ಭಗವದ್ಗೀತೆ ಅಧ್ಯಾಯ-11 (ಶ್ಲೋಕ 21 ರಿಂದ 40)



ಭಗವದ್ಗೀತೆ  ಅಧ್ಯಾಯ-11 (ಶ್ಲೋಕ 21 ರಿಂದ 40)
·  ಶ್ಲೋಕ - 21
ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಳಾಭಿಃ ॥೨೧॥
ಅಮೀ ಹಿ ತ್ವಾಮ್ ಸುರಸಂಘಾ ವಿಶಂತಿ ಕೇಚಿತ್ ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತಿ ಇತಿ ಉಕ್ತ್ವಾ ಮಹರ್ಷಿ ಸಿದ್ಧಸಂಘಾಃ ಸ್ತುವಂತಿ ತ್ವಾಮ್ ಸ್ತುತಿಭಿಃ ಪುಷ್ಕಳಾಭಿಃ ನಿನ್ನೊಳಹೋಗುತ್ತಿದ್ದಾರೆ ಈ ದೇವತೆಗಳು ಗುಂಪುಗೂಡಿ. ಬೆಚ್ಚಿ ಕೈಮುಗಿದು ಬೇಡುತ್ತಿದ್ದಾರೆ. ಮತ್ತೆ ಕೆಲವರು ಒಳಿತಾಗಲಿಎಂದು ಹಾರೈಸುತ್ತಾ ಹತ್ತು ಹಲವು ಹಾಡುಗಬ್ಬಗಳಿಂದ ನಿನ್ನನ್ನು ಹೊಗಳುತ್ತಿದ್ದಾರೆ ಹಿರಿಯ ಋಷಿಗಳು, ಗುಂಪು ಗುಂಪಾಗಿ.
ಕೆಲವರು ನಿನ್ನೊಳಗೆ ಹೋಗುತ್ತಿದ್ದಾರೆ, ಇನ್ನು ಕೆಲವರು ಹೊರಬರುತ್ತಿದ್ದಾರೆ. ಕೆಲವರು ಕೈಮುಗಿದು ನಿನ್ನ ಸ್ತೋತ್ರ ಮಾಡುತ್ತಿದ್ದಾರೆ. ಜ್ಞಾನಿಗಳು ನಿನ್ನ ಈ ಅದ್ಭುತ ರೂಪವನ್ನು ಕಂಡು ಜಗತ್ತಿಗೆ ಮಂಗಳವಾಗಲಿಎಂದು ಹರಸುತ್ತಿದ್ದಾರೆ. ಋಷಿ ಮುನಿಗಳು ನಾನಾ ಸ್ತೋತ್ರಗಳಿಂದ ನಿನ್ನನ್ನು ಸ್ತುತಿಸುತ್ತಿದ್ದಾರೆ.
·  ಶ್ಲೋಕ - 22
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇSಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರಸಿದ್ಧಸಂಘಾ ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ೨೨॥
ರುದ್ರ ಆದಿತ್ಯಾಃ ವಸವಃ ಯೇ ಚ ಸಾಧ್ಯಾಃ ವಿಶ್ವೇ ಅಶ್ವಿನೌ ಮರುತಃ ಚ ಉಷ್ಮಪಾಃ ಚ ।
ಗಂಧರ್ವ ಯಕ್ಷ ಅಸುರ ಸಿದ್ಧ ಸಂಘಾಃ ವೀಕ್ಷಂತೇ ತ್ವಾಮ್ ವಿಸ್ಮಿತಾಃ ಚ ಏವ ಸರ್ವೇರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು, ಸಿದ್ಧರು,-ಇವರೆಲ್ಲ ಗುಂಪುಗೂಡಿ ನಿಬ್ಬೆರಗಾಗಿ ನೋಡುತ್ತಿದ್ದಾರೆ ನಿನ್ನನ್ನು.
ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ದೇವಗಣ ಪ್ರವಿಷ್ಟರಾದ ಯಕ್ಷರು, ಅಸುರರು, ಸಿದ್ಧರು,-ಇವರೆಲ್ಲರೂ ನಿಬ್ಬೆರಗಾಗಿ ನಿನ್ನನ್ನು ನೋಡುತ್ತಿದ್ದಾರೆ ಎನ್ನುತ್ತಾನೆ ಅರ್ಜುನ.
·  ಶ್ಲೋಕ - 23
ರೂಪಂ ಮಹತ್ ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಳಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ॥೨೩॥
ರೂಪಮ್ ಮಹತ್ ತೇ ಬಹು ವಕ್ತ್ರ ನೇತ್ರಮ್ ಮಹಾಬಾಹೋ ಬಹುಬಾಹು ಊರು ಪಾದಮ್ ।
ಬಹು ಉದರಮ್ ಬಹುದಂಷ್ಟ್ರಾಕರಾಳಮ್ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಃ ತಥಾ ಅಹಮ್ ಮಹಾಬಾಹೂ, ಹಬ್ಬಿ ನಿಂತ ನಿನ್ನ ರೂಪಕ್ಕೆ ಹಲವು ಬಾಯಿ ಕಣ್ಣುಗಳು. ಹಲವು ತೊಡೆ ಕಾಲುಗಳು, ಹಲವು ಹೊಟ್ಟೆಗಳು. ಹಲವು ದಾಡೆಗಳಿಂದ ಅಬ್ಬರಗೊಂಡ ಈ ರೂಪವನ್ನು ಕಂಡು ಲೋಕದ ಮಂದಿ ಬೆಚ್ಚಿಬಿದ್ದಿದ್ದಾರೆ; ನಾನು ಕೂಡ.
ಭಗವಂತನ ಅಂಗಾಂಗಗಳಲ್ಲಿ ಹೇಗೆ ಸೃಷ್ಟಿ ಕ್ರಿಯೆ ನಡೆಯುತ್ತಿದೆ ಎನ್ನುವುದನ್ನು ಅರ್ಜುನ ಕಾಣುತ್ತಿದ್ದಾನೆ. ಪುರುಷ ಸೂಕ್ತದಲ್ಲಿ ಹೇಳುವಂತೆ :
ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗ್ಂ ಶೂದ್ರೋ ಅಜಾಯತ ||೧೩||
ಅಂದರೆ ಭಗವಂತನ ಮುಖದಿಂದ ಜ್ಞಾನಿಗಳ(Wisdom) ಸೃಷ್ಟಿ, ಬಾಹುವಿನಿಂದ ಕ್ಷತ್ರಿಯರ(Protection) ಸೃಷ್ಟಿ, ಸೊಂಟ ಅಥವಾ ತೊಡೆಯಿಂದ ವೈಶ್ಯರ(Production) ಸೃಷ್ಟಿ ಮತ್ತು ಪವಿತ್ರವಾದ ಪಾದದಿಂದ ಶೂದ್ರರ(Service) ಸೃಷ್ಟಿ. ಈ ನಾಲ್ಕು ವರ್ಗ ಈ ಸಮಾಜದ ನಾಲ್ಕು ಆಧಾರ ಸ್ಥಂಭಗಳು. ಅರ್ಜುನನಿಗೆ ಈ ನಾಲ್ಕು ವರ್ಗದ ಸೃಷ್ಟಿ ಭಗವಂತನ ದೇಹದಲ್ಲಾಗುತ್ತಿರುವುದು ಕಾಣಿಸುತ್ತಿದೆ. ಅದರ ಜೊತೆಗೆ ಆತ ಅಲ್ಲಿ ಎಲ್ಲರನ್ನು ಕಬಳಿಸುವ (ಸಂಹಾರ ಕ್ರಿಯೆ) ಹಲವು ದಾಡೆಗಳಿಂದ ತುಂಬಿದ ರೂಪವನ್ನು ಕಾಣುತ್ತಾನೆ. ಭಗವಂತನ ಈ ರೂಪವನ್ನು ಕಂಡು ಎಲ್ಲರೂ ವಿಸ್ಮಯರಾಗಿದ್ದಾರೆ. ನಾನೂ ಕೂಡ ಗಾಬರಿಗೊಳಗಾಗಿದ್ದೇನೆಎನ್ನುತ್ತಾನೆ ಅರ್ಜುನ.
