನ್ನು ಮೀರಿ ನಿಂತವನು, ಅಕ್ಷರಕ್ಕಿಂತಲೂ ಹಿರಿಯನು ಆದ ಆ ನಾರಾಯಣ 'ಪುರುಷೋತ್ತಮ'.(ಅ-೧೫, ಶ್ಲೋ-೧೮). ನಿನ್ನ ಪುರುಷೋತ್ತಮತ್ವದ ರೂಪವನ್ನು ನಾನು ಕಾಣಬೇಕುಎನ್ನುವ ಅಭಿಲಾಷೆಯನ್ನು ಅರ್ಜುನ ಕೃಷ್ಣನ ಮುಂದಿಟ್ಟ.
·  ಶ್ಲೋಕ - 04
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾSತ್ಮಾನಮವ್ಯಯಮ್ ॥೪॥
ಮನ್ಯಸೇ ಯದಿ ತತ್ ಶಕ್ಯಮ್ ಮಯಾ ದ್ರಷ್ಟುಮ್ ಇತಿ ಪ್ರಭೋ ।
ಯೋಗೇಶ್ವರ ತತಃ ಮೇ ತ್ವಮ್ ದರ್ಶಯ ಆತ್ಮಾನಮ್ ಅವ್ಯಯಮ್ ಜಗದೊಡೆಯನೆ, ಯೋಗಿಗಳೊಡೆಯನೆ, ಅದು ನನ್ನಿಂದ ಕಾಣಲು ಸಾಧ್ಯವೆಂದು ನೀನು ಭಾವಿಸುವುದಾದರೆ, ನಿನ್ನ ಅಳಿವಿರದ ರೂಪವನ್ನು ನನಗೆ ತೋರಿಸು.
ಅರ್ಜುನ ಮುಂದುವರಿದು ಹೇಳುತ್ತಾನೆ” “ನಾನು ಆ ನಿನ್ನ ರೂಪವನ್ನು ನೋಡಲು ಸಾಧ್ಯ ಎಂದು ನೀನು ಭಾವಿಸುವುದಾದರೆ, ನಿನ್ನ ರೂಪವನ್ನು ನನಗೆ ತೋರಿಸುಎಂದು. ಇಲ್ಲಿ ಅರ್ಜುನ ಕೃಷ್ಣನನ್ನು ಪ್ರಭೋಎಂದು ಸಂಬೋಧಿಸಿದ್ದಾನೆ.ಪ್ರಭುಅಂದರೆ ಸಾಮರ್ಥ್ಯ. ನೋಡುವ ಸಾಮರ್ಥ್ಯ ನನಗಿಲ್ಲದಿದ್ದರೂ, ಆ ಸಾಮರ್ಥ್ಯವನ್ನು ಕರುಣಿಸಿ ತೋರಿಸುವ ಸಾಮರ್ಥ್ಯ ನಿನಗಿದೆಎನ್ನುವುದು ಈ ಸಂಬೋಧನೆಯ ಹಿಂದಿರುವ ಭಾವ. ಏಕೆಂದರೆ ನೀನು ಯೋಗೇಶ್ವರಃಎನ್ನುತ್ತಾನೆ ಅರ್ಜುನ. ಯೋಗ ಅಂದರೆ ಉಪಾಯ. ನನಗೆ ಹೇಗೆ ನಿನ್ನ ರೂಪವನ್ನು ತೋರಿಸಬೇಕು ಎನ್ನುವ ಉಪಾಯ ಕೂಡ ನಿನಗೆ ತಿಳಿದಿದೆ. ನೀನು ಎಲ್ಲ ಉಪಾಯ(ಯೋಗ)ಗಳ ಸ್ವಾಮಿ. ಆದ್ದರಿಂದ ಅಳಿವಿರದ, ನಿತ್ಯವಾಗಿರುವ ಆ ನಿನ್ನ ರೂಪವನ್ನು ನನಗೆ ತೋರಿಸುಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ.
·  ಶ್ಲೋಕ - 05
ಭಗವಾನುವಾಚ ।
ಪಶ್ಯ ಮೇ ಪಾರ್ಥ ರೂಪಾಣಿ ಶತಶೋSಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥೫॥
ಭಗವಾನ್ ಉವಾಚ-ಭಗವಂತ ಹೇಳಿದನು :
ಪಶ್ಯ ಮೇ ಪಾರ್ಥ ರೂಪಾಣಿ ಶತಶಃ ಅಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾ ವರ್ಣ ಆಕೃತೀನಿ ಚ ನೋಡು ಪಾರ್ಥ, ನನ್ನ ರೂಪಗಳನ್ನು- ನೂರಾರು, ಸಾವಿರಾರು; ಬಗೆಬಗೆಯವು; ಹೊಳೆಯುವಂಥವು; ಹಲವು ಬಣ್ಣ-ಆಕಾರದವು.
ನಿನ್ನ ರೂಪವನ್ನು ತೋರು ಎಂದು ಅರ್ಜುನ ಏಕವಚನದಲ್ಲಿ ಕೇಳಿದರೆ ಕೃಷ್ಣ ಬಹುವಚನದಲ್ಲಿ ಹೇಳುತ್ತಾನೆ ನೋಡು ನನ್ನ ರೂಪಗಳನ್ನುಎಂದು. ಭಗವಂತನ ಎಲ್ಲಾ ರೂಪಗಳೂ ಒಂದೆ. ಮೂಲ ರೂಪಕ್ಕೂ ಅವತಾರ ರೂಪಕ್ಕೂ ಭೇದವಿಲ್ಲ. ನೀನು ಹಿಂದೆಂದೂ ಕಾಣದ ಅತ್ಯದ್ಭುತವಾದ ನನ್ನ ನೂರಾರು, ಸಾವಿರಾರು, ಬಗೆಬಗೆಯ, ಹೊಳೆಯುವಂಥಹ, ಹಲವು ಬಣ್ಣ ಮತ್ತು ಆಕಾರದ ರೂಪಗಳನ್ನು ನೋಡುಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಪಾರ್ಥಎಂದು ಸಂಬೋಧಿಸಿದ್ದಾನೆ. ನಿಜವಾದ ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ ಹೊರಟವರು ಪಾರ್ಥರು’.
