ಭಗವದ್ಗೀತಾ-ಫಲಶ್ರುತಿಃ ಮತ್ತು ಉಪಸಂಹಾರ (ಅಧ್ಯಾಯ-18 ಶ್ಲೋಕ 67-78)
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।
ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯೋSಭ್ಯಸೂಯತಿ ॥೬೭॥
ಇದಂ ತೇ ನ ಅತಪಸ್ಕಾಯ ನ ಅಭಕ್ತಾಯ ಕದಾಚನ ।
ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯಃ ಅಭ್ಯಸೂಯತಿ – ಇದನ್ನು
ನೇಮದ ನಿಷ್ಠೆ ಇರದವರಿಗೆ ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ
ಹೇಳಬೇಡ. ನನ್ನ ಬಗೆಗೆ ಕಿಚ್ಚು ಪಡುವವನಿಗಂತು ಹೇಳಲೇಬೇಡ.
ಇಲ್ಲಿ ಕೃಷ್ಣ ಜ್ಞಾನದ ಪರಂಪರೆಯನ್ನು ಹೇಗೆ
ರಕ್ಷಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ. ಯಾರಿಗೆ ಆಳವಾದ ಚಿಂತನಶೀಲತೆ ಇಲ್ಲವೋ
ಅವರಿಗೆ ಇದನ್ನು ಹೇಳಬೇಡ; ಚಿಂತನಶೀಲತೆ ಇದ್ದು ಕೇಳುವ ಆಸಕ್ತಿ ಇಲ್ಲದವರಿಗೆ
ಇದನ್ನು ಹೇಳಬೇಡ; ಆಸಕ್ತಿ ಇದೆ ಆದರೆ ಭಕ್ತಿ/ಪ್ರೀತಿ ಇಲ್ಲ-ಅಂಥವರಿಗೆ
ಇದನ್ನು ಹೇಳಬೇಡ; ಎಲ್ಲಕ್ಕಿಂತ ಮಿಗಿಲಾಗಿ ಭಗವಂತನ ಬಗ್ಗೆ ಅಸಹನೆ,ಅಸೂಯೆ, ದ್ವೇಷವುಳ್ಳವರಿಗೆ ಸರ್ವತಾ ಹೇಳಲೇಬೇಡ. ಎಂದೂ ಅಧ್ಯಾತ್ಮವನ್ನು ಬೀದಿಯ ಸೊತ್ತಾಗಿಸಬೇಡ.
ಒಂದು ಕಾಲದಲ್ಲಿ ವೇದಾಂತವನ್ನು ಸಾರ್ವಜನಿಕವಾಗಿ
ಬಿಚ್ಚಿಡಬಾರದು,
ಅದನ್ನು ರಹಸ್ಯವಾಗಿಡಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗಿ ಬೆಳೆಯಿತು. ಇದರ
ಪರಿಣಾಮ ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ ಇಲ್ಲವಾಯಿತು. ಇಂದು ನಮ್ಮಲ್ಲಿ
ಹೆಚ್ಚಿನವರು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚಿ ಮುಚ್ಚಿಡುವವರೇ
ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು
ಆಸಕ್ತಿವುಳ್ಳವರಿಗೆ ಕೊಡುವ ಕೆಲಸ ಮಾಡಬೇಕಾಗಿದೆ.
ಭಗವದ್ಗೀತೆಯ ಈ ಅಮೂಲ್ಯ ಸಂದೇಶದ ಅಧ್ಯಯನ ಮಾಡಿ ಮನನ
ಮಾಡುವುದರಿಂದ ಸಿಗುವ ಫಲಶ್ರುತಿ ಏನು ಎನ್ನುವುದನ್ನು ಕೃಷ್ಣ ಮುಂದಿನ ನಾಲ್ಕು ಶ್ಲೋಕಗಳಲ್ಲಿ
ವಿವರಿಸಿದ್ದಾನೆ. ಭಗವದ್ಗೀತೆಯ ನಿಜವಾದ ಫಲ ಮನುಷ್ಯನ ಪುರುಷಾರ್ಥದಲ್ಲಿ ಕೊನೆಯದಾದ ಮೋಕ್ಷ.
