ಭಗವದ್ಗೀತೆ ಅಧ್ಯಾಯ-16



ಭಗವದ್ಗೀತೆ  ಅಧ್ಯಾಯ-16 (ಶ್ಲೋಕ 1 ರಿಂದ 24)
·  ಶ್ಲೋಕ - 01, 02 & 03
ಹಿಂದಿನ ಅಧ್ಯಾಯದ ಕೊನೆಯಲ್ಲಿ ನಾವು ಅನಘರಾಗಬೇಕು, ‘ಭಾರತರಾಗಬೇಕು-ಎನ್ನುವ ಸಂದೇಶವನ್ನು ಕೊಟ್ಟ ಕೃಷ್ಣ, ಈ ಅಧ್ಯಾಯದಲ್ಲಿ ಭಗವಂತನ ಸಾಧನೆ ಮಾಡುವವರಲ್ಲಿ ಇರಬೇಕಾದ ಗುಣಗಳ ಬಗ್ಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ 'ದೈವೀಸ್ವಭಾವ' ಮತ್ತು 'ಆಸುರೀಸ್ವಭಾವ' ಹಾಗು ಅದರ ಗುಣಲಕ್ಷಣಗಳನ್ನು ಸ್ಪಷ್ಟವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ದೈವೀಸ್ವಭಾವ ಎಂದರೆ ದೇವತೆಗಳ ಸ್ವಭಾವ-ಇದು ಜ್ಞಾನ ಸಾಧನ. ಆಸುರೀಸ್ವಭಾವ ಎಂದರೆ ಅಸುರರ ಸ್ವಭಾವ-ಅದು ಜ್ಞಾನ ವಿರೋಧಿ. ದೈವೀ ಸ್ವಭಾವವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜ್ಞಾನ ಸಾಧನೆ ಸಾಧ್ಯ, ಅದನ್ನು ಬಿಟ್ಟು ಆಸುರಸ್ವಭಾವವನ್ನು ಅಳವಡಿಸಿಕೊಂಡರೆ ಅದು ನಮ್ಮನ್ನು ಅಜ್ಞಾನದ ದಾರಿಯಲ್ಲಿ ಕೊಂಡೊಯ್ಯುತ್ತದೆ. ಒಂದು ಬೆಳಕಿನ ದಾರಿಯಾದರೆ ಒಂದು ಕತ್ತಲಿನ ದಾರಿ. ಯಾವ ದಾರಿಯಲ್ಲಿ ನಡೆಯಬೇಕು ಎನ್ನುವ ತೀರ್ಮಾನ ನಮಗೆ ಬಿಟ್ಟಿದ್ದು. ನಮಗೆ ಬೆಳಕಿನ ದಾರಿ ಬೇಕಿದ್ದರೆ, ಆ ದಾರಿಯಲ್ಲಿ ಸಾಗಲು ಬೇಕಾದ ನಡೆಯನ್ನು ಈ ಅಧ್ಯಾಯ ತಿಳಿಸುತ್ತದೆ. ಅದೇ ರೀತಿ ಕತ್ತಲೆಯ ದಾರಿಯಲ್ಲಿ ಸಾಗುವವರ ಬುದ್ಧಿ ಹೇಗಿರುತ್ತದೆ ಎನ್ನುವುದನ್ನೂ ಇಲ್ಲಿ ವಿವರಿಸಲಾಗಿದೆ. ಇಲ್ಲಿ ದೈವೀ ಮತ್ತು ಆಸುರೀ ಸ್ವಭಾವವನ್ನು ಬಿಟ್ಟು ಬೇರೆಯಾಗಿ ಮಾನವ ಸ್ವಭಾವವನ್ನು ವಿವರಿಸಿಲ್ಲ. ಏಕೆಂದರೆ ಮಾನವ ಸ್ವಭಾವ ಈ ಎರಡೂ ಸ್ವಭಾವದ ಮಿಶ್ರಣ. ಈ ಮಿಶ್ರಣದಲ್ಲಿನ ಪ್ರಮಾಣಭೇದದಿಂದ ಮಾನವರಲ್ಲಿ ವೈವಿಧ್ಯತೆ ಬರುತ್ತದೆ. ಒಟ್ಟಿನಲ್ಲಿ ಇರುವುದು ಎರಡೇ ದಾರಿ. ಬೆಳಕಿನ ದಾರಿ ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುತ್ತದೆ; ಕತ್ತಲಿನ ದಾರಿ ನಾವು ಭಗವಂತನಿಗೆ ಬೆನ್ನುಹಾಕಿ ನಡೆಯುವಂತೆ ಮಾಡುತ್ತದೆ.
ಭಗವಂತನೆಡೆಗೆ ಹೋಗುವವರಲ್ಲಿ ಇರಬೇಕಾದ ಒಳ್ಳೆಯ ಲಕ್ಷಣಗಳ ಬಗ್ಗೆ ಹೇಳುತ್ತ ಈ ಅಧ್ಯಾಯ ಪ್ರಾರಂಭವಾಗುತ್ತದೆ. ಅಧ್ಯಾತ್ಮದಲ್ಲಿ ಖಂಡಿತವಾಗಿ ಬೇಕಾದ, ನಾವು ರೂಢಿಸಿಕೊಳ್ಳಬೇಕಾದ ಪ್ರಮುಖ ಇಪ್ಪತ್ತಾರು ಗುಣಗಳನ್ನು ಕೃಷ್ಣ ಈ ಅಧ್ಯಾಯದ ಮೊದಲ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ. ಬನ್ನಿ, ಭಗವಂತನತ್ತ ನಮ್ಮನ್ನು ಕೊಂಡೊಯ್ಯುವ ಬೆಳಕಿನ ದಾರಿಯ ಗುಣ ಲಕ್ಷಣಗಳನ್ನು ಕೃಷ್ಣನಿಂದ ತಿಳಿದು, ಕತ್ತಲಿನಿಂದ ಬೆಳಕಿನತ್ತ ಹೆಜ್ಜೆ ಹಾಕೋಣ.
ಭಗವಾನುವಾಚ ।
ಅಭಯಂ ಸತ್ತ್ವಸಂಶುದ್ಧಿರ್ಜ್ಞಾನಯೋಗವ್ಯವಸ್ಥಿತಿಃ ।
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ೧॥

ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾನ್ತಿರಪೈಶುನಮ್ ।
ದಯಾ ಭೂತೇಷ್ವಲೋಲುತ್ವಂಮಾರ್ದವಂ ಹ್ರೀರಚಾಪಲಮ್ ೨॥

ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋ ನಾತಿಮಾನಿತಾ ।
ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ ೩॥
ಭಗವಾನ್ ಉವಾಚ-ಭಗವಂತ ಹೇಳಿದನು :
ಅಭಯಂ ಸತ್ತ್ವಸಂಶುದ್ಧಿಃ ಜ್ಞಾನಯೋಗ ವ್ಯವಸ್ಥಿತಿಃ ।
ದಾನಮ್ ದಮಃ ಚ ಯಜ್ಞ ಚ ಸ್ವಾಧ್ಯಾಯಃ ತಪಃ ಆರ್ಜವಮ್ ||
ಅಹಿಂಸಾ ಸತ್ಯಮ್ ಅಕ್ರೋಧಃ ತ್ಯಾಗಃ ಶಾಂತಿಃ ಅಪೈಶುನಮ್ ।
ದಯಾ ಭೂತೇಷು ಅಲೋಲುತ್ವಂ ಮಾರ್ದವಂ ಹ್ರೀಃ ಅಚಾಪಲಮ್ ||
ತೇಜಃ ಕ್ಷಮಾ ಧೃತಿಃ ಶೌಚಮ್ ಅದ್ರೋಹಃ ನ ಅತಿಮಾನಿತಾ ।
ಭವಂತಿ ಸಂಪದಂ ದೈವೀಮ್ ಅಭಿಜಾತಸ್ಯ ಭಾರತ ಹೇ ಭಾರತ, ದೈವೀಸಂಪತ್ತು [ಒಳ್ಳೆಯ ನಡತೆ] ಹೊತ್ತು ಹುಟ್ಟಿದವನಲ್ಲಿ ಈ ಗುಣಗಳಿರುತ್ತವೆ: ಅಂಜದಿರುವುದು ಮತ್ತು ಅಂಜಿಸದಿರುವುದು, ತಿಳಿಯಾದ ಮನಸ್ಸು, ಅರಿವಿನ ದಾರಿಯಲ್ಲಿ ನೆಲೆಗೊಳ್ಳುವುದು, ಕೊಡುಗೈತನ, ಇಂದ್ರಿಯಗಳ ಮೇಲೆ ಹಿಡಿತ, ದೇವತೆಗಳ ಆರಾಧನೆ, ವೇದಗಳ ಅಧ್ಯಯನ, ನೋಂಪಿಯ ನಿಷ್ಠೆ, ನೇರತನ, ನೋಯಿಸದಿರುವುದು, ನಿಜ ನುಡಿಯುವುದು, ಸಿಡುಕದಿರುವುದು, ಧಾರಾಳತನ, ಭಗವಂತನಲ್ಲಿ ಬಗೆ ನೆಟ್ಟಿರುವುದು, ಚಾಡಿ ಹೇಳದಿರುವುದು, ಪ್ರಾಣಿಗಳಲ್ಲಿ ಕನಿಕರ, ಅತಿಯಾಸೆ ಇರದಿರುವುದು, ನಮ್ರತೆ, ನಾಚಿಕೆ, ಗಟ್ಟಿತನ, ಕುಗ್ಗದಿರುವುದು, ತಪ್ಪನ್ನು ಮನ್ನಿಸುವ ತಾಳ್ಮೆ, ಕೆಚ್ಚು, ಒಳಹೊರಗಣ ಮಡಿ, ಎರಡೆಣಿಸದಿರುವುದು, ಮತ್ತು ಬೀಗದಿರುವುದು.
ಅಧ್ಯಾತ್ಮದ ಸಾಧನೆಯಲ್ಲಿರಬೇಕಾದ ಇಪ್ಪತ್ತಾರು ಸದ್ಗುಣಗಳನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಈ ಇಪ್ಪತ್ತಾರು ಗುಣಗಳ ಬೆನ್ನುಹತ್ತಿ ಅದರಲ್ಲಿ ನಮ್ಮಲ್ಲಿರುವ ಗುಣವನ್ನು ನಾವು ಗುರುತಿಸಿಕೊಂಡು, ಅದನ್ನು ನಾವು ವೃದ್ಧಿಪಡಿಸಿಕೊಳ್ಳಬೇಕು ಮತ್ತು ಇಲ್ಲದ ಗುಣವನ್ನು ಬೆಳಸಿಕೊಳ್ಳಬೇಕು .
(೧) ಅಭಯಂ (ನಿರ್ಭಯತ್ವ/ Fearlessness): ಇದು ಅಧ್ಯಾತ್ಮದ ದಾರಿಯಲ್ಲಿ ಸಾಗುವವರಿಗಿರಬೇಕಾದ ಮೊತ್ತ ಮೊದಲ ಗುಣ. ಅಧ್ಯಾತ್ಮ ಹೇಡಿಗಳಿಗೆ ಹೇಳಿಸಿದ್ದಲ್ಲ. ಹನುಮಂತನ ಕುರಿತಾದ ಈ ಕೆಳಗಿನ ಶ್ಲೋಕ ಹೇಳುವಂತೆ:
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್ ||
ನಮ್ಮಲ್ಲಿ ನಿರ್ಭಯತ್ವ ಬರಬೇಕಾದರೆ ನಾವು ಪ್ರಾಣದೇವರ ಉಪಾಸನೆ ಮಾಡಬೇಕು. ಧೈರ್ಯವಿಲ್ಲದೆ ವೇದಾಂತ ಓದಿದರೆ ದೃಢನಂಬಿಕೆ(Conviction)ಬರುವುದಿಲ್ಲ. ನಾವು ಉಪಾಸನೆ ಮಾಡುವಾಗ ಯಾರೋ ಬಂದು ಏನೋ ಹೇಳುತ್ತಾರೆ. ಆಗ ನಮ್ಮ ಮನಸ್ಸು ದೃಢವಾಗಿ ದೇವರಲ್ಲಿ ನಿಲ್ಲುವುದಿಲ್ಲ. ಯಾರು ಏನೇ ಹೇಳಲಿ, ‘ನಾನು ಹಿಡಿದ ದಾರಿಯನ್ನು ಬಿಡುವುದಿಲ್ಲ, ದೇವರು ನನ್ನನ್ನು ರಕ್ಷಿಸುತ್ತಾನೆಎನ್ನುವ ದೃಢ ನಂಬಿಕೆ ಇದ್ದಾಗ ಮಾತ್ರ ನಾವು ಯಶಸ್ಸನ್ನು ಕಾಣಲು ಸಾಧ್ಯ.
ಇಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಅನರ್ಥ, ಹಾಗೆ ಮಾಡಿದರೆ ಅನರ್ಥಎಂದು ಹೆದರಿಸುವ ಜನರೇ ಹೆಚ್ಚು. ಹೀಗೆ ಹೇಳುವ ಮಂದಿಗೆ ಶಾಸ್ತ್ರದ ಗಂಧ-ಗಾಳಿಯೂ ಗೊತ್ತಿರುವುದಿಲ್ಲ. ಇವರು ಹಿರಣ್ಯಕಶಿಪುವಿನ ಆವೇಶವುಳ್ಳ ಜನ. ಉದಾಹರಣೆಗೆ ಕೆಲವರುವಿಷ್ಣುಸಹಸ್ರನಾಮವನ್ನು ಹೆಂಗಸರು ಹೇಳಬಾರದುಎಂದು ಹೆದರಿಸುತ್ತಾರೆ. ಆದರೆ ವಿಪರ್ಯಾಸವೆಂದರೆ ದೇವರ ನಾಮವಿರುವುದೇ ನಮ್ಮ ಅಭಯಕ್ಕಾಗಿ. ಇದನ್ನು ತಿಳಿಯದೆ ಭಯಬಿದ್ದು ದೂರ ಸರಿದರೆ ಅದರಿಂದ ನಮಗೇ ನಷ್ಟ. ದೇವರು ಎಂದೂ ಭಯಾನಕ ಅಲ್ಲ. ಆತ ಭಯಾನಕನಾಗುವುದು ಕೇವಲ ಹಿರಣ್ಯಕಶಿಪುವಿನ ಆವೇಶವುಳ್ಳವರಿಗೆ ಹೊರತು ಪ್ರಹ್ಲಾದನ ಆವೇಶವುಳ್ಳವರಿಗಲ್ಲ. ನಾವು ಪ್ರಹ್ಲಾದನಂತಾಗಿ, ನಮ್ಮನ್ನು ಹೆದರಿಸುವ ಹಿರಣ್ಯಕಶಿಪುಗಳಿಗೆ ಭಯಬೀಳದೆ, ಅಭಯಪ್ರದ ಭಗವಂತನನ್ನು ಸ್ತುತಿಸಬೇಕು.
ಅಧ್ಯಾತ್ಮ ಸಾಧಕ ಎಂದೂ ಹೇಡಿಯಾಗಿರುವುದಿಲ್ಲ. ಏಕೆಂದರೆ ಅವನಿಗೆ ಒಂದು ವಿಷಯ ಖಚಿತವಾಗಿ ತಿಳಿದಿರುತ್ತದೆ. ನಾನು ಹೆದರುವುದಕ್ಕೆ ಅರ್ಥವಿಲ್ಲ, ಏಕೆಂದರೆ ಭಗವಂತ ರಕ್ಷಿಸುವ ತನಕ ನನ್ನನ್ನು ಇಡೀ ಪ್ರಪಂಚ ಏನೂ ಮಾಡಲಾರದು; ಭಗವಂತ ಕೈಬಿಟ್ಟಮೇಲೆ ಯಾರೂ ನನ್ನನ್ನು ರಕ್ಷಿಸಲಾರರು”. ಈ ರೀತಿ ನಿಶ್ಚಿತಾಭಿಪ್ರಾಯ ನಮ್ಮಲ್ಲಿ ಬೆಳೆಯಬೇಕು.
ರಕ್ಷತೀತ್ಯೇವ ವಿಶ್ವಾಸಃ”-ಭಗವಂತ ತನ್ನ ಭಕ್ತರನ್ನು ಎಂದೂ ಬಿಟ್ಟು ಕೊಡುವುದಿಲ್ಲ. ಆದ್ದರಿಂದ ಅಭಯನಮ್ಮಲ್ಲಿರಬೇಕಾದ ಮೊದಲ ಅರ್ಹತೆ. ಈ ವಿಶ್ವಾಸ ನಮ್ಮಲ್ಲಿ ಎಷ್ಟು ದೃಢವಾಗುವುದೋ ಅಷ್ಟು ರಕ್ಷಣೆ ಭಗವಂತನಿಂದ ಭಕ್ತನಿಗೆ ದೊರೆಯುತ್ತದೆ.