·  ಶ್ಲೋಕ - 06
ಪಶ್ಯಾSದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾSಶ್ಚರ್ಯಾಣಿ ಭಾರತ ॥೬॥
ಪಶ್ಯ ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಃ ತಥಾ ।
ಬಹೂನಿ ಅದೃಷ್ಟ ಪೂರ್ವಾಣಿ ಪಶ್ಯ ಆಶ್ಚರ್ಯಾಣಿ ಭಾರತ -- ನೋಡು-ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿಗಳನ್ನು ಮತ್ತು ಮರುತ್ತುಗಳನ್ನು. ಓ ಭಾರತ, ನೋಡು ಹಿಂದೆಂದೂ ಕಂಡಿರದ ಹಲವು ಅಚ್ಚರಿಗಳನ್ನು.
ಜಗತ್ತಿನಲ್ಲಿರುವ ಎಲ್ಲ ಆದಿತ್ಯರು(ದ್ವಾದಶಾದಿತ್ಯರು), ವಸುಗಳು (ಅಷ್ಟ ವಸುಗಳು), ರುದ್ರರು (ಏಕಾದಶ ರುದ್ರರು), ಅಶ್ವಿಗಳು(ಇಬ್ಬರು), ಮರುತ್ತುಗಳು(ನಲವತ್ತೊಂಬತ್ತು)-ಎಲ್ಲರನ್ನು ನೋಡು. ನೀನು ಹಿಂದೆಂದೂ ಕಂಡು ಕೇಳರಿಯದ ಅತ್ಯದ್ಭುತ ಅಚ್ಚರಿಯನ್ನು ನೋಡುಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನುಭಾರತಎಂದು ಸಂಬೋಧಿಸಿದ್ದಾನೆ. ಐತರೇಯ ಬ್ರಾಹ್ಮಣದಲ್ಲಿ ವಾಯರ್ವಾವ ಭರತಃಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯು ದೇವರಿಗೆ ಭರತ ಎಂದು ಹೆಸರು. ಆದ್ದರಿಂದ ಇಲ್ಲಿ ಭಾರತಎಂದರೆ ಭೀಮ(ಪ್ರಾಣತತ್ವ)ನ ತಮ್ಮಎನ್ನುವ ಅರ್ಥವನ್ನು ಕೊಡುತ್ತದೆ. [ಸದಾ ಭಗವಂತನಿಗೆ ಅತಿ ಹತ್ತಿರವಿರುವ ಹನುಮಂತ ಅಥವಾ ಪ್ರಾಣತತ್ವದ ಉಪಾಸನೆ ಭಗವಂತನನ್ನು ತಿಳಿಯುವ ಸುಲಭ ಸಾಧನ.]
·  ಶ್ಲೋಕ - 07
ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥೭॥
ಇಹ ಏಕ ಸ್ಥಮ್ ಜಗತ್ ಕೃತ್ಸ್ನಮ್ ಪಶ್ಯ ಅದ್ಯ ಸ ಚರ ಅಚರಮ್ ।
ಮಮ ದೇಹೇ ಗುಡಾಕೇಶ ಯತ್ ಚ ಅನ್ಯತ್ ದ್ರಷ್ಟುಮ್ ಇಚ್ಛಸಿಇಲ್ಲಿ ನೋಡೀಗ, ನನ್ನ ಮೈಯಲ್ಲಿ ಚರಾಚರಗಳಿಂದ ಕೂಡಿದ ಇಡಿಯ ಜಗತ್ತು ಒಂದುಗೂಡಿದ್ದನ್ನು. ಓ ಗುಡಾಕೇಶ, ಇನ್ನೇನು ನೋಡ ಬಯಸುವೆ ಅದನ್ನೆಲ್ಲಾ ನೋಡು.
ನನ್ನ ದೇಹವನ್ನು ಆಶ್ರಯಿಸಿಕೊಂಡಿರುವ ಸಮಸ್ತ ವಿಶ್ವವನ್ನು ನೋಡು. ಬ್ರಹ್ಮಾಂಡದೊಳಗೆ ಏನೇನಿದೆಯೋ ಅದೆಲ್ಲವೂ ಇಲ್ಲಿದೆ. ಚೇತನ, ಅಚೇತನ, ಚಲಿಸುವ, ಚಲಿಸದ, ಎಲ್ಲವೂ. ನಿನಗೆ ಏನು ನೋಡಬೇಕು ಎಂದು ನಿನ್ನ ಮನಸ್ಸು ಬಯಸುತ್ತದೆ ಅದನ್ನು ನೋಡುಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ಗುಡಾಕೇಶ ಎಂದು ಸಂಬೋಧಿಸುತ್ತಾನೆ. ಅಜ್ಞಾನ, ಆಲಸ್ಯ ಮತ್ತು ನಿದ್ದೆಯನ್ನು ಗೆದ್ದವ ಗುಡಾಕೇಶ.
ಇಲ್ಲಿ ಒಂದೊಂದು ಶ್ಲೋಕದಲ್ಲಿ ಒಂದೊಂದು ವಿಶೇಷಣ ಬಳಸಿದ್ದಾರೆ. ಈ ವಿಶೇಷಣದ ಹಿಂದೆ ಇರುವ ಅರ್ಥವನ್ನು ನೋಡಿದಾಗ ತಿಳಿಯುವುದೇನೆಂದರೆ -ನಮಗೆ ಭಗವಂತ ತಿಳಿಯಬೇಕಾದರೆ ನಾವೂ ಕೂಡ ಪಾರ್ಥ, ಭಾರತ, ಗುಡಾಕೇಶರಾಗಬೇಕು ಎನ್ನುವುದು. ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ(ಪಾರ್ಥ), ಪ್ರಾಣತತ್ವದ ಉಪಾಸನೆ(ಭಾರತ), ಅಜ್ಞಾನ, ಆಲಸ್ಯ ಗೆದ್ದು ಭಗವಂತನ ಚಿಂತನೆ(ಗುಡಾಕೇಶ) ಮಾಡಿದಾಗ- ಆ ಭಗವಂತನ ರೂಪ ನಮಗೆ ತಿಳಿದೀತು.