·  ಶ್ಲೋಕ - 24
ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ೨೪॥
ನಭಃಸ್ಪೃಶಮ್ ದೀಪ್ತಮ್ ಅನೇಕ ವರ್ಣಮ್ ವ್ಯಾತ್ತ ಆನನಮ್ ದೀಪ್ತ ವಿಶಾಲ ನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತ ಅಂತಃ ಆತ್ಮಾ ಧೃತಿಮ್ ನ ವಿಂದಾಮಿ ಶಮಮ್ ವಿಷ್ಣೋ ಮುಗಿಲ ಮುತ್ತಿಟ್ಟ, ಹೊಳೆವ ಬಗೆಬಗೆಯ ಬಣ್ಣಗಳು. ತೆರೆದ ಬಾಯಿಗಳು. ಹೊಳೆವಗಲ ಕಣ್ಣುಗಳು. ಇಂಥ ನಿನ್ನನ್ನು ಕಂಡು ಬಗೆ ಬೆಚ್ಚಿಬಿದ್ದಿದೆ. ಓ ಒಳಗು ಹೊರಗೂ ತುಂಬಿ ನಿಂತವನೆ, ನಾನು ಸೈರಿಸಲಾರೆ. ನಾನು ನೆಮ್ಮದಿಗಾಣೆ.
ಭೂಮಿ ಆಕಾಶದಲ್ಲಿ ವ್ಯಾಪಿಸಿರುವ ನಿನ್ನ ಅನಂತ ರೂಪ-ಕತ್ತಲೆಯ ಸ್ಪರ್ಶವೇ ಇಲ್ಲದ ಬೆಳಕಿನ ಪುಂಜ. ನಿನ್ನೊಳಗೆ ಅನೇಕರು ಅನೇಕ ಶ್ರುತಿ ವಚನಗಳಿಂದ, ವೇದಗಳಿಂದ ನಿನ್ನನ್ನು ವರ್ಣಿಸುತ್ತಿದ್ದಾರೆ. ನಿನ್ನ ಅಪ್ರಾಕೃತವಾದ ಬಣ್ಣವನ್ನು ನಾನು ಕಾಣುತ್ತಿದ್ದೇನೆ. ನಿನ್ನ ಅನುಗ್ರಹ ಬೀರುವ, ಕಾರುಣ್ಯದ ಅರಳುಗಣ್ಣುಗಳನ್ನು ನಾನು ಕಂಡೆ. ಎಲ್ಲವನ್ನು ನೋಡಿ ಮನಸ್ಸು ಗೊಂದಲವಾಗುತ್ತಿದೆ. ಓ ವಿಷ್ಣೋ, ಈ ನಿನ್ನ ವಿಚಿತ್ರ ರೂಪವನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲಎನ್ನುತ್ತಾನೆ ಅರ್ಜುನ. [ವಿಷ್ಣು ಅನ್ನುವ ಪದದ ವಿಶಿಷ್ಟವಾದ ಅರ್ಥವನ್ನು ನಾವು ಹಿಂದಿನ ಅಧ್ಯಾಯದಲ್ಲಿ ವಿಶ್ಲೇಸಿದ್ದೇವೆ]
·  ಶ್ಲೋಕ - 25
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ॥೨೫॥
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವಾ ಏವ ಕಾಲ ಅನಲ ಸನ್ನಿಭಾನಿ ।
ದಿಶಃ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗತ್ ನಿವಾಸ ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೊರೆಗಳನ್ನು ಕಂಡದ್ದೇ ದಿಕ್ಕು ತಿಳಿಯದಾಗಿದೆ. ನೆಮ್ಮದಿ ಇಲ್ಲವಾಗಿದೆ. ಓ ದೇವೇಶ, ಜಗದ ಆಸರೆಯೆ ದಯೆದೋರು.
ಎಲ್ಲಕ್ಕಿಂತ ಮಿಗಿಲಾಗಿ ನರಸಿಂಹನಂತೆ ಕೋರೆ ದಾಡೆಗಳಿಂದ ಬಾಯ್ದೆರೆದು ನಿಂತಿರುವ ನಿನ್ನ ಮುಖವನ್ನು ಕಂಡು ದಿಕ್ಕು ತೋಚದಾಗಿದೆ. ಪ್ರಳಯ ಕಾಲದ ಬೆಂಕಿಯಂತೆ ವ್ಯಾಪಿಸಿರುವ ನಿನ್ನನ್ನು ಕಂಡು ಗಾಬರಿಯಿಂದ ಆನಂದ ಮಾಯವಾಗುತ್ತಿದೆ. ನೆಮ್ಮದಿ ಕಳೆದುಕೊಳ್ಳುತ್ತಿದ್ದೇನೆ. ಓ ಸರ್ವ ದೇವತೆಗಳ ಒಡೆಯನೆ, ಜಗತ್ತಿಗೆ ಆಸರೆಯಾಗಿರುವ ನೀನು ನನ್ನ ಮೇಲೆ ದಯೆ ತೋರು.