ಅಧ್ಯಾತ್ಮ ವಿದ್ಯೆಯನ್ನು ಹೇಳುವ ಸಮಸ್ತ ಶಾಸ್ತ್ರಗಳ ಸಾರ ಭಗವದ್ಗೀತೆ. ಭಗವಂತನ ಸ್ವರೂಪವನ್ನು
ತಿಳಿದು ಭಗವಂತನ ಲೋಕ ಸೇರಲು ಇದೊಂದೇ ಗ್ರಂಥ ಸಾಕು. ಸಮಸ್ತ ಶಾಸ್ತ್ರಗಳಲ್ಲಿನ ಸಮಸ್ತ ಸಾರವನ್ನು, ಸಮಸ್ತ
ರಹಸ್ಯವನ್ನು ನಾವು ಈ ಕೃಷ್ಣಾರ್ಜುನ ಸಂವಾದದಲ್ಲಿ ಕಾಣಬಹುದು. ಈ
ರೀತಿ ಎಲ್ಲ ಶಾಸ್ತ್ರಗಳ ಪೂರ್ಣ ಸಾರಸಂಗ್ರಹ ಅಡಕವಾಗಿರುವ ಗ್ರಂಥ ಇನ್ನೊಂದಿಲ್ಲ.
ಇಂಥಹ ಗೀತೆಯನ್ನು ನಾವು ಗುರು ಮುಖೇನ ತಿಳಿಯುವುದರಿಂದ; ಮನನ ಮಾಡುವುದರಿಂದ; ಇಲ್ಲಿ ಹೇಳಿರುವ ಸಾಧನಾ ಉಪಾಯವನ್ನು
ಜೀವನದಲ್ಲಿ ಅನುಸರಿಸುವುದರಿಂದ; ನಾವು ತಿಳಿದ
ಜ್ಞಾನವನ್ನು ಆಸಕ್ತರಿಗೆ ತಿಳಿಸುವುದರಿಂದ-ನಾವು ಭಗವಂತನ ಲೋಕವನ್ನು(ಮೋಕ್ಷವನ್ನು) ಸೇರಬಹುದು.
ಯ ಇಮಂ ಪರಮಂ ಗುಹ್ಯಂ ಮದ್ ಭಕ್ತೇಷ್ವಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ
॥೬೮॥
ಯಃ ಇಮಂ ಪರಮಂ ಗುಹ್ಯಂ ಮತ್ ಭಕ್ತೇಷು
ಅಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮ್ ಏವ ಏಷ್ಯತಿ
ಅಸಂಶಯಃ –
ತುಂಬ ಗೋಪ್ಯವಾದ ಇದನ್ನು ನನ್ನ ಭಕ್ತರಲ್ಲಿ ಅರುಹುವವನು ನನ್ನಲ್ಲಿ ಹಿರಿಯ ಭಕ್ತಿಯನ್ನು
ಮಾಡಿ ನನ್ನನ್ನೆ ಸೇರುತ್ತಾನೆ; ಸಂಶಯವಿಲ್ಲ.
ಇಂಥಹ ಜ್ಞಾನವನ್ನು ಅರಿತು, ಅದನ್ನು
'ನನ್ನಲ್ಲಿ ಶ್ರದ್ಧಾಭಕ್ತಿಯುಳ್ಳ ಸಾಧಕನಿಗೆ' ಕೊಡುತ್ತಾರೋ ಅವರು ನಿಶ್ಚಿತವಾಗಿ ನನ್ನನ್ನು ಬಂದು ಸೇರುತ್ತಾರೆ. ಇದರಲ್ಲಿ
ಸಂಶಯವಿಲ್ಲ.
ನಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ ತಮಃ
।
ಭವಿತಾ ನಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ
॥೬೯॥
ನಚ ತಸ್ಮಾತ್ ಮನುಷ್ಯೇಷು ಕಶ್ಚಿತ್ ಮೇ
ಪ್ರಿಯಕೃತ್ ತಮಃ ।
ಭವಿತಾ ನಚ ಮೇ ತಸ್ಮಾತ್ ಅನ್ಯಃ ಪ್ರಿಯತರಃ ಭುವಿ – ಮನುಷ್ಯರಲ್ಲಿ
ಅವನಿಗಿಂತ ಹೆಚ್ಚು ಮೆಚ್ಚಿನವನು ನನಗೆ ಇನ್ನೊಬ್ಬನಿಲ್ಲ. ಅವನಿಗಿಂತ ಹೆಚ್ಚು ಮೆಚ್ಚಿನ ಇನ್ನೊಬ್ಬ
ಭೂಮಿಯಲ್ಲಿ ಮುಂದೆ ಹುಟ್ಟಲಾರ.