·  ಶ್ಲೋಕ - 08
ನತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ೮॥
ನ ತು ಮಾಮ್ ಶಕ್ಯಸೇ ದ್ರಷ್ಟುಮ್ ಅನೇನ ಏವ ಸ್ವ ಚಕ್ಷುಷಾ ।
ದಿವ್ಯಮ್ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮ್ ಐಶ್ವರಮ್ಆದರೆ ನಿನ್ನ ಈ ಹೊರಗಣ್ಣಿಂದಲೆ ನೋಡಲಾರೆ ನನ್ನನ್ನು. ನೀಡುತ್ತೇನೆ ನಿನಗೆ ದಿವ್ಯದ ಒಳಗಣ್ಣು. ನೋಡು ಜಗವನಾಳುವ ನನ್ನಳವನ್ನು.
ಭಗವಂತನ ರೂಪವನ್ನು ಈ ನಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಸ್ವರೂಪಭೂತನಾದ ಆ ಭಗವಂತನನ್ನು ನಾವು ನಮ್ಮ ಸ್ವರೂಪಭೂತವಾದ ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಆತನ ಸ್ವರೂಪಭೂತವಾದ ಕಣ್ಣಿನಿಂದ ಸರ್ವಸಮರ್ಥ ಭಗವಂತನನ್ನು ನೋಡುವ ಸೌಭಾಗ್ಯವನ್ನು ಕರುಣಿಸುತ್ತಾನೆ.
·  ಶ್ಲೋಕ - 09
ಸಂಜಯ ಉವಾಚ ।
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥೯॥
ಸಂಜಯ ಉವಾಚ-ಸಂಜಯ ಹೇಳಿದನು :
ಏವಮ್ ಉಕ್ತ್ವಾ ತತಃ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮ್ ಆಸ ಪಾರ್ಥಾಯ ಪರಮಮ್ ರೂಪಮ್ ಐಶ್ವರಮ್ ಅರಸನೇ, ಹಿರಿಯ ಶಕ್ತಿಗಳ ಒಡೆಯನಾದ ಹರಿ ಹೀಗೆ ನುಡಿದು, ಅರ್ಜುನನಿಗೆ ತೋರಿಸಿದನು ಜಗವನಾಳುವ ಹಿರಿಯ ರೂಪವನ್ನು.
ವ್ಯಾಸರಿಂದ ದಿವ್ಯ ದೃಷ್ಟಿ ಪಡೆದು, ಯುದ್ಧರಂಗದಲ್ಲಿ ನಡೆಯುತ್ತಿರುವ ಘಟನೆಗಳ ವಿವರಣೆಯನ್ನು ಧೃತರಾಷ್ಟ್ರನಿಗೆ ಕೊಡುತ್ತಿರುವ ಸಂಜಯ ಕೂಡ ಭಗವಂತನ ವಿಶ್ವರೂಪವನ್ನು ಕಾಣುತ್ತಾನೆ. ಆತ ಧೃತರಾಷ್ಟ್ರನಲ್ಲಿ ಹೇಳುತ್ತಾನೆ: ಓ ರಾಜನ್, ಈ ರೀತಿ ಹೇಳಿ ಮಹಾಯೋಗೇಶ್ವರ ಹರಿಯು ತನ್ನ ಹಿರಿಯರೂಪವನ್ನು ತೋರಿದನುಎಂದು. ಇಲ್ಲಿ ಬಳಕೆಯಾಗಿರುವತತಃಅನ್ನುವ ಪದ ಈ ಶ್ಲೋಕದಲ್ಲಿ ವಿಶೇಷ ಅರ್ಥವನ್ನು ಕೊಡುತ್ತದೆ. ಅರ್ಜುನನು ದಿವ್ಯ ದೃಷ್ಟಿ ಸಂಪನ್ನನಾದ್ದರಿಂದ, ದಿವ್ಯರೂಪ ದರ್ಶನ ನೋಡುವ ಅಧಿಕಾರ ಸಂಪನ್ನನಾದ್ದರಿಂದ, ಎಲ್ಲಾ ಕಡೆ ತುಂಬಿರುವ ಭಗವಂತ, ತನ್ನ ವಿಶ್ವರೂಪವನ್ನು ಆತನಿಗೆ ತೋರಿದ-ಎನ್ನುವ ಭಾವವನ್ನು ಈ ಪದ ಕೊಡುತ್ತದೆ. ಬ್ರಹ್ಮಾದಿ ಸರ್ವ ದೇವತೆಗಳಿಗೂ ಒಡೆಯನಾದ ಭಗವಂತನನ್ನು ಸಂಜಯ ಇಲ್ಲಿ ಮಹಾಯೋಗೇಶ್ವರಃ ಎಂದು ಸಂಬೋಧಿಸಿದ್ದಾನೆ. ಇಲ್ಲಿ ಬಳಸಿರುವ ಹರಿಃಎನ್ನುವ ಪದ ಭಗವಂತನ ಸರ್ವಗತತ್ವವನ್ನು ವಿವರಿಸುವ ಪದ. ಯಾರು ಯಾವ ದೇವತಾ ಮುಖದಲ್ಲಿ ಆಹುತಿ ಕೊಟ್ಟರೂ ಅದನ್ನು ಮೊದಲು ಪಡೆಯುವ ಭಗವಂತ ಹರಿಃ.
ಮುಂದಿನ ಶ್ಲೋಕದಲ್ಲಿ ಸಂಜಯ ತಾನು ಕಂಡ ಭಗವಂತನ ವಿಶ್ವರೂಪದ ವರ್ಣನೆ ಮಾಡುತ್ತಾನೆ.
