ಭಗವದ್ಗೀತೆ ಅಧ್ಯಾಯ-10 (ಶ್ಲೋಕ 31 ರಿಂದ 42)

 ಭಗವದ್ಗೀತೆ ಅಧ್ಯಾಯ-10 (ಶ್ಲೋಕ 31 ರಿಂದ 42)
·  ಶ್ಲೋಕ - 31
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ ।
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ೩೧॥
ಪವನಃ ಪವತಾಮ್ ಅಸ್ಮಿ ರಾಮಃ ಶಸ್ತ್ರಭೃತಾಮ್ ಅಹಮ್ ।
ಝಷಾಣಾಮ್ ಮಕರಃ ಚ ಅಸ್ಮಿ ಸ್ರೋತಸಾಮ್ ಅಸ್ಮಿ ಜಾಹ್ನವೀಚಲಿಸುವ ವಸ್ತುಗಳಲ್ಲಿ ಮಿಗಿಲಾದ ಗಾಳಿ ನಾನು.[ಪ=ಜಗತ್ತನ್ನು ಪಾಲಿಸುವ ದೇವತೆಗಳಿಂದಲೂ, ವನ=ಸೇವ್ಯನಾದ್ದರಿಂದಪವನಎನ್ನಿಸಿ ಗಾಳಿಯಲ್ಲಿದ್ದೇನೆ.] ಆಯುಧದಿಂದ ಹೋರಬಲ್ಲ ವೀರರಲ್ಲಿ ನಾನು [ರ=ಆನಂದರೂಪನಾಗಿ, ಅಮ=ಅಪರಿಮಿತನಾದ್ದರಿಂದ ಮತ್ತು ಲೋಕವನ್ನು ರಮಿಸುವುದರಿಂದ] ರಾಮನೆಂದು ಹೆಸರಾಗಿದ್ದೇನೆ. ಮೀನುಗಳಲ್ಲಿ ತಿಮಿಂಗಿಲ ನಾನು. [ಮ=ತಿಳಿವನ್ನು, ಕರ=ಕೊಡುವವನಾದ್ದರಿಂದ ಮಕರಎನ್ನಿಸಿ ಮಕರದಲ್ಲಿದ್ದೇನೆ.] ನದಿಯಲ್ಲಿ ಗಂಗೆ ನಾನು. [ಜಹತ್ =ಕಾಮನೆಗಳನ್ನು ತೊರೆದವರಿಗೆ, ಅವಿ=ರಕ್ಷಕನಾಗಿ, ‘ಜಾಹ್ನವಿಎನ್ನಿಸಿ ಗಂಗೆಯಲ್ಲಿದ್ದೇನೆ.]
ಮುಂದುವರಿದು ಕೃಷ್ಣ ಹೇಳುತ್ತಾನೆ ಪವನಃ ಪವತಾಮಸ್ಮಿಎಂದು. ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ಆಕಾಶದಲ್ಲಿ ಸಂಚರಿಸುವ ಶಕ್ತಿಗಳಲ್ಲೇ ದೊಡ್ಡ ವಿಭೂತಿ ವಾಯು’. ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಪವನಃ. ಪವತೇ ಇತಿ ಪವನಃ - ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ, ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ '' ಎಂದರೆ 'ಪಾಲನೆ'. ನಮ್ಮನ್ನು ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ, ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.
ಆಯುಧವನ್ನು ಹಿಡಿದು ಹೋರಾಡಬಲ್ಲ ವೀರರಲ್ಲಿ ರಾಮ ನಾನುಎಂದು ತನ್ನ ಸ್ವರೂಪ ವಿಭೂತಿಯನ್ನು ವಿವರಿಸುತ್ತಾನೆ ಕೃಷ್ಣ. ಭಗವಂತನ ಇತರ ಎಲ್ಲ ಅವತಾರಕ್ಕಿಂತ ರಾಮಾವತಾರದಲ್ಲಿ ಆತ ಕೋದಂಡಪಾಣಿಯಾಗಿ ಶಸ್ತ್ರದ ಪೂರ್ಣ ಬಳಕೆ ಮಾಡಿ ಶತ್ರು ನಿಗ್ರಹ ಮಾಡಿದ.
ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದಸ್ವರೂಪ ಹಾಗು ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರು ಕೂಪಗೊಂಡಾಗಲೂ ಸಹ, ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ. ಬದಲಿಗೆ "ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಸಂತೋಷದಿಂದ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ, ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ. ಇದು ಜಗತ್ತಿಗೆ ಆನಂದ ಕೊಟ್ಟ ಭಗವಂತನ ಅಮಿತಾನಂದಸ್ವರೂಪ ವಿಭೂತಿ.
ನೀರಿನಲ್ಲಿರುವ ಮೀನುಗಳಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದೊಡ್ಡ ಆಕಾರವುಳ್ಳದ್ದು ತಿಮಿಂಗಿಲ. ಕೃಷ್ಣ ಹೇಳುತ್ತಾನೆ ಝಷಾಣಾಂ ಮಕರಶ್ಚಾಸ್ಮಿಎಂದು. ಇಲ್ಲಿ ಮಕರ ಎಂದರೆ ತಿಮಿಂಗಿಲ. ಭಗವಂತ ಮಕರಃ ಶಬ್ದವಾಚ್ಯನಾಗಿ ತಿಮಿಂಗಿಲನಲ್ಲಿ ವಿಶೇಷ ವಿಭೂತಿಯಾಗಿ ಅದಕ್ಕೆ ಆ ಶಕ್ತಿಯನ್ನು ಕೊಟ್ಟ. ತಿಳಿವನ್ನು(ಮ) ಕೊಡುವ(ಕರ) ಭಗವಂತ ಮಕರಃ.
ನದಿಗಳಲ್ಲಿ ಗಂಗೆ ನಾನುಎನ್ನುತ್ತಾನೆ ಕೃಷ್ಣ. ನದಿಗಳಲ್ಲೇ ಶ್ರೇಷ್ಠ-ಗಂಗೆ. ಈ ನದಿ ನೀರಿಗೆ ಸಾಟಿಯಾದ ಔಷಧ ಇನ್ನೊಂದಿಲ್ಲ. ಗಂಗೆಯಲ್ಲಿ ಮಿಂದರೆ ನಾವು ನಮ್ಮ ಮನಃ ಶುದ್ಧಿ ಮಾಡಿಕೊಳ್ಳಬಹುದು. ಅಲ್ಲಿರುವ ಯಾವುದೇ ಕೊಳೆ ನಮಗಂಟದು. ಶೇಖರಿಸಿಟ್ಟರೆ ಎಂದೂ ಕೆಡದ ನೀರು ಗಂಗೆ. ಗಂಗೆಗೆ ಈ ಮಹಾನ್ ಶಕ್ತಿಯನ್ನು ಕೊಟ್ಟ ಭಗವಂತನ ವಿಭೂತಿನಾಮಜಾಹ್ನವಿ’. ‘ಜಹ್ನುಅಂದರೆ ತೊರೆಯುವುದು. ಕ್ಷುದ್ರ ಭೌತಿಕ ಬಯಕೆಗಳನ್ನು ತೊರೆದು, ಭಗವಂತನ ಮಾರ್ಗದಲ್ಲಿ ಸಾಗುವವರ ರಕ್ಷಣೆ ಮಾಡುವ ಭಗವಂತ ಜಾಹ್ನವಿ’. ಇದು ಭಗವಂತನ ಸ್ತ್ರೀರೂಪ ಪ್ರತೀಕ ನಾಮ. ತಾಯಿಯಂತೆ ಸಲಹುವ ಭಗವಂತನನ್ನು ಸ್ತ್ರೀ ರೂಪದಲ್ಲಿ ಕೂಡ ಉಪಾಸನೆ ಮಾಡುತ್ತಾರೆ. ಜಾಹ್ನವಿ ಭಗವಂತನ ಸ್ತ್ರೀರೂಪದ ನಾಮ.
