ಭಗವದ್ಗೀತೆ ಅಧ್ಯಾಯ-13 (ಶ್ಲೋಕ 1 ರಿಂದ 20)



ಭಗವದ್ಗೀತೆ  ಅಧ್ಯಾಯ-13 (ಶ್ಲೋಕ 1 ರಿಂದ 20)
·  ಶ್ಲೋಕ - 01
ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ ಅಧ್ಯಾಯ. ಈ ಹಿಂದಿನ ಹನ್ನೆರಡು ಅಧ್ಯಾಯಗಳಲ್ಲಿ ಏನು ಹೇಳಲಾಗಿದೆ ಅವೆಲ್ಲವನ್ನು ಸಂಗ್ರಹ ಮಾಡಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆದ್ದರಿಂದ ಹಿಂದಿನ ಎರಡು ಷಟ್ಕಗಳಲ್ಲಿ ಕಂಡ ವಿಷಯಗಳ ಪೂರ್ಣ ವಿಶ್ಲೇಷಣೆ ಈ ಅಧ್ಯಾಯ. ಜಡಪ್ರಪಂಚ, ಅದರಲ್ಲಿ ಪ್ರಕೃತಿಯಲ್ಲಿ ಬದ್ಧನಾಗಿ, ಪ್ರಕೃತಿಯಿಂದ ಪಾರಾಗಲು ಬಯಸುವ ಜೀವ. ಪಾರಾಗುವುದಕ್ಕೊಸ್ಕರ ಜ್ಞಾನದ ಅನುಸಂಧಾನ ಮತ್ತು ಸಾಧನೆ- ಈ ಎಲ್ಲಾ ವಿಷಯಗಳನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ವಿಕ್ಷಿಪ್ತವಾಗಿ ನೋಡಿದ್ದೇವೆ. ಅದೆಲ್ಲವುದರ ಒಂದು ಸಮಷ್ಠಿ ಸಂಗ್ರಹ(ಸರ್ವಾರ್ತ ಸಂಕ್ಷೇಪಃ) ಈ ಅಧ್ಯಾಯ. ಈ ಅಧ್ಯಾಯ ಗೀತೆಯಲ್ಲಿ ಅತ್ಯಂತ ಗ್ರಾಹ್ಯವಾದ ಅಧ್ಯಾಯ.
ಇಲ್ಲಿ ಪ್ರಾರಂಭದಲ್ಲಿ ಒಂದು ಶ್ಲೋಕವಿದೆ. ಈ ಅಧ್ಯಾಯದಲ್ಲಿ ಮುಂದೆ ಏನು ವಿವರಣೆ ಬರುತ್ತದೆ ಅದನ್ನು ತಾನು ತಿಳಿಯಬೇಕೆಂದು ಅರ್ಜುನ ಕೃಷ್ಣನನ್ನು ಕೇಳುವ ಶ್ಲೋಕ. ಈ ಶ್ಲೋಕ ಹೀಗಿದೆ:
ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ |
ಏತದ್ ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ||
ಅರ್ಥಾತ್- ಕೇಶವ, ನಾನಿದನ್ನು ತಿಳಿಯಬಯಸುತ್ತೇನೆ: ಪ್ರಕೃತಿಯನ್ನು, ಪುರುಷನನ್ನು, ಕ್ಷೇತ್ರವನ್ನು, ಕ್ಷೇತ್ರಜ್ಞನನ್ನು, ಜ್ಞಾನವನ್ನು ಮತ್ತು ಜ್ಞೇಯವನ್ನು”.
ವಾಸ್ತವವಾಗಿ ಈ ಶ್ಲೋಕ ಭಗವದ್ಗೀತೆಯ ಶ್ಲೋಕವಲ್ಲ. ಪ್ರಾಚೀನ ಭಾಷ್ಯಕಾರರು ಯಾರೂ ಈ ಶ್ಲೋಕವನ್ನು ಗೀತೆಯ ಶ್ಲೋಕವೆಂದು ಪರಿಗಣಿಸಿಲ್ಲ. ಬಹಳ ಮಂದಿಯ ಅಭಿಪ್ರಾಯದಂತೆ ಇದು ಪ್ರಕ್ಷಿಪ್ತಶ್ಲೋಕ. ಗೀತೆಯಲ್ಲಿ ಒಟ್ಟು ಏಳುನೂರು ಶ್ಲೋಕಗಳಿವೆ. ಅದಕ್ಕಾಗಿ ಗೀತೆಯನ್ನುಸಪ್ತಶತಿಎಂದು ಕರೆಯುತ್ತಾರೆ. [ಇದಕ್ಕಾಗಿ ವಾದಿರಾಜರು ತಮ್ಮ ಯುಕ್ತಿಮಲ್ಲಿಕಾದಲ್ಲಿ ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯನ್ನು ರಚಿಸಿದ ವೇದವ್ಯಾಸರನ್ನು ಸೂತ್ರಸಪ್ತಶತೀಪತೇಎಂದು ಸಂಬೊಧಿಸಿದ್ದಾರೆ]. ಇಂಥಹ ಏಳುನೂರು ಶ್ಲೋಕಗಳಿರುವ ಭಗವದ್ಗೀತೆಗೆ ಈ ಮೇಲಿನ ಶ್ಲೋಕವನ್ನು ಸೇರಿಸಿದರೆ ಒಟ್ಟು ಏಳುನೂರ ಒಂದು ಶ್ಲೋಕವಾಗುತ್ತದೆ. ಇನ್ನು ಈ ಶ್ಲೋಕದಲ್ಲಿ ಕೇಳಲಾದ ಪ್ರಶ್ನೆಗೆ ಸಂಬಂಧಪಟ್ಟಂತೆ ಹಿಂದಿನ ಅಧ್ಯಾಯದ ಕೊನೆಯಲ್ಲಿ ಎಲ್ಲೂ ಕೃಷ್ಣ ಉಲ್ಲೇಖ ಮಾಡಿಲ್ಲ. ಈ ಕಾರಣದಿಂದ ಇಲ್ಲಿ ಅರ್ಜುನ ಈ ರೀತಿ ಪ್ರಶ್ನೆ ಮಾಡುವ ಸಾಧ್ಯತೆ ಇಲ್ಲ. ಆದ್ದರಿಂದ ಈ ಶ್ಲೋಕ ಪ್ರಕ್ಷಿಪ್ತಶ್ಲೋಕ. ಗೀತೆಯ ಏಳುನೂರು ಶ್ಲೋಕಗಳಲ್ಲಿ ಇದು ಸೇರಿಲ್ಲ.
ನೇರವಾಗಿ ಕೃಷ್ಣ ಅರ್ಜುನನಿಗೆ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎನ್ನುವುದರ ಶಾಸ್ತ್ರೀಯ ಅರ್ಥವನ್ನು ವಿವರಿಸುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.
ಭಗವಾನುವಾಚ ।
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ॥೧॥
ಭಗವಾನ್ ಉವಾಚ-ಭಗವಂತ ಹೇಳಿದನು :
ಇದಮ್ ಶರೀರಮ್ ಕೌಂತೇಯ ಕ್ಷೇತ್ರಮ್ ಇತಿ ಅಭಿಧೀಯತೇ ।
ಏತತ್ ಯಃ ವೇತ್ತಿ ತಮ್ ಪ್ರಾಹುಃ ಕ್ಷೇತ್ರಜ್ಞಃ ಇತಿ ತತ್ ವಿದಃ ಭಗವಂತನ ಶರೀರದಂತಿರುವ ಈ ಚರಾಚರ ವಿಶ್ವ ಕ್ಷೇತ್ರಎನಿಸಿದೆ. ಇದನ್ನು ಅರಿತವನನ್ನು ಬಲ್ಲವರುಕ್ಷೇತ್ರಜ್ಞಎನ್ನುತ್ತಾರೆ.
ಕ್ಷೇತ್ರಅನ್ನುವ ಪದಕ್ಕೆ ಒಂದು ನಿಶ್ಚಿತ ಅರ್ಥವಿಲ್ಲ. ಈ ಶ್ಲೋಕದಲ್ಲಿ ಕ್ಷೇತ್ರಂ ಅನ್ನುವ ಪದವನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎನ್ನುವ ಸುಳಿವನ್ನು ಕೃಷ್ಣ ಕೊಟ್ಟಿದ್ದಾನೆ. ಕ್ಷೇತ್ರ ಎಂದರೆ ಇದಂ ಶರೀರಂಎಂದಿದ್ದಾನೆ ಕೃಷ್ಣ. ಆದ್ದರಿಂದ ಇಲ್ಲಿ ಕ್ಷೇತ್ರ ಎಂದರೆ ಜೀವ ವಾಸಮಾಡುವ ನೆಲೆಮನೆ ಪಿಂಡಾಂಡದಿಂದ- ಬ್ರಹ್ಮಾಂಡದ ತನಕ ಎಲ್ಲವೂ ಹೌದು. ಈ ಬ್ರಹ್ಮಾಂಡಕ್ಕೆ 'ಕ್ಷೇತ್ರ ಮತ್ತು ಶರೀರ' ಅನ್ನುವುದು ಅನ್ವರ್ಥನಾಮ(epithet). ಇಂಥಹ ಕ್ಷೇತ್ರವನ್ನು ಯಾರು ಸಮಗ್ರವಾಗಿ ತಿಳಿದಿದ್ದಾನೋ ಅವನು 'ಕ್ಷೇತ್ರಜ್ಞ'. ಯಾರೀತ? ಮುಂದಿನ ಶ್ಲೋಕದಲ್ಲಿ ನೋಡೋಣ.
·  ಶ್ಲೋಕ - 02
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ ।
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ ತಜ್ ಜ್ಞಾನಂ ಮತಂ ಮಮ ೨॥
ಕ್ಷೇತ್ರಜ್ಞಮ್ ಚ ಅಪಿ ಮಾಮ್ ವಿದ್ಧಿ ಸರ್ವ ಕ್ಷೇತ್ರೇಷು ಭಾರತ ।
ಕ್ಷೇತ್ರ ಕ್ಷೇತ್ರಜ್ಞಯೋ ಜ್ಞಾನಮ್ ಯತ್ ತತ್ ಜ್ಞಾನಮ್ ಮತಮ್ ಮಮ ಓ ಭಾರತ, ಎಲ್ಲ ಕ್ಷೇತ್ರಗಳಲ್ಲಿ ನೆಲೆಸಿರುವ ನನ್ನನ್ನೆ ಕ್ಷೇತ್ರಜ್ಞನೆಂದು ತಿಳಿ. ಕ್ಷೇತ್ರ ಮತ್ತು ಕ್ಷೇತ್ರಜ್ಞರ ಅರಿವೆ ನಿಜವಾದ ಜ್ಞಾನಎನ್ನುವುದು ನನ್ನ ಅಭಿಪ್ರಾಯ.
ಒಳಗೂ ಹೊರಗೂ ತುಂಬಿರುವ, ಎಲ್ಲ ಕ್ಷೇತ್ರದಲ್ಲಿರುವ ಭಗವಂತನೇ ಕ್ಷೇತ್ರಜ್ಞ. ಜೀವ ಕೇವಲ ಕ್ಷೇತ್ರಸ್ಥ. ನಿಜವಾದ ಜ್ಞಾನವೆಂದರೆ ವಿಶ್ವದ ಅರಿವು; ವಿಶ್ವದಲ್ಲಿ ತುಂಬಿರುವ ಭಗವಂತನ ಅರಿವು. ಈ ವಿಶ್ವದೊಳಗೆ ನಾವು ಹೇಗಿದ್ದೇವೆ? ಈ ವಿಶ್ವ ನಮಗೆ ಹೇಗೆ ಬಂಧಕವಾಗಿದೆ? ಈ ಬಂಧನವನ್ನು ಕಳಚಿಕೊಂಡು ಆ ವಿಶ್ವಾತ್ಮ ಭಗವಂತನನ್ನು ನಾವು ಸೇರುವುದು ಹೇಗೆ? ಈ ಅರಿವೇ ಜ್ಞಾನ. ಹಿಂದಿನ ಅಧ್ಯಾಯದಲ್ಲಿ ಹೇಳಿದಂತೆ ನಾವು ಹದಿನೈದು ಬೇಲಿಗಳ ಸೆರೆಮನೆಯಲ್ಲಿದ್ದೇವೆ. ಆದರೆ ಇದು ಶಿಕ್ಷೆಯಲ್ಲ, ಶಿಕ್ಷಣ. ಈ ಬಂಧನದಿಂದ ಪಾರಾಗಬೇಕಾದರೆ ಭವಮೋಚಕನಾದ ಕ್ಷೇತ್ರಜ್ಞನನ್ನು ತಿಳಿಯಬೇಕು. ಈ ಎಚ್ಚರವೇ ನಿಜವಾದ ಜ್ಞಾನ.
·  ಶ್ಲೋಕ - 03
ತತ್ ಕ್ಷೇತ್ರಂ ಯಚ್ಚ ಯಾದೃಕ್ ಚ ಯದ್ ವಿಕಾರಿ ಯತಶ್ಚ ಯತ್
ಸ ಚ ಯೋ ಯತ್ ಪ್ರಭಾವಶ್ಚ ತತ್ ಸಮಾಸೇನ ಮೇ ಶೃಣು ॥೩॥
ತತ್ ಕ್ಷೇತ್ರಮ್ ಯತ್ ಚ ಯಾದೃಕ್ ಚ ಯತ್ ವಿಕಾರಿ ಯತಃ ಚ ಯತ್
ಸಃ ಚ ಯಃ ಯತ್ ಪ್ರಭಾವಃ ಚ ತತ್ ಸಮಾಸೇನ ಮೇ ಶೃಣು ಆ ಕ್ಷೇತ್ರವೆಂದರೇನು? ಅದು ಎಂಥದು? ಅದರ ವಿಕಾರಗಳೇನು? ಅದರ ಪ್ರೇರಕ ಶಕ್ತಿ ಯಾರು? ಅವನು ಎಂಥವನು ? ಅವನ ಹಿರಿಮೆಗಳೇನು? ಅದನ್ನು ಅಡಕವಾಗಿ ನನ್ನಿಂದ ಕೇಳು.