“ಗೀತೆಯನ್ನು ತಿಳಿದು ಅದನ್ನು ಭಕ್ತ ಜನಾಂಗಕ್ಕೆ ತಲುಪಿಸುವ ಶ್ರೇಷ್ಠ ಕಾರ್ಯ ಮಾಡುವವರು ‘ಮನುಷ್ಯರಲ್ಲಿ’ ನನಗೆ ಅತ್ಯಂತ ಮೆಚ್ಚಿನವರು. ಇವರಿಗಿಂತ
ಹೆಚ್ಚು ಇಷ್ಟವಾದದ್ದನ್ನು ಮಾಡುವ ಮಾನವ ಈ ಭೂಮಿಯ ಮೇಲೆ ಇಲ್ಲ”
ಎನ್ನುತ್ತಾನೆ ಕೃಷ್ಣ. ಭಗವಂತನಿಗೆ ಜ್ಞಾನಿಗಳು ಅಚ್ಚುಮೆಚ್ಚು. ಅವರಿಗಿಂತಲೂ
ಅಚ್ಚುಮೆಚ್ಚು ತಾವು ಜ್ಞಾನಿಗಳಾಗಿ, ಆ ಜ್ಞಾನದ ಸವಿಯನ್ನು ಸಮಾಜಕ್ಕೆ
ಕೊಡುವವರು. “ಇವರು ಭೂಮಿಯಲ್ಲಿ ನನಗೆ ಇಷ್ಟವಾದುದ್ದನ್ನು ಮಾಡುವವರಲ್ಲಿ
ಸರ್ವಶ್ರೇಷ್ಠರು” ಎಂದಿದ್ದಾನೆ ಕೃಷ್ಣ.
ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ ।
ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ ಮೇ ಮತಿಃ
॥೭೦॥
ಅಧ್ಯೇಷ್ಯತೇ ಚ ಯಃ ಇಮಂ ಧರ್ಮ್ಯಂ ಸಂವಾದಮ್
ಆವಯೋಃ ।
ಜ್ಞಾನ ಯಜ್ಞೇನ ತೇನ ಅಹಮ್ ಇಷ್ಟಃ ಸ್ಯಾಮ್
ಇತಿ ಮೇ ಮತಿಃ --
ಜೀವನಧರ್ಮವನ್ನರುಹುವ ನಮ್ಮ ಈ ಮಾತುಕತೆಯನ್ನು ಅಧ್ಯಯನ ಮಾಡಿದರೆ ಕೂಡ
ಜ್ಞಾನಯಜ್ಞದಿಂದ ನನ್ನನ್ನು ಪೂಜಿಸಿದಂತಾಯಿತು ಎಂದು ನನ್ನ ಆಶಯ.
ಒಂದು ವೇಳೆ ಗೀತೆಯ ಜ್ಞಾನವನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ
ಹೇಳುವ ಕ್ಷಮತೆ ನಮ್ಮಲ್ಲಿಲ್ಲದಿದ್ದರೆ, ಧರ್ಮ ವಿಷಯಕವಾದ ಈ
ಕೃಷ್ಣಾರ್ಜುನ ಸಂವಾದವನ್ನು ಗುರುಮುಖದಲ್ಲಿ ಅಧ್ಯಯನ ಮಾಡಿದರೆ ಕೂಡ-ಅದು ಜ್ಞಾನ ಯಜ್ಞದಂತೆ
ಭಗವಂತನ ಪೂಜೆಯಾಗುತ್ತದೆ. “ಇದು ನನ್ನ ಅಭಿಪ್ರಾಯ” ಎಂದು ಹೇಳುತ್ತಾನೆ ಕೃಷ್ಣ. ಭಗವಂತನ ಬಗೆಗೆ ಮನುಷ್ಯ ಏನೇನು ತಿಳಿದುಕೊಳ್ಳಬೇಕು,
ಅದನ್ನು ತಿಳಿದು ಹೇಗೆ ಧರ್ಮದ ದಾರಿಯಲ್ಲಿ ಸಾಗಬೇಕು ಎನ್ನುವ 'ಜೀವನ ಧರ್ಮವನ್ನು' ಗೀತೆಯ ಮೂಲಕ ತಿಳಿದು
ಪಾಲಿಸುವವ-ಮೋಕ್ಷವನ್ನು ಸೇರುತ್ತಾನೆ.
ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।
ಸೋSಪಿ ಮುಕ್ತಃ ಶುಭಾನ್
ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ ॥೭೧॥
ಶ್ರದ್ಧಾವಾನ್ ಅನಸೂಯಃ ಚ ಶೃಣುಯಾತ್ ಅಪಿ ಯಃ
ನರಃ ।
ಸಃ ಅಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್
ಪುಣ್ಯಕರ್ಮಣಾಮ್ –
ನಂಬಿಕೆ ಇರುವ, ಕಿಚ್ಚು ಇರದ ಮನುಷ್ಯ ಕೇಳಿದರೂ ಸಾಕು.
ಅಂಥವನೂ ಪಾಪದಿಂದ ಬಿಡುಗಡೆಗೊಂಡು ಪುಣ್ಯಜೀವಿಗಳ ಮಂಗಲಮಯ ಲೋಕಗಳನ್ನು ಪಡೆದಾನು.
