ಭಗವದ್ಗೀತೆ ಅಧ್ಯಾಯ - 6
- ಶ್ಲೋಕ - 01
ಹಿಂದಿನ ಅಧ್ಯಾಯದಲ್ಲಿ ಮುಖ್ಯವಾಗಿ ಭಗವಂತನ ಉಪಾಸನೆಯ ಸಾಧನೆಯನ್ನು
ವಿವರಿಸಿದ ಕೃಷ್ಣ ಈಗ ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು
ಧ್ಯಾನಸಮಾಧಿಯನ್ನು ತಳಸ್ಪರ್ಶಿಯಾಗಿ ವಿವರಿಸುತ್ತಾನೆ.
ಭಗವಾನುವಾಚ ।
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ ।
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ॥೧॥
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ ।
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ॥೧॥
ಭಗವಾನುವಾಚ- ಭಗವಂತ ಹೇಳಿದನು :
ಅನಾಶ್ರಿತಃ ಕರ್ಮ ಫಲಮ್ ಕಾರ್ಯಮ್ ಕರ್ಮ ಕರೋತಿ ಯಃ ।
ಸಃ ಸಂನ್ಯಾಸೀ ಚ ಯೋಗೀ ಚ ನ ನಿಃ ಅಗ್ನಿಃ ನ ಚ ಅಕ್ರಿಯಃ –ಕರ್ಮದ ಫಲನ್ಯಾಸ
ಮಾಡಿ ಕರ್ತವ್ಯವನ್ನು ಮಾಡುತ್ತಿರುವವನೆ ನಿಜವಾದ
ಸಂನ್ಯಾಸಿ ಮತ್ತು ನಿಜವಾದ ಯೋಗಿ. ಬೆಂಕಿಯಲ್ಲಿ ಹೋಮಿಸದವನಲ್ಲ, ಕರ್ಮವನ್ನು
ತೊರೆದವನೂ ಅಲ್ಲ.
ಸಾಮಾನ್ಯವಾಗಿ ನಾವು ಕರ್ಮಯೋಗಿಗಳು ಬೇರೆ ಮತ್ತು ಸಂನ್ಯಾಸಿಗಳು ಬೇರೆ
ಎಂದು ಎರಡು ಗುಂಪು ಮಾಡುತ್ತೇವೆ. ಇಲ್ಲಿ ಕೃಷ್ಣ ಯಾರು
ಸಂನ್ಯಾಸಿಗಳು, ಯಾರು ಕರ್ಮಯೋಗಿಗಳು ಎನ್ನುವ ಲೋಕದ ಕಲ್ಪನೆಗಿಂತ ಭಿನ್ನವಾದ ವಿವರವನ್ನು ಈ
ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಕೃಷ್ಣ ಹೇಳುತ್ತಾನೆ “ಅನಾಶ್ರಿತಃ ಕರ್ಮಫಲಂ” ಎಂದು. ನಾವು ಸಾಮಾನ್ಯವಾಗಿ ಕರ್ಮತ್ಯಾಗ ಮಾಡಿದವರು ಸಂನ್ಯಾಸಿಗಳು, ಕರ್ಮ ಮಾಡುವವರು ಗೃಹಸ್ಥರೆಂದು ಭಾವಿಸುತ್ತೇವೆ.
ಆದರೆ ಕೃಷ್ಣ ಹೇಳುತ್ತಾನೆ ಪ್ರತಿಯೊಬ್ಬರೂ
ಕರ್ಮಯೋಗಿಗಳಾಗಬೇಕು ಮತ್ತು ಪ್ರತಿಯೊಬ್ಬರೂ ಸಂನ್ಯಾಸಿಗಳಾಗಬೇಕು ಎಂದು. ಇದು ಒಂದನ್ನು ಬಿಟ್ಟು ಒಂದು ಇರತಕ್ಕದ್ದಲ್ಲ. ಸಂನ್ಯಾಸಿ ಎಂದರೆ ನಾವು ಮಾಡಿದ್ದನ್ನೆಲ್ಲಾ ಭಗವಂತನಿಗೆ
ಅರ್ಪಿಸುವುದೇ ಹೊರತು ಏನೂ ಮಾಡದೆ ಇರುವುದಲ್ಲ.(ಹಿಂದೆ ಕರ್ಮ ಸಂನ್ಯಾಸದ ಬಗ್ಗೆ ವಿವರಿಸುವಾಗ ಈ ಬಗ್ಗೆ ನೋಡಿದ್ದೇವೆ). ಸಮಸ್ತ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು
ಸಂ-ನ್ಯಾಸ. ಇಲ್ಲಿ ಬಹಳ ಮುಖ್ಯವಾದ ವಿಷಯ ಎಂದರೆ ಕರ್ಮದ ಫಲದ ಬಯಕೆಯನ್ನು ಸಂಪೂರ್ಣನಾದ ಭಗವಂತನ
ಹೃದಯದಲ್ಲಿ ನೆಲೆಗೊಳಿಸಬೇಕು.
ಸಂನ್ಯಾಸ ಎಂದರೆ ತನ್ನ ಕುಟುಂಬವನ್ನು ತೊರೆದು ಕಾಡಿಗೆ ಹೋಗುವುದಲ್ಲ.
ಕರ್ಮಯೋಗ ಮಾಡಲೇ ಬೇಕು. “ಕಾರ್ಯಂ ಕರ್ಮ ಕರೋತಿ ಯಃ” ಯಾರ್ಯಾರಿಗೆ ಯಾವುದ್ಯಾವುದು ಕಾರ್ಯವೋ ಅವರವರು ಅದನ್ನದನ್ನು ಮಾಡಬೇಕು. ಈ ಕಾರಣಕ್ಕಾಗಿ ಸಂನ್ಯಾಸ ಮತ್ತು
ಕರ್ಮಯೋಗ ಎರಡೂ ಒಟ್ಟೊಟ್ಟಿಗಿರುವುದು. ನಿಜವಾದ ಸಂನ್ಯಾಸಿ
ಕರ್ಮಯೋಗಿಯಾಗಿರುತ್ತಾನೆ, ಮತ್ತು ನಿಜವಾದ ಕರ್ಮಯೋಗಿ ಸಂನ್ಯಾಸಿಯಾಗಿರುತ್ತಾನೆ. ಇದಲ್ಲದೆ ನಾವು ತಿಳಿದಂತೆ
ಅಗ್ನಿಯನ್ನು ತ್ಯಾಗ ಮಾಡಿದವರು, ಕರ್ಮವನ್ನು ತ್ಯಾಗ ಮಾಡಿದವರು ಸಂನ್ಯಾಸಿಗಳು ಅಥವಾ ಯೋಗಿಗಳಲ್ಲ.
ಸಂನ್ಯಾಸಿ ಎಂದೂ ನಿಷ್ಕ್ರೀಯ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ
ಕ್ರಿಯೆ ಇರುತ್ತದೆ. ಬ್ರಹ್ಮಚಾರಿಯಾದವನು ಅಧ್ಯಯನ, ಗುರುಕುಲವಾಸ, ಗುರು ಶುಶ್ರೂಷೆ, ಇತ್ಯಾದಿ ಕಾರ್ಯ ಮಾಡಿದರೆ, ಗ್ರಹಸ್ಥ ಅತಿಥಿಸತ್ಕಾರ, ಸಂಸಾರ ಪಾಲನೆ ಇತ್ಯಾದಿ ಕಾರ್ಯವನ್ನು ಮಾಡುತ್ತಾನೆ. ಹೀಗಾಗಿ ಎಲ್ಲರಿಗೂ ಕರ್ಮವಿದೆ.
- ಶ್ಲೋಕ - 02
ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ ।
ನಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ॥೨॥
ನಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ॥೨॥
ಯಮ್ ಸಂನ್ಯಾಸಮ್ ಇತಿ ಪ್ರಾಹುಃ ಯೋಗಮ್ ತಮ್ ವಿದ್ಧಿ ಪಾಂಡವ ।
ನ ಹಿ ಅಸಂನ್ಯಸ್ತ ಸಂಕಲಪಃ ಯೋಗೀ ಭವತಿ ಕಶ್ಚನ-ಯಾವುದನ್ನು ಸಂನ್ಯಾಸವೆನ್ನುವರೋ ಅದನ್ನೆ ಯೋಗವೆಂದು ತಿಳಿ ಪಾಂಡವ. ಬಯಕೆಗಳ ‘ಸಂನ್ಯಾಸ’ ಮಾಡದ ಯಾವನೂ
ಮರ್ಮವರಿತ ಕರ್ಮಯೋಗಿಯಾಗಲಾರ.
ಸಂನ್ಯಾಸ ಕೂಡಾ ಒಂದು ಯೋಗ. ಕರ್ಮ ಫಲತ್ಯಾಗ ಕೂಡಾ ಕರ್ಮ ಮಾಡತಕ್ಕ
ಕರ್ಮಯೋಗಿಯ ಯೋಗದ ಒಂದು ಮುಖ. ಎಲ್ಲವನ್ನೂ ಭಗವಂತನಿಗೆ ಅರ್ಪಣೆ
ಮಾಡಿ ಫಲಕಾಮನೆ ಇಲ್ಲದೆ ಭಗವದ್ ಪೂಜಾ ದೃಷ್ಟಿಯಿಂದ ಮಾಡುವಂತಹ ಕ್ರಿಯೆ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ‘ಮಾಡಬೇಕು’ ಎಂದು ಬಯಸುವುದು, ಸಂಕಲ್ಪ ಎಂದರೆ ‘ಮಾಡುತ್ತೇನೆ’ ಎಂದು ನಿರ್ಧರಿಸುವುದು. ಕಾಮಸಂಕಲ್ಪ
ವರ್ಜಿತ-ಸಂನ್ಯಾಸ. ಇಲ್ಲಿ ಕೃಷ್ಣ ವಿವರಿಸುತ್ತಿರುವುದು ಆಶ್ರಮಕ್ಕೆ(ಸಂನ್ಯಾಸಾಶ್ರಮ) ಸಂಭಂದಪಟ್ಟ ವಿಚಾರವಲ್ಲ. ಇದು ಸಾಧನೆಗೆ ಸಂಭಂದಪಟ್ಟ ವಿಚಾರ. ಸಾಧನೆಯ
ಮುಖದಲ್ಲಿ ಯೋಗಿಗಳು ಸಂನ್ಯಾಸಿಗಳಾಗಬೇಕು ಮತ್ತು ಸಂನ್ಯಾಸಿಗಳು ಯೋಗಿಗಳಾಗಬೇಕು ಇದು ಕೃಷ್ಣನ ಸಂದೇಶ.
ನಾವು ಸಾಧನೆ ಮಾಡುವಾಗ ಕರ್ಮವೂ ಇರಬೇಕು ಫಲನ್ಯಾಸವೂ ಇರಬೇಕು.
ಹೀಗಿರುವಾಗ ಎಲ್ಲರೂ ಮಾಡಬೇಕಾದ ಕರ್ಮ ಅಂತ ಒಂದು ಇದೆಯೋ ? ಸಾಧಕನ ಸಾಮಾಜಿಕ ಕರ್ತವ್ಯ ಯಾವುದು? ಸಮಾಜದೊಂದಿಗೆ ಒಬ್ಬ ಸಾಧಕ ಹೇಗೆ ಸ್ಪಂದಿಸಬೇಕು? ಕರ್ಮದ ಕೊನೆ ಎಂದು? ಸಾಧನೆಗೂ ಕರ್ಮಕ್ಕೂ ಇರುವ ಹೊಂದಿಕೆ ಏನು? ಅದು ಹೇಗೆ ಸಾಧನೆಗೆ ಪೂರಕ? ಈ ಎಲ್ಲಾ ಪ್ರಶ್ನೆಗಳಿಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರ ಕೊಡುತ್ತಾನೆ.
- ಶ್ಲೋಕ - 03
ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ ।
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ॥೩॥
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ॥೩॥
ಆರುರುಕ್ಷೋಃ ಮುನೇಃ ಯೋಗಮ್ ಕರ್ಮ ಕಾರಣಮ್ ಉಚ್ಯತೇ ।
ಯೋಗ ಆರೂಢಸ್ಯ ತಸ್ಯ ಏವ ಶಮಃ ಕಾರಣಮ್ ಉಚ್ಯತೇ –ಸಾಧನೆಯ ಮೆಟ್ಟಲೇರುವವನಿಗೆ ಗುರಿ ಮುಟ್ಟಲು ಕರ್ಮಯೋಗ[ಹಲವು ಬಗೆಯ ಜನಸೇವೆ]ಕಾರಣವೆನಿಸುತ್ತದೆ. ಅವನೆ
ಗುರಿ ಸೇರಿದಾಗ ಭಗವತ್ ಸಮಾಧಿ [ಜನ ಸೇವೆಯಿಂದ ವಿರಾಮ ಮತ್ತು
ಭಗವಂತನಲ್ಲಿ ಧ್ಯಾನ ನಿಷ್ಠೆ] ಸುಖದ ಹೆಚ್ಚಳಕ್ಕೆ ಕಾರಣವೆನಿಸುತ್ತದೆ.
ಈ ಶ್ಲೋಕಕ್ಕೆ ಎರಡು ಆಯಾಮವಿದೆ. ನಾವು ಮಾಡತಕ್ಕ ನಿತ್ಯಕರ್ಮ ಒಬ್ಬ
ಸಾಧಕ ಎಲ್ಲಿಯತನಕ ಮಾಡಬೇಕು ಮತ್ತು ಎಲ್ಲಿಂದ ಬಿಡಬಹುದು
ಎನ್ನುವುದು ಒಂದು ಆಯಾಮವಾದರೆ ಇನ್ನೊಂದು ಸಾಮಾಜಿಕವಾಗಿ ಒಬ್ಬ ಸಾಧಕನ ಕರ್ತವ್ಯವೇನು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ.
