ಭಗವದ್ಗೀತೆ ಅಧ್ಯಾಯ-15


ಭಗವದ್ಗೀತೆ ಅಧ್ಯಾಯ-15 (ಶ್ಲೋಕ 1 ರಿಂದ 20)
·  ಶ್ಲೋಕ - 01
ಈ ಅಧ್ಯಾಯ ಗೀತೆಯಲ್ಲೇ ಅತ್ಯಂತ ಚಿಕ್ಕ ಅಧ್ಯಾಯ. ಇಲ್ಲಿ ಫಲಶ್ರುತಿಯ ಎರಡು ಶ್ಲೋಕಗಳನ್ನು ಬಿಟ್ಟರೆ, ಪ್ರಮೇಯ ಭಾಗವನ್ನು ಹೇಳುವ ಹದಿನೆಂಟು ಶ್ಲೋಕಗಳಿವೆ. ಈ ಹದಿನೆಂಟು ಶ್ಲೋಕದಲ್ಲಿ ಕೃಷ್ಣ ಇಡೀ ವಿಶ್ವದ ರಹಸ್ಯವನ್ನು ತೆರೆದಿಟ್ಟಿದ್ದಾನೆ. ಮಹಾಭಾರತ ಭಾರತೀಯ ತತ್ವಶಾಸ್ತ್ರದ ಸಾರವಾದರೆ, ಭಗವದ್ಗೀತೆ ಮಹಾಭಾರತದ ಸಾರ. ಇಂಥಹ ಭಗವದ್ಗೀತೆಯ ಸಾರ ಈ ಹದಿನೈದನೇ ಅಧ್ಯಾಯ. ಈ ಅಧ್ಯಾಯವನ್ನು ಅರ್ಥ ಮಾಡಿಕೊಂಡರೆ ಇಡೀ ಗೀತೆಯನ್ನಷ್ಟೇ ಅಲ್ಲ, ಇಡೀ ಭಾರತೀಯ ತತ್ವಶಾಸ್ತ್ರವನ್ನು ಅರ್ಥ ಮಾಡಿಕೊಂಡಂತೆ. ಶಂಕರಾಚಾರ್ಯರು ಈ ಅಧ್ಯಾಯಕ್ಕೆ ವ್ಯಾಖ್ಯಾನ ಬರೆಯುತ್ತಾ ಹೇಳುತ್ತಾರೆ: ನ ಕೇವಲ೦ ಗೀತಾರ್ಥಃ , ಕಿಂತು ಸರ್ವೋಪಿ ಶಾಸ್ತ್ರಾರ್ಥಃ ಅತ್ರ ಪರ್ಯವಸಿತಃ" ಎಂದು.ಇದು ಕೇವಲ ಗೀತೆಯ ಸಾರ ಅಲ್ಲ. ಎಲ್ಲ ಶಾಸ್ತ್ರಗಳು ಏನನ್ನು ಹೇಳುತ್ತವೆಯೋ ಅದೆಲ್ಲವೂ ಈ ಅಧ್ಯಾಯದಲ್ಲಡಗಿದೆ”. The quintessence of entaire Indian Philosophy is 15th Chapter of Bhagavad Gita. ಮಧ್ವಾಚಾರ್ಯರು ತಮ್ಮ ಹೆಚ್ಚಿನ ಗ್ರಂಥಗಳಲ್ಲಿ ಈ ಅಧ್ಯಾಯದ ಮೂರು ಶ್ಲೋಕಗಳನ್ನು(೧೬,೧೭,೧೮) ಉಲ್ಲೇಖ ಮಾಡುತ್ತಾರೆ. ಏಕೆಂದರೆ ಈ ಶ್ಲೋಕಗಳಲ್ಲೇ ಆಚಾರ್ಯರ ಎಲ್ಲ ಸಿದ್ಧಾಂತದ ಸಾರ ಅಡಗಿದೆ.
ಹಿಂದಿನ ಕಾಲದಲ್ಲಿ ಒಂದು ಸಂಪ್ರದಾಯವಿತ್ತು. ಊಟಕ್ಕೆ ಕುಳಿತಾಗ, ಊಟ ಪ್ರಾರಂಭಿಸುವ ಪೂರ್ವದಲ್ಲಿ ಈ ಅಧ್ಯಾಯದ ಶ್ಲೋಕವನ್ನು ಹೇಳಿ ಆಮೇಲೆ ಊಟ ಮಾಡುವುದು.ಊಟದ ಎಲೆಯ ಮುಂದೆ ಇಡೀ ಶಾಸ್ತ್ರದ ಸಾರವನ್ನು ನಾವು ಅನುಸಂಧಾನ ಮಾಡಿದಂತಾಯಿತುಅನ್ನುವುದು ಈ ಸಂಪ್ರದಾಯದ ಹಿಂದಿನ ಕಾರಣ.
ಹದಿಮೂರನೇ ಅಧ್ಯಾಯದಲ್ಲಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಬಗ್ಗೆ ಕೃಷ್ಣ ವಿವರಿಸಿದ್ದ. ವಿಶ್ವ ಮತ್ತು ವಿಶ್ವದ ನಿಯಾಮಕ ಭಗವಂತನ ವಿಷಯವನ್ನೇ ಇನ್ನೂ ಸ್ಪಷ್ಟವಾಗಿ, ಇನ್ನೊಂದು ಮುಖದೊಂದಿಗೆ ಈ ಅಧ್ಯಾಯದಲ್ಲಿ ಕೃಷ್ಣ ವಿವರಿಸುತ್ತಾನೆ. ಪ್ರಕೃತಿ ಮತ್ತು ಪ್ರಾಕೃತ ವಿಶ್ವ, ಆ ವಿಶ್ವವನ್ನು ದಾಟುವ ಬಗೆ ಮತ್ತು ಕೊನೆಯದಾಗಿ ಇಡೀ ತತ್ವಜ್ಞಾನದ ಸಂಗ್ರಹ ಈ ಅಧ್ಯಾಯದಲ್ಲಿದೆ. ನಾವು ತಿಳಿದುಕೊಳ್ಳಬೇಕಾದ ವಿಶಿಷ್ಟವಾದ ಅರಿವಿನ ಸಂದೇಶವನ್ನು ಕೃಷ್ಣ ಈ ಅಧ್ಯಾಯದ ಮೂಲಕ ಕೊಟ್ಟಿದ್ದಾನೆ.
ಚೇತನಾಚೇತನ ವಿಶ್ವ ಕ್ಷರ’. ಅದರಿಂದಾಚೆಗೆ ಇರುವ ಚಿತ್ಪ್ರಕೃತಿ-ಅಕ್ಷರಳು. ಅದರಿಂದಾಚೆಗಿರುವ ಸರ್ವ ನಿಯಾಮಕ ಭಗವಂತ-ಪುರುಷೋತ್ತಮ. ಹನ್ನೆರಡನೆ ಅಧ್ಯಾಯದ ಪ್ರಾರಂಭದಲ್ಲಿ ವಿವರಿಸಿದಂತೆ- ಹದಿನೈದು ಬೇಲಿಗಳಿಂದ ಆವೃತವಾಗಿರುವ ಹದಿನಾರನೆಯವ ಜೀವ. ಈ ಹದಿನೈದನ್ನು ಹದಿನಾರರ ಸುತ್ತ ಬಿಗಿದವಳು ಹದಿನೇಳನೆಯವಳಾದ ಶ್ರೀಲಕ್ಷ್ಮಿ. ಈ ಬೇಲಿಯಿಂದ ಬಿಡಿಸಿ ನಮಗೆ ಮೋಕ್ಷ ಕೊಡತಕ್ಕವನು ಹದಿನೆಂಟನೆಯವನಾದ ಪುರುಷೋತ್ತಮ. [ಈ ಹದಿನೈದು ಬೇಲಿಗಳ ಬಗ್ಗೆ ವಿವರವಾಗಿ ತಿಳಿಯಲು ಪ್ರಶ್ನೋಪನಿಷತ್ತಿನ ಆರನೇ ಪ್ರಶ್ನೆಯನ್ನು ನೋಡಿ. ಶ್ರದ್ಧಾಂ ಖಂ ವಾಯುಃ ಜ್ಯೋತಿಃ ಆಪಃ ಪೃಥಿವಿ ಇಂದ್ರಿಯಂ ಮನಃ | ಅನ್ನಮನ್ನಾದಿ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾಃ ಲೋಕೇಷು ಚ ನಾಮ ಚ || ೬-೪|| ಇವೇ ಆ ಹದಿನೈದು ಬೇಲಿಗಳು].
ಹದಿನೆಂಟುತತ್ವಶಾಸ್ತ್ರದ ಸಮಷ್ಠಿಯನ್ನು ನಮ್ಮ ಮುಂದಿಡತಕ್ಕಂತಹ ಒಂದು ಸಂಖ್ಯೆ. ಈ ಅಧ್ಯಾಯದಲ್ಲಿ ಹದಿನೆಂಟು ಶ್ಲೋಕಗಳ ಮೂಲಕ ಕೃಷ್ಣ ಸಮಸ್ತ ಶಾಸ್ತ್ರದ ಸಾರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಬನ್ನಿ ಈ ಅಪೂರ್ವ ಅಧ್ಯಾಯವನ್ನು ಕೃಷ್ಣನಿಂದ ಕೇಳಿ ತಿಳಿಯೋಣ.
ಭಗವಾನುವಾಚ ।
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ೧॥
ಭಗವಾನ್ ಉವಾಚ-ಭಗವಂತ ಹೇಳಿದನು : ಊರ್ಧ್ವಮೂಲಮ್ ಅಧಃ ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ಮೇಲಿರುವ ಭಗವಂತ ಮತ್ತು ಪ್ರಕೃತಿ ವಿಶ್ವದ ಬುಡಕಟ್ಟು. ಕೆಳಗಿನ ಜೀವ-ಜಡಗಳು ಇದರ ಟೊಂಗೆ-ಟಿಸಿಲು. ಇದು ಎಂದೆಂದೂ ಇರುವ,[ಅ+ಶ್ವಃ+ತ್ಥ= ಇಂದು ಇದ್ದಂತೆ ನಾಳೆ ಇರದ],[ಅಶ್ವ+ತ್ಥ=ಕುದುರೆಯಂತೆ ನಿರಂತರ ಚಲನಶೀಲವಾದ] ಅರಳಿಯ ಮರ. ವೇದಗಳು ಇದರ ಎಲೆಗಳು. ಇದನ್ನು ಬಲ್ಲವನು ವೇದಗಳನ್ನು ಬಲ್ಲವನು.
ಉಪನಿಷತ್ತಿನ ಸಾರವೇ ಭಗವದ್ಗೀತೆ ಎನ್ನುವುದಕ್ಕೆ ಈ ಶ್ಲೋಕವೇ ಸಾಕ್ಷಿ. ಕಠೋಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ: ಊರ್ಧ್ವಮೂಲೋ ಅವಾಕ್ ಶಾಖಃ ಏಷೋ ಅಶ್ವತ್ಥಃ ಸನಾತನಃಎಂದು. ಇಲ್ಲಿ ಅದನ್ನು ಊರ್ಧ್ವಮೂಲಮ್ ಅಧಃ ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್ಎಂದು ಹೇಳಿದ್ದಾರೆ. ಇದು ವಿಷಯ ಗರ್ಭಿತವಾದ ಸಾಲು. ಇಲ್ಲಿರುವ ಒಂದೊಂದು ಪದದಲ್ಲೂ ತತ್ವಶಾಸ್ತ್ರದ ಅನೇಕ ವಿಷಯಗಳು ಅಡಗಿವೆ.
ನೇರವಾಗಿ ಈ ಸಾಲನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಈ ವಿಶ್ವವೇ ಒಂದು ಅರಳಿ ಮರ. ಇದರ ಬುಡ ಇರುವುದು ಮೇಲೆ, ಟೊಂಗೆ-ಟಿಸಿಲುಗಳಿರುವುದು ಕೆಳಗೆಎಂದಾಗುತ್ತದೆ. ಮೇಲ್ನೋಟಕ್ಕೆ ಈ ಸಾಲನ್ನು ನೋಡಿದರೆ ನಮಗೆ ಏನೂ ಅರ್ಥವಾಗುವುದಿಲ್ಲ. ಶೀರ್ಷಾಸನ ಮಾಡುತ್ತಿರುವ ಅರಳಿ ಮರ- ಏನಿದು? ಅದರಲ್ಲೂ ಅಶ್ವತ್ಥ ಮರವನ್ನೇ ಕೃಷ್ಣ ಏಕೆ ಹೇಳಿದ? ಹಣ್ಣನ್ನೂ ಕೊಡದ, ಹೂವನ್ನೂ ಬಿಡದ, ಮನೆಕಟ್ಟಲೂ ಸಹಾಯಕವಲ್ಲದ ಈ ಮರದ ಪ್ರಸ್ತಾಪ ಏಕೆ? ಇದು ಅರ್ಥವಾಗಬೇಕಾದರೆ ನಾವು ಅಶ್ವತ್ಥಪದದ ಹಿಂದಿರುವ ಅರ್ಥವನ್ನು ಹುಡುಕಬೇಕು. ಮೇಲ್ನೋಟದ ಅರ್ಥದಿಂದ ಒಂದೊಂದಾಗಿ ಎಳೆ-ಎಳೆಯಾಗಿ ಒಳಹೊಗಬೇಕು.
(೧) ಅಶ್ವತ್ಥ ಅನ್ನುವುದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚದಲ್ಲಿರುವ ಎಲ್ಲ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲ ಮರಗಳೂ ಸ್ಥಬ್ಧವಾಗಿರುವಾಗ , ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ಚಲಧರಃಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಅಶ್ವತ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.
(೨) ಅಶ್ವ+ತ್ಥ: ಇಲ್ಲಿ ಅಶ್ವ ಎಂದರೆ ಕುದುರೆ. ಪ್ರಪಂಚ ಅಶ್ವದ ಹಾಗೆ ಇರುವಂಥದ್ದು. ಕುದುರೆಯನ್ನು ಗಮನಿಸಿದರೆ ನಮಗೆ ಈ ಅರ್ಥ ತಿಳಿಯುತ್ತದೆ. ಇತರ ಪ್ರಾಣಿಗಳಿಗೂ ಕುದುರೆಗೂ ಒಂದು ವೆತ್ಯಾಸವಿದೆ. ಎಲ್ಲಾ ಪ್ರಾಣಿಗಳೂ ವಿಶ್ರಾಮದ ಕಾಲದಲ್ಲಿ ನಿಶ್ಚಲವಾಗಿ ನಿಲ್ಲಬಲ್ಲವು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದು. ಈ ಜಗತ್ತೂ ಕೂಡ ಅಶ್ವದಂತೆ. ಇದು ಎಂದೂ ಸ್ಥಿರವಾಗಿ ನಿಲ್ಲುವುದಿಲ್ಲ.
(೩) ಅ+ಶ್ವ+ತ್ಥ ಇಲ್ಲಿ ಶ್ವಅಂದರೆ ನಾಳೆ, ‘ತ್ಥಅಂದರೆ ಇರುವಂಥದ್ದು. ಅಶ್ವತ್ಥ ಅಂದರೆನ ಶ್ವ ತಿಷ್ಠತಿ”. ಇಂದು ಇದೆ ಆದರೆ ನಾಳೆ ಇರುತ್ತದೆ ಎನ್ನುವ ಖಾತರಿ ಇಲ್ಲ. ಅಂದರೆ ಈ ಪ್ರಪಂಚ ಕ್ಷಣಿಕ. ಕಠೋಪನಿಷತ್ತಿನಲ್ಲಿ ಯಮ- ನಚಿಕೇತನಲ್ಲಿ ನಿನಗೆ ಯಾವ ಸುಖಭೋಗ ಬೇಕಿದ್ದರೂ ಕೊಡುತ್ತೇನೆಎಂದಾಗ, ನಚಿಕೇತ ಹೇಳುತ್ತಾನೆ: ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್ ಸರ್ವೇಂದ್ರಿಯಾಣಾಂ ಜರಯಂತಿ ತೇಜಃಎಂದು(೧-೨೬). ಸದಾ ಬದಲಾಗುತ್ತಿರುವ, ಕ್ಷಣಿಕವಾದ ಈ ಪ್ರಪಂಚದಲ್ಲಿ ನಮ್ಮನ್ನು ಕಿತ್ತು ತಿನ್ನುವ ಭೋಗ ನನಗೆ ಬೇಡ, ಬದಲಿಗೆ ಜ್ಞಾನವನ್ನು ಕೊಡುಎಂದು ನಚಿಕೇತ ಕೇಳುತ್ತಾನೆ. ಬದಲಾವಣೆಯೇ ಜಗದ ನಿಯಮ.
(೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವನ್ನು ನೋಡಿದರೆ(etymologicaly)- ಅಶು+ವಾ+ತ+ಥ. ಇಲ್ಲಿ ಅಶು+ವಾ ಎಂದರೆ ಎಲ್ಲಕ್ಕಿಂತ ವೇಗವಾಗಿ ಹೋಗುವಂಥದ್ದು-ಅದು ಭಗವಂತ. ಅದಕ್ಕಾಗಿ ಭಗವಂತನನ್ನು ಅಶ್ವಎಂದೂ ಕರೆಯುತ್ತಾರೆ. ಕುದುರೆ ಮುಖದ ಹಯಗ್ರೀವ ರೂಪದಲ್ಲಿ ಭಗವಂತ ಸಮಸ್ತ ವೇದ ವಿದ್ಯೆಯನ್ನು ಪ್ರಪಂಚಕ್ಕೆ ಕೊಟ್ಟ. ಎಲ್ಲವನ್ನು ಎಲ್ಲಕ್ಕಿಂತ ಮೊದಲು ತಿಳಿದ ಭಗವಂತ ಈ ಜಗತ್ತಿನಲ್ಲಿ, ಇದರ ಒಳಗೂ ಹೊರಗೂ ನಿಯಮನ ಮಾಡುವುದಕ್ಕೋಸ್ಕರ ಅಶ್ವನಾಮಕನಾಗಿ ಕೂತಿದ್ದಾನೆ(ತ್ಥ). ಈತ ಇಡೀ ಪ್ರಪಂಚದಲ್ಲಿತತ’(ತುಂಬಿದ್ದಾನೆ) ಮತ್ತು ಕೊನೆಗೆ ಇಡೀ ಜಗತ್ತು ಆತನಿಗೆ ಥಂ.(ಥಂ =ಆಹಾರ -ಇಡೀ ಜಗತ್ತನ್ನು ಕಬಳಿಸುವ ಶಕ್ತಿ-ಪ್ರಳಯದ ವಿವರಣೆ).
ಇವು ನಾವು ಅಶ್ವತ್ಥಎನ್ನುವ ಪದದಲ್ಲಿ ಕಾಣಬಹುದಾದ ಅರ್ಥ. ಈ ರೀತಿ ಒಂದು ಪದದಲ್ಲಿ ಅನೇಕ ವಿಷಯಗಳನ್ನು ತುಂಬಿಸಲು ಬೇರೆ ಯಾವ ಭಾಷೆಯಲ್ಲೂ ಸಾಧ್ಯವಿಲ್ಲ. ಅದಕ್ಕಾಗಿ ಸಂಸ್ಕೃತವನ್ನು ಗರ್ಭಿಣಿ (ಅರ್ಥಗರ್ಭಿತ) ಭಾಷೆ ಎನ್ನುತ್ತಾರೆ. ಇಲ್ಲಿ ಹೇಳಿದ ಮರದ ಕಲ್ಪನೆ ಮತ್ತು ವಿವರಣೆ ಬೈಬಲ್ ನಲ್ಲಿ ಕೂಡಾ ಕಾಣಬಹುದು. ಅಲ್ಲಿ ಅವರು ಮರಕ್ಕೆ “The Garden of Eden” ಎಂದಿದ್ದಾರೆ. ಅಲ್ಲಿ ಹೇಳುತ್ತಾರೆ: but of the tree of the knowledge of good and evil, you shall not eat of it; for in the day that you eat of it you will surely die." ಅಂದರೆ: ಈ ಮರ ಹಣ್ಣು ಬಿಡುತ್ತದೆ; ಹಣ್ಣನ್ನು ತಿಂದರೆ ನೀನು ಸಾಯುತ್ತೀಯಎಂದು. ಇಲ್ಲಿ ಹಣ್ಣು ಅಂದರೆ ಅದು ಕರ್ಮಫಲ. ಕರ್ಮಫಲ ಅಪೇಕ್ಷೆ(demand) ಮಾಡುವವ ಸಾವಿಲ್ಲದ ಮೋಕ್ಷವನ್ನು ಪಡೆಯಲಾರ. ಆತ ನಿರಂತರ ಹುಟ್ಟು ಸಾವಿನ ಚಕ್ರದಲ್ಲಿ ಸುತ್ತುತ್ತಾನೆ ಎನ್ನುವುದು ಈ ಸಾಲಿನ ಅರ್ಥ.