·  ಶ್ಲೋಕ - 26 & 27
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾSಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ ೨೬॥

ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಳಾನಿ ಭಯಾನಕಾನಿ
ಕೇಚಿದ್ ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥೨೭॥
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹ ಏವ ಅವನಿಪಾಲ ಸಂಘೈಃ ।
ಭೀಷ್ಮಃ ದ್ರೋಣಃ ಸೂತಪುತ್ರಃ ತಥಾ ಅಸೌ ಸಹ ಅಸ್ಮದೀಯೈಃ ಅಪಿ ಯೋಧ ಮುಖ್ಯೈಃ ||
ವಕ್ತ್ರಾಣಿ ತೇ ತ್ವರಮಾಣಾಃ ವಿಶಂತಿ ದಂಷ್ಟ್ರಾಕರಾಳಾನಿ ಭಯಾನಕಾನಿ
ಕೇಚಿತ್ ವಿಲಗ್ನಾಃ ದಶನ ಅಂತರೇಷು ಸಂದೃಶ್ಯಂತೇ ಚೂರ್ಣಿತೈಃ ಉತ್ತಮಾಂಗೈಃ ಭೀಷ್ಮ ದ್ರೋಣ ಮತ್ತು ಈ ಕರ್ಣ, ಜೊತೆಗೆ ನಮ್ಮ ಕಾದಾಳುಗಳ ಮುಖಂಡರು ಕೂಡ. ಕಾಣುತ್ತಿದ್ದೇನೆ ಕಟವಾಯಿಯೆಡೆಯಲ್ಲಿ ಸಿಕ್ಕು ನುಗ್ಗು ನುರಿಯಾದ ಕೆಲವರನ್ನು; ನುಜ್ಜುಗುಜ್ಜಾದ ಅವರ ತಲೆಬುರುಡೆಗಳನ್ನು.
ಅರ್ಜುನ ಭಗವಂತನಲ್ಲಿ ಭವಿಷತ್ಕಾಲದಲ್ಲಿ ನಡೆಯುವ ಘಟನೆಗಳನ್ನು ಕಾಣುತ್ತಿದ್ದಾನೆ. ಪ್ರಪಂಚದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತ. ಇದನ್ನು ಅರ್ಜುನ ತನ್ನ ದಿವ್ಯ ದೃಷ್ಟಿಯಲ್ಲಿ ಕಾಣುತ್ತಿದ್ದಾನೆ ಅಷ್ಟೆ. ಭೀಷ್ಮ ದ್ರೋಣ ಮತ್ತು ಈ ಕರ್ಣ ಎಲ್ಲರೂ ಆ ನಿನ್ನ ಬಾಯಿಯೊಳಗೆ ಹೋಗುತ್ತಿದ್ದಾರೆ. ಜೊತೆಗೆ ನಮ್ಮ ಸೈನ್ಯದ ಮುಖಂಡರೂ ಕೂಡ. ಅಲ್ಲಿ ಕೆಲವರು ಭಯಂಕರವಾದ ಆ ನಿನ್ನ ಕೋರೆ ದಾಡೆಗಳಿಗೆ ಸಿಕ್ಕು ನುಜ್ಜುಗುಜ್ಜಾಗುತ್ತಿರುವುದನ್ನು ಕಾಣುತ್ತಿದ್ದೇನೆ.
·  ಶ್ಲೋಕ - 28
ಯಥಾ ನದೀನಾಂ ಬಹವೋSಮ್ಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥೨೮॥
ಯಥಾ ನದೀನಾಮ್ ಬಹವಃ ಅಂಬುವೇಗಾಃ ಸಮುದ್ರಮ್ ಏವ ಅಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾಃ ವಿಶಂತಿ ವಕ್ತ್ರಾಣಿ ಅಭಿವಿಜ್ವಲಂತಿ –-ನರಲೋಕದ ಈ ವೀರರೆಲ್ಲ ಕೋರೈಸುವ ನಿನ್ನ ಮೋರೆಗಳೊಳಗೆ ಸೇರುತ್ತಿದ್ದಾರೆ. ನದಿಗಳ ಹತ್ತು ಹಲವು ನೀರ ಸೆಲೆಗಳು ಕಡಲ ಕಡೆಗೆ ಹರಿಯುವಂತೆ.
ಪುಣ್ಯ ಜೀವಿಗಳು ಭಗವಂತನ ಬಾಯಿಯನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎನ್ನುವುದನ್ನು ಅರ್ಜುನ ವರ್ಣಿಸುತ್ತಿದ್ದಾನೆ. ಹೇಗೆ ಎಲ್ಲ ನದಿ ನೀರು ಸಮುದ್ರವನ್ನು ಸೇರುತ್ತದೋ ಹಾಗೆ ಈ ನರಲೋಕದ ವೀರರು ನಿನ್ನನ್ನು ಸೇರುತ್ತಿದ್ದಾರೆ ಎನ್ನುತ್ತಾನೆ ಅರ್ಜುನ. ಇದೊಂದು ಮಾಂಗಲಿಕ ದೃಷ್ಟಾಂತ. ಇಲ್ಲಿ ಭಯಾನಕ ನೋಟವಿಲ್ಲ.
·  ಶ್ಲೋಕ - 29
ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ೨೯॥
ಯಥಾ ಪ್ರದೀಪ್ತಮ್ ಜ್ವಲನಮ್ ಪತಂಗಾಃ ವಿಶಂತಿ ನಾಶಾಯ ಸಮೃದ್ಧ ವೇಗಾಃ ।
ತಥಾ ಏವ ನಾಶಾಯ ವಿಶಂತಿ ಲೋಕಾಃ ತವ ಅಪಿ ವಕ್ತ್ರಾಣಿ ಸಮೃದ್ಧ ವೇಗಾಃ --ಲೋಕದ ಮಂದಿಯೆಲ್ಲ ಗಡಬಡಿಸಿ ಓಡುತ್ತ ಬಂದು ಸಾಯಲೆಂದು ನಿನ್ನ ಬಾಯ್ಗಳಲ್ಲಿ ಬೀಳುತ್ತಿವೆ- ಪತಂಗಗಳು ಹಾರಿ ಬಂದು ಬೆಂಕಿಯಲ್ಲಿ ಬಿದ್ದು ಸಾಯುವಂತೆ.
ಪಾಪಿಗಳು ಹೇಗೆ ಭಗವಂತನ ಬಾಯಿಯನ್ನು ಪ್ರವೇಶಿಸುತ್ತಿದ್ದಾರೆ ಎಂದು ವರ್ಣಿಸುತ್ತ ಅರ್ಜುನ ಹೇಳುತ್ತಾನೆ: ಉರಿಯುವ ಬೆಂಕಿಗೆ ಪತಂಗಗಳು ಬಿದ್ದು ನಾಶವಾದಂತೆ ಗಡಬಡಿಸಿ ಬಂದು ಬಿದ್ದು ನಾಶವಾಗುತ್ತಿದ್ದಾರೆಎಂದು.
·  ಶ್ಲೋಕ - 30
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥೩೦॥
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈಃ ಜ್ವಲದ್ಭಿಃ ।
ತೇಜೋಭಿಃ ಆಪೂರ್ಯ ಜಗತ್ ಸಮಗ್ರಮ್ ಭಾಸಃ ತವ ಉಗ್ರಾಃ ಪ್ರತಪಂತಿ ವಿಷ್ಣೋ ಎಲ್ಲೆಲ್ಲು ತುಂಬಿರುವವನೆ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲ ಲೋಕಗಳನ್ನು ಎಲ್ಲೆಡೆಯು ನುಂಗಿ ನೊಣೆಯುತ್ತಿರುವೆ. ಕೋರೈಸುವ ನಿನ್ನ ಮೈಯ ಹೊಳಪು ಇಡಿಯ ವಿಶ್ವವನ್ನು ಝಳದಿಂದ ತುಂಬಿ ಸುಡುತ್ತಿವೆ.