ಒಂದು ವೇಳೆ ಗೀತೆಯನ್ನು ಸ್ವಯಂ ಅಧ್ಯಯನ ಮಾಡುವ
ಸಾಮರ್ಥ್ಯ ನಮ್ಮಲ್ಲಿ ಇಲ್ಲದೇ ಇದ್ದಾಗ, ಯಾವುದೇ ಅಸೂಯೆ ಇಲ್ಲದೆ, ಶ್ರದ್ಧಾಭಕ್ತಿಯಿಂದ ತಿಳಿದವರಿಂದ ಕೇಳಿ
ತಿಳಿದುಕೊಂಡರೂ ಸಾಕು- ನಾವು ನಮ್ಮ ಪಾಪವನ್ನು
ತೊಳೆದುಕೊಂಡು ಭಗವಂತನ ಲೋಕವನ್ನು ಸೇರಬಹುದು. ಇದು ಕೃಷ್ಣನ ಭರವಸೆ.
ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ ।
ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಂಜಯ
॥೭೨॥
ಕಚ್ಚಿತ್ ಏತತ್ ಶ್ರುತಂ ಪಾರ್ಥ ತ್ವಯಾ ಏಕಾಗ್ರೇಣ
ಚೇತಸಾ ।
ಕಚ್ಚಿತ್ ಅಜ್ಞಾನ ಸಂಮೋಹಃ ಪ್ರಣಷ್ಟಃ ತೇ
ಧನಂಜಯ –
ಪಾರ್ಥ, ಇದನ್ನು ಒಮ್ಮನದಿಂದ ಕಿವಿಗೊಟ್ಟು
ಕೇಳಿದೆಯೇನು? ಧನಂಜಯ, ನಿನ್ನ ಅಜ್ಞಾನದ
ಗೊಂದಲ ಕಳೆಯಿತೇನು?
ಇದು ಗೀತೆಯಲ್ಲಿ ಕೃಷ್ಣನ ಕೊನೇಯ ಮಾತು. ಎಲ್ಲವನ್ನು
ವಿವರಿಸಿದ ಕೃಷ್ಣ ತನ್ನ ಶಿಷ್ಯ ಅರ್ಜುನನಲ್ಲಿ ಕೇಳುತ್ತಾನೆ: “ನಾನು
ಹೇಳಿದ್ದು ನಿನ್ನ ಕಿವಿಯೊಳಗೆ ಹೋಗಿ ಹೃದಯಕ್ಕೆ ಮುಟ್ಟಿತೇನೋ?
ಇದರಿಂದ ನಿನ್ನ ಮನಸ್ಸಿನಲ್ಲಿದ್ದ ತಪ್ಪು ತಿಳುವಳಿಕೆ ಗೊಂದಲ ಕಳೆಯಿತೇ?"
ಎಂದು. ಇಲ್ಲಿ ಕೃಷ್ಣ -ಗುರು ತನ್ನ ಶಿಷ್ಯನಲ್ಲಿ ಕೇಳುವಂತೆ
ಅರ್ಜುನನನ್ನು ಪ್ರಶ್ನಿಸಿದ್ದಾನೆ. ಇಲ್ಲಿಗೆ ಗೀತೆಯಲ್ಲಿ ಕೃಷ್ಣನ ನುಡಿಗಳುಳ್ಳ ೫೭೪ ಶ್ಲೋಕಗಳು ಮುಗಿಯಿತು. ಅರ್ಜುನನ ಒಟ್ಟು ೮೪ ಶ್ಲೋಕಗಳಲ್ಲಿ ಕೊನೇಯ
ಶ್ಲೋಕ ಮತ್ತು ಸಂಜಯನ ಒಟ್ಟು ೪೧ ಶ್ಲೋಕಗಳಲ್ಲಿ ಕೊನೇಯ ಐದು ಶ್ಲೋಕ ಈ ಅಧ್ಯಾಯದ ಉಳಿದ ಭಾಗ.
[ಕೃಷ್ಣ-೫೭೪; ಅರ್ಜುನ-೮೪; ಸಂಜಯ-೪೧ ;
ಧೃತರಾಷ್ಟ್ರ-೧ ; ಒಟ್ಟು ೭೦೦ ಶ್ಲೋಕಗಳು]
ಅರ್ಜುನ
ಉವಾಚ ।
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್
ಪ್ರಸಾದಾನ್ಮಯಾSಚ್ಯುತ ।
ಸ್ಥಿತೋSಸ್ಮಿ
ಗತಸಂದೇಹಃ ಕರಿಷ್ಯೇ ವಚನಂ ತವ
॥೭೩॥
ಅರ್ಜುನ ಉವಾಚ-ಅರ್ಜುನ ಹೇಳಿದನು.