ಪ್ರಾಹುಃ ಅವ್ಯಯಮ್ಎನ್ನುವಲ್ಲಿ ಪ್ರಾಹುಃಎಂದರೆ ತಿಳಿದು ಹೇಳುವುದು.ವೇದಕಾಲದ ಋಷಿಗಳು ಈ ಪ್ರಪಂಚ ಒಂದು ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆಎನ್ನುತ್ತಾನೆ ಕೃಷ್ಣ. 'ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಥದ್ದು' ಎಂದು ಹೇಳಿ ತಕ್ಷಣ ಕೃಷ್ಣ ಹೇಳುತ್ತಾನೆ-ಇದು ಅವ್ಯಯಎಂದು! ಅಂದರೆ ನಾಶವಿಲ್ಲದ್ದು! ಇದು ಅರ್ಥವಾಗಬೇಕಾದರೆ ನಾವು ಸಮುದ್ರ ತಡಿಯಲ್ಲಿ ಹೋಗಿ ಕುಳಿತು ಅಲ್ಲಿ ಬರುವ ತೆರೆಗಳನ್ನು ಗಮನಿಸಬೇಕು. ಪ್ರತಿಯೊಂದು ತೆರೆಯೂ ಕೂಡ ಅಬ್ಬರದಿಂದ ಬರುತ್ತದೆ. ಅಲ್ಲಿ ಯಾವ ತೆರೆಯೂ ಶಾಶ್ವತವಲ್ಲ. ಎಲ್ಲ ತೆರೆಯೂ ಕ್ಷಣಿಕ. ಆದರೆ ಸಮುದ್ರದಲ್ಲಿ ತೆರೆ ಇಲ್ಲದ ಕ್ಷಣವಿಲ್ಲ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶವಾಗುತ್ತದೆ, ಇನ್ನೊಂದು ಪ್ರಪಂಚ ಹುಟ್ಟುತ್ತದೆ. ಪ್ರಪಂಚ ನಾಶವಾಗಬಹುದು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ನಂತರ ಇನ್ನೊಂದು ಸೃಷ್ಟಿ; ಸೃಷ್ಟಿಯ ನಂತರ ಪ್ರಳಯ-ಇದು ನಿರಂತರ. ಆದ್ದರಿಂದ ಪ್ರಪಂಚ ಅವ್ಯಯ. ಜೀವ ಅನಾದಿ ಅನಂತ. ಹುಟ್ಟು ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ, ಅದರ ಬೇರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಯನ್ನು ಕಾಣುತ್ತದೆ. ಒಟ್ಟಿನಲ್ಲಿ ಈ ಜಗತ್ತು ಅಳಿವಿರದ ಅಶ್ವತ್ಥ.
ಇಲ್ಲಿ ಈ ಮರದ ಮೂಲ ಮೇಲಿದೆ(ಊರ್ಧ್ವಮೂಲ)ಎಂದಿದ್ದಾರೆ. ಮೇಲೆ ಅಂದರೆ ಎಲ್ಲಕ್ಕಿಂತ ಹಿರಿದಾದ ಭಗವಂತ. ಈ ಪ್ರಪಂಚ ಅನ್ನುವ ಮರಕ್ಕೆ ಮೂಲ ಆ ಭಗವಂತ. ಪ್ರಪಂಚದ ಮೂಲದಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಜಡಪ್ರಕೃತಿಯಿಂದ ಈ ಮರ ವಿಕಸನವಾಗುತ್ತದೆ. ಭಗವಂತನಿಂದ ಚತುರ್ಮುಖಬ್ರಹ್ಮ(ಮಹತತ್ವ), ವಾಯು, ಗರುಡ-ಶೇಷ-ರುದ್ರರು(ಆಹಂಕಾರ ತತ್ವ), ಇಂದ್ರಾದಿ ದೇವತೆಗಳು, ಅವಾಂತರ ದೇವತೆಗಳು, ಗಂಧರ್ವರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಹೀಗೆ ಒಂದರ ನಂತರ ಒಂದು ಶಾಖೆಗಳು ಸೃಷ್ಟಿಯಾದವು. ಇವೆಲ್ಲವೂ ಸೇರಿ ಒಂದು ಮರವಾಯಿತು. ಇಲ್ಲಿ ಅಧಃ ಶಾಖಮ್ಅಂದರೆ ಮೇಲಿನಿಂದ ಕೆಳಕ್ಕೆ ಬೆಳೆಯುವುದು. ಇದು ದೇವತಾ ತಾರತಮ್ಯವನ್ನು ಸೂಚಿಸುತ್ತದೆ.
ಮರದ ಟೊಂಗೆ-ಟಿಸಿಲಿನ ನಂತರ ಅದರ ಎಲೆಗಳು. ಈ ಮರದ ಎಲೆಗಳೇ ವೇದಗಳುಎನ್ನುತ್ತಾನೆ ಕೃಷ್ಣ. ನಮಗೆ ತಿಳಿದಂತೆ ಪ್ರಪಂಚಕ್ಕೆ ಎರಡು ಮುಖ. ಒಂದು ನಾಮಾತ್ಮಕ ಪ್ರಪಂಚ, ಇನ್ನೊಂದು ರೂಪಾತ್ಮಕ ಪ್ರಪಂಚ. ಇಲ್ಲಿ ರೂಪಾತ್ಮಕ ಪ್ರಪಂಚ ಟೊಂಗೆ-ಟಿಸಿಲುಗಳಾದರೆ, ನಾಮಾತ್ಮಕ ಪ್ರಪಂಚ ಮರದ ಎಲೆ. ಮೊತ್ತ ಮೊದಲು ನಾಮಾತ್ಮಕ ಪ್ರಪಂಚದಲ್ಲಿ ಸೃಷ್ಟಿಯಾದದ್ದು ವೇದಗಳು. ವಸ್ತುವಿಗೆ ಒಂದು ಹೆಸರು ಕೊಟ್ಟಿರುವುದು ಈ ವೇದದಲ್ಲಿರುವ ವೈದಿಕ ಶಬ್ದಗಳು.
ಸರ್ವೇಷಾಂ ತ ಸ ನಾಮಾನಿ ಕರ್ಮಾಣಿ ಚ ಪೃಥಕ್ ಪೃಥಕ್
ವೇದಶಬ್ದೇಭ್ಯ ಏವಾದೌ ಪೃಥಕ್ ಸಂಸ್ಥಾಶ್ಚ ನಿರ್ಮಮೇ ॥ಮನುಸ್ಮೃತಿ ೧-೨೧||
ವೇದದಲ್ಲಿ ಏನು ಶಬ್ದಗಳಿವೆ ಅವು ಮೂಲತಃ ಭಗವಂತನ ನಾಮಗಳು. ಅದನ್ನೇ ಲೋಕಕ್ಕೆ ಬಳಸಿದರು. ಈ ರೀತಿ ಶಬ್ದಗಳ ಸೃಷ್ಟಿಯಾಯಿತು. ಅದೇ ಛಂದಸ್ಸು. ವೇದ ಮಂತ್ರಗಳು-ವೇದವಾಙ್ಮಯಗಳೇ ಈ ಮರದ ಎಲೆಗಳು.
ಏಕೆ ವೇದವನ್ನು ಇಲ್ಲಿ ಎಲೆಗೆ ಹೋಲಿಸಿದರು ಎಂದರೆ, ಒಂದು ಮರ ಹೂ-ಹಣ್ಣು ಕೊಡಬೇಕಾದರೆ ಅಲ್ಲಿ ಫಲಪ್ರದತ್ವ ಇರುವುದು ಎಲೆಗೆ. ಹಾಗೇ ನಮಗೆ ಅಧ್ಯಾತ್ಮ ಸಾಧನೆಯ ಫಲವನ್ನು ಕೊಡತಕ್ಕವು ವೇದಗಳು. ಈ ಕಾರಣಕ್ಕಾಗಿ ಮರವನ್ನು ವಿಶ್ವಕ್ಕೆ ಹೋಲಿಸಿದರೆ, ವೇದಗಳನ್ನು ಮರದ ಎಲೆಗಳಿಗೆ ಹೋಲಿಸಿದ ಕೃಷ್ಣ. ಪ್ರಳಯಕಾಲದಲ್ಲಿ ಮರ ನಾಶವಾಗುತ್ತದೆ. ಆದರೆ ಮರದ ಎಲೆ ನಾಶವಾಗುವುದಿಲ್ಲ. ಆದ್ದರಿಂದ ಪ್ರಳಯ ಕಾಲದಲ್ಲಿ ಭಗವಂತ ಆಲದ ಎಲೆಯ ಮೇಲೆ ಮಲಗಿರುತ್ತಾನೆ’-ಎನ್ನುತ್ತಾರೆ. ವೇದ ನಿತ್ಯ ಅದಕ್ಕೆ ನಾಶವಿಲ್ಲ. ಎಲೆಯ ಮೇಲೆ ಭಗವಂತ ಮಲಗಿದ ಎಂದರೆ ವೇದ ವಾಚ್ಯನಾಗಿ ಭಗವಂತ ಮಲಗಿದ ಎಂದರ್ಥ. ಪ್ರಳಯಕಾಲದಲ್ಲಿ ವೇದಗಳಿದ್ದವು ಎನ್ನುವುದು ಇದರಿಂದ ತಿಳಿಯುತ್ತದೆ. ಇಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಯಾವ ವಸ್ತುವೂ ಇಲ್ಲದೇ ಇದ್ದಾಗ ವೇದಗಳಿದ್ದವು ಅಂದರೆ ಏನು ಅರ್ಥ? ಅಗ್ನಿಮೀಳೇ ಪುರೋಹಿತಂ... ಎನ್ನುವಲ್ಲಿ ಅಗ್ನಿಯೂ ಇಲ್ಲ, ಪುರೋಹಿತನೂ ಇಲ್ಲ. ಹೀಗಿರುವಾಗ ಯಾರು ವೇದವನ್ನು ಹೇಳುವವರು ಮತ್ತು ವೇದಗಳು ಪ್ರಳಯ ಕಾಲದಲ್ಲಿ ಯಾರನ್ನು ಹೇಳುತ್ತವೆ ?
ಪ್ರಳಯ ಕಾಲದಲ್ಲಿ ವೇದಗಳಿಗೆ ಭಗವಂತನೊಬ್ಬನೇ ಅರ್ಥ. ಇನ್ಯಾವ ಅರ್ಥವೂ ಇಲ್ಲ. ಹಾಗಾಗಿ ವೇದದಲ್ಲಿನ ಸರ್ವ ಶಬ್ದವೂ ಭಗವಂತನನ್ನು ಹೇಳುತ್ತವೆ. ನಾಮಾನಿ ಸರ್ವಾಣಿ ಯಮಾ ವಿಷಂತಿ ತಮ್ ವೈ ವಿಷ್ಣುಂ ಪರಮ ಉದಾಹರಂತಿ”- ಯಾರಲ್ಲಿ ಎಲ್ಲಾ ಶಬ್ದಗಳು ಪ್ರವೇಶ ಮಾಡುತ್ತವೋ-ಅವನು ವಿಷ್ಣು. ಆತ ಸರ್ವ ಶಬ್ದವಾಚ್ಯ. ವಿಷ್ಣು ಅಂದರೆ ವಿಷಂತಿ ಸರ್ವಾಣಿ ನಾಮಾನಿ ಅತ್ರ”. ಐತರೇಯ ಅರಣ್ಯಕದಲ್ಲಿ ಹೇಳುವಂತೆ: ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ...ಪ್ರಕೃತಿಯಲ್ಲಿನ ಸರ್ವಶಬ್ದಗಳು, ಸರ್ವ ನಾದಗಳು ಭಗವಂತನನ್ನು ಹೇಳುತ್ತವೆ. ಹೀಗಾಗಿ ಪ್ರಳಯ ಕಾಲದಲ್ಲಿ ವೇದಾಭಿಮಾನಿನಿ ಲಕ್ಷ್ಮಿ ವೇದವನ್ನು ಹಾಡುತ್ತಿರುತ್ತಾಳೆ(ಶ್ರುತಿಗೀತ) ಮತ್ತು ಭಗವಂತ ಕೇಳುತ್ತಿರುತ್ತಾನೆ. ಇದು ನಾಮಾತ್ಮಕ ಪ್ರಪಂಚದ ಪರಿಕಲ್ಪನೆ. ಕೃಷ್ಣ ಹೇಳುತ್ತಾನೆ ಇಲ್ಲಿ ಹೇಳಿದ ವಿಚಾರವನ್ನು ಯಾರು ತಿಳಿಯುತ್ತಾರೋ ಅವರು ಸಮಸ್ತ ವೇದವನ್ನು ತಿಳಿದಂತೆಎಂದು.
·  ಶ್ಲೋಕ - 02
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬನ್ಧೀನಿ ಮನುಷ್ಯಲೋಕೇ ೨॥
ಅಧಃ ಚ ಊರ್ಧ್ವಂ ಪ್ರಸೃತಾಃ ತಸ್ಯ ಶಾಖಾ ಗುಣ ಪ್ರವೃದ್ಧಾಃ ವಿಷಯ ಪ್ರವಾಲಾಃ ।
ಅಧಃ ಚ ಮೂಲಾನಿ ಅನುಸಂತತಾನಿ ಕರ್ಮ ಅನುಬನ್ಧೀನಿ ಮನುಷ್ಯಲೋಕೇ --ತ್ರಿಗುಣಗಳಿಂದ ಕೊಬ್ಬಿದ ಇದರ ಟೊಂಗೆಗಳು ಕೆಳಗೂ ಮೇಲೂ ಹಬ್ಬಿ ಹರಡಿವೆ. ಇಂದ್ರಿಯ ವಿಷಯಗಳೆ ಇವುಗಳ ತಳಿರುಗಳು. ಇದರ ಬುಡಕಟ್ಟುಗಳೂ ಜೀವಿಗಳ ಕರ್ಮಕ್ಕೆ ತಕ್ಕಂತೆ ಕೆಳಗೆ ಕೂಡ, ಭೂಮಿಯಲ್ಲು ಹರವಿಕೊಂಡಿವೆ.
ಮರದ ವರ್ಣನೆಯನ್ನು ಇಲ್ಲಿ ಮತ್ತಷ್ಟು ವಿವರಿಸಲಾಗಿದೆ. ಈ ಮರದ ಬೇರುಗಳು ಕೆಳಮುಖವಾಗಿಯೂ, ಮೇಲ್ಮುಖವಾಗಿಯೂ ಹರಡಿಕೊಂಡಿದೆ ಎನ್ನುವಲ್ಲಿ ಆಲದ ಮರದ ವರ್ಣನೆ ಎದ್ದು ಕಾಣುತ್ತದೆ. ಪಂಚಭೂತ ಎನ್ನುವ ಟೊಂಗೆ ಟಿಸಿಲು ಮೇಲಿನಿಂದ ಕೆಳಗಿನ ತನಕ ವ್ಯಾಪಿಸಿಕೊಂಡಿದೆ. ನಮ್ಮ ಶರೀರವನ್ನೇ ನೋಡಿದಾಗ- ನಮ್ಮ ಸಹಸ್ರಾರದಲ್ಲಿ ಭಗವಂತ ಕೂತಿದ್ದಾನೆ. ಮೇಲಿನಿಂದ ಕೆಳಗಿನ ತನಕ ಪಂಚಭೂತಗಳು, ಸತ್ವ-ರಜಸ್ಸು-ತಮಸ್ಸು ಎನ್ನುವ ತ್ರಿಗುಣಗಳು ಟೊಂಗೆಗಳಾಗಿ ನಿಂತಿವೆ. ಇಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಚಿಗುರೆಲೆಗಳಿದ್ದಂತೆ. ಅಂದರೆ ಪಂಚಭೂತಾತ್ಮಕವಾದ ವಿಷಯಗಳೇ ಈ ಮರದ ಚಿಗುರು. ಈ ಚಿಗುರು ನಮಗೆ ಯಾವಾಗಲೂ ಆಕರ್ಷಣೆ. ಭಗವಂತನ ಅನಂತ ರೂಪ ಮೇಲಿನಿಂದ ಕೆಳಗಿನ ತನಕ ನಮ್ಮ ಅಂಗಾಂಗದಲ್ಲಿ ತುಂಬಿದೆ. ಅಲ್ಲಿ ನಮ್ಮ ಕರ್ಮವನ್ನು ಅವಲಂಬಿಸಿ ಅವನ ಕ್ರಿಯೆ. ಭಗವಂತನ ಮೂಲ ಮೇಲೆ, ಆದರೆ ಆತ ಮೇಲಿನಿಂದ ಕೆಳಗಿನ ತನಕ ಹರವಿಕೊಂಡಿದ್ದಾನೆ. ಹೀಗೆ ಆತ ಎಲ್ಲ ಕಡೆ ವ್ಯಾಪಿಸಿ ನಿಂತಿದ್ದಾನೆ.
·  ಶ್ಲೋಕ - 03 & 04
ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನಚಾSದಿರ್ನ ಚ ಸಂಪ್ರತಿಷ್ಠಾ ।
ಅಶ್ವತ್ಥಮೇನಂ ಸುವಿರೂಢಮೂಲಂ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ॥೩॥

ತತಃ ಪದಂ ತತ್ ಪರಿಮಾರ್ಗಿತವ್ಯಂ ಯಸ್ಮಿನ್ ಗತಾ ನ ನಿವರ್ತಂತಿ ಭೂಯಃ ।
ತಮೇವ ಚಾSದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥೪॥
ನ ರೂಪಮ್ ಅಸ್ಯ ಇಹ ತಥಾ ಉಪಲಭ್ಯತೇ ನ ಅಂತಃ ನ ಚ ಆದಿಃ ನ ಚ ಸಂಪ್ರತಿಷ್ಠಾ ।
ಅಶ್ವತ್ಥಮ್ ಏನಮ್ ಸು ವಿರೂಢ ಮೂಲಮ್ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ||
ತತಃ ಪದಂ ತತ್ ಪರಿಮಾರ್ಗಿತವ್ಯಮ್ ಯಸ್ಮಿನ್ ಗತಾಃ ನ ನಿವರ್ತಂತಿ ಭೂಯಃ ।
ತಮ್ ಏವ ಚ ಆದ್ಯಮ್ ಪುರುಷಮ್ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ –-ಇದರ ಇರವು ಇದ್ದ ಹಾಗೆ ಕಾಣಿಸುವುದಿಲ್ಲ. ಇದರ ಕೊನೆ ಕಾಣದು; ಬುಡ ಕಾಣದು; ನೆಲೆ ಕೂಡ. ಬಲವಾಗಿ ಬೇರೂರಿದ ಈ ಅರಳಿಯನ್ನು ಅನಾಸಕ್ತಿಯೆಂಬ ಹರಿತವಾದ ಕತ್ತಿಯಿಂದ ತರಿದು, ಅನಂತರ ಆ ಪರತತ್ವವನ್ನು ಅರಸಬೇಕು. ಅವನನ್ನು ಸೇರಿದವರು ಮತ್ತೆ ಮರಳುವುದಿಲ್ಲ. ಅವನಿಂದಲೆ ಈ ಪುರಾತನವಾದ ಪಯಣ ಪ್ರಾರಂಭವಾಯಿತು. ಎಲ್ಲದರ ಮೊದಲಿರುವ ಆ ಪರಮ ಪುರುಷನಿಗೇ ಶರಣಾಗಬೇಕು.
ವಿಶ್ವವನ್ನು ಇಲ್ಲಿ ವಿವರಿಸಿದಷ್ಟು ಸ್ಪಷ್ಟವಾಗಿ ಎಲ್ಲಿಯೂ ವರ್ಣಿಸಿಲ್ಲ. ಇತರೆಡೆ ಸ್ವಲ್ಪ ಸ್ವಲ್ಪ ವಿವರಣೆ ಕಾಣಬಹುದು. ಆದರೆ ಕೃಷ್ಣ ಇಲ್ಲಿ ಪೂರ್ಣ ವಿವರಣೆ ಕೊಟ್ಟ. ಇಷ್ಟು ವಿವರಿಸಿದ ಮೇಲೆ ಕೃಷ್ಣ ಒಂದು ಎಚ್ಚರವನ್ನು ಕೊಡುತ್ತಾನೆ. ಕೃಷ್ಣ ಹೇಳುತ್ತಾನೆ:ಈ ಪ್ರಪಂಚದಲ್ಲೇ ಇದ್ದು ಪ್ರಪಂಚವನ್ನು ನೋಡಿದರೆ ನಾನು ವರ್ಣಿಸಿದ ಅಖಂಡ ದರ್ಶನ ಸಾಧ್ಯವಿಲ್ಲಎಂದು. ನಮಗೆ ಯಾವ ವಸ್ತುವನ್ನು ಕೂಡ ಪರಿಪೂರ್ಣವಾಗಿ ಸಮಗ್ರವಾಗಿ ತಿಳಿದುಕೊಳ್ಳಲು ಆಗುವುದೇ ಇಲ್ಲ. ಏಕೆಂದರೆ ಇಡೀ ವಿಶ್ವವನ್ನು ತಿಳಿಯದೆ ವಿಶ್ವದ ಒಂದು ಚಿಕ್ಕ ಕಣ ಅರ್ಥವಾಗದು. ಸಮುದ್ರದ ತೀರದಲ್ಲಿನ ಒಂದು ಕಪ್ಪೆ ಸಮುದ್ರದ ಆಳ-ಅಗಲ ಮತ್ತು ಸಮುದ್ರದ ಅಗಾಧತೆಯನ್ನು ಹೇಗೆ ತಿಳಿಯಲಾರದೋ, ಹಾಗೆ ನಾವು ಈ ಪ್ರಪಂಚವನ್ನು ಪೂರ್ಣ ತಿಳಿಯಲು ಸಾಧ್ಯವಿಲ್ಲ.
ಈ ಪ್ರಪಂಚ ಹೇಗೆ ಸೃಷ್ಟಿಯಾಯಿತು? ಅದು ಪ್ರಳಯ ಕಾಲದಲ್ಲಿ ನಾಶವಾಗಿ ಎಲ್ಲಿಗೆ ಹೋಗುತ್ತದೆ? ಈ ಆಕಾಶದಲ್ಲಿ ಎಲ್ಲ ಗ್ರಹ ಗೋಲಗಳು ನಿರಾಧಾರವಾಗಿ ಹೇಗೆ ನಿಂತಿವೆ? ನಾವು ಈ ರೀತಿ ಪ್ರಶ್ನೆ ಹಾಕುತ್ತಾ ಹೋದರೆ ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ವಿಜ್ಞಾನದಲ್ಲಿ ಕೂಡ ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಏಕೆಂದರೆ ವಿಜ್ಞಾನ ನಿಂತಿರುವುದು ಕೇವಲ ಕಲ್ಪನೆಯ ಗೋಪುರದ ಮೇಲೆ.