·  ಶ್ಲೋಕ - 32
ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ ೩೨॥
ಸರ್ಗಾಣಾಮ್ ಆದಿಃ ಅಂತಃ ಚ ಮಧ್ಯಮ್ ಚ ಏವಅಹಮ್ ಅರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಮ್ ವಾದಃ ಪ್ರವದತಾಮ್ ಅಹಮ್ಓ ಅರ್ಜುನ, ಜೀವಿಗಳ ಹುಟ್ಟಿಗೆ, ಸಾವಿಗೆ, ಇರವಿಗೆ ಕಾರಣ ನಾನು. ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು. [ಜೀವರಿಗೆ ಒಡೆಯನಾದ್ದರಿಂದ ಅಧ್ಯಾತ್ಮಎನ್ನಿಸಿ, ಜ್ಞಾನರೂಪನಾದ್ದರಿಂದ ವಿದ್ಯಾಎನ್ನಿಸಿ ಅಧ್ಯಾತ್ಮ ವಿದ್ಯೆಯಲ್ಲಿದ್ದೇನೆ.] ಚರ್ಚಿಸುವವರ ಚರ್ಚೆಯಲ್ಲಿ [ತತ್ವದ ತಿಳಿವಿಗಾಗಿ ನಡೆಸುವ] ವಾದ ನಾನು. [ಎಲ್ಲ ನಾಮಗಳಿಂದ ವಾಚ್ಯನಾಗಿ ವಾದಎನ್ನಿಸಿ ವಾದದಲ್ಲಿದ್ದೇನೆ.]
ಪ್ರಪಂಚದಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲಿಯೂ ಭಗವಂತನ ವಿಭೂತಿ ಅಡಗಿದೆ. ನಮಗೆ ಮೇಲ್ನೋಟಕ್ಕೆ ವ್ಯರ್ಥವೆಂದು ಕಾಣುವ ವಸ್ತುವಿನಲ್ಲೂ ಕೂಡಾ ಇನ್ನೊಂದು ವಸ್ತುವಿನಲ್ಲಿರದ ಒಂದು ವಿಶಿಷ್ಠಗುಣ(Exclusive Quality) ಅಡಗಿರುತ್ತದೆ. ಆದ್ದರಿಂದ ಒಂದು ಹುಲ್ಲುಕಡ್ಡಿಯಿಂದ ಹಿಡಿದು ಚತುರ್ಮುಖ ಬ್ರಹ್ಮನವರೆಗೆ ಎಲ್ಲವೂ ಭಗವಂತನ ವಿಭೂತಿ. ಇಲ್ಲಿ ಕೃಷ್ಣ ಕೇವಲ ಆ ಗುಂಪಿನಲ್ಲಿ ವಿಶಿಷ್ಠಭೂತಿಯನ್ನು ಹೇಳಿದ್ದಾನೆ ಅಷ್ಟೆ. ಜೀವ ಹುಟ್ಟುವ ಮೊದಲು ಇದ್ದವ, ಜೀವದ ಇರವಿಗೆ ಕಾರಣನಾದವ, ಕೊನೆಗೆ ಸಂಹಾರಶಕ್ತಿಯಾಗಿ ನಿಲ್ಲುವವ ಆ ಭಗವಂತ. ಹೀಗೆ ಹುಟ್ಟುವಾಗ, ಇರುವಾಗ ಮತ್ತು ಅಂತದಲ್ಲೂ ನಾನಿದ್ದೇನೆಎನ್ನುತ್ತಾನೆ ಕೃಷ್ಣ. ಈ ವಿಷಯ-ಜ್ಞಾನಾರ್ಜನ ಮಾಡಿದ, ಸಾತ್ವಿಕನಾದ, ನಿನಗೆ ತಿಳಿದೇ ಇದೆಎನ್ನುವ ಅರ್ಥದಲ್ಲಿ ಕೃಷ್ಣ ಇಲ್ಲಿ ಪಾರ್ಥನನ್ನುಅರ್ಜುನಎಂದು ವಿಶೇಷವಾಗಿ ಸಂಬೋಧಿಸಿದ್ದಾನೆ.
ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನುಎನ್ನುತ್ತಾನೆ ಕೃಷ್ಣ. ಭಗವಂತನನ್ನು ಸ್ಪರ್ಶಮಾಡುವ ಅಧ್ಯಾತ್ಮ ವಿದ್ಯೆಯಲ್ಲಿ ಪರಮಾತ್ಮ ತುಂಬಿದ್ದಾನೆ. ಎಲ್ಲ ಆತ್ಮಗಳಿಗೆ ಹಿರಿದಾದ ಭಗವಂತ ಅಧಿಕ-ಆತ್ಮ(ಅಧ್ಯಾತ್ಮ). ಅಧ್ಯಾತ್ಮ ವಿದ್ಯೆಯನ್ನು ಪಡೆಯಬೇಕಾದರೆ ನಾವು ಇನ್ನೊಬ್ಬರೊಂದಿಗೆ ಸಂವಾದ ಮಾಡಬೇಕು. ಇದು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ, ಜ್ಞಾನ ದಾಹವನ್ನು ಇಂಗಿಸಿಕೊಳ್ಳುವುದಕ್ಕಾಗಿ ಮಾಡುವ ಶಾಸ್ತ್ರೀಯ ಚರ್ಚೆ. ಇಂತಹ ಚರ್ಚೆಯಲ್ಲಿ ವಾದಃ' ವಾಚ್ಯನಾಗಿ ಭಗವಂತನಿರುತ್ತಾನೆ. ಎಲ್ಲ ನಾಮಗಳಿಂದ ವಾಚ್ಯನಾದ ಭಗವಂತ ವಾದಃ.
·  ಶ್ಲೋಕ - 33
ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮೇವಾಕ್ಷಯಃ ಕಾಲೋ ಧಾತಾSಹಂ ವಿಶ್ವತೋಮುಖಃ ೩೩॥
ಅಕ್ಷರಾಣಾಮ್ ಅಕಾರಃ ಅಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮ್ ಏವ ಅಕ್ಷಯಃ ಕಾಲಃ ಧಾತಾ ಅಹಮ್ ವಿಶ್ವತೋಮುಖಃ ಅಕ್ಷರಗಳಲ್ಲಿ ಮೊದಲ ಅಕಾರ ನಾನು. [ಎಂದು ಕರೆಸಿಕೊಂಡು, ‘ಅಕಾರಎನ್ನಿಸಿ ಅ-ಕಾರದಿಂದ ವಾಚ್ಯನಾಗಿದ್ದೇನೆ.] ಸಮಾಸಗಳ ಗುಂಪಿನಲ್ಲಿ ದ್ವಂದ್ವ ಸಮಾಸ ನಾನು. [ಎರಡು ರೂಪಗಳಿಂದ ಒಳಗೂ ಹೊರಗೂ ಇರುವುದರಿಂದ ದ್ವಂದ್ವಎನ್ನಿಸಿ ದ್ವಂದ್ವ ಸಮಾಸದಲ್ಲಿದ್ದೇನೆ.] ಅಳಿವಿರದ ನಾನೆ [ಕಾಲದಲ್ಲಿದ್ದು] ಕಬಳಿಸುವವನು. ಎಲ್ಲೆಡೆ ತುಂಬಿದ್ದು ಎಲ್ಲವನ್ನು ಸಲಹುವವನೂ ನಾನೆ.
