ಭಗವದ್ಗೀತೆ ಅಧ್ಯಾಯ-14
(ಎಲ್ಲಾಶ್ಲೋಕಗಳು)
· ಶ್ಲೋಕ - 01
ಗೀತೆಯಲ್ಲಿ ಇಲ್ಲಿಯ
ತನಕ ಅಲ್ಲಲ್ಲಿ ಸಾಧನೆಯ ಮಾತು ಬಂದಿದ್ದರೂ ಕೂಡ, ಭಗವಂತನ ಸ್ವರೂಪದ ಮಹಿಮೆಯ ಮಾತು ಹೆಚ್ಚಾಗಿ ಬಂದಿದೆ. ಇಂಥಹ ಭಗವಂತನ ಉಪಾಸನೆಯ ಮುಖಗಳ ವರ್ಣನೆಯನ್ನು ನಾವು ಇನ್ನು ಮುಂದೆ ಕಾಣಬಹುದು.
ಹನ್ನೆರಡನೆ ಅಧ್ಯಾಯದಲ್ಲಿ(ಶ್ಲೋ-೦೫) ಕೃಷ್ಣ "ಶ್ರೀತತ್ವದ ಉಪಾಸನೆ ತುಂಬಾ ಕಷ್ಟ, ಇದು ನೇರ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ಭಗವಂತನೆಡೆಗೆ ಪಯಣಿಸಿದಂತೆ, ಸಾಧಕರು ಇದನ್ನು ಬಹಳ ಕಷ್ಟದಿಂದ ಸಾಧಿಸಬೇಕು"-ಎನ್ನುವ ಎಚ್ಚರವನ್ನು
ಕೊಟ್ಟ. ಹದಿಮೂರನೇ ಅಧ್ಯಾಯದಲ್ಲಿ(ಶ್ಲೋ-೨೬)- "ಸ್ಥಿರ ಮತ್ತು ಚರ ಜೀವಿಗಳಲ್ಲಿ ಯಾವುದು ಹುಟ್ಟಿದರೂ ಅದು ಕ್ಷೇತ್ರ[ಶ್ರೀತತ್ವ] ಮತ್ತು ಕ್ಷೇತ್ರಜ್ಞ[ಭಗವಂತ]ರ ಸಂಯೋಗದಿಂದಲೆ ಎಂದು
ತಿಳಿ"-ಎಂದು ಹೇಳಿದ. ಸಾಮಾನ್ಯವಾಗಿ ಸೃಷ್ಟಿಯ ಮಾತು ಬಂದಾಗ ‘ಭಗವಂತ ಸೃಷ್ಟಿ ಮಾಡಿದ’ ಎನ್ನುತ್ತೇವೆ. ಇಲ್ಲಿ ಎಲ್ಲಿಯೂ ಲಕ್ಷ್ಮಿಯ ಮಾತು ಬರುವುದಿಲ್ಲ. ಆದರೆ ಹಿಂದಿನ
ಅಧ್ಯಾಯದಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳಿದ: “ಈ ಸೃಷ್ಟಿ ಲಕ್ಷ್ಮೀನಾರಾಯಣರ ದಾಂಪತ್ಯದ ಫಲ” ಎಂದು. ಈ ಕಾರಣದಿಂದ ಸೃಷ್ಟಿ ಮೂಲದ ಚಿಂತನೆಯಲ್ಲಿ ಲಕ್ಷ್ಮೀನಾರಾಯಣರನ್ನು
ಒಟ್ಟಿಗೆ ಸ್ತುತಿಸುವುದು ಶ್ರೇಷ್ಠ. ಲಕ್ಷ್ಮಿಯನ್ನು ಸ್ತುತಿಸುವಾಗ ಜೊತೆಗೆ ನಾರಾಯಣನನ್ನು ಸ್ತುತಿಸಿ ಲಕ್ಷ್ಮಿಯ ಸ್ತೋತ್ರ ಮಾಡಬೇಕು ಎನ್ನುವುದನ್ನು ಆಚಾರ್ಯರು ದ್ವಾದಶ
ಸ್ತೋತ್ರದಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ.
ಅಲ್ಲಿ ‘ಶ್ರೀಸ್ತುತಿ’ ಎನ್ನುವ ಲಕ್ಷ್ಮೀದೇವಿಯ ಸ್ತುತಿ ಈ ರೀತಿ ಹೇಳುತ್ತದೆ:
ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿ
ವೃತ್ತಿಪ್ರಕಾಶನಿಯಮಾವೃತಿ ಬಂಧಮೋಕ್ಷಾಃ |
ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ ಶ್ರೀಃ ಯತ್ಕಟಾಕ್ಷಬಲವತ್ಯಜಿತಂ ನಮಾಮಿ || ೧||
ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ ಶ್ರೀಃ ಯತ್ಕಟಾಕ್ಷಬಲವತ್ಯಜಿತಂ ನಮಾಮಿ || ೧||
ಅಂದರೆ “ಯಾರ ಕಟಾಕ್ಷದ ಬಲದಿಂದ ಇಡಿಯ ಸೃಷ್ಟಿ-ಸ್ಥಿತಿ-ಸಂಹಾರವನ್ನು ಲಕ್ಷ್ಮಿ ಮಾಡುತ್ತಾಳೋ, ಅಂಥಹ ಲಕ್ಷ್ಮಿಯ ಪತಿಯಾದ ನಾರಾಯಣನಿಗೆ ನಮಸ್ಕಾರ” ಎಂದು. ಇಲ್ಲಿ ಲಕ್ಷ್ಮಿಯನ್ನು ಒಂದು ಸ್ತೋತ್ರದಲ್ಲಿ ಪೂರ್ಣ ವರ್ಣನೆ ಮಾಡಿ, ಅಂಥಹ ಲಕ್ಷ್ಮಿಯ ಪತಿಯಾದ ನಾರಾಯಣನಿಗೆ ನಮಸ್ಕಾರ ಎಂದು ಹೇಳಿದ್ದಾರೆ.
ಆದ್ದರಿಂದ ಲಕ್ಷ್ಮೀನಾರಾಯಣರ ಸ್ತುತಿಯೇ ಲಕ್ಷ್ಮಿಸ್ತುತಿ ಹೊರತು ಕೇವಲ ಲಕ್ಷ್ಮಿ ಸ್ತುತಿ ಅಲ್ಲ. ಇದಕ್ಕೆ ಮೂಲ-ಗೀತೆಯ ಹನ್ನೆರಡು, ಹದಿಮೂರು ಮತ್ತು ಹದಿನಾಲ್ಕನೇ ಅಧ್ಯಾಯ.
ಹನ್ನೆರಡನೆ ಅಧ್ಯಾಯದಲ್ಲಿ ಕೇವಲ ಲಕ್ಷ್ಮಿ ಉಪಾಸನೆ ಮಾಡಿದರೆ ಖಂಡಿತವಾಗಿ ಆಕೆ ಒಲಿಯಳು ಎನ್ನುವ ಎಚ್ಚರವಿದ್ದರೆ, ಹದಿಮೂರನೇ ಅಧ್ಯಾಯದಲ್ಲಿ ಈ ಜಗತ್ತು ಲಕ್ಷ್ಮೀ ನಾರಾಯಣರ ಸಂಯೋಗದಿಂದ ರಚನೆಯಾಯಿತು- ಆದ್ದರಿಂದ ನಾವೆಲ್ಲರೂ ಅವರ ಮಕ್ಕಳು ಎನ್ನುವ ಸಂದೇಶವಿದೆ. ಭಗವಂತನ ಜೊತೆಗೆ ಸೃಷ್ಟಿ ಪ್ರಕ್ರಿಯೆಯಲ್ಲಿ ಲಕ್ಷ್ಮಿಯ ಅನುಸಂಧಾನ ಹೇಗೆ
ಅನ್ನುವುದನ್ನು ಹದಿನಾಲ್ಕನೆ ಅಧ್ಯಾಯ ವಿವರಿಸುತ್ತದೆ. ಲಕ್ಷ್ಮಿ ಶ್ರೀ-ಭೂ-ದುರ್ಗ ಈ ಮೂರು ರೂಪದಲ್ಲಿ ಸತ್ವ-ರಜಸ್ಸು-ತಮೋಗುಣಗಳ ನಿಯಾಮಕ ಶಕ್ತಿಯಾದ್ದರಿಂದ-ಅವಳ ಮಕ್ಕಳು
ಸಾತ್ವಿಕರು-ರಾಜಸರು-ತಾಮಸರು ಎನ್ನುವ ಮೂರು ಬಗೆ. ಈ ವಿಚಾರವನ್ನು ಮೊತ್ತಮೊದಲ ಬಾರಿ ಈ ಅಧ್ಯಾಯದಲ್ಲಿ ಹೇಳಲಾಗಿದೆ.
ಹಿಂದಿನ ಯಾವ ಅಧ್ಯಾಯದಲ್ಲಿ ಕೂಡ ತ್ರೈವಿದ್ಯರ ವಿವರ ಇಷ್ಟು ಸ್ಪಷ್ಟವಾಗಿ ಬಂದಿಲ್ಲ. ನಾವು ಈ ತ್ರಿಗುಣಗಳ ವಿಶ್ಲೇಷಣೆ ಮಾಡಿ, ನಮ್ಮಲ್ಲಿರುವ ರಾಜಸ ಮತ್ತು ತಾಮಸ ಅಂಶವನ್ನು ತಿದ್ದಿಕೊಂಡು, ಹೇಗೆ ಸಾತ್ವಿಕ ದಾರಿಯಲ್ಲಿ ಸಾಧನೆಯನ್ನು
ಮಾಡಬಹುದು ಎನ್ನುವ ಅಂಶವನ್ನು ಈ ಅಧ್ಯಾಯದಲ್ಲಿ ಕಾಣಬಹುದು.
ಭಗವಾನುವಾಚ ।
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥೧॥
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥೧॥
ಭಗವಾನ್ ಉವಾಚ-ಭಗವಂತ
ಹೇಳಿದನು :ಪರಮ್ ಭೂಯಃ
ಪ್ರವಕ್ಷ್ಯಾಮಿ ಜ್ಞಾನಾನಾಮ್ ಜ್ಞಾನಮ್ ಉತ್ತಮಮ್ ।
ಯತ್ ಜ್ಞಾತ್ವಾ ಮುನಯಃ ಸರ್ವೇ ಪರಾಮ್ ಸಿದ್ಧಿಮ್ ಇತಃ ಗತಾಃ –ತಿಳಿಯಬೇಕಾದ ಸಂಗತಿಗಳಲ್ಲಿ ಹಿರಿದಾದ ತಿಳಿವನ್ನು ಇನ್ನಷ್ಟು
ಹೇಳುತ್ತೇನೆ; ಎಲ್ಲ ಮುನಿಗಳು ಇದನ್ನರಿತು ಇಲ್ಲಿಂದ ಪರಮಪದವನ್ನೈದಿದರು.
ಕೃಷ್ಣ ಹೇಳುತ್ತಾನೆ “ಇನ್ನೂ ಹೇಳುತ್ತೇನೆ” ಎಂದು. ಇದು ಬಹಳ ಮುಖ್ಯವಾದ ಮಾತು. ಸಾಮಾನ್ಯವಾಗಿ ಶಿಷ್ಯರು ಒತ್ತಾಯ ಮಾಡಿದರೂ ಗುರುಗಳು ಹೇಳುವುದಿಲ್ಲ.
ಗುರುಗಳಿಗೆ ಶಿಷ್ಯನ ಜ್ಞಾನ ತೃಷೆಯನ್ನು ಕಂಡು ಹೇಳಬೇಕು ಅನ್ನಿಸಬೇಕು
ಮತ್ತು ಅವರು ಖುಷಿಯಿಂದ ಹೇಳಬೇಕು. ಆಗ ಶಿಷ್ಯನಿಗೆ ಆ ವಿದ್ಯೆ ಫಲಿಸುತ್ತದೆ. ಹೀಗೆ ಜ್ಞಾನ ತೃಷೆಯನ್ನು ಕಂಡು ಖುಷಿಯಿಂದ ಗುರು ಹೇಳುವ ಜ್ಞಾನ ನಿಜವಾದ ಜ್ಞಾನ. ಇಲ್ಲಿ ಕೃಷ್ಣ
ತಾನಾಗಿಯೇ ಅರ್ಜುನನಿಗೆ ಅಪೂರ್ವವಾದ ಜ್ಞಾನವನ್ನು ಹೇಳುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ: “ಹಿಂದೆ ಹೇಳಿದ ಕ್ಷೇತ್ರ(ಪ್ರಕೃತಿ-ಲಕ್ಷ್ಮಿ) ಮತ್ತು
ಕ್ಷೇತ್ರಜ್ಞ(ನಾರಾಯಣ)ರ ವಿಚಾರವನ್ನು ಇನ್ನೂ ವಿವರವಾಗಿ ಹೇಳುತ್ತೇನೆ. ಏಕೆಂದರೆ ಅದು ತಿಳಿದುಕೊಳ್ಳಬೇಕಾದ ವಿಚಾರದಲ್ಲೇ ಅತ್ಯಂತ ಮುಖ್ಯವಾದ ವಿಚಾರ” ಎಂದು. ಈ ಜಗತ್ತಿನ ಸೃಷ್ಟಿಯ ಹಿಂದೆ
ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಆದ್ದರಿಂದ ಕೇವಲ
ತಂದೆಯ ಸ್ಮರಣೆಯಾಗಲಿ ಅಥವಾ ಕೇವಲ ತಾಯಿಯ ಸ್ಮರಣೆಯಾಗಲಿ ಮಾಡುವುದಕ್ಕಿಂತ, ತಂದೆ-ತಾಯಿಯರ
ಸ್ಮರಣೆಯನ್ನು ತಿಳಿದು ಮಾಡುವುದು ಒಳಿತು. ಕೃಷ್ಣ ಹೇಳುತ್ತಾನೆ: “ಈ ವಿಚಾರವನ್ನು
ಇನ್ನೂ ವಿಸ್ತಾರವಾಗಿ ನಿನಗೆ ಹೇಳುತ್ತೇನೆ.
ಏಕೆಂದರೆ ಇದು ಒಬ್ಬ ಮೋಕ್ಷ ಸಾಧನೆ ಮಾಡುವ ವ್ಯಕ್ತಿ ತಿಳಿದುಕೊಳ್ಳಲೇಬೇಕಾದ ವಿಷಯ” ಎಂದು. ಲಕ್ಷ್ಮೀ-ನಾರಾಯಣರನ್ನು ಸೃಷ್ಟಿ ಮೂಲದಲ್ಲಿ ಚಿಂತನೆ ಮಾಡದೆ ಮೋಕ್ಷ ಸಾಧನೆ ಅಸಾಧ್ಯ. “ಈ ಸಾಧನಾ ಭೂಮಿಯಲ್ಲಿ ಹುಟ್ಟಿಬಂದು ಬ್ರಹ್ಮಸಾಕ್ಷಾತ್ಕಾರ ಪಡೆದ ಮುನಿಗಳೂ ಕೂಡ, ಇದನ್ನು ತಿಳಿದೇ ಜೀವನದ ಪರಮ ಸಿದ್ಧಿಯಾದ ಮೋಕ್ಷವನ್ನು ಪಡೆದರು” ಎನ್ನುತ್ತಾನೆ ಕೃಷ್ಣ. ಇದನ್ನೇ ಮುಂದಿನ ಶ್ಲೋಕದಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ.
· ಶ್ಲೋಕ - 02
ಇದಂ ಜ್ಞಾನಮಪಾಶ್ರಿತ್ಯ
ಮಮ ಸಾಧರ್ಮ್ಯಮಾಗತಾಃ ।
ಸರ್ಗೇSಪಿ ನೋಪಜಾಯಂತೇ ಪ್ರಳಯೇ ನ ವ್ಯಥಂತಿ ಚ ॥೨॥
ಸರ್ಗೇSಪಿ ನೋಪಜಾಯಂತೇ ಪ್ರಳಯೇ ನ ವ್ಯಥಂತಿ ಚ ॥೨॥
ಇದಮ್ ಜ್ಞಾನಮ್ ಅಪಾಶ್ರಿತ್ಯ ಮಮ ಸಾಧರ್ಮ್ಯಮ್ ಆಗತಾಃ ।
ಸರ್ಗೇ ಅಪಿ ನ
ಉಪಜಾಯಂತೇ ಪ್ರಳಯೇ ನ ವ್ಯಥಂತಿ ಚ –ಈ ತಿಳಿವು ಗಳಿಸಿ
ದುಗುಡ ದೂರರಾಗಿ ನನ್ನನ್ನು ಹೋಲುವವರು ಸೃಷ್ಟಿಕಾಲದಲ್ಲಿ
ಹುಟ್ಟುವುದಿಲ್ಲ; ಪ್ರಳಯಕಾಲದಲ್ಲಿ ನೋಯುವುದಿಲ್ಲ.
ಈ ಶ್ಲೋಕದಲ್ಲಿ
ಬಂದಿರುವ ‘ಅಪಾಶ್ರಿತ್ಯ’ ಎನ್ನುವ ಪದ ವಿಶೇಷ ಅರ್ಥವನ್ನು ಕೊಡುವ ಪದ. ‘ಅನ್ಯತ್ ಸರ್ವಂ ಅಪಾಹಾಯಾSಶ್ರಯಣಂ-ಅಪಾSಶ್ರಯಣಃ’ “ಇನ್ಯಾರೂ ಇಲ್ಲ-ನೀನೇ ನನಗೆ ಆಶ್ರಯ” ಎಂದು ಭಗವಂತನಲ್ಲಿ ಆಶ್ರಯ ಹೊಂದುವುದನ್ನು ಇಲ್ಲಿ ‘ಅಪಾಶ್ರಿತ್ಯ’ ಎಂದಿದ್ದಾರೆ. ದ್ವಾದಶ ಸ್ತೋತ್ರದಲ್ಲಿ ಹೇಳುವಂತೆ:
ಕುರು ಭುಂಕ್ಷ್ವ ಚ
ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ || ೧||
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ || ೧||
ಇದು ‘ಅಪಾಶ್ರಿತ್ಯ’ ಪದದ ಮೂಲ ಅರ್ಥವನ್ನು ಹೇಳುತ್ತದೆ. ಇಲ್ಲಿ ಕೃಷ್ಣ ಹೇಳುತ್ತಾನೆ: “ಲಕ್ಷ್ಮೀ-ನಾರಾಯಣರು ಜಗತ್ತಿನ ತಂದೆ
ತಾಯಿ-ಅನ್ನುವ ಜ್ಞಾನದಿಂದ ನನ್ನನ್ನು ಉಪಾಸನೆ ಮಾಡುವವರು, ನನ್ನಂತೆ ದಿವ್ಯ ಸ್ವಭಾವವನ್ನು ಪಡೆಯುತ್ತಾನೆ” ಎಂದು. ಇಂಥವರು ಸರ್ವದೋಷವನ್ನು ಕಳೆದುಕೊಂಡು, ತ್ರಿಗುಣಾತೀತ ಸ್ಥಿತಿಯಲ್ಲಿ ಭಗವಂತನನ್ನು ಸೇರಿ ಭಗವಂತನಲ್ಲಿ ನೆಲೆಸುತ್ತಾರೆ. ಈ ಜಗತ್ತು
ಸೃಷ್ಟಿಯಾಗುವುದೂ ಲಕ್ಷ್ಮೀ-ನಾರಾಯಣರಿಂದ ಮತ್ತು ಹೋಗಿ ಸೇರುವುದೂ ಅವರನ್ನೆ. ಇದನ್ನು ತಿಳಿದವನು ಹುಟ್ಟು ಸಾವನ್ನು ದಾಟಬಲ್ಲ. ಆತ ಮರಳಿ ಎಂದೂ ಈ ಸಂಸಾರ ಬಂಧದಲ್ಲಿ
ಸೀಲುಕುವುದಿಲ್ಲ. ಇಲ್ಲಿ ‘ಉಪಜಾಯತೆ’ ಎನ್ನುವ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ ‘ಉಪ’ ಅಂದರೆ ‘ಉತ್ಕೃಷ್ಟ’.[ಇದು ಆಂಗ್ಲ ಭಾಷೆಯಲ್ಲಿ ‘up/upper’ ಆದರೆ, ಹಿಂದಿಯಲ್ಲಿ ‘ऊपर’ ಆಗಿದೆ. ಜರ್ಮನ್ ಭಾಷೆಯಲ್ಲಿ ಇದು ‘über’. ಕನ್ನಡದಲ್ಲಿ ಉಪ್ಪರಿಗೆ ಅನ್ನುವಲ್ಲಿ ‘ಉಪ’ - ‘’ಮೇಲೆ’ ಎನ್ನುವ ಅರ್ಥವನ್ನು ಕೊಡುತ್ತದೆ]. ಆದ್ದರಿಂದ ‘ಉಪಜಾಯತೆ’ ಎಂದರೆ ಉತ್ಕೃಷ್ಟವಾದ ಜನನ. ಭಗವಂತನ ಅರಿವಿಗೋಸ್ಕರ ಈ ದೇಹ ಧಾರಣೆ ಮಾಡಿ ಹುಟ್ಟುವುದು
ಎತ್ತರದ ಹುಟ್ಟು. ಅಧ್ಯಾತ್ಮದ ಸಾಧನೆಯಿಂದ ಎತ್ತರಕ್ಕೇರುವ ಜನನ ‘ಉಪಜನನ’. ತನ್ನ ಜೀವಮಾನದಲ್ಲಿ ಈ ಸೃಷ್ಟಿಯ ಮೂಲದ ಜ್ಞಾನವನ್ನು ಗಳಿಸಿದವ ಮತ್ತೆ ಮರಳಿ ಹುಟ್ಟಲಾರ.
ಆತ ಭಗವಂತನಲ್ಲಿ ನಿರಂತರ ವಾಸ ಮಾಡುವ ಪರಮ ಪದವನ್ನು ಪಡೆಯುತ್ತಾನೆ.
· ಶ್ಲೋಕ - 03
ಮಮ ಯೋನಿರ್ಮಹದ್
ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ ।
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ॥೩॥
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ॥೩॥
ಮಮ ಯೋನಿಃ ಮಹತ್
ಬ್ರಹ್ಮ ತಸ್ಮಿನ್ ಗರ್ಭಮ್ ದಧಾಮಿ ಅಹಮ್ ।
ಸಂಭವಃ
ಸರ್ವಭೂತಾನಾಮ್ ತತಃ ಭವತಿ ಭಾರತ –ಚೇತನ ಪ್ರಕೃತಿ ನನ್ನ ಅರ್ಧಾಂಗಿ. ಅವಳಲ್ಲಿ ಸೃಷ್ಟಿಯ ಬೀಜವನ್ನು ಬಿತ್ತುತ್ತೇನೆ. ಭಾರತ, ಎಲ್ಲ ಜೀವಿಗಳ ಹುಟ್ಟು ಅದರ ಮೂಲಕ ನಡೆಯುತ್ತದೆ.
ಇಲ್ಲಿ ಕೃಷ್ಣ ಬಹಳ
ವಿಚಿತ್ರವಾದ ಒಂದು ಸಂಗತಿಯನ್ನು ಹೇಳುತ್ತಾನೆ. ಈ ಶ್ಲೋಕ ಅರ್ಥವಾಗಬೇಕಿದ್ದರೆ ನಾವು ಮೊದಲು ‘ಭಾ-ರತ’ ರಾಗಬೇಕು. ‘ರತ’ ಅಂದರೆ ತತ್ಪರತೆ. ನಾವು ಭಗವಂತನಲ್ಲಿ ರತರಾಗಬೇಕು; ಜ್ಞಾನದ ಮಾರ್ಗದಲ್ಲಿ ರತರಾಗಬೇಕು; ಭಕ್ತಿಯಿಂದ ಭರಿತರಾಗಿ ತುಂಬಿದ ಕೊಡವಾಗಬೇಕು; ವಿನೀತರಾಗಿರಬೇಕು. ಆಗ ಸೃಷ್ಟಿಯ ಈ ಗುಟ್ಟು ಅರ್ಥವಾಗುತ್ತದೆ.
ಯಾವುದೇ ಒಂದು ವಸ್ತು
ಸೃಷ್ಟಿಯಾಗಬೇಕಿದ್ದರೂ ಅಲ್ಲಿ ಒಂದಕ್ಕಿಂತ ಹೆಚ್ಚು ಕಾರಣಗಳು ಬೇಕು. ಜಡವಾದರೆ
ಅಲ್ಲಿ ಎರಡು ಕಾರಣಗಳು ಅಗತ್ಯ. ಉದಾಹರಣೆಗೆ ಒಂದು ಮಡಕೆ ಸೃಷ್ಟಿಯಾಗಬೇಕಿದ್ದರೆ ಅಲ್ಲಿ ಮೂಲದ್ರವ್ಯ(raw materials) ಬೇಕು ಮತ್ತು ರೂಪ ಕೊಡುವ ಕುಂಬಾರ ಬೇಕು. ವನಸ್ಪತಿಗಳ ಸೃಷ್ಟಿ- ಜಡದೊಳಗೆ
ಭಗವಂತ ಜೀವವನ್ನು ಸೇರಿಸುವುದರ ಮೂಲಕ ಆಗುತ್ತದೆ. ಆದರೆ ಗರ್ಭದ ಮೂಲಕ ಹುಟ್ಟುವ 'ಚೇತನ ಸೃಷ್ಟಿ'ಗೆ ಜಡದ್ರವ್ಯದೊಂದಿಗೆ ಸೃಷ್ಟಿ ಮಾಡತಕ್ಕಂತಹ
ಒಂದು ಗಂಡು ಮತ್ತು ಒಂದು ಹೆಣ್ಣು ಬೇಕು. ಇಬ್ಬರ ಸಮಾಗಮದಿಂದ ಮೂರನೆಯದು
ಸೃಷ್ಟಿಯಾಗುತ್ತದೆ.
ಈ ಶ್ಲೋಕದಲ್ಲಿ ‘ಮಮ ಯೋನಿಃ ಮಹತ್ ಬ್ರಹ್ಮ’ ಎನ್ನುವಲ್ಲಿ ಬಂದಿರುವ 'ಯೋನಿ' ಮತ್ತು 'ಬ್ರಹ್ಮ' ಎನ್ನುವ ಪದಗಳು ಅನೇಕ ಅರ್ಥವನ್ನು ಕೊಡುವ ಪದಗಳು. ಯಾವ ಸಂದರ್ಭದಲ್ಲಿ
ಯಾವ ಅರ್ಥ ಹೊಂದಿಕೆಯಾಗುತ್ತದೆ ಎಂದು ತಿಳಿದು ನಾವು ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕು. ಯೋನಿ- ಕಾರಣ, ಉತ್ಪತ್ತಿಸ್ಥಾನ, ಹೆಂಡತಿ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಅದೇ
ರೀತಿ ಬ್ರಹ್ಮ- ಜೀವ, ಚತುರ್ಮುಖ, ಲಕ್ಷ್ಮಿ, ಭಗವಂತ ಇತ್ಯಾದಿ
ಅನೇಕ ಅರ್ಥವನ್ನು ಕೊಡುತ್ತದೆ. ಈ ಶ್ಲೋಕದಲ್ಲಿ ಯೋನಿ ಅಂದರೆ ಹೆಂಡತಿ; ‘ಮಹತ್ ಬ್ರಹ್ಮ’ ಎಂದರೆ ಚತುರ್ಮುಖನಿಗೂ ತಾಯಿಯಾಗಿರುವ ಶ್ರೀಲಕ್ಷ್ಮಿ. ಕೃಷ್ಣ ಹೇಳುತ್ತಾನೆ “ ನಾನು ನನ್ನ ಪತ್ನಿಯಾದ ಚಿತ್ ಪ್ರಕೃತಿ (ಲಕ್ಷ್ಮಿ)ಯಲ್ಲಿ ಗರ್ಭದಾನ
ಮಾಡುತ್ತೇನೆ. ಆ ಗರ್ಭ ಬೆಳೆದು ಸಮಸ್ತ ಜೀವಜಾತಗಳು ಸೃಷ್ಟಿಯಾಗುತ್ತವೆ” ಎಂದು. ಇದು ನಮಗೆ ಹೊಸ ಸಂಗತಿ. ಏಕೆಂದರೆ
ಋಗ್ವೇದದಲ್ಲಿ ಚತುರ್ಮುಖನ ಸೃಷ್ಟಿಯ ಬಗ್ಗೆ ಈ ರೀತಿ
ಹೇಳಲಾಗಿದೆ:
ತಮಿದ್ಗರ್ಭಂ ಪ್ರಥಮಂ
ದಧ್ರ ಆಪೋ ಯತ್ರ ದೇವಾಃ ಸಮಗಚ್ಛಂತ ವಿಶ್ವೇ|
ಅಜಸ್ಯ
ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ || ೧೦.೮೨.೦೬||
ಇಲ್ಲಿ “ಭಗವಂತನ ನಾಭಿ ಕಮಲದಿಂದ ಬ್ರಹ್ಮ ಹೊರ ಬಂದ” ಎಂದು ಹೇಳಲಾಗಿದೆ. ಚತುರ್ಮುಖನಿಂದ ಜೀವ ಸೃಷ್ಟಿ ನಿರ್ಮಾಣವಾಯಿತು ಆದ್ದರಿಂದ ಚತುರ್ಮುಖ ಜಗತ್ತಿನ ತಂದೆ ಎನ್ನುವ ವಿಚಾರವೂ ನಮಗೆ ತಿಳಿದಿದೆ. ವೇದದಲ್ಲಿ ಇನ್ನೊಂದು
ಕಡೆ(ಅಂಭ್ರಿಣೀಸೂಕ್ತ) ಹೀಗೆ ಹೇಳಿದ್ದಾರೆ:
ಅಹಂ ಸುವೇ ಪಿತರಮಸ್ಯ
ಮೂರ್ಧನ್ ಮಮ ಯೋನಿರಪ್ಸ್ವ೦ತಃ ಸಮುದ್ರೇ |
ತತೋ ವಿ ತಿಷ್ಠೇ
ಭುವನಾನು ವಿಶ್ವೋ-ತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ || ೭ ||
ಇದು ಲಕ್ಷ್ಮಿ ಹೇಳುವ
ಮಾತು: “ನಾನು ಈ ಜಗತ್ತಿನ ತಂದೆಯಾದ ಚತುರ್ಮುಖನನ್ನು
ನನ್ನ ನೆತ್ತಿ(ಮೂರ್ಧನ್-ಬೈತಲೆ)ಯಿಂದ ಹೆತ್ತೆ. ನನಗೂ
ಕಾರಣನಾದ ಭಗವಂತ ಸಮುದ್ರದಲ್ಲಿದ್ದಾನೆ ” ಎಂದು. ಸಮಸ್ತ ಬ್ರಹ್ಮಾಂಡದ ಸೃಷ್ಟಿ ಶಿವನಿಂದಾಯಿತು ಎಂದು ಇನ್ನೊಂದೆಡೆ ಹೇಳುತ್ತಾರೆ. ಶಾಸ್ತ್ರ ಪ್ರಕ್ರಿಯೆ ಗೊತ್ತಿಲ್ಲದಿದ್ದರೆ
ಇದೆಲ್ಲವೂ ಬರಿಯ ಗೊಂದಲ. ಮೋಕ್ಷ ಸಾಧನೆ ಮಾಡುವವರು ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು-ಆಗ ಸತ್ಯ ಸಾಕ್ಷಾತ್ಕಾರವಾಗುತ್ತದೆ.
ಜೀವ-ಪ್ರಕೃತಿ-ಭಗವಂತ
ಅನಾದಿ ಅನಂತ. ಸೃಷ್ಟಿ ಪೂರ್ವದಲ್ಲಿ ಸಮಸ್ತ ಪ್ರಪಂಚ ಸೂಕ್ಷ್ಮ ರೂಪದಲ್ಲಿ ಭಗವಂತನ ಉದರದಲ್ಲಿತ್ತು. ಇದನ್ನು ಇನ್ನೂ ಸೂಕ್ಷ್ಮವಾಗಿ
ನೋಡಿದರೆ- ಸಮಸ್ತ ವಿಶ್ವ ಲಕ್ಷ್ಮೀದೇವಿಯ ಉದರದಲ್ಲಿತ್ತು ಮತ್ತು
ಲಕ್ಷ್ಮಿ ಭಗವಂತನ ಉದರದಲ್ಲಿದ್ದಳು. ಭಗವಂತ ಲಕ್ಷ್ಮಿಯ ಉದರದಲ್ಲಿ ಸಮಸ್ತ ಜೀವಜಾತಗಳ
ಬೀಜಕ್ಷೇಪ ಮಾಡಿದ. ಕಮಲ ರೂಪದ ಇಡೀ ಬ್ರಹ್ಮಾಂಡ ಲಕ್ಷ್ಮಿಯ ನೆತ್ತಿಯ ಮೂಲಕ ಭಗವಂತನ ನಾಭಿಯಿಂದ ಹೊರಚಿಮ್ಮಿತು. ಅದರಲ್ಲಿ ಚತುರ್ಮುಖನಿದ್ದ ಜೊತೆಗೆ ಅವ್ಯಕ್ತ ರೂಪದಲ್ಲಿ
ಸಮಸ್ತ ದೇವತೆಗಳೂ, ಜೀವಜಾತರೂ ಹುಟ್ಟಿದರು. ಈ ಕಾರಣದಿಂದ ಲಕ್ಷ್ಮೀನಾರಾಯಣರು ಸಮಸ್ತ ಜಗತ್ತಿನ
ತಾಯಿ-ತಂದೆ. ಇಲ್ಲಿ ನಾವು ಅರಿಯಬೇಕಾದ ಒಂದು ಮುಖ್ಯ
ವಿಚಾರವೆಂದರೆ-ಸೃಷ್ಟಿ ಕ್ರಿಯೆ ಹಂತ ಹಂತವಾಗಿ ನಡೆದ ಕ್ರಿಯೆ. ಲಕ್ಷ್ಮೀ ನಾರಾಯಣರ ಸಮಾಗಮದಿಂದ ನಿರ್ಮಾಣವಾದದ್ದು ಕೇವಲ
ಅವ್ಯಕ್ತ ಸೃಷ್ಟಿ. ನಂತರ ಚತುರ್ಮುಖ ಬ್ರಹ್ಮ ಈ ಸೂಕ್ಷ್ಮರೂಪಿ
ಅವ್ಯಕ್ತ ಪ್ರಪಂಚಕ್ಕೆ(ಜೀವ ಜಾತಕ್ಕೆ) ಒಂದು ಮೂಲ ಸ್ಥೂಲರೂಪವನ್ನು ಕೊಟ್ಟು ಜಗತ್ತಿನ ಪಿತಾಮಹನೆನಿಸಿದ. ತದನಂತರ ಶಿವನಿಂದ ಈ ಪ್ರಪಂಚ ಪೂರ್ಣ ಸ್ಥೂಲರೂಪವನ್ನು ಪಡೆಯಿತು. ಈ
ಪ್ರಕ್ರೀಯೆಯನ್ನು ನಾವು ಅರ್ಥ ಮಾಡಿಕೊಂಡರೆ ಇಲ್ಲಿ ಯಾವುದೇ ಗೊಂದಲವಿಲ್ಲ. ಚತುರ್ಮುಖ ಲಕ್ಷ್ಮಿಯ ನೆತ್ತಿಯಿಂದ ಹುಟ್ಟಿದ್ದು ಹೌದು; ಆತ ಭಗವಂತನ ನಾಭಿಯಿಂದ ಹುಟ್ಟಿರುವುದೂ ಹೌದು; ಆತ ಜಗತ್ತಿನ ತಂದೆ ಹೌದು; ಶಿವನಿಂದ ಈ ಸ್ಥೂಲ ಪ್ರಪಂಚ ನಿರ್ಮಾಣವಾದದ್ದೂ ಹೌದು; ಲಕ್ಷ್ಮೀ ನಾರಾಯಣರು ಸಮಸ್ತ ಜೀವಜಾತದ ತಾಯಿ-ತಂದೆ ಕೂಡ ಹೌದು. ಈ ಕುರಿತ ವಿವರವನ್ನು 'ಮಹಾಭಾರತ ತಾತ್ಪರ್ಯ ನಿರ್ಣಯ'ದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.
ಒಂದು
ಚೇತನ[ಭೂತಿ(ಉನ್ನತಿ) ಉಳ್ಳ ಜೀವ)ದ ಸೃಷ್ಟಿಗೆ ಒಂದು ಗಂಡು ಒಂದು ಹೆಣ್ಣಿನ ಸಮಾಗಮ ಅಗತ್ಯ. ಇದು ಸೃಷ್ಟಿ ಆರಂಭದಿಂದಲೇ
ಬೆಳೆದುಕೊಂಡು ಬಂದ ಸಂಪ್ರದಾಯ. ಜಗತ್ತಿನ ಎಲ್ಲಾ ಸೃಷ್ಟಿಯ ಹಿಂದೆ ಲಕ್ಷ್ಮೀನಾರಾಯಣರು ತಂದೆ ತಾಯಿಯಾಗಿ ನಿಂತಿದ್ದಾರೆ. ಈ ವಿಷಯವನ್ನು ಇನ್ನೂ ಸ್ಪಷ್ಟವಾಗಿ ಕೃಷ್ಣ ಮುಂದಿನ
ಶ್ಲೋಕದಲ್ಲಿ ವಿವರಿಸುತ್ತಾನೆ.
· ಶ್ಲೋಕ - 04
ಸರ್ವಯೋನಿಷು ಕೌಂತೇಯ
ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ ಯೋನಿರಹಂ ಬೀಜಪ್ರದಃ ಪಿತಾ ॥೪॥
ತಾಸಾಂ ಬ್ರಹ್ಮ ಮಹದ್ ಯೋನಿರಹಂ ಬೀಜಪ್ರದಃ ಪಿತಾ ॥೪॥
ಸರ್ವಯೋನಿಷು ಕೌಂತೇಯ
ಮೂರ್ತಯಃ ಸಂಭವಂತಿ ಯಾಃ ।
ತಾಸಾಮ್ ಬ್ರಹ್ಮ ಮಹತ್ ಯೋನಿಃ ಅಹಮ್ ಬೀಜಪ್ರದಃ ಪಿತಾ –ಕೌಂತೇಯ, ಯಾವೆಲ್ಲ ಬಸಿರುಗಳಲ್ಲಿ ಏನೆಲ್ಲ ರೂಪಗಳು ರೂಪುಗೊಳ್ಳುತ್ತವೆ- ಅವುಗಳಿಗೆಲ್ಲ
ಚೇತನ ಪ್ರಕೃತಿಯೆ ತಾಯಿ; ನಾನೆ ಬೀಜ ಬಿತ್ತುವ ತಂದೆ.
ಕೇವಲ ದೇವತೆಗಳು, ಮಾನವರಷ್ಟೇ ಅಲ್ಲ. ಸಮಸ್ತ ಜೀವಜಾತದ ಹುಟ್ಟಿನ
ಹಿಂದೆ ತಂದೆ ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ.
ಎಲ್ಲವುದರ ತಾಯಿ ಚೇತನ ಪ್ರಕೃತಿ ಲಕ್ಷ್ಮಿ. ಬೀಜ ಬಿತ್ತುವ ತಂದೆ ನಾರಾಯಣ. ಮುಂಡಕ ಉಪನಿಷತ್ತಿನಲ್ಲಿ ಹೇಳುವಂತೆ:
ಪುಮಾನ್ ರೇತಃ
ಸಿಂಚತಿ ಯೋಷಿತಾಯಾಂ ಬಹ್ವೀಃ ಪ್ರಜಾಃ ಪುರುಷಾತ್ ಸಂಪ್ರಸೂತಾಃ || ೨.೨.೫||
ಇಲ್ಲಿ 'ಪುಮಾನ್' ಎಂದರೆ ಗಂಡಿನಲ್ಲಿ
ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮತ್ತು 'ಯೋಷಿತಾ' ಎಂದರೆ ಹೆಣ್ಣಿನಲ್ಲಿ
ವಿಶೇಷವಾಗಿ ಸನ್ನಿಹಿತಳಾಗಿರುವ ಲಕ್ಷ್ಮಿ. ಹೇಗೆ ಹೊಲದಲ್ಲಿ ಬೀಜ ಬಿತ್ತಿದರೆ ಅದು ಅಲ್ಲಿ ನಿಜವಾದ ರೂಪವನ್ನು ತಾಳುತ್ತದೋ, ಹಾಗೆ ಭಗವಂತ ಜಡಪ್ರಕೃತಿಯ ಅಭಿಮಾನಿನಿಯಾದ ಶ್ರೀಲಕ್ಷ್ಮಿಯಲ್ಲಿ ಬೀಜಪ್ರದ
ಮಾಡುತ್ತಾನೆ. ತಾಯಿ ಲಕ್ಷ್ಮಿ ಆ ಬೀಜಕ್ಕೆ ಒಂದು ಆಕಾರ ಕೊಡುತ್ತಾಳೆ.
ಈ ಅನುಸಂಧಾನ ಎಷ್ಟು ಭವ್ಯ. ಈ ಕಾರಣಕ್ಕಾಗಿ ಹಿಂದಿನ ಕಾಲದ ಶಾಸ್ತ್ರಕಾರರು ಗರ್ಭಿಣಿ
ಹೆಣ್ಣಿನ ದೇಹವನ್ನು ದೇವಾಲಯ ಎಂದೂ, ಆ ಗರ್ಭಿಣಿಯ ಗರ್ಭವಿರುವ ಸ್ಥಳ ಗರ್ಭಗುಡಿ
ಎಂತಲೂ, ಆ ಗರ್ಭದ ಒಳಗೆ ಸನ್ನಿಹಿತನಾಗಿ ಬೆಳೆಸುತ್ತಿರುವವ ಭಗವಂತ ಎಂತಲೂ ಗೌರವಿಸುತ್ತಿದ್ದರು. ಇದು ನಮ್ಮ ಪ್ರಾಚೀನರು ಪ್ರತಿಯೊಂದು ಕ್ರಿಯೆಯಲ್ಲೂ
ಭಗವಂತನನ್ನು ಅನುಸಂಧಾನ ಮಾಡುವ ಭವ್ಯತೆ. ಹೆಣ್ಣು ದೇವಾಲಯವಾಗುವುದು ಆಕೆ ಗರ್ಭಿಣಿಯಾದಾಗ. ಹಾಗಾಗಿ ಹೆಣ್ಣಿನ ಸರ್ವ ಶ್ರೇಷ್ಠ ಭಯಕೆ ತಾನು ತಾಯಿಯಾಗಬೇಕು ಎನ್ನುವುದು. ಆಕೆಯ ಬಯಕೆಯ
ಕೊನೆಯ ಗುರಿ ಮಾತೃತ್ವ. ಲಕ್ಷ್ಮಿ ಆಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸನ್ನಿಹಿತಳಾಗುವುದು ಆಕೆ ಗರ್ಭವತಿಯಾದಾಗ. ಈ ಕಾರಣದಿಂದ ದಾಂಪತ್ಯ ಅನ್ನುವುದು ಲಕ್ಷ್ಮೀನಾರಾಯಣರ ಆರಾಧನೆ. ದಾಂಪತ್ಯದಲ್ಲಿ ಗಂಡು ಹೆಣ್ಣಿನ ಸಮಾಗಮ ಎನ್ನುವುದು ಲಕ್ಷ್ಮೀ ನಾರಾಯಣರ
ಸಮಾಗಮ. ಇಲ್ಲಿ ನಮ್ಮ ಭಾಗ್ಯ ಎಂದರೆ ನಮ್ಮನ್ನು ಮಾಧ್ಯಮವಾಗಿ ಬಳಸಿ ಭಗವಂತ ಸೃಷ್ಟಿ ಮಾಡುವುದು. ಈ ರೀತಿ ಸೃಷ್ಟಿಯಾಗುವಾಗ ಇಲ್ಲಿ ಬೇಕಾಗುವ ಮೂಲದ್ರವ್ಯದ ವಿಸ್ತಾರವಾದ
ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ನೀಡಿದ್ದಾನೆ.
· ಶ್ಲೋಕ - 05
ಸತ್ತ್ವಂ ರಜಸ್ತಮ
ಇತಿ ಗುಣಾಃ ಪ್ರಕೃತಿಸಂಭವಾಃ ।
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್ ॥೫॥
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್ ॥೫॥
ಸತ್ತ್ವಮ್ ರಜಃ ತಮಃ ಇತಿ ಗುಣಾಃ ಪ್ರಕೃತಿ ಸಂಭವಾಃ ।
ನಿಬಧ್ನಂತಿ ಮಹಾಬಾಹೋ
ದೇಹೇ ದೇಹಿನಮ್ ಅವ್ಯಯಮ್ – ಮಹಾಬಾಹೋ, ಸತ್ವ-ರಜಸ್ಸು-ತಮಸ್ಸು ಎಂಬಿವು ಜಡಪ್ರಕೃತಿಯಿಂದ ಮೂಡಿಬಂದ ಗುಣಗಳು. ಅಳಿವಿರದ ಜೀವನನ್ನು ಇವು ದೇಹದಲ್ಲಿ ಕಟ್ಟಿಹಾಕುತ್ತವೆ.
ಈ ಪ್ರಪಂಚದ, ಸರ್ವಜೀವಜಾತದ ತಾಯಿಯಾದ ಪ್ರಕೃತಿ-
ಗುಣತ್ರಯಮಾನಿನಿ. ಆದ್ದರಿಂದ ಪ್ರತಿಯೊಂದು ಜೀವ
ಹುಟ್ಟುವಾಗಲೂ ಕೂಡ ಸತ್ವ-ರಜಸ್ಸು ಮತ್ತು ತಮಸ್ಸೆಂಬ ಮೂರು ಗುಣಗಳೊಂದಿಗೆ ಹುಟ್ಟುತ್ತವೆ ಮತ್ತು ಈ ಗುಣಗಳ ಪ್ರಭಾವದಲ್ಲಿ
ಬೆಳೆಯುತ್ತವೆ. ಮೂರು ಗುಣಗಳಿಲ್ಲದೆ ಶುದ್ಧವಾದ ಏಕಗುಣದಿಂದ ಯಾವ
ಜೀವವೂ ಸೃಷ್ಟಿಯಾಗುವುದಿಲ್ಲ. ಜಡದಲ್ಲಿ ಕೂಡ ಈ ಮೂರು ಗುಣಗಳನ್ನು ಕಾಣುತ್ತೇವೆ. ಸದಾ ಊರ್ಧ್ವಮುಖ ಬೆಳಕನ್ನು ಕೊಡುವ ಬೆಂಕಿ ಸತ್ವ; ಅಸ್ಪಷ್ಟತೆಯ ಸ್ಥಾನವಾದ ನೀರು ರಜಸ್ಸು ಮತ್ತು
ಸದಾ ಕೆಳಮುಖವಾಗಿ ಸೆಳೆಯುವ ಮಣ್ಣು-ತಮಸ್ಸು.
ಜಗತ್ತಿನ ಎಲ್ಲ ವಸ್ತುಗಳೂ ಈ ಮೂರರ ಸಂಯೋಗ(Combination). ಉದಾಹರಣೆಗೆ ಬತ್ತ. ಅದನ್ನು ಭೂಮಿಯಲ್ಲಿ(ಮಣ್ಣು-ತಮಸ್ಸು) ಬಿತ್ತಿದೆವು. ಅಲ್ಲಿ ಅದಕ್ಕೆ ನೀರೆರೆದೆವು(ನೀರು-ರಜಸ್ಸು), ಅದು ಸೂರ್ಯನ ಪ್ರಕಾಶವನ್ನು(ಸೂರ್ಯ-ಸತ್ವ) ಹೀರಿ ಚಿಗುರಿ ಬೆಳೆದು ಫಸಲನ್ನು ಕೊಟ್ಟಿತು. ಆ ಫಸಲನ್ನು ಕೊಯ್ದು ಅಕ್ಕಿಯನ್ನಾಗಿ
ಮಾಡಿದೆವು. ಅಕ್ಕಿಗೆ(ತಮಸ್ಸು) ನೀರನ್ನು(ರಜಸ್ಸು) ಸೇರಿಸಿ
ಬೇಯಿಸಿ(ಶಾಖ-ಸತ್ವ) ಅನ್ನವನ್ನಾಗಿ ಮಾಡಿದೆವು. ಅಕ್ಕಿ ಇರಲಿ, ಅನ್ನವಿರಲಿ, ಎಲ್ಲವೂ ಮಣ್ಣು-ನೀರು-ಬೆಂಕಿ ಈ ಮೂರರ ಸಂಯೋಜನೆ. ಹೀಗೆ ಸತ್ವ-ರಜಸ್ಸು ಮತ್ತು ತಮಸ್ಸೆಂಬ
ಗುಣತ್ರಯಗಳಿಂದ ಈ ಸಮಗ್ರ ಸೃಷ್ಟಿ ನಿರ್ಮಾಣವಾಗಿದೆ. ಹುಟ್ಟುವ ಪ್ರತಿಯೊಂದು ಜೀವಜಾತವನ್ನು ಈ ಮೂರು ಗುಣಗಳು ಬಂಧಿಸುತ್ತವೆ. ಒಬ್ಬ ವ್ಯಕ್ತಿಯಲ್ಲಿ ಈ ಮೂರು ಗುಣಗಳ ಪ್ರಮಾಣ
ಬೇರೆ ಬೇರೆಯಾಗಿರುತ್ತದೆ. ಅತ್ಯಂತ ಸಾತ್ವಿಕನಾದ ಮೋಕ್ಷಯೋಗ್ಯ ಜೀವನಲ್ಲಿ ಕೂಡ ಈ ಮೂರು ಗುಣಗಳಿರುತ್ತವೆ. ನೂರಕ್ಕೆ ನೂರು ಶುದ್ಧ ಸತ್ವಗುಣ ಒಬ್ಬ ವ್ಯಕ್ತಿಯಲ್ಲಿರುವುದಿಲ್ಲ. ಜಡದಲ್ಲಿ ನೋಡಿದರೆ ಬೆಂಕಿ-ಸತ್ವ. ಆದರೆ ಅದರೊಂದಿಗೆ ಹೊಗೆ-ರಜಸ್ಸು, ಕಟ್ಟಿಗೆ-ತಮಸ್ಸು. ಸತ್ವ ಗುಣದ ಸಾಕ್ಷಾತ್ಕಾರವಿರುವುದೇ ರಜಸ್ಸು ಮತ್ತು
ತಮಸ್ಸಿನ ಮೂಲಕ. ಹೀಗೆ ಈ ಗುಣತ್ರಯಗಳ ಬಂಧನದಿಂದಾಗಿ ಸ್ವರೂಪತಃ ಹುಟ್ಟುಸಾವಿಲ್ಲದ ಜೀವ-ಸ್ಥೂಲ ದೇಹವನ್ನು ಪಡೆದು ಹುಟ್ಟುತ್ತಾನೆ ಮತ್ತು ಆ ದೇಹವನ್ನು
ಕಳೆದುಕೊಂಡು ಸಾಯುತ್ತಾನೆ. ಹುಟ್ಟು ಸಾವಿಲ್ಲದ ಮೋಕ್ಷವನ್ನು ಸೇರಲು ನಾವು ನಮ್ಮೊಂದಿಗಿರುವ ಈ
ಮೂರು ಅಂತಃಶತ್ರುಗಳನ್ನು ಗೆಲ್ಲಬೇಕು.
ಇಲ್ಲಿ ವ್ಯಾಸರು ‘ಮಹಾಬಾಹು’ ಎನ್ನುವ
ವಿಶೇಷಣವನ್ನು ಬಳಸಿದ್ದಾರೆ. “ನಿನ್ನನ್ನು ಬಂಧಿಸಿ ತಮ್ಮ ಇಷ್ಟದಂತೆ ಕುಣಿಸುವ ಈ ತ್ರಿಗುಣಗಳನ್ನು ಗೆದೆಯುವ
ಮಹಾಬಾಹುವಾಗು; ಕುಸ್ಸಿತವನ್ನು ನಿರಾಕರಣೆಮಾಡಿ ಅಧ್ಯಾತ್ಮದ
ಶೂರನಾಗು” ಎನ್ನುವ ಧ್ವನಿ ಈ ವಿಶೇಷಣದ ಹಿಂದಿದೆ.