ಮೊದಲು ಕ್ಷೇತ್ರವೆಂದರೇನು? ಬ್ರಹ್ಮಾಂಡ ಮತ್ತು ಪಿಂಡಾಂಡ ಹೇಗೆ ಮತ್ತು ಯಾವುದರಿಂದ ನಿರ್ಮಾಣವಾಗಿದೆ? ಅದರ ಗುಣಧರ್ಮವೇನು? ಅದು ಯಾವ ಯಾವ ರೀತಿ ರೂಪಾಂತರಗೊಳ್ಳುತ್ತದೆ? ಬದಲಾವಣೆಗಳು ಹೇಗಾಗುತ್ತದೆ? ಯಾರಿಂದ ಆಗುತ್ತದೆ? ಇದೆಲ್ಲವನ್ನು ಸೂತ್ರರೂಪವಾಗಿ ಸಂಕ್ಷಿಪ್ತವಾಗಿ, ಚುಟುಕಾಗಿ ನನ್ನಿಂದ ಕೇಳು.
·  ಶ್ಲೋಕ - 04
ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ ।
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ॥೪॥
ಋಷಿಭಿಃ ಬಹುಧಾ ಗೀತಮ್ ಛಂದೋಭಿಃ ವಿವಿಧೈಃ ಪೃಥಕ್ ।
ಬ್ರಹ್ಮಸೂತ್ರಪದೈಃ ಚ ಏವ ಹೇತುಮದ್ಭಿಃ ವಿನಿಶ್ಚಿತೈಃ ಬಗೆಬಗೆಯ ಬೇರೆಬೇರೆ ಮಂತ್ರಗಳಿಂದ ಋಷಿಗಳು ಅದನ್ನು ಬಗೆಬಗೆಯಿಂದ ಹಾಡಿದ್ದಾರೆ. ಯುಕ್ತಿಯಿಂದ ನಿರ್ಣಯಿಸುವ ವೇದಾಂತ ಸೂತ್ರದ ನುಡಿಗಳು ಕೂಡ.
ಜ್ಞಾನಿಗಳು ಕೂಡ ಈ ವಿಚಾರವನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಅದು ಅವರ ಅನುಭವಕ್ಕೆ ಸೀಮಿತವಾಗಿರುತ್ತದೆ. ಬ್ರಹ್ಮಸೂತ್ರದಲ್ಲಿ ಹೇಳಿರುವ ವಿಚಾರ ಸುಲಭವಾಗಿ ಅರ್ಥವಾಗದು. ಆದ್ದರಿಂದ ನಿಜವನ್ನು ಕ್ಷೇತ್ರಜ್ಞನಾದ ನಾನೆ ನೇರವಾಗಿ ಹೇಳುತ್ತೇನೆ ಕೇಳು.
·  ಶ್ಲೋಕ - 05 & 6
ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ ೫॥

ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ೬॥
ಮಹಾಭೂತಾನಿ[ಮಹಾನ್ ಭೂತಾನಿ]ಅಹಂಕಾರಃ ಬುದ್ಧಿಃ ಅವ್ಯಕ್ತ ಏವ ಚ।
ಇಂದ್ರಿಯಾಣಿ ದಷ ಏಕಮ್ ಚ ಪಂಚ ಚ ಇಂದ್ರಿಯ ಗೋಚರಾಃ
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಃ ಚೇತನಾ ಧೃತಿಃ
ಏತತ್ ಕ್ಷೇತ್ರಂ ಸಮಾಸೇನ ಸವಿಕಾರ ಉದಾಹೃತಮ್ -- ಮಣ್ಣು[ಪೃಥಿವಿ], ನೀರು[ವರುಣ], ಬೆಂಕಿ[ಅಗ್ನಿ], ಗಾಳಿ[ವಾಯುಪುತ್ರ ಮರೀಚಿ], ಬಾನು[ಅವಕಾಶ ದೇವತೆ, ವಿಘ್ನನಾಶ-ವಿನಾಯಕ-ಗಣಪತಿ]-ಎಂಬ ಐದು ಮಹಾಭೂತಗಳು. ಅಹಂಕಾರತತ್ವ [ಬ್ರಹ್ಮವಾಯು ಮತ್ತು ಶಿವ], ಬುದ್ಧಿತತ್ವ[ಪಾರ್ವತಿ], ಮೂಲಪ್ರಕೃತಿ[ಶ್ರೀ], ಕಿವಿ[ಚಂದ್ರ], ತೊಗಲು[ವಾಯುಪುತ್ರ ಮರುತ್], ಕಣ್ಣು[ಸೂರ್ಯ], ನಾಲಿಗೆ[ವರುಣ], ಮೂಗು[ಅಶ್ವಿಗಳು], ಬಾಯಿ[ಅಗ್ನಿ], ಕೈಗಳು[ವಾಯುಪುತ್ರರಿಬ್ಬರು], ಕಾಲುಗಳು[ಇಂದ್ರ ಪುತ್ರರಾದ ಯಜ್ಞ(ಜಯತ) ಮತ್ತು ಶಂಭು], ಪಾಯು[ಯಮ], ಉಪಸ್ಥ[ಲಿಂಗ ದೇವತೆ ಶಿವ-ಗಂಡಸರಲ್ಲಿ ; ಸ್ವಾಯಂಭುವಮನು-ಸ್ತ್ರೀಯರಲ್ಲಿ] ಹೀಗೆ ಹತ್ತು ಇಂದ್ರಿಯಗಳು. ಹನ್ನೊಂದನೆಯದು ಮನಸ್ತತ್ವ[ಇಂದ್ರ, ಕಾಮ ಮತ್ತು ಅನಿರುದ್ಧ] ಮತ್ತು ಐದು ಜ್ಞಾನೇಂದ್ರಿಯ ವಿಷಯಗಳು: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ[ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ]ಇವು ೨೪ ಅಡಕವಾಗಿ ಕ್ಷೇತ್ರಗಳು.
ಬಯಕೆ[ಶ್ರೀ ಮತ್ತು ಭಾರತಿ], ದ್ವೇಷ[ದ್ವಾಪರ-ಶಕುನಿ], ಸುಖ[ಮುಖ್ಯಪ್ರಾಣ-ವಾಯು-ಭೀಮ], ದುಃಖ[ಕಲಿ-ದುರ್ಯೋಧನ], ಸಮಷ್ಟಿಶರೀರ[ಶರೀರದಲ್ಲಿರುವ ಅಭಿಮಾನಿ ಜೀವ; ಸಮಸ್ತ ಅಭಿಮಾನಿ ದೇವತೆಗಳು], ನೆನಪಿನ ಹರಹು[ಶ್ರೀ], ಧೈರ್ಯ[ಸರಸ್ವತಿ ಮತ್ತು ಭಾರತಿ] ಇವು ಏಳು ವಿಶೇಷ ಕ್ರಿಯೆಗಳಾದ ವಿಕಾರಗಳು. ಹೀಗೆ ವಿಕಾರಗಳ ಜತೆ ಕ್ಷೇತ್ರವನ್ನು ಅಡಕವಾಗಿ ಹೇಳಿದ್ದಾಯಿತು.
ಈ ಎರಡು ಶ್ಲೋಕಗಳಲ್ಲಿ ಕೃಷ್ಣ ಕ್ಷೇತ್ರ ಮತ್ತು ಕ್ಷೇತ್ರದ ವಿಕಾರವನ್ನು ವಿವರಿಸಿದ್ದಾನೆ. ಕ್ಷೇತ್ರ ಎನ್ನುವ ಅಖಂಡ ಘಟಕದೊಳಗೆ ಇರುವ ಜಗತ್ತಿನ ಘಟಕಾಂಶಗಳನ್ನು ಕೃಷ್ಣ ಇಲ್ಲಿ ಸೂತ್ರ ರೂಪದಲ್ಲಿ ಅಡಕವಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ ಪಂಚಮಹಾಭೂತಗಳು. ಈ ಐದರಿಂದ ಈ ಪಿಂಡಾಂಡ ಮತ್ತು ಬ್ರಹ್ಮಾಂಡ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಬ್ರಹ್ಮಾಂಡವನ್ನು ಪ್ರ-ಪಂಚಎಂದು ಕರೆಯುತ್ತಾರೆ. ಈ ಪಂಚ ಮಹಾಭೂತಗಳೇ ಪ್ರಪಂಚದ ಮೂಲದ್ರವ್ಯ. ಪಿಂಡಾಂಡದಲ್ಲಿ ಈ ಪಂಚ ಮಹಾಭೂತಗಳನ್ನು ಅನ್ನಮಯ ಮತ್ತು ಪ್ರಾಣಮಯ ಎಂದು ಕರೆಯತ್ತಾರೆ. ಕಾಣುವ ಸ್ಥೂಲ ಶರೀರ ಪ್ರಥಿವಿ ಮತ್ತು ನೀರಿನ ಭಾಗದಿಂದಾಗಿದೆ. ಇಂಥಹ ಸ್ಥೂಲ ಶರೀರದೊಳಗೆ ಕಾಣದ ಪ್ರಾಣಮಯಕೊಶವಿದೆ. ದೇಹದ ಶಾಖ(ಬೆಂಕಿ), ಉಸಿರಾಟ(ಗಾಳಿ) ಮತ್ತು ಒಳಗೆ ರಕ್ತ-ಗಾಳಿ ಸಂಚಾರದ ಅವಕಾಶ(ಆಕಾಶ). ಇದರಿಂದಾಚೆಗೆ ಮನಸ್ಸು ಮತ್ತು ಬುದ್ಧಿಯನ್ನೂಳಗೊಂಡ ಮನೋಮಯಕೋಶ, ಅದರಿಂದಾಚೆಗೆ ವಿಜ್ಞಾನಮಯಕೋಶ-ಸ್ಮರಣಶಕ್ತಿ. ಆದ್ದರಿಂದ ಬುದ್ದಿಗೆ ಮೊದಲು ಅಹಂಕಾರ ಮತ್ತು ಚಿತ್ತ. ಇಲ್ಲಿ ಅಹಂಕಾರ ಅಂದರೆ ನನ್ನ ಅಸ್ತಿತ್ವದ ಅರಿವು(awareness of self)’. ಈ ಅಹಂಕಾರ ತತ್ವ ಪಿಂಡಾಂಡದಲ್ಲಿ ಚಿತ್ತ, ಬ್ರಹ್ಮಾಂಡದಲ್ಲಿ ಮಹತತ್ವ.
ವ್ಯಕ್ತವಾಗುವ ಈ ಪ್ರಪಂಚದ ಮೂಲ ಅವ್ಯಕ್ತ. ಸೃಷ್ಟಿಯ ಮೂಲಸ್ಥಿತಿ-ಪ್ರಳಯಸಾಗರ. ಅಂದರೆ ಪರಮಾಣುರೂಪದಲ್ಲಿ ಚದುರಿಕೊಂಡಿರುವ ಅವ್ಯಕ್ತ ಪ್ರಪಂಚ. ಇಂಥಹ ಪ್ರಪಂಚದಲ್ಲಿ ಚತುರ್ಮುಖ ಮಹಾತತ್ವವನ್ನು ಸೃಷ್ಟಿ ಮಾಡಿದ. ಪ್ರಳಯ ಸಾಗರದಲ್ಲಿ ತನ್ನ ಅಸ್ತಿತ್ವದ ಅರಿವಿಲ್ಲದೆ ಇದ್ದ ಜೀವಗಳಿಗೆ ನಾನುಎನ್ನುವ ಅರಿವು ಬರುವುದೇ ಮಹತತ್ವದ ಸೃಷ್ಟಿ. ಚಿತ್ತದ ವ್ಯಾಪ್ತಿ ಚೇತನ. ಇದು ನಮ್ಮ ನೆನಪಿನ ವಿಸ್ತಾರ.
ಈ ಶರೀರದಲ್ಲಿ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳಿವೆ ಮತ್ತು ಹನ್ನೊಂದನೇ ಇಂದ್ರಿಯವಾಗಿರುವುದು ಮನಸ್ಸು. ಕಿವಿಯಿಂದ ಶಬ್ದಗ್ರಹಣ, ಕಣ್ಣಿನಿಂದ ರೂಪ ಗ್ರಹಣ, ಮೂಗಿನಿಂದ ಗಂಧ ಗ್ರಹಣ, ನಾಲಿಗೆಯಿಂದ ರಸ ಗ್ರಹಣ, ತೊಗಲಿನಿಂದ ಗಾಳಿಯ ಗ್ರಹಣ. ಅದೇ ರೀತಿ ಬಾಯಿ ಮಾತನಾಡಲು, ಕೈ ಕೆಲಸ ಮಾಡಲು, ಕಾಲು ನಡೆಯಲು. ಈ ಎಂಟನ್ನು ಗ್ರಹ(Receiver)ಗಳೆನ್ನುತ್ತಾರೆ. ನಂತರ ಪಾಯು ಮತ್ತು ಉಪಸ್ಥ(ವಿಸರ್ಜನಾಂಗ ಮತ್ತು ಸಂತಾನವೃದ್ಧಿ)ಗಳು. ಈ ಎಲ್ಲವನ್ನು ಚಿಂತನೆಗೊಳಪಡಿಸುವ ಹನ್ನೊಂದನೆ ಇಂದ್ರಿಯ ಮನಸ್ಸು. ಇವೆಲ್ಲವೂ ಕ್ಷೇತ್ರದ ಘಟಕಾಂಶಗಳು. ಸಮಷ್ಟಿಯಾಗಿ ಇದು ಕ್ಷೇತ್ರ. [ಇಲ್ಲಿ ಹೇಳಿರುವ ಪ್ರತಿಯೊಂದು ಘಟಕದೊಂದಿಗೆ ಅದರ ಅಭಿಮಾನಿ ದೇವತೆಯರೂ ಸೇರಿದ್ದಾರೆ. ಅದನ್ನು ಮೇಲೆ ಸಂಕ್ಷಿಪ್ತವಾಗಿ ಹೇಳಲಾಗಿದೆ]
ಈ ಜಗತ್ತು ಸದಾ ಬದಲಾಗುತ್ತಿರುತ್ತದೆ. ಅದಕ್ಕಾಗಿ ಜಗತ್ತನ್ನು ಅಶ್ವತ್ಥ ಎಂತಲೂ ಕರೆಯುತ್ತಾರೆ. ಅಶ್ವ ನಿರಂತರ ಚಲನೆಯಲ್ಲಿರುವ ಪ್ರಾಣಿ. ಅದು ನಿಶ್ಚಲವಾಗಿ ಇರುವುದೇ ಇಲ್ಲ. ಈ ಪ್ರಪಂಚ ಕೂಡ ಹಾಗೆ ಸದಾ ಚಲನೆಯಲ್ಲಿರುವುದರಿಂದ-ಅದನ್ನು ಪ್ರಾಚೀನರು ಅಶ್ವತ್ಥ ಎಂದು ಕರೆದರು. ನಮ್ಮ ದೇಹ ಅನ್ನುವುದು ಭೌತಿಕ ವಿಕಾರ. ಅದರಲ್ಲಿ ಆಗತಕ್ಕಂತಹ ಮಾನಸಿಕ ಪ್ರಪಂಚದ ಎಲ್ಲ ತೊಳಲಾಟ ಮಾನಸಿಕ ವಿಕಾರ. ವಿಶೇಷವಾಗಿ ನಮ್ಮ ಇಚ್ಛೆ(ಬಯಕೆ), (ಅ)ದ್ವೇಷ, ಸುಖ-ದುಃಖ, ನಮ್ಮ ನೆನಪಿನ ಹರವು (ಚೇತನ), (ಅ)ಧೃತಿ. ಇದು ಕೃಷ್ಣನ ಕ್ಷೇತ್ರ ಮತ್ತು ಅದರ ವಿಕಾರದ ಸೂತ್ರ ರೂಪದ ವಿವರಣೆ. ಈ ವಿಚಾರವನ್ನು ಎಷ್ಟು ವಿಸ್ತಾರವಾಗಿ ಬೇಕಾದರೂ ನಾವು ವಿಶ್ಲೇಷಿಸಬಹುದು. ಕೃಷ್ಣ ಇಲ್ಲಿ ಎಲ್ಲವನ್ನು ಅಡಕವಾಗಿ ವಿವರಿಸಿದ್ದಾನೆ.