ಹಿಂದೆ ಶಬ್ದಗಳಲ್ಲಿ ಓಂಕಾರವನ್ನು ಹೇಳಿದ್ದ ಕೃಷ್ಣ, ಇಲ್ಲಿ ಅಕ್ಷರದಲ್ಲಿ ತನ್ನ ವಿಭೂತಿಯನ್ನು ಹೇಳುತ್ತ ಹೇಳುತ್ತಾನೆ: ಅಕ್ಷರಾಣಾಮಕಾರೋಸ್ಮಿಎಂದು. ಪೂರ್ತಿಯಾಗಿ ಭಗವಂತನ ಎಲ್ಲ ಗುಣಗಳನ್ನೂ ಹೇಳುವ ವಿಶಿಷ್ಠ ಅಕ್ಷರ. ಅ- ಅಂದರೆ ಅಲ್ಲ’. ಭಗವಂತಅಲ್ಲ’. ಅಂದರೆ ನಮಗೆ ತಿಳಿದಿರುವ ಯಾವ ವಸ್ತುವೂ ಅವನಲ್ಲ. ಆತ ಪ್ರಪಂಚದಿಂದ ವಿಲಕ್ಷಣ. ಇಂತಹ ಭಗವಂತ ಇಲ್ಲ’. ಅಂದರೆ ಆತನಲ್ಲಿ ಯಾವ ದೋಷವೂ ಇಲ್ಲ. ಆತ ಸರ್ವಗುಣಪೂರ್ಣ. ಹೀಗೆ ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪೂರ್ಣ ಭಗವಂತ ಅ-ಕಾರವಾಚ್ಯನಾಗಿ ಕಾರದಲ್ಲಿ ತುಂಬಿದ್ದಾನೆ.
ಅಕ್ಷರದ ನಂತರ ಸಮಾಸಗಳ ಬಗ್ಗೆ ಹೇಳುತ್ತ ಕೃಷ್ಣ ಹೇಳುತ್ತಾನೆ: ದ್ವಂದ್ವಃ ಸಾಮಾಸಿಕಸ್ಯಎಂದು. ನಮಗೆ ತಿಳಿದಂತೆ ಯಾವುದೇ ಸಮಾಸವಾಗಬೇಕಾದರೆ ಅಲ್ಲಿ ಎರಡು ಶಬ್ದವಿರಬೇಕು (ಅಥವಾ ಒಂದು ಶಬ್ದ ಮತ್ತು ಒಂದು ಪ್ರತ್ಯಯವಿರಬೇಕು). ಇತರ ಎಲ್ಲಾ ಸಮಾಸಗಳಲ್ಲಿ ಒಂದು ಪದ, ಅಥವಾ ಎರಡೂ ಪದ(ಬಹುವ್ರೀಹಿ) ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳಬಹುದು. ಆದರೆ ದ್ವಂದ್ವ ಸಮಾಸದಲ್ಲಿ ಎರಡೂ ಪದಗಳು ಮುಖ್ಯ. ಉಭಯಪದ ಪ್ರಧಾನ ಸಮಾಸವಾದ ದ್ವಂದ್ವ ಸಮಾಸದಲ್ಲಿ ಭಗವಂತ ದ್ವಂದ್ವಃ ನಾಮಕನಾಗಿ ತುಂಬಿದ್ದಾನೆ. ಎರಡು ರೂಪದಿಂದ ನಮ್ಮ ಒಳಗೂ-ಹೊರಗೂ ತುಂಬಿರುವ ಭಗವಂತ ದ್ವಂದ್ವಃ.
ಎಲ್ಲವನ್ನು ಸಂಹಾರ ಮಾಡುವ ಕಾಲಪುರುಷ ಭಗವಂತ, ಎಲ್ಲವನ್ನು ಧಾರಣೆ ಮಾಡಿ, ಪೋಷಣೆ ಮಾಡುವ ಧಾತ’. ಇಂತಹ ಭಗವಂತ ವಿಶ್ವತೋಮುಖಃ. ಆತ ಎಲ್ಲೆಡೆ ತುಂಬಿದ್ದಾನೆ. ಆತನಿಲ್ಲದ ತಾಣವಿಲ್ಲ. ಆತ ಕಾಣದ ಎಡೆಯಿಲ್ಲ.
·  ಶ್ಲೋಕ - 34
ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ ।
ಕೀರ್ತಿಃ ಶ್ರೀರ್ವಾಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥೩೪॥
ಮೃತ್ಯುಃ ಸರ್ವ ಹರಃ ಚ ಅಹಮ್ ಉದ್ಭವಃ ಚ ಭವಿಷ್ಯತಾಮ್ ।
ಕೀರ್ತಿಃ ಶ್ರೀಃ ವಾಕ್ ಚ ನಾರೀಣಾಂ ಸ್ಮೃತಿಃ ಮೇಧಾ ಧೃತಿಃ ಕ್ಷಮಾ ಎಲ್ಲವನ್ನೂ ಕಬಳಿಸುವ ಮೃತ್ಯುದೇವತೆ [ಸಾಯಿಸುವವನಾದ್ದರಿಂದ ಮೃತ್ಯುನಾಮಕನಾಗಿ, ಯಮನ ಪರಿವಾರ ದೇವತೆಯಾದ ಮೃತ್ಯುವಿನಲ್ಲಿದ್ದು ಅವನಿಗೆ ಎಲ್ಲವನ್ನು ಕಬಳಿಸುವ ಶಕ್ತಿಯಿತ್ತವನು] ನಾನು. ಮುಂದೆ ಆಗುವವರನ್ನು ಹುಟ್ಟಿಸುವವನೂ ನಾನು. ಹೆಂಗಸರಲ್ಲಿ ಕೀರ್ತಿಯ ದೇವತೆ ನಾನು; ಶ್ರೀದೇವಿ ನಾನು; ವಾಗ್ದೇವಿ ನಾನು. ಸ್ಮರಣಶಕ್ತಿಯ ದೇವತೆ ನಾನು; ಧಾರಣಶಕ್ತಿಯ ದೇವತೆ ನಾನು; ಸಹನೆಯ ದೇವತೆ ನಾನು; ಕ್ಷಮಾ ದೇವಿ ನಾನು.[ಕೀರ್ತನೀಯವಾಗಿ ಕೀರ್ತಿಎನ್ನಿಸಿ ಕೀರ್ತಿದೇವಿಯಲ್ಲಿದ್ದೇನೆ; ಆಶ್ರಯನಾಗಿ ಶ್ರೀಎನ್ನಿಸಿ ಶ್ರೀದೇವಿಯಲ್ಲಿದ್ದೇನೆ; ವಕ್ತಾರನಾಗಿ ವಾಕ್ಎನ್ನಿಸಿ ವಾಗ್ದೇವಿಯಲ್ಲಿದ್ದೇನೆ; ಸ್ಮರಣೀಯನಾಗಿ ಸ್ಮೃತಿಎನ್ನಿಸಿ ಸ್ಮೃತಿದೇವಿಯಲ್ಲಿದ್ದೇನೆ; ಅರಿವಿನ ಮೂರ್ತಿಯಾಗಿ ಧೃತಿಎನ್ನಿಸಿ ಧೃತಿದೇವಿಯಲ್ಲಿದ್ದೇನೆ; ತಪ್ಪುಗಳನ್ನು ಮನ್ನಿಸುವವನಾಗಿ ಕ್ಷಮಾಎನ್ನಿಸಿ ಕ್ಷಮಾದೇವಿಯಲ್ಲಿದ್ದೇನೆ.]
ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನು ಕಬಳಿಸುವ ಮೃತ್ಯುದೇವತೆ ಕೂಡಾ ಹೌದು. ಪ್ರಳಯಕಾಲ ನಂತರ ಸೃಷ್ಟಿಯನ್ನು ಪುನಃ ನಿರ್ಮಾಣ ಮಾಡುವವನೂ ಅವನೆ. ಸ್ತ್ರೀ ರೂಪದಲ್ಲಿನ ತನ್ನ ವಿಭೂತಿಯನ್ನು ಹೇಳುತ್ತ ಕೃಷ್ಣ ಇಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ ಮತ್ತು ಭಾರತಿಯರಲ್ಲಿ ತನ್ನ ವಿಭೂತಿಯನ್ನು ವಿವರಿಸಿದ್ದಾನೆ. ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ -ಇವುಗಳ ಅಭಿಮಾನಿ ದೇವತೆಯರು ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ ಮತ್ತು ಭಾರತಿಯರು. ಇವರಲ್ಲಿ ಸ್ತ್ರೀ ರೂಪ ವಿಭೂತಿಯಾಗಿ ಭಗವಂತ ನಿಂತಿದ್ದಾನೆ.
·  ಶ್ಲೋಕ - 35
ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರಿ ಛಂದಸಾಮಹಮ್ ।
ಮಾಸಾನಾಂ ಮಾರ್ಗಶೀರ್ಷೋSಹಮೃತೂನಾಂ ಕುಸುಮಾಕರಃ ॥೩೫॥
ಬೃಹತ್ಸಾಮ ತಥಾ ಸಾಮ್ನಾಮ್ ಗಾಯತ್ರಿ ಛಂದಸಾಮ್ ಅಹಮ್ ।
ಮಾಸಾನಾಮ್ ಮಾರ್ಗಶೀರ್ಷಃ ಅಹಮ್ ಋತೂನಾಮ್ ಕುಸುಮ ಆಕರಃ ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು. [ಬೃಹತ್ =ಹಿರಿದಾದ, ಸ=ಸಾರವಸ್ತು ಮತ್ತು, ಅಮ=ಅರಿವಿಗೆಟುಕದವನಾದ್ದರಿಂದ ಬೃಹತ್ಸಾಮಎನ್ನಿಸಿ ಬೃಹತ್ಸಾಮವೆಂಬ ಗಾನದಲ್ಲಿದ್ದೇನೆ.] ಛಂದಸ್ಸುಗಳಲ್ಲಿ ಗಾಯತ್ರಿ ನಾನು. [ಗಾಯ =ಗಾಯಕರನ್ನು ತ್ರಿ=ಸಲಹುವುದರಿಂದ ಗಾಯತ್ರಿಎನ್ನಿಸಿ ಗಾಯತ್ರಿ ಛಂದಸ್ಸಿನಲ್ಲಿದ್ದೇನೆ.] ತಿಂಗಳಲ್ಲಿ ಮಾರ್ಗಶಿರ ನಾನು. [ದಾರಿಯ ಕೊನೆಯಲ್ಲಿರುವುದರಿಂದ ಮಾರ್ಗಶೀರ್ಷಎನ್ನಿಸಿ ಮಾರ್ಗಶಿರಮಾಸದಲ್ಲಿದ್ದೇನೆ.] ಋತುಗಳಲ್ಲಿ ವಸಂತ ನಾನು. [ಕು=ಕೆಟ್ಟ, ಸು= ಒಳ್ಳೆಯ, ಮಾ=ಅರಿವನ್ನು, ಕರ=ನೀಡುವುದರಿಂದ ಕುಸುಮಾಕರಎನ್ನಿಸಿ ವಸಂತ ಋತುವಿನಲ್ಲಿದ್ದೇನೆ.]
ಸಾಮಗಾನದಲ್ಲಿ ಅನೇಕ ವಿಧ. ಸಪ್ತ ಸ್ವರವನ್ನು ಬಳಸಿ ಹಾಡುವುದು ಸಾಮವೇದದಲ್ಲಿ ಮಾತ್ರ. ಇದು ಋಗ್ವೇದ ಯಜುರ್ವೇದದಲ್ಲಿ ಇಲ್ಲ. ಎಲ್ಲ ಸಾಮಗಳಲ್ಲಿ ಸಪ್ತಸ್ವರದ ಬಳಕೆ ಇಲ್ಲ. ಈ ರೀತಿ ಸಪ್ತಸ್ವರವಿರುವ ಸಾಮದಲ್ಲಿ ಬೃಹತ್ಸಾಮವೆಂಬ ಗಾನ ನಾನುಎನ್ನುತ್ತಾನೆ ಕೃಷ್ಣ. ಇಲ್ಲಿ ಬಂದಿರುವ ಭಗವಂತನ ನಾಮ ಬೃಹತ್ಸಾಮಃ’ – ಹಿರಿದಾದ, ಸಾರಭೂತನಾದ ಮತ್ತು ನಮ್ಮ ಅರಿವಿಗೆಟುಕದೆ ಅಮಿತವಾಗಿರುವ ಭಗವಂತ ಬೃಹತ್ಸಾಮಃ
ಪದ್ಯದ ರೂಪದಲ್ಲಿ ಒಂದು ಅಪೂರ್ವವಾದ ಅರ್ಥವನ್ನು, ಅಧ್ಯಾತ್ಮದ ಸಂದೇಶವನ್ನು ತುಂಬಿಡುವಂತಾದ್ದು-ಛಂದಸ್ಸು. ಇದು ನಮ್ಮ ಅಭಿಪ್ರಾಯವನ್ನೂ ಲಯಬದ್ಧವಾಗಿ ವ್ಯಕ್ತಪಡಿಸುವ ವಿಧಾನ. ಛಂದಸ್ಸಿನಲ್ಲಿ ಪ್ರಧಾನವಾಗಿ ಏಳು ಛಂದಸ್ಸುಗಳಿವೆ. 24 ಅಕ್ಷರದ ಗಾಯತ್ರಿ, 28 ಅಕ್ಷರದ ಉಷ್ಣಿಕ್, 32 ಅಕ್ಷರದ ಅನುಷ್ಪುಪ್, 36 ಅಕ್ಷರದ ಬೃಹತೀ, 40 ಅಕ್ಷರದ ಪಂಕ್ತಿ, 44 ಅಕ್ಷರದ ತ್ರಿಷ್ಪುಪ್ ಮತ್ತು 48 ಅಕ್ಷರದ ಜಗತೀ. ಈ ಛಂದಸ್ಸುಗಳಲ್ಲಿ ಭಗವಂತನ ವಿಶೇಷ ವಿಭೂತಿ ಇರುವ ಛಂದಸ್ಸು ಗಾಯತ್ರಿ’. ಇದು ಭಗವಂತನ ಹೆಸರು ಕೂಡಾ ಹೌದು. ಗಾಯತಂ ತ್ರಾಯತೆ ಇತಿ ಗಾಯತ್ರಿಃ’. ಯಾರು ಭಗವಂತನನ್ನು ಈ ಮಂತ್ರದಿಂದ ಸ್ತೋತ್ರ ಮಾಡುತ್ತಾರೋ ಅವರನ್ನು ಆತ ರಕ್ಷಣೆ ಮಾಡುತ್ತಾನೆ. ಗಾಯತ್ರಿ ಛಂದಸ್ಸು ಏಳು ಛಂದಸ್ಸುಗಳಲ್ಲಿ ಮೊದಲನೆಯದು. ಎಂಟು ಅಕ್ಷರದ ಮೂರು ಪಾದಗಳುಳ್ಳ ಗಾಯತ್ರಿ ಎಲ್ಲದರ ಪಂಚಾಂಗ(Foundation)ದಂತಿದೆ. ಋಗ್ವೇದದಲ್ಲಿನ ಹೆಚ್ಚಿನ ಮಂತ್ರಗಳು ಗಾಯತ್ರಿ ಛಂದಸ್ಸಿನಲ್ಲಿದೆ. ಸಮಸ್ತ ವೇದಗಳ ವೇದಮಾತಎನ್ನಿಸಿಕೊಂಡಿರುವ ಗಾಯತ್ರಿ ಮಂತ್ರವಿರುವುದು ಗಾಯತ್ರಿಛಂದಸ್ಸಿನಲ್ಲಿ. ಹೀಗೆ ಗಾಯತ್ರಿ ಇತರ ಛಂದಸ್ಸಿಗೆ ಮಾತೃಸ್ಥಾನೀಯವಾಗಿದೆ. ಗಾಯತ್ರಿ ಅಧ್ಯಾತ್ಮದ ಮೂಲಭೂತವಾದ ಮುಖವನ್ನು ಹೊಂದಿರತಕ್ಕಂತಹ ಮಂತ್ರ. ಸೂರ್ಯನಲ್ಲಿರುವ ಸೌರಶಕ್ತಿಯನ್ನು ನಮಗೆ ಹರಿಸುತ್ತ, ಸೌರಮಂಡಲದಲ್ಲಿರುವ ನಮ್ಮ ಜೀವಪ್ರಧಾನವಾದ ಭಗವಂತನ ಸ್ತೋತ್ರ ಮಾಡುವುದು ಗಾಯತ್ರಿ. ಇಡೀ ಬ್ರಹ್ಮಾಂಡದ ನಿಯಾಮಕನಾಗಿದ್ದು, ಸೌರ ಶಕ್ತಿಯಿಂದ ಬಂದು, ನಮ್ಮ ಆತ್ಮದ ಒಳಗೆ ನಮ್ಮ ಹೃದಯ ಕಮಲದಲ್ಲಿಧೀಶಕ್ತಿಯನ್ನು ಪ್ರೇರಣೆ ಮಾಡುವಂಥ ಶಕ್ತಿ ಭಗವಂತಎನ್ನುವ ಸಮಷ್ಟಿ ಚಿಂತನ ಇರುವ ಮಂತ್ರ ಗಾಯತ್ರಿ. ಗಾಯತ್ರಿ ವಿಶಿಷ್ಟವಾಗಿ(Exclusively) ವೈದಿಕ ಛಂದಸ್ಸಾಗಿ ಬಳಕೆಯಾಗಿದೆ. ಲೌಕಿಕವಾಗಿ ಇದರ ಬಳಕೆ ಇಲ್ಲ. ಗಾಯತ್ರಿಗೆ ಈ ವಿಶಿಷ್ಠ ಸ್ಥಾನ ಭಗವಂತನ ವಿಶೇಷ ವಿಭೂತಿಯಿಂದ ಬಂತು.
[ಇಲ್ಲಿ ಒಂದು ವಿಷಯವನ್ನು ನಾವು ತಿಳಿದಿರಬೇಕು: ಐತರೇಯ ಉಪನಿಷತ್ತಿನಲ್ಲಿ ಬೃಹತೀ ಛಂದಸ್ಸನ್ನು ಶ್ರೇಷ್ಠ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಅಭಿಮಾನಿ ದೇವತಾ ತಾರತಮ್ಯದಲ್ಲಿ ನೋಡಿದಾಗ ಗಾಯತ್ರಿ ಅಭಿಮಾನಿ ದೇವತೆಯರು ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಅಗ್ನಿಪತ್ನಿ ಸ್ವಾಹ. ಬೃಹತೀ ಛಂದಸ್ಸನ್ನು ನೋಡಿದಾಗ ಅಲ್ಲಿ ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಬೃಹಸ್ಪತಿಪತ್ನಿ ತಾರ ಅಭಿಮಾನಿ ದೇವತೆಗಳು. ಅಗ್ನಿಪತ್ನಿ ಸ್ವಾಹಕ್ಕಿಂತ ತಾರ ದೇವತಾ ತಾರತಮ್ಯದಲ್ಲಿ ಎತ್ತರದಲ್ಲಿರುವುದರಿಂದ, ದೇವತಾ ತಾರತಮ್ಯವನ್ನು ಮುಖ್ಯವಾಗಿಟ್ಟುಕೊಂಡು ಅಲ್ಲಿ ಹಾಗೆ ಹೇಳಿದ್ದಾರೆ. ಈ ವಿಚಾರ ತಿಳಿದಾಗ ಇಲ್ಲಿ ಗೊಂದಲವಿಲ್ಲ.]
ನಾನು ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತಎನ್ನುತ್ತಾನೆ ಕೃಷ್ಣ. ಮಾರ್ಗಶಿರಮಾಸ-ಮಾಸಗಳಲ್ಲಿ ಮೊದಲನೇ ಮಾಸ; ಕಾರ್ತಿಕ ಕೊನೆಯ ಮಾಸ. ಈ ಕಾರಣಕ್ಕಾಗಿ ಕಾರ್ತಿಕ ಮಾಸದಲ್ಲಿ (ಮಾರ್ಗಶಿರ ಮಾಸದ ಮೊದಲು) ದೀಪಾವಳಿಯನ್ನು ಆಚರಿಸುತ್ತಾರೆ. ಒಂದು ವರ್ಷವನ್ನು ಕೃತಜ್ಞತೆಯಿಂದ ಕಳುಹಿಸಿಕೊಡುವುದು ದೀಪಾವಳಿಯ ಮಹತ್ವ. ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಅಂದರೆ ಮೊದಲನೆಯದು. ನಾವು ಗೀತಾಜಯಂತಿಯನ್ನು ಈ ಮಾಸದಲ್ಲಿ ಆಚರಿಸುತ್ತೇವೆ. ಇದರಿಂದ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾಸ ಕೂಡ ಮಾರ್ಗಶಿರ ಎನ್ನಬಹುದು(ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ). ಈ ಮಾಸದಲ್ಲಿ ವಿಭೂತಿಯಾಗಿ ಕುಳಿತಿರುವ ಭಗವಂತನ ನಾಮ ಮಾರ್ಗಶೀರ್ಷ’. ಸಾಧನಾ ಮಾರ್ಗದಲ್ಲಿ ನಾವು ಸಾಗಬೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ ಮಾರ್ಗಶೀರ್ಷ’. ಹೂ ಅರಳಿ ಗಿಡಮರಗಳು ಚಿಗುರುವ ವಸಂತ ಋತುವಿನಲ್ಲಿ ಕುಸುಮಾಕರನಾಗಿನಾನಿದ್ದೇನೆ ಎನ್ನುತ್ತಾನೆ ಕೃಷ್ಣ. ಕೆಟ್ಟವರಿಗೆ ಕುಸ್ಸಿತವಾದ ಮತ್ತು ಸಜ್ಜನರಿಗೆ ಉತ್ತಮ ಜ್ಞಾನವನ್ನು ಕೊಡುವ ಭಗವಂತ ಕುಸುಮಾಕರಃ’.
