ಭಗವದ್ಗೀತೆ ಅಧ್ಯಾಯ-12 (ಶ್ಲೋಕ 1 ರಿಂದ 20) (ಎಲ್ಲಾ)


ಭಗವದ್ಗೀತೆ ಅಧ್ಯಾಯ-12 (ಶ್ಲೋಕ 1 ರಿಂದ 20) 
·  ಶ್ಲೋಕ - 01
ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯಎಂದು ಹೇಳಿದ. ಹೀಗೆ ಹೇಳಿದಾಗ-ಯಾವ ರೀತಿ ಭಗವಂತನಲ್ಲಿ ನಾವು ಭಕ್ತಿ ಮಾಡಬೇಕು, ಯಾವುದು ನಿಜವಾದ ಭಕ್ತಿ, ಭಕ್ತನಲ್ಲಿರಬೇಕಾದ ಗುಣಗಳೇನು, ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಪ್ರಶ್ನೋಪನಿಷತ್ತಿನಲ್ಲಿ ಹೇಳುವಂತೆ:
ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನಃ |
ಅನ್ನಮನ್ನಾದ್ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ಚ ನಾಮ ಚ || ||
ಭಗವಂತ ಈ ಪ್ರಪಂಚವನ್ನು ಸೃಷ್ಟಿ ಮಾಡಿ, ಹದಿನೈದು ಬೇಲಿಗಳ ಈ ಸಂಸಾರದಲ್ಲಿ ಜೀವವನ್ನು ಇಟ್ಟ. ಈ ಹದಿನೈದು ಬೇಲಿಗಳೆಂದರೆ:
1. ಶ್ರದ್ಧೆಯ ಬೇಲಿ: ಜೀವ ಸ್ವರೂಪಭೂತವಾದ ಬೇಲಿ (ಕಿತ್ತೆಸೆಯಲು ಆಗದ ಬೇಲಿ)- 'ಜೀವ ಸ್ವಭಾವದಿಂದ ಬಂದ ಶ್ರದ್ಧೆ'. ಮತ್ತು ಕಿತ್ತೆಸೆಯಬೇಕಾದ ಬೇಲಿ-ಮನೆತನ , ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ಧೆ.
2 -6. ಪಂಚಭೂತಗಳ ಬೇಲಿ : ಮಣ್ಣು-ನೀರು( ಅನ್ನಮಯ ಕೋಶ) ಬೆಂಕಿ-ಗಾಳಿ-ಆಕಾಶ(ಪ್ರಾಣಮಯ ಕೋಶ).
7. ಇಂದ್ರಿಯಗಳ ಬೇಲಿ: ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು.
8. ಅಂತಃಕರಣದ ಬೇಲಿ: ಕೆಟ್ಟದ್ದನ್ನು ಯೋಚಿಸುವ ಮನಸ್ಸು
9. ಅನ್ನದ ಬೇಲಿ: ಆಹಾರ
10. ವೀರ್ಯದ ಬೇಲಿ: ಶಕ್ತಿ
11. ತಪಃ : ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ ಕನಸಿನಂತೆ).
12. ಮಂತ್ರಃ :ತನ್ನ ಕನಸನ್ನು ನನಸು ಮಾಡಲು ಆಡುವ ಮಾತುಗಾರಿಕೆ..
13. ಕರ್ಮಃ : ಕನಸನ್ನು ಸಾಧಿಸಲು ಮಾಡುವ ಕರ್ಮ.
14. ಲೋಕಗಳು : ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು , ನನ್ನದು ಅನ್ನುವ ಸೊತ್ತುಗಳು)
15. ನಾಮದ ಬೇಲಿ : ಕೀರ್ತಿ(Name and fame).
ಈ ಹದಿನೈದು ಬೇಲಿಯ ಒಳಗೆ ಸಿಕ್ಕಿ ಹಾಕಿಕೊಂಡಿರುವ ಹದಿನಾರನೆಯದಾದ ಕ್ಷರ’. ಜೀವನಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಕಳಿಸಿರುವ ಚಿತ್ ಪ್ರಕೃತಿ ಹದಿನೇಳನೆಯವಳಾದ-ಲಕ್ಷ್ಮಿ. ಆಕೆ ಅಕ್ಷರಪುರುಷಳು. ಕ್ಷರ-ಅಕ್ಷರಗಳಿಗಿಂತ ಅತೀತನಾದ ಭಗವಂತ ಹದಿನೆಂಟನೆಯವನಾದ ಪುರುಷಃ. ಆತ ಪುರುಷೋತ್ತಮ. ಗೀತೆಯಲ್ಲಿ ಇಲ್ಲಿಯ ತನಕ ಭಗವಂತ ಹೇಳಿರುವುದೇನೆಂದರೆ ನನ್ನನ್ನು ಭಕ್ತಿಯಿಂದ ಭಜಿಸುವವನು ಈ ಸಂಸಾರ ಬಂಧದಿಂದ ಮುಕ್ತಿ ಪಡೆದು ನನ್ನನ್ನು ಸೇರುತ್ತಾನೆಎಂದು. ಇಲ್ಲಿ ನಮಗೆ ಬರುವ ಪ್ರಶ್ನೆ ಏನೆಂದರೆ-ಏಕೆ ಹದಿನೇಳನೆಯವಳಾದ ಶ್ರೀತತ್ವವನ್ನು ಪೂಜಿಸಬಾರದು, ತಂದೆಗಿಂತ ತಾಯಿ ಕರುಣಾಮಯಿ. ನಮ್ಮನ್ನು ಸಂಸಾರಬಂಧದಲ್ಲಿ ಹಾಕಿದ ತಾಯಿಯನ್ನು ಪೂಜಿಸುವುದರಿಂದ ನಮಗೆ ಮೋಕ್ಷಪ್ರಾಪ್ತಿ ಸುಲಭವಾಗಬಹುದಲ್ಲವೇ? ಯಾವ ದಾರಿ ಹೆಚ್ಚು ಸೂಕ್ತ ಎನ್ನುವುದು. ಶ್ರೀತತ್ವದಿಂದ ಮುಕ್ತಿ ಸಾಧ್ಯ ಎಂದು ಸ್ತುತಿಯಲ್ಲಿ ಹೇಳಲಾಗಿದೆ. ಉದಾಹರಣೆಗೆ ಎಲ್ಲರೂ ದೇವರ ಪೂಜೆ ಮಾಡಿ ಮಂಗಳಾರತಿ ಮಾಡುವಾಗ ಹೇಳುವ ಈ ಕೆಳಗಿನ ಶ್ರೀಸೂಕ್ತದ ಸಾಲು:
ಶ್ರಿಯೇ ಜಾತಃ ಶ್ರಿಯ ಆನಿರ್ಯಾಯಃ ಶ್ರಿಯಂ ವಯೋ ಜನಿತೃಭ್ಯೋದಧಾತು |
ಶ್ರಿಯಂ ವಸಾನಾಃ ಅಮೃತತ್ವಮಾಯನ್ ಭಜಂತಿ ಸದ್ಯಸ್ಸಮಿಧಾ ಮಿತದ್ಯೂನ್ ||
ಇಲ್ಲಿ ಹೇಳುವಂತೆ: "ಶ್ರೀತತ್ವದ ಉಪಾಸನೆಗೋಸ್ಕರ ನಾವು ಹುಟ್ಟಿದ್ದೇವೆ. ಶ್ರೀತತ್ವವನ್ನು ಸ್ತೋತ್ರಮಾಡುವವನಿಗೆ ಆಕೆ ಸಂಪತ್ತನ್ನೂ ಧೀರ್ಘಾಯುಷ್ಯವನ್ನು ಕೊಡುತ್ತಾಳೆ. ಶ್ರೀತತ್ವ ಉಪಾಸನೆ ಮಾಡಿದವರು ಅಮೃತತ್ವವನ್ನು ಪಡೆದರು. ದಂಪತಿಗಳು ಶ್ರೀತತ್ವವನ್ನು ಉಪಾಸನೆ ಮಾಡುವುದರಿಂದ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಆಕೆ ಮೋಕ್ಷಪ್ರದಳು". ಹೀಗೆ ಹೇಳಿರುವುದರಿಂದ ಶ್ರೀತತ್ವದ ಉಪಾಸನೆಯಿಂದ ಕೂಡ ಮೋಕ್ಷ ಪಡೆಯಬಹುದು ಎನ್ನುವ ಅಂಶ ಸ್ಪಷ್ಟ. ಪುರುಷೋತ್ತಮ ಭಗವಂತನ ಉಪಾಸನೆ ಮತ್ತು ಶ್ರೀತತ್ವ ಅಥವಾ ಅಕ್ಷರ ಉಪಾಸನೆ ಇದರಲ್ಲಿ ಯಾವ ದಾರಿ ಹೆಚ್ಚು ಸೂಕ್ತ? ಇದು ಇಲ್ಲಿ ನಮ್ಮ ನಿಮ್ಮೆಲರ ಪ್ರಶ್ನೆ. ನಮ್ಮ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯನ್ನು ಭಗವಂತನ ಮುಂದಿಡುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ. ಎರಡನೆ ಷಟ್ಕದ ಕೊನೆಯ ಅಧ್ಯಾಯವಾದ ಇಲ್ಲಿ ಕೇವಲ ಇಪ್ಪತ್ತು ಶ್ಲೋಕಗಳಿವೆ. ಅಧ್ಯಾಯ ಚಿಕ್ಕದಾದರೂ ಕೂಡ ಈ ಅಧ್ಯಾಯ ಅಪೂರ್ವ ವಿಷಯಗಳನ್ನೊಳಗೊಂಡ ಅಧ್ಯಾಯ. ಭಗವಂತ ಇಲ್ಲಿ ಹೇಳಿರುವ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಬನ್ನಿ, ಈ ಅಧ್ಯಾಯದಲ್ಲಿ ಹೇಳಿರುವ ಅಪೂರ್ವ ಗುಣ-ಭಕ್ತಿ ಸಂದೇಶವನ್ನು ತಿಳಿಯೋಣ.
ಅರ್ಜುನ ಉವಾಚ ।
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ೧॥
ಅರ್ಜುನ ಉವಾಚ ಅರ್ಜುನ ಕೇಳಿದನು :
ಏವಮ್ ಸತತ ಯುಕ್ತಾಃ ಯೇ ಭಕ್ತಾಃ ತ್ವಾಮ್ ಪರ್ಯುಪಾಸತೇ
ಯೇ ಚ ಅಪಿ ಅಕ್ಷರಮ್ ಅವ್ಯಕ್ತಮ್ ತೇಷಾಮ್ ಕೇ ಯೋಗವಿತ್ತಮಾಃ ಹೀಗೆ ನಿರಂತರ ಸಾಧನೆಯಿಂದ ನಿನ್ನನ್ನು ಸೇವಿಸುವ ಭಕ್ತರು ಮತ್ತು ಅಳಿವಿರದ ಅವ್ಯಕ್ತತತ್ವ(ಶ್ರೀತತ್ವ)ದ ಉಪಾಸಕರು. ಇವರಲ್ಲಿ ಯಾರು ಹೆಚ್ಚಿನವರು.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಭಗವಂತನ ವಿಶಿಷ್ಟರೂಪದ ಉಪಾಸನೆ ಮತ್ತು ಯಾವುದೇ ರೂಪಗಳಿಂದ ವ್ಯಕ್ತವಾಗದ ನಿರಾಕಾರ ಉಪಾಸನೆ-ಇವೆರಡರಲ್ಲಿ ಯಾವುದು ಸೂಕ್ತ ಎಂದು ಕೇಳಿದಂತೆ ಕಾಣುತ್ತದೆ. ಆದರೆ ಈ ಶ್ಲೋಕದಲ್ಲಿ ಅರ್ಜುನ ಕೇಳುತ್ತಿರುವ ಮೂಲ ಪ್ರಶ್ನೆಯೇ ಬೇರೆ. ಇದನ್ನು ಮಧ್ವಾಚಾರ್ಯರು ವಿಶಿಷ್ಟವಾಗಿ ವಿವರಿಸಿದ್ದಾರೆ.