ಋಗ್ವೇದದಲ್ಲಿ ಪ್ರಳಯ ಕಾಲದ ಸ್ಥಿತಿಯನ್ನು ವಿವರಿಸುತ್ತ ಹೇಳುತ್ತಾರೆ:ನಾಸದಾಸೀನ್ನೋSಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ....||೧೦.೧೨೯-೧|| : ಅಂದರೆ ಕಣ್ಣಿಗೆ ಕಾಣುವಂತದ್ದೂ ಇಲ್ಲ; ಕಣ್ಣಿಗೆ ಕಾಣದ್ದೂ ಇಲ್ಲ; ಈ ಲೋಕಗಳೆ ಪ್ರಳಯಕಾಲದಲ್ಲಿ ಇಲ್ಲ ಎಂದು. ಹಾಗಾದರೆ ಏನೂ ಇಲ್ಲದೆ ಈ ಪ್ರಪಂಚ ಸೃಷ್ಟಿಯಾಯಿತೆ? ಛಾಂದೋಗ್ಯ ಉಪನಿಷತ್ತಿನಲ್ಲಿ 'ಏನೂ ಇಲ್ಲದೆ ಎಲ್ಲವೂ ಹುಟ್ಟಿತು' ಅನ್ನುವುದನ್ನು ಖಂಡನೆ ಮಾಡುತ್ತ ಹೇಳುತ್ತಾರೆ: ಕಥಮಸತಃ ಸಜ್ಜಾಯೇತಃ...||೬.೨.೨||” ಎಂದು. ಪ್ರಳಯ ಕಾಲದಲ್ಲಿ ಭಗವಂತ ಪ್ರಳಯ ಸಮುದ್ರದಲ್ಲಿ ಮಲಗಿರುತ್ತಾನೆ ಎನ್ನುವುದನ್ನು ನಾವೆಲ್ಲರೂ ಕೇಳಿದ್ದೇವೆ. ಈ ಲೋಕವೇ ಇಲ್ಲದಿರುವಾಗ, ಯಾವ ಸಮುದ್ರ? ಯಾವ ನೀರು? ಇದೆಲ್ಲವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಪ್ರಳಯ ಕಾಲದಲ್ಲಿ ಎಲ್ಲವೂ ಸಿಡಿದು ಪರಮಾಣುವಿನ ರೂಪವನ್ನು ಪಡೆಯುತ್ತವೆ. ಇದೇ ಪ್ರಳಯ ಸಮುದ್ರ. ಈ ಕಾಲದಲ್ಲಿ ಎಲ್ಲ ಜೀವ ಜಾತಗಳು ತಮ್ಮ ಸ್ಥೂಲ ಶರೀರವನ್ನು ಕಳಚಿಕೊಂಡು ಸೂಕ್ಷ್ಮಶರೀರದಲ್ಲಿ ತಮ್ಮ ಇರವಿನ ಅರಿವೂ ಇಲ್ಲದೆ ಭಗವಂತನ ಒಡಲಿನಲ್ಲಿರುತ್ತವೆ. ಸೃಷ್ಟಿ ಕಾಲದಲ್ಲಿ ಹಂತ ಹಂತವಾಗಿ ಈ ಪ್ರಪಂಚ ರೂಪುಗೊಳ್ಳುತ್ತದೆ. ಇದೆಲ್ಲವನ್ನು ಮಾಡುವವ ಆ ಭಗವಂತ. ಇಂಥಹ ಪ್ರಪಂಚ ತಲೆ-ಬುಡ-ನಡು ಯಾವುದೂ ತಿಳಿಯದಷ್ಟು ಆಳವಾಗಿದೆ. ಇದಕ್ಕಾಗಿ ನಾವು ಯಾವುದನ್ನು ತಿಳಿದರೆ ಎಲ್ಲವನ್ನು ತಿಳಿಯಬಹುದೋ ಅದನ್ನು ಮೊದಲು ತಿಳಿಯಬೇಕು. ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ಧಾಲಕ ಗುರುಕುಲದಲ್ಲಿ ಹನ್ನೆರಡು ವರ್ಷ ವಿದ್ಯಾಭಾಸ ಮುಗಿಸಿಕೊಂಡು ಬಂದು, ತನ್ನೆದುರು ಅಹಂಕಾರದಿಂದ ಸೆಟೆದು ನಿಂತ ಮಗ ಶ್ವೇತಕೇತುವನ್ನು ಉದ್ದೇಶಿಸಿ ಕೇಳುತ್ತಾನೆ: ಉತ ತಂ ಆದೇಷ್ಯಂ ಅಪ್ರಾಕ್ಷ್ಯಃ; ಎನಾಶ್ರುತಂ ಶ್ರುತಂ ಭವತಿ, ಅಮತಂ ಮತಂ ಅವಿಜ್ಞಾತಂ ವಿಜ್ಞಾತಂ..||೬.೧.೩||” “ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ, ಅದು ತಿಳಿಯಿತೇ?” ಎಂದು. ಇಲ್ಲಿ ಕೃಷ್ಣ ಹೇಳುತ್ತಾನೆ: ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದನ್ನು ತಿಳಿವುದಕ್ಕೊಸ್ಕರ ಆ ಪರಶಕ್ತಿಯಲ್ಲಿ ಶರಣಾಗುಎಂದು. ಮುಂಡಕ ಉಪನಿಷತ್ತೂ ಕೂಡ ಇದನ್ನೇ ಹೇಳುತ್ತದೆ: ಯಸ್ಮಿನ್ ವಿಜ್ಞಾತೇ ಸರ್ವಮೇವಂ ವಿಜ್ಞಾತಂ ಭವತಿ.. || ೧.೩||”.
ಭಗವಂತನನ್ನು ತಿಳಿದರೆ ಎಲ್ಲವನ್ನು ತಿಳಿದಂತೆ ಎನ್ನುವುದೇನೋ ಸರಿ, ಆದರೆ ಅವನನ್ನು ಅರಿಯುವ ಪರಿ ಯಾವುದು? ಈ ಅಖಂಡವಾಗಿ ಬೇರೂರಿರುವ ಮರದ ಮೂಲವನ್ನು ಸೇರುವುದು ಹೇಗೆ? ಇದಕ್ಕೆ ಕೃಷ್ಣ ಹೇಳುತ್ತಾನೆ: ಜ್ಞಾನವೆಂಬ ಕತ್ತಿಯನ್ನು, ಅನಾಸಕ್ತಿ(detachment) ಮತ್ತು ಉಪಾಸನೆ ಎನ್ನುವ ಸಾಣೆಯ ಕಲ್ಲಿನಲ್ಲಿ ಹರಿತಗೊಳಿಸಿ, ಆಳವಾಗಿ ಬೇರೂರಿರುವ ಮರವನ್ನು ತರಿದು, ಪರತತ್ವವನ್ನು ಹುಡುಕುಎಂದು. ನಾವು ಎಲ್ಲಿಗೆ ಹೋದರೆ ಮರಳಿ ಇಲ್ಲಿಗೆ ಬರುವುದು ಬೇಡವೋ, ಅದನ್ನು ಅನ್ವೇಷಣೆ ಮಾಡಬೇಕು. ಭಗವಂತನ ಇತಿಮಿತಿರಾಹಿತ್ಯವನ್ನು ಅರಿಯುವ ಜ್ಞಾನವೇ ಇದಕ್ಕೆ ಕೊಡಲಿ. ಇಲ್ಲಿಯೂ ಕೂಡ ನಾವೇ ನಮ್ಮ ಪ್ರಯತ್ನದಿಂದ ಮೂಲವನ್ನು ಸೇರಲು ಸಾಧ್ಯವಿಲ್ಲ. ಆ ಶಕ್ತಿ ನಮಗಿಲ್ಲ. ಅದಕ್ಕಾಗಿ ಇರುವ ಒಂದೇ ಮಾರ್ಗ ಆ ಪರಶಕ್ತಿಯಲ್ಲಿ ಶರಣಾಗುವುದು. ಆತನ ಅನುಗ್ರಹದಿಂದ ಮಾತ್ರ ನಾವು ಆ ಪುರುಷೋತ್ತಮನನ್ನು ಸೇರಬಹುದು.
·  ಶ್ಲೋಕ - 05
ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್ಗಚ್ಛನ್ತ್ಯಮೂಢಾಃ ಪದಮವ್ಯಯಂ ತತ್ ೫॥
ನಿರ್ಮಾನಮೋಹಾಃ ಜಿತ ಸಂಗ ದೋಷಾಃ ಅಧ್ಯಾತ್ಮ ನಿತ್ಯಾಃ ವಿನಿವೃತ್ತಕಾಮಾಃ ।
ದ್ವಂದ್ವೈಃ ವಿಮುಕ್ತಾಃ ಸುಖ ದುಃಖ ಸಂಜ್ಞೈಃ ಗಚ್ಛಂತಿ ಅಮೂಢಾಃ ಪದಮ್ ಅವ್ಯಯಮ್ ತತ್ಬಿಂಕವಿರದವರು, ಮೋಹವಳಿದವರು, ಬಯಕೆಗಳನ್ನು ಬಿಟ್ಟವರು, ಸುಖ-ದುಃಖಗಳೆಂಬ ಇಕ್ಕಟ್ಟಿನ ಇರುಕನ್ನು ಮೀರಿ ನಿಂತವರು- ಇಂಥ ಜಾಣರು ಈ ಅಳಿವಿರದ ತಾಣವನ್ನು ಸೇರುತ್ತಾರೆ.
ಕೃಷ್ಣ ಈ ಶ್ಲೋಕದಲ್ಲಿ ಹೇಳಿರುವ ವಿಚಾರ ಈ ಹಿಂದಿನ ಅನೇಕ ಅಧ್ಯಾಯಗಳಲ್ಲಿ ಅಲ್ಲಲ್ಲಿ ಬಂದಿದೆ ಮತ್ತು ಬಂದಾಗ ನಾವು ಆ ಬಗ್ಗೆ ವಿಶೇಷವಾಗಿ ವಿಶ್ಲೇಷಣೆ ಮಾಡಿದ್ದೇವೆ. ಎಲ್ಲವನ್ನು ಸಮಷ್ಟಿಯಾಗಿ ಇಲ್ಲಿ ಕೃಷ್ಣ ಹೇಳಿದ್ದಾನೆ. ಭಗವಂತನಲ್ಲಿ ಶರಣಾಗತಿಬೇಡಿ ಸಾಗುವ ನಮ್ಮ ಜೀವನದ ನಡೆ ಹೇಗಿರಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.ಎಲ್ಲಕ್ಕಿಂತ ಮೊದಲು ಮಾನ-ಮೋಹವನ್ನು ಬಿಡಬೇಕುಎನ್ನುತ್ತಾನೆ ಕೃಷ್ಣ. ಅಂದರೆ 'ನಾನು' ಎನ್ನುವ ಅಹಂಕಾರಮತ್ತು 'ನನ್ನದು' ಎನ್ನುವ ಮಮಕಾರಇವೆರಡನ್ನು ನಾವು ಮೊದಲು ತೊರೆಯಬೇಕು. ಈ ಪ್ರಪಂಚಕ್ಕೆ ಬರುವಾಗಲೂ ನಾವು ಬತ್ತಲೆ, ಹೋಗುವಾಗಲೂ ಬತ್ತಲೆ. ಹೀಗಿರುವಾಗ ಇಲ್ಲಿ ನಾನು’, ‘ನನ್ನದುಎಂದು ಅಹಂಕಾರ-ಮಮಕಾರದಲ್ಲಿ ಬೀಳುವುದರಲ್ಲಿ ಯಾವುದೇ ಅರ್ಥವಿಲ್ಲ. ಸಂಗದೋಷ ನಮ್ಮ ಮೇಲೆ ಅನೇಕ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ನಾವು ಸಂಗದೋಷವನ್ನು ಗೆಲ್ಲಬೇಕು. ಒಂದು ವಸ್ತುವಿನ ಅತಿಯಾದ ಒಡನಾಟ, ಅದರ ಮೇಲಿನ ಅತಿಯಾದ ಮಮಕಾರ ಎಂದೆಂದಿಗೂ ಒಳ್ಳೆಯದಲ್ಲ. ಈ ರೀತಿ ನಿರ್ಲಿಪ್ತತೆಯಿಂದ ಬದುಕಬೇಕಾದರೆ ಮೊದಲು ನಮ್ಮನ್ನು ನಾವು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಯಕೆಗಳನ್ನು ಬಿಟ್ಟು, ಸುಖ ಬಂದಾಗ ಹಾರಾಡದೆ, ದುಃಖ ಬಂದಾಗ ಕುಗ್ಗದೆ, ದ್ವಂದ್ವಾತೀತರಾಗಿ ಬದುಕುವುದನ್ನು ನಾವು ಕಲಿಯಬೇಕು. ಸೋಲೇ ಗೆಲುವಿನ ಮೆಟ್ಟಿಲು, ದುಃಖ-ಸುಖದ ಮೆಟ್ಟಿಲು. ಹಗಲು-ರಾತ್ರಿಯನ್ನು ಸ್ವೀಕರಿಸಿದಂತೆ ಕಷ್ಟ-ಸುಖವನ್ನು ನಾವು ಸಮನಾಗಿ ಸ್ವೀಕರಿಸಬೇಕು. ಲೌಕಿಕ ನಿರೀಕ್ಷೆ-ನಿರಾಶೆಯ ಮೂಲ. ಇದರ ಹಿಂದೆ ಹೋದವರು ತಿಳಿಗೇಡಿಗಳು. ಅವರು ತಾವೇ ತಾವಾಗಿ ತಮ್ಮ ಜೀವನದಲ್ಲಿ ಸಮಸ್ಯೆಯನ್ನು ತಂದುಕೊಳ್ಳುತ್ತಾರೆ. ಆದರೆ ಈ ಮರ್ಮವನ್ನು ಅರಿತ ಜ್ಞಾನಿಗಳು ಭಗವಂತನ ಲೋಕವನ್ನು ನಿರಾಯಾಸವಾಗಿ ಸೇರುತ್ತಾರೆ-ಇದು ನಿಶ್ಚಿತ.
ದೇವರ ಬಗ್ಗೆ ದೇವರನ್ನು ನಂಬುವವರಲ್ಲೇ ಅನೇಕ ಅಭಿಪ್ರಾಯ ಭೇದಗಳಿವೆ. ಪ್ರತಿಯೊಬ್ಬರಿಗೂ ತಮ್ಮ ವಿಚಾರಧಾರೆಯೇ ಸರಿ ಎನ್ನುವ ಭಾವನೆ ಇರುತ್ತದೆ. ಇದಕ್ಕಾಗಿ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಈ ಕುರಿತ ವಿವರಣೆಯನ್ನು ಕೊಡುತ್ತಾನೆ. ಇಲ್ಲಿ ಪ್ರಸ್ತುತವಿರುವ ಶ್ಲೋಕಗಳಲ್ಲಿ ಇರುವ ವಿಚಾರ ನಮಗೆ ಸ್ವಲ್ಪ ಅಸ್ಪಷ್ಟವಾಗಿ ಕಾಣಬಹುದು. ನಮ್ಮ ಸಾಧನೆ ಮತ್ತು ನಮ್ಮ ಯೋಗ್ಯತೆಗನುಗುಣವಾಗಿ ಈ ಶ್ಲೋಕಗಳು ತೆರೆದುಕೊಳ್ಳುತ್ತವೆ. ಇಲ್ಲಿ ಕೃಷ್ಣ ಜೀವ-ಜಗತ್ತು-ಭಗವಂತ ಈ ತ್ರಿಪುಟಿಗಳ ಕಲ್ಪನೆಯನ್ನು ಬಹಳ ರೋಚಕವಾಗಿ ವಿವರಿಸಿದ್ದಾನೆ.
ಭಗವಂತನ ಚಿಂತನೆಯಲ್ಲಿ ಕಾಳಜಿ ಇರುವವರಿಗೆ ಈ ಅಧ್ಯಾಯದ ಮುಂದಿನ ಭಾಗ ಬಹಳ ಮುಖ್ಯವಾಗುತ್ತದೆ. ನಮ್ಮ ಜೀವನದಲ್ಲಿ ನಾವು ಹೇಗೆ ಸಾಧನೆ ಮಾಡಬೇಕು, ಹೇಗೆ ಭಗವಂತನ ಚಿಂತನೆ ಮಾಡಬೇಕು ಅನ್ನುವುದರ ಸಮಸ್ತ ಸಾರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ.
·  ಶ್ಲೋಕ - 06
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ೬॥
ನ ತತ್ ಭಾಸಯತೇ ಸೂರ್ಯಃ ನ ಶಶಾಂಕಃ ನ ಪಾವಕಃ ।
ಯತ್ ಗತ್ವಾ ನ ನಿವರ್ತಂತೇ ತತ್ ಧಾಮ ಪರಮಮ್ ಮಮಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.
ಇದೇ ರೀತಿಯ ವಿವರಣೆ ಕಠೋಪನಿಷತ್ತಿನಲ್ಲಿ ಬಂದಿದೆ. ಅದರ ಸಾರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ. ಕಠೋಪನಿಷತ್ತಿನಲ್ಲಿ ಹೇಳುವಂತೆ:
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ .
ತಮೇವ ಭಾಂತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ ||೧೫||
ಭಗವಂತನನ್ನು ಸೂರ್ಯ ಬೆಳಗಿಸುವುದಿಲ್ಲ, ಬೆಳದಿಂಗಳಾಗಲಿ, ಅಗ್ನಿಯ ಬೆಳಕಾಗಲಿ ಆತನನ್ನು ಬೆಳಗಿಸಲಾರದುಎನ್ನುತ್ತಾನೆ ಕೃಷ್ಣ. ಇಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಪ್ರತೀಕವನ್ನು ಕೃಷ್ಣ ಉದಾಹರಣೆಯಾಗಿ ತೆಗೆದುಕೊಂಡಿದ್ದಾನೆ. ನಾವು ಸೂರ್ಯನಲ್ಲಿ ಗಾಯತ್ರಿಯನ್ನು ಉಪಾಸನೆ ಮಾಡುತ್ತೇವೆ; ಚಂದ್ರಮಂಡಲ ಮಧ್ಯಸ್ಥನಾಗಿ ಭಗವಂತನನ್ನು ಧನ್ವಂತರಿಯಲ್ಲಿ ಪೂಜಿಸುತ್ತೇವೆ; ಭೂಲೋಕದಲ್ಲಿ ಭಗವಂತನ ಆರಾಧನೆ ಅಗ್ನಿ ಮುಖದಲ್ಲಿ. ಇಲ್ಲಿ ಕೃಷ್ಣ ಕೊಡುತ್ತಿರುವ ಎಚ್ಚರ ಏನೆಂದರೆ ಇವೆಲ್ಲವೂ ಬೆಳಕಿನ ಪ್ರತೀಕ ಮಾತ್ರ. ಇವು ನೇರವಾಗಿ ನಮಗೆ ಭಗವಂತನನ್ನು ತೋರಿಸಲಾರವು. ಭಗವಂತನನ್ನು ಕಾಣಲು ನಾವು ನಮ್ಮೊಳಗಿನ ಸ್ವರೂಪಭೂತವಾದ ಅಂತಃಜ್ಯೋತಿಯನ್ನು ಬಳಸಬೇಕು. ಬೃಹದಾರಣ್ಯಕ ಉಪನಿಷತ್ತಿನಲ್ಲಿ(ಅ-೦೪) ಜನಕ ಮತ್ತು ಯಾಜ್ಞವಲ್ಕ್ಯರ ನಡುವಿನ ಸಂಭಾಷಣೆಯಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ತೆರೆದಿಡಲಾಗಿದೆ:
ಯಾಜ್ಞವಲ್ಕ್ಯ, ಕಿಮ್ ಜ್ಯೋತಿರಯಂಪುರುಷಃ ಇತಿ | ಆದಿತ್ಯ ಜ್ಯೋತಿಃ, ಸಮ್ರಾಡ್, ಇತಿ ಹೋವಾಚಾದಿತ್ಯೇ ನೈವಾSಯಂ ಜ್ಯೋತಿಷಾಸ್ತೇ, ಪಲ್ಯಯತೇ, ಕರ್ಮ ಕುರುತೇ, ವಿಪಲ್ಯಯೇತ್ ಇತಿ | ಏವಮೇವೈ ತದ್ ಯಾಜ್ಞವಲ್ಕ್ಯ ||೪-೨|| -ಇಲ್ಲಿ ಜನಕ ಯಾಜ್ಞವಲ್ಕ್ಯನಲ್ಲಿ ಕೇಳುತ್ತಾನೆ:ಈ ಪ್ರಪಂಚದಲ್ಲಿ ಜೀವರು ತಮ್ಮ ಕಾರ್ಯ ನಿರ್ವಹಣೆ ಮಾಡಲು ಸಹಾಯಕವಾದ ಬೆಳಕು ಯಾವುದುಎಂದು. ಇದಕ್ಕೆ ನೇರವಾಗಿ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ ಸೂರ್ಯನ ಪ್ರಕಾಶಎಂದು.
ಅಸ್ತಮಿತ ಆದಿತ್ಯೇ ಯಾಜ್ಞವಲ್ಕ್ಯ, ಕಿಮ್ ಜ್ಯೋತಿರೇವಾಯಂ ಪುರುಷಃ ಇತಿ | ಚಂದ್ರಮೇವಾಸ್ಯ ಜ್ಯೋತಿರ್ ಭವತಿ, ಚಂದ್ರಮಾಸೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ಏವಮೇವೈ ತದ್ ಯಾಜ್ಞವಲ್ಕ್ಯ||೪-೩|| –ಸೂರ್ಯ ಪ್ರಕಾಶ ಇಲ್ಲದೆ ಇದ್ದಾಗ ಜೀವರು ಯಾವ ಬೆಳಕಿನಿಂದ ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದಾಗ-ಯಾಜ್ಞವಲ್ಕ್ಯ ಹೇಳುತ್ತಾನೆ: ಚಂದ್ರನ ಬೆಳಕಿನಿಂದಎಂದು.