·  ಶ್ಲೋಕ - 36
ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।
ಜಯೋSಸ್ಮಿ ವ್ಯವಸಾಯೋSಸ್ಮಿ ಸತ್ತ್ವಂ ಸತ್ತ್ವವತಾಮಹಮ್ ೩೬॥
ದ್ಯೂತಮ್ ಛಲಯತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ ।
ಜಯಃ ಅಸ್ಮಿ ವ್ಯವಸಾಯಃ ಅಸ್ಮಿ ಸತ್ತ್ವಮ್ ಸತ್ತ್ವವತಾಮ್ ಅಹಮ್ಮೋಸಗಾರರ ಜೂಜು ನಾನು. [ಕ್ರೀಡಾರೂಪನಾಗಿ ದ್ಯೂತಎನ್ನಿಸಿ ಜೂಜಿನಲ್ಲಿದ್ದೇನೆ.] ವೀರರಾದವರ ಬೀರ ನಾನು. [ಪ್ರಕಾಶರೂಪನಾದ್ದರಿಂದ ತೇಜಸ್ಎನ್ನಿಸಿ ಬೀರದಲ್ಲಿದ್ದೇನೆ.] ಗೆಲುವು ನಾನು. [ಎಲ್ಲವನ್ನು ಗೆದ್ದವನಾಗಿ ಜಯಎನ್ನಿಸಿ ಗೆಲುವಿನಲ್ಲಿದ್ದೇನೆ.] ದುಡಿಮೆ ನಾನು. [ನಿಶ್ಚಯ ಜ್ಞಾನರೂಪನಾದ್ದರಿಂದ ವ್ಯವಸಾಯಎನ್ನಿಸಿ ದುಡಿಮೆಯಲ್ಲಿದ್ದೇನೆ.] ಹಿರಿಯ ವ್ಯಕ್ತಿಗಳ ಘನತೆ ನಾನು.[ಸದ್ಗುಣಗಳ ಗಣಿಯಾಗಿ ಸತ್ವಎನ್ನಿಸಿ ದೊಡ್ಡವರ ಘನತೆಯಲ್ಲಿದ್ದೇನೆ.]
ಕೌರವ ಪಾಂಡವರ ನಡುವೆ ಯುದ್ಧವಾಗಲು ಕಾರಣವಾಗಿ ಕಾಣುವುದು ದ್ಯೂತ. ಇದು ಮೊಸಗಾರಿಕೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ! ಭಗವಂತ ದ್ಯೂತಎನ್ನಿಸಿ ಜೂಜಿನಲ್ಲಿದ್ದಾನೆ. ಇಲ್ಲಿ ಭಗವಂತನ ನಾಮ ದ್ಯೂತ’. ದಿವು ಅಂದರೆ ಕ್ರೀಡೆ. ಸದಾ ಸೃಷ್ಟಿ ಸ್ಥಿತಿ ಸಂಹಾರಗಳ ಕ್ರೀಡೆಯಲ್ಲಿ ನಿರತನಾದ ಭಗವಂತ ದ್ಯೂತಶಬ್ದ ವಾಚ್ಯ. ಆತ್ಮಬಲವುಳ್ಳವರ ತೇಜಸ್ಸು ಭಗವಂತ. ಜಯಃ ನಾಮಕನಾಗಿ ಗೆಲುವಿನಲ್ಲಿ ಭಗವಂತನಿದ್ದಾನೆ. ಜಗತ್ತಿನ ಎಲ್ಲ ವಿಜಯಗಳ ಪ್ರೇರಕ ಭಗವಂತ. ಒಂದು ಕಾರ್ಯದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವವನು ವ್ಯವಸಾಯನಾಮಕ ಭಗವಂತ. ಬಲನಿಯಾಮಕನಾಗಿ ಆತ ಬಲಶಾಲಿಗಳಲ್ಲಿ ಸತ್ವನಾಮಕನಾಗಿ ಕೂತಿದ್ದಾನೆ.
·  ಶ್ಲೋಕ - 37
ವೃಷ್ಣೀನಾಂ ವಾಸುದೇವೋSಸ್ಮಿ ಪಾಂಡವಾನಾಂ ಧನಂಜಯಃ ।
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥೩೭॥
ವೃಷ್ಣೀನಾಮ್ ವಾಸುದೇವಃ ಅಸ್ಮಿ ಪಾಂಡವಾನಾಮ್ ಧನಂಜಯಃ ।
ಮುನೀನಾಮ್ ಅಪಿ ಅಹಮ್ ವ್ಯಾಸಃ ಕವೀನಾಮ್ ಉಶನಾ ಕವಿಃ ವೃಷ್ಣಿವಂಶದ ರಾಜನ್ಯರಲ್ಲಿ [ವಾಸು=ಎಲ್ಲವನ್ನೂ ಆವರಿಸಿ, ಎಲ್ಲದರೊಳಗೂ ನೆಲೆಸಿರುವ, ದೇವ=ದಿವ್ಯರೂಪನಾದ್ದರಿಂದ] ವಾಸುದೇವನಾಗಿ ಅವತರಿಸಿದ್ದೇನೆ. ಪಾಂಡವರಲ್ಲಿ ಅರ್ಜುನ ನಾನು. [ಸಿರಿಯನ್ನು ಗೆದ್ದವನಾಗಿಧನಂಜಯಎನ್ನಿಸಿ ಅರ್ಜುನನಲ್ಲಿದ್ದೇನೆ.] ಮುನಿಗಳಲ್ಲಿ [ವಿ=ಎಲ್ಲಕ್ಕಿಂತ ವಿಶಿಷ್ಟನಾಗಿ, ಆ=ಎಲ್ಲೆಡೆಯು, ಸಃ =ಅವನೆ ತುಂಬಿರುವುದರಿಂದ] ವ್ಯಾಸ ನಾನು. ವಿಜ್ಞಾನಿಗಳಲ್ಲಿ ಹಿರಿಯ ವಿದ್ವಾಂಸನಾದ ಶುಕ್ರ ನಾನು. [ಇಚ್ಛಾರೂಪನಾದ್ದರಿಂದ ಉಶನಸ್ಎನ್ನಿಸಿ ದೈತ್ಯಗುರು ಶುಕ್ರನಲ್ಲಿದ್ದೇನೆ.]
ಸಾಕ್ಷಾತ್ ವಿಭೂತಿಯನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ ವೃಷ್ಣೀನಾಮ್ ವಾಸುದೇವಃ ಅಸ್ಮಿಎಂದು. ಇಲ್ಲಿ ಭಗವಂತನ ವಿಭೂತಿ ನಾಮ ವಾಸುದೇವಃ’. ಎಲ್ಲೆಡೆ ಇದ್ದರೂ ಕಾಣಿಸದೆ, ಅಪರೋಕ್ಷ ಜ್ಞಾನವನ್ನು ಕರುಣಿಸಿ ಪ್ರತ್ಯಕ್ಷನಾಗುವ ಭಗವಂತ ವಾಸುದೇವಃ. ಪಾಂಡವರಲ್ಲಿ ಧನಂಜಯಃನಾನು ಎನ್ನುತ್ತಾನೆ ಕೃಷ್ಣ. ಇದು ಏಕದೇಶ ವಿಭೂತಿ. ಅರ್ಜುನನಲ್ಲಿ ಭಗವಂತನ ವಿಶೇಷ ಆವೇಶ ಇತ್ತು. ಆತನಲ್ಲಿ ಭಗವಂತಧನಂಜಯಃನಾಮಕನಾಗಿ ನಿಂತಿದ್ದ. ಧನಂಜಯಃ ಎನ್ನುವಲ್ಲಿ ಧನ ಎಂದರೆ ಜ್ಞಾನ. ಭಗವಂತನ ಅರಿವು, ಅದರಿಂದ ಪಡೆಯುವ ಮೋಕ್ಷ ಶಾಶ್ವತ ಧನ. ಅದನ್ನು ಕೊಡುವ ಭಗವಂತ ಧನಂಜಯಃ. ಮುನಿಗಳಲ್ಲಿ ವ್ಯಾಸ. ಇದು ಭಗವಂತನ ಸಾಕ್ಷಾತ್ ವಿಭೂತಿ. ವ್ಯಾಸರು ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾರೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿಗೆ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ ಒಟ್ಟು 12 ಶಾಖೆಗಳು. ಹೀಗೆ ವೇದವನ್ನು 1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಮುನಿ ವ್ಯಾಸ. ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ, ಎಲ್ಲೆಡೆ ತುಂಬಿರುವ ಭಗವಂತ ವ್ಯಾಸಃ. ದೈತ್ಯ ಗುರು ಶುಕ್ರಾಚಾರ್ಯರಲ್ಲಿ ಉಶನನಾಮಕನಾಗಿ ಭಗವಂತ ನಿಂತ. ಈ ಕಾರಣದಿಂದ ಗ್ರಹಗಳಲ್ಲಿ ಶುಕ್ರ ಒಬ್ಬನಾಗಿ ಸ್ಥಾನ ಪಡೆದ. ತನ್ನ ಇಚ್ಛಾಮಾತ್ರದಿಂದಲೇ ಎಲ್ಲ ಕಾರ್ಯವನ್ನು ಮಾಡುವ ಭಗವಂತ ಉಶನ’.