·  ಶ್ಲೋಕ - 07
ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ ಸಂಹಿತೆ(code of conduct)ಗಳಿವೆ. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಇಪ್ಪತ್ತು ಗುಣ(discipline)ಗಳನ್ನು ಕೃಷ್ಣ ಮುಂದಿನ ಐದು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಈ ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎನ್ನುವ ಎಚ್ಚರವನ್ನು ಕೂಡ ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
ಅಮಾನಿತ್ವಮಡಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ೭॥
ಅಮಾನಿತ್ವಮ್ ಅಡಂಭಿತ್ವಮ್ ಅಹಿಂಸಾ ಕ್ಷಾಂತಿಃ ಆರ್ಜವಮ್ ।
ಆಚಾರ್ಯ ಉಪಾಸನಮ್ ಶೌಚಮ್ ಸ್ಥೈರ್ಯಮ್ ಆತ್ಮವಿನಿಗ್ರಹಃ -- ಬಿಂಕ ತೊರೆಯುವುದು, ಹಿರಿತನದ ಸೋಗು ಹಾಕದಿರುವುದು, ನೋಯಿಸದಿರುವುದು, ಸೈರಣೆ, ನೇರ ನಡೆ ನುಡಿ, ಗುರುಸೇವೆ, ಮೈಮನಗಳ ಮಡಿ, ಕದಲದ ತೀರ್ಪು, ಬಗೆಯ ಬಿಗಿತ,
(೧) ಅಮಾನಿತ್ವಮ್ : ಜ್ಞಾನ ಗಳಿಸುವುದಕ್ಕಾಗಿ ನಾವು ಮಾನ-ಸಮ್ಮಾನದ ಬಯಕೆಯನ್ನು ಬಿಡಬೇಕು. ತನಗೆ ಸನ್ಮಾನವಾಗಬೇಕು, ಪ್ರಶಸ್ತಿ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಎಂದೂ ಜ್ಞಾನ ಸಿದ್ಧಿಯಾಗದು. ಅದಕ್ಕಾಗಿ ಪ್ರಚಾರಪ್ರೀಯತೆಯನ್ನು ನಾವು ಮೊದಲು ಬಿಡಬೇಕು. ಎಲ್ಲ ಪ್ರಚಾರಗಳಿಗೆ ತಿಲಾಂಜಲಿ ಕೊಟ್ಟು ಜ್ಞಾನದ ಬೆನ್ನು ಹತ್ತು- ಆಗ ಜ್ಞಾನ ದಕ್ಕುತ್ತದೆ. ಯಾರಾದರೂ ನಿನ್ನನ್ನು ಮೆಚ್ಚಿಕೊಂಡರೆ ಅದು ಅವರ ದೊಡ್ಡಸ್ತಿಕೆ- ಅಲ್ಲಿ ನಮ್ರತೆಯಿಂದಿರು.
(೨) ಅಡಂಭಿತ್ವಮ್ : ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಜ್ಞಾನ ಮಾರ್ಗದಲ್ಲಿ ಎಂದೂ ಪ್ರಾಮಾಣಿಕತೆಯಿಂದ ಅತ್ತ ಸರಿಯಬೇಡ. ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗಬೇಡ.
(೩) ಅಹಿಂಸಾ : ಎಂದೂ ಇನ್ನೊಬ್ಬರನ್ನು ನೋಯಿಸಬೇಡ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದು ಅಹಿಂಸೆ.
(೪) ಕ್ಷಾಂತಿಃ : ಪ್ರತಿಕಾರ ಮಾಡದೇ ಇರುವುದು. ಒಬ್ಬರು ನಮಗೆ ಕೇಡು ಬಗೆದಾಗ ನಾವು ಅದಕ್ಕೆ ಪ್ರತಿಕೇಡು ಬಗೆಯಲು ಹೋಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಒಂದು ವ್ಯವಸ್ಥೆ ಇದೆ. ಲೌಕಿಕವಾಗಿ ನೋಡಿದರೆ, ಯಾರಾದರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ ಜವಾಬ್ಧಾರಿ ಆರಕ್ಷಕ ಮತ್ತು ನ್ಯಾಯಾಂಗ ವ್ಯವಸ್ಥೆಯದೆ ಹೊರತು ನಮ್ಮದಲ್ಲ. ಒಂದು ವೇಳೆ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಹೊರಟರೆ ಅದು ಕಾನೂನನ್ನು ಕೈಯಲ್ಲಿ ತೆಗೆದುಕೊಂಡ ಅಪರಾಧವಾಗುತ್ತದೆ. ಅದೇ ರೀತಿ ಭಗವಂತನ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಪ್ರತ್ಯೇಕ ವ್ಯವಸ್ಥೆ ಇದೆ. ಆದ್ದರಿಂದ ನಿನಗೆ ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಲಿ ಶಾಪ ಹಾಕುವುದಕ್ಕಾಗಲಿ ಹಕ್ಕಿಲ್ಲ.
ಈ ಮೇಲಿನ ಗುಣಗಳಿಗೆ ಉತ್ತಮ ದೃಷ್ಟಾಂತ ಜಡಭರತ ಮತ್ತು ರೈಕ್ವ ಮುನಿ. ಇವರ ಜೀವನ ಚರಿತ್ರೆಯನ್ನು ಓದಿದರೆ ಅವರು ಈ ಗುಣವನ್ನು ತಮ್ಮ ಜೀವನದಲ್ಲಿ ಹೇಗೆ ಪಾಲಿಸಿದ್ದರು ಎನ್ನುವುದು ತಿಳಿಯುತ್ತದೆ.
(೫) ಆರ್ಜವಮ್ : ಮುಖವಾಡವಿಲ್ಲದ ಬದುಕು. ನೇರ ನಡೆ ನುಡಿ. ಒಳಗೊಂದು ಹೊರಗೊಂದು ಇಲ್ಲದ ಪ್ರಾಮಾಣಿಕ ಬದುಕು(Sincerity-Straightforwardness).
(೬) ಆಚಾರ್ಯೋಪಾಸನಮ್ : ಆಚಾರ್ಯ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಚನ್ನಾಗಿ ತಿಳಿದು ಅದನ್ನು ಆಚರಣೆಗೆ ತರುವವನು. ತಾನು ಸತ್ಯವನ್ನು ಕಂಡು, ಸಮಾಜದ ಮುಂದೆ ಅದನ್ನು ನಡೆದು ತೋರಿಸುವವರು. ಅಂಥವರ ಸೇವೆ ಮಾಡು. ಜ್ಞಾನಿಗಳು ಸುಲಭವಾಗಿ ಸಿಗುವುದಿಲ್ಲ ಮತ್ತು ಅವರು ಸಾಮಾನ್ಯವಾಗಿ ಪರೀಕ್ಷಿಸದೆ ಜ್ಞಾನ ಧಾರೆ ಮಾಡುವುದಿಲ್ಲ. ಏನೇ ಆದರೂ ಜ್ಞಾನಿಗಳ ಬೆನ್ನುಬಿಡಬೇಡ. ನಿನ್ನಲ್ಲಿರುವ ಜ್ಞಾನ ತೃಷೆ ಗಾಢವಾಗಿದ್ದಲ್ಲಿ ಖಂಡಿತವಾಗಿ ಅವರು ಜ್ಞಾನ ಧಾರೆ ಮಾಡುತ್ತಾರೆ. ಜ್ಞಾನ ಬೇಕಿದ್ದರೆ ಜ್ಞಾನಿಗಳು ತೆರೆದುಕೊಳ್ಳುವ ತನಕ ಕಾಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಶ್ವೇತಕೇತು ಮತ್ತು ಪ್ರಶ್ನೋಪನಿಷತ್ತಿನಲ್ಲಿ ಬರುವ ಪಿಪ್ಪಲಾದರ ಕಥೆ.
(೭) ಶೌಚಮ್ : ಶೌಚ ಎಂದರೆ ಶುಚಿತ್ವ. ಈ ವಿಷಯವನ್ನು ಹಿಂದಿನ ಅಧ್ಯಾಯದಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದೇವೆ. ಕನ್ನಡದಲ್ಲಿ ಶೌಚಮ್ ಎಂದರೆ ಮಡಿ’. ನಾವು ಮಡಿ ಮಾಡುವುದನ್ನು ಬಿಟ್ಟು ಮಡಿಯಾಗುವುದನ್ನು ಕಲಿಯಬೇಕು. ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಯಾರನ್ನೂ ಮುಟ್ಟದೆ ಇದ್ದರೆ ಮಡಿಯಾಗಲು ಸಾಧ್ಯವಿಲ್ಲ. ಶುಚಿ ಎನ್ನುವುದು ಮೂಲಭೂತವಾಗಿ ಮನಸ್ಸಿಗೆ ಸಂಬಂಧಪಟ್ಟಿದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ಪ್ರಾಪಂಚಿಕ ವಿಚಾರವನ್ನು ಮರೆತು, ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು ಮಡಿ. ನಾವು ಕಾಯಾ-ವಾಚಾ-ಮನಸಾ ಮಡಿಯಾಗಬೇಕು. ನಮ್ಮಲ್ಲಿ ಕೆಟ್ಟ ಯೋಚನೆ ಬಂದರೆ, ಕೆಟ್ಟ ಮಾತು ಬಾಯಲ್ಲಿ ಬಂದರೆ- ಆಗ ನಾವು ಮೈಲಿಗೆ. ನಿಜವಾಗಿ ಕಾಯ-ವಾಚಾ-ಮನಸಾ ಮಡಿಯಾಗಿರುವವ ಮೈಲಿಗೆಯವರೊಂದಿಗಿದ್ದರೆ ಜೊತೆಗಿರುವವರೆಲ್ಲರೂ ಮಡಿಯಾಗಬಹುದು. ಇದನ್ನೇ ಹಿಂದೆಪಂಕ್ತಿಪಾವನಎಂದು ಕರೆಯುತ್ತಿದ್ದರು. ಪೂರ್ಣ ಮಡಿಯಾಗಿರುವವ ಯಾವ ಪಂಕ್ತಿಯಲ್ಲಿ ಕುಳಿತನೋ ಆ ಪಂಕ್ತಿ ಮಡಿ. ಶಾಸ್ತ್ರ ಜ್ಞಾನವಿಲ್ಲದ ಮಡಿ ಮಡಿಯಲ್ಲ. ದೇವರ ಸ್ಮರಣೆ ಮನಸ್ಸಿನಲ್ಲಿ, ದೇವರ ನಾಮ ಬಾಯಿಯಲ್ಲಿ ಇದ್ದಾಗ ನಾವು ಮಡಿ.
ಮನಸ್ಸನ್ನು ಶುದ್ಧ ಮಾಡುವುದಕ್ಕೋಸ್ಕರ ಆಚಮನ ಮತ್ತು ಪ್ರಾಣಯಾಮ. ಓ ಭಗವಂತ, ನಿನ್ನ ಕಾರುಣ್ಯಧಾರೆಯಿಂದ ನನ್ನ ಸಹಸ್ರಾರದಿಂದ ಅಮೃತವನ್ನು ಕೆಳಕ್ಕೆ ಇಳಿಸಿ, ನನ್ನ ಇಡೀ ಮೈ ಪಾವನವಾಗುವಂತೆ ಮಾಡು, ನನ್ನೊಳಗಿನ ಎಲ್ಲ ಪಾಪಗಳೂ ಕೊಳೆಗಳೂ ಸುಟ್ಟು ತೊಳೆದುಹೋಗಲಿಎನ್ನುವ ಅನುಸಂಧಾನದಿಂದ, ಧ್ಯಾನಪೂರ್ವಕ ಪಾಪಪುರುಷ ನಿರಸನ ಮಾಡಬೇಕು. ಇಲ್ಲಿ ನಮ್ಮ ತಲೆಯಿಂದ ಅಮೃತಧಾರೆ ಇಳಿದು ಬರುವುದನ್ನು ನಾವು ಅನುಭವಿಸಬೇಕು(Feel it). ಪ್ರಾಣಾಯಾಮದಿಂದ ನಮ್ಮೊಳಗಿನ ಎಲ್ಲ ಕೊಳೆ ಸುಟ್ಟು ಹೋಗುತ್ತದೆ. ನಮ್ಮ ಅಂಗಾಂಗದಲ್ಲಿ ಕೂತ ಭಗವಂತನ ಸ್ಮರಣೆಯೇ ಆಚಮನ. ಓ ನೀರೆ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದೇನೆ. ಆ ಭಗವಂತ ನನ್ನಲ್ಲಿ ಬಂದು ನೆಲೆಸುವಂತೆ ಮಾಡುಎಂದು ಪ್ರಾರ್ಥಿಸಿ ಪ್ರೋಕ್ಷಣೆಮಾಡಿಕೊಳ್ಳಬೇಕು. ಇದೆಲ್ಲವನ್ನು ನಾವು ತಿಳಿದು ಮಾಡಿದಾಗ ಮಾತ್ರ ಮಡಿಯಾಗುತ್ತೇವೆ. ದೇವರನ್ನು ನೆನೆಯುವುದೇ ಮಡಿ. ದೇವರನ್ನು ಮರೆಯುವುದೇ ಮೈಲಿಗೆ. ಪುಂಡರೀಕಾಕ್ಷನ ಸ್ಮರಣೆ ಇಲ್ಲದೆ, ಅಂತರಂಗ ಶುದ್ಧಿ ಅಸಾಧ್ಯ.