(೨) ಸತ್ತ್ವಸಂಶುದ್ಧಿ(ಶುದ್ಧವಾದ ಮನಸ್ಸು/Pure Mind) : ನಮ್ಮ ಮನಃಶುದ್ಧಿ ಅಧ್ಯಾತ್ಮ ಸಾಧನೆಯಲ್ಲಿ ಬಹಳ ಮುಖ್ಯ. ಸಾಮಾನ್ಯವಾಗಿ ನಮ್ಮ ಮನಸ್ಸು ಅನುವಂಶೀಯ ಕಾರಣದಿಂದ, ಅಥವಾ ಪರಿಸರದ ಪ್ರಭಾವದಿಂದ ಶುದ್ಧವಾಗಿರುವುದಿಲ್ಲ.ಹದಿಮೂರನೆ ಶತಮಾನದಲ್ಲೇ ಆಚಾರ್ಯರು ದೌರ್ಲಭ್ಯಾತ್ ಶುದ್ಧ ಬುದ್ಧೀನಾಂಎಂದಿರುವುದನ್ನು ನಾವು ಇಲ್ಲಿ ಗಮನಿಸಬೇಕು. ಶುದ್ಧ ಮನಸ್ಸಿರುವವರು ಸಮಾಜದಲ್ಲಿ ತುಂಬಾ ದುರ್ಲಭ.
ಇಲ್ಲಿ ಕೃಷ್ಣ ಕೇವಲ ಸತ್ತ್ವ ಶುದ್ಧಿ ಎಂದು ಹೇಳದೆ, ‘ಸತ್ತ್ವ ಸಂ-ಶುದ್ಧಿಎಂದು ಹೇಳಿದ್ದಾನೆ. ನಮ್ಮ ಮನಸ್ಸು ಒಮ್ಮೊಮ್ಮೆ ಶುದ್ಧವಾಗಿರುತ್ತದೆ, ನಿದ್ದೆಯಲ್ಲಿ ಎಲ್ಲರ ಮನಸ್ಸೂ ಶುದ್ಧ. ಆದರೆ ಇಲ್ಲಿ ಕೃಷ್ಣ ಹೇಳುವುದು ಸದಾ ಶುದ್ಧವಾಗಿರುವ ಎಚ್ಚರದ ಮನಸ್ಸು. ಇದನ್ನು ಭಾಗವತದಲ್ಲಿ ಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ”..(೪-೩೦-೨೩)ಎಂದಿದ್ದಾರೆ. ಅಂದರೆ ಸದಾ ಶುದ್ಧವಾಗಿರುವ ಮನಸ್ಸಿಗೆ ವಾಸುದೇವ ಗೋಚರನಾಗುತ್ತಾನೆಎಂದರ್ಥ. ಆದ್ದರಿಂದ ಅಧ್ಯಾತ್ಮ ಸಾಧನೆಗೆ ಯಾವುದೇ ಕೊಳೆ ಇಲ್ಲದ, ಯಾವುದೇ ಪೂರ್ವಾಗ್ರಹ ಇಲ್ಲದ ಮನಸ್ಸು ಬಹಳ ಮುಖ್ಯ.
(೩) ಜ್ಞಾನಯೋಗ ವ್ಯವಸ್ಥಿತಿಃ (ನಿರಂತರ ಜ್ಞಾನಯೋಗದಲ್ಲಿ ಮನಸ್ಸನ್ನು ನೆಲೆಗೊಳಿಸುವುದು): ಉಪಾಸನಯೋಗ ಬಹಳ ಪ್ರಮುಖವಾದ ಯೋಗ. ಭಕ್ತಿ, ಜ್ಞಾನ ಮತ್ತು ಕರ್ಮಯೋಗ ಇದರ ಮೂರು ಮುಖಗಳು. ಇವು ಒಂದನ್ನೊಂದು ಬಿಟ್ಟು ಇರಲಾರವು. ಜ್ಞಾನಯೋಗ ಅಂದರೆ ಭಗವಂತನ ಹಿರಿಮೆಯನ್ನು ತಿಳಿದು, ಅವನ ಪೂಜಾರೂಪವಾಗಿ ಕರ್ಮವನ್ನು ಮಾಡಿ, ಅವನಲ್ಲಿ ಭಕ್ತಿ ಮಾಡುವುದು. ವ್ಯವಸ್ಥಿತಿಃಅಂದರೆ ಅಚಲವಾದ ಸ್ಥಿತಿ. ಭಗವಂತನ ವಿಷಯವಾಗಿ ಅಚಲವಾದ ಮನಸ್ಸನ್ನಿಟ್ಟು, ನಿರಂತರ ಭಗವಂತನ ಚಿಂತನೆಯಲ್ಲಿ ಮನಸ್ಸನ್ನು ನೆಲೆಗೊಳಿಸುವುದು. ಇದರಿಂದ ಮನಸ್ಸು ಸ್ವಚ್ಛವಾಗುತ್ತದೆ.
(೪) ದಾನಂ(ನಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಕೊಡುವುದು): ನಮ್ಮಲ್ಲಿ ಇರುವ ವಸ್ತು ಇನ್ನೊಬ್ಬರಲ್ಲಿ ಇಲ್ಲದೇ ಇದ್ದಾಗ, ಅವರಿಗೆ ಅದು ಬಹಳ ಅಗತ್ಯವಿದ್ದಾಗ, ಆ ವಸ್ತು ನಮಗೆ ಮುಂದೆ ಅಗತ್ಯಬೀಳಬಹುದಾದರೂ ಕೂಡ, ಅದರ ಬಗ್ಗೆ ಯೋಚಿಸದೆ, ಅರ್ಪಣಾ ಭಾವದಿಂದ ಕೊಡುವುದು ದಾನ. ಇದನ್ನು ಬಿಟ್ಟು ಮನೆಯಲ್ಲಿ ಅಗತ್ಯವಿಲ್ಲದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವುದು, ಉತ್ತಮ ದರ್ಜೆಯನ್ನು ಒಳಗಿಟ್ಟು, ಕೀಳು ದರ್ಜೆಯನ್ನು ಕೊಡುವುದು-ದಾನವಲ್ಲ. ಕೊಡುವಾಗ ಮನಸ್ಸಿನಲ್ಲಿ ನಮಗೆ ಕೊಡುವ ವಸ್ತುವಿನ ಮೇಲೆ ಯಾವ ಮಮಕಾರವೂ ಇರಕೂಡದು; 'ಕೊಡುತ್ತಿದ್ದೇನೆ', ಕೊಟ್ಟೆ' ಎನ್ನುವ ಅಹಂಕಾರ ಇರಕೂಡದು. ಪೂರ್ಣ ಅರ್ಪಣಾಭಾವದಿಂದ ಕೊಡಬೇಕು. ಕೊಡುವ ವಸ್ತು ಜ್ಞಾನವಾಗಿರಬಹುದು, ಧಾನ್ಯವಾಗಿರಬಹುದು, ಅಭಯವಾಗಿರಬಹುದು (ಇನ್ನೊಬ್ಬರಿಗೆ ಧೈರ್ಯ ಕೊಡುವುದು), ಹೀಗೆ ಯಾವುದೇ ಕಾರ್ಯವಿರಬಹುದು. ಅಲ್ಲಿ ಕಾರ್ಯಕ್ಕಿಂತ ಮುಖ್ಯವಾದುದು ಆ ಕಾರ್ಯದ ಹಿಂದಿನ ನಮ್ಮ ಭಾವನೆ (ಇನ್ನೂ ಹೆಚ್ಚಿನ ವಿವರಣೆಯನ್ನು ಅ-೧೦, ಶ್ಲೋ-೦೫ರಲ್ಲಿ ವಿವರಿಸಲಾಗಿದೆ) .
(೫) ದಮ (೬) ಯಜ್ಞ : ಇಲ್ಲಿ ಈ ಎರಡು ಕ್ರಿಯೆಯನ್ನು ಕೃಷ್ಣ ’-ಕಾರ ಬಳಸಿ(ದಮಶ್ಚ, ಯಜ್ಞಶ್ಚ) ಹೇಳಿದ. ಇದು ಇತರ ಎಲ್ಲ ನಡತೆಗಳೊಂದಿಗೆ ಬಹಳ ಮುಖ್ಯ ನಡತೆ ಎಂದು ತೋರಿಸಲು ಇಲ್ಲಿ ಚ-ಕಾರ ಬಳಸಲಾಗಿದೆ. ದಮಅಂದರೆ ಕೆಟ್ಟದ್ದನ್ನು ಮಾಡುವುದನ್ನು ಬಿಡುವುದು; ನಮ್ಮ ಇಂದ್ರಿಯಗಳು ಕೆಟ್ಟದ್ದನ್ನು ಮಾಡದಂತೆ ನಿಯಂತ್ರಿಸುವುದು. ಯಜ್ಞ ಅಂದರೆ ಮಾಡುವ ಎಲ್ಲ ಕೆಲಸವನ್ನು ಭಗವದರ್ಪಣೆಯಾಗಿ ಮಾಡುವುದು. ನಾವು ಈ ಎರಡು ನಡತೆಯನ್ನು ನಿರಂತರ ನಮ್ಮ ಜೀವನದಲ್ಲಿ ಪಾಲಿಸಬೇಕು. ಈ ಎರಡು ನಡತೆ ಇಲ್ಲದೆ, ಇತರ ನಡತೆಯನ್ನು ಸಾಧಿಸಲು ಸಾಧ್ಯವಿಲ್ಲ.
(೭) ಸ್ವಾಧ್ಯಾಯಃ ಮೂರು ತರದಲ್ಲಿ ಸ್ವಾಧ್ಯಾಯವಿದೆ. ಸ್ವತಂತ್ರನಾದ ಭಗವಂತನ ಬಗೆಗೆ ಇರತಕ್ಕಂತಹ ಸಮಗ್ರ ವೇದಗಳ ಅಧ್ಯಯನ-ಸ್ವಾಧ್ಯಾಯ; ಇದು ಸಾಧ್ಯವಾಗದೇ ಇದ್ದರೆ ಅವರವರ ಶಾಖೆಯ(ಸ್ವಂ) ವೇದಾಧ್ಯಯನ. ಇದನ್ನು ಕೂಡ ಸ್ವಾಧ್ಯಾಯ ಎನ್ನುತ್ತಾರೆ. ಇನ್ನು ಮೂರನೆಯದು ನಾವು ಗುರುಗಳಿಂದ ಕೇಳಿದ ಅಧ್ಯಾತ್ಮ ವಿಚಾರವನ್ನು ಮನನ ಮಾಡಿ, ಸ್ವಪ್ರವಚನ ಮಾಡಿಕೊಂಡು, ನಮ್ಮ ಆತ್ಮಕ್ಕೆ ಆ ವಿಚಾರ ತಿಳಿದ ಮೇಲೆ ಇನ್ನೊಬ್ಬರಿಗೆ ಹೇಳುವುದು. ಆದರೆ ಇಂದು ಈ ಸ್ವಾಧ್ಯಾಯ ಕಣ್ಮರೆಯಾಗುತ್ತಿದೆ. ಪತಂಜಲಿ ಹೇಳುತ್ತಾನೆ: ವೇದಂ ಅಧಿತ್ಯ ತ್ವರಿತ ವಕ್ತಾರೋ ಭವಂತಿಎಂದು. ಇಂದು ವಿಧ್ಯಾರ್ಥಿ-ನಾಳೆ ಅಧ್ಯಾಪಕ(ವಕ್ತಾರಃ). ನಡುವೆ ಸ್ವಾಧ್ಯಾಯ ಎನ್ನುವ ವಿಚಾರ ಇಂದು ಇಲ್ಲವಾಗಿದೆ. ತ್ವರಿತ ಅಧಿತ್ಯ”, ಎಲ್ಲವೂ ತ್ವರಿತ!
(೮) ತಪಃ : ಕೃಷ್ಣ ಇಲ್ಲಿ ಹೇಳುವ ತಪಃ ಹಿಂದೆ ಹೇಳಿದ ತಪಸ್ಸಲ್ಲ. ನಮ್ಮ ಮನಸ್ಸು ದಾರಿ ತಪ್ಪಿ ಹೋಗದಂತೆ ನಿಯಂತ್ರಣ ಮಾಡುವುದು ದಮ’; ಅದರಿಂದ ಶಾಸ್ತ್ರದ ನಿರಂತರ ಅಧ್ಯಾಯನ ಸ್ವಾಧ್ಯಾಯ’. ಇವೆರಡರಲ್ಲಿ ನಮಗೆ ತೊಂದರೆ ಕೊಡುವ ಎರಡು ಅಂಶಗಳಿವೆ. ಅವುಗಳೆಂದರೆ ನಾಲಿಗೆ ಚಪಲ ಮತ್ತು ಲೈಂಗಿಕ ಆಸಕ್ತಿ. ಇವು ಅಧ್ಯಯನದ ಮೂಲ ಶತ್ರುಗಳು. ಇದನ್ನು ನಿಯಂತ್ರಿಸುವುದು ತಪಃ. ಇದಕ್ಕಾಗಿ ಹಿಂದೆ ಪುಣ್ಯಕ್ಷೇತ್ರಕ್ಕೆ ಹೋದಾಗ ತಮ್ಮ ಯಾವುದೋ ಒಂದು ತಿನ್ನುವ ಚಪಲವನ್ನು ಅಲ್ಲಿ ಬಿಟ್ಟುಬರುತ್ತಿದ್ದರು. ಯಾವುದಾದರೊಂದು ನೆಪದಿಂದ ತಮ್ಮ ಚಪಲವನ್ನು ಕಳಚಿಕೊಳ್ಳುವುದು ಇದರ ಹಿಂದಿನ ಕಾರಣ.
(೯) ಆರ್ಜವಮ್ (ಪ್ರಾಮಾಣಿಕತೆ/Straightforwardness): ನೇರ ನಡೆ ನುಡಿ. ಮಾತನಾಡುವುದೊಂದು- ಮಾಡುವುದು ಇನ್ನೊಂದು ಮಾಡದೆ, ಪ್ರಾಮಾಣಿಕತೆಯಿಂದಿರುವುದು.
(೧೦) ಅಹಿಂಸಾ : ಈ ಬಗ್ಗೆ ಅಧ್ಯಾಯ ಹತ್ತರಲ್ಲಿ(ಶ್ಲೋಕ-೦೫) ಸ್ವಲ್ಪ ಮಟ್ಟಿಗೆ ವಿಶ್ಲೇಷಿಸಿದ್ದೇವೆ. ದ್ವೇಷದಿಂದ, ಅಸಹನೆಯಿಂದ, ಅಸೂಯೆಯಿಂದ ಇನ್ನೊಬ್ಬರಿಗೆ ನೋವನ್ನುಂಟುಮಾಡುವುದು ಹಿಂಸೆ. ಆಹಾರಕ್ಕಾಗಿ ಇನ್ನೊಂದು ಜೀವಯನ್ನು ಅನಿವಾರ್ಯವಾಗಿ ಸಾಯಿಸುವುದು ಹಿಂಸೆ ಅಲ್ಲ(ಉದಾ: ವನಸ್ಪತಿಗಳ ಸೇವನೆ, ಕ್ಷತ್ರಿಯರ ಮಾಂಸಭಕ್ಷಣೆ ಇತ್ಯಾದಿ); ನಡೆಯುವಾಗ, ಉಸಿರಾಡುವಾಗ, ತಿಳಿಯದೆ ಸೂಕ್ಷ್ಮ ಜೀವಿಗಳು ಸತ್ತರೆ ಅದು ಹಿಂಸೆ ಅಲ್ಲ; ದೇಶವನ್ನು ಕಾಯುವ ಸೈನಿಕ ತನ್ನ ಧರ್ಮ ಪಾಲನೆಗಾಗಿ ಶತ್ರು ಸೈನಿಕನನ್ನು ಕೊಂದರೆ ಅದು ಹಿಂಸೆ ಅಲ್ಲ; ಮುಂದೆ ನಡೆಯುವ ಮಹಾ ಹಿಂಸೆಯನ್ನು ತಡೆಯಲು ಅನಿವಾರ್ಯವಾಗಿ ನಡೆಯುವ ಯುದ್ಧ ಹಿಂಸೆ ಅಲ್ಲ(ಉದಾ: ಮಹಾಭಾರತ ಯುದ್ಧ); ಸಾವಿರಾರು ಜನರನ್ನು ರಕ್ಷಿಸುವುದಕ್ಕೋಸ್ಕರ ಒಬ್ಬನನ್ನು ಕೊಲ್ಲುವುದು ಹಿಂಸೆ ಅಲ್ಲ (ಉದಾ: ದಿನಕ್ಕೆ ಹತ್ತು ಸಾವಿರ ಸೈನಿಕರನ್ನು ಕೊಲ್ಲುವ ಪಣತೊಟ್ಟು ಹಗಲೂ ರಾತ್ರಿ ಹೋರಾಡುತ್ತಿದ್ದ ದ್ರೋಣಾಚಾರ್ಯರನ್ನು ಕೃಷ್ಣ ಕೊಲ್ಲಿಸಿರುವುದು); ವೈದ್ಯರು ರೋಗಿಯನ್ನು ಬದುಕಿಸುವುದಕ್ಕೋಸ್ಕರ ಮಾಡುವ ಕ್ರಿಯೆ ಹಿಂಸೆ ಅಲ್ಲ; ಹೀಗೆ ಒಟ್ಟಿನಲ್ಲಿ ದ್ವೇಷ, ಅಸಹನೆ, ಅಸೂಯೆ, ಸ್ವಾರ್ಥವಿಲ್ಲದೆ ನಡೆಯುವ ಅನಿವಾರ್ಯವಾದ ಹಿಂಸೆ-ಅಹಿಂಸೆ ಎನಿಸುತ್ತದೆ.
ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.
(೧೧) ಸತ್ಯಮ್: ಇದು ಪ್ರಾಮಾಣಿಕತೆಯ ಇನ್ನೊಂದು ಮುಖ. ಇಲ್ಲಿ ಸತ್ಯ ಅಂದರೆ ಇದ್ದದ್ದನ್ನು ಇದ್ದಂತೆ ಹೇಳುವುದಲ್ಲ. ಸಮಾಜಲ್ಲಿ ಸಾದು ಸಜ್ಜನರಿಗೆ ಹಿತವಾಗುವಂತಹ ಮಾತು ಸತ್ಯ. ಕೆಲವೊಮ್ಮೆ ಲೋಕ ಹಿತಕ್ಕೋಸ್ಕರ ನಾವು ಹೇಳುವ ಸುಳ್ಳೂ ಕೂಡ ಸತ್ಯವಾಗುತ್ತದೆ; ಲೋಕಕ್ಕೆ ಅನ್ಯಾಯವಾಗುವಂತಹ ಸತ್ಯವೂ ಸುಳ್ಳಾಗುತ್ತದೆ. ಮಹಾಭಾರತದಲ್ಲಿ ಕೃಷ್ಣ ಈ ಸಂದೇಶವನ್ನು ಕ್ರಾಂತಿಕಾರಕ ರೂಪದಲ್ಲಿ ಮಾಡಿ ತೋರಿಸಿದ್ದಾನೆ. ಈ ವಿಷಯ ಮಹಾಭಾರತದಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದೆ. ಅಲ್ಲಿ ಹೇಳುವಂತೆ:
ನ ನರ್ಮ ಯುಕ್ತಂ ವಚನಂ ಹಿನಸ್ತಿ ನ ಸ್ತ್ರೀಷು ರಾಜನ್ ನ ವಿವಾಹ ಕಾಲೇ
ಪ್ರಾಣಾತ್ಯಯೈ ಸರ್ವಧನಾಪಹಾರೇ ಪಂಚಾನೃತಾನ್ಯ ಆಹುರ್ ಅಪಾತ್ ಕಾನಿ ||೧-೭೭-೧೬||
ಒಬ್ಬರ ಮದುವೆಯನ್ನು ಹೊಟ್ಟೆಕಿಚ್ಚಿನಿಂದ ಸುಳ್ಳು ಹೇಳಿ ತಪ್ಪಿಸುವುದು, ನಿಶ್ಚಿತಾರ್ಥವಾಗಿರುವ ಮದುವೆಯನ್ನು ತಪ್ಪಿಸುವುದು, ಇತ್ಯಾದಿಯನ್ನು ಶಾಸ್ತ್ರ ಖಂಡಿಸುತ್ತದೆ. ಪ್ರಾಣಾಪಾಯದ ಕಾಲದಲ್ಲಿ ಜೀವ ರಕ್ಷಣೆಗಾಗಿ ಹೇಳುವ ಸುಳ್ಳು ಸುಳ್ಳಲ್ಲ.
(೧೨) ಅಕ್ರೋಧಃ ಯಾವ ಕಾಲಕ್ಕೂ ಇನ್ನೊಬ್ಬರ ಮೇಲೆ ಕೋಪಿಸಿಕೊಳ್ಳದೆ ಇರುವುದು. ಅಪ್ರೀಯ ಘಟನೆ ನಡೆದಾಗ ಕೋಪ ಬರಬಹುದು. ಆದರೆ ನಿಮ್ಮನ್ನು ಕೋಪದ ಕೈಗೆ ಎಂದೂ ಕೊಡಬೇಡಿ. ಕೋಪಬಂದಾಗ-ಕೋಪ ಇಳಿಯುವ ತನಕ ಮೌನವನ್ನಾಚರಿಸಿದರೆ ಅದರಿಂದಾಗುವ ಅನಾಹುತ ತಪ್ಪುತ್ತದೆ. ಕಾಮ-ಕ್ರೋದದ ಬಗ್ಗೆ ಕೃಷ್ಣ ಗೀತೆಯಲ್ಲಿ ಅನೇಕ ಬಾರಿ ನಮ್ಮನ್ನು ಎಚ್ಚರಿಸುತ್ತಾನೆ. ನೆಮ್ಮದಿಯ ಜೀವನಕ್ಕೆ ಇವು ಮಾರಕ. ಹೇಗೆ ಶಾಂತತೆಯನ್ನು ನಾವು ಕಲಿತುಕೊಳ್ಳಬೇಕು ಎನ್ನುವುದಕ್ಕೆ ಶ್ರೀರಾಮಚಂದ್ರನ ಜೀವನವೇ ಉತ್ತಮ ಉದಾಹರಣೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ: ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆಎಂದು. ||ಅಯೋಧ್ಯಾ-೧.೧೫|| ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲವಂತೆ.
(೧೩) ತ್ಯಾಗಃ: ಮೇಲ್ನೋಟಕ್ಕೆ ದಾನ ಮತ್ತು ತ್ಯಾಗ ಒಂದೇ ಎನ್ನುವಂತೆ ಕಾಣಿಸುತ್ತದೆ. ಆದರೆ ತ್ಯಾಗ ಎಂದರೆ ನಮ್ಮಲ್ಲಿರುವ ವಸ್ತುವೂ ಕೂಡ ನನ್ನದಲ್ಲ-ಭಗವಂತನದು ಎನ್ನುವ ಭಾವನೆಯಿಂದ ಬದುಕುವುದು. ತ್ಯಾಗದಲ್ಲಿ ಅನೇಕ ವಿಧ. ಅಭಿಮಾನ ತ್ಯಾಗ, ಫಲ ತ್ಯಾಗ, ಅಹಂಕಾರ-ಮಮಕಾರ ತ್ಯಾಗ ಇತ್ಯಾದಿ. ಪ್ರೀತಿ ಇರಲಿ, ಆದರೆ ನನ್ನದುಎನ್ನುವ ಭಾವನೆಯಿಂದ ದೂರ ನಿಲ್ಲು. ಬಂದಾಗ ಸಂತೋಷದಿಂದ ಸ್ವೀಕರಿಸು, ಹೋದಾಗ ನಿರ್ಲಿಪ್ತನಾಗಿ ಇದ್ದು ಬಿಡು. ಈ ಜೀವನ ಪಯಣದಲ್ಲಿ ಯಾವುದೂ ಶಾಶ್ವತವಲ್ಲ. ಭಗವಂತನೊಬ್ಬನೆ ನಿತ್ಯ ಎಂದು ತಿಳಿದು ಆತನನ್ನು ಗುರಿಯಿಟ್ಟು ಪಯಣಿಸು.
(೧೪) ಶಾಂತಿಃ : ತ್ಯಾಗದಿಂದ ಮೊತ್ತ ಮೊದಲು ಸಿಗುವುದು ನೆಮ್ಮದಿ. ಸ್ವಲ್ಪವೂ ಉದ್ವೇಗಕ್ಕೆ ಒಳಗಾಗದೆ, ಪ್ರತಿಯೊಂದನ್ನೂ ಸ್ವೀಕರಿಸಿದಾಗ ಎಲ್ಲವೂ ಶಾಂತ. ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದಾಗ ಮಾತ್ರ ಅಂತಹ ಶಾಂತಿ ಬರಲು ಸಾಧ್ಯ. ಕ್ಷುದ್ರವಾದ ಲೌಕಿಕ ವಿಚಾರದಲ್ಲಿ ತಲೆ ಹಾಕಿಕೊಂಡು- ಪೈಪೋಟಿ, ಸ್ಪರ್ಧೆ, ಜಗಳ, ವಿರಸದಿಂದ ಜೀವನ ಸಾಗಿಸುವುದಕ್ಕಿಂತ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಶಾಂತಿಯನ್ನು ಸಾಧಿಸು.
(೧೫) ಅಪೈಶುನಮ್: ಪೈಶುನಮ್ಅಂದರೆ ಚಾಡಿ ಹೇಳಿ ವಿರಸ ಹುಟ್ಟಿಸುವುದು. ಇದು ಅತ್ಯಂತ ನಿಕೃಷ್ಟ ಗುಣ. ನಮ್ಮ ಸ್ವಾರ್ಥಕ್ಕಾಗಿ ದೊಡ್ದವರಲ್ಲಿ ಚಾಡಿಹೇಳಿ, ಸಮಾಜ ಸ್ವಾಸ್ಥ್ಯವನ್ನು ಕೆಡಿಸುವುದು ಮಹಾ ಪಾಪ. ಆದ್ದರಿಂದ ನೀನು ಅಪೈಶುನನಾಗು ಎನ್ನುತ್ತಾನೆ ಕೃಷ್ಣ. ಚಾಡಿ ಹೇಳಬೇಡ ಮತ್ತು ಚಾಡಿಗೆ ಕಿವಿಗೊಡಬೇಡ.
(೧೬) ದಯಾ ಭೂತೇಷು: ಚೈತನ್ಯವಿರುವ ಪ್ರತಿಯೊಂದು ಜೀವಿಗಳ ಮೇಲೆ ಅನುಕಂಪವಿರಲಿ. ಅದು ವನಸ್ಪತಿ ಇರಲಿ, ಪ್ರಾಣಿ ಇರಲಿ, ಪಕ್ಷಿ ಇರಲಿ, ಮಾನುಷ್ಯನಿರಲಿ. ಎಲ್ಲರ ಮೇಲೂ ದಯೆ ಇರಲಿ. ಇದನ್ನು ಹಿಂದಿನ ಕಾಲದಲ್ಲಿ ವಿಶೇಷ ರೀತಿಯಲ್ಲಿ ಅನುಸರಿಸಿಕೊಂಡು ಬರುತ್ತಿದ್ದರು. ಬೆಳೆಗ್ಗೆ ಎದ್ದು ತುಳಸಿಗೆ ನೀರು ಹಾಕುವುದು, ಗೋಶಾಲೆಗೆ ಹೋಗಿ ಹಸುಗಳಿಗೆ ಆಹಾರ ನೀಡುವುದು, ಮನೆಯಲ್ಲಿರುವ ನಾಯಿಗೆ ನಾವು ಊಟ ಮಾಡುವ ಮೊದಲು ಆಹಾರ ನೀಡುವುದು, ಮನೆ ಸುತ್ತಮುತ್ತಲಿರುವ ಪಕ್ಷಿಗಳಿಗೆ ಆಹಾರ ಕೊಡುವುದು, ಹಸಿದು ಬಂದ ವ್ಯಕ್ತಿಯ ಹೊಟ್ಟೆಯಲ್ಲಿರುವ ವೈಶ್ವಾನರನನ್ನು ತಣಿಸುವುದು ಇತ್ಯಾದಿ. ಇದಲ್ಲದೆ ಇನ್ನೊಬ್ಬರು ತೊಂದರೆಯಲ್ಲಿದ್ದಾಗ, ಆತ ಮಿತ್ರ ಶತ್ರು ಎನ್ನುವ ಭೇದವೆಣಿಸದೆ ಅವರ ಮೇಲೆ ದಯೆ ತೋರುವುದು ಬಹಳ ದೊಡ್ಡ ಗುಣ. ಈ ಗುಣವನ್ನು ಮುಖ್ಯವಾಗಿ ಮಹಾಭಾರತದಲ್ಲಿ ಧರ್ಮರಾಯನಲ್ಲಿ ಕಾಣುತ್ತೇವೆ.
(೧೭) ಅಲೋಲುತ್ವಂ/ ಅಲೋಲತ್ವಂ: ಒಂದನ್ನು ಅತಿಯಾಗಿ ಹಚ್ಚಿಕೊಳ್ಳುವುದು ಲೋಲುತ್ವ. ಯಾವುದರ ಮೇಲೂ ಅತಿಯಾದ ಮೋಹ ಬೇಡ. ಅಂಟಿಸಿಕೊಳ್ಳುವುದು ದುಃಖಕ್ಕೆ ಕಾರಣ.
(೧೮) ಮಾರ್ದವಂ(Softness):ಸೌಜನ್ಯ, ಮೃದು ಸ್ವಭಾವವನ್ನು ಇಲ್ಲಿ ಮಾರ್ದವಂ ಎಂದಿದ್ದಾರೆ. ನಮ್ಮಲ್ಲಿ ಕೆಲವರು ತಮ್ಮ ಕೆಲಸದವರನ್ನು, ಅಥವಾ ತಮ್ಮ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು ಗೌರವವಿಲ್ಲದೆ ಮಾತನಾಡಿಸುತ್ತಾರೆ. ಅವರು ನನ್ನ ಸೇವಕರುಎಂದು ಅಹಂಕಾರದಿಂದ ಅವರೊಂದಿಗೆ ವ್ಯವಹರಿಸುತ್ತಾರೆ. ಇದು ಅತ್ಯಂತ ನೀಚ ಗುಣ. ಇದರಿಂದಾಗಿ ನಾವು ಆ ವ್ಯಕ್ತಿಯ ಮನ ನೋಯಿಸುವುದಷ್ಟೇ ಅಲ್ಲ, ಆತನ ಒಳಗಿರುವ ಭಗವಂತನನ್ನು ಧಿಕ್ಕರಿಸಿದಂತೆ. ಇದು ಅಹಂಕಾರದ ಇನ್ನೊಂದು ಮುಖ. ಅದಕ್ಕಾಗಿ ಕೃಷ್ಣ ಹೇಳಿದ: ನಿಮ್ಮ ನಡತೆಯಲ್ಲಿ ನಯ ವಿನಯವಿರಲಿ, ಸೌಜನ್ಯವಿರಲಿಎಂದು.
(೧೯) ಹ್ರೀಃ (ನಾಚಿಕೊಳ್ಳುವುದು): ತಪ್ಪು ಮಾಡಿದಾಗ ನಾಚಿಕೊಳ್ಳುವುದು. ಇದು ಬಹಳ ದೊಡ್ಡ ಗುಣ. ತೈತ್ತಿರೇಯ ಉಪನಿಷತ್ತಿನಲ್ಲಿ ಹೇಳುವಂತೆ : | ಶ್ರೀಯಾ ದೇಯಂ | ಹ್ರೀಯಾ ದೇಯಂ | ಭಿಯಾ ದೇಯಂ | ಸಂವಿದಾ ದೇಯಂ ||೧೧-೦೩|| ಇನ್ನೊಬ್ಬರು ಟೀಕೆ ಮಾಡಬಹುದು ಎನ್ನುವ ನಾಚಿಕೆಯಿಂದಾದರೂ ದಾನ ಮಾಡು ಎನ್ನುತ್ತದೆ ಶಾಸ್ತ್ರ.
(೨೦) ಅಚಾಪಲಮ್ : ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ಥೈರ್ಯ. ವಿಷಯ ವಿಶ್ಲೇಷಣೆ ಮಾಡಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದು, ಯಾವುದು ನನ್ನ ದಾರಿ ಎಂದು ಗಟ್ಟಿಯಾಗಿ ನಿಲ್ಲುವುದು ಅಚಾಪಲಮ್.
(೨೧) ತೇಜಃ (ತೇಜಸ್ಸು): ಇದನ್ನು ಶಾಸ್ತ್ರಕಾರರು ಬ್ರಹ್ಮವರ್ಚಸ್ಸು ಎನ್ನುತ್ತಾರೆ. ಮುಖದಲ್ಲಿ ಕಳೆ ತುಂಬಿಕೊಂಡಿರುವುದು. ಕಣ್ಣಿನಲ್ಲಿ ತೇಜಸ್ಸು. ಮನಸ್ಸು ಸ್ವಚ್ಛವಿರುವ ಸಾಧನೆಯ ಮಾರ್ಗದಲ್ಲಿ ಸಾಗುವ ಜ್ಞಾನಿಗಳಲ್ಲಿ ಮಾತ್ರ ಈ ಗುಣವಿರುತ್ತದೆ.
(೨೨) ಕ್ಷಮಾ(forgiveness): ತಪ್ಪು ಮಾಡಿದವರ ಮೇಲೆ ಕೂಡ ಪ್ರತೀಕಾರ ಭಾವನೆ ಬೆಳೆಸಿಕೊಳ್ಳದೆ ಇರುವುದು. ನಮ್ಮ ಮನಸ್ಸಿನಲ್ಲಿ ಎಂದೂ ಪ್ರತೀಕಾರ ಭಾವನೆ ಹುಟ್ಟಲೇಬಾರದು. ಶಾಸ್ತ್ರದಲ್ಲಿ ಹೇಳುವಂತೆ: ಇನ್ನೊಬ್ಬರು ಅಪಕಾರ ಮಾಡಿದರೂ ಕೂಡ ಅವರನ್ನು ಕ್ಷಮಿಸುಎಂದು. ದೇವರೆ, ಅವರಿಗೆ ಒಳ್ಳೆ ಬುದ್ಧಿ ಕೊಡುಎಂದು ಪ್ರಾರ್ಥಿಸು-ಆದರೆ ಪ್ರತೀಕಾರದ ಭಾವನೆ ಬೇಡ. ನಮ್ಮಲ್ಲಿ ಎಲ್ಲರೂ ನನ್ನನ್ನು ಮೆಚ್ಚಿಕೊಳ್ಳಬೇಕುಎನ್ನುವ ಅಹಂಕಾರ(Ego) ಇಲ್ಲದೆ ಇದ್ದರೆ ಮಾತ್ರ ಕ್ಷಮಾ ಸಾಧ್ಯ.