·  ಶ್ಲೋಕ - 10 & 11
ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥೧೦॥

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್ ॥೧೧॥
ಅನೇಕ ವಕ್ತ್ರ ನಯನಮ್ ಅನೇಕ ಅದ್ಭುತ ದರ್ಶನಮ್
ಅನೇಕ ದಿವ್ಯ ಆಭರಣಮ್ ದಿವ್ಯ ಅನೇಕ ಉದ್ಯತ ಆಯುಧಮ್ ||
ದಿವ್ಯ ಮಾಲ್ಯಾ ಅಂಬರ ಧರಮ್ ದಿವ್ಯ ಗಂಧ ಅನುಲೇಪನಮ್ ।
ಸರ್ವಾಶ್ಚರ್ಯಮಯಮ್ ದೇವಮನಂತಮ್ ವಿಶ್ವತೋಮುಖಮ್ ಎಣಿಕೆಯಿರದ ಬಾಯಿ ಕಣ್ಣುಗಳ ರೂಪ. ಎಣಿಕೆಯಿರದ ಅಚ್ಚರಿಯ ನೋಟಗಳ ರೂಪ. ಎಣಿಕೆಯಿರದ ಚಲುವಾಭರಣಗಳ ರೂಪ. ಎಣಿಕೆಯಿರದ ಹೊಳೆಯುವಾಯುಧಗಳನ್ನು ಮೇಲೆತ್ತಿ ಹಿಡಿದ ರೂಪ. ಹೊಳೆವ ಹೂದಂಡೆಗಳನ್ನಿಟ್ಟ ಉಡಿಗೆಗಳ ತೊಟ್ಟ ರೂಪ. ಹೊಳೆವ ಗಂಧ ಬಳಿದ ರೂಪ. ಎಲ್ಲ ಅಚ್ಚರಿಗಳ ಸೆಲೆ. ಎಲ್ಲೆಡೆಯು ತುಂಬಿ ತುದಿಯಿರದ ರೂಪ.
ಕೃಷ್ಣ ನಮ್ಮೆಲ್ಲರಂತೆ ಮನುಷ್ಯರ ಆಕಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆದರೆ ಕ್ಷಣದಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣನ ಮುಖ, ಅಲ್ಲಿ ಸೇರಿರುವ ಪ್ರತಿಯೊಂದು ಜೀವಿಯ ಒಳಗೆ, ಹೊರಗೆ ಎಲ್ಲೆಲ್ಲೂ ಕೇವಲ ಕೃಷ್ಣನ ಮುಖ ಕಾಣುತ್ತಿದೆ. ಸಂಜಯನಿಗೆ ಅಲ್ಲಿ ಆನೆ, ಕುದುರೆ, ಸೈನಿಕರು ಕಾಣಿಸಲಿಲ್ಲ. ಬದಲಿಗೆ ಎಲ್ಲೆಡೆ, ಎಲ್ಲರೊಳಗೆ ತುಂಬಿರುವ ಆ ಭಗವಂತ ಕಾಣಿಸಿಕೊಂಡ. ಭಗವಂತನ ಈ ರೂಪವನ್ನು ವರ್ಣಿಸುವುದು ಅಸಾಧ್ಯ. ಇದನ್ನು ಕೇವಲ ನೋಡಿ ಅನುಭವಿಸಬೇಕು. ಅದೊಂದು ಅಚ್ಚರಿ. ಸರ್ವಾಭರಣಗಳಿಂದ ಶೋಭಿಸುವ, ದಿವ್ಯವಾದ ಆಯುಧಗಳನ್ನು ಹಿಡಿದಿರುವ, ಹೂವಿನ ಮಾಲೆಗಳನ್ನಿಟ್ಟ ಉಡುಪನ್ನು ತೊಟ್ಟ, ಹೊಳೆವ ಗಂಧ ಬಳಿದ, ಸರ್ವಾಶ್ಚರ್ಯ ಸ್ವರೂಪ, ವಿಸ್ಮಯ ಮೂರ್ತಿ ಭಗವಂತ ಯುದ್ಧರಂಗದಲ್ಲಿ ತನ್ನ ವಿಶ್ವರೂಪವನ್ನು ತೋರಿದ.
·  ಶ್ಲೋಕ - 12
ದಿವಿ ಸೂರ್ಯಸಹಸ್ರಸ್ಯ ಭವೇದ್ ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ ॥೧೨॥
ದಿವಿ ಸೂರ್ಯ ಸಹಸ್ರಸ್ಯ ಭವೇತ್ ಯುಗಪತ್ ಉತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸ ತಸ್ಯ ಮಹಾತ್ಮನಃ ಸಾವಿರ ಸಾವಿರ ಸೂರ್ಯರು ಒಮ್ಮೆಲೆ ಮುಗಿಲಲ್ಲಿ ಮೂಡಿಬಂದರೆ, ಅಂಥ ಬೆಳಕು ಆ ಮಹಾತ್ಮನ ಬೆಳಕಿಗೆ ಸರಿಗಟ್ಟಿತೇನೊ !
ಸಂಜಯ ಹೇಳುತ್ತಾನೆ: ಸಾವಿರಾರು ಸೂರ್ಯರು ಆಕಾಶದಲ್ಲಿ ಒಮ್ಮೆಗೆ ಉದಿಸಿದರೆ ಎಷ್ಟು ಪ್ರಕಾಶಮಾನವಾಗಿರುತ್ತದೋ, ಅಂಥಹ ಪ್ರಕಾಶಮಾನನಾಗಿ ಭಗವಂತ ಕಾಣಿಸಿದಎಂದು. ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ಚಂದ್ರಾಂಶುವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಭಗವಂತ ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪು. ಇಷ್ಟು ಪ್ರಕಾಶಮಾನನಾಗಿರುವ ಭಗವಂತನ ರೂಪವನ್ನು ಯಾರೂ ಎಂದೆಂದೂ ತಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ.