ಎಲ್ಲವನ್ನು ನಿನ್ನ ನಾಲಿಗೆಯಿಂದ ಸವರಿ ನುಂಗುತ್ತಿದ್ದೀಯ, ಎಲ್ಲವೂ ನಿನ್ನ ಹೊಟ್ಟೆಯನ್ನು ಸೇರುತ್ತಿವೆ. ಈ ಜಗತ್ತೇ ನಿನಗೊಂದು ತುತ್ತಾಗುತ್ತಿದೆ. ಆ ನಿನ್ನ ಮೈಯ ತೇಜಸ್ಸು ಜಗತ್ತಿನೆಲ್ಲೆಡೆಗೆ ತುಂಬುತ್ತಿದೆ. ಎಲ್ಲರ ಒಳಗೂ ಹೊರಗೂ ತುಂಬಿರುವ ನೀನು ಸರ್ವ ಸಂಹಾರಕರನಾಗಿ ಕಾಣುತ್ತಿದ್ದೀಯ(ವಿಷ್ಣೋ).
·  ಶ್ಲೋಕ - 31
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋSಸ್ತು ತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥೩೧॥
ಆಖ್ಯಾಹಿ ಮೇ ಕಃ ಭವಾನ್ ಉಗ್ರ ರೂಪಃ ನಮಃ ಅಸ್ತು ತೇ ದೇವ ವರ ಪ್ರಸೀದ ।
ವಿಜ್ಞಾತುಮ್ ಇಚ್ಛಾಮಿ ಭವಂತಮ್ ಆದ್ಯಮ್ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ಹೇಳು ನನಗೆ: ಅಂಜಿಸುವ ರೂಪ ತಳೆದು ಬಂದ ನಿನ್ನ ಬಿತ್ತರವೇನು? ಓ ಹಿರಿಯ ದೈವತವೆ, ನಿನಗೆ ತಲೆಬಾಗುತಿದ್ದೇನೆ. ದಯೆದೋರು. ಎಲ್ಲಕ್ಕೂ ಮೊದಲಿರುವ ನಿನ್ನನ್ನು ತಿಳಿಯ ಬಯಸುತ್ತೇನೆ.ನಿನ್ನ ಉದ್ದೇಶವೇನು ಎಂದು ತಿಳಿಯುತ್ತಿಲ್ಲ.
ಈ ನಿನ್ನ ಭಯಂಕರ ರೂಪವನ್ನು ಕಂಡು ನನಗೇನು ಅರ್ಥವಾಗುತ್ತಿಲ್ಲ. ನಿನ್ನ ಮಹಿಮೆ ಅರಿಯದಾಗಿದ್ದೇನೆ. ನಿನ್ನಲ್ಲಿ ನಾನು ಶರಣು ಬಂದಿದ್ದೇನೆ. ನನ್ನನ್ನು ಉದ್ಧರಿಸು. ಈ ಭಯಂಕರ ರೂಪ ತೊಟ್ಟ ನಿನ್ನನ್ನು ತಿಳಿಯಬಯಸುತ್ತಿದ್ದೇನೆ. ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.
·  ಶ್ಲೋಕ - 32
ಭಗವಾನುವಾಚ ।
ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ।
ಋತೇSಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇSವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥೩೨॥
ಭಗವಾನುವಾಚ-ಭಗವಂತ ಹೇಳಿದನು :
ಕಾಲಃ ಅಸ್ಮಿ ಲೋಕಕ್ಷಯಕೃತ್ ಪ್ರವೃದ್ಧಃ ಲೋಕಾನ್ ಸಮಾಹರ್ತುಮ್ ಇಹ ಪ್ರವೃತ್ತಃ ।
ಋತೇ ಅಪಿ ತ್ವಾಮ್ ನ ಭವಿಷ್ಯಂತಿ ಸರ್ವೇ ಯೇ ಅವಸ್ಥಿತಾಃ ಪ್ರತಿ ಅನೀಕೇಷು ಯೋಧಾಃಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನು. ಈಗಿಲ್ಲಿ, ಲೋಕಗಳನ್ನು ಮುಗಿಸಿಬಿಡಲೆಂದು ಹೊರಟವನು. ನೀನಿರದಿದ್ದರೂ [ನಿನ್ನನ್ನು, ನಿನ್ನ ಸೋದರರನ್ನು ಮತ್ತೆ ಕೆಲವರನ್ನು ಬಿಟ್ಟು] ಎರಡೂ ಕಡೆಯ ಪಡೆಗಳಲ್ಲಿ ನಿಂತ ಯಾವ ಕಾದಾಳುಗಳೂ ಉಳಿಯುವುದಿಲ್ಲ.
ಕೃಷ್ಣ ಹೇಳುತ್ತಾನೆ ನಾನು ಕಾಲಪುರುಷನಾಗಿ ನಿಂತಿದ್ದೇನೆಎಂದು. ಕಲಧಾತುವಿನಿಂದ ಬಂದಿರುವ ಕಾಲಅನ್ನುವ ಪದ ಅನೇಕ ಅರ್ಥವನ್ನು ಕೊಡುತ್ತದೆ. ಸರ್ವಸಂಹಾರಕ, ಸರ್ವಗುಣಪೂರ್ಣ, ಸರ್ವಜ್ಞ ಇತ್ಯಾದಿ. ಇಲ್ಲಿ ವಿಶೇಷವಾಗಿ ಕೃಷ್ಣ ಸಂಹಾರ ಶಕ್ತಿಯಾಗಿ ನಿಂತಿದ್ದಾನೆ. ನಾನು ನಿನಗೆ ಸಾರಥಿಯಾಗಿ ನಿಂತು ಭೂಮಿಗೆ ಭಾರವಾಗಿರುವ ಇವರನ್ನು ಮುಗಿಸಲೆಂದೇ ನಿಂತಿರುವುದು ಎನ್ನುತ್ತಾನೆ ಕೃಷ್ಣ. ಮಹಾಭಾರತ ಯುದ್ಧವನ್ನು ನೋಡಿದರೆ ಅದು ಒಂದು ಮಹಾಯುದ್ಧ. ಅಲ್ಲಿ ಸುಮಾರು ಐವತ್ತು ಲಕ್ಷ ಮಂದಿ ಸತ್ತಿದ್ದಾರೆ. ಅಂದಿನ ದೇಶದ ಜನಸಂಖ್ಯೆಯನ್ನು ನೋಡಿದರೆ ಅದು ಒಟ್ಟು ಜನಸಂಖ್ಯೆಯ ಸುಮಾರು ಹತ್ತನೇ ಒಂದು ಭಾಗ. ಭಾಗವತದಲ್ಲಿ ಹೇಳುವಂತೆ- ಕಾಲಪುರುಷನಾಗಿ ನಿಂತು ಕೃಷ್ಣ ಯಾವುದೇ ಆಯುಧ ಹಿಡಿಯದೆ ಎಲ್ಲರ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದ. ಅದಕ್ಕಾಗಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ-ನೀನಿಲ್ಲದಿದ್ದರೂ ಇವರೆಲ್ಲರೂ(ಎರಡೂ ಕಡೆಯವರು) ಸಾಯುತ್ತಾರೆ. ಅವರ ಸಾವು ತೀರ್ಮಾನವಾಗಿ ಬಿಟ್ಟಿದೆಎಂದು.