ಇಡೀ ವಿಶ್ವ, ಈ ನಮ್ಮ ಬದುಕು, ಎಲ್ಲವೂ ಗುಣತ್ರಯದ ವಿಕಾರ. ನಮ್ಮ ಮನಸ್ಸು, ನಮ್ಮ ಚಿಂತನೆ, ನಮ್ಮ ನಿರ್ಧಾರ, ನಮ್ಮ ಓದು, ನಮ್ಮ ನಂಬಿಕೆ, ಎಲ್ಲವೂ ಈ ಗುಣಗಳ ಪ್ರಭಾವದಿಂದ. ನಮ್ಮನ್ನು ಸರಿ ದಾರಿಯಲ್ಲಿ ನಡೆಸುವುದೂ ತ್ರಿಗುಣಗಳು, ನಮ್ಮನ್ನು ದಾರಿ ತಪ್ಪಿಸುವುದೂ ಈ ತ್ರಿಗುಣಗಳು. ಮೂರು ದಾರಿಯಲ್ಲಿ ಯಾವ
ದಾರಿಯಲ್ಲಿ ಸಾಗಿದರೆ ಒಳಿತಾಗುತ್ತದೆ ಎನ್ನುವ ತೀರ್ಮಾನ ಮಾಡಿಕೊಂಡು ಆಯ್ಕೆ ಮಾಡುವ ಎಚ್ಚರ ನಮಗೆ ಬರಬೇಕಾಗಿದ್ದರೆ, ನಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎನ್ನುವ ಅರಿವು ನಮಗೆ ಬೇಕು. ಈ
ಕಾರಣಕ್ಕಾಗಿ ತ್ರಿಗುಣಗಳ ಅರಿವು ನಮಗೆ ಬಹಳ
ಮುಖ್ಯ.
ಒಬ್ಬ ವ್ಯಕ್ತಿಯನ್ನು
ನಿಯಂತ್ರಿಸುವ ಸಂಗತಿಗಳು ನಾಲ್ಕು. ಒಂದು ಅನಾದಿಕಾಲದಿಂದ ಜೀವದ ಜೊತೆಗೆ ಜೀವ ಸ್ವರೂಪದಲ್ಲಿ ಸೇರಿಕೊಂಡಿರತಕ್ಕಂತಹ ‘ಸ್ವಭಾವ’. ಇದರ ಜೊತೆಗೆ ಸತ್ವ, ರಜಸ್ಸು, ತಮಸ್ಸು-ಈ ಮೂರು ‘ಪ್ರಭಾವ’ಗಳು. ಸ್ವಭಾವ ಎಂದೂ ಬದಲಾಗುವುದಿಲ್ಲ. ನಾವು
ನಮ್ಮ ಸ್ವಭಾವವನ್ನು ಗುರುತಿಸಿಕೊಳ್ಳಬೇಕು. ಆದರೆ
ನಮ್ಮ ಸ್ವಭಾವ ಏನು ಎನ್ನುವುದು ನಮಗೆ ತಿಳಿಯುವುದೇ ಇಲ್ಲ! ಏಕೆಂದರೆ ಈ ಸ್ವಭಾವದ ಮೇಲೆ ಮುಚ್ಚಳವಾಗಿ ‘ಪ್ರಭಾವ’ ಕೂತಿದೆ. ನಾವು ಸದಾ ಈ ಮುಚ್ಚಳದ ಪ್ರಭಾವವನ್ನೇ ನಮ್ಮ ಸ್ವಭಾವ
ಎಂದು ಭ್ರಮಿಸುತ್ತೇವೆ. ಆದರೆ ಅದು ನಮ್ಮ ನಿಜವಾದ ಸ್ವರೂಪ ಸ್ವಭಾವವಲ್ಲ-ಅದು ಪ್ರಭಾವ. ಇಡೀ ಜೀವಮಾನದುದ್ದಕ್ಕೂ ನಮ್ಮ ಸ್ವಭಾವವೇನು ಎನ್ನುವುದು ನಮಗೆ ತಿಳಿಯದೇ
ಹೋಗಬಹುದು. ಸ್ವಭಾವವೇನು ಎಂದು ತಿಳಿಯದೆ ನಾವು ಈ ಪ್ರಭಾವದೊಳಗೆ ಬಿದ್ದು ಒದ್ದಾಡುತ್ತಿರುತ್ತೇವೆ. ನಮಗೆ ಈ ತ್ರಿಗುಣಗಳ ಪ್ರಭಾವ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯದೇ ಇದ್ದರೆ-
ನಮ್ಮನ್ನು ನಾವು ತಿದ್ದಿಕೊಳ್ಳಲು ಆಗುವುದಿಲ್ಲ. ಇಂದು ನಾವು ನಮ್ಮ ಸ್ವಭಾವವನ್ನು ಮತ್ತು ಸತ್ವಗುಣವನ್ನು ಮೂಲೆಗುಂಪಾಗಿಸಿ, ರಜಸ್ಸು ಮತ್ತು ತಮಸ್ಸುಗಳ ಹತೋಟಿಯಲ್ಲಿ
ಬದುಕುತ್ತಿದ್ದೇವೆ.
ಮೊದಲು ನಾವು
ನಮ್ಮನ್ನು ತಿದ್ದಿಕೊಳ್ಳಬೇಕು-ಸಮಾಜವನ್ನಲ್ಲ. ನಮ್ಮಲ್ಲಿ ಸತ್ವದ ಅಂಶ ಎಷ್ಟಿದೆ; ರಜಸ್ಸಿನ ಅಂಶ ಎಷ್ಟಿದೆ; ತಮಸ್ಸಿನ ಅಂಶ ಎಷ್ಟಿದೆ ಎನ್ನುವುದನ್ನು ತಿಳಿದು, ನಮ್ಮ ನಡೆಯಲ್ಲಿ ಸತ್ವದ ಅಂಶವನ್ನು ಹೆಚ್ಚಾಗಿ
ಬಳಸಿ, ಅದರ ಅಂಶವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಹಿಂದೆ ನಡೆದ ಘಟನೆಗಳಲ್ಲಿ
ನಾವು ಎಲ್ಲಿ ರಜಸ್ಸಿನ ಮತ್ತು ತಮಸ್ಸಿನ ಪ್ರಭಾವದಿಂದ ತಪ್ಪಿದ್ದೇವೆ ಎನ್ನುವ ಆತ್ಮಚಿಂತನೆ ನಡೆಸಿ, ಮುಂದೆ ಹಾಗಾಗದಂತೆ ಎಚ್ಚರವಹಿಸಬೇಕು. ಈ ವಿಚಾರವನ್ನು ತಿಳಿದು ನಡೆದರೆ ನಾವು ನಮ್ಮನ್ನು
ನಿಯಂತ್ರಿಸಿಕೊಂಡು ಬಹಳ ಆನಂದದಿಂದ ಬದುಕಬಹುದು.
ಮುಂದಿನ
ಶ್ಲೋಕಗಳಲ್ಲಿ ಕೃಷ್ಣ ಸತ್ವದ ಬದುಕು ಹೇಗಿರುತ್ತದೆ; ರಜಸ್ಸಿನ ಬದುಕು ಹೇಗಿರುತ್ತದೆ; ತಮಸ್ಸಿನ ಬದುಕು ಹೇಗಿರುತ್ತದೆ ಎನ್ನುವುದನ್ನು
ವಿವರಿಸುತ್ತಾನೆ. ತ್ರಿಗುಣದ ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ
ಜೀವರು, ಯಾವ ಕಟ್ಟಿನ ಪ್ರಭಾವದಲ್ಲಿ ಹೇಗೆ ನೆಡೆದುಕೊಳ್ಳುತ್ತಾರೆ ಎನ್ನುವ ಅಂಶ ತಿಳಿದರೆ, ಸತ್ಯದ ದಾರಿಯಲ್ಲಿ ಸಾಗಲು ಪ್ರಯತ್ನ ಮಾಡಬಹುದು. ಇದಕ್ಕೆ ಬಹಳ ಸುಂದರವಾದ
ವಿಶ್ಲೇಷಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ನೀಡಿದ್ದಾನೆ.
· ಶ್ಲೋಕ - 06
ತತ್ರ ಸತ್ತ್ವಂ
ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ ।
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ॥೬॥
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ॥೬॥
ತತ್ರ ಸತ್ತ್ವಮ್ ನಿರ್ಮಲತ್ವಾತ್ ಪ್ರಕಾಶಕಮ್ ಅನಾಮಯಮ್ ।
ಸುಖ ಸಂಗೇನ ಬಧ್ನಾತಿ
ಜ್ಞಾನ ಸಂಗೇನ ಚ ಅನಘ –ಅವುಗಳಲ್ಲಿ ಸತ್ವಗುಣ ಪರಿಶುದ್ಧವಾದದ್ದು. ಆದ್ದರಿಂದ ಜ್ಞಾನದ ಬೆಳಕು ನೀಡುವಂಥದು; ಬೇನೆಗಳನ್ನು ನೀಗುವಂಥದು. ಓ ಅನಘ, ಅದು ಸುಖದ ನಂಟಿನಿಂದ ಮತ್ತು ತಿಳಿವಿನ ನಂಟಿನಿಂದ ಕಟ್ಟಿಹಾಕುತ್ತದೆ.
ಕಣ್ಮುಚ್ಚಿ ಕುಳಿತು
ನಿನ್ನೊಳಗೆ ನಿನ್ನನ್ನು ನೋಡು. ನಿನ್ನೊಳಗೆ ನಡೆಯುವ ಮಾನಸಿಕ ಬೆಳವಣಿಗೆಗಳು, ಚಿಂತನೆಗಳು, ಯೋಚನೆಗಳು, ಭಾವನೆಗಳನ್ನು ನೋಡು. ಸತ್ವ ಗುಣದ ಪ್ರಭಾವ ನಿನ್ನ ಮೇಲೆ ಆಗಿದ್ದರೆ-ನಿನ್ನೊಳಗೆ ನೀನು ಸ್ವಚ್ಛ, ನಿರ್ಮಲ ನಿರಾಳವಾದ ಪ್ರಜ್ವಲಿಸುವ ಬೆಳಕನ್ನು ಕಾಣುತ್ತೀಯ. ನಮ್ಮ ಅಂತರಂಗ ಪ್ರಪಂಚಕ್ಕೆ ಪೂರ್ಣ ವಿದ್ಯುತ್ ಸಂಪರ್ಕವಾಗಿದೆ, ದೀಪವನ್ನು, ಈ ದೀಪವನ್ನು ನಿಯಂತ್ರಿಸುವ ಅನೇಕ ಒತ್ತುಗುಂಡಿ(Switch)ಯನ್ನು ಅಳವಡಿಸಲಾಗಿದೆ. ಇಲ್ಲಿ ನಿರಂತರ ವಿದ್ಯುತ್ ಸರಬರಾಜಿದೆ. ಆದರೆ ನಮಗೆ ಈ ಸ್ವಿಚ್ ಎಲ್ಲಿದೆ ಅನ್ನುವುದು ಗೊತ್ತಿಲ್ಲ. ಆದ್ದರಿಂದ- ಎಲ್ಲ ಇದ್ದರೂ ಸದಾ
ನಮ್ಮೊಳಗೆ ಕತ್ತಲು ಆವರಿಸಿಕೊಂಡಿರುತ್ತದೆ. ನಾವು ಅದನ್ನು
ಉಪಯೋಗಿಸುವುದೇ ಇಲ್ಲ. ನಮ್ಮಲ್ಲಿ ಸತ್ವಗುಣ ಜಾಗೃತವಾದಾಗ ನಮಗೆ ಈ ಸ್ವಿಚ್ ಸಿಗುತ್ತದೆ. ಅದರಿಂದ ಯಾವುದೇ ದೋಷವಿಲ್ಲದ ಜ್ಞಾನದ ಬೆಳಕು ನಮ್ಮೊಳಗೆ ಬೆಳಗುತ್ತದೆ.
ಸತ್ವದ ಗುಣ
ಜಾಗೃತವಾದಾಗ ನಮ್ಮಲ್ಲಿ ಅಂತರಂಗದ ಆನಂದ ತುಂಬಿ ತುಳುಕುತ್ತಿರುತ್ತದೆ. ಈ ಅನುಭವ ಹೆಚ್ಚಿನವರಿಗೆ ಆಗಿರುತ್ತದೆ.
ಉದಾಹರಣೆಗೆ: ಕೆಲವೊಮ್ಮೆ ನಾವು ಹೇಳುವುದಿದೆ “ಏಕೋ ಇಂದು ಬಹಳ ಸಂತೋಷವಾಗುತ್ತಿದೆ” ಎಂದು. ಅಲ್ಲಿ ಏನೂ ವಿಶೇಷ ಕಾರಣವಿರುವುದಿಲ್ಲ. ಆದರೆ ಅಂತರಂಗದ ಆನಂದ ಹೊರ ಹೊಮ್ಮುವುದನ್ನು
ನಾವು ಅನುಭವಿಸುತ್ತಿರುತ್ತೇವೆ. ಇದು ಸತ್ವ ಗುಣದ ಜಾಗೃತಾವಸ್ಥೆ. ಜ್ಞಾನದಿಂದ ಬರುವ
ಸುಖವೆಲ್ಲವೂ ಸಾತ್ವಿಕ.
ಇಲ್ಲಿ ಒಂದು ಎಚ್ಚರವನ್ನು
ಕೃಷ್ಣ ಕೊಡುತ್ತಾನೆ. ಸತ್ವಗುಣ ನಮ್ಮಲ್ಲಿ ಜಾಗೃತವಾಗಬೇಕಾದರೆ ನಾವು ‘ಅನಘ’ರಾಗಬೇಕು. ಪಾಪ ಸ್ಪರ್ಶ ನಮ್ಮಲ್ಲಿದ್ದರೆ-ಸತ್ವಗುಣ ಜಾಗೃತವಾಗದು. ಅದಕ್ಕಾಗಿ ನಾವು ಪಾಪ ದೂರರಾಗಬೇಕು. ಪಾಪ ಸ್ಪರ್ಶ
ಎಷ್ಟು ಹೆಚ್ಚಾಯಿತೋ- ಅಷ್ಟು ಸತ್ವ ದೂರ ಹೋಗುತ್ತದೆ.
ಮೋಕ್ಷ ಸಾಧನೆಯಲ್ಲಿ
ಸತ್ವಗುಣ ಸಾಧನವಾದರೂ ಕೂಡ, ಇದು ತ್ರಿಗುಣಗಳಲ್ಲಿ ಒಂದು. ಆದ್ದರಿಂದ ಸತ್ವಗುಣ ಕೂಡ ಬಂಧಕವಾಗಬಹುದು. ಇದು
ಸುಖದ ನಂಟಿನಿಂದ ಮತ್ತು ತಿಳಿವಿನ ನಂಟಿನಿಂದ ನಮ್ಮನ್ನು ಕಟ್ಟಿ ಹಾಕಬಹುದು. ಉದಾಹರಣೆಗೆ: ಜ್ಞಾನ ಸಾಧನೆ ಸಾತ್ವಿಕ ಗುಣ. ಇಲ್ಲಿ ಭಗವಂತನ ವಿಷಯವಲ್ಲದ ಜ್ಞಾನ ಸಾಧನೆಯ
ನಂಟಿನಲ್ಲಿ ನಾವು ಬಿದ್ದರೆ-ಆಗ ಅದು ಬಂಧಕವಾಗುತ್ತದೆ. ನಾವು ಯಾವುದೋ ಸಂಶೋಧನೆ, ಅನ್ವೇಷಣೆಯಲ್ಲಿ ಮುಳುಗಿದ್ದರೆ ಅದು ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಲಾರದು. ನಾವು ಆ ಸಂಶೋಧನೆಯಲ್ಲಿ
ಬರುವ ಫಲಿತಾಂಶದ ಸುಖದ ನಂಟಿನಲ್ಲಿ ಸಿಲುಕಿ ಸತ್ವಗುಣದ
ಬಂಧನಕ್ಕೊಳಗಾಗಬಹುದು. ಮೋಕ್ಷ ಸಾಧನೆಯಲ್ಲಿ
ನಾವು ಸತ್ವವನ್ನೂ ದಾಟಬೇಕು-ಏಕೆಂದರೆ ಮೋಕ್ಷ ತ್ರಿಗುಣಾತೀತ. ಕೃಷ್ಣ ಇಲ್ಲಿ ಸತ್ವ ಗುಣವನ್ನು ‘ಬಧ್ನಾತಿ’ ಎಂದಿದ್ದಾನೆ. ಏಕೆಂದರೆ ಈ ಬಂಧನ ಸುಲಭದಲ್ಲಿ ಬಿಡಿಸಿಕೊಳ್ಳಬಹುದಾದ
ಬಂಧನ. ಅದು ಎಂದೂ ನಮ್ಮನ್ನು ಕೆಳಕ್ಕೆಳೆಯುವುದಿಲ್ಲ.
[ಆದರೆ ರಜಸ್ಸು ಮತ್ತು ತಮಸ್ಸು ‘ನಿಬಧ್ನಾತಿ’ ಎಂದು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಉಲ್ಲೇಖಿಸಿದ್ದಾನೆ]. ಯಾವ ಸತ್ವ ಭಗವಂತನ ಕಡೆಗೆ ಹೋಗದೆ ನಮ್ಮನ್ನು ಬಂಧನದಲ್ಲಿ
ಸುತ್ತಾಡಿಸುತ್ತದೋ- ಆ ಸತ್ವದಿಂದ ನಾವು ಪಾರಾಗಬೇಕು.
· ಶ್ಲೋಕ - 07
ರಜೋ ರಾಗಾತ್ಮಕಂ
ವಿದ್ಧಿ ತೃಷ್ಣಾಸಂಗಸಮುದ್ಭವಮ್ ।
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ॥೭॥
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ॥೭॥
ರಜಃ ರಾಗಾತ್ಮಕಮ್ ವಿದ್ಧಿ ತೃಷ್ಣಾ ಸಂಗ ಸಮುದ್ಭವಮ್ ।
ತತ್ ನಿಬಧ್ನಾತಿ
ಕೌಂತೇಯ ಕರ್ಮಸಂಗೇನ ದೇಹಿನಮ್—ರಜೋಗುಣ ರಂಜಿಸುವಂಥದು, ಆಸೆ-ಆಸಕ್ತಿಗಳನ್ನು ಹುಟ್ಟಿಸುವಂಥದು ಎಂದು ತಿಳಿ.
ಕೌಂತೇಯ, ಅದು ಜೀವನನ್ನು ಕರ್ಮದ ನಂಟಿನಿಂದ ಕಟ್ಟಿಹಾಕುತ್ತದೆ.
ರಜಸ್ಸು ಅಂದರೆ ‘ರಾಗ’. ಒಂದು ವಸ್ತುವನ್ನು ತುಂಬಾ ಇಷ್ಟಪಡುವುದು, ಬಯಕೆಗಳ ಸರಮಾಲೆ- ಹೀಗೆ ಎಲ್ಲಾ ಪಂಚೇಂದ್ರಿಯಗಳ ಬಯಕೆ ರಜೋಗುಣದ ಪ್ರಭಾವದಿಂದ ಬರುವಂಥದ್ದು. ಇದು ತೃಷ್ಣಾ ಮತ್ತು ಸಂಗಕ್ಕೆ ಕಾರಣ. ಇಲ್ಲಿ ತೃಷ್ಣಾ ಅಂದರೆ ಬೇಕು-ಬೇಕು ಎನ್ನುವ ದಾಹ. ಸಂಗ ಎಂದರೆ ಒಂದು ವಸ್ತುವಿನ ನಿರಂತರ ಒಡನಾಟ.
ರಜೋಗುಣ ಬಯಕೆಯನ್ನು ಹುಟ್ಟಿಸುತ್ತದೆ. ಆ ಬಯಕೆಯಿಂದ ಒಡನಾಟ, ಒಡನಾಟದಿಂದ ಅದು ಅಂಟಿಕೊಳ್ಳುವಂತೆ ಮಾಡುತ್ತದೆ.
ಹೀಗೆ ಹಂತ ಹಂತವಾಗಿ ರಜೋಗುಣ ನಮ್ಮನ್ನು ಬಿಡಿಸಿಕೊಳ್ಳಲಾಗದ
ಬಂಧನಕ್ಕೊಳಪಡಿಸುತ್ತದೆ(ನಿಬಧ್ನಾತಿ). ಇದರ ಪ್ರಭಾವದಿಂದ ನಾವು ಜ್ಞಾನದ ಬಯಕೆ ಇಲ್ಲದ ಕರ್ಮಸಂಗ ಮಾಡಲಾರಂಭಿಸುತ್ತೇವೆ. ಉದಾಹರಣೆಗೆ: ದುಡ್ಡಿಗಾಗಿ ಹೋರಾಟ, ದುಡ್ಡಿಗಾಗಿ ಇಡೀ ಬದುಕನ್ನು ಮೀಸಲಿಡುವುದು.
ದುಡ್ಡೇ ಪ್ರಪಂಚ ಎಂದು ಹೋರಾಡುವುದು, ಇತ್ಯಾದಿ. ಇದು ರಜಸ್ಸಿನ ಗಾಢವಾದ ಬಂಧನದ
ಪ್ರಭಾವ.
· ಶ್ಲೋಕ - 08
ತಮಸ್ತ್ವಜ್ಞಾನಜಂ
ವಿದ್ಧಿ ಮೋಹನಂ ಸರ್ವದೇಹಿನಾಮ್ ।
ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ ॥೮॥
ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ ॥೮॥
ತಮಃ ತು ಅಜ್ಞಾನಜಮ್ ವಿದ್ಧಿ ಮೋಹನಂ ಸರ್ವದೇಹಿನಾಮ್ ।
ಪ್ರಮಾದ ಆಲಸ್ಯ
ನಿದ್ರಾಭಿಃ ತತ್ ನಿಬಧ್ನಾತಿ ಭಾರತ –ಎಲ್ಲ ಜೀವಿಗಳಿಗೆ
ಅಜ್ಞಾನ ನೀಡುವಂಥದು, ಭ್ರಮೆಗೊಳಿಸುವಂಥದು- ತಮೋಗುಣ ಎಂದು ತಿಳಿ. ಭಾರತ, ಅದು ಮೈಮರೆವು, ಸೋಮಾರಿತನ ಮತ್ತು ನಿದ್ದೆಗಳಿಂದ
ಕಟ್ಟಿಹಾಕುತ್ತದೆ.
ಏನೂ ಗೊತ್ತಿಲ್ಲದೆ
ಇರುವುದು ತಮಸ್ಸು. ತಮೋಗುಣದಿಂದ ಅಜ್ಞಾನ ಹುಟ್ಟುತ್ತದೆ. ಅದು ಎಷ್ಟು ಬಲಿಷ್ಟ ಎಂದರೆ-ಅದು ನನ್ನಲ್ಲಿ ಜ್ಞಾನವಿಲ್ಲ, ನಾನು ಅಜ್ಞಾನಿ ಎನ್ನುವ ಜ್ಞಾನವೂ ಬಾರದಂತೆ ಮಾಡಬಲ್ಲದು. ಇದು ಅತ್ಯಂತ ಭಯಾನಕ. ಆಂಗ್ಲ ಭಾಷೆಯಲ್ಲಿ ಹೇಳುವಂತೆ: “He who knows not, and knows not that
he knows not, is a fool”. ನನಗೆ ಏನೂ ಗೊತ್ತಿಲ್ಲ ಅನ್ನುವ ವಿಷಯ ಕೂಡ ನನಗೆ ಗೊತ್ತಿಲ್ಲದೆ ಇರುವುದು ತಮೋಗುಣದಿಂದ. ಇದು ಸಮಸ್ತರನ್ನು ಭ್ರಮೆಯಲ್ಲಿ ಸಿಲುಕಿಹಾಕಿಸುವ ಗುಣ. ತಮಸ್ಸು ನಾವು
ಬಿಡಿಸಿಕೊಳ್ಳಲಾಗದ ಮೂರು ಕಟ್ಟಿನಿಂದ ನಮ್ಮನ್ನು ಬಂಧಿಸುತ್ತದೆ.
ಅವುಗಳೆಂದರೆ ನಿದ್ದೆ, ಆಲಸ್ಯ ಮತ್ತು ಪ್ರಮಾದ. ಎಚ್ಚರದಲ್ಲೂ ಎಚ್ಚರವಿಲ್ಲದೆ ಬದುಕುವುದು ಪ್ರಮಾದ. ತಪ್ಪು ಮಾಡುವುದು ತಪ್ಪಲ್ಲ, ಆದರೆ ತಪ್ಪು ಮಾಡಿಯೂ
ತಿದ್ದಿಕೊಳ್ಳದೆ ಇರುವುದು ಪ್ರಮಾದ. ಇದಕ್ಕೆ ಕಾರಣ ನಮ್ಮಲ್ಲಿರುವ ಈ ತಮೋಗುಣ.
· ಶ್ಲೋಕ - 09
ಸತ್ತ್ವಂ ಸುಖೇ
ಸಂಜಯತಿ ರಜಃ ಕರ್ಮಣಿ ಭಾರತ ।
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥೯॥
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥೯॥
ಸತ್ತ್ವಂ ಸುಖೇ
ಸಂಜಯತಿ ರಜಃ ಕರ್ಮಣಿ ಭಾರತ ।
ಜ್ಞಾನಮ್ ಆವೃತ್ಯ ತು
ತಮಃ ಪ್ರಮಾದೇ ಸಂಜಯತಿ ಉತ –ಸತ್ವಗುಣ ಸುಖದ ನಂಟಿನಲ್ಲಿರುತ್ತದೆ. ಭಾರತ, ರಜೋಗುಣ ಕರ್ಮದ ನಂಟಿನಲ್ಲಿರುತ್ತದೆ. ತಮೋಗುಣ ಅರಿವನ್ನು ಮುಚ್ಚಿ ಮೈಮರೆಸಿ ಬಿಡುತ್ತದೆ.
ಈ ಶ್ಲೋಕದಲ್ಲಿ
ಕೃಷ್ಣ ಮೂರು ಗುಣಗಳನ್ನು ಒಟ್ಟಿನಲ್ಲಿ ಸಂಕ್ಷೇಪಿಸಿ
ಹೇಳುತ್ತಾನೆ. ಸತ್ವದ ಮೂಲ ಗುಣಧರ್ಮ ಏನೆಂದರೆ -ಅದರಿಂದಾಗಿ
ನಮ್ಮಿಂದ ಒಂದು ಸಹಜವಾದ ಆನಂದ ಚಿಮ್ಮುತ್ತದೆ. ರಜೋಗುಣ “ಏನಾದರೂ ಮಾಡಬೇಕು ಇಲ್ಲದಿದ್ದರೆ ಜೀವನದಲ್ಲಿ
ಸುಖವಿಲ್ಲ” ಎಂದು, ಸದಾ ದುಡ್ಡಿಗಾಗಿ ಹೋರಾಟ ಮಾಡುತ್ತಾ, ತಮ್ಮ ಜೀವನವನ್ನು ಸವೆಸುವಂತೆ ಮಾಡುತ್ತದೆ. ತಮಸ್ಸು ನಮ್ಮಲ್ಲಿರುವ ಜ್ಞಾನವನ್ನು
ಮುಚ್ಚಿಬಿಡುತ್ತದೆ. ಉದಾಹರಣೆಗೆ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎನ್ನುವ ಒಳ್ಳೆಯತನ, ಕೊಡುವುದರಲ್ಲಿ ಖುಷಿಪಡುವುದು-ಸತ್ವಗುಣ. ತಾನು ಸುಖವಾಗಿರಬೇಕು ಎಂದು ಸದಾ ಸುಖದ
ಅನ್ವೇಷಣೆಯಲ್ಲಿ ತೊಡಗಿ, ಮಾಡಬಾರದ ಕೆಲಸವನ್ನು ಮಾಡುತ್ತ ಬದುಕುವುದು ರಜೋಗುಣ. ನಮ್ಮಿಂದ
ನಡೆಯುವ ಪ್ರಮಾದವೆಲ್ಲವೂ ತಮೋಗುಣದ ಪ್ರಭಾವ. ಇದು ನಮಗೆ
ಕೃಷ್ಣ ಗೀತೆಯ ಮೂಲಕ ಹೇಳಿದ ಅತ್ಯುನ್ನತವಾದ
ಮನಃಶಾಸ್ತ್ರ.