ನಷ್ಟಃ ಮೋಹಃ ಸ್ಮೃತಿ ಲಬ್ದಾ ತ್ವತ್
ಪ್ರಸಾದಾತ್ ಮಯಾ ಅಚ್ಯುತ ।
ಸ್ಥಿತಃ ಅಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ –ಅಚ್ಯುತ,
ಗೊಂದಲ ಕಳೆಯಿತು. ನಿನ್ನ ಹಸಾದದಿಂದ ನನ್ನ ನೆನಪು ಮರುಕಳಿಸಿತು. ಸಂದೇಹವಳಿದು
ಗಟ್ಟಿಯಾಗಿ ನಿಂತಿದ್ದೇನೆ. ನಿನ್ನ ಮಾತಿನಂತೆ ನಡೆಯುತ್ತೇನೆ.
ನನ್ನಲ್ಲಿದ್ದ ತಪ್ಪು ತಿಳುವಳಿಕೆ ಕಳೆಯಿತು. ಯಾವುದು
ಸರಿ ಯಾವುದು ತಪ್ಪು ಎಂದು ತಿಳಿಯಲಿಕ್ಕಾಗದ ಸ್ಥಿತಿ ನನ್ನಲ್ಲಿತ್ತು-
ಅದು ಹೊರಟು ಹೋಯಿತು. ಬಂಧುಮೋಹದಲ್ಲಿ ಹೊರಟುಹೋಗಿದ್ದ ನನ್ನ ಸ್ಮೃತಿ ಮರಳಿ ಬಂತು. ಅಚ್ಯುತನಾದ
ನಿನ್ನ ಅನುಗ್ರಹದಿಂದ ನನ್ನ ಮರೆವು ಮರೆಯಾಯ್ತು. ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ನಿನ್ನ ಮಾತು ಮನವರಿಕೆಯಾಗಿದೆ. ನಿನ್ನ ಮಾತಿನಂತೆಯೇ ನಡೆಯುತ್ತೇನೆ.
ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಅರ್ಜುನ
ಕೃಷ್ಣನ ಉಪದೇಶದಿಂದ ‘ನನಗೆ ಜ್ಞಾನ ಬಂತು’ ಎಂದು ಹೇಳದೆ- ಸ್ಮೃತಿ ಬಂತು
ಎಂದಿದ್ದಾನೆ. ಇದರಿಂದ ನಮಗೆ ತಿಳಿವುದೇನೆಂದರೆ- ಅರ್ಜುನ ಆ ಕಾಲದ ಮಹಾಜ್ಞಾನಿ. ಆದರೆ ಯುದ್ಧರಂಗದಲ್ಲಿ ಆತ ತನ್ನೆಲ್ಲ ಸ್ಮೃತಿಯನ್ನು ಕಳೆದುಕೊಂಡು ಕುಸಿದು ಕುಳಿತ.
ಇದೊಂದು ಭಗವಂತನ ಆಟ. ಪ್ರಪಂಚಕ್ಕೆ ಇಂಥಹ ಅಮೂಲ್ಯವಾದ ಕೃತಿಯನ್ನು ನೀಡುವುದಕ್ಕೋಸ್ಕರ ಕೃಷ್ಣ
ಅರ್ಜುನನ್ನು ಈ ರೀತಿ ಮಾಧ್ಯಮವಾಗಿ ಬಳಸಿದ. ಭಗವದ್ಗೀತೆಯಲ್ಲಿ ಏನು ಸಂದೇಶವಿದೆ ಅದರ ಪ್ರಾಯೋಗಿಕ
ವಿವರಣೆ ಮಹಾಭಾರತ. ಅಲ್ಲಿ ಬರುವ ಒಂದೊಂದು ಪಾತ್ರಗಳೂ ಗೀತೆಯ ಒಂದೊಂದು ಸಂದೇಶವನ್ನು
ಪ್ರತಿನಿಧಿಸುತ್ತವೆ. ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಐದು ಸಾವಿರ ವರ್ಷಗಳ ಹಿಂದೆ ಕೌರವ
ಪಾಂಡವರ ನಡುವೆ ನಡೆದ ಇತಿಹಾಸವಲ್ಲ. ಅದು ನಮ್ಮ ಅಂತರಂಗದ, ನಮ್ಮ ಜೀವನದ
ಹೋರಾಟ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ
ನಿರೂಪಣೆಯನ್ನು(Practical presentation) ನಮಗೆ ಭಗವಂತ
ನೀಡಿರುವುದು ಮಹಾಭಾರತದ ಮೂಲಕ.