(೮) ಸ್ಥೈರ್ಯಮ್ : ಮನಸ್ಸಿನ ಸ್ಥಿರತೆ(Conviction)ಸ್ಥೈರ್ಯ. ನಮಗೆ ನಮ್ಮದೇ ಆದ ಸ್ವಂತ ನಿರ್ಧಾರ ಬೇಕು. ಯಾರೋ ಹೇಳಿದಂತೆ ನಾವು ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾ ಗೊಂದಲಕ್ಕೊಳಗಾಗಬಾರದು. ನಾವು ನಮ್ಮ ತಲೆಯಲ್ಲಿ ಚಿಂತಿಸಬಲ್ಲವರಾಗಬೇಕು. ನಮಗೆ ಯಾವುದಾದರೂ ಪ್ರಶ್ನೆ ಬಂದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಾಮರ್ಥ್ಯ ನಮ್ಮ ತಲೆಯಲ್ಲೇ ಇರುತ್ತದೆ. ಎಲ್ಲಿ ಪ್ರಶ್ನೆ ಇದೆಯೊ ಅಲ್ಲೇ ಉತ್ತರವೂ ಇರುತ್ತದೆ”. ಶಾಸ್ತ್ರವನ್ನು ಚನ್ನಾಗಿ ಅಧ್ಯಾಯನ ಮಾಡಿ ನೀನೇ ನಿನ್ನ ಸಮಸ್ಯೆಗೆ ಉತ್ತರ ಕಂಡುಕೊಂಡು ದೃಢವಾಗಿ ಕೆಲಸ ಮಾಡು. ಯಾರ ಯಾರೋ ಮಾತನ್ನು ಕೇಳಿ ಗೊಂದಲಗೊಳ್ಳದೆ ಸ್ಥೈರ್ಯವನ್ನು ಸಾಧಿಸು.
(೯) ಆತ್ಮವಿನಿಗ್ರಹಃ : ಇಂದ್ರಿಯ ನಿಯಂತ್ರಣ(Self Control). ನಮ್ಮ ಇಂದ್ರಿಯ ನಮ್ಮ ಹಿಡಿತದಲ್ಲಿರಬೇಕು. ಇಂದ್ರಿಯ ಹಿಡಿತಲ್ಲಿರಬೇಕಾದರೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮನಸ್ಸಿನ ಕೈಯಲ್ಲಿ ನೀನು ಮಂಗನಾಗಬೇಡ, ಮನಸ್ಸನ್ನು ನೀನು ನಿಯಂತ್ರಿಸು. ಇದಕ್ಕಾಗಿ ನಿನ್ನ ಮನಸ್ಸನ್ನು ದೇವರಲ್ಲಿ ನೆಲೆ ನಿಲ್ಲಿಸು. ಹೀಗೆ ಮನೋನಿಗ್ರಹದಿಂದ ಇಂದ್ರಿಯ ನಿಗ್ರಹ ಸಾಧಿಸು.
·  ಶ್ಲೋಕ - 08
ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್ ೮॥
ಇಂದ್ರಿಯ ಅರ್ಥೇಷು ವೈರಾಗ್ಯಮ್ ಅನಹಂಕಾರಃ ಏವ ಚ ।
ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷ ಅನುದರ್ಶನಮ್ -- ಇಂದ್ರಿಯ ವಿಷಯಗಳಲ್ಲಿ ಮೈಮರೆಯದಿರುವುದು, ಸೊಕ್ಕು ಇರದಿರುವುದು, ಹುಟ್ಟು-ಸಾವು-ಮುಪ್ಪು-ಬೇನೆಗಳಿಂದ ದುಗುಡತುಂಬಿದ ಬಾಳಿನ ದೋಷಗಳ ಎಚ್ಚರ,-
(೧೦) ಇಂದ್ರಿಯಾರ್ಥೇಷು ವೈರಾಗ್ಯ : ಇಂದ್ರಿಯಗಳನ್ನು ಹೊರಪ್ರಪಂಚದತ್ತ ಹರಿಯದಂತೆ ತಡೆದು ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು. ಇದನ್ನು ಶಮ-ಧಮ ಎನ್ನುತ್ತಾರೆ. ಇಂದ್ರಿಯಗಳು ಲೌಕಿಕ ವಿಚಾರದತ್ತ ಹರಿಯದಂತೆ ಮಾಡುವುದು ಧಮ ಮತ್ತು ಅದನ್ನು ಭಗವಂತನತ್ತ ಹರಿಯುವಂತೆ ಮಾಡುವುದು ಶಮ. ಭಗವಂತನ ಬಗ್ಗೆ ತಿಳಿದಾಗ ಇಂದ್ರಿಯ ಇನ್ಯಾವುದರ ಕಡೆಗೂ ಹರಿಯುವುದಿಲ್ಲ. ಪ್ರಾಪಂಚಿಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳು. ಉದಾಹರಣೆಗೆ ನಾಲಿಗೆ ಚಪಲ. ನಮ್ಮಲ್ಲಿ ಕೆಲವರು ಮನೆಯಲ್ಲಿ ಯಾವ ರೀತಿ ಅಡಿಗೆ ಮಾಡಿದರೂ ಅಲ್ಲಿ ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಇತ್ಯಾದಿಯಾಗಿ ತಗಾದೆ ಎತ್ತುತ್ತಾರೆ. ಈ ರೀತಿಯ ಚಪಲವನ್ನು ಬಿಟ್ಟುಬಿಡು. ಇಲ್ಲಿ ಬೇಕು ಬೇಡಗಳ ಆಯ್ಕೆ ಇಲ್ಲದೆ ಏನನ್ನು ಹಾಕಿದರೂ ಭಗವಂತನ ಪ್ರಸಾದ ಎಂದು ಸ್ವೀಕರಿಸುವುದನ್ನು ಕಲಿ. ಈ ರೀತಿ ಶಮ-ಧಮ ಸಾಧಿಸು.
(೧೧) ಅನಹಂಕಾರ : ಇದು ಎಲ್ಲ ಗುಣಗಳಿಗಿಂತ ಶ್ರೇಷ್ಠ ಗುಣ. ನಮ್ಮಲ್ಲಿ ಯಾವ ಗುಣವಿದ್ದರೂ ಅದು ನಮ್ಮ ಅಹಂಕಾರದ ಮುಂದೆ ವ್ಯರ್ಥ. ಅಹಂಕಾರ(Ego) ನಮ್ಮಲ್ಲಿನ ಎಲ್ಲ ಗುಣವನ್ನು ನಾಶ ಮಾಡುತ್ತದೆ. ಅಹಂಕಾರವಿದ್ದೆಡೆ ಉಳಿದ ಗುಣಗಳಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಕೃಷ್ಣ ಅದನ್ನು ಇಲ್ಲಿ ಏವ-ಚಎಂದು ಒತ್ತಿ ಹೇಳಿದ್ದಾನೆ. ನಾನು ವಿದ್ವಾಂಸ, ನಾನು ಅನುಷ್ಠಾನವಂತ, ನಾನು ಮಡಿಹೀಗೆ ನಮ್ಮನ್ನು ಅಹಂಕಾರ ಪ್ರತಿಯೊಂದು ವಿಚಾರದಲ್ಲೂ ಕಾಡುತ್ತದೆ. ಹೀಗೆ ನಾವು ಅಹಂಕಾರಪಟ್ಟರೆ ನಮ್ಮ ಅನುಷ್ಠಾನ-ಅನುಷ್ಠಾನವೇ ಆಗುವುದಿಲ್ಲ. ಎಲ್ಲಿ ಅಹಂಕಾರ ಕಾಡಿತೋ ಅಲ್ಲಿ ಸಾಧನೆ ವ್ಯರ್ಥವಾಗುತ್ತದೆ. ಎಲ್ಲಿ ಅಹಂಕಾರವಿದೆ ಅಲ್ಲಿ ದೇವರಿರುವುದಿಲ್ಲ-ಅಂದರೆ ಅಹಂಕಾರದಿಂದಾಗಿ ನಾವು ದೇವರಿಂದ ದೂರ ಸರಿಯುತ್ತೇವೆ. ಈ ಕಾರಣದಿಂದ ನಾನು ಮಾಡಿದೆ, ನನ್ನಿಂದಾಯ್ತುಎಂದು ಬೀಗುವುದನ್ನು ಬಿಡು. ಭಗವಂತ ನನ್ನ ಕೈಯಿಂದ ಮಾಡಿಸಿದ ಎಂದು ಆತನಿಗೆ ಕೃತಜ್ಞತೆಯನ್ನು ತೋರು.
(೧೨) ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷ ಅನುದರ್ಶನಮ್: ಜೀವನವನ್ನು ಒಳನೋಟದಿಂದ ನೋಡು. ಈ ಜೀವನ ಎನ್ನುವುದು ಹುಟ್ಟು ಸಾವು ಎನ್ನುವ ಎರಡು ದಡದ ನಡುವೆ ಹರಿಯುವ ಒಂದು ಪ್ರವಾಹ. ಈ ಪ್ರವಾಹದಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಎನ್ನುವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶವೇನು, ಭಗವಂತ ನಮ್ಮನ್ನು ಏಕೆ ಹುಟ್ಟಿಸಿದ, ಮಾನವ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಅನುದರ್ಶನ ಮಾಡು. ಆಹಾರ ನಿದ್ರಾ ಭಯ ಮೈಥುನ ಇಷ್ಟೇ ಜೀವನವಲ್ಲ. ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಆದ್ದರಿಂದ ಶಾಸ್ತ್ರವನ್ನು ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನವನ್ನು ಮಾಡಿಕೊ. ಕೇವಲ ಲೌಕಿಕ ಸುಖದ ನಿರೀಕ್ಷೆಯಲ್ಲಿ ಬದುಕುವುದನ್ನು ಬಿಟ್ಟು-ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನನ್ನು ಸೇರುವುದಕ್ಕಾಗಿ ಬದುಕು. ಎಲ್ಲ ಲೌಕಿಕ ಸುಖ, ಸಂಪತ್ತು ನಿಸ್ಸಾರ. ಇದರಿಂದಾಚೆಗಿನ ಸಾರವಾದ ಭಗವಂತನನ್ನು ತಿಳಿದು ಅದರತ್ತ ಹೆಜ್ಜೆಹಾಕು.
·  ಶ್ಲೋಕ - 09, 10 & 11
ಅಸಕ್ತಿರನ ಭಿಷ್ವಂಗಃ ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ॥೯॥

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ ॥೧೦॥

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋSನ್ಯಥಾ ॥೧೧॥
ಅಸಕ್ತಿಃ ಅನಭಿಷ್ವಂಗಃ ಪುತ್ರ ದಾರ ಗೃಹ ಆದಿಷು ।
ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟ ಅನಿಷ್ಟ ಉಪಪತ್ತಿಷು ॥
ಮಯಿ ಚ ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ ।
ವಿವಿಕ್ತ ದೇಶ ಸೇವಿತ್ವಮ್ ಅರತಿಃ ಜನ ಸಂಸದಿ॥
ಅಧ್ಯಾತ್ಮ ಜ್ಞಾನ ನಿತ್ಯತ್ವಮ್ ತತ್ತ್ವಜ್ಞಾನ ಅರ್ಥ ದರ್ಶನಮ್ ।
ಏತತ್ ಜ್ಞಾನಮ್ ಇತಿ ಪ್ರೋಕ್ತಮ್ ಅಜ್ಞಾನಮ್ ಯತ್ ಅತಃ ಅನ್ಯಥಾ -- ಅಂಟಿಸಿಕೊಳ್ಳದಿರುವುದು, ಮಕ್ಕಳು ಮಡದಿ ಮನೆ ಮುಂತಾದುವನ್ನು ಅತಿಯಾಗಿ ಹಚ್ಚಿಕೊಳ್ಳದಿರುವುದು, ಇಷ್ಟ-ಅನಿಷ್ಟಗಳು ಬಂದೊದಗಿದಾಗ ಎಂದೆಂದೂ ಬಗೆಗೆಡಡಿರುವುದು, ಬೇರೆಡೆ ಕದಲದೆ ನನ್ನಲ್ಲೆ ಅಚಲವಾದ ಭಕ್ತಿ, ಏಕಾಂತವಾಸ, ಜನಜಂಗುಳಿಯಲ್ಲಿ ಬೆರೆಯದಿರುವುದು, ಅಧ್ಯಾತ್ಮದ ಅರಿವಿನಲ್ಲೇ ನಿರಂತರ ಸ್ಥಿತಿ, ಅಪರೋಕ್ಷ ಜ್ಞಾನಕ್ಕಾಗಿ ಶಾಸ್ತದ ಅಧ್ಯಯನ,[ತತ್ವಜ್ಞಾನಕ್ಕೆ ಗೋಚರನಾದ ಭಗವಂತನ ಸಾಕ್ಷಾತ್ಕಾರ] ಇವೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಅದಕ್ಕಿಂತ ಬೇರೆಯಾದದ್ದು ಅಜ್ಞಾನ ಮತ್ತು ಅಜ್ಞಾನದ ದಾರಿ.