ಭಗವಂತನ ಚಿಂತನೆ ಮಾಡುವವರೆಲ್ಲ ಭಗವದ್ ಭಕ್ತರಾಗಿರಬೇಕೆಂದಿಲ್ಲ. ಭಗವಂತನ ಚಿಂತನೆ ಮಾಡುವುದಕ್ಕೆ ಮೂಲದ್ರವ್ಯ ಪ್ರೀತಿ. ಜ್ಞಾನಪೂರ್ವಕವಾದ ಪ್ರೀತಿ-ಭಕ್ತಿ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯ ದೇವರ ಕೋಣೆಯಲ್ಲೊಂದು ವಿಗ್ರಹವಿರುತ್ತಿತ್ತು. ಅವರವರ ಉಪಾಸನೆಗೆ ಯಾವುದು ಇಷ್ಟವೋ ಅಂತಹ ಇಷ್ಟದೇವತೆಯ ವಿಗ್ರಹ. ನಾವು ಈ ಅಂಶವನ್ನು ವಿಶ್ಲೇಷಿಸಿದರೆ ಏಕೆ ಈ ರೀತಿ ಪ್ರತಿಮೆಯನ್ನು ಇಟ್ಟು ಪೂಜಿಸುತ್ತಿದ್ದರು ಎನ್ನುವುದು ತಿಳಿಯುತ್ತದೆ. ಇಲ್ಲಿ ಮೊದಲು ನಾವು ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳಬೇಕು. ಕಣ್ಣಿನಿಂದ ನೋಡದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಉದಾಹರಣೆಗೆ ಭಗವಂತ ಅತ್ಯಂತ ಸುಂದರಎಂದು ತಿಳಿದು ನಾವು ಕಣ್ಣುಮುಚ್ಚಿ ಧ್ಯಾನಕ್ಕೆಕುಳಿತರೆ, ನಮ್ಮ ಮನಸ್ಸು ನಾವು ನೋಡಿದ ಯಾವುದೋ ಒಬ್ಬ ಸುಂದರ ಮನುಷ್ಯನನ್ನು ನಮಗೆ ತೋರಿಸುತ್ತದೆ! ಇದಕ್ಕಾಗಿ ಹಿಂದಿನವರು ಭಗವಂತನಿಗೆ ನಮ್ಮಂತೆ ಕರಚರಣಗಳಿವೆ, ಆದರೆ ಆತ ಯಾವ ಮನುಷ್ಯರಂತೆಯೂ ಇಲ್ಲ ಎನ್ನುವಂತೆ ಆತನ ಪ್ರತಿಮೆಯನ್ನು ಕಡೆದರು. ಈ ಪ್ರತಿಮೆಯನ್ನು ನೆನಪಿನಲ್ಲಿಟ್ಟುಕೊಂಡು ಕಣ್ಣುಮುಚ್ಚಿ ಭಗವಂತನ ಗುಣಾನುಸಂಧಾನ ಮಾಡಿದರೆ, ನಮಗೆ ಕೇವಲ ಆ ಮೂರ್ತಿ ಕಾಣಿಸುತ್ತದೆ ಹೊರತು ನಮ್ಮ ಪರಿಚಯದ ಮನುಷ್ಯರಲ್ಲ. ಇದರಿಂದ ಧ್ಯಾನ ಸುಲಭಸಾಧ್ಯವಾಗುತ್ತದೆ. ಮನಸ್ಸು ಯಾವುದೋ ವ್ಯಕ್ತಿಯನ್ನು ಚಿಂತಿಸದೆ ಪ್ರತಿಮೆಯ ರೂಪದಲ್ಲಿ ಭಗವಂತನನ್ನು ಕಾಣಲಾರಂಭಿಸುತ್ತದೆ. ಈ ಕಾರಣಕ್ಕಾಗಿ ಭಗವಂತನ ಚಿಂತನೆ ಮಾಡಲು ಒಂದು ರೂಪ ಅಗತ್ಯ.
ನಮಗೆ ತಿಳಿದಂತೆ ಮಾತೆ ಶ್ರೀಲಕ್ಷ್ಮಿಯನ್ನು ಶ್ರೀತತ್ವ, ಅಕ್ಷರಳು, ಅವ್ಯಕ್ತಳು, ಪ್ರಕೃತಿ, ಹ್ರೀ, ಇತ್ಯಾದಿ ಅನೇಕ ಹೆಸರಿನಿಂದ ಕರೆಯುತ್ತಾರೆ. ಭಗವದ್ಗೀತೆಯಲ್ಲೇ ಅನೇಕ ಕಡೆ ಈ ರೀತಿಯ ಸಂಬೋಧನೆ ಕಾಣಸಿಗುತ್ತವೆ. ಕಠೋಪನಿಷತ್ತಿನಲ್ಲಿ ಹೇಳುವಂತೆ "ಮಹತಃ ಪರಮವ್ಯಕ್ತಮವ್ಯಕ್ತಾತ್ಪುರುಷಃ ಪರಃ" . ಅಂದರೆ ಮಹತತ್ವಕ್ಕಿಂತ ಅವ್ಯಕ್ತ ತತ್ವ ಹಿರಿದು, ಅವ್ಯಕ್ತ ತತ್ವಕ್ಕಿಂತ ಪುರುಷನಾದ ಭಗವಂತ ಹಿರಿಯ. ಇಲ್ಲಿ ಸ್ಪಷ್ಟವಾಗಿ ನಮಗೆ ತಿಳಿವುದೇನೆಂದರೆ-ಅವ್ಯಕ್ತಳು, ಅಕ್ಷರಳು ಎಂದರೆ ಮಾತೆ ಶ್ರೀಲಕ್ಷ್ಮಿ.
ನಿರಂತರವಾಗಿ ಮನಸ್ಸಿನಲ್ಲಿ ನೀನು ಹೇಳಿರುವ ಗುಣಗಳ ಅನುಸಂಧಾನ ಮಾಡುತ್ತಾ, ಶಾಸ್ತ್ರಗಳ ಮೂಲಕ ನಿನ್ನ ಮಹಿಮೆಯನ್ನು, ನಿನ್ನ ರೂಪ ವಿಶೇಷಗಳನ್ನು ತಿಳಿದುಕೊಂಡು, ಅದರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು, ನಿನ್ನ ಉಪಾಸನೆ ಮಾಡಿದರೆ ಒಳ್ಳೆಯದೋ, ಅಥವಾ ಕ್ಷರಾತೀತ(ಅಕ್ಷರ)ಳಾದ ಶ್ರೀತತ್ವದ ಉಪಾಸನೆ ಒಳ್ಳೆಯದೋ, ಯಾವ ದಾರಿ ಹೆಚ್ಚು ಸೂಕ್ತ-ಎನ್ನುವುದು ಅರ್ಜುನನ ಪ್ರಶ್ನೆ.
·  ಶ್ಲೋಕ - 02
ಭಗವಾನುವಾಚ ।
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ ।
ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ ೨॥
ಭಗವಾನ್ ಉವಾಚ-ಭಗವಂತ ಹೇಳಿದನು :
ಮಯಿ ಆವೇಶ್ಯ ಮನಃ ಯೇ ಮಾಮ್ ನಿತ್ಯ ಯುಕ್ತಾಃ ಉಪಾಸತೇ ।
ಶ್ರದ್ಧಯಾ ಪರಯಾ ಉಪೇತಾಃ ತೇ ಮೇ ಯುಕ್ತಃ ತಮಾಃ ಮತಾಃ ನನ್ನಲ್ಲಿ ಬಗೆಯಿಟ್ಟವರು, ತುಂಬು ನಂಬಿಕೆಯಿಂದ ಕೂಡಿ ನನ್ನನ್ನೆ ಸೇವಿಸುವ ನಿರಂತರ ಸಾಧಕರು-ಅತ್ಯಂತ ಪರಿಪೂರ್ಣರೆಂದು ಪರಿಗಣಿತರಾಗುತ್ತಾರೆ.
ಕೃಷ್ಣ ಅರ್ಜುನನ ಪ್ರಶ್ನೆಗೆ ಉತ್ತರ ಕೊಡುತ್ತ ಹೇಳುತ್ತಾನೆ: ಶ್ರದ್ಧೆಯಿಂದ ಯಾರು ನನ್ನನ್ನು ಉಪಾಸನೆ ಮಾಡುತ್ತಾರೋ ಅವರು ಭಗವಂತನ ಸಾಧಕರಲ್ಲಿ ಶ್ರೇಷ್ಠರುಎಂದು. ಇಲ್ಲಿ ಶ್ರದ್ಧೆ ಎಂದರೆ ನಂಬಿಕೆ. ಸಾಧನೆಯಲ್ಲಿ ಬಹಳ ಮುಖ್ಯವಾದದ್ದು ಶ್ರದ್ಧೆ. ಶ್ರದ್ಧೆ ಇಲ್ಲದೆ ಉಪಾಸನೆ ಮಾಡಿ ಉಪಯೋಗವಿಲ್ಲ. ಇದು ಮನಃಶಾಸ್ತ್ರ. ಇದಕ್ಕೆ ಲೌಕಿಕವಾದ ಉದಾಹರಣೆ: ರೋಗಿ ಮತ್ತು ವೈದ್ಯರು. ಒಂದು ವೇಳೆ ರೋಗಿಗೆ ತನ್ನನ್ನು ಪರೀಕ್ಷಿಸಿ ಔಷಧ ಕೊಡುವ ವೈದ್ಯನ ಮೇಲೆ ನಂಬಿಕೆ ಇಲ್ಲದಿದ್ದರೆ, ತೆಗೆದುಕೊಳ್ಳುವ ಔಷಧ ಆತನಲ್ಲಿ ಕೆಲಸ ಮಾಡುವುದಿಲ್ಲ. ಗಾಢವಾದ ನಂಬಿಕೆ ಇದ್ದರೆ-ವೈದ್ಯ ಯಾವ ಕಾಯಿಲೆಗೆ ಯಾವ ಮದ್ದು ಕೊಟ್ಟರೂ ರೋಗ ಗುಣವಾಗುತ್ತದೆ! ಇದು ಸಂಶೋಧನೆಯಿಂದ ಸಾಬೀತಾಗಿರುವ ವಿಷಯ. ಆದ್ದರಿಂದ ಕೇವಲ ಕಣ್ಮುಚ್ಚಿ-ನಂಬಿಕೆ ಇಲ್ಲದೆ ಉಪಾಸನೆ ಮಾಡಿದರೆ ಉಪಯೋಗವಿಲ್ಲ. ದೃಢವಾದ ಶ್ರದ್ಧೆಯಿಂದ, ತಿಳಿದು, ಭಗವಂತನ ಗುಣರೂಪವನ್ನು ಧ್ಯಾನ ಮಾಡುವುದು ಶ್ರೇಷ್ಠ ಭಕ್ತಿ ಎನಿಸುತ್ತದೆ. ಪೂರ್ಣ ಶ್ರದ್ಧೆಯಿಂದ ಯಾವ ರೂಪದಿಂದಲೂ, ಯಾವ ನಾಮದಿಂದಲೂ ಭಗವಂತನನ್ನು ಉಪಾಸನೆ ಮಾಡಬಹುದು. ಭಗವಂತನ ರೂಪವಲ್ಲದ ರೂಪವೊಂದಿಲ್ಲ, ಭಗವಂತನ ನಾಮವಲ್ಲದ ನಾಮವೊಂದಿಲ್ಲ. ಪೂರ್ಣ ಶ್ರದ್ಧೆ ಇದ್ದಾಗ ನಾಮ-ರೂಪ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಭಗವಂತ ಹೇಳುತ್ತಾನೆ:ನನ್ನ ರೂಪ ಮತ್ತು ಗುಣ ವಿಶೇಷವನ್ನು ಯಾರು ಶ್ರದ್ಧೆಯಿಂದ ಉಪಾಸನೆ ಮಾಡುತ್ತಾರೆ ಅವರು ಸಾಧಕರಲ್ಲಿ ಶ್ರೇಷ್ಠರುಎಂದು.
·  ಶ್ಲೋಕ - 03 & 04
ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ ।
ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್ ॥೩॥