·  ಶ್ಲೋಕ - 38
ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥೩೮॥
ದಂಡಃ ದಮಯತಾಮ್ ಅಸ್ಮಿ ನೀತಿಃ ಅಸ್ಮಿ ಜಿಗೀಷತಾಮ್ ।
ಮೌನಮ್ ಚ ಏವ ಅಸ್ಮಿ ಗುಹ್ಯಾನಾಮ್ ಜ್ಞಾನಮ್ ಜ್ಞಾನವತಾಮ್ ಅಹಮ್ --ಬಗ್ಗುಬಡಿಯುವವರ ದಂಡನೀತಿ ನಾನು. [ದಂಡಿಸುವವನಾದ್ದರಿಂದ ದಂಡಎನ್ನಿಸಿ ದಂಡನೀತಿಯಲ್ಲಿದ್ದೇನೆ.] ಗೆಲ್ಲಬಯಸುವವರ ನಯಗಾರಿಕೆ ನಾನು. [ಗೆಲುವಿನತ್ತ ಕರೆದೊಯ್ಯುವುದರಿಂದ ನೀತಿಎನ್ನಿಸಿ ನಯಗಾರಿಕೆಯಲ್ಲಿದ್ದೇನೆ.] ಗುಟ್ಟುಗಳಲ್ಲಿ ಮೌನ ನಾನು. [ಮುನಿಗಳಿಂದ ಸ್ತುತನಾಗಿ ಮೌನಎನ್ನಿಸಿ ಮೌನದಲ್ಲಿದ್ದೇನೆ.] ಬಲ್ಲವರ ತಿಳಿವು ನಾನು. [ಅರಿವಿನ ಮೂರ್ತಿಯಾದ್ದರಿಂದಜ್ಞಾನಎನ್ನಿಸಿ ತಿಳಿವಿನಲ್ಲಿದ್ದೇನೆ.]
ದುಷ್ಟರನ್ನು ದಮನ ಮಾಡುವ ದಮನಶಕ್ತಿ ನಾನುಎನ್ನುತ್ತಾನೆ ಕೃಷ್ಣ. ಈ ದಮನಶಕ್ತಿಯಾಗಿ ವೀರರಲ್ಲಿ ಭಗವಂತ ಕೂತಿದ್ದಾನೆ. ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು(Punishment). ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಹಾಗು ನಿಷ್ಠುರವಾದ ದಂಡನೆಯನ್ನು ಕೊಡುವ ಭಗವಂತ ದಂಡಃ’. ಗೆಲ್ಲುವ ಶಕ್ತಿಯಾಗಿ ಎಲ್ಲರನ್ನು ನಿಯಂತ್ರಣ ಮಾಡುವ ಭಗವಂತ ನೀತಿಃ’. ಮನನಶಕ್ತಿಯಾಗಿ ನಿಂತ ಭಗವಂತ ಮೌನಃ’. ಬಲ್ಲವರ ತಿಳಿವಾಗಿರುವ ಭಗವಂತ ಜ್ಞಾನಃ’.
ಮೂಲಭೂತವಾಗಿ ವಿಭೂತಿಗಳ ವಿಸ್ತಾರ ಇಲ್ಲಿಗೆ ಮುಗಿಯಿತು. ಮುಂದೆ ವಿಭೂತಿಯ ಉಪಸಂಹಾರವನ್ನು ಈ ಅಧ್ಯಾಯದ ಉಳಿದ ಭಾಗದಲ್ಲಿ ನೋಡೋಣ.
·  ಶ್ಲೋಕ - 39
ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।
ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್ ೩೯॥
ಯತ್ ಚ ಅಪಿ ಸರ್ವ ಭೂತಾನಾಮ್ ಬೀಜಮ್ ತತ್ ಅಹಮ್ ಅರ್ಜುನ ।
ನ ತತ್ ಅಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಮ್ ಚರ ಅಚರಮ್ ಅರ್ಜುನ, ಸಮಸ್ತ ಜೀವಿಗಳಲ್ಲಿ ಏನೆಲ್ಲ ವಿಶಿಷ್ಠ ಗುಣವಿದೆಯೊ ಅವುಗಳಲ್ಲಿ ನಾನೆ ಇದ್ದು ಆ ಶಕ್ತಿ ನೀಡಿದ್ದೇನೆ. ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ ತಾನಾಗಿ ಇಲ್ಲ.
ಈ ಜಗತ್ತಿನಲ್ಲಿರುವ ಸಮಸ್ತ ವಸ್ತು(ಜಡ-ಚೇತನ)ವಿಗೂ ಮೂಲಭೂತವಾಗಿರುವ ಅಭಿವ್ಯಂಜಕ ರೂಪ ಮತ್ತು ಶಕ್ತಿ ಕೊಡುವವನು ನಾನುಎನ್ನುತ್ತಾನೆ ಕೃಷ್ಣ. ಹೀಗೆ ಭಗವಂತ ಸಮಸ್ತ ಸೃಷ್ಟಿಗೂ ಬೀಜಪುರುಷನಾಗಿ ನಿಂತಿದ್ದಾನೆ. ಕಣ್ಣಿಗೆ ಕಾಣದ ಜೀವಕ್ಕೆ ಕಣ್ಣಿಗೆ ಕಾಣುವ ಶರೀರ ಕೊಡುವವನು ಆತ. ಗಂಡಿನ ರೇತಸ್ಸಿನಲ್ಲಿದ್ದು, ಜೀವವನ್ನು ರೇತಸ್ಸಿನ ಮುಖೇನ ಹೆಣ್ಣಿನ ದೇಹದೊಳಗೆ ಸೇರಿಸಿ, ಅಲ್ಲಿ ಜೀವಕ್ಕೆ ಒಂದು ರೂಪವನ್ನು ಕೊಟ್ಟು ಬೆಳಗಿಸುವವ ಭಗವಂತ. ಹೀಗೆ ಈ ಪ್ರಪಂಚದಲ್ಲಿರುವ ಚೇತನಾಚೇತನ ಅಥವಾ ಚರಾಚರಾತ್ಮಕ-ಎಲ್ಲವನ್ನೂ ಹುಟ್ಟಿಸುವವನು ಭಗವಂತ. ಈ ಪ್ರಪಂಚದಲ್ಲಿ ನನ್ನನ್ನು ತೊರೆದು ಸ್ವತಂತ್ರವಾಗಿ ಯಾವ ವಸ್ತುವೂ ಇಲ್ಲಎನ್ನುತ್ತಾನೆ ಕೃಷ್ಣ. ಇದು ವೈದಿಕ ಪರಂಪರೆಯಲ್ಲಿ ಇರುವ ಗೊಂದಲಕ್ಕೆ ಕೃಷ್ಣ ಕೊಟ್ಟ ನೇರ ಉತ್ತರ. ಜೀವ ಮತ್ತು ಭಗವಂತ ಒಂದೇ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದೆ. ಆದರೆ ಭಗವಂತನನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ಯಾರಿಗೂ ಇಲ್ಲ.