(೧೩) ಅಸಕ್ತಿಃ : ಸಕ್ತಿಎಂದರೆ ಹಚ್ಚಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವುದು(Attachment). ಈ ವಿಚಾರವಾಗಿ ನಾವು ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ. ನಮ್ಮೆಲ್ಲ ದುಃಖಕ್ಕೂ ಮೂಲಕಾರಣ ಸಕ್ತಿ’. ಆದ್ದರಿಂದ ಯಾವುದನ್ನೂ ಅಂಟಿಸಿಕೊಳ್ಳಬೇಡ. ಹುಟ್ಟುವಾಗ ನಾವು ಏನನ್ನೂ ತಂದಿಲ್ಲ, ಸಾಯುವಾಗ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಲೌಕಿಕವಾದ ಈ ಸಕ್ತಿಯಿಂದ ದೂರ ನಿಲ್ಲು. ಬಂದದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸು, ಹೋದಾಗ ಭಗವಂತನ ಇಚ್ಛೆ ಎಂದು ಸಂತೋಷದಿಂದಿರು.
(೧೪) ಅನಭಿಷ್ವಂಗಃ ಪುತ್ರ ದಾರ ಗೃಹ ಆದಿಷು : ಅಭಿಷ್ವಂಗ ಎಂದರೆ ಅತಿಯಾಗಿ ಹಚ್ಚಿಕೊಳ್ಳುವುದು(Over attachment). ಮನೆ, ಹೆಂಡತಿ(ಗಂಡ/ಹೆಂಡತಿ) ಮಕ್ಕಳು ಇತ್ಯಾದಿಯನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಎನ್ನುತ್ತಾನೆ ಕೃಷ್ಣ. ಇಲ್ಲಿ ಮನೆ ಸಂಸಾರವನ್ನು ಹಚ್ಚಿಕೊಳ್ಳದೆ ಇರುವುದು ಎಂದರೆ ಎಲ್ಲವನ್ನು ತೊರೆದು ಕಾಡಿಗೆ ಹೋಗುವುದಲ್ಲ. ಇದನ್ನು ಬಿಟ್ಟು ನಾನು ಇರಲಾರೆಎನ್ನುವ ಅಭಿಷ್ವಂಗ ಬಿಟ್ಟುಬಿಡುವುದು ಅಷ್ಟೆ. ಜೀವನದಲ್ಲಿ ಏನು ಬರುತ್ತದೆ ಅದನ್ನು ಸಾಕ್ಷಿಭೂತನಾಗಿ ನೋಡು. ಜೀವನವೇ ಒಂದು ನಾಟಕ, ಅದರಲ್ಲಿ ನೀನೇ ಪಾತ್ರಧಾರಿ , ನೀನೇ ಪ್ರೇಕ್ಷಕ. ಭಗವಂತ ನಿರ್ದೇಶಕ. ಇಲ್ಲಿ ನನ್ನ ಮಕ್ಕಳೇ ನನ್ನ ಬದುಕು, ನನ್ನ ಪತಿ/ಪತ್ನಿ ನನ್ನ ಬದುಕು, ನನ್ನ ಸಂಪಾದನೆಯೇ ನನ್ನ ಬದುಕು, ಇದನ್ನು ಬಿಟ್ಟು ನನ್ನ ಅಸ್ತಿತ್ವವಿಲ್ಲ ಎನ್ನುವ ಅತಿಯಾದ ಅಭಿಷ್ವಂಗ ಬೇಡ. ಪ್ರೀತಿಸು-ಆದರೆ ಹಚ್ಚಿಕೊಂಡು ಕೊರಗಬೇಡ, ನಿರಾಶನಾಗಬೇಡ. ಈ ರೀತಿ ಬದುಕಲು ಕಲಿತಾಗ ಜೀವನ ಸುಂದರವಾಗಿರುತ್ತದೆ. ನಮ್ಮಿಂದ ನಮ್ಮ ಮಕ್ಕಳು ದೂರವಾದರೆ, ಹೆಂಡತಿ/ಗಂಡ ದೂರವಾದರೆ, ನಾವು ನಮ್ಮ ಸಂಪತ್ತನ್ನು(ಮನೆ, ಆಸ್ತಿ ಇತ್ಯಾದಿ) ಕಳೆದುಕೊಂಡರೆ ದುಃಖ-ನಿರಾಶೆಯಾಗುವುದಿಲ್ಲ. ಈ ರೀತಿ ಬದುಕಿದಾಗ ಜೀವನದಲ್ಲಿ ಏನು ದುರಂತ ಬಂದರೂ ಅದು ನಮ್ಮ ಪಾಲಿನ ಪಾತ್ರಾಭಿನಯ ಎನ್ನುವ ಭಾವನೆಯಿಂದ ನಾವು ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ-ಆಘಾತವಾಗುವುದಿಲ್ಲ.
(೧೫) ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟ ಅನಿಷ್ಟ ಉಪಪತ್ತಿಷು : ಜೀವನದಲ್ಲಿ ಇಷ್ಟವಾದ ಘಟನೆ ನಡೆಯಬಹುದು, ಅನಿಷ್ಟವಾದ ಘಟನೆ ನಡೆಯಬಹುದು. ಇಷ್ಟ ಅನಿಷ್ಟಗಳು ಬಂದೊದಗಿದಾಗ ಮನಸ್ಸಿನ ಸಮತೊಲನವನ್ನು ಕಳೆದುಕೊಳ್ಳದೆ ಎಲ್ಲ ಸಮಯದಲ್ಲೂ ಸಮಚಿತ್ತತ್ವದಿಂದಿರಲು ಕಲಿ. ನಾವು ಅನಿಷ್ಟ ಅಂದುಕೊಂಡಿದ್ದು ಅನಿಷ್ಟವಾಗಿರಬೇಕೆಂದಿಲ್ಲ ಅಥವಾ ನಾವು ಇಷ್ಟಪಟ್ಟಿದ್ದು ಒಳ್ಳೆಯದಾಗಿರಬೇಕೆಂದಿಲ್ಲ. ಆದ್ದರಿಂದ ಇಷ್ಟ-ಅನಿಷ್ಟ ಎಂದು ಲೇಪ ಹಚ್ಚದೆ ಬಂದಿದ್ದನ್ನು ನಾಹಂ ಕರ್ತಾ ಹರಿಃ ಕರ್ತಾಎಂದು ಸ್ವೀಕರಿಸಲು ಕಲಿ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಬೇತಿಗಾಗಿ ಸೃಷ್ಟಿಸಿರುವ ಪ್ರಾಯೋಗಿಕ(Practical)ಶಿಕ್ಷಣ. ಭಗವಂತ ನಮಗೆ ದುಃಖವನ್ನು ಕೊಟ್ಟು ನಮ್ಮನ್ನು ಜಾಣರನ್ನಾಗಿ ಮಾಡುತ್ತಾನೆ ಎನ್ನುವ ಸತ್ಯವನ್ನು ಅರಿತು ಬದುಕು.
(೧೬) ಮಯಿ ಚ ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ : ಭಗವಂತನಲ್ಲಿ ನಿರಂತರ ಪರಿಶುದ್ಧ ಭಕ್ತಿ ಇರಲಿ. ಭಗವಂತ ಒಬ್ಬನೆ, ಆತನ ನಾಮ ಹಲವು. ಆತನಲ್ಲಿ ಅನನ್ಯವಾದ ಭಕ್ತಿಯನ್ನಿಡು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವುದು, ಒಂದು ದೇವತೆಯನ್ನು ಪೂಜಿಸಿದಾಗ ಇನ್ನೊಂದು ದೇವತೆ ಕೋಪಗೊಳ್ಳಬಹುದು ಎನ್ನುವ ಭಯದಿಂದ ಅನೇಕ ದೇವತಾ ಆರಾಧನೆ ಮಾಡುವುದು ಮಾಡಿದರೆ ಅದು ವ್ಯಭಿಚಾರವಾಗುತ್ತದೆ. ಆದ್ದರಿಂದ ಕೃಷ್ಣ ಇಲ್ಲಿ ನಿನ್ನ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರಬೇಕುಎಂದು ಒತ್ತಿ ಹೇಳಿದ್ದಾನೆ. ಭಗವಂತ ಸರ್ವಸಮರ್ಥ, ಸರ್ವಶಕ್ತ, ಜಗತ್ಜನ್ಮಾದಿ ಕಾರಣ ಎನ್ನುವ ನಿಷ್ಠೆ ನಿನ್ನಲ್ಲಿರಲಿ. ದೇವರ ಮೇಲೆ ನಂಬಿಕೆ ಇಲ್ಲದೆ ಯಾವ ಶಾಸ್ತ್ರ ಓದಿ ಏನೂ ಉಪಯೋಗವಿಲ್ಲ. ಭಗವಂತನ ಮೇಲಿನ ಪೂರ್ಣ ನಂಬಿಕೆಯಿಂದ ಮಾತ್ರ ಜ್ಞಾನ ಸಾಧನ ಸಾಧ್ಯ.
(೧೭) ವಿವಿಕ್ತ ದೇಶ ಸೇವಿತ್ವಮ್ : ಸಾಧ್ಯವಾದಷ್ಟು ಅತಿ ಹೆಚ್ಚು ಸಾತ್ವಿಕ ಕಂಪನವಿರುವ ಕಡೆ, ಸಾತ್ವಿಕ ಜನರ ಜೊತೆಗೆ ವಾಸ ಮಾಡಲು ಪ್ರಯತ್ನಿಸು. ಪೂರ್ಣಪ್ರಮಾಣದಲ್ಲಿ ಅಖಂಡವಾದ ಸಾತ್ವಿಕ ಕಂಪನವಿರುವ ಸ್ಥಳ ಪುಣ್ಯಕ್ಷೇತ್ರವೆನಿಸುತ್ತದೆ. ಅಂತಹ ಸ್ಥಳದಲ್ಲಿ ಒಳ್ಳೆಯದನ್ನು ಮಾತನಾಡುವ, ಒಳ್ಳೆಯ ಚಿಂತನೆ ಮಾಡುವ ಸಜ್ಜನರೊಂದಿಗೆ ವಾಸಮಾಡು. ಇದು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಏಕಾಂತವಾಸವನ್ನು ಅಭ್ಯಾಸ ಮಾಡು. ನಾಲ್ಕು ಜನರೊಂದಿಗೆ ಸೇರಿ ಹಾಳು ಹರಟೆಯಲ್ಲಿ ನಿನ್ನ ಅಮೂಲ್ಯವಾದ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.
(೧೮) ಅರತಿಃ ಜನ ಸಂಸದಿ: ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂಥಹ ಜನಜಂಗುಳಿಯಿಂದ ದೂರವಿರು.
(೧೯) ಅಧ್ಯಾತ್ಮ ಜ್ಞಾನ ನಿತ್ಯತ್ವಮ್ : ಅಧ್ಯಾತ್ಮದ ಅರಿವಿನಲ್ಲಿ ನಿರಂತರವಾಗಿರು. ಮೊದಲು ಪಿಂಡಾಂಡ-ಬ್ರಹ್ಮಾಂಡವನ್ನು ತಿಳಿ, ಆನಂತರ ಇದನ್ನು ತಿಳಿಯುವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿ, ನಂತರ ನಾನುಎಂದರೆ ಏನು(Awareness of self) ಎನ್ನುವುದನ್ನು ತಿಳಿ. ಇದು ತಿಳಿದಮೇಲೆ ಈ ಆತ್ಮವನ್ನು ನಿಯಂತ್ರಿಸುವ ಪರಮಾತ್ಮನನ್ನು ತಿಳಿ. ಇದು ಅಧ್ಯಾತ್ಮಜ್ಞಾನ. ನಿನ್ನ ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನವಾಗಿರಲಿ.
(೨೦) ತತ್ತ್ವಜ್ಞಾನ ಅರ್ಥ ದರ್ಶನಮ್: ಜಗತ್ತಿನ ಮೂಲಭೂತ ಸತ್ಯ ತಿಳಿಯುವುದಕ್ಕೆ ನಿನ್ನ ಅಧ್ಯಯನ ಮೀಸಲಿರಲಿ. ಮೇಲಿನ ಎಲ್ಲ ಗುಣಗಳಿಂದ ಎಲ್ಲ ಶಾಸ್ತ್ರಗಳಿಗೆ ವಿಷಯಭೂತನಾದ, ಎಲ್ಲ ಶಾಸ್ತ್ರಗಳಿಂದ ಪ್ರತಿಪಾಧ್ಯನಾದ ಭಗವಂತನ ಸಾಕ್ಷಾತ್ಕಾರ ಪಡೆ.
ಇಲ್ಲಿ ಹೇಳಿರುವ ಗುಣಗಳೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಇದಕ್ಕಿಂತ ಬೇರೆಯಾಗಿರುವುದು ಅಜ್ಞಾನ ಮತ್ತು ಅಜ್ಞಾನದ ಗುರಿ.
·  ಶ್ಲೋಕ - 12
ಜ್ಞಾನ ಸಾಧನಗಳನ್ನು ವಿವರಿಸಿದ ಕೃಷ್ಣ ಮುಂದಿನ ಆರು ಶ್ಲೋಕಗಳಲ್ಲಿ ಶಬ್ದದ ಮಿತಿಯಿಂದ ಆಚೆಗಿರುವ ಭಗವಂತನ ವರ್ಣನೆಯನ್ನು ನಮ್ಮ ಮುಂದಿಡುತ್ತಾನೆ. ದೇವರು ಹೇಗಿದ್ದಾನೆ, ಆತನ ರೂಪವನ್ನು ಹೇಗೆ ಅನುಸಂಧಾನ ಮಾಡಬೇಕು ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಸುಂದರವಾಗಿ ವರ್ಣಿಸಿದ್ದಾನೆ. ಈ ಶ್ಲೋಕಗಳಲ್ಲಿ ಒಂದೊಕ್ಕೊಂದು ವ್ಯತಿರಿಕ್ತ(Contradicting)ವಾಗಿ ಕಾಣುವ ಅನೇಕ ವಿಷಯಗಳನ್ನು ನಾವು ಕಾಣಬಹುದು. ಉದಾಹರಣೆಗೆ: ಭಗವಂತ ನಿರ್ಗುಣ ಆದರೆ ಆತ ಸರ್ವಗುಣಪೂರ್ಣ; ಭಗವಂತ ಅಚಲ ಆದರೆ ಆತ ಚಲಿಸುತ್ತಾನೆ; ಭಗವಂತ ನಿರಾಕಾರ ಆದರೆ ಆತ ಸಾಕಾರ; ಭಗವಂತನನ್ನು ತಿಳಿಯಲು ಅಸಾಧ್ಯ ಆದರೆ ಆತನನ್ನು ತಿಳಿಯಬಹುದು; ಭಗವಂತನಿಗೆ ಇಂದ್ರಿಯಗಳಿಲ್ಲ ಆದರೆ ಆತನಿಗೆ ಇಂದ್ರಿಯಗಳಿವೆ; ಆತ ದೂರದಲ್ಲಿದ್ದಾನೆ ಆದರೆ ಹತ್ತಿರದಲ್ಲಿದ್ದಾನೆ; ಇತ್ಯಾದಿ. ಈ ರೀತಿಯ ವರ್ಣನೆಯನ್ನು ಭಗವಂತನಿಗಲ್ಲದೆ ಇನ್ಯಾರಿಗೂ ಕೊಡಲು ಬರುವುದಿಲ್ಲ. ಇವೆಲ್ಲವುದರ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.