ಸನ್ನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ ।
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ೪॥
ಯೇತು ಅಕ್ಷರಮ್ ಅನಿರ್ದೇಶ್ಯಮ್ ಅವ್ಯಕ್ತಮ್ ಪರ್ಯುಪಾಸತೇ ।
ಸರ್ವತ್ರಗಮ್ ಆಚಿಂತ್ಯಮ್ ಚ ಕೂಟಸ್ಥಮ್ ಅಚಲಮ್ ಧ್ರುವಮ್ ॥
ಸನ್ನಿಯಮ್ಯಇಂದ್ರಿಯ ಗ್ರಾಮಮ್ ಸರ್ವತ್ರ ಸಮ ಬುದ್ಧಯಃ ।
ತೇ ಪ್ರಾಪ್ನುವಂತಿ ಮಾಮ್ ಏವ ಸರ್ವ ಭೂತ ಹಿತೇ ರತಾಃ --ಅವ್ಯಕ್ತವೂ ಅಳಿವಿರದ ತತ್ವ. ಮಾತಿಗೆ ನಿಲುಕದ, ಚಿಂತನೆಗೆ ಎಟುಕದ ತತ್ವ. ಆಗಸದಲ್ಲಿ ನೆಲೆಸಿ ಎಲ್ಲೆಡೆಯು ತುಂಬಿರುವಂಥದು. ನೆಲೆಗೆಡದ ನಿರ್ವಿಕಾರವಾದ ತತ್ವ. ಇಂದ್ರಿಯಗಳ ಗಡಣವನ್ನು ಬಿಗಿಹಿಡಿದು ಎಲ್ಲೆಡೆಯು ಸಮದೃಷ್ಟಿಯಿಂದ ಎಲ್ಲ ಪ್ರಾಣಿಗಳಿಗೆ ಒಳಿತನ್ನು ಬಯಸುತ್ತ ಇಂಥ ಅವ್ಯಕ್ತತತ್ವವನ್ನು ಸೇವಿಸುವವರೂ ಕೂಡ ನನ್ನನ್ನೆ ಸೇರುತ್ತಾರೆ.
ಅವ್ಯಕ್ತತತ್ವ ಲಕ್ಷ್ಮಿಯ ಉಪಾಸನೆಯ ಬಗ್ಗೆ ಇಲ್ಲಿ ಕೃಷ್ಣ ವಿವರಿಸುತ್ತಾನೆ. ಲೋಕನೀತಿಗೂ ಭಗವಂತನ ಉಪಾಸನೆಯಲ್ಲೂ ಒಂದು ವೆತ್ಯಾಸವಿದೆ. ಲೋಕದಲ್ಲಿ ಸಾಮಾನ್ಯವಾಗಿ ತಾಯಿ ಯಾವಾಗಲೂ ತನ್ನ ಮಕ್ಕಳ ತಪ್ಪನ್ನು ಕ್ಷಮಿಸುತ್ತಾಳೆ ಮತ್ತು ತಂದೆ ಶಿಕ್ಷಿಸುತ್ತಾನೆ. ಆದರೆ ತಾಯಿ ಶ್ರೀಲಕ್ಷ್ಮಿ ಉಪಾಸನೆ ಮತ್ತು ಭಗವಂತನ ಉಪಾಸನೆಯಲ್ಲಿ ಇದು ವ್ಯತಿರಿಕ್ತ. ಉಪಾಸನೆಯಲ್ಲಿ ಏನಾದರೂ ಲೋಪ ದೋಷಗಳಾದರೆ ಮಾತೆ ಕ್ಷಮಿಸಲಾರಳು, ಆದರೆ ಭಗವಂತ ಕ್ಷಮಿಸುತ್ತಾನೆ. ಈ ಕಾರಣಕ್ಕಾಗಿ ಅವ್ಯಕ್ತಳಾದ ಅಕ್ಷರಳ ಉಪಾಸನೆ ಕಷ್ಟ. ಇಲ್ಲಿ ಕೃಷ್ಣ ಮಾತೆ ಲಕ್ಷ್ಮಿಯನ್ನು ಉಪಾಸನೆ ಮಾಡುವವರು ತಿಳಿದಿರಬೇಕಾದ ಅಂಶಗಳನ್ನು ವಿವರಿಸುತ್ತಾನೆ. ಈ ವಿವರಣೆಯನ್ನು ಅನೇಕ ವಿಶೇಷಣಗಳನ್ನು ಬಳಸಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಅಳಿವಿರದ ದೇಹವುಳ್ಳ ಆಕೆ ಅಕ್ಷರಳು; ನಮ್ಮ ಬುದ್ಧಿಗೆ ಗೋಚರವಾಗದ ಪ್ರಕೃತಿ ಅನಿರ್ದೇಶ್ಯಳು; ಎಂದೂ ವ್ಯಕ್ತವಾಗದ ಲಕ್ಷ್ಮಿ ಅವ್ಯಕ್ತಳು. ಈ ಎಲ್ಲಾ ಗುಣಗಳು ಭಗವಂತನಿಗೂ ಅನ್ವಯವಾಗುತ್ತದೆ. ಜಗತ್ತಿನ ಸೃಷ್ಟಿಗೆ ಮೂಲ ತತ್ವವಾದ ಆಕಾಶದಲ್ಲಿ ನೆಲಸಿ, ಇಡೀ ವಿಶ್ವದ ವಿಸ್ತಾರಕ್ಕೆ ಕಾರಣಳಾದವಳು ಲಕ್ಷ್ಮಿ. ಸ್ಥಿರ ಮತ್ತು ಶಾಶ್ವತವಾಗಿರುವ ಆಕೆ ಸದಾ ಭಗವಂತನ ಪಾದವನ್ನು ಸೇವಿಸುತ್ತಿರುತ್ತಾಳೆ. ಇಂಥಹ ಶಕ್ತಿ ದೇವತೆಯನ್ನು ಉಪಾಸನೆ ಮಾಡಲು ಕಠೋರವಾದ ಇಂದ್ರಿಯ ನಿಗ್ರಹ ಅಗತ್ಯ. ಎಲ್ಲವನ್ನೂ ಸಮಬುದ್ಧಿಯಿಂದ ಕಾಣುತ್ತ, ಯಾವುದೇ ನ್ಯೂನತೆ ಇಲ್ಲದೆ ಉಪಾಸನೆ ಮಾಡುವುದು ಇಲ್ಲಿ ಅತ್ಯಗತ್ಯ. [ಉದಾಹರಣೆಗೆ ಲಲಿತ ಸಹಸ್ರನಾಮ ಪಾರಾಯಣ. ಇಲ್ಲಿ ಸ್ವಲ್ಪ ಲೋಪದೋಷವಾದರೂ ಕೂಡ ಅದರಿಂದ ಅನರ್ಥವಾಗುತ್ತದೆ.] ಈ ರೀತಿ ಅತ್ಯಂತ ನಿಯಮಬದ್ಧವಾಗಿ ಅವ್ಯಕ್ತತತ್ವದ ಉಪಾಸನೆಯಿಂದ ಭಗವಂತನನ್ನು ಸೇರಲು ಸಾಧ್ಯ. ಆದರೆ ಇದು ಸುಲಭ ದಾರಿ ಅಲ್ಲ ಎನ್ನುತ್ತಾನೆ ಕೃಷ್ಣ.
·  ಶ್ಲೋಕ - 05
ಕ್ಲೇಶೋSಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ ।
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ॥೫॥
ಕ್ಲೇಶಃ ಅಧಿಕ ತರಃ ತೇಷಾಮ್ ಅವ್ಯಕ್ತ ಆಸಕ್ತ ಚೇತಸಾಮ್ ।
ಅವ್ಯಕ್ತಾ ಹಿ ಗತಿಃ ದುಃಖಮ್ ದೇಹವದ್ಭಿಃ ಅವಾಪ್ಯತೇ –-ಅವ್ಯಕ್ತತತ್ವದ ಉಪಾಸನೆಯನ್ನೇ ಮೆಚ್ಚುವವರಿಗೆ ದಣಿವು ಹೆಚ್ಚು. ಅವ್ಯಕ್ತದ ಮೂಲಕ ಬಿಡುಗಡೆಯ ದಾರಿ ಸಾಧಕರಿಗೆ ಕಷ್ಟದ ಬಳಸುದಾರಿ.
ಶಕ್ತಿ ಉಪಾಸನೆ ಮಾಡುವವರಿಗೆ ಆಕೆ ಒಲಿದು ಮೋಕ್ಷ ಕರುಣಿಸುತ್ತಾಳೆ, ಆದರೆ ಅವ್ಯಕ್ತದ ಉಪಾಸನೆ ಮಾಡುವವರಿಗೆ ಅಧಿಕ ತರ ಕ್ಲೇಶಃ’ –ಉಪಾಸನೆ ತುಂಬಾ ಕಷ್ಟ. ಇದು ನೇರ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ಭಗವಂತನೆಡೆಗೆ ಪಯಣಿಸಿದಂತೆ. ಸಾಧಕರು ಇದನ್ನು ಬಹಳ ಕಷ್ಟದಿಂದ ಸಾಧಿಸಬೇಕು.
ಮುಂದಿನ ಶ್ಲೋಕಗಳಲ್ಲಿ ಕೃಷ್ಣ ನೇರ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದನ್ನು ವಿವರಿಸುತ್ತಾನೆ. ಇದು ಭಗವಂತ ನಮಗೆ ತೋರಿಸಿಕೊಟ್ಟ ಸುಲಭ ಭಕ್ತಿ ಮಾರ್ಗ.
·  ಶ್ಲೋಕ - 06 & 07
ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ ।
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ ೬॥