· ಶ್ಲೋಕ - 10
ಈ ಗುಣತ್ರಯಗಳು ಹೇಗೆ
ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಮ್ಮನ್ನು ಕುಣಿಸುತ್ತವೆ ಅನ್ನುವುದನ್ನು ಕೃಷ್ಣ ನಿರೂಪಿಸಿದ್ದನ್ನು ನೋಡಿದೆವು.
ಇಲ್ಲಿ ನಮಗೆ ಒಂದು ಸಂಶಯ ಬರಬಹುದು. ಈ ಮೂರು ಗುಣಗಳು ಒಟ್ಟಿಗೆ
ಏಕಕಾಲದಲ್ಲಿ ಕೆಲಸ ಮಾಡುವಾಗ, ಕೇವಲ ಸಾತ್ವಿಕ ಚಿಂತನೆ, ಕೇವಲ ರಾಜಸ ಚಿಂತನೆ, ಕೇವಲ ತಾಮಸ ಚಿಂತನೆ ಹೇಗೆ ಸಾಧ್ಯವಾಗುತ್ತದೆ? ಮೂರು ಗುಣಗಳು ಒಬ್ಬನ ದೇಹದಲ್ಲಿರುವಾಗ ಯಾವುದೋ
ಒಂದು ಗುಣ ಕೆಲಸ ಮಾಡುವುದು ಹೇಗೆ ಸಾಧ್ಯ? ಮೂರು ಗುಣಗಳು ಬೆರೆತು ನಮ್ಮೊಳಗಿರುವಾಗ ಒಂದು ಪ್ರತ್ಯೇಕವಾದ ಸಾತ್ವಿಕ ಸ್ವಭಾವ, ರಾಜಸ ಸ್ವಭಾವ, ತಾಮಸ ಸ್ವಭಾವ ಎಂದು ಗುರುತಿಸುವುದು ಹೇಗೆ? ಇದರ ವಿವರಣೆ ಮುಂದಿನ ಶ್ಲೋಕ
ರಜಸ್ತಮಶ್ಚಾಭಿಭೂಯ ಸತ್ತ್ವಂ
ಭವತಿ ಭಾರತ ।
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ॥೧೦॥
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ॥೧೦॥
ರಜಃ ತಮಃ ಚ ಅಭಿಭೂಯ
ಸತ್ತ್ವಮ್ ಭವತಿ ಭಾರತ ।
ರಜಃ ಸತ್ತ್ವಮ್ ತಮಃ
ಚ ಏವ ತಮಃ ಸತ್ತ್ವಮ್ ರಜಃ ತಥಾ –ಭಾರತ, ರಜಸ್ಸು-ತಮಸ್ಸುಗಳನ್ನು ತಳ್ಳಿ ಸತ್ವಗುಣ ಬಲಗೊಳ್ಳುತ್ತದೆ; ಸತ್ವ ತಮಸ್ಸುಗಳನ್ನು ತಳ್ಳಿ ರಜೋಗುಣ; ಹಾಗೆಯೇ ಸತ್ವ-ರಜಸ್ಸುಗಳನ್ನು ತಳ್ಳಿ ತಮೋಗುಣ.
ಗುಣತ್ರಯಗಳಿಗೆ ಒಂದು
ವಿಶೇಷವಾದ ಶಕ್ತಿ ಇದೆ. ಏನೆಂದರೆ ಈ ಮೂರರಲ್ಲಿ ಯಾವುದೋ ಒಂದು ನಮ್ಮ ಮನಸ್ಸಿನ ನಿಯಂತ್ರಣವನ್ನು ತೆಗೆದುಕೊಂಡು ಉಳಿದ ಎರಡು
ಗುಣಗಳನ್ನು ಮುಚ್ಚಿ(Suppress)ಬಿಡುತ್ತದೆ. ಮೂರರಲ್ಲಿ ಒಂದು ಗುಣ ನಮ್ಮ ಮನಸ್ಸನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಆಗ ನಮ್ಮ ಮನಸ್ಸು ಆ ಗುಣಕ್ಕೆ ತಕ್ಕಂತೆ ಕೆಲಸ ಮಾಡಲಾರಂಭಿಸುತ್ತದೆ. ತ್ರಿಗುಣಮಾನಿನಿ ಲಕ್ಷ್ಮಿ. ಆಕೆ ಯಾವುದೋ ಒಂದು ಗುಣಕ್ಕೆ ಉಳಿದ ಎರಡು ಗುಣವನ್ನು ಮೀರಿಸಿ ಕೆಲಸ ಮಾಡುವ ಶಕ್ತಿ
ಕೊಡುತ್ತಾಳೆ. ಹೀಗೆ ಒಂದು ಗುಣ ಉಳಿದೆರಡನ್ನು ಮುಚ್ಚಿ ಕೆಲಸ ಮಾಡಲಾರಂಭಿಸುತ್ತದೆ.
ನಮ್ಮಲ್ಲಿ ಯಾವ ಗುಣ
ಜಾಗೃತವಾಗಿದೆ ಎಂದು ನಾವು ಗುರುತಿಸಿಕೊಳ್ಳಬೇಕು. ಆಗ ಆ ಗುಣದ ಪ್ರಭಾವದಿಂದಾಗುವ ಅನಾಹುತವನ್ನು ತಪ್ಪಿಸಬಹುದು. ಇದನ್ನು ಗುರುತಿಸುವ
ವಿಧಾನವನ್ನು ಕೃಷ್ಣ ಮುಂದಿನ ಮೂರು ಶ್ಲೋಕಗಳಲ್ಲಿ
ವಿವರಿಸುತ್ತಾನೆ.
· ಶ್ಲೋಕ - 11
ಸರ್ವದ್ವಾರೇಷು ದೇಹೇSಸ್ಮಿನ್ ಪ್ರಕಾಶ ಉಪಜಾಯತೇ ।
ಜ್ಞಾನಂ ಯದಾ ತದಾ ವಿದ್ಯಾದ್ ವಿವೃದ್ಧಂ ಸತ್ತ್ವಮಿತ್ಯುತ ॥೧೧॥
ಜ್ಞಾನಂ ಯದಾ ತದಾ ವಿದ್ಯಾದ್ ವಿವೃದ್ಧಂ ಸತ್ತ್ವಮಿತ್ಯುತ ॥೧೧॥
ಸರ್ವದ್ವಾರೇಷು ದೇಹೇ
ಅಸ್ಮಿನ್ ಪ್ರಕಾಶಃ ಉಪಜಾಯತೇ ।
ಜ್ಞಾನಮ್ ಯದಾ ತದಾ
ವಿದ್ಯಾತ್ ವಿವೃದ್ಧಮ್ ಸತ್ತ್ವಮ್ ಇತಿ ಉತ –ಈ ದೇಹದಲ್ಲಿ ಎಲ್ಲ ಇಂದ್ರಿಯಗಳಲ್ಲು ತಿಳಿವು ಬೆಳಕಾಗಿ ಮೂಡಿಬಂದಾಗ ಸತ್ವಗುಣ ಬಲಗೊಂಡಿದೆ ಎಂದು ತಿಳಿಯಬೇಕು.
ಸತ್ವಗುಣ
ಜಾಗೃತವಾದಾಗ ನಮ್ಮೊಳಗೆ ಬೆಳಕು ತುಂಬಿದ ಅನುಭವವಾಗುತ್ತದೆ. ಈ ಬೆಳಕಿನ ಸಂಚಾರ ಎಲ್ಲಾ ಇಂದ್ರಿಯಗಳ ಮೂಲಕ ಹೊರಬರುತ್ತದೆ. ಸರ್ವೇಂದ್ರಿಯದಲ್ಲೂ
ಜ್ಞಾನದ ಆನಂದ ತುಂಬುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ
ಮನಸ್ಸಿನಲ್ಲಿ ಹೊಸಹೊಸ ಜ್ಞಾನದ ವಿಚಾರ (intututional
flash) ಹೊಳೆಯಲಾರಂಭಿಸುತ್ತದೆ. ಇದರಿಂದ ಅಪಾರ ಸಂತೋಷವಾಗುತ್ತದೆ. ಇದು ಸತ್ವಗುಣದ ಜಾಗೃತಾವಸ್ಥೆ.
· ಶ್ಲೋಕ - 12
ಲೋಭಃ
ಪ್ರವೃತ್ತಿರಾರಂಭಃ ಕರ್ಮಣಾಮಶಮಃ
ಸ್ಪೃಹಾ।
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥೧೨॥
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥೧೨॥
ಲೋಭಃ ಪ್ರವೃತ್ತಿಃ
ಆರಂಭಃ ಕರ್ಮಣಾಮ್ ಅಶಮಃ ಸ್ಪೃಹಾ।
ರಜಸಿ ಏತಾನಿ ಜಾಯಂತೇ ವಿವೃದ್ಧೇ ಭರತರ್ಷಭ – ಓ ಭರತರ್ಷಭ, ರಜೋಗುಣ ಬಲಗೊಂಡಾಗ ಕಂಡುಬರುವ ಅಂಶಗಳು ಇವು: ಜಿಪುಣತನ, ಹುಚ್ಚುಹುರುಪು, ಕಾಯಕಗಳಲ್ಲಿ ತೊಡಗುವುದು, ನೆಮ್ಮದಿಗೇಡು ಮತ್ತು ತೀರದ ಬಯಕೆ.
ರಜೋಗುಣ ಜಾಗೃತವಾದಾಗ
ನಮ್ಮಲ್ಲಿ ಮೊದಲು ಕಾಣಿಸಿಕೊಳ್ಳುವುದು ಲೋಭತನ. ಯಾವ ರೀತಿ ದುಡ್ಡು ಮಾಡುವುದು ಎನ್ನುವ ಯೋಚನೆ; ಇನ್ನೊಬ್ಬರಿಗೆ ಒಂದು ಪುಡಿಗಾಸನ್ನೂ ಕೊಡದ ಜಿಪುಣತನ, ಇತ್ಯಾದಿ. ಉದಾಹರಣೆಗೆ ಕೆಲವರು ತಮ್ಮ ಮನೆ ಸಮಾರಂಭಕ್ಕೆ ಲಕ್ಷಾಂತರ
ಖರ್ಚು ಮಾಡುತ್ತಾರೆ. ಆದರೆ ಯಾರೋ ಹೊಟ್ಟೆಗೆ
ಹಿಟ್ಟಿಲ್ಲದ ವ್ಯಕ್ತಿ ಬಂದು ಕೇಳಿದರೆ ಇವರಿಂದ ಅವರಿಗೆ ಒಂದು ಪೈಸೆ ದಾನ ಕೂಡ ಸಿಗದು. ಇದು ಲೋಭತನ. ಇಂಥಹ ಲೋಭಿಗಳ ಬಗ್ಗೆ ನೀತಿ ಶತಕದಲ್ಲಿ ಭವಭೂತಿ ಹೀಗೆ ಹೇಳಿದ್ದಾನೆ:
ದಾನ೦ ಭೋಗೋ ನಾಶಃ
ತಿಸ್ರೋ ಭವ೦ತಿ ಗತಯೋ ವಿತ್ತಸ್ಯ|
ಯೋ ನ ದದಾತಿ ನ
ಭು೦ಕ್ತೇ ತಸ್ಯ ತೃತೀಯಾ ಗತಿರ್ಭವತಿ||೧೫೮||
ದುಡ್ಡಿಗೆ ಮೂರು
ರೂಪದ ವಿನಿಯೋಗ: ದಾನ, ಭೋಗ, ನಾಶ. ಲೋಭಿಗಳು ತಮ್ಮಲ್ಲಿರುವ ಹಣವನ್ನು ಇನ್ನೊಬ್ಬರಿಗೆ ದಾನ ಮಾಡುವುದಿಲ್ಲ, ತಾವೂ ತಿನ್ನುವುದಿಲ್ಲ, ಕೊನೆಗೆ ಅದು ನರಿ-ನಾಯಿ ಪಾಲಾಗಿ ನಾಶವಾಗುತ್ತದೆ. ಇದು ರಜೋಗುಣದ ಪ್ರಭಾವದಿಂದಾಗುವ
ಪರಿಣಾಮ. ರಜೋಗುಣದ ಪ್ರಭಾವಕ್ಕೊಳಗಾದಾಗ ವ್ಯಕ್ತಿ ಸದಾ
ಯಾವುದ್ಯಾವುದೋ ಪ್ರವೃತ್ತಿಯನ್ನು ಮಾಡ ಬಯಸುತ್ತಾನೆ. ದುಡ್ಡು ಮಾಡುವುದಕ್ಕಾಗಿ ಬಗೆಬಗೆಯ ವ್ಯವಹಾರಗಳು; ಎಷ್ಟು ತೊಡಗಿಸಿಕೊಂಡರೂ ಅಲ್ಲಿ ಅತೃಪ್ತಿ; ತಾನು ಮಾಡುವ ವ್ಯವಹಾರದಲ್ಲಿ ದೇವರು ತನಗೆ
ಹೊಟ್ಟೆ ಬಟ್ಟೆಗಾಗುವಷ್ಟು ಕೊಟ್ಟರೂ ಕೂಡ ಅಲ್ಲಿ
ತೃಪ್ತಿ ಇಲ್ಲದೆ ಇರುವುದು; ತನಗೆ ಬರುತ್ತಿರುವ ಸಂಬಳದಲ್ಲಿ ತಾನು ಸುಖವಾಗಿ ಬದುಕಲು ಸಾಧ್ಯವಾದರೂ ಕೂಡ, ಅದು ಪಕ್ಕದ ಮನೆಯವರ ಸಂಬಳಕ್ಕಿಂತ ಕಡಿಮೆ ಎಂದು ಕೊರಗುವುದು ಇತ್ಯಾದಿ. ಇಂಥವರ ನಿತ್ಯ ಮಂತ್ರ “ಬೇಕು-ಬೇಕು”. ಸತ್ವಗುಣವನ್ನು
ತುಳಿದು ರಜೋಗುಣ ತಲೆಯತ್ತಿ ನಿಂತಾಗ ಈ ಎಲ್ಲಾ ಲಕ್ಷಣಗಳು
ಕಾಣಿಸಿಕೊಳ್ಳುತ್ತವೆ.
ಇಲ್ಲಿ ವ್ಯಾಸರು ‘ಭರತರ್ಷಭ’ ಎನ್ನುವ
ವಿಶೇಷಣವನ್ನು ಬಳಸಿದ್ದಾರೆ. ರಜೋಗುಣದಿಂದ ಪಾರಾಗಲು ನಾವು ಭರತರ್ಷಭರಾಗಬೇಕು. ಐತರೇಯ ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯುದೇವರಿಗೆ 'ಭರತ' ಎಂದು ಹೆಸರು. ಪ್ರಾಣದೇವರಲ್ಲಿ ಶರಣಾಗತಿ ನಮ್ಮನ್ನು ರಜೋಗುಣದಿಂದ ಪಾರುಮಾಡಬಲ್ಲದು.
· ಶ್ಲೋಕ - 13
ಅಪ್ರಕಾಶೋSಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥೧೩॥
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥೧೩॥
ಅಪ್ರಕಾಶಃ
ಅಪ್ರವೃತ್ತಿಃ ಚ ಪ್ರಮಾದಃ ಮೋಹಃ ಏವ ಚ ।
ತಮಸಿ ಏತಾನಿ ಜಾಯಂತೇ
ವಿವೃದ್ಧೇ ಕುರುನಂದನ – ಓ ಕುರುನಂದನ, ತಮಸ್ಸು ಬಲಗೊಂಡಾಗ ಕಂಡುಬರುವ ಅಂಶಗಳು ಇವು: ಅಂಧಕಾರ, ಹುರುಪುಗೇಡು, ಎಚ್ಚರಗೇಡು ಮತ್ತು ತಪ್ಪರಿವು.
ತಮೋಗುಣ ಜಾಗೃತವಾದಾಗ
ಒಳಗೂ ಹೊರಗೂ ಎಲ್ಲವೂ ಕತ್ತಲು. ಯಾವಾಗಲೂ ನಿದ್ದೆ ಮಾಡುವುದು, ತಪ್ಪು ಮಾಡುವುದು, ಅಜ್ಞಾನದಲ್ಲಿ ಬದುಕುವುದು- ತಮೋಗುಣದ ಪ್ರಭಾವದಿಂದ. ಮುಂಜಾನೆ ಸೂರ್ಯ ಮೂಡುವ ಮುಂಚೆ ಏಳಲು ತಮೋಗುಣ ಬಿಡುವುದಿಲ್ಲ.
ಸದಾ ನಿದ್ದೆಮಾಡುವಂತೆ ಈ ಗುಣ ನಮ್ಮನ್ನು ಪ್ರೇರೇಪಿಸುತ್ತದೆ. ಈ ಗುಣ ಸದಾ ಕತ್ತಲೆಯನ್ನು ಬಯಸುವಂತೆ ಮಾಡುತ್ತದೆ. ಇದರ ಪ್ರಭಾವದಿಂದ ಪಾರಾಗಲು ನಾವು
ಕುರುನಂದನರಾಗಬೇಕು. ನಮ್ಮನ್ನು ನಾವು ಯಾವುದೋ ಒಂದು ಕೆಲಸದಲ್ಲಿ ತೊಡಗಿಸಿಕೊಂಡು ಅದನ್ನು ರೂಢಿ ಮಾಡಿಕೊಳ್ಳಬೇಕು.
ಉದಾಹರಣೆಗೆ: ಮುಂಜಾನೆ ಸೂರ್ಯೋದಯವಾಗುವ
ಮುಂಚೆ ಏಳುವ ಅಭ್ಯಾಸ ಮಾಡಿಕೊಳ್ಳುವುದು. ಹೀಗೆ ರೂಢಿ ಮಾಡಿಕೊಂಡಾಗ ಮನಸ್ಸು ಅದನ್ನು ಬಿಡಲು ಕೇಳುವುದಿಲ್ಲ.
ನಮ್ಮಲ್ಲಿ ಕೆಲವರು
ಹೇಳುವುದಿದೆ. “ಅಧ್ಯಾತ್ಮ ಚಿಂತನೆ ಮಾಡಲು ನನಲ್ಲಿ ಸಮಯವಿಲ್ಲ” ಎಂದು. ಆದರೆ ಇವರು ತಮ್ಮ ರಜಾ ದಿನಗಳಲ್ಲಿ ಮುಂಜಾನೆಯಿಂದ ಸಂಜೆಯತನಕ ಸೋಮಾರಿಯಾಗಿ ನಿದ್ದೆ ಮಾಡುತ್ತಾ ಕಾಲಹರಣ
ಮಾಡುತ್ತಿರುತ್ತಾರೆ. ಹೀಗೆ ನಮಗರಿವಿಲ್ಲದಂತೆ ನಮ್ಮನ್ನು ತಮೋಗುಣ ಆಕ್ರಮಿಸಿ ನಿಯಂತ್ರಿಸುತ್ತಿರುತ್ತದೆ. ನಾವು ಸೋಮಾರಿಯಾಗದೆ
ಯಾವುದಾದರೂ ಕರ್ತವ್ಯದಲ್ಲಿ ನಮ್ಮನ್ನು
ತೊಡಗಿಸಿಕೊಳ್ಳುವುದರಿಂದ ತಮೋಗುಣದ ಪ್ರಭಾವದಿಂದ ಪಾರಾಗಬಹುದು.
· ಶ್ಲೋಕ - 14
ಯದಾ ಸತ್ತ್ವೇ
ಪ್ರವೃದ್ಧೇ ತು ಪ್ರಳಯಂ ಯಾತಿ ದೇಹಭೃತ್ ।
ತದೋತ್ತಮವಿದಾಂ ಲೋಕಾನಮಲಾನ್ ಪ್ರತಿಪದ್ಯತೇ ॥೧೪॥
ತದೋತ್ತಮವಿದಾಂ ಲೋಕಾನಮಲಾನ್ ಪ್ರತಿಪದ್ಯತೇ ॥೧೪॥
ಯದಾ ಸತ್ತ್ವೇ
ಪ್ರವೃದ್ಧೇ ತು ಪ್ರಳಯಮ್ ಯಾತಿ ದೇಹಭೃತ್ ।
ತದಾ ಉತ್ತಮವಿದಾಮ್
ಲೋಕಾನ್ ಅಮಲಾನ್ ಪ್ರತಿಪದ್ಯ ತೇ –ಸತ್ವಗುಣ ಬಲಗೊಂಡಾಗ
ಜೀವಿ ಸಾವನ್ನಪ್ಪಿದರೆ, ಹಿರಿದಾದ ತತ್ವವನ್ನು- ಬಲ್ಲವರ ಕುಲದಲ್ಲಿ, ದೋಷವಿರದ ದೇಹಗಳನ್ನು ಪಡೆಯುತ್ತಾನೆ.
ನಮಗೆ ತಿಳಿದಂತೆ ಜೀವ
ದೇಹವನ್ನು ಬಿಟ್ಟು ಹೊರ ಹೋಗುವ ಕೊನೆಯ ಕ್ಷಣ ಆ ಜೀವದ ಮುಂದಿನ ನಡೆಯನ್ನು ನಿರ್ಧರಿಸುತ್ತದೆ. ಅಂತ್ಯಕಾಲದಲ್ಲಿ ಸಾತ್ವಿಕವಾದ
ಚಿಂತನೆಯೊಂದಿಗೆ, ಸತ್ವದ ಪ್ರಭಾವದಲ್ಲಿ ಪ್ರಾಣ ಬಿಡಲು ಸಾಧ್ಯವಾದರೆ, ಮುಂದಿನ ಜನ್ಮದಲ್ಲಿ ಯಾವುದೇ ದೋಷವಿಲ್ಲದ ಮನುಷ್ಯರಾಗಿ ಜ್ಞಾನಿಗಳ ಸಮುದಾಯದಲ್ಲಿ
ಹುಟ್ಟುತ್ತೇವೆ. ಅಲ್ಲಿ ಜ್ಞಾನಿಗಳ ನಡುವೆ ಇದ್ದು, ಜ್ಞಾನವನ್ನು ಬೆಳೆಸಿಕೊಂಡು ಮತ್ತೆ ಜ್ಞಾನ
ಮಾರ್ಗದಲ್ಲಿ ಎತ್ತರಕ್ಕೆರಲು ಸಾಧ್ಯವಾಗುತ್ತದೆ.
ಜೀವಮಾನದಲ್ಲಿ ನಾವು ಸತ್ವಕ್ಕೆ ಒತ್ತುಕೊಟ್ಟು ಬದುಕಿದರೆ ಮಾತ್ರ ಸಾಯುವಾಗ ಸತ್ವದ ಅಧಿಷ್ಠಾನದಲ್ಲಿ ಸಾಯಲು ಸಾಧ್ಯವಾಗಬಹುದು. ಇದನ್ನು
ಬಿಟ್ಟು “ಸಾಯುವಾಗ ಸಾತ್ವಿಕ ಚಿಂತನೆ ಬಗ್ಗೆ ಯೋಚಿಸೋಣ” ಎಂದು ಬದುಕಿದರೆ, ಸತ್ವದ ಪ್ರಭಾವದಲ್ಲಿ ಸಾಯುವುದು ಅಸಾಧ್ಯ.
· ಶ್ಲೋಕ - 15
ರಜಸಿ ಪ್ರಳಯಂ ಗತ್ವಾ
ಕರ್ಮ ಸಂಗಿಷು ಜಾಯತೇ ।
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥೧೫॥
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥೧೫॥
ರಜಸಿ ಪ್ರಳಯಮ್ ಗತ್ವಾ ಕರ್ಮ ಸಂಗಿಷು ಜಾಯತೇ ।
ತಥಾ ಪ್ರಲೀನಃ ತಮಸಿ
ಮೂಢ ಯೋನಿಷು ಜಾಯತೇ –ರಜೋಗುಣದಲ್ಲಿ ಸಾವನ್ನಪ್ಪಿದರೆ ಕರ್ಮಕ್ಕೆ ಅಂಟಿಕೊಂಡವರಲ್ಲಿ ಹುಟ್ಟುತ್ತಾನೆ.
ತಮೋಗುಣದಲ್ಲಿ ಸತ್ತವನು ತಿಳಿವಿರದ ಹೀನಯೋನಿಗಳಲ್ಲಿ ಹುಟ್ಟುತ್ತಾನೆ.
ಜ್ಞಾನಕ್ಕೆ
ಪೂರಕವಲ್ಲದ ಕರ್ಮಾನುಷ್ಠಾನ ಮಾಡುತ್ತಾ ರಜೋಗುಣದ ಪ್ರಭಾವದಲ್ಲಿ ದುಡ್ಡು-ದುಡ್ಡು ಎಂದು ಬದುಕಿ, ಅದೇ ಪ್ರಭಾವದಲ್ಲಿ ಸತ್ತರೆ-ಆಗ ಮುಂದಿನ ಜನ್ಮದಲ್ಲಿ ಕರ್ಮಕ್ಕೆ ಅಂಟಿಕೊಂಡು ಹುಟ್ಟಬೇಕಾಗುತ್ತದೆ.
ಇನ್ನು ತಮೋಗುಣದ ಪ್ರಭಾವದಲ್ಲಿ ಬದುಕಿ ಸತ್ತರೆ ಮುಂದಿನ ಜನ್ಮದಲ್ಲಿ ಹೀನಯೋನಿಯಲ್ಲಿ ಹುಟ್ಟಬೇಕಾಗುತ್ತದೆ. ಇಲ್ಲಿ ‘ಹೀನಯೋನಿ’ ಅಂದರೆ ಮನುಷ್ಯ ಕೂಡ
ಆಗಬಹುದು. ಯಾವ ಸಂಸ್ಕಾರವಿಲ್ಲದ, ಸ್ವಚ್ಛತೆ ಇಲ್ಲದ, ಜ್ಞಾನವಿಲ್ಲದ, ಕೇವಲ ಮನುಷ್ಯ ಆಕಾರವನ್ನು ಪಡೆದು, ಮನುಷ್ಯತ್ವದ ಲವಲೇಷವಿಲ್ಲದೆ ಮನುಷ್ಯರಾಗಿ ಬದುಕುವುದೂ ಕೂಡ ಹೀನಯೋನಿ ಜನನ.