·  ಶ್ಲೋಕ - 33
ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ॥೩೩॥
ತಸ್ಮಾತ್ ತ್ವಮ್ ಉತ್ತಿಷ್ಠ ಯಶಃ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಮ್ ಸಮೃದ್ಧಮ್ ।
ಮಯಾ ಏವ ಏತೇ ನಿಹತಾಃ ಪೂರ್ವಮ್ ಏವ ನಿಮಿತ್ತ ಮಾತ್ರಮ್ ಭವ ಸವ್ಯಸಾಚಿನ್ ಆದ್ದರಿಂದ ನೀನೆದ್ದು ನಿಲ್ಲು.ಹಗೆಗಳನ್ನು ಗೆದ್ದು ಹೆಸರು ಗಳಿಸು. ಅರಸೊತ್ತಿಗೆಯ ತುಂಬು ಸಿರಿಯನುಣ್ಣು. ನಾನೆ ಇವರನ್ನು ಈ ಮೊದಲೆ ಕೊಂದಾಗಿದೆ. ಓ ಸವ್ಯಸಾಚಿ(ಎಡದಿಂದಲೂ ಬಾಣ ಪ್ರಯೋಗಿಸಬಲ್ಲ ನಿಪುಣ ಯೋಧ) , ನೀನು ಬರಿಯ ನೆಪಮಾತ್ರನಾಗು
ಅರ್ಜುನನನ್ನು ಕೃಷ್ಣ ಹುರಿದುಂಬಿಸುತ್ತಿದ್ದಾನೆ. ಎದ್ದೇಳು, ಯುದ್ಧಕ್ಕೆ ಸಿದ್ಧನಾಗು. ಈ ಯುದ್ಧದಲ್ಲಿ ನೀನು ಗೆಲ್ಲುತ್ತೀಯ. ಈ ಶತ್ರುಗಳನ್ನು ಸಂಹಾರ ಮಾಡು. ಏಕೆಂದರೆ ನಾನು ಇವರನ್ನು ಈಗಾಗಲೇ ಕೊಂದಾಗಿದೆ. ಇಲ್ಲಿ ನೀನು ಕೇವಲ ನಿಮಿತ್ತ ಮಾತ್ರ. ನಿನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸಿ, ನಿನ್ನ ಪಾಲಿನ ಸುಖ ಪ್ರರಾಬ್ಧವನ್ನು ಅನುಭವಿಸು.
·  ಶ್ಲೋಕ - 34
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾSನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್ ೩೪॥
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾ ಅನ್ಯಾನ್ ಅಪಿ ಯೋಧ ವೀರಾನ್ ।
ಮಯಾ ಹತಾನ್ ತ್ವಮ್ ಜಹಿ ಮಾ ವ್ಯಥಿಷ್ಠಾಃ ಯುದ್ಧ್ಯಸ್ವ ಜೇತಾ ಅಸಿ ರಣೇ ಸಪತ್ನಾನ್ ನಾನೆ ಕೊಂದ ಇವರನ್ನು ನೀನು ಮುಗಿಸಿಬಿಡು: ದ್ರೋಣನನ್ನು, ಭೀಷ್ಮನನ್ನು, ಜಯದ್ರಥನನ್ನು ಮತ್ತು ಕರ್ಣನನ್ನು; ಹಾಗೆಯೆ ಬೇರೆ ವೀರ ಹೊರಾಳುಗಳನ್ನು ಕೂಡ. ಕಂಗೆಡಬೇಡ, ಹೋರಾಡು. ಕಾಳಗದಲ್ಲಿ ಹಗೆಗಳನ್ನು ಗೆಲ್ಲಲಿರುವೆ.
ಇಲ್ಲಿ ನೆರೆದಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ, ಇವರೆಲ್ಲರ ಆಯಸ್ಸನ್ನು ನಾನು ಹೀರಿದ್ದೇನೆ. ಆದ್ದರಿಂದ ನೀನು ಅದಕ್ಕಾಗಿ ದುಃಖಪಡುವ ಅಗತ್ಯವಿಲ್ಲ. ಈ ಜೀವನ ತರಂಗ ಅನಿವಾರ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎದ್ದು ಹೋರಾಡು. ನೀನು ಈ ಧರ್ಮ ಯುದ್ಧದಲ್ಲಿ ಗೆಲ್ಲುವೆ. ನನ್ನ ರಕ್ಷೆಯ ಪೂರ್ಣ ಪ್ರಸಾದ ನಿನ್ನೊಂದಿಗಿದೆ-ಎಂದು ಕೃಷ್ಣ ಆಶೀರ್ವದಿಸುತ್ತಾನೆ.
ಮೊದಲು ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತಎಂದು ಅಹಂಕಾರದಿಂದ ಮಾತನಾಡಿದ್ದ ಅರ್ಜುನ, ನಂತರ ತನ್ನ ಮುಂದೆ ನಿಂತಿರುವ ಹಿರಿಯರನ್ನು ಕಂಡು ಕುಗ್ಗಿ ಯುದ್ಧ ಬೇಡ ಎಂದು ನಿಂತು ಬಿಟ್ಟಿದ್ದ. ಈ ಎರಡೂ ಸ್ಥಿತಿ ಯಾವುದೇ ವಸ್ತುಸ್ಥಿತಿ ಇಲ್ಲದ ನಿರ್ಧಾರವಾಗಿತ್ತು. ಈ ಕಾರಣಕ್ಕಾಗಿ ಕೃಷ್ಣ ಈ ಹತ್ತು ಅಧ್ಯಾಯಗಳಲ್ಲಿ ಅರ್ಜುನನಿಗೆ ಉಪದೇಶ ಮಾಡಿ, ಯುದ್ಧ ಎನ್ನುವುದು ಧರ್ಮ ಎನ್ನುವುದನ್ನು ಮನವರಿಕೆ ಮಾಡಿ ಕೊಟ್ಟ. ಈಗ ತನ್ನ ವಿಶ್ವರೂಪ ದರ್ಶನ ಕೊಟ್ಟು-ನೀನು ಕೇವಲ ನಿಮಿತ್ತ ಮಾತ್ರಎಂದು ಹೇಳಿದ. ಕೃಷ್ಣನ ಆ ಭಯಂಕರ ರೂಪ, ಮತ್ತು ಆತನ ಮಾತನ್ನು ಕೇಳಿ ಅರ್ಜುನ ಏನು ಮಾಡಿದ ಎನ್ನುವುದನ್ನು ಸಂಜಯ ಮುಂದಿನ ಶ್ಲೋಕದಲ್ಲಿ ವರ್ಣಿಸುತ್ತಾನೆ:
·  ಶ್ಲೋಕ - 35
ಸಂಜಯ ಉವಾಚ ।
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾSಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ॥೩೫॥
ಸಂಜಯ ಉವಾಚ- ಸಂಜಯ ಹೇಳಿದನು :
ಏತತ್ ಶ್ರುತ್ವಾ ವಚನಮ್ ಕೇಶವಸ್ಯ ಕೃತಾಂಜಲಿ ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯಃ ಏವ ಆಹ ಕೃಷ್ಣಮ್ ಸ ಗದ್ಗದಮ್ ಭೀತ ಭೀತಃ ಪ್ರಣಮ್ಯಕೃಷ್ಣನ ಈ ಮಾತನ್ನಾಲಿಸಿದ ಅರ್ಜುನ ಕೈಮುಗಿದು ನಡುಗುತ್ತ ಪೊಡಮಟ್ಟು, ಗದ್ಗದಿಸುತ್ತ, ಅಳುಕುತ್ತ, ಮತ್ತೊಮ್ಮೆ ಮಣಿದು ಮತ್ತೆ ಕೃಷ್ಣನ ಮುಂದೆ ನುಡಿದನು.