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್ ೭॥
ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಾಃ ।
ಅನನ್ಯೇನ ಏವ ಯೋಗೇನ ಮಾಮ್ ಧ್ಯಾಯಂತ ಉಪಾಸತೇ ||
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್ --ಕೆಲವರಿರುತ್ತಾರೆ: ಅವರು ಮಾಡಿದ್ದನ್ನೆಲ್ಲ ನನ್ನಲ್ಲಿ ಅರ್ಪಿಸಿಬಿಡುತ್ತಾರೆ. ಅವರು ನನ್ನಲ್ಲೆ ಬಗೆಯಿಟ್ಟವರು. ಅವರ ಸಾಧನೆಯ ಗುರಿ ನಾನಲ್ಲದೆ ಬೇರಿಲ್ಲ. ನನ್ನನ್ನೆ ನೆನೆಯುತ್ತ ಸೇವಿಸುತ್ತಾರೆ. ಓ ಪಾರ್ಥಾ, ನನ್ನನ್ನೆ ನೆಚ್ಚಿದ ಅಂಥವರನ್ನು ನಾನು ಬಹುಬೇಗ ಸಾವಿನ ಬಾಳಿನ ಕಡಲಿನಿಂದ ಬಿಡುಗಡೆಗೊಳಿಸುತ್ತೇನೆ.
ಕೃಷ್ಣ ಹೇಳುತ್ತಾನೆ: ನನ್ನನ್ನು ಸೇರುವ ಸುಲಭ ಸಾಧನವೆಂದರೆ-ನೀನು ಜೀವನ ನಿರ್ವಹಣೆಗಾಗಿ ಯಾವ ಕ್ರಿಯೆಯನ್ನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸುವುದುಎಂದು. ಇಲ್ಲಿ ಕೃಷ್ಣ ಹೇಳುತ್ತಿರುವುದು ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದಿರಬೇಕಾದ ಅನುಸಂಧಾನವನ್ನು. ಈ ಕಾರ್ಯವನ್ನು ಭಗವಂತ ನನ್ನ ಕೈಯಿಂದ ಮಾಡಿಸಿದ-ಇದು ಅವನಿಗರ್ಪಿತವಾಗಲಿ ಎನ್ನುವ ಅನುಸಂಧಾನ. ಈ ರೀತಿ ಇದ್ದಾಗ ನಾವು ಭಗವಂತನ ಪೂರ್ಣಾನುಗ್ರಹಕ್ಕೆ ಪಾತ್ರರಾಗಬಹುದು. ಇಲ್ಲಿ ನಮ್ಮಲ್ಲಿರಬೇಕಾದ ಅತಿ ಮುಖ್ಯ ಅಂಶವೆಂದರೆ ಭಗವಂತನನ್ನು ಅನನ್ಯವಾಗಿ ಏಕನಿಷ್ಠೆಯಿಂದ ಉಪಾಸನೆ ಮಾಡುವುದು. ನಮ್ಮ ಸಾಧನೆಯಲ್ಲಿ ಕೊರತೆ ಇರಬಹುದು, ಇಂದ್ರಿಯ ನಿಗ್ರಹ ಕಷ್ಟವಾಗಬಹುದು, ಸರ್ವಭೂತ ಹಿತಚಿಂತನೆ ಆಗದೇ ಇರಬಹುದು, ಚಿಂತನೆಯಲ್ಲಿ ಲೋಪದೋಷಗಳಿರಬಹುದು, ಏಕಾಗ್ರತೆ ಬಾರದೇ ಇರಬಹುದು. ಆದರೆ ಇಲ್ಲಿ ಕೃಷ್ಣನ ಭರವಸೆ ಏನೆಂದರೆ ನನ್ನಲ್ಲಿ ಶರಣಾಗು, ನಿನ್ನ ಮನಸ್ಸನ್ನು ನನ್ನಲ್ಲಿ ನೆಡು-ನಾನು ನಿನ್ನನ್ನು ಉದ್ಧರಿಸುತ್ತೇನೆಎನ್ನುವುದು. ನಮ್ಮ ಚಿತ್ತದಲ್ಲಿ ಭಗವಂತನನ್ನು ನೆಲೆಗೊಳಿಸಿದಾಗ ಭಗವಂತ ನಮ್ಮನ್ನು ಈ ಹುಟ್ಟು ಸಾವಿನ ಸಂಸಾರ ಸಾಗರದಿಂದ ಪಾರು ಮಾಡುವ ಜವಾಬ್ಧಾರಿಯನ್ನು ವಹಿಸುತ್ತಾನೆ.
·  ಶ್ಲೋಕ - 08
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ।
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ॥೮॥
ಮಯಿ ಏವ ಮನಃ ಆಧತ್ಸ್ವ ಮಯಿ ಬುದ್ಧಿಮ್ ನಿವೇಶಯ।
ನಿವಸಿಷ್ಯಸಿ ಮಯಿ ಏವ ಅತಃ ಊರ್ಧ್ವಮ್ ನ ಸಂಶಯಃ --ನನ್ನಲ್ಲೆ ಬಗೆಯಿಡು. ನನ್ನಲ್ಲಿ ತಿಳಿವನ್ನು ನಿಲಿಸು. ಅದರ ಫಲವಾಗಿ ಮುಂದೆ ನನ್ನಲ್ಲೆ ನೆಲೆಸುವೆ ಇದಕೆ ಸಂಶಯವಿಲ್ಲ.
ಕೃಷ್ಣ ಹೇಳುತ್ತಾನೆ: ಮನಸ್ಸನ್ನು ನನ್ನಲ್ಲಿ ಆಧಾನ ಮಾಡು ಎಂದು. ಆಧಾನಎಂದರೆ ಬೀಜ ಬಿತ್ತುವುದು ಅಥವಾ ಕಿಡಿ ಹಚ್ಚುವುದು. ಮನಸ್ಸಿಗೆ ಭಗವಂತನ ಭಕ್ತಿಯ ಕಿಡಿಯನ್ನು ಹಚ್ಚಿ ಅದು ಪ್ರಜ್ವಲಿಸುವಂತೆ ಮಾಡಬೇಕು. ಭಕ್ತಿಯ ಬೀಜ ಬೆಳೆಯುವಂತೆ ಪೋಷಿಸಬೇಕು. ನಿಶ್ಚಯಜ್ಞಾನ ಬುದ್ಧಿಯಲ್ಲಿ ಗಟ್ಟಿಗೊಳ್ಳಬೇಕು. ಈ ರೀತಿ ಸದಾ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದಾಗ, ಯಾವುದೇ ಕ್ಲೇಶವಿಲ್ಲದೆ ಭಗವಂತನನ್ನು ಸೇರಬಹುದು. ಇದು ಶಕ್ತಿ ಉಪಾಸನೆಗಿಂತ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದರ ವಿವರಣೆ. ಭಗವಂತನ ಉಪಾಸನೆಗೆ ಕಟ್ಟುಪಾಡು ನಿರ್ಬಂಧ ಬಹಳ ಕಡಿಮೆ. ಉದಾಹರಣೆಗೆ ವಿಷ್ಣುಸಹಸ್ರನಾಮ ಪಾರಾಯಣ. ವಿಷ್ಣುಸಹಸ್ರನಾಮ ಚಿಂತನೆಗೆ ಯಾವುದೇ ನಿರ್ದಿಷ್ಟ ಸಮಯದ ನಿರ್ಬಂಧವಿಲ್ಲ. ಯಾರು ಬೇಕಾದರೂ ಯಾವ ಕಾಲದಲ್ಲಿ ಕೂಡ ವಿಷ್ಣುಸಹಸ್ರನಾಮ ಪಠಿಸಬಹುದು. ಸರ್ವ ರೋಗಕ್ಕೆ ಮದ್ದು ವಿಷ್ಣುಸಹಸ್ರನಾಮ. ಭಗವಂತನ ಚಿಂತನೆಯಲ್ಲಿ ತಿಳಿಯದೆ ಆಗುವ ಲೋಪದೋಷಗಳಿಗೆ ಕ್ಷಮೆಯಿದೆ. ನಾರಾಯಣನ ಉಪಾಸನೆ ಎಂದರೆ ಅದು ಲಕ್ಷ್ಮಿಸಮೇತ ನಾರಾಯಣನ ಉಪಾಸನೆ. ನಾರಾಯಣ ಉಪಾಸನೆ ಮಾಡುವವರು ಲಕ್ಷ್ಮಿಯನ್ನು, ಇತರ ದೇವತೆಗಳನ್ನು ಪ್ರತ್ಯೇಕ ಉಪಾಸನೆ ಮಾಡುವ ಅಗತ್ಯವಿಲ್ಲ. ಲಕ್ಷ್ಮಿಗೆ, ಸರ್ವ ದೇವತೆಗಳಿಗೆ ಅತ್ಯಂತ ಪ್ರೀತಿಪೂರ್ವಕವಾದದ್ದು ಭಗವಂತನ ಉಪಾಸನೆ . ನಾರಾಯಣನ ಉಪಾಸನೆ ಮಾಡುವ ಸಾಧಕನಿಗೆ ಸಕಲ ದೇವತೆಗಳು ಸಹಾಯಮಾಡಿ, ಆತ ತನ್ನ ಸಾಧನಾ ಮಾರ್ಗದಲ್ಲಿ ಎತ್ತರಕ್ಕೇರುವಂತೆ ಮಾಡುತ್ತಾರೆ. ಇದನ್ನು ತಿಳಿದಾಗ ನಮ್ಮ ಉಪಾಸನೆಯಲ್ಲಿ ನಾವು ಸುಲಭವಾಗಿ ಏಕಭಕ್ತಿಯನ್ನು ಸಾಧಿಸಬಹುದು. ಭಕ್ತಿ ಮಾರ್ಗದಲ್ಲಿ ಗಟ್ಟಿಗೊಳ್ಳಬಹುದು.
·  ಶ್ಲೋಕ - 09
ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್
ಅಭ್ಯಾಸಯೋಗೇನ ತತೋ ಮಾಮಿಚ್ಛಾSಪ್ತುಂ ಧನಂಜಯ ೯॥
ಅಥ ಚಿತ್ತಮ್ ಸಮಾಧಾತುಮ್ ನ ಶಕ್ನೋಷಿ ಮಯಿ ಸ್ಥಿರಮ್
ಅಭ್ಯಾಸಯೋಗೇನ ತತಃ ಮಾಮ್ ಇಚ್ಛಾ ಆಪ್ತುಂ ಧನಂಜಯ ಧನಂಜಯ, ಒಂದೊಮ್ಮೆ ನನ್ನಲ್ಲಿ ಒಳಬಗೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿಲ್ಲ, ಆಗ ಮರಳಿಮರಳಿ ಅಭ್ಯಾಸದ ಬಳಕೆಯಿಂದ ನನ್ನನ್ನು ಸೇರುವ ಬಯಕೆಯನ್ನು ಬೆಳೆಸಿಕೊ.
ಮನಸ್ಸಿನಲ್ಲಿ ಭಗವಂತನ ಬಗ್ಗೆ ಭಕ್ತಿ ಇದೆ, ಬುದ್ಧಿಯಲ್ಲಿ ಜ್ಞಾನಪೂರ್ಣ ಭಕ್ತಿಯ ಅಂಕುರವಿದೆ. ಆದರೂ ಕೂಡ ಸ್ಥಿರವಾದ ಸ್ಮರಣೆ ಬರುತ್ತಿಲ್ಲ, ಮನಸ್ಸು ಗಟ್ಟಿಯಾಗಿ ನೆಲೆಗೊಳ್ಳುತ್ತಿಲ್ಲ ಆಗ ಏನು ಮಾಡುವುದು? ಶಾಸ್ತ್ರದಲ್ಲಿ ಹೇಳುವಂತೆ:
ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್ |
ಸರ್ವೇ ವಿಧಿ ನಿಷೆಧಾಸ್ಸ್ಯುಹುಃ ಏತಯೋರೇವ ಕಿಂಕರಾಃ ||