ಇನ್ನೂ ಸಿದ್ಧಿ ಪಡೆಯದ ಸಾಧನೆಯ ಹಾದಿಯಲ್ಲಿರುವ ಒಬ್ಬ ಸಾಧಕ ಆ ಸ್ಥಿತಿಯಲ್ಲಿ ಎಲ್ಲ ವಿಹಿತಕರ್ಮವನ್ನು ಮಾಡುತ್ತಿರಬೇಕು, ಯಾವುದನ್ನೂ ಬಿಡುವಂತಿಲ್ಲ. ಸಿದ್ಧನಾದ ಮೇಲೆ ಆತ ಸಮಾಧಿ ಸ್ಥಿತಿಯಲ್ಲಿ ಭಗವಂತನನ್ನು ಒಳಗಿನಿಂದ
ಕಾಣಬಲ್ಲ. ಆ ಸ್ಥಿತಿಯಲ್ಲಿ ಆತನಿಗೆ ಉಳಿದ ಕರ್ಮಗಳಿಗಿಂತ ಅಂತರಂಗದಲ್ಲಿ ಭಗವಂತನನ್ನು
ಕಾಣುವ ಕರ್ಮ ಮುಖ್ಯವಾಗುತ್ತದೆ. ಒಬ್ಬ ಅಪರೋಕ್ಷ್ಣ ಜ್ಞಾನ ಬಂದವ ಸದಾ ಸಮಾಧಿ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಅವನು ಹೊರ ಪ್ರಪಂಚಕ್ಕೆ ಬರಲೇ ಬೇಕು. ಆಗ ಅವನ ಮುಖ್ಯ
ಕರ್ಮವೆಂದರೆ ಶಾಸ್ತ್ರ ಶ್ರಾವಣ, ಮಂತ್ರ ಜಪ, ಪ್ರವಚನ ಇತ್ಯಾದಿ. ಆದ್ದರಿಂದ ವಿಹಿತಕರ್ಮಗಳ ವಿಧಿನಿಷೇದ ಬದ್ದತೆ
ಅಪರೋಕ್ಷ ಜ್ಞಾನದವರೆಗೆ ಮಾತ್ರ. ಉದಾಹರಣೆಗೆ ಒಬ್ಬ
ಅಪರೋಕ್ಷ ಜ್ಞಾನಿ ಧ್ಯಾನಕ್ಕೆ ಕುಳಿತಿದ್ದಾನೆ, ಆತ ತನ್ನ ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿದ್ದಾನೆ ಮತ್ತು ಆ
ಆನಂದದಲ್ಲಿ ಮುಳುಗಿದ್ದಾನೆ. ಅದು ಬೆಳಗಿನಜಾವ-ಸೂರ್ಯೋದಯದ
ಕಾಲ. ಸ್ನಾನ ಮಾಡಿ ಸಂಧ್ಯಾವಂದನೆ ಮಾಡುವ ಸಮಯದಲ್ಲಿ ಈತ ಧ್ಯಾನದಲ್ಲಿ ಕುಳಿತಿದ್ದಾನಲ್ಲ ಎಂದು ನಾವು ಅವನನ್ನು ಎಬ್ಬಿಸುವುದು ತಪ್ಪು. ಆತ ಸಂಧ್ಯಾವಂದನೆ ಮಾಡದಿದ್ದರೆ ಯಾವ
ಕರ್ಮ ಲೇಪವೂ ಆಗುವುದಿಲ್ಲ. ಏಕೆಂದರೆ ಸಂಧ್ಯಾವಂದನೆ ಮಾಡುವುದು ಭಗವಂತನ ದರ್ಶನಕ್ಕಾಗಿ-ಆದರೆ ಆತ ಆಗಲೇ ಭಗವಂತನ ದರ್ಶನ ಪಡೆಯುತ್ತಿದ್ದಾನೆ. ಹೀಗೆ ಅಪರೋಕ್ಷ ಜ್ಞಾನಿಗೆ
ಕರ್ಮದ ಬದ್ಧತೆ ಇಲ್ಲ. ಸಮಾಧಿಸ್ಥಿತಿಯಿಂದ
ಹೊರಬಂದ ಮೇಲೆ ಇರತಕ್ಕ ಕರ್ತವ್ಯ ಎಂದರೆ ಭಗವಂತನ ಗುಣಗಾನ, ಪ್ರವಚನ, ಅಧ್ಯಯನ, ಜಪ ಇತ್ಯಾದಿ.
ಈ ಶ್ಲೋಕದ ಇನ್ನೊಂದು ಆಯಾಮವನ್ನು ಬಹಳ ಸುಂದರವಾಗಿ ಮಧ್ವಾಚಾರ್ಯರು
ತಮ್ಮ ಗೀತಾತಾತ್ಪರ್ಯದಲ್ಲಿ ವಿವರಿಸಿದ್ದಾರೆ. ಇದು
ಮುಖ್ಯವಾಗಿ ಒಬ್ಬ ಸಾಧಕನ ಸಾಮಾಜಿಕ ನಡೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. ಕರ್ಮ ಎನ್ನುವುದಕ್ಕೆ ಆಚಾರ್ಯರು ಒಂದು ಅಪೂರ್ವ ಅರ್ಥವನ್ನು ಕೊಟ್ಟಿದ್ದಾರೆ. ಕರ್ಮ
ಅಂದರೆ ಕರ+ಮ. ಕರ ಅಂದರೆ ಕಂದಾಯ(Duty).ಯಾವುದನ್ನು ಕಂದಾಯವೆಂದು ತಿಳಿದು ನಾವು
ಮಾಡಬೇಕೋ ಅದು ‘ಕರ-ಮ’. ನಾವು ಭಗವಂತನ ರಾಜ್ಯದಲ್ಲಿನ ಪ್ರಜೆಗಳು. ಅದಕ್ಕೋಸ್ಕರ ಅವನಿಗೆ ನಾವು ಕೊಡುವ ಕರ ಕರ್ಮ. ಯಾವುದೋ ಅಭಿಲಾಷೆಯಿಂದ ದೇವಸ್ಥಾನದಲ್ಲಿ ನಾವು
ಕಾಣಿಕೆ ಹಾಕುವುದು ನಿಜವಾದ ಕಂದಾಯವಲ್ಲ, ಅದನ್ನು ಭಗವಂತ ಬಯಸುವುದೂ ಇಲ್ಲ. ಭಗವಂತ ನಮ್ಮಿಂದ ಬಯಸುವ ಕರ್ಮ
ಕಷ್ಟದಲ್ಲಿರುವವರ ಶುಶ್ರೂಷೆ. ಒಬ್ಬ ಸಾಧಕ ಅಪರೋಕ್ಷ ಸಾಧಕನಾಗುವ
ತನಕ ಅವನ ಸಾಧನೆಯಲ್ಲಿ ಇದು ಒಂದು ಮುಖ್ಯ ಸಾಧನೆ. ಸಮಸ್ತ ಜೀವಜಾತದ ಮೇಲೆ ಅನುಕಂಪ ಸೇವಾ ಮನೋವೃತ್ತಿ ಬಹಳ ಮುಖ್ಯ. ಯೋಗಶಾಸ್ತ್ರದಲ್ಲಿ ಕೂಡಾ ಇದನ್ನೇ ಹೇಳುತ್ತಾರೆ. ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿ ಒಬ್ಬ ಸಾಧಕನಲ್ಲಿರಬೇಕು. ಮೈತ್ರಿ ಎಂದರೆ ಸಜ್ಜನರ ಸಹವಾಸ, ಎಲ್ಲಿ ಒಳ್ಳೆಯತನವಿದೆ ಅವರ ಸ್ನೇಹ; ದುಃಖವನ್ನು ಕಂಡಾಗ ಅಲ್ಲಿ ಕರುಣೆ ಹಾಗು ನೆರವು-ಕರುಣಾ; ಇನ್ನೊಬ್ಬರ ಉದ್ಧಾರ ನೋಡಿ ಸಂತೋಷಪಡುವುದು
ಮುದಿತ; ದುಷ್ಟರಿಂದ ದೂರವಿರುವುದು ಉಪೇಕ್ಷ. ಕೆಟ್ಟವರೊಂದಿಗೆ ಜಗಳ ಬೇಡ ಆದರೆ ಅವರ
ಒಡನಾಟದಿಂದ ಯಾವುದೇ ದ್ವೇಷವಿಲ್ಲದೆ ದೂರವಿರುವುದು ಉಪೇಕ್ಷ. ಹೀಗೆ
ಸಾಧಕನ ಜೀವನದಲ್ಲಿ ಇದು ಮಹತ್ತರವಾದ ಸಾಮಾಜಿಕ ಕರ್ತವ್ಯ. ಒಬ್ಬ ಸಿದ್ಧನಾದವ(ಯೋಗಾರೂಢ) ಸದಾ ಅಂತರ್ಮುಖಿ-ಯಾಗಿರುತ್ತಾನೆ. ಅವನಿಗೆ ಈ ಸಾಮಾಜಿಕ ಬದ್ಧತೆ ಇಲ್ಲ(ಅವರಿಗೆ ಅದು
ಸಾಧ್ಯವಾಗುವುದಿಲ್ಲ). ಅವರ ಆನಂದಾಭಿವೃದ್ಧಿಗೆ
ಕಾರಣ ‘ಶಮಃ’. ಅಂದರೆ ಸದಾ ಭಗವಂತನಲ್ಲೇ ಮನಸ್ಸನ್ನು ನೆಟ್ಟಿರುವುದು, ಅದರಿಂದ ವ್ಯತಿರಿಕ್ತವಾದ ಇನ್ನೊಂದು ಕರ್ಮ ಅವರಿಗಿಲ್ಲ.
ಹೀಗೆ ಲೋಕಸೇವೆ ಎನ್ನುವುದು ಒಬ್ಬ ಸಾಧಕನ ಅವಿಭಾಜ್ಯ ಅಂಗವಾಗಬೇಕು
ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಿದ. ಯೋಗಾರೂಢನಿಗೆ ಯಾವ ಸಾಮಾಜಿಕ ಬದ್ಧತೆ ಇಲ್ಲ, ಅವನು ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿರುತ್ತಾನೆ ಎಂದು ಕೃಷ್ಣ
ಹೇಳಿದಾಗ ನಮಗೆ ಒಂದು ಪ್ರಶ್ನೆ ಮೂಡಬಹುದು. ಇಂತಹ
ಅಪರೋಕ್ಷ ಜ್ಞಾನಿಗಳನ್ನು ಗುರುತಿಸುವುದು ಹೇಗೆ ಎಂದು. ಮುಂದಿನ ಶ್ಲೋಕ ಈ ನಮ್ಮ ಪ್ರಶ್ನೆಗೆ
ಉತ್ತರ ರೂಪದಲ್ಲಿದೆ.
- ಶ್ಲೋಕ - 04
ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ ।
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ॥೪॥
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ॥೪॥
ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ ।
ಸರ್ವ ಸಂಕಲ್ಪ ಸಂನ್ಯಾಸೀ ಯೋಗಾರೂಢ ತದಾ ಉಚ್ಯತೇ –ಎಲ್ಲ ಕರ್ಮದ ಹೊಣೆಯನ್ನೂ ಭಗವಂತನಿಗರ್ಪಿಸಿ, ಇಂದ್ರಿಯ ವಿಷಯಗಳಲ್ಲಿ ಮತ್ತು ಕರ್ಮಗಳಲ್ಲಿ ಬಗೆಯ ನಂಟು ಕಳೆದುಕೊಂಡಾಗ ಸಾಧನೆಯ ಗುರಿ ಸೇರಿದವನೆನಿಸುತ್ತಾನೆ.
ಅಪರೋಕ್ಷ ಜ್ಞಾನಿಯ ಲಕ್ಷಣವನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ “ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ” ಎಂದು. ಅಂದರೆ ಅಪರೋಕ್ಷ ಜ್ಞಾನಿಗಳು ಇಂದ್ರಿಯಗಳನ್ನು ಸೆಳೆಯುವ ಸಂಗತಿಗಳಲ್ಲಿ (ಶಬ್ದ, ರೂಪ, ರಸ, ಗಂಧ, ಸ್ಪರ್ಶ), ಅಥವಾ ಯಾವ ವಿಷಯದಲ್ಲೂ ಅಂಟಿಕೊಂಡಿರುವುದಿಲ್ಲ. ಆತ
ಕ್ರಿಯೆ ಮಾಡುತ್ತಾನೆ ಆದರೆ ಅದಕ್ಕೆ ತನ್ನನ್ನು ಅಂಟಿಸಿಕೊಳ್ಳುವುದಿಲ್ಲ. ಸಾಧನೆಯ ಹಾದಿಯಲ್ಲಿರುವ ಸಾಧಕ ಕಷ್ಟಪಟ್ಟು ಇಂದ್ರಿಯ ನಿಗ್ರಹ ಮಾಡಿದರೆ ಅಪರೋಕ್ಷ ಜ್ಞಾನಿಗಳಿಗೆ ಇದು
ಸಹಜ ಧರ್ಮವಾಗಿರುತ್ತದೆ. ಋಗ್ವೇದದಲ್ಲಿ ಹೇಳುವಂತೆ “ಎಲ್ಲ ಜಗತ್ತಿನ ನಿಯಾಮಕನಾದ ನರಸಿಂಹ-ಅವನ
ಬಯಕೆಯೇ ನನ್ನ ಬಯಕೆಯಾಗಲಿ.ಅವನ ಹೃದಯದಲ್ಲಿ ಏನು ಬಯಕೆ ಇದೆ ಅದೇ ನನ್ನ ಭಾವನೆಯಾಗಲಿ. ಅದಕ್ಕೆ ವಿರುದ್ಧವಾದ ಸಂಕಲ್ಪ ನನಗೆ ಬಾರದೇ ಇರಲಿ”. ಈ ರೀತಿ ಅಪರೋಕ್ಷಜ್ಞಾನಿ ಬಯಸುತ್ತಾನೆ. ಅವನು
ಏನನ್ನೂ ಕೂಡಾ ಇಂದ್ರಿಯದ ಮೂಲಕ ಅನುಭವಿಸಬೇಕು ಎಂದು
ಬಯಸುವುದಿಲ್ಲ, ಪರಿತಪಿಸುವುದಿಲ್ಲ. ಇಂದ್ರಿಯದ ಮೂಲಕ ಬಂದ ಅನುಭವದಿಂದ ಪ್ರಭಾವಿತನಾಗಿ ಅದಕ್ಕೆ ಅಂಟಿಕೊಳ್ಳುವುದೂ ಇಲ್ಲ.
ಎಲ್ಲವನ್ನೂ ತಟಸ್ಥವಾಗಿ ನೋಡುತ್ತಿರುತ್ತಾನೆ. ನಾವು
ಸಮುದ್ರದ ತಟದಲ್ಲಿ ಕುಳಿತು ಸಮುದ್ರವನ್ನು ನೋಡುತ್ತಿದ್ದರೆ ಅಲ್ಲಿ ಅನೇಕ ರೀತಿಯ ಅಲೆಗಳಿರುತ್ತವೆ. ನಾವು ಆ ಅಲೆಗಳನ್ನು ನೋಡಿ ಆನಂದಿಸುತ್ತಿರುತ್ತೇವೆ. ಅಲ್ಲಿ ಬರುವ ತೆರೆಗಳ
ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಯಾವ ಅಲೆ ಹೇಗೆ ಬಂತೋ ಹಾಗೆ ತಟಸ್ಥವಾಗಿ ಆಸ್ವಾದಿಸುವುದರಲ್ಲಿ ಆನಂದವಿದೆ. ಜೀವನ ಸಾಗರದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಅಲೆಗಳಂತೆ
ಬಂದು ಹೋಗುತ್ತಿರುತ್ತವೆ. ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಸಮುದ್ರದ ಅಲೆಯನ್ನು ನೋಡಿ ಸಂತೋಷಪಟ್ಟಂತೆ ಈ ಜೀವನದ ಅಲೆಯನ್ನು ಸಹಜವಾಗಿ ನೋಡಿ ಸಂತೋಷಪಡುತ್ತ ಬಾಳುವುದೇ
ಅಪರೋಕ್ಷ ಜ್ಞಾನಿಯ ಲಕ್ಷಣ.
ಈ ಅಧ್ಯಾಯದಲ್ಲಿ ಕೃಷ್ಣ ಧ್ಯಾನದ ಸಂಪೂರ್ಣ ಪ್ರಕ್ರೀಯೆಯನ್ನು ಮುಂದೆ ವಿವರಿಸುತ್ತಾನೆ. ಅದಕ್ಕಾಗಿ ನಮ್ಮ ಮನಸ್ಸನ್ನು
ಹೇಗೆ ಸಜ್ಜುಗೊಳಿಸಬೇಕು, ನಾವೂ ಯೋಗಾರೂಢರಾಗಬೇಕಾದರೆ ಏನು ಮಾಡಬೇಕು ಎನ್ನುವುದರ ಪ್ರಸ್ತಾವನೆ ಮುಂದಿನ ಶ್ಲೋಕ.