·  ಶ್ಲೋಕ - 13
ತತ್ರೈಕಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ
ಅಪಶ್ಯದ್ ದೇವದೇವಸ್ಯ ಶರೀರೇ ಪಾಂಡವಸ್ತದಾ ೧೩॥
ತತ್ರ ಏಕಸ್ಥಮ್ ಜಗತ್ ಕೃತ್ಸ್ನಮ್ ಪ್ರವಿಭಕ್ತಮ್ ಅನೇಕಧಾ ।
ಅಪಶ್ಯತ್ ದೇವದೇವಸ್ಯ ಶರೀರೇ ಪಾಂಡವಃ ತದಾ ಅರ್ಜುನ ಕಂಡನಾಗ ಬಗೆಬಗೆಯಿಂದ ವಿಂಗಡಗೊಂಡ ಇಡಿಯ ಪೊಡವಿ ಅಲ್ಲಿ, ದೇವದೇವನ ಮೈಯಲ್ಲಿ ಒಂದುಗೂಡಿದ್ದನ್ನು.
ಭಗವಂತ ಅರ್ಜುನನಿಗೆ ರಣರಂಗದಲ್ಲಿ ತೋರಿದ ವಿಶ್ವರೂಪ ತುಂಬಾ ವಿಶಿಷ್ಟವಾದದ್ದು. ಮಧ್ವಾಚಾರ್ಯರು ಹೇಳುವಂತೆ ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಪ್ರಪಂಚದಲ್ಲಿ ಭಗವಂತನ ವಿಶ್ವರೂಪ ದರ್ಶನ ಕಾಣುವ ಅರ್ಹತೆಯುಳ್ಳ ಎಲ್ಲರಿಗೂ ಈ ದರ್ಶನವಾಗಿತ್ತು. [ಮೂರು ಲೋಕದಲ್ಲಿರುವ, ಅರ್ಹತೆಯುಳ್ಳ ಸಮಸ್ತ ಜೀವಿಗಳಿಗೂ ಭಗವಂತನ ಈ ವಿಶೇಷ ದರ್ಶನವಾಗಿದೆ ಎನ್ನುವ ಮಾತು ಮುಂದೆ ಈ ಅಧ್ಯಾಯದಲ್ಲಿ ಬರುತ್ತದೆ]. ಅರ್ಜುನನಿಗೆ ಇಲ್ಲಿ ಕಾಣಿಸಿದ್ದು ಕೇವಲ ಎಲ್ಲೆಡೆ ತುಂಬಿರುವ ಭಗವಂತ ಮಾತ್ರವಲ್ಲ, ಆತನೊಳಗೆ ತುಂಬಿರುವ ಪ್ರಪಂಚ ಕೂಡ. [ಇಲ್ಲಿ ಭಗವಂತನೊಳಗೆ ವಿಶ್ವವನ್ನು ಕಾಣುವುದು ಅಂದರೆ ಧ್ಯಾನದಲ್ಲಿ ಪರಮಾತ್ಮನನ್ನು, ಆತನಿಂದ ಸೃಷ್ಟವಾದ ಸೃಷ್ಟಿಯನ್ನು ಕಂಡಂತೆ. ಸತ್ವದಿಂದ ಸ್ವಚ್ಛವಾದ ಮನಸ್ಸುಳ್ಳ ಅರ್ಜುನ(ಪಾಂಡವ), ತನ್ನ ದಿವ್ಯ ದೃಷ್ಟಿಯಿಂದ ಭಗವಂತನಲ್ಲಿ ತುಂಬಿರುವ ಇಡೀ ವಿಶ್ವವನ್ನು ಸ್ಪಷ್ಟವಾಗಿ ಕಂಡ.]
·  ಶ್ಲೋಕ - 14
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ೧೪॥
ತತಃ ಸಃ ವಿಸ್ಮಯ ಆವಿಷ್ಟಃ ಹೃಷ್ಟರೋಮಾ ಧನಂಜಯಃ
ಪ್ರಣಮ್ಯ ಶಿರಸಾ ದೇವಮ್ ಕೃತಾಂಜಲಿಃ ಅಭಾಷತ ಬಳಿಕ ಬೆರಗಲ್ಲಿ ಮುಳುಗಿ ಮೈನವಿರೆದ್ದ ಅರ್ಜುನ ಭಗವಂತನಿಗೆ ತಲೆಬಾಗಿ ಕೈಜೋಡಿಸಿ ನುಡಿದ.
ಭಗವಂತನ ಈ ಅದ್ಭುತ ರೂಪವನ್ನು ಕಂಡ ಅರ್ಜುನ, ಆನಂದ ಆಶ್ಚರ್ಯ ದಿಗ್ಭ್ರಮೆಯಿಂದ ರೋಮಾಂಚನಗೊಂಡು ನಿಂತ. ಭಗವಂತನ ಅಪೂರ್ವವಾದ ಇಂತಹ ಅದ್ಭುತ ದರ್ಶನ ಸಂಪತ್ತನ್ನು(ಧನ) ಪಡೆದ ಆತ(ಧನಂಜಯಃ), ಭಕ್ತಿ ಪೂರ್ವಕವಾಗಿ ಉದ್ದಂಡ ನಮಸ್ಕಾರ ಮಾಡಿ, ತನ್ನೆರಡು ಕೈಯನ್ನು ಜೋಡಿಸಿ (ಕೈಮುಗಿದು) ನಿಂತು, ಭಗವಂತನನ್ನು ಸ್ತೋತ್ರ ಮಾಡಲಾರಂಭಿಸಿದ.