·  ಶ್ಲೋಕ - 40
ನಾಂತೋSಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।
ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥೪೦॥
ನ ಅಂತಃ ಅಸ್ತಿ ಮಮ ದಿವ್ಯಾನಾಮ್ ವಿಭೂತೀನಾಮ್ ಪರಂತಪ
ಏಷಃ ತು ಉದ್ದೇಶತಃ ಪ್ರೋಕ್ತಃ ವಿಭೂತೇಃ ವಿಸ್ತರಃ ಮಯಾಓ ಅರಿಗಳ ಉರಿಯೆ, ನನ್ನ ದಿವ್ಯರೂಪಗಳ ಹಿರಿಮೆಗಳಿಗೆ ಕೊನೆಯಿಲ್ಲ. ನನ್ನ ಹಿರಿಮೆಯ ಬಿತ್ತರದ ಕೆಲವನ್ನಷ್ಟೆ ಇಲ್ಲಿ ಹೆಸರಿಸಿ ಹೇಳಿದೆ.
ಕೃಷ್ಣ ಹೇಳುತ್ತಾನೆ ನನ್ನ ವಿಭೂತಿ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇದೆ. ಅದನ್ನು ಹೇಳಿ ಕೊನೆ ಇಲ್ಲಎಂದು. ಲೋಕವಿಲಕ್ಷಣವಾದ ಭಗವಂತನ ವಿಭೂತಿಗೆ ಕೊನೆ ಇಲ್ಲ. ಅದನ್ನು ಹೇಳಿ ಮುಗಿಯುವುದಿಲ್ಲ. ಇಲ್ಲಿ ಕೃಷ್ಣ ಅತ್ಯಂತ ಮುಖ್ಯವಾದ, ನಾವು ನಿರಂತರ ಉಪಾಸನೆ ಮಾಡಬೇಕಾದ, ನಿತ್ಯ ಅನುಸಂಧಾನದಲ್ಲಿರಬೇಕಾದದ್ದನ್ನು ಹೇಳಿದ.
·  ಶ್ಲೋಕ - 41
ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ ।
ತತ್ತದೇವಾವಗಚ್ಛ ತ್ವಂ ಮಮ ತೇಜೋಂSಶಸಂಭವಮ್ ॥೪೧॥
ಯತ್ ಯತ್ ವಿಭೂತಿ ಮತ್ ಸತ್ತ್ವಮ್ ಶ್ರೀಮತ್ ಊರ್ಜಿತಮ್ ಏವ ವಾ ।
ತತ್ ತತ್ ಏವ ಅವಗಚ್ಛ ತ್ವಮ್ ಮಮ ತೇಜಃ ಅಂಶ ಸಂಭವಮ್ಗುಂಪಿನಲ್ಲಿ ಮಿಗಿಲಾದದ್ದು , ಸಿರಿಯಲ್ಲಿ ಹಿರಿದಾದದ್ದು. ಎತ್ತರದಲ್ಲಿ ಮೆರೆದದ್ದು ಯಾವುದೆಲ್ಲ ಇದೆ ಅದೆಲ್ಲವೂ ನನ್ನ ಹಿರಿಮೆಯ ಬೆಳಕಿನ ಕಿಡಿಯಿಂದ ಮೂಡಿಬಂದದ್ದು ಎಂದು ತಿಳಿ.
ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಠ ಗುಣವಿದೆ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ. ಇದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು.
·  ಶ್ಲೋಕ - 42
ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।
ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ ೪೨॥
ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ ।
ವಿಷ್ಟಭ್ಯ ಅಹಮ್ ಇದಮ್ ಕೃತ್ಸ್ನಮ್ ಏಕ ಅಂಶೇನ ಸ್ಥಿತಃ ಜಗತ್ ಅಥವಾ, ಓ ಅರ್ಜುನ, ಎಲ್ಲವನ್ನು ತಿಳಿದು ಏನು ಬಂತು ? ಸಾರವಿದು: ನಾನು ನನ್ನ ಅಳವಿನ ಒಂದು ಅಂಶದಿಂದ ಈ ಇಡಿಯ ವಿಶ್ವವನ್ನು ತಬ್ಬಿ ತಡೆಹಿಡಿದು ನಡೆಸುತ್ತಿದ್ದೇನೆ.
ಒಂದೊಂದನ್ನು ಪ್ರತ್ಯೇಕ ತಿಳಿದು ಹೇಳುವುದು ಅಸಾಧ್ಯ. ಈ ರೀತಿ ಮಾಡುವ ಅಗತ್ಯವೂ ಇಲ್ಲ. ಎಲ್ಲವುದರೊಳಗೂ ಒಂದು ವಿಶಿಷ್ಠ ಶಕ್ತಿಯಾಗಿ ಭಗವಂತನಿದ್ದಾನೆ. ಎಲ್ಲದರಲ್ಲೂ ಭಗವಂತನ ವಿಭೂತಿ ಅಡಗಿದೆ. ಕೃಷ್ಣ ಹೇಳುತ್ತಾನೆ ಇಡೀ ವಿಶ್ವವನ್ನು ನಾನು ನನ್ನ ಸಾಮರ್ಥ್ಯದ ಒಂದು ತುಣುಕಿನಿಂದ ವ್ಯಾಪಿಸಿ ನಿಂತಿದ್ದೇನೆಎಂದು. ಪುರುಷ ಸೂಕ್ತದಲ್ಲಿ ಹೇಳುವಂತೆ:
ಪಾದೋಸ್ಯ ವಿಶ್ವಾ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ| ಪಾದೋಸ್ಯೇಹಾಭವಾತ್ಪುನಃ|
ತತೋ ವಿಷ್ವಂವ್ಯಕ್ರಾಮತ್| ಸಾಶನಾನಶನೇ ಅಭಿ|
ಈ ಪ್ರಪಂಚದಲ್ಲಿ ವ್ಯಾಪಿಸಿರುವುದು ಭಗವಂತನ ಕೇವಲ ಕಾಲು ಭಾಗವಷ್ಟೇ. ಅಮೃತಮಯವಾದ ಮುಕ್ಕಾಲು ಭಾಗ ದಿವ್ಯಲೋಕ (ಮುಕ್ತಲೋಕ) ದಲ್ಲಿ ನೆಲೆಸಿದೆ. ಜಗತ್ತಿನ ಸಮಸ್ತ ವಸ್ತುವಿನ ಒಳಗೂ ಹೊರಗೂ ತುಂಬಿ ನಾನು ವಿಶ್ವ ರೂಪನಾಗಿದ್ದೇನೆಎನ್ನುತ್ತಾನೆ ಕೃಷ್ಣ.
ಇತಿ ದಶಮೋSಧ್ಯಾಯಃ
ಹತ್ತನೆಯ ಅಧ್ಯಾಯ ಮುಗಿಯಿತು

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.