ಅಂದರೆ 'ನಾವು ನಿರಂತರ ಭಗವಂತನನ್ನು ನೆನಪಿನಲ್ಲಿಡಬೇಕು, ಎಂದೂ ಭಗವಂತನನ್ನು ಮರೆಯಬಾರದು'. ಸಮಸ್ತ ವಿಧಿನಿಷೇಧ ಹೇಳುವುದು ಕೂಡಾ ಇದನ್ನೆ. ಮನಸ್ಸು ನಿರಂತರ ಭಗವಂತನಲ್ಲಿ ನಿಲ್ಲದೆ ಈ ಅಖಂಡ ಸ್ಮರಣೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ. ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಶಕ್ತಿ ಕೊಡು ಎಂದು ನನ್ನನ್ನು ಪ್ರಾರ್ಥಿಸು. ಅಧ್ಯಾತ್ಮದ ದಾರಿಯಲ್ಲಿ ಏನು ಇಚ್ಛೆ ಮಾಡಿದರೂ ಅದನ್ನು ಪೂರೈಸುವ ಜವಾಬ್ಧಾರಿ ನನ್ನದುಎನ್ನುವ ಭರವಸೆ ಕೃಷ್ಣನದು. ಅಭ್ಯಾಸ ಮತ್ತು ಇಚ್ಛೆ ಇದ್ದರೆ ಖಂಡಿತವಾಗಿ ಏಕಾಗ್ರತೆ ಸಾಧ್ಯ. ನಾವು ಹೇಗೆ ಮಕ್ಕಳಿಗೆ ತರಬೇತಿಕೊಟ್ಟು, ಅಭ್ಯಾಸ ಮಾಡಿಸಿ ಕಲಿಸುತ್ತೇವೆ, ಹಾಗೆ ನಮ್ಮ ಮನಸ್ಸನ್ನು ರಮಿಸಿರಮಿಸಿ ಬುದ್ಧಿವಾದ ಹೇಳಿ ಅಭ್ಯಾಸಮಾಡಿಸಬೇಕು. ಹೀಗೆ ಮಾಡಿದಾಗ ಮನಸ್ಸು ಅದನ್ನು ರೂಢಿ ಮಾಡಿಕೊಳ್ಳುತ್ತದೆ. ಮೊದಲು ನಾವು ಲೌಕಿಕ ಸಂಪತ್ತಿನ ಬೆನ್ನುಹತ್ತುವುದನ್ನು ಬಿಟ್ಟು, ಭಗವಂತನೆಂಬ ಅಮೂಲ್ಯ ಧನವನ್ನು ಗೆಲ್ಲುವ ಧನಂಜಯರಾಗಬೇಕು.
·  ಶ್ಲೋಕ - 10
ಅಭ್ಯಾಸೇSಪ್ಯಸಮರ್ಥೋSಸಿ ಮತ್ಕರ್ಮಪರಮೋ ಭವ ।
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ॥೧೦॥
ಅಭ್ಯಾಸೇ ಅಪಿ ಅಸಮರ್ಥನು; ಅಸಿ ಮತ್ ಕರ್ಮ ಪರಮಃ ಭವ ।
ಮತ್ ಅರ್ಥಮ್ ಅಪಿ ಕರ್ಮಾಣಿ ಕುರ್ವನ್ ಸಿದ್ಧಿಮ್ ಅವಾಪ್ಸ್ಯಸಿ ಧ್ಯಾನದ ಅಭ್ಯಾಸವೂ ಅಸಾಧ್ಯವಾದರೆ ನನ್ನ ಆರಾಧನರೂಪವಾದ ಕರ್ಮಗಳಲ್ಲೆ ತೊಡಗು. ಕರ್ಮವನ್ನು ನನ್ನ ಪೂಜೆಯೆಂದು ಮಾಡಿಯೂ ಸಿದ್ಧಿಪಡೆಯಬಲ್ಲೆ.
ಕೆಲವರಿಗೆ ಎಷ್ಟೇ ಅಭ್ಯಾಸ ಮಾಡಿದರೂ ಏಕಭಕ್ತಿ ಸಾಧ್ಯವಾಗುವುದಿಲ್ಲ. ಅಧ್ಯಾತ್ಮ ಮಾರ್ಗದ ಸಾಧನೆಯಲ್ಲಿ ಮನಸ್ಸಿಗೆ ಒಂದು ಜನ್ಮದ ಅಭ್ಯಾಸ ಸಾಕಾಗುವುದಿಲ್ಲ. ಕೆಲವೊಮ್ಮೆ ಇಡೀ ಜನ್ಮ ಅಭ್ಯಾಸ ಮಾಡಿದರೂ ಏಕಾಗ್ರತೆ ಬಾರದೇ ಇರಬಹುದು. ಇಂಥವರಿಗೆ ಕರುಣಾಳು ಕೃಷ್ಣ ಹೇಳುತ್ತಾನೆ: ನೀನು ಮಾಡುವ ಕರ್ಮವನ್ನು ಸ್ವಾರ್ಥಕ್ಕಾಗಿ ಮಾಡದೆ, ಭಗವಂತನ ಪೂಜೆ ಅನ್ನುವ ಅನುಸಂಧಾನದಿಂದ ಮಾಡುಎಂದು. ತನ್ನ ದೈನಂದಿನ ಪ್ರತಿ ಕರ್ಮವನ್ನು ಅರ್ಪಣಾಭಾವದಿಂದ ಭಗವಂತನ ಪೂಜೆ ಎಂದು ಮಾಡಿ, ಅಧ್ಯಾತ್ಮ ಮಾರ್ಗದಲ್ಲಿ ಸಿದ್ಧಿ ಪಡೆಯಬಹುದು.
·  ಶ್ಲೋಕ - 11
ಅಥೈತದಪ್ಯಶಕ್ತೋSಸಿ ಕರ್ತುಂ ಮದ್ಯೋಗಮಾಶ್ರಿತಃ ।
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ ॥೧೧॥
ಅಥ ಏತತ್ ಅಪಿ ಆಶಕ್ತಃ ಅಸಿ ಕರ್ತುಮ್ ಮತ್ ಯೋಗಮ್ ಆಶ್ರಿತಃ ।
ಸರ್ವಕರ್ಮ ಫಲ ತ್ಯಾಗಮ್ ತತಃ ಕುರು ಯತ ಆತ್ಮವಾನ್ ಇದನ್ನೂ ಮಾಡುವುದಾಗದಿದ್ದರೆ ಎಲ್ಲ ಬಗೆಯ ಕರ್ಮಗಳನ್ನೂ ನನಗೆ ಅರ್ಪಿಸುವ ಸಾಧನೆ ಮಾಡು. ಅನಂತರ ಬಗೆಯನ್ನು ಬಿಗಿಗೊಳಿಸಿ ಎಲ್ಲ ಕರ್ಮಗಳ ಫಲದಾಸೆಯ ನಂಟನ್ನು ತೊರೆದುಬಿಡು.
ಒಂದು ವೇಳೆ ಮೇಲೆ ಹೇಳಿದ ರೀತಿ ಎಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸಲು ಸಾಧ್ಯವಾಗದೇ ಇದ್ದರೆ, ಎಲ್ಲವನ್ನೂ ಭಗವಂತನ ಪೂಜೆಯಾಗಿ ಮಾಡಲು ಸಾಧ್ಯವಾಗದೇ ಇದ್ದರೆ, ಯಾರನ್ನಾದರೂ ಪೂಜಿಸು-ಆದರೆ ಕೊನೆಗೆ ಸರ್ವ ಕರ್ಮವನ್ನು ಕರ್ಮಫಲದ ಬಯಕೆಯಿಲ್ಲದೆ ಭಗವಂತನಿಗೆ ಅರ್ಪಿಸು ಎನ್ನುತ್ತಾನೆ ಕೃಷ್ಣ. ಇಲ್ಲಿ ಕರ್ಮಫಲದ ತ್ಯಾಗಕ್ಕೆ ಮತ್ತು ಅರ್ಪಣೆಗೆ ಕೃಷ್ಣ ಒತ್ತು ಕೊಟ್ಟಿದ್ದಾನೆ.
·  ಶ್ಲೋಕ - 12
ಶ್ರೇಯೋ ಹಿ ಜ್ಞಾನಮಭ್ಯಾಸಾಜ್ ಜ್ಞಾನಾದ್ ಧ್ಯಾನಂ ವಿಶಿಷ್ಯತೇ
ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್ ॥೧೨॥
ಶ್ರೇಯಃ ಹಿ ಜ್ಞಾನಮ್ ಅಭ್ಯಾಸಾತ್ ಜ್ಞಾನಾತ್ ಧ್ಯಾನಮ್ ವಿಶಿಷ್ಯತೇ
ಧ್ಯಾನಾತ್ ಕರ್ಮ ಫಲ ತ್ಯಾಗಃ ತ್ಯಾಗಾತ್ ಶಾಂತಿಃ ಅನಂತರಮ್ ಅರಿವಿಲ್ಲದ ಅಭ್ಯಾಸಕ್ಕಿಂತ ಅರಿವು ಮಿಗಿಲು. ಬರಿದೆ ಅರಿವಿಗಿಂತ ಅರಿತು ಧ್ಯಾನಿಸುವುದು ಮಿಗಿಲು. ಬರಿದೆ ಧ್ಯಾನಕ್ಕಿಂತ ಕರ್ಮಫಲದ ನಂಟಿರದ ಧ್ಯಾನ ಮಿಗಿಲು. ಅಂಥ ಧ್ಯಾನದ ಮುಂದಿನ ಮಜಲೇ ಮುಕ್ತಿ.
ಜ್ಞಾನವಿಲ್ಲದ ಧ್ಯಾನಕ್ಕಿಂತ ಜ್ಞಾನ ಶ್ರೇಷ್ಠ. ಜ್ಞಾನ ಅಧ್ಯಾತ್ಮ ಸಾಧನೆಯಲ್ಲಿ ಮೂಲಭೂತ ಅವಶ್ಯಕತೆ(Fundamental requirement). ಜ್ಞಾನವಿಲ್ಲದೆ ಧ್ಯಾನ ಅಥವಾ ಕರ್ಮ ಮಾಡಿ ಉಪಯೋಗವಿಲ್ಲ. ತಿಳುವಳಿಕೆ ಇಲ್ಲದ ಶ್ರದ್ಧೆ ಅಂಧಃಶ್ರದ್ಧೆಯಾಗುತ್ತದೆ. ಹಾಗೆ ನಂಬಿಕೆ ಇಲ್ಲದ ತಿಳುವಳಿಕೆ ಅಹಂಕಾರವೆನಿಸುತ್ತದೆ. ಆದ್ದರಿಂದ ತಿಳಿಯಬೇಕು, ತಿಳಿದು ನಂಬಬೇಕು. ಕೇವಲ ತಿಳುವಳಿಕೆ ಇದ್ದರೆ ಸಾಲದು. ಜ್ಞಾನಕ್ಕಿಂತ ಜ್ಞಾನ ಸಹಿತ ಧ್ಯಾನ ಮೇಲು. ಎಲ್ಲಕ್ಕಿಂತ ಹಿರಿದು ಕರ್ಮಫಲ ತ್ಯಾಗ. ಆದ್ದರಿಂದ ಮೊದಲು ತಿಳಿದುಕೋ, ತಿಳಿದು ಅಭ್ಯಾಸ ಮಾಡು. ಆದರೆ ನಿನ್ನ ಧ್ಯಾನ ಕರ್ಮಫಲವಿಲ್ಲದ ಧ್ಯಾನವಾಗಿರಲಿ. ಈ ರೀತಿಯ ಜೀವನ ಶೈಲಿಯಿಂದ ಮೊಕ್ಷಪ್ರಾಪ್ತಿ ಸಾಧ್ಯ.
ಇಲ್ಲಿಯ ತನಕೆ ಭಗವಂತನ ಉಪಾಸನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ ಕೃಷ್ಣ, ಮುಂದೆ ನಾವು ದೇವರು ಮೆಚ್ಚುವ ಬದುಕನ್ನು ಬದುಕಬೇಕಾದರೆ ಯಾವ ರೀತಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು, ನಮ್ಮ ಜೀವನಕ್ರಮ ಮತ್ತು ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಮುಂದಿನ ಕೆಲವು ಶ್ಲೋಕಗಳಲ್ಲಿ ವಿವರಿಸುತ್ತಾನೆ.
·  ಶ್ಲೋಕ - 13 & 14
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।
ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ ॥೧೩॥

ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ
ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ ॥೧೪॥
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ ।
ನಿರ್ಮಮಃ ನಿರಹಂಕಾರಃ ಸಮದುಃಖಸುಖಃ ಕ್ಷಮೀ
ಸಂತುಷ್ಟಃ ಸತತಮ್ ಯೋಗೀ ಯತಾತ್ಮಾ ದೃಢನಿಶ್ಚಯಃ
ಮಯಿ ಅರ್ಪಿತ ಮನಃ ಬುದ್ಧಿಃ ಯಃ ಮತ್ ಭಕ್ತಃ ಸಃ ಮೇ ಪ್ರಿಯಃ ಯಾವ ಜೀವಿಗಳಲ್ಲು ಹಗೆಯಿರದವನು, ಎಲ್ಲರ ನೇಹಿಗನು, ದುಃಖವನ್ನು ಕಂಡು ಕರಗುವವನು, ನಾನು-ನನ್ನದು ಎಂಬ ಹಮ್ಮಿರದವನು, ಸುಖದಲ್ಲಿ ಹಿಗ್ಗದವನು, ದುಃಖದಲ್ಲಿ ಕುಗ್ಗದವನು, ತಾಳ್ಮೆ ತಪ್ಪದವನು, ಯಾವಾಗಲೂ ತೃಪ್ತಿಯಿಂದಿರುವವನು, ಧ್ಯಾನಸಾಧನೆಯಲ್ಲಿ ತೊಡಗಿದವನು, ಬಗೆ ಬಿಗಿ ಹಿಡಿದವನು, ತತ್ವದ ನಿರ್ಧಾರದಿಂದ ಬಗೆ ಗಟ್ಟಿಗೊಂಡವನು, ಬಗೆ-ತಿಳಿವುಗಳನ್ನು ನನ್ನಲ್ಲಿ ಅರ್ಪಿಸಿದವನು- ಇಂಥ ನನ್ನ ಭಕ್ತ ನನಗೆ ಅಚ್ಚುಮೆಚ್ಚು.
ಭಗವಂತ ಮೆಚ್ಚುವ ಮಾನವ ವರ್ತನೆಯ ಬಗ್ಗೆ ಕೃಷ್ಣ ವಿವರಿಸುತ್ತ ಮೊದಲನೆಯದಾಗಿ ಹೇಳುತ್ತಾನೆ: ಅದ್ವೇಷ್ಟಾ ಸರ್ವಭೂತಾನಾಂಎಂದು. ಅಂದರೆ ಯಾರನ್ನೂ ದ್ವೇಷಿಸದಿರುವುದು. ಇದು ಭಗವದ್ಭಕ್ತನಲ್ಲಿ ಇರಬೇಕಾದ ಮೊದಲನೇ ಗುಣ. ದ್ವೇಷದಲ್ಲಿ ಎರಡು ವಿಧ. ಒಂದು ಒಳ್ಳೆಯವರನ್ನು(ಅವರ ಉದ್ಧಾರವನ್ನು ಕಂಡು) ದ್ವೇಷಿಸುವುದು; ಇನ್ನೊಂದು ಕೆಟ್ಟವರನ್ನು(ಅವರ ಕೆಟ್ಟತನವನ್ನು ಕಂಡು) ದ್ವೇಷಿಸುವುದು. ದ್ವೇಷ ಬರುವುದು ಅಸಹನೆ ಮತ್ತು ಹೊಟ್ಟೆಕಿಚ್ಚಿನಿಂದಾಗಿ. ಇನ್ನೊಬ್ಬರ ಉತ್ಕರ್ಷವನ್ನು ಕಂಡು ಸಂಕಟಪಡುವುದು ದ್ವೇಷ. ಒಳ್ಳೆಯವನಿರಲಿ, ಕೆಟ್ಟವನಿರಲಿ-ಹೊಟ್ಟೆಕಿಚ್ಚು ಅಸಹನೆ ಬೇಡ. ಎಲ್ಲಿ ಒಳ್ಳೆಯತನವಿದೆ ಅದನ್ನು ಪ್ರೀತಿಸು, ಸ್ನೇಹ ಬೆಳೆಸು. ದುಷ್ಟರನ್ನು ದೂರ ಬಿಟ್ಟುಬಿಡು, ಒಳ್ಳೆಯತನವನ್ನು, ಒಳ್ಳೆಯವರನ್ನು ಪ್ರೀತಿಸು. ಇನ್ನೊಬ್ಬರ ಕಷ್ಟವನ್ನು ಕಂಡು ಕರಗು. ನಾನು, ನನ್ನದು ,ನನ್ನಿಂದ ಎನ್ನುವ ಅಹಂಕಾರ ಮಮಕಾರವನ್ನು ಬಿಟ್ಟುಬಿಡು. ಈಶಾವಾಸ್ಯಂ ಇದಮ್ ಸರ್ವಂ’ –ಎಲ್ಲವುದರ ಒಡೆಯ ಆ ಭಗವಂತ. ಆತ ಕೊಟ್ಟಿರುವುದರಿಂದ ಇದೆ ಅನ್ನುವ ಮನೋಭಾವ ಇರಲಿ. ಹೇಗೆ ಅಹಂಕಾರ ಒಳ್ಳೆಯದಲ್ಲವೋ ಹಾಗೆ ಅತಿಯಾದ ಮಮಕಾರ ಒಳ್ಳೆಯದಲ್ಲ. ಪುರಂದರದಾಸರಂತೆ ಪ್ರೀತಿಯಲ್ಲಿ ನಿರ್ಲಿಪ್ತತೆ(Detached attachment)ಇರಲಿ. ಅವರಿಗೆ ಒಬ್ಬ ಮಗನಿದ್ದ. ಆತನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಪ್ರೀತಿಯ ಮಗ ಸತ್ತು ಹೋದ. ಆಗ ಅವರು ಗಿಳಿಯು ಪಂಜರದೊಳಿಲ್ಲ-ನೀನು ಕೊಟ್ಟ ಗಿಳಿ ನಿನ್ನನ್ನು ಸೇರಿತುಎಂದು ನಿರ್ಲಿಪ್ತರಾಗಿ ಬದುಕಿದರು. ನಾವು ದುಃಖ-ಸುಖವನ್ನು ಕಾಣುವುದರಲ್ಲಿ ಸಮತೋಲನ ಸಾಧಿಸಬೇಕು. ಸುಖ ಬಂದಾಗ ಹಾರಾಟ ಬೇಡ. ದುಃಖ ಬಂದಾಗ ಕುಸಿಯದೆ ಬಂದದ್ದನ್ನು ಎದುರಿಸಬೇಕು. ಇನ್ನೊಬ್ಬರ ಮೇಲೆ ಕ್ಷಮಾ ಭಾವನೆ ಇರಲಿ, ಪ್ರತೀಕಾರ ಬೇಡ. [ತಪ್ಪು ಮಾಡಿದವರನ್ನು ನ್ಯಾಯಾಧೀಶರು, ಅಧಿಕಾರಿಗಳು ದಂಡಿಸಬಹುದು. ಅದು ಅವರ ಕರ್ತವ್ಯಧರ್ಮ-ಅಲ್ಲಿ ಪ್ರತೀಕಾರವಿಲ್ಲ].
ಮುಂದುವರಿದು ಕೃಷ್ಣ ಹೇಳುತ್ತಾನೆ: ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃಎಂದು. ಯಾವುದೇ ಒಬ್ಬ ಮನುಷ್ಯ ಹಾಯಾಗಿರಬೇಕಾದರೆ ಇರಬೇಕಾದ ಚಿತ್ತವೃತ್ತಿ ಅತೃಪ್ತಿ ಇಲ್ಲದೆ ಇರುವುದು’. ಜೀವನದಲ್ಲಿ ನಮ್ಮೆಲ್ಲ ದುಃಖಗಳಿಗೆ ಕಾರಣ ಅತೃಪ್ತಿ. ಇಲ್ಲದೆ ಇರುವುದರ ಬಗೆಗೆ ಅತೃಪ್ತಿ ಪಡುವುದರ ಬದಲು ಇರುವುದರ ಬಗ್ಗೆ ತೃಪ್ತಿ ಪಡು. ಏನಿದೆ ಅದರಲ್ಲಿ ತೃಪ್ತಿ ಪಡುವುದನ್ನು ಅಭ್ಯಾಸ ಮಾಡು. ಸದಾ ಯೋಗಿಯಾಗು. ಇಲ್ಲಿ ಯೋಗಿ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ವಿವಿಧ ಆಸನಗಳ ಅಭ್ಯಾಸ ಯೋಗವಲ್ಲ. ಮನಸ್ಸನ್ನು ಏಕಾಗ್ರಗೊಳಿಸಲು ಮಾಡಬೇಕಾದ ಪ್ರಕ್ರಿಯೆ ಯೋಗ. ಕೋತಿಯಂತೆ ಹರಿದಾಡುವ ನಮ್ಮ ಮನಸ್ಸನ್ನು ಹಿಡಿದು ನಿಲ್ಲಿಸುವುದು-ಗಾಳಿಯನ್ನು ಹಿಡಿದು ನಿಲ್ಲಿಸಿದಂತೆ. ಅದು ತುಂಬಾ ವಿಚಿತ್ರ. ಮನಸ್ಸು ಜಾರಿ ಹೋಗುವುದು ನಮಗೆ ತಿಳಿಯುವುದು ಅದು ಹೋದ ಮೇಲೆ. ಇಂಥಹ ಮನಸ್ಸನ್ನು ಹಿಡಿದು ನಿಲ್ಲಿಸಲು ಮೊದಲು ಬೆನ್ನುಹುರಿಯನ್ನು ನೆಟ್ಟಗೆ ಮಾಡಿ ಸ್ಥಿರವಾಗಿ ಕುಳಿತುಕೊಳ್ಳಲು ಅಭ್ಯಾಸ ಮಾಡುವುದು-ಆಸನ(ಯಾವ ಆಸನವಾದರೂ ಸರಿ). ನಂತರ ಪ್ರಾಣಾಯಾಮದ ಮೂಲಕ ಒಳಗಿನ ಚಿಂತನೆಯನ್ನು ಜಾಗೃತಗೊಳಿಸುವುದು ಯೋಗ. ಸ್ವಚ್ಛ ಮನಸ್ಸಿನಲ್ಲಿ ಭಗವಂತನನ್ನು ಕೂರಿಸುವುದು ಯೋಗ, ಬದುಕಿನಲ್ಲಿ ಜೀವನ ನಿರ್ವಹಣೆಗೆ ಕಂಡುಕೊಂಡ(ಸಿಕ್ಕಿದ) ದಾರಿಯನ್ನು ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಮಾಡುವುದು ಯೋಗ. ಈ ರೀತಿ ಅಭ್ಯಾಸದಿಂದ ಮನಸ್ಸನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಏನನ್ನೂ ಕೆಟ್ಟ ಭಾವದಿಂದ ಕಾಣದೆ ಇರವುದನ್ನು ಅಭ್ಯಸಿಸು. ಅಧ್ಯಾತ್ಮ ದಾರಿಯಲ್ಲಿ ಅಚಲವಾದ ನಿರ್ಧಾರವಿರಲಿ. ಏನೇ ಬರಲಿ ದೃಢನಿಶ್ಚಯದಿಂದ ಮುಂದೆ ಸಾಗು. ಮನಸ್ಸು ಭಗವಂತನಿಗಾಗಿ ಹಾತೊರೆಯಲಿ, ಬುದ್ಧಿ ಭಗವಂತನನ್ನು ಅರಿಯಲಿ. ಈ ರೀತಿ ಯಾರು ನನ್ನನ್ನು ಪ್ರೀತಿಸುತ್ತಾರೋ(ಭಕ್ತ) ಅವರು ನನಗೆ ಅತಿಪ್ರೀಯಎನ್ನುತ್ತಾನೆ ಕೃಷ್ಣ.
·  ಶ್ಲೋಕ - 15
ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ ।
ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ ॥೧೫॥
ಯಸ್ಮಾತ್ ನ ಉದ್ವಿಜತೇ ಲೋಕಃ ಲೋಕಾತ್ ನ ಉದ್ವಿಜತೇ ಚ ಯಃ ।
ಹರ್ಷ ಅಮರ್ಷ ಭಯ ಉದ್ವೇಗೈಃ ಮುಕ್ತಃ ಯಃ ಸಃ ಚ ಮೇ ಪ್ರಿಯಃ ಯಾರಿಂದಲೂ ನೋಯದವನು, ಯಾರನ್ನೂ ನೋಯಿಸದವನು, ಹಮ್ಮಿನಿಂದ ಕೇಡಿಗೆಳೆಸದವನು, ರೇಗದವನು, ಅಂಜದವನು, ತಲ್ಲಣಗೊಳ್ಳದವನು-ಅವನು ನನಗೆ ಅಚ್ಚುಮೆಚ್ಚು.
ನಮ್ಮನ್ನು ನೋಡಿ ಇನ್ನೊಬ್ಬರು ಉದ್ವೇಗಗೊಳ್ಳಬಾರದು ಹಾಗು ನಾವು ಇನ್ನೊಬ್ಬರನ್ನು ಉದ್ವೇಗಗೊಳಿಸಬಾರದು. ಯಾರೂ ನಮ್ಮನ್ನು ನೋಡಿ ಅಸಹನೆ-ಅತೃಪ್ತಿ ತಾಳಬಾರದು ಮತ್ತು ಇನ್ನೊಬ್ಬರನ್ನು ನೋಡಿ ನಾವು ಅಸಹನೆ ತಾಳಬಾರದು. ಪ್ರಪಂಚವನ್ನು ಪ್ರೀತಿಸಿದಾಗ ಇದನ್ನು ಸಾಧಿಸಲು ಸಾಧ್ಯ. ಭಗವಂತ ಮೆಚ್ಚುವ ಕೆಲಸ ಮಾಡಿದಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಭಗವಂತ ಪ್ರೀತಿಸುವವರನ್ನು ಇಡೀ ಪ್ರಪಂಚವೇ ಪ್ರೀತಿಸುತ್ತದೆ.