·  ಶ್ಲೋಕ - 15
ಅರ್ಜುನ ಉವಾಚ ।
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥೧೫॥
ಅರ್ಜುನ ಉವಾಚ-ಅರ್ಜುನ ನುಡಿದನು :
ಪಶ್ಯಾಮಿ ದೇವಾಂನ್ ತವ ದೇವ ದೇಹೇ ಸರ್ವಾನ್ ತಥಾ ಭೂತ ವಿಶೇಷ ಸಂಘಾನ್ ।
ಬ್ರಹ್ಮಾಣಮ್ ಈಶಮ್ ಕಮಲಾಸನಸ್ಥಂ ಋಷೀನ್ ಚ ಸರ್ವಾನ್ ಉರಗಾನ್ ಚ ದಿವ್ಯಾನ್ --ಓ ದೇವ, ನಿನ್ನ ಮೈಯಲ್ಲಿ ಕಾಣುತ್ತಿದ್ದೇನೆ ದೇವತೆಗಳನ್ನೆಲ್ಲ. ಅಂತೆಯೆ ಬಗೆಬಗೆಯ ಜೀವಿಗಳ ಗಡಣಗಳನ್ನು. ಬ್ರಹ್ಮನನ್ನು, ಅವನ ತೊಡೆಯಲ್ಲಿ ಕುಳಿತ ಶಿವನನ್ನು, ಎಲ್ಲ ಋಷಿಗಳನ್ನು ಮತ್ತು ದಿವ್ಯ ಶಕ್ತಿಯ ಉರಗಗಳನ್ನು.
ಅರ್ಜುನ ಕೃಷ್ಣನ ಅತ್ಯದ್ಭುತ ರೂಪವನ್ನು ನೋಡುತ್ತಿದ್ದಾನೆ. ಆತನಿಗೆ ಸಮಸ್ತ ದೇವತೆಗಳೂ ಆ ಭಗವಂತನೊಳಗೆ ಕಾಣುತ್ತಿದ್ದಾರೆ. ದೇವತೆಗಳು, ರಾಕ್ಷಸರು, ಅಸುರರು, ಗಂಧರ್ವರು, ಅಪ್ಸರರು, ಯಕ್ಷರು , ಮನುಷ್ಯರು, ಪ್ರಾಣಿಗಳು ಹೀಗೆ ಎಲ್ಲರು. ಮುಖ್ಯವಾಗಿ ಅರ್ಜುನ ಭಗವಂತನೊಳಗೆ ಚತುರ್ಮುಖ ಬ್ರಹ್ಮ, ಶಿವ, ಮಹಾನ್ ಋಷಿಗಳು ಮತ್ತು ದೇವಾಂಶ ಸಂಭೂತ ದಿವ್ಯ ಉರಗಗಳನ್ನು ಆ ಶೇಷಶಾಯಿ ಭಗವಂತನಲ್ಲಿ ಕಾಣುತ್ತಿದ್ದಾನೆ.
·  ಶ್ಲೋಕ - 16
ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋSನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾSದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥೧೬॥
ಅನೇಕ ಬಾಹು ಉದರ ವಕ್ತ್ರ ನೇತ್ರಮ್ ಪಶ್ಯಾಮಿ ಸರ್ವತಃ ಅನಂತ ರೂಪಮ್ ।
ನ ಅಂತಮ್ ನ ಮಧ್ಯಮ್ ನ ಪುನಃ ತವ ಆದಿಮ್ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ಎಣಿಕೆಯಿರದ ತೋಳುಗಳು, ಒಡಲು, ಬಾಯಿ, ಕಣ್ಣುಗಳು. ಎಲ್ಲೆಡೆಯು ಎಣಿಕೆಯಿರದ ರೂಪಗಳ ನಿನ್ನನ್ನು ಕಾಣುತ್ತಿದ್ದೇನೆ. ಓ ಪೊಡವಿಗೊಡೆಯನೆ, ಓ ವಿಶ್ವರೂಪನೆ, ನಿನ್ನ ತುದಿ ಕಾಣುತ್ತಿಲ್ಲ; ಇಲ್ಲ ನಡು; ಇಲ್ಲ ಬುಡ ಕೂಡ.
ಎಲ್ಲಿ ನೋಡಿದರಲ್ಲಿ ಮುಖ, ಎಲ್ಲಿ ನೋಡಿದರಲ್ಲಿ ಕಣ್ಣು, ಎಲ್ಲಿ ನೋಡಿದರಲ್ಲಿ ತೋಳು, ಎಲ್ಲಿ ನೋಡಿದರಲ್ಲಿ ಉದರ. ಈ ಶ್ಲೋಕ ಪುರುಷಸೂಕ್ತಕ್ಕೆ ವ್ಯಾಖ್ಯಾನ ರೂಪದಲ್ಲಿದೆ. ಪುರುಷ ಸೂಕ್ತದಲ್ಲಿ ಹೇಳುವಂತೆ: ಓಂ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | -ಭಗವಂತನಿಗೆ ಸಹಸ್ರಾರು ಶಿರಗಳು, ಸಹಸ್ರಾರು ಕಣ್ಣುಗಳು, ಸಹಸ್ರಾರು ಪಾದಗಳು. ಎಲ್ಲಿ ಏನನ್ನು ಕಾಣಬೇಕೆಂದು ಅಪೇಕ್ಷೆ ಪಟ್ಟು ಅರ್ಜುನ ಕಂಡನೋ ಅಲ್ಲಿ ಆತ ಬಯಸಿದ್ದು ಕಾಣಿಸಿತು. ಇದು ಒಂದು ವಿಚಿತ್ರ ಅನುಭವ. ಇದನ್ನು ವಿವರಿಸುವುದು ಅಸಾಧ್ಯ. ಕೇವಲ ಅನುಭವಿಸಬೇಕು. ಅನಂತ ರೂಪಿ ಭಗವಂತನ ರೂಪಕ್ಕೆ ತುದಿ ಬುಡವಿಲ್ಲ. ಸಮಸ್ತ ಜಗದ ಸ್ವಾಮಿ ಭಗವಂತ ಅಣುವಿಗಿಂತ ಅಣು ಕೂಡಾ ಹೌದು, ಮಹತೋಮಯ ಕೂಡ ಹೌದು. ಭಗವಂತನ ಈ ರೂಪವನ್ನು ಧ್ಯಾನದಲ್ಲಿ ಕಾಣುವುದು ಬಹಳ ಕಷ್ಟ. ಶಾಸ್ತ್ರಕಾರರು ಹೇಳುವಂತೆ ಧ್ಯಾನದಲ್ಲಿ ಭಗವಂತನ ಪೂರ್ಣ ಶರೀರ ಕಾಣಬೇಕು ಎಂದುಕೊಂಡು ಕುಳಿತರೆ ಏನೂ ಕಾಣದೆ ಇರಬಹುದು. ಅದಕ್ಕಾಗಿ ಕೊಳಲನೂದುವ ಆತನ ಒಂದು ಕಿರಿ ಬೆರಳಿನ ಮೇಲೋ, ಆತನ ಕರುಣಾಪೂರ್ಣ ಕಣ್ಣಿನ ನೋಟವನ್ನೋ ಕೇಂದ್ರೀಕರಿಸಿ ಧ್ಯಾನ ಅಭ್ಯಾಸ ಮಾಡುವುದು ಒಳ್ಳೆಯದು.