ಇದಕ್ಕಿಂತ ಪ್ರಾಣಿ ಜನ್ಮ ಎಷ್ಟೋ ಮೇಲು. ಇದು ತಮೋಗುಣದಲ್ಲಿ ಸತ್ತಾಗ ಆಗುವ ಪರಿಣಾಮ. [ಸಾಯುವ ಕೊನೇ ಕ್ಷಣದಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವದಿಂದ ಸತ್ತರೆ, ಅದು ನಮ್ಮ ಮುಂದಿನ ಜನ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು-ಘಜೇಂದ್ರನಾಗಿ
ಹುಟ್ಟಿದ ಇಂದ್ರದ್ಯುಮ್ನ ಮತ್ತು ಜಿಂಕೆಯಾಗಿ ಹುಟ್ಟಿದ ಭರತ ಚಕ್ರವರ್ತಿಯ ಕಥೆಯಿಂದ ನಾವು ತಿಳಿಯಬಹುದು. ಪುನರ್ಜನ್ಮದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ತಿಳಿಯಲು Edgar cayce(1877 to 1920) ಅವರ ಪುಸ್ತಕಗಳು ಹಾಗು ಅವರ ಮೇಲಿನ ಸಂಶೋಧನೆಯ ವಿವರವನ್ನು ನೋಡಿ ].
· ಶ್ಲೋಕ - 16
ಕರ್ಮಣಃ ಸುಕೃತಸ್ಯಾSಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ ।
ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಮ್ ॥೧೬॥
ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಮ್ ॥೧೬॥
ಕರ್ಮಣಃ ಸುಕೃತಸ್ಯ
ಆಹುಃ ಸಾತ್ತ್ವಿಕಮ್ ನಿರ್ಮಲಮ್ ಫಲಮ್ ।
ರಜಸಃ ತು ಫಲಮ್ ದುಃಖಮ್ ಅಜ್ಞಾನಮ್ ತಮಸಃ ಫಲಮ್ – ಒಳ್ಳೆಯ ಕಜ್ಜದಿಂದ ದುಗುಡವಿರದ ಸಾತ್ವಿಕ ಫಲ ಎನ್ನುತ್ತಾರೆ ತಿಳಿದವರು.
ರಾಜಸವಾದ ಕಜ್ಜದಿಂದ ದುಃಖ ಬೆರೆತ ಸುಖ. ತಿಳಿಗೇಡಿತನವೇ ತಮೋಗುಣದ ಕಜ್ಜದ ಫಲ.
ಜೀವನದುದ್ದಕ್ಕೂ
ಇನ್ನೊಬ್ಬರಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದು ಸುಕೃತ. ನಮ್ಮಲ್ಲಿ ಸಂಪತ್ತಿದ್ದಾಗ ಅದು ನನ್ನದು-ನನ್ನದು ಎಂದು ಜಿಪುಣನಾಗಿ
ಬದುಕಿದರೆ ಅದರಿಂದ ದುಃಖಭರಿತ ಜೀವನ ನಮ್ಮದಾಗುತ್ತದೆ. ನಾವು
ಗಳಿಸಿದ್ದನ್ನು ಇನ್ನೊಬ್ಬರ ಕಷ್ಟದಲ್ಲಿ ವಿನಿಯೋಗಿಸಿದಾಗ ಅದು ನಮ್ಮನ್ನು ಸಾತ್ವಿಕ ಫಲದತ್ತ ಕೊಂಡೊಯ್ಯುತ್ತದೆ. ಮಧ್ವಾಚಾರ್ಯರು ಈ ವಿಚಾರಕ್ಕೆ ಒತ್ತು ಕೊಟ್ಟು ತಮ್ಮ 'ಗೀತಾತಾತ್ಪರ್ಯ'ದಲ್ಲಿ ಹೀಗೆ ಹೇಳಿದ್ದಾರೆ:
ನಾನಾ ಜನಸ್ಯ
ಶುಶ್ರೂಷಾ ಕರ್ತವ್ಯಾ ಕರವನ್ಮಿತೇ
ಕಷ್ಟದಲ್ಲಿರುವವರ
ಸೇವೆ ಮಾಡುವುದು ಮೋಕ್ಷ ಸಾಧನೆಯ ಒಂದು ಮುಖ. ನಮ್ಮಲ್ಲಿ ಕೆಲವರು ಕಷ್ಟದಲ್ಲಿರುವವರನ್ನು ಕಂಡು ಹೀಗೆ ಹೇಳುವುದಿದೆ: “ಅದು ಅವನ ಪ್ರಾರಾಬ್ಧಕರ್ಮ, ಅದನ್ನು ಅವನು ಅನುಭವಿಸಲಿ. ಅದಕ್ಕೆ ನಾನ್ಯಾಕೆ ಚಿಂತಿಸಬೇಕು” ಎಂದು. ಈ ರೀತಿ ಹೇಳಿದಾಗ ನಾವು ಆ ಕಷ್ಟದಲ್ಲಿರುವ ವ್ಯಕ್ತಿಯ ಒಳಗಿರುವ
ಭಗವಂತನನ್ನು ತಿರಸ್ಕಾರ ಮಾಡಿದಂತಾಗುತ್ತದೆ. ಇಂಥವರಿಗೆ ಎಂದೆಂದೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ನಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಜಪ-ತಪವಷ್ಟೇ ಸಾಲದು; ಇಲ್ಲಿ ಕಷ್ಟದಲ್ಲಿರುವ ಜನರ ಸೇವೆಯೂ ಒಂದು ಪ್ರಧಾನವಾದ ಅಂಶ. ಸಾಧಕನು ತನ್ನ ನಿತ್ಯಾನುಷ್ಠಾನಗಳ ಜತೆಗೆ ಈ
ಸೇವಾಕಾರ್ಯವನ್ನು ಆಚರಿಸಬೇಕೆನ್ನುವುದು ಗೀತೆಯ ಆದೇಶವೆಂದು
ಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ. ನಿನ್ನ ಮನೆಯಲ್ಲಿ ಬೆಂದ ಅನ್ನ ಎಷ್ಟು ಹಸಿದ ಜನರ ಹಸಿವನ್ನು ತಣಿಸುತ್ತದೆ-ಅಷ್ಟು ಸುಕೃತ. ಇದಕ್ಕಾಗಿ ಹಿಂದಿನ ಕಾಲದಲ್ಲಿ ಒಂದು
ಸಂಪ್ರದಾಯವಿತ್ತು. ಅಡುಗೆ ಮಾಡಿ, ದೇವರಿಗೆ ಅದನ್ನು ಅರ್ಪಿಸಿ, ಸುಮಾರು ಹತ್ತು ನಿಮಿಷ ಹೆಬ್ಬಾಗಿಲಿನಲ್ಲಿ ಕಾದು, ನಂತರ ಊಟ ಮಾಡುವುದು. ಏಕೆಂದರೆ ಈ ಸಮಯದಲ್ಲಿ ಯಾರಾದರೂ ಹಸಿದವರು ಮನೆಯ ಬೀದಿಯಲ್ಲಿ ಬಂದರೆ
ಅವರಿಗೆ ಮೊದಲು ಊಟ ಬಡಿಸಿ, ಆನಂತರ ಯಜಮಾನ ಊಟಮಾಡುವುದು ಆಗಿನ ಪದ್ಧತಿಯಾಗಿತ್ತು. ಇಷ್ಟೇ ಅಲ್ಲದೆ
ಇದಕ್ಕೂ ಮೊದಲು ‘ಬಲಿಹರಣ’ ಮಾಡುತ್ತಿದ್ದರು. ಮನೆಯ ಸುತ್ತಮುತ್ತಲಿನ
ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವುದು ‘ಬಲಿಹರಣ’. ಹೀಗೆ
ಜೀವಮಾನದುದ್ದಕ್ಕೂ ಒಳ್ಳೆಯ ಕೆಲಸ ಮಾಡಿದರೆ ಅದರ ಫಲ ಸಾತ್ವಿಕವಾಗುತ್ತದೆ. ಇದರಿಂದ ಈ ಜನ್ಮದಲ್ಲಿ ಜ್ಞಾನ ಗಳಿಸಲು
ಆಗದಿದ್ದರೂ ಕೂಡ, ಮುಂದಿನ ಜನ್ಮದಲ್ಲಿ ಆ ಅವಕಾಶ ಒದಗಿ ಬರುತ್ತದೆ. ಜ್ಞಾನವಿದ್ದೂ ದುಷ್ಕೃತಿಯಾಗಿ ಬದುಕಿದರೆ ಮತ್ತೆ ಹೀನಯೋನಿಯಲ್ಲಿ ಹುಟ್ಟಬೇಕಾಗುತ್ತದೆ.
ಹೋಮ-ಹವನ, ದಾನ-ದಕ್ಷಿಣೆ, ಬ್ರಾಹ್ಮಣಾರಾಧನೆ- ಎಲ್ಲವನ್ನು ಮಾಡಿ, ‘ತಾನು ಎಲ್ಲರಿಗಿಂತ ಮಹಾನ್’ ಎನ್ನುವ ಅಹಂಕಾರ ಬಂದರೆ ಅದು ರಜಸ್ಸಿನ ಕರ್ಮವಾಗುತ್ತದೆ. ಅದರ ಫಲ ಲೋಭ; ದುಃಖ ಬೆರೆತ ಜೀವನ. ಇದರಿಂದ ಪುಣ್ಯ ಕರ್ಮ ಮಾಡಿಯೂ ದುಃಖ ಅನುಭವಿಸಬೇಕಾಗುತ್ತದೆ. ಅಜ್ಞಾನದಿಂದ, ಯಾರದ್ದೋ ಒತ್ತಡಕ್ಕೆ ಮಾಡುವ ಕರ್ಮದಿಂದ ಎಂದೂ
ಜ್ಞಾನ ಬೆಳೆಯುವುದಿಲ್ಲ. ತಿಳಿಗೇಡಿತನವೇ ತಮೋಗುಣದ ಕರ್ಮಫಲ.
· ಶ್ಲೋಕ - 17
ನಮ್ಮಲ್ಲಿ ಯಾವ ಗುಣ
ಪೂರ್ಣವಾಗಿ ಜಾಗೃತವಾಗಿದೆ ಎಂದು ಹೇಗೆ ತಿಳಿಯುತ್ತದೆ ಎನ್ನುವುದರೆ ವಿವರಣೆಯನ್ನು, ಮುಂದಿನ ಶ್ಲೋಕದಲ್ಲಿ ಉಪಸಂಹಾರ ರೂಪದಲ್ಲಿ ಕೃಷ್ಣ ವಿವರಿಸಿದ್ದಾನೆ.
ಸತ್ತ್ವಾತ್ ಸಂಜಾಯತೇ
ಜ್ಞಾನಂ ರಜಸೋ ಲೋಭ ಏವ ಚ ।
ಪ್ರಮಾದಮೋಹೌ ತಮಸೋ
ಭವತೋSಜ್ಞಾನಮೇವ ಚ ॥೧೭॥
ಸತ್ತ್ವಾತ್ ಸಂಜಾಯತೇ
ಜ್ಞಾನಮ್ ರಜಸಃ ಲೋಭಃ ಏವ ಚ ।
ಪ್ರಮಾದ ಮೋಹೌ ತಮಸಃ ಭವತಃ ಅಜ್ಞಾನಮ್ ಏವ ಚ—ಸತ್ವದಿಂದ ತಿಳಿವು ತಿಳಿಯಾಗುತ್ತದೆ. ರಜಸ್ಸಿನಿಂದ ಜಿಪುಣತನ ಬೆಳೆಯುತ್ತದೆ. ತಮಸ್ಸಿನಿಂದ ಮೈಮರೆವು, ಭ್ರಾಂತಿ ಮತ್ತು ತಿಳಿಗೇಡಿತನ ಉಂಟಾಗುತ್ತದೆ.
“ಸತ್ತ್ವಾತ್ ಸಂಜಾಯತೇ ಜ್ಞಾನಮ್”- ಗೀತೆಯ ಈ ಸಾಲು ಬಹಳ ಮುಖ್ಯವಾದ ಸಂದೇಶವನ್ನು ಕೊಡುತ್ತದೆ. ಯಾವಾಗ ಮನುಷ್ಯನಿಗೆ ಉಳಿದ ಎಲ್ಲಾ
ಸಂಗತಿಗಳಿಗಿಂತ ಜ್ಞಾನ ಮುಖ್ಯ, ಅದಕ್ಕಾಗಿ ನಾನು ಏನನ್ನಾದರೂ ಕಳೆದುಕೊಳ್ಳಲು
ಸಿದ್ಧ ಎನ್ನುವ ದೃಢ ನಿರ್ಧಾರ ಬರುತ್ತದೋ- ಆಗ ನಾವು ನಿಸ್ಸಂದೇಹವಾಗಿ ಇದು ಸತ್ವಗುಣದ ಪೂರ್ಣ ಜಾಗೃತಾವಸ್ಥೆ ಎಂದು ತಿಳಿಯಬಹುದು. ಇದಕ್ಕೆ ಉತ್ತಮ ಉದಾಹರಣೆ ಕಠೋಪನಿಷತ್ತಿನಲ್ಲಿ
ಬರುವ ಯಮ ಮತ್ತು ನಚಿಕೇತನ ಈ ಸಂಭಾಷಣೆ:
ಏತತ್ತುಲ್ಯಂ ಯದಿ
ಮನ್ಯಸೇ ವರಂ ವೃಣೀಷ್ವ ವಿತ್ತಂ ಚಿರಜೀವಿಕಾಂ ಚ |
ಮಹಾಭೂಮೌ ನಚಿಕೇತಸ್ತ್ವಮೇಧಿ ಕಾಮಾನಾಂ ತ್ವಾ ಕಾಮಭಾಜಂ ಕರೋಮಿ. ||೧-೨೪ ||
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ |
ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ |
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ ||೧-೨೫||
ಮಹಾಭೂಮೌ ನಚಿಕೇತಸ್ತ್ವಮೇಧಿ ಕಾಮಾನಾಂ ತ್ವಾ ಕಾಮಭಾಜಂ ಕರೋಮಿ. ||೧-೨೪ ||
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ |
ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ |
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ ||೧-೨೫||
ಇಲ್ಲಿ “ನನಗೆ ಆತ್ಮ ಜ್ಞಾನವನ್ನು ಬೋಧಿಸು" ಎಂದು ನಚಿಕೇತ ಯಮನನ್ನು
ಕೇಳಿದಾಗ: “ನೀನಿನ್ನೂ ಚಿಕ್ಕವನು, ಆ ವಿದ್ಯೆ ಬೇಡ. ಅದಕ್ಕೆ ಬದಲಾಗಿ ನಿನ್ನನ್ನು
ಭೂಮಂಡಲದ ಚಕ್ರವರ್ತಿಯನ್ನಾಗಿ ಮಾಡುತ್ತೇನೆ; ನೀನು ಬಯಸಿದ್ದು ಸಿಗುವಂತೆ ಮಾಡುತ್ತೇನೆ; ಆಯುಷ್ಯ ಐಶ್ವರ್ಯವನ್ನು ಕೊಡುತ್ತೇನೆ" ಎಂದು ಜವರಾಯ ನುಡಿಯುತ್ತಾನೆ. ಆಗ
ನಚಿಕೇತ ಹೀಗೆ ಹೇಳುತ್ತಾನೆ:
ಶ್ವೋಭಾವಾ
ಮರ್ತ್ಯಸ್ಯ ಯದಂತಕೈತತ್ ಸರ್ವೇಂದ್ರಿಯಾಣಾಂ ಜರಯಂತಿ ತೇಜಃ |
ಅಪಿ ಸರ್ವಂ ಜೀವಿತಮಲ್ಪಮೇವ ತವೈವ ವಾಹಾಸ್ತವ ನೃತ್ಯಗೀತೇ ||೧-೨೬||
ನ ವಿತ್ತೇನ ತರ್ಪಣೀಯೋ ಮನುಷ್ಯೋ ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ |
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ ವರಸ್ತು ಮೇ ವರಣೀಯಃ ಸ ಏವ ||೧-೨೭||
ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ಮರ್ತ್ಯಃ ಕ್ವಧಃಸ್ಥಃ ಪ್ರಜಾನನ್ |
ಅಭಿಧ್ಯಾಯನ್ ವರ್ಣರತಿಪ್ರಮೋದಾನ್ ಅತಿದೀರ್ಘೇ ಜೀವಿತೇ ಕೋ ರಮೇತ ||೧-೨೮||
ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್ |
ಯೋಽಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ ||೧-೨೯||
ಅಪಿ ಸರ್ವಂ ಜೀವಿತಮಲ್ಪಮೇವ ತವೈವ ವಾಹಾಸ್ತವ ನೃತ್ಯಗೀತೇ ||೧-೨೬||
ನ ವಿತ್ತೇನ ತರ್ಪಣೀಯೋ ಮನುಷ್ಯೋ ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ |
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ ವರಸ್ತು ಮೇ ವರಣೀಯಃ ಸ ಏವ ||೧-೨೭||
ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ಮರ್ತ್ಯಃ ಕ್ವಧಃಸ್ಥಃ ಪ್ರಜಾನನ್ |
ಅಭಿಧ್ಯಾಯನ್ ವರ್ಣರತಿಪ್ರಮೋದಾನ್ ಅತಿದೀರ್ಘೇ ಜೀವಿತೇ ಕೋ ರಮೇತ ||೧-೨೮||
ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್ |
ಯೋಽಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ ||೧-೨೯||
“ನೀನು ಎಷ್ಟೇ ಕೊಟ್ಟರೂ ಅದು ಅಲ್ಪ. ಎಷ್ಟೇ
ಆಯಸ್ಸು ಪಡೆದರೂ ನಾವೊಂದು ದಿನ ಸಾಯಬೇಕು. ಆದ್ದರಿಂದ ಇದ್ಯಾವುದೂ ನನಗೆ ಬೇಡ. ನೀನು ಇಡೀ ಜಗತ್ತನ್ನು ನನಗೆ ಧಾರೆಯೆರೆದರೂ ಅದು ನನಗೆ ಬೇಡ. ನನಗೆ ಜ್ಞಾನ
ಬೇಕು. ಆ ಆತ್ಮಜ್ಞಾನವಿದ್ಯೆಯನ್ನೇ ತಿಳಿಸಿಕೊಡು" ಎಂದು. ಇದು ಯಾವ ಪ್ರಲೋಭನೆಗೂ ಒಳಗಾಗದ ನಿಜವಾದ ಸತ್ವ. ಜ್ಞಾನ ಸಾಧನೆಯ ನಿಜವಾದ ಹಸಿವುಳ್ಳವರು ಎಲ್ಲವನ್ನು
ಕಳೆದುಕೊಳ್ಳಲು ಸಿದ್ಧರಾಗಿ ಹೇಗೆ ಜ್ಞಾನಮಾರ್ಗದಲ್ಲಿ ಸಾಗುತ್ತಾರೆ ಎನ್ನುವುದಕ್ಕೆ ಇತ್ತೀಚೆಗಿನ ಉತ್ತಮ ಉದಾಹರಣೆ-
ಸ್ವಾಮಿರಾಮ್ (1925–1996). ಅವರ ಜೀವನ ಚರಿತ್ರೆಯನ್ನು ನಾವು ‘Lliving with the Himalayan Masters’ ಎನ್ನುವ ಪುಸ್ತಕದಲ್ಲಿ ಓದಿ ತಿಳಿಯಬಹುದು.
ಶಾಸ್ತ್ರ ಓದಿದರೂ ಶಾಸ್ತ್ರದ ಯಥಾರ್ಥ ಜ್ಞಾನ
ಬರಬೇಕಿದ್ದರೆ ನಮ್ಮೊಳಗೆ ಸಾತ್ವಿಕತೆ ಇರಬೇಕು. ಅಕಾರ ವಾಚ್ಯನಾದ ಭಗವಂತನ ಜ್ಞಾನ ಬರುವುದು ಸತ್ವಗುಣವಿದ್ದಾಗ ಮಾತ್ರ.
ಸತ್ವಗುಣ ಪೂರ್ಣ ಜಾಗೃತವಾದಾಗ ನಮಗೆ ಯಥಾರ್ಥಜ್ಞಾನ ತಿಳಿಯುತ್ತದೆ ಮತ್ತು ಉಳಿದ ಎಲ್ಲಾ ಪ್ರಾಪಂಚಿಕ ಸಂಗತಿ ಜ್ಞಾನದ ಮುಂದೆ ಶೂನ್ಯ ಎನ್ನುವ ಸತ್ಯ ತಿಳಿಯುತ್ತದೆ.
“ರಜಸೋ ಲೋಭ ಏವ ಚ”- ಲೋಭ ಎನ್ನುವುದು ರಜಸ್ಸಿನ ಮೀಸಲಾದ ಗುಣ(Exclusive Quality). ಇದನ್ನು ಸಾತ್ವಿಕರಲ್ಲಿ ಕಾಣಲು ಸಾಧ್ಯವಿಲ್ಲ. ಯಾವುದೋ ಒಂದು ವಸ್ತುವಿನ ಬಗ್ಗೆ ಕಾಮ, ಆ ವಸ್ತು ಸಿಗದಿದ್ದಾಗ ಕ್ರೋಧ, ಸಿಕ್ಕಿದಾಕ್ಷಣ –ಲೋಭ. ಅದನ್ನು ಉಪಯೋಗಿಸುವುದೂ ಇಲ್ಲ, ಇನ್ನೊಬ್ಬರಿಗೆ ಕೊಡುವುದೂ ಇಲ್ಲ. ದಾನ
ಎನ್ನುವುದು ಇವರಿಗೆ ಬಲು ದೂರ! ನಾವು ನಮ್ಮ
ಹತ್ತಿರ ಏನಿದೆ ಅದನ್ನು ಹಂಚಿ ಬದುಕಬೇಕು ಎನ್ನುವುದು ಸತ್ವ. ಇದನ್ನು ಈಶೋಪನಿಷತ್ತಿನಲ್ಲಿ ಬಹಳ ಸುಂದರವಾಗಿ ಹೇಳಿದ್ದಾರೆ:
ಓಂ ಈಶಾವಾಸ್ಯಮಿದಂ
ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ || ೧ ||
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ || ೧ ||
ಭಗವಂತ ಎಲ್ಲವುದಕ್ಕೂ
ಸ್ವಾಮಿ. ಅವನು ಕೊಟ್ಟಿದ್ದನ್ನು ನಾವು ಅನುಭವಿಸಬೇಕು. ಇಲ್ಲದ ಸಂಪತ್ತಿಗಾಗಿ ಆಸೆಪಡಬಾರದು. ಜಗತ್ತಿನ ಸರ್ವ ಸಂಪತ್ತಿನ ಒಡೆಯ ಆ
ಭಗವಂತ. ಆದ್ದರಿಂದ ಆತ ಕೊಟ್ಟಿರುವ
ಸಂಪತ್ತನ್ನು ‘ನನ್ನದು’ ಎಂದುಕೊಂಡು ಲೋಭದಿಂದ ಬದುಕುವುದು ಸರಿಯಲ್ಲ. ಆದರೆ ರಜೋಗುಣದ ಬಹಳ ಮುಖ್ಯ ದೋಷ ಈ ಲೋಭ. ಇದು
ಇನ್ನೊಬ್ಬರ ಬಗ್ಗೆ ಸಹಾನುಭೂತಿ ಇಲ್ಲದೆ, ತಾನು ಗಳಿಸಿದ್ದನ್ನು ಇನ್ನೊಬ್ಬರಿಗೆ ಕೊಡದೆ, ಕೆಲವೊಮ್ಮೆ ತಾನೂ ತಿನ್ನದೆ ಮುಚ್ಚಿಡುವಂತೆ ಮಾಡುತ್ತದೆ. ಸಾಮಾನ್ಯವಾಗಿ ಪ್ರಾಣಿಗಳಲ್ಲೂ ಇಲ್ಲದ ಕೆಟ್ಟ ಗುಣ ಈ ಲೋಭ. ನಮ್ಮಲ್ಲಿ ಲೋಭದ ಲಕ್ಷಣವಿದ್ದರೆ ಅದು ರಜೋಗುಣದ ಜಾಗೃತಾವಸ್ಥೆ ಎನ್ನುವುದನ್ನು ನಾವು ಅರಿಯಬೇಕು.
“ಪ್ರಮಾದಮೋಹೌ ತಮಸೋ ಭವತೋSಜ್ಞಾನಮೇವ ಚ”. ಹೇಗೆ ರಜೋಗುಣದಿಂದ ಲೋಭವೋ, ಹಾಗೆ ತಮೊಗುಣದಿಂದ ಪ್ರಮಾದ ಮತ್ತು ಮೋಹ-ಅದರಿಂದ ತಿಳಿಗೇಡಿತನ. ಒಬ್ಬರನ್ನು ಅತಿಯಾಗಿ ಹಚ್ಚಿಕೊಳ್ಳುವುದು, ಅದರಿಂದ ಅವರು ಮಾಡುವ ತಪ್ಪುಗಳನ್ನು
ಕ್ಷಮಿಸುವುದು, ಅವರು ಹೇಳಿದಂತೆ ಕುಣಿಯುವುದು, ಇತ್ಯಾದಿ. ಇದು ಎಷ್ಟು ಪ್ರಭಾವಶಾಲಿ ಎಂದರೆ- ಇದು ನಮ್ಮ ಜ್ಞಾನವನ್ನೂ ಕೂಡ ಮುಚ್ಚಿಸಿ, ನಮ್ಮನ್ನು ತಪ್ಪು ದಾರಿಯಲ್ಲಿ
ಕರೆದೊಯ್ಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ
ಭಾಗವತದ ಆರನೇ ಸ್ಕಂದದ ಮೊದಲ ಅಧ್ಯಾಯದಲ್ಲಿ ಬರುವ ಅಜಾಮಿಳನ ಕಥೆ. ಈತ ಒಬ್ಬ ಸಾತ್ವಿಕ ಬ್ರಾಹ್ಮಣ. ಆತನಿಗೆ ಮದುವೆಯಾಗಿತ್ತು. ಒಮ್ಮೆ ಪೂಜೆಗೆ
ಹೂ-ತುಳಸಿ ತರಲು ಕಾಡಿಗೆ ಹೋದಾಗ ಕಂಡ ಒಂದು ದೃಶ್ಯ ಆತನ ಮನಸ್ಸಿನ
ಮೇಲೆ ಗಾಢವಾದ ಪರಿಣಾಮ ಬೀರಿತು. ತಾನು ಕಾಡಿನಲ್ಲಿ ಕಂಡ ಯುವತಿಯನ್ನು ಆತ ಮೊಹಿಸಲಾರಂಭಿಸಿದ. ಆಕೆಗಾಗಿ ಮದ್ಯ-ಮಾಂಸಾಹಾರದಲ್ಲಿ ತೊಡಗಿದ. ಆಕೆಯ ಬಯಕೆಗಳನ್ನು ತೀರಿಸಲು ಕಳ್ಳತನ
ಮಾಡಿದ. ಸಾತ್ವಿಕನಾಗಿದ್ದ ಒಬ್ಬ ವಿಪ್ರ-ಪೂರ್ಣ ತಾಮಸನಾದ. ಈ ಕಥೆಯನ್ನು ಮನಃಶಾಸ್ತ್ರೀಯವಾಗಿ ನೋಡಿದರೆ- ಈ ರೀತಿ ಘಟನೆ ಏಕೆ ನಡೆಯಿತು ಎನ್ನುವುದು ತಿಳಿಯುತ್ತದೆ.