ಸಂಜಯ ಉವಾಚ ।
ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಮ್
॥೭೪॥
ಸಂಜಯ ಉವಾಚ-ಸಂಜಯ ಹೇಳಿದನು:
ಇತಿ ಅಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
ಸಂವಾದಮ್ ಇಮಮ್ ಅಶ್ರೌಷಮ್ ಅದ್ಭುತಂ ರೋಮಹರ್ಷಣಮ್ – ಹೀಗೆ
ಮಹಾತ್ಮರಾದ ವಾಸುದೇವ ಮತ್ತು ಪಾರ್ಥರ ಅಚ್ಚರಿಯ ನವಿರೇಳಿಸುವ ಈ ಮಾತುಕತೆಯನ್ನು ನಾನು
ಕೇಳಿಸಿಕೊಂಡೆ.
ಸಂಜಯ ಕೃಷ್ಣಾರ್ಜುನರ ಈ ಅಪೂರ್ವ ಸಂವಾದವನ್ನು
ಸಾಕ್ಷಾತ್ ನೋಡಿ ವಿಸ್ಮಯಗೊಂಡ. ಆತ ಹೇಳುತ್ತಾನೆ: ನನ್ನ ಕಣ್ಮುಂದೆ ನಡೆದ
ವಾಸುದೇವ ಮತ್ತು ಅರ್ಜುನರ ಈ ಸಂವಾದವನ್ನು ನಾನು ಕೇಳಿಸಿಕೊಂಡೆ. ಇದು ನನ್ನ ಭಾಗ್ಯ. ನನಗಾದ
ಅನುಭವವನ್ನು ಶಬ್ದಗಳಿಂದ ವರ್ಣಿಸಲಾಗದು. ಇದೊಂದು ಅದ್ಭುತ. ಈ ಸಂವಾದವನ್ನು ಕೇಳಿ ಆನಂದದಿಂದ
ಮೈನವಿರೆದ್ದಿದೆ. ಆನಂದದ ಪುಳಕ ನನ್ನನ್ನು ಆವರಿಸಿಕೊಂಡು ಬಿಟ್ಟಿದೆ.
ವ್ಯಾಸಪ್ರಸಾದಾಚ್ಛ್ರುತವಾನೇತದ್ ಗುಹ್ಯಮಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ
ಸ್ವಯಮ್ ॥೭೫॥
ವ್ಯಾಸಪ್ರಸಾದಾತ್ ಶ್ರುತವಾನ್ ಏತತ್ ಗುಹ್ಯಮ್
ಅಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ
ಸ್ವಯಮ್ –
ವ್ಯಾಸರ ಕರುಣೆಯಿಂದ ನಾನು ಯೋಗದ ದಾರಿಯನ್ನು, ಈ
ಹಿರಿಯ ಗುಟ್ಟನ್ನು ಎಲ್ಲಾ ಯೋಗಮಾರ್ಗಗಳ ಒಡೆಯನಾದ ಕೃಷ್ಣನ ಬಾಯಿಯಿಂದಲೇ ನೇರವಾಗಿ
ಕೇಳಿಸಿಕೊಂಡೆ.
ಪರಮ ಪೂಜ್ಯ ಗುರುಗಳಾದ ವ್ಯಾಸರ ಅನುಗ್ರಹದಿಂದ ನಾನು
ಈ ಅದ್ಭುತ ಭಾಗ್ಯವನ್ನು ಪಡೆದೆ. ಬೇಕು ಎಂದರೆ ಸಿಗದ ಪ್ರಪಂಚದ ಅತ್ಯಂತ ರಹಸ್ಯಗಳ ರಹಸ್ಯ ನನಗೂ
ತಿಳಿಯಿತು. ಇಡೀ ಜಗತ್ತಿನ ಎಲ್ಲ ಶಕ್ತಿಗಳ ಒಂದು ಸಮಷ್ಟಿರೂಪವಾದ ಯೋಗೇಶ್ವರ ಕೃಷ್ಣನಿಂದ
ಅಧ್ಯಾತ್ಮದ ಸಾರ ಸರ್ವಸ್ವವನ್ನು ಸಾಕ್ಷಾತ್ ಕೇಳಿಸಿಕೊಂಡೆ.
ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।
ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ
॥೭೬॥
ರಾಜನ್ ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮ್ ಇಮಮ್
ಅದ್ಭುತಮ್
।
ಕೇಶವ ಅರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುಃಮಹುಃ – ದೊರೆಯೆ,
ಕೇಶವಾರ್ಜುನರ ಅಚ್ಚರಿಯ ಈ ಮೆಚ್ಚಿನ ಮಾತುಕತೆಯನ್ನು ನೆನೆಯುತ್ತ ನೆನೆಯುತ್ತ
ಮತ್ತೆ ಮತ್ತೆ ನವಿರುಗೊಳ್ಳುತ್ತಿದ್ದೇನೆ.