ಕೃಷ್ಣನ ಮಾತನ್ನು ಕೇಳಿದ ಅರ್ಜುನ ಭಕ್ತಿಯಿಂದ ಭಗವಂತನಿಗೆ ಕೈ ಮುಗಿದ. ಈ ಸ್ಥಿತಿಯಲ್ಲಿ ಆತ ತತ್ತರಿಸಿ ನಡುಗುತ್ತಿದ್ದಾನೆ. ತನ್ನ ಸರ್ವಾಂಗದಿಂದ ಭಗವಂತನಿಗೆ ನಮಸ್ಕರಿಸಿ, ಗದ್ಗಿತನಾಗಿ ಮಾತನಾಡಿದ.
ಇಲ್ಲಿ ಸಂಜಯ ಭಗವಂತನನ್ನು ಕೇಶವಮತ್ತು ಕೃಷ್ಣಎಂದು ಸಂಬೋಧಿಸಿದ್ದಾನೆ. ಕೇಶವ ಎಂದರೆ ಜಗತ್ತಿನ ಸೃಷ್ಟಿ ಮತ್ತು ಸಂಹಾರದ ಮೂಲದಲ್ಲಿರುವ ಶಕ್ತಿಗಳಾದ ಬ್ರಹ್ಮ-ರುದ್ರರನ್ನು ಸೃಷ್ಟಿ-ಸಂಹಾರದಲ್ಲಿ ತೊಡಗಿಸಿ ನಿಯಂತ್ರಿಸುವವ. ಸಮಸ್ತ ಜೀವಜಾತದೊಳಗಿದ್ದು, ಅವರನ್ನು ನಿಯಂತ್ರಿಸುವ ಸರ್ವಾಂತರ್ಯಾಮಿ ಭಗವಂತ ಕೇಶವ. ಇನ್ನುಕೃಷ್ಣಎನ್ನುವುದು ಭಗವಂತನ ಮೂಲ ನಾಮ ಕೂಡ ಹೌದು. ನಮ್ಮ ಅಹಂಕಾರವನ್ನು, ಅಜ್ಞಾನವನ್ನು ಕರ್ಷಣೆ ಮಾಡುವ, ಇಡೀ ಲೋಕವನ್ನು ಆಕರ್ಷಣೆ ಮಾಡುವ ಭಗವಂತ, ಸಂಸಾರದಿಂದ ನಮ್ಮನ್ನು ಕರ್ಷಣೆ ಮಾಡುವ ಕೃಷ್ಣ’.
·  ಶ್ಲೋಕ - 36
ಅರ್ಜುನ ಭಗವಂತನ ಅಪರಂಪಾರವಾದ ರೂಪ ಮತ್ತು ಆತನ ಶಕ್ತಿಯ ವಿವರಣೆಯನ್ನು ಕೃಷ್ಣನಿಂದ ಕೇಳಿ-ಭಗವಂತನನ್ನು ಭಕ್ತಿಯಿಂದ ಸ್ತುತಿಸಲು ಪ್ರಾರಂಭಿಸುತ್ತಾನೆ. ಮುಂದಿನ ಶ್ಲೋಕಗಳಲ್ಲಿ ಭಗವಂತನ ಅನಂತ ಗುಣವನ್ನು ಅರ್ಜುನ ಸ್ತುತಿಸುವುದನ್ನು ನಾವು ಕಾಣಬಹುದು. [ಇಲ್ಲಿ ಭಗವಂತನ ಗುಣವಿಶೇಷವನ್ನು ಹೇಳುವ ಅನೇಕ ವಿಶೇಷಣಗಳನ್ನು ಶ್ಲೋಕದಲ್ಲಿ ಬಳಸಲಾಗಿದೆ. ಉದಾಹರಣೆಗೆ: ಹೃಷೀಕೇಶಃ, ಅಕ್ಷರಃ, ಪುರುಷಃ, ಅನಂತವೀರ್ಯಃ, ಅಮಿತವಿಕ್ರಮಃ, ದೇವೇಶಃ, ಇತ್ಯಾದಿ. ಈ ಎಲ್ಲಾ ವಿಶೇಷಣಗಳ ಅರ್ಥವಿವರಣೆಯನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ಸಾಂದರ್ಭಿಕವಾಗಿ ಚರ್ಚಿಸಿರುವುದರಿಂದ ಇಲ್ಲಿ ಆ ಅರ್ಥ ವಿವರಣೆಯನ್ನು ಮರಳಿ ವಿವರಿಸಿಲ್ಲ. ನಾವು ವಿಷ್ಣುಸಹಸ್ರನಾಮದಲ್ಲಿ ಕೂಡ ಭಗವಂತನ ನಾಮವಾಗಿ ಈ ಪದಗಳು ಬಳಕೆಯಾಗಿರುವುದನ್ನು ಕಾಣುತ್ತೇವೆ. ಭಗವಂತನ ಒಂದೊಂದು ನಾಮದ ಹಿಂದೆ ಆತನ ಅನಂತ ಗುಣದ ಅನುಸಂಧಾನವಿದೆ. ವಿಚಾರವನ್ನು ತಿಳಿದು, ಪ್ರತೀ ಪದದ ಹಿಂದಿರುವ ಅರ್ಥಾನುಸಂಧಾನದೊಂದಿಗೆ ಈ ಶ್ಲೋಕವನ್ನು ನೋಡಿದಾಗ ಮಾತ್ರ ಅದರ ಹಿಂದಿರುವ ಸಂದೇಶದ ಅರಿವಾಗುತ್ತದೆ.ಮುಂದಿನ ಶ್ಲೋಕಗಳನ್ನು ನೋಡುವಾಗ ಓದುಗರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಓದಬೇಕಾಗಿ ಪ್ರಾರ್ಥನೆ.]