ಅಸ್ತಮಿತ ಆದಿತ್ಯೇ, ಯಾಜ್ಞವಲ್ಕ್ಯ,ಚಂದ್ರಮಸ್ಯSಸ್ತಮಿತೇ, ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ಅಗ್ನಿರ್ ಎವಾಸ್ಯ ಜ್ಯೋತಿರ್ ಭವತಿ, ಅಗ್ನಿನೈವಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ಏವಮೇವೈ ತದ್ ಯಾಜ್ಞವಲ್ಕ್ಯ||೪-೪||. ಸೂರ್ಯ ಚಂದ್ರ ಇಲ್ಲದಾಗ ಯಾವ ಬೆಳಕು ಎನ್ನುವ ಪ್ರಶ್ನೆಗೆ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ:ಬೆಂಕಿಯ ಪ್ರಕಾಶದಿಂದಎಂದು.
ಅಸ್ತಮಿತ ಆದಿತ್ಯೇ, ಯಾಜ್ಞವಲ್ಕ್ಯ,ಚಂದ್ರಮಸಿ ಅಸ್ತಮಿತೇ,ಶಾಂತೇSಗ್ನೌ ,ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ವಾಗ್ ಎವಾಸ್ಯ ಜ್ಯೋತಿರ್ ಭವತಿ ವಾಚೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತಿ ತಸ್ಮಾದ್ವೈ ,ಸಮ್ರಾಡ್, ಅಪಿ ಯತ್ರ ಪಾಣಿರ್ನ ವಿನಿರ್ಜ್ಞಾಯತೇ ,ಅಥ ಯತ್ರ ವಾಗುಚ್ಛಾರತಿ ಉಪೈವ ತತ್ರ ನ್ಯೇತೀತಿ | ಏವಮೇವೈತದ್ ಯಾಜ್ಞವಲ್ಕ್ಯ||೪-೫|| -ಒಂದು ವೇಳೆ ಸೂರ್ಯ, ಚಂದ್ರ, ಬೆಂಕಿ, ನಕ್ಷತ್ರ- ಯಾವುದೇ ಬೆಳಕು ಇಲ್ಲದಾಗ ಜನರು ಹೇಗೆ ವ್ಯವಹರಿಸುತ್ತಾರೆ ಎಂದಾಗ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ :“ಒಬ್ಬರಿಗೊಬ್ಬರು ಮಾತನಾಡುವ ಮೂಲಕಎಂದು.
ಅಸ್ತಮಿತ ಆದಿತ್ಯೇ ,ಯಾಜ್ಞವಲ್ಕ್ಯ,ಚಂದ್ರಮಸ್ಯಸ್ತಮಿತೇ, ಶಾಂತೇSಗ್ನೌ ,ಶಾಂತಾSಯಾಂ ವಾಚಿ, ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ಆತ್ಮೈವಾಸ್ಯ ಜ್ಯೋತಿರ್ಭವತಿ, ಆತ್ಮನೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ||೪-೬|| ಎಲ್ಲ ಬೆಳಕೂ ಇಲ್ಲದಾಗ, ಯಾರೂ ಜೊತೆಯಲ್ಲಿ ಇಲ್ಲದಾಗ ಯಾವ ಬೆಳಕು ನಮಗೆ ಶಕ್ತಿ ಎನ್ನುವ ಪ್ರಶ್ನೆಗೆ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ ಆತ್ಮ ಜ್ಯೋತಿಎಂದು.
ಮೇಲ್ನೋಟಕ್ಕೆ ಈ ಸಂಭಾಷಣೆಯನ್ನು ನೋಡಿದರೆ ನಮಗೆ ಏನೂ ತಿಳಿಯುವುದಿಲ್ಲ. ಆದರೆ ಇದರಲ್ಲಿ ಪ್ರಾಚೀನರು ಅದೆಷ್ಟು ವಿಚಾರವನ್ನು ತುಂಬಿದ್ದಾರೆ. ನಾವು ನಮ್ಮ ಅಂತರಂಗದಲ್ಲಿನ ಆತ್ಮಜ್ಯೋತಿಯ ಪರಿಚಯವಿಲ್ಲದೆ ಕೇವಲ ಹೊರ ಪ್ರಪಂಚದಲ್ಲಿ ಭೌತಿಕ ಬೆಳಕಿನಲ್ಲಿ ಭಗವಂತನನ್ನು ಹುಡುಕುವುದರಿಂದ ಆತ ನಮಗೆ ಸಿಗಲಾರ. ಆತನನ್ನು ಯಾವ ಭೌತಿಕ ಬೆಳಕೂ ಬೆಳಗಲಾರದು. ಆತ ಬೆಳಕುಗಳ ಬೆಳಕು. ಆತನನ್ನು ಕಾಣಲು ನಾವು ನಮ್ಮ ಸ್ವರೂಪದಲ್ಲಿನ ಆತ್ಮಜ್ಯೋತಿಯನ್ನು ಬಳಸಬೇಕು. ಸೂರ್ಯ, ಚಂದ್ರ, ಅಗ್ನಿಯನ್ನು ಭಗವಂತನ ಪ್ರತೀಕವಾಗಿ ಬಳಸಿ ನಮ್ಮ ಅಂತರಂಗದ ಜ್ಯೋತಿಯನ್ನು ನಾವು ಜಾಗೃತಗೊಳಿಸಿಕೊಳ್ಳಬೇಕು.
ಯಾವ ಸ್ಥಾನದಲ್ಲಿ ಭಗವಂತ ಸದಾ ಜ್ಞಾನಿಗಳಿಗೆ ಗೋಚರವಾಗುತ್ತಾನೋ ಅದು ಪರಮಧಾಮಅದೇ ಮೋಕ್ಷ. ಅಲ್ಲಿ ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ಬೆಳಕಲ್ಲ. ಈ ಪರಮಧಾಮದಿಂದಲೇ ಸೂರ್ಯ, ಚಂದ್ರ, ಅಗ್ನಿ ಬೆಳಕು ಪಡೆಯುವುದು. ಆತ್ಮಜ್ಯೋತಿಯನ್ನು ಗುರುತಿಸಿ, ಆತ್ಮದಲ್ಲಿನ ಪರಮಾತ್ಮನನ್ನು ಕಂಡುಕೊಂಡವ ಎಂದೂ ಮರಳಿಬಾರದ ಈ ಪರಮಧಾಮವನ್ನು ಸೇರುತ್ತಾನೆ.
·  ಶ್ಲೋಕ - 07 & 08
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ೭॥

ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ ಕ್ರಾಮತೀಶ್ವರಃ ।
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾSಶಯಾತ್ ೮॥
ಮಮ ಏವ ಅಂಶಃ ಜೀವಲೋಕೇ ಜೀವಭೂತಃ ಸನಾತನಃ
ಮನಃ ಷಷ್ಠಾನಿ ಇಂದ್ರಿಯಾಣಿ ಪ್ರಕೃತಿ ಸ್ಥಾನಿ ಕರ್ಷತಿ ||
ಶರೀರಮ್ ಯತ್ ಅವಾಪ್ನೋತಿ ಯತ್ ಚ ಅಪಿ ಉತ್ಕ್ರಾಮತಿ ಈಶ್ವರಃ ।
ಗೃಹೀತ್ವಾ ಏತಾನಿ ಸಂಯಾತಿ ವಾಯುಃ ಗಂಧಾನ್ ಇವ ಆಶಯಾತ್ –-ಈ ದೇಹದಲ್ಲಿರುವ ಅಳಿವಿರದ ಜೀವನು ನನ್ನದೇ ಒಂದು ತುಣುಕಿನಂತೆ; [ನನ್ನ ಭಿನ್ನಾಂಶ; ನನ್ನ ಪ್ರತಿಬಿಂಬ]. ಅವನು ಶರೀರದಲ್ಲಿರುವ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ವಿಷಯಗಳತ್ತ ಹರಿಯಗೊಡುತ್ತಾನೆ. ವಾಸ್ತವವಾಗಿ ಜೀವ ಈ ಶರೀರವನ್ನು ಹೊಕ್ಕಾಗ ಮತ್ತು ಬಿಟ್ಟು ಹೊರಟಾಗ ಸರ್ವಶಕ್ತನಾದ ಭಗವಂತನೆ ಈ ಇಂದ್ರಿಯಗಳನ್ನು ನಿಯಂತ್ರಿಸುತ್ತ ಜತೆಗೆ ಬರುತ್ತಾನೆ; ಗಾಳಿ ಹೂವಿನ ಕಂಪನ್ನು ಹೊತ್ತು ಬಂದಂತೆ. [ಭಗವಂತ ಈ ಜೀವದ ಶರೀರವನ್ನು ಹೊಕ್ಕಾಗ ಮತ್ತು ಹೊರಬಂದಾಗ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ತನ್ನಂಕೆಯಲ್ಲಿರಿಸಿಕೊಳ್ಳುತ್ತಾನೆ. ಜೀವನಿಗೆ ವಿಷಯಾನುಭವ ನೀಡುವಾಗ ಇವುಗಳನ್ನು ಜತೆಗೊಯ್ಯುತ್ತಾನೆ.-ಗಾಳಿ ಹೂವಿಂದ ಕಂಪನ್ನು ಜತೆಗೊಯ್ಯುವಂತೆ.]
ಈ ಶ್ಲೋಕ ಭಗವಂತ ಮತ್ತು ಜೀವ ಎರಡನ್ನೂ ವಿವರಿಸುವ ಶ್ಲೋಕ. ಇಲ್ಲಿ ನಮಗೆ ಸ್ವಲ್ಪ ಗೊಂದಲವೆನಿಸುವ ಮಾತನ್ನು ಕೃಷ್ಣ ಹೇಳುತ್ತಾನೆ. ಈ ಮಾತನ್ನು ಬೇರೆ ಬೇರೆ ಮುಖದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳದೇ ಇದ್ದರೆ ಎಲ್ಲವೂ ಅಸ್ಪಷ್ಟವೆನಿಸುತ್ತದೆ. ಮೇಲ್ನೋಟದಲ್ಲಿ ನೋಡಿದರೆ ಕೃಷ್ಣ ಹೇಳುತ್ತಾನೆ: ಎಲ್ಲ ಜೀವರೂ ನನ್ನದೇ ಅಂಶಎಂದು. ಇಲ್ಲಿ ಅಂಶ ಎನ್ನುವಲ್ಲಿ ಎರಡು ಮುಖವಿದೆ. ಒಂದು ಸ್ವರೂಪಭೂತ ಅಂಶ ಮತ್ತು ಇನ್ನೊಂದು ಭಿನ್ನಾಂಶ. ಭಗವಂತ ಜ್ಞಾನ ಸ್ವರೂಪ, ಈ ಜೀವನೂ ಕೂಡ ಜ್ಞಾನ ಸ್ವರೂಪ. ಭಗವಂತ ಮಹಾ ಬೆಳಕಾದರೆ ಜೀವ ಬೆಳಕಿನ ಕಿಡಿ. ಭಗವಂತ ಬಿಂಬವಾದರೆ ಜೀವ ಪ್ರತಿಬಿಂಬ. ಇದು ಸನಾತನ- ಅನಾದಿ ಅನಂತವಾಗಿರುವಂಥದ್ದು. ಜೀವ ಭಗವಂತನ ಪ್ರತಿಬಿಂಬ ಅಂದರೆ ಅದು ಭಗವಂತನ ಭಿನ್ನಾಂಶ. ಈ ಜೀವನೊಳಗೆ ಜೀವನಾಗಿಧಾರಣೆ ಮಾಡಿಕೊಂಡು ಉಸಿರಾಡಿಸುವವ ಬಿಂಬರೂಪಿ ಭಗವಂತ. ಅದು ಭಗವಂತನ ಸ್ವರೂಪಾಂಶ. ಈ ರೀತಿ ಜೀವ ಹೊರಗಿನ ಪಂಚಭೂತವನ್ನು ಅನುಭವಿಸುವ ಐದು ಇಂದ್ರಿಯ, ಮತ್ತು ಈ ಅನುಭವವನ್ನು ಒಳಗಿನ ಜೀವಕ್ಕೆ ಮುಟ್ಟಿಸುವ ಆರನೇ ಮನಸ್ಸಿನೊಂದಿಗೆ, ಬಿಂಬರೂಪಿ ಭಗವಂತನ ಧಾರಣೆಯಲ್ಲಿ, ತಾಯಿಯ ಗರ್ಭದಲ್ಲಿ ರೂಪುಗೊಳ್ಳುತ್ತಿರುವ ಸ್ಥೂಲ ಶರೀರವನ್ನು ಪ್ರವೇಶ ಮಾಡುತ್ತಾನೆ(ಭಗವಂತ ಪ್ರವೇಶ ಮಾಡಿಸುತ್ತಾನೆ). ಹೀಗೆ ಪ್ರವೇಶ ಮಾಡಿದ ಜೀವಕ್ಕೆ ಬಿಂಬರೂಪಿ ಭಗವಂತ ಸರ್ವೆಂದ್ರಿಯದಲ್ಲಿದ್ದು, ಇಂದ್ರಿಯಾಭಿಮಾನಿ ದೇವತೆಗಳ ಮುಖೇನ ಅನುಭವ ಕೊಡುತ್ತಾನೆ. ಜೀವ ಭಗವಂತನ ಅನುಗ್ರಹದಿಂದ ವಿಷಯಗಳನ್ನು ಅನುಭವಿಸಲು ಆರಂಭಿಸುತ್ತಾನೆ.
ಒಬ್ಬ ಜೀವನಿಗೆ ಒಟ್ಟು ಮೂರು ಶರೀರಗಳಿರುತ್ತವೆ. ಒಂದು ಕಾಣುವ ಸ್ಥೂಲ ಶರೀರ, ಅದರೊಳಗೆ ಸೂಕ್ಷ್ಮ ಶರೀರ(ಅನಿರುದ್ಧ ಶರೀರ) ಮತ್ತು ಅದರೊಳಗೆ ಲಿಂಗ ಶರೀರ. ಈ ಸ್ಥೂಲ ಶರೀರವನ್ನು ಪ್ರವೇಶಿಸುವ ಸೂಕ್ಷ್ಮಶರೀರಿ ಜೀವಕ್ಕೆ ಎಲ್ಲ ಇಂದ್ರಿಯಗಳೂ ಇರುತ್ತವೆ. ಆದ್ದರಿಂದ ಈ ಜೀವ ತನ್ನ ಪೂರ್ವಜನ್ಮದ ನೆನಪನ್ನು ಅಂತರಂಗದಲ್ಲಿಟ್ಟುಕೊಂಡು ಗರ್ಭವನ್ನು ಪ್ರವೇಶಿಸುತ್ತಾನೆ. ಪೂರ್ವ ಜನ್ಮದ ಅಧ್ಯಾತ್ಮ ಸಾಧನೆ ಈ ಸೂಕ್ಷ್ಮ ಜೀವದ ಮನಸ್ಸಿನಲ್ಲಿ ಪೂರ್ಣವಾಗಿ ಉಳಿದಿರುತ್ತದೆ. ಇದಕ್ಕಾಗಿ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಾಗುವುದಿಲ್ಲ, ಅದು ಸದಾ ನಮ್ಮೊಂದಿಗೆ ಸಾವಿನಲ್ಲೂ ಜೊತೆಯಾಗಿ ಬರುತ್ತದೆ ಎಂದು ಹೇಳುವುದು. ಏಕೆಂದರೆ ಸಾವು ಕೇವಲ ಸ್ಥೂಲ ಶರೀರಕ್ಕೆ ಹೊರತು ಸೂಕ್ಷ್ಮಶರೀರಕ್ಕಲ್ಲ. ಸಂಮೋಹನ ನಿದ್ರೆಯಲ್ಲಿ(hypnotism) ಜೀವದ ಪೂರ್ವಜನ್ಮದ ವಿಷಯವನ್ನು ತಿಳಿಯಲು ಸಾಧ್ಯವಾಗುವುದು ಈ ಕಾರಣದಿಂದ. ನಮಗೆ ಕೆಲವೊಮ್ಮೆ ಒಬ್ಬರನ್ನು ನೋಡಿದಾಗ ಹಿಂದೆ ತುಂಬ ಪರಿಚಿತರಾಗಿ ನಮ್ಮೊಂದಿಗಿದ್ದವರಂತೆ ಕಂಡರೆ-ಅದಕ್ಕೆ ಪೂರ್ವ ಜನ್ಮದ ನೆನಪೂ ಒಂದು ಕಾರಣವಾಗಿರಬಹುದು. ಈ ನೆನಪು ಒಳಗಿರುವ ಸೂಕ್ಷ ಶರೀರದಲ್ಲಿ ಮಾತ್ರ ಜಾಗೃತವಾಗಿರುತ್ತದೆ-ಆದರೆ ಸ್ಥೂಲ ಇಂದ್ರಿಯದಲ್ಲಿ ಇದು ಜಾಗೃತವಾಗಿರುವುದಿಲ್ಲ. ಹೀಗೆ ಜೀವ ಸ್ಥೂಲ ಶರೀರವನ್ನು ಪ್ರವೇಶ ಮಾಡುವಾಗ ಇಂದ್ರಿಯಗಳನ್ನು ಕರ್ಷಣೆ ಮಾಡಿಕೊಂಡು ಬರುತ್ತಾನೆ ಮತ್ತು ಹೋಗುವಾಗ ಕರ್ಷಣೆ ಮಾಡಿಕೊಂಡು ಹೋಗುತ್ತಾನೆ. ಈ ಕ್ರಿಯೆಯಲ್ಲಿ ಜೀವ ಸ್ವತಂತ್ರನಲ್ಲ. ಇದನ್ನು ಮಾಡಿಸುವವಈಶ್ವರ’. ಇಲ್ಲಿ ಈಶ್ವರ ಎಂದರೆ ಸರ್ವ ಸಮರ್ಥ ಭಗವಂತ ಎಂದರ್ಥ. ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿಈಶ್ವರಃ ಈಶನಶೀಲೋ ನಾರಾಯಣಃಎಂದಿದ್ದಾರೆ. ಇಲ್ಲಿ ಈಶನಶೀಲಃಎಂದರೆ ಸರ್ವಸಮರ್ಥ ಎಂದರ್ಥ.
ಈ ಶ್ಲೋಕದಲ್ಲಿ ಶಬ್ದಗಳ ಚಮತ್ಕಾರವಿದೆ. ಅವಾಪ್ನೋತಿಎನ್ನುವಲ್ಲಿ ಅವಅನ್ನುವುದು ಉಪಸರ್ಗ. ಹದಿನೈದು ಬೇಲಿಗಳೊಂದಿಗೆ ಜೀವ ದೇಹವನ್ನು ಪ್ರವೇಶಿಸುವುದು ಜೀವದ ಬಂಧನ. ಇದು ಒಂದು ರೀತಿಯ ಅಧಃಪಾತ’. ಆದರೆ ಇದು ಊರ್ಧ್ವಗಮನಕ್ಕೆ ಪೂರ್ವ ಜೀವದ ಅಧಃಪಾತ. ಏಕೆಂದರೆ ಜೀವ ಮೋಕ್ಷ ಸೇರಲು ಈ ಸಾಧನಾ ಶರೀರ ಬೇಕೇಬೇಕು. ಇದೇ ರೀತಿ ಜೀವ ದೇಹವನ್ನು ಬಿಟ್ಟು ಹೊರ ಹೋಗುವುದನ್ನು ಉತ್ಕ್ರಾಮತಿಎಂದಿದ್ದಾರೆ. ಸಾವು ಎಂದರೆ ಜೀವನನ್ನು ಭಗವಂತ ಸ್ಥೂಲ ಶರೀರದಿಂದ ಆಚೆ ಕರೆದುಕೊಂಡು ಹೋಗುವುದು. ಇದು ಅಮಂಗಳವಲ್ಲ. ಅದಕ್ಕಾಗಿ ಇಲ್ಲಿ ಉತ್ಎನ್ನುವ ಉಪಸರ್ಗವನ್ನು ಬಳಸಲಾಗಿದೆ. ಇನ್ನು ಭಗವಂತ ಜೀವನನ್ನು ಕರೆತರುವುದನ್ನು ಇಲ್ಲಿ ಸಂಯಾತಿಎಂದಿದ್ದಾರೆ. ಸಂ-ಎಂದರೆ ಸ್ವಯಂ, ಸ್ವೇಚ್ಛಾಯ, ಸ್ವಾತಂತ್ರೇಣ. ಎಲ್ಲವೂ ಭಗವಂತನ ಅಧೀನ, ಜೀವ ಸ್ವತಂತ್ರ ಅಲ್ಲ, ಕೇವಲ ಭಗವಂತ ಸ್ವತಂತ್ರ ಅನ್ನುವುದನ್ನು ಇದು ಸೂಚಿಸುತ್ತದೆ. ಜೀವನಿಗೆ ಹುಟ್ಟುವುದಕ್ಕಾಗಲಿ, ಸಾಯುವುದಕ್ಕಾಗಲಿ ಸ್ವಾತಂತ್ರ್ಯವಿಲ್ಲ. ಎಲ್ಲವೂ ಭಗವಂತನ ನಿಯಮನದಂತೇ ನಡೆಯುತ್ತದೆ.