ಅಜಾಮಿಳ ಮದುವೆಯಾಗಿದ್ದ, ಆದರೆ ಆತನ ಮನೆಯಲ್ಲಿ ಮಡಿ-ಮೈಲಿಗೆ ಎನ್ನುವ ಅನೇಕ ಕರ್ಮಾಚರಣೆಯಿಂದಾಗಿ ಆತ
ತನ್ನಲ್ಲಿನ ಅಂತರಂಗದ ಬಯಕೆಯನ್ನು ಬಲವಂತವಾಗಿ ನಿಗ್ರಹಿಸಿದ್ದ. ನಾವು
ನಮ್ಮ ಬಯಕೆಯನ್ನು ಬಲವಂತವಾಗಿ ತಡೆಹಿಡಿದರೆ ಅದು ಒಂದಲ್ಲ ಒಂದು ದಿನ ಸ್ಪೋಟವಾಗಿ ಹೊರಬರುತ್ತದೆ. ಈ ಕಾರಣದಿಂದಾಗಿ ಶಾಸ್ತ್ರಕಾರರು ಹೇಳುವಂತೆ “ಅಧ್ಯಾತ್ಮ ಸಾಧನೆ ಮಾಡುವ ಮೊದಲು ನಿನಗೆ ಸಾಂಸಾರಿಕ ಸುಖದ ಮೋಹವಿದ್ದರೆ ಅದನ್ನು ಅನುಭವಿಸು, ಅದರ ನಿಸ್ಸಾರವನ್ನು ಅರಿ, ಆಗ ಸಾಧನೆ ಸುಲಭ” ಎಂದು. ಅಜಾಮಿಳ ಶಾಸ್ತ್ರ ಓದಿದ್ದ, ಆದರೂ ಆತ ಮೋಹಕ್ಕೆ ಬಲಿಯಾದ. ಅದರಿಂದ ಆತನ ಎಲ್ಲಾ ಜ್ಞಾನವೂ ಮರೆಯಾಯಿತು. ತಮೋಗುಣ ಆತನಲ್ಲಿ ಮಾಡಬಾರದ
ತಪ್ಪನ್ನು ಮಾಡಿಸಿತು. ಇದು ತಮೋಗುಣ ನಮ್ಮಲ್ಲಿ ಪ್ರಬಲವಾದಾಗ ನಮ್ಮ ಮೇಲೆ ಆಗುವ ಪರಿಣಾಮ.
ಈ ಶ್ಲೋಕದಲ್ಲಿ ಕೃಷ್ಣ
ನಮ್ಮಲ್ಲಿ ಯಾವ ಗುಣ ಕೆಲಸ ಮಾಡುತ್ತಿದೆ ಅನ್ನುವುದನ್ನು ಸ್ಪಷ್ಟ ರೂಪುರೇಷೆಯಿಂದ ವಿವರಿಸಿದ. ಈ ಶ್ಲೋಕದ ಸಂಗ್ರಹ ಸಾರಾಂಶ
ಇಷ್ಟು: ಜ್ಞಾನದ ತೃಷೆ ಇದ್ದರೆ ಅದು
ಸಾತ್ವಿಕ ಗುಣ; ನನಗೇ ಬೇಕು ಉಳಿದವರಿಗೆ ಸಿಗಬಾರದು ಎನ್ನುವ
ಲೋಭವಿದ್ದರೆ ಅದು ರಜಸ್ಸು; ಯಾವುದೋ ಒಂದು ಭೌತಿಕ ವಸ್ತುವಿನ ಮೇಲೆ ಅತಿಯಾದ
ಮಮತೆ, ಮೋಹ ಬೆಳೆದರೆ ಅದು ತಮಸ್ಸಿನ ಕೆಲಸ.
ಸತ್ವ-ರಜಸ್ಸು-ತಮಸ್ಸುಗಳಿಗೆ
ಇನ್ನೊಂದು ಮುಖವಿದೆ. ಪೂಜೆಯಲ್ಲಿ ನವಶಕ್ತಿಗಳನ್ನು ಹೇಳಿದ ಮೇಲೆ ಭಗವಂತನನ್ನು ಅನುಸಂಧಾನ ಮಾಡುವ ಮುಂಚೆ “ಸಂ ಸತ್ವಾಯ ನಮಃ –ರಂ-ರಜಸೇ ನಮಃ-ತಂ ತಮಸೇ ನಮಃ” ಎನ್ನುವ ಒಂದು ಮಂತ್ರ ಹೇಳುತ್ತಾರೆ. ಈ ಮಂತ್ರವನ್ನು ಕೆಲವರು ಈ ರೀತಿ ಕೂಡ ಹೇಳುತ್ತಾರೆ: “ಸಂ ಸತ್ವಾಯ ಶ್ರಿಯೋ ನಮಃ-ರಂ ರಜಸೇ ಭೂವೇ ನಮಃ-ತಂ ತಮಸೇ ದುರ್ಗಾಯ ನಮಃ” ಎಂದು. [ಇದು ಮಂತ್ರವಲ್ಲ, ಮೂಲರೂಪದ ಮಂತ್ರ: “ಸಂ ಸತ್ವಾಯ ನಮಃ –ರಂ-ರಜಸೇ ನಮಃ-ತಂ ತಮಸೇ ನಮಃ” ] ಇಲ್ಲಿ ಸಂ ಸತ್ವಾಯ ನಮಃ ಎಂದರೆ ಸತ್ವಗುಣಕ್ಕೆ ನಮಸ್ಕಾರ ಮಾಡುವುದಲ್ಲ- ಸತ್ವ ಮಾನಿನಿಯಾದ
ಶ್ರೀದೇವಿಗೆ ನಮಸ್ಕಾರ ಮಾಡುವುದು. ರಂ ರಜಸೇ ನಮಃ ಎಂದರೆ ರಜೋ ಮಾನಿನಿಯಾದ ಭೂದೇವಿಗೆ ನಮಸ್ಕಾರ. ತಂ ತಮಸೇ ನಮಃ ಎಂದರೆ ತಮೋ ಮಾನಿನಿಯಾದ ದುರ್ಗಾ ದೇವಿಗೆ ನಮಸ್ಕಾರ. ಇವು
ಲಕ್ಷ್ಮಿಯ ಮೂರು ರೂಪಗಳು. ಲಕ್ಷ್ಮಿಯ ಮೂಲ ರೂಪಕ್ಕೆ ‘ಮಹಾಲಕ್ಷ್ಮಿ’ ಎನ್ನುತ್ತಾರೆ. ಈ ಮೂಲರೂಪದಿಂದ ಮೂರು ಆವೇಶ
ರೂಪಗಳು.
ಇಲ್ಲಿ ಸತ್ವವನ್ನು
ಜಾಗೃತೆಗೊಳಿಸುವವಳು ಶ್ರೀದೇವಿ;ರಜಸ್ಸನ್ನು ಜಾಗೃತೆಗೊಳಿಸುವವಳು ಭೂದೇವಿ; ತಮೋಗುಣವನ್ನೂ ಜಾಗೃತೆಗೊಳಿಸುವವಳು ತಮೋಮಾನಿನಿಯಾದ ದುರ್ಗಾದೇವಿ. “ಸತ್ತ್ವಾತ್ ಸಂಜಾಯತೇ ಜ್ಞಾನಮ್”- ಅಂದರೆ: ಸತ್ವಗುಣದ ಅಭಿಮಾನಿನಿಯಾದ ಲಕ್ಷ್ಮಿ ಜ್ಞಾನಪ್ರದಳು ಎಂದರ್ಥ. ನಾರಾಯಣನ ಜ್ಞಾನ ಬರಬೇಕಾದರೆ ಶ್ರೀದೇವಿಯ
ಅನುಗ್ರಹಬೇಕು. ‘ಶ್ರೀ’ ಸಂಪತ್ತನ್ನು ಕೊಡುತ್ತಾಳೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಜ್ಞಾನವೆಂಬ ಮಹಾ ಸಂಪತ್ತನ್ನು ಕೊಡುವವಳು
ಶ್ರೀದೇವಿ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ದುಡ್ಡು ಸಂಪತ್ತು ಹೌದು, ಆದರೆ ಜ್ಞಾನ ಮಹಾಸಂಪತ್ತು-ಅದನ್ನು ಕೊಡುವವಳು ‘ಶ್ರೀ’. ನಮ್ಮೊಳಗೆ ಜ್ಞಾನ ಜಾಗೃತವಾಗಬೇಕಾದರೆ ಮೊದಲು ತಾಯಿಯ ‘ಶ್ರೀ’ ರೂಪವನ್ನು ಉಪಾಸನೆ ಮಾಡಬೇಕು. ಭಗವಂತನ ಜ್ಞಾನವನ್ನು
ಕರುಣಿಸು ಎಂದು ಆಕೆಯನ್ನು ಬೇಡಬೇಕು.
ಶಾಸ್ತ್ರಕಾರರು
ಹೇಳುವಂತೆ ಮನಸ್ಸು ಭಗವಂತನತ್ತ ಹರಿಯುವುದಕ್ಕೆ ಮೊದಲು ನಾವು ಮನೋSಭಿಮಾನಿಯನ್ನು ಪ್ರಾರ್ಥಿಸಬೇಕು. ಶಿವ-ಮನೋSಭಿಮಾನಿ ದೇವತೆ. [ಗರುಡ-ಸುಪರ್ಣಿ, ಶೇಷ-ವಾರುಣಿ ಮತ್ತು ಶಿವ-ಪಾರ್ವತಿ ಇವರು ಮನೋಭಿಮಾನಿಯಾದರೂ ಸಹ
ವಿಶೇಷತಃ ಶಿವ ಮನೋSಭಿಮಾನಿ] ಜ್ಞಾನ ಬೇಕು ಅನ್ನುವವರ ಮನಸ್ಸಿನ ತಮೋಗುಣವನ್ನು, ಕತ್ತಲೆಯನ್ನು ಓಡಿಸಿ ಬೆಳಕು ತುಂಬುವವರು ಶಿವ-ಪಾರ್ವತಿಯರು. ಈ ಕಾರಣಕ್ಕಾಗಿ
ಜ್ಞಾನಕ್ಕೋಸ್ಕರ ಮೊದಲು ನಾವು ಪ್ರಾರ್ಥನೆ ಮಾಡಬೇಕಾಗಿರುವುದು ಶಿವತತ್ವವನ್ನು. ಶಿವ ಜ್ಞಾನ ಕೊಟ್ಟ ಮೇಲೆ ಅದು ಚಿತ್ತದಲ್ಲಿ ಸ್ಮರಣಶಕ್ತಿಯಾಗಿ ಉಳಿಯಲು ನಾವು
ಪ್ರಾರ್ಥಿಸಬೇಕಾಗಿರುವುದು ಪ್ರಾಣಶಕ್ತಿಯನ್ನು(ಬ್ರಹ್ಮ-ವಾಯು, ಸರಸ್ವತಿ-ಭಾರತಿ). ನಮಗೆ ಬಂದ ಜ್ಞಾನ ಮರೆಯಾಗದಂತೆ(ಸ್ಥಿರವಾಗುವಂತೆ) ಮಾಡುವ ಪ್ರಮುಖ
ಶಕ್ತಿ ಪ್ರಾಣಶಕ್ತಿ (ಆಂಜನೇಯ). ಈ ರೀತಿ ಸ್ಥಿರವಾದದ್ದು ಮತ್ತೆ ಎತ್ತರಕ್ಕೆ ಹೋಗಿ
ಭಗವಂತನನ್ನು ಮುಟ್ಟುವಂತೆ ಮಾಡುವವಳು-ಸದಾ
ಭಗವಂತನ ಜೊತೆಗಿರುವ ಲಕ್ಷ್ಮೀದೇವಿ. ಇಂಥಹ ಲಕ್ಷ್ಮಿ ತನ್ನ ಎಲ್ಲಾ ರೂಪದಲ್ಲಿ ಅರಿವನ್ನು ಕೊಡುವುದಿಲ್ಲ. ಆಕೆ ತನ್ನ ಶ್ರೀರೂಪದಲ್ಲಿ ಜ್ಞಾನರೂಪವಾದ ಸಂಪತ್ತನ್ನು ಕರುಣಿಸುತ್ತಾಳೆ. ‘ಶ್ರೀ’ ಮಹಾಲಕ್ಷ್ಮಿಯ ಅವತಾರಗಳಲ್ಲಿ ಒಂದು. ಸತ್ವವನ್ನು ನಿಯಮನ ಮಾಡಿ ಜಗತ್ತಿನ ರಕ್ಷಣೆಗೆ
ವಿಷ್ಣುವಿನ ಜೊತೆಗೆ ಪಣತೊಟ್ಟು ನಿಂತ ರೂಪವಿದು. ಆದ್ದರಿಂದ ಜ್ಞಾನ ಮಾರ್ಗದಲ್ಲಿ ಸಾಗುವವರಿಗೆ ಮುಖ್ಯವಾದುದು ಲಕ್ಷ್ಮಿಯ ಶ್ರೀ ನಾಮಕ ಅನುಗ್ರಹ.
ಇಲ್ಲಿ ನಾವು ಶಿವ, ಪ್ರಾಣದೇವರು ಮತ್ತು ಶ್ರೀದೇವಿ ಅನುಗ್ರಹದಿಂದ
ಜ್ಞಾನಮಾರ್ಗದಲ್ಲಿ ಮುನ್ನೆಡೆದು ಭಗವಂತನನ್ನು ಸೇರಬಹುದು
ಎನ್ನುವುದನ್ನು ವಿಶ್ಲೇಶಿಸಿದೆವು. ಮುಂದೆ ಭೂತತ್ವದ ಬಗ್ಗೆ ವಿಶ್ಲೇಷಿಸುವ ಮೊದಲು ಶಾಂತಿಮಂತ್ರ ಮತ್ತು ಗಣಪತಿಯ ಪ್ರಾರ್ಥನೆಯ ಮಹತ್ವವನ್ನು ಸಂಕ್ಷಿಪ್ತವಾಗಿ ಇಲ್ಲಿ
ವಿಶ್ಲೇಷಿಸೋಣ. ಯಾವುದೇ ಶಾಸ್ತ್ರವನ್ನು ಓದುವ ಮೊದಲು "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿ ಮಂತ್ರ ಪಠಿಸುತ್ತೇವೆ. ಜ್ಞಾನಾನಂದಗಳ ಪರಾಕಾಷ್ಠೆಯಾದ ಭಗವಂತನೆ, ನನ್ನನ್ನು ಜ್ಞಾನಾನಂದಗಳ(ಶಾ+ಅಂತಿ) ದಾರಿಯಲ್ಲಿ ನೆಡೆಸು ಎನ್ನುವುದು ಈ ಶಾಂತಿ
ಮಂತ್ರದ ಅರ್ಥ. ಇದೇ ರೀತಿ, ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಶಿವ-ಪಾರ್ವತಿ
ಪುತ್ರ ಗಣಪತಿ ಆಕಾಶದ ದೇವತೆ. ಈ ಆಕಾಶ ಭಗವಂತನ
ನಾಭಿಯಿಂದ ಸೃಷ್ಟಿಯಾಗಿದೆ. ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.
ನಾಭ್ಯ
ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್
ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್
ನಮ್ಮ ನಾಭಿಯ ಸಮೀಪ
ಇರುವ ಮೂರು ಚಕ್ರಗಳು-ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ. ನಾಭಿಯಿಂದ ಮೇಲಕ್ಕೆ ಹೃತ್ಕಮಲದಲ್ಲಿ ನಿಜವಾದ
ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ, ಸ್ವಾದಿಷ್ಟಾನ ಹಾಗು
ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು. ಅದಕ್ಕಾಗಿ ನಾವು ಗಣಪತಿಯಲ್ಲಿ
ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು
ಗಣಪತಿ ಮಂಡಲ ಬರೆದು ಪೂಜಿಸಿ, ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ
ಹೃತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ.
ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸುತ್ತಾನೆ.
ಇಂಥಹ ಭಗವಂತನನ್ನು ‘ವೃಷಾಹೀ’ ಎಂದೂ ಕರೆಯುತ್ತಾರೆ.
“ರಜಸೋ ಲೋಭ ಏವ ಚ”- ರಜಸ್ಸು ಎಂದರೆ ರಜೋಗುಣದ ಅಭಿಮಾನಿನಿಯಾದ ‘ಭೂದೇವಿ’. ಇಲ್ಲಿ ಭೂದೇವಿ ಎಂದರೆ ಭೂಮಿಯ ನಿಯಮನ ಮಾಡುವ
ಹದಿನೆಂಟನೇ ಕಕ್ಷೆಯಲ್ಲಿರುವ ದೇವತೆ ಅಲ್ಲ. ಅವಳನ್ನೂ ನಿಯಮನ ಮಾಡುವ ಲಕ್ಷ್ಮಿಯ ಆವೇಶರೂಪ ‘ಭೂ’ ಅದು ಸೃಷ್ಟಿಗೆ ಕಾರಣವಾದದ್ದು. ರಂಜನೆ, ಆಕರ್ಷಣೆ, ಸೆಳೆತ, ಮೋಹ –ಇವೆಲ್ಲವೂ ರಜೋಗುಣದ ಮುಖಗಳು. ಹಾಗಾಗಿ ಒಬ್ಬರನ್ನು ಒಬ್ಬರು ಪ್ರೀತಿಸುವುಕ್ಕೆ ಮೂಲಭೂತವಾಗಿ ಬೇಕಾಗಿರುವುದು-ರಂಜನ.
ಗಂಡು-ಹೆಣ್ಣಿನ ಸೆಳೆತವೇ ಸೃಷ್ಟಿಗೆ
ಕಾರಣವಾದದ್ದು. ಸೃಷ್ಟಿಗೆ ಬೇಕಾದ ಸೆಳೆತ ಕೊಟ್ಟು ಸೃಷ್ಟಿ ಮಾಡುವ, ಅದೇ ಸೆಳೆತದಿಂದ ದಾರಿ ತಪ್ಪಿಸುವ ಅಂಶ ರಜೋಗುಣದಲ್ಲಿದೆ. ಅಂತಹ ರಜೋಗುಣದ
ಸ್ವಭಾವವನ್ನು ಕೊಡುವವಳು ಭೂದೇವಿ. ನನ್ನ ಆಸ್ತಿ, ನನ್ನ ಮನೆ, ನನ್ನ ದುಡಿಮೆ, ನನ್ನ ಹಣ, ಇತ್ಯಾದಿ ಮೋಹ ರಜೋಗುಣದಿಂದ ಬರುವಂಥದ್ದು.
“ಪ್ರಮಾದ ಮೋಹೌ ತಮಸಃ ಭವತಃ ಅಜ್ಞಾನಮ್ ಏವ ಚ”- ಭೌತಿಕವಾಗಿ ನಮ್ಮನ್ನು ವಿನಾಶದತ್ತ ಕೊಂಡೊಯ್ಯುವ–ಸಂಹಾರ ಶಕ್ತಿಯಾದ, ತಮೋಗುಣದ ಅಭಿಮಾನಿನಿ ದುರ್ಗ. ಆಕೆ ಸಂಹಾರದ ಕಡೆಗೆ ಹೋಗುವ ಬುದ್ಧಿ ಕೊಡುತ್ತಾಳೆ. ತಪ್ಪನ್ನೇ ಸರಿ ಎಂದು ತಿಳಿದು ತಪ್ಪು
ಮಾಡುವುದು, ಅದರಿಂದ ಜಾರಿ ಬೀಳುವುದು, ವಿಪರೀತ ಜ್ಞಾನ, ಜ್ಞಾನದ ಅಭಾವ, ಇತ್ಯಾದಿ–ತಮೋಗುಣದ
ಪ್ರಭಾವದಿಂದ ಬರುವಂತದು.
ಹೀಗೆ ಚಿತ್ಪ್ರಕೃತಿಯ
ಮೂರು ಆವೇಶರೂಪಗಳಾದ ಶ್ರೀ-ಭೂ-ದುರ್ಗ, ಸತ್ವ-ರಜಸ್ಸು-ತಮಸ್ಸಿನ ಅಭಿಮಾನಿನಿಯರಾಗಿ, ತ್ರಿಗುಣಗಳ ಮೂಲಕ ನಮ್ಮನ್ನು ಬಂಧಿಸುತ್ತಾರೆ.
ಆದ್ದರಿಂದ ಚಿತ್ಪ್ರಕೃತಿಯ ಚೈತನ್ಯದ ಮೂರು ರೂಪಗಳೇ
ಸತ್ವ-ರಜಸ್ಸು ಮತ್ತು ತಮಸ್ಸು. ಮಹಾಲಕ್ಷ್ಮಿಯ ಶ್ರೀ-ಭೂ-ದುರ್ಗಾ ರೂಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಮಹಾಭಾರತ ತಾತ್ಪರ್ಯ ನಿರ್ಣಯದ “ಸರ್ಗಾನುಸರ್ಗ-ಲಯ-ಪ್ರಾದುರ್ಭಾವ ನಿರ್ಣಯ”ವನ್ನು ಓದಿ. [ಏಕೆ ಇಲ್ಲಿ ಈ ಅರ್ಥವನ್ನು ಮಾಡಬೇಕು ಎನ್ನುವುದಕ್ಕೆ ಗೀತೆಯಲ್ಲೇ ಸುಳಿವಿದೆ. ಅದನ್ನು ಮುಂದೆ ಈ ಅಧ್ಯಾಯದ ೧೯ನೇ ಶ್ಲೋಕದಲ್ಲಿ ಕಾಣಬಹುದು].
· ಶ್ಲೋಕ - 18
ಊರ್ಧ್ವಂ ಗಚ್ಛಂತಿ
ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ ॥೧೮॥
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ ॥೧೮॥
ಊರ್ಧ್ವಮ್ ಗಚ್ಛಂತಿ
ಸತ್ತ್ವಸ್ಥಾಃ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣ
ವೃತ್ತಿಸ್ಥಾಃ ಅಧಃ ಗಚ್ಛಂತಿ ತಾಮಸಾಃ—ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. ‘ಕೊನೆಯ ಗುಣದ’ ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ.
ತ್ರಿಗುಣದ
ಸ್ವಭಾವವನ್ನು ಹೇಳಿದ ಕೃಷ್ಣ, ಅದರ ಪರಿಣಾಮದ ಮೂರು ಮಜಲನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ.
ಸತ್ವದಲ್ಲಿರುವವರು ಮಾನಸಿಕವಾಗಿ ಮೇಲಕ್ಕೇರುತ್ತಾರೆ. ರಜೋಗುಣದವನಿಗೆ ಯಾವ ಏಳಿಗೆಯೂ ಇಲ್ಲ. ತಮಸ್ಸಿನಲ್ಲಿರುವವ ಮಾನಸಿಕವಾಗಿ ಅಧಃಪಾತ ಹೊಂದುತ್ತಾನೆ. ಇಲ್ಲಿ ‘ಊರ್ಧ್ವ’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ. ಕಠೋಪನಿಷತ್ತಿನಲ್ಲಿ ಹೇಳುವಂತೆ :
ಊರ್ಧ್ವಮೂಲೋ
ಅವಾಕ್ಶಾಖಃ ಏಷೋ ಅಶ್ವತ್ಥಃ ಸನಾತನಃ ||೨-೩-೧||
ಊರ್ಧ್ವ ಎಂದರೆ
ಎಲ್ಲಕ್ಕಿಂತ ಮೇಲಿರುವ ಭಗವಂತ. ಸತ್ವದಲ್ಲಿರುವವ ಮೇಲಕ್ಕೆ ಹೋಗುವುದು ಅಂದರೆ- ಭಗವಂತನ ಕಡೆ ಮುಖಮಾಡಿ ಚಲಿಸುವುದು. ಆತ ಮುಂದೆ ಹೋದಂತೆ
ಭಗವಂತನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಆದರೆ
ತಮಸ್ಸಿನಲ್ಲಿರುವವ ಭಗವಂತನಿಗೆ ಬೆನ್ನು ಹಾಕಿ ಚಲಿಸುತ್ತಿರುತ್ತಾನೆ. ರಾಜಸ ಇದ್ದಲ್ಲೇ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ.
ದೇವತೆಗಳನ್ನು
ಬಂಧನದಲ್ಲಿಡುವ ಶಕ್ತಿ ‘ಶ್ರೀದೇವಿ’; ಮಾನವರನ್ನು ಬಂಧನದಲ್ಲಿಡುವ ಶಕ್ತಿ ‘ಭೂದೇವಿ’ ಮತ್ತು ರಾಕ್ಷಸರನ್ನು ಬಂಧನದಲ್ಲಿಡುವ ಶಕ್ತಿ ‘ದುರ್ಗಾದೇವಿ’. ಸಾತ್ವಿಕರು ಸತ್ವಮಾನಿನಿಯಾದ ‘ಶ್ರೀದೇವಿಯ’ ಕೃಪೆಗೆ ಪಾತ್ರರಾಗಿ ಮೇಲಿನ ಲೋಕವನ್ನು ಪಡೆಯುತ್ತಾರೆ[ಭೂಮಿಯಿಂದ ಮೇಲೆ ಇರುವ ಆರು
ಸೂಕ್ಷ್ಮ ಲೋಕಗಳು ಮತ್ತು ಕೊನೆಗೆ ಮೋಕ್ಷ]; ರಾಜಸರು ಭೂದೇವಿಯ ಬಂಧನದಲ್ಲೇ ಮುಂದುವರಿಯುತ್ತಾರೆ[ಭೂಮಿ ಮತ್ತು
ಅಂತರಿಕ್ಷ] ಮತ್ತು ತಾಮಸರು ದುರ್ಗಾದೇವಿಯ ನಿಯಂತ್ರಣದಲ್ಲಿರುವ
ತಾಮಸಲೋಕ [ಭೂಮಿಯಿಂದ ಕೆಳಗಿರುವ ಏಳು ಸೂಕ್ಷ್ಮಲೋಕಗಳು]ವನ್ನು ಸೇರುತ್ತಾರೆ.