- ಶ್ಲೋಕ - 05
ಉದ್ಧರೇದಾತ್ಮನಾSSತ್ಮಾನಂ ನಾSತ್ಮಾನಮವಸಾದಯೇತ್ ।
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ॥೫॥
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ॥೫॥
ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್ ।
ಆತ್ಮಾ ಏವ ಹಿ ಆತ್ಮನಃ ಬಂಧುಃ ಆತ್ಮಾ ಏವ ರಿಪುಃ ಆತ್ಮನಃ –ಬಗೆಯ ಬಲದಿಂದ [ಭಗವಂತನ ಹಸಾದದಿಂದ] ಜೀವವನ್ನು ಮೇಲೆತ್ತಬೇಕು; ಜೀವವನ್ನು ಜಂಜಡಗೊಳಿಸಬಾರದು. ಬಗೆಯೆ[ಭಗವಂತನೆ] ಜೀವದ ಗೆಳೆಯ; ಬಗೆಯೆ[ಭಗವಂತನೆ]ಜೀವದ ಹಗೆಯು.
ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಆತ್ಮ
ಎಂದರೆ ಶರೀರ, ಮನಸ್ಸು, ಜೀವ, ಪರಮಾತ್ಮ. ಹೀಗೆ ಈ ಶ್ಲೋಕದಲ್ಲಿ ಬಂದಿರುವ ಆತ್ಮ
ಶಬ್ಧಕ್ಕೆ ಈ ಎಲ್ಲಾ ಅರ್ಥವನ್ನೂ ಜೋಡಿಸಿ ನೋಡಿದರೆ ಅನೇಕ ವಿಚಾರ
ಸ್ಪಷ್ಟವಾಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್” ಅಂದರೆ ನಮ್ಮ ಅಧಃಪಾತಕ್ಕೂ ಕಾರಣ ಮನಸ್ಸು. ನಮ್ಮ ಉದ್ಧಾರಕ್ಕೆ ಕಾರಣ ಮನಸ್ಸು. ಆದ್ದರಿಂದ
ಮನಸ್ಸಿನಿಂದ(ಆತ್ಮಾನಾ) ಜೀವದ(ಆತ್ಮಾನಂ) ಉದ್ಧಾರದ ದಾರಿಯನ್ನು ಹುಡುಕು ಎನ್ನುತ್ತಾನೆ ಕೃಷ್ಣ. ಎಂದೂ ಮನಸ್ಸನ್ನು ಕೆಳಕ್ಕೆ ಕಳುಹಿಸಬೇಡ. ಆತ್ಮದ(ಜೀವದ) ಅವಸಾನಕ್ಕೆ
ಕಾರಣವಾಗುವಂತೆ ಮನಸ್ಸನ್ನು ಸ್ವಚ್ಛಂದವಾಗಿ ಬಿಡಬೇಡ. ಅದನ್ನು ಮೇಲಕ್ಕೆ ಕೊಂಡು ಹೋಗು. ಮನಸ್ಸು ಕೆಳಗೆ ಹೋದರೆ ಅದು ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. ‘ಆ ಮನಸ್ಸನ್ನು ಎತ್ತರಕ್ಕೆ ಕಳಿಸು. ಎತ್ತರಕ್ಕೆ ಹೋದ ಮನಸ್ಸು ನಿನ್ನನ್ನು ಎತ್ತರಕ್ಕೆ
ಕೊಂಡೊಯ್ಯುತ್ತದೆ. ಮನಸ್ಸಿನಿಂದ ನಿನ್ನ ಜೀವ ಸ್ವರೂಪವನ್ನು ಉದ್ಧಾರ ಮಾಡಿಕೊ. ಜೀವಕ್ಕೆ ಮನಸ್ಸೇ ಬಂಧು, ಮನಸ್ಸೇ ಶತ್ರು. ಆದ್ದರಿಂದ ಸಾಧನೆ ಮಾಡಬೇಕಾದರೆ ಮನಸ್ಸನ್ನು ಬಂಧುವಾಗಿ ಪರಿವರ್ತನೆ ಮಾಡಿಕೊ. ಮನಸ್ಸು ನಿನ್ನ ಶತ್ರುವಾಗಿ ನಿಂತರೆ ನಿನ್ನ ಜೀವಮಾನದಲ್ಲೇ
ಉದ್ಧಾರವಿಲ್ಲ. ಅದಕ್ಕಾಗಿ ಮೊದಲು ಬುದ್ಧಿಬಲದಿಂದ ಮನಸ್ಸಿಗೆ ತರಬೇತಿ ಕೊಟ್ಟು ಅದನ್ನು ಗೆಲ್ಲಬೇಕು’ ಎನ್ನುವುದು ಕೃಷ್ಣನ ಸಂದೇಶ. ಮನಸ್ಸನ್ನು ಗೆದ್ದರೆ ಎಲ್ಲವೂ ಪ್ರಶಾಂತ, ಯಾವ ಗೊಂದಲವೂ ಇಲ್ಲ. ಇದು ಧ್ಯಾನಕ್ಕೆ ಬೇಕಾದ ಪೂರ್ವ ಸ್ಥಿತಿ.
ಕೃಷ್ಣನ ಈ ಸಂದೇಶ ಕೇಳಿದಾಗ ನಮಗೆ ಒಂದು ಪ್ರಶ್ನೆ ಎದುರಾಗುತ್ತದೆ. ಈ
ಹಿಂದೆ ಕೃಷ್ಣನೇ ಹೇಳಿದಂತೆ ಯಾವುದೂ ನಮ್ಮ
ಕೈಯಲ್ಲಿಲ್ಲ. ಭಗವಂತನ ಅನುಗ್ರಹವಿಲ್ಲದೆ ನಾವು ನಮ್ಮ ಮನಸ್ಸನ್ನು ಸ್ವತಂತ್ರವಾಗಿ ಎಂದೂ ನಿಯಂತ್ರಿಸಲು ಸಾಧ್ಯವಿಲ್ಲ.
ಹೀಗಿರುವಾಗ ನಾವು ನಮ್ಮ ಮನಸ್ಸನ್ನು
ನಿಯಂತ್ರಿಸುವುದು ಹೇಗೆ? ಈ ನಮ್ಮ ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ.ಆತ್ಮ ಎಂದರೆ ಪರಮಾತ್ಮ ಎನ್ನುವ
ಸೂಕ್ಷ್ಮ ಅರ್ಥದಲ್ಲಿ ಈ ಶ್ಲೋಕವನ್ನು ನೋಡಿದಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್” ಅಂದರೆ “ಆತ್ಮನಿಂದಲೇ(ಭಗವಂತನಿಂದಲೇ)
ಆತ್ಮನನ್ನು(ಜೀವವನ್ನು) ಉದ್ಧರಿಸಬೇಕು. ಸಾಮಾನ್ಯವಾಗಿ ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. “ನನ್ನಿಂದ ಇದು ಸಾಧ್ಯವಿಲ್ಲ” ಎನ್ನುತ್ತದೆ ಮನಸ್ಸು. ಆದರೆ ನಮಗೆ ಭಗವಂತ ಬುದ್ಧಿ ಕೊಟ್ಟಿದ್ದಾನೆ, ನಾವು ಅದನ್ನು ಉಪಯೋಗಿಸಬೇಕು. ಬುದ್ಧಿಯನ್ನು ಉಪಯೋಗಿಸಿ ಆ ಭಗವಂತನಲ್ಲಿ “ನನಗೆ ಒಳ್ಳೆಯ ಮನಸ್ಸನ್ನು ಕೊಡು, ನನ್ನನ್ನು ಉದ್ಧಾರದ ದಾರಿಯಲ್ಲಿ ನಡೆಸು, ಸಾಧನೆ ಮಾಡುವಂತಹ
ಸದ್ಭುದ್ಧಿಯನ್ನು ಕೊಡು” ಎಂದು ಆ ಭಗವಂತನಲ್ಲಿ ನಿರಂತರ ಪ್ರಾರ್ಥಿಸು. ಆತ ನಮ್ಮ ಅತ್ಯಂತ ಆತ್ಮೀಯ
ಹಿತಚಿಂತಕ ಬಂಧು. ಅವನೊಬ್ಬನೇ ಯಾವುದೇ ಸ್ವಾರ್ಥವಿಲ್ಲದ ಶಾಶ್ವತ, ನಿರ್ವ್ಯಾಜ, ನಿರಂತರ ಬಂಧು. ಆತ ಖಂಡಿತ ನಮ್ಮ
ಪ್ರಾರ್ಥನೆಯನ್ನು ಮನ್ನಿಸಿ ನಮ್ಮ ಮನಸ್ಸಿನಲ್ಲಿ ಬಂದು ಕೂರುತ್ತಾನೆ.
ಭಗವಂತ ನಾವು ಆತನನ್ನು ಹೇಗೆ ಕಾಣುತ್ತೇವೆ ಅದೇ ಭಾವದಲ್ಲಿ
ವ್ಯಕ್ತನಾಗುತ್ತಾನೆ. ದೇವತೆಗಳು ಆತನನ್ನು ಜ್ಞಾನಿಯಾಗಿ ಕಂಡರು- ಆತ
ಅವರಿಗೆ ಜ್ಞಾನಿಯಾಗಿ ಕಾಣಿಸಿಕೊಂಡು ಅವರ ಉದ್ಧಾರ ಮಾಡಿದ. ರಾಕ್ಷಸರು ಆತ ಕೊಲ್ಲುವವವ ಮತ್ತು ಶತ್ರು ಎಂದು ತಿಳಿದು ಅವನನ್ನು ದ್ವೇಷಿಸಿದರು- ಆತ ಅವರಿಗೆ ಶತ್ರುವಾಗಿ
ಕಾಣಿಸಿದ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಆತ್ಮಾ ಏವ ರಿಪುಃ ಆತ್ಮನಃ” ಎಂದು. ಅಂದರೆ ನಾವು ಅಹಂಕಾರದಿಂದ ದಾರಿ ತಪ್ಪಿದಾಗ ಆತ ನಮಗೆ ನಮ್ಮ ಶತ್ರುವಿನಂತೆ ಬಾಸವಾಗುತ್ತಾನೆ. ಈ
ಬಗ್ಗೆ ಮುಂದಿನ ಶ್ಲೋಕ ಇನ್ನೂ ಹೆಚ್ಚಿನ ವಿವರವನ್ನು ಕೊಡುತ್ತದೆ.
- ಶ್ಲೋಕ - 06
ಬಂಧುರಾತ್ಮಾSSತ್ಮನಸ್ತಸ್ಯ ಯೇನಾSತ್ಮೈವಾSತ್ಮನಾ ಜಿತಃ ।
ಅನಾತ್ಮನಸ್ತು ಶತ್ರುತ್ವೇ ವರ್ತೇತಾSತ್ಮೈವ ಶತ್ರುವತ್ ॥೬॥
ಅನಾತ್ಮನಸ್ತು ಶತ್ರುತ್ವೇ ವರ್ತೇತಾSತ್ಮೈವ ಶತ್ರುವತ್ ॥೬॥
ಬಂಧುಃ ಆತ್ಮಾ ಆತ್ಮನಃ ತಸ್ಯ ಯೇನ ಆತ್ಮಾ ಏವ ಆತ್ಮನಾ ಜಿತಃ ।
ಅನಾತ್ಮನಃ ತು ಶತ್ರುತ್ವೇ ವರ್ತೇತ ಆತ್ಮಾ ಏವ ಶತ್ರುವತ್-ಯಾವ ಜೀವ ವಿವೇಕದಿಂದ ಬಗೆಯನ್ನು [ಭಕ್ತಿಯಿಂದ
ಭಗವಂತನನ್ನು]ಗೆದೆಯಬಲ್ಲದೋ [ಯಾವ ಜೀವದಿಂದ ಬಗೆ ಹದಗೊಂಡಿದೆಯೋ], ಅಂಥ ಜೀವಕ್ಕೆ ಬಗೆ[ಭಗವಂತ]ಗೆಳೆಯ.
ಬಗೆಯನ್ನು[ಭಗವಂತನನ್ನು] ಗೆದೆಯಲಾರದವನಿಗೆ
ಬಗೆಯೆ [ಭಗವಂತನೆ]ಹಗೆಯಾಳಿನಂತೆ ಎದುರಾಳಿ.
ಯಾರು ಭಗವಂತನನ್ನು ಗೆದ್ದಿದ್ದಾರೋ(ಭಗವಂತನ ಪ್ರೀತಿಗೆ
ಪಾತ್ರರಾಗಿದ್ದಾರೋ) ಅವರಿಗೆ ಆತ ಬಂಧು. ಭಗವಂತನ ಪ್ರೀತಿಗೆ ಪಾತ್ರರಾಗಲು ಆತನ ಅನುಗ್ರಹ ಬೇಕು.
ಅವನ ಅನುಗ್ರಹದಿಂದ ಅವನನ್ನು ಒಲಿಸಿ ಅವನ ಪ್ರೀತಿಗೆ
ಪಾತ್ರರಾದವರಿಗೆ ಆತ ಬಂಧು. ಯಾರು ಭಗವಂತನಿಗೆ ಬೆನ್ನು ಹಾಕಿ ಮುಂದೆ ಸಾಗಿದರೋ ಅವರು ಸದಾ ಭಗವಂತನಿಂದ ದೂರ ಸಾಗುತ್ತಾರೆ.
ಆತನಿಗೆ ಬೆನ್ನುಹಾಕಿ ಆತನನ್ನು ದ್ವೇಷಿಸುವವರಿಗೆ ಆತ ಶತ್ರುವಂತೆ
ಕಾಣುತ್ತಾನೆ. ಈ ಕಾರಣದಿಂದ ನಿರಂತರ ಭಗವಂತನನ್ನು ಪ್ರಾರ್ಥಿಸು. “ಬಂಧುವಾಗಿ ನನ್ನೊಳಗೆ
ಬಂದು ನೆಲೆಸು, ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಸು, ನನ್ನನ್ನು ನಿನ್ನತ್ತ ತಿರುಗಿಸಿ ಮುಂದೆ ಕರೆದುಕೊಂಡು ಹೋಗು” ಎನ್ನುವ ಪ್ರಾರ್ಥನೆ ಹಾಗು ಶರಣಾಗತಿ ನಮ್ಮ
ಮನಸ್ಸು ಆತನಲ್ಲಿ ನೆಲೆಗೊಳ್ಳುವಂತೆ ಮಾಡುತ್ತದೆ. ಇದು ಧ್ಯಾನದ ಮೊದಲ ಮೆಟ್ಟಿಲು. ಹೀಗೆ ಮನಸ್ಸನ್ನು ಮಣಿಸಲು ಭಗವಂತನ ಅನುಗ್ರಹಪಡೆಯುವ ಪ್ರಯತ್ನ ಮಾಡಿದಾಗ
ಏನಾಗುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.