ಹೇಗೆ ಜೀವ ತನ್ನ ಇಂದ್ರಿಯಗಳೊಂದಿಗೆ ಭಗವಂತನ ಜೊತೆಗೆ ಒಳ ಬರುತ್ತದೆ ಮತ್ತು ಹೊರ ಹೋಗುತ್ತದೆ ಎನ್ನುವುದನ್ನು ಹೂವಿನ ಸುಗಂಧದ ದೃಷ್ಟಾಂತದೊಂದಿಗೆ ಕೃಷ್ಣ ವಿವರಿಸಿದ್ದಾನೆ. ಅರಳಿ ನಿಂತಿರುವ ಹೂವಿನ ಸುಗಂಧ ಹೇಗೆ ನಮ್ಮ ಮೂಗನ್ನು ಬಂದು ಪ್ರವೇಶಿಸುತ್ತದೆಯೋ ಹಾಗೆ ಈ ಜೀವದ ಗತಿ. ಅದು ಕಾಣುವುದಿಲ್ಲ. ಹೂವಿನ ಸುಗಂಧದ ಸೂಕ್ಷ್ಮಾಣುಗಳು ನಮ್ಮ ಮೂಗನ್ನು ಪ್ರವೇಶಿಸುವುದು ನಮಗೆ ತಿಳಿಯುವುದು ಕೇವಲ ಸುವಾಸನೆಯಿಂದ, ಹೊರತು ಭೌತಿಕವಾಗಿ ಅಲ್ಲ. ಜೀವದ ಈ ಎಲ್ಲಾ ಗತಿ ಕೂಡ ಇದೇ ರೀತಿ. ಅದು ಕಾಣುವುದಿಲ್ಲ. ಇದನ್ನೇ ಇನ್ನೂ ಸ್ಪಷ್ಟವಾಗಿ ಕೃಷ್ಣ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 09
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ೯॥
ಶ್ರೋತ್ರಮ್ ಚಕ್ಷುಃ ಸ್ಪರ್ಶನಮ್ ಚ ರಸನಮ್ ಘ್ರಾಣಮ್ ಏವ
ಅಧಿಷ್ಠಾಯ ಮನಃ ಚ ಅಯಮ್ ವಿಷಯಾನ್ ಉಪಸೇವತೇಕಿವಿ, ಕಣ್ಣು, ತೊಗಲು, ನಾಲಿಗೆ, ಮೂಗು ಮತ್ತು ಮನಸ್ಸಿನಲ್ಲಿ ನೆಲೆನಿಂತು 'ಇವನು' ವಿಷಯಗಳನ್ನು ಸವಿಯುತ್ತಾನೆ.
ಭಗವಂತ ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ನಿಯಾಮಕನಾಗಿ ಆಯಾ ರೂಪದಲ್ಲಿ ನಿಂತು, ವಿಷಯಗಳನ್ನು ದುಃಖದ ಲೇಪವಿಲ್ಲದೆ ಗ್ರಹಿಸುತ್ತಾನೆ ಮತ್ತು ನಮಗೆ ವಿಷಯದ ಅನುಭವವನ್ನು ಕೊಡುತ್ತಾನೆ. ಈ ಶ್ಲೋಕ ಭಗವಂತನನ್ನು ಹೇಳುವುದರಿಂದ ಇಲ್ಲಿ ಉಪ-ಸೇವತೆಮತ್ತುಅಧಿಷ್ಠಾಯಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾರೆ. ಉಪ ಅಂದರೆ ಉಪರಿ=ಎತ್ತರ. ನಾವು ಸುಖ-ದುಃಖದಲ್ಲಿ ಮುಳುಗಿ ವಿಷಯ ಭೋಗಿಸಿದರೆ, ಭಗವಂತ ಎಲ್ಲವನ್ನು ಮೀರಿನಿಂತು ದುಃಖದ ಲೇಪವಿಲ್ಲದೆ ಎಲ್ಲವನ್ನು ಅನುಭವಿಸುತ್ತಾನೆ. ಭಗವಂತ ಆಯಾ ಇಂದ್ರಿಯದಲ್ಲಿ ವಿಶೇಷ ರೂಪದಲ್ಲಿ ಸನ್ನಿಹಿತನಾಗಿ ನಿಯಮಿಸುವುದರಿಂದ ಇಲ್ಲಿ ಅಧಿಷ್ಠಾಯಎನ್ನುವ ಪದವನ್ನು ಬಳಸಲಾಗಿದೆ. ಏವ ಮತ್ತು ಚ ಇವೆರಡನ್ನು ಈ ಶ್ಲೋಕದಲ್ಲಿ ಒಟ್ಟಾಗಿ ಬಳಸಲಾಗಿದೆ. ಇದು ಭಗವಂತನ ವಿಶೇಷ ಗುಣವನ್ನು ಬಿಂಬಿಸುತ್ತದೆ. ಆ+ಈ+ವ+ಚ=ಏವಚ( set of abbreviations-ಸಂಕ್ಷೇಪ-ಪದ)-ಅಂದರೆ ಯಾವುದೇ ದೋಷವಿಲ್ಲದ, ಸರ್ವಗುಣಗಳಿಂದ ಸಮುಚ್ಚಿತವಾದ ಜ್ಞಾನಾನಂದಮಯ ಭಗವಂತ.
·  ಶ್ಲೋಕ - 10
ಉತ್ ಕ್ರಾಮಂತಂ ಸ್ಥಿತಂ ವಾSಪಿ ಭುಂಜಾನಂ ವಾ ಗುಣಾನ್ವಿತಮ್ ।
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ ೧೦॥
ಉತ್ ಕ್ರಾಮಂತಮ್ ಸ್ಥಿತಮ್ ವಾ ಅಪಿ ಭುಂಜಾನಮ್ ವಾ ಗುಣ ಅನ್ವಿತಮ್ ।
ವಿಮೂಢಾಃ ನ ಅನುಪಶ್ಯಂತಿ ಪಶ್ಯಂತಿ ಜ್ಞಾನ ಚಕ್ಷುಷಃ ದೇಹ ತೊರೆದು ತೆರಳುವ, ದೇಹದಲ್ಲಿರುವ, ಅಥವಾ ಒಳಿತಿನ ಸಾರವನ್ನು ಸವಿಯುವ ಇವನನ್ನು ತಿಳಿಗೇಡಿಗಳು ತಿಳಿಯಲಾರರು. ತಿಳಿಗಣ್ಣು ತೆರೆದವರು ತಿಳಿಯಬಲ್ಲರು.
ಈ ಶ್ಲೋಕದಲ್ಲಿ ಬಳಸಿರುವಗುಣಾನ್ವಿತಮ್ಎನ್ನುವ ಪದ ಸ್ಪಷ್ಟವಾಗಿ ನಮಗೆ ತಿಳಿಸುತ್ತದೆ-ಇದು ಭಗವಂತನನ್ನು ಹೇಳುವ ಶ್ಲೋಕ ಎಂದು. ಜೀವನನ್ನು ದೇಹಕ್ಕೆ ತರುವ, ಎಚ್ಚರ ಕನಸು ನಿದ್ದೆ ಎನ್ನುವ ಮೂರು ಅವಸ್ಥೆಗಳಲ್ಲಿ ಜೀವನಿಗೆ ವಿಷಯ ಭೋಗವನ್ನು ಕೊಡುವ ಭಗವಂತ-ತಾನು ಸದಾ ಶುಭ ಭೋಗವನ್ನುಣ್ಣುವವ. ದೇಹದಿಂದ ಹೊರ ಹೋಗುವಾಗ, ದೇಹದಲ್ಲಿರುವಾಗ-ಎಲ್ಲವನ್ನು ಮಾಡಿಸುವವ ಆ ಭಗವಂತ. ಆತ ನಮ್ಮೊಳಗೇ ಇದ್ದರು ಕೂಡ ವಿಮೂಢರಿಗೆ ಇದು ತಿಳಿಯುವುದಿಲ್ಲ. ಜ್ಞಾನದ ಕಣ್ಣುತೆರೆದವರು ಮಾತ್ರ ಇದನ್ನು ತಿಳಿಯಬಲ್ಲರು. ಇಲ್ಲಿ ಕೃಷ್ಣ ವಿಮೂಢಮತ್ತುಜ್ಞಾನಚಕ್ಷುಷಃಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾನೆ. ಮೂಢರುಎಂದರೆ ಸತ್ಯವನ್ನು ತಪ್ಪಾಗಿ ತಿಳಿದವರು. ಇವರು ಯಥಾರ್ಥಜ್ಞಾನ ಮರೆಯಾಗಿ ವಿಪರೀತಜ್ಞಾನದಲ್ಲೇ ಬದುಕುತ್ತಿರುತ್ತಾರೆ. ವಿ-ಮೂಢಎಂದರೆ ಎಂದೂ ತಮ್ಮ ತಪ್ಪನ್ನು ತಿಳಿಯದೆ, ತಪ್ಪನ್ನೇ ಸರಿಯೆಂದು ಸದಾ ವಿಪರೀತ ಜ್ಞಾನದಲ್ಲೇ ಬದುಕುವವರು. ಇವರಿಗೆ ಭಗವಂತನನ್ನು ಎಂದೆಂದಿಗೂ ತಿಳಿಯಲು ಸಾಧ್ಯವಿಲ್ಲ. ಭಗವಂತನನ್ನು ಕಾಣುವ ಕ್ಷಮತೆ ಉಳ್ಳವರು ಜ್ಞಾನಚಕ್ಷುಷರು. ಅಂದರೆ ಶಾಸ್ತ್ರವನ್ನು ಓದಿ ಅದರಿಂದ ಅರಿವಿನ ಒಳಗಣ್ಣು ತೆರೆದವರು. ಇವರು ಭಗವಂತನನ್ನು ತಿಳಿಯಬಲ್ಲರು ಮತ್ತು ತಮ್ಮ ಸ್ವರೂಪಭೂತವಾದ ಕಣ್ಣಿನಿಂದ ಭಗವಂತನನ್ನು ಕಾಣಬಲ್ಲರು.
·  ಶ್ಲೋಕ - 11
ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಮ್ ।
ಯತಂತೋSಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ ೧೧॥
ಯತಂತೋ ಯೋಗಿನಃ ಚ ಎನಮ್ ಪಶ್ಯಂತಿ ಆತ್ಮನಿ ಅವಸ್ಥಿತಮ್ ।
ಯತಂತಃ ಅಪಿ ಅಕೃತ ಆತ್ಮಾನಃ ನ ಏನಮ್ ಪಶ್ಯಂತಿ ಅಚೇತಸಃ ಪ್ರಯತ್ನಶೀಲರಾದ ಸಾಧಕರು ತಮ್ಮೊಳಗಿರುವ ಇವನನ್ನುಕಾಣುತ್ತಾರೆ. ತಿಳಿಯಾದ ತಿಳಿವಿರದ ತಿಳಿಗೇಡಿಗಳು ಪ್ರಯತ್ನಿಸಿಯೂ ಇವನನ್ನು ಕಾಣಲಾರರು.
ಭಗವಂತನನ್ನು ಕಾಣಬೇಕಾದರೆ ಕೇವಲ ಶಾಸ್ತ್ರಾಭ್ಯಾಸ ಮಾಡಿದರೆ ಸಾಲದು. ಜ್ಞಾನ ಪಡೆದು ಜ್ಞಾನದಿಂದ ನಿರಂತರ ಸಾಧನೆ ಅಗತ್ಯ. ಧ್ಯಾನ ಯೋಗದಿಂದ ನಿರಂತರ ಭಗವಂತನನ್ನು ಕಾಣುವ ಪ್ರಯತ್ನ ಮಾಡಿದಾಗ- ಆತ್ಮಸಾಕ್ಷಾತ್ಕಾರವಾಗುತ್ತದೆ[ಧ್ಯಾನದ ಕುರಿತು ಅಧ್ಯಾಯ ಆರರಲ್ಲಿ ಈಗಾಗಲೇ ನಾವು ಸಾಕಷ್ಟು ಚರ್ಚಿಸಿದ್ದೇವೆ]. ಭಗವಂತನನ್ನು ಕಾಣಲು ನಮ್ಮ ಪ್ರಯತ್ನದೊಂದಿಗೆ ಆತನ ಅನುಗ್ರಹವೂ ಬೇಕು. ಇಲ್ಲದಿದ್ದರೆ ಯಾವ ಮಹಾಪ್ರಯತ್ನದಿಂದಲೂ ಭಗವಂತನನ್ನು ಕಾಣಲು ಸಾಧ್ಯವಿಲ್ಲ. ಉದಾಹರಣೆಗೆ ನಾವು ಹೊಲವನ್ನು ಚನ್ನಾಗಿ ಉತ್ತು, ಹದಗೊಳಿಸಿ, ಗೊಬ್ಬರ ಹಾಕಿ ಉತ್ತಮ ದರ್ಜೆಯ ಬೀಜ ಬಿತ್ತಬಹುದು, ಆದರೆ ಮಳೆ ಸರಿಯಾಗಿ ಬಾರದಿದ್ದರೆ? ಅತಿ ಮಳೆ ಬಂದು ಕೊಚ್ಚಿಕೊಂಡು ಹೋದರೆ? ಇದೆಲ್ಲವೂ ದೈವಾನುಗ್ರಹ. ಅದಕ್ಕಾಗಿ ನಿರಂತರ ಪ್ರಯತ್ನದೊಂದಿಗೆ ಭಗವಂತನಲ್ಲಿ ಶರಣಾಗತಿ ಬಹಳ ಮುಖ್ಯ. ನನ್ನ ಮನಸ್ಸನ್ನು ಸ್ವಚ್ಛಮಾಡು, ಸ್ವಚ್ಛವಾದ ಮನಸ್ಸಿನಲ್ಲಿ ನೀನು ಬಂದು ನೆಲೆಸುಎಂದು ಆ ಭಗವಂತನನ್ನು ಪ್ರಾರ್ಥಿಸಬೇಕು. ಶುದ್ಧವಾದ ಸಾತ್ವಿಕ ಮನಸ್ಸಿಗೆ 'ವಸುದೇವ' ಎನ್ನುತ್ತಾರೆ. ಆ ವಸುದೇವನಿಗೆ ಕಾಣಿಸಿಕೊಳ್ಳುವ ಭಗವಂತ ವಾಸುದೇವ. ಸಮಸ್ತಶಾಸ್ತ್ರ ಓದಿ ಅಶುದ್ಧಮನಸ್ಸಿನವನಾಗಿದ್ದರೆ (ಅಕೃತಾತ್ಮ=ಅಶುದ್ಧ ಬುದ್ಧಯಃ)- ಎಷ್ಟೇ ಪ್ರಯತ್ನ ಮಾಡಿದರೂ ಭಗವಂತ ಒಲಿಯಲಾರ. ಇದನ್ನೇ ಮಡಿಎನ್ನುವುದು. ಮಾನಸಿಕವಾಗಿ ಮಡಿಯಾಗಿ ನಾವು ಪ್ರಯತ್ನ ಮಾಡಬೇಕು. ನಿರಂತರ ಜ್ಞಾನಪೂರ್ವಕ ಪ್ರಯತ್ನದಿಂದ ನಿನ್ನ ಅತ್ಯಂತ ಸಮೀಪವಿರುವ, ನಿನ್ನಂತರಂಗದೊಳಗೆ ನಿನ್ನ ಜೀವಸ್ವರೂಪದೊಳಗಿರುವ ಭಗವಂತನನ್ನು ಕಾಣುಎನ್ನುತ್ತಾನೆ ಕೃಷ್ಣ. ಹಿಂದಿನ ಶ್ಲೋಕದಲ್ಲಿ ಅಯಮ್(ಎದುರಿಗಿರುವ) ಎಂದ ಕೃಷ್ಣ, ಇಲ್ಲಿ ಏನಮ್’(ನಿನ್ನ ಅತ್ಯಂತ ಸಮೀಪವಿರುವ) ಎಂದ. ನಾವು ಭಗವಂತನನ್ನು ಎಲ್ಲೋ ಹುಡುಕುವುದು ಬೇಡ. ಆತ ನಮ್ಮ ಜೀವ ಸ್ವರೂಪದೊಳಗೇ ಬಿಂಬ ರೂಪನಾಗಿ ನೆಲೆಸಿದ್ದಾನೆ. ಆತನ ನೆಲೆಯಾದ ನಮ್ಮ ಜೀವಸ್ವರೂಪವನ್ನು ತಿಳಿದಾಗ ಆತ ನಮಗೆ ಕಾಣಿಸುತ್ತಾನೆ.
·  ಶ್ಲೋಕ - 12
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್ ।
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ ತೇಜೋ ವಿದ್ಧಿ ಮಾಮಕಮ್ ೧೨॥
ಯತ್ ಆದಿತ್ಯಗತಮ್ ತೇಜಃ ಜಗತ್ ಭಾಸಯತೇ ಅಖಿಲಮ್ ।
ಯತ್ ಚಂದ್ರಮ್ ಅಸಿ ಯತ್ ಚ ಅಗ್ನೌ ತತ್ ತೇಜಃ ವಿದ್ಧಿ ಮಾಮಕಮ್ ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೆ ಬೆಳಕೆಂದು ತಿಳಿ.
ಹಿಂದೆ-ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ನನ್ನನ್ನು ಬೆಳಗಿಸುವುದಿಲ್ಲ ಎಂದಿದ್ದ ಕೃಷ್ಣ, ಇಲ್ಲಿ ಸೂರ್ಯ ಬೆಳಗುವುದು, ಚಂದ್ರ ಬೆಳಗುವುದು, ಅಗ್ನಿ ಬೆಳಗುವುದು -ಎಲ್ಲವೂ ನನ್ನಿಂದ ಎನ್ನುತ್ತಾನೆ. ಎಲ್ಲಾ ಬೆಳಕಿನ ಮೂಲ ಬೆಳಕು ಭಗವಂತ. ಬೆಳಕಿನ ಮೂಲಗಳೆಂದರೆ ಸೂರ್ಯ, ಚಂದ್ರ, ನಕ್ಷತ್ರ, ಮಿಂಚು, ವಿದ್ಯುತ್ ಹಾಗು ಅಗ್ನಿ. ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನು ಕೊಡುವನು ಆ ಭಗವಂತ. ಅಂದರೆ "ಸೂರ್ಯನಿಂದ ಹಿಡಿದು, ಚಂದ್ರ ತಾರೆಗಳಾಗಲಿ, ಆಕಾಶದಲ್ಲಿ ಬೆಳಗುವ ಮಿಂಚಿರಲಿ, ಅಥವಾ ಉರಿಯುವ ಅಗ್ನಿಯಾಗಲಿ, ಎಲ್ಲಾ ಬೆಳಕಿನ ಪುಂಜಗಳು ಬೆಳಗುವುದು ಭಗವಂತನೆಂಬ ಮೂಲ ಬೆಳಕಿನಿಂದ. ಯಾವ ಬೆಳಕು ನಮ್ಮ ಸ್ವರೂಪದೊಳಗೆ ಅಣೋರಣೀಯವಾಗಿ ನಿಂತು ನಮ್ಮನ್ನು ನಡೆಸುತ್ತಿದೆಯೋ, ಅದೇ ಬೆಳಕು ಮಹತೋಮಹಿಯಾಗಿ ಇಡೀ ಬ್ರಹ್ಮಾಂಡವನ್ನು ಬೆಳಗಿಸುತ್ತಿದೆ. ಒಟ್ಟಿನಲ್ಲಿ ಎಲ್ಲ ಬೆಳಕುಗಳ ಮೂಲ ತೇಜಸ್ಸು ಆ ಭಗವಂತ. ಉಪನಿಷತ್ಕಾರರು ಇಂಥಹ ಮಹಾ ಬೆಳಕಿನ ಬಗ್ಗೆ ವಿವರಿಸುತ್ತ ಹೇಳುತ್ತಾರೆ: “..ಯದೇತದ್ ವಿದ್ಯುತೋ ವ್ಯದ್ಯುತದಾ ಇತಿ..ಎಂದು (ಕೇನ-೪.೪). ಅವರು ಇಲ್ಲಿ ಈ ಬೆಳಕನ್ನು ಆ-ಇತಿಎನ್ನುತ್ತಾರೆ. ಅಂದರೆ ಇದೊಂದು 'ವಿಸ್ಮಯ' ಎಂದರ್ಥ. ತಿಳಿಯುವ ತನಕ ಆಶ್ಚರ್ಯ, ತಿಳಿದ ಮೇಲೆ ಆನಂದ.
ಉಪಾಸನೆಯ ದೃಷ್ಟಿಯಲ್ಲಿ ಈ ಶ್ಲೋಕವನ್ನು ನೋಡಿದರೆ: ಸೂರ್ಯನಲ್ಲಿರುವ ತೇಜಸ್ಸು-ನಾರಾಯಣನ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು-ಧನ್ವಂತರಿಯ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು-ಪರಶುರಾಮನ ತೇಜಸ್ಸು. ಹೀಗೆ ಪ್ರತಿಯೊಂದು ಬೆಳಕಿನ ಮೂಲ ಬೆಳಕು ಭಗವಂತ ಎಂದು ನಾವು ಈ ಶ್ಲೋಕದಿಂದ ಉಪಾಸನೆ ಮಾಡಬಹುದು.
·  ಶ್ಲೋಕ - 13
ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ ।
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ ೧೩॥
ಗಾಮ್ ಆವಿಶ್ಯ ಚ ಭೂತಾನಿ ಧಾರಯಾಮಿ ಅಹಮ್ ಓಜಸಾ ।
ಪುಷ್ಣಾಮಿ ಚ ಓಷಧೀಃ ಸರ್ವಾಃ ಸೋಮಃ ಭೂತ್ವಾ ರಸ ಆತ್ಮಕಃ ಭೂಮಿಯೊಳಹೊಕ್ಕು ಜೀವಿಗಳನ್ನು ನಾನೆ ನನ್ನಳವಿನಿಂದ ಹೊತ್ತಿದ್ದೇನೆ. ಅಮೃತ ರಸಮಯನಾದ ಚಂದ್ರನಾಗಿ [ಸೌಮ್ಯರೂಪನಾದ್ದರಿಂದ ಸೋಮನಾಮಕನಾಗಿ ಚಂದ್ರನೊಳಗಿದ್ದು] ಎಲ್ಲ ಸಸ್ಯಗಳನ್ನು ಬೆಳೆಸುತ್ತೇನೆ.