ನಾವು ಹರ್ಷ ಅಮರ್ಷ ಭಯ ಮತ್ತು ಉದ್ವೇಗದಿಂದ ಮುಕ್ತರಾಗಬೇಕು.ಮಾಡಬಾರದ್ದನ್ನು ಮಾಡುವುದರಲ್ಲಿ ಹಿಗ್ಗು ಹರ್ಷ; ಇನ್ನೊಬ್ಬರು ಮಾಡಬೇಕಾದ್ದನ್ನು ಮಾಡಿದಾಗ ಅದನ್ನು ನೋಡಿ ಹೊಟ್ಟೆಕಿಚ್ಚು ಪಡುವುದು ಅಮರ್ಷ. ಹರ್ಷ ಅಮುರ್ಷದಿಂದ ನಾವು ಮುಕ್ತರಾಗಬೇಕು. ಹೆದರುವಂತಹ ಕೆಲಸ ಮಾಡಬೇಡ ಮತ್ತು ತಪ್ಪು ಮಾಡದಿದ್ದಾಗ ಭಯಬೇಡ. ಇನ್ನೊಬ್ಬರನ್ನು ನಾವು ಸಂಶಯ ದೃಷ್ಟಿಯಿಂದ ನೋಡಿದರೆ ಅವರೂ ನಮ್ಮನ್ನು ಸಂಶಯ ದೃಷ್ಟಿಯಿಂದ ನೋಡುತ್ತಾರೆ, ಇನ್ನೊಬ್ಬರನ್ನು ನಂಬದಿದ್ದಾಗ ಅವರೂ ನಮ್ಮನ್ನು ನಂಬುವುದಿಲ್ಲ. ಇದರಿಂದ ಉದ್ವೇಗ.ಜೀವನದಲ್ಲಿ ಎಲ್ಲರನ್ನು ಪ್ರೀತಿಸುವವರು, ಹರ್ಷ ಅಮರ್ಷ ಭಯ ಮತ್ತು ಉದ್ವೇಗದಿಂದ ಮುಕ್ತರಾದವರು-ನನಗೆ ಪ್ರಿಯಎನ್ನುತ್ತಾನೆ ಕೃಷ್ಣ.
·  ಶ್ಲೋಕ - 16
ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ ।
ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ ೧೬॥
ಅನಪೇಕ್ಷಃ ಶುಚಿಃ ದಕ್ಷಃ ಉದಾಸೀನಃ ಗತವ್ಯಥಃ ।
ಸರ್ವ ಆರಂಭ ಪರಿತ್ಯಾಗೀ ಯಃ ಮತ್ ಭಕ್ತಃ ಸಃ ಮೇ ಪ್ರಿಯಃ ಏನನ್ನೂ ಬಯಸದವನು, ಚೊಕ್ಕವಾಗಿ ಚುರುಕಾಗಿರುವವನು, ಯಾವುದನ್ನೂ ಹಚ್ಚಿಕೊಳ್ಳದವನು, ಕಂಗೆಡದವನು, ಭಗವಂತನ ಆರಾಧನೆಯಲ್ಲದ ಯಾವ ತೊಡಗುವಿಕೆಯಲ್ಲು ತೊಡಗದವನು,[ಎಲ್ಲವನ್ನೂ ಭಗವಂತನಿಗೆ ಅರ್ಪಿಸಿ ನಾನು-ನನ್ನದು ಎಂಬ ಹಮ್ಮು ತೊರೆದವನು], ಇಂಥ ನನ್ನ ಭಕ್ತ ನನಗೆ ಅಚ್ಚುಮೆಚ್ಚು.
ತನ್ನ ಭಕ್ತನಲ್ಲಿರಬೇಕಾದ, ಭಕ್ತಿಗೆ ಪೂರಕವಾದ ಆರು ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ.
(೧) ಅನಪೇಕ್ಷಃ : ಅದು ಬೇಕು ಇದು ಬೇಕು ಎಂದು ಬಯಸದೆ ಇರುವುದು. ಯಾವುದರಿಂದ ತಾತ್ಕಾಲಿಕ ಸುಖ ಬರುತ್ತದೋ ಅದರ ಹಿಂದೆ ಹೋಗದೆ, ಶಾಶ್ವತವಾದ ಮೋಕ್ಷ ಮಾರ್ಗದಲ್ಲಿ ನಡೆಯುವುದು. ಏನು ಸಿಕ್ಕಿತೋ ಅದರಲ್ಲಿ ಸಂತೋಷಪಡುವುದು-ಇದು ಅನಪೇಕ್ಷಃ.
(೨) ಶುಚಿಃ : ನಿರ್ಮಲ ಮತ್ತು ನಿರಾಳವಾಗಿರುವುದು. ಇದೇ ಮಡಿ. ಬಾಯಲ್ಲಿ ಕೆಟ್ಟ ಮಾತು, ಮನಸ್ಸಿನಲ್ಲಿ ಕೆಟ್ಟ ಯೋಚನೆ, ಮೈಯಲ್ಲಿ ಕೊಳೆ-ಇದು ಮೈಲಿಗೆ. ಮೊದಲು ನಾವು ನಮ್ಮ ಮನಸ್ಸಿನ ಕೊಳೆ ತೊಳೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ. ಇದಕ್ಕಾಗಿ ಶಾಂತಿ ಪಾಠದಲ್ಲಿ ಹೀಗೆ ಹೇಳುತ್ತೇವೆ: ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃಎಂದು. ನಾವು ಒಳ್ಳೆಯದನ್ನು ನೋಡೋಣ, ಒಳ್ಳೆಯದನ್ನು ಮಾತನಾಡೋಣ, ಒಳ್ಳೆಯದನ್ನು ಯೋಚಿಸೋಣ. ಇದು ನಿಜವಾದ ಮಡಿ.
ಮಡಿಯ ಬಗ್ಗೆ ಹೆಚ್ಚು ಪ್ರಸಿದ್ಧವಾದ ಎರಡು ಶ್ಲೋಕಗಳಿವೆ:
ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಮತ್ತು ಅತಿನೀಲಘನಶ್ಯಾಮಂ ನಲಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭಾವಾಮ್ಯಹಂ||
ಇಲ್ಲಿ ಪುಂಡರೀಕಾಕ್ಷನನ್ನು ಸ್ಮರಣೆ ಮಾಡಬೇಕು ಎಂದು ಹೇಳಿದ್ದಾರೆ. ಇದೊಂದು ಭಗವಂತನ ವಿಶೇಷ ನಾಮ. ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ ಪ್ರೀತಿಯಿಂದ ಕಣ್ಣರಳಿಸಿ ನನ್ನನ್ನು ನೋಡುತ್ತಿದ್ದಾನೆ. ಅವನ ಕಣ್ಣಿನಿಂದ ಹರಿದುಬರುತ್ತಿರುವ ಅನುಗ್ರಹದ ರಸಧಾರೆಯಲ್ಲಿ ನಾನು ಮೀಯುತ್ತಿದ್ದೇನೆ. ಅವನ ಅನುಗ್ರಹದ ಕೃಪಾದೃಷ್ಟಿ ನನ್ನ ಮೇಲೆ ಹರಿದಿದೆ. ನಾನು ಅದರಲ್ಲಿ ಮಿಂದೆ ಎನ್ನುವ ಅನುಸಂಧಾನ ಶುಚಿ. ಹೀಗೆ ನಾವು ಭಗವಂತನ ಅನುಗ್ರಹದಿಂದ ಒಳಗೂ ಹೊರಗೂ ಮಡಿಯಾಗಬೇಕು.
(೩) ದಕ್ಷಃ : ನಮ್ಮಲ್ಲಿ ಮನಸ್ಸನ್ನು ಭಗವಂತನೆಡೆಗೆ ಹರಿಸುವ ದಕ್ಷತೆ ಇರಬೇಕು. ಆತ ನಮ್ಮ ಬಾಹ್ಯ ಪ್ರಯತ್ನಕ್ಕೆ ಒಲಿಯಲಾರ. ನಾವು ಅಂತರಂಗದಿಂದ ಆತನೆಡೆಗೆ ಹೋಗಬೇಕು. ಬಾಹ್ಯ ಕ್ರಿಯೆ ನಮ್ಮ ಅಂತರಂಗದ ಸಾಧನೆಗೆ ಪೂರಕ ಅಷ್ಟೆ. ಭಗವಂತನನ್ನು ಹೇಗೆ ಸೇರಬಹುದು ಎನ್ನುವ ತಿಳುವಳಿಕೆ, ಜಾಣತನ ನಮ್ಮಲ್ಲಿರಬೇಕು.
(೪) ಉದಾಸೀನ : ಅಂತರ್ಯಾಮಿಯಾಗಿರುವುದು. ಯಾವುದೇ ಬಾಹ್ಯ ಕ್ರಿಯೆಗೆ ಒತ್ತು ಬೇಡ, ಆಗ್ರಹ ಬೇಡ. ಉದಾಹರಣೆಗೆ- ನಿಮ್ಮ ಕುಟುಂಬದಲ್ಲಿ ಯಾರೋ ಒಬ್ಬರು ತಮ್ಮ ಯಾವುದೋ ಒಂದು ಫಲಾಪೇಕ್ಷೆಯನ್ನು ಈಡೇರಿಸಿಕೊಳ್ಳಲು ಯಾವುದೋ ಒಂದು ಪೂಜೆ ಮಾಡಿಸುತ್ತಿದ್ದಾರೆ. ಅಂಥಹ ಸಂದರ್ಭದಲ್ಲಿ ಅದನ್ನು ವಿರೋಧಿಸಿ ನಿಲ್ಲುವುದು ಒಳ್ಳೆಯದಲ್ಲ. ಏನೇ ಇರಲಿ ಅದು ಭಗವಂತನ ಸೇವೆ, ಅದು ಭಗವಂತನನ್ನು ಸೇರಲಿ ಎಂದು ಪ್ರಾರ್ಥಿಸಿ, ಎಲ್ಲರೊಂದಿಗಿದ್ದು ಯಾವುದೇ ಆಗ್ರಹವಿಲ್ಲದೆ ಇರುವುದು.
(೫) ಗತವ್ಯಥಃ : ಏನೇ ಆದರೂ ಬೇಸರಿಸಿಕೊಳ್ಳದೆ ಸದಾ ಆನಂದವಾಗಿರುವುದು.
(೬) ಸರ್ವಾರಂಭಪರಿತ್ಯಾಗಿ : ಭಗವಂತನ ಪಾರಮ್ಯಕ್ಕೆ ವಿರುದ್ಧವಾದ ಯಾವ ಆರಂಭಕ್ಕೂ ತೊಡಗದಿರುವುದು. ಎಲ್ಲ ಆರಂಭವನ್ನು ಫಲಕಾಮನೆಯಿಂದ ಮಾಡುವುದನ್ನು ಬಿಡು. ಎಲ್ಲವನ್ನೂ ಕೊನೆಗೆ ಕೃಷ್ಣಾರ್ಪಣಮಸ್ತು ಎಂದು ಭಗವಂತನಲ್ಲಿ ಅರ್ಪಿಸು.
ಯಾರು ಈ ಗುಣಗಳೊಂದಿಗೆ ನನ್ನನ್ನು ಪ್ರೀತಿಸುತ್ತಾರೋ ಅಂಥಹ ಭಕ್ತ ನನಗೆ ಅಚ್ಚುಮೆಚ್ಚುಎನ್ನುತ್ತಾನೆ ಕೃಷ್ಣ.
·  ಶ್ಲೋಕ - 17
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ
ಶುಭಾಶುಭಪರಿತ್ಯಾಗೀ ಭಕ್ತಿಮಾನ್ ಯಃ ಸ ಮೇ ಪ್ರಿಯಃ ೧೭॥
ಯಃ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ
ಶುಭ ಅಶುಭ ಪರಿತ್ಯಾಗೀ ಭಕ್ತಿಮಾನ್ ಯಃ ಸಃ ಮೇ ಪ್ರಿಯಃ ಬೀಗುವುದಿಲ್ಲ; ಹೇಸುವುದಿಲ್ಲ; ಕೊರಗುವುದಿಲ್ಲ; ಬಯಸುವುದಿಲ್ಲ. ಒಳಿತು ಕೆಡುಕುಗಳ ಕುರಿತು ಕಾಳಜಿಯಿಲ್ಲ, ಇಂಥ ಭಕ್ತನು ನನಗೆ ಅಚ್ಚುಮೆಚ್ಚು.
ಇಲ್ಲಿ ಹಿಂದೆ ಹೇಳಿದ ಕೆಲವು ವಿಚಾರ ಪುನರುಕ್ತಿಯಾಗಿದೆ. ಸಾಮಾನ್ಯವಾಗಿ ಒಂದು ವಿಷಯವನ್ನು ಹೆಚ್ಚು ಸ್ಪಷ್ಟಪಡಿಸುವುದಕ್ಕಾಗಿ ಮತ್ತು ಒಂದು ವಿಚಾರಕ್ಕೆ ಹೆಚ್ಚು ಒತ್ತು ಕೊಡುವುದಕ್ಕಾಗಿ ಪುನರುಕ್ತಿ. ಇಲ್ಲಿ ಕೃಷ್ಣ ಹೇಳುತ್ತಾನೆ: ಯಾವುದೋ ಒಂದು ಒಳ್ಳೆಯ ಕೆಲಸ ಮಾಡಿದಾಗ ಬೀಗಬೇಡ ಮತ್ತು ಇನ್ನೊಬ್ಬರನ್ನು ಕಂಡು ಹೇಸಿಗೆ ಪಡಬೇಡ. ಸಿಕ್ಕಿತೆಂದು ಅತೀವ ಖುಶಿ, ಸಿಗಲಿಲ್ಲವೆಂದು ದುಃಖ ಅಥವಾ ದ್ವೇಷ ಬೇಡ. ಜೀವನದಲ್ಲಿ ಜ್ಞಾನ ಭಕ್ತಿ ವೈರಾಗ್ಯ ಇದು ಶುಭ. ಉಳಿದ ಎಲ್ಲಾ ವಿಷಯಗಳ ಒಳಿತು ಕೆಡುಕುಗಳ ವಿಶ್ಲೇಷಣೆ ಬೇಡ. ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ ಹಿಂದೆ ನಮಗೆ ತಿಳಿಯದೇ ಇರುವ ಒಂದು ಕಾರಣವಿರುತ್ತದೆ. ಅದಕ್ಕಾಗಿ ಅದನ್ನು ಶುಭ-ಅಶುಭ ಎಂದು ನಿರ್ಧರಿಸಲು ನಾವು ಸಮರ್ಥರಲ್ಲ. ಈ ರೀತಿ ತಿಳಿದು ಬದುಕುವ ಭಕ್ತ ನನಗೆ ಪ್ರಿಯ ಎನ್ನುತ್ತಾನೆ ಕೃಷ್ಣ.
·  ಶ್ಲೋಕ - 18 & 19
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ ।
ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ॥೧೮॥