ಓ ದೊರೆಯೆ(ಧೃತರಾಷ್ಟ್ರನನ್ನು ಕುರಿತು), ಈ ಅದ್ಭುತ
ಸಂವಾದವನ್ನು ನೆನೆ-ನೆನೆದು ವಿಸ್ಮಯ, ಆನಂದ, ರೋಮಾಂಚನ,
ಆಶ್ಚರ್ಯ. ಇಂಥದ್ದು ಹಿಂದೆ ಆಗಿಲ್ಲ ಮುಂದೆ ಆಗಲಿಕ್ಕಿಲ್ಲ. ಇಡೀ ವಿಶ್ವವನ್ನು
ನಿಯಂತ್ರಿಸುವ, ಸಮಸ್ತ ದೇವಾಧಿದೇವತೆಗಳನ್ನು ನಿಯಂತ್ರಿಸುವ ಶಕ್ತಿ-
ಇಲ್ಲಿ ಅರ್ಜುನನ ಸಾರಥಿ ರೂಪದಲ್ಲಿ ನಿಂತು ನುಡಿದ ಈ ಅದ್ಭುತ ಸಂದೇಶವನ್ನು- ಹಿಂದೆ ಯಾರು
ಕೇಳಿದ್ದೂ ಇಲ್ಲ, ಅನುಭವಿಸಿದ್ದೂ ಇಲ್ಲ. ಇದನ್ನು ನೆನಪಿಸಿಕೊಂಡು
ಮತ್ತೆ ಮತ್ತೆ ಪುಳಕಗೊಳ್ಳುತ್ತಿದ್ದೇನೆ.
ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ
ಹರೇಃ ।
ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ
ಪುನಃಪುನಃ ॥೭೭॥
ತತ್ ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮ್
ಅತ್ಯದ್ಭುತಂ ಹರೇಃ ।
ವಿಸ್ಮಯಃ ಮೇ ಮಹಾನ್ ರಾಜನ್ ಹೃಷ್ಯಾಮಿ ಚ
ಪುನಃಪುನಃ -- ದೊರೆಯೆ,
ಹರಿಯ ಅಚ್ಚರಿಯ ರೂಪವನ್ನು ನೆನೆಯುತ್ತ ನನಗೆ ಬೆರಗೋ ಬೆರಗು. ಮೈಯಲ್ಲ ಮರಳಿಮರಳಿ
ನವಿರು.
ಕೃಷ್ಣನ ವಿಶ್ವರೂಪ ದರ್ಶನ ಪಡೆದಿದ್ದ ಸಂಜಯ
ಮುಂದುವರಿದು ಹೇಳುತ್ತಾನೆ: ಓ ದೊರೆಯೆ, ನಮ್ಮ ಸಮಸ್ತ ಸಮಸ್ಯೆಗಳನ್ನು
ಪರಿಹರಿಸುವ(ಹರಿಃ) ಆ ಪರಮಾತ್ಮ, ಇಂದು ನಮಗೆ ಸಮಸ್ತ
ಸಮಸ್ಯೆಯನ್ನೂ ಪರಿಹರಿಸುವ ಈ ಅದ್ಭುತ ಸಂದೇಶವನ್ನು ಕೊಟ್ಟ. ನಾನು ಕೃಷ್ಣನನ್ನು ಕಂಡೆ; ಅವನ ಅದ್ಭುತ ವಿಶ್ವರೂಪವನ್ನು ಕಂಡೆ; ಅವನ ಮಾತನ್ನು ಕೇಳಿದೆ;
ಇದು ನನ್ನ ಮಾತಿಗೆ ಮೀರಿದ ಸಂತೋಷ. ನಾನು ಖುಷಿಯಿಂದ ತುಂಬಿಹೋಗಿದ್ದೇನೆ.
ಹೀಗೆ ತನ್ನ ಆನಂದವನ್ನು ಹಂಚಿಕೊಂಡ ಸಂಜಯ ಮುಂದೆ
ತನಗನಿಸಿದ ಫಲಶ್ರುತಿಯನ್ನು ಹೇಳುತ್ತಾನೆ.