ಇಲ್ಲಿ ಗಾಮ್ ಅಂದರೆ ಪ್ರಥಿವಿ’. ಈ ಭೂಮಿ ಆಕಾಶದಲ್ಲಿ ನಿರಾಲಂಭವಾಗಿ ನಿಲ್ಲುವಂತೆ ಸಂಕರ್ಷಣ ಶಕ್ತಿ (ಶೇಷಶಕ್ತಿ-ಆಕರ್ಷಣಶಕ್ತಿ- Gravitational force) ರೂಪದಲ್ಲಿ ಭೂಮಿಯನ್ನು ಹೊತ್ತವನು ಭಗವಂತ. ಇದು ಭಗವಂತನ ವರಾಹ ಅವತಾರವನ್ನು ವಿವರಿಸುತ್ತದೆ. ಕೆಳಕ್ಕೆ ಕುಸಿದು ನಾಶವಾಗಲಿದ್ದ ಭೂಮಿಯನ್ನು ಭಗವಂತ ವರಾಹ ರೂಪದಲ್ಲಿ ಎತ್ತಿ ಹಿಡಿದ-ಎನ್ನುವುದು ಕಥೆ. ಇಲ್ಲಿ ಭೂಮಿ ಕೆಳಕ್ಕೆ ಕುಸಿಯುವುದು ಅಂದರೆ ಅದು ತನ್ನ ಕಕ್ಷೆಯಿಂದ ಕಳಚುವುದು. ಭೂಮಿ ಕಕ್ಷೆಯನ್ನು ಬಿಟ್ಟರೆ ಅದು ಕ್ಷಣಾರ್ಧದಲ್ಲಿ ನಾಶವಾಗುತ್ತದೆ. ತಾಮಸ ಲೋಕದ ದೈತ್ಯ ಹಿರಣ್ಯಾಕ್ಷ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿದವ.ನನಗೆ ನಿಲ್ಲಲು ಒಂದು ಜಾಗ ಮತ್ತು ಒಂದು ಕೋಲನ್ನು ಕೊಟ್ಟರೆ ನಾನು ಭೂಮಿಯನ್ನು ಕಕ್ಷೆಯಿಂದ ಕಳಚಬಲ್ಲೆಎಂದು ನ್ಯೂಟನ್ ಹೇಳಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಈ ರೀತಿ ತಾಮಸ ಲೋಕದ ಈ ದೈತ್ಯ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿದಾಗ, ಭಗವಂತ ಅದನ್ನು ಮರಳಿ ಕಕ್ಷೆಯಲ್ಲಿಟ್ಟು ರಕ್ಷಿಸಿದ. ವೇದಕಾಲದ ಋಷಿಗಳಿಗೆ 'ಭೂಮಿಯನ್ನು ಧಾರಣೆ ಮಾಡಿದ ಭಗವಂತ ವರಾಹ ರೂಪನಾಗಿ ಕಂಡ'. ಈ ಕಾರಣದಿಂದ ಭೂಮಿಯನ್ನು ಧಾರಣೆ ಮಾಡಿರುವ ಭಗವಂತನ ರೂಪವನ್ನು ವರಾಹ ರೂಪದಲ್ಲಿ ಕಾಣುತ್ತೇವೆ. ವರ=ಶ್ರೇಷ್ಠ. ಗಾಯತ್ರಿಯಲ್ಲಿ ವರೇಣ್ಯಂಎನ್ನುವಲ್ಲಿ ಭೂಮಿಯನ್ನು ಧಾರಣೆ ಮಾಡಿರುವ ಭಗವಂತನ ವರಾಹ ರೂಪದ ಚಿಂತನೆ ಇದೆ. ರಷ್ಯನ್ ವಿಜ್ಞಾನಿ ವಿಲಿಕೋವಸ್ಕಿ(Velikovsky) ತನ್ನ “Worlds in collision” ಎನ್ನುವ ಪುಸ್ತಕದಲ್ಲಿ ಹೇಳುತ್ತಾನೆ : ವೈಜ್ಞಾನಿಕವಾಗಿ ಎರಡು ಬಾರಿ ಭೂಮಿ ತನ್ನ ಕಕ್ಷೆಯಿಂದ ತಪ್ಪಿದ್ದು ನಿಜ, ಆದರೆ ನಮಗೆ ಇದು ಏಕೆ ಎನ್ನುವುದು ತಿಳಿದಿಲ್ಲಎಂದು. ಆತ ಅಲ್ಲಿ ಭಾಗವತವನ್ನು ಉಲ್ಲೇಖಿಸಿ ಹೇಳುತ್ತಾನೆ: ಭಾರತದ ಋಷಿಗಳು ಈ ವಿಚಾರವನ್ನು ತಿಳಿದಿದ್ದರು, ಒಂದು ದುಷ್ಟ ಶಕ್ತಿ ಭೂಮಿಯನ್ನು ಕಕ್ಷೆಯಿಂದ ಕಳಚಿತು, ಹಾಗು ಇನ್ನೊಂದು ದೈವೀ ಶಕ್ತಿ ಅದನ್ನು ಮರಳಿ ಕಕ್ಷೆಯಲ್ಲಿಟ್ಟಿತುಎಂದು. ಇದನ್ನೇ ಈ ಶ್ಲೋಕದಲ್ಲಿ ಕೃಷ್ಣ ಗ್ರಾಮ್ ಧಾರಯಾಮಿಎಂದಿದ್ದಾನೆ.
ಭೂಮಿಯನ್ನು ಧಾರಣೆ ಮಾಡಿರುವ ಭಗವಂತ ಭೂಮಿಯೊಳಗಿದ್ದು, ಪ್ರತಿಯೊಂದು ಜೀವಜಾತದೊಳಗಿದ್ದು ನಮ್ಮನ್ನು ರಕ್ಷಿಸುತ್ತಿದ್ದಾನೆ. ಉಪನಿಷತ್ತಿನಲ್ಲಿ ಹೇಳುವಂತೆ: ಪ್ರಥಿವಿ ಅಂತರೋ ಯಮಯತಿ ಏಷತ ಆತ್ಮಾ ಅಂತರ್ಯಾಮಿ ಅಮೃತಃ”. ಅಂದರೆ "ಪ್ರಥಿವಿಯ ಒಳಗಿದ್ದು ಭಗವಂತ ನಮ್ಮನ್ನು ರಕ್ಷಿಸುತ್ತಿದ್ದರೂ ಕೂಡ, ಅದು ನಮಗೆ ತಿಳಿದಿಲ್ಲ". ಈ ರೀತಿ ಭೂಮಿಯನ್ನು ಧಾರಣೆ ಮಾಡಿ ರಕ್ಷಿಸುವ ಭಗವಂತನ ಶಕ್ತಿಯನ್ನು ಇಲ್ಲಿಓಜಸ್ಸುಎಂದಿದ್ದಾರೆ. ಅಂದರೆ ಎಲ್ಲ ಅಡೆ-ತಡೆಗಳನ್ನು ನಿಗ್ರಹ ಮಾಡುವ ಶಕ್ತಿ.
ನಮ್ಮಲ್ಲಿ ಸಂಧ್ಯಾವಂದನೆ ಮಾಡುವಾಗ ಮನಸ್ಸಿನ ಸ್ನಾನದ ಒಂದು ಕ್ರಮವಿದೆ. ನಮ್ಮ ಸಹಸ್ರಾರದಲ್ಲಿನ ಚಂದ್ರ ಮಂಡಲದಲ್ಲಿ ಕುಳಿತಿರುವ ಧನ್ವಂತರಿಯ ಕೈಯಲ್ಲಿರುವ ಅಮೃತಕಲಶದಿಂದ ಅಮೃತಧಾರೆ ಕೆಳಕ್ಕೆ ಹರಿದು ಬರುತ್ತಿರುವುದನ್ನು ನಾವು ಮಾನಸಿಕವಾಗಿ ಅನುಭವಿಸಿ ಸ್ನಾನ ಮಾಡುವುದು. ಇಲ್ಲಿ ಇಪ್ಪತ್ನಾಲ್ಕು ಬಾರಿ ಓಂ-ವಂಎಂದು ಹೇಳುವುದರಿಂದ ಆ ಚಂದ್ರಮಂಡಲದ ಅಮೃತ ದ್ರವ ಹರಿದು ನಾವು ಒಳಗಿನಿಂದ ಶುದ್ಧರಾಗುತ್ತೇವೆ. ಇದನ್ನು ಭಗವಂತನಲ್ಲಿ ಮನಸ್ಸನ್ನು ಏಕಾಂತಗೊಳಿಸಿ, ಮಾನಸಿಕವಾಗಿ ಅನುಭವಿಸಿಕೊಂಡು ಮಾಡಿದಾಗ ಮನಸ್ಸು ಶುದ್ಧಯಾಗುತ್ತದೆ. ನಮ್ಮಲ್ಲಿರುವ ಎಲ್ಲಕ್ಕಿಂತ ದೊಡ್ಡ ಕೊಳೆ ನಮ್ಮ ಮನಸ್ಸಿನಲ್ಲಿರುವ ಪಾಪಪುರುಷ. ಕೆಟ್ಟ ಭಾವನೆ, ಕೆಟ್ಟ ಯೋಚನೆ, ಅಸೂಯೆ, ಹೀಗೆ ಎಲ್ಲವೂ ತುಂಬಿರುವುದು ನಮ್ಮ ಮನಸ್ಸಿನಲ್ಲಿ. ಅದು ಹೋಗಬೇಕಾದರೆ ಈ ಚಂದ್ರ ಮಂಡಲದ ಅಮೃತ ಕಲಶದಿಂದ ಬರುವ ಅಮೃತ ದ್ರವದಿಂದ ಸ್ನಾನಮಾಡಬೇಕು. ಇದನ್ನೇ ಕೃಷ್ಣ ಇಲ್ಲಿ ಸೋಮೋ ಭೂತ್ವಾ ರಸಾತ್ಮಕಃಎಂದ. ಭಗವಂತ ಸೋಮ ರೂಪದಲ್ಲಿ ಚಂದ್ರನಲ್ಲಿ ತುಂಬಿದ್ದಾನೆ. ಆತ ನೀರಿನ ನಿಯಾಮಕ ಚಂದ್ರನಲ್ಲಿ ಸೋಮನಾಗಿ, ವನಸ್ಪತಿಗಳಲ್ಲಿ ಜೀವರಸ ತುಂಬಿದ. ನಾವು ಯಾವುದನ್ನು ತಿಂದು ಬದುಕುತ್ತೇವೆ ಆ ಗಿಡವನ್ನು ರಕ್ಷಿಸಿ ಬೆಳೆಸುವವ-ಚಂದ್ರನಲ್ಲಿ ತುಂಬಿರುವ ಸೋಮ ರೂಪಿ ಭಗವಂತ.
·  ಶ್ಲೋಕ - 14
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ।
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ೧೪॥
ಅಹಮ್ ವೈಶ್ವಾನರಃ ಭೂತ್ವಾ ಪ್ರಾಣಿನಾಮ್ ದೇಹಮ್ ಆಶ್ರಿತಃ ।
ಪ್ರಾಣ ಅಪಾನ ಸಮಾಯುಕ್ತಃ ಪಚಾಮಿ ಅನ್ನಮ್ ಚತುರ್ವಿಧಮ್ ನಾನು ವೈಶ್ವಾನರನಾಗಿ ಜೀವಿಗಳ ದೇಹದೊಳಗಿದ್ದು ಪ್ರಾಣ-ಅಪಾನರಿಂದೊಡಗೋಡಿ [ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ] ನಾಲ್ಕು ಬಗೆಯ ಆಹಾರವನ್ನು ಕರಗಿಸುತ್ತೇನೆ.
ಇಲ್ಲಿ 'ಪಚಾಮ್ಯನ್ನಂ ಚರ್ತುವಿಧಮ್' ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. ಅನ್ನವೆಂದರೆ ಎಲ್ಲ ರೀತಿಯ 'ಆಹಾರ’. "ಪ್ರಾಣಿನಾಂ ದೇಹಮಾಶ್ರಿತಃ" ಎಂದರೆ 'ಪ್ರಾಣಿಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ. ಭಕ್ಷ್ಯ ಅಂದರೆ ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು); ಭೋಜ್ಯ ಅಂದರೆ ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು). ಲೇಹ್ಯ ಅಂದರೆ ನೆಕ್ಕಿ ತಿನ್ನಲು ಯೋಗ್ಯವಾದುದು; ಚೋಷ್ಯ ಅಂದರೆ ಕುಡಿಯಲು ಯೋಗ್ಯವಾದುದು. ಈ ನಾಲ್ಕು ವಿಧದಅನ್ನವನ್ನು ಸೇವಿಸುವ ಎಲ್ಲ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆ(ಸೂಕ್ಷ್ಮ-ಮಧ್ಯ-ಸ್ಥೂಲ)ಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವ ವೈಶ್ವಾನರ ರೂಪಿ ಭಗವಂತ.
ನಾವು ಸೇವಿಸುವ ಆಹಾರ ಮಣ್ಣು-ನೀರು-ಬೆಂಕಿಯ ಮಿಶ್ರಣ. ಆಹಾರದಲ್ಲಿನ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗು ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ, ಹಾಗು ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ. ಈ ರೀತಿ ಚಿನ್ನದ ಗಣಿಯಿಂದ ಚಿನ್ನವನ್ನು ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ಥಿತ ರೀತಿಯಲ್ಲಿ ಮಾಡಿ, ನಮಗೆ ಜೀವನವನ್ನು ಕೊಡುವವನು ಆ ಭಗವಂತ. ಭಗವಂತನ ಈ ಕಾರ್ಯಕ್ಕೆ ಸೇವಕ ಪ್ರಾಣ-ಅಪಾನ ಎನ್ನುವ ಪ್ರಾಣದೇವರ ಎರಡು ರೂಪಗಳು. ಕಠೋಪನಿಷತ್ತಿನಲ್ಲಿ ಹೇಳುವಂತೆ:
ಊರ್ಧ್ವಂ ಪ್ರಾಣಮುನ್ನಯತಿ ಅಪಾನಂ ಪ್ರತ್ಯಗಸ್ಯತಿ .
ಮಧ್ಯೇ ವಾಮನಮಾಸೀನಂ ವಿಶ್ವೇ ದೇವಾ ಉಪಾಸತೇ ||೨-೨-೩||
ಇಲ್ಲಿ ಪ್ರಾಣ-ಅಪಾನ ಎನ್ನುವ ಪ್ರಾಣದೇವರ ಎರಡು ರೂಪ, ಮಧ್ಯದಲ್ಲಿ(ಹೃದಯದಲ್ಲಿ) ಭಗವಂತನ ವಾಮನ ರೂಪ. ಇದು ಪಂಚರೂಪಿ ಭಗವಂತನ ಉಪಾಸನೆಗಿಂತ ಭಿನ್ನವಾದ ಉಪಾಸನೆ. ಹೃದಯದ ಮಧ್ಯದಲ್ಲಿದ್ದು, ನಾವು ಉಂಡ ಆಹಾರವನ್ನು ಜೀರ್ಣಿಸಿ ಬದುಕು ಕೊಡುವವನು-ವಾಮನ ರೂಪಿ ಭಗವಂತ. ಈ ಮನ್ವಂತರದಲ್ಲಿ ವಾಮನ ದೇವೇಂದ್ರನ ರಕ್ಷನಾಗಿರುವ 'ಉಪೇಂದ್ರ'. ಆದ್ದರಿಂದ ನಮ್ಮ ಹೃದಯದಲ್ಲಿರುವ ವಾಮನ ರೂಪಿ ಭಗವಂತನ ಉಪಾಸನೆ ಈ ಮನ್ವಂತರದಲ್ಲಿ ಬಹಳ ಮುಖ್ಯವಾಗುತ್ತದೆ. ನಮ್ಮೊಳಗೆ ವಾಮನ ರೂಪಿಯಾಗಿರುವ ಈ ಭಗವಂತನೇ ತ್ರಿವಿಕ್ರಮನಾಗಿ ಭೂಮಿ-ವ್ಯೋಮದಲ್ಲಿ ತುಂಬಿರುವವನು.
·  ಶ್ಲೋಕ - 15
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ ಚಾಹಮ್ ॥೧೫॥
ಸರ್ವಸ್ಯ ಚ ಅಹಮ್ ಹೃದಿ ಸನ್ನಿವಿಷ್ಟಃ ಮತ್ತಃ ಸ್ಮೃತಿಃ ಜ್ಞಾನಮ್ ಅಪೋಹನಮ್ ಚ ।
ವೇದೈಃ ಚ ಸರ್ವೈಃ ಅಹಮ್ ಏವ ವೇದ್ಯಃ ವೇದಾಂತಕೃತ್ ವೇದವಿತ್ ಏವ ಚ ಅಹಮ್ಎಲ್ಲ ಹೃದಯದಲ್ಲಿ ನಾನು ನೆಲೆಸಿರುವೆ. ನೆನಪು, ಅರಿವು, ಮರೆವು ಎಲ್ಲ ನನ್ನ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೆ. ವೇದಾಂತ ಸೂತ್ರಗಳ ನೊರೆದವನು, ವೇದಗಳ ಮರ್ಮವನ್ನರಿತವನು ನಾನೆ.
ಸರ್ವಸ್ಯ ಚ ಅಹಮ್ ಹೃದಿ’- ಭಗವಂತ ಅಹಂ ಶಬ್ದ ವಾಚ್ಯನಾಗಿ ನಮ್ಮೊಳಗೆ ತುಂಬಿದ್ದಾನೆ. ನಮ್ಮ ಹೊರಗಿರುವ ಭಗವಂತನ ರೂಪಕ್ಕೆ ಅಹಃಎಂದರೆ, ನಮ್ಮೊಳಗಿನ ಆತನ ರೂಪಕ್ಕೆ ಅಹಂಎನ್ನುತ್ತಾರೆ. ನಮ್ಮೊಳಗಿರುವ ಭಗವಂತ ಸದಾ ನಮ್ಮೊಂದಿಗಿದ್ದು, ನಮ್ಮನ್ನು ರಕ್ಷಿಸುತ್ತಿರುತ್ತಾನೆ. ಸಾವಿನಲ್ಲಿ ಸ್ಥೂಲ ಶರೀರವನ್ನು ಬಿಟ್ಟು ಹೊರಹೋಗುವಾಗ ಕೂಡ ಭಗವಂತ ನಮ್ಮೊಂದಿಗಿರುತ್ತಾನೆ. ಆತ ನಮ್ಮನ್ನು ಒಂದು ಕ್ಷಣ ಬಿಟ್ಟಿರುವುದಿಲ್ಲ. ಆತನ ನೆಲೆ ನಮ್ಮ ಲಿಂಗಶರೀರದೊಳಗಿರುವ ಸ್ವರೂಪದ ಆತ್ಮ. ಈ ಆತ್ಮನೇಅಹಂ’. ಇಂಥಹ ಭಗವಂತನ ಪ್ರಜ್ಞೆ ನಮಗಿದ್ದರೆ ನಾನು ಮಾಡಿದೆಎನ್ನುವ ಅಹಂಕಾರ ನಮ್ಮನ್ನು ಕಾಡದು.
ಕಠೋಪನಿಷತ್ತಿನಲ್ಲಿ ಹೇಳುವಂತೆ: ಅಂಗುಷ್ಠಮಾತ್ರಃ ಪುರುಷೋಽನ್ತರಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ ...”|೨-೩-೭| ಎಲ್ಲ ಜೀವರ ಒಳಗೂ ಅಂಗುಷ್ಠಮಾತ್ರನಾಗಿ ಎಂದೆಂದೂ ದುಃಖದ ಲೇಪವಿಲ್ಲದೆ ನಿರ್ಲಿಪ್ತನಾಗಿ ಭಗವಂತ ತುಂಬಿದ್ದಾನೆ. ಮಧ್ವಾಚಾರ್ಯರು ಕಠೋಪನಿಷತ್ತಿಗೆ ಭಾಷ್ಯ ಬರೆಯುತ್ತ ಹೇಳುತ್ತಾರೆ:
ನಮೋ ಭಗವತೇ ತಸ್ಮೈ ಸರ್ವತಃ ಪರಮಾಯ ತೇ |
ಸರ್ವಪ್ರಾಣಿಹೃದಿಸ್ಥಾಯ ವಾಮನಾಯ ನಮೋ ನಮಃ ||ಸರ್ವಮೂಲ||
ಇಲ್ಲಿ-ಎಲ್ಲರ ಹೃದಯ ಅಂತರ್ಯಾಮಿಯಾಗಿರುವ ಭಗವಂತನ ರೂಪ ವಾಮನರೂಪ ಎನ್ನುವ ಸುಳಿವು ನಮಗೆ ಸಿಗುತ್ತದೆ. ಆದ್ದರಿಂದ ಉಪಾಸನೆಯಲ್ಲಿ ನಾವು ನಮ್ಮ ಅಂತರ್ಗತ ಭಗವಂತನನ್ನು ವಾಮನ ರೂಪದಲ್ಲಿ ಉಪಾಸನೆ ಮಾಡಬೇಕು.