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ ।
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ ॥೧೯॥
ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನ ಅಪಮಾನಯೋಃ ।
ಶೀತ ಉಷ್ಣ ಸುಖ ದುಃಖೇಷು ಸಮಃ ಸಂಗವಿವರ್ಜಿತಃ
ತುಲ್ಯನಿಂದಾಸ್ತುತಿಃ ಮೌನೀ ಸಂತುಷ್ಟಃ ಯೇನ ಕೇನಚಿತ್
ಅನಿಕೇತಃ ಸ್ಥಿರ ಮತಿಃ ಭಕ್ತಿಮಾನ್ ಮೇ ಪ್ರಿಯಃ ನರಃ ಹಗೆಯ-ಗೆಳೆಯರಲ್ಲಿ ಭೇದ ಬಗೆಯದವನು; ಗೌರವಗಳನ್ನು, ಶೀತ-ಉಷ್ಣಗಳನ್ನು, ಸುಖ-ದುಃಖಗಳನ್ನು ಸಮನಾಗಿ ಕಾಣುವವನು; ಯಾವುದಕ್ಕು ಅಂಟಿಕೊಳ್ಳದವನು; ಹೊಗಳಿಕೆಯನ್ನು ತೆಗಳಕೆಯಂತೆ ಕಾಣುವವನು; ಚಿಂತನಶೀಲನು; ಏನು ಇದೆಯೊ ಅಷ್ಟರಲ್ಲಿ ತೃಪ್ತನಾದವನು; ಒಂದೆಡೆ ನೆಲೆನಿಲ್ಲದವನು [ಭಗವಂತನಲ್ಲಿ ನೆಲೆ ನಿಂತವನು;] ಭಗವಂತನ ಅರಿವು ಗಟ್ಟಿಗೊಂಡವನು-ಭಕ್ತನಾದ ಇಂಥ ಮನುಜ ನನಗೆ ಅಚ್ಚುಮೆಚ್ಚು.
ಸಾಮಾನ್ಯವಾಗಿ ನಾವು ಶತ್ರು ಅಥವಾ ಮಿತ್ರ ಅನ್ನುವ ಭಾವನೆಯನ್ನು ವ್ಯಾವಹಾರಿಕವಾಗಿ ರೂಢಿಸಿಕೊಳ್ಳುತ್ತೇವೆ. ನಮ್ಮನ್ನು ಹೊಗಳುವವರು ನಮಗೆ ಮಿತ್ರರು, ನಮ್ಮ ತಪ್ಪನ್ನು ತೆಗಳುವವರು ಶತ್ರುಗಳು. ಇದು ನಮ್ಮ ಅಪ್ರಭುದ್ದ ನಡೆ. ಸ್ನೇಹದ ಹಿಂದೆ ದ್ವೇಷವಿರಬಹುದು, ದ್ವೇಷದ ಹಿಂದೆ ಸ್ನೇಹವಿರಬಹುದು. ಪುರಂದರದಾಸರು ನಿಂದಕರಿರಬೇಕುಎಂದು ಹಾಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ನಿಂದಕರು ನಮ್ಮ ನಿಂದೆ ಮಾಡುವ ಮೂಲಕ ನಮ್ಮಲ್ಲಿರುವ ನಿಂದ್ಯವಾದ ದೋಷಗಳ ಫಲವನ್ನು ತೆಗೆದುಕೊಳ್ಳುತ್ತಾರೆ. ಹೊಗಳುವವರು ಹೊಗಳುವ ಮೂಲಕ ನಮ್ಮಲ್ಲಿರುವ ಒಳ್ಳೆಯತನದ ಪುಣ್ಯದ ಫಲದ ಪಾಲನ್ನು ಪಡೆಯುತ್ತಾರೆ. ಆದ್ದರಿಂದ ಸಾಧನೆಯ ಮಾರ್ಗದಲ್ಲಿ ಹೊಗಳುವವರಿಗಿಂತ ನಿಂದಕರು ಸಹಾಯಕರು. ಈ ಕಾರಣದಿಂದ ಶತ್ರು ಮಿತ್ರ ಎನ್ನುವ ಪರಿಭೇದ ಮಾಡಿಕೊಂಡು ಯಾರನ್ನೋ ಟೀಕೆ ಮಾಡುವುದಾಗಲಿ, ದ್ವೇಷ ಕಟ್ಟಿಕೊಳ್ಳುವುದಾಗಲಿ ಮಾಡಿಕೊಳ್ಳಬೇಡ. ದುರ್ಗುಣದಿಂದ ದೂರವಿರು. ಒಳ್ಳೆಯ ಗುಣವನ್ನು ಪ್ರೀತಿಸು. ಎಲ್ಲಿ ಒಳ್ಳೆಯತನವಿದೆ ಅವರ ಒಡನಾಟಮಾಡು(ಮೈತ್ರಿ); ದುಃಖವನ್ನು ಕಂಡು ಕರಗು(ಕರುಣ); ಇನ್ನೊಬ್ಬರ ಸಂತೋಷವನ್ನು ಕಂಡು ಸಂತೋಷಪಡು(ಮುದಿತತ); ಕೆಟ್ಟತನದಿಂದ ದೂರವಿರು(ಉಪೇಕ್ಷ). ಮೂಲಭೂತವಾಗಿ ಶತ್ರು ಮಿತ್ರ ಎನ್ನುವ ವಿಭಾಗ ಬೇಡ. ಎಲ್ಲರಲ್ಲಿಯೂ ಭಗವಂತನನ್ನು ಕಾಣು. ಲೌಕಿಕ ಶತ್ರು-ಮಿತ್ರ ಭಾವನೆಯನ್ನು ಬಿಟ್ಟುಬಿಡು.
ಸನ್ಮಾನ ಮಾಡಿದಾಗ ಉಬ್ಬಬೇಡ. ಅವಮಾನ ಮಾಡಿದಾಗ ಕುಗ್ಗಬೇಡ. ಮಾನ-ಅವಮಾನವನ್ನು ಗೆಲ್ಲು. ಇನ್ನೊಬ್ಬರು ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ನಮ್ಮ ಅಂತರಾತ್ಮ ಏನು ಎನ್ನುವುದು ಮುಖ್ಯ. ಇನ್ನೊಬ್ಬರು ಹೊಗಳಿದಾಗ ನಮ್ಮಲ್ಲಿ ಇಲ್ಲದ ಗುಣ ನಮ್ಮನ್ನು ಬಂದು ಸೇರುವುದಿಲ್ಲ. ಅದೇ ರೀತಿ ಇನ್ನೊಬ್ಬರು ತೆಗಳಿದಾಗ ನಾವು ಕೆಳಗೆ ಹೋಗುವುದಿಲ್ಲ. ಹೊಗಳಿಕೆ ಬಗ್ಗೆ ನಾವು ಎಚ್ಚರದಿಂದಿರಬೇಕು. ಏಕೆಂದರೆ ಅದರಿಂದ ನಾವು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅವಮಾನದಿಂದ ನಾವು ತಪ್ಪು ದಾರಿಯನ್ನು ಬಿಟ್ಟು ಸರಿ ದಾರಿಯಲ್ಲಿ ಸಾಗಿ ಎತ್ತರಕ್ಕೇರುವ ಸಾಧ್ಯತೆ ಇದೆ.
ಸುಖ ದುಃಖವನ್ನು ಸಮನಾಗಿ ಕಾಣು. ಯಾವುದೇ ವಸ್ತು ನಮಗೆ ಸುಖ-ದುಃಖವನ್ನು ಕೊಡುವುದಿಲ್ಲ. ಆ ವಸ್ತುವನ್ನು ನಾವು ನೋಡುವ ಭಾವನೆ ನಮಗೆ ಸುಖ-ದುಃಖವನ್ನು ಕೊಡುತ್ತದೆ. ಆದ್ದರಿಂದ ಶೀತ-ಉಷ್ಣದಂತೆ ಸುಖ-ದುಃಖವನ್ನು ಸಮನಾಗಿ ಕಾಣುವುದನ್ನು ರೂಢಿಸಿಕೊ.
ನಮಗನಿಸುತ್ತದೆ ಇವೆಲ್ಲವೂ ಮಾನವ ಸಹಜಪ್ರವೃತ್ತಿ(Instinct) ಎಂದು. ಆದರೆ ಇದು ಸಹಜ ಧರ್ಮವಲ್ಲ. ನಾವು ಅಂಟಿಸಿಕೊಳ್ಳುವುದರಿಂದ ನಮ್ಮಲ್ಲಿ ನಮಗೆ ಬೇಡವಾದ ಈ ಗುಣಗಳು ತುಂಬಿಕೊಳ್ಳುತ್ತವೆ. ಆದ್ದರಿಂದ ಹೊಗಳಿಕೆ ಮತ್ತು ತೆಗಳಿಕೆಗೆ ತಕ್ಷಣ ಪ್ರತಿಕ್ರಿಯಿಸಬೇಡ. ಮೌನಿಯಾಗು. ವಿಷಯದ ಬಗ್ಗೆ ಮನನ ಮಾಡು. ದುಡುಕಬೇಡ. ಎಷ್ಟು ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ ಮಾತನಾಡು. ಯೋಚಿಸಿ ಮಾತನಾಡು. ಏನಿದೆಯೋ ಅದನ್ನು ತೃಪ್ತಿಯಿಂದ ಅನುಭವಿಸು. ಸ್ಥಿರ-ಚರ ವಸ್ತುಗಳ(Making own property) ಹಿಂದೆ ಹೋಗಬೇಡ. ಭಗವಂತ ಕೊಟ್ಟಿರುವುದರಲ್ಲಿ ಸಂತೋಷದಿಂದ ನಿಶ್ಚಿಂತೆಯಿಂದ ಬದುಕು. ಭಕ್ತಿಯಿಂದ ಭಗವಂತನಲ್ಲಿ ಶರಣಾದಾಗ ನಾವು ನಮ್ಮ ಸಾಧನೆಯ ಹಾದಿಯಲ್ಲಿ ಈ ಎತ್ತರಕ್ಕೇರಬಹುದು. ಇಂಥಹ ಗುಣವನ್ನು ಹೊಂದಿರುವ ಭಕ್ತ ನನಗೆ ಅಚ್ಚುಮೆಚ್ಚುಎನ್ನುತ್ತಾನೆ ಕೃಷ್ಣ.
·  ಶ್ಲೋಕ - 20
ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ ।
ಶ್ರದ್ದಧಾನಾ ಮತ್ ಪರಮಾ ಭಕ್ತಾಸ್ತೇSತೀವ ಮೇ ಪ್ರಿಯಾಃ ॥೨೦॥
ಯೇ ತು ಧರ್ಮ ಅಮೃತಮ್ ಇದಮ್ ಯಥಾಉಕ್ತಮ್ ಪರ್ಯುಪಾಸತೇ ।
ಶ್ರದ್ದಧಾಣಾಃ ಮತ್ ಪರಮಾಃ ಭಕ್ತಾಃ ತೇ ಅತೀವ ಮೇ ಪ್ರಿಯಾಃ ಧರ್ಮ ಮೋಕ್ಷಗಳಿಗೆ ಸಾಧನವಾದ ಈ ಭಕ್ತಿ ಯೋಗವನ್ನು ಇಲ್ಲಿ ಹೇಳಿದ ತರ ಆಚರಿಸುವವರು, ನನ್ನ ಹಿರಿಮೆಯನ್ನು ನಂಬಿ ನಡೆದು ನನ್ನಲ್ಲಿ ಭಕ್ತಿಯಿಟ್ಟವರು ಅಂಥವರು ನನಗೆ ತುಂಬ ಅಚ್ಚುಮೆಚ್ಚು.
ನಮ್ಮ ಭಕ್ತಿ ಹೇಗಿರಬೇಕು, ಭಕ್ತನಲ್ಲಿರಬೇಕಾದ ಗುಣಗಳೇನು ಎನ್ನುವ ಈ ಅಮೃತ(ಮೋಕ್ಷ)ಸಾಧನಾ ಧರ್ಮವನ್ನು ವಿವರಿಸಿದ ಕೃಷ್ಣ, ಇಲ್ಲಿ ಫಲಶ್ರುತಿಯಾಗಿ ಹೇಳುತ್ತಾನೆ: ಇಲ್ಲಿ ಹೇಳಿದಂತೆ ಉಪಾಸನೆ ಮಾಡುವವರು, ಗುಣಧರ್ಮವನ್ನು ಬೆಳೆಸಿಕೊಂಡವರು, ಭಕ್ತಿಯಿಂದ ಆಚರಣೆಗೆ ತಂದುಕೊಳ್ಳುವ ಭಕ್ತರು ನನಗೆ ಪರಮ ಪ್ರಿಯರುಎಂದು.
ಇತಿ ದ್ವಾದಶೋSಧ್ಯಾಯಃ
ಹನ್ನೆರಡನೆಯ ಅಧ್ಯಾಯ ಮುಗಿಯಿತು

12 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.

ಅನಾಮಧೇಯ ಹೇಳಿದರು...

Chethan

ಅನಾಮಧೇಯ ಹೇಳಿದರು...

Thank you🙏 sir

ಅನಾಮಧೇಯ ಹೇಳಿದರು...

Mdvghvv

ಅನಾಮಧೇಯ ಹೇಳಿದರು...

ಸೂಪರ್ ಫೆಂಟಾಸ್ಟಿಕ್

ಅನಾಮಧೇಯ ಹೇಳಿದರು...

🙏🙏🙏🙏🙏👌👌👌👌👌

ಅನಾಮಧೇಯ ಹೇಳಿದರು...

👆👌👌👌👌👆

ಅನಾಮಧೇಯ ಹೇಳಿದರು...

Udvithgowda

ಅನಾಮಧೇಯ ಹೇಳಿದರು...

🌹🌹🌹

ಅನಾಮಧೇಯ ಹೇಳಿದರು...

❤️❤️👍👍👌👌

ಅನಾಮಧೇಯ ಹೇಳಿದರು...

ಭಗವಂತ 🙏

ಅನಾಮಧೇಯ ಹೇಳಿದರು...

🙏🏻🙏🏻