(೨೩) ಧೃತಿಃ (ಏನೇ ಆದರೂ ಜೀವನದಲ್ಲಿ ಕಂಗೆಡದಿರುವುದು): ಆತ್ಮ ಭರವಸೆ ಇದ್ದಾಗ ನಮ್ಮನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ. ನಿಜವಾದ ಜ್ಞಾನಿ ಎಂದೂ ಅಂಜುಬುರುಕನಾಗಿ ಧೃತಿಗೆಡುವುದಿಲ್ಲ. ಮುಂದೆ ಹೀಗಾಗಬಹುದುಎಂದು ಮನಸ್ಸಿನಲ್ಲಿ ಯೋಚಿಸಿಕೊಂಡು ಕೊರಗುವುದು ಜೀವನವಲ್ಲ, ಬದಲಿಗೆ ಏನೇ ಬಂದರು ಅದನ್ನು ಎದುರಿಸುವ ಶಕ್ತಿ ಭಗವಂತ ನನಗೆ ಕೊಡುತ್ತಾನೆ ಎನ್ನುವ ಧೃಡವಾದ ಆತ್ಮಶಕ್ತಿ ಧೃತಿ. ವಿಷಮ ಪರಿಸ್ಥಿತಿ(crisis)ಯನ್ನು ಎದುರಿಸಿಕೊಂಡು ಬದುಕುವುದೇ ಜೀವನ. ಅನಿರೀಕ್ಷಿತ ಆಪತ್ತು ಜೀವನದಲ್ಲಿ ಸಾಮಾನ್ಯ. ಅದನ್ನು ತಿಳಿದು ಆತ್ಮವಿಶ್ವಾಸದಿಂದ ಬದುಕು. ಆಗಬಾರದ್ದು ಈ ಜಗತ್ತಿನಲ್ಲಿ ಎಂದೂ ಆಗುವುದಿಲ್ಲ, ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಮ್ಮ ರಕ್ಷಣೆಯ ಭಾರ ಸರ್ವನಿಯಾಮಕ ಭಗವಂತನದು. ಹೀಗಿರುವಾಗ ಭಯವೇಕೆ?
(೨೪) ಶೌಚಮ್: ಈ ವಿಷಯವಾಗಿ ಹಿಂದಿನ ಅಧ್ಯಾಯಗಳಲ್ಲಿ ಅನೇಕ ಬಾರಿ ಚರ್ಚಿಸಿದ್ದೇವೆ. ಶೌಚ ಎಂದರೆ ಒಳಗೂ ಹೊರಗೂ ಸ್ವಚ್ಚವಾಗಿರುವುದು. ಸಮಾಜದಲ್ಲಿ ನಮ್ಮಿಂದಾಗಿ ಇತರರಿಗೆ ತೊಂದರೆಯಾಗಬಾರದು. ನಮ್ಮ ಮೈಮನ ಸ್ವಚ್ಛವಾಗಿರುವಂತೆ ನಾವು ನೋಡಿಕೊಳ್ಳಬೇಕು. ಇದಕ್ಕಾಗಿ ಹಿಂದಿನ ಕಾಲದಲ್ಲಿ ಪ್ರತಿದಿನ ಶುಭ್ರವಾದ ಗರಿ-ಗರಿಯಾದ ಬಟ್ಟೆಯನ್ನು ಧರಿಸುತ್ತಿದ್ದರು, ಮೈ ವಾಸನೆ ಬರಬಾರದು ಎಂದು ಮೃತ್ತಿಕಾ ಸ್ನಾನ ಮಾಡುತ್ತಿದ್ದರು, ಮೈಗೆ ಗಂಧವನ್ನು ಬಳಿದುಕೊಳ್ಳುತ್ತಿದ್ದರು. ನಮ್ಮಿಂದಾಗಿ ಇನ್ನೊಬ್ಬರು ಅಯ್ಯೋಎಂದು ಮೂಗು ಮುರಿಯುವಂತೆ ನಾವಿರಬಾರದು. ನಮ್ಮ ಮನಸ್ಸು ಸ್ವಚ್ಛವಾಗಿರಬೇಕು. ಒಳ್ಳೆಯ ಬಟ್ಟೆ ತೊಟ್ಟು, ಮನಸ್ಸಿನಲ್ಲಿ ಕಶ್ಮಲ ತುಂಬಿಕೊಂಡಿದ್ದರೆ ನಾವು ನಮಗರಿವಿಲ್ಲದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಕೆಡಿಸುತ್ತೇವೆ. ಇದಕ್ಕಾಗಿ ಒಳಗೂ ಹೊರಗೂ ಸ್ವಚ್ಛವಾಗಿರಬೇಕು.
(೨೫) ಅದ್ರೋಹಃ: ಇನ್ನೊಬ್ಬರ ಬಗ್ಗೆ ದ್ರೋಹ ಚಿಂತನೆ ಮಾಡದಿರುವುದು. ಇನ್ನೊಬ್ಬರಿಗೆ ಎರಡೆಣಿಸಬೇಡ. ಇನ್ನೊಬ್ಬರಿಗೆ ಕೆಟ್ಟದಾಗಲಿ ಎಂದು ಕನಸಿನಲ್ಲೂ ಬಯಸಬೇಡ.
(೨೬) ನಾತಿಮಾನಿತಾ: ಅತಿಮಾನಅಂದರೆ ನನ್ನ ಬಗ್ಗೆ ನಾನು ಅತಿ ಹೆಗ್ಗಳಿಕೆ ಕಲ್ಪಿಸಿಕೊಂಡು ಬೀಗುವುದು. ಕೃಷ್ಣ ಹೇಳುತ್ತಾನೆ: ನಿನ್ನ ಬಗ್ಗೆ ನೀನು ಎಂದೂ ಅತಿಯಾದಂತಹ ಅಹಂಕಾರ ತಾಳಬೇಡಎಂದು. ಈ ಗುಣಕ್ಕೆ ಶ್ರೀರಾಮಚಂದ್ರನ ಜೀವನ ಉತ್ತಮ ದೃಷ್ಟಾಂತ. ವಾಲ್ಮೀಕಿ-ರಾಮಾಯಣದಲ್ಲಿ ಹೇಳುತ್ತಾರೆ: ವೀರ್ಯವಾನ್ ನಚ ವೀರ್ಯೇನ ಮಹತಾ ಸ್ವೇನ ವಿಸ್ಮಿತಃ”||೨-೧-೧೩|| ಎಂದು. ಅಸಾಧಾರಣ ಪೌರುಷೇಯನಾಗಿದ್ದ ರಾಮ ಎಂದೂ ನಾನು ಮಹಾವೀರಎಂದು ಅಹಂಕಾರ ಪಡದೆ, ಒಬ್ಬ ಸಾಮಾನ್ಯ ಮಾನವನಂತೆ ಬದುಕಿ ತೋರಿಸಿದ. ಇದು ಬಹು ದೊಡ್ಡ ಗುಣ.
ಹೀಗೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಇಪ್ಪತ್ತಾರು ಗುಣಗಳನ್ನು ಹೇಳಿ ಕೃಷ್ಣ ಹೇಳುತ್ತಾನೆ: ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತಎಂದು. ಇಲ್ಲಿ ಅಭಿಅಂದರೆಬಯಸಿಎನ್ನುವ ಅರ್ಥವನ್ನು ಕೊಡುತ್ತದೆ. ದೈವೀ ಸಂಪತ್ತನ್ನು ಬಯಸಿ ಹುಟ್ಟಿದವನಲ್ಲಿ ಈ ಗುಣಗಳಿರುತ್ತವೆ”. ಅಂದರೆ ಯಾರು ಹುಟ್ಟುವಾಗಲೇ ಸಾತ್ವಿಕತೆಯ ಅಭಿಲಾಷೆಯನ್ನು ಇಟ್ಟುಕೊಂಡು ಹುಟ್ಟುತ್ತಾರೋ ಅವರಿಗೆ ಸಹಜವಾಗಿ ಈ ಗುಣಗಳಿರುತ್ತವೆ. ಇವು ದೈವೀ ಸಂಪತ್ತು. ಮಾನವನು ಬೆಳಸಿಕೊಳ್ಳಬೇಕಾದ ಮಾನಸಿಕ ಸಂಪತ್ತು(Divine Wealth).
·  ಶ್ಲೋಕ - 04
ಡಂಭೋ ದರ್ಪೋ ಅತಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ ೪॥
ಡಂಭಃ ದರ್ಪಃ ಅಭಿಮಾನಃ ಚ ಕ್ರೋಧಃ ಪಾರುಷ್ಯಮ್ ಏವ ಚ
ಅಜ್ಞಾನಮ್ ಚ ಅಭಿಜಾತಸ್ಯ ಪಾರ್ಥ ಸಂಪದಮ್ ಆಸುರೀಮ್ಪಾರ್ಥ, ಆಸುರೀ ಸಂಪತ್ತು [ಕೆಟ್ಟ ನಡತೆ] ಹೊತ್ತು ಬಂದವನ ಗುಣಗಳು ಇವು: ಬೂಟಾಟಿಕೆ, ಸೊಕ್ಕು, ಬಿಂಕ, ಸಿಡುಕು, ಒರಟುತನ ಮತ್ತು ತಿಳಿಗೇಡಿತನ.
ಮೇಲೆ ಹೇಳಿದ ಇಪ್ಪಾತ್ತಾರು ದೈವೀಗುಣಕ್ಕೆ ವಿರುದ್ಧವಾಗಿ ಆರು ಆಸುರೀ ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ಹೇಳಿದ್ದಾನೆ:
(೧) ಡಂಭ(ಇಲ್ಲದ್ದನ್ನು ಇದೆ ಎಂದು ತೋರಿಸಿಕೊಳ್ಳುವುದು): ಒಳಗಡೆ ಏನಿಲ್ಲವೋ ಅದು ಇದೆ ಎನ್ನುವಂತೆ ಸುಭಗತನದ ಪ್ರದರ್ಶನ; ಒಳಗಿರುವ ಕೆಟ್ಟತನವನ್ನು ಮುಚ್ಚಿಟ್ಟು ತುಂಬ ಒಳ್ಳೆಯವರ ಹಾಗೆ ಪ್ರದರ್ಶನ ಮಾಡುವುದು, ಇತ್ಯಾದಿ ಡಂಭ ಎನಿಸುತ್ತದೆ. ಇದು ಮೇಲೆ ಹೇಳಿದ ಆರ್ಜವಂ ಎನ್ನುವ ಸದ್ಗುಣದ ವಿರುದ್ಧ ಗುಣ.
(೨) ದರ್ಪ : ಏನು ತಪ್ಪು ಮಾಡಲೂ ಹೇಸದ ಮನೋವೃತ್ತಿ. ಇದು ಹ್ರೀ ಎನ್ನುವ ಸದ್ಗುಣದ ವಿರುದ್ಧ ಗುಣ.
(೩) ಅತಿಮಾನ (Over Estimation of Self): ತನ್ನ ಬಗ್ಗೆ ಅತಿರೇಕದ ಕಲ್ಪನೆ; ನಾನೇ ದೊಡ್ಡ ಮನುಷ್ಯ ಎಂದು ಭ್ರಮಿಸಿಕೊಂಡು ಇನ್ನೊಬ್ಬರಿಗೆ ಅಗೌರವ ತೋರುವುದು; ಎಲ್ಲರೂ ತನ್ನ ಕಾಲನ್ನು ಹಿಡಿಯಬೇಕು ಎಂದು ಅಪೇಕ್ಷಿಸುವುದು-ಇವು ಅತಿಮಾನವೆನಿಸುತ್ತವೆ.
(೪) ಕ್ರೋಧ : ಮನುಷ್ಯ ಬಿಡಬೇಕು ಎಂದರೂ ಬಿಡಲಾಗದ ಕೆಟ್ಟಗುಣ ಕ್ರೋಧ. ಇದು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ದಾರಿತಪ್ಪಿಸುವ ದುರ್ಗುಣ.
(೫) ಪಾರುಷ್ಯ : ಉಗ್ರವಾದ, ಅಸಹ್ಯವಾದ ಮಾತು; ಇನ್ನೊಬ್ಬರನ್ನು ತಾತ್ಸಾರದಿಂದ ಮಾತನಾಡಿಸುವುದು, ಇತ್ಯಾದಿ ಪಾರುಷ್ಯಕ್ಕೆ ಉದಾಹರಣೆ.
(೬) ಅಜ್ಞಾನ : ಮೇಲಿನ ಎಲ್ಲಾ ದುರ್ಗುಣಗಳ ಚಕ್ರವರ್ತಿ ಈ ಅಜ್ಞಾನ. ನಿಜವಾದ ಜ್ಞಾನಿ ಎಂದೂ ಈ ಕೆಟ್ಟ ಗುಣಗಳ ದಾಸನಾಗುವುದಿಲ್ಲ.
ಈ ಎಲ್ಲಾ ಆಸುರೀ ಗುಣಗಳು ನಮ್ಮಲ್ಲಿ ಮನೆ ಮಾಡಿ ನಮ್ಮನ್ನೇ ಹೊರ ಹಾಕುತ್ತವೆ. ಆದ್ದರಿಂದ ಈ ದುರ್ಗುಣಗಳನ್ನು ನಾವು ಮೊದಲು ಹೊರ ಹಾಕಬೇಕು. ಕುರಾನಿನಲ್ಲಿ ಇದನ್ನು- “Drive them out from where you have been driven out” ಎಂದು ಸುಂದರವಾಗಿ ಹೇಳಿದ್ದಾರೆ. ನಿನ್ನನ್ನು ಹೊರಹಾಕಿ, ನಿನ್ನೊಳಗೆ ಕೂತು ನಿನ್ನನ್ನು ಹಾಳು ಮಾಡುತ್ತಿರುವ ಈ ದುರ್ಗುಣಗಳನ್ನು ಮೊದಲು ಹೊರಹಾಕು ಎನ್ನುತ್ತಾರೆ. ಇದನ್ನೇ ವೇದದಲ್ಲಿ ಹೀಗೆ ಹೇಳಿದ್ದಾರೆ: ಯೊ ಅಸ್ಮಾನ್ ದ್ವೇಷ್ಟಿ ಯಾಮ್ ವಯಮ್ ದ್ವಿಷ್ಟಿಃ” ..||ಅಥರ್ವ ೩-೨೭-೨||- ಅಂದರೆ-ಯಾರು ನಮ್ಮನ್ನು ದ್ವೇಶಿಸುತ್ತಾರೋ, ಯಾರನ್ನು ನಾವು ದ್ವೇಷ ಮಾಡುತ್ತೇವೋ ಅಂತಹ ಶತ್ರುವನ್ನು ಓದ್ದೊಡಿಸುಎಂದರ್ಥ. ಇಲ್ಲಿ ಶತ್ರು ಎಂದರೆ ನಮ್ಮ ಅಂತಃಶತ್ರುಗಳಾದ ಈ ದುರ್ಗುಣಗಳು.
ಈ ಶ್ಲೋಕದಲ್ಲಿ ಪಾರ್ಥಎನ್ನುವ ವಿಶೇಷಣವನ್ನು ಬಳಸಲಾಗಿದೆ. ನಾವು ಈ ದುರ್ಗುಣಗಳಿಂದ ದೂರ ಸರಿದು, ಜ್ಞಾನ ಮಾರ್ಗದಲ್ಲಿ ಸಾಗಿ, ಯಥಾರ್ಥ ಬದುಕನ್ನು ಬದುಕುವ ಪಾರ್ಥರಾಗಬೇಕುಎನ್ನುವ ಸಂದೇಶ ಈ ವಿಶೇಷಣದ ಹಿಂದಿದೆ.
·  ಶ್ಲೋಕ - 05
ದೈವೀ ಸಂಪದ್ ವಿಮೋಕ್ಷಾಯ ನಿಬಂಧಾಯಾSಸುರೀ ಮತಾ ।
ಮಾ ಶುಚಃ ಸಂಪದಂ ದೈವೀಮಭಿಜಾತೋSಸಿ ಪಾಂಡವ
ದೈವೀ ಸಂಪತ್ ವಿಮೋಕ್ಷಾಯ ನಿಬಂಧಾಯ ಆಸುರೀ ಮತಾ ।
ಮಾ ಶುಚಃ ಸಂಪದಮ್ ದೈವೀಮ್ ಅಭಿಜಾತಃ ಅಸಿ ಪಾಂಡವ ಒಳ್ಳೆಯ ನಡತೆ ಬಿಡುಗಡೆಯ ದಾರಿ. ಕೆಡುನಡೆ ತಮಸ್ಸಿನ ಸೆರೆಯ ದಾರಿ. ಪಾಂಡವ, ಕೊರಗಬೇಡ. ನೀನು ಒಳಿತಿನ ದಾರಿಯನ್ನು ಮೈಗೂಡಿಸಿಕೊಂಡವನು.