ಮತ್ತಃ ಸ್ಮೃತಿರ್ಜ್ಞಾನಮಪೋಹನಂ”-ನಮಗೆ ಸ್ಮರಣಶಕ್ತಿಯನ್ನು ಕೊಡುವವನು ಆ ಭಗವಂತ. ಜ್ಞಾನ ಬರುವುದೂ ಭಗವಂತನಿಂದ, ಬಂದ ಜ್ಞಾನ ನೆನಪಿನಲ್ಲಿರುವುದೂ ಭಗವಂತನಿಂದ. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಅಥಾಧ್ಯಾತ್ಮಂ ಯದ್ದೇತದ್ಗಚ್ಛತೀವ ಚ ಮನೋSನೇನ ಚೈತದುಪಸ್ಮರತ್ಯಭೀಕ್ಷ್ಣಂ ಸಂಕಲ್ಪಃ || ೪-೫ || ನಮಗೆ ನೆನಪಿನ ಶಕ್ತಿಯನ್ನು ಕೊಡುವ ಭಗವಂತನ ಅನಿರುದ್ಧ ರೂಪದ ಉಪಾಸನೆ ಇದಾಗಿದೆ. ಹೇಗೆ ನೆನಪಿನ ಶಕ್ತಿ ಕೊಡುತ್ತಾನೋ ಹಾಗೆ ಮರೆಯುವಂತೆ ಮಾಡುವವನೂ ಅವನೇ! ಕೆಲವೊಮ್ಮೆ ಅಪರೋಕ್ಷ ಜ್ಞಾನಿಗಳೂ ಕೂಡ ಭಗವಂತನನ್ನು ಮರೆತುಬಿಡುತ್ತಾರೆ(ಭಗವಂತ ಮರೆಯುವಂತೆ ಮಾಡುತ್ತಾನೆ). ಇದಕ್ಕೆ ದೃಷ್ಟಾಂತ ಭಾಗವತದಲ್ಲಿ ಬರುವ ಗರ್ಗಾಚಾರ್ಯರ ಕಥೆ. ಭಗವಂತನಿಗೆ ಕೃಷ್ಣಎಂದು ನಾಮಕರಣ ಮಾಡಿ, ಕೃಷ್ಣನ ಭಕ್ತರಾಗಿದ್ದ ಗರ್ಗಾಚಾರ್ಯರು, ಯಾವುದೋ ಒಂದು ಕೆಟ್ಟ ಸನ್ನಿವೇಶದಲ್ಲಿ ಎಲ್ಲವನ್ನೂ ಮರೆತು, ‘ಕೃಷ್ಣನನ್ನು ಕೊಲ್ಲುವ ಮಗ ಹುಟ್ಟಬೇಕುಎಂದು ತಪಸ್ಸು ಮಾಡುತ್ತಾರೆ! ಎಂಥಾ ವಿಪರ್ಯಾಸ. ಆದರೆ ಇದೆಲ್ಲವೂ ಆ ಭಗವಂತನ ಲೀಲೆ. ಆತನ ಲೀಲೆಯ ಹಿಂದಿರುವುದು ದ್ವೇಷವಲ್ಲ-ಕೇವಲ ಕಾರುಣ್ಯ.
ಕೃಷ್ಣ ಹೇಳುತ್ತಾನೆ: ಸಮಸ್ತ ವೇದಗಳಿಂದ ಅರಿಯಬೇಕಾದವನು ನಾನುಎಂದು. ವೇದದ ಪ್ರತಿಯೊಂದು ಪದವೂ ಭಗವದ್ ಪರವಾಗಿದೆ ಎನ್ನುವುದನ್ನು ಬ್ರಹ್ಮಸೂತ್ರ ಸ್ಪಷ್ಟವಾಗಿ ಹೇಳುತ್ತದೆ. ವೇದಾಂತ ಎಂದರೆ ಉಪನಿಷದ್ ಎಂದು ಕೆಲವರು ಹೇಳುವುದುಂಟು. ಆದರೆ ವೇದಾಂತ ಅಂದರೆ 'ವೇದದ ನಿರ್ಣಯ'-ಅದೇ ಬ್ರಹ್ಮಸೂತ್ರ. ಇದು ಸಮಸ್ತ ವೇದವನ್ನು ಸಮನ್ವಯ ಮಾಡಿ ಹೇಳುವ ಗ್ರಂಥ. ವೇದ ಅನಾದಿನಿತ್ಯ, ವೇದದ ಮರ್ಮವನ್ನು ಪೂರ್ಣ ತಿಳಿದವನು ಆ ಭಗವಂತನೊಬ್ಬನೆ.
ವೇದೈಶ್ಚ ಸರ್ವೈರಹಮೇವ ವೇದ್ಯೋಎನ್ನುವಲ್ಲಿ ಚ-ಕಾರವನ್ನು ಮತ್ತು ಏವ-ಕಾರವನ್ನು ಬಳಸಿದ್ದಾರೆ. ಇಲ್ಲಿ ಚ-ಕಾರದಿಂದಾಗಿ ಈ ಸಾಲು ಎರಡು ಸಂದೇಶವನ್ನು ಕೊಡುತ್ತದೆ. ಒಂದು ಮುಖ್ಯಾರ್ಥ ಇನ್ನೊಂದು ಅಮುಖ್ಯಾರ್ಥ. ಭಗವಂತ ವೇದಗಳಿಂದಲೇ ವೇದ್ಯಎನ್ನುವುದು ಮುಖ್ಯಾರ್ಥ. ಪಂಚಮ ವೇದವೆನಿಸಿರುವ ಪುರಾಣ ಗ್ರಂಥಗಳು, ವೇದಾಂತ, ಮಹಾಭಾರತ, ರಾಮಾಯಣ ಇತ್ಯಾದಿಗಳಿಂದಲೂ ಭಗವಂತ ವೇದ್ಯ-ಎನ್ನುವುದು ಅಮುಖ್ಯಾರ್ಥ. ಇದಲ್ಲದೆ ಸ್ಮೃತಿಗಳಿವೆ-ಆದರೆ ಅದನ್ನು ಪ್ರಮಾಣವೆಂದು ಸ್ವೀಕಾರ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸ್ಮೃತಿಗಳನ್ನು ಆಯಾ ಕಾಲದ ರಾಜರುಗಳು ತಮ್ಮ ವಿದ್ವಾಂಸರಿಂದ ಆಯಾ ಕಾಲಕ್ಕನುಗುಣವಾಗಿ ಬರೆಸಿದ್ದರಿಂದ, ಅವು ಸಂವಿಧಾನವಿದ್ದಂತೆ. ಅಲ್ಲಿ ಆಯಾಕಾಲದ ಸಮಾಜಧರ್ಮ ಜೊತೆಯಾಗಿ ಬಂದಿರುವುದರಿಂದ ಅದು ಸಾರ್ವಕಾಲಿಕ ಸತ್ಯವಾಗಿರಬೇಕೆಂದೇನೂ ಇಲ್ಲ. ಸಾರ್ವಕಾಲಿಕ ಸನಾತನ ಸತ್ಯ ವೇದ ಮಾತ್ರ.
ಅಹಮೇವ ವೇದಃಎನ್ನುವಲ್ಲಿ ವೇದಗಳಿಂದ ತಿಳಿಯಲ್ಪಡುವವನು ನಾನೊಬ್ಬನೆ ಎನ್ನುವುದು ಮುಖ್ಯಾರ್ಥ. ಅಮುಖ್ಯವಾಗಿ ಇದು ಭಗವಂತನ ಪಾರಮ್ಯಕ್ಕೆ ಪೂರಕವಾದ ವಿಷಯಗಳನ್ನೂ ಹೇಳುತ್ತದೆ. ಇಲ್ಲಿ ವೇದಗಳಿಂದ ತಿಳಿಯಲ್ಪಡುವವನು ನಾನೊಬ್ಬನೆಎಂದು ಹೇಳುವುದರ ಮೂಲಕಬಹುದೇವತಾ ವಾದವನ್ನು ಕೃಷ್ಣ ತಳ್ಳಿಹಾಕಿದ. ಭಗವಂತ ಒಬ್ಬನೆ ಎನ್ನುವುದನ್ನು ವೇದ ಸಾರಿ ಹೇಳುತ್ತದೆ. ಇದಕ್ಕೆ ಬೇರೆ ಪ್ರಮಾಣ ಬೇಕಾಗಿಲ್ಲ.
ವೇದಾಂತಕೃದ್ ವೇದವಿದೇವ ಚಾಹಮ್ಎನ್ನುವಲ್ಲಿ ಕೃಷ್ಣ ವೇದದ ಪೂರ್ಣ ಅರ್ಥ ತಿಳಿದಿರುವುದು ನನಗೊಬ್ಬನಿಗೆಎಂದ. ಭಾಗವತದಲ್ಲಿ ಬರುವ ಉದ್ಧವಗೀತೆಯಲ್ಲಿ ಕೃಷ್ಣ ಹೇಳುತ್ತಾನೆ:
ಕಿಂ ವಿಧತ್ತೇ ಕಿಮಾಚಷ್ಟೇ ಕಿಮನೂದ್ಯ ವಿಕಲ್ಪಯೇತ್ |
ಇತ್ಯಸ್ಯಾ ಹೃದಯಂ ಲೋಕೇ ನಾನ್ಯೋ ಮದ್ವೇದ ಕಶ್ಚನ || ೧೧-೨೧-೪೨||
ಮಾಂ ವಿಧತ್ತೇಽಭಿಧತ್ತೇ ಮಾಂ ವಿಕಲ್ಪ್ಯಾಪೋಹ್ಯತೇ ತ್ವಹಂ |
ಏತಾವಾನ್ಸರ್ವವೇದಾರ್ಥಃ ಶಬ್ದ ಆಸ್ಥಾಯ ಮಾಂ ಭಿದಾಂ |
ಮಾಯಾಮಾತ್ರಮನೂದ್ಯಾಂತೇ ಪ್ರತಿಷಿಧ್ಯ ಪ್ರಸೀದತಿ ||೧೧-೨೧-೪೩||
ವೇದದ ಪ್ರತಿಯೊಂದು ಶಬ್ದವೂ ಭಗವಂತನನ್ನು ಹೇಳುತ್ತದೆ ಎಂದು ಇಲ್ಲಿ ಕೃಷ್ಣ ಸ್ಪಷ್ಟವಾಗಿ ವಿವರಿಸಿದ್ದಾನೆ. ಆದರೆ ನಾವು ವೇದವನ್ನು ಮೇಲ್ನೋಟದಲ್ಲಿ ನೋಡಿದಾಗ- ವೇದಕರ್ಮ-ಬೋಧಕ’, ಪ್ರತಿಯೊಂದು ಪದವೂ ಕರ್ಮವಾಚಕಪದ ಎನ್ನುವಂತೆ ಕಾಣುತ್ತದೆ. ಆದರೆ ಆ ರೀತಿ ತಿಳಿಯುವುದು ತಪ್ಪು. ಕ್ರಿಯೆ ಮಾಡುವುದರಿಂದ ಮನಸ್ಸು ಸ್ವಚ್ಛವಾಗುತ್ತದೆ, ಶುದ್ಧ ಮನಸ್ಸಿಗೆ ಜ್ಞಾನ ಬಹುಬೇಗ ಹತ್ತುತ್ತದೆ. ಇದರಿಂದ ಭಗವಂತನನ್ನು ತಿಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ವೇದದಲ್ಲಿ ಬರುವ ಪ್ರತಿಯೊಂದು ಕ್ರಿಯೆಯೂ ಹೇಳುವುದು ಭಗವಂತನನ್ನು. ವೇದ ಒಂದು ಕಡೆ ಈ ಕ್ರಿಯೆ ಮಾಡು ಎಂದರೆ ಇನ್ನೊಂದು ಕಡೆ ಇನ್ನೊಂದು ಕ್ರಿಯೆಯನ್ನು ಮಾಡಬೇಡ ಎನ್ನುತ್ತದೆ. ಉದಾಹರಣೆಗೆ ಸೋಮಪಾನ ಮಾಡು-ಸುರಪಾನ ಮಾಡಬೇಡಎನ್ನುತ್ತದೆ ವೇದ. ಇದರ ಅರ್ಥ : ಸೋಮಪಾನ ಅಧ್ಯಾತ್ಮ ಚಿಂತನೆಗೆ ಮನಸ್ಸನ್ನು ಅಣಿಗೊಳಿಸುತ್ತದೆ, ಅದರಿಂದ ಭಗವಂತನನ್ನು ತಿಳಿಯಬಹುದು; ಸುರಪಾನ ಮಾಡಿದರೆ ಅದರಿಂದ ಬುದ್ಧಿ ಕೆಡುತ್ತದೆ ಅದು ಭಗವಂತನಿಂದ ನಮ್ಮನ್ನು ದೂರ ಮಾಡುತ್ತದೆ. ಹೀಗೆ ವೇದದಲ್ಲಿ ಹೇಳುವ ಪ್ರತಿಯೊಂದು ಕ್ರಿಯೆಯೂ ಅಂತತಃ ಭಗವಂತನನ್ನೇ ಹೇಳುತ್ತವೆ. ಕೆಲವು ಕಡೆ ವೇದ ಸೃಷ್ಟಿ-ಸಂಹಾರದ ಬಗ್ಗೆ ಹೇಳುತ್ತದೆ; ಸೃಷ್ಟಿಯ ಕ್ರಮವನ್ನು ಹೇಳುತ್ತದೆ. ಇದು ಭಗವಂತ ಈ ರೀತಿ ಸೃಷ್ಟಿ ಕ್ರಿಯೆಯನ್ನು ಮಾಡುತ್ತಾನೆಎಂದು ಭಗವಂತನನ್ನೇ ಹೇಳುವ ಸಾಲುಗಳು.
ವೇದ ಸೂಕ್ತಗಳು ಒಂದೊಂದು ಕಡೆ ಒಂದೊಂದು ದೇವತೆಗಳ ಹೆಸರನ್ನು ಹೇಳುತ್ತವೆ. ಒಂದು ಕಡೆ ಅಗ್ನಿ, ಇನ್ನೊಂದು ಕಡೆ ಇಂದ್ರ, ಮತ್ತೊಂದು ಕಡೆ ಸರಸ್ವತಿ, ಹೀಗೆ. ಇಲ್ಲಿ ನಮಗೆ ಇದು ಬಹುದೇವತಾ ವಾದವಾಗಿ ಕಾಣಬಹುದು. ಆದರೆ ಕೃಷ್ಣ ಹೇಳಿದ ಅಭಿಧತ್ತೇ ಮಾಂಎಂದು. ಉದಾಹರಣೆಗೆ ಆತ್ಮನಃ ಆಕಾಶಃ ಸಂಭೂತಃ”. ಅಹಂಕಾರ ತತ್ವದಿಂದ ಆಕಾಶ ದೇವತೆ-ಗಣಪತಿ ಹುಟ್ಟಿದ. ಆಕಾಶ ಸೃಷ್ಟಿ ಎಂದರೆ ಇದ್ದ ಅವಕಾಶದಲ್ಲಿ(Space), ಒಂದು ಆವರಣ(ವಾತಾವರಣ) ಸೃಷ್ಟಿ. ಅದರ ಅಭಿಮಾನಿ ದೇವತೆಯಾಗಿ ಗಣಪತಿ ಹುಟ್ಟಿದ. ಗಣಪತಿಯೊಳಗೆ ಆಕಾಶದಲ್ಲಿ ತುಂಬಿರುವ ಭಗವಂತ-ಆಕಾಶನಾಮಕನಾಗಿ ಅವತರಿಸಿದ. ಹೀಗೆ ಪ್ರತಿಯೊಂದು ವೇದ ಶ್ಲೋಕವೂ ಕೂಡ ಅಂತತಃ ಹೇಳುವುದು ಭಗವಂತನನ್ನು.
ವೇದದಲ್ಲಿ ಬರುವ ಪ್ರತಿಯೊಂದು ಶಬ್ದಗಳು ಭಗವಂತನನ್ನು ಹೇಗೆ ಹೇಳುತ್ತವೆ ಎನ್ನುವುದನ್ನು ಈ ಉದಾಹರಣೆಯಲ್ಲಿ ಕಾಣಬಹುದು. ಉದಾಹರಣೆ: ಅಗ್ನಿ’. ಅ+ಗ+ನಿ=ಅಗ್ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು-ಅಗ-ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವ ಆದ್ದರಿಂದ ಆತ ಅಗ್ನಿ.
ವೇದದಲ್ಲಿರುವ ಒಂದೊಂದು ಅಕ್ಷರವೂ ಭಗವಂತನ ನಾಮ(abbreviation). ಉದಾಹರಣೆಗೆ ''. ಅ=ಅಜಃ(ಹುಟ್ಟಿಲ್ಲದವನು); ಅ=ಅನಂತಃ(ಸಾವಿಲ್ಲದವನು). ಹಾಗೆ ''. ಆ=ಆದಿಃ(ಎಲ್ಲಕ್ಕಿಂತ ಮೊದಲಿದ್ದವನು); ಆ=ಆನಂದಃ; ಇತ್ಯಾದಿ. ವರಾಹ ಪುರಾಣದಲ್ಲಿ ವೇದವ್ಯಾಸರು ಹೇಳುತ್ತಾರೆ: "ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಹ" ಎಂದು. ಋಗ್ವೇದದಲ್ಲಿ 4 ಲಕ್ಷದ 32 ಸಾವಿರ ಅಕ್ಷರಗಳಿವೆ. ಆದ್ದರಿಂದ ಪ್ರಾಚೀನರ ಪ್ರಕಾರ ಒಮ್ಮೆ ಋಗ್ವೇದ ಓದಿದರೆ 4 ಲಕ್ಷದ 32 ಸಾವಿರ ಭಗವಂತನ ನಾಮವನ್ನು ಹೇಳಿದ ಹಾಗಾಗುತ್ತದೆ. ಒಟ್ಟಿನಲ್ಲಿ ವೇದದ ಅಕ್ಷರದಿಂದ ಭಗವಂತನನ್ನು ಕಾಣುವುದು, ಪದದಿಂದ ಭಗವಂತನನ್ನು ಕಾಣುವುದು, ವಾಕ್ಯದಿಂದ ಭಗವಂತನನ್ನು ಕಾಣುವುದು ಮತ್ತು ಪ್ರಕರಣದಲ್ಲಿ ಭಗವಂತನನ್ನು ಕಾಣುವುದು. ಹೀಗೆ ವೇದವನ್ನು ಬಿಡಿಸಿ ನೋಡಿದಾಗ ಮಾತ್ರ ನಮಗೆ ಅಲ್ಲಿರುವ ಸಂದೇಶ ತಿಳಿಯುತ್ತದೆ. ಇಲ್ಲದಿದ್ದರೆ ಎಲ್ಲವೂ ಲೌಕಿಕವಾಗಿ ಕಾಣುತ್ತದೆ. ಆದರೆ ಎಲ್ಲವನ್ನು ನಾವು ತಿಳಿಯಲು ಸಾಧ್ಯವಿಲ್ಲ(ನಾನ್ಯೋ ಮದ್ವೇದ ಕಶ್ಚನ). ಅದನ್ನು ಪೂರ್ಣವಾಗಿ ತಿಳಿದವನು ಆ ಭಗವಂತನೊಬ್ಬನೆ.
·  ಶ್ಲೋಕ - 16
ಮುಂದಿನ ಮೂರು ಶ್ಲೋಕಗಳು ಭಾರತೀಯ ತತ್ವಶಾಸ್ತ್ರದ ಚಿಂತನಾಕ್ರಮದ ಸಾರ. ಇವು ವಿಶ್ವ ಮತ್ತು ವಿಶ್ವಾತ್ಮನ ಅನುಸಂಧಾನವನ್ನು ವಿವರಿಸುವ ಶ್ಲೋಕಗಳು.
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋSಕ್ಷರ ಉಚ್ಯತೇ ೧೬॥
ದ್ವಾವಿಮೌ ಪುರುಷೌ ಲೋಕೇ ಕ್ಷರಃ ಚ ಅಕ್ಷರಃ ಏವ ಚ ।
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥಃ ಅಕ್ಷರಃ ಉಚ್ಯತೇಲೋಕದಲ್ಲಿ ಈ ಎರಡು ಬಗೆಯ ಪುರುಷರು: ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೆ ಅಕ್ಷರ ಪುರುಷಳೆನ್ನಿಸಿದ್ದಾಳೆ.
ಈ ಚೇತನಾ ಪ್ರಪಂಚದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಒಂದು ಕ್ಷರಪುರುಷ ಮತ್ತು ಇನ್ನೊಂದು ಅಕ್ಷರಪುರುಷ. [ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಈ ಬಗ್ಗೆ ವಿಶೇಷವಾಗಿ ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ]. ಒಂದು ದಿನ ಬಿದ್ದುಹೋಗುವ ಶರೀರ ಉಳ್ಳವರು ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ಜೀವರೂ ಕೂಡ ಕ್ಷರಪುರುಷರು. ಬ್ರಹ್ಮಾದಿ ಸಮಸ್ತ ದೇವತೆಗಳೂ ಕೂಡ ಮೋಕ್ಷವನ್ನು ಸೇರುವಾಗ ತಮ್ಮ ಶರೀರ ಸಮೇತರಾಗಿ ಹೋಗುವಂತಿಲ್ಲ. ಚತುರ್ಮುಖ ಬ್ರಹ್ಮನ ಆಯಸ್ಸು ಒಂದು ಬ್ರಹ್ಮಕಲ್ಪ(೩೧,೧೦೪ ಸಾವಿರ ಕೋಟಿ ಮಾನವ ವರ್ಷ=ಚತುರ್ಮುಖನ ನೂರು ವರ್ಷ). ಆ ನಂತರ ಆತನ ಶರೀರ ಕೂಡ ಬಸ್ಮವಾಗುತ್ತದೆ. ಇದನ್ನು ಈಶೋಪನಿಷತ್ತಿನಲ್ಲಿ ಹೀಗೆ ವಿವರಿಸಿದ್ದಾರೆ: ವಾಯುರನಿಲಮ್ ಅಮೃತಮ್ ಅಥೇದಂ ಭಸ್ಮಾಂತಂ ಶರೀರಂ || ೧೭||”. “ಭಗವಂತನಿಗೆ ಅಧಿಷ್ಠಾನವಾಗಿ ನಿಂತಿರುವ ಪ್ರಾಣ ದೇವರು ಅಮೃತರು. ಆದರೂ ಕೂಡ, ಒಂದು ದಿನ ಅವರ ದೇಹ ಬಸ್ಮವಾಗಲೇ ಬೇಕುಎಂದು. ಹೀಗೆ ಸಮಸ್ತ ದೇವತೆಗಳು, ಜೀವಜಾತಗಳು-ಕ್ಷರಪುರುಷರು.