·  ಶ್ಲೋಕ - 17
ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತನಲಾರ್ಕದ್ಯುತಿಮಪ್ರಮೇಯಮ್ ೧೭॥
ಕಿರೀಟಿನಮ್ ಗದಿನಮ್ ಚಕ್ರಿಣಮ್ ಚ ತೇಜೋರಾಶಿಮ್ ಸರ್ವತಃ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಮ್ ದುರ್ನಿರೀಕ್ಷ್ಯಮ್ ಸಮಂತಾತ್ ದೀಪ್ತ ಅನಳ ಅರ್ಕ ದ್ಯುತಿಮ್ ಅಪ್ರಮೇಯಮ್ತಲೆಯಲ್ಲಿ ಮುಕುಟ. ಕೈಯಲ್ಲಿ ಗದೆ ಮತ್ತು ಚಕ್ರ. ಬೆಳಕಿನ ಮುದ್ದೆಯಾಗಿ ಎಲ್ಲೆಡೆಯು ಕೋರಯಿಸುವ ರೂಪ. ಸುಡುವ ಬೆಂಕಿಯಂತೆ, ಸೂರ್ಯನಂತೆ ಪ್ರಕಾಶವುಳ್ಳ , ಅಳೆಯಲಾಗದ ರೂಪ. ಕಣ್ಕುಕ್ಕುವ ನಿನ್ನ ಆ ರೂಪವನ್ನೇ ಸುತ್ತಲು ಕಾಣುತ್ತಿದ್ದೇನೆ.
ಸರ್ವಾಭರಣಭೂಶಿತನಾದ ಮನಮೋಹಕ ರೂಪ ಒಂದು ಕಡೆಯಾದರೆ, ಚಕ್ರ-ಗದೆಯನ್ನು ಹಿಡಿದ ಶತ್ರು ಭಯಂಕರ ರೂಪ ಇನ್ನೊಂದೆಡೆಗೆ. ಎಲ್ಲವೂ ಒಂದು ಬೆಳಕಿನ ಪುಂಜದಂತೆ ಕಾಣುತ್ತಿದೆ. ನೋಡಲಾಗದ್ದನ್ನು ಸ್ಪಷ್ಟವಾಗಿ ನೋಡುತ್ತಿರುವ ಅನುಭವ. ಅದು ಸುಡುವ ಬೆಂಕಿಯೋ ಅಥವಾ ಹೊಳೆವ ಸೂರ್ಯನೋ ತಿಳಿಯುತ್ತಿಲ್ಲ. ಅದೊಂದು ಅಳೆಯಲಾಗದ, ಅರಿಯಲಾಗದ ಅತ್ಯದ್ಭುತ ಅಪೂರ್ವ ರೂಪ.
·  ಶ್ಲೋಕ - 18
ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ ೧೮॥
ತ್ವಮ್ ಅಕ್ಷರಮ್ ಪರಮಮ್ ವೇದಿತವ್ಯಮ್ ತ್ವಮಸ್ಯ ವಿಶ್ವಸ್ಯ ಪರಮ್ ನಿಧಾನಮ್ ।
ತ್ವಮ್ ಅವ್ಯಯಃ ಶಾಶ್ವತ ಧರ್ಮಗೋಪ್ತಾ ಸನಾತನಃ ತ್ವಮ್ ಪುರುಷಃ ಮತಃ ಮೇ ನೀನು ಅಳಿವಿರದವನು. ಅರಿಯಬೇಕಾದ ಹಿರಿಯ ತತ್ವ. ನೀನು ಈ ಜಗಕೆಲ್ಲ ಹಿರಿಯಾಸರೆ. ನೀನು ಬದಲಾಗದವನು. ಸನಾತನಧರ್ಮವನ್ನು ಸಲಹುವವನು. ನೀನು ಪುರಾಣ ಪುರುಷೋತ್ತಮ ಎಂದು ಗೊತ್ತು ನನಗೆ.