· ಶ್ಲೋಕ - 19
ನಾ[S]ನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾSನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋSಧಿಗಚ್ಛತಿ ॥೧೯॥
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋSಧಿಗಚ್ಛತಿ ॥೧೯॥
ನ ಅನ್ಯಮ್ ಗುಣೇಭ್ಯಃ
ಕರ್ತಾರಮ್ ಯದಾ ದ್ರಷ್ಟಾ ಅನುಪಶ್ಯತಿ ।
ಗುಣೇಭ್ಯಃ ಚ ಪರಮ್ ವೇತ್ತಿ ಮತ್ ಭಾವಮ್ ಸಃ ಅಧಿಗಚ್ಛತಿ – ಈ ಎಲ್ಲಾ ಪರಿಣಾಮಗಳಿಗೆ ತ್ರಿಗುಣಗಳಲ್ಲದೆ ಬೇರೆ ಕಾರಣವಿಲ್ಲ ಎಂದು
ಕಂಡುಕೊಂಡವನು[ತ್ರಿಗುಣಗಳಿಂದ ಭಿನ್ನನಾದ ಭಗವಂತನೆ ಎಲ್ಲದರ ಮೂಲ ಕಾರಣ ಎಂದು ತಿಳಿದವನು] ಮತ್ತು ಗುಣಗಳಿಂದ ಅತೀತನೆಂದು ಭಗವಂತನನ್ನು ತಿಳಿದವನು[ನಿಜವಾದ ಮನುಷ್ಯ]
ನನ್ನಲ್ಲೆ ನೆಲೆಸುತ್ತಾನೆ.
ನಮ್ಮ ಜೀವನದಲ್ಲಿ
ಏನೇನು ನಡೆಯುತ್ತದೆ ಅದು ಈ ಮೂರು ಗುಣಗಳ ಪ್ರಕ್ರಿಯೆ. ನಾವು ನಾವಾಗಿ ಏನೂ ಮಾಡುವುದಿಲ್ಲ. ಬದಲಿಗೆ ಎಲ್ಲವೂ ತ್ರಿಗುಣಗಳ
ಪ್ರಭಾವದಿಂದ ನಡೆಯುತ್ತಿರುತ್ತದೆ. ಪ್ರಕೃತಿಯಿಂದ ಬಂದು, ನಮ್ಮ ಸ್ವರೂಪವನ್ನು ಮುಚ್ಚಿ ಅವು ಕೆಲಸ ಮಾಡುತ್ತಿರುತ್ತವೆ. ಹಾಗಾಗಿ ಒಬ್ಬ ವ್ಯಕ್ತಿಯ ಮೇಲ್ನೋಟದ ವರ್ತನೆಯಿಂದ ಆತನ
ನಿಜ ಸ್ವಭಾವವನ್ನು ಅರಿಯುವುದು ಸಾಧ್ಯವಾಗುವುದಿಲ್ಲ.
ಈ ಕಾರಣದಿಂದ ನಾವು ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ನಿರ್ವೀಕಾರರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು.
ಸತ್ವಕ್ಕೆ
ಶ್ರುತಿಗೂಡಿದ ಮನಸ್ಸು ಸತ್ವಕ್ಕೆ ಅನುಗುಣವಾದ ವಿಷಯವನ್ನೇ ಗ್ರಹಿಸುತ್ತದೆ. ಅಂಥಹ ವ್ಯಕ್ತಿ ಎಂದೂ ‘ನಾನು ಮಾಡಿದೆ’ ಎಂದು ಭ್ರಮೆ ಪಡುವುದಿಲ್ಲ. ಇಲ್ಲಿ ಗುಣಗಳಿಗಿಂತ ಬೇರೆಯಾದ ಕರ್ತಾ ಇಲ್ಲ
ಎಂದಿದ್ದಾರೆ. ಜಡಕ್ಕೆ ಎಂದೂ ಕರ್ತಾ ಎನ್ನುವುದಿಲ್ಲ. ಆದ್ದರಿಂದ ಗುಣ ಅಂದರೆ ಕೇವಲ ಜಡವಾದ ಗುಣವಲ್ಲ.
ಅದಕ್ಕೆ ಅಭಿಮಾನಿಯಾದ ಚೈತನ್ಯವನ್ನು ಗುರುತಿಸು ಎನ್ನುವ ಸಂದೇಶ ಈ
ಶ್ಲೋಕದಲ್ಲಿದೆ.[ಶ್ಲೋಕ ೧೭ರಲ್ಲಿ ನಾವು ಈ ಬಗ್ಗೆ ಚರ್ಚಿಸಿದ್ದೇವೆ]. ಕರ್ತೃತ್ವದಲ್ಲಿ ಅನೇಕ ವಿಧ. ಇಚ್ಛಾಪೂರ್ವಕ ಕೃತಿ ಎಲ್ಲಿದೆಯೋ ಅದು ಕರ್ತಾ. ಇದು ಇರುವುದು ಚೇತನಕ್ಕೆ ಮಾತ್ರ.
ಆದರೆ ನಿಜವಾದ ಕರ್ತೃತ್ವ ‘ಸ್ವತಂತ್ರ ಇಚ್ಛಾಪೂರ್ವಕ ಕೃತಿ’. ಇದು ಇರುವುದು ಕೇವಲ ಭಗವಂತನಲ್ಲಿ. ‘ನಾಹಂ ಕರ್ತಾ ಹರಿಃ ಕರ್ತಾ’ ಎನ್ನುವ ಪ್ರಸಿದ್ಧವಾದ ಮಾತು ನಮಗೆ ತಿಳಿದೇ ಇದೆ. ಇದನ್ನು ಮೊಕ್ಷಧರ್ಮಪರ್ವದಲ್ಲಿ ಈ ರೀತಿ ಹೇಳಿದ್ದಾರೆ:
ನಾಹಂ ಕರ್ತಾ ನ
ಕರ್ತಾ ತ್ವಂ ಕರ್ತಾಯಸ್ತು ಸದಾ ಪ್ರಭುಃ ||
ಸೋSಯಂ ಪಚತಿ ಕಾಲೋ ಮಾಮ್ ವೃಕ್ಷೇ ಫಲಂ ಇವಾಗತಂ || ೧೨-೨೨೦-೮೪ ||
“ನೀನೂ ಮಾಡಿಲ್ಲ, ನಾನೂ ಮಾಡಿಲ್ಲ- ‘ಅವನು’ ನಮ್ಮಿಂದ ಮಾಡಿಸಿದ”. ಈ ಎಚ್ಚರ ಇದ್ದಾಗ ನಮಗೆ ಕರ್ತೃತ್ವದ ಅಹಂಕಾರ ಬರಲು ಸಾಧ್ಯವಿಲ್ಲ. ಇದರಿಂದ ದ್ವೇಷವಿಲ್ಲ, ಮಮಕಾರವಿಲ್ಲ. ‘ನಾನು ಮಾಡಿದೆ , ನನ್ನಿಂದಾಯ್ತು’ ಎನ್ನುವುದು ಕೇವಲ ಭ್ರಮೆ. ಈ ಜಗತ್ತಿನಲ್ಲಿ ಏನೇ ನಡೆದರೂ ಅದು ಈ ಮೂರು ಗುಣಗಳ ಪ್ರಭಾವದಿಂದ ನಡೆದಿದೆ. ಅದನ್ನು ಮೀರಿ
ನನ್ನಷ್ಟಕ್ಕೆ ನಾನು ಏನೂ ಮಾಡಿಲ್ಲ. ಈ ಅರಿವು ನಮಗೆ ಬರಬೇಕು.
ತ್ರಿಗುಣಗಳ ಪ್ರಭಾವ
ಜಡದಲ್ಲೂ ಇದೆ, ಚೇತನದಲ್ಲೂ ಇದೆ. ಅದರ ಪ್ರಭಾವದಿಂದ ಕ್ರಿಯೆ ನಡೆಯುತ್ತದೆ. ಯಾರೋ ಒಬ್ಬರು ನಿಮಗೆ ಬೈದರು
ಎಂದರೆ-ಆತನಲ್ಲಿ ಆ ಕ್ಷಣದಲ್ಲಿ ರಜೋಗುಣ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದರ್ಥ. ನಾವು ಈ ಅರಿವಿನಿಂದ ಆ ಕ್ಷಣದಲ್ಲಿ ವರ್ತಿಸಬೇಕು. ಇದನ್ನು ಶ್ರೀರಾಮಚಂದ್ರ ತನ್ನ
ಜೀವನದಲ್ಲಿ ನಡೆದು ತೋರಿಸಿದ್ದಾನೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ:
ಸ ಹಿ ನಿತ್ಯಂ
ಪ್ರಶಾಂತಂ ಮೃದುಪೂರ್ವಃ ಚ ಭಾಷತೆ |
ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆ ||ಅಯೋಧ್ಯಾ-೧.೧೫||
ರಾಮನಲ್ಲಿ ಯಾರಾದರೂ
ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲ. “ಮತ್ತೆ ಮಾತನಾಡೋಣ” ಎಂದು ಹೊರಟು ಹೋಗುತ್ತಿದ್ದನಂತೆ. ಏಕೆಂದರೆ ಒಬ್ಬ ವ್ಯಕ್ತಿಯಲ್ಲಿ ರಜೋಗುಣ ಕೆಲಸ ಮಾಡುತ್ತಿರುವಾಗ, ಅವರೊಂದಿಗೆ ನಾವು ರಜೋಗುಣದಿಂದ ವರ್ತಿಸಬೇಕಾದ ಪ್ರಸಂಗ ಬಂದುಬಿಡುತ್ತದೆ. ಇದು ಬಹಳ ಅಪಾಯಕಾರಿ.
ಆದ್ದರಿಂದ ರಜೋಗುಣಕ್ಕೊಳಗಾದವರೊಂದಿಗೆ ನೀನು ರಾಜಸನಾಗಬೇಡ. ತಟಸ್ಥನಾಗಿ ದೂರ ನಿಲ್ಲು(Act but never React). ಆಗ ಅವರ ರಜೋಗುಣ ತನ್ನಷ್ಟಕ್ಕೆ ಕುಸಿಯುತ್ತದೆ. ಸಿಟ್ಟು ಮಾಡುವವರ ಮುಂದೆ ಮೌನಿಯಾದರೆ
ಅವರ ಸಿಟ್ಟು ಬಹುಬೇಗ ಕರಗುತ್ತದೆ. ಹೀಗೆ ನಾವು ಈ ಗುಣಗಳ
ಪ್ರಭಾವವನ್ನು ಗುರುತಿಸಿದಾಗ ನಮ್ಮ ಬದುಕಿನ ನಡೆಯೂ ಬೇರೆಯಾಗುತ್ತದೆ.
ಮೇಲೆ ಹೇಳಿರುವ
ವಿಷಯವನ್ನಷ್ಟೇ ತಿಳಿದರೆ ಸಾಲದು. ಈ ತ್ರಿಗುಣಗಳನ್ನು ಮೀರಿ ನಿಂತವ ಭಗವಂತ. ಅವನನ್ನು ತಿಳಿದಾಗ ನೀನು ತ್ರಿಗುಣಗಳನ್ನು ಮೀರಿ ನಿಲ್ಲಲು
ಸಹಾಯವಾಗುತ್ತದೆ. ಆ ಭಗವಂತನನ್ನು ಸೇರಲು ನಾನು ಈ ತ್ರಿಗುಣಗಳ
ಪ್ರಭಾವದಿಂದ ಹೊರ ಬರಬೇಕು ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. “ಇಂಥವರ ಮನಸ್ಸು
ನನ್ನಲ್ಲಿ ನೆಲೆಗೊಳ್ಳುತ್ತದೆ ಮತ್ತು ಅದರಿಂದಾಗಿ ಮುಂದೆ ಅವರು ನನ್ನನ್ನು ಬಂದು ಸೇರಿ ನನ್ನಲ್ಲೇ ನೆಲೆಸುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕಕ್ಕೆ
ಇನ್ನೊಂದು ಮುಖವಿದೆ. “ಗುಣೇಭ್ಯಃ ಅನ್ಯಂ ಕರ್ತಾರಂ ಯದಾ ದ್ರಷ್ಟಾ ಅನುಪಶ್ಯತಿ ತದಾ ಸಃ ‘ನಾ’ ಭವತಿ”. ಇಲ್ಲಿ “ಗುಣೇಭ್ಯಃ ಅನ್ಯಂ” ಅಂದರೆ ತ್ರಿಗುಣಮಾನಿನಿಯಾಗಿರತಕ್ಕಂತಹ, ಗುಣಶಬ್ದವಾಚ್ಯಳಾದ, ಶ್ರೀ-ಭೂ-ದುರ್ಗ ನಾಮಕಳಾದ, ಮಹಾಲಕ್ಷ್ಮಿಗಿಂತಲೂ ಅತೀತವಾದ ಒಂದು ಶಕ್ತಿ. ಅವನೇ ನಿಜವಾದ ಕರ್ತಾ.
ಯಾರಾತ? ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ:
ಯದಾ ಪಶ್ಯಃ ಪಶ್ಯತೇ
ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ || ೩-೧-೩||
ಯಾರು ಚತುರ್ಮುಖನಿಗೂ
ತಂದೆಯೋ, ಯಾರು ಚಿತ್ಪ್ರಕೃತಿಗೂ ನಿಯಾಮಕನೋ, ಯಾರು ಸಮಸ್ತ ವೇದಗಳಿಂದ ವಾಚ್ಯನೋ –ಅವನೊಬ್ಬನೆ ಕರ್ತಾ. ಇದನ್ನು ತಿಳಿದವನು ನಿಜವಾದ ಮಾನವ.
ಎಲ್ಲಾ ಅಧ್ಯಾತ್ಮ
ಸಾಧನೆ ಮಾಡುವ ಸೌಕರ್ಯವಿರುವ ಶರೀರ-ಮನುಷ್ಯ ಶರೀರ ಮಾತ್ರ. ಅಂಥಹ ಶರೀರವನ್ನು ಉಪಯೋಗಿಸಿಕೊಳ್ಳುವವ ನರ. ಧರ್ಮ-ಅರ್ಥ-ಕಾಮಗಳಿಂದ ಬಿಡಿಸಿಕೊಳ್ಳುವುದು ಎಂದರೆ ಸತ್ವ-ರಜಸ್ಸು-ತಮೋಗುಣಗಳಿಂದ
ಬಿಡಿಸಿಕೊಂಡು ಭಗವಂತನನ್ನು ಸೇರುವುದು. ಇದು ಮನುಷ್ಯನ ಜೀವನದ ಗುರಿ. “ಈ ಮೂರು ಗುಣಗಳು ನನ್ನಲ್ಲಿ ಕೆಲಸ ನಡೆಸಿವೆ, ನಾನು ಈ ಪ್ರಭಾವದಿಂದ ಕಳಚಿಕೊಂಡು ಮೇಲೇರಬೇಕು” ಎನ್ನುವ ಎಚ್ಚರವಿರುವುದು ಮನುಷ್ಯನಿಗೆ ಮಾತ್ರ.
ಈ ಎಚ್ಚರದಿಂದಾಗಿ “ಮದ್ಭಾವಂ ಸೋSಧಿಗಚ್ಛತಿ”-ಅವನಲ್ಲಿ ಭಕ್ತಿಜ್ಞಾನಗಳು ಮನಸ್ಸಿನಲ್ಲಿ ತುಂಬಿ ಆತ ಮೋಕ್ಷವನ್ನು ಸೇರುತ್ತಾನೆ.
· ಶ್ಲೋಕ - 20
ಗುಣಾನೇತಾನತೀತ್ಯ
ತ್ರೀನ್ ದೇಹೀ ದೇಹಸಮುದ್ಭವಾನ್ ।
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋSಮೃತಮಶ್ನುತೇ ॥೨೦॥
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋSಮೃತಮಶ್ನುತೇ ॥೨೦॥
ಗುಣಾನ್ ಏತಾನ್
ಅತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಾನ್ ।
ಜನ್ಮ ಮೃತ್ಯು ಜರಾ
ದುಃಖೈಃ ವಿಮುಕ್ತಃ ಅಮೃತಮ್ ಅಶ್ನುತೇ—ದೇಹದಲ್ಲಿ ಮೂಡಿಬರುವ
ಈ ಮೂರು ಗುಣಗಳನ್ನು ದಾಟಿದಾಗ ಜೀವ ಹುಟ್ಟು ಸಾವು
ಮುಪ್ಪಿನ ದುಃಖದಿಂದಲು ಪಾರಾಗಿ ಅಮರನಾಗುತ್ತಾನೆ.
ನಮ್ಮ ಸ್ವರೂಪವನ್ನು
ಮುಚ್ಚಿ ಗಾಢವಾಗಿ ಪರಿಣಾಮಬೀರುವ ಈ ಮೂರು ಗುಣಗಳನ್ನು ನಾವು ದಾಟಬೇಕು. [ಇಲ್ಲಿ ಮೂರು ಗುಣದಲ್ಲಿ ಸತ್ವವನ್ನು ದಾಟುವುದು ಎಂದರೆ
ಸ್ಥೂಲ ಸತ್ವವನ್ನು ದಾಟಿ, ಸೂಕ್ಷ್ಮ ಸತ್ವವನ್ನು ಸೇರುವುದು ಎಂದರ್ಥ]. ಹೀಗೆ ಮೂರು ಗುಣಗಳನ್ನು
ದಾಟಿ ತ್ರಿಗುಣಾತೀತನಾದರೆ, ಆಗ ನಾವು ಈ ಸಂಸಾರದ
ಹುಟ್ಟು-ಸಾವು-ರೋಗ-ಮುಪ್ಪು-ದುಃಖ ಎಲ್ಲವನ್ನು ದಾಟಿ ಭಗವಂತನನ್ನು ಸೇರಿ ಅಮರರಾಗಬಹುದು. ಇದರಿಂದ ಎಂದೂ ಹುಟ್ಟು ಸಾವಿಲ್ಲದ ಆನಂದದ ಸ್ಥಿತಿಯಾದ ಮೋಕ್ಷವನ್ನು ಪಡೆಯಲು ಸಾಧ್ಯ.
· ಶ್ಲೋಕ - 21
ಇಲ್ಲಿ ಕೃಷ್ಣ
ತ್ರಿಗುಣವನ್ನು ದಾಟಿದಾಗ ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ. ಹೀಗೆ ಹೇಳಿದಾಗ ಸಹಜವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇ ಪ್ರಶ್ನೆಯನ್ನು ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನ ಮುಂದಿಡುತ್ತಾನೆ.
ಅರ್ಜುನ ಉವಾಚ ।
ಕೈರ್ಲಿಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ ॥೨೧॥
ಕೈರ್ಲಿಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ ॥೨೧॥
ಅರ್ಜುನ
ಉವಾಚ-ಅರ್ಜುನ ಕೇಳಿದನು :
ಕೈಃ ಲಿಂಗೈಃ ತ್ರೀನ್
ಗುಣಾನ್ ಏತಾನ್ ಅತೀತಃ ಭವತಿ ಪ್ರಭೋ ।
ಕಿಮ್ ಆಚಾರಃ ಕಥಮ್ ಚ
ಏತಾನ್ ತ್ರೀನ್ ಗುಣಾನ್ ಅತಿವರ್ತತೇ—ಒಡೆಯನೆ, ಯಾವ ಕುರುಹುಗಳಿಂದ ಈ ಮೂರು ಗುಣಗಳನ್ನು
ದಾಟಿದವನೆನ್ನಿಸುತ್ತಾನೆ ? ಅವನ ನಡೆವಳಿಕೆ ಎಂಥದು ? ಹೇಗೆ ಈ ಮೂರು ಗುಣಗಳನ್ನು ದಾಟುತ್ತಾನೆ?
ನಮ್ಮ ನಿಮ್ಮೆಲ್ಲರ
ಪರವಾಗಿ ಅರ್ಜುನ ಕೃಷ್ಣನಲ್ಲಿ ಪ್ರಶ್ನೆ ಹಾಕುತ್ತಾನೆ. ಆತ ಕೇಳುತ್ತಾನೆ: “ಮೂರು ಗುಣಗಳನ್ನು ದಾಟಿದವನೊಬ್ಬನಿದ್ದರೆ ಅವನನ್ನು ಗುರುತಿಸುವುದು ಹೇಗೆ? ಆತನ ಕುರುಹು ಏನು? ಅವನ ನಡತೆ ಹೇಗಿರುತ್ತದೆ? ಈ ಮೂರು ಗುಣಗಳನ್ನು ಆತ ಹೇಗೆ ದಾಟುತ್ತಾನೆ?”
ಇಲ್ಲಿ ಅರ್ಜುನ
ಕೃಷ್ಣನನ್ನು “ಪ್ರಭೋ” ಎಂದು ಸಂಬೋಧಿಸುತ್ತಾನೆ. “ನನ್ನ ಪ್ರಶ್ನೆಗಳಿಗೆ ಖಂಡಿತವಾಗಿ ಉತ್ತರ
ಕೊಡಬಲ್ಲವ-ನೀನೊಬ್ಬನೆ” ಎನ್ನುವ ಧ್ವನಿ ಮತ್ತು ‘ಪೂರ್ಣ ಶರಣಾಗತಿ’ ಈ ಸಂಬೋಧನೆಯ ಹಿಂದಿದೆ. ಭಗವಂತ ಅರ್ಜುನನ ಈ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಉತ್ತರಿಸಿದ್ದಾನೆ.
· ಶ್ಲೋಕ - 22
ಭಗವಾನುವಾಚ ।
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥೨೨॥
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥೨೨॥
ಭಗವಾನ್ ಉವಾಚ-ಭಗವಂತ
ಹೇಳಿದನು :
ಪ್ರಕಾಶಮ್ ಚ
ಪ್ರವೃತ್ತಿಮ್ ಚ ಮೋಹಮ್ ಏವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ
ನ ನಿವೃತ್ತಾನಿ ಕಾಂಕ್ಷತಿ—ಪಾಂಡವ, ಲೌಕಿಕದ ತಿಳಿವಿನ ಬೆಳಕನ್ನಾಗಲಿ, ಕಾಯಕದ ಹುರುಪನ್ನಾಗಲಿ, ಭ್ರಾಂತಿಯನ್ನೆ ಆಗಲಿ- ಇದ್ದಾಗ ದ್ವೇಷಿಸುವುದಿಲ್ಲ; ಇರದಾಗ ಬಯಸುವುದಿಲ್ಲ.
ತ್ರಿಗುಣಗಳನ್ನು
ದಾಟಿದವ ಯಾವುದೋ ಅನಪೇಕ್ಷವಾದುದು ಬಂದಾಗ ಅದನ್ನು ದ್ವೇಷಿಸುವುದಿಲ್ಲ; ಅಪೇಕ್ಷಿತವಾದುದು ಬಾರದೇ ಇದ್ದಾಗ ಅದನ್ನು
ಅಪೇಕ್ಷಿಸುವುದಿಲ್ಲ. “ಯಾವುದು ಬೇಕು, ಯಾವುದು ಬೇಡ ಎನ್ನುವುದು ನನಗಿಂತ ಚನ್ನಾಗಿ
ಭಗವಂತನಿಗೆ ಗೊತ್ತಿದೆ. ಅದಕ್ಕಾಗಿ ನಾನೇಕೆ
ತಲೆ ಕೆಡಿಸಿಕೊಳ್ಳಬೇಕು” ಎನ್ನುವ ನಿರ್ಲಿಪ್ತತೆ ಆತನಲ್ಲಿರುತ್ತದೆ. ಜೀವನದಲ್ಲಿ ಏನು ಬಂತೋ ಅದನ್ನು ಆತ
ಸ್ವಾಗತಿಸುತ್ತಾನೆ. ವ್ಯಾಸರು ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಮಾತನ್ನು ಹೇಳಿದ್ದಾರೆ:
ಏವಂ ಅಪ್ಯ ಅಶುಭಂ
ಕರ್ಮ ನ ಭೂತಂ ನ ಭವಿಷ್ಯತಿ ||೧೨-೩೨-೧೮||
“ಆಗಬಾರದ್ದು ಹಿಂದೆ ಆಗಿಲ್ಲ, ಮುಂದೆ ಆಗುವುದೂ ಇಲ್ಲ. ಏನು ಆಗಬೇಕೋ ಅದು
ಘಟಿಸಿಯೇ ತೀರುತ್ತದೆ. ಅದನ್ನು ನಾನು ಬೇಡ ಎಂದು
ದ್ವೇಷಿಸಿ ಫಲವೇನು?”. ಆದ್ದರಿಂದ ತ್ರಿಗುಣವನ್ನು ದಾಟಿದವನು- ಬಂದಾಗ 'ಬೇಡ' ಎಂದು ದ್ವೇಷಿಸುವುದಿಲ್ಲ; ಇಲ್ಲದ್ದನ್ನು ಬಯಸುವುದೂ ಇಲ್ಲ. ಎಲ್ಲವನ್ನು ನಿರ್ವೀಕಾರನಾಗಿ ನೋಡುತ್ತಾ, ತುಂಬಿದ ಕೊಡದಂತೆ ತುಳುಕದೆ ಬದುಕುತ್ತಾನೆ.
ಲೋಕದಲ್ಲಿ ಕೆಲವರಿಗೆ
ಸತ್ವದಲ್ಲಿ ಆಸಕ್ತಿಯಾದರೆ ಇನ್ನು ಕೆಲವರಿಗೆ ಕೇವಲ ಪ್ರವೃತ್ತಿ. ಮತ್ತೆ ಕೆಲವರಿಗೆ ಯಾವ ಆಸಕ್ತಿಯೂ ಇಲ್ಲ- ಕತ್ತಲನ್ನು ಕತ್ತಲು ಎಂದು ತಿಳಿಯದೆ ಕತ್ತಲಲ್ಲೇ ಬದುಕುವವರಿದ್ದಾರೆ. ಇದು
ಸರ್ವೇಸಾಮಾನ್ಯವಾಗಿ ಕಾಣುವ ವಿಚಾರ. ತ್ರಿಗುಣವನ್ನು ಮೀರಿ ನಿಂತವರು ಇದನ್ನು ನೋಡಿ ತಮ್ಮ ಮನಸ್ಸನ್ನು ವಿಕಾರ ಮಾಡಿಕೊಳ್ಳುವುದಿಲ್ಲ. “ಅವರವರ ಗುಣ ಪ್ರಭಾವಕ್ಕನುಗುಣವಾಗಿ ಎಲ್ಲವೂ
ನಡೆಯುತ್ತಿದೆ” ಎಂದು ತಿಳಿದು ತಟಸ್ಥರಾಗಿ ಬದುಕುತ್ತಾರೆ.