ಜ್ಞೇಯಂ ಯತ್ ತತ್ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾSಮೃತಮಶ್ನುತೇ
ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸದುಚ್ಯತೇ ೧೨॥
ಜ್ಞೇಯಮ್ ಯತ್ ತತ್ ಪ್ರವಕ್ಷ್ಯಾಮಿ ಯತ್ ಜ್ಞಾತ್ವಾ ಅಮೃತಮ್ ಅಶ್ನುತೇ
ಅನಾದಿಮತ್ ಪರಮ್ ಬ್ರಹ್ಮ ನ ಸತ್ ತತ್ ನ ಅಸತ್ ಉಚ್ಯತೇ ಯಾವುದನ್ನು ತಿಳಿದು ಸಾವನ್ನು ಗೆಲ್ಲುವನೋ ಅಂಥ ಜ್ಞೇಯವನ್ನು ಹೇಳುತ್ತೇನೆ: ಹುಟ್ಟಿರದ,[ದೇಹದಿಂದಲೂ ಹುಟ್ಟದ] ಪರಬ್ರಹ್ಮವೆ ಜ್ಞೇಯ. ಅದು ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿಗಿಂತಲು ಬೇರೆ; ಕಾಣದ ಗಾಳಿ ಆಗಸಗಳಿಗಿಂತಲೂ ಬೇರೆ ಎನ್ನಿಸಿದೆ.
ಇಲ್ಲಿ ಕೃಷ್ಣ ಜ್ಞಾನ ಸಾಧನಗಳ ಮೂಲಕ ತಿಳಿದುಕೊಳ್ಳಬೇಕಾದ ಜ್ಞೇಯನ ಬಗ್ಗೆ ವಿವರಿಸುತ್ತ ಹೇಳುತ್ತಾನೆ: ಯಾವುದನ್ನು ಪ್ರತ್ಯಕ್ಷವಾಗಿ ಶಬ್ದಗಳು ಹೇಳಲಾರವೋ, ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ-ಅದನ್ನು ನಾನು ನಿನಗೆ ಹೇಳುತ್ತೇನೆಎಂದು. ಭಗವಂತ ಅನಾದಿಮತ್. ಆತನಿಗೆ ನಶ್ವರವಾದ ಪಂಚಭೂತಗಳಿಂದಾದ ಯಾವ ಆಕಾರವೂ ಇಲ್ಲ. ಆತ ಜ್ಞಾನಾನಂದ ಸ್ವರೂಪ. ಭಗವಂತನ ಗುಣಕ್ರಿಯೆ ಎಲ್ಲವೂ ಅನಾದಿಮತ್. ಸದ್ಗುಣಗಳಿಂದ ತುಂಬಿರುವ ಭಗವಂತ ನಮಗೆ ಪೂರ್ಣತೆಯನ್ನು ಕೊಡುವವ. ಆತ ಸರ್ವರಕ್ಷಕ, ಆತನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಇಂಥಹ ಭಗವಂತನನ್ನು ನಾವು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅದು ನಮ್ಮ ಅರಿವಿಗೆ ಎಟುಕದ್ದು. ಹೀಗಿದ್ದರೂ ಕೂಡಾ ಆತನನ್ನು ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನಾವು ಯಥಾರ್ಥ ತಿಳಿಯಲು ಸಾಧ್ಯ.
·  ಶ್ಲೋಕ - 13
ಸರ್ವತಃಪಾಣಿಪಾದಂ ತತ್ ಸರ್ವತೋSಕ್ಷಿಶಿರೋಮುಖಮ್ ।
ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ೧೩॥
ಸರ್ವತಃಪಾಣಿಪಾದಮ್ ತತ್ ಸರ್ವತಃ ಅಕ್ಷಿ ಶಿರಃ ಮುಖಮ್ ।
ಸರ್ವತಃ ಶ್ರುತಿಮತ್ ಲೋಕೇ ಸರ್ವಮ್ ಆವೃತ್ಯ ತಿಷ್ಠತಿಎಲ್ಲೆಡೆಯು ಅದಕ್ಕೆ ಕೈಕಾಲುಗಳು; ಎಲ್ಲೆಡೆಯು ಕಣ್ಣು-ತಲೆ-ಬಾಯಿಗಳು; ಎಲ್ಲೆಡೆಯು ಅದಕ್ಕೆ ಕಿವಿ; ಅದು ಲೋಕದೊಳಗೆಲ್ಲವನು ಆವರಿಸಿ ನಿಂತಿದೆ.
ಭಗವಂತ ಎಲ್ಲೆಡೆ ತುಂಬಿದ್ದಾನೆ. ಆತನಿಗೆ ಎಲ್ಲಕಡೆ ಕೈ ಕಾಲುಗಳು; ಎಲ್ಲ ಕಡೆ ಕಿವಿ, ಮುಖ, ಬಾಯಿ, ಕಣ್ಣು.(ಸಂಸ್ಕೃತದಲ್ಲಿ ಮುಖ ಎಂದರೆ ಮುಖವೂ ಹೌದು-ಬಾಯಿಯೂ ಹೌದು. ಸಮೃದ್ಧವಾದ ಈ ಭಾಷೆಯಲ್ಲಿ ಬಾಯಿಯನ್ನು ಸೂಚಿಸುವ ಪ್ರತ್ಯೇಕ ಪದ ಇಲ್ಲ!). ಕಾರಣದಿಂದ ಭಗವಂತನಿಗೆ ತಿಳಿಯದಂತೆ ನಾವು ಯಾವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಆತ ಸರ್ವಜ್ಞ, ಸರ್ವಗತ, ಸರ್ವಸಮರ್ಥ. ಇದೆಲ್ಲವನ್ನು ಶ್ರುತಿ ಪ್ರಮಾಣಿಕರಿಸುತ್ತದೆ. ಆದಿಯಲ್ಲಿ ವೇದವನ್ನು ಉಚ್ಛಾರ ಮಾಡಿದವನು ಭಗವಂತ. ಆತ ಎಲ್ಲವುದರ ಒಳಗೂ ಹೊರಗೂ ಆವರಿಸಿ ನಿಂತಿದ್ದಾನೆ. ಅಖಂಡವಾದ ಭಗವಂತನೊಳಗೆ ಆತನ ಅನಂತ ರೂಪಗಳಿವೆ. ಪ್ರತಿಯೊಂದು ರೂಪಕ್ಕೂ ಜ್ಞಾನಾನಂದಮಯವಾದ, ಸ್ವರೂಪಭೂತವಾದ ಇಂದ್ರಿಯಗಳಿವೆ. ನಮ್ಮ ಸರ್ವ ಇಂದ್ರಿಯದಲ್ಲೂ ಆತ ತುಂಬಿ ನಿಂತು ನಡೆಸುತ್ತಿದ್ದಾನೆ.
·  ಶ್ಲೋಕ - 14
ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್ ।
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ ೧೪॥
ಸರ್ವೇಂದ್ರಿಯ ಗುಣ ಆಭಾಸಂ ಸರ್ವೇಂದ್ರಿಯ ವಿವರ್ಜಿತಮ್ ।
ಅಸಕ್ತಮ್ ಸರ್ವಭೃತ್ ಚ ಏವ ನಿರ್ಗುಣಮ್ ಗುಣಭೋಕ್ತೃ ಚ ಎಲ್ಲ ಇಂದ್ರಿಯಗಳನ್ನು, ಎಲ್ಲ ವಿಷಯಗಳನ್ನು ಬೆಳಗಿಸುತ್ತಿರುವುದು; ಅದಕೆ ಭೌತಿಕವಾದ ಯಾವ ಇಂದ್ರಿಯಗಳೂ ಇಲ್ಲ. ಯಾವುದಕು ಅಂಟದೆ ಎಲ್ಲವನು ಹೊತ್ತಿದೆ. ತ್ರಿಗುಣಗಳ ನಂಟಿಲ್ಲ; ಎಲ್ಲ ಸದ್ಗುಣಗಳ ನೆಲೆ.
ಜಗತ್ತಿನಲ್ಲಿರುವ ಎಲ್ಲ ಜೀವಜಾತಗಳು ತಮ್ಮ ಇಂದ್ರಿಯಗಳಿಂದ ಇಂದ್ರಿಯ ವಿಷಯವನ್ನು ಗ್ರಹಿಸುವುದು ಭಗವಂತನಿಂದ. ಇಂಥಹ ಭಗವಂತನಿಗೆ ಪಾಂಚಭೌತಿಕವಾದ, ನಶ್ವರವಾದ, ನಮ್ಮಂತೆ ಒಂದು ದಿನ ನಾಶವಾಗುವ, ತನ್ನ ಸ್ವರೂಪಕ್ಕಿಂತ ಭಿನ್ನವಾದ ಯಾವ ಇಂದ್ರಿಯಗಳೂ ಇಲ್ಲ. ಈ ಜಗತ್ತನ್ನು ಹೊತ್ತಿರುವ ತಂದೆ ಆ ಭಗವಂತ ಗಂಡು. ಜಗತ್ತನ್ನು ಹೆತ್ತ ಆತ ತಾಯಿಯೂ ಹೌದು. ಭೌತಿಕವಾಗಿ ಆತ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಆತ ಸ್ವರೂಪಭೂತವಾಗಿ ಗಂಡೂ ಹೌದು-ಹೆಣ್ಣೂ ಹೌದು. ಭಗವಂತ ಎಲ್ಲರೊಳಗೆ ತುಂಬಿದ್ದಾನೆ ಆದರೆ ಆತ ಯಾವುದನ್ನೂ ಅಂಟಿಸಿಕೊಂಡಿಲ್ಲ. ಆತ ಎಲ್ಲವನ್ನು ಹೊತ್ತಿದ್ದಾನೆ ಆದರೆ ಅದರ ಬಾಂಧವ್ಯದ ಬೆಸುಗೆ(Attachment) ಆತನಿಗಿಲ್ಲ. ಭಗವಂತ ತ್ರಿಗುಣಾತೀತ. ಆತನಿಗೆ ತ್ರಿಗುಣಗಳ ನಂಟಿಲ್ಲ. ಆದರೆ ಆತ ಸದ್ಗುಣಗಳ ನೆಲೆ. ಅವನು ನಿರಾಕಾರನೂ ಹೌದು, ಸಾಕಾರನೂ ಹೌದು.
·  ಶ್ಲೋಕ - 15
ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ
ಸೂಕ್ಷ್ಮತ್ವಾತ್ ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ ೧೫॥
ಬಹಿಃ ಅಂತಃ ಚ ಭೂತಾನಾಮ್ ಆಚರಮ್ ಚರಮ್ ಏವ ಚ ।
ಸೂಕ್ಷ್ಮತ್ವಾತ್ ತತ್ ಅವಿಜ್ಞೇಯಮ್ ದೂರಸ್ಥಮ್ ಚ ಅಂತಿಕೇ ಚ ತತ್ ಅದು ಜೀವಿಗಳ ಹೊರಗಿದೆ; ಒಳಗೂ ಇದೆ; ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು; ಅದಕೆಂದೆ ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ.
ಭೂತ ಎಂದರೆ ಸಮಸ್ತ ಬ್ರಹ್ಮಾಂಡ, ಸಮಸ್ತ ಜೀವಜಾತ(ಪಿಂಡಾಂಡ). ಭಗವಂತ ಈ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿದ್ದಾನೆ. ನಾರಾಯಣ ಉಪನಿಷತ್ತಿನಲ್ಲಿ ಹೇಳುವಂತೆ ಅಂತರ್ಬಹಿಶ್ಚ ತತ್-ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ನಮ್ಮ ಒಳಗೆ ಮತ್ತು ಹೊರಗೆ ತುಂಬಿ, ಎಲ್ಲವನ್ನು ವ್ಯಾಪಿಸಿ ನಿಂತಿರುವ ಭಗವಂತ-ನಾರಾಯಣ. ಒಂದು ಅತಿ ಕ್ಷುದ್ರ ಜೀವದಿಂದ ಹಿಡಿದು ಚತುರ್ಮುಖ ಬ್ರಹ್ಮನ ತನಕ ಎಲ್ಲರ ಒಳಗೂ ಹೊರಗೂ ಭಗವಂತ ತುಂಬಿದ್ದಾನೆ. ನಮ್ಮ ಒಳಗೆ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿದ್ದು ನಮ್ಮನ್ನು ನಡೆಸುತ್ತಿದ್ದಾನೆ ಮತ್ತು ನಮ್ಮ ಹೊರಗೆ ನಿಂತು ನಮ್ಮನ್ನು ಧಾರಣೆ ಮಾಡಿದ್ದಾನೆ. ಜ್ಞಾನಿಗಳಿಗೆ ಅವರ ಅಂತರಂಗದಲ್ಲಿ ದರ್ಶನ ಕೊಡುವ ಭಗವಂತ ಅಜ್ಞಾನಿಗಳಿಗೆ ಬಹಿ(ಬಹುದೂರ). ಸರ್ವಗತನಾದ ಭಗವಂತ ಅಚಲ ಆದರೆ ಆತನ ಅನಂತ ರೂಪಗಳು ಸದಾ ಚಲಿಸುತ್ತಿರುತ್ತವೆ. ಸಮಸ್ತ ಚರಾಚಾರಾತ್ಮಕ ಜೀವದೊಳಗೆ ಭಗವಂತ ತುಂಬಿ ನಿಂತಿದ್ದಾನೆ. ಭಗವಂತ ಅಣುವಿನೊಳಗೆ ಅಣುವಾಗಿ ತುಂಬಿದ್ದಾನೆ. ಭಗವಂತ ಜ್ಞೇಯ ಆದರೆ ವಿಜ್ಞೇಯ ಅಲ್ಲ. ಭಗವಂತನ ವಿವರವನ್ನು ನಾವು ಕಿಂಚಿತ್ ತಿಳಿಯಬಹುದು ಆದರೆ ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ನಾವು ಸಮುದ್ರದಲ್ಲಿರುವ ಒಂದು ಪುಟ್ಟ ಮೀನಿನಂತೆ. ಅದು ಹೇಗೆ ಸಮುದ್ರದ ಅಗಾಧತೆಯನ್ನು ತಿಳಿಯಲಾರದೋ ಹಾಗೆ ಜಗತ್ತಿನ ಯಾವ ಜೀವಜಾತವೂ ಭಗವಂತನನ್ನು ಪೂರ್ಣವಾಗಿ ತಿಳಿಯಲಾರವು. ಏಕೆಂದರೆ ಅದು ನಮ್ಮ ಮನಸ್ಸು ಗ್ರಹಿಸಲಾರದಷ್ಟು ಸೂಕ್ಷ್ಮ ಮತ್ತು ಅಗಾಧ.