- ಶ್ಲೋಕ - 07 & 08
ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ ।
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ ॥೭॥
ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯ ।
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ ॥೮॥
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ ॥೭॥
ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯ ।
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ ॥೮॥
ಜಿತ ಆತ್ಮನಃ ಪ್ರಶಾಂತಸ್ಯ ಪರಮ ಆತ್ಮಾ ಸಮಾಹಿತಃ ।
ಶೀತ ಉಷ್ಣ ಸುಖ ದುಃಖೇಷು ತಥಾ ಮಾನ ಅಪಮಾನಯೋಃ ||
ಜ್ಞಾನ ವಿಜ್ಞಾನ ತೃಪ್ತ ಆತ್ಮಾ ಕೂಟ ಸ್ಥಃ ವಿಜಿತ ಇಂದ್ರಿಯ
ಯುಕ್ತಃ ಇತಿ ಉಚ್ಯತೇ ಯೋಗೀ ಸಮಲೋಷ್ಟ ಅಶ್ಮ ಕಾಂಚನಃ –ಬಗೆಯನ್ನು[ಭಕ್ತಿಯಿಂದ ಭಗವಂತನನ್ನು] ಗೆಲಿದವನ, ವಿಷಯಗಳತ್ತ ಸುಳಿಯದೆ ಭಗವಂತನಲ್ಲೆ ನಲಿದವನ
ಬಗೆಯಲ್ಲಿ ಭಗವಂತ ನೆಲೆಗೊಳ್ಳುತ್ತಾನೆ. ಅಂತವನು ತಂಪು –ಬಿಸಿ, ಸುಖ –ದುಃಖ ಮತ್ತು ಸಮ್ಮಾನ-ತಿರಸ್ಕಾರ ಇಂಥ ದ್ವಂದ್ವಗಳಲ್ಲಿ ನಿರ್ವಿಕಾರನಾಗಿ ನಿಲ್ಲಬಲ್ಲವನು ; ಭಗವಂತನ ಅರಿವು ಕಾಣ್ಕೆಗಳಿಂದ ಬಗೆದುಂಬಿದವನು; ಇಂದ್ರಿಯಗಳನ್ನು ಹಿಡಿತದಲ್ಲಿಟ್ಟವನು. ಅವನಿಗೆ
ಮಣ್ಣು, ಕಲ್ಲು, ಚಿನ್ನ ಎಲ್ಲ ಒಂದೆ. ಇಂಥ ಯೋಗ ಸಾಧಕನು ಗುರಿ ಸೇರಿದವನು ಎನ್ನಿಸುತ್ತಾನೆ.
ಭಕ್ತಿಯಿಂದ ಭಗವಂತನ ಅನುಗ್ರಹ ಪಡೆದಾಗ ಮೊದಲು ಮನಸ್ಸು ಆತನಲ್ಲಿ ನೆಲೆ ನಿಲ್ಲುತ್ತದೆ. ಮನಸ್ಸು ಎಂಥಹ ಪ್ರಸಂಗದಲ್ಲೂ
ಉದ್ವೇಗಗೊಳ್ಳುವುದಿಲ್ಲ. “ಪರಮಾತ್ಮಾ ಸಮಾಹಿತಃ” –ಭಗವಂತ ಅವನ
ಹೃದಯದಲ್ಲಿ ಬಂದು ನೆಲೆಸಿ ಬಿಡುತ್ತಾನೆ. ನಾವು ಬಯಸಿದಾಗ ಆತನ ಅಂತರ್ದರ್ಶನ ಸಾಧ್ಯ. ಈ ರೀತಿ ಭಗವಂತನನ್ನು ಕಾಣುವವರ, ಅಪರೋಕ್ಷ ಜ್ಞಾನದ ಪರಿಣಾಮ ಏನು ಎನ್ನುವುದನ್ನು ಇಲ್ಲಿ ಮತ್ತೊಮ್ಮೆ
ವಿವರಿಸುತ್ತಾನೆ ಕೃಷ್ಣ.
ಮುಖ್ಯವಾಗಿ ಅಪರೋಕ್ಷ ಜ್ಞಾನಿಗಳಿಗೆ ಎಂದೂ ಇಂದ್ರಿಯ ಚಾಪಲ
ಕಾಡುವುದಿಲ್ಲ. ಅಪಮಾನಕ್ಕೆ ಆತ ಎಂದೂ ಕುಸಿಯುವುದಿಲ್ಲ.
ಮಾನಾಪಮಾನ ಆತನಿಗೆ ದೊಡ್ಡ ಸಂಗತಿ ಆಗುವುದಿಲ್ಲ. ಈ ಸ್ಥಿತಿ ತಲುಪಿದವ ಸಿದ್ಧ ಎನಿಸುತ್ತಾನೆ. ಆತ ಎಷ್ಟು ನಿರ್ವೀಕಾರ ಎಂದರೆ ಆತ ಎಲ್ಲವನ್ನೂ ಸಮನಾಗಿ ಕಾಣಲಾರಂಭಿಸುತ್ತಾನೆ. ಧನ-ಕನಕ ಎಲ್ಲವೂ ಬೇಡವೆನಿಸಿ ಅದರಿಂದ ದೂರವಿರುತ್ತಾನೆ. (ರಾಮಕೃಷ್ಣ ಪರಮಹಂಸರ
ಆತ್ಮಕಥೆಯನ್ನು ಓದಿದರೆ ಒಬ್ಬ ಅಪರೋಕ್ಷ ಜ್ಞಾನಿಯ ಮನಃಸ್ಥಿತಿ ನಮಗೆ ಅರ್ಥವಾಗುತ್ತದೆ).
ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನಕ್ಕೆ ಪೂರ್ವಭಾವಿಯಾಗಿ ಒಬ್ಬ ಯೋಗಿಯ ಮನಃಸ್ಥಿತಿ ಹೇಗಿರಬೇಕು ಎನ್ನುವ ಬಹಳ ಮಹತ್ವವಾದ ವಿಚಾರವನ್ನು ವಿವರಿಸುತ್ತಾನೆ.
- ಶ್ಲೋಕ - 09
ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂದುಷು ।
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ ॥೯॥
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ ॥೯॥
ಸುಹೃತ್ ಮಿತ್ರ ಅರಿ ಉದಾಸೀನ ಮಧ್ಯಸ್ಥ ದ್ವೇಷ್ಯ ಬಂದುಷು ।
ಸಾಧುಷು ಅಪಿ ಚ ಪಾಪೇಷು ಸಮಬುದ್ಧಿಃ ವಿಶಿಷ್ಯತೇ –ಹೆಳೆಯಿಲ್ಲದೆ ಹಚ್ಚಿಕೊಳ್ಳುವವರು, ಕಷ್ಟ ಕಾಲದಲ್ಲಿ ಎಚ್ಚರಿಸುವವರು, ಕಾಟಕೊಡುವವರು, ಒಳಿತು-ಕೆಡುಕು ಯಾವುದಕ್ಕೂ ಇಲ್ಲದವರು, ಎರಡಕ್ಕೂ
ನಿಲ್ಲುವವರು, ಬೇಡವಾದದ್ದನ್ನು ಬಗೆವವರು, ನೆಂಟರು, ಒಳ್ಳೆಯವರು ಮತ್ತು ಕೆಟ್ಟವರು –ಎಲ್ಲರೂ ಮೂಲತಃ ಜ್ಞಾನ ಸ್ವರೂಪರು ಎಂದು
ಸಮಭಾವದಿಂದ ಕಾಣುವವನು[ಎಲ್ಲರನ್ನೂ ಅವರವರ ಇರವಿಗೆ ತಕ್ಕಂತೆ
ಗೌರವಿಸುವವನು] ಮಿಗಿಲಾದವನು.
ಮನಸ್ಸು ಸಮತೋಲನವಾಗದೆ ಧ್ಯಾನ ಮಾಡಲು ಸಾಧ್ಯವಿಲ್ಲ. ಯಾರ್ಯಾರೋ ಬಗ್ಗೆ ಯಾವುದ್ಯಾವುದೋ ವಿಚಾರಗಳು ಮನಸ್ಸಿನಲ್ಲಿ
ಸುಳಿಯಲಾರಂಭಿಸಿದರೆ ಧ್ಯಾನ ಅಸಾಧ್ಯ. ಪ್ರಪಂಚದಲ್ಲಿ ಅನೇಕ ವಿಧದ ಜನರಿರುತ್ತಾರೆ. ಉದಾಹರಣೆಗೆ ಸುಹೃತರು-ಅಂದರೆ ಒಳ್ಳೆಯ ಹೃದಯ ಉಳ್ಳವರು. ಯಾವ ಪ್ರತ್ಯುಪಕಾರ ಬಯಸದೆ ಎಲ್ಲರಿಗೂ
ಸಹಾಯ ಮಾಡುವ ಜನರಿವರು. ಇವರ ನಂತರ ‘ಮಿತ್ರ’- ತನ್ನ ಆತ್ಮೀಯನಿಗೆ ಸದಾ ಸಹಾಯ ಮಾಡುವವ, ನಾವು ತಪ್ಪಿದಾಗ ನಮ್ಮನ್ನು ತಿದ್ದುವವನೀತ. ಆರಿಗಳು: ಕೊಲ್ಲುವ ಕೆಟ್ಟ
ಶತ್ರುತ್ವ ಸಾಧಿಸುವ ಇವರಿಗೆ ದ್ವೇಷಿಸಲು ಕಾರಣ ಬೇಡ. ಉದಾಸೀನರು: ಇವರು ಒಳ್ಳೆಯದಕ್ಕೂ ಇಲ್ಲ ಕೆಟ್ಟದಕ್ಕೂ ಇಲ್ಲ. ಮಧ್ಯಸ್ಥ: ಒಳ್ಳೆಯದು ಮಾಡಿದಾಗ ಒಳ್ಳೆಯದು, ಕೆಟ್ಟದ್ದು ಮಾಡಿದಾಗ ಕೆಟ್ಟದ್ದು ಮಾಡುವವ.
ದ್ವೇಷ್ಯ: ಒಬ್ಬರನ್ನು ಕಂಡು ಸಹಿಸದವ(hatred). ಕೊನೆಯದಾಗಿ ಬಂಧುಗಳು(Relatives).ಹೀಗೆ ಮಾನವ ಜನಾಂಗದಲ್ಲಿ ಒಳ್ಳೆಯರು ಮತ್ತು ಕೆಟ್ಟವರು
ತುಂಬಿರುತ್ತಾರೆ.(ದೇವತೆಗಳಲ್ಲಿ- ದಾನವರಲ್ಲಿ ಈ ರೀತಿಯ ಸಮ್ಮಿಶ್ರ ವರ್ಗವಿಲ್ಲ. ದೇವತೆಗಳು ಕೇವಲ ಸಾದುಗಳು, ಅಸುರರು ಸದಾ ಪಾಪಿಗಳು, ಆದರೆ ಮಾನವರಲ್ಲಿ ಮಾತ್ರ ಈ ಎರಡು ಗುಣ ಮಿಶ್ರಿತ
ಗುಂಪುಗಳನ್ನು ಕಾಣಬಹುದು). ಧ್ಯಾನದಲ್ಲಿ ನಮಗೆ
ಭಗವಂತನ ದರ್ಶನವಾಗಬೇಕಾದರೆ ಮೊದಲು ನಾವು ನಮ್ಮ ಅಂತರಂಗದಲ್ಲಿ ಈ ಎಲ್ಲಾ ರೀತಿಯ ಜನರ ಬಗ್ಗೆ ಸಮಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಒಬ್ಬ
ವ್ಯಕ್ತಿಯ ನಡವಳಿಕೆ ಆತನು ಬೆಳೆದುಬಂದ ವಾತಾವರಣದಿಂದ ಅಥವಾ
ತಿಳುವಳಿಕೆ ಇಲ್ಲದೆ ಇದ್ದುದರಿಂದ ಬಂದದ್ದು ಎಂದು ತಿಳಿದು ಅವನ ಬಗ್ಗೆ
ಮನಸ್ಸಿನಲ್ಲಿ ಯಾವ ಕೆಟ್ಟ ಭಾವನೆಯೂ ಇರದಂತೆ ನೋಡಿಕೊಳ್ಳಬೇಕು. ಒಬ್ಬ ನಮ್ಮ ವೈರಿಯಂತೆ ನಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಕಾರಣ ಆತನ ಹಾಗು ನಮ್ಮ ಪ್ರಾರಾಬ್ಧ ಕರ್ಮವಿರಬಹುದು.
ದೇವರು ಈ ಜನ್ಮದಲ್ಲಿ ಅವನಿಗೆ ಕೊಟ್ಟ ಪಾತ್ರವನ್ನು ಆತ ನಿಭಾಯಿಸುತ್ತಿದ್ದಾನೆ ಎನ್ನುವ ಭಾವದಲ್ಲಿ ಅವನನ್ನು ನೋಡಿದಾಗ ನಮ್ಮಲ್ಲಿ ದ್ವೇಷ ಹುಟ್ಟುವುದಿಲ್ಲ; ಇನ್ನೊಬ್ಬರು ನಮ್ಮನ್ನು ಬೈದಾಗ ನಾವು ಉದ್ವೇಗಕ್ಕೊಳಗಾಗುವುದಿಲ್ಲ-"ಭಗವಂತ ಅವನಿಗೆ ಕೊಟ್ಟ
ಪಾತ್ರವನ್ನು ಅದೆಷ್ಟು ಚನ್ನಾಗಿ ನಿಭಾಯಿಸುತ್ತಿದ್ದಾನೆ" ಎನ್ನುವ ಭಾವ ನಮ್ಮಲ್ಲಿ ಮೂಢಬೇಕು. ಸಂಬಂಧಿಕರಿರಲಿ, ಶತ್ರುಗಳಿರಲಿ, ಯಾರೇ ಇರಲಿ ಧ್ಯಾನ ಸಮಯದಲ್ಲಿ ಮನಸ್ಸಿನಲ್ಲಿ ಶುದ್ಧವಾದ ಸಮಭಾವ ನೆಲೆಗೊಂಡಿರಬೇಕು. ಈ ಸ್ಥಿತಿಯಲ್ಲಿ ಧ್ಯಾನಕ್ಕೆ ಕುಳಿತಾಗ ಇವರ್ಯಾರೂ ಎದುರಿಗೆ ಬರದೆ ಆ ಭಗವಂತನ ದರ್ಶನವಾಗುತ್ತದೆ. ಇಲ್ಲಿ ಒಂದು
ಎಚ್ಚರದ ವಿಷಯ ಎಂದರೆ ಅಂತರಂಗದ ಸಮಭಾವವನ್ನು ವ್ಯವಹಾರಿಕವಾಗಿ ಹೊರ ಪ್ರಪಂಚದಲ್ಲಿ ಅಳವಡಿಸಲು ಬರುವುದಿಲ್ಲ. ವ್ಯವಹಾರಿಕವಾಗಿ ನಾವು ಹಿಂದೆ ಹೇಳಿದ ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ
ಕಾಣುವುದು ಅಂದರೆ ಅವರವರನ್ನು ಆಯಾ ಸ್ಥಾನದಲ್ಲಿ ನೋಡುವುದು
ವ್ಯಾವಹಾರಿಕ ಪ್ರಪಂಚದ ಸಮದೃಷ್ಟಿ. ತಂದೆಯನ್ನು ತಂದೆಯಂತೆ, ಮಗನನ್ನು ಮಗನಂತೆ ಕಂಡು ನಡೆಯುವುದು, ದುಷ್ಟರಿಂದ ದೂರವಿರುವುದು(ಉಪೇಕ್ಷ) ವ್ಯವಹಾರಿಕ ಪ್ರಪಂಚ. ಅಂತರಂಗ ಪ್ರಪಂಚದಲ್ಲಿ ನಾವು ಎಲ್ಲರಲ್ಲೂ ಆತನ ಒಳಗಿರುವ ಭಗವಂತನನ್ನು ಮಾತ್ರ ಕಾಣಬೇಕು. ಇದು ಧ್ಯಾನಕ್ಕೆ
ಬೇಕಾದ ಪೂರ್ವಭಾವಿ ಮನಃಸ್ಥಿತಿ. ಮಾನಸಿಕವಾಗಿ ಎಲ್ಲಾ ಸಂಬಂಧದ ನಂಟನ್ನು ಕಳಚಿ
ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಧ್ಯಾನದಲ್ಲಿ ತಂದೆ, ತಾಯಿ, ಗುರು ಶಿಷ್ಯ, ವೈರಿ, ಮಿತ್ರ ಇತ್ಯಾದಿ ವರ್ಗಗಳಿಲ್ಲ. ಎಲ್ಲವೂ ಒಂದೆ, ಅದು ಕೇವಲ ಜ್ಞಾನಸ್ವರೂಪವಾದ ಜೀವ- ಅದರೊಳಗೆ ಬಿಂಬ ರೂಪಿ ಭಗವಂತ. ಇದು ಧ್ಯಾನಕ್ಕೆ ಬೇಕಾದ ಮಾನಸಿಕ ಸ್ಥಿತಿ.