ಅರ್ಜುನ ಉವಾಚ ।
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನುರಜ್ಯತೇ ಚ
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ॥೩೬॥
ಅರ್ಜುನ ಉವಾಚ-ಅರ್ಜುನ ಹೇಳಿದನು :
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತಿ ಅನುರಜ್ಯತೇ ಚ
ರಕ್ಷಾಂಸಿ ಭೀತಾನಿ ದಿಶಾಃ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ಇಂದ್ರಿಯಗಳ ದೊರೆಯೆ, ಎಲ್ಲ ಸರಿಯೆ: ಜಗತ್ತು ನಿನ್ನ ಕೊಂಡಾಟದಿಂದ ಹಿಗ್ಗುತ್ತಿದೆ; ಒಲಿಯುತ್ತಿದೆ. ರಕ್ಕಸರು ದಿಕ್ಕೆಟ್ಟು ಓಡುತ್ತಿದ್ದಾರೆ. ಸಿದ್ಧರೆಲ್ಲ ಗುಂಪುಗೂಡಿ ಪೊಡಮಡುತ್ತಿದ್ದಾರೆ.
ಈ ಹಿಂದೆ ಹೇಳಿದಂತೆ-ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಇಡೀ ವಿಶ್ವದಲ್ಲಿ ಅನೇಕ ಮಂದಿ ಜ್ಞಾನಿಗಳಿಗೆ, ದೇವತೆಗಳಿಗೆ ಕೂಡಾ ಈ ಅಪರೂಪದ ಭಗವಂತನ ರೂಪ ದರ್ಶನವಾಗಿದೆ. ಅರ್ಜುನ ತನ್ನ ಅಂತರಂಗದಲ್ಲಿ ತನಗೆ ಕಾಣುತ್ತಿರುವ ವಿಚಾರವನ್ನು ಹೇಳುತ್ತಿದ್ದಾನೆ. ಇಷ್ಟೇ ಅಲ್ಲದೆ ಬಾಹ್ಯ ವಸ್ತುಸ್ಥಿತಿ ಕೂಡಾ ಆತನಿಗೆ ಭಗವಂತನಲ್ಲಿ ಕಾಣಿಸುತ್ತಿದೆ. ಅದನ್ನು ಅರ್ಜುನ ಇಲ್ಲಿ ವಿವರಿಸುತ್ತಿದ್ದಾನೆ- ಋಷಿಗಳು, ಜ್ಞಾನಿಗಳು ನಿನ್ನ ಗುಣಗಾನ ಮಾಡುತ್ತಿದ್ದಾರೆ. ನಿನ್ನನ್ನು ಕೊಂಡಾಡಿ ರೋಮಾಂಚನಗೊಳ್ಳುತ್ತಿದ್ದಾರೆ. ದುಷ್ಟಶಕ್ತಿಗಳು ನಿನ್ನನ್ನು ಕಂಡು ಹೆದರಿ ಓಡುತ್ತಿವೆ. ಸಾತ್ವಿಕರು ಸಿದ್ಧರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದೆಲ್ಲವೂ ಯುಕ್ತವೇ ಸರಿ-ಓ ಹೃಷೀಕೇಶಃ”.
·  ಶ್ಲೋಕ - 37
ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋSಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ ತತ್ಪರಂ ಯತ್ ॥೩೭॥
ಕಸ್ಮಾತ್ ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣಃ ಅಪಿ ಆದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮ್ ಅಕ್ಷರಮ್ ಸತ್ ಅಸತ್ ತತ್ಪರಮ್ ಯತ್ ಓ ಮಹಾತ್ಮನೆ, ಅವರೇಕೆ ಪೊಡಮಡದೆ ಇದ್ದಾರು ನಿನಗೆ; ಬ್ರಹ್ಮನಿಗು ಹಿರಿಯನಿಗೆ; ಮೊಟ್ಟ ಮೊದಲ ತಂದೆಗೆ. ಓ ಕೊನೆಯಿರದವನೆ, ಸಗ್ಗಿಗರೊಡೆಯನೆ, ಜಗದ ಆಸರೆಯೆ, ನೀನು ಅಳಿವಿರದವನು. ಕಾಣುವ, ಕಾಣದ ವಿಶ್ವದೊಳಗಿದ್ದು ಅದರಾಚೆಗಿರುವವನು.
ನಿನ್ನನ್ನು ತಿಳಿದವರು ನಿನಗೆ ನಮಸ್ಕಾರ ಮಾಡದೆ ಇರಲು ಸಾಧ್ಯವೇ ಇಲ್ಲ. ನೀನು ಪರಿಪೂರ್ಣವಾದ ಆತ್ಮ. ಈ ಜಗತ್ತಿನ ತಂದೆಯಾದ ಆ ಚತುರ್ಮುಖನಿಗೂ ನೀನು ತಂದೆ. ಇಂಥಹ ನಿನಗೆ ನಮಸ್ಕರಿಸದೆ ಇರಲು ಸಾಧ್ಯವಿಲ್ಲ. ನೀನು ದೇಶ, ಕಾಲ ಮತ್ತು ಗುಣಗಳಿಂದ ಅನಂತ. ನೀನು ಎಲ್ಲರ ಒಳಗೂ ಹೊರಗೂ ತುಂಬಿ ನಿಂತಿರುವ ಜಗನ್ನಿವಾಸ, ನೀನು ನಿರ್ಧಿಷ್ಟ ಹಾಗು ದೋಷ ರಹಿತ ಜ್ಞಾನಾನಂದಮೂರ್ತಿ(ಸತ್), ಅವ್ಯಕ್ತಮೂರ್ತಿಯಾದ ನಿನ್ನನ್ನು (ಅಸತ್) ಹೊರಗಣ್ಣಿನಿಂದ ಕಾಣಲಾರೆವು. ನೀನು ಅಕ್ಷರಃ, ನೀನು ದೇವೇಶಃ, ನೀನು ಕಾರಣಗಳಿಗೂ ಕಾರಣ, ನೀನು ಜಗದ ಆಸರೆ.
·  ಶ್ಲೋಕ - 38
ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾSಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ॥೩೮॥
ತ್ವಮ್ ಆದಿದೇವಃ ಪುರುಷಃ ಪುರಾಣಃ ತ್ವಮ್ ಅಸ್ಯ ವಿಶ್ವಸ್ಯ ಪರಮ್ ನಿಧಾನಮ್ ।
ವೇತ್ತಾ ಅಸಿ ವೇದ್ಯಮ್ ಚ ಪರಮ್ ಚ ಧಾಮ ತ್ವಯಾ ತತಮ್ ವಿಶ್ವಮ್ ಅನಂತರೂಪ ನೀನು ದೇವತೆಗಳಿಗೂ ಮೊದಲಿಗೆ. ಪುರಾಣಪುರುಷ. ನೀನು ಈ ಜಗದ ಹಿರಿಯಾಸರೆ. ಎಲ್ಲವನ್ನು ತಿಳಿದವನು. ಎಲ್ಲರೂ ತಿಳಿಯಬೇಕಾದವನು. ಹಿರಿಯ ಬೆಳಕು. ಓ ಅನಂತರೂಪನೆ, ಇಡಿಯ ವಿಶ್ವ ನಿನ್ನಿಂದ ತುಂಬಿದೆ.