ಏಕೆ ದೈವೀ ಸಂಪತ್ತನ್ನು ನಾವು ಬೆಳಸಿಕೊಳ್ಳಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತ ಹೇಳುತ್ತಾನೆ: ದೈವೀ ಸಂಪತ್ತು ವಿಮೋಕ್ಷಕ್ಕೆ ಕಾರಣವಾಗುತ್ತದೆ, ಆಸುರೀ ಸ್ವಭಾವ ನಿಬಂಧಕ್ಕೆ ಕಾರಣವಾಗುತ್ತದೆಎಂದು. ಇಲ್ಲಿ ಕೃಷ್ಣ ವಿ-ಮೋಕ್ಷಮತ್ತು ನಿ-ಬಂಧಎಂದು ವಿಶೇಷವಾಗಿ ಹೇಳಿದ್ದಾನೆ. ವಿ-ಮೋಕ್ಷ ಎಂದರೆ ಅವರವರ ಸಾಧನೆಗೆ ತಕ್ಕಂತೆ ವಿವಿಧ ಸ್ಥರದಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ಮೋಕ್ಷ. ನಿ-ಬಂಧಎಂದರೆ ಸಂಸಾರ ಬಂಧವಲ್ಲ. ಇದು ನೀಚ ಬಂಧ. ನಮ್ಮನ್ನು ಕತ್ತಲೆಯ ತಮಸ್ಸಿಗೆ ತಳ್ಳುವ ಬಂಧ.
ಕೃಷ್ಣ ಅರ್ಜುನನನ್ನು ಕುರಿತು ಹೇಳುತ್ತಾನೆ: ನೀನು ದೈವೀ ಸಂಪತ್ತಿನ ಪೂರ್ಣಪ್ರಮಾಣದ ಆವಿಷ್ಕಾರ. ಅದಕ್ಕಾಗಿ ದೈವೀ ಸಂಪತ್ತಿನ ಮನೆಯನ್ನು ಹುಡುಕಿ ಹುಟ್ಟಿದ್ದೀಯ, ನಿನ್ನ ಸ್ವಭಾವ ಮತ್ತು ನೀನು ಹುಟ್ಟಿದ ಮನೆತನದ ಪ್ರಭಾವ ಒಂದಕ್ಕೊಂದು ಪೂರಕ, ಇದಕ್ಕಾಗಿ ಚಿಂತಿಸಬೇಡಎಂದು.
·  ಶ್ಲೋಕ - 06
ದ್ವೌ ಭೂತಸರ್ಗೌ ಲೋಕೇSಸ್ಮಿನ್ ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು ೬॥
ದ್ವೌ ಭೂತಸರ್ಗೌ ಲೋಕೇ ಅಸ್ಮಿನ್ ದೈವಃ ಆಸುರಃ ಏವ ಚ ।
ದೈವಃ ವಿಸ್ತರಶಃ ಪ್ರೋಕ್ತಃ ಆಸುರಮ್ ಪಾರ್ಥ ಮೇ ಶೃಣು ಈ ವಿಶ್ವದಲ್ಲಿ ಎರಡು ಬಗೆಯ ಜೀವಸೃಷ್ಟಿಗಳಿವೆ: ದೈವ[ಒಳ್ನಡೆಯದು] ಮತ್ತು ಆಸುರ [ಕೆಡುನಡೆಯದು]. ಒಳ್ನಡೆಯ ಬಗೆಯನ್ನು ಬಿತ್ತರಿಸಿ ಹೇಳಿದ್ದಾಯಿತು, ಪಾರ್ಥ, ಕೆಡುನಡೆಯ ಬಿತ್ತರವನ್ನು ನನ್ನಿಂದ ಕೇಳು.
ಈ ವಿಶ್ವದಲ್ಲಿ ಮೂಲಭೂತವಾಗಿ ಎರಡು ಬಗೆಯ ಮಾನವರಿದ್ದಾರೆ: ಭಗವಂತನೆಡೆಗೆ ಮುಖ ಮಾಡಿ ಸಾಗುವ ದೈವೀ ನಡೆಯುಳ್ಳವರು ಮತ್ತು ಭಗವಂತನಿಗೆ ಬೆನ್ನು ಹಾಕಿ ಸಾಗುವ ಆಸುರೀ ನಡೆಯವರು. ಈ ಎರಡು ವಿಭಾಗದಲ್ಲಿ ಇಲ್ಲಿಯ ತನಕ ದೈವೀ ಸ್ವಭಾವದ ಬಗ್ಗೆ ವಿಸ್ತಾರವಾಗಿ ನೋಡಿದೆವು. ನಮ್ಮ ಆಂತರಿಕ ಮತ್ತು ಸಾಮಾಜಿಕ ನಡೆಯ ಬಗ್ಗೆ ವಿಸ್ತಾರವಾದ ಚಿತ್ರಣ ಕೊಟ್ಟ ಬಳಿಕ ಕೃಷ್ಣ, ಇಲ್ಲಿ ಆಸುರೀ ಸ್ವಭಾವದವರ ನಡೆ-ನುಡಿಗಳ ಬಗ್ಗೆ ವಿವರಿಸುತ್ತಾನೆ. ಈ ಮೂಲಕ ನಾವು ಯಾವ ರೀತಿ ಇರಬಾರದುಅನ್ನುವುದನ್ನು ಕೃಷ್ಣ ನಮಗೆ ತಿಳಿಸಿ ಹೇಳುತ್ತಾನೆ.
·  ಶ್ಲೋಕ - 07
ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।
ನ ಶೌಚಂ ನಾಪಿಚಾSಚಾರೋ ನ ಸತ್ಯಂ ತೇಷು ವಿದ್ಯತೇ ೭॥
ಪ್ರವೃತ್ತಿಮ್ ಚ ನಿವೃತ್ತಿಮ್ ಚ ಜನಾಃ ನ ವಿದುಃ ಆಸುರಾಃ ।
ನ ಶೌಚಮ್ ನ ಅಪಿ ಚ ಆಚಾರಃ ನ ಸತ್ಯಮ್ ತೇಷು ವಿದ್ಯತೇ ಕೆಡುನಡೆಯ ಮಂದಿ ಯಾವ ದಾರಿ ಹಿಡಿಯಬೇಕು, ಯಾವುದನ್ನು ಬಿಡಬೇಕು ಎಂಬುದನ್ನರಿಯರು. ಮಡಿಯಿಲ್ಲ; ಒಳ್ಳೆಯ ನಡೆಯಿಲ್ಲ; ಅವರಲ್ಲಿ ದಿಟದ ನುಡಿಯಿಲ್ಲ.
ಆಸುರೀ ಸ್ವಭಾವದವರ ಸಾಮಾಜಿಕ ನಡೆ-ನುಡಿಯುನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಆಸುರೀ ಸ್ವಭಾವದವರಿಗೆ ಯಾವುದು ಮಾಡಬೇಕು, ಯಾವುದು ಮಾಡಬಾರದು ಎನ್ನುವ ಎಚ್ಚರವಿರುವುದಿಲ್ಲ. ಇದರಿಂದ ಅವರು ಮಾಡಬಾರದ್ದನ್ನೇ ಮಾಡುತ್ತಿರುತ್ತಾರೆ. ಇವರಿಗೆ ನ್ಯಾಯ ಅನ್ಯಾಯ ಯಾವುದೂ ಮುಖ್ಯವಲ್ಲ. ಹಣ ಸಂಪಾದನೆ ಮತ್ತು ಗಣ್ಯವ್ಯಕ್ತಿ ಸ್ಥಾನ ಗಳಿಸಬೇಕು ಎನ್ನುವುದು ಇವರ ಮೂಲಭೂತ ಬಯಕೆ. ಇದರಿಂದಾಗಿ ಹಣ ಸಂಪಾದನೆಯಲ್ಲಿ ನ್ಯಾಯದ ಮುಖವಿರಬೇಕು ಎನ್ನುವ ಎಚ್ಚರ ಇವರಿಗಿರುವುದಿಲ್ಲ.
ಮೂಲಭೂತವಾಗಿ ಆಸುರೀ ಸ್ವಭಾವದವರಲ್ಲಿ ನೈರ್ಮಲ್ಯವಿರುವುದಿಲ್ಲ. ಒಳ್ಳಯಮಾತು, ಒಳ್ಳೆಯ ಯೋಚನೆ, ಸ್ವಚ್ಛ ಶರೀರ ಇವರಲ್ಲಿರುವುದಿಲ್ಲ. ಇವರು ಬಾಹ್ಯವಾಗಿ ಬಹಳ ಶುದ್ಧರಂತೆ ನಾಟಕವಾಡಿಕೊಂಡು ಬದುಕುತ್ತಿರುತ್ತಾರೆ. ಇವರು ಎಂದೂ ಪ್ರಾಮಾಣಿಕರಾಗಿರುವುದಿಲ್ಲ. ಏನು ಮಾಡಿದರೂ ಅದು ತೋರಿಕೆಗಾಗಿ.
ನಮಗೆ ಕೃಷ್ಣ ಗೀತೆಯಲ್ಲಿ ಹೇಳುವ ಒಂದೊಂದು ಗುಣ ನಡತೆಗೆ ಉದಾಹರಣೆ ಮಹಾಭಾರತದಲ್ಲೇ ಸಿಗುತ್ತದೆ. ಅದಕ್ಕಾಗಿ ಗೀತೆಯನ್ನು ಮಹಾಭಾರತದ ಸಾರ ಎನ್ನುವುದು. ಆಸುರೀ ಸ್ವಭಾವಕ್ಕೆ ಅತ್ಯುತ್ತಮ ಉದಾಹರಣೆ ದುರ್ಯೋಧನ’.
ಈ ಆಸುರೀ ಸ್ವಭಾವದವರು ಹೇಗೆ ಸಮಾಜ ಕಂಟಕರಾಗುತ್ತಾರೆ, ಅವರ ತಿಳುವಳಿಕೆ ಏನು? ಎನ್ನುವುದನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿಸ್ತಾರವಾಗಿ ವಿವರಿಸುತ್ತಾನೆ.
·  ಶ್ಲೋಕ - 08
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ ಕಿಮನ್ಯತ್ ಕಾಮಹೈತುಕಮ್ ೮॥
ಅಸತ್ಯಮ್ ಅಪ್ರತಿಷ್ಠಮ್ ತೇ ಜಗತ್ ಆಹುಃ ಅನೀಶ್ವರಮ್ ।
ಅಪರಸ್ಪರ ಸಂಭೂತಂ ಕಿಮ್ ಅನ್ಯತ್ ಕಾಮಹೈತುಕಮ್ ಅವರು ಈ ವಿಶ್ವ ಸತ್ಯ ಸ್ವರೂಪನಾದ ಭಗವಂತನ ಕೊಡುಗೆಯಲ್ಲ [ಇದೊಂದು ಸುಳ್ಳಿನ ಕಂತೆ] ಎನ್ನುತ್ತಾರೆ. ಇದು ಭಗವಂತನಲ್ಲಿ ನೆಲೆಗೊಂಡದ್ದಲ್ಲ [ಇದಕ್ಕೆ ಇರವೇ ಇಲ್ಲ] ಎನ್ನುತ್ತಾರೆ. ಇದನ್ನು ನಿಯಮಿಸುವ ಸರ್ವಶಕ್ತನೊಬ್ಬನಿಲ್ಲ ಎನ್ನುತ್ತಾರೆ. ಒಂದರಿಂದ ಇನ್ನೊಂದು ಕ್ರಮವಾಗಿ ಹುಟ್ಟಿತು ಎನ್ನುವುದನ್ನೂ ಒಪ್ಪುವುದಿಲ್ಲ. ಮತ್ತೇನು? ಅವರ ದೃಷ್ಟಿಯಲ್ಲಿ ಇದೊಂದು ಬೇರೆಯ ತರ. ಇದೊಂದು ಕಾಮದ ಕೂಸು-ಮಾಯಾಸೃಷ್ಟಿ.
ಅಸುರರಲ್ಲಿ ಎರಡು ವಿಧ. ಜಗತ್ತಿಗೆ ಇನ್ನೊಂದು ಸತ್ಯವಿಲ್ಲ, ಜಗತ್ತಿಗೆ ಇನ್ನೊಂದು ಪ್ರತಿಷ್ಠೆ ಇಲ್ಲ, ಜಗತ್ತಿಗೆ ಇನ್ನೊಬ್ಬ ಈಶ್ವರನಿಲ್ಲ ಎನ್ನುವ ನಾಸ್ತಿಕ ತಿಳುವಳಿಕೆ ಇವರಿಗಿರುತ್ತದೆ. ಜಗತ್ತನ್ನು ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಒಳಪಡಿಸುವ ಶಕ್ತಿ(ಸತ್ಯ) ಇಲ್ಲ ಎಂದು ಇವರು ತಿಳಿದಿರುತ್ತಾರೆ. ಇವರು ಈ ಜಗತ್ತಿಗೆ ಆಧಾರನಾಗಿ ಒಬ್ಬ ದೇವರಿಲ್ಲ, ಆದ್ದರಿಂದ ಈ ಜಗತ್ತನ್ನು ನಿಯಂತ್ರಿಸುವ ಸ್ವಾಮಿ ಇಲ್ಲ, ಎಲ್ಲವೂ ಭ್ರಮೆ ಎಂದು ವಾದ ಮಾಡುತ್ತಾರೆ. ಸೃಷ್ಟಿಚಕ್ರ ಒಂದು ಮೂರ್ಖತನದ ಸಿದ್ಧಾಂತ ಎನ್ನುವುದು ಇವರ ನಂಬಿಕೆ.
ಇನ್ನೊಂದು ವಿಧದ ಅಸುರರು ಈ ಜಗತ್ತಿನಲ್ಲಿ ನಮಗೆ ಏನು ಕಾಣುತ್ತದೋ ಅದು ಕೇವಲ ನಮ್ಮ ಭ್ರಮೆ ಎಂದು ಶೂನ್ಯವಾದ ಮಾಡುವವರು. ಇವರು ಈ ಪ್ರಪಂಚ ನಮ್ಮ ಬಯಕೆಗಳಿಂದ ಬೆಳೆಯುತ್ತಿದೆ ಹೊರತು ಇನ್ನೊಂದು ಶಕ್ತಿಯಿಂದಲ್ಲ ಎಂದು ನಂಬಿರುತ್ತಾರೆ.
·  ಶ್ಲೋಕ - 09
ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋSಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋSಹಿತಾಃ ೯॥
ಏತಾಮ್ ದೃಷ್ಟಿಮ್ ಅವಷ್ಟಭ್ಯ ನಷ್ಟ ಆತ್ಮಾನಃ ಅಲ್ಪಬುದ್ಧಯಃ ।
ಪ್ರಭವಂತಿ ಉಗ್ರಕರ್ಮಾಣಃ ಕ್ಷಯಾಯ ಜಗತಃ ಅಹಿತಾಃ ಇಂಥ ನಿಲುವನ್ನು ನೆಚ್ಚಿಕೊಂಡು ವಿವೇಕ ಕಳೆದುಕೊಂಡ ಅರಿವುಗೇಡಿಗಳು-ಜನಾಂಗದ ಕೇಡಿಗಳು. ಒರಟು ನಡೆಯ ಇಂಥವರು ಜಗದ ನಾಶಕ್ಕೆ ಕಾರಣರಾಗುತ್ತಾರೆ.
ಆಸುರ ಮನೋವೃತ್ತಿ ಬೆಳೆಸಿಕೊಳ್ಳುವ ಜನ ತಮ್ಮ ಬದುಕಿಗೆ ಅನರ್ಥವನ್ನು ತಂದುಕೊಂಡು ತಮ್ಮ ನಾಶಕ್ಕೆ ತಾವೇ ಕಾರಣರಾಗುತ್ತಾರೆ. ಇವರು ತಮ್ಮ ನಂಬಿಕೆಯೇ ತಮ್ಮನ್ನು ನಾಶ ಮಾಡುತ್ತಿದೆ, ತಾವು ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದೇವೆ ಎನ್ನುವ ಎಚ್ಚರವೂ ಇಲ್ಲದೆ ಉಗ್ರಗಾಮಿ(ಉಗ್ರಕರ್ಮಾಣಃ)ಗಳಾಗುತ್ತಾರೆ. ಇದರ ಪರಿಣಾಮ ಇವರು ಲೋಕಶತ್ರುಗಳಾಗಿ, ಲೋಕ ನಾಶಕ್ಕೆ ಕಾರಣರಾಗುತ್ತಾರೆ. ಈ ರೀತಿಯ ಮನೋವೃತ್ತಿ ಇದ್ದು ನಮ್ಮ ನಿಮ್ಮ ನಡುವೆ ಇರುವ ಜನರೇ ಅಸುರರು.