ನಾಶವಿಲ್ಲದ ಜ್ಞಾನಾನಂದಮಯ ಸ್ವರೂಪಭೂತವಾದ ದೇಹವುಳ್ಳ ಶ್ರೀಲಕ್ಷ್ಮಿ ಅಕ್ಷರಪುರುಷಳು. ಸಮಸ್ತ ಕ್ಷರಪುರುಷರೂ ಮೋಕ್ಷದಲ್ಲಿ ಅಕ್ಷರರಾಗುತ್ತಾರೆ. ಆದರೆ ಲಕ್ಷ್ಮಿ ಸದಾ ಅಕ್ಷರಳು. ಇಲ್ಲಿ ಲಕ್ಷ್ಮಿಯನ್ನು ಕೂಟಸ್ಥಳು ಎಂದು ವರ್ಣಿಸಿದ್ದಾರೆ. ಕೂಟ ಎಂದರೆ ಕೂಡುವುದು’. ಜೀವ ಮತ್ತು ಶರೀರದ ಕೂಡುವಿಕೆಗೆ ಕಾರಣಳಾದವಳು ತಾಯಿ-ಶ್ರೀಲಕ್ಷ್ಮಿ. ಸದಾ ನಿರ್ಲಿಪ್ತಳಾಗಿ, ಯಾವುದೇ ಲೇಪವಿಲ್ಲದೆ, ಪ್ರಪಂಚವನ್ನು ವ್ಯವಸ್ಥೆಗೊಳಿಸಿದ ಶಕ್ತಿಜಗನ್ಮಾತೆ ಶ್ರೀಲಕ್ಷ್ಮಿ. ಇವಳು ಅಕ್ಷರಪುರುಷಳು.
·  ಶ್ಲೋಕ - 17
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುಧಾಹೃತಃ ।
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ ೧೭॥
ಉತ್ತಮಃ ಪುರುಷಃ ತು ಅನ್ಯಃ ಪರಮ ಆತ್ಮಾ ಇತಿ ಉಧಾಹೃತಃ ।
ಯಃ ಲೋಕತ್ರಯಮ್ ಆವಿಶ್ಯ ಬಿಭರ್ತಿ ಅವ್ಯಯಃ ಈಶ್ವರಃ ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೆ ಮೂರು ಲೋಕದೊಳಗಿದ್ದು ಸಲಹುತ್ತಾನೆ.
ಕ್ಷರ ಮತ್ತು ಅಕ್ಷರವನ್ನು ಮೀರಿ ನಿಂತಿರುವ ಪರಮಪುರುಷ ಆ ಭಗವಂತ. ಅವನನ್ನೇಪರಮಾತ್ಮಎಂದು ಕರೆಯುತ್ತಾರೆ. ಯಾರು ಈ ಮೂರು ಲೋಕದೊಳಗೆ, (ಭೂಃ ಭುವಃ ಸ್ವಃ ಅಥವಾ ಇಡೀ ಬ್ರಹ್ಮಾಂಡ-ಇದನ್ನು ಏಳು ಅಥವಾ ಹದಿನಾಲ್ಕು ಲೋಕವನ್ನಾಗಿಯೂ ವಿಭಾಗ ಮಾಡಿ ಹೇಳುತ್ತಾರೆ.) ತುಂಬಿ ಧಾರಣೆ ಮಾಡಿ ರಕ್ಷಿಸುತ್ತಿದ್ದಾನೋ ಅವನು ಸರ್ವಶಕ್ತ(ಈಶ್ವರ)ನಾದ ಭಗವಂತ.
·  ಶ್ಲೋಕ - 18
ಯಸ್ಮಾತ್ ಕ್ಷರಮತೀತೋSಹಮಕ್ಷರಾದಪಿ ಚೋತ್ತಮಃ ।
ಅತೋSಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ೧೮॥
ಯಸ್ಮಾತ್ ಕ್ಷರಮ್ ಅತೀತಃ ಅಹಮ್ ಅಕ್ಷರಾತ್ ಅಪಿ ಚ ಉತ್ತಮಃ ।
ಅತಃ ಅಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷ ಉತ್ತಮಃ ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕಿಂತಲೂ ಹಿರಿಯನು. ಅದಕೆಂದೆ ಲೋಕದಲ್ಲು ವೇದದಲ್ಲು ಪುರುಷೋತ್ತಮಎಂದೆ ಹೆಸರಾಗಿದ್ದೇನೆ.
ಹಿಂದಿನ ಶ್ಲೋಕದಲ್ಲಿ ಯಾರು ಕ್ಷರಾಕ್ಷರಗಳಿಂದ ಅತೀತನೋ ಅವನು ಪುರುಷೋತ್ತಮಎಂದು ಹೇಳಿದ ಕೃಷ್ಣ, ಇಲ್ಲಿ ನೇರವಾಗಿ ಆ ಬೇರೆಯಾದ ಪುರುಷೋತ್ತಮ ನಾನೆಎಂದು ಸ್ಪಷ್ಟವಾಗಿ ಹೇಳುತ್ತಾನೆ. ಮಧ್ವಾಚಾರ್ಯರು ವಿಷ್ಣುತತ್ವ ನಿರ್ಣಯದ ಮಂಗಳಾಚರಣೆಯಲ್ಲಿ ಹೇಳುತ್ತಾರೆ:ಸದಾಗಮೈಕ ವಿಜ್ಞೇಯಂ ಸಮತೀತ ಕ್ಷರಾಕ್ಷರಂ ನಾರಾಯಣಂ ಸದಾ ವಂದೇ ನಿರ್ದೋಷ ಅಶೇಷ ಸದ್ಗುಣಂಎಂದು. ಇಲ್ಲಿ ಕ್ಷರ ಮತ್ತು ಅಕ್ಷರದಿಂದ ಅತೀತನಾದ ಭಗವಂತನನ್ನು ಅವರುಸಮತೀತ ಕ್ಷರಾಕ್ಷರಂಎಂದು ಕರೆದಿದ್ದಾರೆ.
ಈ ಶ್ಲೋಕದಲ್ಲಿ ಕ್ಷರದಿಂದ ಅತೀತ ಮತ್ತು ಅಕ್ಷರದಿಂದ ಉತ್ತಮ ಎಂದಿದೆ. ಇಲ್ಲಿ ಅತೀತ ಎಂದರೆ ಉತ್ತಮ. ಆದರೂ ಅತೀತ ಮತ್ತು ಉತ್ತಮ ಎಂದು ಎರಡು ಪದ ಬಳಕೆ ಮಾಡಿದ್ದಾರೆ. ಇದು ಒಂದು ವಿಶೇಷ ಅರ್ಥವನ್ನು ಕೊಡುತ್ತದೆ. ಕ್ಷರಪುರುಷನ ಅಸ್ತಿತ್ವದ ವ್ಯಾಪ್ತಿ ಈ ಬ್ರಹ್ಮಾಂಡದ ಒಳಗೆ. ಆದರೆ ಲಕ್ಷ್ಮೀ ನಾರಾಯಣರು ಈ ಬ್ರಹ್ಮಾಂಡವನ್ನು ಮೀರಿ ನಿಂತವರು. ಇದನ್ನು ಅತೀತಪದ ವಿವರಿಸುತ್ತದೆ. ಭಗವಂತ ಅಕ್ಷರಳಾದ ಲಕ್ಷ್ಮಿಗಿಂತಲೂ ಉತ್ತಮ. ಶ್ಲೋಕದಲ್ಲಿ ಅಪಿಮತ್ತು ಚ-ಕಾರವನ್ನುಒಟ್ಟಿಗೆ ಬಳಸಲಾಗಿದೆ. ಇದು ಭಗವಂತನ ಸರ್ವಶ್ರೇಷ್ಠತ್ವವನ್ನು ಹೇಳುತ್ತದೆ. ಆತನಿಗಿಂತ ಶ್ರೇಷ್ಠವಾದ ತತ್ವ ಇನ್ನೊಂದಿಲ್ಲ.
ಪುರುಷೋತ್ತಮ ಪದದ ಎಲ್ಲ ಮುಖದ ಅರ್ಥ ಕೇವಲ ಭಗವಂತನಲ್ಲಿ ಮಾತ್ರ ಅನ್ವಯವಾಗುತ್ತದೆ. ಕೃಷ್ಣ ಹೇಳುತ್ತಾನೆ: ಲೋಕದಲ್ಲಿ ಮತ್ತು ವೇದದಲ್ಲಿ ಪುರುಷೋತ್ತಮ ಎಂದು ಕರೆದಿರುವುದು ನನ್ನನ್ನುಎಂದು. ಇಲ್ಲಿ ಲೋಕ ಎಂದರೆ ಪೌರುಷೇಯವಾದ ಪುರಾಣ ಗ್ರಂಥಗಳು. ಉದಾಹರಣೆಗೆ: ರಾಮಾಯಣ, ಮಹಾಭಾರತ, ಪಂಚರಾತ್ರ, ಪುರಾಣ, ಇತ್ಯಾದಿ. ಹೀಗೆ ಪುರುಷೋತ್ತಮಎನ್ನುವುದು ಪರಮ ಮುಖ್ಯವಾಗಿ ಕೇವಲ ಭಗವಂತನಿಗೆ ಮಾತ್ರ ಅನ್ವಯ.
·  ಶ್ಲೋಕ - 19
ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿದ್ ಭಜತಿ ಮಾಂ ಸರ್ವಭಾವೇನ ಭಾರತ ೧೯॥
ಯಃ ಮಾಮ್ ಏವಮ್ ಅಸಮ್ಮೂಢಃ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿತ್ ಭಜತಿ ಮಾಮ್ ಸರ್ವಭಾವೇನ ಭಾರತ ಭ್ರಾಂತಿಯಳಿದು, ಹೀಗೆ ನನ್ನನ್ನು ಪುರುಷೋತ್ತಮನೆಂದು ತಿಳಿದವನು ಎಲ್ಲವನ್ನು ತಿಳಿದವನು. ಓ ಭಾರತ, ಎಲ್ಲ ಬಗೆಯಿಂದಲೂ ಅವನು ನನ್ನನ್ನೆ ಆರಾಧಿಸುತ್ತಾನೆ.
ಇಲ್ಲಿ ಹೇಳಿರುವ ವಿಚಾರಗಳನ್ನು ತಿಳಿದು ನಮಗೇನು ಲಾಭ ಎಂದು ಪ್ರಶ್ನೆ ಮಾಡುವವರಿಗೆ ಕೃಷ್ಣನ ಉತ್ತರ ಈ ಶ್ಲೋಕದಲ್ಲಿದೆ. ಕೃಷ್ಣ ಹೇಳುತ್ತಾನೆ: ನನ್ನನ್ನು ಪುರುಷೋತ್ತಮ ಎಂದು ಅಹಂಕಾರವಿಲ್ಲದೆ, ಸ್ವಚ್ಛವಾದ ಮನಸ್ಸಿನಿಂದ, ಕೊಪವನ್ನು ಗೆದ್ದು, ಮೋಹವಳಿದು ತಿಳಿದವನು- ಎಲ್ಲವನ್ನು ತಿಳಿದವನುಎಂದು. ನಮಗೆ ಭಗವಂತನ ಅಸ್ತಿತ್ವ ಅರ್ಥವಾಗಬೇಕಾದರೆ ಮೊದಲು ಜಡಕ್ಕಿಂತ ಭಿನ್ನವಾದ ನಾನುಎನ್ನುವ ಚೇತನ ಈ ದೇಹದಲ್ಲಿದೆ ಎಂದು ಅರ್ಥವಾಗಬೇಕು(awareness of self). ಹೀಗೆ ಆತ್ಮಸಾಕ್ಷಾತ್ಕಾರವಾದ ಮೇಲೆ, ಭಗವಂತನ ಬಿಂಬ ಸಾಕ್ಷಾತ್ಕಾರವಾಗುತ್ತದೆ. ಯಾರು ಭಗವಂತನನ್ನು ತಿಳಿಯುತ್ತಾನೆ ಅವನು ಎಲ್ಲವನ್ನು ತಿಳಿಯಬಲ್ಲ. ಹೀಗಾಗಿ ನಾವು ಪ್ರಾಣಿಗಳಿಗಿಂತ ಬಿನ್ನವಾಗಿ ಜ್ಞಾನಿಗಳಾಗಿ ಬದುಕಬೇಕು. ಹೀಗೆ ಬದುಕಿದಾಗ ನಮಗೆ ದೇವರ ಮೇಲಿನ ಅಚಲ ಭಕ್ತಿ ಗಟ್ಟಿಗೊಳ್ಳುತ್ತದೆ. ಜ್ಞಾನಿ ಎನಿಸಿದವ ತನ್ನ ಸರ್ವಸ್ವವನ್ನು ಕಳೆದುಕೊಂಡರೂ ಕೂಡ, ‘ಅದು ಭಗವಂತನ ಕರುಣೆಎಂದು ಸ್ವೀಕರಿಸುತ್ತಾನೆ. ಅಜ್ಞಾನಿಯಲ್ಲಿ ಈ ದೃಢ ಭಕ್ತಿ ಇರದು. ಈ ರೀತಿ ದೃಢಭಕ್ತಿ ಮೂಡಬೇಕಾದರೆ ನಾವು ಭಾರತರಾಗಬೇಕು. ನಿರಂತರ ಜ್ಞಾನ ತೃಷೆ, ಜ್ಞಾನಿಗಳಲ್ಲಿ ಭಕ್ತಿ, ಭಗವದ್ ಭಕ್ತರಲ್ಲೇ ಹಿರಿಯರಾದ ಪ್ರಾಣದೇವರಲ್ಲಿ ಭಕ್ತಿ- ನಮ್ಮನ್ನು ಭಾರತರನ್ನಾಗಿ ಮಾಡಬಲ್ಲದು.
·  ಶ್ಲೋಕ - 20
ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾSನಘ ।
ಏತದ್ ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತ ಕೃತ್ಯಶ್ಚ ಭಾರತ ೨೦॥
ಇತಿ ಗುಹ್ಯತಮಮ್ ಶಾಸ್ತ್ರಮ್ ಇದಮ್ ಉಕ್ತಮ್ ಮಯಾ ಅನಘ ।
ಏತತ್ ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತಕೃತ್ಯಶ್ಚ ಭಾರತಓ ಅನಘ, ತುಂಬ ಮುಚ್ಚಿಡಬೇಕಾದ ಮಾತನ್ನು ನಾನು ನಿನ್ನೆದುರು ಬಿಚ್ಚಿಟ್ಟಿದ್ದೇನೆ. ಇದನ್ನರಿತವನು ಭಗವಂತನನ್ನು ಬಲ್ಲವನಾಗುತ್ತಾನೆ. ಅವನು ಮತ್ತೆ ಮಾಡಬೇಕಾದ್ದೇನೂ ಉಳಿಯುವುದಿಲ್ಲ.
ಇದು ಅಧ್ಯಾತ್ಮ ಜಿಜ್ಞಾಸುಗಳಿಗೆ ಹೇಳಬೇಕಾದ ರಹಸ್ಯಗಳಲ್ಲೇ ಸರ್ವಶ್ರೇಷ್ಠ ರಹಸ್ಯ. ಅಧ್ಯಾತ್ಮವನ್ನು ಆಸಕ್ತಿ ಉಳ್ಳವರಿಗೆ ಅವರ ಆಸಕ್ತಿಯ ಆಳವನ್ನು ತಿಳಿದು ಹೇಳಬೇಕು. ಶಾಸ್ತ್ರದ ಪ್ರಮೇಯವನ್ನು ಎಂದೂ ಬೀದಿಯಲ್ಲಿ ತೆರೆದಿಡಬಾರದು. ಏಕೆಂದರೆ ಅದು ವ್ಯರ್ಥವಾಗಬಾರದು ಮತ್ತು ಅನರ್ಥವಾಗಲೂಬಾರದು. ಯಾರಿಗೆ ಗ್ರಹಣ ಮಾಡುವ ಯೋಗ್ಯತೆ ಇದೆ, ಆಸಕ್ತಿ, ಶ್ರದ್ಧೆ, ಭಕ್ತಿ ಇದೆ, ಅವರಿಗೆ ಮಾತ್ರ ಹೇಳಬೇಕು. ಇದು ರಹಸ್ಯಗಳಲ್ಲೇ ಅತ್ಯಂತ ಗೋಪ್ಯವಾದುದು. ಕ್ಷರಪುರುಷರ ಜ್ಞಾನ, ಅಕ್ಷರಪುರುಷಳ ಜ್ಞಾನ ಮತ್ತು ಪುರುಷೋತ್ತಮನ ಜ್ಞಾನವನ್ನು ತಿಳಿದವನು ಶಾಸ್ತ್ರವನ್ನು ಬಲ್ಲವನು. ಶಾಸ್ತ್ರ ಎಂದರೆ ತಿಳಿದವರು ತಿಳಿಯದವರಿಗೆ ತಿಳಿಹೇಳಬೇಕಾದ ವಸ್ತು. ಬಹಳ ರಹಸ್ಯವಾಗಿ, ಜೋಪಾನವಾಗಿ ಕಾಪಾಡಬೇಕಾದ ಉಪದೇಶಾರ್ಹ ವಿಷಯವಿದು. ಇದಕ್ಕಿಂತ ಶ್ರೇಷ್ಠವಾದ ಉಪದೇಶ ಇನ್ನೊಂದಿಲ್ಲ. ಅಂತಹ ಗೋಪ್ಯವಾದ ವಿಷಯವನ್ನು ನಿನಗೆ ಹೇಳಿದೆ-ಏಕೆಂದರೆ ನೀನು ಅನಘ' ಅದಕ್ಕಾಗಿ’” ಎನ್ನುತ್ತಾನೆ ಕೃಷ್ಣ.ಅನಘಎಂದರೆ ಯಾವ ದೋಷವೂ ಇಲ್ಲದವ. ನಾವು ಜ್ಞಾನಕ್ಕೆ ಭಾದಕವಾಗಿರುವ ದುರಿತಗಳಿಂದ, ದೋಷಗಳಿಂದ ಮೊದಲು ಮುಕ್ತರಾಗಬೇಕು. ನಮ್ಮ ಮನಸ್ಸು ಕೆಟ್ಟ ವಿಚಾರದಿಂದ ಕಲುಷಿತವಾದರೆ ಆಗ ನಮಗೆ ಗೀತೆ ಅರ್ಥವಾಗುವುದಿಲ್ಲ. ಯಾವುದೇ ಪೂರ್ವಾಗ್ರಹ ಆವೇಶಗಳಿಲ್ಲದೆ ಪೂರ್ಣ ಭಗವಂತನಲ್ಲಿ ಶರಣಾದಾಗ ಮನಸ್ಸು ಪಾಪ ರಹಿತವಾಗಬಲ್ಲದು.
ಕೃಷ್ಣ ಹೇಳುತ್ತಾನೆ: ಇದು ಎಲ್ಲ ತಿಳುವಳಿಕೆಗಳ ಬೇರು. ಇದನ್ನು ತಿಳಿದವನು ಕೃತಕೃತ್ಯಎಂದು. ಜೀವನದಲ್ಲಿ ಭಗವಂತನನ್ನು ತಿಳಿದವನು ಸಾರ್ಥಕವಾದ ಬದುಕನ್ನು ಬದುಕಬಲ್ಲ. ಭಗವಂತನ ಅರಿನೊಂದಿಗೆ ಬದುಕುವುದೇ ಜೀವನದ ಸಾರ್ಥಕ್ಯ.
ಇತಿ ಪಂಚದಶೋಧ್ಯಾಯಃ
ಹದಿನೈದನೆಯ ಅಧ್ಯಾಯ ಮುಗಿಯಿತು

 

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.

ಅನಾಮಧೇಯ ಹೇಳಿದರು...

ಭಾರತ ಭಾರತೀಯರು ನೂರಕ್ಕೆ ನೂರು ಹಾದರದ ಮಕ್ಕಳು ತುಂಬಿರುವ ದೇಶವೇ ಅದರಲೀ ಸಂಶಯವೇ ಬೇಡ ಸಂದೇಹವು ಬೇಡ ಅದಕ್ಕೆ ಆಧಾರ ಸಾವಿರಾರು ಬಾರೀ ಬರೆದಿದ್ದೇನೇ ಇದು ಸುಳ್ಳು ಮಿಥ್ಯ ಬುರುಡೆಯೆಂದು ಯಾರೂ ಹೇಳಲಿಲ್ಲ ಪ್ರೂವ್ ಮಾಡಿದರೇ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ ಬನ್ನಿ ನೋಡೋಣ
ಭಗವದ್ಗೀತೆ ಒಂದು ಚಿನ್ನದ ತಟ್ಟೆಯಲ್ಲಿನ ಅಮೇಧ್ಯವೇ ಅದು ಹಂದಿಗಳೆಲ್ಲಾ ಮೃಷ್ಟಾನ್ನದಂತೆ ನೀವು ಕೃಷ್ಣನೇ ಹಾದರದ ಸೂ......ಮಗನೇ ಅಲ್ಲವೇ ಅವನು ಪುರಾಣ ಓದಿರೀ ಓದಿರೀ ಓದಿರೀ ಓದಿರೀ ಓದಿರೀ ಓದಿರೀ ಓದಿರೀ