- ಶ್ಲೋಕ - 10
ಹೀಗೆ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ವಿವರಿಸಿದ ಕೃಷ್ಣ
ಮುಂದೆ ನೇರವಾಗಿ ಧ್ಯಾನಕ್ಕೆ ಕೂರುವ ವಿಧಾನವನ್ನು
ವಿವರಿಸುತ್ತಾನೆ.
ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ ।
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ॥೧೦॥
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ॥೧೦॥
ಯೋಗೀ ಯುಂಜೀತ ಸತತಮ್ ಆತ್ಮಾನಮ್ ರಹಸಿ ಸ್ಥಿತಃ ।
ಏಕಾಕೀ ಯತ ಚಿತ್ತ ಆತ್ಮಾ ನಿರಾಶೀಃ ಅಪರಿಗ್ರಹಃ –ಯೋಗ ಸಾಧಕನು ಒಬ್ಬನೆ ಏಕಾಂತದಲ್ಲಿ ಕುಳಿತು, ಮೈಮನಗಳನ್ನು
ಹದಗೊಳಿಸಿ, ಆಸೆಪಡದೆ, ಏತಕ್ಕೂ ಕೈಯೊಡ್ಡದೆ, ಬಗೆಯನ್ನು ಸದಾ ಸಮಾಧಿಗೆ ಅಣಿಗೊಳಿಸಬೇಕು.
“ಸತತಮ್ ಆತ್ಮಾನಮ್”-ಧ್ಯಾನ ಮಾರ್ಗದಲ್ಲಿ ಸಾಧನೆ ಮಾಡತಕ್ಕಂತಹ
ವ್ಯಕ್ತಿ ಮನಸ್ಸನ್ನು ನಿರಂತರ ಧ್ಯಾನ ಯೋಗದಲ್ಲಿ ತೊಡಗಿಸಲು ಹಾಗು ಏಕಾಗ್ರಗೊಳಿಸಲು ಪ್ರಯತ್ನಪಡಬೇಕು; “ರಹಸಿ ಸ್ಥಿತಃ”- ಜನಜಂಗುಳಿ ಇದ್ದಲ್ಲಿ ಧ್ಯಾನ ಅಭ್ಯಾಸ ಮಾಡಲು ಅಸಾಧ್ಯ. ಈ ಕಾರಣಕ್ಕಾಗಿ ಹಿಂದಿನವರು ಧ್ಯಾನಕ್ಕಾಗಿ ಬೆಳಗಿನ ಜಾವದ
ಅರುಣೋದಯ ಕಾಲವನ್ನು ಮೀಸಲಿಡುತ್ತಿದ್ದರು. ಬೆಳಗಿನಜಾವ ಸೂರ್ಯೋದಯಕ್ಕಿಂತ ತೊಂಬತ್ತಾರು ನಿಮಿಷ ಮೊದಲು ಧ್ಯಾನಕ್ಕೆ ಕುಳಿತರೆ ಆಗ ಇಡೀ ಪ್ರಕೃತಿ ಪ್ರಶಾಂತವಾಗಿರುತ್ತದೆ. ಈ ಕಾಲ
ಮನಸ್ಸನ್ನು ಏಕಾಗ್ರತೆಗೆ ಕೊಂಡೊಯ್ಯಲು ಅತ್ಯಂತ ಪೂರಕ ಕಾಲ. ಇದನ್ನು ‘ಬ್ರಹ್ಮಮಹೂರ್ತ’ ಎನ್ನುತ್ತಾರೆ(ಸೂರ್ಯೋದಯಕ್ಕಿಂತ ತೊಬತ್ತಾರು ನಿಮಿಷ(ನಾಲ್ಕು ಘಳಿಗೆ) ಮೊದಲು
ಪ್ರಾರಂಭವಾಗಿ ನಲವತ್ತೆಂಟು ನಿಮಿಷಗಳ ಕಾಲ(ಎರಡು ಘಳಿಗೆ) ಬ್ರಹ್ಮಮಹೂರ್ತ-ಉದಾಹರಣೆಗೆ ಸೂರ್ಯೋದಯ 5:44ಕ್ಕೆ ಆದರೆ 4:08 ರಿಂದ 4:56 ರ ತನಕ ಬ್ರಹ್ಮಮಹೂರ್ತ). ಈ ಮಹೂರ್ತದ ದೇವತೆ
ಚತುರ್ಮುಖ ಬ್ರಹ್ಮ. ಈತನೇ ನಮ್ಮ ಚಿತ್ತದ ದೇವತೆ. ಆದ್ದರಿಂದ ಈ ಕಾಲ ಜಪ ಸ್ಮರಣೆ ಮತ್ತು ಧ್ಯಾನಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ. ಧ್ಯಾನ ಎನ್ನುವುದು ಅತ್ಯಂತ ಅಂತರಂಗದ ಕ್ರಿಯೆ. ಇಲ್ಲಿ ಕೇವಲ ಭಗವಂತ ಮತ್ತು ಸಾಧಕ ಜೀವ ಮಾತ್ರ ಇರಬೇಕು, ಮೂರನೆ ಸಂಗಾತಿ ಬಂದರೆ ತೊಂದರೆಯಾಗುತ್ತದೆ.
ಒಬ್ಬ ಕಲುಷಿತ ಮನಸ್ಸಿನ(polluted mind) ವ್ಯಕ್ತಿಯಿಂದ ಆತನ ಸುತ್ತಲಿನ ವಾತಾವರಣ ಕೆಡುತ್ತದೆ. ಅದಕ್ಕಾಗಿ ಧ್ಯಾನ ಅಭ್ಯಾಸ ಮಾಡುವಾಗ ಯಾವಾಗಲೂ
ಏಕಾಂತವಾಗಿ ಅಭ್ಯಾಸ ಮಾಡಬೇಕು. ನಮ್ಮ ಚಿತ್ತ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟು, ಯಾವುದೇ ಆಸೆ ಆಕಾಂಕ್ಷೆ ಮನಸ್ಸಿಗೆ ಸುಳಿಯದಂತೆ, ತೃಪ್ತ ಮನಸ್ಸಿನಿಂದ
ಧ್ಯಾನಕ್ಕೆ ಅಣಿಯಾಗಬೇಕು.
ಮುಂದಿನ ಶ್ಲೋಕದಲ್ಲಿ ಧ್ಯಾನಕ್ಕೆ ಕೂರುವ ಸ್ಥಳ ಹೇಗಿರಬೇಕು ಮತ್ತು
ಹೇಗೆ ಕುಳಿತುಕೊಳ್ಳಬೇಕು ಎನ್ನುವುದನ್ನು
ಕೃಷ್ಣ ವಿವರಿಸುತ್ತಾನೆ.
- ಶ್ಲೋಕ - 11 & 12
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ ।
ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್ ॥೧೧॥
ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಾಃ ।
ಉಪವಿಶ್ಯಾSಸನೇ ಯುಂಜ್ಯಾದ್ ಯೋಗ ಮಾತ್ಮವಿಶುದ್ಧಯೇ ॥೧೨॥
ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್ ॥೧೧॥
ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಾಃ ।
ಉಪವಿಶ್ಯಾSಸನೇ ಯುಂಜ್ಯಾದ್ ಯೋಗ ಮಾತ್ಮವಿಶುದ್ಧಯೇ ॥೧೨॥
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮ್ ಆಸನಮ್ ಆತ್ಮನಃ ।
ನ ಅತಿ ಉಚ್ಛ್ರಿತಮ್ ನ ಅತಿ ನೀಚಮ್ ಚೇಲ ಅಜಿನ ಕುಶ ಉತ್ತರಮ್
ತತ್ರ ಏಕ ಅಗ್ರಮ್ ಮನಃ ಕೃತ್ವಾ ಯತಚಿತ್ತ ಇಂದ್ರಿಯ ಕ್ರಿಯಃ ।
ಉಪವಿಶ್ಯ ಆಸನೇ ಯುಂಜ್ಯಾದ್ ಯೋಗಮ್ ಆತ್ಮ ವಿಶುದ್ಧಯೇ –ನಿರ್ಮಲವಾದ ತಾಣದಲ್ಲಿ, ಹುಲ್ಲ(ದರ್ಬೆ) ಚಾಪೆ-ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬ ಎತ್ತರವೂ ಅಲ್ಲದ, ತೀರ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಬೇಕು. ಅದರಲ್ಲಿ ಕುಳಿತು, ಬಗೆಯನ್ನು ನೆಟ್ಟ ಗುರಿಯಲ್ಲಿರಿಸಿ, ಇಂದ್ರಿಯಗಳ ಮತ್ತು ಒಳಬಗೆಯ ಚೆಲ್ಲಾಟವನ್ನು ನಿಲ್ಲಿಸಿ, ಆತ್ಮ ಶುದ್ಧಿಗಾಗಿ ಸಮಾಧಿಯನ್ನು ಸಾಧಿಸಬೇಕು.
ಧ್ಯಾನಕ್ಕೆ ಕೂರುವ ಪ್ರದೇಶ ಸ್ವಚ್ಛವಾಗಿರಬೇಕು. ಮನೆಯಲ್ಲಿ ಸಾತ್ವಿಕ ಕಂಪನ(Vibration)ವಿರುವ ಸ್ಥಳವನ್ನು ಧ್ಯಾನಕ್ಕೆ ಆರಿಸಿಕೊಳ್ಳಬೇಕು. ಹಿಂದೆ ಮನೆಯಲ್ಲಿ ಹೆಚ್ಚು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿ
ಅಲ್ಲಿ ದೇವರಮನೆಯನ್ನು ನಿರ್ಮಿಸುತ್ತಿದ್ದರು.
ದುರಾದೃಷ್ಟಾವಶಾತ್ ಇಂದು ಮನೆ ಕಟ್ಟುವಾಗ ಎಲ್ಲಿ ಜಾಗ ಉಳಿದಿದೆ ಅದನ್ನು
ದೇವರಮನೆಯಾಗಿ ಪರಿವರ್ತಿಸುತ್ತಿದ್ದೇವೆ. ನಾವು ಮನೆಯಲ್ಲಿ ಯಾವ ಭಾಗದಲ್ಲಿ ಕುಳಿತಾಗ ನಮಗೆ ಮನಸ್ಸು ಪ್ರಸನ್ನವಾಗಿ ದೇವರ ಧ್ಯಾನಕ್ಕೆ ಪೂರಕವಾಗಿರುತ್ತದೋ ಅಲ್ಲಿ ಸಾತ್ವಿಕ ಕಂಪನ ಹೆಚ್ಚಾಗಿದೆ ಎಂದು ನಾವು
ಸುಲಭವಾಗಿ ಕಂಡು ಹಿಡಿಯಬಹುದು. ಇದನ್ನೇ ಇಲ್ಲಿ “ಶುಚಿ ದೇಶ” ಎಂದಿದ್ದಾರೆ.
ನಾವು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿದರೆ ಸಾಲದು; ಅಲ್ಲಿ ಎಷ್ಟು ಒಳ್ಳೆಯ ಸಾತ್ವಿಕ ಕಂಪನವಿದ್ದರೂ ನಾವು ನೆಲದಲ್ಲಿ ಕುಳಿತರೆ
ನೆಲದಲ್ಲಿರುವ ಕೆಟ್ಟ ಕಂಪನ ನಮ್ಮ ದೇಹವನ್ನು
ಪ್ರವೇಶಿಸಬಹುದು. ಅದಕ್ಕಾಗಿ ನಾವು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಸರಿಯಾಗಿರಬೇಕು. ಸ್ಥಿರವಾದ ಆಸನ ಅತೀ ಮುಖ್ಯ. ಇದಕ್ಕಾಗಿ ಸೋಫಾದಂತಹ
ಕುಶನ್ ಇರುವ ಆಸನವನ್ನು ಉಪಯೋಗಿಸಬಾರದು. ಇಲ್ಲಿ ಕೃಷ್ಣ ಯಾವ
ರೀತಿಯ ಆಸನ ಯೋಗ್ಯ ಎನ್ನುವುದನ್ನು ವಿವರಿಸಿದ್ದಾನೆ. ನಾವು ಕುಳಿತು ಕೊಳ್ಳುವ ಆಸನ ಬಹಳ ತಗ್ಗಾಗಿ ಇರಬಾರದು ಬಹಳ ಎತ್ತರದಲ್ಲಿಯೂ ಇರಬಾರದು. ಕುಳಿತುಕೊಳ್ಳುವ
ಸ್ಥಳದಲ್ಲಿ ಮೊದಲು ದರ್ಬೆಯ ಚಾಪೆಯನ್ನು ಹಾಸಬೇಕು. ಅದರ ಮೇಲೆ ಕೃಷ್ಣಾಜಿನವನ್ನು(ಸಂಸಾರಿಗಳು) ಅಥವಾ ವ್ಯಾಗ್ರಾಜಿನ(ಸಂಸಾರವನ್ನು ತ್ಯಜಿಸಿದ-ನೈಷ್ಠಿಕ ಬ್ರಹ್ಮಚಾರಿಗಳು)ವನ್ನು
ಹಾಸಬೇಕು. ಅದರ ಮೇಲೆ ಬಟ್ಟೆ (ರೇಷ್ಮೆಯ ಪಟ್ಟೆ ಅಥವಾ ದಾವಳಿ). ಇದು ಧ್ಯಾನಕ್ಕೆ ಅತ್ಯಂತ ಶ್ರೇಷ್ಠ ಆಸನ.
ಇಲ್ಲಿ ದರ್ಬೆಯ ಚಾಪೆಯನ್ನು ಉಪಯೋಗಿಸಲು ಹೇಳಿದ್ದಾರೆ. ಮೇಲ್ನೋಟಕ್ಕೆ
ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ.
ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ. ಧ್ಯಾನ ಕಾಲದಲ್ಲಿ ಯಾವ ದುಷ್ಟಶಕ್ತಿ ನಮಗೆ ತೊಂದರೆ
ಕೊಡದಂತೆ ಇಲ್ಲಿ ದರ್ಬೆಯ ಚಾಪೆ ನಮಗೆ ಸಹಾಯ ಮಾಡುತ್ತದೆ.