·  ಶ್ಲೋಕ - 16
ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ ।
ಭೂತಭರ್ತೃ ಚ ತಜ್ ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ ೧೬॥
ಅವಿಭಕ್ತಮ್ ಚ ಭೂತೇಷು ವಿಭಕ್ತಮ್ ಇವ ಚ ಸ್ಥಿತಮ್ ।
ಭೂತಭರ್ತೃ ಚ ತತ್ ಜ್ಞೇಯಮ್ ಗ್ರಸಿಷ್ಣು ಪ್ರಭವಿಷ್ಣು ಚ ಎಲ್ಲ ಜೀವಿಗಳಲ್ಲು ಏಕರೂಪವಾಗಿದೆ; ಆದರೂ ಬೇರೆಯೋ ಎನುವಂತೆ ಬಹುರೂಪದಿಂದಿದೆ. ಎಲ್ಲ ಜೀವಿಗಳನ್ನು ಪಾಲಿಸುವಂಥದು; ಕಬಳಿಸುವಂಥದು ಮತ್ತು ಹುಟ್ಟಿಸುವಥದು ಅದೇ ಎಂದು ತಿಳಿಯಬೇಕು.
ಭಗವಂತ ಈ ಪ್ರಪಂಚದಲ್ಲಿನ ಪ್ರತಿಯೊಂದು ಜೀವದಲ್ಲೂ ಬಿಂಬ ರೂಪನಾಗಿ ನೆಲೆಸಿದ್ದಾನೆ. ಒಂದೊಂದು ಜೀವದಲ್ಲೂ ಅನೇಕ ರೂಪದಲ್ಲಿ ಆತನಿದ್ದಾನೆ. ಇಲ್ಲಿ ಪ್ರತಿಯೊಂದು ಜೀವಗಳೂ ವಿಭಕ್ತಗಳು. ಆದರೆ ಭಗವಂತ ಮಾತ್ರ ಅಖಂಡ(ಅವಿಭಕ್ತ). ಎಲ್ಲಾ ಕಡೆ ಇರುವ ಭಗವಂತ ಒಬ್ಬನೆ ಆದರೆ ಬೇರೆ ಬೇರೆ ಇದ್ದಂತೆ ನಮಗೆ ಕಾಣಿಸುತ್ತಾನೆ ಅಷ್ಟೆ. ಇದಕ್ಕೆ ಉತ್ತಮ ಉದಾಹರಣೆ ಭಗವಂತನ ಅವತಾರವಾದ-ಪರಶುರಾಮ, ವೇದವ್ಯಾಸ ಮತ್ತು ಶ್ರೀಕೃಷ್ಣ. ಇಲ್ಲಿ ಭಗವಂತ ಮೂರು ರೂಪದಲ್ಲಿ ನಮಗೆ ಏಕ ಕಾಲದಲ್ಲಿ ಕಾಣಿಸಿಕೊಂಡ. ಒಂದೇ ಆದರೂ ಕೂಡ ಮೂರಾಗಿ ನಮಗೆ ಆತ ಕಾಣಿಸಿಕೊಂಡ. ಆತ ಸಮಸ್ತ ಜೀವದೊಳಗಿದ್ದಾನೆ ಆದರೆ ಸಮಸ್ತ ಜೀವವನ್ನೂ ಆತನೇ ಹೊತ್ತುಕೊಂಡಿದ್ದಾನೆ. ಎಲ್ಲರ ಸೃಷ್ಟಿಕರ್ತ ಭಗವಂತ ಹಾಗು ತನ್ನ ಸೃಷ್ಟಿಯನ್ನು ಒಂದು ದಿನ ಸಂಹಾರ ಮಾಡುವವನೂ ಆತನೆ. ಸಂಹಾರದ ನಂತರ ಸೃಷ್ಟಿಯ ಪುನರ್ನಿರ್ಮಾಣ ಮಾಡುವವನೂ ಅವನೆ.
·  ಶ್ಲೋಕ - 17
ಜ್ಯೋತಿಷಾಮಪಿ ತಜ್ ಜ್ಯೋತಿಸ್ತಮಸಃ ಪರಮುಚ್ಯತೇ ।
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ ೧೭॥
ಜ್ಯೋತಿಷಾಮ್ ಅಪಿ ತತ್ ಜ್ಯೋತಿಃ ತಮಸಃ ಪರಮ್ ಉಚ್ಯತೇ ।
ಜ್ಞಾನಮ್ ಜ್ಞೇಯಮ್ ಜ್ಞಾನಗಮ್ಯಮ್ ಹೃದಿ ಸರ್ವಸ್ಯ ವಿಷ್ಠಿತಮ್ ಅದು ಬೆಳಕುಗಳಿಗೆಲ್ಲ ಹಿರಿ ಬೆಳಕು. ಕತ್ತಲೆಯ ಆಚೆಗಿರುವಂಥದು. ಅದು ತಿಳಿವಿನ ರೂಪ. ತನ್ನನು ತಾನೇ ತಿಳಿವಂಥದು. ತಿಳಿವಿನಿಂದ ಪಡೆಯಬಹುದಾದಂಥದು. ಎಲ್ಲರ ಹೃದಯದಲ್ಲು ನೆಲೆಸಿರುವಂಥದು.
ಈವರೆಗೆ ಕೃಷ್ಣ ವಿವರಿಸಿದ ವಿಚಾರವನ್ನು ನಾವು ನಮ್ಮ ಧ್ಯಾನದಲ್ಲಿ ಕಾಣುವುದು ಕಷ್ಟ. ಅದಕ್ಕಾಗಿ ಕೃಷ್ಣ ಈ ಶ್ಲೋಕದಲ್ಲಿ ತನ್ನನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ. ಭಗವಂತ ಕತ್ತಲಿಲ್ಲದ ಬೆಳಕು. ಆ ಬೆಳಕಿಗೆ ಒಂದು ಅವಧಿ ಇಲ್ಲ. ಅದು ಅನಂತ. ಎಲ್ಲ ಬೆಳಕುಗಳಿಗೂ ಬೆಳಕು ಕೊಡುವ ಮಹಾಜ್ಯೋತಿ ಭಗವಂತ. ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು ಎಂದು ಕಣ್ಣು ಮುಚ್ಚಿ ಕುಳಿತಾಗ ನಮಗೆ ನಮ್ಮ ಇಷ್ಟವಾದ ವಸ್ತು ಅಥವಾ ವ್ಯಕ್ತಿ ಕಾಣಬಹುದು. ಆಗ ಆ ವ್ಯಕ್ತಿಯೊಳಗೆ/ವಸ್ತುವಿನೊಳಗೆ ನಾವು ಭಗವಂತನನ್ನು ಕಾಣಲು ಪ್ರಯತ್ನಿಸಬೇಕು (ಏಕೆಂದರೆ ಭಗವಂತ ಸರ್ವಾಂತರ್ಯಾಮಿ-ಆತ ಎಲ್ಲವುದರ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ). ನಂತರ "ಸೂರ್ಯನಲ್ಲಿ ಭಗವಂತನಿದ್ದಾನೆ, ಸೌರಶಕ್ತಿ ಆತನ ಕೊಡುಗೆ" ಎಂದು ಅನುಸಂಧಾನ ಮಾಡಬೇಕು. ನಂತರ ಸೌರಮಂಡಲದ ಮಧ್ಯದಲ್ಲಿ ಭಗವಂತನ ಪಾದವನ್ನು ಕಾಣುವ ಪ್ರಯತ್ನ ಮಾಡಬೇಕು. ಆ ಪಾದದ ಬೆರಳಿನ ತುದಿಯಿಂದ ಚಿಮ್ಮಿದ ಬೆಳಕು ನಮ್ಮ ಹೃದಯವನ್ನು ಪ್ರವೇಶಿಸಿ ಬೆಳಗುತ್ತಿರುವುದನ್ನು ಧ್ಯಾನದಲ್ಲಿ ನಾವು ಅನುಭವಿಸಬೇಕು. ಇದು ಧ್ಯಾನದಲ್ಲಿ ಹಂತ ಹಂತವಾಗಿ ನಾವು ಭಗವಂತನನ್ನು ಕಾಣುವ ಪ್ರಕ್ರಿಯೆ. ಭಗವಂತ ಈ ಜಗತ್ತಿನ ಎಲ್ಲ ಬೆಳಕುಗಳಿಗೂ ಬೆಳಕು ಕೊಟ್ಟವ. ನಮ್ಮ ಅಂತರಂಗವನ್ನು ಬೆಳಗಿಸುವ ಸಾಮರ್ಥ್ಯ ಇರುವುದು ಕೇವಲ ಭಗವಂತನಿಗೆ. ಭಗವಂತನೆಂಬ ಬೆಳಕು ಕತ್ತಲನ್ನು ಮೀರಿದ್ದು. ಅದು ಜ್ಞಾನಾನಂದಸ್ವರೂಪದ ಬೆಳಕು. ಭಗವಂತನನ್ನು ಪೂರ್ಣ ತಿಳಿದವನು ಭಗವಂತನೊಬ್ಬನೆ. ನಾವು ಯಥಾಶಕ್ತಿ ಆತನನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು. ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ. ಆತ ಎಲ್ಲಕ್ಕಿಂತ ವಿಲಕ್ಷಣನಾಗಿ ನಮ್ಮ ಹೃತ್ಕಮಲ ಮಧ್ಯದಲ್ಲಿ ಸೂಕ್ಷಕ್ಕಿಂತ ಸೂಕ್ಷ್ಮನಾಗಿ ನೆಲೆಸಿದ್ದಾನೆ. ಇಂಥಹ ಭಗವಂತನನ್ನು ನಾವು ಭಕ್ತಿಪೂರ್ವಕ ಜ್ಞಾನದಿಂದ ಮಾತ್ರ ಅರಿಯಲು ಸಾಧ್ಯ.
·  ಶ್ಲೋಕ - 18
ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ ।
ಮದ್ಭಕ್ತ ಏತದ್ ವಿಜ್ಞಾಯ ಮದ್ ಭಾವಾಯೋಪಪದ್ಯತೇ ೧೮॥
ಇತಿ ಕ್ಷೇತ್ರಮ್ ತಥಾ ಜ್ಞಾನಮ್ ಜ್ಞೇಯಮ್ ಚ ಉಕ್ತಮ್ ಸಮಾಸತಃ ।
ಮತ್ ಭಕ್ತಃ ಏತತ್ ವಿಜ್ಞಾಯ ಮತ್ ಭಾವಾಯ ಉಪದ್ಯತೇ ಹೀಗೇ ಕ್ಷೇತ್ರ’-‘ಜ್ಞಾನಮತ್ತು ಜ್ಞೇಯಗಳನ್ನು ಅಡಕವಾಗಿ ಹೇಳಿದಂತಾಯಿತು. ನನ್ನ ಭಕ್ತನಾದವನು ಇದನ್ನರಿತು ನನ್ನಲ್ಲೆ ನೆಲೆಸುತ್ತಾನೆ.
ಈ ಶ್ಲೋಕದಲ್ಲಿ ಕೃಷ್ಣ ಈವರೆಗೆ ಹೇಳಿದ ವಿಚಾರದ ಉಪಸಂಹಾರ ಮಾಡುತ್ತಾ ಹೇಳುತ್ತಾನೆ:ಈ ತನಕ ಕ್ಷೇತ್ರದ ಬಗ್ಗೆ ಜ್ಞಾನಸಾಧನಗಳ ಬಗ್ಗೆ, ಈ ಜ್ಞಾನ ಸಾಧನಗಳಿಂದ ತಿಳಿದುಕೊಳ್ಳಬೇಕಾದ ಭಗವಂತನ ಬಗ್ಗೆ ಅಡಕವಾಗಿ(In a nutshell) ಹೇಳಿದ್ದಾಯಿತು. ಸೃಷ್ಟಿ, ಸೃಷ್ಟಿಯಾದ ಪ್ರಪಂಚ, ಪ್ರಪಂಚ ಸೃಷ್ಟಿಯ ಬಗೆ, ಸ್ರಷ್ಟಾರನಾದ ಭಗವಂತ- ಇದನ್ನು ತಿಳಿದರೆ ಮತ್ತೆ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ. ಪೂರ್ಣ ನಂಬಿಕೆಯಿಂದ, ಭಕ್ತಿಯಿಂದ ಇದನ್ನು ಅರಿತ ಭಕ್ತ ನನ್ನನ್ನು ಸೇರುತ್ತಾನೆಎಂದು. ಭಗವಂತನ ಬಗೆಗಿನ ಜ್ಞಾನ ಮತ್ತು ಭಕ್ತಿ ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಬಲ್ಲದು.