ಸತ್ಯವೆಂದು ಕಂಡದ್ದನ್ನು ಇವರು ಹೇಳುತ್ತಾರೆ. ಆದರೆ ಎಂದೂ ವಾದ ವಿವಾದವನ್ನು ಬೆಳೆಸುವುದಿಲ್ಲ. “ಎಲ್ಲವೂ ಭಗವಂತನ ಲೀಲೆ, ಆತ ಮಾಡಿದ ವ್ಯವಸ್ಥೆ” ಎಂದು ಎಲ್ಲವನ್ನು
ಸ್ವೀಕರಿಸುತ್ತಾರೆ. ಗೀತೆಯ ಹನ್ನೆರಡನೇ ಅಧ್ಯಾಯದಲ್ಲಿ ‘ನಿಜವಾದ ಭಕ್ತ’ ಹೇಗಿರುತ್ತಾನೆ ಎಂದು ವಿವರಿಸುವಾಗ ಕೃಷ್ಣ ಈ ಶ್ಲೋಕದಲ್ಲಿ ಕೊಟ್ಟ ವಿವರಣೆಯನ್ನೇ ಕೊಟ್ಟಿದ್ದಾನೆ. ಪೂರ್ಣಭಕ್ತಿ ಎಂದರೆ ಹೊರಗಿನ ಗುಣವನ್ನು ಮೀರಿ ನಿಲ್ಲುವುದು.
ಇಲ್ಲಿ ವ್ಯಾಸರು ‘ಪಾಂಡವ’ ಎನ್ನುವ
ವಿಶೇಷಣವನ್ನು ಬಳಸಿದ್ದಾರೆ. ಪಾಂಡಾ ಎಂದರೆ ಜ್ಞಾನಿ. ಪಾಂಡವ ಎಂದರೆ ಜ್ಞಾನವನ್ನು ಗುರುತಿಸಿ ತಲೆಬಾಗುವವನು. “ತ್ರಿಗುಣಾತೀತನಾಗುವ ಮೊದಲು ನೀನು ಪಾಂಡವನಾಗಬೇಕು” ಎನ್ನುವ ಸಂದೇಶ ಈ
ವಿಶೇಷಣದ ಹಿಂದಿದೆ.
· ಶ್ಲೋಕ - 23
ಉದಾಸೀನವದಾಸೀನೋ
ಗುಣೈರ್ಯೋ ನ ವಿಚಾಲ್ಯತೇ ।
ಗುಣಾ ವರ್ತಂತ ಇತ್ಯೇವ ಯೋSವತಿಷ್ಠತಿ ನೇಂಗತೇ ॥೨೩॥
ಗುಣಾ ವರ್ತಂತ ಇತ್ಯೇವ ಯೋSವತಿಷ್ಠತಿ ನೇಂಗತೇ ॥೨೩॥
ಉದಾಸೀನವತ್ ಆಸೀನಃ
ಗುಣೈಃ ಯಃ ನ ವಿಚಾಲ್ಯತೇ ।
ಗುಣಾಃ ವರ್ತಂತ ಇತಿ ಏವ ಯಃ ಅವತಿಷ್ಠತಿ ನ ಇಂಗತೇ –ಉದಾಸೀನನಂತೆ ಇದ್ದುಬಿಡುತ್ತಾನೆ. ಗುಣಗಳ ಸೆಳೆತಕ್ಕೆ ಕದಲುವುದಿಲ್ಲ. ಗುಣಗಳು ಇರುವಂಥವೆ ಎಂದು ತೆಪ್ಪಗೆ ಇದ್ದು ಬಿಡುತ್ತಾನೆ. ಅವುಗಳ ತಾಳಕ್ಕೆ
ತಾನು ಕುಣಿಯುವುದಿಲ್ಲ.
ಪ್ರಾಪಂಚಿಕ
ವ್ಯವಹಾರದಲ್ಲಿ ಈತ ಉದಾಸೀನನಂತೆ ಇದ್ದುಬಿಡುತ್ತಾನೆ. ನಮಗೆ ಬೇಕು ಬೇಡಗಳು ಬರುವುದು ತ್ರಿಗುಣಗಳಿಂದ. ತ್ರಿಗುಣಾತೀತ- “ಹಾಗಾಗಬೇಕು-ಹೀಗೇ ಆಗಬೇಕು” ಎಂದು ಬಯಸುವುದಿಲ್ಲ. “ಹೇಗಾಗಬೇಕೋ ಹಾಗೆ ಭಗವಂತ ಮಾಡುತ್ತಾನೆ” ಎನ್ನುವ ನಂಬಿಕೆ ಅವನಲ್ಲಿರುತ್ತದೆ.[ಇಲ್ಲಿ ಒಂದು ವಿಷಯವನ್ನು ನಾವು ತಿಳಿದುಕೊಳ್ಳಬೇಕು.
ಪ್ರಪಂಚದಲ್ಲಿ ನಡೆಯುವ ಘಟನೆಗಳು ನಮ್ಮ ಅಧೀನವಲ್ಲ. ನಾವು
ಆಗಬಾರದು ಅಂದುಕೊಳ್ಳುವುದು ಆಗಬಹುದು, ಆಗಬೇಕು
ಅಂದುಕೊಳ್ಳುವುದು ಆಗದೇ ಇರಬಹುದು. ಹೀಗಿರುವಾಗ ‘ಹೀಗೇ ಆಗಬೇಕು’ ಎಂದು ವ್ಯರ್ಥವಾಗಿ ಮನಸ್ಸನ್ನು ಉದ್ವೇಗಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ]. ಹೀಗೆ ಬದುಕಿದಾಗ-ಬಯಸಿದ್ದು ಆಗದಿದ್ದಾಗ ಕೋಪವಿಲ್ಲ, ಆದಾಗ ಹಾರಾಟವಿಲ್ಲ. ಮನಸ್ಸು ಪ್ರಸನ್ನವಾಗಿರುತ್ತದೆ.
ಇಂದ್ರಿಯಗಳು
ಗುಣಗಳಲ್ಲಿ ಇರುತ್ತವೆ, ಇಂದ್ರಿಯಗಳ ಹಿಂದೆ ಗುಣಗಳಿರುತ್ತವೆ. ಆದರೆ ತ್ರಿಗುಣಾತೀತ ಇವೆಲ್ಲವನ್ನೂ ತಿಳಿದು, ತಲೆಕೆಡಿಸಿಕೊಳ್ಳದೆ, ಯಾವುದೇ ಕ್ರಿಯೆಯಲ್ಲಿ ಕೂಡ[ತಾತ್ಕಾಲಿಕ ಕ್ರಿಯೆಯಲ್ಲಿ ಕೂಡ] ಚಪಲವಿಲ್ಲದೆ ಬದುಕುತ್ತಾನೆ.
· ಶ್ಲೋಕ - 24
ಸಮದುಃಖಸುಖಃ
ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ ॥೨೪॥
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ ॥೨೪॥
ಸಮ ದುಃಖಸುಖಃ
ಸ್ವಸ್ಥಃ ಸಮ ಲೋಷ್ಟ ಆಶ್ಮ ಕಾಂಚನಃ ।
ತುಲ್ಯ ಪ್ರಿಯ
ಅಪ್ರಿಯಃ ಧೀರಃ ತುಲ್ಯ ನಿಂದಾತ್ಮ ಸಂಸ್ತುತಿಃ – ಸುಖ-ದುಃಖವನ್ನು ಸಮನಾಗಿ ಕಾಣುತ್ತಾನೆ. ತನ್ನಲ್ಲೆ ತಾನು ಇದ್ದುಬಿಡುತ್ತಾನೆ. ಮಣ್ಣು, ಕಲ್ಲು, ಚಿನ್ನ ಅವನಿಗೆ ಒಂದೆ ತರ. ಸಾಧನೆಯಿಂದ ಬಗೆ ಗಟ್ಟಿಗೊಂಡ ಅವನಿಗೆ ಪ್ರಿಯವೂ ಒಂದೆ; ಅಪ್ರೀಯವೂ ಒಂದೆ. ತೆಗಳಿಕೆಯೂ ಒಂದೆ. ಹೊಗಳಿಕೆಯೂ ಒಂದೆ.
ತ್ರಿಗುಣಾತೀತ ಸರ್ವ
ಸುಖ-ದುಃಖವನ್ನೂ ಸಮನಾಗಿ ಕಾಣುತ್ತಾನೆ. ಏಕೆಂದರೆ ನಮಗೆ ಮೇಲ್ನೋಟಕ್ಕೆ ಸುಖವೆಂದು ಕಾಣುವುದು ನಿಜವಾಗಿ ಸುಖವಾಗಿ
ಇರಬೇಕಿಂದಿಲ್ಲ. ಅದೇ ರೀತಿ ದುಃಖ ಕೂಡ. ಇದನ್ನು
ತಿಳಿದಾಗ ಎಲ್ಲವೂ ಭಗವಂತನ ಲೀಲೆ ಎನ್ನುವ ಭಾವನೆ ಮನಸ್ಸಿನಲ್ಲಿ ಹುಟ್ಟುತ್ತದೆ. ಆಗ ಎಲ್ಲವನ್ನು ಸಮನಾಗಿ ಕಾಣುವ ಕ್ಷಮತೆ ನಮ್ಮಲ್ಲಿ
ಬೆಳೆಯುತ್ತದೆ.
ನಾವು ಹೇಗೆ
ನಾಟಕದಲ್ಲಿ ನಡೆಯುವ ದೃಶ್ಯವನ್ನು ಪ್ರೇಕ್ಷಕರಂತೆ ಕಾಣುತ್ತೇವೋ, ಹಾಗೆ ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ಪ್ರೇಕ್ಷಕರಂತೆ ಕಾಣಲು ಅಭ್ಯಾಸ
ಮಾಡಿಕೊಳ್ಳಬೇಕು. ಅದು ಸುಖಮಯವಿರಬಹುದು, ದುಃಖಮಯವಿರಬಹುದು-ಆದರೆ ನಾವು ಭಗವಂತನ ಒಂದೊಂದು
ಕ್ರಿಯಯನ್ನೂ ಆಸ್ವಾಧಿಸಬೇಕು. ಜೀವನದಲ್ಲಿ ಬರುವ ತಾತ್ಕಾಲಿಕ
ದುಃಖ ನಮ್ಮ ಶಾಶ್ವತ ಸುಖಕ್ಕೆ ಕಾರಣವಾಗಿರುತ್ತದೆ. ಆದರೆ ಅದು ನಮಗೆ
ತಿಳಿದಿರುವುದಿಲ್ಲ ಅಷ್ಟೆ. ತ್ರಿಗುಣಾತೀತರು ಈ ವಿಷಯವನ್ನು ಅರಿತು ಸುಖ-ದುಃಖವನ್ನು ಸಮನಾಗಿ ಕಾಣುತ್ತ ಆನಂದದಿಂದ ಬದುಕುತ್ತಿರುತ್ತಾರೆ.
ಹಿಂದೆ ಸ್ಥಿತಪ್ರಜ್ಞ
ಮತ್ತು ಭಕ್ತರ ಲಕ್ಷಣ ಹೇಳುವಾಗ ಹೇಳಿದ ಮಾತುಗಳನ್ನು ಕೃಷ್ಣ ಇಲ್ಲಿ ಮತ್ತೆ ಪುನರುಚ್ಛರಿಸುತ್ತಾನೆ. ತ್ರಿಗುಣಾತೀತನಿಗೆ ಮಣ್ಣು, ಅಮೂಲ್ಯ ರತ್ನ, ಚಿನ್ನ-ಎಲ್ಲವೂ ಒಂದೆ. ಆತನಿಗೆ ಚಿನ್ನವಾಗಲಿ, ರತ್ನವಾಗಲಿ ಅಮೂಲ್ಯ ಎಂದು ಕಾಣುವುದಿಲ್ಲ. ಆತನಿಗೆ ಅಮೂಲ್ಯ-ಜ್ಞಾನವೊಂದೆ. ಈ ಕಾರಣದಿಂದ ಆತ
ಹಣದಲ್ಲಾಗಲಿ, ಮುತ್ತು-ರತ್ನದಲ್ಲಾಗಲಿ, ಬಂಗಾರದಲ್ಲಾಗಲಿ ಯಾವುದೇ ರೀತಿಯ ಅಭಿಲಾಷೆ
ತೋರುವುದಿಲ್ಲ. ಆದ್ದರಿಂದ ಆತ ಸಂತೋಷದಿಂದ ಬದುಕುತ್ತಾನೆ.
ಭಾಗವತದ ಮೂರನೇ ಸ್ಕಂದದಲ್ಲಿ ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ:
ಯಶ್ಚ ಮೂಢತಮೋ ಲೋಕೇ
ಯಶ್ಚ ಬುದ್ಧೇಃ ಪರಂ ಗತಃ
ತಾವುಭೌ ಸುಖಮೇಧೇತೇ
ಕ್ಲಿಶ್ಯತ್ಯಂತರಿತೋ ಜನಃ ||೩-೭-೧೭||
ಒಬ್ಬ ಮೂಢ ಮತ್ತು
ಇನ್ನೊಬ್ಬ ಜ್ಞಾನಿ- ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು ಎಂದು. ಏಕೆಂದರೆ ಇವರಿಗೆ ಹಣದ ಮೋಹವಿರುವುದಿಲ್ಲ. ಆದರೆ ಇವೆರಡರ ಮಧ್ಯದಲ್ಲಿರುವವರು-ಜೀವನದ ಅರ್ಥ ತಿಳಿಯದೆ
ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ.
ಹೇಗೆ ಜ್ಞಾನಿಗಳು
ತಮ್ಮ ಜೀವನದಲ್ಲಿ ಈ ತತ್ವವನ್ನು ಅಳವಡಿಸಿಕೊಂಡು ಬದುಕುತ್ತಾರೆ ಎನ್ನುವುದಕ್ಕೆ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಉತ್ತಮ ನಿದರ್ಶನ.
ಮೈಸೂರು ಮಹಾರಾಜರ ಕಾಲದಲ್ಲಿ ಸೋದೆಮಠದ ಸ್ವಾಮಿಗಳಾಗಿದ್ದ
ವಿಶ್ವಪ್ರೀಯತೀರ್ಥರು (ವೃಂದಾವನಾಚಾರ್ಯರು) ಬದುಕಿದ ಜೀವನ ಶೈಲಿ ಇದಕ್ಕೆ ಇನ್ನೊಂದು ಉತ್ತಮ ದೃಷ್ಟಾಂತ.
ಈ ಶ್ಲೋಕವನ್ನು
ಇನ್ನೊಂದು ಮುಖದಲ್ಲಿ ನೋಡಿದಾಗ ನಮಗೆ ಇನ್ನೂ ಒಂದು ವಿಶೇಷ ಸಂದೇಶ ತಿಳಿಯುತ್ತದೆ. ಒಬ್ಬ ನಿಜವಾದ ಭಕ್ತ(ತ್ರಿಗುಣಾತೀತ)ನ ಭಗವದ್ ಭಕ್ತಿ
ಆತನ ಜೀವನದಲ್ಲಿ ಬರುವ ಸುಖ-ದುಃಖಗಳಿಂದ ಏರುಪೇರಾಗುವುದಿಲ್ಲ.
ಬಡತನವಿರಲಿ-ಸಿರಿತನವಿರಲಿ ಈತ ನಿರಂತರ ಭಗವಂತನ ಭಕ್ತಿಯಲ್ಲಿ ತೊಡಗಿರುತ್ತಾನೆ. ಈತನ ಭಕ್ತಿಗೆ ಇನ್ನೊಬ್ಬರ ಪ್ರೀತಿ-ದ್ವೇಷ ಎಂದೂ ಮಾನದಂಡವಲ್ಲ. ಈ ರೀತಿ ತ್ರಿಗುಣಾತೀತರು ಎಲ್ಲ ಸ್ಥಿತಿಯಲ್ಲೂ ಸಮಾನತೆಯಿಂದ ಬದುಕುತ್ತಾರೆ.
· ಶ್ಲೋಕ - 25
ಮಾನಾಪಮಾನಯೋಸ್ತುಲ್ಯಸ್ತುಲ್ಯೋ
ಮಿತ್ರಾರಿಪಕ್ಷಯೋಃ ।
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥೨೫॥
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥೨೫॥
ಮಾನ ಅಪಮಾನಯೋಃ
ತುಲ್ಯಃ ತುಲ್ಯಃ ಮಿತ್ರ ಅರಿ ಪಕ್ಷಯೋಃ ।
ಸರ್ವಾರಂಭ
ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ -- ಸಮ್ಮಾನವೂ ಒಂದೆ; ಅಪಮಾನವೂ ಒಂದೆ. ಗೆಳೆಯರ ಬಳಗವೂ ಒಂದೆ; ಹಗೆಯರ ಬಳಗವೂ ಒಂದೆ. ಅವನು ಇಂಥ ಯಾವ
ಲೌಕಿಕದಲ್ಲೂ ತೊಡಗಿಕೊಳ್ಳುವುದಿಲ್ಲ. ಅಂಥವನು ‘ಗುಣಾತೀತ’ ಎನ್ನಿಸುತ್ತಾನೆ.
ತ್ರಿಗುಣಾತೀತರನ್ನು
ಒಬ್ಬರು 'ಮಹಾನ್ ಜ್ಞಾನಿ' ಎಂದು ಸಮ್ಮಾನಿಸಿ ಮಾತನಾಡಬಹುದು, ಇನ್ನೊಬ್ಬರು ಆತ 'ಅರೆಹುಚ್ಚ' ಎಂದು ನಿಂದಿಸಬಹುದು.
ಆದರೆ ಇದ್ಯಾವುದೂ ಅವರ ಮೇಲೆ ಪರಿಣಾಮಬೀರದು. ಇವರಿಗೆ ಸ್ನೇಹಿತರು ಎನ್ನುವ ಮೋಹವಾಗಲಿ, ಶತ್ರುಗಳು ಎನ್ನುವ ದ್ವೇಷವಾಗಲಿ ಇರುವುದಿಲ್ಲ. ಇವರು ಎಲ್ಲರನ್ನು ಅವರವರ ಯೋಗ್ಯತೆಗೆ
ತಕ್ಕಂತೆ ಕಾಣುತ್ತ, ಭಗವಂತನ ಭಕ್ತಿಗೆ ವಿರುದ್ಧವಾದ ಯಾವ
ಚಟುವಟಿಕೆಯಲ್ಲೂ ತೊಡಗದೆ ಬದುಕುತ್ತಾರೆ. ಇವರು ದೀರ್ಘಕಾಲದ ಯಾವುದೇ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ.
ಹೀಗೆ ಮೇಲಿನ ನಾಲ್ಕು
ಶ್ಲೋಕದಲ್ಲಿ ಹೇಳಿದ ಎಲ್ಲ ಸ್ವಭಾವವುಳ್ಳವರು ಗುಣಾತೀತರೆನಿಸುತ್ತಾರೆ.
· ಶ್ಲೋಕ - 26
ಇಲ್ಲಿಯ ತನಕ
ತ್ರಿಗುಣಗಳ ಬಗ್ಗೆ ಮತ್ತು ತ್ರಿಗುಣಾತೀತರ ಸ್ವಭಾವದ ಬಗ್ಗೆ ವಿವರಿಸಿದ ಕೃಷ್ಣ, ಕೊನೆಯ ಎರಡು
ಶ್ಲೋಕದಲ್ಲಿ ನಾವು ತ್ರಿಗುಣಾತೀತರಾಗುವ ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾನೆ. ನಮ್ಮ ಎಲ್ಲ ಪ್ರವೃತ್ತಿಯೂ ಈ ಮೂರು ಗುಣಗಳ
ಪರಿಮಿತಿಯಲ್ಲಿ ಇರುವಾಗ ತ್ರಿಗುಣವನ್ನು ಮೀರಿ
ನಿಲ್ಲುವುದು ನಮಗೆ ಕಲ್ಪನಾತೀತ. ಹಾಗಾಗಿ ಇಲ್ಲಿ ಕೃಷ್ಣ ನಮಗೆ ತ್ರಿಗುಣಾತೀತರಾಗಲು ಇರುವ ಏಕಮಾತ್ರ ಮಾರ್ಗವನ್ನು ವಿವರಿಸುತ್ತಾನೆ.
ಮಾಂ ಚ ಯೋSವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ॥೨೬॥
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ॥೨೬॥
ಮಾಮ್ ಚ ಯಃ
ಅವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸಃ ಗುಣಾನ್ ಸಮತೀತ್ಯ
ಏತಾನ್ ಬ್ರಹ್ಮಭೂಯಾಯ ಕಲ್ಪತೇ – ನನ್ನನ್ನು ಎಡೆಬಿಡದೆ ಭಕ್ತಿಯಿಂದ ಆರಾಧಿಸುವವನು ಈ ಗುಣಗಳ ಕಟ್ಟನ್ನು ಹರಿದು, ಚೇತನ ಪ್ರಕೃತಿಯಂತೆ ಭಗವಂತನ ಭಕ್ತಿಗೆ ಪಾತ್ರನಾಗುತ್ತಾನೆ.[ಚೇತನ ಪ್ರಕೃತಿಯನ್ನು
ಸೇರುತ್ತಾನೆ].
ನಾವು ನಾವಾಗಿ
ತ್ರಿಗುಣಾತೀತರಾಗಬೇಕು ಎಂದು ಪ್ರಯತ್ನಿಸಿದರೆ ಆ ಪ್ರಯತ್ನದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಎಲ್ಲ ಯೋಚನೆ
ತ್ರಿಗುಣದಲ್ಲೇ ಸುತ್ತುತ್ತಿರುತ್ತದೆ. ಇದೊಂದು ಚಕ್ರಭ್ರಮಣ. ಈ
ಚಕ್ರ ಭ್ರಮಣದಿಂದ ಪಾರು ಮಾಡಲು ಆ ಚಕ್ರಧಾರಿಯೇ ಬರಬೇಕು. ದ್ವಾದಶಸ್ತೋತ್ರದಲ್ಲಿ ಹೇಳುವಂತೆ: “ತ್ರಿಗುಣಾತೀತ ವಿಧಾರಕ ಪರಿತೋ ದೇಹಿ ಸುಭಕ್ತಿಮ್”. ತ್ರಿಗುಣಾತೀತರನ್ನು ಧಾರಣೆ ಮಾಡುವವ ಆ ಭಗವಂತ.
ಆದ್ದರಿಂದ ತ್ರಿಗುಣಾತೀತರಾಗಲು ಇರುವ ಮಾರ್ಗ ಒಂದೆ-ಆ
ಭಗವಂತನಲ್ಲಿ ಶರಣಾಗುವುದು. ಲಕ್ಷ್ಮೀಸಮೇತನಾದ ಆ ಭಗವಂತನಲ್ಲಿ ಏಕನಿಷ್ಠೆಯಿಂದ ಅನನ್ಯ ಭಕ್ತಿ ಮಾಡುವುದರಿಂದ – ಲಕ್ಷ್ಮಿಯಿಂದ ಹದಿನೈದು ಬಂಧನದ ಬೇಲಿಯನ್ನು ಧರಿಸಿ ಪ್ರಪಂಚಕ್ಕೆ ಬಂದ
ನಾವು, ಈ ಎಲ್ಲಾ ಬಂಧವನ್ನು ಕಳಚಿಕೊಂಡು ಮರಳಿ ತಾಯಿಯ ಮಡಿಲನ್ನು ಸೇರಬಹುದು.
· ಶ್ಲೋಕ - 27
ಬ್ರಹ್ಮಣೋ ಹಿ
ಪ್ರತಿಷ್ಠಾSಹಮಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥೨೭॥
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥೨೭॥
ಬ್ರಹ್ಮಣಃ ಹಿ ಪ್ರತಿಷ್ಠಾ ಅಹಮ್ ಅಮೃತಸ್ಯ ಅವ್ಯಯಸ್ಯ ಚ ।
ಶಾಶ್ವತಸ್ಯ ಚ
ಧರ್ಮಸ್ಯ ಸುಖಸ್ಯ ಐಕಾಂತಿಕಸ್ಯ ಚ –ಅಳಿವಿರದ ಬದಲಾಗದ
ಚಿತ್ ಪ್ರಕೃತಿಗೂ ನಾನೆ ಆಸರೆ-ನೆಲೆ. ಸನಾತನ
ಧರ್ಮಕ್ಕೆ ಮತ್ತು ಕೇವಲ ಸುಖಮಯವಾದ ಮೋಕ್ಷಕ್ಕೆ ಕೂಡ.
ಮೂರು ಗುಣಗಳನ್ನು
ಮೀರಿ ನಿಂತಾಗ ಜೀವದ ಸಹಜ-ಶಾಶ್ವತ ಧರ್ಮ ಅಭಿವ್ಯಕ್ತವಾಗುತ್ತದೆ. ಈ ಸ್ಥಿತಿಯಲ್ಲಿ ಬ್ರಹ್ಮತತ್ವವಾದ ಚಿತ್ ಪ್ರಕೃತಿ(ಶ್ರೀಲಕ್ಷ್ಮಿ)ಗೂ ಆಸರೆಯಾದ ಆ ಭಗವಂತವಂತನನ್ನು
ಮೋಕ್ಷದಲ್ಲಿ ಸೇರಬಹುದು.
ಇತಿ ಚತುರ್ದಶೋSಧ್ಯಾಯಃ
ಹದಿನಾಲ್ಕನೆಯ ಅಧ್ಯಾಯ ಮುಗಿಯಿತು
ಹದಿನಾಲ್ಕನೆಯ ಅಧ್ಯಾಯ ಮುಗಿಯಿತು
2 ಕಾಮೆಂಟ್ಗಳು:
||ಏವಂ ಅಪ್ಯ ಅಶುಭಂ ಕರ್ಮ ನ ಭೂತಂ ನ ಭವಿಷ್ಯತಿ || "No two things are equal not even the two leaves of a same tree". Hari sarvottama vayu jivottamma 🙏
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