ಕೃಷ್ಣಾಜಿನ ಹಾಗು ಪಟ್ಟೆ ಮಹತ್ತಾದ ಸಾತ್ವಿಕ ಕಂಪನವನ್ನು ನಮಗೊದಗಿಸುತ್ತದೆ. ಇದು ನೆಲದಿಂದ ನಮ್ಮ ದೇಹಕ್ಕೆ ಕೆಟ್ಟ ಕಂಪನ ಪ್ರವೇಶಿಸದಂತೆ ತಡೆಯುತ್ತದೆ. ನಮ್ಮಲ್ಲಿ
ಕೆಲವರು ಮರದ ಮಣೆಯನ್ನು ಉಪಯೋಗಿಸುತ್ತಾರೆ. ಆದರೆ ಮಣೆಯಲ್ಲಿ ಕುಳಿತಾಗ ನಮ್ಮ ದೇಹದ ಕೆಲವು ಭಾಗ ನೆಲವನ್ನು ಸ್ಪರ್ಶಿಸುವ ಸಾಧ್ಯತೆ ಇದೆ. ಅದಕ್ಕಾಗಿ ಕೃಷ್ಣ ಹೇಳಿದ ಈ ಮೇಲಿನ ಆಸನ ಬಹಳ ಸೂಕ್ತ. ಈ ರೀತಿಯ ಆಸನವನ್ನು ತಯಾರಿಸಿಕೊಂಡು ನಮಗೆ ಸಾಧ್ಯವಾದ ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ
ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ವಜ್ರಾಸನ ಬಹಳ ಪ್ರಸಿದ್ಧ. ಈ ಆಸನದಲ್ಲಿ ನಮ್ಮ ದೇಹ ನೆಟ್ಟಗಿರುತ್ತದೆ ಹಾಗು ಇದು ಧ್ಯಾನಕ್ಕೆ ಪೂರಕ. ಈ ಬಗ್ಗೆ ಮುಂದೆ
ವಿವರವಾಗಿ ಹದಿಮೂರನೇ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.
ಮೇಲೆ ಹೇಳಿದ ರೀತಿ ಆಸನವನ್ನು ಸಿದ್ಧ ಪಡಿಸಿಕೊಂಡು ಕುಳಿತ ತಕ್ಷಣ
ಧ್ಯಾನ ಸಾಧ್ಯವಾಗುವುದಿಲ್ಲ. ಆಸನದ ಮೇಲೆ ಸೂಕ್ತ
ಭಂಗಿಯಲ್ಲಿ ಕೂತು ಮನಸ್ಸನ್ನು ಭಗವಂತನ ಕಡೆಗೆ ಏಕಾಗ್ರ ಮಾಡಬೇಕು. ‘ಏಕಾಗ್ರ’ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಏಕ+ಅಗ್ರ-ಬಾಣದಂತೆ ಒಂದೇ ಗುರಿ. ಯಾವುದಕ್ಕೆ ಗುರಿ ಇಡುವುದು ಎಂದರೆ
ಅದಕ್ಕೆ ಇದೇ ಪದದಲ್ಲಿ ಉತ್ತರವಿದೆ. ‘ಏಷ ಏವ ಕರೋತೀತಿ
ಏಕಾಗ್ರಹಃ’ ಯಾರೊಬ್ಬನು ಎಲ್ಲ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನಾಜ್ಞಾನ-ಬಂಧ-ಮೊಕ್ಷಗಳಿಗೆ
ಕಾರಣನೋ ಅವನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಏಕಾಗ್ರ. ಬಾಲ್ಯದಿಂದ ಬೆಳೆಸಿಕೊಂಡು ಬಂದ ಅಭ್ಯಾಸವನ್ನು ಬಿಟ್ಟು ಹೊಸ ಅಭ್ಯಾಸಕ್ಕೆ ತನ್ನನ್ನು ತಾನು
ಅಣಿಗೊಳಿಸಬೇಕಾದರೆ ಮನಸ್ಸಿಗೆ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ಧ್ಯಾನಕ್ಕೆ ಕೂತ ತಕ್ಷಣ ಮನಸ್ಸು ಏಕಾಗ್ರವಾಗಲಿಲ್ಲ ಎಂದು ಯಾರೂ ಗಾಬರಿಯಾಗುವುದು ಬೇಡ. ನಿರಂತರ ಪ್ರಯತ್ನವನ್ನು
ಎಂದೂ ಕೈಬಿಡದೆ ಛಲದಿಂದ ಸಾಧನೆ ಮಾಡಿದಾಗ ಏಕಾಗ್ರತೆ ಸಾಧ್ಯ.
ಮನಸ್ಸು ಏಕಾಗ್ರವಾದ ನಂತರ ‘ಯತಚಿತ್ತ ಇಂದ್ರಿಯ ಕ್ರಿಯಃ’ – ಎಲ್ಲ ಬಾಹ್ಯಇಂದ್ರಿಯ ಕ್ರಿಯೆಯನ್ನು ಸಂಪೂರ್ಣ ಸ್ಥಬ್ಧಗೊಳಿಸಬೇಕು.
ಅಂದರೆ ಈ ಸ್ಥಿತಿಯಲ್ಲಿ ಹೊರಗಿನ ಶಬ್ದ ನಮಗೆ ಕೇಳಿಸದು, ಬಾಹ್ಯ ಕಂಪು ಮೂಗಿಗೆ ಬಡಿಯದು. ಒಂದು ವೇಳೆ ಒಂದು
ಸೊಳ್ಳೆ ಕಚ್ಚಿದರೂ ಆ ನೋವಿನ ಅರಿವು ನಮಗಾಗುವುದಿಲ್ಲ. ಇದು
ನಿದ್ದೆಯಂತೆ; ನಿದ್ದೆಯಲ್ಲಿ ನಮಗೆ ಅಂತರಂಗ ಪ್ರಪಂಚ ಎಚ್ಚರವಿರುವುದಿಲ್ಲ, ಆದರೆ ಧ್ಯಾನದಲ್ಲಿ ಅಂತರಂಗ ಪ್ರಪಂಚ
ಎಚ್ಚರವಿರುತ್ತದೆ. ಹೀಗೆ ಬಾಹ್ಯೇಂದ್ರಿಯ ಕ್ರಿಯೆಯನ್ನು
ಸ್ಥಬ್ಧಗೊಳಿಸಿ ನಂತರ ಚಿತ್ತವನ್ನು ನಿಯಂತ್ರಿಸಬೇಕು. ನಮ್ಮ ಚಿತ್ತದಲ್ಲಿ ಅದೆಷ್ಟು ವಿಚಾರ ಸಂಗ್ರಹವಾಗಿರುತ್ತದೆ. ಆದರೆ ಹಿಂದೆ ದಾಖಲಿಸಿರುವ ಎಲ್ಲ ವಿಷಯವನ್ನೂ ಬಿಟ್ಟು
ಕೇವಲ ಭಗವಂತನ ಗುಣದ ಅಂಶವನ್ನು ಮಾತ್ರ ಧ್ಯಾನ ಮಾಡಬೇಕು.
ಹೀಗೆ ನಮ್ಮ ಮನಸ್ಸು ಚಿತ್ತವನ್ನು ನಿಯಂತ್ರಿಸಲು ಜನ್ಮ ಜನ್ಮಾಂತರದ
ಸಾಧನೆ ಬೇಕು. ಕೆಲವರು ಈ ಸಾಧನೆಯಲ್ಲಿ ನಿರಂತರ ಪ್ರಯತ್ನ ಮಾಡಿ
ಯಾವುದೇ ಸಿದ್ಧಿಫಲಿಸದೇ ನಿರಾಶರಾಗುವುದಿದೆ.
ಆದರೆ ಹಿಂದೆ ಹೇಳಿದಂತೆ ನಾವು ಅಧ್ಯಾತ್ಮದಲ್ಲಿ ಇಡುವ ಒಂದು
ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ. ಈ ಜನ್ಮದಲ್ಲಿ
ಸಿದ್ಧಿ ಸಾಧ್ಯವಾಗದೇ ಇದ್ದರೆ ಖಂಡಿತ ಮುಂದಿನ ಜನ್ಮದಲ್ಲಿ ನಮ್ಮ ಸಾಧನೆ ನಾವು ಈ ಜನ್ಮದಲ್ಲಿ ಎಲ್ಲಿ ನಿಂತಿದ್ದೆವೋ ಅಲ್ಲಿಂದ ಆರಂಭವಾಗುತ್ತದೆ. ಆದ್ದರಿಂದ ಎಂದೂ ನಿರಾಶೆ ಬೇಡ, ಪ್ರಯತ್ನ ಮಾತ್ರ ನಿರಂತರವಾಗಿರಲಿ.
ಹೀಗೆ ನಮ್ಮ ಮನಸ್ಸು ಮತ್ತು ಚಿತ್ತ ನಿಯಂತ್ರಣಕ್ಕೆ ಬಂದ ಮೇಲೆ ನಾವು
ಅದನ್ನು ಅದೇ ಸ್ಥಿತಿಯಲ್ಲಿ
ಹಿಡಿದಿಟ್ಟುಕೊಳ್ಳಬೇಕು(ಯುಂಜ್ಯಾದ್ ಯೋಗಮ್). ಈ ಸ್ಥಿತಿಯಲ್ಲಿ ನಮ್ಮ ಜ್ಞಾನಾನಂದಮಯವಾದ ಆತ್ಮಕ್ಕೆ ಹಿಡಿದ ಕೊಳೆ ತೊಳೆದುಹೋಗಿ
ಆತ್ಮಶುದ್ಧಿಯಾಗುತ್ತದೆ. ಇಂತಹ ಶುದ್ಧವಾದ ಆತ್ಮದಿಂದ ಪವಿತ್ರನಾದ ಭಗವಂತನನ್ನು ಕಾಣಲು ಸಾಧ್ಯ.
ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನ ಭಂಗಿ(ಕುಳಿತುಕೊಳ್ಳುವ ರೀತಿ)ಯ
ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣವನ್ನು ಕೊಡುತ್ತಾನೆ.
- ಶ್ಲೋಕ - 13 & 14
ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ ।
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ ॥೧೩॥
ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ॥೧೪॥
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ ॥೧೩॥
ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ॥೧೪॥
ಸಮಮ್ ಕಾಯ ಶಿರಃ ಗ್ರೀವಮ್ ಧಾರಯನ್ ಅಚಲಮ್ ಸ್ಥಿರಃ ।
ಸಂಪ್ರೇಕ್ಷ್ಯ ನಾಸಿಕಾ ಅಗ್ರಮ್ ಸ್ವಮ್ ದಿಶಃ ಚ ಅನವಲೋಕಯನ್ ||
ಪ್ರಶಾಂತ ಆತ್ಮಾ ವಿಗತ ಭೀಃ ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮತ್ ಚಿತ್ತಃ ಯುಕ್ತಃ ಆಸೀತ ಮತ್ ಪರಃ -- ಬೆನ್ನು-ತಲೆ-ಕತ್ತುಗಳನ್ನು ನೆಟ್ಟಗೆ ನಿಲ್ಲಿಸಿ, ನಲುಗದೆ ಗಟ್ಟಿಯಾಗಿ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯಲ್ಲೆ ನೋಟವಿಟ್ಟು, ಬಗೆಯನ್ನು ವಿಷಯಗಳತ್ತ ಹರಿಯಗೊಡದೆ ಹದಗೊಳಿಸಿ, ಅಂಜದೆ, ಬ್ರಹ್ಮಚರ್ಯದಲ್ಲಿದ್ದು, ನನ್ನನ್ನೇ ಪರದೈವವೆಂದು ನಂಬಿ, ನನ್ನನ್ನೆ ನೆನೆಯುತ್ತ ಸಮಾಧಿಯನ್ನು ಸಾಧಿಸಬೇಕು.
ಧ್ಯಾನಕ್ಕೆ ಕುಳಿತಾಗ ಸೊಂಟದಿಂದ ಮೇಲಿನ ನಮ್ಮ ಶರೀರ ನೆಟ್ಟಗೆ
ಸರಳರೇಖೆಯಲ್ಲಿರಬೇಕು. ಬೆನ್ನು
ಬಗ್ಗಿರಕೂಡದು, ಕುತ್ತಿಗೆ, ತಲೆ ವಾಲಿರಬಾರದು. ದೇಹವನ್ನು ನಿಶ್ಚಲಗೊಳಿಸಬೇಕು. ಸ್ವಲ್ಪವೂ ಅಲ್ಲಡಿಸಬಾರದು. ಈ ರೀತಿ
ಕುಳಿತುಕೊಳ್ಳದೆ ಮನಸ್ಸಿನ ಸ್ಥಿರತೆ ಅಸಾಧ್ಯ.
ಮನಸ್ಸು ಈ ದೇಹವೆಂಬ ಪಾತ್ರೆಯೊಳಗಿನ ನೀರಿನಂತೆ. ಪಾತ್ರೆ ಅಲ್ಲಾಡಿದರೆ ಮನಸ್ಸೆಂಬ ನೀರಿನಲ್ಲಿ ಅಲೆಗಳು ಮೂಡುತ್ತವೆ, ಇದರಿಂದ ಏಕಾಗ್ರತೆಗೆ ಭಂಗವಾಗುತ್ತದೆ.
ದೇಹದಲ್ಲಿ ಇನ್ನೊಂದು ಪ್ರಮುಖ ಅಂಗ ಕಣ್ಣು. ದೇಹವನ್ನು ಸ್ಥಿರಗೊಳಿಸಿದ
ಮೇಲೆ ಕಣ್ಣನ್ನು ಸ್ಥಿರಗೊಳಿಸಬೇಕು. ಮೂಗಿನ
ತುದಿಯಲ್ಲಿ ದೃಷ್ಟಿಯನ್ನು ನೆಟ್ಟು ಯಾವ ದಿಕ್ಕಿನ ಯಾವ ಆಕೃತಿಯೂ ಕಾಣದಂತೆ ನೇರವಾಗಿ ಒಂದೇ ಕಡೆ ದೃಷ್ಟಿ ಸ್ಥಿರಗೊಳಿಸಬೇಕು.(ಕಣ್ಣನ್ನು ಮುಚ್ಚಿ ಧ್ಯಾನ ಮಾಡಬಹುದು, ಆದರೆ ಕಣ್ಣನ್ನು ಮುಚ್ಚಿದರೆ ನಿದ್ದೆ ಮಾಡುವ
ಸಾಧ್ಯತೆ ಹೆಚ್ಚು).
ಈ ರೀತಿ ಧ್ಯಾನದ ಸ್ಥಿತಿಯನ್ನು ತಲುಪಿದಾಗ ಮನಸ್ಸು
ಪ್ರಶಾಂತವಾಗುತ್ತದೆ. ಯಾವ ಗೊಂದಲವೂ ಇಲ್ಲದ
ಹೇಳಲಾಗದ ವಿಚಿತ್ರ ಆನಂದದಸ್ಥಿತಿಯನ್ನು ನಾವು ಈ ಸ್ಥಿತಿಯಲ್ಲಿ ಅನುಭವಿಸುತ್ತೇವೆ. ಇದರಿಂದ ನಮಗೆ ಎಲ್ಲಾ ಭಯವೂ ಹೊರಟು ಹೋಗುತ್ತದೆ.
ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾದ ಇನ್ನೊಂದು ಅಂಶ ಬ್ರಹ್ಮಚರ್ಯ ಪಾಲನೆ. ಇಲ್ಲಿ ಬ್ರಹ್ಮಚರ್ಯ ಎನ್ನುವ ಪದಕ್ಕೆ ಮೂರು ಅರ್ಥವಿದೆ. ಪರಬ್ರಹ್ಮನ ಕಡೆಗೆ
ಹೋಗುವ ಧೀಕ್ಷೆ-ಬ್ರಹ್ಮಚರ್ಯ; ನಿರಂತರ ವೇದಾಧ್ಯಯನ-ಬ್ರಹ್ಮಚರ್ಯ; ಸಂಸಾರಿಗಳಾದವರು ನಿಯಮಿತ ಲೈಂಗಿಕತೆ ಪಾಲಿಸುವುದು(ಅತಿ ಸುಲಭವಾಗಿ ಲೈಂಗಿಕತೆಯಿಂದ ದೂರ ಸರಿದು ನಿಲ್ಲುವ
ಕ್ಷಮತೆ ಹಾಗು ಬೇಕೆನಿಸಿದಾಗ ನಿಯಮಿತ ಲೈಂಗಿಕತೆ) ಹಾಗು ವಿರಕ್ತಿಗಳ(ನೈಷ್ಠಿಕ ಬ್ರಹ್ಮಚಾರಿ) ಲೈಂಗಿಕ ಮುಕ್ತ ಜೀವನ-ಬ್ರಹ್ಮಚರ್ಯ.
ಭಗವಂತನೇ ಸರ್ವೋತ್ತಮ ಎನ್ನುವ ಅಚಲವಾದ ಭಕ್ತಿಯಿಂದ, ಭಗವಂತನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟು ಸದಾ ಭಗವಂತನನ್ನು ನೆನೆಯುತ್ತ, ಎಂದೂ ಎದೆಗುಂದದೆ ಸಮಾಧಿಯನ್ನು ಸಾಧಿಸಬೇಕು.
ಧ್ಯಾನದ ಪರಿಣಾಮವೇನು? ನಾವು ಏಕೆ ಧ್ಯಾನ ಮಾಡಬೇಕು? ಉತ್ತರ ಮುಂದಿನ ಶ್ಲೋಕ!
- ಶ್ಲೋಕ - 15
ಮುಂದಿನ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಇಲ್ಲಿ ಸಾಮಾನ್ಯವಾಗಿ
ಎಲ್ಲರಿಗೂ ಕಾಡುವ ಒಂದು ಸರ್ವೇಸಾಮಾನ್ಯ ಪ್ರಶ್ನೆಯನ್ನು
ವಿಶ್ಲೇಷಿಸೋಣ. ಯುದ್ಧರಂಗದಲ್ಲಿ ನಿಂತ ಅರ್ಜುನನಿಗೆ ಕೃಷ್ಣ ಭಗವದ್ಗೀತೆ ಉಪದೇಶ ಮಾಡಿದ. ಹೀಗಿರುವಾಗ ಆತ ಧ್ಯಾನದ ಬಗ್ಗೆ, ಧ್ಯಾನ ಸಮಾಧಿಯಬಗ್ಗೆ, ಧ್ಯಾನಕ್ಕೆ ಕುಳಿತುಕೊಳ್ಳುವ ವಿಧಾನದ ಬಗ್ಗೆ ಏಕೆ ಪ್ರಸ್ತಾಪಿಸಿದ? ಇದರ ಅಗತ್ಯವೇನಿತ್ತು? ಇದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ನಿಜವಾಗಿ ನೋಡಿದರೆ ಅರ್ಜುನನಿಗೆ ಈ ಪ್ರಶ್ನೆಗಳಿರಲಿಲ್ಲ, ಅರ್ಜುನನ ಪ್ರಶ್ನೆಯೇ ಬೇರೆ. ಆ ಪ್ರಶ್ನೆಗೆ ಉತ್ತರ ಕೊಡುವಾಗ ಧ್ಯಾನದ ಪ್ರಶ್ನೆ
ಸಾಮಾನ್ಯವಾಗಿ ಬಂದಾಗ, ಕೃಷ್ಣ ಇಡೀ ನರಸಮುದಾಯಕ್ಕೆ ಸಹಾಯವಾಗುವಂತೆ ಸಂಪೂರ್ಣ ಧ್ಯಾನದ ಪ್ರಕ್ರೀಯೆಯನ್ನು
ವಿವರಿಸಿದ. ಕೃಷ್ಣ ಯುದ್ಧರಂಗದಲ್ಲಿ ಅದೆಷ್ಟು ಸೂಕ್ಷ್ಮವಾಗಿ
ಅರ್ಜುನನಿಗೆ ಈ ಭೋದನೆ ಮಾಡಿದ್ದನೋ ನಮಗೆ ತಿಳಿಯದು, ಆದರೆ ವ್ಯಾಸ ಮಹರ್ಷಿಗಳು ಇದನ್ನು ಎಳೆ ಎಳೆಯಾಗಿ
ಬಿಡಿಸಿ ಒಂದು ಅಧ್ಯಾಯ ರೂಪದಲ್ಲಿ ನಮಗೆ
ಉಣಬಡಿಸಿದ್ದಾರೆ. ಭಗವದ್ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡುವಾಗ ಕೃಷ್ಣನ ಮುಂದಿದ್ದದ್ದು ಕೇವಲ ಅರ್ಜುನ ಮಾತ್ರವಲ್ಲ; ಸಮಸ್ತ ಸಾತ್ವಿಕ ನರ ಸಮುದಾಯ. ಸರ್ವ ಸಾತ್ವಿಕರಿಗೂ ಸತ್ಯದ ದಾರಿಯನ್ನು ತೋರಿಸುವ ಉದ್ದೇಶದಿಂದ ಗೀತೆಯ ಉಪದೇಶವಾಯಿತು. ಇದೇ ಮೂಲ ಉದ್ದೇಶದಿಂದ ಶ್ರೀಕೃಷ್ಣ ಗೀತೆಯನ್ನು
ಇನ್ನೊಮ್ಮೆ ಉದ್ದವನಿಗೆ ಉಪದೇಶ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಯುಂಜನ್ನೇವಂ ಸದಾSSತ್ಮಾನಂ ಯೋಗೀ ನಿಯತಮಾನಸಃ ।
ಶಾಂತಿಂ ನಿರ್ಬಾಣ ಪರಮಾಂ ಮತ್ ಸಂಸ್ಥಾಮಧಿಗಚ್ಛತಿ ॥೧೫॥
ಶಾಂತಿಂ ನಿರ್ಬಾಣ ಪರಮಾಂ ಮತ್ ಸಂಸ್ಥಾಮಧಿಗಚ್ಛತಿ ॥೧೫॥
ಯುಂಜನ್ ಏವಮ್ ಸದಾ ಆತ್ಮಾನಮ್ ಯೋಗೀ ನಿಯತ ಮಾನಸಃ ।
ಶಾಂತಿಮ್ ನಿರ್ಬಾಣ ಪರಮಾಮ್ ಮತ್ ಸಂಸ್ಥಾಮ್
ಅಧಿಗಚ್ಛತಿ-ಹೀಗೆ ಭಗವಂತನನ್ನು ಸದಾ ಧ್ಯಾನಿಸುತ್ತ, ಬಗೆಯನ್ನು ಬಿಗಿ ಹಿಡಿದ ಸಾಧಕನು ದೇಹ ತೊರೆದ
ಮೇಲೆ ನನ್ನಲ್ಲೇ ನೆಲೆಸುವಂಥ ಸುಖವನ್ನು ಅನುಭವಿಸುತ್ತಾನೆ.
ಈ ಅಧ್ಯಾಯದಲ್ಲಿ ಈವರೆಗೆ ಕೃಷ್ಣ ವಿವರಿಸಿದ್ದು ಮನಸ್ಸಿನಿಂದ ಮಾಡುವ
ಧ್ಯಾನ. ಬಾಹ್ಯ ಇಂದ್ರಿಯವನ್ನು ಸ್ಥಬ್ಧಗೊಳಿಸಿ, ಚಿತ್ತ ಮತ್ತು ಮನಸ್ಸನ್ನು ನಿಯಂತ್ರಿಸಿ
ಮಾಡುವುದು ಧ್ಯಾನ. ಇದರಿಂದಾಚೆಗಿರುವುದು ‘ತುರಿಯಾವಸ್ಥೆ’. ನಮ್ಮ ಮನಸ್ಸನ್ನು ಸಂಪೂರ್ಣ ಸ್ಥಬ್ಧಗೊಳಿಸಿ ಆತ್ಮಸ್ವರೂಪಭೂತವಾದ ಜೀವ ನೇರವಾಗಿ ಭಗವಂತನನ್ನು
ನೋಡುವ ಸ್ಥಿತಿ ತುರಿಯಾವಸ್ಥೆ. ಈ ಶ್ಲೋಕದಲ್ಲಿ ಕೃಷ್ಣ
ತುರಿಯಾವಸ್ಥೆಯ ಸುಳಿವು ಕೊಡುತ್ತಾನೆ. ಈ ವಿಚಾರ ಇಲ್ಲಿ ನಿಗೂಢವಾಗಿ ಅಡಗಿದೆ.
ಧ್ಯಾನದಲ್ಲಿ ನಾವು ಕಾಣುವುದು ನೇರ ಭಗವಂತನನ್ನಲ್ಲ ಬದಲಿಗೆ ಭಗವಂತನ
ಪ್ರತೀಕವನ್ನು. ಏಕೆಂದರೆ ಮನಸ್ಸು ನೇರವಾಗಿ
ಜ್ಞಾನಾನಂದಸ್ವರೂಪಭೂತನಾದ ಭಗವಂತನನ್ನು ಗ್ರಹಿಸಲಾರದು. ಭಗವಂತನ ನೇರ ದರ್ಶನವಾಗಬೇಕಾದರೆ, ಧ್ಯಾನದಿಂದಾಚೆಗಿನ ತುರಿಯಾವಸ್ಥೆಗೆ ಹೋಗಬೇಕು. ಜೀವ ಸ್ವರೂಪದ ಕಣ್ಣಿನಿಂದ ಭಗವಂತನನ್ನು ಕಾಣಬೇಕು. ಮನಸ್ಸನ್ನು ನಿರಂತರವಾಗಿ ಭಗವಂತನಲ್ಲಿ ನೆಲೆಗೊಳಿಸಿ; ಮನಸ್ಸಿನ ಮೂಲಕ ಧ್ಯಾನದಲ್ಲಿ ಭಗವಂತನ ಮಾನಸ ರೂಪ
ಗೋಚರವಾದ ಮೇಲೆ ಮನಸ್ಸನ್ನು ಸ್ಥಬ್ಧಗೊಳಿಸಬೇಕು. ಆಗ ತುರಿಯಾವಸ್ಥೆ ಜಾಗೃತವಾಗುತ್ತದೆ. ಈ ಹಂತದಲ್ಲಿ ಆತ್ಮ ಸ್ವರೂಪಕ್ಕೆ ಭಗವಂತನ ಸಂಯೋಗವಾಗುತ್ತದೆ ಹಾಗು ಆಗ ಅದು ನೇರವಾಗಿ ಭಗವಂತನನ್ನು ಕಾಣಬಲ್ಲದು. ಈ ಸ್ಥಿತಿಯನ್ನು ತಲುಪಿದ ಧ್ಯಾನಯೋಗಿ ನಿಜವಾದ ಯೋಗಿ
ಎನಿಸುತ್ತಾನೆ.
ಭಗವಂತನ ಸಾಕ್ಷಾತ್ಕಾರ ಒಂದು ಜೀವ ತನ್ನ ಸಾಧನೆಯ ಹಾದಿಯಲ್ಲಿ
ಪಡೆಯಬಹುದಾದ ಅತ್ಯಂತ ಮಹತ್ತರವಾದ ಆನಂದದ ಪರಾಕಾಷ್ಠೆ. ಇದಕ್ಕಿಂತ
ಮಿಗಿಲಾದ ಅರಿವು, ಆನಂದದ ದರ್ಶನ ಇನ್ನೊಂದಿಲ್ಲ. ಈ ರೀತಿ ಭಗವಂತನ ಸಾಕ್ಷಾತ್ಕಾರವಾದವನು ಮುಂದೆಂದೂ ಈ ಸಂಸಾರ ಬಂಧದಲ್ಲಿ ಸಿಲುಕುವುದಿಲ್ಲ, ಆತ ಭಗವಂತನಲ್ಲೇ ನೆಲೆಸಿ ಮೋಕ್ಷವನ್ನು ಪಡೆಯುತ್ತಾನೆ.
- ಶ್ಲೋಕ - 16
ಸಮಾಧಿಯನ್ನು ಅಭ್ಯಾಸ ಮಾಡುವವರ ಜೀವನಕ್ರಮ ಹೇಗಿರಬೇಕು ಎನ್ನುವುದನ್ನು
ಕೃಷ್ಣ ಮುಂದೆ ವಿವರಿಸುತ್ತಾನೆ. ಈ ಜೀವನಕ್ರಮ ಕೇವಲ
ಧ್ಯಾನಕ್ಕೆ ಮಾತ್ರ ಪೂರಕವಲ್ಲ. ನಮ್ಮ ಅಧ್ಯಯನಕ್ಕೆ, ನಮ್ಮ ಆರೋಗ್ಯ ಜೀವನಕ್ಕೆ ಈ ಶಿಸ್ತು ಬಹಳ ಮುಖ್ಯ. ನಮ್ಮ ಪ್ರತಿಯೊಂದು ಅನುಷ್ಠಾನವನ್ನು ಶಾಸ್ತ್ರಕಾರರು
ಇದಕ್ಕನುಗುಣವಾಗಿ ವಿನ್ಯಾಸ ಮಾಡಿದ್ದಾರೆ. ಆದರೆ ಇಂದು ನಮಗೆ ಈ ಎಚ್ಚರವಿಲ್ಲ. ಏಕಾದಶಿ
ಉಪವಾಸವಿರಲಿ, ಇನ್ಯಾವುದೇ ಅನುಷ್ಠಾನವಿರಲಿ,ಅದನ್ನು ಧ್ಯಾನಕ್ಕೆ ಪೂರಕವಾಗಿ ಪಾಲಿಸಬೇಕು. ಈ ಜ್ಞಾನವಿಲ್ಲದೆ ಕೇವಲ ಯಾಂತ್ರಿಕವಾಗಿ ಪಾಲಿಸುವ ಯಾವ ಅನುಷ್ಠಾನವೂ
ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು.
ನಾತ್ಯಶ್ನತಸ್ತು ಯೋಗೋSಸ್ತಿ ನ ಚಾತ್ಯಂತಮನಶ್ನತಃ ।
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥೧೬॥
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥೧೬॥
ನ ಅತಿ ಅಶ್ನತಃ ತು ಯೋಗಃ ಅಸ್ತಿ ನ ಚಾತ್ಯಂತಮ್ ಅನಶ್ನತಃ ।
ನ ಚ ಅತಿ ಸ್ವಪ್ನ ಶೀಲಸ್ಯ ಜಾಗ್ರತಃ ನ ಏವ ಚ ಅರ್ಜುನ- ಹೇ ಅರ್ಜುನ, ಹೊಟ್ಟೆಬಾಕನಿಗೆ ಧ್ಯಾನಯೋಗ ಸಾಧ್ಯವಿಲ್ಲ. ತೀರ ತಿನ್ನದವನಿಗೂ ಇಲ್ಲ. ತುಂಬಾ
ತೂಕಡಿಸುವವನಿಗೂ ಇಲ್ಲ. ನಿದ್ದೆಗೇಡಿಗೂ ಇಲ್ಲ.