·  ಶ್ಲೋಕ - 19
ಮುಂದಿನ ಶ್ಲೋಕದಲ್ಲಿ ಕೃಷ್ಣ ಮೂಲ ಸೃಷ್ಟಿಯ ಕಲ್ಪನೆ ಮತ್ತು ಅದರ ಅನುಸಂಧಾನವನ್ನು ವಿವರಿಸುತ್ತಾನೆ. ಈ ಶ್ಲೋಕ ಅಧ್ಯಾತ್ಮ ಪ್ರಪಂಚದಲ್ಲಿ ಸೃಷ್ಟಿಯ ಬಗೆಗಿನ ಎಲ್ಲ ಗೊಂದಲಗಳಿಗೆ ಕೃಷ್ಣ ಕೊಟ್ಟ ಉತ್ತರ. ಅಡಕವಾಗಿ ಎಲ್ಲವನ್ನು ಈ ಶ್ಲೋಕದ ಮೂಲಕ ಕೃಷ್ಣ ನಮ್ಮ ಮುಂದಿಟ್ಟಿದ್ದಾನೆ.
ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ ।
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್ ೧೯॥
ಪ್ರಕೃತಿಮ್ ಪುರುಷಮ್ ಚ ಏವ ವಿದ್ಧಿ ಅನಾದೀ ಉಭೌ ಅಪಿ ।
ವಿಕಾರಾನ್ ಚ ಗುಣಾನ್ ಚ ಏವ ವಿದ್ಧಿ ಪ್ರಕೃತಿ ಸಂಭವಾನ್ ಪ್ರಕೃತಿ[ಜಡಪ್ರಕೃತಿ ಮತ್ತು ಚೇತನಪ್ರಕೃತಿ] ಮತ್ತು ಪುರುಷ[ಜೀವ ಮತ್ತು ಈಶ್ವರ] ಇಬ್ಬರೂ ಹುಟ್ಟಿರದವರು ಎಂದು ತಿಳಿ. ಸ್ಥೂಲರೂಪಗಳು ಮತ್ತು ಗುಣತ್ರಯಗಳು ಪ್ರಕೃತಿಯ ಕಾರ್ಯಗಳು ಎಂದು ತಿಳಿ.
ಭಗವಂತ ಯಾವುದೇ ಜೀವರನ್ನಾಗಲಿ, ಪ್ರಕೃತಿಯನ್ನಾಗಲಿ ಸೃಷ್ಟಿ ಮಾಡಿಲ್ಲ. ಜಡಪ್ರಕೃತಿ, ಚೇತನ ಪ್ರಕೃತಿ, ಪರಮಪುರುಷ(ಭಗವಂತ), ಅವಾಂತರಪುರುಷರು(ಜೀವರು) ಎಲ್ಲರೂ ಅನಾಧಿನಿತ್ಯರು. ಪ್ರಪಂಚ ಎಂದರೆ ಪ್ರಕೃತಿಯ ವಿಕಾರ. ಒಂದು ಮಗು ಹುಟ್ಟಿತು ಎಂದರೆ ಅಲ್ಲಿ ಆಗುವುದು ಜೀವದ ಸೃಷ್ಟಿ ಅಲ್ಲ. ಜೀವಕ್ಕೆ ಒಂದು ಆಕಾರದ ಸೃಷ್ಟಿ. ಜೀವ ತಂದೆಯ ದೇಹದ ಮುಖೇನ ತಾಯಿಯ ಗರ್ಭವನ್ನು ಸೇರಿ ಅಲ್ಲಿ ಒಂದು ಆಕಾರವನ್ನು ಪಡೆಯುತ್ತದೆ. ಈ ರೀತಿ ಭಗವಂತ ಜೀವರಿಗೆ ಪ್ರಕೃತಿಯ ಮೂಲಕ ಒಂದು ಆಕಾರ ಸೃಷ್ಟಿ ಮಾಡುತ್ತಾನೆ. ಸೃಷ್ಟಿಯ ಮೂಲದಲ್ಲೂ ಕೂಡ ಲಕ್ಷ್ಮೀನಾರಾಯಣರು ತಂದೆ-ತಾಯಿಯಾಗಿ ನಿಂತು ಪ್ರಪಂಚದ ಸೃಷ್ಟಿಗೆ ಚಾಲನೆ ಕೊಟ್ಟರು. ಸೃಷ್ಟಿಯ ಆದಿಯಲ್ಲಿ ಜೀವರು ಲಕ್ಷ್ಮೀದೇವಿಯ ಉದರದಲ್ಲಿದ್ದರು. ಲಕ್ಷ್ಮೀದೇವಿ ಪರಮಪುರುಷ ಭಗವಂತನ ಉದರದಲ್ಲಿದ್ದಳು. ಸೃಷ್ಟಿಯ ಮೂಲದಲ್ಲಿ ಲಕ್ಷ್ಮಿಯ ನೆತ್ತಿಯಿಂದ ಹೊರ ಹೊಮ್ಮಿ, ಭಗವಂತನ ನಾಭಿಯ ಮುಖೇನ ಚತುರ್ಮುಖಬ್ರಹ್ಮನ ಜನನವಾಯಿತು. ಈ ಕಾರಣದಿಂದ ಚತುರ್ಮುಖ ಬ್ರಹ್ಮನನ್ನು ಲಕ್ಷ್ಮಿಯ ಶಿರಸ್ಸಿನಿಂದ ಮತ್ತು ಭಗವಂತನ ನಾಭಿಯಿಂದ ಜನಿಸಿದವನು ಎಂದು ಕರೆಯುತ್ತಾರೆ. ಒಟ್ಟಿನಲ್ಲಿಜಗತ್ತಿಗೆ ಕಾರಣವಾಗಿರುವ ಜಡಪ್ರಕೃತಿ ನಿತ್ಯ; ಆ ಜಡಪ್ರಕೃತಿಯಿಂದ ಆಕಾರಗೊಂಡು ಸೃಷ್ಟನಾದ ಜೀವನೂ ನಿತ್ಯ; ಈ ಜಡಪ್ರಕೃತಿ ಮತ್ತು ಜೀವನಿಗೆ ಕಾರಣಪುರುಷನಾದಂತಹ ಲಕ್ಷ್ಮೀನಾರಾಯಣರೂ ನಿತ್ಯರು; ಪ್ರಪಂಚ ಎಂದರೆ ಪ್ರಕೃತಿಯ ವಿಕಾರ”. ಇದು ಇಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಮುಖ್ಯ ವಿಚಾರ.
ಮೊತ್ತ ಮೊದಲು ಸೃಷ್ಟಿ ವಿಸ್ತಾರಕ್ಕೆ ಬೇಕಾದ ಶಕ್ತಿ ಸೃಷ್ಟಿಯಾಯಿತು. ಅದೇ ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಕಾರವಾದ ಗುಣತ್ರಯಗಳು. ಈ ಶಕ್ತಿ ಕಂಪನದಿಂದ ಇಡೀ ಪ್ರಪಂಚ ನಿಷ್ಪನ್ನವಾಯಿತು. ಆಕಾರ ಕೊಟ್ಟಿದ್ದು ತಾಯಿ ಲಕ್ಷ್ಮಿ; ಆಕಾರ ಪಡೆದದ್ದು ಜೀವರು; ಆಕಾರ ಕೊಡುವವ ನಾರಾಯಣ. ಈ ಕಾರಣದಿಂದ ಚತುರ್ಮುಖ ಬ್ರಹ್ಮನಿಂದ ಹಿಡಿದು ಸಮಸ್ತ ದೇವಾದಿ ಜೀವರೂ ಲಕ್ಷ್ಮೀನಾರಾಯಣರ ಮಕ್ಕಳು.
ಮೇಲಿನ ಶ್ಲೋಕದಲ್ಲಿ ಕೃಷ್ಣ ಪುರುಷ ಮತ್ತು ಪ್ರಕೃತಿ ಬಗ್ಗೆ ಹೇಳಿದ. [ಪುರುಷ ಎಂದರೆ ಜೀವಾತ್ಮ ಮತ್ತು ಪರಮಾತ್ಮ. ಪ್ರಕೃತಿ ಎಂದರೆ ಜಡಪ್ರಕೃತಿ ಮತ್ತು ಚೇತನ ಪ್ರಕೃತಿ]. ಸೃಷ್ಟಿ ಪ್ರಕ್ರೀಯೆಯಲ್ಲಿ ಈ ನಾಲ್ಕು ಪಾತ್ರದ ವಿವರಣೆಯನ್ನು ಕೃಷ್ಣ ಮುಂದಿನ ಮೂರು ಶ್ಲೋಕಗಳಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಮೊದಲ ಶ್ಲೋಕದಲ್ಲಿ(ಶ್ಲೋ-೨೦) ಕೃಷ್ಣ ಜೀವಾತ್ಮ-ಪರಮಾತ್ಮ, ಜಡಪ್ರಕೃತಿ-ಚೇತನಪ್ರಕೃತಿಯ ಒಟ್ಟು ವಿವರಣೆಯನ್ನು ಕೊಡುತ್ತಾನೆ. ನಂತರ(ಶ್ಲೋ-೨೧) ಕೇವಲ ಜಡಪ್ರಕೃತಿ ಮತ್ತು ಜೀವಾತ್ಮರ ವಿವರಣೆಯನ್ನು ಕೊಟ್ಟು, ಮೂರನೇ ಶ್ಲೋಕದಲ್ಲಿ(ಶ್ಲೋ-೨೨) ಸೃಷ್ಟಿ ಪ್ರಕ್ರೀಯೆಯಲ್ಲಿ ಪರಮಪುರುಷ ಮತ್ತು ಚೇತನಪ್ರಕೃತಿಯ ಪಾತ್ರದ ವಿವರಣೆಯನ್ನು ನಮ್ಮ ಮುಂದಿಡುತ್ತಾನೆ.
·  ಶ್ಲೋಕ - 20
ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ ।
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ೨೦॥
ಕಾರ್ಯ ಕಾರಣ ಕರ್ತೃತ್ವೇ ಹೇತುಃ ಪ್ರಕೃತಿಃ ಉಚ್ಯತೇ ।
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುಃ ಉಚ್ಯತೇ ದೇಹ ಮತ್ತು ಇಂದ್ರಿಯಗಳ ನಿರ್ಮಾಣದಲ್ಲಿ ಜಡಪ್ರಕೃತಿ[ಚೇತನಪ್ರಕೃತಿಯಾದ ಶ್ರೀ ತತ್ವ] ಕಾರಣವೆನಿಸಿದೆ. ಸುಖ-ದುಃಖಗಳ ಅನುಭವದಲ್ಲಿ ಜೀವ[ಪರಮಾತ್ಮ] ಕಾರಣಭೂತನಾಗಿದ್ದಾನೆ.
ಈ ಶ್ಲೋಕದಲ್ಲಿ ಎರಡು ವಿಚಾರವನ್ನು ಕೃಷ್ಣ ಬಿಡಿಸಿ ತೋರಿದ್ದಾನೆ. ನಮಗೆ ಒಂದು ದೇಹವಿದೆ. ದೇಹದಲ್ಲಿ ಐದು ಬಗೆಯ ಸುಖ-ದುಃಖ ಭೋಗವನ್ನು ಅನುಭವಿಸಲು ಐದು ಇಂದ್ರಿಯಗಳಿವೆ. ಹೀಗೆ ಶರೀರ, ಶರೀರದಲ್ಲಿ ಇಂದ್ರಿಯಗಳು- ಇಂದ್ರಿಯಗಳ ಮೂಲಕ ಸುಖ-ದುಃಖ ಭೋಗ-ಇದು ಜೀವನ. ಜೀವನಿಗೆ ಅವನು ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕಾರ್ಯ ಕಾರಣಗಳ ಕರ್ತೃತ್ವ. ಅಂದರೆ ನಮ್ಮ ಕರ್ಮಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಒಂದು ರೂಪವನ್ನು ಕೊಟ್ಟ. ಈ ನಮ್ಮ ದೇಹ ರೂಪುಗೊಳ್ಳಲು ಅಧಿಷ್ಠಾನಕಾರಣ ನಮ್ಮ ತಂದೆ ತಾಯಿ. ನಮ್ಮ ದೇಹ ಜಡಪ್ರಕೃತಿಯಿಂದಾಗಿದೆ. ತಾಯಿಯ ಹೊಟ್ಟೆಯಲ್ಲಿ ನಮಗೆ ಈ ರೂಪವನ್ನು ಕೊಟ್ಟವಳು ಜಗನ್ಮಾತೆ ಶ್ರೀಲಕ್ಷ್ಮಿ. ಭಗವಂತನಿಗೆ ಅಂಗವಾಗಿ ಲಕ್ಷ್ಮಿ ದೇಹ ರಚನೆ ಮಾಡುತ್ತಾಳೆ. ಈ ರೀತಿ ದೇಹದ ಅಂಗಾಂಗ ಮತ್ತು ಇಂದ್ರಿಯಗಳನ್ನು ಪಡೆದ ಜೀವ, ಅದರಿಂದ ಸುಖ-ದುಃಖದ ಭೋಗವನ್ನು ಅನುಭವಿಸುತ್ತದೆ. ಪರಮಪುರುಷ ಭಗವಂತ ಜೀವನಿಗೆ ಸುಖ-ದುಃಖದ ಅನುಭವವನ್ನು ಕೊಡುತ್ತಾನೆ. ಹೀಗಾಗಿ ದೇಹರಚನೆಯಲ್ಲಿ ಚೇತನ ಮತ್ತು ಜಡ ಪ್ರಕೃತಿ ಒಳಗೊಂಡರೆ, ಭಗವಂತ ಜೀವನಿಗೆ ಭೋಕ್ತೃತ್ವದ ಅನುಭವವನ್ನು ಸ್ವಯಂ ಅಂತರ್ಯಾಮಿಯಾಗಿ ನಿಂತು ನೀಡುತ್ತಾನೆ.

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.

ಅನಾಮಧೇಯ ಹೇಳಿದರು...

Naveen nagammanavar

ಅನಾಮಧೇಯ ಹೇಳಿದರು...

Naveen nagammanavar

ಅನಾಮಧೇಯ ಹೇಳಿದರು...

Naveen nagammanavar