·  ಶ್ಲೋಕ - 10
ಕಾಮಮಾಶ್ರಿತ್ಯ ದುಷ್ಪೂರಂ ಡಂಭಮಾನಮದಾನ್ವಿತಾಃ।
ಮೋಹಾದ್ ಗೃಹೀತ್ವಾSಸದ್ ಗ್ರಾಹಾನ್ ಪ್ರವರ್ತಂತೇSಶುಚಿವ್ರತಾಃ ೧೦॥
ಕಾಮಮ್ ಆಶ್ರಿತ್ಯ ದುಷ್ಪೂರಂ ಡಂಭ ಮಾನ ಮದ ಅನ್ವಿತಾಃ।
ಮೋಹಾತ್ ಗೃಹೀತ್ವಾ ಅಸತ್ ಗ್ರಾಹಾನ್ ಪ್ರವರ್ತಂತೇ ಅಶುಚಿ ವ್ರತಾಃ ತಣಿಯದ ಬಯಕೆಯ ಬೆನ್ನುಹತ್ತಿ ಬೂಟಾಟಿಕೆ, ಬಿಂಕ ಮತ್ತು ಸೊಕ್ಕಿಗೆ ತುತ್ತಾದವರು. ಕೊಳಕು ನಡೆಯ ಈ ಮಂದಿ ತಿಳಿಗೇಡಿತನದಿಂದ ತಪ್ಪು ಗ್ರಹಿಕೆಗಳನ್ನೆ ಕಟ್ಟಿಕೊಂಡು ಬಾಳುತ್ತಾರೆ.
ಆಸುರೀ ಸ್ವಭಾವದವರ ಬಯಕೆಗೆ ಕೊನೆ ಇರುವುದಿಲ್ಲ. ಎಷ್ಟು ಬಂದರೂ ಇನ್ನಷ್ಟರಾಸೆ. ಉದಾಹರಣೆಗೆ ಕೆಲಸವೇ ಇಲ್ಲದಾಗ ಒಂದು ಕೆಲಸದ ಆಸೆ, ಕೆಲಸ ಸಿಕ್ಕಿದಾಗ ಹೆಚ್ಚು ಸಂಬಳದ ಆಸೆ, ಸಂಬಳ ಬಂದಾಗ ಆ ಸಂಬಳ ತನ್ನ ಪಕ್ಕದ ಮನೆಯವನಿಗಿಂತ ಕಡಿಮೆ-ಅದಕ್ಕಾಗಿ ಇನ್ನೂ ಹೆಚ್ಚಿನ ಸಂಬಳದ ಆಸೆ, ದೊಡ್ಡ ಹುದ್ದೆಯ ಆಸೆ, ಹೀಗೆ ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲ. ಈ ದಾಹವನ್ನು ಪೂರೈಸಲು ಸಾಧ್ಯವೇ ಇಲ್ಲ. ಪುರಾಣದಲ್ಲಿ ಹೇಳುವಂತೆ ಹೇಗೆ ಪಾತಾಳವನ್ನು ಮಣ್ಣುಹಾಕಿ ಮುಚ್ಚಲು ಸಾಧ್ಯವಿಲ್ಲವೋ ಹಾಗೆ ಮನುಷ್ಯನ ಬಯಕೆಯನ್ನು ಪೂರೈಸಲು ಸಾಧ್ಯವಿಲ್ಲ. ನಮಗೆ ಎಷ್ಟೇ ಹಣ ಸಿಕ್ಕಿದರೂ ಕೂಡ ನಾವು ಅದರ ಬಲಬದಿಯಲ್ಲಿ ಒಂದು ಸೊನ್ನೆ ಸೇರಿಸಿಕೊಂಡು ಕಡಿಮೆಯಾಯಿತು ಎಂದು ಕೊರಗುತ್ತೇವೆ ಮತ್ತು ಸಂತೋಷವನ್ನು ಮರೆಯುತ್ತೇವೆ. ಕಠೋಪನಿಷತ್ತಿನಲ್ಲಿ- ನಿನಗೆ ಎಷ್ಟು ಬೇಕೋ ಅಷ್ಟು ಧನವನ್ನು ಕೊಡುತ್ತೇನೆಎಂದು ಯಮ ಹೇಳಿದಾಗ, ನಚಿಕೇತ ಹೇಳುತ್ತಾನೆ: ನ ವಿತ್ತೇನ ತರ್ಪಣೀಯೋ ಮನುಷ್ಯಃಎಂದು. ಅಂದರೆಮನುಷ್ಯನ ಧನದ ಬಯಕೆಯನ್ನು ಪೂರೈಸಲು ಯಾರಿಂದಲೂ ಸಾಧ್ಯವಿಲ್ಲಎಂದು. ಸಾಕು ಎನ್ನುವುದು ದೈವೀ ಸ್ವಭಾವ, ಬೇಕು ಎನ್ನುವುದು ಆಸುರೀ ಸ್ವಭಾವ. ಹೀಗೆ ಆಸುರೀ ಸ್ವಭಾವದವರು ಬಯಕೆಗಳ ಬೆನ್ನುಹತ್ತಿ, ಆ ತೀರದ ಬಯಕೆಯನ್ನು ತೀರಿಸಿಕೊಳ್ಳುವುದಕ್ಕೊಸ್ಕರ ಮಾಡಬಾರದ್ದನ್ನು ಮಾಡುತ್ತಾರೆ. ಇವರ ಜೀವನವೇ ಡಂಭಾಚಾರ. ಬಿಗುಮಾನ, ದುರಹಂಕಾರ, ನಾಟಕೀಯವಾದ ಬದುಕಿನಿಂದ ಇನ್ನೊಬ್ಬರಿಗೆ ಮೋಸ ಮಾಡುವುದು. ಹೀಗೆ ನಡೆ ನುಡಿಯಲ್ಲಿ ಸ್ವಚ್ಚತೆ ಇಲ್ಲದ ಕೊಳಕು ಬದುಕು ಇವರದ್ದಾಗಿರುತ್ತದೆ.
·  ಶ್ಲೋಕ - 11
ಚಿಂತಾಮಪರಿಮೇಯಾಂ ಚ ಪ್ರಳಯಾಂತಾಮುಪಾಶ್ರಿತಾಃ ।
ಕಾಮೋಪಭೋಗಪರಮಾ ಏತಾವದಿತಿ ನಿಶ್ಚಿತಾಃ ೧೧॥
ಚಿಂತಾಮ್ ಅಪರಿಮೇಯಾಂ ಚ ಪ್ರಳಯಾಂತಾಮ್ ಉಪಾಶ್ರಿತಾಃ ।
ಕಾಮ ಉಪಭೋಗ ಪರಮಾಃ ಏತಾವತ್ ಇತಿ ನಿಶ್ಚಿತಾಃ -- ಸಾವಿನ ಜೊತೆಗೆಯೆ ಅಳಿಯುವ, ಅಳೆಯಲಾಗದ ಚಿಂತೆಗೊಳಗಾದವರು. ಕಾಮದ ತೀಟೆಯೇ ಜೀವನದ ಸರ್ವಸ್ವವಾದವರು. ಜೀವನವೆಂದರೆ ಇಷ್ಟೇ ಎಂದು ನಂಬಿದವರು.
ಇವರ ಕೊರಗಿಗೆ ಕೊನೆಯೇ ಇಲ್ಲ. ಇವರು ತಮ್ಮ ಇಡೀ ಜೀವನವನ್ನು-ಇಲ್ಲದ್ದನ್ನು ಪಡೆಯುವ ಕೊರಗಿನಲ್ಲಿ ಕಳೆಯುತ್ತಾರೆ. ಇವರು ಚಿಂತೆಯ ದಾಸರಾಗುತ್ತಾರೆ. ಇವರ ಚಿಂತೆ ಪ್ರಳಯಾಂತ- ಸಾಯುವ ತನಕವೂ ಅವರ ಬೆನ್ನುಬಿಡದೆ ಕಾಡುತ್ತಿರುತ್ತದೆ. ಇವರು ಭೋಗಜೀವನದ ದಾಸರಾಗಿ, ಅದನ್ನು ಬಿಟ್ಟು ಇರಲಾರದ ಪರಾಧೀನತೆಯಲ್ಲಿ, ಜೀವನವೆಂದರೆ ಇಷ್ಟೇ ಎಂದು ತಿಳಿದು ಬದುಕುತ್ತಿರುತ್ತಾರೆ.
·  ಶ್ಲೋಕ - 12
ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ।
ಈಹನ್ತೇ ಕಾಮಭೋಗಾರ್ಥಮನ್ಯಾಯೇನಾರ್ಥಸಂಚಯಾನ್ ೧೨॥
ಆಶಾಪಾಶ ಶತೈಃ ಬದ್ಧಾಃ ಕಾಮಕ್ರೋಧಪರಾಯಣಾಃ।
ಈಹಂತೇ ಕಾಮಭೋಗಾರ್ಥ ಅನ್ಯಾಯೇನ ಅರ್ಥಸಂಚಯಾನ್ -- ನೂರಾರು ಆಸೆಗಳ ಬಲೆಯಲ್ಲಿ ಸಿಕ್ಕಿಬಿದ್ದವರು. ಹುಚ್ಚು ಹಂಬಲ-ಸಿಡುಕುಗಳಿಗೆ ತಮ್ಮನ್ನು ಮಾರಿಕೊಂಡವರು. ತೀಟೆ ತೀರಿಸಲೆಂದು ತಪ್ಪು ದಾರಿಯಿಂದ ರಾಶಿ ರಾಶಿ ಹೊನ್ನು ಬಾಚಬಯಸುವವರು.
ಇವರು ಭೋಗದ ಆಸೆಗಾಗಿ ತಮ್ಮನ್ನು ತಾವು ಆಸೆಗಳ ಪಾಶದಲ್ಲಿ ಸಿಲುಕಿ ಹಾಕಿಸಿಕೊಂಡು, ದಿಗ್ಭಂಧನದಿಂದ ಬದುಕುತ್ತಿರುತ್ತಾರೆ. ಕಾಮ ಕ್ರೋಧಗಳಿಗೆ ತಮ್ಮನ್ನು ಮಾರಿಕೊಂಡು, ಕಾಮಕ್ರೋಧ ಪರಾಯಣರಾಗಿ ಬದುಕುತ್ತಾರೆ. ಇದಕ್ಕೆ ಉತ್ತಮ ದೃಷ್ಟಾಂತ ಪೌಂಡ್ರಕ ವಾಸುದೇವ. ಆತನಿಗೆ ತಾನೇ ದೇವರಾಗಬೇಕು ಎನ್ನುವ ಕಾಮ’. ಈ ಕಾಮದಿಂದಾಗಿ ಅದು ಸರಿಯಲ್ಲ ಎಂದು ತಿಳಿಹೇಳುವ ತತ್ವಜ್ಞಾನಿಗಳ ಮೇಲೆ ಕೋಪ.
ಇವರು ತಮ್ಮ ಸುಖ-ಭೋಗವನ್ನು ತೀರಿಸಿಕೊಳ್ಳಲು ಅನ್ಯಾಯ ಮಾರ್ಗದಲ್ಲಿ ದುಡ್ಡು ಸಂಗ್ರಹ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಶಾಸ್ತ್ರದಲ್ಲಿ ಬರೆದಿರುವ ವಿಷಯಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು, ತಮ್ಮ ಇಷ್ಟಸಿದ್ಧಿ ಸಾಧನೆಯಲ್ಲಿ ತೊಡಗುತ್ತಾರೆ.
·  ಶ್ಲೋಕ - 13, 14 & 15
ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ೧೩॥

ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ ।
ಈಶ್ವರೋSಹಮಹಂ ಭೋಗೀ ಸಿದ್ಧೋSಹಂ ಬಲವಾನ್ ಸುಖೀ ೧೪॥

ಆಢ್ಯೋSಭಿಜನವಾನಸ್ಮಿ ಕೋSನ್ಯೋSಸ್ತಿ ಸದೃಶೋಮಯಾ
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ ೧೫॥
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತಿ ಅಜ್ಞಾನ ವಿಮೋಹಿತಾಃ ಅವರು ತಿಳಿಗೇಡಿತನದಿಂದ ಹೀಗೆ ಬಡಬಡಿಸುತ್ತಾರೆ: ಇದನ್ನೀಗ ನಾನು ಪಡೆದೆ; ಈ ಬಯಕೆಯನ್ನು ಮುಂದೆ ಈಡೇರಿಸಿಕೊಳ್ಳುತ್ತೇನೆ; ಇದಂತು ಇದೆ; ಮತ್ತೆ ಈ ಹೊನ್ನೂ ನನ್ನದಾಗಲಿದೆ; ಈ ಹಗೆಯನ್ನು ಕೊಂದೆ; ಉಳಿದವರನ್ನೂ ಮುಗಿಸಲಿದ್ದೇನೆ; ನಾನು ಸರ್ವಶಕ್ತ; ನಾನೆ ಭೋಗಿಸುವವನು; ನಾನೆ ಬಯಸಿದ್ದನ್ನೆಲ್ಲ ಪಡೆದವನು; ಶಕ್ತಿಶಾಲಿ ಮತ್ತು ಸುಖಿ; ಸಿರಿವಂತನಿದ್ದೇನೆ; ಕುಲವಂತನಿದ್ದೇನೆ; ಯಾರಿದ್ದಾರೆ ನನಗೆ ಸಾಟಿ? ನಾನು ಯಾಗ ಮಾಡಿಸುತ್ತೇನೆ. ದಾನ ನೀಡುತ್ತೇನೆ. ಖುಶಿಪಡುತ್ತೇನೆ.
ಆಸುರೀ ಸ್ವಭಾವದವರ ಯೋಚನೆಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ. ಇವರಿಗೆ ಸದಾ ಧನ ಸಂಗ್ರಹ ಮಾಡಬೇಕು ಎನ್ನುವ ಯೋಚನೆ. ಸಿಕ್ಕಿದಾಗ ಇಂದು ಇಷ್ಟು ಸಿಕ್ಕಿತು, ನಾಳೆ ಇಷ್ಟು ಗಳಿಸುತ್ತೇನೆಎನ್ನುವ ಚಪಲ. ದುಡ್ಡು ಸಂಗ್ರಹ ಮಾಡುವುದು ಇವರಿಗೊಂದು ಚಟ. ತನಗೆ ಆಗದವನನ್ನು ಮುಗಿಸಿದೆ, ಇನ್ನು ಆಗದವರನ್ನು ಮುಗಿಸುವೆ ಎನ್ನುವ ಯೋಚನೆ. ನಾನೇ ಸರ್ವ ಸಮರ್ಥ, ನನ್ನಿಂದಾಗದ್ದು ಈ ಜಗತ್ತಿನಲ್ಲೇನಿದೆ? ನಾನು ಸುಖ ಪಡಲು ಹುಟ್ಟಿದವನು-ದುಃಖಪಡಲಿಕ್ಕಲ್ಲ; ನನ್ನ ಸುಖಕ್ಕಾಗಿ ಏನು ಬೇಕಾದರೂ ನಾನು ಮಾಡುತ್ತೇನೆ; ಅದಕ್ಕೆ ಅಡ್ಡ ಬರುವವರನ್ನು ಮುಗಿಸುತ್ತೇನೆ; ನಾನೇ ಸಿದ್ಧ ಪುರುಷ; ನನ್ನ ಸಿದ್ಧಿಗೆ ನಾನೇ ಹೊಣೆಗಾರ; ನಾನು ಸುಖಪಡಲು ಹುಟ್ಟಿದವ ಅದಕ್ಕೆ ಬೇಕಾದ ಜನ-ಧನ-ಅಧಿಕಾರ ನನ್ನಲ್ಲಿದೆ; ನನ್ನಿಚ್ಛೆಯಂತೆ ನಾನು ನಡೆದುಕೊಳ್ಳುತ್ತೇನೆ; ದುಡ್ಡಿನಿಂದ ಏನನ್ನಾದರೂ ಖರೀದಿಸಬಲ್ಲೆ; ನನಗೆ ಸರಿಸಾಟಿ ಈ ಜಗತ್ತಿನಲ್ಲಿ ಯಾರಿದ್ದಾರೆ? - ಇತ್ಯಾದಿ ಇವರ ಯೋಚನೆಗಳು. ತೋರಿಕೆಗಾಗಿ ಯಜ್ಞ ಯಾಗಾದಿಗಳನ್ನು ಮಾಡುವುದು, ದಾನ ನೀಡುವುದು ಇವರ ನಿರಂತರ ಚಟುವಟಿಕೆ. ಇದು ಅಜ್ಞಾನದ ನಾಟ್ಯ. ಇದು ಅವರ ಸರ್ವನಾಶದ ಹೆಬ್ಬಾಗಿಲು ಎನ್ನುವ ಪರಿವೆ ಅವರಿಗಿರುವುದಿಲ್ಲ. ಅದೇ ದೊಡ್ಡಸ್ತಿಕೆ, ಅದೇ ಸುಭಗತನ ಎನ್ನುವ ಭ್ರಮೆಯಲ್ಲಿ ಇವರು ಬದುಕುತ್ತಿರುತ್ತಾರೆ.
·  ಶ್ಲೋಕ - 16
ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇSಶುಚೌ ೧೬॥
ಅನೇಕ ಚಿತ್ತ ವಿಭ್ರಾಂತಾಃ ಮೋಹಜಾಲ ಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತನ್ತಿ ನರಕೇ ಅಶುಚೌ ಹಲವು ಬಗೆಯ ಯೋಚನೆಗಳಿಂದ ಗೊಂದಲಗೊಂಡವರು; ಮೋಹದ ಬಲೆಯಲ್ಲಿ ಸಿಕ್ಕಿಕೊಂಡವರು; ಕಾಮದ ತೀಟೆಗಳಲ್ಲಿ ಮೈಮರೆತವರು. ಅವರು ಕೊಳಕು ನರಕದಲ್ಲಿ ಬಿದ್ದು ನರಳುತ್ತಾರೆ.