ಅತಿಯಾಗಿ ತಿನ್ನುವವನಿಗೆ ಧ್ಯಾನ ಸಾಧ್ಯವಿಲ್ಲ. ಹೊಟ್ಟೆಗೆ ಹೆಚ್ಚು
ಆಹಾರ ಹೋದಾಗ ಮನಸ್ಸು ನಿಸ್ತೇಜವಾಗುತ್ತದೆ. ಆದ್ದರಿಂದ
ಮನನಶೀಲ ಹೊಟ್ಟೆಬಾಕನಾಗಿರಬಾರದು. ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಈ ಕಾರಣಕ್ಕಾಗಿ ಅತಿಥಿ ಸತ್ಕಾರದಲ್ಲಿ ಒತ್ತಾಯ ಮಾಡಿ ಬಡಿಸುವುದು ತಪ್ಪು. ಅದೇ ರೀತಿ ಯಾವಾಗಲೂ
ಸರಿಯಾಗಿ ತಿನ್ನದೆ ಇದ್ದರೆ ಅದರಿಂದ ದೇಹ ಪೋಷಣೆ ಇಲ್ಲವಾಗಿ ದೇಹ ಕುಸಿಯುತ್ತದೆ. ಭಗವಂತನ
ಸಾಕ್ಷಾತ್ಕಾರವಾಗುವುದು ಈ ದೇಹದ ಮೂಲಕವೇ. ಆದ್ದರಿಂದ ನಾವು ನಿಯತವಾದ ಆಹಾರವನ್ನು ನಿಯತ ಕಾಲದಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಆಹಾರದ ಜೊತೆಗೆ ನಮ್ಮ ನಿದ್ದೆ ಮಾಡುವ ಅಭ್ಯಾಸ ನಿಯತವಾಗಿರಬೇಕು. ನಾವು
ಹೇಗೆ ಅಭ್ಯಾಸ ಮಾಡಿಕೊಂಡೆವೋ ಹಾಗೆ ನಮ್ಮ ಮನಸ್ಸು. ಎಂದೂ ಅತಿ ನಿದ್ದೆ ಒಳ್ಳೆಯದಲ್ಲ, ಅದೇ ರೀತಿ ನಿದ್ದೆಗೆಟ್ಟರೆ ಖಂಡಿತ ಧ್ಯಾನ ಸಾಧ್ಯವಿಲ್ಲ. ಆಹಾರ ನಿದ್ದೆ
ನಿಯತವಾಗಿದ್ದರೆ ಅದು ನಮ್ಮ ಆರೋಗ್ಯಕ್ಕೂ ಪೂರಕ
ಹಾಗು ಧ್ಯಾನಕ್ಕೆ ಇದು ಅತ್ಯಗತ್ಯ.
- ಶ್ಲೋಕ - 17
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥೧೭॥
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥೧೭॥
ಯುಕ್ತ ಆಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು ।
ಯುಕ್ತ ಸ್ವಪ್ನ ಅವಬೋಧಸ್ಯ ಯೋಗಃ ಭವತಿ ದುಃಖ ಹಾ-ತಕ್ಕ ತಿನಿಸು-ತಿರುಗಾಟ, ತಕ್ಕಷ್ಟೆ ಕಾಯಕ, ತಕ್ಕಂತೆ ನಿದ್ದೆ-ಎಚ್ಚರ ಸಾಧಿಸಿದವನಿಗೆ
ಧ್ಯಾನಯೋಗದಿಂದ ದುಗುಡದೂರ.
ಯೋಗಾಭ್ಯಾಸ ಮಾಡುವಾಗ ನಮ್ಮ ಜೀವನಕ್ರಮ ಶಿಸ್ತುಬದ್ಧವಾಗಿರಬೇಕು.
ನಿಯಮಿತವಾದ ಹಾಗು ಯೋಗ್ಯವಾದ ಆಹಾರ ಸೇವನೆ ಬಹಳ ಮುಖ್ಯ.
ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸುವ ಸಾತ್ವಿಕ ಆಹಾರ ಸೇವನೆ ಧ್ಯಾನಕ್ಕೆ ಪೂರಕ. ಕೆಲವು ಆಹಾರ ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಉದಾಹರಣೆಗೆ ಈರುಳ್ಳಿ ಮತ್ತು
ಬೆಳ್ಳುಳ್ಳಿ. ಇವುಗಳಲ್ಲಿ ಔಷಧೀಯ ಗುಣವಿದ್ದರೂ ಕೂಡ ಇದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವ ಆಹಾರ. ನಾವು ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದ
ದಿನ ನಮಗೆ ಕೆಟ್ಟ ಕನಸು ಬೀಳುವುದು ಈ ಆಹಾರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಪುರಾವೆ. ವೇದಾಧ್ಯಾಯನ ಮಾಡುವವರು ಇಂತಹ ಮನಸ್ಸನ್ನು ಕೆಡಿಸುವ ಆಹಾರವನ್ನು ಸೇವಿಸಬಾರದು. ನಮ್ಮ ದೇಹದ ಪೋಷಣೆಯ
ಜೊತೆಗೆ ನಮ್ಮ ಮನಸ್ಸಿಗೆ ಸಾತ್ವಿಕ ಪೋಷಣೆ ಕೊಡುವ ಆಹಾರವನ್ನು
ಇಲ್ಲಿ ಕೃಷ್ಣ “ಯುಕ್ತಾಹಾರ” ಎಂದು ಕರೆದಿದ್ದಾನೆ.
ನಮ್ಮ ಮನಸ್ಸಿಗೆ ನಾವು ಎಷ್ಟು ಬೇಕೋ ಅಷ್ಟು ವಿರಾಮ ಕೊಡುವುದು ಬಹಳ
ಮುಖ್ಯ. ಆದರೆ ಈ ವಿರಾಮ ಸೋಮಾರಿತನವಾಗಿ ರೂಪುಗೊಳ್ಳಬಾರದು.
ಮನಸ್ಸಿಗೆ ವಿರಾಮ ಕೊಡುವಾಗ ಯಾವ ಚಿಂತನೆ ಕೂಡ ಮಾಡದೆ ಸಂಪೂರ್ಣ ವಿಶ್ರಾಂತಿಯನ್ನು ಕೊಡಬೇಕು. ಆಗ ಮನಸ್ಸು ಧ್ಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. “ಯುಕ್ತಚೇಷ್ಟಸ್ಯ ಕರ್ಮಸು” ನಾವು ಮಾಡಬೇಕಾದ ಕೆಲಸ ಕಾರ್ಯವನ್ನು ಕ್ರಮಬದ್ಧವಾಗಿ ಪ್ರಮಾಣಬದ್ಧವಾಗಿ ನಾವೇ ಮಾಡಬೇಕು. ಮಾಡಬೇಕಾದ
ಕೆಲಸದಲ್ಲಿ ಸೋಮಾರಿತನವಿರಬಾರದು.
ಹೀಗೆ ಶಾಸ್ತ್ರೀಯವಾದ ಶುದ್ಧವಾದ ಕ್ರಮಬದ್ದವಾದ ಆಹಾರ ಸೇವನೆ, ತಕ್ಕ ಕಾಲದಲ್ಲಿ ತಕ್ಕಷ್ಟು ನಿದ್ದೆ ಹಾಗು ಎಚ್ಚರ, ಕ್ರಮಬದ್ಧವಾದ ಪರಿಶ್ರಮ ಮತ್ತು ವಿರಾಮ- ಹೀಗೆ ಇದ್ದಾಗ “ಯೋಗೋ ಭವತಿ ದುಃಖಹಾ”- ದುಃಖ ರಹಿತ ಆನಂದಮಯ ಜೀವನ ಸಾಧ್ಯ.
ಧ್ಯಾನಯೋಗದಿಂದ ಮನಸ್ಸು ಒಂದು ಹದಕ್ಕೆ ಬರುತ್ತದೆ. ಮನಸ್ಸು ಹದವಾದಾಗ ಹೊರಪ್ರಪಂಚದಲ್ಲಿ ನಾವು ಅನುಭವಿಸುವ ಸುಖ
ದುಃಖಗಳು ನಿರ್ಲಿಪ್ತವಾಗಿ ನೋಡಲು ಅಭ್ಯಾಸವಾಗುತ್ತದೆ. ಇದರಿಂದ ಸುಖ ಬಂದಾಗ ಹಾರಾಟವಿಲ್ಲ, ದುಃಖ ಬಂದಾಗ ಪಾತಾಳಕ್ಕೆ ಕುಸಿಯುವುದೂ ಇಲ್ಲ. ಸುಖ-ದುಃಖ, ಸೋಲು-ಗೆಲುವಿನ ದ್ವಂದ್ವವೇ ಜೀವನ ಎನ್ನುವ ಸಮದೃಷ್ಟಿ ಧ್ಯಾನಯೋಗದಿಂದ ಬಂದುಬಿಡುತ್ತದೆ.
- ಶ್ಲೋಕ - 18
ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ ।
ನಿಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥೧೮॥
ನಿಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥೧೮॥
ಯದಾ ವಿನಿಯತಮ್ ಚಿತ್ತಮ್ ಆತ್ಮನಿ ಏವ ಅವತಿಷ್ಠತೇ ।
ನಿಸ್ಪೃಹಃ ಸರ್ವ ಕಾಮೇಭ್ಯಃ ಯುಕ್ತಃ ಇತಿ ಉಚ್ಯತೇ ತದಾ-ಚನ್ನಾಗಿ ಹದಗೊಂಡ ಒಳಬಗೆ ಭಗವಂತನಲ್ಲೆ ನೆಲೆಗೊಂಡಾಗ, ಎಲ್ಲ ಕಾಮಗಳ ಆಸೆ ಅಳಿದಾಗ ‘ಧ್ಯಾನಯೋಗಿ’ ಎನ್ನಿಸಿಕೊಳ್ಳುತ್ತಾನೆ.
ಯೋಗಾಭ್ಯಾಸದಿಂದ ಯೋಗಿಯ ಸ್ಥುಪ್ತಪ್ರಜ್ಞೆ ನಿಯಂತ್ರಣವಾಗುತ್ತದೆ.
ಸಾಮಾನ್ಯವಾಗಿ ನಮ್ಮ ಚಿತ್ತದಲ್ಲಿರುವ ಹಿಂದಿನ ಕೆಟ್ಟ
ನೆನಪುಗಳು ಸದಾ ನಮ್ಮನ್ನು ಕಾಡುತ್ತಿರುತ್ತವೆ. ಯಾವುದೋ ಹಗೆ, ಯಾವುದೋ ಪ್ರೀತಿ ಇವೆಲ್ಲವನ್ನೂ ಬದಿಗೊತ್ತಿ
ಯೋಗಿ ತನ್ನ ಅಂತರಂಗದ ಪೀಠದಲ್ಲಿ ಕೇವಲ ಭಗವಂತನನ್ನು ಕೂರಿಸಬಲ್ಲ.
ಹೀಗೆ ಮಾಡಿದಾಗ ಸದಾ ಅಂತರಂಗದಲ್ಲಿ ಭಗವಂತನ ದರ್ಶನವಾಗುತ್ತದೆ. ಆ ಭಗವಂತನನ್ನು ಕಂಡಮೇಲೆ ಇನ್ನೇನೂ ಬೇಕು ಎನ್ನಿಸುವುದಿಲ್ಲ. ಏಕೆಂದರೆ ಭಗವಂತ ನಾವು ಬಯಸುವ ಸಂಗತಿಗಳಲ್ಲೇ ಅತ್ಯಂತ ಶ್ರೇಷ್ಠ ವಾದ ಸಂಗತಿ. ಅಂತರಂಗದ ಆನಂದದ ಚಿಲುಮೆ ತೆರೆದುಕೊಂಡಾಗ ಕ್ಷುದ್ರವಾದ
ಬಾಹ್ಯ ಕಾಮನೆಗಳು ಅಳಿದುಹೋಗಿ ಆತ ಧ್ಯಾನಯೋಗಿ ಎನ್ನಿಸಿಕೊಳ್ಳುತ್ತಾನೆ.
- ಶ್ಲೋಕ - 19
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಮತಾ ।
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ ॥೧೯॥
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ ॥೧೯॥
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಮತಾ ।
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ –ಗಾಳಿಯಿಲ್ಲದ ತಾಣದಲ್ಲಿರುವ ದೀಪ ಹಂದುವುದಿಲ್ಲ ಹೇಗೆ ಹಾಗೆ ಇದು: ಒಳಬಗೆಯನ್ನು ಹದಗೊಳಿಸಿ ಭಗವಂತನನ್ನು
ನೆನೆಯುವ ಧ್ಯಾನಯೋಗಿಗೆ ಇದು ಉಪಮಾನ.
ಗಾಳಿ ಬೀಸದ ಸ್ಥಳದಲ್ಲಿ ಉರಿಯುವ ಬೆಂಕಿಯ ಶಿಖೆಯಂತೆ ಬಗೆಯನ್ನು
ಹದಗೊಳಿಸಿದ ಯೋಗಿಯ ಮನಸ್ಸಿನಲ್ಲಿ ‘ಭಗವಂತನ ಕುರಿತಾದ ಮನಸ್ಸಿನ ಯೋಗ(ಆತ್ಮಯೋಗ)’ ನಿಶ್ಚಲವಾಗಿರುತ್ತದೆ. ಅದು ಚಲಿಸುವುದಿಲ್ಲ.
- ಶ್ಲೋಕ - 20
ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ ।
ಯತ್ರ ಚೈವಾSತ್ಮನಾSSತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ॥೨೦॥
ಯತ್ರ ಚೈವಾSತ್ಮನಾSSತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ॥೨೦॥
ಯತ್ರ ಉಪರಮತೇ ಚಿತ್ತಮ್ ನಿರುದ್ಧಮ್ ಯೋಗ ಸೇವಯಾ।
ಯತ್ರ ಚ ಏವ ಆತ್ಮನಾ ಆತ್ಮಾನಮ್ ಪಶ್ಯನ್ ಆತ್ಮನಿ ತುಷ್ಯತಿ ||
- ಶ್ಲೋಕ - 21
ಸುಖಮ್ಮಾತ್ಯಂತಿಕಂ ಯತ್ತದ್ ಬುದ್ಧಿ ಗ್ರಾಹ್ಯಮತೀಂದ್ರಿಯಮ್ ।
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ ॥೨೧॥
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ ॥೨೧॥
ಸುಖಮ್ ಆತ್ಯನ್ತಿಕಮ್ ಯತ್ ತತ್ ಬುದ್ಧಿ ಗ್ರಾಹ್ಯಮ್ ಅತೀಂದ್ರಿಯಮ್ ।
ವೇತ್ತಿ ಯತ್ರ ನ ಚ ಏವ ಅಯಮ್ ಸ್ಥಿತಃ ಚಲತಿ ತತ್ತ್ವತಃ ||
- ಶ್ಲೋಕ - 22
ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।
ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾSಪಿ ವಿಚಾಲ್ಯತೇ ॥೨೨॥
ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾSಪಿ ವಿಚಾಲ್ಯತೇ ॥೨೨॥
ಯಮ್ ಲಬ್ಧ್ವಾ ಚ ಅಪರಮ್ ಲಾಭಮ್ ಮನ್ಯತೇ ನ ಅಧಿಕಮ್ ತತಃ ।
4 ಕಾಮೆಂಟ್ಗಳು:
Tumba ಚೆನ್ನಾಗಿದೆ
Tumba ಚೆನ್ನಾಗಿದೆ
ವಿವರಣೆ ಬಹಳ ಉತ್ತಮ ಗುಣಮಟ್ಟವಿದೇ
ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