ನೀನು ಆದಿದೇವಃ, ನೀನು ಪುರಾಣಪುರುಷಃ, ಈ ಜಗತ್ತಿನಲ್ಲಿ ಕೊನೆಯಾಸರೆ ನೀನು. ಎಲ್ಲರೂ ತಿಳಿಯಬೇಕಾದವನು, ಎಲ್ಲವನ್ನೂ ತಿಳಿದ ನೀನು ಎಲ್ಲವನ್ನು ಮೀರಿದ ಪರಂಧಾಮ. ಅನಂತರೂಪನಾದ ನೀನು ಇಡೀ ವಿಶ್ವವನ್ನು ವ್ಯಾಪಿಸಿ ನಿಂತಿದ್ದೀಯ.
·  ಶ್ಲೋಕ - 39
ವಾಯುರ್ಯಮೋSಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇSಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋSಪಿ ನಮೋ ನಮಸ್ತೇ ॥೩೯॥
ವಾಯುಃ ಯಮಃ ಅಗ್ನಿಃ ವರುಣಃ ಶಶಾಂಕಃ ಪ್ರಜಾಪತಿಃ ತ್ವಮ್ ಪ್ರಪಿತಾಮಹಃ ಚ
ನಮಃ ನಮಃ ತೇ ಅಸ್ತು ಸಹಸ್ರಕೃತ್ವಃ ಪುನಃ ಚ ಭೂಯಃ ಅಪಿ ನಮಃ ನಮಃ ತೇ ವಾಯು, ಯಮ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ ಎಲ್ಲ ನೀನೆ. [ವ=ಬಲರೂಪ, ಆಯಾ=ಜ್ಞಾನರೂಪ. ಆದ್ದರಿಂದವಾಯು’. ಎಲ್ಲವನ್ನು ನಿಯಮಿಸುವುದರಿಂದಯಮ’. ಅಗ=ಚಲನೆ ಇಲ್ಲದ ವಿಶ್ವಕ್ಕೆ, ನಿ=ಚಲನೆ ನೀಡುವುದರಿಂದ ಅಗ್ನಿ’. ಭಕ್ತರನ್ನು ವರಣ ಮಾಡುವುದರಿಂದ ವರುಣಃ. ಶಶ=ಮಿಗಿಲಾದ ಆನಂದದಿಂದ ಅಂಕ=ಅಂಕಿತನಾದ್ದರಿಂದ ಶಶಾಂಕ’. ಪ್ರಜಾ=ಪ್ರಜೆಗಳ, ಪತಿ=ಪಾಲಕನಾದ್ದರಿಂದಪ್ರಜಾಪತಿ’.] ನೀನೆ ಜಗದ ಮುತ್ತಜ್ಜ. ಸಾವಿರಬಾರಿ ನಿನಗೆ ನಮೋನಮೋ ಎಂದು ಮಣಿವೆ. ಮತ್ತೊಮ್ಮೆ ಮಗದೊಮ್ಮೆ ನಿನಗೆ ವಂದನೆ; ವಂದನೆ.
ನೀನು ವಾಯುಃ, ಯಮಃ, ವರುಣಃ, ಶಶಾಂಕಃ, ಪ್ರಜಾಪತಿಃ. ನೀನು ಜಗದ ಮುತ್ತಜ್ಜ. ನಿನಗೆ ಸಹಸ್ರ ಬಾರಿ ವಂದನೆ.
·  ಶ್ಲೋಕ - 40
ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋSಸ್ತು ತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ ॥೪೦॥
ನಮಃ ಪುರಸ್ತಾತ್ ಅಥ ಪೃಷ್ಠತಃ ತೇ ನಮಃ ಅಸ್ತು ತೇ ಸರ್ವತಃ ಏವ ಸರ್ವ ।
ಅನಂತವೀರ್ಯ ಅಮಿತವಿಕ್ರಮಃ ತ್ವಮ್ ಸರ್ವಮ್ ಸಮಾಪ್ರೋಷಿ ತತಃ ಅಸಿ ಸರ್ವಃ ಮುಂಗಡ ನಿನಗೆ ವಂದನೆ. ಮತ್ತೆ ಬೆಂಗಡೆ ನಿನಗೆ ವಂದನೆ. ಓ, ಎಲ್ಲೆಡೆ ಇರುವವನೆ, ಎಲ್ಲ ಕಡೆ ನಿನಗೆ ವಂದನೆ. ನೀನು ಎಲ್ಲೆಯಿರದ ಬೀರದವನು.ಅಳತೆಯಿರದ ಅಳವಿನವನು. ಎಲ್ಲೆಡೆಯು ತುಂಬಿರುವೆ. ಅದಕೆಂದು ನೀನೆ ಎಲ್ಲ.
ಭಗವಂತನ ವಿಶ್ವರೂಪದಲ್ಲಿ ಆತನ ಮುಂಭಾಗ ಯಾವುದು ಹಿಂಭಾಗ ಯಾವುದು ಎಂದು ಹೇಗೆ ಗುರುತಿಸುವುದು. ಇದು ಅಸಾಧ್ಯ. ಅದಕ್ಕಾಗಿ ಅರ್ಜುನ ಹೇಳುತ್ತಾನೆ: ನಿನಗೆ ಎದುರಿನಿಂದ ನಮಸ್ಕಾರ, ನಿನ್ನ ಬೆಂಭಾಗದಿಂದ ನಮಸ್ಕಾರ, ಎಲ್ಲೆಡೆ ತುಂಬಿರುವ ನಿನಗೆ ಎಲ್ಲೆಡೆಯಿಂದ ನಮಸ್ಕಾರ. ನೀನು ಅನಂತವೀರ್ಯಃ. ನೀನು ಅಮಿತವಿಕ್ರಮಃ. ಓ ಸರ್ವನೇ, ನಿನಗೆ ನಮಸ್ಕಾರ. ಜಗತ್ತಿನ ಸಮಸ್ತ ಜೀವ ಜಾತದ ಸೃಷ್ಟಿಗೆ ಕಾರಣವಾಗಿ ಎಲ್ಲೆಡೆ ತುಂಬಿರುವ ಜಗತ್ತಿನ ನಿಯಾಮಕನಾದ ಈ ಅನಂತ ಶಕ್ತಿಗೆ ನಮಸ್ಕಾರ. ಎಲ್ಲವೂ ನೀನೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.