ಭಗವದ್ಗೀತೆ - ಪ್ರಸ್ತಾವನೆ ಮತ್ತು ಪೀಠಿಕೆ

ಕರ್ತೃ-ಬನ್ನಂಜೆ ಗೋವಿಂದಾಚಾರ್ಯ                                                                  ಕೃಪೆ-ನಮ್ಮ ಕನ್ನಡನಾಡು
      
            ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ ಎಂದು ಹೆಸರುಪಡೆದಿದೆ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲ ಅದ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ-ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತ ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂಥಹ  ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ.

ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ.



ಮಹಾಭಾರತ ಎಳುಪಾತ್ರಗಳ ಮೂಲಕ ಹದಿನೆಂಟು ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:



೧. ಧರ್ಮರಾಜ - ಧರ್ಮ(೧)

೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧).

೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ(೧೪)

೪.೫. ನಕುಲ-ಸಹದೇವ - ಶೀಲ ಮತ್ತು ವಿನಯ(೧೬)

೬. ದ್ರೌಪದಿ - ವೇದವಿದ್ಯೆ(೧೭)

೭. ಶ್ರೀಕೃಷ್ಣ ವೇದವೇದ್ಯ(೧೮)



ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ, ಮನನ ಮತ್ತು ನಿದಿಧ್ಯಾಸನದೊಂದಿಗೆ  ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು.   ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು.



ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು . ಇದು ತತ್ವಶಾಸ್ತ್ರದ ಎಲ್ಲ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ. ಮಹಾಭಾರತದಲ್ಲಿ ಕೂಡ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.

ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು  ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ  ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ  ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ  ಪಾಂಡವರು ಸೋತು  ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ಮಾನವನ ಜೀವನ್ಮೊಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಬನ್ನಿ ಇಂತಹ ಅಪೂರ್ವ ಕೃತಿಯನ್ನು ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ. 

ಪೀಠಿಕೆ
             ಸಾಮಾನ್ಯವಾಗಿ ಭಗವದ್ಗೀತೆಗೆ ಭಾಷ್ಯ ಬರೆಯುವವರು ಮೊದಲ ಅಧ್ಯಾಯಕ್ಕೆ ಹೆಚ್ಚು ಒತ್ತು ಕೊಡದೆ, ನೇರವಾಗಿ ಎರಡನೆ ಅಧ್ಯಾಯದಲ್ಲಿ- 'ಯುದ್ಧರಂಗದಲ್ಲಿ  ಗೊಂದಲಕ್ಕೊಳಗಾದ ಅರ್ಜುನನಿಗೆ ಕೃಷ್ಣನ ಉಪದೇಶ' ಎಂದು ಪ್ರಾರಂಭಿಸುತ್ತಾರೆ. ಆದರೆ ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ(psychology) ಸಂಬಂಧಪಟ್ಟ ಅನೇಕ ವಿಷಯಗಳಿವೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ಈ ಅಧ್ಯಾಯವನ್ನು 'ಅರ್ಜುನ ವಿಷಾದ ಯೋಗ' ಎಂದು ಕರೆಯುವುದು ಪ್ರಸ್ತುತವಲ್ಲ. ಈ ಅಧ್ಯಾಯದಲ್ಲಿ ಯುದ್ಧ ನಡೆಯುವ ಪೂರ್ವ ಕ್ಷಣದಲ್ಲಿ ಯುದ್ಧ ಭೂಮಿಯಲ್ಲಿ ನಿಂತಿದ್ದ  ಅರ್ಜುನ ಹಾಗು ದುರ್ಯೋಧನರ ಮನಸ್ಥಿತಿ ಹೇಗಿತ್ತು ಎನ್ನುವ ಅಪೂರ್ವ ವಿಶ್ಲೇಷಣೆ ಅಡಗಿದೆ. ಅರ್ಜುನನ ಮನಸ್ಸಿನ ಗೊಂದಲಕ್ಕೆ ಶ್ರೀಕೃಷ್ಣ ಪರಿಹಾರದ ಉಪದೇಶ ಕೊಟ್ಟ, ಆದರೆ ದುಷ್ಟ ದುರ್ಯೋಧನ ಗೊಂದಲದಿಂದಲೇ ಸತ್ತ. ಆದ್ದರಿಂದ ಮೊದಲ ಅಧ್ಯಾಯವನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಕಾಣದೆ ಇಲ್ಲಿರುವ ಮನಃಶಾಸ್ತ್ರವನ್ನು ಅರಿಯಲು ಪ್ರಯತ್ನಿಸಬೇಕು. ಇಲ್ಲಿ ಹೇಳಿರುವ ಮನಃಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟಿದ್ದು. ಈ ಎಚ್ಚರದಿಂದ ಇಲ್ಲಿ ಬರುವ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಮಗೆ ಈ ಅಧ್ಯಾಯ ಅರ್ಥವಾಗುತ್ತದೆ.  
ಭಗವದ್ಗೀತೆ ಪ್ರಾರಂಭವಾಗುವುದು ಧೃತರಾಷ್ಟ್ರನ ಪ್ರಶ್ನೆಯಿಂದ. ಧೃತರಾಷ್ಟ್ರ ಎಂದರೆ ರಾಷ್ಟ್ರವನ್ನು(ಪುರವನ್ನು) ಧಾರಣೆ ಮಾಡಿದವ ಎಂದರ್ಥ. ಅಂದರೆ ಸತ್ಯದ ಬಗ್ಗೆ ಕುರುಡಾಗಿ ಕಣ್ಮುಚ್ಚಿ ಮಲಗಿರುವ ಜೀವವೇ ಧೃತರಾಷ್ಟ್ರ. ದುರ್ಯೋಧನ ಎನ್ನುವುದು ನಮ್ಮೊಳಗಿರುವ ದುಷ್ಟತನದ ಪರಾಕಾಷ್ಠೆಯ ಸಂಕೇತ. ಭೀಷ್ಮ-ದ್ರೋಣ-ಕೃಪಾ-ಶಲ್ಯ-ಕರ್ಣ-ಇವರೆಲ್ಲರೂ ನಮ್ಮ ಇಂದ್ರಿಯಗಳಂತೆ. ನಮ್ಮ ಮನಸ್ಸಿನಲ್ಲಿರುವ ಕೆಟ್ಟತನದಿಂದ ನಾವು ನಮ್ಮಲ್ಲಿರುವ ಅಮೂಲ್ಯವಾದ ಇಂದ್ರಿಯಗಳನ್ನು ಕೆಟ್ಟ ಕಾರ್ಯಕ್ಕೆ ಬಳಸುತ್ತೇವೆ. ವಸ್ತುತಃ ಇಂದ್ರಿಯಗಳು ಕೆಟ್ಟವಲ್ಲ. ಆದರೆ ಕೆಟ್ಟದ್ದರ ಜೊತೆ ಸೇರಿ ಕೆಟ್ಟದ್ದನ್ನು ಮಾಡುತ್ತವೆ. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕದಲ್ಲಿ, ಮಹಾಭಾರತದ ಪ್ರತಿಯೊಂದು ಪಾತ್ರದಲ್ಲಿ ಅತ್ಯಮೂಲ್ಯವಾದ ಹಾಗು ಗುಹ್ಯವಾದ ಅರ್ಥ ಅಡಗಿದೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.