ಇವರು ತಮ್ಮ ಜೀವನದಲ್ಲಿ ಹಿಂದೆ ಆಗಿಹೋದ ಘಟನೆಗಳನ್ನು ಸದಾ ನೆನಪಿಸಿಕೊಂಡು ಗೊಂದಲಗೊಳ್ಳುತ್ತಾರೆ. ಇವರು ಎಂದೂ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವುದಿಲ್ಲ. ಸಾತ್ವಿಕರು ಪಶ್ಚಾತ್ತಾಪ ಪಟ್ಟು ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ, ಆದರೆ ಇವರು ಸದಾ ಭಯಂಕರವಾದ ಅಜ್ಞಾನ-ಮಮಕಾರವೆಂಬ ಮೋಹದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಮತ್ತಷ್ಟು ಗೊಂದಲಕ್ಕೊಳಗಾಗುತ್ತಾರೆ-ತಿದ್ದಿಕೊಳ್ಳುವುದಿಲ್ಲ. ತಾವು ಬಯಸಿದ ವಸ್ತುವನ್ನು ಭೋಗಿಸುವುದು ಮತ್ತು ಅದರಲ್ಲಿ ತೃಪ್ತಿಪಡದೆ ಮತ್ತಷ್ಟು ಸಂಗ್ರಹಮಾಡಿ ಜೋಪಾನ ಮಾಡುವುದರಲ್ಲಿ ಪ್ರವೃತ್ತರಾಗುತ್ತಾರೆ. ಇವರು ಮುಂದೆ ಕೊಳಕು ನರಕದಲ್ಲಿ ಬಿದ್ದು ಒದ್ದಾಡಬೇಕಾಗುತ್ತದೆ.
·  ಶ್ಲೋಕ - 17
ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ।
ಯಜಂತೇ ನಾಮಯಜ್ಞೈಸ್ತೇ ಡಂಭೇನಾವಿಧಿಪೂರ್ವಕಮ್ ೧೭॥
ಆತ್ಮಸಂಭಾವಿತಾಃ ಸ್ತಬ್ಧಾಃ ಧನ ಮಾನಮ್ ಮದ ಅನ್ವಿತಾಃ ।
ಯಜಂತೇ ನಾಮಯಜ್ಞೈಃ ತೇ ಡಂಭೇನ ಅವಿಧಿ ಪೂರ್ವಕಮ್ ತಮ್ಮ ಬಗೆಗೆಯೆ ಕೊಚ್ಚಿಕೊಳ್ಳುವವರು. ಸಿರಿ ಸಮ್ಮಾನದ ಸೊಕ್ಕಿನಿಂದ ಬೀಗಿದವರು. ಅಂಥವರೂ ಯಜ್ಞಗಳನ್ನಾಚರಿಸುತ್ತಾರೆ: ಬೂಟಾಟಿಕೆಯಿಂದ, ಶಾಸ್ತ್ರದ ಕಟ್ಟಳೆಯ ಕಟ್ಟು ಮುರಿದು.
ತಮ್ಮ ಬಗ್ಗೆ ತಮಗೇ ಹೆಗ್ಗಳಿಕೆ ಇವರಿಗೆ. ಅವಿದ್ಯಾಯಾಂ ಅಂತರೇ ವರ್ತಮಾನಾಃ ಸ್ವಯಂ ಧೀರಾ ಪಂಡಿತಂ ಅನ್ಯಮಾನಾಎನ್ನುವಂತೆ ಉಳಿದವರಿಗೆ ತಮ್ಮ ಮೇಲೆ ಗೌರವ ಇದೆಯೊ ಇಲ್ಲವೋ ಗೊತ್ತಿಲ್ಲ, ಆದರೆ ತನ್ನ ಬಗ್ಗೆ ತಾನೇ ಮಹತ್ವ ಜ್ಞಾನ ಬೆಳಸಿಕೊಂಡು ಅದರಿಂದ ಬಿಗುಮಾನದಿಂದ ಬೀಗುತ್ತಿರುತ್ತಾರೆ. ಇವರ ಈ ಬಿಗುಮಾನಕ್ಕೆ ಕಾರಣ ಜ್ಞಾನವಲ್ಲ, ಬದಲಿಗೆ ಕೈಯಲ್ಲಿರುವ ದುಡ್ಡಿನ ಮದ ಕಾರಣ; ಆ ದುಡ್ಡಿಗೋಸ್ಕರ ಜನ ಮಾಡುವ ಸಮ್ಮಾನ ಕಾರಣ. ಇವರು ಬೂಟಾಟಿಕೆಗಾಗಿ, ದೊಡ್ಡಸ್ತಿಕೆಯ ಪ್ರದರ್ಶನಕ್ಕಾಗಿ-ಯಜ್ಞ ಯಾಗಾದಿಗಳನ್ನು ಮಾಡಿಸುತ್ತಾರೆ. ಅಲ್ಲಿ ಶಾಸ್ತ್ರದ ಎಚ್ಚರವಿರುವುದಿಲ್ಲ; ಭಗವಂತ ಪ್ರೀತ್ಯರ್ಥನಾಗಲಿ ಎನ್ನುವ ಉದ್ದೇಶವಿಲ್ಲದ, ಅಂತರ್ಯಾಮಿ ಭಗವಂತನನ್ನು ಮರೆತು ಮಾಡುವ ಪೂಜೆ ಅದಾಗಿರುತ್ತದೆ.
·  ಶ್ಲೋಕ - 18
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು ಪ್ರದ್ವಿಷಂತೋSಭ್ಯಸೂಯಕಾಃ ೧೮॥
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮ್ ಆತ್ಮ ಪರದೇಹೇಷು ಪ್ರದ್ವಿಷಂತಃ ಅಭ್ಯಸೂಯಕಾಃ ಹಮ್ಮು, ಬಲತ್ಕಾರ, ಸೊಕ್ಕು, ಬಯಕೆ, ಸಿಡುಕುಗಳ ನೆಲೆಯಾದವರು. ತನ್ನ ಮತ್ತು ಪರರ ದೇಹದೊಳಗಿರುವ ನನ್ನನ್ನು ನಂಬದೆ ನಿರಾಕರಿಸುವವರು. ಇನ್ನೊಬ್ಬರ ಏಳಿಗೆಗೆ ಕಿಚ್ಚುಪಡುವವರು.
ಇವರ ಮೂಲ ಆಸ್ತಿ- ಅಹಂಕಾರ, ದರ್ಪ, ಕಾಮ ಮತ್ತು ಕ್ರೋಧ. ನನ್ನನ್ನು ಮೀರಿಸುವವರ್ಯಾರಿದ್ದಾರೆ? ನಾನೇ ದೊಡ್ಡ ಮನುಷ್ಯ ಎನ್ನುವ ಅಹಂಕಾರ, ಅದಕ್ಕೆ ಬೆಂಬಲ ಧನ ಮತ್ತು ಅಧಿಕಾರ ಬಲ, ಇದರಿಂದ ಇನ್ನೊಬ್ಬರನ್ನು ತಿರಸ್ಕಾರದಿಂದ ಕಾಣುವ ದರ್ಪ. ತೀರದ ಬಯಕೆಗಳು, ಅವು ಈಡೇರಲಿಲ್ಲ ಎನ್ನುವ ಕೋಪ-ಇದೇ ಅವರ ಅಸ್ತಿತ್ವ. ಕೃಷ್ಣ ಹೇಳುತ್ತಾನೆ:ಎಲ್ಲರೊಳಗಿರುವ ನನ್ನನ್ನುನಂಬದೆ ನಿರಾಕರಿಸುತ್ತಾರೆಎಂದು. ಇದು ಯಾವುದೋ ಕಾರಣ ನಿಮಿತ್ತ ತಾತ್ಕಾಲಿಕವಾಗಿ ಭಗವಂತನನ್ನು ನಿರಾಕರಿಸುವುದಲ್ಲ, ಬದಲಿಗೆ ಸ್ವರೂಪತಃ ಭಗವಂತನನ್ನು ನಿರಾಕರಿಸುವುದು. ಇಂತವರು ಇನ್ನೊಬ್ಬರ ಜ್ಞಾನ ಮತ್ತು ಧನ ಸಂಪತ್ತನ್ನು ನೋಡಿ ಸದಾ ಅಸೂಯೆ ಪಡುತ್ತಿರುತ್ತಾರೆ.
ಹೀಗೆ ಆಸುರೀ ಜನರ ಸ್ವಭಾವ, ಅವರ ಯೋಚನೆಗಳು, ಅವರ ನಡವಳಿಕೆಗಳನ್ನು ಕೂಲಂಕುಶವಾಗಿ ಕೃಷ್ಣ ವರ್ಣಿಸಿದ. ಮುಂದೆ ಕೃಷ್ಣ ಇಂಥಹ ಆಸುರೀ ಜನರನ್ನು ಭಗವಂತ ಏನು ಮಾಡುತ್ತಾನೆ? ಅವರ ಗತಿ ಏನಾಗುತ್ತದೆ ಎನ್ನುವುದನ್ನು ವರ್ಣಿಸುತ್ತಾನೆ.
·  ಶ್ಲೋಕ - 19
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು ೧೯॥
ತಾನ್ ಅಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರ ಅಧಮಾನ್
ಕ್ಷಿಪಾಮಿ ಅಜಸ್ರಮ್ ಅಶುಭಾನ್ ಆಸುರೀಷು ಏವ ಯೋನಿಷು ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ ಕೊಳಕಾದ ಅಂಥ ನೀಚ ಮನುಜರನ್ನು ನಾನು ನಿರಂತರವಾಗಿ ಬಾಳ ಬವಣೆಗಳಲ್ಲಿ, ಕೆಡುನಡೆಯ ಬಸಿರುಗಳಲ್ಲಿ ಕೆಡುವುತ್ತೇನೆ.
ಭಗವಂತ ಜೀವನನ್ನು ಸೃಷ್ಟಿಸುವುದಿಲ್ಲ; ಮೂಲವಾಗಿ ಜೀವ ಮತ್ತು ಜೀವ ಸ್ವಭಾವ ಅನಾಧಿನಿತ್ಯ ಎನ್ನುವುದನ್ನು ನಾವು ಹಿಂದೆ ತಿಳಿದಿದ್ದೇವೆ. ಆಸುರೀ ಸ್ವಭಾವ ಎನ್ನುವುದು ಮೂಲತಃ ಜೀವ ಸ್ವಭಾವ. ಹೇಗೆ ಹಾಗಲಕಾಯಿ ಕಹಿಯೋ ಹಾಗೆ ಈ ಆಸುರೀ ಜನರ ಜೀವಸ್ವಭಾವ ತಾಮಸ. ಅದನ್ನು ಭಗವಂತ ಬದಲಿಸುವುದಿಲ್ಲ. ಬದಲಿಗೆ ಆ ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣವಾಗುತ್ತದೆ. ಭಗವಂತನನ್ನು ದ್ವೇಷಿಸುವ, ಮನುಕುಲವನ್ನು ದ್ವೇಷಿಸುವ, ಪ್ರಪಂಚವನ್ನೇ ದ್ವೇಷಿಸುವ ಈ ಕ್ರೂರಿಗಳನ್ನು ಭಗವಂತ ನಿರಂತರ ಸಂಸಾರ ಸಾಗರದಲ್ಲಿ ಹಾಕುತ್ತಾನೆ. ಇದರಿಂದ ಅವರು ಮರಳಿಮರಳಿ ಹೀನ ಮನೆತನದಲ್ಲಿ ಹುಟ್ಟಿಬರುವಂತಾಗುತ್ತದೆ.
·  ಶ್ಲೋಕ - 20
ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿಜನ್ಮನಿ
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ೨೦॥
ಆಸುರೀಂ ಯೋನಿಮ್ ಆಪನ್ನಾಃ ಮೂಢಾಃ ಜನ್ಮನಿಜನ್ಮನಿ
ಮಾಮ್ ಅಪ್ರಾಪ್ಯ ಏವ ಕೌಂತೇಯ ತತಃ ಯಾಂತಿ ಅಧಮಾಂ ಗತಿಮ್ಕೌಂತೇಯ, ಕೆಡುನಡೆಯ ಬಸಿರಿನಲ್ಲಿ ಮರಳಿಮರಳಿ ಹುಟ್ಟಿಬಂದ ಆ ತಿಳಿಗೇಡಿಗಳು ಕೊನೆಗೂ ನನ್ನನ್ನು ಸೇರದೆಯೆ, ಅಲ್ಲಿಂದ ಮತ್ತೆ ಅಧೋಗತಿಯನ್ನೆ ಪಡೆಯುತ್ತಾರೆ.
ಈ ರೀತಿ ಹೀನ ಮನೆತನದಲ್ಲಿ ಮರಳಿಮರಳಿ ಹುಟ್ಟಿ ಬರುವ ಈ ದುಷ್ಟರು ಪ್ರತೀ ಜನ್ಮದಲ್ಲೂ ಮೂಢರಾಗುತ್ತಾ ಹೋಗುತ್ತಾರೆ. ಪ್ರತೀ ಜನ್ಮದಲ್ಲೂ ಇವರ ಭಗವಂತನ ಮೇಲಿನ ದ್ವೇಷ ಪರಾಕಾಷ್ಠೆಗೆ ಹೋಗುತ್ತದೆ. ಅಹಂಕಾರ, ಮದ, ದರ್ಪ, ಕಾಮ ಕ್ರೋಧ ಮಿತಿಮೀರಿ ಇವರು ತಾವಾಗಿಯೇ ಅಧಃಪಾತವನ್ನು ಹೊಂದುತ್ತಾರೆ. ಇವರೆಂದೂ ಭಗವಂತನನ್ನು ಸೇರುವುದಿಲ್ಲ. ಇವರು ತಮ್ಮ ಜೀವಸ್ವಭಾವದ ಗತಿಗನುಗುಣವಾಗಿ ತಾಮಸಲೋಕವನ್ನು ಸೇರುತ್ತಾರೆ.
ಆಸುರೀ ಜನರ ಜೀವ ಸ್ವಭಾವ, ಅವರ ನಡೆ-ನುಡಿ-ಯೋಚನೆ-ಕೃತಿಯ ಬಗ್ಗೆ ಸುಂದರವಾಗಿ ಕೃಷ್ಣ ವಿವರಿಸಿದ. ಇದರಿಂದ ನಮಗೆ ಲೋಕದಲ್ಲಿ ಲೋಕಕಂಟಕರು ಏಕಿದ್ದಾರೆ? ಅವರು ಮುಂದೆ ಯಾವ ಗತಿಯನ್ನು ಪಡೆಯುತ್ತಾರೆ ಎನ್ನುವ ವಿಚಾರ ತಿಳಿಯುತ್ತದೆ. ನಮಗರಿವಿಲ್ಲದೆ ನಮ್ಮನ್ನು ಆಸುರೀ ಗುಣ ಕಾಡಿದಾಗ ನಾವು ಜ್ಞಾನದ ಅರಿವಿನಿಂದ ಭಗವಂತನಲ್ಲಿ ಮೊರೆ ಹೊಕ್ಕು, ಅದರಿಂದ ಬಿಡುಗಡೆಗೆ ಇಚ್ಚಿಸಲು ಈ ಅಧ್ಯಾಯ ಸಹಕರಿಸುತ್ತದೆ. ಜೀವದ ಸ್ವಭಾವ ಎಂದೂ ಬದಲಾಗುವುದಿಲ್ಲ. ಜೀವಕ್ಕೆ ಸ್ವತಂತ್ರ ಕರ್ತೃತ್ವ ಇಲ್ಲ. ಆದರೆ ಜೀವಕ್ಕೆ ಇಚ್ಛಾಪೂರ್ವಕ ಕೃತಿ ಇದೆ. ಇದಕ್ಕನುಗುಣವಾಗಿ ನಿರಂತರ ದೈವೀ ಸ್ವಭಾವವನ್ನು ಬೆಳಸಿಕೊಂಡು-ಭಗವಂತನನ್ನು ಸೇರುವ ಪ್ರಯತ್ನವನ್ನು ನಾವು ಮಾಡಬೇಕು. ಅದಕ್ಕೆ ಫಲ ಸಿಗುವುದು ಬಿಡುವುದು ಭಗವಂತನ ಇಚ್ಛೆ-ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬಾರದು. ಒಳ್ಳೆಯದನ್ನು ಇಚ್ಚಿಸು, ಒಳ್ಳೆಯವನಾಗಿ ಇದ್ದದ್ದರಲ್ಲಿ ತೃಪ್ತಿಪಟ್ಟು ಬದುಕು. ನಿನ್ನ ರಕ್ಷಣೆಯ ಭಾರ ಭಗವಂತನದು, ಆತ ನಿನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ.
·  ಶ್ಲೋಕ - 21
ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ ।
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ ತ್ರಯಂ ತ್ಯಜೇತ್ ೨೧॥
ತ್ರಿವಿಧಂ ನರಕಸ್ಯ ಇದಂ ದ್ವಾರಂ ನಾಶನಮ್ ಆತ್ಮನಃ ।
ಕಾಮಃ ಕ್ರೋಧಃ ತಥಾ ಲೋಭಃ ತಸ್ಮಾತ್ ಏತತ್ ತ್ರಯಮ್ ತ್ಯಜೇತ್ -- ಇದು ಮೂರು ಆತ್ಮ ನಾಶದ ದಾರಿ, ನರಕದ ಬಾಗಿಲು: ಕಾಮ, ಕ್ರೋಧ, ಮತ್ತು ಲೋಭ. ಅದ್ದರಿಂದ ಈ ಮೂರನ್ನು ದೂರವಿಡಬೇಕು.