ನೀನು ಅಕ್ಷರಂ ಪರಮಂಎನ್ನುತ್ತಾನೆ ಅರ್ಜುನ. ಇಲ್ಲಿ ಅಕ್ಷರ ಎಂದರೆ ಸರ್ವ ವ್ಯಾಪ್ತ, ನಾಶವಿಲ್ಲದ ತತ್ವ, ಸರ್ವಾಭೀಷ್ಟಪ್ರದ, ಸರ್ವಶಬ್ದವಾಚ್ಯ ಇತ್ಯಾದಿ. ನಾವು ತಿಳಿದುಕೊಳ್ಳಬೇಕಾಗಿರುವುದರಲ್ಲೇ ಸರ್ವಶ್ರೇಷ್ಠವಾದದ್ದು- ಭಗವಂತ. ಅರ್ಜುನ ಹೇಳುತ್ತಾನೆನೀನು ಇಡೀ ಜಗತ್ತಿನ ಸೃಷ್ಟಾರ, ಆಶ್ರಯದಾತ. ಸಮಸ್ತ ಜಗತ್ತಿನ ಮೂಲಾಶ್ರಯ. ಅನಾಧಿ ಅನಂತ ಕಾಲದಲ್ಲಿ ಶಾಶ್ವತ ಧರ್ಮವನ್ನು ರಕ್ಷಣೆ ಮಾಡುವವನು ನೀನು. ಸಮಸ್ತ ವೇದ ಪ್ರತಿಪಾದ್ಯ ನೀನು ಎನ್ನುವುದು ನನಗೆ ಮನವರಿಕೆಯಾಯಿತುಎಂದು. [ಈ ಶ್ಲೋಕದಲ್ಲಿ ಬಂದಿರುವ ಹಲವು ವಿಶೇಷ ಪದಗಳ(ಅಕ್ಷರಃ, ಪುರುಷಃ, ಅವ್ಯಯಃ, ಶಾಶ್ವತಧರ್ಮ, ಇತ್ಯಾದಿ)ವಿಶೇಷ ಅರ್ಥವನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ವಿಶ್ಲೇಷಿಸಿರುವುದರಿಂದ ಇಲ್ಲಿ ಆ ವಿವರಣೆಯನ್ನು ಕೊಟ್ಟಿಲ್ಲ].
·  ಶ್ಲೋಕ - 19
ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್ ॥೧೯॥
ಅನಾದಿ ಮಧ್ಯಾಂತಮ್ ಅನಂತವೀರ್ಯಮ್ ಅನಂತಬಾಹುಮ್ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಮ್ ದೀಪ್ತ ಹುತಾಶ ವಕ್ತ್ರಂ ಸ್ವತೇಜಸಾ ವಿಶ್ವಮ್ ಇದಮ್ ತಪಂತಮ್ಗುಣಗಳಿಗೆ ಬುಡವಿಲ್ಲ; ನಡುವಿಲ್ಲ; ತುದಿಯಿಲ್ಲ. ಆಳವನ್ನು ಅಳೆದವರಿಲ್ಲ. ಎಣಿಕೆಯಿರದ ತೋಳುಗಳು. ಸೂರ್ಯಚಂದ್ರರನು ಹುಟ್ಟಿಸಿದ ಕಣ್ಣುಗಳು. ಉರಿವ ಬೆಂಕಿಯನುಗುಳುವ ಬಾಯಿ. ಕಾಣುತ್ತಿದ್ದೇನೆ ತನ್ನ ಥಟ್ಟುರಿಯಿಂದ ಈ ಜಗವ ಸುಟ್ಟುರಿವ ನಿನ್ನನ್ನು.
ನಿನ್ನ ಗುಣಗಳಿಗೆ ಆದಿ ಅಂತ ನಡುವೆಂಬುದಿಲ್ಲ. ನೀನು ಅನಂತವೀರ್ಯ. ಆದಿ ಅಂತವಿಲ್ಲದ ಪರಾಕ್ರಮ ನಿನ್ನದು. ನಾಶವಿಲ್ಲದ ಅನಂತ ಅವಯವಗಳು. ನಿನ್ನ ಕಣ್ಣುಗಳಿಂದ ಹುಟ್ಟಿದ ಆ ಸೂರ್ಯ ಚಂದ್ರರು; ಉಗುಳುವ ಬೆಂಕಿಯ ಜ್ವಾಲೆ ನಿನ್ನ ಬಾಯಿಯಲ್ಲಿ. ನಿನ್ನ ತೇಜಸ್ಸಿನಿಂದ ಇಡೀ ವಿಶ್ವ ಸುಟ್ಟುರಿದಂತಿದೆ.
·  ಶ್ಲೋಕ - 20
ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾSದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥೨೦॥
ದ್ಯಾವಾಪೃಥಿವ್ಯೋಃ ಇದಮ್ ಅಂತರಮ್ ಹಿ ವ್ಯಾಪ್ತಮ್ ತ್ವಯಾ ಏಕೇನ ದಿಶಃ ಚ ಸರ್ವಾಃ ।
ದೃಷ್ಟ್ವಾ ಅದ್ಭುತಮ್ ರೂಪಮ್ ಉಗ್ರಮ್ ತವ ಇದಮ್ ಲೋಕತ್ರಯಮ್ ಪ್ರವ್ಯಥಿತಮ್ ಮಹಾತ್ಮನ್ ಈ ನೆಲ ಮುಗಿಲ ನಡುವೆಲ್ಲ ಒಂದೇ ರೂಪದಿಂದ ತುಂಬಿರುವೆ. ನಿನ್ನವೇ ರೂಪಗಳು ಎಲ್ಲ ದಿಕ್ಕುಗಳಲ್ಲು. ಓ ಮಹಾತ್ಮನೆ, ಅಚ್ಚರಿಯ, ಎದೆಗೆಡಿಸುವ ನಿನ್ನ ಈ ರೂಪವನ್ನು ಕಂಡು ಕಂಗೆಟ್ಟಿದೆ ಮೂರು ಲೋಕ.
ನಿನ್ನ ರೂಪ ಭೂಮಿ ಆಕಾಶವನ್ನು ವ್ಯಾಪಿಸಿ ನಿಂತಿದೆ. ಎಲ್ಲ ದಿಕ್ಕುಗಳಲ್ಲಿ ಅನಂತವಾಗಿ ವ್ಯಾಪಿಸಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ. ಮೂರು ಲೋಕದಲ್ಲಿ ನಿನ್ನ ರೂಪವನ್ನು ಕಂಡವರು ಈ ನಿನ್ನ ಉಗ್ರ ರೂಪವನ್ನು ನೋಡಿ ಕಂಗೆಡುತ್ತಿದ್ದಾರೆ. ಜಗತ್ತು ತತ್ತರಿಸುತ್ತಿದೆ ಎಂದು ದಿಗ್ಭ್ರಮೆಯಿಂದ ಅರ್ಜುನ ತನ್ನ ಅನುಭವವನ್ನು ಭಗವಂತನಲ್ಲಿ ಹೇಳಿಕೊಳ್ಳುತ್ತಾನೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.