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ
॥೭೮॥
ಯತ್ರ ಯೋಗೇಶ್ವರಃ ಕೃಷ್ಣಃ ಯತ್ರ ಪಾರ್ಥಃ
ಪಾರ್ಥೋ ಧನುರ್ಧರಃ ।
ತತ್ರ ಶ್ರೀಃ ವಿಜಯಃ ಭೂತಿಃ ಧ್ರುವಾ ನೀತಿಃ ಮತಿಃ ಮಮ
–ಯೋಗಮಾರ್ಗಗಳೊಡೆಯನಾದ ಕೃಷ್ಣನಿರುವಡೆ, ಬಿಲ್ಗಾರನಾದ
ಪಾರ್ಥನಿರುವೆಡೆ(ನರ-ನಾರಾಯಣನಿರುವೆಡೆ) ಸಿರಿ, ಗೆಲುವು, ಉನ್ನತಿಕೆ ಮತ್ತು ಸ್ಥಿರವಾದ ನೀತಿ ನೆಲೆಸಿರುತ್ತದೆ ಎಂದು ನನ್ನ ನಿರ್ಧಾರ.
ಎಲ್ಲಿಎಲ್ಲಿ ನರ-ನಾರಾಯಣರಿರುತ್ತಾರೋ ಅಲ್ಲಿ ಎಲ್ಲವೂ
ಇದೆ. ಎಲ್ಲ ಬಗೆಯ ಸಂಪತ್ತು, ಗೆಲುವು, ಅಂತರಂಗ ಸಾಧನೆ,
ಬಾಹ್ಯ ಉನ್ನತಿ ಎಲ್ಲವೂ ನೆಲೆಸಿರುತ್ತದೆ. ಇದು ನನ್ನ ನಿರ್ಧಾರ ಎನ್ನುತ್ತಾನೆ
ಸಂಜಯ.
ಭಗವದ್ಗೀತೆ ನಮಗೆ ಪ್ರಾಪಂಚಿಕ ಸುಖದ ಸೆಳೆತವನ್ನು
ಮೀರಿ ಎತ್ತರಕ್ಕೇರಲು ಬೇಕಾದ ಅಧ್ಯಾತ್ಮ ಜ್ಞಾನ ಮತ್ತು ವೇದ ವಿದ್ಯೆಯನ್ನು ಕೊಡುವ ಅಪೂರ್ವ
ಗ್ರಂಥ. ಗೀತೆ ಮನಸ್ಸಿನಲ್ಲಿ ನಿಂತರೆ ಸುಳ್ಳು, ಮೋಸ- ಸಾಧ್ಯವಿಲ್ಲ. ಎಲ್ಲಿ
ಗೀತೆಯ ಅಧ್ಯಯನವಿದೆ ಅಲ್ಲಿ ಪ್ರಾಮಾಣಿಕತೆ ಇದೆ. ಗೀತೆಯನ್ನು ಓದಿ, ಗೀತೆಯನ್ನು ಮುಟ್ಟಿ ನಾವು ಸುಳ್ಳು ಹೇಳಿದರೆ, ಅಪ್ರಾಮಾಣಿಕವಾಗಿ
ಬದುಕಿದರೆ ಅದು ಆ ಗೀತಾಚಾರ್ಯನಿಗೆ ನಾವು ಮಾಡುವ ದ್ರೋಹ.
ಎಲ್ಲಿ ಗೀತೆಯ ಜ್ಞಾನವಿದೆ ಅಲ್ಲಿ ಗೆಲುವಿದೆ, ಉನ್ನತಿ ಇದೆ, ನೀತಿ ಇದೆ,ಸಮಷ್ಟಿಯೂ ಇದೆ- ಎನ್ನುವಲ್ಲಿಗೆ ಭಗವದ್ಗೀತೆಯ ಅತ್ಯದ್ಭುತ ಸಂದೇಶ ಕೊನೆಗೊಂಡಿತು.
ಎಲ್ಲಿ ಗೀತೆಯ ಜ್ಞಾನವಿದೆ ಅಲ್ಲಿ ಗೆಲುವಿದೆ, ಉನ್ನತಿ ಇದೆ, ನೀತಿ ಇದೆ,ಸಮಷ್ಟಿಯೂ ಇದೆ- ಎನ್ನುವಲ್ಲಿಗೆ ಭಗವದ್ಗೀತೆಯ ಅತ್ಯದ್ಭುತ ಸಂದೇಶ ಕೊನೆಗೊಂಡಿತು.
ಇತಿ
ಅಷ್ಟಾದಶೋಧ್ಯಾಯಃ
ಹದಿನೆಂಟನೆಯ ಅಧ್ಯಾಯ ಮುಗಿಯಿತು
|| ಸರ್ವೇ ಜನಾಃ ಸುಖಿನೋ ಭವಂತು ||
|| ಶ್ರೀ ಕೃಷ್ಣಾರ್ಪಣಮಸ್ತು ||
ಕೃತಜ್ಞತೆಗಳು : bhagavadgitakannada.blogspot.in ಮತ್ತು nammakannadanadu.com
1 ಕಾಮೆಂಟ್:
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