ಈ ಶ್ಲೋಖ ಬಹಳ ಮುಖ್ಯವಾದ ಸಂದೇಶವನ್ನು ಕೊಡುವ ಶ್ಲೋಕ. ವಿದುರನೀತಿಯಲ್ಲಿ ಕೂಡ ಈ ಶ್ಲೋಕ ಬಂದಿದೆ. ಸಾಮಾಜಿಕ ಮತ್ತು ಆಧ್ಯಾತ್ಮಿಕ ನಿಟ್ಟಿನಲ್ಲಿ ಭಾರತ ಇದನ್ನು ಉಲ್ಲೇಖಮಾಡುತ್ತದೆ. ಇಲ್ಲಿ ಕೃಷ್ಣ ಆತ್ಮ ನಾಶಕ್ಕೆ ಕಾರಣವಾಗುವ ಮೂರು ಅಂಶಗಳನ್ನು ವಿವರಿಸಿದ್ದಾನೆ. ಅವುಗಳೆಂದರೆ ಕಾಮ-ಕ್ರೋಧ-ಲೋಭ. ಇವು "ಮಾನವನ ನರಕದ ಬಾಗಿಲು" ಎನ್ನುತ್ತಾನೆ ಕೃಷ್ಣ. ಕ್ರೋಧ ಎನ್ನುವುದು ಕಾಮದ ಮರಿ. ನಮಗೆ ಕ್ರೋಧ ಬರುತ್ತಿದೆ ಎಂದರೆ ನಮ್ಮ ಒಳಗೆ ಬಹಳ ಆಸೆಗಳು ಹುದುಗಿವೆ ಎಂದರ್ಥ. ಅದು ನೆರವೇರದೇ ಇದ್ದಾಗ ನಮಗೆ ಕೋಪ. ಮಹಾಭಾರತದ ಅನುಶಾಸನ ಪರ್ವದಲ್ಲಿ ಒಂದು ಕಥೆ ಇದೆ. ಓರ್ವ ಬ್ರಾಹ್ಮಣ ಸ್ತ್ರೀ; ಆಕೆಯ ಹೆಸರು ಗೌತಮಿ. ಆಕೆಗೆ ಒಬ್ಬನೇ ಮಗ. ಒಂದು ದಿನ ಹಾವು ಕಚ್ಚಿ ಆತ ಸಾಯುತ್ತಾನೆ. ಇದನ್ನು ಒಬ್ಬ ಹಾವಾಡಿಗ ಕಂಡು, ಕೂಡಲೇ ಆ ಹಾವನ್ನು ಹಿಡಿದು ಆಕೆಯ ಎದುರು ತಂದು: ಹೇಳು, ನಿನ್ನ ಮಗನನ್ನು ಕಚ್ಚಿ ಕೊಂದ ಈ ಹಾವನ್ನು ಯಾವ ರೀತಿ ಕೊಲ್ಲಲು ನೀನು ಇಷ್ಟ ಪಡುತ್ತೀಯಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ ನ ಬ್ರಾಹ್ಮಣಾನಂ ಕೋಪೋSಸತಿ ಕೃತಃ ಕೋಪಾಚ ಯಾತನಾ....” | ೧೩-೦೧-೨೦| . “ನಾವು ಬ್ರಾಹ್ಮಣರು, ಬ್ರಾಹ್ಮಣನಿಗೆ ಕೋಪ ಬರುವುದಿಲ್ಲ, ಬಂದರೆ ಆತ ಬ್ರಾಹ್ಮಣನೇ ಅಲ್ಲಎಂದು. ಹಾವನ್ನು ಕೊಲ್ಲುವುದರಿಂದ, ಸತ್ತ ಮಗ ಮರಳಿ ಬದುಕಲಾರ. ನನ್ನ ಮಗ ಆತನ ಕರ್ಮಕ್ಕನುಗುಣವಾಗಿ ಸತ್ತ. ಅದಕ್ಕಾಗಿ ಕೋಪ ದುಃಖ ತರವಲ್ಲ, ಬಿಟ್ಟುಬಿಡು ಆ ಹಾವನ್ನುಎನ್ನುತ್ತಾಳೆ ಆಕೆ. ಯಾರಿಗೆ ತಿಳುವಳಿಕೆ ಇದೆ, ಬಯಕೆಗಳಿಲ್ಲಅಂಥವರಿಗೆ ಕೋಪ ಬರುವುದಿಲ್ಲ. ಅವನು ನಿಜವಾದ ಬ್ರಾಹ್ಮಣ ಎನಿಸುತ್ತಾನೆ. ಕಾಮ-ಕ್ರೋಧ-ಲೋಭ ಎನ್ನುವುದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಮೂರು ನರಕದ ಬಾಗಿಲುಗಳು, ಅವುಗಳಿಂದ ದೂರವಿರುಎಂದು ಕೃಷ್ಣ ಇಲ್ಲಿ ನಮ್ಮನ್ನು ಎಚ್ಚರಿಸಿದ್ದಾನೆ. ಇವು ನಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಮೂಲ ಶತ್ರುಗಳು. ಇತರ ಎಲ್ಲಾ ದುರ್ಗುಣಗಳೂ ಇವುಗಳ ಮರಿಗಳು. ಮನುಷ್ಯ ಈ ಮೂರು ದುರ್ಗುಣಗಳಿಂದ ತನ್ನ ನರಕವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಈ ಮೂರನ್ನು ಬಿಟ್ಟರೆ ಇಹದಲ್ಲೂ ಸುಖ-ಪರದಲ್ಲೂ ಸುಖ.
·  ಶ್ಲೋಕ - 22
ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ ।
ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಮ್ ೨೨॥
ಏತೈಃ ವಿಮುಕ್ತಃ ಕೌಂತೇಯ ತಮಃ ದ್ವಾರೈಃ ತ್ರಿಬಿಃ ನರಃ ।
ಆಚರತಿ ಆತ್ಮನಃ ಶ್ರೇಯಃ ತತಃ ಯಾತಿ ಪರಾಂ ಗತಿಮ್ -- ಕೌಂತೇಯ, ನರಕದ ಈ ಮೂರು ಬಾಗಿಲುಗಳಿಂದ ಪಾರಾದ ನರನು ತನಗೆ ಒಳಿತಾದ್ದನ್ನು ಮಾಡಬಲ್ಲವನಾಗುತ್ತಾನೆ. ಅದರಿಂದ ಉತ್ತಮಗತಿಯನ್ನೂ ಪಡೆಯುತ್ತಾನೆ.
ನರಕದ ಈ ಮೂರು ಬಾಗಿಲುಗಳಿಂದ ಪಾರಾದ ಮಾನವ ಪುಣ್ಯಾತ್ಮ. ಆತನಿಗೆ ಮೋಕ್ಷದ ದಾರಿ ಸುಗಮವಾಗುತ್ತದೆ. ಆತ ಉತ್ತಮ ಗತಿಯನ್ನು ಪಡೆಯುತ್ತಾನೆ. ಇಲ್ಲಿ ಕೃಷ್ಣ ವಿಮುಕ್ತಎನ್ನುವ ಪದವನ್ನು ಬಳಸಿದ್ದಾನೆ. ಇದರ ಅರ್ಥ ಎಲ್ಲಾ ಕಾಮನೆಗಳನ್ನೂ ಬಿಡುವುದಲ್ಲ, ನಮ್ಮ ಬದುಕಿಗೆ ಭಾದಕವಾಗಿರುವ ರಾಜಸ ಮತ್ತು ತಾಮಸ ಕಾಮನೆಗಳನ್ನು ಬಿಡುವುದು ಎಂದರ್ಥ. ಉದಾಹರಣೆಗೆ ಭಗವಂತನನ್ನು ಸೇರಬೇಕು ಎನ್ನುವುದೂ ಒಂದು ಕಾಮನೆ. ಇದು ನರಕದ ಬಾಗಿಲಲ್ಲ. ಇದನ್ನು ಬಿಡಬೇಕಾಗಿಲ್ಲ. ಕಾಮ ಇಲ್ಲದೆ ಜೀವನವಿಲ್ಲ. ಆದ್ದರಿಂದ ಇಲ್ಲಿ ನಾವು ಬಿಡಬೇಕಾಗಿರುವುದು ಕೇವಲ ರಾಜಸ ಮತ್ತು ತಾಮಸ ಅಂಶವನ್ನು. ಇದನ್ನು ಸೂಚಿಸುವುದಕ್ಕಾಗಿ ಇಲ್ಲಿ ಮುಕ್ತಎಂದು ಹೇಳದೆ ವಿ-ಮುಕ್ತಎಂದು ಹೇಳಲಾಗಿದೆ.
ಇಲ್ಲಿ 'ಕೌಂತೇಯ' ಎನ್ನುವ ವಿಶೇಷಣ ಬಳಕೆಯಾಗಿದೆ. ನಾವು ಜ್ಞಾನ ಮಾರ್ಗದಲ್ಲಿ ಸಾಗಬೇಕಾದರೆ ಕುಸ್ಸಿತವಾದ ಈ ಕಾಮ-ಕ್ರೋಧ-ಲೋಭವನ್ನು ತಿರಸ್ಕಾರ ಮಾಡುವ ಕೌಂತೇಯರಾಗಬೇಕುಎನ್ನುವ ಸಂದೇಶ ಈ ವಿಶೇಷಣದ ಹಿಂದಿರುವ ಧ್ವನಿ.
ನಮ್ಮಲ್ಲಿ ಕೆಲವರಿಗೆ ಶಾಸ್ತ್ರದ ವಿಧಿ ವಿಧಾನ ಏಕೆ ಬೇಕು, ಆತ್ಮ ಸಾಕ್ಷಿಯಿಂದ ಬದುಕಿದರೆ ಸಾಲದೇ? ಎನ್ನುವ ಪ್ರಶ್ನೆ ಇದೆ. ಕೃಷ್ಣ ಮುಂದಿನ ಶ್ಲೋಕದಲ್ಲಿ ಶಾಸ್ತ್ರದ ವಿಧಿ-ವಿಧಾನ ಪಾಲನೆಯ ಮಹತ್ವವನ್ನು ವಿವರಿಸುತ್ತಾನೆ.
·  ಶ್ಲೋಕ - 23
ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ೨೩॥
ಯಃ ಶಾಸ್ತ್ರವಿಧಿಮ್ ಉತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸಃ ಸಿದ್ಧಿಮ್ ಅವಾಪ್ನೋತಿ ನ ಸುಖಂ ನ ಪರಾಂ ಗತಿಮ್ ಶಾಸ್ತ್ರದ ಕಟ್ಟಳೆಯನ್ನು ಮೀರಿ ಇಷ್ಟಬಂದಂತೆ ನಡೆವವನು ಸಿದ್ಧಿಯನ್ನು ಪಡೆಯಲಾರ. ಅವನಿಗೆ ಸುಖವಿಲ್ಲ; ಪರಮಗತಿಯೂ ಇಲ್ಲ.
ನಾವು ಶಾಸ್ತ್ರದ ಕಟ್ಟಳೆಯನ್ನು ಬಿಟ್ಟು ನಮ್ಮಷ್ಟಕ್ಕೆ ನಾವು ಪ್ರಾಮಾಣಿಕವಾಗಿ ಬದುಕಲು ಸಾಧ್ಯವಿಲ್ಲ. ಏಕೆಂದರೆ ನಮಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನವಿರುವುದಿಲ್ಲ. ನಮಗೆ ಇಷ್ಟವಾದುದು ಸರಿ ಎಂದು ನಾವು ತಿಳಿದುಕೊಳ್ಳುತ್ತೇವೆ. ನಮಗೆ ಯಾವುದು ತಿಳುವಳಿಕೆ ಕೊಡುತ್ತವೋ ಅವು ಶಾಸ್ತ್ರಗಳು. ಜಗತ್ತಿನ ಅನೇಕ ಸಂಗತಿಗಳನ್ನು ನಮ್ಮ ಅನುಷ್ಠಾನದಲ್ಲಿ ಅಳವಡಿಸಿಕೊಳ್ಳಲು ಕೇವಲ ಆತ್ಮಶಕ್ತಿ ಮತ್ತು ಪ್ರಾಮಾಣಿಕತೆ ಸಾಲದು. ಇದು ಸರಿ ಇದು ತಪ್ಪು ಎಂದು ತೀರ್ಮಾನ ಮಾಡಲು ಶಾಸ್ತ್ರಗಳು ಬೇಕೇ ಬೇಕು. ನಾವು ನಮ್ಮ ಅನುಭವದಿಂದ ಇಡೀ ಪ್ರಪಂಚವನ್ನು ಗ್ರಹಿಸಲು ಸಾಧ್ಯವಿಲ್ಲ. ನಮ್ಮ ಬುದ್ಧಿ ಸೀಮಿತ, ನಮ್ಮ ತರ್ಕ ಸೀಮಿತ, ನಮ್ಮ ಆತ್ಮಸಾಕ್ಷಿ ಸೀಮಿತ, ನಮ್ಮ ಪ್ರಾಮಾಣಿಕತೆ ಸೀಮಿತ. ಹಾಗಾಗಿ ನಾವು ಸೀಮಿತವಾದ ಅನುಭವದಿಂದ ಇಡೀ ವಿಶ್ವದ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ. ಈ ಕಾರಣದಿಂದ ಭಗವಂತ; ಆತ ಜಗತ್ತಿಗೆ ಕೊಟ್ಟ ವೇದಾದಿ ಶಾಸ್ತ್ರಗಳು; ಆ ಶಾಸ್ತ್ರವನ್ನು ಅರ್ಥಮಾಡಿಕೊಂಡು ನಮಗೆ ತಿಳಿ ಹೇಳಿದ ದೇವರನ್ನು ಬಲ್ಲ ಜ್ಞಾನಿಗಳು-ಇವರಿಂದ ನಾವು ನಿಜವನ್ನು ಅರಿಯಬೇಕು. ಇಲ್ಲದಿದ್ದರೆ ಸಿದ್ಧಿ ಸಾಧ್ಯವಿಲ್ಲ.
·  ಶ್ಲೋಕ - 24
ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ ೨೪॥
ತಸ್ಮಾತ್ ಶಾಸ್ತ್ರಮ್ ಪ್ರಮಾಣಂ ತೇ ಕಾರ್ಯ ಅಕಾರ್ಯ ವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರ ವಿಧಾನ ಉಕ್ತಮ್ ಕರ್ಮ ಕರ್ತುಮ್ ಇಹ ಅರ್ಹಸಿ ಅದರಿಂದ ಬೇಕು-ಬೇಡಗಳ ತೀರ್ಮಾನಕ್ಕೆ ನಿನಗೆ ಶಾಸ್ತ್ರವೆ ಪ್ರಮಾಣ. ಶಾಸ್ತ್ರದ ಕಟ್ಟಳೆಯನ್ನರಿತು ಇಲ್ಲಿ ಕರ್ಮ ಮಾಡಲೆಳಸು.
ಎಲ್ಲ ಬೇಕು ಬೇಡಗಳಿಗೆ ಶಾಸ್ತ್ರವೇ ಪ್ರಮಾಣ. ಆದ್ದರಿಂದ ನಾವು ಶಾಸ್ತ್ರದಲ್ಲಿ ಹೇಳುವುದನ್ನು ಮೊದಲು ನಂಬಬೇಕು. ಆಗ ಅದನ್ನು ತಿಳಿಯಲು ಸಾಧ್ಯವಾಗುತ್ತದೆ. ಶಾಸ್ತ್ರದಲ್ಲಿ ಹೀಗೆ ಮಾಡು, ಹೀಗೆ ಮಾಡಬೇಡ ಎಂದು ಹೇಳಿರುವವರು- ಅದರಿಂದಾಗುವ ಪರಿಣಾಮವನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳು. ಆದ್ದರಿಂದ ಕರ್ಮದ ಕಟ್ಟಳೆಯನ್ನರಿತು ಕರ್ಮ ಮಾಡು ಎನ್ನುತ್ತಾನೆ ಕೃಷ್ಣ.
ಇಲ್ಲಿ ಶಾಸ್ತ್ರ ಎಂದರೆ ನಾಲ್ಕು ವೇದಗಳು ಮತ್ತು ಅದಕ್ಕೆ ಪೂರಕವಾದ ಪಂಚರಾತ್ರ, ಮಹಾಭಾರತ, ಮೂಲರಾಮಾಯಣ, ಮತ್ತು ಹದಿನೆಂಟು ಪುರಾಣಗಳು. ಇವು ಬಿಟ್ಟು ಇತರ ಯಾವುದನ್ನೂ ಪೂರ್ಣವಾಗಿ ಪ್ರಮಾಣವಾಗಿರಿಸಲು ಸಾಧ್ಯವಿಲ್ಲ.
ಇತಿ ಷೋಡಶೋಧ್ಯಾಯಃ
ಹದಿನಾರನೆಯ ಅಧ್ಯಾಯ ಮುಗಿಯಿತು

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.